ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ

ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ

ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ

“ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.”​—ಎಫೆಸ 4:29.

1, 2. (ಎ) ಮಾನವರ ಮಾತಾಡುವ ಸಾಮರ್ಥ್ಯವು ಎಷ್ಟು ಅಮೂಲ್ಯವಾದದ್ದಾಗಿದೆ? (ಬಿ) ಯೆಹೋವನ ಸೇವಕರು ತಮ್ಮ ಮಾತಿನ ಸಾಮರ್ಥ್ಯವನ್ನು ಹೇಗೆ ಉಪಯೋಗಿಸಲು ಬಯಸುತ್ತಾರೆ?

“ಮಾನವರ ಮಾತಾಡುವ ಸಾಮರ್ಥ್ಯವು ಒಂದು ಗೂಢ ಸಂಗತಿಯಾಗಿದೆ; ಅದು ದೇವರ ವರವಾಗಿದೆ, ಒಂದು ಅದ್ಭುತವಾಗಿದೆ” ಎಂದು ನಿಘಂಟುಕಾರರಾದ ಲೂಟ್‌ವಿಕ್‌ ಕೊಹ್ಲೆರ್‌ ಬರೆದರು. ದೇವರ ಈ ಅಮೂಲ್ಯ ವರದಾನವನ್ನು ನಾವು ಅಲ್ಪವಾಗಿ ಎಣಿಸುತ್ತಿರಬಹುದು. (ಯಾಕೋಬ 1:17) ಆದರೆ ಪ್ರಿಯರೊಬ್ಬರಿಗೆ ಲಕ್ವಹೊಡೆದು, ಸ್ಪಷ್ಟವಾಗಿ ಮಾತಾಡುವ ಸಾಮರ್ಥ್ಯವನ್ನೇ ಅವರು ಕಳೆದುಕೊಳ್ಳುವಾಗ ಎಷ್ಟು ಅಮೂಲ್ಯವಾದ ಸಂಪತ್ತು ನಷ್ಟವಾಗುತ್ತದೆ ಎಂಬುದನ್ನು ಪರಿಗಣಿಸಿರಿ. ಯಾರ ಪತಿಯು ಇತ್ತೀಚಿಗೆ ಲಕ್ವಹೊಡೆತಕ್ಕೊಳಗಾದರೊ ಆ ಜೋನ್‌ ವಿವರಿಸುವುದು: “ನಮ್ಮ ಅತ್ಯುತ್ತಮ ಸಂವಾದವೇ ನಮ್ಮಿಬ್ಬರನ್ನು ತುಂಬ ಸನಿಹಕ್ಕೆ ತಂದಿತ್ತು. ಆದರೆ ಈಗ ನಮ್ಮ ಸಂಭಾಷಣೆಗಳನ್ನು ನಾನೆಷ್ಟು ಮಿಸ್‌ ಮಾಡುತ್ತಿದ್ದೇನೆ.”

2 ಸಂಭಾಷಣೆಗಳು ಸ್ನೇಹಬಂಧಗಳನ್ನು ಇನ್ನಷ್ಟು ಬಲಗೊಳಿಸಬಲ್ಲವು, ತಪ್ಪಭಿಪ್ರಾಯಗಳನ್ನು ಸರಿಪಡಿಸಬಲ್ಲವು, ಮನಗುಂದಿದವರನ್ನು ಉತ್ತೇಜಿಸಬಲ್ಲವು, ನಂಬಿಕೆಯನ್ನು ಬಲಗೊಳಿಸಬಲ್ಲವು, ಮತ್ತು ಜೀವಿತಗಳನ್ನು ಸಂಪದ್ಭರಿತವಾಗಿ ಮಾಡಬಲ್ಲವು. ಆದರೆ ಇದೆಲ್ಲವೂ ತನ್ನಿಂದ ತಾನೇ ಆಗುವುದಿಲ್ಲ. ಜ್ಞಾನಿ ಅರಸನಾದ ಸೊಲೊಮೋನನು ತಿಳಿಸಿದ್ದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18) ಯೆಹೋವನ ಸೇವಕರೋಪಾದಿ ನಾವು, ನಮ್ಮ ಸಂಭಾಷಣೆಗಳು ಇತರರ ಮನನೋಯಿಸುವಂತೆ ಅಥವಾ ಅವರ ಮನಸ್ಸನ್ನು ಛಿದ್ರಗೊಳಿಸುವಂತೆ ಬಿಡುವ ಬದಲಿಗೆ, ಅವರನ್ನು ವಾಸಿಮಾಡುವಂತೆ ಹಾಗೂ ಭಕ್ತಿವೃದ್ಧಿಮಾಡುವಂತೆ ಬಯಸುತ್ತೇವೆ. ಅಷ್ಟುಮಾತ್ರವಲ್ಲ, ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಮತ್ತು ನಮ್ಮ ಖಾಸಗಿ ಸಂಭಾಷಣೆಗಳಲ್ಲಿ ನಮ್ಮ ಮಾತುಗಳು ಯೆಹೋವನನ್ನು ಸ್ತುತಿಸುವಂತೆಯೂ ಬಯಸುತ್ತೇವೆ. ಕೀರ್ತನೆಗಾರನು ಹಾಡಿದ್ದು: “ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು.”​—ಕೀರ್ತನೆ 44:8.

3, 4. (ಎ) ನಮ್ಮ ಮಾತುಕತೆಯ ವಿಷಯದಲ್ಲಿ ನಾವೆಲ್ಲರೂ ಯಾವ ಸಮಸ್ಯೆಯನ್ನು ಎದುರಿಸುತ್ತೇವೆ? (ಬಿ) ನಾವು ಏನು ಮಾತಾಡುತ್ತೇವೆಂಬುದು ಪ್ರಾಮುಖ್ಯವಾಗಿದೆ ಏಕೆ?

3 ಶಿಷ್ಯನಾದ ಯಾಕೋಬನು ಎಚ್ಚರಿಕೆ ನೀಡುವುದು: “ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು.” ಅವನು ನಮಗೆ ಹೀಗೆ ನೆನಪು ಹುಟ್ಟಿಸುತ್ತಾನೆ: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” (ಯಾಕೋಬ 3:2, 8) ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ. ಆದುದರಿಂದ, ನಮ್ಮ ಉದ್ದೇಶಗಳು ಎಷ್ಟೇ ಅತ್ಯುತ್ತಮವಾಗಿದ್ದರೂ, ನಮ್ಮ ಮಾತು ಯಾವಾಗಲೂ ಇತರರ ಭಕ್ತಿವೃದ್ಧಿಮಾಡುವುದಿಲ್ಲ ಅಥವಾ ನಮ್ಮ ಸೃಷ್ಟಿಕರ್ತನಿಗೆ ಸ್ತುತಿಯನ್ನು ತರುವುದಿಲ್ಲ. ಆದುದರಿಂದ, ನಾವು ಏನು ಹೇಳುತ್ತೇವೆ ಎಂಬುದಕ್ಕೆ ಗಮನಕೊಡಲು ಕಲಿಯುವ ಅಗತ್ಯವಿದೆ. ಅಷ್ಟುಮಾತ್ರವಲ್ಲ, ಯೇಸು ಹೇಳಿದ್ದು: “ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪು ಹೊಂದುವಿ.” (ಮತ್ತಾಯ 12:36, 37) ಹೌದು, ಸತ್ಯ ದೇವರು ನಮ್ಮ ಮಾತುಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೆ.

