ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಗಸ್ತ ಕ್ರೈಸ್ತ ಸ್ತ್ರೀಯರು—ದೇವರ ಅಮೂಲ್ಯ ಆರಾಧಕರು

ನಂಬಿಗಸ್ತ ಕ್ರೈಸ್ತ ಸ್ತ್ರೀಯರು—ದೇವರ ಅಮೂಲ್ಯ ಆರಾಧಕರು

ನಂಬಿಗಸ್ತ ಕ್ರೈಸ್ತ ಸ್ತ್ರೀಯರು​—ದೇವರ ಅಮೂಲ್ಯ ಆರಾಧಕರು

“ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.”​—ಜ್ಞಾನೋಕ್ತಿ 31:30.

1. ಸೌಂದರ್ಯದ ಕುರಿತಾದ ಲೋಕದ ದೃಷ್ಟಿಕೋನಕ್ಕೆ ಹೋಲಿಸುವಾಗ ಯೆಹೋವನ ದೃಷ್ಟಿಕೋನವು ಹೇಗಿದೆ?

ಲೋಕವು ಹೊರಗಿನ ತೋರಿಕೆಗೆ ಅದರಲ್ಲೂ ವಿಶೇಷವಾಗಿ ಸ್ತ್ರೀಯರ ಬಾಹ್ಯ ಸೌಂದರ್ಯಕ್ಕೆ ತುಂಬ ಪ್ರಾಮುಖ್ಯತೆ ನೀಡುತ್ತದೆ. ಯೆಹೋವನಾದರೋ, ವಯಸ್ಸಾಗುತ್ತಾ ಹೋದಂತೆ ಇನ್ನಷ್ಟು ಸುಂದರವಾಗುತ್ತಾ ಹೋಗುವಂಥ ಆಂತರಿಕ ವ್ಯಕ್ತಿಯಲ್ಲಿ ಪ್ರಧಾನವಾಗಿ ಆಸಕ್ತನಾಗಿದ್ದಾನೆ. (ಜ್ಞಾನೋಕ್ತಿ 16:31) ಆದುದರಿಂದ, ಬೈಬಲು ಸ್ತ್ರೀಯರಿಗೆ ಹೀಗೆ ಬುದ್ಧಿಹೇಳುತ್ತದೆ: “ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.”​—1 ಪೇತ್ರ 3:3, 4.

2, 3. ಪ್ರಥಮ ಶತಮಾನದಲ್ಲಿ ಸ್ತ್ರೀಯರು ಸುವಾರ್ತೆಯ ವ್ಯಾಪಕ ಹಬ್ಬುವಿಕೆಗೆ ಹೇಗೆ ನೆರವು ನೀಡಿದರು, ಮತ್ತು ಇದು ಹೇಗೆ ಮುಂತಿಳಿಸಲ್ಪಟ್ಟಿತ್ತು?

2 ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಅನೇಕ ಸ್ತ್ರೀಯರಿಂದ ಅಂಥ ಪ್ರಶಂಸಾರ್ಹ ಮನೋಭಾವವು ತೋರಿಸಲ್ಪಟ್ಟಿತು. ಪ್ರಥಮ ಶತಮಾನದಲ್ಲಿ, ಇವರಲ್ಲಿ ಕೆಲವರಿಗೆ ಯೇಸುವಿನ ಹಾಗೂ ಅವನ ಅಪೊಸ್ತಲರ ಸೇವೆಮಾಡುವ ಸುಯೋಗವಿತ್ತು. (ಲೂಕ 8:​1-3) ಸಮಯಾನಂತರ, ಕ್ರೈಸ್ತ ಸ್ತ್ರೀಯರು ಹುರುಪಿನ ಸೌವಾರ್ತಿಕರಾದರು; ಇನ್ನಿತರರು, ಅಪೊಸ್ತಲ ಪೌಲನಿಗೂ ಮುಂದಾಳತ್ವವನ್ನು ವಹಿಸುತ್ತಿದ್ದ ಅನೇಕ ಕ್ರೈಸ್ತ ಪುರುಷರಿಗೂ ಅಮೂಲ್ಯವಾದ ಬೆಂಬಲವನ್ನು ಕೊಟ್ಟರು; ಮತ್ತು ಕೆಲವರು, ಸಭಾ ಕೂಟಗಳಿಗಾಗಿ ತಮ್ಮ ಮನೆಯನ್ನೂ ಲಭ್ಯಗೊಳಿಸುವ ಮೂಲಕ ಅಸಾಮಾನ್ಯ ರೀತಿಯ ಅತಿಥಿಸತ್ಕಾರವನ್ನು ತೋರಿಸಿದರು.

