ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಲೋಕದ ಅನೇಕ ಭಾಗಗಳಲ್ಲಿ ಉಡುಗೊರೆಗಳನ್ನು ಕೊಡುವುದು ಒಂದು ಪದ್ಧತಿಯಾಗಿದೆ. ಈ ರೀತಿಯ ಉಡುಗೊರೆಗಳನ್ನು ಕೊಡುವಾಗ ಅಥವಾ ಪಡೆದುಕೊಳ್ಳುವಾಗ ನಾವು ಯಾವ ಶಾಸ್ತ್ರೀಯ ಮೂಲತತ್ತ್ವಗಳನ್ನು ಪರಿಗಣಿಸಬೇಕು?
ಯೋಗ್ಯವಾದ ಹೇತುವಿನೊಂದಿಗೆ ಯೋಗ್ಯವಾದ ಸಮಯದಲ್ಲಿ ಉಡುಗೊರೆ ಕೊಡುವುದನ್ನು ಬೈಬಲ್ ಸಮ್ಮತಿಸುತ್ತದೆ. ಕೊಡುವ ವಿಷಯದಲ್ಲಿ ತಮ್ಮ ಉದಾರ ದಾತನಾದ ಯೆಹೋವನನ್ನು ಅನುಕರಿಸುವಂತೆ ಬೈಬಲು ಸತ್ಯ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. (ಯಾಕೋಬ 1:17) ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಉತ್ತೇಜಿಸಿದ್ದು: “ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” ಹೀಗೆ, ಉದಾರಭಾವದವರಾಗಿರುವಂತೆ ಕ್ರೈಸ್ತರನ್ನು ಪ್ರೋತ್ಸಾಹಿಸಲಾಗಿದೆ.—ಇಬ್ರಿಯ 13:16; ಲೂಕ 6:38.
ಒಂದು ಉಡುಗೊರೆ ದಾಖಲಾತಿಯನ್ನು ಉಪಯೋಗಿಸುವುದರ ಕುರಿತಾಗಿ ಏನು? ಇದು ಅಮೆರಿಕದಲ್ಲಿ ಸಾಮಾನ್ಯವಾದ ಪದ್ಧತಿಯಾಗಿದೆ. ಇಂಗ್ಲೆಂಡ್‌ನಲ್ಲಿ ಇದನ್ನು ಮದುವೆ ಪಟ್ಟಿ ಎಂದು ಕರೆಯಲಾಗುತ್ತದೆ. ಅಂಥ ಒಂದು ಸಂದರ್ಭದಲ್ಲಿ, ಮದುವೆಯಾಗಲಿರುವ ಒಂದು ದಂಪತಿಯು ಒಂದು ಅಂಗಡಿಯ ಸರಕನ್ನು ವಿಶ್ಲೇಷಿಸಿ, ಅವರು ಉಡುಗೊರೆಗಳಾಗಿ ಪಡೆದುಕೊಳ್ಳಲು ಬಯಸುವ ಐಟಮ್‌ಗಳ ಒಂದು ಪಟ್ಟಿಯನ್ನು ಮಾಡುತ್ತಾ ಆ ಅಂಗಡಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಳ್ಳುತ್ತಾರೆ. ತದನಂತರ ಈ ದಂಪತಿಯ ದಾಖಲಾತಿ ಪಟ್ಟಿಯಿಂದ ಒಂದು ಐಟಮ್ ಅನ್ನು ಖರೀದಿಸುವಂತೆ ಅವರ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಆ ಅಂಗಡಿಗೆ ನಿರ್ದೇಶಿಸಲಾಗುತ್ತದೆ. ಪ್ರಾಯೋಗಿಕ ದೃಷ್ಟಿಕೋನದಿಂದ, ಈ ಉಡುಗೊರೆ ದಾಖಲಾತಿ ಪಟ್ಟಿಯು, ಕೊಡುವವನು ಒಂದು ಉಡುಗೊರೆಗಾಗಿ ಹುಡುಕುತ್ತಾ ಗಂಟಾನುಗಟ್ಟಳೆ ಸಮಯವನ್ನು ಕಳೆಯುವುದನ್ನು ತಪ್ಪಿಸುತ್ತದೆ, ಮತ್ತು ಅದನ್ನು ಪಡೆದುಕೊಳ್ಳುವವರು ಅನಗತ್ಯವಾದ ಉಡುಗೊರೆಗಳನ್ನು ಅಂಗಡಿಗೆ ಹಿಂದಿರುಗಿಸುವ ಅನನುಕೂಲತೆಯನ್ನು ತಪ್ಪಿಸುತ್ತದೆ.
