ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವಿವಾಹವನ್ನು ಬಲಪಡಿಸುವ ವಿಧ

ನಿಮ್ಮ ವಿವಾಹವನ್ನು ಬಲಪಡಿಸುವ ವಿಧ

ನಿಮ್ಮ ವಿವಾಹವನ್ನು ಬಲಪಡಿಸುವ ವಿಧ

ದುಸ್ಥಿತಿಯಲ್ಲಿರುವ ಒಂದು ಮನೆಯನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ಗೋಡೆಗಳಿಗೆ ಬಳಿದಿದ್ದ ಬಣ್ಣವು ಕಿತ್ತುಹೋಗುತ್ತಿದೆ, ಚಾವಣಿಯು ಹಾಳಾಗಿದೆ, ಮನೆಯ ತೋಟವು ಸಹ ಪಾಳುಬಿದ್ದಿದೆ. ಈ ಕಟ್ಟಡವು ಎಷ್ಟೋ ವರುಷಗಳಿಂದ ಹಲವು ಬಿರುಸಾದ ಬಿರುಗಾಳಿಗಳಿಗೆ ಸಿಲುಕಿದೆ ಮತ್ತು ಅಲಕ್ಷ್ಯಕ್ಕೆ ಗುರಿಯಾಗಿದೆಯೆಂಬುದು ಸ್ಪಷ್ಟ. ಆದರೆ, ಈಗ ಇದನ್ನು ನಾಶಮಾಡಬೇಕೋ? ಬೇಕಾಗಿಲ್ಲ. ಅದರ ಅಸ್ತಿವಾರವು ದೃಢವಾಗಿರುವುದಾದರೆ ಮತ್ತು ಅದರ ರಚನಾ ವಿನ್ಯಾಸವು ಸ್ಥಿರವಾಗಿರುವುದಾದರೆ, ಬಹುಶಃ ಆ ಮನೆಯನ್ನು ಪುನಃ ಉತ್ತಮ ಸ್ಥಿತಿಗೆ ತರಸಾಧ್ಯವಿದೆ.

ಆ ಮನೆಯ ಸ್ಥಿತಿಯು ನಿಮಗೆ ನಿಮ್ಮ ವೈವಾಹಿಕ ಜೀವನವನ್ನು ನೆನಪಿಗೆ ತರುತ್ತದೋ? ವರುಷಗಳಿಂದ ಬಿರುಸಾದ ಬಿರುಗಾಳಿಗಳಂಥ ವಿಷಯಗಳು ನಿಮ್ಮ ವೈವಾಹಿಕ ಸಂಬಂಧದ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರಿರಬಹುದು. ನಿಮ್ಮಲ್ಲಿ ಒಬ್ಬರಿಂದ ಅಥವಾ ಇಬ್ಬರಿಂದಲೂ ಸ್ವಲ್ಪ ಮಟ್ಟಿಗಿನ ಅಲಕ್ಷ್ಯವೂ ಒಳಗೊಂಡಿರಬಹುದು. ಸ್ಯಾಂಡಿಗೆ ಅನಿಸಿದಂತೆಯೇ ನಿಮಗೂ ಅನಿಸಬಹುದು. 15 ವರುಷಗಳ ವೈವಾಹಿಕ ಜೀವನದ ನಂತರ ಅವಳು ತಿಳಿಸುವುದು: “ನಾವು ಪರಸ್ಪರ ವಿವಾಹವಾಗಿದ್ದೇವೆ ಎಂಬುದರ ಹೊರತಾಗಿ ನಮ್ಮಲ್ಲಿ ಬೇರಾವುದೇ ಸಮಾನವಾದ ವಿಷಯವಿರಲಿಲ್ಲ. ಆದರೆ ಅಷ್ಟು ಮಾತ್ರ ಒಂದು ವಿವಾಹ ಜೀವನಕ್ಕೆ ಸಾಕಾಗಿರಲಿಲ್ಲ.”

ನಿಮ್ಮ ವಿವಾಹವು ಈ ಸ್ಥಿತಿಗೆ ತಲಪಿದ್ದರೂ, ಅದನ್ನು ಕೊನೆಗೊಳಿಸಬೇಕೆಂಬ ಅವಸರದ ತೀರ್ಮಾನಕ್ಕೆ ಬರಬೇಡಿರಿ. ನಿಮ್ಮ ವೈವಾಹಿಕ ಜೀವನವನ್ನು ಸರಿಪಡಿಸುವ ಸಂಭವನೀಯತೆಯಿದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಎಷ್ಟರ ಮಟ್ಟಿಗೆ ಬದ್ಧತೆಯಿದೆ ಎಂಬುದರ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ಕಷ್ಟದ ಸಮಯದಲ್ಲಿ ಬದ್ಧತೆಯು ವಿವಾಹಕ್ಕೆ ಸ್ಥಿರತೆಯನ್ನು ನೀಡಲು ಸಹಾಯಮಾಡಬಲ್ಲದು. ಆದರೆ ಬದ್ಧತೆಯೆಂದರೇನು? ಮತ್ತು ಅದನ್ನು ಬಲಗೊಳಿಸಲು ಬೈಬಲು ನಿಮಗೆ ಹೇಗೆ ಸಹಾಯಮಾಡಸಾಧ್ಯವಿದೆ?

