ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾವ್‌ ಟಮೆ ಮತ್ತು ಪ್ರಿನ್ಸಪ ದ್ವೀಪಗಳಲ್ಲಿ ಸುವಾರ್ತೆಯು ಫಲಬಿಡುತ್ತದೆ

ಸಾವ್‌ ಟಮೆ ಮತ್ತು ಪ್ರಿನ್ಸಪ ದ್ವೀಪಗಳಲ್ಲಿ ಸುವಾರ್ತೆಯು ಫಲಬಿಡುತ್ತದೆ

ಸಾವ್‌ ಟಮೆ ಮತ್ತು ಪ್ರಿನ್ಸಪ ದ್ವೀಪಗಳಲ್ಲಿ ಸುವಾರ್ತೆಯು ಫಲಬಿಡುತ್ತದೆ

ಅನೇಕರು ಪ್ರಾಯಶಃ ಸಾವ್‌ ಟಮೆ ಮತ್ತು ಪ್ರಿನ್ಸಪ ದ್ವೀಪಗಳ ಕುರಿತು ಎಂದೂ ಕೇಳಿರಲಿಕ್ಕಿಲ್ಲ. ಈ ದ್ವೀಪಗಳನ್ನು ಸಾಮಾನ್ಯವಾಗಿ ಪ್ರವಾಸಿ ಬ್ರೋಷರ್‌ಗಳಲ್ಲಿ ಪ್ರಚುರಪಡಿಸಲಾಗುವುದಿಲ್ಲ. ಆಫ್ರಿಕದ ಪಶ್ಚಿಮ ಕರಾವಳಿತೀರದಾಚೆಗೆ ಗಿನಿ ಖಾರಿಯಲ್ಲಿ ನೆಲೆಸಿರುವ ಈ ದ್ವೀಪಗಳು ಇಡೀ ಜಗತ್ತಿನ ಭೂಪಟದ ಮೇಲೆ ಸಣ್ಣ ಚುಕ್ಕೆಗಳಂತೆ ಕಾಣುತ್ತವೆ. ಸಾವ್‌ ಟಮೆ ಹೆಚ್ಚುಕಡಿಮೆ ಭೂಮಧ್ಯರೇಖೆಯ ಮೇಲೆಯೇ ಇದೆ ಮತ್ತು ಅದರ ತುಸು ಈಶಾನ್ಯ ದಿಕ್ಕಿನಲ್ಲಿ ಪ್ರಿನ್ಸಪ ನೆಲೆಸಿದೆ. ಮಳೆ ಮತ್ತು ಆರ್ದ್ರವುಳ್ಳ ಹವಾಮಾನವು, 6,600 ಅಡಿಗಿಂತಲೂ ಹೆಚ್ಚು ಎತ್ತರವಾಗಿರುವ ಬೆಟ್ಟಗಳ ಇಳಿಜಾರುಗಳನ್ನು ಆವರಿಸುವ ಸೊಂಪಾದ ಮಳೆಕಾಡುಗಳನ್ನು ಉತ್ಪಾದಿಸಿವೆ.

ಸುತ್ತಲೂ ನೀಲಿಬಣ್ಣದ ನೀರು ಮತ್ತು ತಾಳೆಯ ಮರಗಳುಳ್ಳ ಸಮುದ್ರತೀರಗಳಿರುವ ಈ ಉಷ್ಣವಲಯದ ದ್ವೀಪಗಳು ಸ್ನೇಹಪರ ಮತ್ತು ವಾತ್ಸಲ್ಯಭರಿತ ಜನರ ಬೀಡಾಗಿದೆ. ಇವರ ಮಿಶ್ರ ಆಫ್ರಿಕನ್‌ ಮತ್ತು ಯೂರೋಪಿಯನ್‌ ಮೂಲಗಳು, ಸಂಸ್ಕೃತಿಗಳ ಒಂದು ಸವಿಮಿಶ್ರಣದಲ್ಲಿ ಫಲಿಸಿವೆ. ಇಲ್ಲಿರುವ 1,70,000 ನಿವಾಸಿಗಳು, ಪ್ರಧಾನ ರಫ್ತು ಪದಾರ್ಥವಾಗಿರುವ ಕೋಕೊ ಬೀಜಗಳ ಉತ್ಪತ್ತಿಯಲ್ಲಿ, ಇಲ್ಲವಾದರೆ ವ್ಯವಸಾಯ ಮತ್ತು ಮೀನುಗಾರಿಕೆಯಲ್ಲಿ ಒಳಗೂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಒಂದು ದಿನದ ಊಟವನ್ನು ಪಡೆದುಕೊಳ್ಳುವುದು ಸಹ ಕಷ್ಟಕರವಾಗಿ ಪರಿಣಮಿಸಿದೆ.

ಆದರೆ, 1990ಗಳಲ್ಲಿ ನಡೆದ ಒಂದು ಘಟನೆಯು, ಈ ದ್ವೀಪಗಳಲ್ಲಿ ವಾಸಿಸುವ ಹೆಚ್ಚೆಚ್ಚು ಜನರ ಜೀವಿತಗಳ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದೆ. 1993ರ ಜೂನ್‌ ತಿಂಗಳಿನಲ್ಲಿ, ಯೆಹೋವನ ಸಾಕ್ಷಿಗಳನ್ನು ಸಾವ್‌ ಟಮೆ ಮತ್ತು ಪ್ರಿನ್ಸಪ ದ್ವೀಪಗಳಲ್ಲಿ ಕಾನೂನುಬದ್ಧವಾಗಿ ರಿಜಿಸ್ಟರ್‌ ಮಾಡಲಾಯಿತು. ಹೀಗೆ ಆ ದ್ವೀಪಗಳಲ್ಲಿನ ಯೆಹೋವನ ಸಾಕ್ಷಿಗಳ ಇತಿಹಾಸದ, ದೀರ್ಘವಾದ ಮತ್ತು ಅನೇಕವೇಳೆ ಕಷ್ಟಕರವಾದ ಸಮಯಾವಧಿಯು ಅಂತ್ಯವಾಯಿತು.

