ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆ ಮತ್ತು ಧೈರ್ಯವನ್ನು ಪ್ರೇರಿಸುವ ಒಂದು ಕಥೆ ಯೂಕ್ರೇನಿನಲ್ಲಿ ಯೆಹೋವನ ಸಾಕ್ಷಿಗಳು

ನಂಬಿಕೆ ಮತ್ತು ಧೈರ್ಯವನ್ನು ಪ್ರೇರಿಸುವ ಒಂದು ಕಥೆ ಯೂಕ್ರೇನಿನಲ್ಲಿ ಯೆಹೋವನ ಸಾಕ್ಷಿಗಳು

ನಂಬಿಕೆ ಮತ್ತು ಧೈರ್ಯವನ್ನು ಪ್ರೇರಿಸುವ ಒಂದು ಕಥೆ ಯೂಕ್ರೇನಿನಲ್ಲಿ ಯೆಹೋವನ ಸಾಕ್ಷಿಗಳು

ಮೊದಲನೆಯ ಶತಮಾನದಲ್ಲಿನ ಕ್ರೈಸ್ತರು ಹಿಂಸೆಯನ್ನು ಅನುಭವಿಸಿದಂತೆಯೇ ಇಂದು ಸಹ ದೇವಜನರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ. (ಮತ್ತಾಯ 10:22; ಯೋಹಾನ 15:20) ಯೂಕ್ರೇನಿನಲ್ಲಿ ಸಂಭವಿಸಿದಷ್ಟು ದೀರ್ಘಕಾಲಿಕ ಅಥವಾ ತೀವ್ರವಾದ ಹಿಂಸೆಯು ಕೇವಲ ಕೆಲವೇ ದೇಶಗಳಲ್ಲಿ ಸಂಭವಿಸಿದೆ. ಯೂಕ್ರೇನಿನಲ್ಲಿ 52 ವರುಷಗಳ ಕಾಲ ರಾಜ್ಯ ಸಾರುವ ಕೆಲಸವು ನಿಷೇಧಿಸಲ್ಪಟ್ಟಿತ್ತು.

ಆ ದೇಶದಲ್ಲಿನ ದೇವಜನರ ಕಥೆಯನ್ನು 2002 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ವು ತಿಳಿಸಿದೆ. ಅದು, ತೀವ್ರವಾದ ವಿರೋಧದ ಎದುರಿನಲ್ಲಿಯೂ ನಂಬಿಕೆ, ಧೈರ್ಯ, ಮತ್ತು ಬಲವನ್ನು ತೋರಿಸಿದ ವ್ಯಕ್ತಿಗಳ ಕಥೆಯಾಗಿದೆ. ಕೆಳಗೆ ತಿಳಿಸಲ್ಪಟ್ಟಿರುವ ಕೆಲವು ಹೇಳಿಕೆಗಳು, ಯೂಕ್ರೇನಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ಗೆ ಬಂದಿರುವ ಗಣ್ಯತೆಯ ಹೇಳಿಕೆಗಳಾಗಿವೆ:

“ನಾನು 2002 ವರ್ಷಪುಸ್ತಕವನ್ನು ಸಂಪೂರ್ಣವಾಗಿ ಓದಿ ಮುಗಿಸಿದ್ದೇನೆ. ಯೂಕ್ರೇನಿನಲ್ಲಿನ ನಿಮ್ಮ ಚಟುವಟಿಕೆಗಳ ಕುರಿತು ಓದಿದಾಗ, ನನಗೆ ಕಣ್ಣೀರನ್ನು ತಡೆಹಿಡಿಯಲಾಗಲಿಲ್ಲ. ನಿಮ್ಮ ಹುರುಪಿನ ಮಾದರಿ ಮತ್ತು ಬಲವಾದ ನಂಬಿಕೆಯಿಂದ ನಾನು ಎಷ್ಟೊಂದು ಉತ್ತೇಜಿತಳಾದೆ ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನೀವಿರುವ ಅದೇ ಆತ್ಮಿಕ ಕುಟುಂಬದ ಭಾಗವಾಗಿ ನಾನೂ ಇದ್ದೇನೆಂದು ನಾನು ಹೆಮ್ಮೆಪಡುತ್ತೇನೆ. ನನ್ನ ಹೃದಯಾಳದಿಂದ ನಿಮಗೆ ಉಪಕಾರ!”​—ಆ್ಯಂಡ್ರೇ, ಫ್ರಾನ್ಸ್‌.

