ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ರರನ್ನು ಸತ್ಯದ ಕಡೆಗೆ ಸೆಳೆಯುತ್ತಾನೆ

ಯೆಹೋವನು ನಮ್ರರನ್ನು ಸತ್ಯದ ಕಡೆಗೆ ಸೆಳೆಯುತ್ತಾನೆ

ಜೀವನ ಕಥೆ

ಯೆಹೋವನು ನಮ್ರರನ್ನು ಸತ್ಯದ ಕಡೆಗೆ ಸೆಳೆಯುತ್ತಾನೆ

ಆಸಾನೋ ಕೋಸೇನೋ ಅವರು ಹೇಳಿದಂತೆ

ಇಸವಿ 1949ರಲ್ಲಿ, IIನೆಯ ಲೋಕ ಯುದ್ಧವು ಕೊನೆಗೊಂಡು ಕೆಲವೇ ವರ್ಷಗಳ ಬಳಿಕ, ಕೋಬೆ ಸಿಟಿಯಲ್ಲಿ ನಾನು ಯಾವ ಕುಟುಂಬದ ಬಳಿ ಕೆಲಸಕ್ಕಿದ್ದೆನೋ ಅಲ್ಲಿಗೆ, ಎತ್ತರವಾಗಿಯೂ ಸ್ನೇಹಪರರಾಗಿಯೂ ಇದ್ದ ಒಬ್ಬ ವಿದೇಶೀ ವ್ಯಕ್ತಿಯು ಭೇಟಿನೀಡಿದರು. ಅವರು ಜಪಾನಿಗೆ ಬಂದ ಯೆಹೋವನ ಸಾಕ್ಷಿಗಳ ಪ್ರಪ್ರಥಮ ಮಿಷನೆರಿಯಾಗಿದ್ದರು. ಅವರ ಭೇಟಿಯು ನಾನು ಬೈಬಲ್‌ ಸತ್ಯದ ಕಡೆಗೆ ಸೆಳೆಯಲ್ಪಡುವಂತೆ ಮಾರ್ಗವನ್ನು ತೆರೆಯಿತು. ಆದರೆ ಮೊದಲು ನನ್ನ ಹಿನ್ನೆಲೆಯ ಕುರಿತು ನಿಮಗೆ ತಿಳಿಸಲು ಬಯಸುತ್ತೇನೆ.

ನಾನು ಉತ್ತರ ಓಕಯಾಮಾ ಪ್ರಿಫೆಕ್ಚರ್‌ನಲ್ಲಿರುವ ಒಂದು ಚಿಕ್ಕ ಹಳ್ಳಿಯಲ್ಲಿ 1926ರಲ್ಲಿ ಜನಿಸಿದೆ. ಎಂಟು ಮಂದಿ ಮಕ್ಕಳಲ್ಲಿ ನಾನು ಐದನೆಯವಳಾಗಿದ್ದೆ. ತಂದೆಯವರು ಸ್ಥಳಿಕ ಶಿಂಟೋ ದೇವಸ್ಥಾನದಲ್ಲಿದ್ದ ದೇವರ ಪರಮಭಕ್ತರಾಗಿದ್ದರು. ಆದುದರಿಂದ, ಇಡೀ ವರ್ಷದಾದ್ಯಂತ ನಡೆಯುತ್ತಿದ್ದ ಧಾರ್ಮಿಕ ಹಬ್ಬಹರಿದಿನಗಳಲ್ಲಿ ಮಕ್ಕಳಾದ ನಾವು ಆ ಆಚರಣೆಗಳು ಮತ್ತು ಕುಟುಂಬದ ಒಕ್ಕೂಟಗಳಲ್ಲಿ ಆನಂದಿಸುತ್ತಿದ್ದೆವು.

ನಾನು ದೊಡ್ಡವಳಾಗುತ್ತಾ ಬಂದಂತೆ ಜೀವನದ ಕುರಿತು ನನಗೆ ಅನೇಕ ಪ್ರಶ್ನೆಗಳಿದ್ದವಾದರೂ, ಮರಣದ ಕುರಿತು ನಾನು ತುಂಬ ಚಿಂತಿತಳಾಗಿದ್ದೆ. ಸಂಪ್ರದಾಯಕ್ಕನುಸಾರ, ಜನರು ಮನೆಯಲ್ಲೇ ಸಾಯಬೇಕಾಗಿತ್ತು ಮತ್ತು ಕುಟುಂಬದ ಸದಸ್ಯರು ಮರಣಶಯ್ಯೆಯಲ್ಲಿರುವಾಗ ಮಕ್ಕಳು ಅವರ ಬಳಿಯಿರಬೇಕಿತ್ತು. ನನ್ನ ಅಜ್ಜಿಯವರು ತೀರಿಕೊಂಡಾಗ ಮತ್ತು ನನ್ನ ತಮ್ಮನಿಗೆ ಒಂದು ವರ್ಷ ತುಂಬುವುದಕ್ಕೆ ಮೊದಲೇ ಅವನು ಮೃತಪಟ್ಟಾಗ ನನಗೆ ಅಪಾರ ಸಂಕಟವಾಯಿತು. ನನ್ನ ಹೆತ್ತವರ ಮರಣದ ಕುರಿತಾದ ಯೋಚನೆಯೇ ನನಗೆ ವಿಪರೀತ ಭಯವನ್ನು ಉಂಟುಮಾಡುತ್ತಿತ್ತು. ‘ಸಾಯುವುದನ್ನೇ ನಾವೆಲ್ಲರೂ ಮುನ್ನೋಡಬೇಕೋ? ಜೀವನಕ್ಕೆ ಇದಕ್ಕಿಂತ ಹೆಚ್ಚಿನದ್ದೇನಾದರೂ ಇರಸಾಧ್ಯವಿದೆಯೆ?’ ಇದನ್ನು ತಿಳಿದುಕೊಳ್ಳಲು ನಾನು ತುಂಬ ಕಾತುರಳಾಗಿದ್ದೆ.

ಇಸವಿ 1937ರಲ್ಲಿ, ನಾನು ಪ್ರಾಥಮಿಕ ಶಾಲೆಯ ಆರನೆಯ ತರಗತಿಯಲ್ಲಿದ್ದಾಗ, ಚೀನೀ-ಜಪಾನೀ ಯುದ್ಧವು ಆರಂಭವಾಯಿತು. ಪುರುಷರನ್ನು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ಅವರನ್ನು ಚೀನಾದ ಕದನರಂಗಕ್ಕೆ ಕಳುಹಿಸಲಾಯಿತು. ಶಾಲೆಯ ಮಕ್ಕಳು ಸಾಮ್ರಾಟನಿಗೆ “ಬಾನ್‌ಸೈ!” (ಚಿರಂಜೀವಿಯಾಗಿರು) ಎಂದು ಕೂಗುತ್ತಾ, ತಮ್ಮ ತಂದೆಗಳಿಗೆ ಅಥವಾ ಅಣ್ಣಂದಿರಿಗೆ ಶುಭವಿದಾಯ ಹೇಳಿದರು. ದೇವರಾಳುವ ಜನಾಂಗವಾಗಿದ್ದ ಜಪಾನಿಗೆ ಮತ್ತು ಅದರ ಆ ಜೀವಂತ ದೇವರಾದ ಸಾಮ್ರಾಟನಿಗೆ ಖಂಡಿತವಾಗಿಯೂ ಜಯಸಿಗುತ್ತದೆ ಎಂದು ಜನರಿಗೆ ಪೂರಾ ಭರವಸೆಯಿತ್ತು.

