ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು

ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು

ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು

“ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು.”​—ಮತ್ತಾಯ 5:10.

1. ಯೇಸು ಏಕೆ ಪೊಂತ್ಯ ಪಿಲಾತನ ಮುಂದೆ ನಿಂತಿದ್ದನು, ಮತ್ತು ಯೇಸು ಏನು ಹೇಳಿದನು?

“ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಯೇಸು ಈ ಮಾತುಗಳನ್ನು ಹೇಳಿದಾಗ, ಅವನು ಯೂದಾಯದ ರೋಮನ್‌ ದೇಶಾಧಿಪತಿಯಾದ ಪೊಂತ್ಯ ಪಿಲಾತನ ಮುಂದೆ ನಿಂತಿದ್ದನು. ಯೇಸು ಅಲ್ಲಿದ್ದದ್ದು, ತನ್ನ ಸ್ವಂತ ಆಯ್ಕೆಯಿಂದಾಗಲಿ ಪಿಲಾತನಿಂದ ಆಮಂತ್ರಿಸಲ್ಪಟ್ಟ ಕಾರಣಕ್ಕಾಗಿಯಾಗಲಿ ಅಲ್ಲ. ಬದಲಾಗಿ, ಮರಣದಂಡನೆಗೆ ಅರ್ಹನಾಗಿರುವ ತಪ್ಪಿತಸ್ಥನೆಂದು ಯೆಹೂದಿ ಧಾರ್ಮಿಕ ಮುಖಂಡರು ಅವನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದ್ದರಿಂದಲೇ.​—ಯೋಹಾನ 18:​29-31.

2. ಯೇಸು ಯಾವ ಹೆಜ್ಜೆಯನ್ನು ತೆಗೆದುಕೊಂಡನು, ಮತ್ತು ಇದರ ಪರಿಣಾಮವೇನು?

2 ತನ್ನನ್ನು ಬಿಡಿಸುವ ಅಥವಾ ಮರಣದಂಡನೆಗೆ ಒಪ್ಪಿಸುವ ಅಧಿಕಾರವು ಪಿಲಾತನಿಗೆ ಇದೆ ಎಂಬುದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. (ಯೋಹಾನ 19:10) ಆದರೆ ಇದು, ರಾಜ್ಯದ ಕುರಿತು ಪಿಲಾತನ ಬಳಿ ಧೈರ್ಯದಿಂದ ಮಾತಾಡುವುದರಿಂದ ಅವನನ್ನು ತಡೆಯಲಿಲ್ಲ. ಯೇಸುವಿನ ಜೀವವು ಅಪಾಯದಲ್ಲಿತ್ತಾದರೂ, ಆ ಪ್ರಾಂತದ ಅತ್ಯುಚ್ಚ ಸರಕಾರೀ ಅಧಿಕಾರಿಗೆ ಸಾಕ್ಷಿಯನ್ನು ನೀಡಲಿಕ್ಕಾಗಿ ಅವನು ಈ ಅವಕಾಶವನ್ನು ಸದುಪಯೋಗಿಸಿದನು. ಯೇಸು ಆ ಸಾಕ್ಷಿಯನ್ನು ಕೊಟ್ಟನಾದರೂ, ಅವನು ಖಂಡಿಸಲ್ಪಟ್ಟು, ಹತಿಸಲ್ಪಟ್ಟನು. ಮತ್ತು ಒಬ್ಬ ಹುತಾತ್ಮನೋಪಾದಿ ಒಂದು ಯಾತನಾ ಕಂಭದ ಮೇಲೆ ಯಾತನಾಮಯ ಮರಣವನ್ನು ಅನುಭವಿಸಿದನು.​—ಮತ್ತಾಯ 27:24-26; ಮಾರ್ಕ 15:15; ಲೂಕ 23:24, 25; ಯೋಹಾನ 19:13-16.

ಸಾಕ್ಷಿಯೋ ಹುತಾತ್ಮನೋ?

3. “ಹುತಾತ್ಮ” ಎಂಬ ಪದಕ್ಕೆ ಮೊದಲು ಯಾವ ಅರ್ಥವಿತ್ತು, ಆದರೆ ಇಂದು ಅದಕ್ಕೆ ಯಾವ ಅರ್ಥವಿದೆ?

3 ಇಂದಿನ ಅನೇಕ ಜನರ ದೃಷ್ಟಿಯಲ್ಲಿ, ಹುತಾತ್ಮ ಎಂಬ ಪದವು ಹೆಚ್ಚುಕಡಿಮೆ ಮತಾಂಧ, ಉಗ್ರಗಾಮಿಗೆ ಸಮಾನವಾದ ಪದವಾಗಿದೆ. ತಮ್ಮ ನಂಬಿಕೆಗಾಗಿ ಅದರಲ್ಲೂ ವಿಶೇಷವಾಗಿ ಧಾರ್ಮಿಕ ನಂಬಿಕೆಗಾಗಿ ಪ್ರಾಣವನ್ನೂ ತ್ಯಾಗಮಾಡಲು ಮನಃಪೂರ್ವಕವಾಗಿ ಸಿದ್ಧರಿರುವವರು, ಅನೇಕವೇಳೆ ಭಯೋತ್ಪಾದಕರಾಗಿಯೋ ಅಥವಾ ಕಡಿಮೆಪಕ್ಷ ಸಮಾಜಕ್ಕೆ ಬೆದರಿಕೆಯಾಗಿಯೋ ಪರಿಗಣಿಸಲ್ಪಡುತ್ತಾರೆ. ಆದರೂ, ಹುತಾತ್ಮ (ಮಾರ್ಟರ್‌) ಎಂಬ ಪದವು ಮೂಲತಃ “ಸಾಕ್ಷಿ” ಎಂಬರ್ಥವುಳ್ಳದ್ದಾಗಿತ್ತು. ಅಂದರೆ ಬಹುಶಃ ಒಂದು ಕೋರ್ಟ್‌ ವಿಚಾರಣೆಯ ಸಮಯದಲ್ಲಿ, ತಾನು ಸತ್ಯವೆಂದು ನಂಬುವಂಥ ವಿಷಯಕ್ಕೆ ಸಾಕ್ಷ್ಯವನ್ನು ನೀಡುವಂಥ ಒಬ್ಬ ವ್ಯಕ್ತಿಗೆ ಸೂಚಿತವಾಗಿದೆ. ಆದರೆ ಆ ಅಭಿವ್ಯಕ್ತಿಗೆ, “ಸಾಕ್ಷಿಯನ್ನು ನೀಡುವುದಕ್ಕಾಗಿ ಪ್ರಾಣತ್ಯಾಗ ಮಾಡುವಂಥ ಒಬ್ಬ ವ್ಯಕ್ತಿ” ಅಥವಾ ಒಬ್ಬನು ತನ್ನ ಪ್ರಾಣವನ್ನೇ ತ್ಯಾಗಮಾಡುವ ಮೂಲಕ ಸಾಕ್ಷಿಯನ್ನು ನೀಡುವುದು ಎಂಬ ಅರ್ಥವು ಬಂದದ್ದು ಸಮಯಾನಂತರವೇ.

