ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಹಸ್ತಕ್ಷೇಪ ನಾವು ಏನನ್ನು ನಿರೀಕ್ಷಿಸಸಾಧ್ಯವಿದೆ?

ದೈವಿಕ ಹಸ್ತಕ್ಷೇಪ ನಾವು ಏನನ್ನು ನಿರೀಕ್ಷಿಸಸಾಧ್ಯವಿದೆ?

ದೈವಿಕ ಹಸ್ತಕ್ಷೇಪ ನಾವು ಏನನ್ನು ನಿರೀಕ್ಷಿಸಸಾಧ್ಯವಿದೆ?

ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, 39 ವರುಷ ಪ್ರಾಯದವನಾದ ಯೆಹೂದದ ರಾಜ ಹಿಜ್ಕೀಯನಿಗೆ ತಾನು ಮರಣಕರ ರೋಗಕ್ಕೆ ತುತ್ತಾಗಿದ್ದೇನೆಂದು ತಿಳಿದುಬಂತು. ಈ ಸುದ್ದಿಯಿಂದ ಜರ್ಜರಿತನಾದ ಹಿಜ್ಕೀಯನು, ತನ್ನನ್ನು ಗುಣಪಡಿಸಬೇಕೆಂದು ದೇವರಲ್ಲಿ ಮೊರೆಯಿಟ್ಟನು. ದೇವರು ತನ್ನ ಪ್ರವಾದಿಯ ಮೂಲಕ ಹೀಗೆ ಪ್ರತಿಕ್ರಿಯಿಸಿದನು: “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ನಿನ್ನ ಆಯುಷ್ಯಕ್ಕೆ ಹದಿನೈದು ವರುಷಗಳನ್ನು ಕೂಡಿಸುತ್ತೇನೆ.”​—ಯೆಶಾಯ 38:​1-5.

ದೇವರು ಆ ನಿರ್ದಿಷ್ಟ ಸಂದರ್ಭದಲ್ಲಿ ಹಸ್ತಕ್ಷೇಪ ಮಾಡಿದ್ದೇಕೆ? ಏಕೆಂದರೆ ಶತಮಾನಗಳ ಹಿಂದೆ, ನೀತಿವಂತನಾದ ರಾಜ ದಾವೀದನಿಗೆ ದೇವರು ಹೀಗೆ ವಾಗ್ದಾನಮಾಡಿದ್ದನು: “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು.” ಅಷ್ಟುಮಾತ್ರವಲ್ಲದೆ, ದಾವೀದನ ವಂಶದಲ್ಲಿ ಮೆಸ್ಸೀಯನು ಹುಟ್ಟುತ್ತಾನೆಂದೂ ದೇವರು ಪ್ರಕಟಿಸಿದ್ದನು. (2 ಸಮುವೇಲ 7:16; ಕೀರ್ತನೆ 89:20, 26-29; ಯೆಶಾಯ 11:1) ಹಿಜ್ಕೀಯನು ಅಸ್ವಸ್ಥನಾದ ಸಮಯದಲ್ಲಿ, ಅವನಿಗೆ ಇನ್ನೂ ಒಬ್ಬ ಮಗನು ಹುಟ್ಟಿರಲಿಲ್ಲ. ಆದುದರಿಂದ, ದಾವೀದನ ರಾಜವಂಶವು ಕೊನೆಗೊಳ್ಳುವ ಗಂಡಾಂತರದಲ್ಲಿತ್ತು. ಹಿಜ್ಕೀಯನ ವಿಷಯದಲ್ಲಿ ದೈವಿಕ ಹಸ್ತಕ್ಷೇಪವು, ಮೆಸ್ಸೀಯನಿಗೆ ನಡೆಸುವ ವಂಶಾವಳಿಯನ್ನು ಉಳಿಸಿಕೊಳ್ಳುವ ನಿರ್ದಿಷ್ಟ ಉದ್ದೇಶವನ್ನು ಪೂರೈಸಿತು.

