ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ

ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ

ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ

ಯಾರೊಬ್ಬರೂ ಜನಿಸುವಾಗಲೇ ಕೊಡುವಂಥ ಮನೋಭಾವದೊಂದಿಗೆ ಜನಿಸುವುದಿಲ್ಲ. ಒಂದು ಶಿಶುವಿನ ಸಾಮಾನ್ಯ ಸ್ವಭಾವವು, ತನ್ನ ಪೋಷಕರ ಅಭಿರುಚಿಗಳ ಬಗ್ಗೆ ಸಹ ಯೋಚಿಸದೆ ಕೇವಲ ತನಗೆ ಬೇಕಾದವುಗಳನ್ನು ಮತ್ತು ಅಗತ್ಯವಾದವುಗಳನ್ನು ತೃಪ್ತಿಗೊಳಿಸುವುದೇ ಆಗಿದೆ. ಆದರೆ ಸಮಯ ದಾಟಿದಂತೆ, ಅಗತ್ಯದಲ್ಲಿರುವವನು ಕೇವಲ ತಾನೊಬ್ಬನೇ ಅಲ್ಲ ಎಂದು ಮಗುವು ಕಲಿತುಕೊಳ್ಳುತ್ತದೆ. ತಾನು ಇತರರನ್ನು ಸಹ ಪರಿಗಣಿಸಬೇಕು ಮತ್ತು ತೆಗೆದುಕೊಳ್ಳುವುದನ್ನು ಮಾತ್ರವಲ್ಲ ಬದಲಾಗಿ ಕೊಡುವುದನ್ನು ಹಾಗೂ ಹಂಚಿಕೊಳ್ಳುವುದನ್ನು ಸಹ ಕಲಿಯಲೇಬೇಕು ಎಂದು ಮಗುವು ಗ್ರಹಿಸುತ್ತದೆ. ಹೌದು, ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ.

ಆದರೆ ಕೊಡುವಂಥ ಎಲ್ಲಾ ವ್ಯಕ್ತಿಗಳಲ್ಲಿ​—ಉದಾರವಾಗಿ ಕೊಡುವವರಲ್ಲಿ ಸಹ​—ಕೊಡುವ ಮನೋಭಾವವಿರುವುದಿಲ್ಲ. ಕೆಲವರು ತಮ್ಮ ಸ್ವಂತ ಹಿತಾರ್ಥಕ್ಕೋಸ್ಕರವಾಗಿ ದಾನಧರ್ಮ ಸಂಸ್ಥೆಗಳಿಗೆ ದಾನಮಾಡಬಹುದು. ಇನ್ನಿತರರು ಜನರಿಂದ ಹೊಗಳಿಕೆಯನ್ನು ಪಡೆಯುವ ಉದ್ದೇಶದಿಂದ ಕಾಣಿಕೆಯನ್ನು ನೀಡಬಹುದು. ಆದರೆ ಸತ್ಕ್ರೈಸ್ತರಿಂದ ರೂಢಿಮಾಡಿಕೊಂಡಿದ್ದ ಕೊಡುವಿಕೆಯು ಇವೆಲ್ಲವುಗಳಿಗಿಂತ ಭಿನ್ನವಾಗಿರುತ್ತದೆ. ಹಾಗಾದರೆ, ಬೈಬಲಿನಲ್ಲಿ ಉತ್ತೇಜಿಸಲಾದ ಕೊಡುವಿಕೆಯ ವೈಶಿಷ್ಟ್ಯಗಳಾವುವು? ಮೊದಲನೆಯ ಶತಮಾನದ ಕ್ರೈಸ್ತರು ಅಭ್ಯಾಸಿಸಿದ ಕೊಡುವಿಕೆಯ ಸಂಕ್ಷಿಪ್ತವಾದ ಪರಿಗಣನೆಯು ಈ ಪ್ರಶ್ನೆಯನ್ನು ಉತ್ತರಿಸುತ್ತದೆ.

ಕ್ರೈಸ್ತ ಕೊಡುವಿಕೆಯ ಉದಾಹರಣೆಗಳು

ಬೈಬಲಿನಲ್ಲಿ ವರ್ಣಿಸಲ್ಪಟ್ಟಂತೆ, ಕ್ರೈಸ್ತ ಕೊಡುವಿಕೆಯು ಸಾಮಾನ್ಯವಾಗಿ ಅಗತ್ಯದಲ್ಲಿರುವ “ಇತರರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುವುದನ್ನು” ಅರ್ಥೈಸುತ್ತದೆ. (ಇಬ್ರಿಯ 13:16; ರೋಮಾಪುರ 15:26) ಯಾವುದೇ ಒತ್ತಾಯದಿಂದ ಇದನ್ನು ಮಾಡಬಾರದಿತ್ತು. ಅಪೊಸ್ತಲ ಪೌಲನು ಬರೆದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಅಷ್ಟುಮಾತ್ರವಲ್ಲದೆ, ಇತರರ ಗಮನವನ್ನು ನಮ್ಮ ಕಡೆಗೆ ಸೆಳೆಯುವ ಉದ್ದೇಶದಿಂದ ಕೊಡುವುದು ಸಹ ತಪ್ಪಾಗಿದೆ. ಅನನೀಯ ಮತ್ತು ಸಪ್ಫೈರಳು ಇದೇ ರೀತಿಯ ನಟನೆಯನ್ನು ಮಾಡಿದರು ಮತ್ತು ಈ ಕಾರಣದಿಂದ ಅವರು ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಯಿತು.​—ಅ. ಕೃತ್ಯಗಳು 5:​1-10.