ಬದ್ಧತೆಯಲ್ಲಿ ಕರ್ತವ್ಯಪ್ರಜ್ಞೆ ಒಳಗೊಂಡಿದೆ

ಒಂದು ಶಬ್ದಕೋಶಕ್ಕನುಸಾರ, ಬದ್ಧತೆಯು “ಕರ್ತವ್ಯಪ್ರಜ್ಞೆಯುಳ್ಳವರಾಗಿರುವ ಅಥವಾ ಭಾವನಾತ್ಮಕವಾಗಿ ನಿರ್ಬಂಧಿಸಲ್ಪಟ್ಟಿರುವ ಸ್ಥಿತಿ”ಯನ್ನು ಸೂಚಿಸುತ್ತದೆ. ಕೆಲವೊಮ್ಮೆ ಈ ಪದವು, ವ್ಯಾಪಾರ ಒಪ್ಪಂದದಂಥ, ವ್ಯಕ್ತಿಸ್ವರೂಪವಿಲ್ಲದ ವಿಷಯಗಳಿಗೆ ಅನ್ವಯಿಸುತ್ತದೆ. ಉದಾಹರಣೆಗೆ, ಕಟ್ಟಡಕಟ್ಟುವವನೊಬ್ಬನು ಒಂದು ಮನೆಯನ್ನು ಕಟ್ಟಲಿಕ್ಕಾಗಿ ತಾನು ಸಹಿಮಾಡಿರುವ ಕರಾರಿನ ಬೇಡಿಕೆಗಳನ್ನು ಪೂರೈಸಲೇಬೇಕಾದ ಹಂಗಿಗೊಳಗಾಗಿದ್ದಾನೆ. ಈ ಕೆಲಸವನ್ನು ಮಾಡುವಂತೆ ಆಜ್ಞಾಪಿಸಿದ ವ್ಯಕ್ತಿಯ ಕುರಿತು ವೈಯಕ್ತಿಕವಾಗಿ ಅವನಿಗೆ ತಿಳಿದಿರಲಿಕ್ಕಿಲ್ಲ. ಆದರೂ, ಅವನು ತಾನು ಕೊಟ್ಟ ಮಾತಿಗನುಸಾರ ನಡೆಯುವ ನಿರ್ಬಂಧಕ್ಕೆ ಒಳಗಾಗಿರುತ್ತಾನೆ.

ವಿವಾಹವು ಭಾವಶೂನ್ಯವಾದ ವ್ಯಾಪಾರ ವಹಿವಾಟಾಗಿಲ್ಲವಾದರೂ, ಅದರಲ್ಲಿ ಒಳಗೊಂಡ ಬದ್ಧತೆಯಲ್ಲಿ ಕರ್ತವ್ಯಪ್ರಜ್ಞೆಯೂ ಸೇರಿದೆ. ಏನೇ ಸಂಭವಿಸಿದರೂ ಒಟ್ಟಾಗಿ ಜೀವಿಸುತ್ತೇವೆಂಬ ಶಾಸ್ತ್ರೋಕ್ತವಾದ ಶಪಥವನ್ನು ನೀವು ಮತ್ತು ನಿಮ್ಮ ಸಂಗಾತಿಯು ದೇವರ ಮತ್ತು ಜನರ ಮುಂದೆ ಮಾಡಿದ್ದೀರಿ. ಯೇಸು ತಿಳಿಸಿದ್ದು: ‘[ಸ್ತ್ರೀ ಮತ್ತು ಪುರುಷನನ್ನು] ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ​—ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನು.’ ಯೇಸು ಕೂಡಿಸಿ ಹೇಳಿದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾಯ 19:​4-6) ಆದುದರಿಂದ, ಸಮಸ್ಯೆಗಳು ಎದುರಾಗುವಾಗ, ನೀವು ಮತ್ತು ನಿಮ್ಮ ಸಂಗಾತಿ ಒಬ್ಬರಿಗೊಬ್ಬರು ಬದ್ಧರಾಗಿರುವಿರೆಂದು ಈ ಮುಂಚೆ ಕೊಟ್ಟ ಮಾತನ್ನು ಪಾಲಿಸಲು ದೃಢನಿರ್ಣಯವನ್ನು ಮಾಡಿರಿ. * ಒಬ್ಬ ಹೆಂಡತಿಯು ತಿಳಿಸುವುದು: “ವಿವಾಹ ವಿಚ್ಛೇದವನ್ನು ಒಂದು ಆಯ್ಕೆಯಾಗಿ ನಾವು ಪರಿಗಣಿಸುವುದನ್ನು ನಿಲ್ಲಿಸಿದ ನಂತರವೇ ಪರಿಸ್ಥಿತಿಯು ಸುಧಾರಿಸಲು ಆರಂಭಿಸಿತು.”

ಆದರೆ ವೈವಾಹಿಕ ಬದ್ಧತೆಯಲ್ಲಿ ಕರ್ತವ್ಯಪ್ರಜ್ಞೆಗಿಂತಲೂ ಹೆಚ್ಚಿನದ್ದು ಒಳಗೊಂಡಿದೆ. ಇನ್ನೇನು ಒಳಗೊಂಡಿದೆ?

