ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನೇಕ ಪ್ರಶ್ನೆಗಳು ಕೆಲವೇ ತೃಪ್ತಿದಾಯಕ ಉತ್ತರಗಳು

ಅನೇಕ ಪ್ರಶ್ನೆಗಳು ಕೆಲವೇ ತೃಪ್ತಿದಾಯಕ ಉತ್ತರಗಳು

ಅನೇಕ ಪ್ರಶ್ನೆಗಳು ಕೆಲವೇ ತೃಪ್ತಿದಾಯಕ ಉತ್ತರಗಳು

ಇಸವಿ 1755, ನವೆಂಬರ್‌ 1ರ ಸಂತರ ದಿನದಂದು ಬೆಳಿಗ್ಗೆ, ಲಿಸ್ಬನ್‌ ನಗರದ ನಿವಾಸಿಗಳಲ್ಲಿ ಹೆಚ್ಚಿನವರು ಚರ್ಚಿನಲ್ಲಿದ್ದಾಗ ಒಂದು ಭಯಾನಕ ಭೂಕಂಪವು ಆ ನಗರವನ್ನು ಅಪ್ಪಳಿಸಿತು. ಸಾವಿರಾರು ಕಟ್ಟಡಗಳು ಕುಸಿದು ಬಿದ್ದವು, ಮತ್ತು ಸಾವಿರಾರು ಜನರು ಮೃತಪಟ್ಟರು.

ಈ ದುರ್ಘಟನೆ ಸಂಭವಿಸಿ ಸ್ವಲ್ಪ ದಿನಗಳ ನಂತರ, ವೋಲ್ಟೈರ್‌ ಎಂಬ ಫ್ರೆಂಚ್‌ ಬರಹಗಾರನು ಪೋಎಮ್‌ ಸೂಇರ್‌ ಲಿ ಡೇಜ್‌ಆಸ್‌ಟ್ರೆ ಡಿ ಲೀಸ್ಬೋನ್‌ (ಲಿಸ್ಬನ್‌ ದುರಂತದ ಕುರಿತ ಕವಿತೆ) ಎಂಬ ತನ್ನ ಕಾವ್ಯ ಕೃತಿಯನ್ನು ಪ್ರಕಾಶಿಸಿದನು. ಅವನು ಈ ಕೃತಿಯಲ್ಲಿ, ಸಂಭವಿಸಿದ ದುರಂತವು ಮಾನವರ ಪಾಪಗಳಿಗಾಗಿ ದೈವಿಕ ಪ್ರತೀಕಾರವಾಗಿದೆ ಎಂಬ ವಾದವು ತಪ್ಪೆಂದು ಎತ್ತಿತೋರಿಸಿದನು. ಅಂಥ ವಿಪತ್ಕಾರಕ ಘಟನೆಗಳು ಮಾನವ ಗ್ರಹಿಕೆಯನ್ನು ಮೀರಿದಂಥವುಗಳು ಅಥವಾ ವಿವರಿಸಲಾಗದಂಥವುಗಳಾಗಿವೆ ಎಂದು ವಾದಿಸುತ್ತಾ, ವೋಲ್ಟೈರ್‌ ಬರೆದದ್ದು:

ಪ್ರಕೃತಿಯು ಮಾತನಾಡಲು ಅಶಕ್ಯ, ಆದುದರಿಂದ ಅದನ್ನು ಪ್ರಶ್ನಿಸುವುದು ವ್ಯರ್ಥ;

ಮಾನವಕುಲದೊಂದಿಗೆ ಮಾತನಾಡುವ ಒಬ್ಬ ದೇವರು ನಮಗೆ ಅಗತ್ಯ.

ದೇವರ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದವರಲ್ಲಿ ವೋಲ್ಟೈರ್‌ ಮೊದಲಿಗನಲ್ಲ ಎಂಬುದು ನಿಜ. ಮಾನವ ಇತಿಹಾಸದಾದ್ಯಂತ, ದುರಂತಗಳು ಮತ್ತು ವಿಪತ್ತುಗಳು ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಎಬ್ಬಿಸಿವೆ. ಸಾವಿರಾರು ವರುಷಗಳ ಹಿಂದೆ, ಆಗ ತಾನೇ ತನ್ನ ಎಲ್ಲಾ ಮಕ್ಕಳನ್ನು ಕಳೆದುಕೊಂಡು, ಭಯಂಕರ ರೋಗದಿಂದ ನರಳುತ್ತಿದ್ದ ಪೂರ್ವಜನಾದ ಯೋಬನು ಪ್ರಶ್ನಿಸಿದ್ದು: “ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು? ಮನನೊಂದಿರುವವನಿಗೆ [ದೇವರು] ಜೀವವನ್ನು ಕೊಡುವುದೇಕೆ?” (ಯೋಬ 3:​20, ಪರಿಶುದ್ಧ ಬೈಬಲ್‌ *) ಇಂದು ಸಹ ಅನೇಕರು, ಇಷ್ಟೊಂದು ಕಷ್ಟಾನುಭವ ಮತ್ತು ಅನ್ಯಾಯದ ಮಧ್ಯದಲ್ಲಿ ಒಬ್ಬ ಒಳ್ಳೆಯ ಹಾಗೂ ಪ್ರೀತಿಪರ ದೇವರು ಹೇಗೆ ಅನಾಸಕ್ತನಂತೆ ಉಳಿಯಸಾಧ್ಯವಿದೆ ಎಂದು ಯೋಚನೆಗೀಡಾಗುತ್ತಾರೆ.