4. ಯೇಸು ಪ್ರಧಾನವಾಗಿ ಯಾವ ಅರ್ಥದಲ್ಲಿ ಒಬ್ಬ ಹುತಾತ್ಮನಾಗಿದ್ದನು?

4 ಯೇಸು ಒಬ್ಬ ಹುತಾತ್ಮನಾಗಿದ್ದದ್ದು ಪ್ರಧಾನವಾಗಿ ಆ ಪದದ ಆರಂಭದ ಅರ್ಥದಲ್ಲಿ. ಅವನು ಪಿಲಾತನಿಗೆ ಹೇಳಿದಂತೆ, ಅವನು “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ” ಬಂದನು. ಅವನ ಸಾಕ್ಷಿಕಾರ್ಯವು ಜನರಿಂದ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳನ್ನು ಹೊರಸೆಳೆಯಿತು. ಜನಸಾಮಾನ್ಯರ ನಡುವೆ ಕೆಲವರು ತಾವು ಕೇಳಿಸಿಕೊಂಡ ಹಾಗೂ ನೋಡಿದ ಸಂಗತಿಗಳಿಂದ ತುಂಬ ಪ್ರಚೋದಿತರಾದರು ಮತ್ತು ಅವರು ಯೇಸುವಿನಲ್ಲಿ ನಂಬಿಕೆಯಿಟ್ಟರು. (ಯೋಹಾನ 2:23; 8:30) ಒಟ್ಟಿನಲ್ಲಿ ಜನರ ಗುಂಪುಗಳು ಮತ್ತು ವಿಶೇಷವಾಗಿ ಧಾರ್ಮಿಕ ಮುಖಂಡರು ಸಹ ತೀವ್ರವಾಗಿ ಆದರೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ತನ್ನ ಅವಿಶ್ವಾಸಿ ಸಂಬಂಧಿಕರಿಗೆ ಯೇಸು ಹೇಳಿದ್ದು: “ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿಹೇಳುವದರಿಂದ ನನ್ನನ್ನು ಹಗೆಮಾಡುತ್ತದೆ.” (ಯೋಹಾನ 7:7) ಯೇಸು ಸತ್ಯಕ್ಕೋಸ್ಕರ ಸಾಕ್ಷಿ ನೀಡಿದ್ದರಿಂದ, ಅವನು ಆ ಜನಾಂಗದ ಮುಖಂಡರ ಉಗ್ರಕೋಪಕ್ಕೆ ಬಲಿಯಾದನು ಮತ್ತು ಇದು ಅವನ ಮರಣಕ್ಕೆ ನಡಿಸಿತು. ನಿಜವಾಗಿಯೂ ಅವನು ‘ನಂಬಿಗಸ್ತನೂ ಸತ್ಯಸಾಕ್ಷಿ (ಮಾರ್ಟಿಸ್‌)ಯೂ’ ಆಗಿದ್ದನು.​—ಪ್ರಕಟನೆ 3:14.

“ನಿಮ್ಮನ್ನು ಎಲ್ಲರೂ ಹಗೆಮಾಡುವರು”

5. ತನ್ನ ಶುಶ್ರೂಷೆಯ ಆರಂಭದಲ್ಲಿ, ಹಿಂಸೆಯ ಕುರಿತು ಯೇಸು ಏನು ಹೇಳಿದನು?

5 ಸ್ವತಃ ಯೇಸುವೇ ತೀವ್ರವಾದ ಹಿಂಸೆಯನ್ನು ಅನುಭವಿಸಿದನು ಮಾತ್ರವಲ್ಲ, ತನ್ನ ಹಿಂಬಾಲಕರು ಸಹ ತದ್ರೀತಿಯ ಹಿಂಸೆಯನ್ನು ಅನುಭವಿಸುವರು ಎಂಬ ಮುನ್ನೆಚ್ಚರಿಕೆಯನ್ನೂ ಅವನು ನೀಡಿದನು. ತನ್ನ ಶುಶ್ರೂಷೆಯ ಆರಂಭದಲ್ಲಿ, ಪರ್ವತ ಪ್ರಸಂಗದಲ್ಲಿ ತನ್ನ ಕೇಳುಗರಿಗೆ ಯೇಸು ಹೇಳಿದ್ದು: “ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.”​—ಮತ್ತಾಯ 5:10-12.

6. ಹನ್ನೆರಡು ಮಂದಿ ಅಪೊಸ್ತಲರನ್ನು ಕಳುಹಿಸುತ್ತಿರುವಾಗ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು?