ಒಟ್ಟಾಗಿ ಕೆಲಸಮಾಡುವುದು ವೈವಾಹಿಕ ಬದ್ಧತೆಯನ್ನು ಬಲಪಡಿಸುತ್ತದೆ

ವಿವಾಹಕ್ಕೆ ಬದ್ಧರಾಗಿರುವುದೆಂದರೆ, ವಿವಾಹಿತ ಸಂಗಾತಿಗಳು ಎಂದಿಗೂ ಭಿನ್ನಾಭಿಪ್ರಾಯ ಪಡುವುದಿಲ್ಲ ಎಂದರ್ಥವಲ್ಲ. ಆದರೆ ಭಿನ್ನಾಭಿಪ್ರಾಯವು ಬಂದೊಡನೆ, ಅದನ್ನು ಇತ್ಯರ್ಥಗೊಳಿಸಲು ಶ್ರದ್ಧಾಪೂರ್ವಕವಾದ ಇಚ್ಛೆಯಿರಬೇಕು. ಇದು ಕೇವಲ ಒಂದು ಶಪಥವನ್ನು ಮಾಡಿದ್ದೇವೆಂಬ ಹಂಗಿನಿಂದಾಗಿರದೆ, ತಮ್ಮ ನಡುವೆಯಿರುವ ಭಾವನಾತ್ಮಕ ಬಂಧದ ಕಾರಣ ಮಾಡಲ್ಪಡಬೇಕು. ಗಂಡಹೆಂಡತಿಯರ ಕುರಿತು ಯೇಸು ಹೇಳಿದ್ದು: “ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.”

ನಿಮ್ಮ ಸಂಗಾತಿಯೊಂದಿಗೆ ‘ಒಂದೇ ಶರೀರವಾಗಿರುವುದು’ ಏನನ್ನು ಅರ್ಥೈಸುತ್ತದೆ? “ಪುರುಷರು [“ಗಂಡಂದಿರು,” NW] ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸ”ಬೇಕು ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (ಎಫೆಸ 5:​28, 29) ಹಾಗಿರುವುದರಿಂದ ಭಾಗಶಃ “ಒಂದೇ ಶರೀರ” ಎಂಬುದಾಗಿ ಹೇಳುವಾಗ, ನಿಮಗೆ ನಿಮ್ಮ ಸ್ವಂತ ಹಿತಚಿಂತನೆಯ ಕುರಿತು ಎಷ್ಟು ಕಾಳಜಿ ಇದೆಯೋ ಅಷ್ಟೇ ಕಾಳಜಿ ನಿಮ್ಮ ಸಂಗಾತಿಯ ಹಿತಚಿಂತನೆಯ ಕುರಿತೂ ಇರಬೇಕೆಂಬುದನ್ನು ಅರ್ಥೈಸುತ್ತದೆ. ವಿವಾಹಿತ ವ್ಯಕ್ತಿಗಳು ತಮ್ಮ ಆಲೋಚನೆಯನ್ನು, “ನನ್ನದು” ಎಂಬುದರಿಂದ “ನಮ್ಮದು,” ಮತ್ತು “ನಾನು” ಎಂಬುದರಿಂದ “ನಾವು” ಎನ್ನುವುದಕ್ಕೆ ಬದಲಾಯಿಸಬೇಕು. ಒಬ್ಬಾಕೆ ಸಲಹೆಗಾರ್ತಿಯು ಬರೆದದ್ದು: “ಸಂಗಾತಿಗಳಿಬ್ಬರೂ, ಅವಿವಾಹಿತರಂತೆ ಆಲೋಚಿಸುವುದನ್ನೂ ಭಾವಿಸುವುದನ್ನೂ ನಿಲ್ಲಿಸಿ, ವಿವಾಹಿತ ದಂಪತಿಗಳಂತೆ ಆಲೋಚಿಸಲೂ ಭಾವಿಸಲೂ ಆರಂಭಿಸಬೇಕು.”

ನೀವೂ ನಿಮ್ಮ ಸಂಗಾತಿಯೂ “ವಿವಾಹಿತ ದಂಪತಿಗಳಂತೆ ಆಲೋಚಿಸಿ, ಭಾವಿಸುತ್ತೀರೋ”? ಅನೇಕ ವರುಷಗಳಿಂದ ವಿವಾಹಿತರಾಗಿದ್ದರೂ, ಅದೇ ಸಮಯದಲ್ಲಿ ಈ ಅರ್ಥದಲ್ಲಿ “ಒಂದೇ ಶರೀರ”ವಾಗಿರದೆ ಇರುವ ಸಾಧ್ಯತೆಯಿದೆ. ಹೌದು ಇದು ಸಂಭವಿಸಸಾಧ್ಯವಿದೆ, ಆದರೆ ಸಮಯಕ್ಕೆ ಒಂದು ಸಂದರ್ಭವನ್ನು ಕೊಡುವುದು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ವಿವಾಹವೆಂದರೆ ಜೀವನವನ್ನು ಹಂಚಿಕೊಳ್ಳುವುದಾಗಿದೆ, ಮತ್ತು ಇಬ್ಬರು ವ್ಯಕ್ತಿಗಳು ಎಷ್ಟು ಹೆಚ್ಚಾಗಿ ಜೀವನವನ್ನು ಹಂಚಿಕೊಳ್ಳುತ್ತಾರೋ ಅಷ್ಟೇ ಹೆಚ್ಚಾಗಿ ಅವರ ವೈವಾಹಿಕ ಜೀವನವು ಏಳಿಗೆ ಹೊಂದುತ್ತದೆ.”

