ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಜ್ಞಾನಿಗಳ ನಿಯಮ” ಜೀವದ ಬುಗ್ಗೆ

“ಜ್ಞಾನಿಗಳ ನಿಯಮ” ಜೀವದ ಬುಗ್ಗೆ

“ಜ್ಞಾನಿಗಳ ನಿಯಮ” ಜೀವದ ಬುಗ್ಗೆ

“ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!” ಎಂದು ಅಪೊಸ್ತಲ ಪೌಲನು ಉದ್ಗರಿಸಿದನು. (ರೋಮಾಪುರ 11:33) ಮತ್ತು ನಂಬಿಗಸ್ತ ಪೂರ್ವಜನಾಗಿದ್ದ ಯೋಬನು ಹೇಳಿದ್ದು: “[ಯೆಹೋವ] ದೇವರ ಹೃದಯವು ವಿವೇಕವುಳ್ಳದ್ದು.” (ಯೋಬ 9:4) ಹೌದು, ಭೂಪರಲೋಕಗಳ ಸೃಷ್ಟಿಕರ್ತನ ವಿವೇಕಕ್ಕೆ ಸರಿಸಾಟಿಯೇ ಇಲ್ಲ. ಅಂಥ ಒಬ್ಬ ಸೃಷ್ಟಿಕರ್ತನ ನಿಯಮ ಅಥವಾ ಲಿಖಿತ ವಾಕ್ಯದ ಕುರಿತು ಏನು ಹೇಳಸಾಧ್ಯವಿದೆ?

ಕೀರ್ತನೆಗಾರನು ಹಾಡಿದ್ದು: “ಯೆಹೋವನ ಧರ್ಮಶಾಸ್ತ್ರವು [“ನಿಯಮವು,” NW] ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.” (ಕೀರ್ತನೆ 19:7, 8) ಪುರಾತನ ಇಸ್ರಾಯೇಲ್‌ನ ಅರಸನಾದ ಸೊಲೊಮೋನನು ಈ ಮಾತುಗಳ ಸತ್ಯತೆಯನ್ನು ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದಿರಬೇಕು! ಅವನು ಹೇಳಿದ್ದು: “ಜ್ಞಾನಿಗಳ ನಿಯಮವು ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶಗಳಿಂದ ತಪ್ಪಿಸಿಕೊಳ್ಳುವನು.” (ಜ್ಞಾನೋಕ್ತಿ 13:​14, NW) ಜ್ಞಾನೋಕ್ತಿ ಪುಸ್ತಕದ 13ನೆಯ ಅಧ್ಯಾಯದ ಆರಂಭದ 13 ವಚನಗಳಲ್ಲಿ, ದೇವರ ವಾಕ್ಯದಲ್ಲಿ ಕಂಡುಬರುವ ಸಲಹೆಯು, ನಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ನಮ್ಮ ಜೀವನವನ್ನು ಅಪಾಯಕ್ಕೊಡ್ಡುವುದರಿಂದ ದೂರವಿರಲು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ಸೊಲೊಮೋನನು ತೋರಿಸಿದನು.

ಕಲಿಯುವ ಮನಸ್ಸಿನವರಾಗಿರಿ

“ಜ್ಞಾನಿಯಾದ ಮಗನು ತಂದೆಯ ಶಿಕ್ಷೆಯನ್ನು [“ಶಿಸ್ತನ್ನು,” NW] ಕೇಳುವನು; ಧರ್ಮನಿಂದಕನೋ ಗದರಿಕೆಯನ್ನು ಕೇಳನು” ಎಂದು ಜ್ಞಾನೋಕ್ತಿ 13:1 ಹೇಳುತ್ತದೆ. ಒಬ್ಬ ತಂದೆಯು ಕೊಡುವಂಥ ಶಿಸ್ತು ಮೃದುವಾದದ್ದಾಗಿರಬಹುದು ಅಥವಾ ಸ್ವಲ್ಪ ಕಟ್ಟುನಿಟ್ಟಿನದ್ದಾಗಿರಬಹುದು. ಮೊದಲಾಗಿ ಅದು ತರಬೇತಿಯ ರೂಪದಲ್ಲಿ ಕೊಡಲ್ಪಡಸಾಧ್ಯವಿದೆ, ಮತ್ತು ಒಂದುವೇಳೆ ಇದು ಅಲಕ್ಷಿಸಲ್ಪಡುವಲ್ಲಿ ಕಾಲಕ್ರಮೇಣ ಶಿಕ್ಷೆಯ ರೂಪದಲ್ಲಿ ಕೊಡಲ್ಪಡಸಾಧ್ಯವಿದೆ. ಒಬ್ಬ ಮಗನು ತನ್ನ ತಂದೆಯ ಶಿಸ್ತನ್ನು ಅಂಗೀಕರಿಸುವಾಗ ಅವನು ನಿಜವಾಗಿಯೂ ಜ್ಞಾನಿಯಾಗಿರುತ್ತಾನೆ.

“ಕರ್ತನು [“ಯೆಹೋವನು,” NW] ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ [“ಶಿಸ್ತಿಗೊಳಪಡಿಸುತ್ತಾನೆ,” NW]; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 12:6) ನಮ್ಮ ಸ್ವರ್ಗೀಯ ಪಿತನು ನಮ್ಮನ್ನು ಶಿಸ್ತುಗೊಳಿಸುವ ಒಂದು ವಿಧವು, ತನ್ನ ಲಿಖಿತ ವಾಕ್ಯವಾಗಿರುವ ಬೈಬಲಿನ ಮೂಲಕವೇ ಆಗಿದೆ. ನಾವು ಗೌರವಭಾವದಿಂದ ಬೈಬಲನ್ನು ಓದುವಾಗ ಮತ್ತು ಅದರಿಂದ ನಾವು ಕಲಿತುಕೊಳ್ಳುವಂಥ ವಿಷಯಗಳನ್ನು ಅನ್ವಯಿಸಿಕೊಳ್ಳುವಾಗ, ಆತನ ವಾಕ್ಯವು ವಾಸ್ತವದಲ್ಲಿ ನಮ್ಮನ್ನು ಶಿಸ್ತುಗೊಳಿಸುತ್ತದೆ. ಇದು ನಮ್ಮ ಒಳಿತಿಗಾಗಿದೆ, ಏಕೆಂದರೆ ಯೆಹೋವನು ಹೇಳುವಂಥದ್ದೆಲ್ಲವೂ ನಮ್ಮ ಪ್ರಯೋಜನಕ್ಕಾಗಿದೆ.​—ಯೆಶಾಯ 48:17.