ಕಷ್ಟಕಾಲದಲ್ಲಿ ಬಿತ್ತಲ್ಪಟ್ಟ ಬೀಜಗಳು

ಸಾವಿರದ ಒಂಭೈನೂರ ಐವತ್ತರ ಆರಂಭದ ವರ್ಷಗಳಲ್ಲಿ, ಈ ದೇಶಕ್ಕೆ ಮೊದಲ ಸಾಕ್ಷಿಯು ಆಗಮಿಸಿದನೆಂದು ತೋರುತ್ತದೆ. ಆ ಸಮಯದಲ್ಲಿ, ಆಫ್ರಿಕದಲ್ಲಿರುವ ಇತರ ಪೋರ್ಚುಗೀಸ್‌ ವಸಾಹತುಗಳಿಂದ ಸೆರೆವಾಸಿಗಳನ್ನು ಈ ದ್ವೀಪಗಳಲ್ಲಿರುವ ಕೆಲಸದ ಶಿಬಿರಗಳಿಗೆ ಕಳುಹಿಸಲಾಗುತ್ತಿತ್ತು. ಈ ಸಾಕ್ಷಿಯು ಒಬ್ಬ ಆಫ್ರಿಕನ್‌ ಪಯನೀಯರ್‌ ಅಥವಾ ಪೂರ್ಣ ಸಮಯದ ಶುಶ್ರೂಷಕನಾಗಿದ್ದು, ಮೊಸಾಂಬೀಕ್‌ನಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದದ್ದರಿಂದ ಅಲ್ಲಿಂದ ಇಲ್ಲಿಗೆ ಗಡೀಪಾರುಮಾಡಲ್ಪಟ್ಟಿದ್ದನು. ಈ ಒಂಟಿ ಸಾಕ್ಷಿಯು ಸಾರುವ ಕಾರ್ಯದಲ್ಲಿ ನಿರತನಾದನು, ಮತ್ತು ಆರು ತಿಂಗಳುಗಳೊಳಗಾಗಿ ಸುವಾರ್ತೆ ಸಾರುವುದರಲ್ಲಿ ಇತರ 13 ಮಂದಿ ಅವನೊಂದಿಗೆ ಜೊತೆಗೂಡಿದರು. ನಂತರ, ಇದೇ ಕಾರಣಗಳಿಗಾಗಿ ಅಂಗೊಲದಿಂದ ಇನ್ನಿತರ ಸಾಕ್ಷಿಗಳು ಅಲ್ಲಿಗೆ ಆಗಮಿಸಿದರು. ಅವರ ಸೆರೆವಾಸದ ಸಮಯದಲ್ಲಿ, ಸ್ಥಳಿಕ ನಿವಾಸಿಗಳೊಂದಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ಅವರು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಂಡರು.

ಇಸವಿ 1966ರಷ್ಟಕ್ಕೆ ಸಾವ್‌ ಟಮೆಯ ಕೆಲಸದ ಶಿಬಿರಗಳಲ್ಲಿದ್ದ ಎಲ್ಲಾ ಸಹೋದರರು ಆಫ್ರಿಕದ ಮುಖ್ಯ ಭೂಭಾಗಕ್ಕೆ ಮರಳಿದ್ದರು. ಹಿಂದುಳಿದ ಚಿಕ್ಕ ಗುಂಪಿನ ರಾಜ್ಯ ಪ್ರಚಾರಕರು ಧೈರ್ಯದಿಂದ ತಮ್ಮ ಚಟುವಟಿಕೆಯಲ್ಲಿ ಮುಂದುವರಿದರು. ಅವರು ಬೈಬಲ್‌ ಅಧ್ಯಯನಕ್ಕಾಗಿ ಕೂಡಿಬಂದ ಕಾರಣ ಹಿಂಸಿಸಲ್ಪಟ್ಟರು, ಹೊಡೆಯಲ್ಪಟ್ಟರು, ಮತ್ತು ಸೆರೆಗೆ ಹಾಕಲ್ಪಟ್ಟರು, ಹಾಗೂ ಅವರನ್ನು ಭೇಟಿಮಾಡಲಿಕ್ಕಾಗಲಿ, ಉತ್ತೇಜಿಸಲಿಕ್ಕಾಗಲಿ ಯಾರೂ ಇರಲಿಲ್ಲ. 1975ರಲ್ಲಿ, ದೇಶವು ಪೋರ್ಚುಗಲ್‌ನಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಮತ್ತು ನಿಧಾನಗತಿಯಿಂದ ರಾಜ್ಯ ಸತ್ಯದ ಬೀಜಗಳು ಫಲಬಿಡಲು ಆರಂಭಿಸಿದವು.

ವಿಸ್ತರಣೆ ಮತ್ತು ನಿರ್ಮಾಣಕಾರ್ಯ

ಕಾನೂನುಬದ್ಧ ಅಂಗೀಕಾರವನ್ನು ಪಡೆದುಕೊಂಡ 1993ರ ಜೂನ್‌ ತಿಂಗಳಲ್ಲೇ, 100 ಮಂದಿ ರಾಜ್ಯ ಪ್ರಚಾರಕರ ಉಚ್ಚಾಂಕವು ದಾಖಲಾಯಿತು. ಅದೇ ವರ್ಷದಲ್ಲಿ, ಪೋರ್ಚುಗಲ್‌ನಿಂದ ವಿಶೇಷ ಪಯನೀಯರರು ಬಂದರು. ಅವರು ಪೋರ್ಚುಗೀಸ್‌ ಕ್ರಿಯೋಲ್‌ ಭಾಷೆಯನ್ನು ಕಲಿಯಲು ಪ್ರಯತ್ನಿಸಿದ್ದರಿಂದಾಗಿ ಸ್ಥಳಿಕ ಜನರು ಅವರನ್ನು ತುಂಬ ಮೆಚ್ಚಿದರು. ಆಗ ಒಂದು ರಾಜ್ಯ ಸಭಾಗೃಹಕ್ಕಾಗಿ ಸ್ಥಳವನ್ನು ಹುಡುಕುವುದು ಪ್ರಾಮುಖ್ಯವಾಗಿತ್ತು. ಈ ಆವಶ್ಯಕತೆಯ ಕುರಿತು ತಿಳಿದುಕೊಂಡ ಮಾರೀಯ ಎಂಬ ಸಹೋದರಿಯು, ತನ್ನ ಚಿಕ್ಕ ಮನೆಯನ್ನು ಹೊಂದಿದ್ದ ಜಮೀನಿನ ಅರ್ಧಭಾಗವನ್ನು ದಾನವಾಗಿ ಕೊಟ್ಟುಬಿಟ್ಟರು. ಅದು, ಒಂದು ವಿಶಾಲವಾದ ರಾಜ್ಯ ಸಭಾಗೃಹವನ್ನು ಕಟ್ಟುವಷ್ಟು ದೊಡ್ಡದಾಗಿತ್ತು. ಮಾರೀಯರಿಗೆ ಯಾವ ಸಂಬಂಧಿಕರೂ ಇಲ್ಲದಿದ್ದ ಕಾರಣ, ಈ ಆಸ್ತಿಯ ಮೇಲೆ ಅತ್ಯಾಸೆಯ ಅಭಿವರ್ಧಕರ ಕಣ್ಣಿತ್ತು ಎಂಬುದು ಮಾರೀಯ ಅವರಿಗೆ ತಿಳಿದಿರಲಿಲ್ಲ. ಒಂದು ದಿನ ಪ್ರಖ್ಯಾತ ವ್ಯಾಪಾರಿಯೊಬ್ಬನು ಮಾರೀಯ ಅವರೊಂದಿಗೆ ಮಾತನಾಡಲು ಬಂದನು.