ಕೆಲವು ಅಸಂತೋಷಿತ ದಂಪತಿಗಳು, ಕೇವಲ ತಮ್ಮ ಮಕ್ಕಳ ಅಥವಾ ಆರ್ಥಿಕ ಭದ್ರತೆಯ ಸಲುವಾಗಿ ಒಟ್ಟಾಗಿ ಜೀವಿಸುತ್ತಾರೆ. ಇನ್ನಿತರರು, ವಿವಾಹ ವಿಚ್ಛೇದದ ಬಗ್ಗೆ ಅವರಿಗಿರುವ ಬಲವಾದ ನೈತಿಕ ಆಕ್ಷೇಪಣೆಗಳಿಂದಾಗಿ ಅಥವಾ ತಾವು ವಿವಾಹ ವಿಚ್ಛೇದಪಡೆದರೆ ಬೇರೆಯವರು ತಮ್ಮ ಕುರಿತು ಏನು ಹೇಳಬಹುದು ಎಂಬ ಭಯದಿಂದಾಗಿ ತಾಳಿಕೊಳ್ಳುತ್ತಾರೆ. ಈ ವಿವಾಹಗಳು ಬಾಳುತ್ತಿವೆ ಎಂಬುದು ಮೆಚ್ಚತಕ್ಕ ವಿಷಯವಾದರೂ, ನಿಮ್ಮ ಗುರಿಯು ಕೇವಲ ಒಂದು ಬಾಳುವ ವಿವಾಹವನ್ನು ಹೊಂದಿರುವುದು ಮಾತ್ರವಲ್ಲ ಬದಲಾಗಿ ಒಂದು ಪ್ರೀತಿಪರ ಸಂಬಂಧವನ್ನು ಹೊಂದಿರುವುದೂ ಆಗಿದೆ ಎಂಬುದನ್ನು ನೆನಪಿನಲ್ಲಿಡಿರಿ.

ನಿಸ್ವಾರ್ಥ ಕೃತ್ಯಗಳು ವೈವಾಹಿಕ ಬದ್ಧತೆಯನ್ನು ಉತ್ತೇಜಿಸುತ್ತವೆ

“ಕಡೇ ದಿವಸಗಳಲ್ಲಿ” ಜನರು ‘ಸ್ವಾರ್ಥಚಿಂತಕರಾಗಿರುತ್ತಾರೆ’ ಎಂದು ಬೈಬಲು ಮುಂತಿಳಿಸಿತ್ತು. (2 ತಿಮೊಥೆಯ 3:​1, 2) ಆ ಪ್ರವಾದನೆಗೆ ಹೊಂದಿಕೆಯಲ್ಲಿ, ಇಂದು ವ್ಯಕ್ತಿಗಳು ತಮಗೇ ಆರಾಧನಾಪೂರ್ವಕ ಭಕ್ತಿಯನ್ನು ಸಲ್ಲಿಸುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಅನೇಕ ವಿವಾಹಗಳಲ್ಲಿ, ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ತಮ್ಮನ್ನು ನೀಡಿಕೊಳ್ಳುವುದನ್ನು ಬಲಹೀನತೆಯ ಚಿಹ್ನೆಯಾಗಿ ವೀಕ್ಷಿಸಲಾಗುತ್ತದೆ. ಆದರೆ ಒಂದು ಯಶಸ್ವಿಕರ ವಿವಾಹದಲ್ಲಿ, ಸಂಗಾತಿಗಳಿಬ್ಬರೂ ಸ್ವತ್ಯಾಗದ ಆತ್ಮವನ್ನು ಪ್ರದರ್ಶಿಸುತ್ತಾರೆ. ನೀವು ಅಂಥ ಆತ್ಮವನ್ನು ಹೇಗೆ ಪ್ರದರ್ಶಿಸಸಾಧ್ಯವಿದೆ?

‘ಈ ಸಂಬಂಧದಿಂದ ನಾನು ಯಾವ ಪ್ರಯೋಜನವನ್ನು ಪಡೆಯುತ್ತಿದ್ದೇನೆ?’ ಎಂಬ ಪ್ರಶ್ನೆಯ ಬಗ್ಗೆ ಸದಾ ಚಿಂತಿಸುತ್ತಿರುವ ಬದಲಾಗಿ, ‘ನನ್ನ ವಿವಾಹವನ್ನು ಬಲಗೊಳಿಸಲು ವೈಯಕ್ತಿಕವಾಗಿ ನಾನು ಏನನ್ನು ಮಾಡುತ್ತಿದ್ದೇನೆ?’ ಎಂಬುದಾಗಿ ನಿಮ್ಮನ್ನು ಕೇಳಿಕೊಳ್ಳಿರಿ. ಕ್ರೈಸ್ತರು “ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡ”ಬೇಕು ಎಂಬುದಾಗಿ ಬೈಬಲ್‌ ತಿಳಿಸುತ್ತದೆ. (ಫಿಲಿಪ್ಪಿ 2:4) ಬೈಬಲಿನ ಈ ಮೂಲತತ್ತ್ವದ ಕುರಿತು ನೀವು ಚಿಂತಿಸುತ್ತಿರುವಾಗ, ಕಳೆದ ವಾರದಲ್ಲಿನ ನಿಮ್ಮ ಕೃತ್ಯಗಳನ್ನು ಪರಿಶೀಲಿಸಿರಿ. ನಿಮ್ಮ ವಿವಾಹ ಸಂಗಾತಿಯ ಪ್ರಯೋಜನಕ್ಕೆಂದೇ ನೀವು ಎಷ್ಟು ಬಾರಿ ಒಂದು ದಯೆಯ ಕೃತ್ಯವನ್ನು ಮಾಡಿದ್ದೀರಿ? ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಮಾತನಾಡಲು ಬಯಸಿದಾಗ, ನಿಮಗೆ ಆಲಿಸಬೇಕೆಂದು ಅನಿಸದಿದ್ದರೂ ನೀವು ಆಲಿಸಿದ್ದೀರೋ? ನಿಮಗಿಂತಲೂ ಹೆಚ್ಚಾಗಿ ನಿಮ್ಮ ಸಂಗಾತಿಗೆ ಆಸಕ್ತಿಕರವಾದ ಎಷ್ಟು ಚಟುವಟಿಕೆಗಳಲ್ಲಿ ನೀವು ಭಾಗವಹಿಸಿದ್ದೀರಿ?