3 ತನ್ನ ಉದ್ದೇಶವನ್ನು ಪೂರೈಸುವುದರಲ್ಲಿ ಯೆಹೋವನು ಸ್ತ್ರೀಯರನ್ನು ಮಹತ್ತರವಾದ ರೀತಿಯಲ್ಲಿ ಉಪಯೋಗಿಸುವನು ಎಂಬ ವಾಸ್ತವಾಂಶವನ್ನು ಶಾಸ್ತ್ರವಚನಗಳಲ್ಲಿ ಮುಂತಿಳಿಸಲಾಗಿತ್ತು. ಉದಾಹರಣೆಗೆ, ಯೋವೇಲ 2:​28, 29ನೆಯ ವಚನಗಳು, ಗಂಡಸರು ಮತ್ತು ಹೆಂಗಸರು, ಯೌವನಸ್ಥರು ಮತ್ತು ವೃದ್ಧರು ಪವಿತ್ರಾತ್ಮವನ್ನು ಪಡೆದುಕೊಳ್ಳುವರು ಮತ್ತು ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಪಾಲ್ಗೊಳ್ಳುವರು ಎಂಬುದನ್ನು ಮುಂತಿಳಿಸಿದವು. ಈ ಪ್ರವಾದನೆಯು ಸಾ.ಶ. 33ರ ಪಂಚಾಶತ್ತಮದಂದು ನೆರವೇರಲು ಆರಂಭವಾಯಿತು. (ಅ. ಕೃತ್ಯಗಳು 2:​1-4, 16-18) ಕೆಲವು ಆತ್ಮಾಭಿಷಿಕ್ತ ಸ್ತ್ರೀಯರಿಗೆ ಪ್ರವಾದಿಸುವ ವರದಾನದಂಥ ಅದ್ಭುತಕರ ವರದಾನಗಳು ಅನುಗ್ರಹಿಸಲ್ಪಟ್ಟವು. (ಅ. ಕೃತ್ಯಗಳು 21:​8, 9) ನಂಬಿಗಸ್ತ ಸಹೋದರಿಯರ ಈ ದೊಡ್ಡ ಆತ್ಮಿಕ ಸೇನೆಯು, ಶುಶ್ರೂಷೆಯಲ್ಲಿನ ತಮ್ಮ ಹುರುಪಿನ ಮೂಲಕ ಪ್ರಥಮ ಶತಮಾನದಲ್ಲಿ ತ್ವರಿತಗತಿಯಿಂದ ಕ್ರೈಸ್ತಧರ್ಮವನ್ನು ಹಬ್ಬಿಸಲು ನೆರವನ್ನು ನೀಡಿತು. ವಾಸ್ತವದಲ್ಲಿ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿದೆ’ ಎಂದು ಸುಮಾರು ಸಾ.ಶ. 60ರಷ್ಟಕ್ಕೆ ಅಪೊಸ್ತಲ ಪೌಲನು ಬರೆದನು.​—ಕೊಲೊಸ್ಸೆ 1:23.