ಬರಗಾಲ, ಯುದ್ಧ, ಅನಾರೋಗ್ಯ, ಮತ್ತು ಮರಣ ಮುಂತಾದ ನಿಜತ್ವಗಳನ್ನು ಎದುರಿಸುವಾಗ, ಮಾನವಕುಲದ ಕುರಿತು ಚಿಂತಿಸುವ ಸೃಷ್ಟಿಕರ್ತನೊಬ್ಬನು ಇದ್ದಾನೆಂಬ ವಿಚಾರವನ್ನು ಅನೇಕರು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. ಒಬ್ಬ ನಾಸ್ತಿಕತೆಯ ತತ್ತ್ವಜ್ಞಾನಿಯು ತಿಳಿಸಿದ್ದು: “ಒಂದು ಮಗು ಕಷ್ಟಾನುಭವಿಸುವಂತೆ ಅನುಮತಿಸುತ್ತಿರುವುದಕ್ಕಾಗಿ ದೇವರನ್ನು ಯಾರೂ ಎಂದಿಗೂ ಕ್ಷಮಿಸಸಾಧ್ಯವಿಲ್ಲ . . . ಒಂದುವೇಳೆ ಆತನು ಅಸ್ತಿತ್ವದಲ್ಲಿಯೇ ಇಲ್ಲವಾದರೆ ಆಗ ಸರಿ.” ಎರಡನೇ ಲೋಕ ಯುದ್ಧದ ಸಮಯದಲ್ಲಿ ನಡೆದ ಸಾಮೂಹಿಕ ಕಗ್ಗೊಲೆಯಂಥ ದೊಡ್ಡ ದೊಡ್ಡ ದುರಂತ ಘಟನೆಗಳು, ಜನರನ್ನು ಇದೇ ರೀತಿಯ ನಿರ್ಣಯಕ್ಕೆ ಬರುವಂತೆ ಮಾಡಿವೆ. ಒಂದು ವಾರ್ತಾಪತ್ರಿಕೆಯಲ್ಲಿ ಬಂದಿರುವ ಯೆಹೂದಿ ಬರಹಗಾರನೊಬ್ಬನ ಈ ಹೇಳಿಕೆಯನ್ನು ಗಮನಿಸಿ: “ಜಾಷ್ವಿಟ್ಸ್‌ ಶಿಬಿರಗಳಲ್ಲಿ ನಡೆದಂಥ ನರಳಾಟಗಳಿಗೆ ಸರಳವಾದ ವಿವರಣೆ ಏನಂದರೆ, ಮಾನವ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ದೇವರೇ ಅಸ್ತಿತ್ವದಲ್ಲಿಲ್ಲ ಎಂಬುದೇ.” ಕ್ಯಾಥೊಲಿಕ್‌ ಧರ್ಮವು ಪ್ರಬಲವಾಗಿರುವ ಫ್ರಾನ್ಸ್‌ ದೇಶದಲ್ಲಿ ನಡೆಸಲಾದ 1997ರ ಸಮೀಕ್ಷೆಗನುಸಾರ, 1994ರಲ್ಲಿ ರುಆಂಡದಲ್ಲಿ ಸಂಭವಿಸಿದಂತಹ ಜಾತಿಸಂಹಾರಗಳ ಕಾರಣ ಸುಮಾರು 40 ಪ್ರತಿಶತದಷ್ಟು ಜನರು ದೇವರ ಅಸ್ತಿತ್ವದ ಕುರಿತು ಶಂಕಿಸುತ್ತಾರೆ.

ನಂಬಿಕೆಗೆ ಒಂದು ಅಡಚಣೆ?

