ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವುದು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವುದು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವುದು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

“ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.”​—1 ಪೇತ್ರ 2:20.

1. ಸತ್ಯ ಕ್ರೈಸ್ತರು ತಮ್ಮ ಸಮರ್ಪಣೆಗೆ ಅನುಸಾರವಾಗಿ ಜೀವಿಸುವುದರ ಕುರಿತು ಆಸಕ್ತರಾಗಿರುವುದರಿಂದ, ಯಾವ ಪ್ರಶ್ನೆಯನ್ನು ಪರಿಗಣಿಸಬೇಕಾಗಿದೆ?

ಕ್ರೈಸ್ತರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಮತ್ತು ಆತನ ಚಿತ್ತವನ್ನು ಮಾಡಲು ಬಯಸುತ್ತಾರೆ. ತಮ್ಮ ಸಮರ್ಪಣೆಗೆ ಅನುಸಾರವಾಗಿ ಜೀವಿಸಲಿಕ್ಕಾಗಿ, ತಮ್ಮ ಆದರ್ಶಪ್ರಾಯ ಮಾದರಿಯಾಗಿರುವ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯಲಿಕ್ಕಾಗಿ ಮತ್ತು ಸತ್ಯಕ್ಕೋಸ್ಕರ ಸಾಕ್ಷಿಹೇಳಲಿಕ್ಕಾಗಿ ಅವರು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ. (ಮತ್ತಾಯ 16:24; ಯೋಹಾನ 18:37; 1 ಪೇತ್ರ 2:21) ಆದರೂ, ಯೇಸುವೂ ಇತರ ನಂಬಿಗಸ್ತ ಜನರೂ ತಮ್ಮ ನಂಬಿಕೆಗಾಗಿ ಹುತಾತ್ಮರೋಪಾದಿ ತಮ್ಮ ಜೀವಗಳನ್ನು ತ್ಯಾಗಮಾಡಿದರು. ಎಲ್ಲಾ ಕ್ರೈಸ್ತರು ತಮ್ಮ ನಂಬಿಕೆಗಾಗಿ ಸಾಯುವುದನ್ನು ನಿರೀಕ್ಷಿಸಸಾಧ್ಯವಿದೆ ಎಂಬುದನ್ನು ಇದು ಅರ್ಥೈಸುತ್ತದೋ?

2. ಪರೀಕ್ಷೆಗಳು ಮತ್ತು ಕಷ್ಟಾನುಭವದ ಕುರಿತಾಗಿ ಕ್ರೈಸ್ತರ ದೃಷ್ಟಿಕೋನವೇನು?

2 ಕ್ರೈಸ್ತರೋಪಾದಿ ನಾವು ಮರಣಪರ್ಯಂತರ ನಂಬಿಗಸ್ತರಾಗಿರುವಂತೆ ಉತ್ತೇಜಿಸಲ್ಪಟ್ಟಿದ್ದೇವಾದರೂ, ನಮ್ಮ ನಂಬಿಕೆಗೋಸ್ಕರ ಅನಿವಾರ್ಯವಾಗಿ ಜೀವವನ್ನು ಕೊಡಬೇಕೆಂದು ಉತ್ತೇಜಿಸಲ್ಪಟ್ಟಿಲ್ಲ. (2 ತಿಮೊಥೆಯ 4:7; ಪ್ರಕಟನೆ 2:10) ಇದರ ಅರ್ಥವೇನೆಂದರೆ, ನಮ್ಮ ನಂಬಿಕೆಗೋಸ್ಕರ ನಾವು ಕಷ್ಟವನ್ನು ಅನುಭವಿಸಲು, ಮತ್ತು ಅಗತ್ಯ ಬಿದ್ದರೆ ಸಾಯಲು ಸಿದ್ಧರಾಗಿರುವುದಾದರೂ, ಹಾಗೆ ಆಗಲೇಬೇಕೆಂಬ ಕಡುಬಯಕೆ ನಮಗಿಲ್ಲ. ನಮಗೆ ಕಷ್ಟವನ್ನು ಅನುಭವಿಸುವುದರಲ್ಲಿ ಒಂದು ರೀತಿಯ ಸುಖವಾಗಲಿ, ನೋವನ್ನು ಅಥವಾ ಅವಮಾನವನ್ನು ತಾಳಿಕೊಳ್ಳುವುದರಲ್ಲಿ ಯಾವುದೇ ರೀತಿಯ ಆನಂದವಾಗಲಿ ಸಿಗುವುದಿಲ್ಲ. ಆದರೂ, ಪರೀಕ್ಷೆಗಳು ಮತ್ತು ಹಿಂಸೆಗಳು ನಿರೀಕ್ಷಿಸಬಹುದಾದ ಸಂಗತಿಗಳಾಗಿರುವುದರಿಂದ, ಅವು ನಿಜವಾಗಿಯೂ ನಮ್ಮ ಮೇಲೆ ಬರುವಾಗ ನಾವು ಹೇಗೆ ಕ್ರಿಯೆಗೈಯಬಹುದು ಎಂಬುದನ್ನು ನಾವು ಜಾಗರೂಕತೆಯಿಂದ ಪರಿಗಣಿಸುವ ಅಗತ್ಯವಿದೆ.

ಪರೀಕ್ಷೆಯ ಕೆಳಗೆ ನಂಬಿಗಸ್ತರು

3. ಹಿಂಸೆಯ ಕುರಿತಾದ ಯಾವ ಬೈಬಲ್‌ ಉದಾಹರಣೆಗಳನ್ನು ನೀವು ತಿಳಿಸಸಾಧ್ಯವಿದೆ? (ಮುಂದಿನ ಪುಟದಲ್ಲಿರುವ “ಅವರು ಹಿಂಸೆಯೊಂದಿಗೆ ವ್ಯವಹರಿಸಿದ ವಿಧ” ಎಂಬ ಚೌಕವನ್ನು ನೋಡಿರಿ.)

3 ಗತಸಮಯಗಳಲ್ಲಿ ದೇವರ ಸೇವಕರು ಪ್ರಾಣಾಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದಾಗ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ತೋರಿಸುವಂಥ ಅನೇಕಾನೇಕ ವೃತ್ತಾಂತಗಳನ್ನು ನಾವು ಬೈಬಲಿನಲ್ಲಿ ಕಂಡುಕೊಳ್ಳುತ್ತೇವೆ. ಅವರು ಪ್ರತಿಕ್ರಿಯಿಸಿದಂಥ ಬೇರೆ ಬೇರೆ ವಿಧಗಳು, ಇಂದಿನ ಕ್ರೈಸ್ತರು ಒಂದುವೇಳೆ ತದ್ರೀತಿಯ ಪಂಥಾಹ್ವಾನಗಳನ್ನು ಎದುರಿಸಬೇಕಾಗಿ ಬರುವಲ್ಲಿ, ಅವರು ಏನು ಮಾಡಬೇಕೆಂಬುದರ ಕುರಿತು ಮಾರ್ಗದರ್ಶನವನ್ನು ಒದಗಿಸುತ್ತವೆ. “ಅವರು ಹಿಂಸೆಯೊಂದಿಗೆ ವ್ಯವಹರಿಸಿದ ವಿಧ” ಎಂಬ ಚೌಕದಲ್ಲಿರುವ ವೃತ್ತಾಂತಗಳನ್ನು ಪರಿಗಣಿಸಿರಿ ಮತ್ತು ಅವುಗಳಿಂದ ನೀವು ಏನನ್ನು ಕಲಿಯಸಾಧ್ಯವಿದೆ ಎಂಬುದನ್ನು ನೋಡಿರಿ.

4. ಯೇಸು ಮತ್ತು ಇತರ ನಂಬಿಗಸ್ತ ಸೇವಕರು ಪರೀಕ್ಷೆಯ ಕೆಳಗಿದ್ದಾಗ ಅವರು ತೋರಿಸಿದ ಪ್ರತಿಕ್ರಿಯೆಯ ಕುರಿತು ಏನು ಹೇಳಸಾಧ್ಯವಿದೆ?