ಸಾ.ಶ. 33ರ ಪಂಚಾಶತ್ತಮದ ಹಬ್ಬದ ಆಚರಣೆಗಾಗಿ ದೂರದೂರದ ಸ್ಥಳಗಳಿಂದ ಬಂದ ಅನೇಕ ಯೆಹೂದಿಗಳು ಮತ್ತು ಯೆಹೂದಿ ಮತಾವಲಂಬಿಗಳು ಯೆರೂಸಲೇಮಿನಲ್ಲಿ ಒಟ್ಟುಸೇರಿದ್ದಾಗ, ಕೊಡುವ ಗುಣವನ್ನು ತೋರಿಸುವ ಅಗತ್ಯವು ಎದ್ದುಬಂತು. ಇದೇ ಸ್ಥಳದಲ್ಲಿ ಯೇಸುವಿನ ಹಿಂಬಾಲಕರು “ಪವಿತ್ರಾತ್ಮಭರಿತರಾಗಿ . . . ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.” ಇದನ್ನು ಕೇಳಿದೊಡನೆ ಜನರು ಗುಂಪು ಗುಂಪಾಗಿ ಅವರ ಸುತ್ತಲೂ ಕೂಡಿಬಂದು, ಯೇಸು ಕ್ರಿಸ್ತನ ಕುರಿತಾದ ಪೇತ್ರನ ಭಾವೋತ್ತೇಜಕವಾದ ಭಾಷಣವನ್ನು ಕೇಳಿಸಿಕೊಂಡರು. ನಂತರ, ದೇವಾಲಯದ ದ್ವಾರದಲ್ಲಿ ಕೂತಿದ್ದ ಹುಟ್ಟು ಕುಂಟನನ್ನು ಪೇತ್ರ ಯೋಹಾನರು ಗುಣಪಡಿಸಿದ್ದನ್ನು ಜನರು ನೋಡಿದರು, ಮತ್ತು ಪೇತ್ರನು ಮತ್ತೊಮ್ಮೆ ಯೇಸುವಿನ ಕುರಿತು ಮಾತಾಡಿ, ಅವರು ಪಶ್ಚಾತ್ತಾಪಪಡುವ ಅಗತ್ಯವಿದೆ ಎಂದು ಹೇಳುವುದನ್ನು ಕೇಳಿಸಿಕೊಂಡರು. ಸಾವಿರಾರು ಜನರು ಪಶ್ಚಾತ್ತಾಪಪಟ್ಟು, ಯೇಸುವಿನ ಹಿಂಬಾಲಕರಾಗಿ ದೀಕ್ಷಾಸ್ನಾನಪಡಕೊಂಡರು.​—ಅ. ಕೃತ್ಯಗಳು, ಅಧ್ಯಾಯಗಳು 2 ಮತ್ತು 3.

ಹೊಸದಾಗಿ ಮತಾಂತರಗೊಂಡ ಜನರಿಗೆ ಯೆರೂಸಲೇಮಿನಲ್ಲಿಯೇ ಉಳಕೊಂಡು, ಯೇಸುವಿನ ಅಪೊಸ್ತಲರಿಂದ ಹೆಚ್ಚಿನ ಉಪದೇಶವನ್ನು ಪಡೆದುಕೊಳ್ಳುವ ಬಯಕೆಯಿತ್ತು. ಆದರೆ ಈ ಎಲ್ಲಾ ಸಂದರ್ಶಕರ ಆವಶ್ಯಕತೆಗಳನ್ನು ಅಪೊಸ್ತಲರು ಹೇಗೆ ಪೂರೈಸಸಾಧ್ಯವಾಯಿತು? ಬೈಬಲ್‌ ವೃತ್ತಾಂತವು ತಿಳಿಸುವುದು: “ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಕ್ರಯವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು.” (ಅ. ಕೃತ್ಯಗಳು 4:​33-35) ನಿಜವಾಗಿಯೂ, ಹೊಸದಾಗಿ ಸ್ಥಾಪಿಸಲಾದ ಯೆರೂಸಲೇಮ್‌ ಸಭೆಗೆ ಕೊಡುವ ಮನೋಭಾವವಿತ್ತು!