ಆದರೆ ಅತಿ ಬೇಗನೆ ಕುಟುಂಬಗಳು ಕದನರಂಗದಲ್ಲಿ ಮೃತಪಟ್ಟವರ ಕುರಿತಾದ ನೋಟೀಸುಗಳನ್ನು ಪಡೆದುಕೊಳ್ಳತೊಡಗಿದವು. ವಿರಕ್ತ ಕುಟುಂಬಗಳನ್ನು ಸಂತೈಸುವುದು ಅಸಾಧ್ಯವಾಗಿತ್ತು. ಅವರ ಹೃದಯಗಳಲ್ಲಿ ದ್ವೇಷವು ಬೆಳೆಯುತ್ತಿತ್ತು, ಮತ್ತು ಶತ್ರುಗಳಲ್ಲಿ ಅನೇಕರು ಕೊಲ್ಲಲ್ಪಟ್ಟಾಗ ಅಥವಾ ಗಾಯಗೊಂಡಾಗ ಅವರಿಗೆ ಮಹದಾನಂದವಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ, ‘ನಮ್ಮ ಪ್ರಿಯ ಜನರು ಸಾಯುವಾಗ ನಾವು ಹೇಗೆ ಸಂಕಟಪಡುತ್ತೇವೋ ಹಾಗೆಯೇ ಶತ್ರುಪಕ್ಷದ ಜನರೂ ಸಂಕಟಪಡುತ್ತಾರೆಂಬುದರಲ್ಲಿ ಸಂಶಯವೇ ಇಲ್ಲ’ ಎಂದು ನನಗನಿಸಿತು. ನಾನು ಪ್ರಾಥಮಿಕ ಶಾಲೆಯಿಂದ ತೇರ್ಗಡೆ ಹೊಂದುವ ಸಮಯದಷ್ಟಕ್ಕೆ, ಚೀನಾದಲ್ಲಿ ಯುದ್ಧವು ವ್ಯಾಪಕವಾಗಿ ನಡೆಯತೊಡಗಿತ್ತು.

ಒಬ್ಬ ವಿದೇಶೀಯನೊಂದಿಗೆ ಮುಖಾಮುಖಿ ಭೇಟಿ

ನಾವು ರೈತರಾಗಿದ್ದರಿಂದ, ನಮ್ಮ ಕುಟುಂಬವು ಯಾವಾಗಲೂ ಬಡತನದಿಂದ ಬಳಲುತ್ತಿತ್ತಾದರೂ, ಯಾವುದೇ ರೀತಿಯ ಖರ್ಚುವೆಚ್ಚವು ಅಗತ್ಯಪಡಿಸದಿರುವಷ್ಟರ ತನಕ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಹೋಗುವಂತೆ ತಂದೆಯವರು ನನಗೆ ಅನುಮತಿಸಿದ್ದರು. ಹೀಗೆ, 1941ರಲ್ಲಿ, ಸುಮಾರು 100 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಓಕಯಾಮಾ ಸಿಟಿಯಲ್ಲಿದ್ದ ಬಾಲಕಿಯರ ಶಾಲೆಗೆ ನಾನು ಸೇರಿಕೊಂಡೆ. ದಕ್ಷರಾದ ಪತ್ನಿಯರು ಹಾಗೂ ತಾಯಂದಿರಾಗಲಿಕ್ಕಾಗಿ ಹುಡುಗಿಯರಿಗೆ ಶಿಕ್ಷಣವನ್ನು ಒದಗಿಸುವುದು ಆ ಶಾಲೆಯ ಉದ್ದೇಶವಾಗಿತ್ತು, ಮತ್ತು ಒಂದು ಕೆಲಸವನ್ನು ಕಲಿಯುವ ಸಲುವಾಗಿ ನಿರ್ದಿಷ್ಟ ಅವಧಿಯ ವರೆಗೆ ಗೃಹಕಾರ್ಯ ನಿರ್ವಹಣೆಗಾಗಿ ಶ್ರೀಮಂತ ಕುಟುಂಬಗಳೊಂದಿಗೆ ವಾಸಿಸುವಂತೆ ಈ ಶಾಲೆಯು ವಿದ್ಯಾರ್ಥಿನಿಯರಿಗೆ ನೇಮಕವನ್ನು ನೀಡುತ್ತಿತ್ತು. ಬೆಳಗ್ಗಿನ ಸಮಯದಲ್ಲಿ ವಿದ್ಯಾರ್ಥಿನಿಯರು ಈ ಮನೆಗಳಲ್ಲಿ ಕೆಲಸಮಾಡುತ್ತಿದ್ದರು ಮತ್ತು ಮಧ್ಯಾಹ್ನದ ಹೊತ್ತು ಅವರು ಶಾಲೆಗೆ ಹೋಗುತ್ತಿದ್ದರು.

ಶಾಲೆಯ ಸಮಾರೋಪ ಸಮಾರಂಭವು ಮುಗಿದ ಬಳಿಕ, ಕಿಮೊನೊ ಧರಿಸಿಕೊಂಡಿದ್ದ ನನ್ನ ಶಿಕ್ಷಕಿಯು ಒಂದು ದೊಡ್ಡ ಮನೆಗೆ ನನ್ನನ್ನು ಕರೆದೊಯ್ದರು. ಆದರೆ ಯಾವುದೋ ಕಾರಣಕ್ಕಾಗಿ ಆ ಮನೆಯ ಹೆಂಗಸು ನನ್ನನ್ನು ಸ್ವೀಕರಿಸಲಿಲ್ಲ. “ಹಾಗಾದರೆ ನಾವು ಶ್ರೀಮತಿ ಕೋಡಾರ ಮನೆಗೆ ಹೋಗೋಣವೇ?” ಎಂದು ಶಿಕ್ಷಕಿಯು ಕೇಳಿದಳು. ನಂತರ ಅವರು ನನ್ನನ್ನು ಪಾಶ್ಚಾತ್ಯ ಶೈಲಿಯ ಮನೆಯೊಂದರ ಬಳಿ ಕರೆದುಕೊಂಡು ಹೋಗಿ, ಕರೆಗಂಟೆಯನ್ನು ಬಾರಿಸಿದರು. ಸ್ವಲ್ಪ ಸಮಯದ ಬಳಿಕ, ನರೆಗೂದಲಿದ್ದ ಎತ್ತರವಾದ ಸ್ತ್ರೀಯೊಬ್ಬರು ಹೊರಗೆ ಬಂದರು. ಅವರನ್ನು ನೋಡಿ ನನಗೆ ಅಚ್ಚರಿಯಾಯಿತು! ಅವರು ಜಪಾನೀ ಸ್ತ್ರೀಯಾಗಿರಲಿಲ್ಲ, ಮತ್ತು ನನ್ನ ಜೀವನದಲ್ಲಿ ಈ ಮುಂಚೆ ನಾನೆಂದೂ ಒಬ್ಬ ಪಾಶ್ಚಾತ್ಯ ವ್ಯಕ್ತಿಯನ್ನು ನೋಡಿರಲಿಲ್ಲ. ನನ್ನ ಶಿಕ್ಷಕಿಯು ನನ್ನನ್ನು ಶ್ರೀಮತಿ ಮೋಡ್‌ ಕೋಡಾರಿಗೆ ಪರಿಚಯಿಸಿ, ತಕ್ಷಣ ನನ್ನನ್ನು ಅಲ್ಲಿ ಬಿಟ್ಟು ಹೊರಟುಹೋದರು. ನನ್ನ ಬ್ಯಾಗುಗಳನ್ನು ಎಳೆಯುತ್ತಾ ನಾನು ಹೆದರಿಕೆಯಿಂದ ಮನೆಯೊಳಕ್ಕೆ ಕಾಲಿರಿಸಿದೆ. ಶ್ರೀಮತಿ ಮೋಡ್‌ ಕೋಡಾ ಅಮೆರಿಕದವರಾಗಿದ್ದು, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ವ್ಯಾಸಂಗಮಾಡಿದಂಥ ಒಬ್ಬ ಜಪಾನೀ ಪುರುಷನೊಂದಿಗೆ ಮದುವೆಯಾಗಿದ್ದಾರೆ ಎಂಬುದು ನನಗೆ ತದನಂತರ ಗೊತ್ತಾಯಿತು. ಅವರು ವಾಣಿಜ್ಯ ಶಾಲೆಗಳಲ್ಲಿ ಇಂಗ್ಲಿಷ್‌ ಭಾಷೆಯನ್ನು ಕಲಿಸುತ್ತಿದ್ದರು.