“2002 ವರ್ಷಪುಸ್ತಕಕ್ಕಾಗಿ ನಿಮಗೂ ಯೆಹೋವನಿಗೂ ನಾನೆಷ್ಟು ಆಭಾರಿಯಾಗಿದ್ದೇನೆಂದರೆ, ಮಾತುಗಳಿಂದ ನಾನು ಅದನ್ನು ವರ್ಣಿಸಲು ಅಶಕ್ತಳಾಗಿದ್ದೇನೆ. ತಮ್ಮ ಜೀವನದ ಉತ್ತಮ ವರುಷಗಳನ್ನು ಸೆರೆಮನೆ ಮತ್ತು ಕೂಟಶಿಬಿರಗಳಲ್ಲಿ ಕಳೆದ ಸಹೋದರರ ಅನೇಕ ಅನುಭವಗಳನ್ನು ನಾನು ಓದಿದಾಗ, ನನ್ನ ಕೆನ್ನೆಯ ಮೇಲೆ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಅವರ ಧೈರ್ಯವನ್ನು ನಾನು ಮೆಚ್ಚುತ್ತೇನೆ. ನಾನು 27 ವರುಷಗಳಿಂದ ಒಬ್ಬ ಸಾಕ್ಷಿಯಾಗಿದ್ದರೂ, ಈ ಸಹೋದರ ಸಹೋದರಿಯರಿಂದ ನಾನಿನ್ನೂ ಅನೇಕ ವಿಷಯಗಳನ್ನು ಕಲಿಯಬಲ್ಲೆ. ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಲ್ಲಿರುವ ನನ್ನ ನಂಬಿಕೆಯನ್ನು ಅವರು ಬಲಪಡಿಸಿದರು.”​—ವೀರ, ಪೂರ್ವ ಯುಗೊಸ್ಲಾವಿಯ.

“ವಿರೋಧವಿದ್ದ ಆ ಎಲ್ಲಾ ವರುಷಗಳಲ್ಲಿ ನೀವು ತಾಳ್ಮೆ ಮತ್ತು ನಂಬಿಗಸ್ತಿಕೆಯ ಒಂದು ಉತ್ತಮ ಮಾದರಿಯನ್ನು ಇಟ್ಟಿರುವ ಕಾರಣ ನಾನು ಈ ಪತ್ರವನ್ನು ಸಂತೋಷದಿಂದ ಬರೆಯುತ್ತಿದ್ದೇನೆ. ಯೆಹೋವನಲ್ಲಿರುವ ನಿಮ್ಮ ಸಂಪೂರ್ಣ ಭರವಸೆ ಮತ್ತು ನಂಬಿಗಸ್ತರಾಗಿ ಉಳಿಯಬೇಕೆಂಬ ನಿಮ್ಮ ದೃಢನಿರ್ಣಯವು ನಿಮಗೆ ಗೌರವವನ್ನು ತರುತ್ತದೆ. ಇದಕ್ಕೆ ಕೂಡಿಸಿ, ಪರೀಕ್ಷೆಗಳನ್ನು ಎದುರಿಸುತ್ತಿರುವಾಗ ನೀವು ತೋರಿಸಿದ ನಮ್ರತೆಯು, ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ ಎಂಬ ನನ್ನ ನಿಶ್ಚಿತಾಭಿಪ್ರಾಯವನ್ನು ಇನ್ನಷ್ಟು ಬಲಪಡಿಸುತ್ತದೆ. ಧೈರ್ಯ, ಸ್ಥಿರತೆ, ಮತ್ತು ಪಟ್ಟುಹಿಡಿಯುವಿಕೆಯ ನಿಮ್ಮ ಉತ್ತಮ ಮಾದರಿಯಿಂದಾಗಿ, ನಮ್ಮ ಚಿಕ್ಕಪುಟ್ಟ ಸಮಸ್ಯೆಗಳನ್ನು ನಾವು ಹೆಚ್ಚು ಸುಲಭವಾಗಿ ಎದುರಿಸಬಲ್ಲೆವು.”​—ಟುಟೇರೀಆ್ಯ, ಫ್ರೆಂಚ್‌ ಪೊಲಿನೇಷಿಯ.