4 ಸನ್ನಿವೇಶಗಳ ಮೇಲೆ ಹೊಂದಿಕೊಂಡು ಯೇಸು ಮತ್ತು ದೇವರ ಇತರ ನಂಬಿಗಸ್ತ ಸೇವಕರು ಹಿಂಸೆಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದರಾದರೂ, ಅವರೆಂದೂ ತಮ್ಮ ಜೀವವನ್ನು ಅನಗತ್ಯವಾಗಿ ಅಪಾಯಕ್ಕೊಡ್ಡಲಿಲ್ಲ ಎಂಬುದಂತೂ ಸುಸ್ಪಷ್ಟ. ಅವರು ಅಪಾಯಕರ ಸನ್ನಿವೇಶಗಳಲ್ಲಿದ್ದಾಗ, ಅವರು ಧೈರ್ಯಶಾಲಿಗಳಾಗಿದ್ದರು ಮತ್ತು ಅದೇ ಸಮಯದಲ್ಲಿ ಜಾಣರೂ ಆಗಿದ್ದರು. (ಮತ್ತಾಯ 10:​16, 23) ಸಾರುವ ಕೆಲಸವನ್ನು ಮುಂದುವರಿಸುವುದು ಮತ್ತು ಯೆಹೋವನಿಗೆ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಅವರ ಮುಖ್ಯ ಧ್ಯೇಯವಾಗಿತ್ತು. ಬೇರೆ ಬೇರೆ ಸನ್ನಿವೇಶಗಳಲ್ಲಿ ಅವರು ತೋರಿಸಿದ ಪ್ರತಿಕ್ರಿಯೆಯು, ಇಂದು ಪರೀಕ್ಷೆಗಳನ್ನು ಮತ್ತು ಹಿಂಸೆಯನ್ನು ಎದುರಿಸುವಂಥ ಕ್ರೈಸ್ತರಿಗೆ ಮಾದರಿಗಳನ್ನು ಒದಗಿಸುತ್ತದೆ.

5. ಮಲಾವಿಯಲ್ಲಿ 1960ಗಳಲ್ಲಿ ಯಾವ ಹಿಂಸೆಯು ಆರಂಭವಾಯಿತು, ಮತ್ತು ಅಲ್ಲಿನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸಿದರು?

5 ಆಧುನಿಕ ಸಮಯಗಳಲ್ಲಿ, ಯೆಹೋವನ ಜನರು ಯುದ್ಧಗಳು, ನಿಷೇಧಗಳು, ಅಥವಾ ನೇರವಾದ ಹಿಂಸೆಯ ಕಾರಣದಿಂದ ವಿಪರೀತ ಕಷ್ಟತೊಂದರೆಗಳು ಮತ್ತು ನಷ್ಟವನ್ನು ಅನುಭವಿಸಿದ್ದಾರೆ. ಉದಾಹರಣೆಗೆ, 1960ಗಳಲ್ಲಿ, ಮಲಾವಿಯಲ್ಲಿದ್ದ ಯೆಹೋವನ ಸಾಕ್ಷಿಗಳು ಘೋರವಾಗಿ ಹಿಂಸಿಸಲ್ಪಟ್ಟರು. ಅವರ ರಾಜ್ಯ ಸಭಾಗೃಹಗಳು, ಮನೆಗಳು, ಆಹಾರ ಸರಬರಾಯಿಗಳು, ಮತ್ತು ವ್ಯಾಪಾರಗಳು, ಬಹುಮಟ್ಟಿಗೆ ಅವರ ಸೊತ್ತುಗಳೆಲ್ಲವೂ ನಾಶಪಡಿಸಲ್ಪಟ್ಟವು. ಅವರು ಹೊಡೆತಗಳಿಗೆ ಮತ್ತು ಇತರ ಭೀಕರ ಅನುಭವಗಳಿಗೆ ಗುರಿಪಡಿಸಲ್ಪಟ್ಟರು. ಆ ಸಹೋದರರು ಹೇಗೆ ಪ್ರತಿಕ್ರಿಯಿಸಿದರು? ಸಾವಿರಾರು ಮಂದಿ ತಮ್ಮ ಹಳ್ಳಿಗಳಿಂದ ಓಡಿಹೋಗಬೇಕಾಯಿತು. ಅನೇಕರು ಪೊದೆಗಾಡುಗಳಲ್ಲಿ ಆಶ್ರಯವನ್ನು ಪಡೆದುಕೊಂಡರು, ಇನ್ನಿತರರು ನೆರೆಹೊರೆಯಲ್ಲಿದ್ದ ಮೊಸಾಂಬೀಕ್‌ಗೆ ತಾತ್ಕಾಲಿಕವಾಗಿ ಗಡೀಪಾರುಮಾಡಲ್ಪಟ್ಟರು. ಅನೇಕ ನಂಬಿಗಸ್ತ ವ್ಯಕ್ತಿಗಳು ತಮ್ಮ ಜೀವಗಳನ್ನು ಕಳೆದುಕೊಂಡರಾದರೂ, ಇನ್ನಿತರರು ಅಪಾಯದ ಸ್ಥಳದಿಂದ ಪಲಾಯನಗೈಯುವ ಆಯ್ಕೆಯನ್ನು ಮಾಡಿದರು; ಇಂಥ ಸನ್ನಿವೇಶಗಳ ಕೆಳಗೆ ಇದು ಒಂದು ವಿವೇಕಭರಿತ ಮಾರ್ಗವಾಗಿತ್ತೆಂಬುದು ಸುವ್ಯಕ್ತ. ಹೀಗೆ ಮಾಡುವ ಮೂಲಕ ಸಹೋದರರು ಯೇಸುವಿನಿಂದ ಹಾಗೂ ಪೌಲನಿಂದ ಇಡಲ್ಪಟ್ಟ ಪೂರ್ವನಿದರ್ಶನವನ್ನು ಅನುಸರಿಸಿದರು.

6. ಉಗ್ರವಾದ ಹಿಂಸೆಯ ಎದುರಿನಲ್ಲಿಯೂ ಮಲಾವಿಯ ಸಾಕ್ಷಿಗಳು ಏನನ್ನು ತೊರೆಯಲಿಲ್ಲ?

6 ಮಲಾವಿಯ ಸಹೋದರರು ಅಲ್ಲಿಂದ ಸ್ಥಳಾಂತರಿಸಬೇಕಾಗಿತ್ತಾದರೂ ಅಥವಾ ಅಡಗಿಕೊಳ್ಳಬೇಕಾಗಿತ್ತಾದರೂ, ಅವರು ದೇವಪ್ರಭುತ್ವಾತ್ಮಕ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು ಮತ್ತು ಅದನ್ನು ಅನುಸರಿಸಿದರು ಹಾಗೂ ಅವರಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಗುಪ್ತವಾಗಿ ತಮ್ಮ ಕ್ರೈಸ್ತ ಚಟುವಟಿಕೆಗಳನ್ನು ಮುಂದುವರಿಸಿದರು. ಫಲಿತಾಂಶವೇನು? 1967ರಲ್ಲಿ ನಿಷೇಧವು ತರಲ್ಪಡುವುದಕ್ಕೆ ಸ್ವಲ್ಪ ಮುಂಚೆ ಅಲ್ಲಿ 18,519 ಮಂದಿ ರಾಜ್ಯ ಪ್ರಚಾರಕರ ಉಚ್ಚಾಂಕವನ್ನು ತಲಪಲಾಗಿತ್ತು. ಅಲ್ಲಿ ನಿಷೇಧವು ಇನ್ನೂ ಜಾರಿಯಲ್ಲಿದ್ದು, ಅನೇಕರು ಮೊಸಾಂಬೀಕ್‌ಗೆ ಪಲಾಯನಗೈದಿದ್ದರಾದರೂ, 1972ರಷ್ಟಕ್ಕೆ 23,398 ಮಂದಿ ಪ್ರಚಾರಕರ ಹೊಸ ಉಚ್ಚಾಂಕವು ವರದಿಸಲ್ಪಟ್ಟಿತು. ಪ್ರತಿ ತಿಂಗಳು ಶುಶ್ರೂಷೆಯಲ್ಲಿ ಅವರು ಸರಾಸರಿ 16 ತಾಸುಗಳಿಗಿಂತಲೂ ಹೆಚ್ಚು ಸಮಯವನ್ನು ವ್ಯಯಿಸಿದರು. ಅವರ ಕ್ರಿಯೆಗಳು ಯೆಹೋವನಿಗೆ ಸ್ತುತಿಯನ್ನು ತಂದವು ಮತ್ತು ಈ ವಿಪರೀತ ಕಷ್ಟಕರ ಸಮಯದಲ್ಲೆಲ್ಲಾ ಆ ನಂಬಿಗಸ್ತ ಸಹೋದರರ ಮೇಲೆ ಯೆಹೋವನ ಆಶೀರ್ವಾದವು ಇತ್ತು ಎಂಬುದರಲ್ಲಿ ಸಂಶಯವೇ ಇಲ್ಲ. *