ಮದುವೆ ಮಾಡಿಕೊಳ್ಳಲಿರುವ ಒಂದು ದಂಪತಿಯು ಒಂದು ಉಡುಗೊರೆ ದಾಖಲಾತಿಯನ್ನು ಉಪಯೋಗಿಸಲು ಬಯಸುತ್ತಾರೋ ಇಲ್ಲವೋ ಎಂಬುದು ಅವರ ವೈಯಕ್ತಿಕ ತೀರ್ಮಾನವಾಗಿದೆ. ಆದರೂ, ಬೈಬಲ್ ಮೂಲತತ್ತ್ವಗಳನ್ನು ಉಲ್ಲಂಘಿಸುವಂಥ ಯಾವುದೇ ಪದ್ಧತಿಗಳ ವಿಷಯದಲ್ಲಿ ಕ್ರೈಸ್ತನೊಬ್ಬನು ಎಚ್ಚರದಿಂದಿರಲು ಬಯಸುವನು. ಉದಾಹರಣೆಗೆ, ನಿಶ್ಚಿತಾರ್ಥವಾಗಿರುವ ಒಂದು ದಂಪತಿಯು ತೀರ ದುಬಾರಿಯಾದ ಐಟಮ್‌ಗಳ ಒಂದು ಪಟ್ಟಿಯನ್ನು ಮಾಡುವುದಾದರೆ ಆಗೇನು? ಇಂತಹ ವಿದ್ಯಮಾನದಲ್ಲಿ, ಕಡಿಮೆ ಹಣವಿರುವವರು ಒಂದು ಉಡುಗೊರೆಯನ್ನು ಕೊಡಲು ಸಾಧ್ಯವಿಲ್ಲದೆ ಇರಬಹುದು, ಅಥವಾ ಒಂದು ಸಾಧಾರಣವಾದ ಉಡುಗೊರೆಯನ್ನು ಕೊಂಡೊಯ್ಯುವ ಪೇಚಾಟವನ್ನು ತಪ್ಪಿಸಲು ಮದುವೆಗೆ ಹಾಜರಾಗದಿರುವುದೇ ಉತ್ತಮವೆಂದು ಅವರು ನೆನಸಬಹುದು. ಒಬ್ಬ ಕ್ರೈಸ್ತ ಸ್ತ್ರೀಯು ಬರೆದದ್ದು: “ವಿವಾಹದ ಉಡುಗೊರೆಗಳನ್ನು ಕೊಡುವುದು ಒಂದು ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ನಾನು ಉದಾರತೆಯಿಂದ ಕೊಡಲು ಪ್ರಯತ್ನಿಸಿದ್ದೇನೆ, ಆದರೆ ಕೊಡುವುದರಲ್ಲಿ ನಾನು ಕಂಡುಕೊಳ್ಳುತ್ತಿದ್ದ ಸಂತೋಷವೆಲ್ಲವೂ ಇತ್ತೀಚೆಗೆ ಮಾಯವಾಗಿದೆ.” ಒಂದು ವಿವಾಹವು ನಿರುತ್ತೇಜನಕ್ಕೆ ಕಾರಣವಾಗುವುದಾದರೆ ಅದೆಷ್ಟು ಶೋಚನೀಯ!
ಒಂದು ಉಡುಗೊರೆಯು ಅಪೇಕ್ಷಣೀಯವಾಗಿರಬೇಕಾದರೆ ಅದನ್ನು ಒಂದು ನಿರ್ದಿಷ್ಟ ಅಂಗಡಿಯಲ್ಲಿ ಖರೀದಿಸಬೇಕು ಅಥವಾ ನಿರ್ದಿಷ್ಟ ಬೆಲೆಯದ್ದಾಗಿರಬೇಕು ಎಂಬ ಅನಿಸಿಕೆಯನ್ನು ಕೊಡುವವರಲ್ಲಿ ಖಂಡಿತವಾಗಿಯೂ ಮೂಡಿಸಬಾರದು. ಏನೇ ಆದರೂ, ಯೇಸು ಕ್ರಿಸ್ತನು ಸೂಚಿಸಿದಂತೆ, ದೇವರ ದೃಷ್ಟಿಗೆ ಅತ್ಯಮೂಲ್ಯವಾದದ್ದು ಕೊಡುವವನ ಮನೋಭಾವವಾಗಿದೆಯೇ ಹೊರತು ಉಡುಗೊರೆಯ ಭೌತಿಕ ಮೌಲ್ಯವಲ್ಲ. (ಲೂಕ 21:1-4) ತದ್ರೀತಿಯಲ್ಲಿ, ಅಗತ್ಯದಲ್ಲಿರುವವರಿಗೆ ದಾನಗಳನ್ನು ಕೊಡುವ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂಥ 9:7.