“ವರ್ಷಪುಸ್ತಕವನ್ನು ಓದಿದ ನಂತರ ನಿಮಗೆ ಪತ್ರವನ್ನು ಬರೆಯಲೇಬೇಕೆಂದು ನನಗನಿಸಿತು. ಉತ್ತೇಜನದಾಯಕವಾದ ಎಲ್ಲಾ ಅನುಭವಗಳಿಂದಾಗಿ ನಾನು ಬಹಳಷ್ಟು ಪ್ರಚೋದಿತಳಾದೆ. ಸೂಕ್ತವಾದ ಸಮಯದಲ್ಲಿ ನಮಗೆ ಬೇಕಾಗಿರುವ ಬಲವನ್ನು ನೀಡುವ, ಪ್ರೀತಿಪರನೂ ಕಾಳಜಿವಹಿಸುವವನೂ ಆಗಿರುವ ತಂದೆಯಿಂದ ಮಾರ್ಗದರ್ಶಿಸಲ್ಪಡುವ ಇಂಥ ನಿಷ್ಠಾವಂತ, ಐಕ್ಯ ಸಂಸ್ಥೆಯ ಸದಸ್ಯಳಾಗಿರುವುದರಲ್ಲಿ ನಾನು ಹೆಮ್ಮೆಪಡುತ್ತೇನೆ. ಯೆಹೋವನ, ಧೈರ್ಯ ಮತ್ತು ಹುರುಪಿನ ಅನೇಕ ಸೇವಕರು ಬಹಳಷ್ಟು ಕಷ್ಟಾನುಭವಗಳನ್ನು ಅನುಭವಿಸಿದರು ಮತ್ತು ಕೆಲವರು ತಮ್ಮ ಜೀವವನ್ನು ಸಹ ಕಳೆದುಕೊಂಡರು ಎಂಬುದನ್ನು ಓದುವಾಗ ನಾನು ಬಹಳ ದುಃಖಿತಳಾದೆ. ಆದರೆ ಅದೇ ಸಮಯದಲ್ಲಿ, ಅವರ ಧೈರ್ಯ ಮತ್ತು ಹುರುಪಿನ ಪರಿಣಾಮವಾಗಿ ಅನೇಕ ಜನರು ಸತ್ಯವನ್ನು ಕಲಿತರು ಮತ್ತು ನಮ್ಮ ಪ್ರೀತಿಯ ತಂದೆಯ ಕುರಿತು ತಿಳಿದುಕೊಂಡರು ಎಂಬುದನ್ನು ನೆನಸುವಾಗ ನನಗೆ ಆನಂದವಾಯಿತು.”​—ಕೋಲೆಟ್‌, ನೆದರ್ಲೆಂಡ್ಸ್‌.