7, 8. ವಿರೋಧವು ಸಮಸ್ಯೆಗಳನ್ನು ಉಂಟುಮಾಡುತ್ತಿರುವುದಾದರೂ, ಯಾವ ಕಾರಣಗಳಿಗಾಗಿ ಕೆಲವರು ಪಲಾಯನಗೈಯದಿರುವ ಆಯ್ಕೆಮಾಡುತ್ತಾರೆ?

7 ಇನ್ನೊಂದು ಕಡೆಯಲ್ಲಿ, ವಿರೋಧವು ಸಮಸ್ಯೆಗಳನ್ನು ಉಂಟುಮಾಡುತ್ತಿರುವಂಥ ದೇಶಗಳಲ್ಲಿರುವ ಕೆಲವು ಸಹೋದರರು ಸ್ಥಳಾಂತರಿಸಲು ಶಕ್ತರಾಗಿರುವುದಾದರೂ ಹಾಗೆ ಮಾಡದಿರಲು ನಿರ್ಧರಿಸಿರಬಹುದು. ಅಲ್ಲಿಂದ ಹೋಗುವುದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಬಹುದಾದರೂ, ಇದು ಇನ್ನಿತರ ಪಂಥಾಹ್ವಾನಗಳನ್ನು ತಂದೊಡ್ಡಸಾಧ್ಯವಿದೆ. ಉದಾಹರಣೆಗಾಗಿ, ಅವರು ಆತ್ಮಿಕವಾಗಿ ಪ್ರತ್ಯೇಕವಾಗಿರದೆ, ತಮ್ಮ ಕ್ರೈಸ್ತ ಸಹೋದರರ ಬಳಗದೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯಲು ಶಕ್ತರಾಗುವರೋ? ಬಹುಶಃ ತುಂಬ ಸಂಪದ್ಭರಿತವಾದ ಅಥವಾ ಪ್ರಾಪಂಚಿಕ ಏಳಿಗೆಗಾಗಿ ಹೆಚ್ಚೆಚ್ಚು ಸದವಕಾಶಗಳನ್ನು ಒದಗಿಸುವಂಥ ಒಂದು ದೇಶದಲ್ಲಿ ನೆಲೆಯೂರಲು ಹೆಣಗಾಡುತ್ತಿರುವಾಗ, ಅವರು ತಮ್ಮ ಆತ್ಮಿಕ ನಿಯತಕ್ರಮವನ್ನೂ ಕಾಪಾಡಿಕೊಂಡು ಹೋಗಲು ಶಕ್ತರಾಗಿರುವರೋ?​—1 ತಿಮೊಥೆಯ 6:9.

8 ತಮ್ಮ ಸಹೋದರರ ಆತ್ಮಿಕ ಹಿತಕ್ಷೇಮದ ಕುರಿತು ಚಿಂತಿತರಾಗಿರುವುದರಿಂದಲೇ ಇನ್ನಿತರರು ತಮ್ಮ ಸ್ಥಳದಿಂದ ಹೊರಟುಹೋಗುವ ಆಯ್ಕೆಮಾಡುವುದಿಲ್ಲ. ತಮ್ಮ ಸ್ವಂತ ಕ್ಷೇತ್ರದಲ್ಲೇ ಸಾರುತ್ತಾ ಇರುವುದಕ್ಕಾಗಿ ಮತ್ತು ಜೊತೆ ಆರಾಧಕರಿಗೆ ಉತ್ತೇಜನದ ಮೂಲವಾಗಿ ಇರಲಿಕ್ಕಾಗಿ ಅವರು ಸ್ವಸ್ಥಳದಲ್ಲೇ ಉಳಿಯುವ ಮತ್ತು ಸನ್ನಿವೇಶವನ್ನು ಎದುರಿಸುವ ಆಯ್ಕೆಮಾಡುತ್ತಾರೆ. (ಫಿಲಿಪ್ಪಿ 1:14) ಇಂಥ ಆಯ್ಕೆಯನ್ನು ಮಾಡುವ ಮೂಲಕ ಕೆಲವರು ತಮ್ಮ ದೇಶದಲ್ಲಿ ಕಾನೂನುಬದ್ಧ ವಿಜಯಗಳನ್ನು ಪಡೆದುಕೊಳ್ಳುವುದರಲ್ಲಿ ಒಂದು ಪಾತ್ರವನ್ನು ವಹಿಸಲೂ ಶಕ್ತರಾಗಿದ್ದಾರೆ. *

9. ಹಿಂಸೆಯ ಕಾರಣದಿಂದ ಸ್ವಸ್ಥಳದಲ್ಲೇ ಉಳಿಯಬೇಕೋ ಅಥವಾ ಸ್ಥಳಾಂತರಿಸಬೇಕೋ ಎಂಬುದನ್ನು ನಿರ್ಧರಿಸುವಾಗ ಒಬ್ಬ ವ್ಯಕ್ತಿಯು ಯಾವ ಅಂಶಗಳನ್ನು ಪರಿಗಣಿಸಬೇಕು?

9 ಸ್ವಸ್ಥಳದಲ್ಲೇ ಉಳಿಯುವುದೋ ಅಥವಾ ಸ್ಥಳಾಂತರಿಸುವುದೋ ಎಂಬುದು ಖಂಡಿತವಾಗಿಯೂ ಒಂದು ವೈಯಕ್ತಿಕ ಆಯ್ಕೆಯಾಗಿದೆ. ನಾವು ಪ್ರಾರ್ಥನಾಪೂರ್ವಕವಾಗಿ ಯೆಹೋವನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ ನಂತರವೇ ಅಂಥ ನಿರ್ಧಾರಗಳು ಮಾಡಲ್ಪಡಬೇಕು ಎಂಬುದಂತೂ ನಿಶ್ಚಯ. ನಾವು ಯಾವುದೇ ಮಾರ್ಗವನ್ನು ಆಯ್ಕೆಮಾಡುವುದಾದರೂ, ಅಪೊಸ್ತಲ ಪೌಲನ ಮಾತುಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ರೋಮಾಪುರ 14:12) ಈ ಮುಂಚೆ ನಾವು ಗಮನಿಸಿದಂತೆ, ಯೆಹೋವನು ನಮ್ಮಿಂದ ಅಪೇಕ್ಷಿಸುವ ವಿಷಯವೇನೆಂದರೆ, ತನ್ನ ಸೇವಕರಲ್ಲಿ ಪ್ರತಿಯೊಬ್ಬರೂ ಎಲ್ಲಾ ರೀತಿಯ ಸನ್ನಿವೇಶಗಳ ಕೆಳಗೆ ನಂಬಿಗಸ್ತರಾಗಿ ಉಳಿಯಬೇಕೆಂದೇ. ಆತನ ಸೇವಕರಲ್ಲಿ ಕೆಲವರು ಇಂದು ಪರೀಕ್ಷೆಗಳನ್ನು ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ; ಇನ್ನಿತರರು ಸಮಯಾನಂತರ ಎದುರಿಸಬಹುದು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪರೀಕ್ಷಿಸಲ್ಪಡುವರು ಮತ್ತು ಯಾರೊಬ್ಬರೂ ಇದರಿಂದ ವಿನಾಯಿತಿ ಪಡೆಯಲು ನಿರೀಕ್ಷಿಸಸಾಧ್ಯವಿಲ್ಲ. (ಯೋಹಾನ 15:​19, 20) ಯೆಹೋವನ ಸಮರ್ಪಿತ ಸೇವಕರೋಪಾದಿ ನಾವು, ಯೆಹೋವನ ಹೆಸರಿನ ಪವಿತ್ರೀಕರಣ ಹಾಗೂ ಆತನ ಪರಮಾಧಿಕಾರದ ನಿರ್ದೋಷೀಕರಣದ ಕುರಿತಾದ ವಿಶ್ವ ವಿವಾದಾಂಶದಿಂದ ನುಣುಚಿಕೊಳ್ಳಸಾಧ್ಯವಿಲ್ಲ.​—ಯೆಹೆಜ್ಕೇಲ 38:23; ಮತ್ತಾಯ 6:9, 10.

“ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ”

10. ಒತ್ತಡಗಳು ಮತ್ತು ವಿರೋಧದೊಂದಿಗೆ ವ್ಯವಹರಿಸುವ ವಿಷಯದಲ್ಲಿ ಯೇಸುವೂ ಅಪೊಸ್ತಲರೂ ನಮಗೋಸ್ಕರ ಯಾವ ಪ್ರಾಮುಖ್ಯ ಪೂರ್ವನಿದರ್ಶನವನ್ನು ಇಟ್ಟರು?

10 ಒತ್ತಡದ ಕೆಳಗೆ ಯೇಸುವೂ ಅಪೊಸ್ತಲರೂ ಪ್ರತಿಕ್ರಿಯಿಸಿದ ವಿಧದಿಂದ ನಾವು ಕಲಿತುಕೊಳ್ಳಸಾಧ್ಯವಿರುವ ಇನ್ನೊಂದು ಪ್ರಮುಖ ಮೂಲತತ್ತ್ವವು, ನಮ್ಮನ್ನು ಹಿಂಸಿಸುವವರ ವಿರುದ್ಧ ಎಂದೂ ಸೇಡುತೀರಿಸಿಕೊಳ್ಳಲು ಪ್ರಯತ್ನಿಸಬಾರದು ಎಂಬುದೇ. ಯೇಸುವಾಗಲಿ ಅವನ ಹಿಂಬಾಲಕರಾಗಲಿ ತಮ್ಮನ್ನು ಹಿಂಸಿಸುವವರ ವಿರುದ್ಧ ಹೋರಾಡುವ ಸಲುವಾಗಿ ಒಂದು ಪ್ರತಿರೋಧ ಸಂಘವನ್ನು ರಚಿಸಿಕೊಂಡದ್ದರ ಕುರಿತು ಅಥವಾ ಹಿಂಸಾತ್ಮಕ ಮಾರ್ಗವನ್ನು ಆಶ್ರಯಿಸಿದ್ದರ ಕುರಿತು ಸೂಚಿಸುವ ಯಾವುದೇ ವಿಷಯವನ್ನು ನಾವು ಬೈಬಲಿನಲ್ಲಿ ಎಲ್ಲಿಯೂ ಕಂಡುಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ” ಎಂದು ಅಪೊಸ್ತಲ ಪೌಲನು ಕ್ರೈಸ್ತರಿಗೆ ಸಲಹೆ ನೀಡಿದನು. “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆಂಬದಾಗಿ ಬರೆದದೆ.” ಅಷ್ಟುಮಾತ್ರವಲ್ಲ, ‘ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಿರಿ.’​—ರೋಮಾಪುರ 12:17-21; ಕೀರ್ತನೆ 37:1-4; ಜ್ಞಾನೋಕ್ತಿ 20:22.

11. ಸರಕಾರದ ಕಡೆಗೆ ಆರಂಭದ ಕ್ರೈಸ್ತರು ತೋರಿಸಿದಂಥ ಮನೋಭಾವದ ಕುರಿತು ಒಬ್ಬ ಇತಿಹಾಸಗಾರನು ಏನು ಹೇಳಿದನು?

11 ಆರಂಭದ ಕ್ರೈಸ್ತರು ಈ ಸಲಹೆಯನ್ನು ಹೃದಯಕ್ಕೆ ತೆಗೆದುಕೊಂಡರು. ಆರಂಭದ ಚರ್ಚು ಮತ್ತು ಲೋಕ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಇತಿಹಾಸಗಾರನಾದ ಸೇಸಲ್‌ ಜೆ. ಕಾಡೂ, ಸಾ.ಶ. 30-70ರ ಕಾಲಾವಧಿಯಲ್ಲಿ ಸರಕಾರದ ಕಡೆಗೆ ಕ್ರೈಸ್ತರಿಗಿದ್ದ ಮನೋಭಾವವನ್ನು ವರ್ಣಿಸುತ್ತಾನೆ. ಅವನು ಬರೆಯುವುದು: “ಈ ಕಾಲಾವಧಿಯ ಕ್ರೈಸ್ತರು ಬಲಪ್ರಯೋಗದಿಂದ ಹಿಂಸೆಯನ್ನು ಪ್ರತಿರೋಧಿಸಲು ಎಂದಾದರೂ ಪ್ರಯತ್ನವನ್ನು ಮಾಡಿದರು ಎಂದು ಹೇಳಲು ನಮಗೆ ಯಾವುದೇ ನೇರವಾದ ಪುರಾವೆಯಿಲ್ಲ. ತೀರ ಹೆಚ್ಚೆಂದರೆ ಅವರು ತಮ್ಮ ಅಧಿಕಾರಿಗಳನ್ನು ಬಲವತ್ತಾಗಿ ಖಂಡಿಸಲು ಪ್ರಯತ್ನಿಸಿರಬಹುದು ಅಥವಾ ಪಲಾಯನಗೈಯುವ ಮೂಲಕ ಅವರನ್ನು ತಬ್ಬಿಬ್ಬುಗೊಳಿಸಲು ಪ್ರಯತ್ನಿಸಿರಬಹುದಷ್ಟೆ. ಆದರೂ, ಹಿಂಸೆಯ ಕಡೆಗೆ ಸಾಮಾನ್ಯ ಕ್ರೈಸ್ತರ ಪ್ರತಿಕ್ರಿಯೆಯು, ಕ್ರಿಸ್ತನಿಗೆ ತೋರಿಸಲ್ಪಡುವ ವಿಧೇಯತೆಯೊಂದಿಗೆ ಸಂಘರ್ಷಿಸಸಾಧ್ಯವಿದೆಯೆಂದು ಅವರು ನಂಬಿದಂಥ ಸರಕಾರೀ ಆಜ್ಞೆಗಳಿಗೆ ವಿಧೇಯರಾಗಲು ದೃಢವಾಗಿ ನಿರಾಕರಿಸುವ ಸರಹದ್ದನ್ನು ಎಂದೂ ಮೀರಲಿಲ್ಲ.”

12. ಸೇಡುತೀರಿಸಿಕೊಳ್ಳುವುದಕ್ಕಿಂತಲೂ ಕಷ್ಟಾನುಭವವನ್ನು ತಾಳಿಕೊಳ್ಳುವುದು ಏಕೆ ಉತ್ತಮವಾದದ್ದಾಗಿದೆ?