4 ಹಾನಿಕರ ಮಾತುಕತೆಯಿಂದ ದೂರವಿರುವ ಅತ್ಯುತ್ತಮ ವಿಧಗಳಲ್ಲಿ ಒಂದು, ಆತ್ಮಿಕ ಸಂಭಾಷಣೆಗಳಲ್ಲಿ ಒಳಗೂಡುವ ಹವ್ಯಾಸವನ್ನು ಬೆಳೆಸಿಕೊಳ್ಳುವುದೇ ಆಗಿದೆ. ನಾವು ಅದನ್ನು ಹೇಗೆ ಮಾಡಸಾಧ್ಯವಿದೆ, ಯಾವ ರೀತಿಯ ವಿಷಯಗಳ ಕುರಿತು ನಾವು ಮಾತಾಡಸಾಧ್ಯವಿದೆ, ಮತ್ತು ಭಕ್ತಿವೃದ್ಧಿಮಾಡುವಂಥ ಮಾತುಕತೆಯಿಂದ ಯಾವ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ಈ ಲೇಖನವು ಪರಿಗಣಿಸುವುದು.

ಹೃದಯಕ್ಕೆ ಗಮನ ಕೊಡಿರಿ

5. ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳನ್ನು ಉತ್ತೇಜಿಸುವುದರಲ್ಲಿ ಹೃದಯವು ಹೇಗೆ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ?

5 ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳಲ್ಲಿ ಒಳಗೂಡುವ ಹವ್ಯಾಸವನ್ನು ಬೆಳೆಸಿಕೊಳ್ಳಲಿಕ್ಕಾಗಿ, ನಮ್ಮ ಮಾತು ನಮ್ಮ ಹೃದಯದಲ್ಲಿ ಏನಿದೆಯೋ ಅದನ್ನೇ ಪ್ರತಿಬಿಂಬಿಸುತ್ತದೆ ಎಂಬುದನ್ನು ನಾವು ಮೊದಲಾಗಿ ಗ್ರಹಿಸತಕ್ಕದ್ದು. ಯೇಸು ಹೇಳಿದ್ದು: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಮತ್ತಾಯ 12:34) ಸರಳವಾಗಿ ಹೇಳುವುದಾದರೆ, ನಮಗೆ ಪ್ರಾಮುಖ್ಯವಾಗಿರುವಂಥ ವಿಷಯಗಳ ಕುರಿತು ಮಾತಾಡಲು ನಾವು ತುಂಬ ಇಷ್ಟಪಡುತ್ತೇವೆ. ಹೀಗಿರುವಾಗ, ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವ ಅಗತ್ಯವಿದೆ: ‘ನನ್ನ ಸಂಭಾಷಣೆಗಳು ನನ್ನ ಹೃದಯದ ಸ್ಥಿತಿಯ ಕುರಿತು ಏನನ್ನು ವ್ಯಕ್ತಪಡಿಸುತ್ತವೆ? ನಾನು ನನ್ನ ಕುಟುಂಬದೊಂದಿಗೆ ಅಥವಾ ಜೊತೆ ವಿಶ್ವಾಸಿಗಳೊಂದಿಗೆ ಇರುವಾಗ, ನನ್ನ ಸಂಭಾಷಣೆಯು ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೋ ಅಥವಾ ಅದು ಕ್ರೀಡೆಗಳು, ಉಡುಗೆತೊಡುಗೆ, ಚಲನಚಿತ್ರಗಳು, ಆಹಾರಪಾನೀಯ, ನಾನು ಇತ್ತೀಚೆಗೆ ಖರೀದಿಸಿದಂಥ ವಸ್ತುಗಳು, ಅಥವಾ ಕೆಲವೊಂದು ಅಪ್ರಯೋಜಕ ವಿಷಯಗಳ ಕುರಿತಾಗಿರುತ್ತದೊ?’ ಬಹುಶಃ ನಮಗರಿಯದೆಯೇ ನಮ್ಮ ಜೀವನಗಳು ಹಾಗೂ ನಮ್ಮ ಆಲೋಚನೆಗಳು ಅಪ್ರಾಮುಖ್ಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಬಹುದು. ನಮ್ಮ ಆದ್ಯತೆಗಳನ್ನು ಸರಿಹೊಂದಿಸಿಕೊಳ್ಳುವುದು, ನಮ್ಮ ಸಂಭಾಷಣೆಗಳ ಹಾಗೂ ನಮ್ಮ ಜೀವಿತಗಳ ಮಟ್ಟವನ್ನು ಉತ್ತಮಗೊಳಿಸುವುದು.​—ಫಿಲಿಪ್ಪಿ 1:10.

6. ಧ್ಯಾನಿಸುವಿಕೆಯು ನಮ್ಮ ಸಂಭಾಷಣೆಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ?

6 ನಾವು ಏನು ಹೇಳುತ್ತೇವೋ ಅದರ ಗುಣಮಟ್ಟವನ್ನು ಉತ್ತಮಗೊಳಿಸುವ ಇನ್ನೊಂದು ವಿಧವು, ಉದ್ದೇಶಪೂರ್ವವಾದ ಧ್ಯಾನಿಸುವಿಕೆಯಾಗಿದೆ. ನಾವು ಆತ್ಮಿಕ ವಿಷಯಗಳ ಕುರಿತಾಗಿ ಆಲೋಚಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುವುದಾದರೆ, ಸಹಜವಾಗಿಯೇ ಆತ್ಮಿಕ ಸಂಭಾಷಣೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತಿರುವುದನ್ನು ನಾವು ಮನಗಾಣುವೆವು. ಆಲೋಚನೆ ಹಾಗೂ ಮಾತಿನ ನಡುವಣ ಈ ಸಂಬಂಧವನ್ನು ಅರಸನಾದ ದಾವೀದನು ಸಹ ಮನಗಂಡನು. ಅವನು ಹಾಡಿದ್ದು: “ಯೆಹೋವನೇ, . . . ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.” (ಕೀರ್ತನೆ 19:14) ಮತ್ತು ಕೀರ್ತನೆಗಾರನಾದ ಆಸಾಫನು ಹೇಳಿದ್ದು: “ನಿನ್ನ [ದೇವರ] ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.” (ಕೀರ್ತನೆ 77:12) ದೇವರ ವಾಕ್ಯದ ಸತ್ಯಗಳ ಮೇಲೆ ಕೇಂದ್ರೀಕೃತವಾಗಿರುವ ಹೃದಯ ಹಾಗೂ ಮನಸ್ಸು, ಸಹಜವಾಗಿಯೇ ಸ್ತುತಿಗೆ ಯೋಗ್ಯವಾಗಿರುವಂಥ ಮಾತುಗಳಿಂದ ತುಂಬಿತುಳುಕುವುದು. ಯೆಹೋವನು ತನಗೆ ಕಲಿಸಿದ್ದಂಥ ವಿಷಯಗಳ ಕುರಿತು ಮಾತಾಡದೇ ಇರಲು ಯೆರೆಮೀಯನಿಂದ ಸಾಧ್ಯವಾಗಲಿಲ್ಲ. (ಯೆರೆಮೀಯ 20:9) ಒಂದುವೇಳೆ ನಾವು ಕ್ರಮವಾಗಿ ಆತ್ಮಿಕ ವಿಷಯಗಳ ಕುರಿತು ಧ್ಯಾನಿಸುವಲ್ಲಿ, ನಮ್ಮ ವಿಷಯದಲ್ಲಿಯೂ ಇದು ಸತ್ಯವಾಗಿರಸಾಧ್ಯವಿದೆ.​—1 ತಿಮೊಥೆಯ 4:15.