“ನಾನು ಮತ್ತು ನನ್ನ ಹೆಂಡತಿ, ವರ್ಷಪುಸ್ತಕದಲ್ಲಿ ಯೂಕ್ರೇನಿನ ವರದಿಯನ್ನು ಓದಿದಾಗ, ಅದು ನಮ್ಮ ಹೃದಯವನ್ನು ಸ್ಪರ್ಶಿಸಿತು ಎಂಬುದನ್ನು ನಿಮಗೆ ತಿಳಿಸಲು ನಾವು ಅಪೇಕ್ಷಿಸುತ್ತೇವೆ. ನಂಬಿಗಸ್ತ ಸಹೋದರರಾದ ನೀವು, ದೀರ್ಘಕಾಲಿಕ ಮತ್ತು ತೀವ್ರವಾದ ಸಂಕಟಗಳ ಮಧ್ಯದಲ್ಲಿಯೂ ತಾಳ್ಮೆಗೆ ಒಂದು ಎದ್ದುಕಾಣುವ ಮಾದರಿಯನ್ನು ಇಟ್ಟಿದ್ದೀರಿ. ಜ್ಞಾನೋಕ್ತಿ 27:11ರ ಮಾತುಗಳಿಗನುಸಾರ, ಪಿಶಾಚನ ಎಲ್ಲಾ ದುಷ್ಕೃತ್ಯಗಳ ಹೊರತಾಗಿಯೂ ಯೂಕ್ರೇನಿನಲ್ಲಿರುವ ಹಲವಾರು ನಂಬಿಗಸ್ತ ಸಹೋದರರು ಮುರಿಯಲಾಗದ ಯಥಾರ್ಥತೆಯನ್ನು ಕಾಪಾಡಿಕೊಂಡಿರುವುದನ್ನು ನೋಡುವಾಗ ಯೆಹೋವನಿಗೆ ಎಷ್ಟು ಸಂತೋಷವಾಗಿರಬೇಕು.”​—ಆ್ಯಲನ್‌, ಆಸ್ಟ್ರೇಲಿಯ.

“ಯೂಕ್ರೇನಿನಲ್ಲಿರುವ ಸಹೋದರರ ಕುರಿತು ಓದಿದಾಗ ನನ್ನ ಕಣ್ಣುಗಳಲ್ಲಿ ಕಂಬನಿಯು ತುಂಬಿಬಂತು. ಅವರು ಎಷ್ಟೊಂದು ವಿಷಯಗಳನ್ನು ತಾಳಿಕೊಂಡರು​—ಅನೇಕ ವರುಷಗಳ ಸೆರೆವಾಸ, ಚಿತ್ರಹಿಂಸೆ, ದಬ್ಬಾಳಿಕೆ, ಮತ್ತು ಕುಟುಂಬದಿಂದ ಪ್ರತ್ಯೇಕಪಡಿಸುವಿಕೆ. ನಿಮ್ಮ ಸಭೆಯಲ್ಲಿ ಈಗಲೂ ಸೇವೆಸಲ್ಲಿಸುತ್ತಿರುವ ಎಲ್ಲಾ ಸಹೋದರರಿಗೆ, ನಾನು ಅವರನ್ನು ಬಹಳವಾಗಿ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದು ಹೇಳಬಯಸುತ್ತೇನೆ. ಅವರ ಧೈರ್ಯ ಮತ್ತು ಸ್ಥಿರತೆಯಿಂದ ನಾನು ಬಹಳಷ್ಟು ಹರ್ಷಿತನಾಗಿದ್ದೇನೆ. ಅವರ ಶಕ್ತಿಯ ಮೂಲವು ಯೆಹೋವನ ಆತ್ಮವೇ ಆಗಿದೆ ಎಂದು ನನಗೆ ತಿಳಿದಿದೆ. ಯೆಹೋವನು ನಮಗೆ ಸಮೀಪದಲ್ಲಿದ್ದಾನೆ ಮತ್ತು ನಮಗೆ ಸಹಾಯಮಾಡಲು ಆತನು ಬಯಸುತ್ತಾನೆ.”​—ಸರ್‌ಗ್ಯಾ, ರಷ್ಯಾ.

“ನಾನು 2002 ವರ್ಷಪುಸ್ತಕವನ್ನು ಓದಿ, ಅತ್ತುಬಿಟ್ಟೆ. ನಮ್ಮ ಸಭೆಯಲ್ಲಿರುವ ಅನೇಕ ಸಹೋದರ ಸಹೋದರಿಯರೂ ನಿಮ್ಮ ಕುರಿತು ಮಾತಾಡಿದ್ದಾರೆ. ನೀವು ನಿಜವಾಗಿಯೂ ಅತಿ ಅಮೂಲ್ಯರು. ಇಂಥ ಒಂದು ದೊಡ್ಡ ಆತ್ಮಿಕ ಕುಟುಂಬದ ಭಾಗವಾಗಿರಲು ನಾನು ಬಹಳ ಸಂತೋಷಿಸುತ್ತೇನೆ.”​—ಯೋನ್‌ಹೀ, ದಕ್ಷಿಣ ಕೊರಿಯ.