ಧೈರ್ಯ, ಹುರುಪು ಮತ್ತು ಅತಿಥಿಸತ್ಕಾರಕ್ಕಾಗಿ ಪ್ರಶಂಸಿಸಲ್ಪಟ್ಟವರು

4. ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿನ ಅನೇಕ ಸ್ತ್ರೀಯರನ್ನು ಪ್ರಶಂಸಿಸಲು ಪೌಲನಿಗೆ ಸಕಾರಣವಿತ್ತೇಕೆ?

4 ಒಂದು ಉದಾಹರಣೆಯೋಪಾದಿ, ಕ್ರೈಸ್ತ ಮೇಲ್ವಿಚಾರಕರು ಇಂದು ಹುರುಪಿನಿಂದ ಕಾರ್ಯನಡಿಸುವ ಸ್ತ್ರೀಯರಿಂದ ಮಾಡಲ್ಪಡುವ ಶುಶ್ರೂಷೆಯನ್ನು ಅಮೂಲ್ಯವಾಗಿ ಪರಿಗಣಿಸುವಂತೆಯೇ, ಕೆಲವು ಸ್ತ್ರೀಯರಿಂದ ಮಾಡಲ್ಪಟ್ಟ ಶುಶ್ರೂಷೆಯನ್ನು ಅಪೊಸ್ತಲ ಪೌಲನು ಗಣ್ಯಮಾಡಿದನು. ಪೌಲನು ಹೆಸರಿಸಿದಂಥ ಸ್ತ್ರೀಯರಲ್ಲಿ ‘ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳು ಮತ್ತು ತ್ರುಫೋಸಳು’ ಮತ್ತು ‘ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳು’ ಸೇರಿದ್ದರು. (ರೋಮಾಪುರ 16:12) ಯುವೊದ್ಯ ಮತ್ತು ಸಂತುಕೆಯರು ‘ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು’ ಎಂದು ಪೌಲನು ಬರೆದನು. (ಫಿಲಿಪ್ಪಿ 4:​2, 3) ಪ್ರಿಸ್ಕಳು ಮತ್ತು ಅವಳ ಗಂಡನಾದ ಅಕ್ವಿಲರು ಸಹ ಪೌಲನೊಂದಿಗೆ ಸೇವೆಮಾಡಿದರು. ಪ್ರಿಸ್ಕ ಮತ್ತು ಅಕ್ವಿಲರು ಪೌಲನಿಗೋಸ್ಕರ “ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು.” ಇದು ಅವನು ಹೀಗೆ ಬರೆಯುವಂತೆ ಪ್ರಚೋದಿಸಿತು: “ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.”​—ರೋಮಾಪುರ 16:3, 4; ಅ. ಕೃತ್ಯಗಳು 18:2.

5, 6. ಯಾವ ವಿಧಗಳಲ್ಲಿ ಪ್ರಿಸ್ಕಳು ಇಂದಿನ ಸಹೋದರಿಯರಿಗಾಗಿ ಒಂದು ಅತ್ಯುತ್ತಮ ಮಾದರಿಯನ್ನು ಇಟ್ಟಳು?