6 ಸಮಯಾನಂತರ, 12 ಮಂದಿ ಅಪೊಸ್ತಲರನ್ನು ಕಳುಹಿಸುತ್ತಿರುವಾಗ ಯೇಸು ಅವರಿಗೆ ಹೇಳಿದ್ದು: “ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು.” ಆದರೆ ಕೇವಲ ಧಾರ್ಮಿಕ ಅಧಿಕಾರಿಗಳು ಮಾತ್ರವೇ ಶಿಷ್ಯರನ್ನು ಹಿಂಸಿಸುವುದಿಲ್ಲ. ಏಕೆಂದರೆ ಯೇಸು ಇನ್ನೂ ಹೇಳಿದ್ದು: “ಅಣ್ಣನು ತಮ್ಮನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.” (ಮತ್ತಾಯ 10:17, 18, 21, 22) ಆ ಮಾತುಗಳ ಸತ್ಯತೆಗೆ ಪ್ರಥಮ ಶತಮಾನದ ಕ್ರೈಸ್ತರ ಇತಿಹಾಸವು ಒಂದು ಪುರಾವೆಯಾಗಿದೆ.

ನಂಬಿಗಸ್ತ ತಾಳ್ಮೆಯ ಒಂದು ದಾಖಲೆ

7. ಸ್ತೆಫನನು ಒಬ್ಬ ಹುತಾತ್ಮನಾಗುವಂತೆ ನಡೆಸಿದ್ದು ಯಾವುದು?

7 ಯೇಸುವಿನ ಮರಣವು ಸಂಭವಿಸಿದ ಸ್ವಲ್ಪದರಲ್ಲೇ, ಸತ್ಯಕ್ಕಾಗಿ ಸಾಕ್ಷಿಯನ್ನು ನೀಡಿದ್ದಕ್ಕಾಗಿ ಸಾಯಿಸಲ್ಪಡುವವರಲ್ಲಿ ಸ್ತೆಫನನು ಪ್ರಪ್ರಥಮ ಕ್ರೈಸ್ತನಾದನು. ಅವನು “ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು.” ಅವನ ಧಾರ್ಮಿಕ ವೈರಿಗಳು “ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮಶಕ್ತಿಯನ್ನೂ ಎದುರಿಸಲಾರದೆ ಹೋದರು.” (ಅ. ಕೃತ್ಯಗಳು 6:8, 10) ಈರ್ಷ್ಯೆಯಿಂದ ತುಂಬಿದವರಾದ ಅವರು, ಸ್ತೆಫನನನ್ನು ಯೆಹೂದಿ ಹಿರೀ ಸಭೆಯಾಗಿದ್ದ ಸನ್ಹೆದ್ರಿನ್‌ನ ಮುಂದೆ ಎಳೆದುಕೊಂಡು ಹೋದರು, ಮತ್ತು ಅಲ್ಲಿ ಅವನು ತನ್ನ ಸುಳ್ಳು ಆಪಾದಕರನ್ನು ಎದುರಿಸಿದನು ಹಾಗೂ ಪ್ರಬಲವಾದ ಸಾಕ್ಷಿಯನ್ನು ಕೊಟ್ಟನು. ಆದರೆ, ಕೊನೆಗೂ ಸ್ತೆಫನನ ವೈರಿಗಳು ಈ ನಂಬಿಗಸ್ತ ಸಾಕ್ಷಿಯನ್ನು ಕಲ್ಲೆಸೆದು ಕೊಂದುಬಿಟ್ಟರು.​—ಅ. ಕೃತ್ಯಗಳು 7:​59, 60.

8. ಸ್ತೆಫನನ ಮರಣಾನಂತರ ಬಂದ ಹಿಂಸೆಗೆ ಯೆರೂಸಲೇಮಿನಲ್ಲಿದ್ದ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು?

8 ಸ್ತೆಫನನು ಕೊಲ್ಲಲ್ಪಟ್ಟ ನಂತರ, “ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರು ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು.” (ಅ. ಕೃತ್ಯಗಳು 8:1) ಹಿಂಸೆಯು ಕ್ರೈಸ್ತ ಸಾಕ್ಷಿಕಾರ್ಯವನ್ನು ನಿಲ್ಲಿಸಿಬಿಟ್ಟಿತೊ? ಇಲ್ಲ, ಅದಕ್ಕೆ ಬದಲಾಗಿ, ಆ ವೃತ್ತಾಂತವು ನಮಗೆ ತಿಳಿಸುವುದೇನೆಂದರೆ, “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದರು.” (ಅ. ಕೃತ್ಯಗಳು 8:4) “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಈ ಮುಂಚೆ ಅಪೊಸ್ತಲ ಪೇತ್ರನು ಹೇಳಿದಾಗ ಅವನಿಗಿದ್ದ ಅನಿಸಿಕೆಯೇ ಇವರಿಗೂ ಆಗಿರಬೇಕು. (ಅ. ಕೃತ್ಯಗಳು 5:29) ಹಿಂಸೆಯ ಹೊರತಾಗಿಯೂ, ಆ ನಂಬಿಗಸ್ತ ಹಾಗೂ ಧೀರ ಶಿಷ್ಯರು ಸತ್ಯಕ್ಕೋಸ್ಕರ ಸಾಕ್ಷಿಯನ್ನು ನೀಡುವ ಕೆಲಸದಲ್ಲಿ ಪಟ್ಟುಬಿಡದೆ ಮುಂದುವರಿದರು; ಇದು ಇನ್ನೂ ಹೆಚ್ಚಿನ ಕಷ್ಟತೊಂದರೆಗಳಿಗೆ ನಡಿಸುತ್ತದೆ ಎಂಬುದು ಅವರಿಗೆ ಗೊತ್ತಿತ್ತಾದರೂ ಅವರು ಹಾಗೆ ಮಾಡಿದರು.​—ಅ. ಕೃತ್ಯಗಳು 11:19-21.

9. ಯೇಸುವಿನ ಹಿಂಬಾಲಕರ ಮೇಲೆ ಯಾವ ಹಿಂಸೆಯು ಮುಂದುವರಿಯಿತು?