ನಂತರ ಇತರ ಸಭೆಗಳೂ ಇದೇ ರೀತಿಯ ಕೊಡುವ ಮನೋಭಾವವನ್ನು ಪ್ರದರ್ಶಿಸಿದವು. ಉದಾಹರಣೆಗೆ, ಮಕೆದೋನ್ಯದ ಕ್ರೈಸ್ತರು ಸ್ವತಃ ಬಡವರಾಗಿದ್ದರೂ ತಮ್ಮ ಸಾಮರ್ಥ್ಯವನ್ನು ಮೀರಿ ಯೂದಾಯದಲ್ಲಿದ್ದ ತಮ್ಮ ಬಡ ಸಹೋದರರಿಗೆ ಹಣ ಸಹಾಯವನ್ನು ಮಾಡಿದರು. (ರೋಮಾಪುರ 15:26; 2 ಕೊರಿಂಥ 8:​1-7) ಪೌಲನ ಶುಶ್ರೂಷೆಯನ್ನು ಬೆಂಬಲಿಸಿದವರಲ್ಲಿ ಫಿಲಿಪ್ಪಿಯ ಸಭೆಯವರು ಒಂದು ಎದ್ದುಕಾಣುವ ಮಾದರಿಯಾಗಿದ್ದರು. (ಫಿಲಿಪ್ಪಿ 4:​15, 16) ಅಷ್ಟುಮಾತ್ರವಲ್ಲದೆ ಯೆರೂಸಲೇಮ್‌ ಸಭೆಯು ತಾನೇ ಪ್ರತಿದಿನ ಅಗತ್ಯದಲ್ಲಿದ್ದ ವಿಧವೆಯರಿಗೆ ಆಹಾರವನ್ನು ವಿತರಿಸುತ್ತಿತ್ತು ಮತ್ತು ಅಗತ್ಯದಲ್ಲಿದ್ದ ಯಾವ ವಿಧವೆಯರನ್ನೂ ಪರಾಂಬರಿಸದೆ ಬಿಡಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಪೊಸ್ತಲರು ಏಳು ಮಂದಿ ಅರ್ಹರಾದ ಪುರುಷರನ್ನು ನೇಮಿಸಿದರು.​—ಅ. ಕೃತ್ಯಗಳು 6:​1-6.

ಕಷ್ಟಕರ ಸಮಯಗಳನ್ನು ಮುನ್ನೋಡಿ ಅದಕ್ಕಾಗಿ ಮುಂಚಿತವಾಗಿಯೇ ಕೊಡುವುದರಲ್ಲಿಯೂ ಆರಂಭದ ಕ್ರೈಸ್ತ ಸಭೆಗಳು ತ್ವರಿತಗತಿಯಿಂದ ಕ್ರಿಯೆಗೈದವು. ಉದಾಹರಣೆಗೆ, ಪ್ರವಾದಿಯಾದ ಅಗಬನು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದೆಂದು ಮುನ್‌ತಿಳಿಸಿದಾಗ, ಸಿರಿಯದ ಅಂತಿಯೋಕ್ಯದಲ್ಲಿದ್ದ ಸಭೆಯ ಶಿಷ್ಯರಲ್ಲಿ “ಪ್ರತಿಯೊಬ್ಬರು ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯ ಮಾಡಬೇಕೆಂದು ನಿಶ್ಚಯಿಸಿಕೊಂಡರು.” (ಅ. ಕೃತ್ಯಗಳು 11:​28, 29) ಇತರರ ಅಗತ್ಯಗಳನ್ನು ಮುಂಚಿತವಾಗಿಯೇ ನಿಶ್ಚಯಿಸಿಕೊಳ್ಳುವುದರಲ್ಲಿ ಎಂಥ ಒಂದು ಉತ್ತಮ ಮನೋಭಾವವನ್ನು ಇವರು ವ್ಯಕ್ತಪಡಿಸಿದರು!

ಇಷ್ಟು ಉದಾರಿಗಳಾಗಿಯೂ ಪ್ರೀತಿಪರರಾಗಿಯೂ ಇರುವಂತೆ ಆರಂಭದ ಕ್ರೈಸ್ತರಿಗೆ ಯಾವುದು ಪ್ರಚೋದಿಸಿತು? ಮತ್ತು, ಒಬ್ಬನು ಕೊಡುವ ಮನೋಭಾವವನ್ನು ಹೇಗೆ ಗಳಿಸಬಲ್ಲನು? ರಾಜ ದಾವೀದನ ಉದಾಹರಣೆಯನ್ನು ಸಂಕ್ಷಿಪ್ತವಾಗಿ ಪರಿಗಣಿಸುವ ಮೂಲಕ ನಾವು ಬಹಳಷ್ಟನ್ನು ಕಲಿಯಬಲ್ಲೆವು.

ಸತ್ಯಾರಾಧನೆಗಾಗಿ ದಾವೀದನ ಉದಾರ ಬೆಂಬಲ

ಹೆಚ್ಚುಕಡಿಮೆ 500 ವರುಷಗಳ ತನಕ, ಯೆಹೋವನ ಸಾನಿಧ್ಯವನ್ನು ಸೂಚಿಸುವ ಪವಿತ್ರ ಪೆಟ್ಟಿಗೆಯಾದ ನಿಬಂಧನ (ಒಡಂಬಡಿಕೆಯ) ಮಂಜೂಷವನ್ನು ಇಡಲು ಒಂದು ಶಾಶ್ವತ ಸ್ಥಳವಿರಲಿಲ್ಲ. ಅದು ಗುಡಾರದಲ್ಲಿ, ಅಂದರೆ ಇಸ್ರಾಯೇಲ್ಯರು ಅರಣ್ಯದಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಮುಂದಕ್ಕೆ ವಾಗ್ದತ್ತ ದೇಶವನ್ನು ಪ್ರವೇಶಿಸುವಾಗ ಸ್ಥಳದಿಂದ ಸ್ಥಳಕ್ಕೆ ಸಾಗಿಸಲಾಗುತ್ತಿದ್ದ ದೇವದರ್ಶನ ಗುಡಾರದಲ್ಲಿ ಇಡಲ್ಪಟ್ಟಿತ್ತು. ಆದರೆ, ಆ ಪವಿತ್ರ ಮಂಜೂಷವನ್ನು ಗುಡಾರದಿಂದ ತೆಗೆದು ಯೆಹೋವನಿಗಾಗಿ ಒಂದು ಸೂಕ್ತವಾದ ಮನೆಯನ್ನು ಕಟ್ಟಿ ಅದರಲ್ಲಿ ಇಡಬೇಕೆಂದು ರಾಜ ದಾವೀದನು ಬಹಳವಾಗಿ ಇಚ್ಛಿಸಿದನು. ಪ್ರವಾದಿಯಾದ ನಾತಾನನೊಂದಿಗೆ ಮಾತನಾಡುತ್ತಾ ದಾವೀದನು ಹೇಳಿದ್ದು: “ನೋಡು, ನಾನು ದೇವದಾರುಮರದ ಮನೆಯಲ್ಲಿ ವಾಸವಾಗಿದ್ದೇನೆ; ಯೆಹೋವನ ನಿಬಂಧನ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ.”​—1 ಪೂರ್ವಕಾಲವೃತ್ತಾಂತ 17:1.