ಇಂಥ ಪ್ರಶ್ನೆಗಳನ್ನು ತೂಗಿನೋಡುವಾಗ, ನಿಮ್ಮ ಒಳ್ಳೇ ಕಾರ್ಯಗಳು ಗಮನಿಸಲ್ಪಡುವುದಿಲ್ಲ ಅಥವಾ ಪ್ರತಿಫಲಿಸಲ್ಪಡುವುದಿಲ್ಲ ಎಂಬುದಾಗಿ ಚಿಂತಿಸಬೇಡಿರಿ. ಒಂದು ರೆಫರೆನ್ಸ್‌ ಪುಸ್ತಕವು ತಿಳಿಸುವುದು: “ಹೆಚ್ಚಿನ ಸಂಬಂಧಗಳಲ್ಲಿ, ಸಕಾರಾತ್ಮಕ ವರ್ತನೆಯು ಇತರರಿಂದ ಸಕಾರಾತ್ಮಕ ವರ್ತನೆಯನ್ನು ಉಂಟುಮಾಡುತ್ತದೆ. ಆದುದರಿಂದ, ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಕಾರಾತ್ಮಕವಾಗಿ ವರ್ತಿಸುವ ಮೂಲಕ ಅವರೂ ನಿಮ್ಮೊಂದಿಗೆ ಸಕಾರಾತ್ಮಕವಾಗಿ ವರ್ತಿಸುವಂತೆ ಅವರನ್ನು ಉತ್ತೇಜಿಸಲು ನಿಮ್ಮಿಂದ ಸಾಧ್ಯವಾದದ್ದನ್ನು ಮಾಡಿರಿ.” ಸ್ವತ್ಯಾಗದ ಕೃತ್ಯಗಳು ನಿಮ್ಮ ವಿವಾಹವನ್ನು ಬಲಗೊಳಿಸುತ್ತವೆ, ಏಕೆಂದರೆ ಆ ಕೃತ್ಯಗಳು ತಾನೇ ನೀವು ನಿಮ್ಮ ವಿವಾಹವನ್ನು ಅಮೂಲ್ಯವಾದುದ್ದಾಗಿ ವೀಕ್ಷಿಸುತ್ತೀರೆಂದು ಮತ್ತು ಅದನ್ನು ಕಾಪಾಡಬಯಸುತ್ತೀರೆಂದು ತೋರಿಸುತ್ತವೆ.

ವಿವಾಹವನ್ನು ದೀರ್ಘಕಾಲದ ಬಂಧವೆಂದು ವೀಕ್ಷಿಸುವುದು ಅತ್ಯಾವಶ್ಯಕ

ಯೆಹೋವ ದೇವರು ನಿಷ್ಠೆಯನ್ನು ಗಣ್ಯಮಾಡುತ್ತಾನೆ. ವಾಸ್ತವದಲ್ಲಿ, ಬೈಬಲ್‌ ತಿಳಿಸುವುದು: “ನಿಷ್ಠಾವಂತನೊಂದಿಗೆ ನೀನು [ಯೆಹೋವನು] ನಿಷ್ಠಾವಂತನಾಗಿ ಕ್ರಿಯೆಗೈಯುತ್ತಿ.” (2 ಸಮುವೇಲ 22:​26, NW) ದೇವರಿಗೆ ನಿಷ್ಠಾವಂತರಾಗಿ ಉಳಿಯುವುದರಲ್ಲಿ, ಆತನು ಸ್ಥಾಪಿಸಿದ ವಿವಾಹದ ಏರ್ಪಾಡಿಗೆ ನಿಷ್ಠಾವಂತರಾಗಿ ಉಳಿಯುವುದೂ ಸೇರಿದೆ.​—ಆದಿಕಾಂಡ 2:24.