9 ಈ ಮಧ್ಯೆ ಕಷ್ಟತೊಂದರೆಗಳ ತೀವ್ರತೆಯೇನೂ ಕಡಿಮೆಯಾಗಲಿಲ್ಲ ಎಂಬುದಂತೂ ಖಂಡಿತ. ಮೊದಲನೆಯದಾಗಿ, ಸ್ತೆಫನನು ಕಲ್ಲೆಸೆದು ಕೊಲ್ಲಲ್ಪಡುತ್ತಿದ್ದಾಗ ಅದನ್ನು ಸಮ್ಮತಿಸಿದ ಸೌಲನು, “ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ ಮಹಾಯಾಜಕನ ಬಳಿಗೆ ಹೋಗಿ​—ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರದವರಿಗೆ ನೀನು ಕಾಗದವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು” ಎಂಬುದು ನಮಗೆ ತಿಳಿದುಬರುತ್ತದೆ. (ಅ. ಕೃತ್ಯಗಳು 9:​1, 2) ತದನಂತರ, ಸಾ.ಶ. 44ರ ಸುಮಾರಿಗೆ, “ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವದಕ್ಕೆ ಕೈ ಹಾಕಿ ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.”​—ಅ. ಕೃತ್ಯಗಳು 12:1, 2.

10. ಅಪೊಸ್ತಲರ ಕೃತ್ಯಗಳು ಮತ್ತು ಪ್ರಕಟನೆ ಪುಸ್ತಕಗಳಲ್ಲಿ ನಾವು ಹಿಂಸೆಯ ಕುರಿತಾದ ಯಾವ ದಾಖಲೆಯನ್ನು ನೋಡುತ್ತೇವೆ?

10 ಅಪೊಸ್ತಲರ ಕೃತ್ಯಗಳು ಪುಸ್ತಕದ ಉಳಿದ ಭಾಗದಲ್ಲಿ, ಇತರ ನಂಬಿಗಸ್ತರಿಂದ ಸಹಿಸಲ್ಪಟ್ಟ ಪರೀಕ್ಷೆಗಳು, ಸೆರೆವಾಸ, ಮತ್ತು ಹಿಂಸೆಯ ಶಾಶ್ವತ ದಾಖಲೆಯು ಒಳಗೂಡಿದೆ. ಇವರಲ್ಲೊಬ್ಬನು, ಹಿಂದೆ ಹಿಂಸಿಸುವವನಾಗಿದ್ದು ನಂತರ ಅಪೊಸ್ತಲನಾಗಿ ಪರಿಣಮಿಸಿದ ಹಾಗೂ ಸಾ.ಶ. 65ರ ಸುಮಾರಿಗೆ ರೋಮನ್‌ ಸಾಮ್ರಾಟನಾದ ನೀರೊವಿನ ಕೈಕೆಳಗೆ ಹುತಾತ್ಮನಾಗಿ ಕೊಲ್ಲಲ್ಪಟ್ಟಿರಬಹುದಾದ ಪೌಲನಾಗಿದ್ದಾನೆ. (2 ಕೊರಿಂಥ 11:23-27; 2 ತಿಮೊಥೆಯ 4:6-8) ಅಂತಿಮವಾಗಿ, ಪ್ರಥಮ ಶತಮಾನದ ಕೊನೆಯಷ್ಟಕ್ಕೆ ಬರೆಯಲ್ಪಟ್ಟ ಪ್ರಕಟನೆ ಪುಸ್ತಕದಲ್ಲಿ, “ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ” ವೃದ್ಧನಾದ ಅಪೊಸ್ತಲ ಯೋಹಾನನು ಪತ್ಮೋಸ್‌ನ ದಂಡನೆಯ ದ್ವೀಪದಲ್ಲಿ ಬಂಧಿವಾಸಿಯಾಗಿ ಇಡಲ್ಪಟ್ಟದ್ದನ್ನು ನಾವು ಕಂಡುಕೊಳ್ಳುತ್ತೇವೆ. ಪ್ರಕಟನೆ ಪುಸ್ತಕದಲ್ಲಿ, ಪೆರ್ಗಮದಲ್ಲಿ ‘ಕೊಲ್ಲಲ್ಪಟ್ಟ ನಂಬಿಗಸ್ತನೂ ಸಾಕ್ಷಿಯೂ ಆದ ಅಂತಿಪನ’ ಕುರಿತಾದ ಉಲ್ಲೇಖವೂ ಇದೆ.​—ಪ್ರಕಟನೆ 1:9; 2:13.

11. ಆರಂಭದ ಕ್ರೈಸ್ತರ ಜೀವನಮಾರ್ಗವು, ಹಿಂಸೆಯ ವಿಷಯದಲ್ಲಿ ಯೇಸು ನುಡಿದ ಮಾತುಗಳು ಸತ್ಯವಾಗಿದ್ದವೆಂಬುದನ್ನು ಹೇಗೆ ಸಾಬೀತುಪಡಿಸಿತು?

11 ಇದೆಲ್ಲವೂ, ಯೇಸು ತನ್ನ ಶಿಷ್ಯರಿಗೆ ನುಡಿದ ಮಾತುಗಳನ್ನು ಸತ್ಯವೆಂದು ಸಾಬೀತುಪಡಿಸಿತು: “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಯೋಹಾನ 15:20) ನಂಬಿಗಸ್ತರಾಗಿದ್ದ ಆರಂಭದ ಕ್ರೈಸ್ತರು, “ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು” ಎಂಬ ಕರ್ತನಾದ ಯೇಸು ಕ್ರಿಸ್ತನಿಂದ ಕೊಡಲ್ಪಟ್ಟ ನೇಮಕವನ್ನು ಪೂರೈಸಲಿಕ್ಕಾಗಿ, ಅಂತಿಮ ಪರೀಕ್ಷೆಯಾಗಿರುವ ಮರಣವನ್ನು​—ಯಾತನೆಯ ಮೂಲಕ, ಕಾಡುಮೃಗಗಳಿಗೆ ಆಹಾರವಾಗಿ ಎಸೆಯಲ್ಪಡುವ ಮೂಲಕ, ಅಥವಾ ಇನ್ನಿತರ ವಿಧಗಳಲ್ಲಿ​—ಸಹ ಎದುರಿಸಲು ಸಿದ್ಧರಾಗಿದ್ದರು.​—ಅ. ಕೃತ್ಯಗಳು 1:8.

