ವಾಗ್ದಾನಗಳು ಖಂಡಿತವಾಗಿಯೂ ನೆರವೇರುವಾಗ
ವಾಗ್ದಾನಗಳು ಖಂಡಿತವಾಗಿಯೂ ನೆರವೇರುವಾಗ
ಇತಿಹಾಸವು ಮುರಿಯಲ್ಪಟ್ಟಿರುವ ವಾಗ್ದಾನಗಳಿಂದ ತುಂಬಿದೆ. ಆಕ್ರಮಣ ಮಾಡದಿರುವೆವೆಂದು ವಿಧಿವತ್ತಾಗಿ ಸಹಿಮಾಡಿರುವಂಥ ಒಪ್ಪಂದಗಳನ್ನು ಪಾಲಿಸಲು ರಾಷ್ಟ್ರಗಳು ಅನೇಕಬಾರಿ ತಪ್ಪಿಹೋಗುತ್ತವೆ ಮತ್ತು ತಮ್ಮ ಜನರನ್ನು ಭಯಂಕರ ಯುದ್ಧಗಳಿಗೆ ನಡಿಸುತ್ತವೆ. ಒಮ್ಮೆ ನೆಪೋಲಿಯನ್ ಹೇಳಿದ್ದು: “ಕೇವಲ ಒತ್ತಾಯಿಸಲ್ಪಟ್ಟಾಗ ಅಥವಾ ಅದರಿಂದ ತಮಗೆ ಏನಾದರೂ ಪ್ರಯೋಜನವಿದ್ದಾಗ ಮಾತ್ರ ಸರಕಾರಗಳು ತಮ್ಮ ವಾಗ್ದಾನಗಳನ್ನು ಪಾಲಿಸುತ್ತವೆ.”
ವ್ಯಕ್ತಿಗಳು ಮಾಡುವಂಥ ವಾಗ್ದಾನಗಳ ಕುರಿತಾಗಿ ಏನು? ಒಬ್ಬ ವ್ಯಕ್ತಿಯು ತಾನು ಕೊಟ್ಟ ಮಾತನ್ನು ನೆರವೇರಿಸದೇ ಇರುವಾಗ ಅದೆಷ್ಟು ನಿರಾಶಾದಾಯಕವಾಗಿರುತ್ತದೆ! ಅದರಲ್ಲೂ, ನಿಮಗೆ ತಿಳಿದಿರುವ ಮತ್ತು ನೀವು ಭರವಸೆಯಿಡುವ ಯಾರಾದರೊಬ್ಬರು ಹೀಗೆ ಮಾಡುವುದಾದರೆ ಅದು ವಿಶೇಷವಾಗಿ ನಿಜವಾಗಿದೆ. ಜನರು ಒಂದುವೇಳೆ ತಮ್ಮ ವಾಗ್ದಾನಗಳನ್ನು ನೆರವೇರಿಸಲು ಅಶಕ್ತರಾಗಿರಬಹುದು ಅಥವಾ ಮನಸ್ಸಿಲ್ಲದವರಾಗಿರಬಹುದು.
ಮಾನವರ ವಾಗ್ದಾನಗಳ ಮತ್ತು ದೇವರ ವಾಗ್ದಾನಗಳ ಮಧ್ಯೆ ಎಂಥ ವ್ಯತ್ಯಾಸವಿದೆ! ದೇವರ ವಾಗ್ದಾನಗಳು ಸಂಪೂರ್ಣವಾಗಿ ವಿಶ್ವಾರ್ಸಾಹವೂ ಭರವಸಯೋಗ್ಯವೂ ಆಗಿವೆ. ಯೆಹೋವನಿಂದ ಮಾಡಲ್ಪಟ್ಟ ಯಾವುದೇ ವಾಗ್ದಾನವು ಒಂದು ಖಾತರಿಯಾಗಿದೆ. ಅದು ಖಂಡಿತವಾಗಿಯೂ ನೆರವೇರುತ್ತದೆ. ದೇವರ ಎಂದಿಗೂ ಸುಳ್ಳಾಗದ ಮಾತಿನ ಕುರಿತು ತಿಳಿಸುತ್ತಾ, ಯೆಶಾಯ 55:11 ಹೇಳುವುದು: “ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”
ಹಾಗಾದರೆ, ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ದೇವರ ವಾಗ್ದಾನಗಳನ್ನು ನಾವು ಹೇಗೆ ವೀಕ್ಷಿಸಬೇಕು? ನಾವು ಖಂಡಿತವಾಗಿಯೂ ಅವುಗಳ ಮೇಲೆ ಆತುಕೊಳ್ಳಬಲ್ಲೆವು. ಉದಾಹರಣೆಗೆ, ಅಪೊಸ್ತಲ ಯೋಹಾನನು ಬರೆದದ್ದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) ಇಂಥ ಆಶೀರ್ವಾದಗಳಲ್ಲಿ ನೀವು ಖಂಡಿತವಾಗಿಯೂ ಆನಂದಿಸಸಾಧ್ಯವಿದೆ. ಆದರೆ ಅದಕ್ಕಾಗಿ ನೀವು ಯೇಸುವಿನ ಈ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.