ಮರುದಿನ ಬೆಳಗ್ಗೆಯಿಂದಲೇ ನನ್ನ ಕಾರ್ಯಮಗ್ನ ಜೀವಿತವು ಆರಂಭವಾಯಿತು. ಶ್ರೀಮತಿ ಕೋಡಾರ ಪತಿಯವರು ಮೂರ್ಛೆರೋಗದಿಂದ ನರಳುತ್ತಿದ್ದರು, ಮತ್ತು ಅವರ ಆರೈಕೆ ಮಾಡುವುದರಲ್ಲಿ ನಾನು ಸಹಾಯಮಾಡಬೇಕಿತ್ತು. ನನಗೆ ಇಂಗ್ಲಿಷ್‌ ಭಾಷೆಯು ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲವಾದ್ದರಿಂದ, ನನಗೆ ಸ್ವಲ್ಪ ಚಿಂತೆಯಾಗತೊಡಗಿತು. ಆದರೆ ಶ್ರೀಮತಿ ಕೋಡಾರವರು ನನ್ನೊಂದಿಗೆ ಜಪಾನೀ ಭಾಷೆಯಲ್ಲಿ ಮಾತಾಡಿದಾಗ ನನಗೆ ನಿರಾಳವೆನಿಸಿತು. ಪ್ರತಿ ದಿನ ಆ ಪತಿಪತ್ನಿಯರು ಪರಸ್ಪರ ಇಂಗ್ಲಿಷ್‌ ಭಾಷೆಯಲ್ಲೇ ಮಾತಾಡಿಕೊಳ್ಳುತ್ತಿದ್ದದ್ದು ನನ್ನ ಕಿವಿಗೆ ಬೀಳುತ್ತಿದ್ದದ್ದರಿಂದ, ಕಾಲಕ್ರಮೇಣ ನನ್ನ ಕಿವಿಗಳು ಆ ಭಾಷೆಗೆ ಒಗ್ಗಿಹೋದವು. ಆ ಮನೆಯಲ್ಲಿದ್ದ ಹಿತಕರವಾದ ವಾತಾವರಣವು ನನಗೆ ತುಂಬ ಇಷ್ಟವಾಯಿತು.

ಮೋಡ್‌ ಅವರು ತಮ್ಮ ಅಸ್ವಸ್ಥ ಗಂಡನಿಗೆ ತೋರಿಸುತ್ತಿದ್ದ ಪತಿಭಕ್ತಿಯನ್ನು ಕಂಡು ನಾನು ಪ್ರಭಾವಿತಳಾದೆ. ಅವರಿಗೆ ಬೈಬಲ್‌ ಓದುವುದೆಂದರೆ ತುಂಬ ಇಷ್ಟಕರವಾದ ಸಂಗತಿಯಾಗಿತ್ತು. ಆ ದಂಪತಿಯು, ಹಳೇ ಪುಸ್ತಕದ ಅಂಗಡಿಯಿಂದ ಯುಗಗಳ ಕುರಿತಾದ ದೈವಿಕ ಯೋಜನೆ ಎಂಬ ಪುಸ್ತಕದ ಒಂದು ಜಪಾನೀ ಮುದ್ರಣವನ್ನು ಖರೀದಿಸಿದ್ದರು ಮತ್ತು ಅನೇಕ ವರ್ಷಗಳಿಂದ ಕಾವಲಿನಬುರುಜು ಪತ್ರಿಕೆಯ ಇಂಗ್ಲಿಷ್‌ ಸಂಚಿಕೆಯ ಚಂದಾದಾರರಾಗಿದ್ದರು ಎಂಬುದು ನನಗೆ ನಂತರ ತಿಳಿದುಬಂತು.

ಒಂದು ದಿನ ನನಗೆ ಬೈಬಲೊಂದನ್ನು ಉಡುಗೊರೆಯಾಗಿ ನೀಡಲಾಯಿತು. ನನಗೆ ತುಂಬ ಸಂತೋಷವಾಯಿತು, ಏಕೆಂದರೆ ನನ್ನ ಜೀವನದಲ್ಲಿ ನನ್ನ ಸ್ವಂತ ಬೈಬಲನ್ನು ನಾನು ಪಡೆದುಕೊಂಡದ್ದು ಅದೇ ಪ್ರಥಮ ಬಾರಿಯಾಗಿತ್ತು. ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ನಾನು ಅದನ್ನು ಓದಿದೆನಾದರೂ ಅದರ ಕುರಿತು ನನಗೆ ಸ್ವಲ್ಪವೇ ಅರ್ಥವಾಗುತ್ತಿತ್ತು. ನಾನು ಒಬ್ಬ ಜಪಾನೀ ಶಿಂಟೋಪಂಥದವಳಾಗಿ ಬೆಳೆಸಲ್ಪಟ್ಟಿದ್ದರಿಂದ, ಯೇಸು ಕ್ರಿಸ್ತನು ನನಗೆ ತುಂಬ ಪರಕೀಯನಾಗಿ ಕಂಡನು. ಯಾವುದು ಜೀವನ್ಮರಣದ ಕುರಿತಾದ ನನ್ನ ಪ್ರಶ್ನೆಗಳನ್ನು ಉತ್ತರಿಸಲಿತ್ತೊ ಆ ಬೈಬಲ್‌ ಸತ್ಯವನ್ನು ಕಾಲಕ್ರಮೇಣ ಅಂಗೀಕರಿಸುವಂತೆ ಮುನ್ನಡಿಸಲಿದ್ದ ಘಟನೆಗಳ ಆರಂಭವು ಇದಾಗಿತ್ತು ಎಂಬುದನ್ನು ನಾನು ಗ್ರಹಿಸಲೇ ಇಲ್ಲ.

ಮೂರು ದುಃಖಕರ ಘಟನೆಗಳು

ಎರಡು ವರ್ಷಗಳ ತಾತ್ಕಾಲಿಕ ತರಬೇತಿ ಕೆಲಸವು ಕೊನೆಗೊಂಡಿತು, ಮತ್ತು ನಾನು ಈ ಕುಟುಂಬಕ್ಕೆ ವಿದಾಯ ಹೇಳಬೇಕಾದ ಸಮಯ ಬಂದಿತ್ತು. ನಾನು ಶಾಲೆಯನ್ನು ಮುಗಿಸಿದ ಬಳಿಕ ಹುಡುಗಿಯರ ಸ್ವಯಂಸೇವಾ ಸೇನಾದಳವನ್ನು ಸೇರಿದೆ ಮತ್ತು ನೌಕಾದಳದ ಸಮವಸ್ತ್ರಗಳನ್ನು ಸಿದ್ಧಪಡಿಸುವುದರಲ್ಲಿ ಭಾಗವಹಿಸಿದೆ. ಅಮೆರಿಕನ್‌ B-29 ಬಾಂಬರ್‌ಗಳ ವಾಯುಸೇನೆಯ ದಾಳಿಗಳು ಆರಂಭವಾದವು ಮತ್ತು 1945ರ ಆಗಸ್ಟ್‌ 6ರಂದು, ಹಿರೋಶಿಮದ ಮೇಲೆ ಒಂದು ಅಣುಬಾಂಬು ಹಾಕಲ್ಪಟ್ಟಿತು. ಕೆಲವು ದಿನಗಳ ಬಳಿಕ ನನಗೆ ಒಂದು ಟೆಲಿಗ್ರಾಮ್‌ ಬಂತು, ಮತ್ತು ನನ್ನ ತಾಯಿಯವರು ತುಂಬ ಅಸ್ವಸ್ಥರಾಗಿದ್ದಾರೆಂಬುದು ನನಗೆ ತಿಳಿದುಬಂತು. ನಾನು ನನ್ನ ಊರಿಗೆ ಹೋಗುವ ಮೊದಲ ರೈಲುಗಾಡಿಯನ್ನೇರಿದೆ. ನಾನು ರೈಲುಗಾಡಿಯಿಂದ ಇಳಿಯುತ್ತಿದ್ದಂತೆಯೇ ನನ್ನ ಸಂಬಂಧಿಕನೊಬ್ಬನು ನನ್ನನ್ನು ಭೇಟಿಯಾಗಿ, ತಾಯಿಯವರು ತೀರಿಹೋದರು ಎಂಬ ಸುದ್ದಿಯನ್ನು ನನಗೆ ಮುಟ್ಟಿಸಿದನು. ಆಗಸ್ಟ್‌ 11ರಂದು ಅವರು ತೀರಿಕೊಂಡರು. ಅನೇಕ ವರ್ಷಗಳಿಂದ ನನಗೆ ಯಾವುದರ ಭಯವಿತ್ತೋ ಅದು ನಡೆದೇ ಹೋಯಿತು! ಇನ್ನೆಂದೂ ಅವರು ನನ್ನೊಂದಿಗೆ ಮಾತಾಡಸಾಧ್ಯವಿರಲಿಲ್ಲ ಮತ್ತು ನನ್ನ ಕಡೆ ನೋಡಿ ಮುಗುಳ್ನಗೆ ಬೀರಸಾಧ್ಯವಿರಲಿಲ್ಲ.