ಆದರೆ ದಾವೀದನು ಒಬ್ಬ ಯುದ್ಧ ಪುರುಷನಾಗಿದ್ದನು. ಆದುದರಿಂದ ಅವನ ಮಗನಾದ ಸೊಲೊಮೋನನು ತನ್ನ ಶಾಂತಿಯ ಆಳ್ವಿಕೆಯ ಸಮಯದಲ್ಲಿ ನಿಬಂಧನ ಮಂಜೂಷವನ್ನು ಇಡಲಿಕ್ಕಾಗಿ ಆಲಯವನ್ನು ಕಟ್ಟುವನೆಂದು ಯೆಹೋವನು ಆಜ್ಞಾಪಿಸಿದನು. (1 ಪೂರ್ವಕಾಲವೃತ್ತಾಂತ 22:7-10) ಹಾಗಿದ್ದರೂ ಇದು ದಾವೀದನ ಕೊಡುವ ಮನೋಭಾವವನ್ನು ಕುಂದಿಸಲಿಲ್ಲ. ಅವನು ಆಲಯದ ನಿರ್ಮಾಣ ಕೆಲಸಕ್ಕಾಗಿ ಕೆಲಸಮಾಡುವವರ ದೊಡ್ಡ ತಂಡವನ್ನು ಸಂಘಟಿಸುತ್ತಾ, ಮುಂದೆ ಆಲಯದ ನಿರ್ಮಾಣದಲ್ಲಿ ಉಪಯೋಗಿಸಲ್ಪಡುವ ಸಾಮಗ್ರಿಗಳನ್ನು ಸಿದ್ಧಪಡಿಸಿದನು. ನಂತರ ಅವನು ಸೊಲೊಮೋನನಿಗೆ ಹೇಳಿದ್ದು: “ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಒಂದು ಲಕ್ಷ ತಲಾಂತು ಬಂಗಾರವನ್ನೂ ಹತ್ತು ಲಕ್ಷ ತಲಾಂತು ಬೆಳ್ಳಿಯನ್ನೂ ಲೆಕ್ಕವಿಲ್ಲದಷ್ಟು ತಾಮ್ರ ಕಬ್ಬಿಣ ಇವುಗಳನ್ನೂ ಕಲ್ಲುಮರಗಳನ್ನೂ ಕೂಡಿಸಿದ್ದೇನೆ.” (1 ಪೂರ್ವಕಾಲವೃತ್ತಾಂತ 22:14) ಇಷ್ಟರಲ್ಲಿಯೇ ತೃಪ್ತನಾಗದೆ ದಾವೀದನು ತನ್ನ ಸ್ವಂತ ಸೊತ್ತಿನಿಂದ, ಇಂದಿನ ಬೆಲೆಗೆ ಹೋಲಿಸುವಾಗ 6,000 ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆಯ ಬೆಳ್ಳಿಬಂಗಾರವನ್ನು ಕಾಣಿಕೆಯಾಗಿ ಕೊಟ್ಟನು. ಅದಕ್ಕೆ ಕೂಡಿಕೆಯಾಗಿ, ಪ್ರಧಾನರೂ ಉದಾರ ಹಸ್ತದಿಂದ ಕಾಣಿಕೆಯನ್ನು ನೀಡಿದರು. (1 ಪೂರ್ವಕಾಲವೃತ್ತಾಂತ 29:​3-9) ಖಂಡಿತವಾಗಿಯೂ ದಾವೀದನು ಉದಾರವಾದ ಕೊಡುವ ಮನೋಭಾವವನ್ನು ಪ್ರದರ್ಶಿಸಿದನು.