ನೀವೂ ನಿಮ್ಮ ಸಂಗಾತಿಯೂ ಒಬ್ಬರಿಗೊಬ್ಬರು ನಿಷ್ಠಾವಂತರಾಗಿರುವುದಾದರೆ, ನಿಮ್ಮ ಬಂಧದ ಶಾಶ್ವತತೆಯನ್ನು ನೀವು ಆನಂದಿಸಸಾಧ್ಯವಿದೆ. ನಿಮ್ಮ ಮುಂದಿರುವ ತಿಂಗಳುಗಳ, ವರುಷಗಳ, ಮತ್ತು ದಶಕಗಳ ಕುರಿತು ನೀವು ಯೋಚಿಸುವಾಗ, ನೀವು ಒಟ್ಟಾಗಿ ಇರುವುದನ್ನು ಚಿತ್ರಿಸಿಕೊಳ್ಳುವಿರಿ. ವಿವಾಹಬಂಧದಿಂದ ಹೊರಬರುವ ಆಲೋಚನೆಯಂತೂ ಹುಟ್ಟುವುದೇ ಇಲ್ಲ, ಮತ್ತು ಈ ಹೊರನೋಟವು ನಿಮ್ಮ ಸಂಬಂಧದಲ್ಲಿ ಭದ್ರತೆಯನ್ನು ತರುತ್ತದೆ. ಒಬ್ಬಾಕೆ ಪತ್ನಿಯು ತಿಳಿಸುವುದು: “ನಾನು [ನನ್ನ ಗಂಡನೊಂದಿಗೆ] ತುಂಬ ಕೋಪದಿಂದಿರುವಾಗ ಮತ್ತು ನಮ್ಮ ಮಧ್ಯೆ ಇದೇನಾಗುತ್ತಿದೆ ಎಂಬುದರ ಬಗ್ಗೆ ನಾನು ಬಹಳಷ್ಟು ಸಿಟ್ಟುಗೊಂಡಿರುವಾಗಲೂ, ನಮ್ಮ ವಿವಾಹವು ಅಂತ್ಯವಾಗುತ್ತದೆಂಬ ಚಿಂತೆಯು ನನಗಿರುವುದಿಲ್ಲ. ನಮ್ಮ ಸಂಬಂಧವನ್ನು ಹೇಗೆ ಪುನಃ ಒಂದು ಉತ್ತಮ ಸ್ಥಿತಿಗೆ ಹಿಂದೆ ತರುವುದೆಂಬುದರ ಕುರಿತು ನಾನು ಚಿಂತಿತಳಾಗುತ್ತೇನೆ. ನಾವು ಪುನಃ ಒಂದಾಗುತ್ತೇವೆ ಎಂಬುದರ ಬಗ್ಗೆ ನನಗೆ ಸ್ವಲ್ಪವೂ ಸಂದೇಹವಿರುವುದಿಲ್ಲ​—ಆದರೆ ವಿಷಯವನ್ನು ಹೇಗೆ ಸರಿಪಡಿಸುವೆವು ಎಂಬುದು ಮಾತ್ರ ನನಗೆ ಆ ಕ್ಷಣ ತಿಳಿದಿರುವುದಿಲ್ಲ ಅಷ್ಟೇ.”

ವಿವಾಹವನ್ನು ದೀರ್ಘಕಾಲದ ಬಂಧವಾಗಿ ವೀಕ್ಷಿಸುವುದು, ಒಬ್ಬನ ಸಂಗಾತಿಯೊಂದಿಗೆ ಮಾಡುವ ಬದ್ಧತೆಯ ಪ್ರಾಮುಖ್ಯ ಭಾಗವಾಗಿದೆ. ಆದರೆ ದುಃಖಕರವಾಗಿ ಇಂದು ಅನೇಕರು ವಿವಾಹವನ್ನು ದೀರ್ಘಕಾಲದ ಬಂಧವಾಗಿ ವೀಕ್ಷಿಸುವುದೇ ಇಲ್ಲ. ಕೋಪದಿಂದ ವಾಗ್ವಾದಿಸುತ್ತಿರುವಾಗ ಗಂಡನೋ ಹೆಂಡತಿಯೋ “ನಾನು ನಿನ್ನನ್ನು ಬಿಟ್ಟುಹೋಗುತ್ತೇನೆ!” ಅಥವಾ, “ನನ್ನನ್ನು ನಿಜವಾಗಿಯೂ ಗಣ್ಯಮಾಡುವ ಬೇರೆ ಯಾರನ್ನಾದರೂ ನಾನು ಹುಡುಕುತ್ತೇನೆ!” ಎಂದು ಥಟ್ಟನೆ ಹೇಳಿಬಿಡಬಹುದು. ಹೆಚ್ಚಿನ ಸಮಯದಲ್ಲಿ ಆ ಮಾತನ್ನು ನಿಜವಾದ ಅರ್ಥದಿಂದ ಹೇಳಲಾಗುವುದಿಲ್ಲ. ಆದರೂ, ಬೈಬಲ್‌ ತಿಳಿಸುವುದು, ನಾಲಿಗೆಯು “ಮರಣಕರವಾದ ವಿಷದಿಂದ ತುಂಬಿ ಇದೆ.” (ಯಾಕೋಬ 3:8) ಬೆದರಿಕೆಗಳನ್ನು ಹಾಕುವುದು ಮತ್ತು ‘ಕೊನೆ ಬಾರಿ ಹೇಳುತ್ತಾ ಇದ್ದೇನೆ, ಇಲ್ಲದಿದ್ದರೆ . . .’ ಎಂದು ಹೆದರಿಸುವುದು, ‘ನಮ್ಮ ವಿವಾಹವನ್ನು ಶಾಶ್ವತವಾದದ್ದಾಗಿ ನಾನು ವೀಕ್ಷಿಸುವುದಿಲ್ಲ. ಯಾವುದೇ ಸಮಯದಲ್ಲಿ ನಾನು ಅದನ್ನು ಬಿಟ್ಟುಬಿಡಸಾಧ್ಯವಿದೆ’ ಎಂದು ಹೇಳುವುದಕ್ಕೆ ಸಮಾನವಾಗಿದೆ. ಅಂಥ ವಿಷಯಗಳನ್ನು ಅರ್ಥೈಸುವ ಮಾತುಗಳನ್ನಾಡುವುದು, ವೈವಾಹಿಕ ಜೀವನಕ್ಕೆ ವಿನಾಶಕಾರಿಯಾಗಿರಸಾಧ್ಯವಿದೆ.