ನಮ್ಮ ಆತ್ಮಿಕ ಹಿತಕ್ಷೇಮದಲ್ಲಿ ಆಸಕ್ತರಾಗಿರುವಂಥ ಒಬ್ಬ ಜೊತೆ ವಿಶ್ವಾಸಿಯಿಂದ ತಿದ್ದುಪಾಟಿನ ರೂಪದಲ್ಲಿಯೂ ನಮಗೆ ಶಿಸ್ತು ಕೊಡಲ್ಪಡಬಹುದು. ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿರುವಂಥ ಯಾವುದೇ ಸಹಾಯಕರ ಸಲಹೆಯು, ಆ ವ್ಯಕ್ತಿಯಿಂದಲ್ಲ ಬದಲಾಗಿ ಸತ್ಯದ ಬುಗ್ಗೆಯಾಗಿರುವ ದೇವರಿಂದ ಬರುವಂಥದ್ದಾಗಿದೆ ಎಂದು ಪರಿಗಣಿಸಸಾಧ್ಯವಿದೆ. ಅದನ್ನು ಯೆಹೋವನಿಂದ ಬರುವಂಥದ್ದಾಗಿ ಅಂಗೀಕರಿಸುವಲ್ಲಿ ನಾವು ಜ್ಞಾನಿಗಳಾಗಿದ್ದೇವೆ. ನಾವು ಹೀಗೆ ಪರಿಗಣಿಸಿ, ಅದು ನಮ್ಮ ಆಲೋಚನೆಯನ್ನು ರೂಪಿಸುವಂತೆ, ಶಾಸ್ತ್ರವಚನಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಉತ್ತಮಗೊಳಿಸುವಂತೆ, ಮತ್ತು ನಮ್ಮ ಮಾರ್ಗಗಳನ್ನು ಸರಿಪಡಿಸುವಂತೆ ಬಿಡುವಲ್ಲಿ, ಆ ಶಿಸ್ತಿನಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. ಕ್ರೈಸ್ತ ಕೂಟಗಳಲ್ಲಿ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ ನಾವು ಪಡೆದುಕೊಳ್ಳುವಂಥ ಸಲಹೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅಂಥ ಲಿಖಿತ ವಿಷಯಗಳಿಂದ ಅಥವಾ ನುಡಿಯಲ್ಪಡುವ ಮಾತುಗಳಿಂದ ನಾವು ಏನನ್ನು ಕಲಿಯುತ್ತೇವೋ ಅದಕ್ಕೆ ಪ್ರತಿಕ್ರಿಯಿಸುವುದು, ಸ್ವಶಿಸ್ತಿನ ಅತ್ಯುತ್ತಮ ರೂಪವಾಗಿದೆ.

ಇನ್ನೊಂದು ಕಡೆಯಲ್ಲಾದರೋ, ಒಬ್ಬ ಧರ್ಮನಿಂದಕನು ಶಿಸ್ತಿಗೆ ಪ್ರತಿಕ್ರಿಯೆ ತೋರಿಸುವುದಿಲ್ಲ. ಪರಾಮರ್ಶೆಯ ಕೃತಿಯೊಂದು ತಿಳಿಸುವಂತೆ, “ಯಾವುದು ಅತ್ಯುತ್ತಮವೆಂಬುದು ತನಗೇ ಚೆನ್ನಾಗಿ ಗೊತ್ತಿದೆ ಎಂದು ಅವನು ನೆನಸುತ್ತಾನಾದ್ದರಿಂದ,” ಅವನು “ಕಲಿಯುವ ಮನಸ್ಸಿನವನಾಗಿರುವುದಿಲ್ಲ.” ಅವನು ಗದರಿಕೆಗೆ, ಅಂದರೆ ಸ್ವಲ್ಪ ಕಟ್ಟುನಿಟ್ಟಾದ ರೀತಿಯ ಶಿಸ್ತಿಗೆ ಸಹ ಪ್ರತಿಕ್ರಿಯಿಸುವುದಿಲ್ಲ. ಆದರೆ ತಂದೆಯ ಶಿಸ್ತು ತಪ್ಪಾಗಿದೆ ಎಂಬುದನ್ನು ಅವನೆಂದಾದರೂ ರುಜುಪಡಿಸಬಲ್ಲನೋ? ಯೆಹೋವನು ಎಂದೂ ತಪ್ಪುಮಾಡುವುದಿಲ್ಲ, ಮತ್ತು ಮುಂದೆಂದಿಗೂ ಮಾಡುವವನಲ್ಲ. ಶಿಸ್ತನ್ನು ತಿರಸ್ಕರಿಸುವ ಮೂಲಕ ಒಬ್ಬ ಧರ್ಮನಿಂದಕನು ತನ್ನನ್ನು ಇನ್ನಷ್ಟು ನಿಂದೆಗೆ ಗುರಿಮಾಡಿಕೊಳ್ಳುತ್ತಾನಷ್ಟೆ. ಕೆಲವೇ ಸಂದರ್ಭೋಚಿತ ಮಾತುಗಳನ್ನು ಉಪಯೋಗಿಸಿ ಸೊಲೊಮೋನನು, ಕಲಿಯುವ ಮನಸ್ಸಿನವರಾಗಿರುವುದರ ಮೌಲ್ಯವನ್ನು ಎಷ್ಟು ಮನತಟ್ಟುವಂಥ ರೀತಿಯಲ್ಲಿ ತೋರಿಸುತ್ತಾನೆ!

ನಿಮ್ಮ ನಾಲಗೆಯನ್ನು ಹತೋಟಿಯಲ್ಲಿಡಿ!

ನಮ್ಮ ಮಾತು ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಟ್ಟಿರುವುದರ ಪ್ರಾಮುಖ್ಯತೆಯನ್ನು ತೋರಿಸಲಿಕ್ಕಾಗಿ, ಇಸ್ರಾಯೇಲಿನ ಅರಸನು ಬಾಯಿಯನ್ನು ಫಲಕೊಡುವಂಥ ಒಂದು ಮರಕ್ಕೆ ಹೋಲಿಸುತ್ತಾನೆ. ಅವನು ಹೇಳುವುದು: “ಬಾಯ ಫಲವಾಗಿ ಮನುಷ್ಯನು ಸುಖವನ್ನನುಭವಿಸುವನು; ಬಲಾತ್ಕಾರವೇ [“ಹಿಂಸಾಚಾರವೇ,” NW] ದ್ರೋಹಿಗಳ ಕೋರಿಕೆ.” (ಜ್ಞಾನೋಕ್ತಿ 13:2) ಬಾಯ ಫಲಗಳು ಅಂದರೆ ಆಡಲ್ಪಡುವ ಮಾತುಗಳೇ. ಮತ್ತು ತನ್ನ ಮಾತುಗಳಿಂದ ಒಬ್ಬ ಮನುಷ್ಯನು ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. ಈ ವಿಷಯದಲ್ಲಿ ಒಬ್ಬ ವಿದ್ವಾಂಸನು ಹೇಳುವುದು: “ಒಂದುವೇಳೆ ಅವನ ಮಾತುಗಳಲ್ಲಿ ದಯಾಭರಿತ ಉದ್ದೇಶವಿದ್ದಲ್ಲಿ ಮತ್ತು ಅವು ಅವನ ನೆರೆಹೊರೆಯವರೊಂದಿಗೆ ಸ್ನೇಹಪರ ಸಂಬಂಧವನ್ನು ಸ್ಥಾಪಿಸಲು ನುಡಿಯಲ್ಪಟ್ಟಿರುವಲ್ಲಿ ಅವನು ಸುಖವನ್ನನುಭವಿಸುವನು, ಅಂದರೆ ಒಂದು ಸಂತೋಷಭರಿತ ಹಾಗೂ ಸಮಾಧಾನಕರ ಬದುಕನ್ನು ಆನಂದಿಸುವನು.” ಆದರೆ ದ್ರೋಹಿಯ ವಿಷಯದಲ್ಲಾದರೋ ಇದು ತೀರ ಭಿನ್ನವಾಗಿದೆ. ಅವನು ಹಿಂಸಾಚಾರವನ್ನು ನಡೆಸಲು ಮತ್ತು ಇತರರಿಗೆ ಹಾನಿಯನ್ನುಂಟುಮಾಡಲು ಬಯಸುತ್ತಾನೆ. ಅವನು ಹಿಂಸಾಚಾರದ ಒಳಸಂಚನ್ನು ಮಾಡುತ್ತಾನೆ, ಮತ್ತು ತನ್ನ ಒಳಸಂಚಿನ ಪರಿಣಾಮಗಳನ್ನು ಸ್ವತಃ ಅನುಭವಿಸುತ್ತಾನೆ. ಮೃತ್ಯುಪಾಶಗಳು ಅವನಿಗಾಗಿ ಹೊಸ್ತಿಲಲ್ಲೇ ಕಾದುಕೊಂಡಿವೆ.