7, 8. ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳಿಗಾಗಿ ಯಾವ ವಿಷಯಗಳು ಉತ್ತಮವಾಗಿವೆ?

7 ಒಂದು ಒಳ್ಳೇ ಆತ್ಮಿಕ ನಿಯತಕ್ರಮವನ್ನು ಹೊಂದಿರುವುದು, ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳಿಗಾಗಿ ಅನೇಕ ಮುಖ್ಯ ವಿಷಯಗಳನ್ನು ನಮಗೆ ಒದಗಿಸುತ್ತದೆ. (ಫಿಲಿಪ್ಪಿ 3:16) ಸಮ್ಮೇಳನಗಳು, ಅಧಿವೇಶನಗಳು, ಸಭಾ ಕೂಟಗಳು, ಪ್ರಚಲಿತ ಪ್ರಕಾಶನಗಳು, ಮತ್ತು ದೈನಂದಿನ ಶಾಸ್ತ್ರವಚನ ಹಾಗೂ ಮುದ್ರಿತ ಹೇಳಿಕೆಗಳೆಲ್ಲವೂ ನಾವು ಇತರರೊಂದಿಗೆ ಹಂಚಿಕೊಳ್ಳಸಾಧ್ಯವಿರುವ ಆತ್ಮಿಕ ರತ್ನಗಳನ್ನು ನಮಗೆ ಒದಗಿಸುತ್ತವೆ. (ಮತ್ತಾಯ 13:52) ಮತ್ತು ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಸಿಗುವಂಥ ಅನುಭವಗಳು ಆತ್ಮಿಕವಾಗಿ ಎಷ್ಟು ಪ್ರಚೋದನೀಯವಾಗಿರುತ್ತವೆ!

8 ಇಸ್ರಾಯೇಲಿನಲ್ಲಿ ತಾನು ಗಮನಿಸಿದಂಥ ಬೇರೆ ಬೇರೆ ರೀತಿಯ ಮರಗಳು, ಪ್ರಾಣಿಗಳು, ಪಕ್ಷಿಗಳು ಹಾಗೂ ಮೀನುಗಳನ್ನು ನೋಡಿ ಅರಸನಾದ ಸೊಲೊಮೋನನು ಆಕರ್ಷಿತನಾದನು. (1 ಅರಸುಗಳು 4:33) ದೇವರ ಸೃಷ್ಟಿಕಾರ್ಯಗಳ ಕುರಿತು ಸಂಭಾಷಿಸುವುದರಲ್ಲಿ ಅವನು ಮಹದಾನಂದವನ್ನು ಕಂಡುಕೊಂಡನು. ನಾವು ಸಹ ಅದನ್ನೇ ಮಾಡಬಲ್ಲೆವು. ಯೆಹೋವನ ಸೇವಕರು ವಿವಿಧ ವಿಷಯವಸ್ತುಗಳ ಕುರಿತು ಮಾತಾಡುವುದರಲ್ಲಿ ಆನಂದಿಸುತ್ತಾರಾದರೂ, ಆತ್ಮಿಕ ಪ್ರವೃತ್ತಿಯುಳ್ಳ ಜನರ ಸಂಭಾಷಣೆಗಳು ಯಾವಾಗಲೂ ಆತ್ಮಿಕ ವಿಷಯಗಳ ಕಂಪನ್ನು ಹೊರಸೂಸುತ್ತವೆ.​—1 ಕೊರಿಂಥ 2:13.

“ಅವೆಲ್ಲವುಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ”

9. ಪೌಲನು ಫಿಲಿಪ್ಪಿಯವರಿಗೆ ಯಾವ ಬುದ್ಧಿವಾದವನ್ನು ನೀಡಿದನು?

9 ವಿಷಯಗಳು ಯಾವುದೇ ಇರಲಿ, ನಮ್ಮ ಸಂಭಾಷಣೆಗಳು ಫಿಲಿಪ್ಪಿಯಲ್ಲಿನ ಸಭೆಗೆ ಅಪೊಸ್ತಲ ಪೌಲನು ಕೊಟ್ಟ ಬುದ್ಧಿವಾದವನ್ನು ಪಾಲಿಸುತ್ತಿರುವಲ್ಲಿ ಅವು ಇತರರ ಭಕ್ತಿವೃದ್ಧಿಮಾಡುವವು. ಅವನು ಬರೆದುದು: “ಯಾವ ವಿಷಯಗಳು ಸತ್ಯವೂ ಗಂಭೀರ ಪರಿಗಣನೆಗೆ ಅರ್ಹವಾದವುಗಳೂ ನೀತಿಭರಿತವೂ ನಿರ್ಮಲವೂ ಪ್ರೀತಿಯೋಗ್ಯವೂ ಶ್ಲಾಘನೀಯವೂ ಆಗಿವೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಸ್ತುತ್ಯಾರ್ಹವಾಗಿದೆಯೋ ಅವೆಲ್ಲವುಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.” (ಫಿಲಿಪ್ಪಿ 4:​8, NW) ಪೌಲನು ತಿಳಿಸುವಂಥ ವಿಷಯಗಳು ಎಷ್ಟು ಅತ್ಯಾವಶ್ಯಕವಾಗಿವೆಯೆಂದರೆ, ‘ಅವೆಲ್ಲವುಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ’ ಎಂದು ಅವನು ಹೇಳುತ್ತಾನೆ. ನಮ್ಮ ಹೃದಮನಗಳನ್ನು ನಾವು ಅವುಗಳಿಂದ ತುಂಬಿಸಬೇಕು. ಆದುದರಿಂದ, ಪೌಲನಿಂದ ಉಲ್ಲೇಖಿಸಲ್ಪಟ್ಟ ಎಂಟು ವಿಷಯಗಳಲ್ಲಿ ಪ್ರತಿಯೊಂದಕ್ಕೂ ಗಮನವನ್ನು ಹರಿಸುವುದು, ನಮ್ಮ ಸಂಭಾಷಣೆಗಳಲ್ಲಿ ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ನಾವೀಗ ನೋಡೋಣ.

10. ನಮ್ಮ ಸಂಭಾಷಣೆಗಳಲ್ಲಿ ಸತ್ಯವಾಗಿರುವಂಥ ವಿಷಯಗಳೇ ಹೇಗೆ ಒಳಗೂಡಿರಬಲ್ಲವು?