“ನಾನು ನಿಮ್ಮ ಕುರಿತು ಕೇಳುತ್ತಿರುವುದು ಅಷ್ಟೇನು ಒಳ್ಳೇದಾಗಿ ತೋರುತ್ತಿಲ್ಲ!” ಎಂದು ಅವನು ಎಚ್ಚರಿಸಿದನು. “ನೀವು ನಿಮ್ಮ ಜಮೀನನ್ನು ದಾನವಾಗಿ ಕೊಟ್ಟಿದ್ದೀರಂತೆ. ಇದು ನಗರಪ್ರದೇಶವಾಗಿರುವುದರಿಂದ ಅದಕ್ಕೆ ಎಷ್ಟೊಂದು ಹಣ ಸಿಗಬಹುದು ಎಂಬುದು ನಿಮಗೆ ತಿಳಿದಿಲ್ಲವೆ?”

“ನಾನು ಒಂದುವೇಳೆ ಜಮೀನನ್ನು ನಿಮಗೆ ಕೊಡುವುದಾದರೆ, ನೀವೆಷ್ಟು ಹಣ ಕೊಡುವಿರಿ?” ಎಂದು ಮಾರೀಯ ಕೇಳಿದರು. ಆ ಮನುಷ್ಯನು ಉತ್ತರ ಕೊಡದಿದ್ದಾಗ, ಮಾರೀಯ ಮುಂದುವರಿಸಿದ್ದು: “ನೀವು ಲೋಕದಲ್ಲಿರುವ ಎಲ್ಲಾ ಹಣವನ್ನು ಕೊಟ್ಟರೂ ಸಾಲದು, ಏಕೆಂದರೆ ಅದರಿಂದ ಜೀವವನ್ನು ಖರೀದಿಸಲಾಗದು.”

“ನಿಮಗೆ ಮಕ್ಕಳು ಇಲ್ಲ ಅಲ್ಲವೆ?” ಎಂದು ಆ ವ್ಯಕ್ತಿ ಕೇಳಿದನು.

ಸಂಭಾಷಣೆಯನ್ನು ಕೊನೆಗೊಳಿಸಲಿಕ್ಕಾಗಿ, ಮಾರೀಯ ಹೇಳಿದ್ದು: “ಈ ಜಮೀನು ಯೆಹೋವನಿಗೆ ಸೇರಿದ್ದಾಗಿದೆ. ಇಷ್ಟು ವರ್ಷಗಳಿಗೆ ಆತನು ಅದನ್ನು ನನಗೆ ಕೊಟ್ಟಿದ್ದನು; ಈಗ ನಾನು ಅದನ್ನು ಆತನಿಗೇ ಹಿಂದೆ ಕೊಟ್ಟಿದ್ದೇನೆ. ನಾನು ಸದಾಕಾಲ ಜೀವಿಸಲು ಎದುರುನೋಡುತ್ತಿದ್ದೇನೆ.” ನಂತರ ಅವರು ಆ ವ್ಯಕ್ತಿಗೆ ಕೇಳಿದ್ದು: “ನಿಮಗೆ ನಿತ್ಯಜೀವವನ್ನು ಕೊಡಲು ಸಾಧ್ಯವಿಲ್ಲ ಅಲ್ಲವೆ?” ಒಂದು ಮಾತನ್ನೂ ಆಡದೆ, ಆ ವ್ಯಕ್ತಿ ಬೆನ್ನುಹಾಕಿ ಹೊರಟೇ ಬಿಟ್ಟನು.

ಇದರ ಫಲಿತಾಂಶವಾಗಿ, ಪೋರ್ಚುಗಲ್‌ನಿಂದ ಬಂದ ಸಮರ್ಥ ಸಹೋದರರ ಸಹಾಯದಿಂದ ಒಂದು ಸುಂದರವಾದ ಎರಡು ಮಹಡಿಯ ಕಟ್ಟಡವು ಕಟ್ಟಲ್ಪಟ್ಟಿತು. ಅದಕ್ಕೆ ಒಂದು ಬೇಸ್‌ಮೆಂಟ್‌, ವಿಶಾಲವಾದ ಒಂದು ರಾಜ್ಯ ಸಭಾಗೃಹ, ಮತ್ತು ಉಳುಕೊಳ್ಳುವ ಕೋಣೆಗಳಿವೆ. ಮತ್ತು ಹಿರಿಯರು, ಶುಶ್ರೂಷಾ ಸೇವಕರು, ಹಾಗೂ ಪಯನೀಯರರ ಶಾಲೆಯನ್ನು ನಡೆಸಲಿಕ್ಕಾಗಿ ಅದರಲ್ಲಿ ಕ್ಲಾಸ್‌ರೂಮ್‌ಗಳೂ ಇವೆ. ಈಗ ಅದರಲ್ಲಿ ಎರಡು ಸಭೆಗಳು ಕೂಟಗಳನ್ನು ನಡೆಸುತ್ತಿವೆ, ಮತ್ತು ಹೀಗೆ ಅದು ರಾಜಧಾನಿಯಲ್ಲಿ ಶುದ್ಧ ಆರಾಧನೆಯ ಉತ್ತಮವಾದ ಶೈಕ್ಷಣಿಕ ಕೇಂದ್ರವಾಗಿ ನಿಂತಿದೆ.