12. ಕ್ರೈಸ್ತರ ಹಿಂಸೆಯು ಕೇವಲ ಇತಿಹಾಸದ ನಡೆದುಹೋದ ಒಂದು ಘಟನೆಯಾಗಿಲ್ಲವೇಕೆ?

12 ಯೇಸುವಿನ ಹಿಂಬಾಲಕರೊಂದಿಗೆ ನಡೆದಿರುವ ಅಂಥ ಕ್ರೂರ ದುರುಪಚಾರವು ಕೇವಲ ಗತಕಾಲದಲ್ಲಿ ಸಂಭವಿಸಿತಷ್ಟೆ ಎಂದು ಯಾರಾದರೂ ನೆನಸುವಲ್ಲಿ, ಅವರ ಅಭಿಪ್ರಾಯವು ಸಂಪೂರ್ಣವಾಗಿ ತಪ್ಪು. ನಾವು ಈಗಾಗಲೇ ನೋಡಿರುವಂತೆ, ಅತ್ಯಧಿಕ ಪ್ರಮಾಣದಲ್ಲಿ ಕಷ್ಟತೊಂದರೆಗಳನ್ನು ಅನುಭವಿಸಿರುವ ಪೌಲನು ತಾನೇ ಬರೆದುದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಹಿಂಸೆಯ ಕುರಿತು ಪೇತ್ರನು ಹೇಳಿದ್ದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಅಂದಿನಿಂದ ಹಿಡಿದು ವಿಷಯಗಳ ವ್ಯವಸ್ಥೆಯ ಈ “ಕಡೇ ದಿವಸಗಳ” ತನಕವೂ, ಯೆಹೋವನ ಜನರು ದ್ವೇಷ ಹಾಗೂ ಹಗೆತನಗಳಿಗೆ ಬಲಿಪಶುಗಳಾಗುವುದು ಮುಂದುವರಿಯುತ್ತಾ ಇದೆ. (2 ತಿಮೊಥೆಯ 3:1) ಯೆಹೋವನ ಸಾಕ್ಷಿಗಳು ಭೂಮಿಯ ಪ್ರತಿಯೊಂದು ಮೂಲೆಯಲ್ಲೂ, ನಿರಂಕುಶ ಪ್ರಭುತ್ವದ ಕೆಳಗೂ ಪ್ರಜಾಪ್ರಭುತ್ವದ ದೇಶಗಳಲ್ಲೂ, ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ, ಒಂದಲ್ಲ ಒಂದು ಸಮಯಾವಧಿಯಲ್ಲಿ ಹಿಂಸೆಯನ್ನು ಅನುಭವಿಸಿದ್ದಾರೆ.

ಏಕೆ ದ್ವೇಷಿಸಲ್ಪಡುತ್ತಾರೆ ಮತ್ತು ಹಿಂಸಿಸಲ್ಪಡುತ್ತಾರೆ?

13. ಹಿಂಸೆಯ ವಿಷಯದಲ್ಲಿ ಯೆಹೋವನ ಆಧುನಿಕ ದಿನದ ಸೇವಕರು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

13 ಇಂದು ನಮ್ಮಲ್ಲಿ ಹೆಚ್ಚಿನವರಿಗೆ, ಸಾರಲು ಹಾಗೂ ಶಾಂತಿಯಿಂದ ಒಟ್ಟಿಗೆ ಕೂಡಿಬರಲು ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯ ಸಿಗುತ್ತಿದೆ. ಆದರೂ, “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ [“ಬದಲಾಗುತ್ತಾ,” NW]” ಇದೆ ಎಂಬ ಬೈಬಲಿನ ಮರುಜ್ಞಾಪನವನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಬೇಕು. (1 ಕೊರಿಂಥ 7:31) ವಿಷಯಗಳು ಎಷ್ಟು ಕ್ಷಿಪ್ರಗತಿಯಲ್ಲಿ ಬದಲಾಗಬಲ್ಲವೆಂದರೆ, ಒಂದುವೇಳೆ ನಾವು ಮಾನಸಿಕವಾಗಿ, ಭಾವನಾತ್ಮಕವಾಗಿ, ಮತ್ತು ಆತ್ಮಿಕವಾಗಿ ಸಿದ್ಧರಾಗಿಲ್ಲದಿರುವಲ್ಲಿ, ನಾವು ಸುಲಭವಾದ ರೀತಿಯಲ್ಲಿ ಎಡವಿಬೀಳಸಾಧ್ಯವಿದೆ. ಹಾಗಾದರೆ, ನಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನಾವೇನು ಮಾಡಸಾಧ್ಯವಿದೆ? ನಮ್ಮನ್ನು ಸಂರಕ್ಷಿಸಿಕೊಳ್ಳುವ ಅತ್ಯಂತ ಪರಿಣಾಮಕಾರಕ ವಿಧವು ಯಾವುದೆಂದರೆ, ಶಾಂತಿಪ್ರಿಯರಾದ ಮತ್ತು ನಿಯಮಪಾಲಕರಾದ ಕ್ರೈಸ್ತರು ಏಕೆ ದ್ವೇಷಿಸಲ್ಪಡುತ್ತಾರೆ ಮತ್ತು ಹಿಂಸಿಸಲ್ಪಡುತ್ತಾರೆ ಎಂಬುದನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಇಟ್ಟುಕೊಳ್ಳುವುದೇ ಆಗಿದೆ.

14. ಕ್ರೈಸ್ತರು ಹಿಂಸಿಸಲ್ಪಡಲು ಯಾವುದು ಕಾರಣವೆಂದು ಪೇತ್ರನು ಸೂಚಿಸುತ್ತಾನೆ?