“ಯೆಹೋವನಿಗಾಗಿ ಮತ್ತು ಅವನ ರಾಜ್ಯಕ್ಕಾಗಿರುವ ನಿಮ್ಮ ನಂಬಿಕೆ, ತಾಳ್ಮೆ, ಮತ್ತು ಅಚಲ ಪ್ರೀತಿಯ ದಾಖಲೆಯಿಂದ ನಾನು ಗಾಢವಾಗಿ ಪ್ರಚೋದಿತನಾದೆ. ಕೆಲವೊಮ್ಮೆ, ನಾವು ಆನಂದಿಸುತ್ತಿರುವ ಸ್ವತಂತ್ರ್ಯವನ್ನು ಮತ್ತು ಯೆಹೋವನು ನಮಗೆ ನೀಡುವ ಹೇರಳವಾದ ಆತ್ಮಿಕ ಆಹಾರವನ್ನು ಗಣ್ಯಮಾಡಲು ನಾವು ತಪ್ಪಿಹೋಗುತ್ತೇವೆ. ಹಾಗಿದ್ದರೂ, ನಿಮ್ಮ ವಿಷಯದಲ್ಲಿ ಇದು ಸತ್ಯವಾಗಿಲ್ಲ. ನಿಮ್ಮ ನಂಬಿಕೆಯ ಮಾದರಿಯು, ಯೆಹೋವನೊಂದಿಗೆ ನಾವು ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವುದಾದರೆ, ಎಲ್ಲಾ ರೀತಿಯ ಪರೀಕ್ಷೆಗಳನ್ನು ಎದುರಿಸಲು ಆತನು ನಮಗೆ ಬಲವನ್ನು ನೀಡುತ್ತಾನೆ ಎಂಬುದನ್ನು ಗ್ರಹಿಸಿಕೊಳ್ಳುವಂತೆ ಸಹಾಯಮಾಡಿತು.”​—ಪೌಲೂ, ಬ್ರಸಿಲ್‌.

“2002 ವರ್ಷಪುಸ್ತಕದಿಂದ ನಿಮ್ಮ ಅನುಭವಗಳ ಕುರಿತು ಓದುವ ಸುಯೋಗ ನನಗೆ ದೊರಕಿತು. ಅವು ನನ್ನನ್ನು ಗಾಢವಾಗಿ ಪ್ರಭಾವಿಸಿದವು, ವಿಶೇಷವಾಗಿ ಸಹೋದರಿ ಲೀಡೀಯ ಕುರ್‌ಡಸ್‌ರವರ ಹೃದಯ ಸ್ಪರ್ಶಿಸುವ ಅನುಭವ. ನನಗೆ ಈ ಸಹೋದರಿಯೊಂದಿಗೆ ಒಂದು ಆಪ್ತ ಬಂಧನದ ಅನಿಸಿಕೆಯಾಯಿತು.”​—ನೀಡ್‌ಯಾ, ಕೊಸ್ಟರೀಕ.