ಸೊಲೊಮೋನನು ಮುಂದುವರಿಸುವುದು: “ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.” (ಜ್ಞಾನೋಕ್ತಿ 13:3) ಕೆಟ್ಟ ಹೆಸರು, ನೊಂದ ಭಾವನೆಗಳು, ಬಿರುಕುಬಿಟ್ಟಿರುವ ಸಂಬಂಧಗಳು, ಮತ್ತು ಶಾರೀರಿಕ ಹಾನಿ ಸಹ, ಆಲೋಚನಾರಹಿತವಾದ, ಮೂರ್ಖ ಮಾತುಗಳ ಫಲಿತಾಂಶವಾಗಿರಸಾಧ್ಯವಿದೆ. ಬಾಯಿಗೆ ಬಂದಂತೆ ಮಾತಾಡುವುದು ದೇವರ ಅಸಮ್ಮತಿಯನ್ನು ಸಹ ತರಸಾಧ್ಯವಿದೆ, ಏಕೆಂದರೆ ತಾವು ಆಡುವ ಪ್ರತಿಯೊಂದು ಮಾತಿನ ವಿಷಯದಲ್ಲಿ ಪ್ರತಿಯೊಬ್ಬರೂ ದೇವರಿಗೆ ಉತ್ತರಕೊಡಬೇಕು. (ಮತ್ತಾಯ 12:​36, 37) ಹೌದು, ನಮ್ಮ ಬಾಯನ್ನು ಹತೋಟಿಯಲ್ಲಿಡುವುದು, ನಮ್ಮನ್ನು ವಿನಾಶದಿಂದ ಕಾಪಾಡುವುದು. ಆದರೆ, ನಾವು ನಮ್ಮ ಬಾಯನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಲು ಕಲಿಯಸಾಧ್ಯವಿದೆ?

ಇದನ್ನು ಮಾಡಲಿಕ್ಕಾಗಿರುವ ಒಂದು ಸರಳ ವಿಧಾನವು, ತೀರ ಹೆಚ್ಚು ಮಾತಾಡದಿರುವುದೇ ಆಗಿದೆ. “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ” ಎಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 10:19) ಇನ್ನೊಂದು ವಿಧವು, ಮಾತಾಡುವುದಕ್ಕೆ ಮೊದಲು ಆಲೋಚಿಸುವುದೇ ಆಗಿದೆ. ಪ್ರೇರಿತ ಬರಹಗಾರನು ಹೀಗೆ ತಿಳಿಸುತ್ತಾನೆ: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18) ಮಾತಾಡುವವನು ತಾನು ಏನು ಹೇಳಬೇಕೆಂಬುದನ್ನು ಮುಂಚಿತವಾಗಿಯೇ ಆಲೋಚಿಸದಿರುವಾಗ, ಅವನಿಗೂ ಅವನಿಗೆ ಕಿವಿಗೊಡುತ್ತಿರುವವರಿಗೂ ನೋವನ್ನುಂಟುಮಾಡಸಾಧ್ಯವಿದೆ. ಆದುದರಿಂದ, ಬೈಬಲ್‌ ನಮಗೆ ಈ ಪ್ರಾಯೋಗಿಕ ಬುದ್ಧಿವಾದವನ್ನು ಕೊಡುತ್ತದೆ: “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.”​—ಜ್ಞಾನೋಕ್ತಿ 15:28.

ಉದ್ಯೋಗಶೀಲರಾಗಿರಿ

ಸೊಲೊಮೋನನು ಹೇಳುವುದು: “ಸೋಮಾರಿಯು ತನ್ನನ್ನು ಆಸೆಬುರುಕನನ್ನಾಗಿ ತೋರಿಸಿಕೊಳ್ಳುತ್ತಾನೆ, ಆದರೆ ಅವನ ಆಸೆಗಳೆಲ್ಲಾ ವ್ಯರ್ಥ. ಆದರೆ ಉದ್ಯೋಗಶೀಲರ ಆತ್ಮವು ಪುಷ್ಟಿಗೊಳ್ಳುವುದು.” (ಜ್ಞಾನೋಕ್ತಿ 13:4, NW) ಪರಾಮರ್ಶೆಯ ಕೃತಿಯೊಂದು ಹೇಳುವುದೇನೆಂದರೆ, “[ಈ ಜ್ಞಾನೋಕ್ತಿಯು] ಏನು ತಿಳಿಸುತ್ತಿದೆಯೆಂದರೆ, ಕೇವಲ ಆಸೆಯಿರುವುದು ಸಂಪೂರ್ಣವಾಗಿ ವ್ಯರ್ಥವಾಗಿದೆ ಮತ್ತು ಉದ್ಯೋಗಶೀಲರಾಗಿರುವುದು ತಾನೇ ನಿಜವಾಗಿಯೂ ಮೌಲ್ಯವುಳ್ಳದ್ದಾಗಿದೆ. ಸೋಮಾರಿಗಳು ತಮ್ಮನ್ನು ಕಬಳಿಸಿಬಿಡುವಂಥ . . . ಆಸೆಗಳಿಗೆ ಬಲಿಪಶುಗಳಾಗಿರುತ್ತಾರೆ, ಮತ್ತು ಸೋಮಾರಿತನದಿಂದ ಕೂಡಿರುವ ಅವರ ಆಸೆಗಳಿಂದ ಯಾವುದೇ ಫಲವು ಉತ್ಪಾದಿಸಲ್ಪಡುವುದಿಲ್ಲ.” ಆದರೆ ಉದ್ಯೋಗಶೀಲರಾಗಿರುವಂಥ ವ್ಯಕ್ತಿಗಳ ಆತ್ಮವು ಅಥವಾ ಆಸೆಯು ತೃಪ್ತಿಪಡಿಸಲ್ಪಡುವುದು, ಪುಷ್ಟಿಗೊಳ್ಳುವುದು.