ಕ್ರಿಸ್ತಪೂರ್ವ ಸಮಯಗಳಲ್ಲಿ ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಲು, ತನ್ನ ಜನರ ಪರವಾಗಿ ಅನೇಕ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡುವಂತೆ ಪ್ರೇರೇಪಿಸಲ್ಪಟ್ಟನು. ಐಗುಪ್ತದಲ್ಲಿ ದಾಸರಾಗಿದ್ದ ಇಸ್ರಾಯೇಲ್ಯರ ಬಿಡುಗಡೆಯ ವಿಷಯದಲ್ಲಿ ಮೋಶೆಯು ಘೋಷಿಸಿದ್ದು: “ಯೆಹೋವನು ನಿಮ್ಮನ್ನು ಪ್ರೀತಿಸಿ ತಾನು ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು.”​—ಧರ್ಮೋಪದೇಶಕಾಂಡ 7:8.

ಅದೇ ರೀತಿಯಲ್ಲಿ, ಪ್ರಥಮ ಶತಮಾನದಲ್ಲಿ ದೇವರ ಉದ್ದೇಶವನ್ನು ಮುಂದುವರಿಸುವುದರಲ್ಲಿ ದೈವಿಕ ಹಸ್ತಕ್ಷೇಪವು ಸಹಾಯಮಾಡಿತು. ಉದಾಹರಣೆಗೆ, ದಮಸ್ಕಕ್ಕೆ ಹೋಗುವ ದಾರಿಯಲ್ಲಿ, ಸೌಲನೆಂಬ ಒಬ್ಬ ಯೆಹೂದ್ಯನು ಯೇಸುವಿನ ಅದ್ಭುತಕರ ದರ್ಶನವನ್ನು ನೋಡಿದನು. ಇದರ ಉದ್ದೇಶವು, ಕ್ರಿಸ್ತನ ಶಿಷ್ಯರನ್ನು ಹಿಂಸಿಸುತ್ತಿದ್ದ ಅವನನ್ನು ತಡೆಗಟ್ಟುವುದೇ ಆಗಿತ್ತು. ಮುಂದಕ್ಕೆ ಅಪೊಸ್ತಲ ಪೌಲನಾದ ಈ ವ್ಯಕ್ತಿಯ ಮತಾಂತರವು, ಅನ್ಯಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡುವುದರಲ್ಲಿ ಒಂದು ಪ್ರಾಮುಖ್ಯ ಪಾತ್ರವಹಿಸಿತು.​—ಅ. ಕೃತ್ಯಗಳು 9:1-16; ರೋಮಾಪುರ 11:13.

ಹಸ್ತಕ್ಷೇಪವು ಸರ್ವಸಾಮಾನ್ಯ ವಿಷಯವಾಗಿತ್ತೋ?