12 ಇತರರಿಗೆ ತಲೆಬಾಗುವಂತೆ ತೋರುವಂಥ ಈ ರೀತಿಯ ಮಾರ್ಗಕ್ರಮವು ನಿಜವಾಗಿಯೂ ವಿವೇಕಯುತವಾದದ್ದಾಗಿದೆಯೋ? ಈ ರೀತಿಯಲ್ಲಿ ಪ್ರತಿಕ್ರಿಯಿಸುವಂಥವರು ಯಾರೇ ಆಗಲಿ, ಇಂಥವರನ್ನು ಅಳಿಸಿಹಾಕಲು ಹೊರಟಿರುವ ಜನರಿಗೆ ಸುಲಭವಾದ ಬಲಿಯಾಗುವುದಿಲ್ಲವೋ? ಒಬ್ಬನು ತನ್ನನ್ನೇ ರಕ್ಷಿಸಿಕೊಳ್ಳುವುದು ವಿವೇಕಯುತವಾದ ಸಂಗತಿಯಾಗಿರುವುದಿಲ್ಲವೋ? ಮಾನವ ದೃಷ್ಟಿಕೋನದಿಂದ ನೋಡುವಾಗ, ಇದು ಹೀಗೆ ಕಂಡುಬರಬಹುದು. ಆದರೂ, ಯೆಹೋವನ ಸೇವಕರಾಗಿರುವ ನಮಗೆ, ಎಲ್ಲಾ ವಿಷಯಗಳಲ್ಲಿ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದು ಅತ್ಯುತ್ತಮ ಮಾರ್ಗಕ್ರಮವಾಗಿದೆ ಎಂಬುದರಲ್ಲಿ ದೃಢಭರವಸೆಯಿದೆ. ನಾವು ಪೇತ್ರನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ: “ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.” (1 ಪೇತ್ರ 2:20) ಈ ಸನ್ನಿವೇಶದ ಕುರಿತು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ವಿಷಯಗಳು ಇದೇ ರೀತಿ ಅನಿರ್ದಿಷ್ಟವಾಗಿ ಮುಂದುವರಿಯಲು ಆತನು ಅನುಮತಿಸುವುದಿಲ್ಲ ಎಂಬ ಭರವಸೆ ನಮಗಿದೆ. ಇದರ ಕುರಿತು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು? ಬಾಬೆಲಿನಲ್ಲಿ ಬಂಧಿವಾಸಿಗಳಾಗಿದ್ದ ತನ್ನ ಜನರಿಗೆ ಯೆಹೋವನು ಘೋಷಿಸಿದ್ದು: “ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.” (ಜೆಕರ್ಯ 2:8) ಒಬ್ಬ ವ್ಯಕ್ತಿಯು, ಯಾರಾದರೂ ತನ್ನ ಕಣ್ಣುಗುಡ್ಡೆಯನ್ನು ಎಷ್ಟು ಹೊತ್ತು ಮುಟ್ಟಲು ಬಿಡುವನು? ಯೆಹೋವನು ಸೂಕ್ತವಾದ ಸಮಯದಲ್ಲಿ ಪರಿಹಾರವನ್ನು ಒದಗಿಸುವನು. ಈ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ.​—2 ಥೆಸಲೊನೀಕ 1:​5-8.

13. ಯೇಸು ಯಾವ ರೀತಿಯ ಪ್ರತಿಭಟನೆಯನ್ನೂ ತೋರಿಸದೆ, ವೈರಿಗಳು ತನ್ನನ್ನು ಬಂಧಿಸುವಂತೆ ಅನುಮತಿಸಿದ್ದೇಕೆ?

13 ಈ ವಿಷಯದಲ್ಲಿ ನಮ್ಮ ಮಾದರಿಯೋಪಾದಿ ನಾವು ಯೇಸುವಿನ ಕಡೆಗೆ ನೋಡಸಾಧ್ಯವಿದೆ. ಗೆತ್ಸೇಮನೆ ತೋಟದಲ್ಲಿ ಅವನ ವೈರಿಗಳು ಅವನನ್ನು ಬಂಧಿಸುವಂತೆ ಅವನು ಅನುಮತಿಸಿದ್ದು, ಅವನು ಸ್ವತಃ ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥನಾಗಿದ್ದ ಕಾರಣದಿಂದಲ್ಲ. ವಾಸ್ತವದಲ್ಲಿ, ಅವನು ತನ್ನ ಶಿಷ್ಯರಲ್ಲಿ ಒಬ್ಬನಿಗೆ ಹೇಳಿದ್ದು: “ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ? ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ”? (ಮತ್ತಾಯ 26:53, 54) ಯೆಹೋವನ ಚಿತ್ತವನ್ನು ನೆರವೇರಿಸುವುದು​—ಇದಕ್ಕಾಗಿ ಅವನು ನರಳಬೇಕಾದರೂ ಸರಿ​—ಯೇಸುವಿಗೆ ಅತ್ಯಂತ ಪ್ರಾಮುಖ್ಯವಾದ ಸಂಗತಿಯಾಗಿತ್ತು. ದಾವೀದನ ಪ್ರವಾದನಾತ್ಮಕ ಕೀರ್ತನೆಯ ಮಾತುಗಳಲ್ಲಿ ಅವನಿಗೆ ಪೂರ್ಣವಾದ ಭರವಸೆಯಿತ್ತು: “ಯಾಕಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ; ನಿನ್ನ ಪ್ರಿಯನಿಗೆ ಅಧೋಲೋಕವನ್ನು ನೋಡಗೊಡಿಸುವದಿಲ್ಲ.” (ಕೀರ್ತನೆ 16:10) ವರ್ಷಗಳಾನಂತರ ಅಪೊಸ್ತಲ ಪೌಲನು ಯೇಸುವಿನ ಕುರಿತಾಗಿ ಹೇಳಿದ್ದು: “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.”​—ಇಬ್ರಿಯ 12:2.

ಯೆಹೋವನ ಹೆಸರನ್ನು ಪವಿತ್ರೀಕರಿಸುವುದರಿಂದ ಸಿಗುವ ಆನಂದ

14. ಯೇಸುವಿನ ಎಲ್ಲಾ ಪರೀಕ್ಷೆಗಳಾದ್ಯಂತ ಯಾವ ಸಂತೋಷವು ಅವನಿಗೆ ತಾಳಿಕೊಳ್ಳುವಂತೆ ಸಹಾಯಮಾಡಿತು?

14 ಊಹಿಸಸಾಧ್ಯವಿರುವ ಅತ್ಯಂತ ತೀಕ್ಷ್ಣವಾದ ಪರೀಕ್ಷೆಯ ಸಮಯದಲ್ಲಿ ಯಾವ ಸಂತೋಷವು ಯೇಸುವಿಗೆ ತಾಳಿಕೊಳ್ಳುವಂತೆ ಸಹಾಯಮಾಡಿತು? ಯೆಹೋವನ ಸೇವಕರೆಲ್ಲರಲ್ಲಿ, ದೇವರ ಪ್ರಿಯ ಪುತ್ರನಾಗಿರುವ ಯೇಸುವು ಖಂಡಿತವಾಗಿಯೂ ಸೈತಾನನ ಅಗ್ರಗಣ್ಯ ಗುರಿಹಲಗೆಯಾಗಿದ್ದನು. ಆದುದರಿಂದ, ಪರೀಕ್ಷೆಯ ಕೆಳಗೆ ಯೇಸು ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ಯೆಹೋವನ ವಿರುದ್ಧ ಸೈತಾನನ ಮೂದಲಿಕೆಗೆ ನಿರ್ಣಾಯಕವಾದ ಪ್ರತ್ಯುತ್ತರವಾಗಿರಲಿತ್ತು. (ಜ್ಞಾನೋಕ್ತಿ 27:11) ಯೇಸು ಪುನರುತ್ಥಾನಗೊಳಿಸಲ್ಪಟ್ಟ ಬಳಿಕ, ಅವನಿಗೆ ಆಗಿರಬಹುದಾದ ಆನಂದ ಹಾಗೂ ಸಂತೃಪ್ತಿಯನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಒಬ್ಬ ಪರಿಪೂರ್ಣ ಮಾನವನೋಪಾದಿ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಮತ್ತು ಆತನ ಹೆಸರಿನ ಪವಿತ್ರೀಕರಣದಲ್ಲಿ ತನಗೆ ಕೊಡಲ್ಪಟ್ಟಿದ್ದ ಪಾತ್ರವನ್ನು ತಾನು ಪೂರ್ಣವಾಗಿ ಪೂರೈಸಿದ್ದೇನೆಂಬುದನ್ನು ಮನಗಂಡಾಗ, ಅವನಿಗೆ ಎಷ್ಟು ಸಂತೋಷವಾಗಿದ್ದಿರಬೇಕು! ಅಷ್ಟುಮಾತ್ರವಲ್ಲ, “ದೇವರ ಸಿಂಹಾಸನದ ಬಲಗಡೆಯಲ್ಲಿ” ಆಸನಾರೂಢನಾಗಿರುವುದು, ನಿಶ್ಚಯವಾಗಿಯೂ ಯೇಸುವಿಗೆ ಒಂದು ಅದ್ಭುತಕರ ಸನ್ಮಾನವಾಗಿದೆ ಮತ್ತು ಆನಂದದ ಅತ್ಯಂತ ಮಹಾನ್‌ ಮೂಲವಾಗಿದೆ.​—ಕೀರ್ತನೆ 110:1, 2; 1 ತಿಮೊಥೆಯ 6:15, 16.