ಜವಾಬ್ದಾರಿಯನ್ನು ಹೊರಲು ಬಯಸದ ಕಾರಣ, ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಳ್ಳುವುದರಿಂದ ದೂರವಿರುವಂಥ ವ್ಯಕ್ತಿಗಳ ಕುರಿತು ಏನು ಹೇಳಸಾಧ್ಯವಿದೆ? ಅವರು ದೇವರ ನೂತನ ಲೋಕದಲ್ಲಿ ಜೀವಿಸುವ ಆಸೆಯುಳ್ಳವರಾಗಿರಬಹುದಾದರೂ, ಅದಕ್ಕಾಗಿ ಯಾವುದೇ ಹೆಜ್ಜೆಯನ್ನು ತೆಗೆದುಕೊಳ್ಳಲು ಅವರು ಸಿದ್ಧಮನಸ್ಕರಾಗಿದ್ದಾರೋ? ಯಾರು ‘ಮಹಾ ಸಂಕಟವನ್ನು ಅನುಭವಿಸಿ ಬರುತ್ತಾರೋ’ (NW) ಅವರಿಂದ ಕೇಳಿಕೊಳ್ಳಲ್ಪಡುವ ಒಂದು ಸಂಗತಿಯೇನೆಂದರೆ, ಅವರು ಯೇಸುವಿನ ವಿಮೋಚನಾ ಯಜ್ಞದಲ್ಲಿ ನಂಬಿಕೆಯನ್ನು ತೋರಿಸಿರಬೇಕು, ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಂಡಿರಬೇಕು, ಮತ್ತು ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿರಬೇಕು.​—ಪ್ರಕಟನೆ 7:​14, 15.

ಸಭೆಯಲ್ಲಿ ಮೇಲ್ವಿಚಾರಣೆಯ ಸ್ಥಾನಕ್ಕಾಗಿ ಎಟುಕಿಸಿಕೊಳ್ಳುವುದರಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ಸಹ ಪರಿಗಣಿಸಿರಿ. ಈ ಒಳ್ಳೇ ಕೆಲಸವನ್ನು ಎಟುಕಿಸಿಕೊಳ್ಳಲಿಕ್ಕಾಗಿರುವ ಆಸೆಯು ಖಂಡಿತವಾಗಿಯೂ ಶ್ಲಾಘನೀಯವಾದದ್ದಾಗಿದೆ ಮತ್ತು ಇದು ಶಾಸ್ತ್ರವಚನಗಳಲ್ಲಿಯೂ ಉತ್ತೇಜಿಸಲ್ಪಟ್ಟಿದೆ. (1 ತಿಮೊಥೆಯ 3:1) ಆದರೂ, ಒಂದು ಸ್ಥಾನಕ್ಕಾಗಿ ಕೇವಲ ಆಶಿಸುವುದು ಮಾತ್ರ ಸಾಕಾಗುವುದಿಲ್ಲ. ಒಂದು ಸ್ಥಾನಕ್ಕಾಗಿ ಅರ್ಹರಾಗುವುದು, ಅಗತ್ಯವಿರುವ ಗುಣಗಳನ್ನು ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದನ್ನು ಕೇಳಿಕೊಳ್ಳುತ್ತದೆ. ಇದು ಶ್ರದ್ಧಾಪೂರ್ವಕವಾದ ವೈಯಕ್ತಿಕ ಪ್ರಯತ್ನವನ್ನು ಅಗತ್ಯಪಡಿಸುತ್ತದೆ.

ನೀತಿ​—ಒಂದು ಸಂರಕ್ಷಣೆ

ಒಬ್ಬ ನೀತಿವಂಥ ವ್ಯಕ್ತಿಯು ದೈವಿಕ ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಸತ್ಯವನ್ನೇ ಆಡುತ್ತಾನೆ. ಅಷ್ಟುಮಾತ್ರವಲ್ಲ, ಸುಳ್ಳಾಡುವುದು ಯೆಹೋವನ ನಿಯಮಕ್ಕೆ ವಿರುದ್ಧವಾದದ್ದಾಗಿದೆ ಎಂಬುದನ್ನು ಅವನು ಗ್ರಹಿಸುತ್ತಾನೆ. (ಜ್ಞಾನೋಕ್ತಿ 6:16-19; ಕೊಲೊಸ್ಸೆ 3:9) ಈ ವಿಷಯದಲ್ಲಿ ಸೊಲೊಮೋನನು ಹೇಳುವುದು: “ಶಿಷ್ಟನು [“ನೀತಿವಂತನು,” NW] ಮೋಸಕ್ಕೆ ಅಸಹ್ಯಪಟ್ಟು ಮಾಡಲೊಲ್ಲನು; ದುಷ್ಟನ ನಡತೆಯು ಹೇಸಿಕೆಗೂ ನಾಚಿಕೆಗೂ ಆಸ್ಪದ.” (ಜ್ಞಾನೋಕ್ತಿ 13:5) ಒಬ್ಬ ನೀತಿವಂತನು ಸುಳ್ಳಾಡುವುದರಿಂದ ದೂರವಿರುತ್ತಾನೆ ಮಾತ್ರವಲ್ಲ, ವಾಸ್ತವದಲ್ಲಿ ಆ ಸುಳ್ಳುಗಳನ್ನು ದ್ವೇಷಿಸುತ್ತಾನೆ. ಸುಳ್ಳುಗಳು ಕೆಡುಕು ಮಾಡದವುಗಳಾಗಿ ತೋರಿದರೂ, ಒಳ್ಳೇ ಮಾನವ ಸಂಬಂಧಗಳಿಗೆ ಅವು ವಿನಾಶಕರವಾಗಿವೆ ಎಂಬುದು ಅವನಿಗೆ ಗೊತ್ತಿದೆ. ಅಷ್ಟುಮಾತ್ರವಲ್ಲ, ಸುಳ್ಳುಗಳ ಮೇಲೆ ಅವಲಂಬಿಸುವಂಥ ಒಬ್ಬ ವ್ಯಕ್ತಿಯ ಮೇಲಿನ ವಿಶ್ವಾಸಾರ್ಹತೆಯು ನುಚ್ಚುನೂರಾಗಿಬಿಡುತ್ತದೆ. ದುಷ್ಟನು ಸುಳ್ಳಾಡುವ ಮೂಲಕ ಅಥವಾ ಇನ್ನಾವುದೋ ವಿಧದಲ್ಲಿ ನಾಚಿಕೆಗೆ ಒಳಗಾಗುವಂಥ ರೀತಿಯಲ್ಲಿ ಕಾರ್ಯವೆಸಗುತ್ತಾನೆ, ಮತ್ತು ಸ್ವತಃ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುತ್ತಾನೆ.