5 ಪ್ರಿಸ್ಕಳ ಹುರುಪು ಮತ್ತು ಧೈರ್ಯಕ್ಕೆ ಕಾರಣ ಏನಾಗಿತ್ತು? ಇದರ ಒಂದು ಸುಳಿವನ್ನು ಅಪೊಸ್ತಲರ ಕೃತ್ಯಗಳು 18:​24-26ರಲ್ಲಿ ಕಂಡುಕೊಳ್ಳಸಾಧ್ಯವಿದೆ. ವಾಕ್ಚಾತುರ್ಯವುಳ್ಳ ಭಾಷಣಕಾರನಾಗಿದ್ದ ಅಪೊಲ್ಲೋಸನು ಸದ್ಯೋಚಿತವಾದ ಪ್ರಕಟಿತ ಸತ್ಯತೆಯನ್ನು ತಿಳಿದುಕೊಳ್ಳುವಂತೆ ಸಹಾಯಮಾಡುವುದರಲ್ಲಿ ಅವಳು ತನ್ನ ಗಂಡನಿಗೆ ಬೆಂಬಲ ನೀಡಿದಳು ಎಂಬುದನ್ನು ನಾವು ಅಲ್ಲಿ ಓದುತ್ತೇವೆ. ಆದುದರಿಂದ, ಪ್ರಿಸ್ಕಳು ದೇವರ ವಾಕ್ಯವನ್ನು ಮತ್ತು ಅಪೊಸ್ತಲರ ಬೋಧನೆಗಳನ್ನು ಅಭ್ಯಾಸಮಾಡುತ್ತಿದ್ದ ಒಬ್ಬ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದಳು ಎಂಬುದು ಸುಸ್ಪಷ್ಟ. ಇದರ ಫಲಿತಾಂಶವಾಗಿ ಅವಳು, ತನ್ನನ್ನು ದೇವರಿಗೆ ಮತ್ತು ತನ್ನ ಗಂಡನಿಗೆ ಅಮೂಲ್ಯಳನ್ನಾಗಿಯೂ ಆರಂಭದ ಸಭೆಗೆ ಒಬ್ಬ ಬಹುಮೂಲ್ಯ ಸದಸ್ಯಳನ್ನಾಗಿಯೂ ಮಾಡಿದಂಥ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡಳು. ಇಂದು ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವ ಮತ್ತು ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕ ಯೆಹೋವನು ಒದಗಿಸುವ ಆತ್ಮಿಕ ಆಹಾರವನ್ನೂ ಒಳ್ಳೇ ರೀತಿಯಲ್ಲಿ ಸೇವಿಸುವಂಥ, ಪ್ರಯಾಸಪಟ್ಟು ಕೆಲಸಮಾಡುವ ಅನೇಕ ಕ್ರೈಸ್ತ ಸ್ತ್ರೀಯರು ಸಹ ಅಷ್ಟೇ ಅಮೂಲ್ಯರಾಗಿದ್ದಾರೆ.​—ಲೂಕ 12:42.

6 ಅಕ್ವಿಲ ಮತ್ತು ಪ್ರಿಸ್ಕರು ಅಸಾಧಾರಣವಾದ ರೀತಿಯಲ್ಲಿ ಅತಿಥಿಸತ್ಕಾರಮಾಡುವವರಾಗಿದ್ದರು. ಪೌಲನು ಕೊರಿಂಥದಲ್ಲಿ ಅವರ ಮನೆಯಲ್ಲಿ ಉಳಿದುಕೊಂಡಿದ್ದು, ಅವರ ಗುಡಾರಮಾಡುವ ಕಸಬಿನಲ್ಲಿ ಅವರೊಂದಿಗೆ ಕೆಲಸಮಾಡಿದನು. (ಅ. ಕೃತ್ಯಗಳು 18:​1-3) ಆ ದಂಪತಿಯು ಮೊದಲು ಎಫೆಸಕ್ಕೆ ಮತ್ತು ನಂತರ ರೋಮ್‌ಗೆ ಸ್ಥಳಾಂತರಿಸಿದಾಗ, ತಮ್ಮ ಮನೆಯನ್ನು ಸಭಾ ಕೂಟಗಳಿಗಾಗಿ ಲಭ್ಯಗೊಳಿಸುವ ಮೂಲಕವೂ ಅವರು ಕ್ರೈಸ್ತ ಆತಿಥ್ಯವನ್ನು ತೋರಿಸುವುದನ್ನು ಮುಂದುವರಿಸಿದರು. (ಅ. ಕೃತ್ಯಗಳು 18:18, 19; 1 ಕೊರಿಂಥ 16:8, 19) ತದ್ರೀತಿಯಲ್ಲಿ ನುಂಫಳು ಮತ್ತು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯರು ಸಹ ಸಭಾ ಕೂಟಗಳಿಗಾಗಿ ತಮ್ಮ ಮನೆಯನ್ನು ಲಭ್ಯಗೊಳಿಸಿದರು.​—ಅ. ಕೃತ್ಯಗಳು 12:12; ಕೊಲೊಸ್ಸೆ 4:15.

