ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇದೊಂದು ಜ್ಞಾನೋದಯ!”

“ಇದೊಂದು ಜ್ಞಾನೋದಯ!”

ರಾಜ್ಯ ಘೋಷಕರು ವರದಿ ಮಾಡುತ್ತಾರೆ

“ಇದೊಂದು ಜ್ಞಾನೋದಯ!”

ಪೋಲೆಂಡ್‌ನಲ್ಲಿರುವ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಿಯಾದ ಡೋರೋಟ ಎಂಬಾಕೆ, ತನ್ನ 14 ವರುಷ ಪ್ರಾಯದ ಮಗನನ್ನು ನಿಯತಕ್ರಮದ ವೈದ್ಯಕೀಯ ತಪಾಸಣೆಗಾಗಿ ಶಾಲೆಯ ಚಿಕಿತ್ಸಾಲಯಕ್ಕೆ ಕರೆದುಕೊಂಡುಹೋದಳು. ತಪಾಸಣೆಯ ಸಮಯದಲ್ಲಿ, ಅವಳ ಮಗ ಮನೆಯಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡುತ್ತಾನೆಂದು ಯನೀನ * ಎಂಬ ಡಾಕ್ಟರ್‌ ಡೋರೋಟಳನ್ನು ಕೇಳಿದಳು.

“ಊಟವನ್ನು ತಯಾರಿಸಲು ನನ್ನಿಂದ ಸಾಧ್ಯವಾಗದಾಗ, ಅವನು ನಮ್ಮ ಕುಟುಂಬದಲ್ಲಿರುವ ಎಲ್ಲಾ ಆರು ಮಂದಿಗಾಗಿ ಊಟವನ್ನು ತಯಾರಿಸುತ್ತಾನೆ. ಅಷ್ಟುಮಾತ್ರವಲ್ಲದೆ, ಮನೆಯನ್ನು ಶುಚಿಮಾಡುತ್ತಾನೆ ಮತ್ತು ಮನೆಯಲ್ಲಿರುವ ಯಾವುದಾದರು ವಸ್ತುವನ್ನು ರಿಪೇರಿ ಮಾಡಬೇಕಾದರೆ ಅದನ್ನೂ ಮಾಡುತ್ತಾನೆ. ಅವನಿಗೆ ಓದುವುದೆಂದರೆ ಬಹಳ ಇಷ್ಟ. ಅವನೊಬ್ಬ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದಾನೆ” ಎಂಬುದಾಗಿ ಡೋರೋಟ ಉತ್ತರಿಸಿದಳು.

“ನಂಬಲಸಾಧ್ಯವಾದ ಸಂಗತಿ. ನಾನು 12 ವರುಷಗಳಿಂದ ಇಲ್ಲಿ ಕೆಲಸಮಾಡುತ್ತಿದ್ದೇನೆ, ಆದರೆ ಇಂಥ ಒಂದು ಸಂಗತಿಯನ್ನು ಇದುವರೆಗೆ ನಾನು ಕೇಳಲಿಲ್ಲ” ಎಂದು ಯನೀನ ಹೇಳಿದಳು.

ಸಾಕ್ಷಿನೀಡಲು ಇದೊಂದು ಉತ್ತಮ ಅವಕಾಶವೆಂದು ಗ್ರಹಿಸಿಕೊಂಡವಳಾಗಿ ಡೋರೋಟ ಹೀಗೆಂದಳು: “ಇಂದು ಹೆಚ್ಚಿನ ಹೆತ್ತವರು ತಮ್ಮ ಮಕ್ಕಳಿಗೆ ಸರಿಯಾದ ತರಬೇತಿಯನ್ನು ನೀಡಲು ತಪ್ಪಿಹೋಗುತ್ತಾರೆ. ಅದರಿಂದಲೇ ಅವರ ಮಕ್ಕಳಲ್ಲಿ ಅನೇಕವೇಳೆ ಸ್ವಗೌರವದ ಕೊರತೆಯಿರುತ್ತದೆ.”