ಬೈಬಲ್ ಭಾಷೆಯಲ್ಲಿ ಹೇಳಬೇಕಾದರೆ, ಒಂದು ಉಡುಗೊರೆಯನ್ನು ಕೊಡುವವನು, ಪ್ರಾಯಶಃ ಒಂದು ಚಿಕ್ಕ ಚೀಟಿಯನ್ನು ಸೇರಿಸುವ ಮೂಲಕ ತಾನದನ್ನು ಕೊಡುತ್ತಿದ್ದೇನೆಂದು ಗುರುತಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೂ ಕೆಲವು ಸ್ಥಳಗಳಲ್ಲಿ, ಹಾಜರಿರುವ ಎಲ್ಲರಿಗೂ ಯಾರು ಯಾವ ಉಡುಗೊರೆಯನ್ನು ಕೊಟ್ಟಿದ್ದಾರೆ ಎಂಬುದನ್ನು ಹೇಳುವುದು ಒಂದು ಪದ್ಧತಿಯಾಗಿರುತ್ತದೆ. ಈ ಪದ್ಧತಿಯು ಸಮಸ್ಯೆಗಳಿಗೆ ನಡೆಸಬಹುದು. ಉಡುಗೊರೆಗಳನ್ನು ಕೊಡುವವರು ತಮ್ಮ ಕಡೆಗೆ ಅನಾವಶ್ಯಕವಾದ ಗಮನವನ್ನು ಸೆಳೆಯುವುದರಿಂದ ದೂರವಿರಲಿಕ್ಕಾಗಿ ಅನಾಮಧೇಯರಾಗಿ ಉಳಿಯಲು ಬಯಸಬಹುದು. ಇಂತಹ ವ್ಯಕ್ತಿಗಳು ಮತ್ತಾಯ 6:3ರಲ್ಲಿ ಕಂಡುಬರುವ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿ ವರ್ತಿಸುತ್ತಾರೆ. ಅಲ್ಲಿ ಯೇಸು ತಿಳಿಸಿದ್ದು: “ನೀನಾದರೆ ಧರ್ಮ ಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ.” ಉಡುಗೊರೆ ಕೊಡುವುದು, ಕೊಡುವವರ ಮತ್ತು ಪಡೆದುಕೊಳ್ಳುವವರ ಮಧ್ಯೆ ಇರಬೇಕಾದ ವೈಯಕ್ತಿಕ ವಿಚಾರವಾಗಿದೆಯೆಂದು ಇತರರು ನೆನಸಬಹುದು. ಅಷ್ಟುಮಾತ್ರವಲ್ಲದೆ, ಉಡುಗೊರೆಗಳನ್ನು ಕೊಟ್ಟವರು ಯಾರೆಂದು ಹೇಳುವುದು, ಉಡುಗೊರೆಗಳನ್ನು ಹೋಲಿಸುವುದಕ್ಕೆ ನಡೆಸಿ, “ಪೈಪೋಟಿಯನ್ನು ಉದ್ರೇಕಿಸ”ಬಲ್ಲದು. (ಗಲಾತ್ಯ 5:26, NW) ಕೊಡುವವರ ಹೆಸರುಗಳನ್ನು ಬಹಿರಂಗವಾಗಿ ಪ್ರಕಟಿಸುವ ಮೂಲಕ ಯಾರನ್ನೂ ಮುಜುಗರಗೊಳಿಸುವುದನ್ನೋ ಪೇಚಾಟಕ್ಕೊಳಪಡಿಸುವುದನ್ನೋ ಕ್ರೈಸ್ತರು ಖಂಡಿತವಾಗಿಯೂ ಬಯಸುವುದಿಲ್ಲ.—1 ಪೇತ್ರ 3:8.
ಹೌದು, ದೇವರ ವಾಕ್ಯದಲ್ಲಿ ಕಂಡುಬರುವ ಮೂಲತತ್ತ್ವಗಳಿಗೆ ಅನುಸಾರವಾಗಿ ಕ್ರಿಯೆಗೈಯುವ ಮೂಲಕ, ಉಡುಗೊರೆಯನ್ನು ಕೊಡುವುದು ಸಂತೋಷದ ಮೂಲವಾಗಿಯೇ ಉಳಿಯುವುದು.—ಅ. ಕೃತ್ಯಗಳು 20:35.