ಆಗಸ್ಟ್‌ 15ರಂದು, ಜಪಾನಿನ ಸೋಲು ವಾಸ್ತವಿಕತೆಯಾಗಿ ಪರಿಣಮಿಸಿತು. ಆದುದರಿಂದ ನಾನು ಮೂರು ದುಃಖಕರ ಘಟನೆಗಳನ್ನು ಎದುರಿಸಬೇಕಿತ್ತು, ಅದೂ ಕೂಡ ಹತ್ತೇ ದಿನಗಳ ಅಂತರದಲ್ಲಿ. ಅಣುಬಾಂಬಿನ ಸ್ಫೋಟನವು ಮೊದಲನೆಯ ಘಟನೆಯಾಗಿತ್ತು, ನಂತರ ತಾಯಿಯವರ ಮರಣ, ಹಾಗೂ ಜಪಾನಿನ ಇತಿಹಾಸಪ್ರಸಿದ್ಧ ಪರಾಜಯ. ಕಡಿಮೆಪಕ್ಷ ಜನರು ಯುದ್ಧದಲ್ಲಿ ಸಾಯುವುದಾದರೂ ತಪ್ಪುತ್ತದೆ ಎಂಬುದನ್ನು ತಿಳಿಯುವುದು ಸಾಂತ್ವನದಾಯಕವಾಗಿತ್ತು. ಹೃದಯದಲ್ಲಿ ಒಂದು ಶೂನ್ಯಭಾವದೊಂದಿಗೆ ನಾನು ನನ್ನ ಉದ್ಯೋಗವನ್ನು ಬಿಟ್ಟು ನನ್ನ ಸ್ವಂತ ಊರಿಗೆ ಹಿಂದಿರುಗಿದೆ.

ಸತ್ಯದ ಕಡೆಗೆ ಸೆಳೆಯಲ್ಪಟ್ಟದ್ದು

ಒಂದು ದಿನ ಇದ್ದಕ್ಕಿದ್ದಂತೆ ಓಕಯಾಮಾದಲ್ಲಿದ್ದ ಮೋಡ್‌ ಕೋಡಾರಿಂದ ನನಗೆ ಒಂದು ಪತ್ರವು ಬಂತು. ಅವರು ಒಂದು ಆಂಗ್ಲ ಶಾಲೆಯನ್ನು ಆರಂಭಿಸಲಿಕ್ಕಿದ್ದರಿಂದ, ನಾನು ಅವರ ಬಳಿ ಉಳಿದುಕೊಂಡು ಮನೆಗೆಲಸಗಳನ್ನು ಮಾಡುವುದರಲ್ಲಿ ಅವರಿಗೆ ಸಹಾಯಮಾಡಸಾಧ್ಯವಿದೆಯೋ ಎಂದು ವಿಚಾರಿಸಿ ಪತ್ರವನ್ನು ಬರೆದಿದ್ದರು. ನಾನೇನು ಮಾಡಬೇಕು ಎಂಬುದೇ ನನಗೆ ತೋಚಲಿಲ್ಲ, ಆದರೂ ನಾನು ಅವರ ಆಮಂತ್ರಣಕ್ಕೆ ಓಗೊಟ್ಟೆ. ಆಮೇಲೆ ಕೆಲವು ವರ್ಷಗಳ ಬಳಿಕ, ಕೋಡಾ ದಂಪತಿಯೊಂದಿಗೆ ನಾನು ಕೋಬೆಗೆ ಸ್ಥಳಾಂತರಿಸಿದೆ.

ಇಸವಿ 1949ರ ಬೇಸಗೆಕಾಲದ ಆರಂಭದಲ್ಲಿ, ಎತ್ತರವಾಗಿದ್ದ, ಸ್ನೇಹಪರ ವ್ಯಕ್ತಿಯೊಬ್ಬರು ಕೋಡಾ ಕುಟುಂಬಕ್ಕೆ ಭೇಟಿ ನೀಡಿದರು. ಅವರ ಹೆಸರು ಡಾನಲ್ಡ್‌ ಹಾಸ್ಲಟ್‌ ಎಂದಾಗಿತ್ತು, ಮತ್ತು ಕೋಬೆಯಲ್ಲಿ ಮಿಷನೆರಿಗಳಿಗೆ ಒಂದು ಮನೆಯನ್ನು ಹುಡುಕಲಿಕ್ಕಾಗಿ ಅವರು ಟೋಕಿಯೋದಿಂದ ಕೋಬೆಗೆ ಬಂದಿದ್ದರು. ಜಪಾನಿಗೆ ಬಂದ ಯೆಹೋವನ ಸಾಕ್ಷಿಗಳ ಮಿಷನೆರಿಗಳಲ್ಲಿ ಅವರೇ ಪ್ರಪ್ರಥಮರಾಗಿದ್ದರು. ಅವರಿಗೆ ಒಂದು ಮನೆಯು ಸಿಕ್ಕಿತು, ಮತ್ತು 1949ರ ನವೆಂಬರ್‌ ತಿಂಗಳಿನಲ್ಲಿ ಅನೇಕ ಮಿಷನೆರಿಗಳು ಕೋಬೆಗೆ ಆಗಮಿಸಿದರು. ಒಂದು ದಿನ, ಅವರಲ್ಲಿ ಐವರು ಕೋಡಾ ದಂಪತಿಯನ್ನು ಭೇಟಿಮಾಡಲು ಬಂದರು. ಅವರಲ್ಲಿ ಲಾಯ್ಡ್‌ ಬ್ಯಾರೀ ಮತ್ತು ಪರ್ಸೀ ಇಸ್‌ಲೋಬ್‌ ಎಂಬ ಇಬ್ಬರು ಮಿಷನೆರಿಗಳು, ಆ ಮನೆಯಲ್ಲಿ ಕೂಡಿಬಂದಿದ್ದವರಲ್ಲಿ ಪ್ರತಿಯೊಬ್ಬರ ಬಳಿ ಸುಮಾರು ಹತ್ತು ನಿಮಿಷಗಳ ವರೆಗೆ ಇಂಗ್ಲಿಷ್‌ನಲ್ಲಿ ಮಾತಾಡಿದರು. ಆ ಮಿಷನೆರಿಗಳಿಗೆ ಮೋಡ್‌ರವರು ಒಬ್ಬ ಕ್ರೈಸ್ತ ಸಹೋದರಿಯಾಗಿಯೇ ಪರಿಚಿತರಾಗಿದ್ದರು ಮತ್ತು ಆ ಸಹವಾಸದಿಂದ ಮೋಡ್‌ ತುಂಬ ಉತ್ತೇಜಿತರಾದರು ಎಂಬುದು ವ್ಯಕ್ತವಾಗಿತ್ತು. ಈ ಸಮಯದಲ್ಲೇ ನಾನು ಇಂಗ್ಲಿಷ್‌ ಭಾಷೆಯನ್ನು ಕಲಿಯುವಂತೆ ಪ್ರೇರಿಸಲ್ಪಟ್ಟೆ.

ಅತ್ಯುತ್ಸಾಹಿಗಳಾದ ಆ ಮಿಷನೆರಿಗಳ ಸಹಾಯದಿಂದ ನಾನು ಮೂಲಭೂತ ಬೈಬಲ್‌ ಸತ್ಯಗಳನ್ನು ಕ್ರಮೇಣ ಅರ್ಥಮಾಡಿಕೊಳ್ಳತೊಡಗಿದೆ. ನನ್ನ ಬಾಲ್ಯದಿಂದಲೂ ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಗಳಿಗೆ ನಾನು ಉತ್ತರಗಳನ್ನು ಕಂಡುಕೊಂಡೆ. ಹೌದು, ಒಂದು ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಮತ್ತು ‘ಸಮಾಧಿಗಳಲ್ಲಿರುವವರೆಲ್ಲರಿಗೆ’ ಪುನರುತ್ಥಾನದ ವಾಗ್ದಾನವನ್ನು ಬೈಬಲು ಒದಗಿಸುತ್ತದೆ. (ಯೋಹಾನ 5:28, 29; ಪ್ರಕಟನೆ 21:1, 4) ತನ್ನ ಮಗನಾದ ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ಮೂಲಕ ಇಂಥ ಒಂದು ನಿರೀಕ್ಷೆಯನ್ನು ಸಾಧ್ಯಗೊಳಿಸಿದ್ದಕ್ಕಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೆ.