14 ಅಪೊಸ್ತಲ ಪೇತ್ರನು ಈ ವಿಷಯದ ಕುರಿತು ತನ್ನ ಮೊದಲ ಪತ್ರದಲ್ಲಿ ಪ್ರಸ್ತಾಪಿಸಿದನು. ಈ ಪತ್ರವನ್ನು ಅವನು ಸಾ.ಶ. 62-64ರ ಸುಮಾರಿಗೆ ಬರೆದನು, ಮತ್ತು ಆಗ ರೋಮನ್‌ ಸಾಮ್ರಾಜ್ಯದಾದ್ಯಂತ ಇದ್ದ ಕ್ರೈಸ್ತರು ಪರೀಕ್ಷೆಗಳನ್ನು ಮತ್ತು ಹಿಂಸೆಯನ್ನು ಅನುಭವಿಸುತ್ತಿದ್ದರು. ಅವನು ಹೇಳಿದ್ದು: “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.” ತಾನು ಯಾವುದರ ಕುರಿತು ಮಾತಾಡುತ್ತಿದ್ದೇನೆ ಎಂಬುದನ್ನು ವಿವರಿಸಲಿಕ್ಕಾಗಿ ಪೇತ್ರನು ಮುಂದುವರಿಸುತ್ತಾ ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು. ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.” ಅವರು ಯಾವುದೇ ತಪ್ಪು ಕ್ರಿಯೆಗಳಿಗಾಗಿ ಅಲ್ಲ, ಬದಲಾಗಿ ಕ್ರೈಸ್ತರಾಗಿದ್ದರಿಂದ ಕಷ್ಟಾನುಭವಿಸುತ್ತಿದ್ದರು ಎಂಬುದನ್ನು ಪೇತ್ರನು ಸೂಚಿಸಿ ಹೇಳಿದನು. ಒಂದುವೇಳೆ ಅವರ ಸುತ್ತಲೂ ಇದ್ದ ಜನರಂತೆಯೇ ಅವರು “ಅಪರಿಮಿತವಾದ ಪಟಿಂಗತನದಲ್ಲಿ” ಮುಳುಗಿರುತ್ತಿದ್ದಲ್ಲಿ, ಆ ಜನರು ಅವರನ್ನು ಆದರಪ್ರೀತಿಗಳಿಂದ ಬರಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವರು ಕಷ್ಟಾನುಭವಿಸಲು ಕಾರಣವೇನೆಂದರೆ, ಅವರು ಕ್ರಿಸ್ತನ ಹಿಂಬಾಲಕರೋಪಾದಿ ತಮ್ಮ ಪಾತ್ರವನ್ನು ಪೂರೈಸಲು ಶ್ರಮಿಸುತ್ತಿದ್ದರು. ಇಂದು ಸಹ ಸತ್ಯ ಕ್ರೈಸ್ತರ ಸನ್ನಿವೇಶವು ಇದೇ ಆಗಿದೆ.​—1 ಪೇತ್ರ 4:4, 12, 15, 16.

15. ಇಂದು ಯೆಹೋವನ ಸಾಕ್ಷಿಗಳನ್ನು ಉಪಚರಿಸುವ ರೀತಿಯಲ್ಲಿ ಯಾವ ಭಿನ್ನತೆಯಿದೆ?

15 ಲೋಕದ ಅನೇಕ ಭಾಗಗಳಲ್ಲಿ, ತಮ್ಮ ಅಧಿವೇಶನಗಳಲ್ಲಿ ಮತ್ತು ನಿರ್ಮಾಣ ಯೋಜನೆಗಳಲ್ಲಿ ಯೆಹೋವನ ಸಾಕ್ಷಿಗಳು ತೋರಿಸುವ ಐಕ್ಯಭಾವ ಮತ್ತು ಸಹಕಾರಕ್ಕಾಗಿ, ಅವರ ಪ್ರಾಮಾಣಿಕತೆ ಹಾಗೂ ಶ್ರದ್ಧೆಗಾಗಿ, ತಮ್ಮ ಆದರ್ಶಪ್ರಾಯ ನೈತಿಕ ನಡತೆ ಹಾಗೂ ಕುಟುಂಬ ಜೀವನಕ್ಕಾಗಿ, ಮತ್ತು ಅವರ ಪ್ರಸನ್ನಕರ ಹೊರತೋರಿಕೆ ಹಾಗೂ ನಡತೆಗಾಗಿಯೂ ಅವರನ್ನು ಸಾರ್ವಜನಿಕವಾಗಿ ಪ್ರಶಂಸಿಸಲಾಗುತ್ತದೆ. * ಇನ್ನೊಂದು ಕಡೆಯಲ್ಲಿ, ಈ ಲೇಖನವು ಸಿದ್ಧಪಡಿಸಲ್ಪಡುತ್ತಿರುವಾಗ, ಅವರ ಸಾಕ್ಷಿಕಾರ್ಯವು 28ರಷ್ಟು ದೇಶಗಳಲ್ಲಿ ನಿಷೇಧಕ್ಕೆ ಅಥವಾ ನಿರ್ಬಂಧಕ್ಕೆ ಒಳಗಾಗಿತ್ತು, ಮತ್ತು ಅನೇಕ ಸಾಕ್ಷಿಗಳು ತಮ್ಮ ನಂಬಿಕೆಯ ನಿಮಿತ್ತ ಶಾರೀರಿಕ ದೌರ್ಜನ್ಯ ಹಾಗೂ ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದರ್ಶಪ್ರಾಯ ನಡತೆಯುಳ್ಳ ಸಾಕ್ಷಿಗಳ ಮೇಲೆ ಏಕೆ ದೌರ್ಜನ್ಯ ನಡೆಸಲಾಗುತ್ತದೆ? ಮತ್ತು ದೇವರು ಏಕೆ ಇದನ್ನು ಅನುಮತಿಸುತ್ತಾನೆ?

16. ತನ್ನ ಜನರು ಹಿಂಸೆಯನ್ನು ಅನುಭವಿಸುವಂತೆ ದೇವರು ಅನುಮತಿಸಲು ಅತಿ ಪ್ರಾಮುಖ್ಯ ಕಾರಣವು ಯಾವುದಾಗಿದೆ?