ಅಷ್ಟು ಉದಾರವಾಗಿ ಕೊಡುವಂತೆ ದಾವೀದನನ್ನು ಪ್ರಚೋದಿಸಿದ್ದಾದರೂ ಯಾವುದು? ತನ್ನಲ್ಲಿರುವ ಎಲ್ಲಾ ವಸ್ತುಗಳು ಮತ್ತು ತನ್ನ ಸಾಧನೆಗಳು ಯೆಹೋವನ ಆಶೀರ್ವಾದದ ಫಲಿತಾಂಶಗಳೇ ಎಂಬುದನ್ನು ಅವನು ಅಂಗೀಕರಿಸಿದ್ದನು. ಅವನು ಪ್ರಾರ್ಥನೆಯಲ್ಲಿ ಒಪ್ಪಿಕೊಂಡದ್ದು: “ನಮ್ಮ ದೇವರಾದ ಯೆಹೋವನೇ, ನಿನ್ನ ಪರಿಶುದ್ಧನಾಮಕ್ಕೋಸ್ಕರ ಆಲಯಕಟ್ಟಿಸಬೇಕೆಂದು ಸಂಗ್ರಹಿಸಿಟ್ಟಿರುವ ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು; ಇವೆಲ್ಲಾ ನಿನ್ನವೇ. ನನ್ನ ದೇವರೇ, ನೀನು ಹೃದಯವನ್ನು ಶೋಧಿಸುವವನೂ ಯಥಾರ್ಥಚಿತ್ತರನ್ನು ಮೆಚ್ಚುವವನೂ ಆಗಿದ್ದೀ ಎಂಬದನ್ನು ಬಲ್ಲೆನು. ನಾನಂತೂ ಯಥಾರ್ಥಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದ್ದೇನೆ. ಇಲ್ಲಿ ಕೂಡಿರುವ ನಿನ್ನ ಪ್ರಜೆಗಳೂ ಸ್ವೇಚ್ಛೆಯಿಂದಲೇ ನಿನಗೆ ಕಾಣಿಕೆಗಳನ್ನರ್ಪಿಸಿದ್ದಾರೆಂದು ನೋಡಿ ಸಂತೋಷಿಸುತ್ತೇನೆ.” (1 ಪೂರ್ವಕಾಲವೃತ್ತಾಂತ 29:16, 17) ಯೆಹೋವನೊಂದಿಗಿನ ತನ್ನ ಸಂಬಂಧವನ್ನು ದಾವೀದನು ಅಮೂಲ್ಯವೆಂದೆಣಿಸಿದನು. “ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ” ದೇವರನ್ನು ಸೇವಿಸುವ ಅಗತ್ಯವನ್ನು ಅವನು ಗ್ರಹಿಸಿದ್ದನು ಮತ್ತು ಹಾಗೆ ಮಾಡುವುದರಲ್ಲಿ ಅವನು ಆನಂದವನ್ನು ಕಂಡುಕೊಂಡನು. (1 ಪೂರ್ವಕಾಲವೃತ್ತಾಂತ 28:9) ಆರಂಭದ ಕ್ರೈಸ್ತರು ಸಹ ಕೊಡುವ ಮನೋಭಾವವನ್ನು ಪ್ರದರ್ಶಿಸುವಂತೆ ಅವರನ್ನು ಪ್ರೇರೇಪಿಸಿದ್ದು ಈ ಗುಣಗಳೇ ಆಗಿವೆ.

ಯೆಹೋವ—ಅತ್ಯಂತ ಮಹಾನ್‌ ದಾತ

ಕೊಡುವುದರಲ್ಲಿ ಅತ್ಯಂತ ಉತ್ತಮ ಮಾದರಿಯನ್ನು ನಾವು ಯೆಹೋವನಲ್ಲಿ ಕಂಡುಕೊಳ್ಳುತ್ತೇವೆ. ಆತನು ಎಷ್ಟು ಪ್ರೀತಿಪರನೂ ಕಾಳಜಿವಹಿಸುವವನೂ ಆಗಿದ್ದಾನೆಂದರೆ “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ಇಡೀ ಮಾನವಕುಲಕ್ಕೆ ಆತನು “ಜೀವಶ್ವಾಸ ಮುಂತಾದದ್ದೆಲ್ಲವನ್ನೂ” ಕೊಡುತ್ತಾನೆ. (ಅ. ಕೃತ್ಯಗಳು 17:25) ವಾಸ್ತವದಲ್ಲಿ, ಶಿಷ್ಯನಾದ ಯಾಕೋಬನು ತಿಳಿಸಿದಂತೆ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ.”​—ಯಾಕೋಬ 1:17.

ಯೆಹೋವನ ಅತಿ ಮಹಾನ್‌ ಉಡುಗೊರೆಯು ಆತನ “ಒಬ್ಬನೇ ಮಗ”ನನ್ನು ಕಳುಹಿಸಿದ್ದಾಗಿದೆ. “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯಾರೂ ತಾನು ಆ ಉಡುಗೊರೆಯನ್ನು ಪಡೆಯಲು ಅರ್ಹನಾಗಿದ್ದೇನೆಂದು ಹೇಳಲಾರನು, ಏಕೆಂದರೆ “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:​23, 24; 1 ಯೋಹಾನ 4:​9, 10) ಕ್ರಿಸ್ತನ ವಿಮೋಚನೆಯು, ದೇವರ ‘ವರ್ಣಿಸಲಶಕ್ಯವಾದ ವರಕ್ಕಾಗಿ’ ಅಂದರೆ “ದೇವರ ಅತಿಶಯವಾದ ಕೃಪೆ”ಗೆ ಆಧಾರವೂ ಮಾಧ್ಯಮವೂ ಆಗಿದೆ. (2 ಕೊರಿಂಥ 9:​14, 15) ದೇವರ ಉಡುಗೊರೆಗಾಗಿನ ಗಣ್ಯತೆಯ ಕಾರಣ ಪೌಲನು “ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿ”ಸುವುದನ್ನು ತನ್ನ ಜೀವನವೃತ್ತಿಯನ್ನಾಗಿ ಮಾಡಿದನು. (ಅ. ಕೃತ್ಯಗಳು 20:24) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ” ಎಂಬುದನ್ನು ಅವನು ತಿಳಿದುಕೊಂಡನು.​—1 ತಿಮೊಥೆಯ 2:4.