ದೇವರ ದೃಷ್ಟಿಯಲ್ಲಿ ಯಾವುದು ಸರಿಯಾಗಿದೆಯೋ ಅದನ್ನು ಮಾಡುವುದು ಪ್ರಯೋಜನದಾಯಕವಾಗಿದೆ ಎಂಬುದನ್ನು ತೋರಿಸಲಿಕ್ಕಾಗಿ, ಜ್ಞಾನಿಯಾದ ಅರಸನು ಹೇಳುವುದು: “ಧರ್ಮವು [“ನೀತಿಯು,” NW] ನಿರ್ದೋಷಿಯನ್ನು ಕಾಯುವದು; ಅಧರ್ಮವು ದೋಷಿಯನ್ನು ಕೆಡವಿಬಿಡುವದು.” (ಜ್ಞಾನೋಕ್ತಿ 13:6) ಒಂದು ಕೋಟೆಯಂತೆ ನೀತಿಯು ಒಬ್ಬ ವ್ಯಕ್ತಿಯನ್ನು ಕಾಪಾಡುವುದು, ಆದರೆ ಅಧರ್ಮವು ಅವನನ್ನು ಹಾಳುಮಾಡುವುದು.

ಸೋಗನ್ನು ಹಾಕಿಕೊಳ್ಳಬೇಡಿ

ಮಾನವ ಸ್ವಭಾವದ ಕುರಿತಾದ ತಿಳಿವಳಿಕೆಯನ್ನು ತೋರಿಸುತ್ತಾ ಇಸ್ರಾಯೇಲಿನ ಅರಸನು ನುಡಿದದ್ದು: “ಕೆಲವರು ಐಶ್ವರ್ಯವಂತರಂತೆ ನಟಿಸುತ್ತಾರೆ, ಆದರೆ ಅವರಲ್ಲೇನೂ ಇರುವುದಿಲ್ಲ. ಕೆಲವರು ಬಡವರಂತೆ ವರ್ತಿಸುತ್ತಾರೆ. ಆದರೆ ಅವರು ನಿಜವಾಗಿಯೂ ಐಶ್ವರ್ಯವಂತರು.” (ಜ್ಞಾನೋಕ್ತಿ 13:​7, ಪರಿಶುದ್ಧ ಬೈಬಲ್‌ *) ಒಬ್ಬ ವ್ಯಕ್ತಿಯ ಹೊರತೋರಿಕೆಗೂ ಒಳತೋರಿಕೆಗೂ ವ್ಯತ್ಯಾಸವಿರಬಹುದು. ಡಂಬಾಚಾರಕ್ಕಾಗಿ, ತಾವು ಸಾಫಲ್ಯವನ್ನು ಪಡೆದಿದ್ದೇವೆ ಎಂಬ ಭಾವನೆಯನ್ನು ಮೂಡಿಸಲಿಕ್ಕಾಗಿ ಅಥವಾ ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವು ಬಡವರು ಐಶ್ವರ್ಯವಂತರ ಸೋಗನ್ನು ಹಾಕಿಕೊಳ್ಳಬಹುದು. ಮತ್ತು ಒಬ್ಬ ಐಶ್ವರ್ಯವಂತನು ತನ್ನ ಸಂಪತ್ತನ್ನು ಮರೆಮಾಚಲಿಕ್ಕಾಗಿ ಬಡವನ ಸೋಗನ್ನು ಹಾಕಿಕೊಳ್ಳಬಹುದು.

ಇಲ್ಲದಿರುವುದನ್ನು ಇದೆ ಎಂದು ತೋರಿಸಿಕೊಳ್ಳುವುದು ಅಥವಾ ಇರುವುದನ್ನು ಮರೆಮಾಚುವುದು ಎರಡೂ ಒಳಿತನ್ನು ಸಾಧಿಸುವುದಿಲ್ಲ. ನಮ್ಮ ಭೌತಿಕ ಸಂಪನ್ಮೂಲಗಳು ತೀರ ಕಡಿಮೆಯಿರುವುದಾದರೆ, ಶ್ರೀಮಂತರಾಗಿದ್ದೇವೆಂದು ತೋರಿಸಿಕೊಳ್ಳಲಿಕ್ಕಾಗಿ ಸುಖಸೌಕರ್ಯಗಳ ಹಿಂದೆ ಹಣವನ್ನು ಪೋಲುಮಾಡುವುದು, ನಮ್ಮ ಮತ್ತು ನಮ್ಮ ಕುಟುಂಬಗಳ ಮೂಲಭೂತ ಆವಶ್ಯಕತೆಗಳನ್ನು ಪಡೆಯುವುದನ್ನು ತಡೆಗಟ್ಟಬಲ್ಲದು. ಮತ್ತು ಒಬ್ಬ ವ್ಯಕ್ತಿಗೆ ಧನಸಂಪತ್ತುಗಳಿದ್ದು ಅವನು ಬಡವನಂತೆ ಸೋಗುಹಾಕಿಕೊಳ್ಳುತ್ತಿರುವುದು ಅವನನ್ನು ಜಿಪುಣನನ್ನಾಗಿ ಮಾಡಬಹುದು, ಸಲ್ಲತಕ್ಕ ಮಾನದಿಂದ ಮತ್ತು ಉದಾರಿಯಾಗಿರುವುದರಿಂದ ಬರುವಂಥ ಸಂತೋಷದಿಂದ ವಂಚಿತನಾಗುವಂತೆ ಮಾಡಬಹುದು. (ಅ. ಕೃತ್ಯಗಳು 20:35) ಪ್ರಾಮಾಣಿಕ ರೀತಿಯಲ್ಲಿ ಜೀವಿಸುವುದು ಅತ್ಯುತ್ತಮ ಜೀವಿತಕ್ಕೆ ನಡೆಸುತ್ತದೆ.

ನಿಮ್ಮ ಆಸೆಗಳು ಸರಳವಾಗಿರಲಿ

“ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಈಡು; ಬಡವನಿಗೆ ಯಾವ ಬೆದರಿಕೆಯೂ ಇಲ್ಲ” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 13:8) ಈ ಜ್ಞಾನಭರಿತ ಹೇಳಿಕೆಯು ಏನನ್ನು ಅರ್ಥೈಸುತ್ತದೆ?

ಧನವಂತರಾಗಿರುವುದರಿಂದ ಪ್ರಯೋಜನಗಳಿವೆಯಾದರೂ, ಧನಸಂಪತ್ತನ್ನು ಹೊಂದಿರುವುದು ತಾನೇ ಯಾವಾಗಲೂ ಸಂತೋಷವನ್ನು ನೀಡುತ್ತದೆ ಎಂದು ಹೇಳಸಾಧ್ಯವಿಲ್ಲ. ನಾವು ಜೀವಿಸುತ್ತಿರುವ ತೊಂದರೆಭರಿತ ಸಮಯಗಳಲ್ಲಿ, ಅನೇಕವೇಳೆ ಧನವಂತರು ಹಾಗೂ ಅವರ ಕುಟುಂಬಗಳು ಅಪಹರಣಮಾಡಲ್ಪಟ್ಟು, ಈಡಿಗಾಗಿ ಬಂಧಿಸಿಡಲ್ಪಡುವ ಅಪಾಯದಲ್ಲಿ ಇರುತ್ತವೆ. ಕೆಲವೊಮ್ಮೆ, ಒಬ್ಬ ಧನವಂತನು ತನ್ನ ಅಥವಾ ಕುಟುಂಬದ ಸದಸ್ಯನೊಬ್ಬನ ಜೀವವನ್ನು ಕೊಂಡುಕೊಳ್ಳಲಿಕ್ಕಾಗಿ ಈಡನ್ನು ತೆರಲು ಶಕ್ತನಾಗಿರುತ್ತಾನೆ. ಆದರೆ ಅನೇಕವೇಳೆ ಅಪಹರಣಮಾಡಲ್ಪಟ್ಟಿರುವ ವ್ಯಕ್ತಿಯನ್ನು ಕೊಲ್ಲಲಾಗುತ್ತದೆ. ಇಂಥ ಭಯವು, ಶ್ರೀಮಂತರ ತಲೆಯ ಮೇಲೆ ಕತ್ತಿಯಂತೆ ತೂಗಾಡುತ್ತಿರುತ್ತದೆ.