16 ಎಲ್ಲಕ್ಕಿಂತಲೂ ಮೊದಲಾಗಿ, ಜ್ಞಾನೋಕ್ತಿ 27:11ರ ಮಾತುಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳತಕ್ಕದ್ದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” ಹೌದು, ಇದು ವಿಶ್ವ ಪರಮಾಧಿಕಾರದ ಕುರಿತಾದ ಅತಿ ಪುರಾತನ ವಿವಾದಾಂಶವಾಗಿದೆ. ಶತಮಾನಗಳಾದ್ಯಂತ ಯೆಹೋವನಿಗೆ ತಮ್ಮ ಸಮಗ್ರತೆಯನ್ನು ರುಜುಪಡಿಸಿರುವವರೆಲ್ಲರಿಂದ ಅತ್ಯಧಿಕ ಪ್ರಮಾಣದ ಸಾಕ್ಷ್ಯವು ಒದಗಿಸಲ್ಪಟ್ಟಿರುವುದಾದರೂ, ನೀತಿವಂತನಾಗಿದ್ದ ಯೋಬನ ದಿನಗಳಲ್ಲಿ ಸೈತಾನನು ಮಾಡಿದಂತೆಯೇ ಇಂದು ಸಹ ಯೆಹೋವನನ್ನು ಮೂದಲಿಸುವುದನ್ನು ಅವನು ನಿಲ್ಲಿಸಿಲ್ಲ. (ಯೋಬ 1:9-11; 2:4, 5) ಲೋಕವ್ಯಾಪಕವಾಗಿ ನಿಷ್ಠಾವಂತ ಪ್ರಜೆಗಳು ಹಾಗೂ ಪ್ರತಿನಿಧಿಗಳೊಂದಿಗೆ ದೇವರ ರಾಜ್ಯವು ಈಗ ಸ್ಥಿರವಾಗಿ ಸ್ಥಾಪಿತವಾಗಿರುವುದರಿಂದ, ತನ್ನ ಪ್ರತಿಪಾದನೆಯನ್ನು ಸಾಧಿಸಲಿಕ್ಕಾಗಿರುವ ತನ್ನ ಅಂತಿಮ ಪ್ರಯತ್ನದಲ್ಲಿ ಸೈತಾನನು ಇನ್ನೂ ಹೆಚ್ಚು ರೋಷೋನ್ಮತ್ತನಾಗಿದ್ದಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಇವರ ಮೇಲೆ ಯಾವುದೇ ದುಸ್ಥಿತಿ ಅಥವಾ ಕಷ್ಟತೊಂದರೆಗಳು ಬಂದರೂ ಇವರು ದೇವರಿಗೆ ನಂಬಿಗಸ್ತರಾಗಿ ಉಳಿಯುವರೋ? ಇದು, ಯೆಹೋವನ ಪ್ರತಿಯೊಬ್ಬ ಸೇವಕನು ವೈಯಕ್ತಿಕವಾಗಿ ಉತ್ತರವನ್ನು ಕೊಡಬೇಕಾದ ಒಂದು ಪ್ರಶ್ನೆಯಾಗಿದೆ.​—ಪ್ರಕಟನೆ 12:​12, 17.

17. “ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು” ಎಂಬ ಮಾತುಗಳ ಮೂಲಕ ಯೇಸು ಏನನ್ನು ಅರ್ಥೈಸಿದನು?

17 “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” (NW) ಸಮಯದಲ್ಲಿ ಸಂಭವಿಸಲಿರುವ ಘಟನೆಗಳ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಳುತ್ತಿದ್ದಾಗ, ಯೆಹೋವನು ತನ್ನ ಸೇವಕರ ಮೇಲೆ ಹಿಂಸೆಯನ್ನು ಏಕೆ ಅನುಮತಿಸುತ್ತಾನೆ ಎಂಬುದಕ್ಕೆ ಇನ್ನೊಂದು ಕಾರಣವನ್ನು ಅವನು ಸೂಚಿಸಿದನು. ಅವನು ಅವರಿಗೆ ಹೇಳಿದ್ದು: “ನಿಮ್ಮನ್ನು . . . ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ತೆಗೆದುಕೊಂಡುಹೋಗಿ ಹಿಂಸೆಪಡಿಸುವರು. ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು.” (ಮತ್ತಾಯ 24:3, 9; ಲೂಕ 21:12, 13) ಹೆರೋದನ ಮುಂದೆ ಮತ್ತು ಪೊಂತ್ಯ ಪಿಲಾತನ ಮುಂದೆ ಸ್ವತಃ ಯೇಸುವೇ ಸಾಕ್ಷಿ ನೀಡಿದನು. ಅಪೊಸ್ತಲ ಪೌಲನು ಸಹ “ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ” ಕರೆದೊಯ್ಯಲ್ಪಟ್ಟನು. ಕರ್ತನಾದ ಯೇಸು ಕ್ರಿಸ್ತನ ಮೂಲಕ ನಿರ್ದೇಶಿಸಲ್ಪಟ್ಟ ಪೌಲನು, “ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ” ಎಂದು ಘೋಷಿಸಿದಾಗ, ಆ ಕಾಲದ ಅತ್ಯಂತ ಶಕ್ತಿಶಾಲಿ ಅಧಿಕಾರಿಗೆ ಅವನು ಸಾಕ್ಷಿಯನ್ನು ನೀಡುವ ಪ್ರಯತ್ನವನ್ನು ಮಾಡಿದನು. (ಅ. ಕೃತ್ಯಗಳು 23:11; 25:8-12) ತದ್ರೀತಿಯಲ್ಲಿ ಇಂದು, ಪಂಥಾಹ್ವಾನದಾಯಕ ಸನ್ನಿವೇಶಗಳ ಫಲಿತಾಂಶವಾಗಿ, ಅನೇಕವೇಳೆ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅತ್ಯುತ್ತಮ ಸಾಕ್ಷಿಯನ್ನು ನೀಡಲು ಸಾಧ್ಯವಾಗಿದೆ. *

18, 19. (ಎ) ಪರೀಕ್ಷೆಗಳನ್ನು ತಾಳಿಕೊಳ್ಳುವುದು ನಮಗೆ ಹೇಗೆ ಪ್ರಯೋಜನದಾಯಕವಾಗಿದೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?