10 ಯಾವುದು ಸತ್ಯವಾಗಿದೆಯೋ ಅದರಲ್ಲಿ, ಸರಿಯಾದ ಮತ್ತು ಸುಳ್ಳಾಗಿರದಂಥ ಮಾಹಿತಿಗಿಂತಲೂ ಹೆಚ್ಚಿನದ್ದು ಒಳಗೂಡಿದೆ. ಇದು, ದೇವರ ವಾಕ್ಯದ ಸತ್ಯತೆಯಂತೆ ಯಥಾರ್ಥವಾಗಿರುವ ಹಾಗೂ ಭರವಸಾರ್ಹವಾಗಿರುವ ಒಂದು ಸಂಗತಿಗೆ ಸೂಚಿತವಾಗಿದೆ. ಆದುದರಿಂದ, ನಮ್ಮ ಮೇಲೆ ಪ್ರಭಾವ ಬೀರಿದಂಥ ಬೈಬಲ್‌ ಸತ್ಯಗಳ ಕುರಿತು, ನಮ್ಮನ್ನು ಉತ್ತೇಜಿಸಿದಂಥ ಉಪದೇಶಗಳು ಹಾಗೂ ಭಾಷಣಗಳ ಕುರಿತು, ಅಥವಾ ನಮಗೆ ಸಹಾಯಮಾಡಿದಂಥ ಶಾಸ್ತ್ರೀಯ ಸಲಹೆಯ ಕುರಿತು ನಾವು ಇತರರೊಂದಿಗೆ ಮಾತಾಡುವಾಗ, ಸತ್ಯವಾಗಿರುವ ವಿಷಯಗಳನ್ನು ನಾವು ಪರಿಗಣಿಸುವವರಾಗಿರುತ್ತೇವೆ. ಇನ್ನೊಂದು ಕಡೆಯಲ್ಲಿ, ಕೇವಲ ಹೊರತೋರಿಕೆಯಲ್ಲಿ ಸತ್ಯವಾಗಿ ಕಂಡುಬರುವಂಥ “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆ”ಯನ್ನು ನಾವು ತಳ್ಳಿಹಾಕುತ್ತೇವೆ. (1 ತಿಮೊಥೆಯ 6:20) ಅಷ್ಟುಮಾತ್ರವಲ್ಲ, ಹರಟೆಮಾತುಗಳನ್ನು ಹಬ್ಬಿಸುವುದರಿಂದ ಅಥವಾ ಸತ್ಯವೆಂದು ಸಾಬೀತುಪಡಿಸಲು ಅಸಾಧ್ಯವಾದಂಥ ಸಂದೇಹಾಸ್ಪದ ಕ್ಷೇತ್ರದ ಅನುಭವಗಳನ್ನು ಹೇಳುವುದರಿಂದ ದೂರವಿರುತ್ತೇವೆ.

11. ಗಂಭೀರ ಪರಿಗಣನೆಗೆ ಅರ್ಹವಾಗಿರುವ ಯಾವ ವಿಷಯಗಳನ್ನು ನಮ್ಮ ಸಂಭಾಷಣೆಗಳಲ್ಲಿ ಒಳಗೂಡಿಸಸಾಧ್ಯವಿದೆ?

11ಗಂಭೀರ ಪರಿಗಣನೆಗೆ ಅರ್ಹವಾದ ವಿಷಯಗಳು, ಗಂಭೀರವಾದ ಹಾಗೂ ಪ್ರಾಮುಖ್ಯವಾದ ವಿಷಯವಸ್ತುಗಳನ್ನು ಒಳಗೊಂಡಿರುತ್ತವೆಯೇ ಹೊರತು ಕ್ಷುಲ್ಲಕವೊ ಅಲ್ಪವೊ ಆದ ವಿಚಾರಗಳನ್ನಲ್ಲ. ಇವುಗಳಲ್ಲಿ, ನಮ್ಮ ಕ್ರೈಸ್ತ ಶುಶ್ರೂಷೆ, ನಾವು ಜೀವಿಸುತ್ತಿರುವ ಕಠಿನ ಕಾಲಗಳು, ಮತ್ತು ನಾವು ಅತ್ಯುತ್ತಮ ನಡತೆಯನ್ನು ಕಾಪಾಡಿಕೊಳ್ಳುವ ಆವಶ್ಯಕತೆಯ ಕುರಿತಾದ ಮುಖ್ಯ ಅಂಶಗಳು ಒಳಗೂಡಿರುತ್ತವೆ. ನಾವು ಇಂಥ ಗಂಭೀರ ಸಂಗತಿಗಳನ್ನು ಚರ್ಚಿಸುವಾಗ, ಆತ್ಮಿಕವಾಗಿ ಎಚ್ಚರಿಕೆಯಿಂದಿರುವ, ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಹಾಗೂ ಸುವಾರ್ತೆಯನ್ನು ಸಾರುತ್ತಾ ಮುಂದುವರಿಯುವ ನಮ್ಮ ದೃಢನಿರ್ಧಾರವನ್ನು ನಾವು ಇನ್ನಷ್ಟು ಬಲಗೊಳಿಸುತ್ತೇವೆ. ವಾಸ್ತವದಲ್ಲಿ, ನಮ್ಮ ಶುಶ್ರೂಷೆಯಲ್ಲಿನ ಆಸಕ್ತಿಕರ ಅನುಭವಗಳು ಮತ್ತು ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ನಮಗೆ ನೆನಪು ಹುಟ್ಟಿಸುವಂಥ ಪ್ರಚಲಿತ ಘಟನೆಗಳು, ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಬೇರೆ ಬೇರೆ ರೀತಿಯ ವಿಚಾರಗಳನ್ನು ಒದಗಿಸುತ್ತವೆ.​—ಅ. ಕೃತ್ಯಗಳು 14:27; 2 ತಿಮೊಥೆಯ 3:1-5.

12. ನೀತಿಭರಿತ ಹಾಗೂ ನಿರ್ಮಲವಾಗಿರುವ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುವಂತೆ ಪೌಲನು ನೀಡಿದ ಸಲಹೆಯನ್ನು ಪರಿಗಣಿಸುವಾಗ, ಏನನ್ನು ದೂರಮಾಡಬೇಕು?

12ನೀತಿಭರಿತ ಎಂಬ ಪದದ ಅರ್ಥ, ದೇವರ ದೃಷ್ಟಿಯಲ್ಲಿ ಸರಿಯಾಗಿರುವುದು, ಆತನ ಮಟ್ಟಗಳಿಗೆ ಹೊಂದಿಕೆಯಲ್ಲಿರುವುದು ಎಂದಾಗಿದೆ. ನಿರ್ಮಲಭಾವವು, ಆಲೋಚನೆಯಲ್ಲಿ ಹಾಗೂ ನಡತೆಯಲ್ಲಿ ಪರಿಶುದ್ಧರಾಗಿರುವುದನ್ನು ಅರ್ಥೈಸುತ್ತದೆ. ಚಾಡಿಹೇಳುವುದು, ಅಶ್ಲೀಲ ಜೋಕ್‌ಗಳು, ಅಥವಾ ಲೈಂಗಿಕ ವಿಚಾರಗಳ ಕುರಿತಾದ ದ್ವಂದ್ವಾರ್ಥವುಳ್ಳ ಮಾತುಗಳನ್ನು ನಾವೆಂದಿಗೂ ನಮ್ಮ ಸಂಭಾಷಣೆಗಳಲ್ಲಿ ಉಪಯೋಗಿಸಬಾರದು. (ಎಫೆಸ 5:3; ಕೊಲೊಸ್ಸೆ 3:8) ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಈ ರೀತಿಯ ಮಾತುಗಳು ಸಂಭಾಷಣೆಗಳಲ್ಲಿ ನುಸುಳತೊಡಗುವಾಗ, ಕ್ರೈಸ್ತರು ಅದರಲ್ಲಿ ಒಳಗೂಡದಿರುವುದು ವಿವೇಕಭರಿತವಾದದ್ದಾಗಿದೆ.