ಸಂತೋಷಭರಿತ ದೇವಪ್ರಭುತ್ವಾತ್ಮಕ ಚಟುವಟಿಕೆಗಳು

ಇಸವಿ 1949ರ ಡಿಸೆಂಬರ್‌ 30ರಿಂದ 1950ರ ಜನವರಿ 1ರ ತನಕ, ಕೋಬೆ ಮಿಷನೆರಿ ಗೃಹದಲ್ಲಿ ಜಪಾನಿನ ಪ್ರಪ್ರಥಮ ದೇವಪ್ರಭುತ್ವಾತ್ಮಕ ಸಮ್ಮೇಳನವು ನಡೆಯಿತು. ನಾನು ಮೋಡ್‌ರವರೊಂದಿಗೆ ಅಲ್ಲಿಗೆ ಹೋದೆ. ಆ ದೊಡ್ಡ ಮಿಷನೆರಿ ಗೃಹವು ಈ ಮುಂಚೆ ಒಬ್ಬ ನಾಸಿ ವ್ಯಕ್ತಿಗೆ ಸೇರಿದ್ದಾಗಿತ್ತು ಮತ್ತು ಅಲ್ಲಿಂದ ಇನ್‌ಲೆಂಡ್‌ ಸೀ ಹಾಗೂ ಅವಾಜಿ ಐಲೆಂಡ್‌ನ ನಯನಮನೋಹರ ದೃಶ್ಯವನ್ನು ನೋಡಸಾಧ್ಯವಿತ್ತು. ನನಗೆ ಬೈಬಲಿನ ಕುರಿತು ತೀರ ಕಡಿಮೆ ಜ್ಞಾನವಿದ್ದದ್ದರಿಂದ, ಆ ಸಮಯದಲ್ಲಿ ಏನು ಹೇಳಲ್ಪಟ್ಟಿತೋ ಅದರಲ್ಲಿ ಹೆಚ್ಚಿನದ್ದು ನನಗೆ ಅರ್ಥವಾಗಲಿಲ್ಲ. ಆದರೂ, ಜಪಾನೀಯರೊಂದಿಗೆ ಸ್ವಚ್ಛಂದವಾಗಿ ಬೆರೆಯುತ್ತಿದ್ದ ಮಿಷನೆರಿಗಳನ್ನು ನೋಡಿ ನಾನು ತುಂಬ ಪ್ರಭಾವಿತಳಾದೆ. ಆ ಸಮ್ಮೇಳನದಲ್ಲಿ ಕೊಡಲ್ಪಟ್ಟ ಬಹಿರಂಗ ಭಾಷಣಕ್ಕೆ ಒಟ್ಟು 101 ಮಂದಿ ಹಾಜರಿದ್ದರು.

ಇದಾದ ಬಳಿಕ ಸ್ವಲ್ಪ ಸಮಯದಲ್ಲೇ, ನಾನು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ಮನೆಯಿಂದ ಮನೆಗೆ ಹೋಗಲು ನನಗೆ ತುಂಬ ಧೈರ್ಯವು ಬೇಕಾಗಿತ್ತು, ಏಕೆಂದರೆ ನಾನು ನಾಚಿಕೆ ಸ್ವಭಾವದವಳಾಗಿದ್ದೆ. ಒಂದು ದಿನ ಬೆಳಗ್ಗೆ ನನ್ನನ್ನು ಕ್ಷೇತ್ರ ಸೇವೆಗೆ ಕರೆದುಕೊಂಡು ಹೋಗಲಿಕ್ಕಾಗಿ ಸಹೋದರ ಲಾಯ್ಡ್‌ ಬ್ಯಾರೀ ನಮ್ಮ ಮನೆಗೆ ಬಂದರು. ಅವರು ಸಹೋದರಿ ಕೋಡಾರ ಪಕ್ಕದ ಮನೆಯಿಂದಲೇ ಸಾರುವ ಕೆಲಸವನ್ನು ಆರಂಭಿಸಿದರು. ನಾನು ಹೆಚ್ಚುಕಡಿಮೆ ಅವರ ಹಿಂದೆಯೇ ಅಡಗಿನಿಂತಿದ್ದೆ, ಆದರೆ ಅದೇ ಸಮಯದಲ್ಲಿ ಅವರ ನಿರೂಪಣೆಯನ್ನು ಕೇಳಿಸಿಕೊಳ್ಳುತ್ತಾ ಇದ್ದೆ. ಎರಡನೆಯ ಬಾರಿ ನಾನು ಸಾರಲಿಕ್ಕಾಗಿ ಹೋದಾಗ, ಇತರ ಇಬ್ಬರು ಮಿಷನೆರಿಗಳು ನನ್ನ ಜೊತೆಗಿದ್ದರು. ಒಬ್ಬ ವೃದ್ಧ ಜಪಾನೀ ಸ್ತ್ರೀಯು ನಮ್ಮನ್ನು ಮನೆಯೊಳಗೆ ಆಮಂತ್ರಿಸಿ, ನಮ್ಮ ಸಂದೇಶಕ್ಕೆ ಕಿವಿಗೊಟ್ಟು, ನಂತರ ನಮ್ಮೆಲ್ಲರಿಗೂ ಒಂದು ಲೋಟ ಹಾಲನ್ನು ಕೊಟ್ಟರು. ಅವರು ಮನೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡರು ಮತ್ತು ಕಾಲಕ್ರಮೇಣ ಒಬ್ಬ ದೀಕ್ಷಾಸ್ನಾತ ಕ್ರೈಸ್ತರಾದರು. ಅವರ ಪ್ರಗತಿಯನ್ನು ನೋಡುವುದು ತುಂಬ ಉತ್ತೇಜನದಾಯಕವಾಗಿತ್ತು.

ಇಸವಿ 1951ರ ಏಪ್ರಿಲ್‌ ತಿಂಗಳಿನಲ್ಲಿ, ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಿಂದ ಸಹೋದರ ನೇಥನ್‌ ಏಚ್‌. ನಾರ್‌ರವರು ಮೊದಲ ಬಾರಿಗೆ ಜಪಾನನ್ನು ಸಂದರ್ಶಿಸಿದರು. ಟೋಕಿಯೋದ ಕಾಂಡಾದಲ್ಲಿರುವ ಕ್ಯೋರೇಟ್ಸೂ ಸಭಾಂಗಣದಲ್ಲಿ ಅವರು ಕೊಟ್ಟ ಬಹಿರಂಗ ಭಾಷಣಕ್ಕೆ ಸುಮಾರು 700 ಮಂದಿ ಹಾಜರಾದರು. ಈ ವಿಶೇಷ ಕೂಟದಲ್ಲಿ, ಹಾಜರಿದ್ದವರೆಲ್ಲರೂ ಕಾವಲಿನಬುರುಜು ಪತ್ರಿಕೆಯ ಜಪಾನೀ ಸಂಚಿಕೆಯ ಬಿಡುಗಡೆಯನ್ನು ನೋಡಿ ಅತ್ಯಾನಂದಪಟ್ಟರು. ಮುಂದಿನ ತಿಂಗಳಿನಲ್ಲಿ ಸಹೋದರ ನಾರ್‌ ಅವರು ಕೋಬೆಯನ್ನು ಸಂದರ್ಶಿಸಿದರು ಮತ್ತು ಅಲ್ಲಿ ನಡೆದ ವಿಶೇಷ ಕೂಟದಲ್ಲಿ, ಯೆಹೋವನಿಗೆ ನನ್ನ ಸಮರ್ಪಣೆಯ ಸಂಕೇತವಾಗಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.