18 ಕೊನೆಯದಾಗಿ, ಪರೀಕ್ಷೆಗಳು ಮತ್ತು ಸಂಕಟಗಳನ್ನು ತಾಳಿಕೊಳ್ಳುವುದರಿಂದ ವೈಯಕ್ತಿಕವಾಗಿ ನಮಗೇ ಪ್ರಯೋಜನ ಸಿಗಬಲ್ಲದು. ಯಾವ ಅರ್ಥದಲ್ಲಿ? ಶಿಷ್ಯ ಯಾಕೋಬನು ತನ್ನ ಜೊತೆ ಕ್ರೈಸ್ತರಿಗೆ ಹೀಗೆ ನೆನಪು ಹುಟ್ಟಿಸಿದನು: “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.” ಹೌದು, ಹಿಂಸೆಯು ನಮ್ಮ ನಂಬಿಕೆಯನ್ನು ಪರಿಷ್ಕರಿಸಬಲ್ಲದು ಮತ್ತು ನಮ್ಮ ತಾಳ್ಮೆಯನ್ನು ಇನ್ನಷ್ಟು ಬಲಗೊಳಿಸಬಲ್ಲದು. ಹೀಗಿರುವುದರಿಂದ, ನಾವು ಹಿಂಸೆಯ ಕುರಿತು ಅತಿಯಾಗಿ ಭಯಪಡುವುದಿಲ್ಲ ಅಥವಾ ಅದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಇಲ್ಲವೆ ಅದನ್ನು ಕೊನೆಗಾಣಿಸಲಿಕ್ಕಾಗಿ ನಾವು ಅಶಾಸ್ತ್ರೀಯ ಮಾಧ್ಯಮಗಳನ್ನು ಬಳಸುವುದಿಲ್ಲ. ಅದಕ್ಕೆ ಬದಲಾಗಿ, ನಾವು ಯಾಕೋಬನ ಈ ಬುದ್ಧಿವಾದಕ್ಕೆ ಕಿವಿಗೊಡುತ್ತೇವೆ: “ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.”​—ಯಾಕೋಬ 1:​2-4.

19 ದೇವರ ನಂಬಿಗಸ್ತ ಸೇವಕರು ಏಕೆ ಹಿಂಸಿಸಲ್ಪಡುತ್ತಾರೆ ಮತ್ತು ಯೆಹೋವನು ಏಕೆ ಅದನ್ನು ಅನುಮತಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ದೇವರ ವಾಕ್ಯವು ನಮಗೆ ಸಹಾಯಮಾಡುತ್ತದಾದರೂ, ಇದು ಹಿಂಸೆಯನ್ನು ತಾಳಿಕೊಳ್ಳುವುದನ್ನು ಸುಲಭವಾದದ್ದಾಗಿ ಮಾಡುತ್ತದೆ ಎಂದೇನಿಲ್ಲ. ಹಿಂಸೆಯನ್ನು ತಾಳಿಕೊಳ್ಳಲು ಯಾವುದು ನಮ್ಮನ್ನು ಬಲಪಡಿಸಬಲ್ಲದು? ಅದನ್ನು ಎದುರಿಸುವಾಗ ನಾವೇನು ಮಾಡಸಾಧ್ಯವಿದೆ? ಈ ಪ್ರಮುಖ ವಿಷಯಗಳನ್ನು ನಾವು ಮುಂದಿನ ಲೇಖನದಲ್ಲಿ ಪರಿಗಣಿಸುವೆವು.

[ಪಾದಟಿಪ್ಪಣಿಗಳು]

^ ಪ್ಯಾರ. 15 ಕಾವಲಿನಬುರುಜು ಪತ್ರಿಕೆಯ ಜನವರಿ 15, 2002ರ ಸಂಚಿಕೆಯ 19-20ನೆಯ ಪುಟಗಳನ್ನು ಮತ್ತು ಸೆಪ್ಟೆಂಬರ್‌ 15, 2001ರ 8-9ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 17 ಆಗಸ್ಟ್‌ 15, 2001ರ ಕಾವಲಿನಬುರುಜು ಪತ್ರಿಕೆಯ 8ನೆಯ ಪುಟವನ್ನು ನೋಡಿರಿ.

ನೀವು ವಿವರಿಸಬಲ್ಲಿರೋ?

• ಯೇಸು ಪ್ರಧಾನವಾಗಿ ಯಾವ ಅರ್ಥದಲ್ಲಿ ಒಬ್ಬ ಹುತಾತ್ಮನಾಗಿದ್ದನು?

• ಹಿಂಸೆಯು ಪ್ರಥಮ ಶತಮಾನದ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಿತು?

• ಪೇತ್ರನಿಂದ ವಿವರಿಸಲ್ಪಟ್ಟಂತೆ, ಆರಂಭದ ಕ್ರೈಸ್ತರು ಏಕೆ ಹಿಂಸಿಸಲ್ಪಟ್ಟರು?

• ಯಾವ ಕಾರಣಗಳಿಗಾಗಿ ಯೆಹೋವನು ತನ್ನ ಸೇವಕರ ಮೇಲೆ ಹಿಂಸೆಯನ್ನು ಅನುಮತಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10, 11ರಲ್ಲಿರುವ ಚಿತ್ರಗಳು]

ಪ್ರಥಮ ಶತಮಾನದ ಕ್ರೈಸ್ತರು ಕಷ್ಟಾನುಭವಿಸಿದ್ದು ತಪ್ಪು ಕ್ರಿಯೆಗಳಿಗಾಗಿ ಅಲ್ಲ, ಬದಲಾಗಿ ಅವರು ಕ್ರೈಸ್ತರಾಗಿದ್ದರಿಂದಲೇ

ಪೌಲ

ಯೋಹಾನ

ಅಂತಿಪ

ಯಾಕೋಬ

ಸ್ತೆಫನ