13. ಪ್ರೀತಿಯೋಗ್ಯವಾದ ಹಾಗೂ ಶ್ಲಾಘನೀಯವಾಗಿರುವಂಥ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವಂಥ ಸಂಭಾಷಣೆಗಳ ಉದಾಹರಣೆಗಳನ್ನು ಕೊಡಿರಿ.

13ಪ್ರೀತಿಯೋಗ್ಯವಾದ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರುವಂತೆ ಪೌಲನು ಶಿಫಾರಸ್ಸು ಮಾಡುವಾಗ, ದ್ವೇಷ, ಕಹಿಮನೋಭಾವ, ಅಥವಾ ಜಗಳವನ್ನು ಕೆರಳಿಸುವಂಥ ಸಂಗತಿಗಳಿಗೆ ಬದಲಾಗಿ, ಹಿತಕರವಾಗಿರುವ ಮತ್ತು ಸ್ವೀಕಾರಾರ್ಹವಾಗಿರುವ ಅಥವಾ ಪ್ರೀತಿಯನ್ನು ಪ್ರೇರೇಪಿಸುವಂಥ ಸಂಗತಿಗಳನ್ನು ಅವನು ಸೂಚಿಸುತ್ತಾನೆ. ಶ್ಲಾಘನೀಯವಾಗಿರುವಂಥ ವಿಷಯವು ಒಳ್ಳೇ ವರದಿಯುಳ್ಳ ಮಾಹಿತಿಯನ್ನು ಸೂಚಿಸುತ್ತದೆ. ಅಂಥ ಒಳ್ಳೇ ವರದಿಗಳಲ್ಲಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಕ್ರಮವಾಗಿ ಬರುವಂಥ, ನಂಬಿಗಸ್ತ ಸಹೋದರ ಸಹೋದರಿಯರ ಜೀವನ ಕಥೆಗಳು ಒಳಗೂಡಿರಸಾಧ್ಯವಿದೆ. ನಂಬಿಕೆಯನ್ನು ಬಲಗೊಳಿಸುವಂಥ ಈ ಲೇಖನಗಳನ್ನು ನೀವು ಓದಿ ಮುಗಿಸಿದ ಬಳಿಕ ನಿಮ್ಮ ಸದಭಿಪ್ರಾಯಗಳನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬಾರದು? ಇದಲ್ಲದೆ ಇತರರ ಆತ್ಮಿಕ ಸಾಧನೆಗಳ ಕುರಿತು ಕೇಳಿಸಿಕೊಳ್ಳುವುದು ಎಷ್ಟು ಉತ್ತೇಜನದಾಯಕವಾಗಿರುತ್ತದೆ! ಅಂಥ ಸಂಭಾಷಣೆಗಳು ಸಭೆಯಲ್ಲಿ ಪ್ರೀತಿ ಹಾಗೂ ಐಕ್ಯಭಾವವನ್ನು ಕಟ್ಟುತ್ತವೆ.

14. (ಎ) ಸದ್ಗುಣವನ್ನು ತೋರಿಸುವುದು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ? (ಬಿ) ನಮ್ಮ ಮಾತಿನಲ್ಲಿ ಹೇಗೆ ಸ್ತುತ್ಯಾರ್ಹವಾಗಿರುವ ವಿಷಯಗಳು ಒಳಗೂಡಿಸಲ್ಪಡಸಾಧ್ಯವಿದೆ?

14 “ಯಾವದು ಸದ್ಗುಣವಾಗಿದೆಯೋ” ಅದರ ಕುರಿತು ಪೌಲನು ಮಾತಾಡುತ್ತಾನೆ. ಸದ್ಗುಣವು ಒಳ್ಳೇತನವನ್ನು ಅಥವಾ ನೈತಿಕ ಉತ್ಕೃಷ್ಟತೆಯನ್ನು ಸೂಚಿಸುತ್ತದೆ. ನಮ್ಮ ಮಾತು ಶಾಸ್ತ್ರೀಯ ಮೂಲತತ್ತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ ಹಾಗೂ ಅದು ನೀತಿಭರಿತವಾಗಿರುವ, ನಿರ್ಮಲವಾಗಿರುವ ಹಾಗೂ ಸದ್ಗುಣಭರಿತವಾಗಿರುವಂಥ ವಿಷಯಗಳಿಂದ ವಿಮುಖಗೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಜಾಗರೂಕರಾಗಿರಬೇಕು. ಸ್ತುತ್ಯಾರ್ಹವಾದದ್ದು ಅಂದರೆ “ಪ್ರಶಂಸಾರ್ಹ”ವಾದದ್ದು. ನೀವು ಸಭೆಯಲ್ಲಿ ಒಂದು ಒಳ್ಳೆಯ ಭಾಷಣವನ್ನು ಕೇಳಿಸಿಕೊಳ್ಳುವುದಾದರೆ ಅಥವಾ ಆದರ್ಶಪ್ರಾಯನಾಗಿರುವಂಥ ಒಬ್ಬ ನಂಬಿಗಸ್ತ ವ್ಯಕ್ತಿಯನ್ನು ಗಮನಿಸುವುದಾದರೆ, ಅಂಥ ವ್ಯಕ್ತಿಯ ಬಗ್ಗೆ ನಿಮಗೆ ಏನನಿಸುತ್ತದೋ ಅದರ ಕುರಿತು ಅವನೊಂದಿಗೆ ಹಾಗೂ ಇತರರೊಂದಿಗೂ ಮಾತಾಡಿರಿ. ಅಪೊಸ್ತಲ ಪೌಲನು ತನ್ನ ಜೊತೆ ಆರಾಧಕರ ಅತ್ಯುತ್ತಮ ಗುಣಗಳನ್ನು ಅನೇಕಾವರ್ತಿ ಶ್ಲಾಘಿಸಿದನು. (ರೋಮಾಪುರ 16:12; ಫಿಲಿಪ್ಪಿ 2:19-22; ಫಿಲೆಮೋನ 4-7) ಅಷ್ಟುಮಾತ್ರವಲ್ಲ, ನಮ್ಮ ಸೃಷ್ಟಿಕರ್ತನ ಕೈಕೆಲಸವು ನಿಜವಾಗಿಯೂ ಸ್ತುತ್ಯಾರ್ಹವಾದದ್ದಾಗಿದೆ ಎಂಬುದಂತೂ ಖಂಡಿತ. ಸೃಷ್ಟಿಯಲ್ಲೇ ನಾವು ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳಿಗಾಗಿ ಅನೇಕಾನೇಕ ವಿಷಯವಸ್ತುಗಳನ್ನು ಕಂಡುಕೊಳ್ಳುತ್ತೇವೆ.​—ಜ್ಞಾನೋಕ್ತಿ 6:6-8; 20:12; 26:2.

ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳಲ್ಲಿ ಒಳಗೂಡಿರಿ

15. ಯಾವ ಶಾಸ್ತ್ರೀಯ ಆಜ್ಞೆಯು ಹೆತ್ತವರು ತಮ್ಮ ಮಕ್ಕಳೊಂದಿಗೆ ಅರ್ಥಭರಿತವಾದ ಸಂಭಾಷಣೆಗಳನ್ನು ನಡೆಸುವ ಹಂಗಿಗೊಳಪಡಿಸುತ್ತದೆ?