ವಿವಾಹವನ್ನು ನೀವು ದೀರ್ಘಕಾಲದ ಬಂಧವಾಗಿ ವೀಕ್ಷಿಸುವಾಗ, ಕಷ್ಟದಲ್ಲಿಯೂ ಸುಖದಲ್ಲಿಯೂ ನಿಮ್ಮ ಸಂಗಾತಿಯೊಂದಿಗಿರಲು ನೀವು ಅಪೇಕ್ಷಿಸುತ್ತೀರಿ. ಇದರಿಂದ ಇನ್ನೊಂದು ಪ್ರಯೋಜನವೂ ಇದೆ. ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರರ ಬಲಹೀನತೆಗಳನ್ನು ಮತ್ತು ತಪ್ಪುಗಳನ್ನು ಸ್ವೀಕರಿಸಿ, ಒಬ್ಬರನ್ನೊಬ್ಬರು ಸೈರಿಸಿಕೊಂಡು ಉದಾರವಾಗಿ ಕ್ಷಮಿಸುವುದನ್ನು ಇದು ಬಹಳ ಸುಲಭವನ್ನಾಗಿ ಮಾಡುತ್ತದೆ. (ಕೊಲೊಸ್ಸೆ 3:13) ಒಂದು ಕೈಪಿಡಿಯು ತಿಳಿಸುವುದು: “ಒಂದು ಉತ್ತಮ ವಿವಾಹದಲ್ಲಿ, ಸಂಗಾತಿಗಳಿಬ್ಬರೂ ತಪ್ಪುಮಾಡುವ ಸಾಧ್ಯತೆಯಿದೆ ಮತ್ತು ಅದರ ಹೊರತಾಗಿಯೂ ಆ ವಿವಾಹವು ನೆಲೆನಿಲ್ಲುತ್ತದೆ.”

ನಿಮ್ಮ ಮದುವೆಯ ದಿನದಂದು, ನೀವು ಒಂದು ವಿವಾಹ ಸಂಸ್ಥೆಗಲ್ಲ ಬದಲಾಗಿ ಒಬ್ಬ ಜೀವಂತ ವ್ಯಕ್ತಿಗೆ ಅಂದರೆ ನಿಮ್ಮ ಸಂಗಾತಿಗೆ ಬದ್ಧರಾದಿರಿ. ಈ ನಿಜಾಂಶವು, ಒಬ್ಬ ವಿವಾಹಿತ ವ್ಯಕ್ತಿಯಾಗಿ ಈಗ ನೀವು ಆಲೋಚಿಸುವ ಮತ್ತು ಕ್ರಿಯೆಗೈಯುವ ರೀತಿಯನ್ನು ಪ್ರಭಾವಿಸಬೇಕು. ವಿವಾಹದ ಪವಿತ್ರತೆಯಲ್ಲಿ ನಿಮಗೆ ದೃಢ ವಿಶ್ವಾಸವಿದೆ ಎಂಬ ಕಾರಣದಿಂದ ಮಾತ್ರವಲ್ಲ ನೀವು ವಿವಾಹವಾದ ವ್ಯಕ್ತಿಯನ್ನು ಪ್ರೀತಿಸುವುದರಿಂದಲೂ ನಿಮ್ಮ ಸಂಗಾತಿಯೊಂದಿಗೆ ಉಳಿಯಬೇಕೆಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ?

[ಪಾದಟಿಪ್ಪಣಿ]

^ ಪ್ಯಾರ. 7 ಅಸಾಧಾರಣ ಸಂದರ್ಭಗಳಲ್ಲಿ, ಒಬ್ಬ ವಿವಾಹಿತ ದಂಪತಿಗೆ ಪ್ರತ್ಯೇಕಿಸಿಕೊಳ್ಳಲು ಸೂಕ್ತವಾದ ಕಾರಣವಿರಬಹುದು. (1 ಕೊರಿಂಥ 7:​10, 11; ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಪುಟ 160-1ನ್ನು ನೋಡಿರಿ.) ಇದಕ್ಕೆ ಕೂಡಿಸಿ, ಹಾದರದ (ಲೈಂಗಿಕ ಅನೈತಿಕತೆ) ಕಾರಣ ವಿವಾಹ ವಿಚ್ಛೇದ ಕೊಡುವುದನ್ನು ಬೈಬಲು ಅನುಮತಿಸುತ್ತದೆ.​—ಮತ್ತಾಯ 19:9.