“ಇವತ್ತು ನಾನು 2002 ವರ್ಷಪುಸ್ತಕವನ್ನು ಓದಿ ಮುಗಿಸಿದೆ. ನಾನು ಅದನ್ನು ಓದಿದಂತೆಯೇ ಯೆಹೋವನಲ್ಲಿರುವ ನನ್ನ ನಂಬಿಕೆಯು ಬಲಗೊಂಡಿತು. ಓದಿದ ವಿಷಯಗಳಲ್ಲಿ ನಾನು ಎಂದಿಗೂ ಮರೆಯದಿರುವ ಒಂದು ವಿಷಯ ಯಾವುದೆಂದರೆ, ಮುಂದಾಳತ್ವವನ್ನು ವಹಿಸುವವರ ಕುರಿತು ಸಂಶಯದ ಬೀಜಗಳು ಬಿತ್ತಲ್ಪಟ್ಟ ಸಮಯದ ಕುರಿತಾದ ವರದಿಯೇ. ಮುಂದಾಳತ್ವ ವಹಿಸುವ ಸಹೋದರರನ್ನು ಎಂದಿಗೂ ಸಂಶಯಿಸಬಾರದೆಂಬ ಪಾಠವನ್ನು ಅದು ನನಗೆ ಕಲಿಸಿತು. ನಿಮಗೆ ಬಹಳ ಉಪಕಾರ! ಈ ಆತ್ಮಿಕ ಆಹಾರವು ನಂಬಿಕೆಯನ್ನು ಬಲಗೊಳಿಸುವಂಥದ್ದಾಗಿದೆ ಮತ್ತು ಮುಂದಕ್ಕೆ ನಮ್ಮ ನಂಬಿಕೆಯು ಪರೀಕ್ಷಿಸಲ್ಪಡಬಹುದಾದ ಸಮಯಕ್ಕಾಗಿ ನಮ್ಮನ್ನು ಸನ್ನದ್ಧಗೊಳಿಸುತ್ತದೆ.”​—ಲೆಟೀಷ್ಯ, ಅಮೆರಿಕ.

“ಅತ್ಯುತ್ತಮವಾದ ಈ ವರ್ಷಪುಸ್ತಕಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಅನೇಕ ಪ್ರಚಾರಕರು ಯೂಕ್ರೇನಿನಲ್ಲಿರುವ ನಮ್ಮ ಸಹೋದರರ ಕುರಿತು ಮೊದಲಬಾರಿಗೆ ಓದುತ್ತಿದ್ದಾರೆ. ನಮ್ಮಲ್ಲಿರುವ ಸಹೋದರರು ಇದರಿಂದ ಬಲಗೊಳಿಸಲ್ಪಟ್ಟಿದ್ದಾರೆ. ಅನೇಕರು, ಅದರಲ್ಲೂ ಮುಖ್ಯವಾಗಿ ಯುವ ಜನರು, ತಮ್ಮ ಸೇವಾ ಚಟುವಟಿಕೆಯನ್ನು ಹೆಚ್ಚಿಸಿದ್ದಾರೆ. ಕೆಲವರು ರೆಗ್ಯುಲರ್‌ ಅಥವಾ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಆರಂಭಿಸಿದ್ದಾರೆ. ನಿಷೇಧದ ಸಮಯದಲ್ಲಿ ಸೇವೆಮಾಡಿದ ಸಹೋದರ ಸಹೋದರಿಯರ ಕಥೆಗಳಿಂದ ಎಲ್ಲರೂ ಉತ್ತೇಜಿಸಲ್ಪಟ್ಟಿದ್ದಾರೆ.”​—ಒಂದು ಸಭೆಯ ಸೇವಾ ಕಮಿಟಿ, ಯೂಕ್ರೇನ್‌.

ಲೋಕವ್ಯಾಪಕವಾಗಿರುವ ಯೆಹೋವನ ಜನರಿಗೆ ಯೂಕ್ರೇನಿನಲ್ಲಿರುವ ನಮ್ಮ ಸಹೋದರರ ನಂಬಿಗಸ್ತಿಕೆಯು ನಿಜವಾಗಿಯೂ ಉತ್ತೇಜನದ ಮೂಲವಾಗಿದೆ. ವಾಸ್ತವದಲ್ಲಿ, ಪ್ರತಿ ವರುಷದ ವರ್ಷಪುಸ್ತಕದಲ್ಲಿ ಬರುವ ಹೃದಯ ಸ್ಪರ್ಶಿಸುವ ವರದಿಗಳನ್ನು ಕ್ರಮವಾಗಿ ಓದುವುದು, ಈ ಮಹತ್ವಪೂರ್ಣ ಸಮಯಗಳಲ್ಲಿ ನಮ್ಮ ನಂಬಿಕೆ ಮತ್ತು ತಾಳ್ಮೆಯನ್ನು ಬಲಪಡಿಸುವ ಒಂದು ಅತ್ಯುತ್ತಮ ವಿಧಾನವಾಗಿದೆ.​—ಇಬ್ರಿಯ 12:1.