ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಆದಿಕಾಂಡ 3:22ರಲ್ಲಿ “ನಮ್ಮಲ್ಲಿ ಒಬ್ಬ” ಎಂದು ಯೆಹೋವನು ಯಾರಿಗೆ ಸೂಚಿಸುತ್ತಿದ್ದನು?

ಯೆಹೋವ ದೇವರು, “ಈ ಮನುಷ್ಯನು ಒಳ್ಳೇದರ ಕೆಟ್ಟದ್ದರ ಭೇದವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ” ಎಂದು ಹೇಳಿದಾಗ ತನಗೇ ಮತ್ತು ತನ್ನ ಏಕಜಾತ ಪುತ್ರನಿಗೆ ಸೂಚಿಸುತ್ತಿದ್ದನು ಎಂದು ತೋರುತ್ತದೆ. (ಆದಿಕಾಂಡ 3:22) ಅದು ಯಾಕೆ ಎಂಬುದನ್ನು ನಾವು ಪರಿಗಣಿಸೋಣ.

ಯೆಹೋವನು ಪ್ರಥಮ ಮಾನವ ದಂಪತಿಯ ಮೇಲೆ ದಂಡನೆಯ ತೀರ್ಪನ್ನು ವಿಧಿಸಿದ ನಂತರ ಈ ಮಾತುಗಳನ್ನಾಡಿದನು. ಕೆಲವರು ಇದನ್ನು, ಒಬ್ಬ ಮಾನವ ರಾಜನು “ಇದು ನಮಗೆ ಮೆಚ್ಚಿಕೆಯಾಗಲಿಲ್ಲ” ಎಂದು ಹೇಳುವಾಗ ಹೇಗೆ ತನಗೆ ಮಾತ್ರವೇ ಸೂಚಿಸಿಕೊಳ್ಳುತ್ತಾನೋ ಹಾಗೆಯೇ “ನಮ್ಮಲ್ಲಿ ಒಬ್ಬ” ಎಂಬ ಅಭಿವ್ಯಕ್ತಿಯನ್ನು ರಾಜತ್ವಕ್ಕೆ ಅನ್ವಯಿಸುವ ಬಹುತ್ವವೆಂದು ಅರ್ಥೈಸಿಕೊಂಡಿದ್ದಾರೆ. ಆದರೂ, ಆದಿಕಾಂಡ 1:26 ಮತ್ತು 3:22ರ ವಿಷಯದಲ್ಲಿ, ಬೈಬಲ್‌ ವಿದ್ವಾಂಸ ಡಾನಲ್ಡ್‌ ಇ. ಗೊಅನ್‌ ಹೇಳುವುದು: “ರಾಜತ್ವದ ‘ನಮ್ಮ,’ . . . ಅಥವಾ ತ್ರೈಯೈಕ್ಯದಲ್ಲಿ ಬಹುತ್ವ ವ್ಯಕ್ತಿಗಳಿಗೆ ಸೂಚಿಸುತ್ತದೆ ಎಂದು ಮಂಡಿಸಲ್ಪಟ್ಟಿರುವ ಹೆಚ್ಚಿನ ವಿವರಣೆಗಳಿಗೆ ಹಳೆಯ ಒಡಂಬಡಿಕೆಯಲ್ಲಿ ಯಾವುದೇ ಆಧಾರವಿರುವುದಿಲ್ಲ. . . . ಇಲ್ಲಿ ಕೊಡಲ್ಪಟ್ಟಿರುವ ಯಾವುದೇ ವಿವರಣೆಗಳು ‘ನಮ್ಮಲ್ಲಿ ಒಬ್ಬ’ ಎಂದು 3:22ರಲ್ಲಿ ತಿಳಿಸಲ್ಪಟ್ಟಿರುವ ವಿಚಾರಕ್ಕೆ ತರ್ಕಬದ್ಧವಾಗಿ ತೋರುವುದಿಲ್ಲ.”