ದೈವಿಕ ಹಸ್ತಕ್ಷೇಪವು, ಪ್ರತಿಯೊಂದು ಸಂದರ್ಭದಲ್ಲೂ ಆಗುತ್ತಿದ್ದ ಸಂಗತಿಯಾಗಿತ್ತೊ, ಅಥವಾ ಒಂದು ವಿನಾಯಿತಿಯಾಗಿರುತ್ತಿತ್ತೋ? ಅದು ಖಂಡಿತವಾಗಿಯೂ ಪ್ರತಿಯೊಂದು ಸಂದರ್ಭದಲ್ಲೂ ಆಗುತ್ತಿದ್ದ ವಿಷಯವಾಗಿರಲಿಲ್ಲವೆಂದು ಶಾಸ್ತ್ರವಚನಗಳು ಸ್ಪಷ್ಟವಾಗಿ ತೋರಿಸುತ್ತವೆ. ಮೂವರು ಇಬ್ರಿಯ ಯುವಕರನ್ನು ಧಗಧಗನೆ ಉರಿಯುವ ಆವಿಗೆಯ ಮಧ್ಯದಿಂದ ಮತ್ತು ಪ್ರವಾದಿಯಾದ ದಾನಿಯೇಲನನ್ನು ಸಿಂಹದ ಗವಿಯಿಂದ ದೇವರು ಪಾರುಗೊಳಿಸಿದನಾದರೂ, ಇತರ ಪ್ರವಾದಿಗಳನ್ನು ಮರಣದಿಂದ ತಪ್ಪಿಸಲು ಆತನು ಕ್ರಿಯೆಗೈಯಲಿಲ್ಲ. (2 ಪೂರ್ವಕಾಲವೃತ್ತಾಂತ 24:​20, 21; ದಾನಿಯೇಲ 3:​21-27; 6:​16-22; ಇಬ್ರಿಯ 11:37) ಪೇತ್ರನು, Iನೆಯ ಹೆರೋದ ಅಗ್ರಿಪ್ಪನಿಂದ ಎಲ್ಲಿ ಬಂಧನದಲ್ಲಿರಿಸಲ್ಪಟ್ಟಿದ್ದನೋ ಆ ಸೆರೆಮನೆಯಿಂದ ಅದ್ಭುತಕರವಾಗಿ ಪಾರುಗೊಳಿಸಲ್ಪಟ್ಟನು. ಆದರೆ, ಅದೇ ರಾಜನು ಅಪೊಸ್ತಲ ಯಾಕೋಬನನ್ನು ಕೊಲ್ಲಿಸಿದನು ಮತ್ತು ಆಗ ದೇವರು ಈ ಅಪರಾಧವನ್ನು ತಡೆಯಲು ಹಸ್ತಕ್ಷೇಪ ಮಾಡಲಿಲ್ಲ. (ಅ. ಕೃತ್ಯಗಳು 12:​1-11) ಅಸ್ವಸ್ಥರನ್ನು ಗುಣಪಡಿಸಲು ಮತ್ತು ಸತ್ತವರನ್ನು ಎಬ್ಬಿಸಲು ದೇವರು ಅಪೊಸ್ತಲರಿಗೆ ಶಕ್ತಿಯನ್ನು ದಯಪಾಲಿಸಿದ್ದನಾದರೂ, ಅಪೊಸ್ತಲ ಪೌಲನನ್ನು ಕಾಡುತ್ತಿದ್ದ ಶಾರೀರಿಕ ವ್ಯಾಧಿಯಾಗಿರಬಹುದಾದ ‘ಶರೀರದಲ್ಲಿನ ಶೂಲವನ್ನು’ ತಗೆದುಹಾಕಲು ಆತನು ಸಮ್ಮತಿಸಲಿಲ್ಲ.​—2 ಕೊರಿಂಥ 12:​7-9; ಅ. ಕೃತ್ಯಗಳು 9:​32-41; 1 ಕೊರಿಂಥ 12:28.

ರೋಮನ್‌ ಚಕ್ರವರ್ತಿಯಾದ ನೀರೊ ಕ್ರಿಸ್ತನ ಶಿಷ್ಯರ ವಿರುದ್ಧ ಸುರಿಸಿದ ಹಿಂಸೆಯ ಸುರಿಮಳೆಯನ್ನು ತಡೆಯಲು ದೇವರು ಹಸ್ತಕ್ಷೇಪ ಮಾಡಲಿಲ್ಲ. ಕ್ರೈಸ್ತರು ಚಿತ್ರಹಿಂಸೆ ಮಾಡಲ್ಪಟ್ಟರು, ಜೀವಂತವಾಗಿ ಸುಡಲ್ಪಟ್ಟರು, ಮತ್ತು ಕ್ರೂರ ಮೃಗಗಳ ಮುಂದೆ ಎಸೆಯಲ್ಪಟ್ಟರು. ಹಾಗಿದ್ದರೂ, ಈ ವಿರೋಧವು ಆದಿ ಕ್ರೈಸ್ತರನ್ನು ಆಶ್ಚರ್ಯಗೊಳಿಸಲಿಲ್ಲ, ಮತ್ತು ಅದು, ದೇವರು ಅಸ್ತಿತ್ವದಲ್ಲಿದ್ದಾನೆಂಬ ಅವರ ನಂಬಿಕೆಯನ್ನು ನಿಶ್ಚಯವಾಗಿಯೂ ಶಿಥಿಲಗೊಳಿಸಲಿಲ್ಲ. ಏಕೆಂದರೆ, ಅವರನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗಲಾಗುವುದು ಮತ್ತು ಅವರು ತಮ್ಮ ನಂಬಿಕೆಗಾಗಿ ಹಿಂಸೆಯನ್ನನುಭವಿಸಿ ಸಾಯಲು ಸಹ ಸಿದ್ಧರಿರಬೇಕೆಂದು ಯೇಸು ಮುಂಚಿತವಾಗಿಯೇ ಅವರನ್ನು ಎಚ್ಚರಿಸಿದ್ದನು.​—ಮತ್ತಾಯ 10:​17-22.