15ಧರ್ಮೋಪದೇಶಕಾಂಡ 6:​6, 7 ಹೇಳುವುದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಈ ಆಜ್ಞೆಯು, ಹೆತ್ತವರು ತಮ್ಮ ಮಕ್ಕಳೊಂದಿಗೆ ಅರ್ಥಭರಿತವಾದ, ಆತ್ಮಿಕ ಸಂಭಾಷಣೆಗಳನ್ನು ನಡೆಸುವುದನ್ನು ಅಗತ್ಯಪಡಿಸಿತು ಎಂಬುದಂತೂ ಸುಸ್ಪಷ್ಟ.

16, 17. ಯೆಹೋವನ ಹಾಗೂ ಅಬ್ರಹಾಮನ ಮಾದರಿಗಳಿಂದ ಕ್ರೈಸ್ತ ಹೆತ್ತವರು ಯಾವ ಪಾಠವನ್ನು ಕಲಿಯಬಲ್ಲರು?

16 ಯೇಸುವಿನ ಭೂನೇಮಕದ ಕುರಿತು ಚರ್ಚಿಸುತ್ತಿದ್ದಾಗ, ಅವನು ತನ್ನ ಸ್ವರ್ಗೀಯ ತಂದೆಯೊಂದಿಗೆ ಮಾಡಿದ್ದಿರಬಹುದಾದ ದೀರ್ಘ ಸಂಭಾಷಣೆಗಳನ್ನು ನಾವು ಊಹಿಸಿಕೊಳ್ಳಸಾಧ್ಯವಿದೆ. “ನನ್ನನ್ನು ಕಳುಹಿಸಿಕೊಟ್ಟ ತಂದೆಯೇ​—ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 12:49; ಧರ್ಮೋಪದೇಶಕಾಂಡ 18:18) ಯೆಹೋವನು ತಮ್ಮನ್ನು ಹಾಗೂ ತಮ್ಮ ಪೂರ್ವಜರನ್ನು ಹೇಗೆ ಆಶೀರ್ವದಿಸಿದ್ದನು ಎಂಬುದರ ಕುರಿತು ತನ್ನ ಮಗನಾದ ಇಸಾಕನೊಂದಿಗೆ ಮಾತಾಡಲಿಕ್ಕಾಗಿ ಪೂರ್ವಜನಾದ ಅಬ್ರಹಾಮನು ಅನೇಕ ತಾಸುಗಳನ್ನು ವ್ಯಯಿಸಿದ್ದಿರಬೇಕು. ಅಂಥ ಸಂಭಾಷಣೆಗಳು ದೇವರ ಚಿತ್ತಕ್ಕೆ ದೀನಭಾವದಿಂದ ಅಧೀನಪಡಿಸಿಕೊಳ್ಳುವಂತೆ ಯೇಸುವಿಗೆ ಹಾಗೂ ಇಸಾಕನಿಗೆ ಸಹಾಯಮಾಡಿದವು ಎಂಬುದಂತೂ ಖಂಡಿತ.​—ಆದಿಕಾಂಡ 22:7-9; ಮತ್ತಾಯ 26:39.

17 ನಮ್ಮ ಮಕ್ಕಳಿಗೆ ಸಹ ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳ ಅಗತ್ಯವಿದೆ. ತಮ್ಮ ಕಾರ್ಯಮಗ್ನ ಕಾಲತಖ್ತೆಯಲ್ಲಿಯೂ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತಾಡಲಿಕ್ಕಾಗಿ ಸಮಯವನ್ನು ಮಾಡಿಕೊಳ್ಳಬೇಕು. ಸಾಧ್ಯವಿರುವಲ್ಲಿ, ದಿನಕ್ಕೆ ಒಂದು ಸಲವಾದರೂ ಕುಟುಂಬವಾಗಿ ಒಟ್ಟುಗೂಡಿ ಊಟಮಾಡಲು ಏಕೆ ಏರ್ಪಾಡನ್ನು ಮಾಡಬಾರದು? ಅಂಥ ಊಟದ ಸಮಯದಲ್ಲಿ ಅಥವಾ ಬಳಿಕ, ಕುಟುಂಬದ ಆತ್ಮಿಕ ಆರೋಗ್ಯಕ್ಕಾಗಿ ಅತ್ಯಮೂಲ್ಯವಾಗಿ ಪರಿಣಮಿಸಸಾಧ್ಯವಿರುವ ಭಕ್ತಿವೃದ್ಧಿಮಾಡುವಂಥ ಚರ್ಚೆಗಳನ್ನು ನಡೆಸಲು ಅವಕಾಶಗಳಿರುವವು.

18. ಹೆತ್ತವರು ಮತ್ತು ಮಕ್ಕಳ ನಡುವಣ ಒಳ್ಳೇ ಸಂಭಾಷಣೆಯ ಪ್ರಯೋಜನಗಳೇನೆಂಬುದನ್ನು ತೋರಿಸುವಂಥ ಒಂದು ಅನುಭವವನ್ನು ತಿಳಿಸಿರಿ.

18 ತನ್ನ 20ಗಳ ಆರಂಭದಲ್ಲಿರುವ ಒಬ್ಬ ಪಯನೀಯರನಾದ ಆಲೆಕಾಂಡ್ರೊ, 14 ವರ್ಷದವನಾಗಿದ್ದಾಗ ಅವನ ಮನಸ್ಸಿನಲ್ಲಿದ್ದ ಸಂದೇಹಗಳನ್ನು ನೆನಪಿಸಿಕೊಳ್ಳುತ್ತಾನೆ. ಅವನು ಹೇಳುವುದು: “ಸಹಪಾಠಿಗಳು ಹಾಗೂ ಶಿಕ್ಷಕರು ಬೀರಿದ್ದ ಪ್ರಭಾವದ ಕಾರಣದಿಂದ, ದೇವರ ಅಸ್ತಿತ್ವದ ಕುರಿತು ಹಾಗೂ ಬೈಬಲಿನ ವಿಶ್ವಾಸಾರ್ಹತೆಯ ಕುರಿತು ನನಗೆ ಸಂದೇಹಗಳಿದ್ದವು. ಇದರ ಕುರಿತು ನನ್ನ ಹೆತ್ತವರು ನನ್ನೊಂದಿಗೆ ತಾಳ್ಮೆಯಿಂದ ತರ್ಕಸಮ್ಮತವಾಗಿ ಮಾತಾಡುವುದರಲ್ಲಿ ಅನೇಕ ತಾಸುಗಳನ್ನು ವ್ಯಯಿಸಿದರು. ಈ ಕಷ್ಟಕರ ಸಮಯಾವಧಿಯಲ್ಲಿ ಈ ಸಂಭಾಷಣೆಗಳು ನನ್ನ ಸಂದೇಹಗಳನ್ನು ಬಗೆಹರಿಸಲು ಮಾತ್ರವಲ್ಲ, ನನ್ನ ಜೀವಿತದಲ್ಲಿ ಒಳ್ಳೇ ನಿರ್ಣಯಗಳನ್ನು ಮಾಡಲು ಸಹ ಸಹಾಯಮಾಡಿದವು.” ಹಾಗಾದರೆ ಈಗಿನ ಕುರಿತಾಗಿ ಏನು? ಆಲೆಕಾಂಡ್ರೊ ಮುಂದುವರಿಸುವುದು: “ನಾನಿನ್ನೂ ಹೆತ್ತವರೊಂದಿಗೇ ಇದ್ದೇನೆ. ಆದರೆ ನಮ್ಮ ಕಾರ್ಯಮಗ್ನ ಕಾರ್ಯತಖ್ತೆಯು ನಾನು ಹಾಗೂ ನನ್ನ ತಂದೆಯವರು ಖಾಸಗಿಯಾಗಿ ಮಾತಾಡುವುದನ್ನು ಕಷ್ಟಕರವಾಗಿ ಮಾಡುತ್ತದೆ. ಆದುದರಿಂದ, ನಾವಿಬ್ಬರೂ ವಾರಕ್ಕೆ ಒಂದು ಸಲ ನನ್ನ ತಂದೆಯವರ ಕೆಲಸದ ಸ್ಥಳದಲ್ಲಿ ಒಟ್ಟಿಗೆ ಊಟಮಾಡುತ್ತೇವೆ. ನಿಜವಾಗಿಯೂ ನಾನು ಈ ಸಂಭಾಷಣೆಗಳನ್ನು ತುಂಬ ಅಮೂಲ್ಯವಾಗಿ ಪರಿಗಣಿಸುತ್ತೇನೆ.”