‘ಒಳ್ಳೇದು ಮತ್ತು ಕೆಟ್ಟದ್ದನ್ನು’ ಸ್ವತಃ ನಿರ್ಣಯಿಸಲು ಆರಂಭಿಸಿದ ಮತ್ತು ಮೊದಲ ಮಾನವರನ್ನೂ ಹೀಗೆ ಮಾಡುವಂತೆ ಪ್ರೇರಿಸಿದ ಪಿಶಾಚನಾದ ಸೈತಾನನಿಗೆ ಯೆಹೋವನು ಸೂಚಿಸುತ್ತಿದ್ದಿರಬಹುದೋ? ಇದು ತರ್ಕಸಮ್ಮತವಾಗಿಲ್ಲ. ಇಲ್ಲಿ ಯೆಹೋವನು “ನಮ್ಮಲ್ಲಿ ಒಬ್ಬ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಿದನು. (ಓರೆ ಅಕ್ಷರಗಳು ನಮ್ಮವು.) ಸೈತಾನನು ಯೆಹೋವನ ನಂಬಿಗಸ್ತ ದೇವದೂತರ ದೊಡ್ಡ ಸ್ತೋಮದ ಭಾಗವಾಗಿರಲಿಲ್ಲ, ಆದುದರಿಂದ ಯೆಹೋವನ ಪಕ್ಷದಲ್ಲಿದ್ದವರೊಂದಿಗೆ ಅವನನ್ನು ಸೇರಿಸಿಕೊಳ್ಳುವುದು ಸಾಧ್ಯವಿದ್ದಿರಲಿಲ್ಲ.

ದೇವರು ನಂಬಿಗಸ್ತ ದೇವದೂತರಿಗೆ ಸೂಚಿಸುತ್ತಿದ್ದನೋ? ನಾವು ಕಡಾಖಂಡಿತವಾಗಿ ಹೇಳಸಾಧ್ಯವಿಲ್ಲ. ಆದರೂ, ಆದಿಕಾಂಡ 1:26 ಮತ್ತು 3:22ರಲ್ಲಿ ಉಪಯೋಗಿಸಲ್ಪಟ್ಟಿರುವ ತದ್ರೂಪಿ ಪದಗಳು ಒಂದು ಸುಳಿವನ್ನು ಕೊಡುತ್ತವೆ. ಆದಿಕಾಂಡ 1:26ರಲ್ಲಿ, ಯೆಹೋವನು ಹೀಗೆ ಹೇಳುವುದಾಗಿ ನಾವು ಓದುತ್ತೇವೆ: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ.” (ಓರೆ ಅಕ್ಷರಗಳು ನಮ್ಮವು.) ಈ ಮಾತುಗಳನ್ನು ಆತನು ಯಾರಿಗೆ ನಿರ್ದೇಶಿಸಿ ಮಾತನಾಡುತ್ತಿದ್ದನು? ಪರಿಪೂರ್ಣ ಮನುಷ್ಯ ಯೇಸುವಾಗಿ ಭೂಮಿಗೆ ಬಂದ ಆತ್ಮ ಜೀವಿಗೆ ಸೂಚಿಸುತ್ತಾ ಅಪೊಸ್ತಲ ಪೌಲನಂದದ್ದು: “ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ [ಎಲ್ಲವೂ] . . . ಆತನಲ್ಲಿ ಸೃಷ್ಟಿಸಲ್ಪಟ್ಟವು.” (ಕೊಲೊಸ್ಸೆ 1:15, 16) ಹೌದು, ಆದಿಕಾಂಡ 1:26ರಲ್ಲಿ ಯೆಹೋವನು ತನ್ನ ಏಕಜಾತ ಪುತ್ರನಿಗೆ, ಭೂಪರಲೋಕಗಳು ಸೃಷ್ಟಿಸಲ್ಪಡುವಾಗ ತನ್ನ ಪಕ್ಕದಲ್ಲಿದ್ದ ‘ಕುಶಲ ಶಿಲ್ಪಿಗೆ’ (NW) ನಿರ್ದೇಶಿಸಿ ಮಾತನಾಡುತ್ತಿದ್ದನು ಎಂಬುದು ತರ್ಕಬದ್ಧವಾಗಿ ತೋರುತ್ತದೆ. (ಜ್ಞಾನೋಕ್ತಿ 8:​22-31) ಆದಿಕಾಂಡ 3:22ರಲ್ಲಿ ಉಪಯೋಗಿಸಲ್ಪಟ್ಟಿರುವ ತದ್ರೂಪಿ ಪದಗಳು, ತನಗೆ ಅತಿ ಆಪ್ತನಾಗಿದ್ದ ತನ್ನ ಏಕಜಾತ ಪುತ್ರನೊಂದಿಗೆ ಯೆಹೋವನು ಮಾತನಾಡುತ್ತಿದ್ದನು ಎಂಬುದನ್ನು ಸೂಚಿಸುತ್ತದೆ.