ದೇವರು ಪೂರ್ವ ಕಾಲಗಳಲ್ಲಿ ಮಾಡಿದಂತೆಯೇ, ಇಂದು ಸಹ ತನ್ನ ಸೇವಕರನ್ನು ಅಪಾಯಕಾರಿ ಸನ್ನಿವೇಶಗಳಿಂದ ತಪ್ಪಿಸಿ ಕಾಪಾಡಲು ಖಂಡಿತವಾಗಿಯೂ ಶಕ್ತನಾಗಿದ್ದಾನೆ. ಆದುದರಿಂದ, ಆತನೇ ನಮ್ಮನ್ನು ರಕ್ಷಿಸಿದನು ಇಲ್ಲವಾದರೆ ನಾವು ಪಾರಾಗುತ್ತಿರಲಿಲ್ಲ ಎಂದು ಭಾವಿಸುವವರನ್ನು ನಾವು ಪರಿಹಾಸ್ಯಮಾಡಬಾರದು. ಹಾಗಿದ್ದರೂ, ಅಂಥ ಸಂದರ್ಭಗಳಲ್ಲಿ ದೇವರು ನಿಜವಾಗಿಯೂ ಹಸ್ತಕ್ಷೇಪ ಮಾಡಿದ್ದನೋ ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಟೌಲೂಸ್‌ನಲ್ಲಿ ಸಂಭವಿಸಿದ ಒಂದು ವಿಸ್ಪೋಟದಿಂದಾಗಿ ಯೆಹೋವನ ಅನೇಕ ನಂಬಿಗಸ್ತ ಸೇವಕರು ಗಾಯಗೊಂಡರು ಮತ್ತು ನಾಜಿ ಹಾಗೂ ಕಮ್ಯೂನಿಸ್ಟ್‌ ಶಿಬಿರಗಳಲ್ಲಿ ಅಥವಾ ಇನ್ನಿತರ ದುರಂತಮಯ ಸನ್ನಿವೇಶಗಳಲ್ಲಿ ಸಾವಿರಾರು ನಂಬಿಗಸ್ತ ಕ್ರೈಸ್ತರು ಮೃತಪಟ್ಟರು ಮತ್ತು ಇವೆಲ್ಲವನ್ನು ತಡೆಗಟ್ಟಲು ದೇವರು ಹಸ್ತಕ್ಷೇಪ ಮಾಡಲಿಲ್ಲ. ದೇವರು ತನಗೆ ಮೆಚ್ಚಿಗೆಯಾಗಿರುವ ಎಲ್ಲರ ಪರವಾಗಿ ಕ್ರಮಬದ್ಧವಾಗಿ ಹಸ್ತಕ್ಷೇಪ ಮಾಡುವುದಿಲ್ಲವೇಕೆ?​—ದಾನಿಯೇಲ 3:​17, 18.

“ಕಾಲ ಮತ್ತು ಮುಂಗಾಣದ ಸಂಭವ”

ಒಂದು ದುರಂತವು ಸಂಭವಿಸುವಾಗ, ಯಾರೇ ಆಗಲಿ ಅದರಿಂದ ಬಾಧಿತರಾಗಸಾಧ್ಯವಿದೆ. ದೇವರಿಗೆ ನಾವು ನಂಬಿಗಸ್ತರಾಗಿರುವ ಸಂಗತಿಯು ಅಲ್ಲಿ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ಟೌಲೂಸ್‌ನಲ್ಲಿ ಸಂಭವಿಸಿದ ವಿಸ್ಫೋಟದ ಸಮಯದಲ್ಲಿ, ಆ್ಯಲೆನ್‌ ಮತ್ತು ಲೀಲಿಆ್ಯನ್‌ ಪಾರಾದರಾದರೂ, ಇತರ 30 ಮಂದಿ ಮೃತಪಟ್ಟರು ಮತ್ತು ನೂರಾರು ಜನರು ಗಾಯಗೊಂಡರು. ಇದರಲ್ಲಿ ಅವರ ದೋಷವೇನೂ ಇರಲಿಲ್ಲ. ದೊಡ್ಡ ಪ್ರಮಾಣದಲ್ಲಿ ಸಾವಿರಾರು ಜನರು ಪಾತಕ, ಅಜಾಗರೂಕತೆಯ ವಾಹನ ಚಲಾಯಿಸುವಿಕೆ, ಅಥವಾ ಯುದ್ಧಗಳಿಗೆ ಬಲಿಯಾಗುತ್ತಾರೆ. ಅವರ ದುರ್ಗತಿಗಾಗಿ ದೇವರನ್ನು ದೂರಸಾಧ್ಯವಿಲ್ಲ. ಬೈಬಲ್‌ ನಮಗೆ ಜ್ಞಾಪಿಸುವುದು, “ಕಾಲ ಮತ್ತು ಮುಂಗಾಣದ ಸಂಭವವು ಯಾರಿಗೂ ತಪ್ಪಿದ್ದಲ್ಲ.”​—ಪ್ರಸಂಗಿ 9:​11, NW.