15, 16. ಸಾಕ್‌ಸನ್‌ಹೌಸನ್‌ ಕೂಟಶಿಬಿರದಲ್ಲಿ ಸಾಕ್ಷಿಗಳು ಯಾವ ಅಮಾನುಷ ಕ್ರೌರ್ಯದ ಹಿಂಸೆಯನ್ನು ತಾಳಿಕೊಂಡರು, ಮತ್ತು ಹೀಗೆ ತಾಳಿಕೊಳ್ಳಲು ಅವರಿಗೆ ಯಾವುದು ಬಲವನ್ನು ನೀಡಿತು?

15 ತದ್ರೀತಿಯಲ್ಲಿ, ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ಪರೀಕ್ಷೆಗಳನ್ನು ಮತ್ತು ಹಿಂಸೆಯನ್ನು ತಾಳಿಕೊಳ್ಳುವ ಮೂಲಕ ಯೆಹೋವನ ಹೆಸರನ್ನು ಪವಿತ್ರೀಕರಿಸುವುದರಲ್ಲಿ ಪಾಲ್ಗೊಳ್ಳುವುದು ಕ್ರೈಸ್ತರಿಗೆ ಸಹ ಆನಂದದಾಯಕವಾದ ಸಂಗತಿಯಾಗಿದೆ. ಕುಪ್ರಸಿದ್ಧ ಸಾಕ್‌ಸನ್‌ಹೌಸನ್‌ ಕೂಟಶಿಬಿರದಲ್ಲಿ ಕಷ್ಟವನ್ನು ಅನುಭವಿಸಿದ ಮತ್ತು IIನೆಯ ಲೋಕ ಯುದ್ಧದ ಕೊನೆಯಲ್ಲಿ ಶಕ್ತಿಗುಂದಿಸುವಂಥ ಸಾಲುನಡೆ (ಡೆತ್‌ ಮಾರ್ಚ್‌)ಯಿಂದ ಪಾರಾಗಿ ಉಳಿದಂಥ ಸಾಕ್ಷಿಗಳ ಅನುಭವವು, ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಆ ಸಾಲುನಡೆಯ ಸಮಯದಲ್ಲಿ, ಕಠಿನವಾದ ಹವಾಮಾನದಲ್ಲಿ ಸಂರಕ್ಷಣೆಯಿಲ್ಲದೆ, ರೋಗ, ಅಥವಾ ಹಸಿವೆಯಿಂದ ಸಾವಿರಾರು ಮಂದಿ ಸೆರೆವಾಸಿಗಳು ಮರಣಪಟ್ಟರು ಅಥವಾ ದಾರಿಬದಿಯಲ್ಲೇ ಎಸ್‌ಎಸ್‌ ಗಾರ್ಡ್‌ಗಳಿಂದ ಪಾಶವೀಯವಾಗಿ ವಧಿಸಲ್ಪಟ್ಟರು. ಸಾಕ್ಷಿಗಳಾದರೊ, ಎಲ್ಲಾ 230 ಮಂದಿ ಯಾವಾಗಲೂ ನಿಕಟವಾಗಿ ಅಂಟಿಕೊಂಡಿರುವ ಮೂಲಕ ಮತ್ತು ತಮ್ಮ ಜೀವಗಳನ್ನೇ ಅಪಾಯಕ್ಕೊಡ್ಡಿ ಪರಸ್ಪರ ಸಹಾಯಮಾಡುವ ಮೂಲಕ ಪಾರಾಗಿ ಉಳಿದರು.

16 ಇಂಥ ಅಮಾನುಷ ಕ್ರೌರ್ಯದ ಹಿಂಸೆಯನ್ನು ತಾಳಿಕೊಳ್ಳಲು ಈ ಸಾಕ್ಷಿಗಳಿಗೆ ಯಾವುದು ಬಲವನ್ನು ನೀಡಿತು? ಅವರು ಸುರಕ್ಷಿತ ಸ್ಥಳವನ್ನು ತಲಪಿದ ಬಳಿಕ, “ಮೆಕ್ಲೆನ್‌ಬರ್ಗ್‌ನ ಶ್ವೇರಿನ್‌ನ ಬಳಿಯಿರುವ ಕಾಡಿನಲ್ಲಿ ಕೂಡಿಬಂದಿರುವ, ಆರು ರಾಷ್ಟ್ರಗಳಿಂದ ಬಂದ 230 ಮಂದಿ ಯೆಹೋವನ ಸಾಕ್ಷಿಗಳ ಠರಾವು” ಎಂಬ ಶೀರ್ಷಿಕೆಯಿರುವ ಡಾಕ್ಯುಮೆಂಟ್‌ನಲ್ಲಿ ಅವರು ತಮ್ಮ ಆನಂದ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅದರಲ್ಲಿ ಅವರು ಹೇಳಿದ್ದು: “ನಮ್ಮ ದೀರ್ಘಕಾಲದ ಪರೀಕ್ಷೆಯ ಒಂದು ಕಾಲಾವಧಿಯು ಮುಕ್ತಾಯಗೊಂಡಿದೆ ಮತ್ತು ಇಷ್ಟರ ತನಕ ಪಾರಾಗಿ ಉಳಿದಿರುವವರು, ಬೆಂಕಿಯ ಕುಲುಮೆಯಿಂದ ಹೊರತರಲ್ಪಟ್ಟವರಂತಿದ್ದಾರೆ, ಅವರಿಗೆ ಬೆಂಕಿಯ ವಾಸನೆಯೂ ಮುಟ್ಟಿಲ್ಲ. (ದಾನಿಯೇಲ 3:27ನ್ನು ನೋಡಿರಿ.) ಇದಕ್ಕೆ ವ್ಯತಿರಿಕ್ತವಾಗಿ, ಅವರು ಯೆಹೋವನಿಂದ ಪೂರ್ಣ ಬಲ ಹಾಗೂ ಶಕ್ತಿಯನ್ನು ಹೊಂದಿದವರಾಗಿ, ದೇವಪ್ರಭುತ್ವಾತ್ಮಕ ಅಭಿರುಚಿಗಳನ್ನು ಮುನ್ನಡಿಸಲಿಕ್ಕಾಗಿ ಅರಸನಿಂದ ಹೊಸ ಆಜ್ಞೆಗಳನ್ನು ಪಡೆದುಕೊಳ್ಳಲು ಅತ್ಯಾತುರರಾಗಿ ಕಾಯುತ್ತಿದ್ದಾರೆ.” *

17. ಇಂದು ದೇವಜನರು ಯಾವ ರೀತಿಯ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ?