ಇಂದು ಒಂದು ಅಮೂಲ್ಯ ಆಸ್ತಿ

7, 8. ಇಂದಿನ ಅನೇಕ ಕ್ರೈಸ್ತ ಸ್ತ್ರೀಯರು ಪವಿತ್ರ ಸೇವೆಯ ಯಾವ ಪ್ರಶಂಸಾರ್ಹ ದಾಖಲೆಯನ್ನು ಹೊಂದಿದ್ದಾರೆ, ಮತ್ತು ಅವರು ಯಾವ ಆಶ್ವಾಸನೆಯಿಂದಿರಸಾಧ್ಯವಿದೆ?

7 ಪ್ರಥಮ ಶತಮಾನದಲ್ಲಿದ್ದಂತೆಯೇ ಇಂದು ನಂಬಿಗಸ್ತ ಕ್ರೈಸ್ತ ಸ್ತ್ರೀಯರು ದೇವರ ಉದ್ದೇಶದ ನೆರವೇರಿಕೆಯಲ್ಲಿ, ಅದರಲ್ಲೂ ವಿಶೇಷವಾಗಿ ಸೌವಾರ್ತಿಕ ಕೆಲಸದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಮತ್ತು ಈ ಸಹೋದರಿಯರು ಎಷ್ಟು ಅತ್ಯುತ್ತಮವಾದ ದಾಖಲೆಯನ್ನು ಹೊಂದಿದ್ದಾರೆ! ಗ್ವೆನ್‌ರ ಉದಾಹರಣೆಯನ್ನು ಪರಿಗಣಿಸಿರಿ. ಇವರು 2002ನೆಯ ಇಸವಿಯಲ್ಲಿ ಮರಣಹೊಂದುವ ತನಕ, 50ಕ್ಕಿಂತ ಹೆಚ್ಚು ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದರು. ಅವರ ಪತಿಯು ಹೇಳುವುದು: “ಒಬ್ಬ ಸೌವಾರ್ತಿಕಳೋಪಾದಿ ಗ್ವೆನ್‌ಳ ಹುರುಪು ಹೆಚ್ಚುಕಡಿಮೆ ನಮ್ಮ ಇಡೀ ನಗರದಲ್ಲೇ ಸುಪ್ರಸಿದ್ಧವಾಗಿತ್ತು. ಅವಳ ಅಭಿಪ್ರಾಯದಲ್ಲಿ, ಪ್ರತಿಯೊಬ್ಬ ಮಾನವನೂ ಯೆಹೋವನ ಪ್ರೀತಿಯನ್ನು ಮತ್ತು ವಾಗ್ದಾನಗಳನ್ನು ಪಡೆದುಕೊಳ್ಳಲು ಅರ್ಹನಾಗುವ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದನು. ನಾವು ನಿರುತ್ಸಾಹಗೊಂಡಿರುವಾಗ ನಮಗೆ ಅವಳು ನೀಡುತ್ತಿದ್ದ ಪ್ರೀತಿಭರಿತ ಉತ್ತೇಜನದ ಜೊತೆಗೆ, ದೇವರಿಗೆ, ಆತನ ಸಂಸ್ಥೆಗೆ ಮತ್ತು ನಮ್ಮ ಕುಟುಂಬಕ್ಕೆ ಅವಳು ತೋರಿಸಿರುವ ನಿಷ್ಠೆಯು, ನಾವು ಒಟ್ಟಿಗೆ ಕಳೆದಿರುವ ತುಂಬ ಒಳ್ಳೆಯ ಹಾಗೂ ಪ್ರತಿಫಲದಾಯಕ ಜೀವನದಾದ್ಯಂತ, ನನಗೆ ಮತ್ತು ನಮ್ಮ ಮಕ್ಕಳಿಗೆ ಮಹತ್ತರವಾದ ಬೆಂಬಲವಾಗಿ ಪರಿಣಮಿಸಿದೆ. ಅವಳು ಇಲ್ಲ ಎಂಬ ಅನಿಸಿಕೆ ನಮ್ಮನ್ನು ಬಹಳವಾಗಿ ಕಾಡುತ್ತದೆ.” ಗ್ವೆನ್‌ ಮತ್ತು ಅವಳ ಪತಿ ವಿವಾಹವಾಗಿ 61 ವರ್ಷಗಳನ್ನು ಜೊತೆಯಾಗಿ ಕಳೆದಿದ್ದರು.