ಇದಕ್ಕೆ ಕೂಡಿಕೆಯಾಗಿ, ಮಾನವರು ಅಸ್ವಸ್ಥತೆ, ವೃದ್ಧಾಪ್ಯ, ಮತ್ತು ಮರಣಕ್ಕೆ ಈಡಾಗಿದ್ದಾರೆ. ತಮ್ಮ ಜೀವವನ್ನು ದೇವರು ಅದ್ಭುತಕರವಾಗಿ ರಕ್ಷಿಸಿದನು ಅಥವಾ ತಮ್ಮ ಅಸ್ವಸ್ಥತೆಯಿಂದ ತಾವು ಗುಣಮುಖರಾಗಲು ಆತನು ಸಹಾಯಮಾಡಿದನು ಎಂಬುದಾಗಿ ನೆನಸಿದ ಕೆಲವರು ಸಹ ಕಟ್ಟಕಡೆಗೆ ಮರಣಹೊಂದಲೇಬೇಕಾಯಿತು. ಅಸ್ವಸ್ಥತೆ ಮತ್ತು ಮರಣವನ್ನು ತೆಗೆದುಹಾಕುವುದು ಹಾಗೂ ಮಾನವರ ‘ಕಣ್ಣೀರನ್ನೆಲ್ಲಾ ಒರಸಿಬಿಡುವುದು’ ಇನ್ನೂ ಭವಿಷ್ಯತ್ತಿನಲ್ಲಿ ಸಂಭವಿಸಬೇಕಾದ ವಿಷಯಗಳಾಗಿವೆ.​—ಪ್ರಕಟನೆ 21:​1-4.

ಅದು ಸಂಭವಿಸಬೇಕಾದರೆ, ಸಾಂದರ್ಭಿಕವಾಗಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಹೆಚ್ಚು ವಿಸ್ತಾರವಾದ ಮತ್ತು ಅಮೂಲಾಗ್ರವಾದ ಸಂಗತಿಯ ಅವಶ್ಯವಿದೆ. ಬೈಬಲು “ಯೆಹೋವನ ಮಹಾದಿನ”ವೆಂದು ಕರೆಯಲ್ಪಟ್ಟಿರುವ ಒಂದು ಘಟನೆಯ ಕುರಿತು ಮಾತನಾಡುತ್ತದೆ. (ಚೆಫನ್ಯ 1:14) ಈ ಬೃಹತ್‌ ಹಸ್ತಕ್ಷೇಪದ ಸಮಯದಲ್ಲಿ, ದೇವರು ಎಲ್ಲಾ ದುಷ್ಟತನವನ್ನು ಸಂಪೂರ್ಣವಾಗಿ ತೆಗೆದುಹಾಕುವನು. ಮಾನವರಿಗೆ ಪರಿಪೂರ್ಣ ಪರಿಸ್ಥಿತಿಗಳ ಕೆಳಗೆ ಸದಾ ಜೀವಿಸುವ ಅವಕಾಶವು ನೀಡಲ್ಪಡುವುದು ಮತ್ತು ಆ ಪರಿಸ್ಥಿತಿಗಳಲ್ಲಿ, “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ಸತ್ತವರು ಸಹ ಪುನಃ ಎದ್ದುಬರುವರು. ಈ ರೀತಿಯಲ್ಲಿ, ಮಾನವ ದುರಂತಗಳಲ್ಲಿಯೇ ಅತಿ ದೊಡ್ಡ ದುರಂತವಾದ ಮರಣಕ್ಕೆ ವಿರುದ್ಧವಾದದ್ದು ಸಂಭವಿಸಲಿದೆ. (ಯೋಹಾನ 5:​28, 29) ದೇವರು ತನ್ನ ಪ್ರೀತಿ ಮತ್ತು ಒಳ್ಳೇತನದಿಂದ, ಮಾನವರ ಸಮಸ್ಯೆಗಳನ್ನೆಲ್ಲಾ ಸಂಪೂರ್ಣವಾಗಿ ಪರಿಹರಿಸುವನು.