ಮಿಸಾಶೀಯಲ್ಲಿ 60 ಮಂದಿ ಹುರುಪುಳ್ಳ ಪ್ರಚಾರಕರನ್ನು ಹೊಂದಿರುವ ಒಂದು ಸಭೆಯಿತ್ತು. ಬಾಳೆಮರಗಳ ತೋಪಿನಲ್ಲಿದ್ದ ಒಂದು ತಾತ್ಕಾಲಿಕ ರಾಜ್ಯ ಸಭಾಗೃಹದಲ್ಲಿ ಕೂಟಗಳು ನಡೆಸಲ್ಪಡುತ್ತಿದ್ದ ಕಾರಣ, ಒಂದು ಸೂಕ್ತವಾದ ರಾಜ್ಯ ಸಭಾಗೃಹದ ಆವಶ್ಯಕತೆಯು ತೋರಿಬಂತು. ಇದರ ಕುರಿತು ನಗರಾಡಳಿತ ಕಛೇರಿಗೆ ತಿಳಿಸಿದಾಗ, ಅಲ್ಲಿನ ದಯಾಪರ ಅಧಿಕಾರಿಗಳು ಮುಖ್ಯ ರಸ್ತೆಯಲ್ಲೇ ಒಂದು ಉತ್ತಮವಾದ ಚಿಕ್ಕ ಜಮೀನನ್ನು ನೀಡಿದರು. ಪೋರ್ಚುಗಲ್‌ನಿಂದ ಬಂದ ಸಹೋದರರ ಸಹಾಯದಿಂದ ಕ್ಷಿಪ್ರ-ನಿರ್ಮಾಣ ವಿಧಾನವನ್ನು ಉಪಯೋಗಿಸುತ್ತಾ, ಕೇವಲ ಎರಡೇ ತಿಂಗಳುಗಳಲ್ಲಿ ಒಂದು ಉತ್ತಮವಾದ ರಾಜ್ಯ ಸಭಾಗೃಹವು ನಿರ್ಮಿಸಲ್ಪಟ್ಟಿತು. ಇದನ್ನು ನೋಡಿದ ಸ್ಥಳಿಕ ಜನರಿಗೆ ತಮ್ಮ ಕಣ್ಣುಗಳನ್ನೇ ನಂಬಲಸಾಧ್ಯವಾಯಿತು. ನಗರದ ಒಂದು ನಿರ್ಮಾಣಕಾರ್ಯದಲ್ಲಿ ಒಳಗೂಡಿದ್ದ ಸ್ವೀಡನ್‌ನ ಒಬ್ಬ ಇಂಜಿನಿಯರರು, ಕಾರ್ಯಪ್ರವೃತ್ತ ಸಹೋದರ ಸಹೋದರಿಯರನ್ನು ನೋಡಿ ಬೆರಗಾದರು. ಅವರು ತಿಳಿಸಿದ್ದು: “ಇಲ್ಲಿ ಮಿಸಾಶೀಯಲ್ಲಿ, ಯೆಹೋವನ ಸಾಕ್ಷಿಗಳು ಕ್ಷಿಪ್ರ-ನಿರ್ಮಾಣ ವಿಧಾನವನ್ನು ಉಪಯೋಗಿಸುವುದನ್ನು ನೋಡಿ ನನಗೆ ನಂಬಲಾಗುತ್ತಿಲ್ಲ! ನಾವು ಈ ರೀತಿಯಲ್ಲೇ ನಮ್ಮ ನಿರ್ಮಾಣಯೋಜನೆಯನ್ನು ಸಂಘಟಿಸಬೇಕು.” ರಾಜ್ಯ ಸಭಾಗೃಹವು 1999ರ ಜೂನ್‌ 12ರಂದು ಪ್ರತಿಷ್ಠಾಪಿಸಲ್ಪಟ್ಟಿತು, ಮತ್ತು 232 ಮಂದಿ ಹಾಜರಿದ್ದರು. ಈ ಸಭಾಗೃಹವು ಮಿಸಾಶೀ ನಗರಕ್ಕೆ ಭೇಟಿಕೊಡುವ ಪ್ರವಾಸಿಗರಿಗೆ ಒಂದು ಪ್ರಧಾನ ಆಕರ್ಷಣೆಯ ಸ್ಥಳವಾಗಿ ಪರಿಣಮಿಸಿದೆ.

ಒಂದು ಐತಿಹಾಸಿಕ ಅಧಿವೇಶನ

ಸಾವ್‌ ಟಮೆ ಮತ್ತು ಪ್ರಿನ್ಸಪದಲ್ಲಿರುವ ಯೆಹೋವನ ಸಾಕ್ಷಿಗಳಿಗೆ 1994ರ ಜನವರಿ ತಿಂಗಳಲ್ಲಿ ನಡೆಸಲ್ಪಟ್ಟ ಮೂರು ದಿನಗಳ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನವು ಒಂದು ಐತಿಹಾಸಿಕ ಘಟನೆಯಾಗಿತ್ತು. ಏಕೆಂದರೆ ಅಲ್ಲಿ ನಡೆಸಲ್ಪಟ್ಟ ಮೊಟ್ಟಮೊದಲ ಅಧಿವೇಶನವು ಇದಾಗಿತ್ತು. ಅದು ದೇಶದಲ್ಲೇ ಅತಿ ಉತ್ತಮವಾದ ಏರ್‌-ಕಂಡಿಷನ್‌ ಉಳ್ಳ ಸಭಾಂಗಣವೊಂದರಲ್ಲಿ ನಡೆಸಲ್ಪಟ್ಟಿತು. ಅಲ್ಲಿನ 116 ಮಂದಿ ರಾಜ್ಯ ಪ್ರಚಾರಕರಿಗೆ, 405 ಮಂದಿಯ ದೊಡ್ಡ ಗುಂಪವನ್ನು ನೋಡುತ್ತಿರುವಾಗ ಮತ್ತು ಮೊಟ್ಟಮೊದಲ ಬಾರಿ ಬೈಬಲ್‌ ಡ್ರಾಮಗಳನ್ನು ನೋಡುತ್ತಿರುವಾಗ ಹಾಗೂ ಅಧಿವೇಶನದ ಬಿಡುಗಡೆಗಳನ್ನು ಪಡೆದುಕೊಳ್ಳುತ್ತಿರುವಾಗ ಎಷ್ಟೊಂದು ಆನಂದವಾಗಿರಬಹುದು ಎಂಬುದನ್ನು ನೀವು ಊಹಿಸಿನೋಡಸಾಧ್ಯವಿದೆಯೋ? 20 ಮಂದಿ ಸಮರ್ಪಿತ ವ್ಯಕ್ತಿಗಳಿಗೆ ದೀಕ್ಷಾಸ್ನಾನವನ್ನು ಕೊಡಲಿಕ್ಕಾಗಿ ಒಂದು ಉಷ್ಣವಲಯದ ಸಮುದ್ರತೀರವು ಉಪಯೋಗಿಸಲ್ಪಟ್ಟಿತು.

ಸಾರ್ವಜನಿಕರ ಕಣ್ಣುಕುಕ್ಕಿದ ಒಂದು ನವೀನತೆಯು, ಅಭ್ಯರ್ಥಿಗಳು ಹಾಕಿಕೊಂಡಿದ್ದ ಅದ್ವಿತೀಯವಾದ ಬ್ಯಾಜ್‌ ಕಾರ್ಡ್‌ಗಳೇ. ಪೋರ್ಚುಗಲ್‌ ಮತ್ತು ಅಂಗೋಲದಿಂದ ಬಂದಿದ್ದ 25 ಸಂದರ್ಶಕರ ಹಾಜರಿಯು, ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮೆರುಗನ್ನು ಕೊಟ್ಟಿತು. ವಾತ್ಸಲ್ಯಭರಿತ ಕ್ರೈಸ್ತ ಪ್ರೀತಿಯ ಬಂಧವು ಬೇಗನೆ ಬೆಸೆದುಕೊಂಡಿತು, ಮತ್ತು ಕೊನೆಯ ಸೆಷನ್‌ನಲ್ಲಿ ವಿದಾಯ ಹೇಳುವಾಗ ಅನೇಕರ ಕಣ್ಣುಗಳಲ್ಲಿ ಕಂಬನಿಯು ತಂಬಿಬಂತು.​—ಯೋಹಾನ 13:35.