8 ಅವಿವಾಹಿತರಾಗಿರುವ ಮತ್ತು ವಿವಾಹಿತರಾಗಿರುವ ಹತ್ತಾರು ಸಾವಿರ ಕ್ರೈಸ್ತ ಸ್ತ್ರೀಯರು, ಗದ್ದಲಭರಿತ ನಗರಗಳಿಂದ ಹಿಡಿದು ಬಹು ದೂರದಲ್ಲಿರುವ ಪ್ರಾಂತಗಳನ್ನು ಆವರಿಸಿರುವ ಟೆರಿಟೊರಿಗಳಲ್ಲಿ ರಾಜ್ಯದ ಸಂದೇಶವನ್ನು ಹಂಚುತ್ತಿರುವಾಗ, ಜೀವನದ ಮೂಲಭೂತ ಆವಶ್ಯಕತೆಗಳಲ್ಲೇ ತೃಪ್ತರಾಗಿರುವ ಮೂಲಕ ಪಯನೀಯರ್‌ ಶುಶ್ರೂಷಕರಾಗಿ ಮತ್ತು ಮಿಷನೆರಿಗಳಾಗಿ ಸೇವೆಮಾಡುತ್ತಾರೆ. (ಅ. ಕೃತ್ಯಗಳು 1:8) ಹೆಚ್ಚು ಪೂರ್ಣವಾದ ರೀತಿಯಲ್ಲಿ ಯೆಹೋವನ ಸೇವೆಮಾಡಲಿಕ್ಕಾಗಿ ಅನೇಕರು ಒಂದು ಸ್ವಂತ ಮನೆಯನ್ನೋ ಅಥವಾ ಮಕ್ಕಳನ್ನೊ ಪಡೆಯುವ ಬಯಕೆಯನ್ನು ಬದಿಗೊತ್ತಿದ್ದಾರೆ. ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡುತ್ತಿರುವ ಗಂಡಂದಿರಿಗೆ ನಿಷ್ಠಾಭರಿತ ಬೆಂಬಲವನ್ನು ನೀಡುವಂಥ ಹೆಂಡತಿಯರಿದ್ದಾರೆ; ಅದೇ ಸಮಯದಲ್ಲಿ ಲೋಕವ್ಯಾಪಕವಾಗಿರುವ ಬೆತೆಲ್‌ ಗೃಹಗಳಲ್ಲಿ ಸೇವೆಮಾಡುತ್ತಿರುವ ಸಾವಿರಾರು ಮಂದಿ ಸಹೋದರಿಯರಿದ್ದಾರೆ. ಯೆಹೋವನ ಆಲಯವನ್ನು ವೈಭವದಿಂದ ತುಂಬಿಸುವ ‘ಸಮಸ್ತಜನಾಂಗಗಳ ಇಷ್ಟವಸ್ತುಗಳಲ್ಲಿ,’ ಸ್ವತ್ಯಾಗ ಮನೋಭಾವವುಳ್ಳ ಈ ಸ್ತ್ರೀಯರೂ ಸೇರಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.​—ಹಗ್ಗಾಯ 2:7.