ಕೆಟ್ಟ ಸಂಗತಿಗಳು ಸಂಭವಿಸದಂತೆ ತಡೆಗಟ್ಟಲು ದೇವರು ಏಕೆ ಮಧ್ಯಪ್ರವೇಶಿಸುವುದಿಲ್ಲ? ಈ ಪ್ರಶ್ನೆಯು ಅನೇಕರ “ನಂಬಿಕೆಗೆ ಒಂದು ಗಂಭೀರವಾದ ಅಡಚಣೆಯಾಗಿದೆ” ಎಂದು ಒಬ್ಬ ಕ್ಯಾಥೊಲಿಕ್‌ ಚರಿತ್ರೆ ಲೇಖಕನು ವಾದಿಸುತ್ತಾನೆ. ಅವನು ಕೇಳಿದ್ದು: “ಕೋಟಿಗಟ್ಟಲೆ ಮುಗ್ಧ ಜನರು ಸಾಯುತ್ತಿರುವಾಗ ಮತ್ತು ಕೋಮುಗಲಭೆಯ ಕಾರಣ ಲೋಕದಲ್ಲಿ ಸಾಮೂಹಿಕ ಹತ್ಯೆಗಳಾಗುತ್ತಿರುವಾಗ, ಅದನ್ನು ತಡೆಗಟ್ಟಲು ಏನನ್ನೂ ಮಾಡದೆ, ಸುಮ್ಮನೆ ಕೈಕಟ್ಟಿ ಕುಳಿತು ದೂರದಿಂದ ವೀಕ್ಷಿಸುತ್ತಿರುವ ಒಬ್ಬ ದೇವರಲ್ಲಿ ನಂಬಿಕೆಯಿಡಲು ಸಾಧ್ಯವೇ?”

ಕ್ಯಾಥೊಲಿಕ್‌ ವಾರ್ತಾಪತ್ರಿಕೆಯಾದ ಲಾ ಕ್ರಾದಲ್ಲಿನ ಸಂಪಾದಕೀಯ ಲೇಖನವು ಇದೇ ರೀತಿಯ ಹೇಳಿಕೆಯನ್ನು ಮಾಡಿತು. ಅದು ಹೇಳಿದ್ದು: “ಐತಿಹಾಸಿಕ ದುರ್ಘಟನೆಯಾಗಿರಲಿ, ತಾಂತ್ರಿಕ ಪ್ರಗತಿಗಳಿಂದಾಗಿ ನಿಜ ಜೀವನದಲ್ಲಿ ಸಂಭವಿಸುವ ಅನಾಹುತವಾಗಿರಲಿ, ನೈಸರ್ಗಿಕ ವಿಪತ್ತುಗಳಾಗಿರಲಿ, ವ್ಯವಸ್ಥಾಪಿತ ಪಾತಕಗಳಾಗಿರಲಿ, ಅಥವಾ ಒಬ್ಬ ಪ್ರಿಯ ವ್ಯಕ್ತಿಯ ಮರಣವಾಗಿರಲಿ, ಪ್ರತಿಯೊಂದು ದುರ್ಘಟನೆಯ ಸಮಯದಲ್ಲೂ ಭಯಭೀತರಾದ ಜನರು ದೇವರ ಕಡೆಗೆ ನೋಡುತ್ತಾರೆ. ದೇವರು ಎಲ್ಲಿದ್ದಾನೆ? ಅವರು ಈ ಪ್ರಶ್ನೆಗೆ ಉತ್ತರವನ್ನು ಬಯಸುತ್ತಾರೆ. ಆದರೆ ಆತನು ಮಹಾ ಭಾವಶೂನ್ಯನೂ ಮಹಾ ನಿರಾಸಕ್ತನೂ ಆಗಿದ್ದಾನಲ್ಲವೇ?”