[ಪುಟ 5ರಲ್ಲಿರುವ ಚೌಕ/ಚಿತ್ರ]

ನೀವು ಈಗ ಏನು ಮಾಡಸಾಧ್ಯವಿದೆ

ನಿಮ್ಮ ವಿವಾಹದಲ್ಲಿ ವೈವಾಹಿಕ ಬದ್ಧತೆಯು ಎಷ್ಟು ಬಲವಾಗಿದೆ? ಅದನ್ನು ಉತ್ತಮಗೊಳಿಸಸಾಧ್ಯವಿದೆ ಎಂದು ನಿಮಗೆ ಅನಿಸುತ್ತದೋ? ನಿಮ್ಮ ವೈವಾಹಿಕ ಬದ್ಧತೆಯನ್ನು ಬಲಗೊಳಿಸಲು ಕೆಳಗೆ ತಿಳಿಸಲ್ಪಟ್ಟಿರುವ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕಿರಿ: ● ಸ್ವ-ಪರೀಕ್ಷೆಯನ್ನು ಮಾಡಿಕೊಳ್ಳಿರಿ. ಸ್ವತಃ ಹೀಗೆ ಕೇಳಿಕೊಳ್ಳಿ: ‘ನಾನು ನಿಜವಾಗಿಯೂ ವಿವಾಹಿತ ವ್ಯಕ್ತಿಯಂತೆ ಆಲೋಚಿಸಿ, ಕ್ರಿಯೆಗೈಯುತ್ತೇನೋ, ಅಥವಾ ಇನ್ನೂ ಅವಿವಾಹಿತನಂತೆ ಆಲೋಚಿಸಿ, ವರ್ತಿಸುತ್ತೇನೋ?’ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಿಮ್ಮ ಸಂಗಾತಿಗಿರುವ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳಿರಿ. ● ನಿಮ್ಮ ಸಂಗಾತಿಯೊಂದಿಗೆ ಈ ಲೇಖನವನ್ನು ಓದಿರಿ. ನಂತರ ಶಾಂತವಾದ ರೀತಿಯಲ್ಲಿ ನೀವು ನಿಮ್ಮ ವೈವಾಹಿಕ ಬದ್ಧತೆಯನ್ನು ಹೇಗೆ ಬಲಗೊಳಿಸಸಾಧ್ಯವಿದೆ ಎಂಬ ವಿಧಗಳನ್ನು ಚರ್ಚಿಸಿರಿ. ● ನಿಮ್ಮ ಬದ್ಧತೆಯನ್ನು ಬಲಗೊಳಿಸಬಲ್ಲ ಚಟುವಟಿಕೆಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಭಾಗವಹಿಸಿರಿ. ಉದಾಹರಣೆಗೆ: ನಿಮ್ಮ ಮದುವೆಯ ಅಥವಾ ಇತರ ಸವಿನೆನಪಿನ ಘಟನೆಗಳ ಫೋಟೋಗ್ರಾಫ್‌ಗಳನ್ನು ನೋಡಿರಿ. ನಿಮ್ಮ ಪ್ರಣಯಾಚರಣೆಯ ಸಮಯದಲ್ಲಿ ಅಥವಾ ವಿವಾಹವಾದ ಆರಂಭದ ವರುಷಗಳಲ್ಲಿ ಯಾವ ವಿಷಯಗಳು ನಿಮಗೆ ಆನಂದವನ್ನು ತರುತ್ತಿದ್ದವೊ, ಆ ವಿಷಯಗಳನ್ನು ಈಗಲೂ ಒಟ್ಟಾಗಿ ಮಾಡಿರಿ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಂದ ವಿವಾಹಕ್ಕೆ ಸಂಬಂಧಿಸಿದ ಬೈಬಲ್‌ ಆಧಾರಿತ ಲೇಖನಗಳನ್ನು ಒಟ್ಟಾಗಿ ಅಧ್ಯಯನಮಾಡಿರಿ.

[ಪುಟ 6ರಲ್ಲಿರುವ ಚೌಕ/ಚಿತ್ರ]

ವೈವಾಹಿಕ ಬದ್ಧತೆಯಲ್ಲಿ ಒಳಗೊಂಡಿರುವ ವಿಷಯಗಳುಕರ್ತವ್ಯಪ್ರಜ್ಞೆ “ನಿನ್ನ ಹರಕೆಯನ್ನು ಒಪ್ಪಿಸು. ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆಮಾಡಿಕೊಳ್ಳದೆ ಇರುವದು ವಾಸಿ.”​—ಪ್ರಸಂಗಿ 5:​4, 5. ● ಒಟ್ಟಾಗಿ ಕೆಲಸಮಾಡುವುದು “ಒಬ್ಬನಿಗಿಂತ ಇಬ್ಬರು ಲೇಸು; . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.”​—ಪ್ರಸಂಗಿ 4:​9, 10. ● ಸ್ವತ್ಯಾಗ “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”​—ಅ. ಕೃತ್ಯಗಳು 20:35. ● ದೀರ್ಘಕಾಲದ ಬಂಧವೆಂದು ವೀಕ್ಷಿಸುವುದು “ಪ್ರೀತಿ . . . ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.”​—1 ಕೊರಿಂಥ 13:​4, 7.

[ಪುಟ 7ರಲ್ಲಿರುವ ಚಿತ್ರಗಳು]

ನಿಮ್ಮ ಸಂಗಾತಿಯು ಮಾತನಾಡಲು ಬಯಸುವಾಗ, ನೀವು ಆಲಿಸುತ್ತೀರೋ?