9, 10. ಕ್ರೈಸ್ತ ಪತ್ನಿಯರು ಹಾಗೂ ತಾಯಂದಿರಿಂದ ಇಡಲ್ಪಟ್ಟ ಅತ್ಯುತ್ತಮ ಮಾದರಿಗಾಗಿ ಕುಟುಂಬದ ಕೆಲವು ಮಂದಿ ಸದಸ್ಯರು ಹೇಗೆ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ?

9 ಅನೇಕ ಕ್ರೈಸ್ತ ಸ್ತ್ರೀಯರಿಗೆ ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಿಕ್ಕಿದೆ ಎಂಬುದಂತೂ ನಿಶ್ಚಯ; ಆದರೂ ಅವರು ರಾಜ್ಯಾಭಿರುಚಿಗಳಿಗೆ ಮೊದಲ ಸ್ಥಾನ ಕೊಡುತ್ತಾರೆ. (ಮತ್ತಾಯ 6:33) ಒಬ್ಬ ಅವಿವಾಹಿತ ಪಯನೀಯರ್‌ ಸಹೋದರಿಯು ಬರೆದುದು: “ನನ್ನ ತಾಯಿಯ ಅಚಲ ನಂಬಿಕೆ ಹಾಗೂ ಅತ್ಯುತ್ತಮ ಮಾದರಿಯು, ನಾನು ಒಬ್ಬ ರೆಗ್ಯುಲರ್‌ ಪಯನೀಯರ್‌ ಆಗುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ವಾಸ್ತವದಲ್ಲಿ, ನನ್ನ ಅತ್ಯುತ್ತಮ ಪಯನೀಯರ್‌ ಸಂಗಾತಿಗಳಲ್ಲಿ ಅವರು ಒಬ್ಬರಾಗಿದ್ದರು.” ಪ್ರಾಯಕ್ಕೆ ಬಂದಿರುವ ಐದು ಮಂದಿ ಹುಡುಗಿಯರ ತಾಯಿಯಾಗಿರುವ ತನ್ನ ಪತ್ನಿಯ ಕುರಿತಾಗಿ ಒಬ್ಬ ಪತಿಯು ಹೇಳುವುದು: “ನಮ್ಮ ಮನೆಯು ಯಾವಾಗಲೂ ಸ್ವಚ್ಛವಾಗಿರುತ್ತಿತ್ತು ಹಾಗೂ ಚೊಕ್ಕಟವಾಗಿರುತ್ತಿತ್ತು. ನನ್ನ ಪತ್ನಿಯಾದ ಬಾನೀ ಅದನ್ನು ಸರಳವಾಗಿಯೂ ನೀಟಾಗಿಯೂ ಇಟ್ಟಿದ್ದಳು. ಇದರಿಂದಾಗಿ ನಮ್ಮ ಕುಟುಂಬವು ಆತ್ಮಿಕ ಬೆನ್ನಟ್ಟುವಿಕೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿತ್ತು. ನಮ್ಮ ಆದಾಯವನ್ನು ಜಾಗರೂಕತೆಯಿಂದ ಖರ್ಚುಮಾಡುವುದರಲ್ಲಿ ಅವಳು ನೆರವು ನೀಡಿದ್ದರಿಂದ, ನಾನು 32 ವರ್ಷಗಳ ವರೆಗೆ ಆಂಶಕಾಲಿಕ ಕೆಲಸವನ್ನು ಮಾಡುತ್ತಾ, ಅದೇ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಹಾಗೂ ಆತ್ಮಿಕ ವಿಷಯಗಳಿಗೆ ಹೆಚ್ಚು ಸಮಯವನ್ನು ವಿನಿಯೋಗಿಸುತ್ತಾ ಮುಂದುವರಿಯಲು ಸಾಧ್ಯವಾಯಿತು. ನನ್ನ ಪತ್ನಿಯು ಮಕ್ಕಳಿಗೆ ಕಷ್ಟಪಟ್ಟು ಕೆಲಸಮಾಡುವುದರ ಮೌಲ್ಯವನ್ನು ಸಹ ಕಲಿಸಿದಳು. ಅವಳ ಬಗ್ಗೆ ನನಗೆ ಹೊಗಳಿಕೆಯ ಮಾತು ಬಿಟ್ಟರೆ ಬೇರೇನೂ ಹೇಳಲಾಗದು.” ಈಗ ಈ ಪತಿಪತ್ನಿಯರು ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡುತ್ತಿದ್ದಾರೆ.

