ನೀವು “ಮುಳ್ಳುಗೋಲನ್ನು ಒದೆಯು”ತ್ತಿದ್ದೀರೋ?
ನೀವು “ಮುಳ್ಳುಗೋಲನ್ನು ಒದೆಯು”ತ್ತಿದ್ದೀರೋ?
ಬೈಬಲ್ ಸಮಯಗಳಲ್ಲಿ, ದನಗಳನ್ನು ತಿವಿಯುವ ಮುಳ್ಳುಗೋಲು, ಅಂದರೆ ಸಾಮಾನ್ಯವಾಗಿ ಚೂಪಾದ ಲೋಹದ ತುದಿಯನ್ನು ಹೊಂದಿರುವಂಥ ಉದ್ದವಾದ ರಾಡು, ಭಾರವನ್ನು ಎಳೆಯಲು ಉಪಯೋಗಿಸುವಂಥ ಪ್ರಾಣಿಗಳನ್ನು ಮುಂದೆ ಓಡಿಸಲಿಕ್ಕಾಗಿ ಅಥವಾ ಸರಿಯಾದ ದಿಕ್ಕಿನಲ್ಲಿ ನಡೆಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಒಂದುವೇಳೆ ಆ ಪ್ರಾಣಿಯು ಮುಳ್ಳುಗೋಲಿನ ತಿವಿತಗಳನ್ನು ಪ್ರತಿರೋಧಿಸಲಿಕ್ಕಾಗಿ ಹಟದಿಂದ ಅದರ ವಿರುದ್ಧ ಗುದ್ದುತ್ತಿದ್ದಲ್ಲಿ ಪರಿಣಾಮವೇನಾಗುತ್ತಿತ್ತು? ಇದರಿಂದ ಬಿಡುಗಡೆಯನ್ನು ಪಡೆಯುವುದಕ್ಕೆ ಬದಲಾಗಿ, ಅದು ತನಗೇ ಇನ್ನಷ್ಟು ನೋವನ್ನು ಬರಮಾಡಿಕೊಳ್ಳುತ್ತಿತ್ತು.
ಯೇಸುವಿನ ಶಿಷ್ಯರಲ್ಲಿ ಕೆಲವರನ್ನು ಬಂಧಿಸಲಿಕ್ಕಾಗಿ ಹೋಗುತ್ತಿದ್ದಂಥ ಸೌಲನೆಂಬ ಹೆಸರಿನ ವ್ಯಕ್ತಿಗೆ ಪುನರುತ್ಥಿತ ಯೇಸು ಕ್ರಿಸ್ತನು ಕಾಣಿಸಿಕೊಂಡಾಗ, ಅವನು ಮುಳ್ಳುಗೋಲಿನ ಕುರಿತು ಮಾತಾಡಿದನು. ಕಣ್ಣನ್ನು ಕುರುಡುಗೊಳಿಸುವಷ್ಟು ಪ್ರಕಾಶಮಾನವಾದ ಬೆಳಕಿನ ಮಧ್ಯದಿಂದ ಯೇಸು ಹೀಗೆ ಹೇಳುವುದನ್ನು ಸೌಲನು ಕೇಳಿಸಿಕೊಂಡನು: “ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ.” ಕ್ರೈಸ್ತರನ್ನು ದುರುಪಚರಿಸುವ ಮೂಲಕ ಸೌಲನು ನಿಜವಾಗಿ ದೇವರ ವಿರುದ್ಧ ಹೋರಾಡುತ್ತಿದ್ದನು, ಅಂದರೆ ಸ್ವತಃ ತನಗೆ ಕೇವಲ ಹಾನಿಯನ್ನು ಉಂಟುಮಾಡಸಾಧ್ಯವಿದ್ದ ಮಾರ್ಗವನ್ನು ಬೆನ್ನಟ್ಟುತ್ತಿದ್ದನು.—ಅ. ಕೃತ್ಯಗಳು 26:14.
ನಾವು ಸಹ ನಮಗೆ ಅರಿವಿಲ್ಲದೇ “ಮುಳ್ಳುಗೋಲನ್ನು ಒದೆಯು”ತ್ತಿರಬಹುದೋ? ‘ಜ್ಞಾನಿಗಳ ಮಾತುಗಳನ್ನು’ ಬೈಬಲು, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲಿಕ್ಕಾಗಿ ನಮ್ಮನ್ನು ಪ್ರಚೋದಿಸುವಂಥ ಮುಳ್ಳುಗೋಲುಗಳಿಗೆ ಹೋಲಿಸುತ್ತದೆ. (ಪ್ರಸಂಗಿ 12:11) ಒಂದುವೇಳೆ ನಾವು ಅನುಮತಿಸುವಲ್ಲಿ, ದೇವರ ವಾಕ್ಯದಲ್ಲಿರುವ ಪ್ರೇರಿತ ಸಲಹೆಯು ನಮ್ಮನ್ನು ಪ್ರಚೋದಿಸಬಲ್ಲದು ಮತ್ತು ಸರಿಯಾಗಿ ಮಾರ್ಗದರ್ಶಿಸಬಲ್ಲದು. (2 ತಿಮೊಥೆಯ 3:16) ಅದರ ತಿವಿತಗಳನ್ನು ಅಂದರೆ ಪ್ರಚೋದನೆಗಳನ್ನು ಪ್ರತಿರೋಧಿಸುವುದರಿಂದ ನಮಗೆ ಕೇವಲ ಹಾನಿಯೇ ಆಗಸಾಧ್ಯವಿದೆ.
ಯೇಸುವಿನ ಮಾತುಗಳನ್ನು ಸೌಲನು ಹೃದಯಕ್ಕೆ ತೆಗೆದುಕೊಂಡು, ತನ್ನ ಮಾರ್ಗಕ್ರಮವನ್ನು ಬದಲಾಯಿಸಿದನು, ಮತ್ತು ಸಮಯಾನಂತರ ಅತಿ ಪ್ರಿಯನಾದ ಕ್ರೈಸ್ತ ಅಪೊಸ್ತಲ ಪೌಲನಾದನು. ತದ್ರೀತಿಯಲ್ಲಿ ನಾವು ದೈವಿಕ ಸಲಹೆಗೆ ಕಿವಿಗೊಡುವುದು, ನಮಗೇ ನಿತ್ಯ ಆಶೀರ್ವಾದಗಳನ್ನು ತರುವುದು.—ಜ್ಞಾನೋಕ್ತಿ 3:1-6.
[ಪುಟ 32ರಲ್ಲಿರುವ ಚಿತ್ರ ಕೃಪೆ]
L. Chapons/Illustrirte Familien-Bibel nach der deutschen Uebersetzung Dr. Martin Luthers