19. ನಮಗೆಲ್ಲರಿಗೂ ಆತ್ಮಿಕ ಸಂಭಾಷಣೆಗಳ ಆವಶ್ಯಕತೆ ಏಕಿದೆ?

19 ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಪ್ರತಿಫಲದಾಯಕ ಆತ್ಮಿಕ ಸಂಭಾಷಣೆಗಳಲ್ಲಿ ಆನಂದಿಸಲು ಸಿಗುವಂಥ ಸಂದರ್ಭಗಳನ್ನೂ ನಾವು ಅಮೂಲ್ಯವಾಗಿ ಪರಿಗಣಿಸುವುದಿಲ್ಲವೋ? ಕೂಟಗಳಲ್ಲಿ, ಕ್ಷೇತ್ರ ಸೇವೆಯಲ್ಲಿ, ಮತ್ತು ಸಾಮಾಜಿಕ ಒಕ್ಕೂಟಗಳಲ್ಲಿ ಹಾಗೂ ಪ್ರಯಾಣಿಸುತ್ತಿರುವಾಗ ಅಂಥ ಸಂಭಾಷಣೆಗಳನ್ನು ನಡೆಸಲು ನಮಗೆ ಈ ಸಂದರ್ಭಗಳು ಸಿಗುತ್ತವೆ. ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರೊಂದಿಗೆ ಮಾತಾಡಲು ಎದುರುನೋಡಿದನು. ಅವನು ಅವರಿಗೆ ಬರೆದುದು: “ನಾನು ನಿಮ್ಮ ನಂಬಿಕೆಯಿಂದ ನೀವು ನನ್ನ ನಂಬಿಕೆಯಿಂದ ಸಹಾಯಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.” (ರೋಮಾಪುರ 1:11, 12) ಒಬ್ಬ ಕ್ರೈಸ್ತ ಹಿರಿಯನಾದ ಯೋಹಾನ್‌ಅಸ್‌ ಹೇಳುವುದು: “ಜೊತೆ ಕ್ರೈಸ್ತರೊಂದಿಗಿನ ಆತ್ಮಿಕ ಸಂಭಾಷಣೆಗಳು ಅತ್ಯಾವಶ್ಯಕವಾಗಿರುವ ಒಂದು ಅಗತ್ಯವನ್ನು ಪೂರೈಸುತ್ತವೆ. ಅವು ಹೃದಯವನ್ನು ಹುರಿದುಂಬಿಸುತ್ತವೆ ಮತ್ತು ದೈನಂದಿನ ಹೊರೆಯನ್ನು ಹಗುರಗೊಳಿಸುತ್ತವೆ. ತಮ್ಮ ಜೀವನಗಳ ಕುರಿತು ಹಾಗೂ ನಂಬಿಗಸ್ತರಾಗಿ ಉಳಿಯಲು ಅವರಿಗೆ ಯಾವುದು ಶಕ್ತರನ್ನಾಗಿ ಮಾಡಿದೆ ಎಂಬುದರ ಕುರಿತು ನನಗೆ ತಿಳಿಸುವಂತೆ ನಾನು ಅನೇಕವೇಳೆ ವೃದ್ಧರನ್ನು ಕೇಳಿಕೊಳ್ಳುತ್ತೇನೆ. ಬಹಳ ವರ್ಷಗಳಿಂದ ನಾನು ಅನೇಕರೊಂದಿಗೆ ಮಾತಾಡಿದ್ದೇನೆ, ಮತ್ತು ಅವರಲ್ಲಿ ಪ್ರತಿಯೊಬ್ಬರೂ ನನಗೆ ವಿವೇಕವನ್ನು ಅಥವಾ ಜ್ಞಾನೋದಯವನ್ನು ನೀಡಿದ್ದಾರೆ ಮತ್ತು ಇದು ನನ್ನ ಜೀವನವನ್ನು ಸಂಪದ್ಭರಿತವನ್ನಾಗಿ ಮಾಡಿದೆ.”

20. ನಾಚಿಕೆ ಸ್ವಭಾವದವರಾಗಿರುವಂಥ ಯಾರನ್ನಾದರೂ ನಾವು ಎದುರಾಗುವಲ್ಲಿ ನಾವೇನು ಮಾಡಸಾಧ್ಯವಿದೆ?

20 ನೀವು ಸಂಭಾಷಣೆಗಾಗಿ ಒಂದು ಆತ್ಮಿಕ ವಿಷಯವನ್ನು ಉಪಯೋಗಿಸುವಾಗ ಯಾರಾದರೊಬ್ಬರು ಪ್ರತಿಕ್ರಿಯೆ ತೋರಿಸದಿರುವಲ್ಲಿ ಆಗೇನು? ಖಂಡಿತ ಪ್ರಯತ್ನವನ್ನು ಬಿಟ್ಟುಬಿಡಬೇಡಿ. ಬಹುಶಃ ಸಮಯಾನಂತರ ನೀವು ಹೆಚ್ಚು ಅನುಕೂಲಕರವಾದ ಸಮಯವನ್ನು ಕಂಡುಕೊಳ್ಳಬಹುದು. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ಎಂದು ಸೊಲೊಮೋನನು ತಿಳಿಸಿದನು. (ಜ್ಞಾನೋಕ್ತಿ 25:11) ಯಾರು ನಾಚಿಕೆ ಸ್ವಭಾವದವರಾಗಿರುತ್ತಾರೋ ಅವರಿಗೆ ಪರಿಗಣನೆ ತೋರಿಸಿರಿ. “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” * (ಜ್ಞಾನೋಕ್ತಿ 20:5) ಎಲ್ಲಕ್ಕಿಂತಲೂ ಮಿಗಿಲಾಗಿ, ಇತರರ ಮನೋಭಾವಗಳು ನಿಮ್ಮ ಹೃದಯದ ಮೇಲೆ ಪರಿಣಾಮ ಬೀರುವಂಥ ವಿಷಯಗಳ ಕುರಿತು ಮಾತಾಡುವುದರಿಂದ ನಿಮ್ಮನ್ನು ತಡೆಹಿಡಿಯುವಂತೆ ಎಂದಿಗೂ ಬಿಡಬೇಡಿ.