ಸುಮಾರು ಒಂದು ವರ್ಷದ ಬಳಿಕ, ಪೂರ್ಣ ಸಮಯದ ಶುಶ್ರೂಷೆಯನ್ನು ಅಂದರೆ ಪಯನೀಯರ್‌ ಸೇವೆಯನ್ನು ಪ್ರವೇಶಿಸುವಂತೆ ನನ್ನನ್ನು ಉತ್ತೇಜಿಸಲಾಯಿತು. ಆ ಸಮಯದಲ್ಲಿ ಜಪಾನಿನಲ್ಲಿ ಕೆಲವೇ ಮಂದಿ ಪಯನೀಯರರಿದ್ದರು, ಮತ್ತು ಆರ್ಥಿಕವಾಗಿ ನನ್ನನ್ನೇ ಹೇಗೆ ಬೆಂಬಲಿಸಿಕೊಳ್ಳಸಾಧ್ಯವಿದೆ ಎಂಬ ಚಿಂತೆ ನನ್ನನ್ನಾವರಿಸಿತು. ನಾನು ವಿವಾಹಮಾಡಿಕೊಳ್ಳುವ ಪ್ರತೀಕ್ಷೆಯ ಕುರಿತಾಗಿ ಆಲೋಚಿಸತೊಡಗಿದೆ. ಆದರೆ ಯೆಹೋವನ ಸೇವೆಮಾಡುವುದೇ ಜೀವನದಲ್ಲಿ ಪ್ರಥಮ ಸ್ಥಾನದಲ್ಲಿರಬೇಕು ಎಂಬುದು ನನಗೆ ಮನವರಿಕೆಯಾಯಿತು, ಮತ್ತು 1952ರಲ್ಲಿ ನಾನು ಪಯನೀಯರ್‌ ಸೇವೆಗಿಳಿದೆ. ಸಂತೋಷಕರವಾಗಿಯೇ, ಪಯನೀಯರ್‌ ಸೇವೆಯನ್ನು ಮಾಡುತ್ತಿರುವಾಗ ಸಹೋದರಿ ಕೋಡಾರ ಬಳಿ ಆಂಶಕಾಲಿಕ ಕೆಲಸವನ್ನು ಮಾಡಲು ಶಕ್ತಳಾದೆ.

ಸುಮಾರು ಆ ಸಮಯದಷ್ಟಕ್ಕೆ, ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ನಾನು ನೆನಸಿದ್ದ ನನ್ನ ಅಣ್ಣನು ಟೈವಾನ್‌ನಿಂದ ತನ್ನ ಕುಟುಂಬದೊಂದಿಗೆ ಮನೆಗೆ ಹಿಂದಿರುಗಿದನು. ನನ್ನ ಕುಟುಂಬವು ಎಂದೂ ಕ್ರೈಸ್ತಧರ್ಮದಲ್ಲಿ ಆಸಕ್ತಿಯನ್ನು ತೋರಿಸಿರಲಿಲ್ಲವಾದರೂ, ಪಯನೀಯರ್‌ ಹುರುಪಿನಿಂದ ಪ್ರೇರಿತಳಾದ ನಾನು, ನಮ್ಮ ಪತ್ರಿಕೆಗಳನ್ನು ಹಾಗೂ ಪುಸ್ತಿಕೆಗಳನ್ನು ಅವರಿಗೆ ಕಳುಹಿಸಲು ಆರಂಭಿಸಿದೆ. ಸಮಯಾನಂತರ, ಕೆಲಸದ ಕಾರಣ ನನ್ನ ಅಣ್ಣನು ತನ್ನ ಕುಟುಂಬದೊಂದಿಗೆ ಕೋಬೆಗೆ ಸ್ಥಳಾಂತರಿಸಿದನು. “ನೀವು ಆ ಪತ್ರಿಕೆಗಳನ್ನು ಓದಿದ್ದೀರೋ?” ಎಂದು ನನ್ನ ಅತ್ತಿಗೆಯನ್ನು ಕೇಳಿದೆ. ನನ್ನ ಆಶ್ಚರ್ಯಕ್ಕೆ ಅವರು ಉತ್ತರಿಸಿದ್ದು: “ಅವು ತುಂಬ ಆಸಕ್ತಿದಾಯಕ ಪತ್ರಿಕೆಗಳಾಗಿವೆ.” ಅವರು ಮಿಷನೆರಿಗಳಲ್ಲಿ ಒಬ್ಬರೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದರು, ಮತ್ತು ಅವರೊಂದಿಗೆ ವಾಸಿಸುತ್ತಿದ್ದ ನನ್ನ ತಂಗಿಯೂ ಅಧ್ಯಯನದಲ್ಲಿ ಜೊತೆಗೂಡಲು ಆರಂಭಿಸಿದಳು. ಸಕಾಲದಲ್ಲಿ ಅವರಿಬ್ಬರೂ ದೀಕ್ಷಾಸ್ನಾತ ಕ್ರೈಸ್ತರಾದರು.

ಅಂತಾರಾಷ್ಟ್ರೀಯ ಸಹೋದರತ್ವದಿಂದ ಪ್ರಭಾವಿತಳಾದದ್ದು

ಇದಾದ ಸ್ವಲ್ಪದರಲ್ಲೇ, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 22ನೆಯ ಕ್ಲಾಸಿಗೆ ಹಾಜರಾಗಲಿಕ್ಕಾಗಿ ಒಂದು ಆಮಂತ್ರಣವನ್ನು ನಾನು ಪಡೆದುಕೊಂಡಾಗ ನಾನು ಬೆಕ್ಕಸಬೆರಗಾದೆ. ನಾನು ಮತ್ತು ಸಹೋದರ ಟ್ಸೂಟೋಮೂ ಫೂಕಾಸೇ ಅವರು, ಜಪಾನಿನಿಂದ ಆ ಸ್ಕೂಲ್‌ಗೆ ಆಮಂತ್ರಿಸಲ್ಪಟ್ಟ ಮೊದಲ ವ್ಯಕ್ತಿಗಳಾಗಿದ್ದೆವು. 1953ರಲ್ಲಿ, ಆ ತರಬೇತಿಯು ಆರಂಭಗೊಳ್ಳುವುದಕ್ಕೆ ಮುಂಚೆ, ನಾವು ನ್ಯೂ ಯಾರ್ಕ್‌ನ ಯಾಂಕೀ ಸ್ಟೇಡಿಯಮ್‌ನಲ್ಲಿ ನಡೆದ ‘ನೂತನ ಲೋಕ ಸಮಾಜ’ ಅಧಿವೇಶನಕ್ಕೆ ಹಾಜರಾಗಲು ಶಕ್ತರಾದೆವು. ನಾನು ಯೆಹೋವನ ಜನರ ಅಂತಾರಾಷ್ಟ್ರೀಯ ಸಹೋದರತ್ವದಿಂದ ತುಂಬ ಪ್ರಭಾವಿತಳಾದೆ.

ಅಧಿವೇಶನದ ಐದನೆಯ ದಿನದಂದು, ಬಹುತೇಕ ಮಿಷನೆರಿಗಳಾಗಿದ್ದ ಜಪಾನೀ ಪ್ರತಿನಿಧಿಗಳು ಕಿಮೊನೊಗಳನ್ನು ಧರಿಸಲಿಕ್ಕಿದ್ದೆವು. ಈ ಮುಂಚೆಯೇ ನನ್ನ ಲಗ್ಗೇಜಿನೊಂದಿಗೆ ರವಾನಿಸಿದ್ದ ಕಿಮೊನೊ ಸಕಾಲದಲ್ಲಿ ಬಂದು ತಲಪದಿದ್ದ ಕಾರಣ, ಸಹೋದರಿ ನಾರ್‌ರ ಬಳಿಯಿಂದ ನಾನೊಂದು ಕಿಮೊನೊವನ್ನು ಪಡೆದುಕೊಂಡೆ. ಸೆಷನ್‌ನ ಸಮಯದಲ್ಲಿ ಮಳೆ ಬರಲಾರಂಭಿಸಿತು ಮತ್ತು ನನ್ನ ಕಿಮೊನೊ ಪೂರ್ತಿ ನೆನೆದುಹೋಗುವುದೆಂಬ ಚಿಂತೆ ನನಗಾಯಿತು. ಆ ಕ್ಷಣಕ್ಕೇ ಯಾರೋ ಒಬ್ಬರು ಹಿಂದಿನಿಂದ ಬಂದು ಒಂದು ರೇನ್‌ಕೋಟನ್ನು ನನ್ನ ಮೇಲೆ ಮೃದುವಾಗಿ ಹಾಕಿದರು. ನನ್ನ ಪಕ್ಕ ನಿಂತುಕೊಂಡಿದ್ದ ಒಬ್ಬ ಸಹೋದರಿಯು ನನ್ನನ್ನು “ಅವರು ಯಾರೆಂದು ನಿನಗೆ ಗೊತ್ತೋ?” ಎಂದು ಕೇಳಿದರು. ಅವರೇ ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿರುವ ಸಹೋದರ ಫ್ರೆಡ್‌ರಿಕ್‌ ಡಬ್ಲ್ಯೂ. ಫ್ರಾನ್ಸ್‌ ಎಂಬುದು ನನಗೆ ನಂತರ ಗೊತ್ತಾಯಿತು. ಯೆಹೋವನ ಸಂಸ್ಥೆಯ ಆದರಣೀಯ ಭಾವವನ್ನು ನಾನು ನಿಜವಾಗಿಯೂ ಅನುಭವಿಸಿದೆ!