ನ್ಯಾಷನಲ್‌ ರೇಡಿಯೋವಿನಿಂದ ಪತ್ರಕರ್ತರು ಬಂದು ಅಧಿವೇಶನ ಮೇಲ್ವಿಚಾರಕನ ಸಂದರ್ಶನ ಮಾಡಿದರು ಮತ್ತು ಕೊಡಲ್ಪಟ್ಟ ಅನೇಕ ಭಾಷಣಗಳ ತುಣುಕುಗಳನ್ನೂ ಪ್ರಸಾರ ಮಾಡಿದರು. ಅದು ನಿಜವಾಗಿಯೂ ಒಂದು ಐತಿಹಾಸಿಕ ಘಟನೆಯಾಗಿತ್ತು, ಮತ್ತು ದೀರ್ಘಕಾಲದಿಂದಲೂ ಬೇರೆಲ್ಲರಿಂದಲೂ ಪ್ರತ್ಯೇಕವಾಗಿದ್ದ ಆ ನಂಬಿಗಸ್ತ ಸಾಕ್ಷಿಗಳಿಗೆ ಯೆಹೋವನ ದೃಶ್ಯ ಸಂಸ್ಥೆಯನ್ನು ತುಂಬ ನಿಕಟವಾಗಿ ನೋಡಲು ಸಹಾಯಮಾಡಿತು.

ಯೆಹೋವನ ಸ್ತುತಿಗಾಗಿ ಫಲಬಿಡುವುದು

ರಾಜ್ಯದ ಸಂದೇಶವು ಫಲಬಿಡುವಾಗ, ಅದು ಯೆಹೋವನಿಗೆ ಸ್ತುತಿ ಮತ್ತು ಘನತೆಯನ್ನು ತರುವ ಉತ್ತಮ ನಡತೆಯನ್ನು ಉತ್ಪಾದಿಸುತ್ತದೆ. (ತೀತ 2:10) ಒಬ್ಬ ಹದಿಪ್ರಾಯದ ಹುಡುಗಿಯು ತಾನು ಸಾಪ್ತಾಹಿಕ ಬೈಬಲ್‌ ಅಧ್ಯಯನದಿಂದ ಕಲಿತುಕೊಳ್ಳುತ್ತಿರುವ ವಿಷಯಗಳಲ್ಲಿ ಆನಂದಿಸುತ್ತಿದ್ದಳು. ಆದರೆ ಅವಳ ತಂದೆಯು, ಅವಳು ಸಭಾ ಕೂಟಗಳಿಗೆ ಹಾಜರಾಗುವುದರಿಂದ ಅವಳನ್ನು ತಡೆದನು. ಅವಳು ಕ್ರೈಸ್ತ ಕೂಟಗಳ ಪ್ರಾಮುಖ್ಯತೆಯನ್ನು ಮತ್ತು ಅವುಗಳಿಗೆ ಹಾಜರಾಗಲು ತನಗಿರುವ ಇಚ್ಛೆಯನ್ನು ಗೌರಪೂರ್ವಕವಾಗಿ ವ್ಯಕ್ತಪಡಿಸಿದಾಗ, ಅವನು ಅವಳನ್ನು ಮನೆಯಿಂದ ಹೊರಗೆ ಹಾಕಿದನು. ಅನೇಕ ಇತರ ಯುವ ಜನರು ಮಾಡುವಂತೆಯೇ ಇವಳೂ ಜೀವನದ ಆವಶ್ಯಕತೆಗಳನ್ನು ಒದಗಿಸಬಲ್ಲ ಒಬ್ಬ ಪುರುಷನೊಂದಿಗೆ ಕೂಡಲೇ ವಾಸಿಸಲಾರಂಭಿಸುವಳು ಎಂದು ಅವನು ನೆನಸಿದನು. ಆದರೆ ಅವಳು ಆದರ್ಶಪ್ರಾಯ ರೀತಿಯಲ್ಲಿ ಒಬ್ಬ ಕ್ರೈಸ್ತಳೋಪಾದಿ ಶುದ್ಧ ಜೀವನವನ್ನು ನಡೆಸುತ್ತಿದ್ದಾಳೆ ಎಂಬುದನ್ನು ಮನಗಂಡಾಗ, ಅವಳನ್ನು ಪುನಃ ಮನೆಗೆ ಸೇರಿಸಿಕೊಳ್ಳಲು ಮತ್ತು ಯೆಹೋವನ ಸೇವೆಯನ್ನು ಮಾಡಲಿಕ್ಕಾಗಿ ಪೂರ್ಣ ಸ್ವಾತಂತ್ರ್ಯವನ್ನು ಕೊಡಲು ಪ್ರೇರಿಸಲ್ಪಟ್ಟನು.

ಮತ್ತೊಂದು ಉದಾಹರಣೆಯು ಒಬ್ಬ ಸಂಗೀತ ತಂಡದ ನಾಯಕನದ್ದಾಗಿದೆ. ಅವನು ತನ್ನ ಅನೈತಿಕ ಜೀವನ ರೀತಿಯಿಂದಾಗಿ ಬೇಸತ್ತುಹೋಗಿದ್ದನು. ಜೀವನದಲ್ಲಿ ಒಂದು ಉದ್ದೇಶಕ್ಕಾಗಿ ಹುಡುಕುತ್ತಿದ್ದಾಗ, ಅವನು ಯೆಹೋವನ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟನು. ಅವನು ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಆರಂಭಿಸಿದಾಗ, ಅದು ಆ ಇಡೀ ಪಟ್ಟಣದಲ್ಲಿ ಮನೆಮಾತಾಯಿತು. ಎಲ್ಲಾ ಅಹಿತಕರ ಸಹವಾಸಗಳನ್ನು ಕೊನೆಗಾಣಿಸುವ ಆವಶ್ಯಕತೆಯನ್ನು ಅವನು ಕೂಡಲೇ ಗ್ರಹಿಸಿದನು. (1 ಕೊರಿಂಥ 15:33) ನಂತರ ಅವನು ಯೆಹೋವನಿಗೆ ತಾನು ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವ ಪ್ರಾಮುಖ್ಯ ಹೆಜ್ಜೆಯನ್ನು ತೆಗೆದುಕೊಂಡನು.

ಯುವಕರ ಒಂದು ಗುಂಪು ಸತ್ಯ ಧರ್ಮಕ್ಕಾಗಿ ಹುಡುಕುತ್ತಿತ್ತು. ಅವರ ಅನ್ವೇಷಣೆಯು, ಅವರು ಅನೇಕ ಸೌವಾರ್ತಿಕ ಗುಂಪುಗಳ ಪಾಸ್ಟರ್‌ಗಳೊಂದಿಗೆ ಚರ್ಚೆಗಳನ್ನು ನಡೆಸುವಂತೆ ಮಾಡಿತು, ಆದರೆ ಇವುಗಳೆಲ್ಲದರಿಂದಾಗಿ ಅವರ ಗಲಿಬಿಲಿ ಮತ್ತು ಹತಾಶೆಯು ಇನ್ನೂ ಹೆಚ್ಚಾಯಿತು. ಇದರ ಫಲಿತಾಂಶವಾಗಿ, ಅವರು ಹಿಂಸಾತ್ಮಕ ಅಲೆಮಾರಿಗಳೂ ಯಾವುದೇ ಧಾರ್ಮಿಕ ವಿಷಯಗಳ ಬಗ್ಗೆ ಗೇಲಿಮಾಡುವವರೂ ಆಗಿ ಪರಿಣಮಿಸಿದರು.