“ಹೆಚ್ಚಿನ ಹೆತ್ತವರಿಗೆ ಈ ವಿಷಯ ತಿಳಿದಿರುವುದೇ ಇಲ್ಲ. ಆದರೆ ಇದೆಲ್ಲಾ ನಿಮಗೆ ಹೇಗೆ ಗೊತ್ತು?” ಎಂಬುದಾಗಿ ಯನೀನ ಕೇಳಿದಳು.

“ಬೈಬಲ್‌ ಇಂಥ ಮಾಹಿತಿಯ ಅತ್ಯಮೂಲ್ಯವಾದ ಮೂಲವಾಗಿದೆ” ಎಂಬುದಾಗಿ ಡೋರೋಟ ಉತ್ತರಿಸಿದಳು. ಅವಳು ಮುಂದುವರಿಸಿದ್ದು: “ಉದಾಹರಣೆಗೆ, ಧರ್ಮೋಪದೇಶಕಾಂಡ 6:​6-9ಕ್ಕನುಸಾರ, ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಸ್ವತಃ ನಮಗೆ ಶಿಕ್ಷಣವನ್ನು ನೀಡಿಕೊಳ್ಳುವುದರೊಂದಿಗೆ ಆರಂಭವಾಗುತ್ತದೆ. ನಮ್ಮ ಮಕ್ಕಳ ಹೃದಯದಲ್ಲಿ ನಾವು ಬೇರೂರಿಸಬಯಸುವ ಮೌಲ್ಯಗಳನ್ನು ಮೊದಲು ನಾವು ನಮ್ಮ ಹೃದಮನಗಳಲ್ಲಿ ಬೇರೂರಿಸಿಕೊಳ್ಳಬೇಕಲ್ಲವೇ?”

“ಇದು ನಂಬಲಸಾಧ್ಯ, ನಿಜವಾಗಿಯೂ ನಂಬಲಸಾಧ್ಯವಾದ ಸಂಗತಿ!” ಎಂಬುದಾಗಿ ಯನೀನ ಹೇಳಿದಳು. ನಂತರ ಅವಳು, ಡೋರೋಟಳಿಗೆ ತನ್ನ ಮಕ್ಕಳನ್ನು ಬೆಳೆಸಲು ಮತ್ತು ಅವರಿಗೆ ಶಿಕ್ಷಣವನ್ನು ನೀಡಲು ಬೈಬಲ್‌ ಹೇಗೆ ಸಹಾಯಮಾಡಿತೆಂದು ಕೇಳಿದಳು.

“ನಾವು ನಮ್ಮ ಮಕ್ಕಳೊಂದಿಗೆ ಪ್ರತಿವಾರ ಬೈಬಲನ್ನು ಅಧ್ಯಯನ ಮಾಡುತ್ತೇವೆ. ಅದಕ್ಕಾಗಿ ನಾವು ಯುವ ಜನರ ಪ್ರಶ್ನೆಗಳು​—ಕಾರ್ಯಸಾಧಕ ಉತ್ತರಗಳು * ಎಂಬ ಪುಸ್ತಕವನ್ನು ಉಪಯೋಗಿಸುತ್ತೇವೆ” ಎಂದು ಡೊರೋಟ ವಿವರಿಸಿದಳು. ನಂತರ ಅವಳು ಆ ಪುಸ್ತಕವನ್ನು ವರ್ಣಿಸುತ್ತಾ ಅದರಲ್ಲಿ ಒಳಗೊಂಡಿರುವ ಕೆಲವು ವಿಷಯಗಳನ್ನು ತಿಳಿಸಿದಳು.

“ಇದೊಂದು ಜ್ಞಾನೋದಯ!” ಎಂದು ಯನೀನ ಉದ್ಘರಿಸಿದಳು. “ನಾನು ಆ ಪುಸ್ತಕವನ್ನು ನೋಡಬಹುದೋ?”