ಆದರೆ ಬಡವನಿಗೆ ಅಂಥ ಚಿಂತೆಯೇ ಇರುವುದಿಲ್ಲ. ಶ್ರೀಮಂತರು ಆನಂದಿಸುವಂಥ ಅನೇಕ ಅನುಕೂಲಗಳು ಮತ್ತು ಪ್ರಾಪಂಚಿಕ ಸೊತ್ತುಗಳು ಅವನ ಬಳಿ ಇಲ್ಲದಿರಬಹುದಾದರೂ, ಅವನು ಅಪಹರಣಕಾರರ ಗುರಿಹಲಗೆಯಾಗುವ ಸಂಭವನೀಯತೆ ತೀರ ಕಡಿಮೆ. ಇದು, ನಮ್ಮ ಬಯಕೆಗಳನ್ನು ಸರಳವಾಗಿಟ್ಟುಕೊಳ್ಳುವುದರ ಮತ್ತು ಐಶ್ವರ್ಯದ ಬೆನ್ನಟ್ಟುವಿಕೆಯಲ್ಲಿ ನಮ್ಮ ಸಮಯ ಹಾಗೂ ಶಕ್ತಿಯನ್ನು ವ್ಯಯಿಸದಿರುವುದರಿಂದ ಬರುವ ಪ್ರಯೋಜನಗಳಲ್ಲಿ ಒಂದಾಗಿದೆ.​—2 ತಿಮೊಥೆಯ 2:4.

‘ಬೆಳಕಿನಲ್ಲಿ’ ಆನಂದಿಸಿರಿ

ಯೆಹೋವನು ಅಪೇಕ್ಷಿಸುವಂಥ ರೀತಿಯಲ್ಲಿ ಕಾರ್ಯಗಳನ್ನು ನಡಿಸುವುದು ನಮಗೆ ಅತ್ಯಧಿಕ ಪ್ರಯೋಜನವನ್ನು ತರುತ್ತದೆ ಎಂಬುದನ್ನು ಸೊಲೊಮೋನನು ತೋರಿಸುತ್ತಾನೆ. ಅವನು ಹೇಳುವುದು: “ಶಿಷ್ಟರ [“ನೀತಿವಂತರ,” NW] ಬೆಳಕು ಬೆಳಗುವದು; ದುಷ್ಟರ ದೀಪವು ಆರುವದು.”​—ಜ್ಞಾನೋಕ್ತಿ 13:9.

ಜೀವನದಲ್ಲಿ ನಮ್ಮ ದಾರಿಯನ್ನು ಬೆಳಗಲಿಕ್ಕಾಗಿ ನಾವು ಯಾವುದರ ಮೇಲೆ ಅವಲಂಬಿಸುತ್ತೇವೆ ಎಂಬುದನ್ನು ದೀಪವು ಸಂಕೇತಿಸುತ್ತದೆ. ‘ದೇವರ ವಾಕ್ಯವು ನೀತಿವಂತನ ಕಾಲಿಗೆ ದೀಪವೂ ಅವನ ದಾರಿಗೆ ಬೆಳಕೂ ಆಗಿದೆ.’ (ಕೀರ್ತನೆ 119:105) ಅದರಲ್ಲಿ ಸೃಷ್ಟಿಕರ್ತನ ಕುರಿತಾದ ಅಕ್ಷಯ ಜ್ಞಾನವೂ ವಿವೇಕವೂ ಇದೆ. ದೇವರ ಚಿತ್ತ ಹಾಗೂ ಉದ್ದೇಶದ ಕುರಿತಾದ ನಮ್ಮ ತಿಳಿವಳಿಕೆಯಲ್ಲಿ ನಾವು ಹೆಚ್ಚೆಚ್ಚು ಪ್ರಗತಿಯನ್ನು ಮಾಡಿದಂತೆ, ನಮ್ಮನ್ನು ಮಾರ್ಗದರ್ಶಿಸುವಂಥ ಆತ್ಮಿಕ ಬೆಳಕು ಹೆಚ್ಚೆಚ್ಚು ಪ್ರಕಾಶಮಾನವಾಗುತ್ತಾ ಹೋಗುತ್ತದೆ. ಇದು ಎಷ್ಟೊಂದು ಆನಂದಕ್ಕೆ ಮೂಲವಾಗಿದೆ! ಹೀಗಿರುವಾಗ ಲೌಕಿಕ ಜ್ಞಾನ ಅಥವಾ “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆ”ಯಿಂದ ನಾವೇಕೆ ಅಪಕರ್ಷಿತರಾಗಬೇಕು?​—1 ತಿಮೊಥೆಯ 6:20; 1 ಕೊರಿಂಥ 1:20; ಕೊಲೊಸ್ಸೆ 2:8.

ದುಷ್ಟನ ವಿಷಯದಲ್ಲಿ ಹೇಳುವುದಾದರೆ, ಅವನ ದೀಪವು ಎಷ್ಟೇ ಪ್ರಕಾಶಮಾನವಾದದ್ದಾಗಿ ಕಂಡುಬರಲಿ ಮತ್ತು ಅವನು ಎಷ್ಟೇ ಸಂಪದ್ಭರಿತನಾಗಿ ಕಂಡುಬರಲಿ, ಅವನ ದೀಪವು ಖಂಡಿತವಾಗಿಯೂ ಆರಿಸಲ್ಪಡುವುದು. ಕಟ್ಟಕಡೆಗೆ ಅವನು ತಲಪುವುದು ಅಂಧಕಾರವನ್ನೇ, ಮತ್ತು ಅಲ್ಲಿ ಅವನ ಪಾದಗಳು ಖಂಡಿತವಾಗಿಯೂ ಎಡವುತ್ತವೆ. ಅಷ್ಟುಮಾತ್ರವಲ್ಲ, ಅವನಿಗೆ “ಶುಭಕಾಲವು ಬಾರದು.”​—ಜ್ಞಾನೋಕ್ತಿ 24:20.