ಗಿಲ್ಯಡ್‌ನ 22ನೆಯ ಕ್ಲಾಸು ನಿಜವಾಗಿಯೂ ಅಂತಾರಾಷ್ಟ್ರೀಯವಾದದ್ದಾಗಿತ್ತು, ಏಕೆಂದರೆ 37 ದೇಶಗಳಿಂದ ಬಂದ 120 ವಿದ್ಯಾರ್ಥಿಗಳು ಅದರಲ್ಲಿ ಒಳಗೂಡಿದ್ದರು. ಅಲ್ಲಿ ಭಾಷೆಗೆ ಸಂಬಂಧಿಸಿದ ಕೆಲವು ಅಡೆತಡೆಗಳಿದ್ದವಾದರೂ, ನಾವೆಲ್ಲರೂ ಅಂತಾರಾಷ್ಟ್ರೀಯ ಸಹೋದರರ ಬಳಗದಲ್ಲಿ ಪೂರ್ಣವಾಗಿ ಆನಂದಿಸಿದೆವು. 1954ರ ಫೆಬ್ರವರಿ ತಿಂಗಳ ಒಂದು ಹಿಮಾವೃತ ದಿನದಂದು ನಾನು ಪದವೀಧರಳಾದೆ ಮತ್ತು ಪುನಃ ಜಪಾನಿಗೇ ಹೋಗುವ ನೇಮಕವನ್ನು ಪಡೆದೆ. ನನ್ನ ಸಹಪಾಠಿಯಾಗಿದ್ದ ಇಂಗರ್‌ ಬ್ರಾಂಟ್‌ ಎಂಬ ಹೆಸರಿನ ಒಬ್ಬ ಸ್ವೀಡಿಷ್‌ ಸಹೋದರಿಯು, ನಗೋಯ ಸಿಟಿಯಲ್ಲಿ ನನ್ನ ಸಹಭಾಗಿಯಾಗಿ ಸೇವೆಮಾಡಲಿದ್ದರು. ಅಲ್ಲಿ, ಯುದ್ಧದ ನಿಮಿತ್ತ ಕೊರಿಯದಿಂದ ಹೊರಡಿಸಲ್ಪಟ್ಟಿದ್ದ ಮಿಷನೆರಿಗಳ ಒಂದು ಗುಂಪಿನೊಂದಿಗೆ ನಾವು ಜೊತೆಗೂಡಿದೆವು. ಮಿಷನೆರಿ ಸೇವೆಯಲ್ಲಿ ನಾನು ಕಳೆದ ಕೆಲವೇ ವರ್ಷಗಳು ನಿಜವಾಗಿಯೂ ಅತ್ಯಮೂಲ್ಯವಾಗಿದ್ದವು.

ಒಬ್ಬ ದಂಪತಿಯೋಪಾದಿ ಹರ್ಷಭರಿತ ಸೇವೆ

ಇಸವಿ 1957ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಟೋಕಿಯೋ ಬೆತೆಲ್‌ನಲ್ಲಿ ಸೇವೆಮಾಡಲಿಕ್ಕಾಗಿ ನನಗೆ ಆಮಂತ್ರಣವು ಸಿಕ್ಕಿತು. ಎರಡು ಅಂತಸ್ತಿನ ಒಂದು ಮರದ ಕಟ್ಟಡವು ಜಪಾನಿನ ಬ್ರಾಂಚ್‌ ಆಫೀಸಾಗಿತ್ತು. ಆ ಬ್ರಾಂಚ್‌ನಲ್ಲಿ, ಬ್ರಾಂಚ್‌ ಮೇಲ್ವಿಚಾರಕರಾಗಿದ್ದ ಸಹೋದರ ಬ್ಯಾರೀಯವರನ್ನು ಸೇರಿಸಿ ನಾಲ್ಕೇ ಸದಸ್ಯರು ಇದ್ದರು. ಕುಟುಂಬದ ಉಳಿದ ಸದಸ್ಯರು ಮಿಷನೆರಿಗಳಾಗಿದ್ದರು. ನನ್ನನ್ನು ಭಾಷಾಂತರ ಹಾಗೂ ಕರಡುಪ್ರತಿ ತಿದ್ದುವಿಕೆ, ಕ್ಲೀನಿಂಗ್‌, ಲಾಂಡ್ರಿ, ಅಡಿಗೆ ಮತ್ತು ಇನ್ನಿತರ ಕೆಲಸಕ್ಕೆ ನೇಮಿಸಲಾಯಿತು.

ಜಪಾನ್‌ನಲ್ಲಿನ ಕೆಲಸವು ಹೆಚ್ಚೆಚ್ಚು ವಿಸ್ತರಿಸುತ್ತಾ ಇತ್ತು, ಮತ್ತು ಹೆಚ್ಚೆಚ್ಚು ಸಹೋದರರನ್ನು ಬೆತೆಲಿಗೆ ಆಮಂತ್ರಿಸಲಾಯಿತು. ಅಂಥವರಲ್ಲಿ ಒಬ್ಬರು ನಾನು ಸಹವಾಸಿಸುತ್ತಿದ್ದ ಸಭೆಯಲ್ಲಿ ಒಬ್ಬ ಮೇಲ್ವಿಚಾರಕರಾದರು. 1966ರಲ್ಲಿ, ನಾನು ಮತ್ತು ಜೂಂಜೀ ಕೋಸೇನೋ ಎಂಬ ಹೆಸರಿನ ಆ ಸಹೋದರರು ಮದುವೆಯಾದೆವು. ನಾವು ಮದುವೆಯಾದ ಬಳಿಕ, ಜೂಂಜೀಯವರನ್ನು ಸರ್ಕಿಟ್‌ ಕೆಲಸಕ್ಕೆ ನೇಮಿಸಲಾಯಿತು. ನಾವು ಬೇರೆ ಬೇರೆ ಸಭೆಗಳಿಗೆ ಪ್ರಯಾಣಿಸಿದಾಗ, ಅನೇಕಾನೇಕ ಸಹೋದರ ಸಹೋದರಿಯರನ್ನು ತಿಳಿದುಕೊಳ್ಳುವುದು ನಿಜವಾಗಿಯೂ ತುಂಬ ಆನಂದದಾಯಕವಾಗಿತ್ತು. ನನಗೆ ಭಾಷಾಂತರವನ್ನು ಮಾಡುವ ನೇಮಕವೂ ಕೊಡಲ್ಪಡುತ್ತಿತ್ತಾದ್ದರಿಂದ, ಆಯಾ ವಾರಕ್ಕಾಗಿ ನಾವು ಎಲ್ಲಿ ತಂಗುತ್ತಿದ್ದೆವೋ ಆ ಮನೆಯಲ್ಲಿ ಆ ಕೆಲಸವನ್ನು ಮಾಡುತ್ತಿದ್ದೆ. ನಾವು ಪ್ರಯಾಣಿಸುತ್ತಿದ್ದಾಗ, ನಮ್ಮ ಸೂಟ್‌ಕೇಸ್‌ಗಳು ಮತ್ತು ಇತರ ಬ್ಯಾಗ್‌ಗಳ ಜೊತೆಗೆ ನಾವು ಭಾರವಾದ ಶಬ್ದಕೋಶಗಳನ್ನು ಸಹ ಕೊಂಡೊಯ್ಯಬೇಕಾಗುತ್ತಿತ್ತು.