ದೇವರು ಇಂದು ಹಸ್ತಕ್ಷೇಪ ಮಾಡುವ ರೀತಿ

ಹಾಗಿದ್ದರೂ, ಅಷ್ಟರತನಕ ಸೃಷ್ಟಿಯ ನರಳಾಟವನ್ನು ದೇವರು ನಿಸ್ಸಹಾಯಕನಂತೆ ಭಾವರಹಿತನಾಗಿ ಸುಮ್ಮನೆ ನೋಡುತ್ತಿರುತ್ತಾನೆಂದು ಇದರ ಅರ್ಥವಲ್ಲ. ಇಂದು, ಎಲ್ಲಾ ಮನುಷ್ಯರು​—ಯಾವುದೇ ಕುಲ ಅಥವಾ ಸಾಮಾಜಿಕ ಹಿನ್ನಲೆಯವರಾಗಿರಲಿ​—ತನ್ನನ್ನು ತಿಳಿದುಕೊಳ್ಳುವ ಮತ್ತು ತನ್ನೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವ ಸುಯೋಗವನ್ನು ದೇವರು ನೀಡುತ್ತಿದ್ದಾನೆ. (1 ತಿಮೊಥೆಯ 2:​3, 4) ಈ ಕಾರ್ಯಗತಿಯನ್ನು ಯೇಸು ಈ ರೀತಿಯಲ್ಲಿ ವಿವರಿಸಿದನು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ತನ್ನ ಸೇವಕರಿಂದ ಲೋಕವ್ಯಾಪಕವಾಗಿ ಸಾರಲ್ಪಡುತ್ತಿರುವ ರಾಜ್ಯ ಸಂದೇಶದ ಮೂಲಕ ಪ್ರಾಮಾಣಿಕ ಹೃದಯದ ಜನರನ್ನು ದೇವರು ತನ್ನ ಕಡೆಗೆ ಸೆಳೆಯುತ್ತಾನೆ.

ಅದಕ್ಕೆ ಕೂಡಿಕೆಯಾಗಿ, ದೇವರು ತನ್ನ ಮಾರ್ಗದರ್ಶನದ ಪ್ರಕಾರ ನಡೆಯಲು ಇಚ್ಛಿಸುವ ಜನರ ಜೀವಿತವನ್ನು ನೇರವಾಗಿ ಪ್ರಭಾವಿಸುತ್ತಾನೆ. ತನ್ನ ಪವಿತ್ರಾತ್ಮದ ಮೂಲಕ, ಅವರು ತನ್ನ ಚಿತ್ತವನ್ನು ತಿಳಿದುಕೊಳ್ಳುವಂತೆ ಮತ್ತು ತಾನು ಅಪೇಕ್ಷಿಸುವ ರೀತಿಯಲ್ಲಿ ನಡೆಯುವಂತೆ ದೇವರು ‘ಅವರ ಹೃದಯವನ್ನು ತೆರೆಯುತ್ತಾನೆ.’ (ಅ. ಕೃತ್ಯಗಳು 16:14) ಹೌದು, ಆತನನ್ನೂ ಆತನ ವಾಕ್ಯವನ್ನೂ ಮತ್ತು ಆತನ ಉದ್ದೇಶಗಳನ್ನೂ ತಿಳಿಯಲು ನಮಗೆ ಅವಕಾಶವನ್ನು ಒದಗಿಸುವ ಮೂಲಕ, ನಮ್ಮಲ್ಲಿ ಪ್ರತಿಯೊಬ್ಬನ ಕಡೆಗೂ ಆತನಿಗಿರುವ ಪ್ರೀತಿಪರ ಕಾಳಜಿಗೆ ದೇವರು ರುಜುವಾತನ್ನು ನೀಡುತ್ತಾನೆ.​—ಯೋಹಾನ 17:3.