ಆದರೂ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾವು ಯಾವ ಹೆಜ್ಜೆಯನ್ನು ತೆಗೆದುಕೊಳ್ಳಬೇಕು ಎಂಬ ವಿಷಯದಲ್ಲಿ ಅನಿಶ್ಚಿತತೆ ಇರುವಲ್ಲಿ ನಾವೇನು ಮಾಡಬೇಕು? ಆ ಸಮಯದಲ್ಲಿ ಕ್ರಿಯೆಗೈಯಲು ನಮಗೆ ಅಧಿಕಾರವಿದೆಯೋ ಇಲ್ಲವೋ ಎಂಬ ವಿಷಯದಲ್ಲಿ ನಾವು ಅನಿಶ್ಚಿತರಾಗಿರುವಲ್ಲಿ ಆಗೇನು? ಜ್ಞಾನೋಕ್ತಿ 13:10 ನಮಗೆ ಎಚ್ಚರಿಕೆ ನೀಡುವುದು: “ದುರಭಿಮಾನವು ಕೇವಲ ಜಗಳಕ್ಕೆ ಕಾರಣ.” (ಪರಿಶುದ್ಧ ಬೈಬಲ್‌ *) ಜ್ಞಾನವಿಲ್ಲದೆ ಅಥವಾ ಅಧಿಕಾರವಿಲ್ಲದೆ ಕ್ರಿಯೆಗೈಯುವುದು ತಾನೇ ದುರಭಿಮಾನವಾಗಿದೆ ಮತ್ತು ಇದು ಇತರರೊಂದಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾರಿಗೆ ಜ್ಞಾನ ಮತ್ತು ವಿವೇಚನಾಶಕ್ತಿಯಿದೆಯೋ ಅಂಥವರೊಂದಿಗೆ ವಿಚಾರಿಸುವುದು ಒಳಿತನ್ನು ಉಂಟುಮಾಡುವುದಿಲ್ಲವೋ? “ಬುದ್ಧಿವಾದವನ್ನು ಕೇಳುವವರು ವಿವೇಕಿಗಳಾಗಿದ್ದಾರೆ” ಎಂದು ಜ್ಞಾನಿಯಾದ ಅರಸನು ಹೇಳುತ್ತಾನೆ.

ಸುಳ್ಳು ನಿರೀಕ್ಷಣೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ

ಹಣವು ಪ್ರಯೋಜನಾರ್ಹ ಉದ್ದೇಶವನ್ನು ಪೂರೈಸಸಾಧ್ಯವಿದೆ. ವಿರಕ್ತ ಜೀವನ ಅಥವಾ ಬಡತನದಲ್ಲಿ ಜೀವಿಸುವುದಕ್ಕಿಂತಲೂ ಸಾಕಾಗುವಷ್ಟು ಹಣಕಾಸನ್ನು ಹೊಂದಿರುವುದು ಉತ್ತಮವಾದದ್ದಾಗಿದೆ. (ಪ್ರಸಂಗಿ 7:11, 12) ಆದರೆ ಕಾನೂನುಬಾಹಿರ ರೀತಿಗಳಲ್ಲಿ ಗಳಿಸಿರುವ ಐಶ್ವರ್ಯದ ಪ್ರಯೋಜನಗಳು ಎಂದು ನಾವು ಯಾವುದನ್ನು ನೆನಸುತ್ತೇವೋ ಅವು ಮೋಸಕರವಾದವುಗಳಾಗಿರಬಹುದು. ಸೊಲೊಮೋನನು ಎಚ್ಚರಿಕೆ ನೀಡುವುದು: “ಮೋಸದಿಂದ ಸಂಪಾದಿಸಿದ ಹಣವು ಕ್ಷಯಿಸಿ ಹೋಗುವುದು. ದುಡಿದು ಸಂಪಾದಿಸಿದ ಹಣ ಹೆಚ್ಚುತ್ತಾ ಹೋಗುವುದು.”​—ಜ್ಞಾನೋಕ್ತಿ 13:11, ಪರಿಶುದ್ಧ ಬೈಬಲ್‌. *

ಉದಾಹರಣೆಗೆ, ಜೂಜಾಟದ ಶೋಧನೆಯನ್ನು ಪರಿಗಣಿಸಿರಿ. ತುಂಬ ದೊಡ್ಡ ಮೊತ್ತದ ಹಣವನ್ನು ಗಳಿಸುವ ನಿರೀಕ್ಷೆಯಿಂದ ಒಬ್ಬ ಜೂಜುಗಾರನು ಕಷ್ಟದಿಂದ ಸಂಪಾದಿಸಿರುವಂಥ ತನ್ನ ಹಣವನ್ನು ಪೋಲುಮಾಡಬಹುದು. ಆದರೆ ಅನೇಕವೇಳೆ ಇದನ್ನು ತನ್ನ ಕುಟುಂಬದ ಹಿತಕ್ಷೇಮವನ್ನು ಬಲಿಕೊಟ್ಟು ಮಾಡಲಾಗುತ್ತದೆ! ನಂತರ ಒಂದುವೇಳೆ ಆ ಜೂಜುಗಾರನು ಗೆಲ್ಲುವುದಾದರೆ ಆಗ ಏನಾಗುತ್ತದೆ? ಹಣವು ತುಂಬ ಸುಲಭವಾಗಿ ಅವನ ಕೈಸೇರಿರುವುದರಿಂದ ಅವನು ಅದಕ್ಕೆ ಸ್ವಲ್ಪವೂ ಬೆಲೆಕೊಡದಿರಬಹುದು. ಅಷ್ಟುಮಾತ್ರವಲ್ಲ, ಹೊಸದಾಗಿ ಗಳಿಸಿರುವಂಥ ಈ ಬಹುಮಾನವನ್ನು ಸರಿಯಾಗಿ ಉಪಯೋಗಿಸಲು ಬೇಕಾಗಿರುವಂಥ ಚಾತುರ್ಯವು ಅವನಲ್ಲಿ ಇಲ್ಲದಿರಬಹುದು. ಅಂಥ ಸಂಪತ್ತು ಅವನು ಎಷ್ಟು ತ್ವರಿತಗತಿಯಿಂದ ಪಡೆದುಕೊಂಡನೋ ಅಷ್ಟೇ ತ್ವರಿತಗತಿಯಿಂದ ಕಣ್ಮರೆಯಾಗುವುದು ಸಂಭವನೀಯವಲ್ಲವೋ? ಇನ್ನೊಂದು ಕಡೆಯಲ್ಲಿ, ಕಷ್ಟಪಟ್ಟು ದುಡಿಯುವ ಮೂಲಕ ಸ್ವಲ್ಪಸ್ವಲ್ಪವಾಗಿ ಕಾಲಕ್ರಮೇಣ ಸಂಗ್ರಹಿಸಲ್ಪಟ್ಟ ಸಂಪತ್ತು, ಏಕಪ್ರಕಾರವಾಗಿ ಹೆಚ್ಚುತ್ತಾ ಇರುತ್ತದೆ ಮತ್ತು ಅದನ್ನು ಸದುಪಯೋಗಿಸಸಾಧ್ಯವಿದೆ.