ನಾಲ್ಕು ವರ್ಷಕ್ಕಿಂತಲೂ ಹೆಚ್ಚು ಸಮಯ ನಾವು ಸರ್ಕಿಟ್‌ ಕೆಲಸದಲ್ಲಿ ಆನಂದಿಸಿದೆವು, ಮತ್ತು ಸಂಸ್ಥೆಯು ವಿಸ್ತರಿಸುತ್ತಾ ಹೋಗುವುದನ್ನು ನೋಡಿದೆವು. ತದನಂತರ ಬ್ರಾಂಚ್‌ ಆಫೀಸು ನೂಮಾಸೂ ಎಂಬಲ್ಲಿಗೆ ಸ್ಥಳಾಂತರಿಸಲ್ಪಟ್ಟಿತು ಮತ್ತು ವರ್ಷಗಳ ಬಳಿಕ ಎಬೀನಾ ಎಂಬ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿತು. ಪ್ರಸ್ತುತ ಬ್ರಾಂಚ್‌ ಸೌಕರ್ಯಗಳಿರುವುದು ಇಲ್ಲಿಯೇ. ನಾನು ಮತ್ತು ಜೂಂಜೀ ಇಬ್ಬರೂ ಬಹಳ ಸಮಯದಿಂದಲೂ ಬೆತೆಲ್‌ ಸೇವೆಯಲ್ಲಿ ಆನಂದಿಸುತ್ತಿದ್ದೇವೆ​—ಈಗ ಸುಮಾರು 600 ಮಂದಿ ಸದಸ್ಯರಿಂದ ಕೂಡಿರುವ ಒಂದು ಕುಟುಂಬದೊಂದಿಗೆ ಕೆಲಸಮಾಡುತ್ತಿದ್ದೇವೆ. 2002ರ ಮೇ ತಿಂಗಳಿನಲ್ಲಿ, ಬೆತೆಲ್‌ನಲ್ಲಿರುವ ಸ್ನೇಹಿತರು ನನ್ನ ಪೂರ್ಣ ಸಮಯದ ಸೇವೆಯ 50ನೆಯ ವಾರ್ಷಿಕೋತ್ಸವವನ್ನು ಆಚರಿಸಿದರು.

ಹೆಚ್ಚಳವನ್ನು ನೋಡುವ ಆಶೀರ್ವಾದ

ಇಸವಿ 1950ರಷ್ಟು ಹಿಂದೆ ನಾನು ಯೆಹೋವನ ಸೇವೆಮಾಡಲು ಆರಂಭಿಸಿದಾಗ, ಜಪಾನಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಪ್ರಚಾರಕರಿದ್ದರು. ಈಗ ಇಲ್ಲಿ 2,10,000ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರಿದ್ದಾರೆ. ನಾನು ಹೇಗೆ ಸೆಳೆಯಲ್ಪಟ್ಟೆನೋ ಅದೇ ರೀತಿಯಲ್ಲಿ ಸಾವಿರಾರು ಮಂದಿ ಕುರಿಸದೃಶ ಜನರು ಯೆಹೋವನ ಕಡೆಗೆ ಸೆಳೆಯಲ್ಪಟ್ಟಿದ್ದಾರೆ ಎಂಬುದೆಷ್ಟು ಸತ್ಯ.

ಇಸವಿ 1949ರಷ್ಟು ಹಿಂದೆ ಸಹೋದರಿ ಕೋಡಾರವರ ಮನೆಯಲ್ಲಿ ನಮ್ಮನ್ನು ಭೇಟಿಮಾಡಿದಂಥ ನಾಲ್ಕು ಮಂದಿ ಮಿಷನೆರಿ ಸಹೋದರರು ಮತ್ತು ಸಹೋದರಿಯು, ಹಾಗೂ ಸಹೋದರಿ ಮೋಡ್‌ ಕೋಡಾರವರು ತಮ್ಮ ಜೀವಿತವನ್ನು ನಂಬಿಗಸ್ತಿಕೆಯಿಂದ ಪೂರ್ಣಗೊಳಿಸಿದ್ದಾರೆ. ಅದೇ ರೀತಿಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿದ್ದ ನನ್ನ ಅಣ್ಣನೂ, ಸುಮಾರು 15 ವರ್ಷಗಳ ವರೆಗೆ ಪಯನೀಯರ್‌ ಸೇವೆಯಲ್ಲಿ ಆನಂದಿಸಿದ ನನ್ನ ಅತ್ತಿಗೆಯೂ ನಂಬಿಗಸ್ತಿಕೆಯಿಂದ ಮರಣಪಟ್ಟಿದ್ದಾರೆ. ನನ್ನ ಬಾಲ್ಯದಲ್ಲಿ ಯಾರ ಮರಣದ ಕುರಿತು ನನಗೆ ಭಯವಿತ್ತೋ ಆ ನನ್ನ ಹೆತ್ತವರ ಭವಿಷ್ಯತ್ತಿನ ಪ್ರತೀಕ್ಷೆಗಳು ಏನಾಗಿರುವವು? ಪುನರುತ್ಥಾನದ ಕುರಿತಾದ ಬೈಬಲ್‌ ವಾಗ್ದಾನವು ನನಗೆ ನಿರೀಕ್ಷೆ ಹಾಗೂ ಸಾಂತ್ವನವನ್ನು ಕೊಡುತ್ತದೆ.​—ಅ. ಕೃತ್ಯಗಲು 24:15.

ನನ್ನ ಸಂದುಹೋದ ಜೀವನದ ಕುರಿತು ಹಿನ್ನೋಟ ಬೀರುವಾಗ, 1941ರಲ್ಲಿ ನಾನು ಮೋಡ್‌ರವರನ್ನು ಭೇಟಿಯಾದದ್ದೇ ನನ್ನ ಜೀವನದಲ್ಲಿ ಒಂದು ತಿರುಗು ಬಿಂದುವಾಗಿತ್ತು ಎಂದು ನನಗನಿಸುತ್ತದೆ. ಒಂದುವೇಳೆ ನಾನು ಆ ಸಮಯದಲ್ಲಿ ಅವರನ್ನು ಭೇಟಿಯಾಗಿರದಿರುತ್ತಿದ್ದಲ್ಲಿ ಮತ್ತು ಯುದ್ಧಾನಂತರ ಪುನಃ ಅವರ ಬಳಿ ಕೆಲಸಮಾಡುವ ಆಮಂತ್ರಣವನ್ನು ನಾನು ಸ್ವೀಕರಿಸದಿರುತ್ತಿದ್ದಲ್ಲಿ, ಬಹುಶಃ ನಾನು ಬಹುದೂರದ ಹಳ್ಳಿಯಲ್ಲಿರುವ ನಮ್ಮ ಫಾರ್ಮ್‌ನಲ್ಲೇ ನೆಲೆಸಿರುತ್ತಿದ್ದೆ ಮತ್ತು ಆ ಆರಂಭದ ದಿನಗಳಲ್ಲಿ ಮಿಷನೆರಿಗಳೊಂದಿಗೆ ಯಾವುದೇ ಸಂಪರ್ಕವನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮೋಡ್‌ ಹಾಗೂ ಆ ಆರಂಭದ ಮಿಷನೆರಿಗಳ ಸಹಾಯದಿಂದ ನನ್ನನ್ನು ಸತ್ಯದ ಕಡೆಗೆ ಸೆಳೆದದ್ದಕ್ಕಾಗಿ ಯೆಹೋವನಿಗೆ ನಾನೆಷ್ಟು ಆಭಾರಿಯಾಗಿದ್ದೇನೆ!

[ಪುಟ 25ರಲ್ಲಿರುವ ಚಿತ್ರ]

ಮೋಡ್‌ ಕೋಡಾ ಮತ್ತು ಅವರ ಪತಿಯೊಂದಿಗೆ. ನಾನು ಮುಂದೆ ಎಡಭಾಗದಲ್ಲಿದ್ದೇನೆ

[ಪುಟ 27ರಲ್ಲಿರುವ ಚಿತ್ರ]

1953ರಲ್ಲಿ ಯಾಂಕೀ ಸ್ಟೇಡಿಯಮ್‌ನಲ್ಲಿ ಜಪಾನಿನ ಮಿಷನೆರಿಗಳೊಂದಿಗೆ. ನಾನು ತೀರ ಎಡಭಾಗದಲ್ಲಿದ್ದೇನೆ

[ಪುಟ 28ರಲ್ಲಿರುವ ಚಿತ್ರಗಳು]

ನನ್ನ ಪತಿ ಜೂಂಜೀಯರೊಂದಿಗೆ ಬೆತೆಲ್‌ನಲ್ಲಿ