ಇಂದು, ಲೋಕವ್ಯಾಪಕವಾಗಿ 234 ದೇಶಗಳಲ್ಲಿ ವಿಸ್ತರಿಸಿರುವ ಮಹಾ ಸಾರುವ ಮತ್ತು ಬೋಧಿಸುವ ಕೆಲಸದ ಮೂಲಕ ಇದು ಪೂರೈಸಲ್ಪಡುತ್ತಿದೆ. “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು” ಎಂದು ಹೇಳುವ ಮೂಲಕ ಯೇಸು ಈ ವಿಸ್ತರಣೆಯನ್ನು ಮುನ್‌ತಿಳಿಸಿದ್ದನು. (ಮತ್ತಾಯ 24:14) ಹೌದು, “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಕಳೆದ ವರುಷ 60 ಲಕ್ಷಕ್ಕಿಂತಲೂ ಹೆಚ್ಚಿನ ಸುವಾರ್ತಾ ಘೋಷಕರು 120,23,81,302 ತಾಸುಗಳನ್ನು ಈ ಕೆಲಸದಲ್ಲಿ ಕಳೆದರು ಮತ್ತು 53,00,000ಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಿದರು. ಜೀವವು ಗಂಡಾಂತರದಲ್ಲಿರುವ ಕಾರಣ ಈ ಕಲಿಸುವ ಕೆಲಸವು ಅತಿ ಪ್ರಾಮುಖ್ಯವಾದ ಕೆಲಸವಾಗಿದೆ.​—ರೋಮಾಪುರ 10:​13-15; 1 ಕೊರಿಂಥ 1:21.

ಬೈಬಲ್‌ ಸತ್ಯಕ್ಕಾಗಿ ಹಸಿದಿರುವ ಜನರಿಗೆ ಸಹಾಯನೀಡಲಿಕ್ಕಾಗಿ, ಪ್ರತಿ ವರುಷವೂ ಬೈಬಲ್‌ಗಳು, ಪುಸ್ತಕಗಳು, ಮತ್ತು ಬ್ರೋಷರ್‌ಗಳನ್ನು ಸೇರಿಸಿ ಲಕ್ಷಾಂತರ ಪ್ರಕಾಶನಗಳು ಪ್ರಕಾಶಿಸಲ್ಪಡುತ್ತಿವೆ. ಇದರೊಂದಿಗೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ 100 ಕೋಟಿಗಿಂತಲೂ ಹೆಚ್ಚಿನ ಪ್ರತಿಗಳು ತಯಾರಿಸಲ್ಪಡುತ್ತವೆ. ಜನರು ಸುವಾರ್ತೆಗೆ ಪ್ರತಿಕ್ರಿಯಿಸಿದಂತೆ, ಬೈಬಲ್‌ ಶಿಕ್ಷಣ ಕೇಂದ್ರಗಳಾಗಿ ಸೇವೆಸಲ್ಲಿಸುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳು ಮತ್ತು ಸಮ್ಮೇಳನ ಹಾಲ್‌ಗಳು ಹೆಚ್ಚೆಚ್ಚಾಗಿ ಕಟ್ಟಲ್ಪಡುತ್ತವೆ. ಪ್ರತಿ ವರುಷಕ್ಕಾಗಿ ಸರ್ಕಿಟ್‌ ಸಮ್ಮೇಳನಗಳು, ವಿಶೇಷ ಸಮ್ಮೇಳನ ದಿನಗಳು, ಮತ್ತು ಜಿಲ್ಲಾ ಅಧಿವೇಶನಗಳು ಏರ್ಪಡಿಸಲ್ಪಡುತ್ತವೆ. ಮಿಷನೆರಿಗಳ, ಸಂಚರಣಾ ಮೇಲ್ವಿಚಾರಕರ, ಹಿರಿಯರ, ಮತ್ತು ಶುಶ್ರೂಷಕ ಸೇವಕರ ತರಬೇತಿಯು ಸಹ ಕ್ರಮವಾಗಿ ನಡೆಯುತ್ತಿರುತ್ತದೆ. ಈ ಎಲ್ಲಾ ಒದಗಿಸುವಿಕೆಗಳು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಸಿಗುವಂತೆ ಮಾಡಿದ್ದಕ್ಕಾಗಿ ನಾವು ಯೆಹೋವನಿಗೆ ಆಭಾರಿಗಳಾಗಿದ್ದೇವೆ. (ಮತ್ತಾಯ 24:​45-47) ಆತನಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವೆಷ್ಟು ಇಷ್ಟಪಡುತ್ತೇವೆ!