ಒಂದು ತಾಸಿನ ನಂತರ ಡೋರೋಟ ಆ ಪುಸ್ತಕದೊಂದಿಗೆ ಹಿಂದಿರುಗಿ ಬಂದಳು.

ಯನೀನ ಆ ಪುಸ್ತಕವನ್ನು ಪರೀಕ್ಷಿಸುತ್ತಾ, “ನೀವು ಯಾವ ಧರ್ಮಕ್ಕೆ ಸೇರಿದವರು?” ಎಂದು ಕೇಳಿದಳು.

“ನಾನು ಒಬ್ಬಾಕೆ ಯೆಹೋವನ ಸಾಕ್ಷಿ.”

“ಯೆಹೋವನ ಸಾಕ್ಷಿಗಳು ಇನ್ನೊಂದು ಧರ್ಮಕ್ಕೆ ಸೇರಿರದವರನ್ನು ಹೇಗೆ ಉಪಚರಿಸುತ್ತಾರೆ?”

“ನಾನು ನಿಮ್ಮನ್ನು ಹೇಗೆ ಉಪಚರಿಸಿದೆನೋ ಹಾಗೆಯೇ ಗೌರವದಿಂದ ಉಪಚರಿಸುತ್ತಾರೆ” ಎಂದು ಡೋರೋಟ ಉತ್ತರಿಸಿದಳು ಮತ್ತು ಅವಳು ಇನ್ನೂ ಕೂಡಿಸಿ ಹೇಳಿದ್ದು: “ಮತ್ತು ಅವರು ಸಹ ಬೈಬಲಿನ ಸತ್ಯವನ್ನು ತಿಳಿಯಬೇಕೆಂದು ನಾವು ಬಯಸುತ್ತೇವೆ.”

“ನಿಮ್ಮೊಂದಿಗೆ ಮಾತಾಡಿ ನನಗೆ ಈಗಾಗಲೇ ಬಹಳ ಹಾಯೆನಿಸುತ್ತಿದೆ,” ಎಂದು ಯನೀನ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದಳು.

ಡೋರೋಟ ತನ್ನ ಭೇಟಿಯ ಕೊನೆಯಲ್ಲಿ ಬೈಬಲನ್ನು ಓದುವಂತೆ ಯನೀನಳನ್ನು ಪ್ರಚೋದಿಸಿದಳು. “ಅದು ನಿಮ್ಮ ಜೀವನಕ್ಕೆ ಅರ್ಥವನ್ನು ನೀಡುತ್ತದೆ ಮತ್ತು ನಿಮ್ಮ ಕೆಲಸದಲ್ಲಿಯೂ ನೆರವುನೀಡುತ್ತದೆ.”

“ಬೈಬಲನ್ನು ಓದುವಂತೆ ನೀವು ನಿಜವಾಗಿಯೂ ನನಗೆ ಸ್ಫೂರ್ತಿನೀಡಿದ್ದೀರಿ,” ಎಂದು ಯನೀನ ಒಪ್ಪಿಕೊಂಡಳು.

ಡೋರೋಟಳು ಜಾಣ್ಮೆ ಮತ್ತು ದೃಢಸಂಕಲ್ಪದೊಂದಿಗೆ, ನಿಯತಕ್ರಮದ ವೈದ್ಯಕೀಯ ತಪಾಸಣೆಗಾಗಿ ಡಾಕ್ಟರಳ ಆಫೀಸಿಗೆ ಮಾಡಿದ ಭೇಟಿಯನ್ನು ಸಾಕ್ಷಿನೀಡಲು ಒಂದು ಉತ್ತಮ ಸಂದರ್ಭವನ್ನಾಗಿ ಪರಿವರ್ತಿಸಿದಳು.​—1 ಪೇತ್ರ 3:15.

[ಪಾದಟಿಪ್ಪಣಿಗಳು]

^ ಪ್ಯಾರ. 3 ಹೆಸರು ಬದಲಾಯಿಸಲ್ಪಟ್ಟಿದೆ.

^ ಪ್ಯಾರ. 10 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.