ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವೈವಾಹಿಕ ಜೀವನಕ್ಕೆ ಬೈಬಲ್‌ ಸಹಾಯ ನೀಡಬಲ್ಲದು

ನಿಮ್ಮ ವೈವಾಹಿಕ ಜೀವನಕ್ಕೆ ಬೈಬಲ್‌ ಸಹಾಯ ನೀಡಬಲ್ಲದು

ನಿಮ್ಮ ವೈವಾಹಿಕ ಜೀವನಕ್ಕೆ ಬೈಬಲ್‌ ಸಹಾಯ ನೀಡಬಲ್ಲದು

ವೈವಾಹಿಕ ಜೀವನ ಎಂದು ಹೇಳಿದೊಡನೆ ಕೆಲವರ ಮನಸ್ಸಿನಲ್ಲಿ ಹಿತಕರವಾದ ವಿಚಾರಗಳು ಮೂಡುತ್ತವೆ. ಇತರರಿಗೆ, ಇದು ಮನೋವ್ಯಥೆಯನ್ನು ಉಂಟುಮಾಡುತ್ತದೆ. “ನಾನು ನನ್ನ ಗಂಡನಿಂದ ಭಾವನಾತ್ಮಕವಾಗಿ ವಿಚ್ಛೇದಿಸಲ್ಪಟ್ಟಿದ್ದೇನೆಂಬ ಅನಿಸಿಕೆ ನನಗಾಗುತ್ತದೆ. ನನಗೆ ಯಾವಾಗಲೂ, ನಾನು ತ್ಯಜಿಸಲ್ಪಟ್ಟಿದ್ದೇನೆ ಮತ್ತು ಒಂಟಿಯಾಗಿದ್ದೇನೆ ಎಂಬ ಭಾವನೆ ಇರುತ್ತದೆ,” ಎಂಬುದಾಗಿ ಒಬ್ಬ ಪತ್ನಿಯು ಪ್ರಲಾಪಿಸುತ್ತಾಳೆ.

ಒಬ್ಬರನ್ನೊಬ್ಬರು ಪ್ರೀತಿಸುವೆವು ಮತ್ತು ನೆಚ್ಚುವೆವು ಎಂದು ಒಮ್ಮೆ ಶಪಥಮಾಡಿದ ಇಬ್ಬರು ವ್ಯಕ್ತಿಗಳು ಇಷ್ಟೊಂದು ಭಾವಶೂನ್ಯರಾಗುವಂತೆ ಮಾಡಿದಂಥದ್ದಾದರೂ ಯಾವುದು? ಒಂದು ಕಾರಣವು, ವಿವಾಹದಲ್ಲಿ ಏನೆಲ್ಲಾ ಒಳಗೊಂಡಿದೆ ಎಂಬ ತಿಳಿವಳಿಕೆಯ ಕೊರತೆಯೇ ಆಗಿದೆ. ಒಬ್ಬ ವೈದ್ಯಕೀಯ ಪತ್ರಕರ್ತನು ಹೇಳುವುದು: “ಯಾವುದೇ ರೀತಿಯ ತರಬೇತಿಯಿಲ್ಲದೆ ನಾವು ವೈವಾಹಿಕ ಜೀವನಕ್ಕೆ ಕಾಲಿರಿಸುತ್ತೇವೆ.”

ವಿವಾಹದ ಬಗ್ಗೆ ತೀರ ಕಡಿಮೆ ಜನರಿಗೆ ಅಂಥ ತಿಳಿವಳಿಕೆಯಿದೆ ಎಂಬ ಸಂಗತಿಯು, ಅಮೆರಿಕದ ನ್ಯೂ ಜೆರ್ಸಿಯಲ್ಲಿನ ರೂಟ್ಗರ್ಸ್‌ ವಿಶ್ವವಿದ್ಯಾನಿಲಯದ ಸಂಶೋಧನಾ ಕಾರ್ಯಕ್ರಮವಾದ ರಾಷ್ಟ್ರೀಯ ವಿವಾಹ ಕಾರ್ಯಯೋಜನೆಯಿಂದ ನಡಿಸಲ್ಪಟ್ಟ ಅಧ್ಯಯನದಿಂದ ದೃಢೀಕರಿಸಲ್ಪಟ್ಟಿದೆ. “ಈ ಅಧ್ಯಯನದಲ್ಲಿ ಒಳಗೊಂಡಿದ್ದ ಅನೇಕರು, ಅಸಂತೋಷಕರವಾದ ವೈವಾಹಿಕ ಜೀವನವನ್ನು ನಡಿಸುತ್ತಿರುವ ಅಥವಾ ವಿವಾಹ ವಿಚ್ಛೇದ ಪಡೆದಂಥ ಹೆತ್ತವರಿರುವ ಮನೆಯಲ್ಲಿ ಬೆಳೆದಿದ್ದಾರೆ. ಆದುದರಿಂದಲೇ, ಅಸಂತೋಷಕರ ವೈವಾಹಿಕ ಜೀವನ ಎಂದರೇನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ, ಆದರೆ ಸಫಲ ವೈವಾಹಿಕ ಜೀವನವು ಹೇಗಿರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ಸಫಲ ವೈವಾಹಿಕ ಜೀವನ ಎಂದರೆ ‘ನನ್ನ ಹೆತ್ತವರ ವಿವಾಹಕ್ಕೆ ತದ್ವಿರುದ್ದವಾದದ್ದು’ ಎಂದು ಮಾತ್ರ ಕೆಲವರು ವಿವರಿಸಶಕ್ತರು” ಎಂಬುದಾಗಿ ಆ ಕಾರ್ಯಯೋಜನೆಯ ಡೈರೆಕ್ಟರ್‌ಗಳು ಬರೆಯುತ್ತಾರೆ.