ದೇವರ ಏಕಜಾತ ಪುತ್ರನಿಗೆ “ಒಳ್ಳೇದರ ಕೆಟ್ಟದ್ದರ” ಅರುಹಿತ್ತೆಂಬುದು ಸುಸಂಗತ. ತಾನು ಯೆಹೋವನೊಂದಿಗೆ ಆನಂದಿಸಿರುವ ದೀರ್ಘವಾದ ಮತ್ತು ಆಪ್ತವಾದ ಅನುಭವದಿಂದ, ಅವನು ನಿಶ್ಚಯವಾಗಿಯೂ ತನ್ನ ತಂದೆಯ ಯೋಚನಾ ರೀತಿ, ಮೂಲತತ್ತ್ವಗಳು, ಮತ್ತು ಮಟ್ಟಗಳನ್ನು ಕೂಲಂಕಷವಾಗಿ ಕಲಿತುಕೊಂಡಿದ್ದನು. ತನ್ನ ಕುಮಾರನಿಗೆ ಇವುಗಳ ಪರಿಚಯವಿದೆ ಮತ್ತು ಅವನು ಇವುಗಳಿಗೆ ತೋರಿಸಿರುವ ನಿಷ್ಠೆಯ ಬಗ್ಗೆ ದೇವರಿಗೆ ಖಾತ್ರಿಯಿದದ್ದರಿಂದ, ತನ್ನ ಬಳಿ ಬಂದು ಪ್ರತಿಯೊಂದು ಸಂದರ್ಭದಲ್ಲೂ ವಿಚಾರಿಸುವ ಬದಲಿಗೆ ಸ್ವತಃ ಕೆಲವು ವಿಷಯಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಯೆಹೋವನು ಅವನಿಗೆ ಕೊಟ್ಟಿರಬಹುದು. ಆದುದರಿಂದ ಕುಮಾರನು ಇಷ್ಟರ ಮಟ್ಟಿಗೆ ಯಾವುದು ಒಳ್ಳೇದು ಮತ್ತು ಕೆಟ್ಟದ್ದು ಎಂಬುದನ್ನು ನಿರ್ಧರಿಸಲು ಶಕ್ತನಾಗಿದ್ದನು ಮತ್ತು ಆ ಅಧಿಕಾರವೂ ಅವನಿಗಿತ್ತು. ಹಾಗಿದ್ದರೂ, ಸೈತಾನ ಮತ್ತು ಆದಾಮಹವ್ವರಿಗೆ ವ್ಯತಿರಿಕ್ತವಾಗಿ ಯೇಸು, ಯೆಹೋವನ ಮಟ್ಟಗಳೊಂದಿಗೆ ಘರ್ಷಿಸುವಂಥ ಮಟ್ಟವನ್ನು ಸ್ಥಾಪಿಸಲಿಲ್ಲ.