ಯೆಹೋವನಿಗೆ ಕೃತಜ್ಞತೆಯನ್ನು ತೋರಿಸುವುದು

ದೇವಾಲಯದ ನಿರ್ಮಾಣಕಾರ್ಯ ಮತ್ತು ಆರಂಭದ ಕ್ರೈಸ್ತ ಸಭೆಗಳಲ್ಲಿನ ಅಗತ್ಯವನ್ನು ಪೂರೈಸುವ ವಿಷಯದಲ್ಲಿ ನಡೆದಂತೆ, ಈ ಎಲ್ಲಾ ವಿಷಯಗಳಿಗೆ ಹಣಕಾಸಿನ ನೆರವು ಸಂಪೂರ್ಣವಾಗಿ ಸ್ವಯಂಪ್ರೇರಿತ ದಾನಗಳಿಂದ ಬರುತ್ತವೆ. ಹಾಗಿದ್ದರೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಯಾರೂ ಸಮಸ್ತ ವಸ್ತುಗಳ ಒಡೆಯನಾದ ಯೆಹೋವನನ್ನು ಐಶ್ವರ್ಯವಂತನನ್ನಾಗಿ ಮಾಡಸಾಧ್ಯವಿಲ್ಲ. (1 ಪೂರ್ವಕಾಲವೃತ್ತಾಂತ 29:14; ಹಗ್ಗಾಯ 2:8) ಆದುದರಿಂದ ನಮ್ಮ ಕಾಣಿಕೆಗಳು, ಯೆಹೋವನ ಮೇಲಣ ನಮ್ಮ ಪ್ರೀತಿ ಮತ್ತು ಸತ್ಯ ಆರಾಧನೆಯನ್ನು ಪ್ರವರ್ಧಿಸಬೇಕೆಂಬ ನಮ್ಮ ಬಯಕೆಯ ರುಜುವಾತಾಗಿದೆ. ಔದಾರ್ಯದ ಈ ಅಭಿವ್ಯಕ್ತಿಗಳು ಪೌಲನು ಹೇಳಿದಂತೆ “ದೇವರಿಗೆ ಕೃತಜ್ಞತಾಸ್ತುತಿಯನ್ನುಂಟುಮಾಡುವದು.” (2 ಕೊರಿಂಥ 9:​8-13) ಯೆಹೋವನು ಅಂಥ ಕೊಡುವಿಕೆಯನ್ನು ಉತ್ತೇಜಿಸುತ್ತಾನೆ ಏಕೆಂದರೆ ಅದು ನಮ್ಮಲ್ಲಿ ಸರಿಯಾದ ಮನೋಭಾವವಿದೆ ಮತ್ತು ಆತನ ಕಡೆಗೆ ಒಂದು ಒಳ್ಳೆಯ ಹೃದಯವಿದೆ ಎಂಬದನ್ನು ಸೂಚಿಸುತ್ತದೆ. ಯಾರು ಉದಾರಭಾವದವರಾಗಿರುತ್ತಾರೋ ಮತ್ತು ಯೆಹೋವನ ಮೇಲೆ ಆತುಕೊಳ್ಳುತ್ತಾರೋ ಅವರು ಆತನಿಂದ ಆಶೀರ್ವಾದವನ್ನು ಹೊಂದುವರು ಹಾಗೂ ಆತ್ಮಿಕವಾಗಿ ಸಮೃದ್ಧರಾಗುವರು. (ಧರ್ಮೋಪದೇಶಕಾಂಡ 11:​13-15; ಜ್ಞಾನೋಕ್ತಿ 3:​9, 10; 11:25) ಸಂತೋಷವು ಫಲಿಸುವುದೆಂದು ಯೇಸು ನಮಗೆ ಆಶ್ವಾಸನೆ ನೀಡುತ್ತಾ ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ [“ಸಂತೋಷ,” NW].”​—ಅ. ಕೃತ್ಯಗಳು 20:35.

ಕೊಡುವ ಮನೋಭಾವವಿರುವ ಕ್ರೈಸ್ತರು ಅಗತ್ಯದ ಸಮಯ ಬರುವ ತನಕ ಕಾಯುವುದಿಲ್ಲ. ಬದಲಾಗಿ, ಅವರು ‘ಎಲ್ಲರಿಗೆ ಒಳ್ಳೇದನ್ನು ಮಾಡಲು; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡಲು’ ಸಂದರ್ಭಕ್ಕಾಗಿ ಹುಡುಕುತ್ತಾರೆ. (ಗಲಾತ್ಯ 6:10) ದೈವಿಕ ಔದಾರ್ಯವನ್ನು ಉತ್ತೇಜಿಸುತ್ತಾ ಪೌಲನು ಬರೆದದ್ದು: “ಇದಲ್ಲದೆ ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.” (ಇಬ್ರಿಯ 13:16) ನಮ್ಮಲ್ಲಿರುವ ಆಸ್ತಿಯನ್ನು​—ಸಮಯ, ಶಕ್ತಿ, ಹಣ​—ಇತರರ ಸಹಾಯಕ್ಕಾಗಿ ಮತ್ತು ಶುದ್ಧಾರಾಧನೆಯ ಅಭಿವೃದ್ಧಿಗಾಗಿ ಉಪಯೋಗಿಸುವುದು ಯೆಹೋವ ದೇವರಿಗೆ ಬಹಳ ಸಂತೋಷವನ್ನು ತರುತ್ತದೆ. ನಿಜವಾಗಿಯೂ ಆತನು ಕೊಡುವ ಮನೋಭಾವವನ್ನು ಪ್ರೀತಿಸುತ್ತಾನೆ.

[ಪುಟ 28, 29ರಲ್ಲಿರುವ ಚೌಕ/ಚಿತ್ರ]

ಕೆಲವರು ಕೊಡಲು ಆಯ್ಕೆಮಾಡುವ ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು

ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ.