“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು” ಎಂದು ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 13:12) ಕೈಗೂಡದ ನಿರೀಕ್ಷಣೆಗಳು, ಮನಸ್ಸನ್ನು ಬಳಲಿಸುವಂಥ ಆಶಾಭಂಗಕ್ಕೆ ನಡಿಸುತ್ತವೆ. ಇದು ದೈನಂದಿನ ಜೀವನದಲ್ಲಿ ಸಂಭವಿಸುತ್ತದೆ. ಆದರೂ, ದೇವರ ವಾಕ್ಯದ ಮೇಲಾಧಾರಿತವಾಗಿರುವ ನಿರೀಕ್ಷಣೆಗಳ ವಿಷಯದಲ್ಲಿ ಹೀಗಾಗುವುದಿಲ್ಲ. ಅವು ಖಂಡಿತವಾಗಿಯೂ ನೆರವೇರಿಸಲ್ಪಡುವವು ಎಂಬ ವಿಚಾರದಲ್ಲಿ ನಮಗೆ ಸಂಪೂರ್ಣ ಭರವಸೆಯಿರಸಾಧ್ಯವಿದೆ. ಯಾವುದು ನಮಗೆ ವಿಳಂಬವಾಗಿ ತೋರಿಬರುತ್ತದೋ ಅದು ಕೂಡ ನಮಗೆ ಆಶಾಭಂಗವನ್ನುಂಟುಮಾಡುವ ಸಾಧ್ಯತೆ ತೀರ ಕಡಿಮೆ.

ಉದಾಹರಣೆಗೆ, ದೇವರ ಹೊಸ ಲೋಕವು ಸನ್ನಿಹಿತವಾಗುತ್ತಿದೆ ಎಂಬುದು ನಮಗೆ ಗೊತ್ತು. (2 ಪೇತ್ರ 3:13) ಅತಿ ಕಾತುರ ಭಾವದಿಂದ ನಾವು ದೇವರ ವಾಗ್ದಾನಗಳ ನೆರವೇರಿಕೆಗಾಗಿ ಆನಂದದಿಂದ ಎದುರುನೋಡುತ್ತೇವೆ. ದೇವರ ನೂತನ ಲೋಕವು ಬರುವುದಕ್ಕೆ ಮುಂಚಿನ ಸಮಯವನ್ನು ನಾವು “ಕರ್ತನ ಸೇವೆಯಲ್ಲಿ” ಕಾರ್ಯಮಗ್ನರಾಗಿರಲು, ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಲು, ಮತ್ತು ಯೆಹೋವನೊಂದಿಗೆ ಇನ್ನೂ ಹೆಚ್ಚು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ಉಪಯೋಗಿಸುವಾಗ ಏನು ಸಂಭವಿಸುತ್ತದೆ? ‘ಮನಸ್ಸು ಬಳಲಿ’ದವರಾಗಿ ಪರಿಣಮಿಸುವುದಕ್ಕೆ ಬದಲಾಗಿ, ನಾವು ಆನಂದಭರಿತರಾಗಿರುತ್ತೇವೆ. (1 ಕೊರಿಂಥ 15:58; ಇಬ್ರಿಯ 10:24, 25; ಯಾಕೋಬ 4:8) ದೀರ್ಘಕಾಲದಿಂದ ಎದುರುನೋಡುತ್ತಿದ್ದ ಬಯಕೆಯು ಈಡೇರುವಾಗ, ಅದು ಜೀವವೃಕ್ಷದಂತಿರುತ್ತದೆ​—ನಿಜವಾಗಿಯೂ ಬಲದಾಯಕವೂ ಚೈತನ್ಯದಾಯಕವೂ ಆಗಿರುತ್ತದೆ.

ದೇವರ ನಿಯಮ​—ಜೀವದ ಬುಗ್ಗೆ

ದೇವರಿಗೆ ವಿಧೇಯರಾಗುವುದರ ಪ್ರಾಮುಖ್ಯತೆಯನ್ನು ತೋರಿಸುತ್ತಾ ಜ್ಞಾನೋಕ್ತಿ 13:13 ಹೇಳುವುದು: “[ದೇವರ] ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು.” ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಲು ತಪ್ಪಿಹೋಗುವಲ್ಲಿ, ನಷ್ಟವನ್ನು ಅನುಭವಿಸಬೇಕಾದೀತು. ಯಾವ ರೀತಿಯ ನಷ್ಟ?

“ಜ್ಞಾನಿಗಳ ನಿಯಮವು ಜೀವದ ಬುಗ್ಗೆ; ಅದನ್ನಾಲಿಸುವವನು ಮೃತ್ಯುಪಾಶಗಳಿಂದ ತಪ್ಪಿಸಿಕೊಳ್ಳುವನು.” (ಜ್ಞಾನೋಕ್ತಿ 13:​14, NW) ಸರ್ವಜ್ಞಾನಿಯಾಗಿರುವಂಥ ದೇವರಾದ ಯೆಹೋವನ ನಿಯಮವಿಲ್ಲದೆ ಜೀವಿಸುವುದು, ಹೆಚ್ಚು ಉತ್ತಮವಾದ ಮತ್ತು ದೀರ್ಘವಾದ ಜೀವನವನ್ನು ನಡೆಸಲು ನಮಗೆ ಸಹಾಯಮಾಡಸಾಧ್ಯವಿರುವ ಮಾರ್ಗದರ್ಶನದಿಂದ ನಮ್ಮನ್ನು ವಂಚಿಸಿಕೊಳ್ಳುವುದಕ್ಕೆ ಸಮಾನವಾಗಿದೆ. ಅದೆಷ್ಟು ಅಪಾರ ನಷ್ಟವಾಗಿರುವುದು! ಹೀಗಿರುವುದರಿಂದ, ದೇವರ ವಾಕ್ಯಕ್ಕೆ ನಿಕಟ ಗಮನವನ್ನು ಕೊಟ್ಟು, ಅದು ನಮ್ಮ ಆಲೋಚನೆಗಳನ್ನು, ಮಾತನ್ನು ಹಾಗೂ ಕೃತ್ಯವನ್ನು ಪ್ರಭಾವಿಸುವಂತೆ ಬಿಡುವುದೇ ವಿವೇಕಯುತ ಮಾರ್ಗಕ್ರಮವಾಗಿದೆ.​—2 ಕೊರಿಂಥ 10:5; ಕೊಲೊಸ್ಸೆ 1:10.

[ಪಾದಟಿಪ್ಪಣಿಗಳು]

^ ಪ್ಯಾರ. 21 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 31 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 33 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 23ರಲ್ಲಿರುವ ಚಿತ್ರಗಳು]

ಶಾಸ್ತ್ರೀಯ ಸಲಹೆಗೆ ಪ್ರತಿಕ್ರಿಯಿಸುವುದು ಅತ್ಯುತ್ತಮ ರೀತಿಯ ಸ್ವಶಿಸ್ತಾಗಿದೆ

[ಪುಟ 24, 25ರಲ್ಲಿರುವ ಚಿತ್ರಗಳು]

“ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ”

[ಪುಟ 24, 25ರಲ್ಲಿರುವ ಚಿತ್ರಗಳು]

“ಕರ್ತನ ಕೆಲಸದಲ್ಲಿ” ಕಾರ್ಯಮಗ್ನರಾಗಿರುವುದು ನಮ್ಮನ್ನು ಆನಂದಭರಿತರನ್ನಾಗಿ ಮಾಡುತ್ತದೆ