17 ಆ 230 ಮಂದಿ ನಂಬಿಗಸ್ತರ ವಿಷಯದಲ್ಲಿ ಸಂಭವಿಸಿದಂತೆ, ನಾವು ‘ಪ್ರಾಣಾಪಾಯದ ತನಕ ಇನ್ನೂ ಅದನ್ನು ಎದುರಿಸಲಿಲ್ಲವಾದರೂ’ ನಮ್ಮ ನಂಬಿಕೆಯು ಸಹ ಪರೀಕ್ಷಿಸಲ್ಪಡಬಹುದು. (ಇಬ್ರಿಯ 12:4) ಆದರೆ ಪರೀಕ್ಷೆಯು ಬೇರೆ ಬೇರೆ ರೀತಿಗಳಲ್ಲಿ ಬರಬಹುದು. ಅದು ಸಹಪಾಠಿಗಳಿಂದ ಅಪಹಾಸ್ಯವಾಗಿರಬಹುದು, ಅಥವಾ ಅನೈತಿಕತೆ ಹಾಗೂ ಇನ್ನಿತರ ತಪ್ಪು ಕೆಲಸಗಳನ್ನು ಮಾಡಲು ಸಮಾನಸ್ಥರಿಂದ ಬರುವ ಒತ್ತಡವೂ ಆಗಿರಬಹುದು. ಇದಲ್ಲದೆ, ರಕ್ತವನ್ನು ವಿಸರ್ಜಿಸಲು, ಕರ್ತನಲ್ಲಿ ಮಾತ್ರವೇ ವಿವಾಹವಾಗಲು, ಅಥವಾ ಒಂದು ವಿಭಾಗಿತ ಮನೆವಾರ್ತೆಯಲ್ಲಿ ಮಕ್ಕಳನ್ನು ನಂಬಿಕೆಯಲ್ಲಿ ಬೆಳೆಸಲು ನಾವು ಮಾಡುವಂಥ ದೃಢಸಂಕಲ್ಪವು, ಕೆಲವೊಮ್ಮೆ ಗಂಭೀರವಾದ ಒತ್ತಡಗಳು ಹಾಗೂ ಪರೀಕ್ಷೆಗಳಲ್ಲಿ ಫಲಿಸಬಹುದು.​—ಅ. ಕೃತ್ಯಗಳು 15:​28, 29; 1 ಕೊರಿಂಥ 7:39; ಎಫೆಸ 6:4; 1 ಪೇತ್ರ 3:1, 2.

18. ಅತ್ಯಂತ ಅಸಾಮಾನ್ಯವಾದ ಪರೀಕ್ಷೆಯನ್ನು ಸಹ ನಾವು ತಾಳಿಕೊಳ್ಳಸಾಧ್ಯವಿದೆ ಎಂಬುದಕ್ಕೆ ನಮಗೆ ಯಾವ ಆಶ್ವಾಸನೆಯಿದೆ?

18 ಆದರೂ, ನಮ್ಮ ಮೇಲೆ ಯಾವುದೇ ರೀತಿಯ ಪರೀಕ್ಷೆಯು ಬರಲಿ, ನಾವು ಯೆಹೋವನಿಗೆ ಹಾಗೂ ಆತನ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತಿರುವುದರಿಂದ ನಾವು ಕಷ್ಟಾನುಭವಿಸುತ್ತೇವೆ ಎಂಬುದು ನಮಗೆ ಗೊತ್ತಿದೆ, ಮತ್ತು ಹೀಗೆ ಮಾಡುವುದನ್ನು ನಾವು ಒಂದು ನಿಜವಾದ ಸುಯೋಗವಾಗಿಯೂ ಸಂತೋಷವಾಗಿಯೂ ಪರಿಗಣಿಸುತ್ತೇವೆ. ನಾವು ಪೇತ್ರನ ಪುನರಾಶ್ವಾಸನದಾಯಕ ಮಾತುಗಳಿಂದ ಧೈರ್ಯವನ್ನು ಪಡೆದುಕೊಳ್ಳುತ್ತೇವೆ: “ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.” (1 ಪೇತ್ರ 4:14) ಯೆಹೋವನ ಆತ್ಮದ ಬಲದಲ್ಲಿ, ಅತ್ಯಂತ ಕಷ್ಟಕರ ಪರೀಕ್ಷೆಗಳ ಕೆಳಗೂ ತಾಳಿಕೊಳ್ಳಲು ನಮಗೆ ಶಕ್ತಿಯು ಸಿಗುತ್ತದೆ, ಮತ್ತು ಇದೆಲ್ಲವೂ ಆತನಿಗೆ ಮಹಿಮೆ ಹಾಗೂ ಸ್ತುತಿಯನ್ನು ತರುವುದು.​—2 ಕೊರಿಂಥ 4:7; ಎಫೆಸ 3:16; ಫಿಲಿಪ್ಪಿ 4:13.

[ಪಾದಟಿಪ್ಪಣಿಗಳು]

^ ಪ್ಯಾರ. 6 ಈ 1960ರ ದಶಕದ ಘಟನೆಗಳು, ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚಿನ ಸಮಯಾವಧಿಯ ವರೆಗೆ ಮಲಾವಿಯಲ್ಲಿ ಸಾಕ್ಷಿಗಳು ತಾಳಿಕೊಳ್ಳಬೇಕಾಗಿದ್ದ ಹಿಂಸಾತ್ಮಕ ಹಾಗೂ ಕೊಲೆಪಾತಕ ಹಿಂಸೆಯ ಸರಮಾಲೆಯ ಒಂದು ಆರಂಭವಾಗಿದ್ದವಷ್ಟೆ. ಇದರ ಕುರಿತಾದ ಪೂರ್ಣ ವೃತ್ತಾಂತಕ್ಕಾಗಿ, 1999 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ದ 171-212ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 8 ಏಪ್ರಿಲ್‌ 1, 2003ರ ಕಾವಲಿನಬುರುಜು ಪತ್ರಿಕೆಯ 11-14ನೆಯ ಪುಟಗಳಲ್ಲಿರುವ, “‘ಅರರಾಟ್‌ ದೇಶ’ದಲ್ಲಿ ಸತ್ಯಾರಾಧನೆಯನ್ನು ಅತ್ಯುಚ್ಚ ನ್ಯಾಯಾಲಯವು ಎತ್ತಿಹಿಡಿಯುತ್ತದೆ” ಎಂಬ ಲೇಖನವನ್ನು ನೋಡಿರಿ.

^ ಪ್ಯಾರ. 16 ಈ ಠರಾವಿನ ಪೂರ್ಣ ಮೂಲಪಾಠಕ್ಕಾಗಿ, 1974 ಯೆಹೋವನ ಸಾಕ್ಷಿಗಳ  ವರ್ಷಪುಸ್ತಕ (ಇಂಗ್ಲಿಷ್‌)ದ 208-9ನೆಯ ಪುಟಗಳನ್ನು ನೋಡಿರಿ. ಸಾಲುನಡೆಯಿಂದ ಪಾರಾಗಿ ಉಳಿದ ಒಬ್ಬ ವ್ಯಕ್ತಿಯ ವೈಯಕ್ತಿಕ ವೃತ್ತಾಂತವನ್ನು, 1998, ಜನವರಿ 1ರ ಕಾವಲಿನಬುರುಜು ಪತ್ರಿಕೆಯ 25-9ನೆಯ ಪುಟಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.

ನೀವು ವಿವರಿಸಬಲ್ಲಿರೋ?

• ಕ್ರೈಸ್ತರು ಕಷ್ಟಾನುಭವ ಹಾಗೂ ಹಿಂಸೆಯನ್ನು ಹೇಗೆ ಪರಿಗಣಿಸುತ್ತಾರೆ?

• ಪರೀಕ್ಷೆಯ ಕೆಳಗೆ ಯೇಸುವೂ ಇತರ ನಂಬಿಗಸ್ತರೂ ಪ್ರತಿಕ್ರಿಯಿಸಿದ ರೀತಿಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

• ನಾವು ಹಿಂಸಿಸಲ್ಪಡುವಾಗ ಸೇಡುತೀರಿಸಿಕೊಳ್ಳಲು ಪ್ರಯತ್ನಿಸುವುದು ಏಕೆ ವಿವೇಕಯುತವಾದ ಮಾರ್ಗವಲ್ಲ?