ಕ್ರೈಸ್ತರು ವೈವಾಹಿಕ ಸಮಸ್ಯೆಗಳಿಂದ ಬಾಧಿಸಲ್ಪಡದೇ ಇದ್ದಾರೋ? ಇಲ್ಲ. ವಾಸ್ತವದಲ್ಲಿ, ಪ್ರಥಮ ಶತಮಾನದಲ್ಲಿದ್ದ ಕೆಲವು ಕ್ರೈಸ್ತರಿಗೆ, ಅವರು ತಮ್ಮ ವಿವಾಹದಿಂದ ‘ಬಿಡುಗಡೆಯಾಗುವದಕ್ಕೆ ಪ್ರಯತ್ನಿಸಬಾರದು’ ಎಂಬ ನೇರವಾದ ಸಲಹೆಯನ್ನು ಕೊಡಬೇಕಾಯಿತು. (1 ಕೊರಿಂಥ 7:27) ಇಬ್ಬರು ಅಪರಿಪೂರ್ಣ ವ್ಯಕ್ತಿಗಳ ಯಾವುದೇ ವಿವಾಹದಲ್ಲಿ ಸಮಸ್ಯೆಗಳು ಇದ್ದೇ ಇರುವವು, ಆದರೆ ನಮಗೆ ಸಹಾಯವಿದೆ. ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸುವ ಮೂಲಕ ಗಂಡಹೆಂಡತಿಯರು ತಮ್ಮ ಸಂಬಂಧವನ್ನು ಉತ್ತಮಗೊಳಿಸಸಾಧ್ಯವಿದೆ.

ಬೈಬಲ್‌ ಒಂದು ವಿವಾಹ ಕೈಪಿಡಿಯಲ್ಲವೆಂಬುದು ನಿಜ. ಆದರೆ ಅದು, ವಿವಾಹದ ಏರ್ಪಾಡನ್ನು ಆರಂಭಿಸಿದಾತನಿಂದ ಪ್ರೇರಿತವಾದ ಕಾರಣ, ಅದರಲ್ಲಿರುವ ಮೂಲತತ್ತ್ವಗಳು ವೈವಾಹಿಕ ಜೀವನಕ್ಕೆ ಸಹಾಯಕಾರಿಯಾಗಿರಬಲ್ಲವು ಎಂದು ನಾವು ನಿರೀಕ್ಷಿಸಸಾಧ್ಯವಿದೆ. ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವ ದೇವರು ತಿಳಿಸಿದ್ದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”​—ಯೆಶಾಯ 48:​17, 18.

ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಮುಂಚೆ ಇದ್ದ ಪ್ರೀತಿಯು ಈಗ ಕುಂದುತ್ತಾ ಇದೆಯೋ? ಪ್ರೀತಿಯೇ ಇಲ್ಲದಿರುವ ವಿವಾಹದಲ್ಲಿ ಸಿಕ್ಕಿಬಿದ್ದಿದ್ದೀರೆಂದು ನಿಮಗೆ ಅನಿಸುತ್ತದೆಯೋ? ವಿವಾಹವಾಗಿ 26 ವರುಷಗಳಾಗಿರುವ ಒಬ್ಬ ಪತ್ನಿಯು ತಿಳಿಸುವುದು: “ಈ ರೀತಿಯ ಸಂಬಂಧದಿಂದಾಗಿ ಅನುಭವಿಸಬೇಕಾಗುವ ನೋವನ್ನು ವರ್ಣಿಸುವುದು ತೀರಾ ಕಷ್ಟ. ಆ ನೋವು ಎಡೆಬಿಡದೆ ಯಾವಾಗಲೂ ಇರುತ್ತದೆ.” ಅತೃಪ್ತಿಕರವಾದ ವೈವಾಹಿಕ ಜೀವನವನ್ನು ಸುಮ್ಮನೆ ಸಹಿಸಿಕೊಂಡು ಹೋಗುವ ಬದಲಾಗಿ, ಅದನ್ನು ಸರಿಪಡಿಸಲು ಏಕೆ ಪ್ರಯತ್ನಿಸಬಾರದು? ಬೈಬಲಿನ ಮೂಲತತ್ತ್ವಗಳು ವೈವಾಹಿಕ ಜೀವನದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ, ಅಂದರೆ ಬದ್ಧತೆಯ ವಿಷಯದಲ್ಲಿ ಗಂಡಹೆಂಡತಿಯರಿಗೆ ಹೇಗೆ ಸಹಾಯವನ್ನು ನೀಡಶಕ್ತವಾಗಿವೆ ಎಂಬುದನ್ನು ಮುಂದಿನ ಲೇಖನವು ತೋರಿಸಿಕೊಡಲಿದೆ.