ಪೋಪ್‌ ಜಾನ್‌ ಪಾಲ್‌ II, 1984ರ ಸಾಲ್ವಿಫೀಕೀ ಡೋಲೋರೀಸ್‌ ಎಂಬ ತಮ್ಮ ಅಪೊಸ್ತಲಿಕ ಪತ್ರದಲ್ಲಿ ಈ ವಿವಾದಾಂಶವನ್ನು ಪರಿಗಣಿಸಿದರು. ಅವರು ಬರೆದದ್ದು: “ಲೋಕದ ಅಸ್ತಿತ್ವವು ತಾನೇ ದೇವರ ಅಸ್ತಿತ್ವವನ್ನು, ಆತನ ವಿವೇಕ, ಶಕ್ತಿ, ಮತ್ತು ಮಹೋನ್ನತೆಯನ್ನು ಗ್ರಹಿಸುವಂತೆ ಮಾನವರ ಮನಸ್ಸಿನ ಕಣ್ಣುಗಳನ್ನು ತೆರೆಯುತ್ತದಾದರೂ, ದುಷ್ಟತನ ಮತ್ತು ಕಷ್ಟಾನುಭವ ಅವುಗಳನ್ನು ಮುಚ್ಚಿಬಿಡುತ್ತದೆ. ಅದರಲ್ಲಿಯೂ ಮುಖ್ಯವಾಗಿ, ಪ್ರತಿದಿನ ಅನೇಕ ಅನ್ಯಾಯವಾದ ಕಷ್ಟಾನುಭವಗಳು ಮತ್ತು ಸೂಕ್ತವಾದ ಶಿಕ್ಷೆಗೆ ಗುರಿಯಾಗದೆ ಅನೇಕ ತಪ್ಪು ಕೃತ್ಯಗಳು ಸಂಭವಿಸುತ್ತಿರುವಾಗ, ಇದು ಇನ್ನಷ್ಟೂ ಸತ್ಯವಾಗಿರುತ್ತದೆ.”

ಪ್ರೀತಿಸ್ವರೂಪನೂ ಸರ್ವಶಕ್ತನೂ ಆಗಿರುವ ದೇವರ ಅಸ್ತಿತ್ವದ ಕುರಿತಾದ ಬೈಬಲಿನ ವಿವರಣೆಯು, ಈಗ ಭೂಮಿಯಲ್ಲಿ ತುಂಬಿಕೊಂಡಿರುವ ಮಾನವ ಕಷ್ಟಾನುಭವಗಳೊಂದಿಗೆ ಹೊಂದಿಕೆಯಲ್ಲಿದೆಯೋ? ವೈಯಕ್ತಿಕ ಅಥವಾ ಸಾಮೂಹಿಕ ದುರ್ಘಟನೆಗಳನ್ನು ತಡೆಗಟ್ಟಲು ಆತನು ಮಧ್ಯಪ್ರವೇಶಿಸುತ್ತಾನೋ? ಆತನು ಇಂದು ನಮ್ಮ ಪ್ರಯೋಜನಾರ್ಥಕವಾಗಿ ಏನನ್ನಾದರೂ ಮಾಡುತ್ತಾನೋ? ವೋಲ್ಟೈರ್‌ ಮಾತುಗಳಲ್ಲಿ ಹೇಳಲ್ಟಟ್ಟಂತೆ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು, “ಮಾನವಕುಲದೊಂದಿಗೆ ಮಾತನಾಡುವ ಒಬ್ಬ ದೇವರು” ಇದ್ದಾನೋ? ಉತ್ತರಕ್ಕಾಗಿ ಮುಂದಿನ ಲೇಖನವನ್ನು ಓದಿರಿ.

[ಪಾದಟಿಪ್ಪಣಿಗಳು]

^ ಪ್ಯಾರ. 6 Taken from the HOLY BIBLE: Kannada EASY-TO-READ VERSION ©1997 by World Bible Translation Center. Inc. and used by permission.

[ಪುಟ 3ರಲ್ಲಿರುವ ಚಿತ್ರಗಳು]

ಇಸವಿ 1755ರಲ್ಲಿ ಸಂಭವಿಸಿದ ಲಿಸ್ಬನ್‌ ನಗರದ ನಾಶನವು, ಇಂಥ ಘಟನೆಗಳು ಮಾನವ ಗ್ರಹಿಕೆಯನ್ನು ಮೀರಿದಂಥವುಗಳಾಗಿವೆ ಎಂದು ವಾದಿಸುವಂತೆ ವೋಲ್ಟೈರ್‌ನನ್ನು ಪ್ರಚೋದಿಸಿತು

[ಕೃಪೆ]

ವೋಲ್ಟೈರ್‌: From the book Great Men and Famous Women; ಲಿಸ್ಬನ್‌: J.P. Le Bas, Praça da Patriarcal depois do terramoto de 1755. Foto: Museu da Cidade/Lisboa

[ಪುಟ 4ರಲ್ಲಿರುವ ಚಿತ್ರ]

ರುಆಂಡದಲ್ಲಿ ಸಂಭವಿಸಿದಂತಹ ಜಾತಿಸಂಹಾರಗಳ ವಿಪತ್ಕಾರಕ ಪರಿಣಾಮದಿಂದಾಗಿ ಅನೇಕ ಜನರು ದೇವರ ಅಸ್ತಿತ್ವದ ಕುರಿತು ಶಂಕಿಸುತ್ತಾರೆ

[ಕೃಪೆ]

AFP PHOTO