• ಯೇಸು ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವಂತೆ ಯಾವ ಸಂತೋಷವು ಅವನಿಗೆ ಸಹಾಯಮಾಡಿತು, ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚೌಕ/ಚಿತ್ರಗಳು]

ಅವರು ಹಿಂಸೆಯೊಂದಿಗೆ ವ್ಯವಹರಿಸಿದ ವಿಧ

• ಎರಡು ವರ್ಷದ ಹಾಗೂ ಅದಕ್ಕಿಂತ ಚಿಕ್ಕ ಪ್ರಾಯದ ಗಂಡುಶಿಶುಗಳನ್ನು ಕೊಲ್ಲಲಿಕ್ಕಾಗಿ ಹೆರೋದನ ಸೈನಿಕರು ಬೇತ್ಲೆಹೇಮಿಗೆ ಆಗಮಿಸುವುದಕ್ಕೆ ಮುಂಚೆ, ದೇವದೂತನ ಮಾರ್ಗದರ್ಶನದ ಮೇರೆಗೆ ಯೋಸೇಫ ಮರಿಯರು ಶಿಶುವಾದ ಯೇಸುವಿನ ಜೊತೆಗೆ ಐಗುಪ್ತದೇಶಕ್ಕೆ ಪಲಾಯನಗೈದರು.​—ಮತ್ತಾಯ 2:​13-16.

• ಯೇಸುವಿನ ಶುಶ್ರೂಷೆಯ ಸಮಯದಲ್ಲಿ, ಅವನ ಪ್ರಬಲವಾದ ಸಾಕ್ಷಿಯ ನಿಮಿತ್ತವಾಗಿ ಅನೇಕ ಬಾರಿ ಅವನ ವೈರಿಗಳು ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಅಂಥ ಪ್ರತಿಯೊಂದು ಸನ್ನಿವೇಶದಲ್ಲೂ ಯೇಸು ಅವರಿಂದ ತಪ್ಪಿಸಿಕೊಂಡನು.​—ಮತ್ತಾಯ 21:45, 46; ಲೂಕ 4:28-30; ಯೋಹಾನ 8:57-59.

• ಯೇಸುವನ್ನು ಬಂಧಿಸಲಿಕ್ಕಾಗಿ ಸೈನಿಕರು ಮತ್ತು ಅಧಿಕಾರಿಗಳು ಗೆತ್ಸೇಮನೆ ತೋಟಕ್ಕೆ ಬಂದಾಗ, “ನಾನೇ ಅವನು” ಎಂದು ಎರಡು ಬಾರಿ ಹೇಳುವ ಮೂಲಕ ಅವನು ಸ್ವತಃ ತನ್ನನ್ನು ಬಹಿರಂಗವಾಗಿ ಗುರುತಿಸಿಕೊಂಡನು. ಅಷ್ಟುಮಾತ್ರವಲ್ಲ, ಯಾವುದೇ ಪ್ರತಿರೋಧವನ್ನು ತೋರಿಸದಂತೆ ಅವನು ತನ್ನ ಹಿಂಬಾಲಕರನ್ನು ತಡೆದನು ಮತ್ತು ಆ ಜನರ ಗುಂಪು ತನ್ನನ್ನು ಹಿಡಿದುಕೊಂಡು ಹೋಗುವಂತೆ ಬಿಟ್ಟುಕೊಟ್ಟನು.​—ಯೋಹಾನ 18:​3-12.

• ಯೆರೂಸಲೇಮಿನಲ್ಲಿ ಪೇತ್ರನು ಹಾಗೂ ಇನ್ನಿತರರು ಸೆರೆಹಿಡಿಯಲ್ಪಟ್ಟರು, ಹೊಡೆಯಲ್ಪಟ್ಟರು ಮತ್ತು ಯೇಸುವಿನ ಕುರಿತು ಮಾತಾಡುವುದನ್ನು ನಿಲ್ಲಿಸಲೇಬೇಕೆಂದು ಅವರಿಗೆ ಆಜ್ಞೆ ನೀಡಲಾಯಿತು. ಆದರೂ, ಸೆರೆಯಿಂದ ಬಿಡುಗಡೆಯಾದ ಕೂಡಲೆ ಅವರು “ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.”​—ಅ. ಕೃತ್ಯಗಳು 5:40-42.

• ಸಮಯಾನಂತರ ಅಪೊಸ್ತಲ ಪೌಲನಾಗಿ ಪರಿಣಮಿಸಿದ ಸೌಲನಿಗೆ, ತನ್ನನ್ನು ಕೊಲ್ಲಲಿಕ್ಕಾಗಿ ದಮಸ್ಕದಲ್ಲಿರುವ ಯೆಹೂದ್ಯರು ಒಳಸಂಚನ್ನು ನಡೆಸುತ್ತಿದ್ದಾರೆಂಬುದು ತಿಳಿದುಬಂದಾಗ, ಸಹೋದರರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ ಒಂದು ಹೆಡಿಗೆಯಲ್ಲಿ ಕೂರಿಸಿ, ಪಟ್ಟಣದ ಗೋಡೆಯೊಳಗಿಂದ ಇಳಿಸಿದರು, ಮತ್ತು ಅವನು ತಪ್ಪಿಸಿಕೊಂಡನು.​—ಅ. ಕೃತ್ಯಗಳು 9:​22-25.

• ವರ್ಷಗಳಾನಂತರ, ದೇಶಾಧಿಪತಿಯಾದ ಫೆಸ್ತನೂ ಅಗ್ರಿಪ್ಪರಾಜನೂ “ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲ”ವೆಂಬುದನ್ನು ಮನಗಂಡರಾದರೂ, ಪೌಲನು ಕೈಸರನ ಮುಂದೆ ಮನವಿಮಾಡಿಕೊಳ್ಳುವ ಆಯ್ಕೆಮಾಡಿದನು.​—ಅ. ಕೃತ್ಯಗಳು 25:10-12, 24-27; 26:30-32.

[ಪುಟ 16, 17ರಲ್ಲಿರುವ ಚಿತ್ರಗಳು]

ತೀವ್ರವಾದ ಹಿಂಸೆಯ ನಿಮಿತ್ತ ಮಲಾವಿಯ ಸಾವಿರಾರು ನಂಬಿಗಸ್ತ ಸಾಕ್ಷಿಗಳು ಪಲಾಯನಗೈಯುವಂತೆ ಒತ್ತಾಯಿಸಲ್ಪಟ್ಟರಾದರೂ ಅವರು ರಾಜ್ಯದ ಸೇವೆಯನ್ನು ಹರ್ಷಾನಂದದಿಂದ ಮುಂದುವರಿಸಿದರು

[ಪುಟ 17ರಲ್ಲಿರುವ ಚಿತ್ರಗಳು]

ಯೆಹೋವನ ಹೆಸರನ್ನು ಪವಿತ್ರೀಕರಿಸುವ ಸಂತೋಷವು, ನಾಸಿ ಸಾಲುನಡೆಯಿಂದ ಹಾಗೂ ಕೂಟಶಿಬಿರಗಳಿಂದ ಈ ನಂಬಿಗಸ್ತರು ಪಾರಾಗಿ ಉಳಿಯುವಂತೆ ಮಾಡಿತು

[ಕೃಪೆ]

ಸಾಲುನಡೆ: KZ-Gedenkstätte Dachau, courtesy of the USHMM Photo Archives

[ಪುಟ 18ರಲ್ಲಿರುವ ಚಿತ್ರಗಳು]

ಪರೀಕ್ಷೆಗಳು ಮತ್ತು ಒತ್ತಡಗಳು ಬೇರೆ ಬೇರೆ ವಿಧಗಳಲ್ಲಿ ಎದುರಾಗಬಹುದು