ಒಂದು ದಿನ, ಮಿಷನೆರಿಯಾಗಿದ್ದ ಒಬ್ಬ ಯೆಹೋವನ ಸಾಕ್ಷಿಯು ಒಂದು ಬೈಬಲ್‌ ಅಧ್ಯಯನವನ್ನು ನಡೆಸಲು ಹೋಗುತ್ತಿದ್ದಾಗ, ಈ ಯುವಕರು ಇದ್ದ ಸ್ಥಳವನ್ನು ಹಾದುಹೋಗಬೇಕಾಗಿತ್ತು. ಆ ಗುಂಪಿನವರು, ತಮ್ಮ ಕೆಲವು ಪ್ರಶ್ನೆಗಳಿಗೆ ಈ ಮಿಷನೆರಿಯು ಉತ್ತರವನ್ನೀಯಬೇಕೆಂದು ಬಯಸಿದರು ಮತ್ತು ಅವನನ್ನು ಒಂದು ಮನೆಯ ಹಿಂಬದಿಗೆ ಕರಕೊಂಡುಹೋಗಿ, ಕುಳಿತುಕೊಳ್ಳಲು ಒಂದು ಚಿಕ್ಕ ಸ್ಟೂಲನ್ನು ಕೊಟ್ಟರು. ನಂತರ, ಆತ್ಮ, ನರಕಾಗ್ನಿ, ಸ್ವರ್ಗದಲ್ಲಿ ಜೀವನ, ಮತ್ತು ಲೋಕದ ಅಂತ್ಯ ಎಂಬಂಥ ವಿಷಯಗಳ ಕುರಿತಾದ ಪ್ರಶ್ನೆಗಳ ಸುರಿಮಳೆಯೇ ಆರಂಭವಾಯಿತು. ಈ ಸಾಕ್ಷಿಯು ಆ ಗುಂಪಿನ ನಾಯಕನು ಕೊಟ್ಟ ಬೈಬಲಿನಿಂದಲೇ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟನು. ಒಂದು ತಾಸಿನ ನಂತರ, ಲಾ ಎಂಬ ಹೆಸರಿನ ಆ ನಾಯಕನು ಮಿಷನೆರಿಗೆ ಹೇಳಿದ್ದು: “ನೀವು ಬಂದು ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಡಿರಿ ಎಂದು ನಿಮ್ಮನ್ನು ಕರೆದಾಗ, ನಮ್ಮ ಉದ್ದೇಶವು ನಿಮ್ಮನ್ನು ಗೇಲಿಮಾಡುವುದಕ್ಕಾಗಿತ್ತು, ಏಕೆಂದರೆ ನಾವು ಬೇರೆ ಧರ್ಮದ ಜನರಿಗೆ ಹೀಗೆಯೇ ಮಾಡಿದ್ದೇವೆ. ಯಾರಿಂದಲೂ ಈ ಪ್ರಶ್ನೆಗಳನ್ನು ಉತ್ತರಿಸಲು ಸಾಧ್ಯವಿಲ್ಲವೆಂದು ನಾವು ನೆನಸಿದೆವು. ಆದರೆ ನೀವು ಕೇವಲ ಬೈಬಲನ್ನು ಮಾತ್ರ ಉಪಯೋಗಿಸುತ್ತಾ ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿರಿ! ನಾನು ಬೈಬಲಿನ ಕುರಿತು ಹೆಚ್ಚನ್ನು ಹೇಗೆ ಕಲಿಯಬಹುದು?” ಲಾವಿನೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು, ಮತ್ತು ಬೇಗನೆ ಅವನು ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ಶೀಘ್ರವೇ ಅವನು ಆ ಗುಂಪಿನೊಂದಿಗಿನ ಸಹವಾಸವನ್ನು ಬಿಟ್ಟುಬಿಟ್ಟು, ತನ್ನ ಹಿಂಸಾತ್ಮಕ ಜೀವನ ರೀತಿಗೆ ವಿದಾಯ ಹೇಳಿದನು. ಒಂದು ವರ್ಷದೊಳಗಾಗಿ ಅವನು ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿ, ದೀಕ್ಷಾಸ್ನಾನವನ್ನು ಪಡೆದುಕೊಂಡನು. ಈಗ ಅವನು ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.

ಆಳವಾಗಿ ಬೇರೂರಿರುವ ಒಂದು ಸ್ಥಳಿಕ ಪದ್ಧತಿ ಯಾವುದೆಂದರೆ, ಕಾನೂನುಬದ್ಧವಾಗಿ ವಿವಾಹವಾಗದೇ ಒಂದು ಜೋಡಿಯು ಒಟ್ಟಾಗಿ ಜೀವಿಸುವುದು. ಅನೇಕರು ಹಲವಾರು ವರ್ಷ ಒಟ್ಟಿಗೆ ಜೀವಿಸಿದ್ದಾರೆ, ಮತ್ತು ಅವರಿಗೆ ಮಕ್ಕಳು ಸಹ ಹುಟ್ಟಿದ್ದಾರೆ. ಈ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ಅಂಗೀಕರಿಸುವುದು ಕಷ್ಟಕರವೆಂದು ಅವರಿಗೆ ತೋರುತ್ತದೆ. ಈ ಅಡಚಣೆಯನ್ನು ಜಯಿಸಲು ದೇವರ ವಾಕ್ಯವು ಒಬ್ಬ ವ್ಯಕ್ತಿಗೆ ಹೇಗೆ ಸಹಾಯಮಾಡಿತು ಎಂಬುದನ್ನು ನೋಡುವುದು ಹೃದಯೋಲ್ಲಾಸಕರವಾಗಿದೆ.​—2 ಕೊರಿಂಥ 10:4-6; ಇಬ್ರಿಯ 4:12.