ಇಂದು ಸಹ ದೇವರು ತನ್ನ ಸೇವಕರಿಗೆ ಸಹಾಯಮಾಡುತ್ತಾನೆ, ಆದರೆ ಅವರನ್ನು ಅದ್ಭುತಕರವಾಗಿ ಪಾರುಮಾಡುವ ಮೂಲಕವಾಗಿ ಅಲ್ಲ ಬದಲಾಗಿ ಅವರಿಗೆ ತನ್ನ ಪವಿತ್ರಾತ್ಮವನ್ನು ನೀಡುವ ಮತ್ತು ಅವರು ಎದುರಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾಗಿರುವ ‘ಬಲಾಧಿಕ್ಯವನ್ನು’ ನೀಡುವ ಮೂಲಕವಾಗಿಯೇ. (2 ಕೊರಿಂಥ 4:7) ಅಪೊಸ್ತಲ ಪೌಲನು ಬರೆದದ್ದು: “ನನ್ನನ್ನು ಬಲಪಡಿಸುವಾತ [ಯೆಹೋವ]ನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—ಫಿಲಿಪ್ಪಿ 4:13.

ಹೀಗಿರಲಾಗಿ, ಪ್ರತಿದಿನವೂ ದೇವರಿಗೆ ಕೃತಜ್ಞರಾಗಿರಲು ನಮಗೆ ಸಕಾರಣವಿದೆ, ಏಕೆಂದರೆ ಆತನು ನಮಗೆ ಜೀವವನ್ನು ಮತ್ತು ಎಲ್ಲಾ ಕಷ್ಟಾನುಭವಗಳಿಂದ ಮುಕ್ತವಾಗಿರುವ ಒಂದು ಲೋಕದಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ನೀಡಿದ್ದಾನೆ. “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂದು ಕೀರ್ತನೆಗಾರನು ಕೇಳಿದನು. ಅವನು ಮುಂದುವರಿಸಿದ್ದು: “ರಕ್ಷಣಾಪಾತ್ರೆಯನ್ನು ತೆಗೆದುಕೊಂಡು ಯೆಹೋವನಾಮವನ್ನು ಪ್ರಖ್ಯಾತಿಪಡಿಸುವೆನು.” (ಕೀರ್ತನೆ 116:​12, 13) ಕ್ರಮವಾಗಿ ಈ ಪತ್ರಿಕೆಯನ್ನು ಓದುವ ಮೂಲಕ, ಈಗ ನಿಮಗೆ ಸಂತೋಷವನ್ನೂ ಭವಿಷ್ಯತ್ತಿಗಾಗಿ ಒಂದು ದೃಢವಾದ ನಿರೀಕ್ಷೆಯನ್ನೂ ನೀಡಬಲ್ಲ ಯಾವ ವಿಷಯವನ್ನು ದೇವರು ಮಾಡಿದ್ದಾನೆ, ಮಾಡುತ್ತಿದ್ದಾನೆ, ಮತ್ತು ಮುಂದಕ್ಕೆ ಮಾಡಲಿದ್ದಾನೆ ಎಂಬುದರ ಕುರಿತು ತಿಳಿದುಕೊಳ್ಳಲು ಸಹಾಯವಾಗುವುದು.​—1 ತಿಮೊಥೆಯ 4:8.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.”​—ಯೆಶಾಯ 65:17

[ಪುಟ 5ರಲ್ಲಿರುವ ಚಿತ್ರಗಳು]

ಬೈಬಲ್‌ ಸಮಯಗಳಲ್ಲಿ, ಜೆಕರ್ಯನನ್ನು ಕಲ್ಲೆಸೆದು ಕೊಂದಾಗ . . .

ಇಲ್ಲವೇ ಹೆರೋದನಿಂದ ಮುಗ್ಧ ಶಿಶುಗಳು ಕೊಲ್ಲಲ್ಪಟ್ಟಾಗ, ಯೆಹೋವನು ಹಸ್ತಕ್ಷೇಪ ಮಾಡಲಿಲ್ಲ

[ಪುಟ 7ರಲ್ಲಿರುವ ಚಿತ್ರ]

ಕಷ್ಟಾನುಭವ ಇನ್ನೆಂದಿಗೂ ಇಲ್ಲದಿರುವ, ಮತ್ತು ಸತ್ತವರು ಸಹ ಪುನಃ ಜೀವಿಸುವ ಸಮಯವು ಸಮೀಪವಿದೆ