ಆತ್ಮಿಕ ಸಂಭಾಷಣೆಗಳು ಪ್ರತಿಫಲದಾಯಕವಾಗಿವೆ

21, 22. ಆತ್ಮಿಕ ಸಂಭಾಷಣೆಗಳಲ್ಲಿ ಭಾಗವಹಿಸುವುದರಿಂದ ನಾವು ಯಾವ ಪ್ರಯೋಜನಗಳನ್ನು ಪಡೆಯಸಾಧ್ಯವಿದೆ?

21 ಪೌಲನು ಸಲಹೆ ನೀಡಿದ್ದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.” (ಎಫೆಸ 4:29; ರೋಮಾಪುರ 10:10) ಸೂಕ್ತವಾದ ದಿಕ್ಕಿನಲ್ಲಿ ಸಂಭಾಷಣೆಗಳನ್ನು ಮುಂದುವರಿಸಿಕೊಂಡು ಹೋಗಲು ಬಹಳ ಪ್ರಯತ್ನದ ಅಗತ್ಯವಿರಬಹುದಾದರೂ, ಅದರ ಪ್ರತಿಫಲಗಳು ಮಾತ್ರ ಹೇರಳ. ಆತ್ಮಿಕ ಸಂಭಾಷಣೆಗಳು, ನಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ನಮ್ಮ ಸಹೋದರತ್ವವನ್ನು ಬಲಪಡಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತವೆ.

22 ಹೀಗಿರುವುದರಿಂದ, ನಮ್ಮ ಮಾತಿನ ವರದಾನವನ್ನು ಇತರರ ಭಕ್ತಿವೃದ್ಧಿಮಾಡಲಿಕ್ಕಾಗಿ ಮತ್ತು ದೇವರನ್ನು ಸ್ತುತಿಸಲಿಕ್ಕಾಗಿ ಉಪಯೋಗಿಸೋಣ. ಇಂಥ ಸಂಭಾಷಣೆಗಳು ನಮಗೆ ಸಂತೃಪ್ತಿಯ ಮೂಲವಾಗಿರುವವು ಮತ್ತು ಇತರರಿಗೆ ಉತ್ತೇಜನದಾಯಕವಾಗಿರುವವು. ಎಲ್ಲಕ್ಕಿಂತಲೂ ಮಿಗಿಲಾಗಿ ಅವು ಯೆಹೋವನ ಹೃದಯವನ್ನು ಸಂತೋಷಪಡಿಸುವವು, ಏಕೆಂದರೆ ಆತನು ನಮ್ಮ ಸಂಭಾಷಣೆಗಳಿಗೆ ಕಿವಿಗೊಡುತ್ತಾನೆ ಮತ್ತು ನಮ್ಮ ಮಾತನ್ನು ಸೂಕ್ತವಾದ ರೀತಿಯಲ್ಲಿ ಉಪಯೋಗಿಸುವಾಗ ಆತನು ಅತ್ಯಾನಂದಪಡುತ್ತಾನೆ. (ಕೀರ್ತನೆ 139:4; ಜ್ಞಾನೋಕ್ತಿ 27:11) ನಮ್ಮ ಸಂಭಾಷಣೆಗಳು ಆತ್ಮಿಕವಾಗಿರುವಾಗ, ಯೆಹೋವನು ನಮ್ಮನ್ನು ಎಂದಿಗೂ ಮರೆಯಲಾರನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ನಮ್ಮ ದಿನದಲ್ಲಿ ಯೆಹೋವನ ಸೇವೆಮಾಡುತ್ತಿರುವವರನ್ನು ಉದ್ದೇಶಿಸುತ್ತಾ ಬೈಬಲ್‌ ಹೇಳುವುದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16; 4:5) ನಮ್ಮ ಸಂಭಾಷಣೆಗಳು ಆತ್ಮಿಕವಾಗಿ ಭಕ್ತಿವೃದ್ಧಿಯನ್ನು ಮಾಡುವಂಥವುಗಳಾಗಿರುವುದು ಎಷ್ಟು ಅತ್ಯಾವಶ್ಯಕವಾಗಿದೆ!

[ಪಾದಟಿಪ್ಪಣಿ]

^ ಪ್ಯಾರ. 20 ಇಸ್ರಾಯೇಲ್‌ನಲ್ಲಿದ್ದ ಕೆಲವು ಬಾವಿಗಳು ತುಂಬ ಆಳವಾಗಿದ್ದವು. ಗಿಬ್ಯೋನ್‌ನಲ್ಲಿ, ಸುಮಾರು 80 ಅಡಿಗಳಷ್ಟು ಆಳವಾಗಿರುವಂಥ ಒಂದು ಜಲಾಶಯವನ್ನು ಪ್ರಾಕ್ತನಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಅದಕ್ಕೆ ಮೆಟ್ಟಿಲುಗಳಿದ್ದು, ನೀರನ್ನು ಸೇದಲಿಕ್ಕಾಗಿ ಜನರು ಬಾವಿಯ ತಳಕ್ಕೆ ಇಳಿಯುವಂತೆ ಅದು ಅನುಕೂಲಗೊಳಿಸಿತು.

ನೀವು ಹೇಗೆ ಉತ್ತರಿಸುವಿರಿ?

• ನಮ್ಮ ಸಂಭಾಷಣೆಗಳು ನಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

• ನಾವು ಭಕ್ತಿವೃದ್ಧಿಮಾಡುವಂಥ ಯಾವ ವಿಷಯಗಳ ಕುರಿತು ಮಾತಾಡಸಾಧ್ಯವಿದೆ?

• ಕುಟುಂಬ ವೃತ್ತದಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ಸಂಭಾಷಣೆಗಳು ಯಾವ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ?

• ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳು ಯಾವ ಪ್ರಯೋಜನಗಳನ್ನು ತರುತ್ತವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರಗಳು]

ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳು ಹೆಚ್ಚಾಗಿ ಕೇಂದ್ರೀಕೃತವಾಗಿರುವುದು,

“ಯಾವ ವಿಷಯಗಳು ಸತ್ಯವೂ”

“ಗಂಭೀರ ಪರಿಗಣನೆಗೆ ಅರ್ಹವಾದವುಗಳೂ”

‘ಸ್ತುತ್ಯಾರ್ಹವಾದವುಗಳೂ’

‘ಶ್ಲಾಘನೀಯವೂ’ ಆಗಿವೆಯೋ ಅವುಗಳ ಮೇಲೆ

[ಕೃಪೆ]

ವಿಡಿಯೋ ಆವರಣ, ಸ್ಟ್ಯಾಲಿನ್‌: U.S. Army photo; ಸೃಷ್ಟಿಕರ್ತ ಪುಸ್ತಕದ ಆವರಣಪುಟ, ಈಗಲ್‌ ನೆಬುಲ: J. Hester and P. Scowen (AZ State Univ.), NASA

[ಪುಟ 13ರಲ್ಲಿರುವ ಚಿತ್ರ]

ಊಟದ ಸಮಯಗಳು ಆತ್ಮಿಕ ಸಂಭಾಷಣೆಗಳಲ್ಲಿ ಒಳಗೂಡಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