ಆಂಟೊನ್ಯೂ ತನ್ನ ವಿವಾಹವನ್ನು ಕಾನೂನುಬದ್ಧಗೊಳಿಸಬೇಕಾಗಿದೆ ಎಂಬುದನ್ನು ಮನಗಂಡನು, ಮತ್ತು ಜೋಳದ ಕೊಯ್ಲಿನ ನಂತರ ಹೀಗೆ ಮಾಡುವ ಯೋಜನೆಗಳನ್ನು ಮಾಡಿದನು. ಏಕೆಂದರೆ ಆಗ ಅವನ ಬಳಿ ಮದುವೆಯ ಔತಣಕ್ಕಾಗಿ ಸ್ವಲ್ಪ ಹಣವಿರುವುದು. ಆದರೆ ಕೊಯ್ಲಿನ ಕೇವಲ ಒಂದು ದಿನಕ್ಕೆ ಮುಂಚೆ, ಕಳ್ಳರು ಬಂದು ಅವನ ಬೆಳೆಯನ್ನು ಕದ್ದುಕೊಂಡು ಹೋದರು. ಅವನು ಮುಂದಿನ ವರ್ಷದ ಕೊಯ್ಲಿಗಾಗಿ ಕಾಯಲು ತೀರ್ಮಾನಿಸಿದನು, ಆದರೆ ಆ ವರ್ಷವೂ ಅದು ಕದಿಯಲ್ಪಟ್ಟಿತು. ಆದರೆ ಪುನಃ ಒಮ್ಮೆ ತನ್ನ ವಿವಾಹಕ್ಕಾಗಿ ಹಣವನ್ನು ಶೇಖರಿಸುವ ಅವನ ಯತ್ನವು ಕೈಕೊಟ್ಟಾಗ, ತನ್ನ ನಿಜ ವಿರೋಧಿ ಯಾರೆಂಬುದು ಆಂಟೊನ್ಯೂಗೆ ಮನವರಿಕೆಯಾಯಿತು. “ಇನ್ನು ಮುಂದೆ ಸೈತಾನನು ನನ್ನೊಂದಿಗೆ ಆಟವಾಡಲು ಸಾಧ್ಯವಿಲ್ಲ. ಒಂದೂವರೆ ತಿಂಗಳಲ್ಲಿ, ಔತಣವಿರಲಿ ಇಲ್ಲದಿರಲಿ, ನಮಗೆ ವಿವಾಹವಾಗುವುದಂತೂ ಖಂಡಿತ!” ಎಂದನವನು. ಹಾಗೆಯೇ ಆಯಿತು, ಮತ್ತು ಅವನನ್ನು ಅಚ್ಚರಿಗೊಳಿಸಿದ ಸಂಗತಿಯೇನೆಂದರೆ ಅವನ ಸ್ನೇಹಿತರು ಅವನ ಮದುವೆಯ ಔತಣಕ್ಕಾಗಿ ಕೋಳಿಗಳನ್ನು, ಬಾತುಕೋಳಿಗಳನ್ನು, ಮತ್ತು ಒಂದು ಆಡನ್ನು ಕೊಟ್ಟರು. ಅವರ ಮದುವೆಯನ್ನು ನೋಂದಾಯಿಸಿದ ಬಳಿಕ, ಆಂಟೊನ್ಯೂ ಮತ್ತು ಅವನ ಹೆಂಡತಿ, ಅವರ ಆರು ಮಂದಿ ಮಕ್ಕಳೊಂದಿಗೆ ಯೆಹೋವನಿಗೆ ತಾವು ಮಾಡಿದ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು.

ಪ್ರಿನ್ಸಪ ದ್ವೀಪಕ್ಕೆ ನಮ್ಮ ಗಮನವನ್ನು ತಿರುಗಿಸೋಣ

ಇತ್ತೀಚಿನ ವರ್ಷಗಳಲ್ಲಿ ಪ್ರಿನ್ಸಪದ 6,000 ನಿವಾಸಿಗಳಿಗೆ, ಸಾವ್‌ ಟಮೆಯಿಂದ ಸರ್ಕಿಟ್‌ ಮೇಲ್ವಿಚಾರಕರು ಮತ್ತು ಪಯನೀಯರರು ಆಗಿಂದಾಗ್ಗೆ ಭೇಟಿಕೊಡುತ್ತಿದ್ದಾರೆ. ದ್ವೀಪನಿವಾಸಿಗಳು ತುಂಬ ಅತಿಥಿಸತ್ಕಾರವನ್ನು ತೋರಿಸಿದರು ಮತ್ತು ಸಾಕ್ಷಿಗಳಿಗೆ ಏನು ಹೇಳಲಿಕ್ಕಿತ್ತೋ ಅದಕ್ಕೆ ತವಕದಿಂದ ಕಿವಿಗೊಟ್ಟರು. ತನಗೆ ಕೊಡಲ್ಪಟ್ಟಿದ್ದ ಒಂದು ಟ್ರ್ಯಾಕ್ಟನ್ನು ಓದಿದ ಒಬ್ಬ ವ್ಯಕ್ತಿ, ಮರುದಿನ ಪಯನೀಯರರಿಗಾಗಿ ಹುಡುಕಿ ತಾನೂ ಆ ಟ್ರ್ಯಾಕ್ಟ್‌ಗಳನ್ನು ವಿತರಿಸುವುದರಲ್ಲಿ ಜೊತೆಗೂಡಲು ಬಯಸುತ್ತೇನೆಂದು ತಿಳಿಸಿದನು. ಇದು ತಾವು ಮಾಡಬೇಕಾಗಿರುವ ಕೆಲಸವಾಗಿದೆ ಎಂದು ಪಯನೀಯರರು ಆ ವ್ಯಕ್ತಿಗೆ ವಿವರಿಸಿದರು, ಆದರೆ ತಾನು ಮನೆಯಿಂದ ಮನೆಗೆ ಅವರೊಂದಿಗೆ ಬಂದು ಮನೆಯವರಿಗೆ ಒಳ್ಳೇ ಗಮನವನ್ನು ಕೊಡುವಂತೆ ಶಿಫಾರಸ್ಸು ಮಾಡುವೆನೆಂದು ಹಠಹಿಡಿದನು. ಕೊನೆಗೆ ವಿದಾಯ ಹೇಳಿ ಹೊರಡುವಾಗ, ಆ ವ್ಯಕ್ತಿ ನಮ್ಮ ಪಯನೀಯರರು ಮಾಡುತ್ತಿರುವ ಪ್ರಾಮುಖ್ಯವಾದ ಕೆಲಸಕ್ಕಾಗಿ ಅವರನ್ನು ಶ್ಲಾಘಿಸಿದನು.

ಇಸವಿ 1998ರಲ್ಲಿ ಸಾವ್‌ ಟಮೆಯಿಂದ ಇಬ್ಬರು ಪಯನೀಯರರು ಪ್ರಿನ್ಸಪಗೆ ಸ್ಥಳಾಂತರಿಸಿದರು, ಮತ್ತು ಸ್ವಲ್ಪ ಸಮಯದಲ್ಲೇ 17 ಬೈಬಲ್‌ ಅಧ್ಯಯನಗಳನ್ನು ನಡೆಸಲಾರಂಭಿಸಿದರು. ಕೆಲಸವು ವಿಸ್ತರಿಸುತ್ತಾ ಹೋಯಿತು, ಸ್ವಲ್ಪದರಲ್ಲೇ ಸರಾಸರಿಯಾಗಿ 16 ಮಂದಿ ಸಭಾ ಪುಸ್ತಕ ಅಧ್ಯಯನಕ್ಕೆ ಹಾಜರಾಗುತ್ತಿದ್ದರು, ಮತ್ತು 30ಕ್ಕಿಂತಲೂ ಹೆಚ್ಚು ಮಂದಿ ಬಹಿರಂಗ ಭಾಷಣಕ್ಕೆ ಹಾಜರಾದರು. ಒಂದು ಕೂಟದ ಸ್ಥಳದ ಅಗತ್ಯವಿದೆಯೆಂಬ ವಿಚಾರವನ್ನು ನಗರಾಡಳಿತ ಕಛೇರಿಗೆ ಪ್ರಸ್ತುತಪಡಿಸಲಾಯಿತು ಮತ್ತು ಸಂತೋಷಕರವಾಗಿ, ಒಂದು ರಾಜ್ಯ ಸಭಾಗೃಹವನ್ನು ಕಟ್ಟುವಂತೆ ಅನುಮತಿಯನ್ನು ನೀಡಲಾಯಿತು. ಒಂದು ಚಿಕ್ಕ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಸಾವ್‌ ಟಮೆಯಲ್ಲಿರುವ ಸಹೋದರರು ಮುಂದೆಬಂದರು ಮತ್ತು ಆ ಕಟ್ಟಡದಲ್ಲಿ ಇಬ್ಬರು ವಿಶೇಷ ಪಯನೀಯರರಿಗಾಗಿ ಉಳುಕೊಳ್ಳುವ ಕೋಣೆಗಳೂ ಇವೆ.