ಪ್ರತಿ ತಿಂಗಳು ಸಭೆಗಳು ಈ ಹಣವನ್ನು, ತಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ ಬ್ರಾಂಚ್‌ ಆಫೀಸುಗಳಿಗೆ ಕಳುಹಿಸಬಹುದು. ಈ ಬ್ರಾಂಚ್‌ ಆಫೀಸುಗಳ ವಿಳಾಸಗಳು ಈ ಪತ್ರಿಕೆಯ 2ನೇ ಪುಟದಲ್ಲಿ ಕೊಡಲ್ಪಟ್ಟಿವೆ. ಚೆಕ್‌ಗಳನ್ನು “ವಾಚ್‌ಟವರ್‌”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇಂತಹ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಷರತ್ತುಬದ್ಧ ದಾನದ ಏರ್ಪಾಡು

ಕೆಲವು ದೇಶಗಳಲ್ಲಿ ಒಂದು ವಿಶೇಷ ಏರ್ಪಾಡಿನ ಕೆಳಗೆ ಹಣವನ್ನು ದಾನವಾಗಿ ಕೊಡಲಾಗುತ್ತದೆ, ಅಂದರೆ ದಾನಿಯು ಯಾವಾಗ ಅದನ್ನು ಹಿಂದಕ್ಕೆ ಕೇಳುತ್ತಾನೋ ಆಗ ಅವನಿಗೆ ಆ ದಾನವನ್ನು ಹಿಂದಿರುಗಿಸಬೇಕು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಸ್ಥಳಿಕ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ಚ್ಯಾರಿಟಬಲ್‌ ಯೋಜನೆ

ನೇರವಾದ ಹಣದ ಕೊಡುಗೆಗಳು ಮತ್ತು ಷರತ್ತುಗಳೊಂದಿಗಿನ ಹಣದ ದಾನಗಳಿಗೆ ಕೂಡಿಸಿ, ನೀವು ವಾಸಿಸುತ್ತಿರುವ ದೇಶದ ಮೇಲೆ ಹೊಂದಿಕೊಂಡು ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯಮಾಡಬಹುದಾದ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:

ವಿಮೆ: ದ ವಾಚ್‌ಟವರ್‌ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ ವೇತನ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ದ ವಾಚ್‌ಟವರ್‌ ಸೊಸೈಟಿ ಅನ್ನು ನ್ಯಾಸಾನುಭೋಗಿಯಾಗಿ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಆ ಸೊಸೈಟಿಗೆ ಅವು ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ದ ವಾಚ್‌ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ದ ವಾಚ್‌ಟವರ್‌ ಸೊಸೈಟಿಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಉಯಿಲಿನ ಮೂಲಕ, ದ ವಾಚ್‌ಟವರ್‌ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ದ ವಾಚ್‌ಟವರ್‌ ಸೊಸೈಟಿ ಅನ್ನು ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್‌, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದು.

“ಚ್ಯಾರಿಟಬಲ್‌ ಯೋಜನೆ” ಎಂಬ ಪದವು ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಕೆಲವೊಂದು ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್‌ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವುನೀಡಲು, ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ ಎಂಬ ಬ್ರೋಷರ್‌ ಅನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ತಯಾರಿಸಲಾಗಿದೆ. ಕೊಡುಗೆಗಳು, ಉಯಿಲುಗಳು, ಮತ್ತು ಟ್ರಸ್ಟ್‌ಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೇಳುತ್ತಾ ಅನೇಕ ಪತ್ರಗಳು ಬಂದಿರುವ ಕಾರಣ, ಅದಕ್ಕೆ ಉತ್ತರವಾಗಿ ಈ ಬ್ರೋಷರ್‌ ಅನ್ನು ತಯಾರಿಸಲಾಗಿದೆ. ಇದರಲ್ಲಿ ಸ್ಥಿರಾಸ್ತಿ, ಆರ್ಥಿಕ, ಮತ್ತು ತೆರಿಗೆ ಯೋಜನೆ ಕುರಿತಾಗಿ ಉಪಯುಕ್ತಕರವಾದ ಹೆಚ್ಚಿನ ಮಾಹಿತಿಯೂ ಅಡಕವಾಗಿದೆ. ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಇದು ಮಾಹಿತಿಯನ್ನು ನೀಡುತ್ತದೆ. ಬ್ರೋಷರನ್ನು ಓದಿದ ಮತ್ತು ತಮ್ಮ ಸ್ವಂತ ವಕೀಲರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳಿಗೆ ಸಹಾಯವನ್ನು ನೀಡಲು ಶಕ್ತರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಪತ್ರಗಳ ಅಥವಾ ಫೋನಿನ ಮೂಲಕ ಕೆಳಗೆ ನೀಡಲ್ಪಟ್ಟಿರುವ ವಿಳಾಸವನ್ನು ಅಥವಾ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.

Jehovah’s Witnesses of India,

Post Box 6440,

Yelahanka,

Bangalore 560 064,

Karnataka.

Telephone: (080) 8468072

[ಪುಟ 26ರಲ್ಲಿರುವ ಚಿತ್ರ]

ಉದಾರಿಗಳಾಗಿರುವಂತೆ ಆರಂಭದ ಕ್ರೈಸ್ತರಿಗೆ ಯಾವುದು ಪ್ರಚೋದಿಸಿತು?