ದೂರದಲ್ಲಿರುವ ದ್ವೀಪಗಳಲ್ಲಿ ಸುವಾರ್ತೆಯು ಬಹಳಷ್ಟು ಫಲಬಿಡುತ್ತಿದೆ ಎಂಬುದು ಖಂಡಿತವಾಗಿಯೂ ಪ್ರತ್ಯಕ್ಷವಾಗಿದೆ. (ಕೊಲೊಸ್ಸೆ 1:5, 6) 1990ರ ಜನವರಿ ತಿಂಗಳಿನಲ್ಲಿ ಸಾವ್‌ ಟಮೆ ಮತ್ತು ಪ್ರಿನ್ಸಪದಲ್ಲಿ 46 ಮಂದಿ ಪ್ರಚಾರಕರಿದ್ದರು. 2002ರ ಸೇವಾ ವರ್ಷದಲ್ಲಿ, 388 ರಾಜ್ಯ ಘೋಷಕರ ಉಚ್ಚಾಂಕವನ್ನು ತಲಪಲಾಯಿತು! 20 ಪ್ರತಿಶತಕ್ಕಿಂತಲೂ ಹೆಚ್ಚು ಪ್ರಚಾರಕರು ಪೂರ್ಣ ಸಮಯದ ಸೇವೆಯಲ್ಲಿದ್ದಾರೆ, ಮತ್ತು ಸುಮಾರು 1,400 ಮನೆ ಬೈಬಲ್‌ ಅಧ್ಯಯನಗಳು ನಡೆಸಲ್ಪಡುತ್ತಿವೆ. 2001ರ ಜ್ಞಾಪಕಾಚರಣೆಯ ಹಾಜರಿಯು 1,907ರ ಸರ್ವಕಾಲಿಕ ಉಚ್ಚಾಂಕವನ್ನು ತಲಪಿತು. ಹೌದು, ಈ ಉಷ್ಣವಲಯದ ದ್ವೀಪಗಳಲ್ಲಿ ಯೆಹೋವನ ವಾಕ್ಯವು ತ್ವರಿತಗತಿಯಲ್ಲಿ ಹಬ್ಬುತ್ತಿದೆ ಮತ್ತು ಪ್ರಖ್ಯಾತಿಹೊಂದುತ್ತಿದೆ.​—2 ಥೆಸಲೊನೀಕ 3:1.

[ಪುಟ 12ರಲ್ಲಿರುವ ಚೌಕ/ಚಿತ್ರ]

ಜನಪ್ರಿಯ ರೇಡಿಯೋ ಪ್ರಸಾರಗಳು

ಈ ದ್ವೀಪಗಳಲ್ಲಿ ಬಹಳಷ್ಟು ಗಣ್ಯಮಾಡಲ್ಪಡುವ ಒಂದು ಪ್ರಕಾಶನವು ಯುವ ಜನರ ಪ್ರಶ್ನೆಗಳು​—ಕಾರ್ಯಸಾಧಕ ಉತ್ತರಗಳು * ಎಂಬ ಪುಸ್ತಕ. ಎರಡು ವಾರಗಳಿಗೊಮ್ಮೆ, ಆ ಶೀರ್ಷಿಕೆಯನ್ನು ಹೊಂದಿರುವ 15 ನಿಮಿಷದ ಕಾರ್ಯಕ್ರಮವೊಂದು ನ್ಯಾಷನಲ್‌ ರೇಡಿಯೋವಿನಲ್ಲಿ ಪ್ರಸ್ತುತಪಡಿಸಲ್ಪಡುತ್ತಿದೆ. “ಯುವ ಜನರೇ, ಅದು ನಿಜ ಪ್ರೀತಿಯೋ ಅಥವಾ ಮೋಹಪರವಶತೆಯೋ ಎಂದು ಹೇಗೆ ತಿಳಿಯಬಲ್ಲಿರಿ?” ಎಂದು ಕೇಳಿದ ನಂತರ, ಪ್ರಸಾರಮಾಡುವವನು ಆ ಪುಸ್ತಕದಿಂದ ಒಂದು ಭಾಗವನ್ನು ಓದಿ ಹೇಳುವುದನ್ನು ಕೇಳಿಸಿಕೊಳ್ಳುವುದು ಎಷ್ಟು ರೋಮಾಂಚಕ ಸಂಗತಿಯಾಗಿದೆ! (31ನೇ ಅಧ್ಯಾಯವನ್ನು ನೋಡಿರಿ.) ತದ್ರೀತಿಯ ಒಂದು ಪ್ರಸಾರವು ಕುಟುಂಬ ಸಂತೋಷದ ರಹಸ್ಯ * ಎಂಬ ಪುಸ್ತಕದಿಂದ ಆಯ್ದ ಭಾಗಗಳನ್ನು ಪ್ರಸ್ತುತಪಡಿಸುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 33 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 33 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 9ರಲ್ಲಿರುವ ಚಿತ್ರ]

ಇಸವಿ 1994ರಲ್ಲಿ ಸಾವ್‌ ಟಮೆಯಲ್ಲಿ ಮೊದಲ ರಾಜ್ಯ ಸಭಾಗೃಹ

[ಪುಟ 10ರಲ್ಲಿರುವ ಚಿತ್ರಗಳು]

1. ಮಿಸಾಶೀಯಲ್ಲಿ ಕ್ಷಿಪ್ರ-ನಿರ್ಮಾಣದ ರಾಜ್ಯ ಸಭಾಗೃಹ

2. ಒಂದು ಐತಿಹಾಸಿಕ ಜಿಲ್ಲಾ ಅಧಿವೇಶನ ಈ ಸಭಾಂಗಣದಲ್ಲಿ ನಡೆಯಿತು

3. ಅಧಿವೇಶನದಲ್ಲಿ ಆನಂದಭರಿತ ದೀಕ್ಷಾಸ್ನಾನ ಅಭ್ಯರ್ಥಿಗಳು

[ಪುಟ 8ರಲ್ಲಿರುವ ಚಿತ್ರ ಕೃಪೆ]

ಭೂಗೋಳ: Mountain High Maps® Copyright © 1997 Digital Wisdom, Inc.