10 ಪ್ರಾಯಕ್ಕೆ ಬಂದಿರುವ ಮಕ್ಕಳ ತಾಯಿಯಾಗಿರುವ ತನ್ನ ಪತ್ನಿಯ ಕುರಿತಾಗಿ ಒಬ್ಬ ಪತಿಯು ಹೀಗೆ ಬರೆಯುತ್ತಾನೆ: “ಸೂಸನ್‌ಳಲ್ಲಿ ನಾನು ತುಂಬ ಇಷ್ಟಪಡುವಂಥ ಗುಣಗಳು ಯಾವುವೆಂದರೆ, ಅವಳು ದೇವರನ್ನು ಮತ್ತು ಜನರನ್ನು ಗಾಢವಾಗಿ ಪ್ರೀತಿಸುತ್ತಾಳೆ, ಅಷ್ಟುಮಾತ್ರವಲ್ಲ ಅವಳು ಇತರರನ್ನು ಅರ್ಥಮಾಡಿಕೊಳ್ಳುವ ರೀತಿ, ಅವಳ ಸಹಾನುಭೂತಿ ಮತ್ತು ಪ್ರಾಮಾಣಿಕತೆಯು ನನಗೆ ತುಂಬ ಇಷ್ಟ. ನಮ್ಮಿಂದ ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳಲು ಯೆಹೋವನು ಅರ್ಹನಾಗಿದ್ದಾನೆ ಎಂಬುದು ಸದಾ ಅವಳ ಅಭಿಪ್ರಾಯವಾಗಿದ್ದಿರುತ್ತದೆ. ದೇವರ ಒಬ್ಬ ಸೇವಕಳೋಪಾದಿ ಮತ್ತು ಒಬ್ಬ ತಾಯಿಯೋಪಾದಿ ಅವಳು ಈ ಮೂಲತತ್ತ್ವವನ್ನು ತನಗೆ ಅನ್ವಯಿಸಿಕೊಳ್ಳುತ್ತಾಳೆ.” ತನ್ನ ಪತ್ನಿಯ ಬೆಂಬಲದಿಂದ ಈ ಪತಿಯು, ಒಬ್ಬ ಹಿರಿಯನು, ಪಯನೀಯರನು, ಬದಲಿ ಸರ್ಕಿಟ್‌ ಮೇಲ್ವಿಚಾರಕ ಮತ್ತು ಹಾಸ್ಪಿಟಲ್‌ ಲಿಯೆಸಾನ್‌ ಕಮಿಟಿಯ ಸದಸ್ಯನಾಗಿ ಸೇವೆಮಾಡುವುದನ್ನೂ ಸೇರಿಸಿ ಅನೇಕ ಆತ್ಮಿಕ ಸುಯೋಗಗಳನ್ನು ಸ್ವೀಕರಿಸಲು ಶಕ್ತನಾಗಿದ್ದಾನೆ. ಇಂಥ ಸ್ತ್ರೀಯರು ತಮ್ಮ ಗಂಡಂದಿರಿಗೆ, ಜೊತೆ ಕ್ರೈಸ್ತರಿಗೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನಿಗೆ ಎಷ್ಟು ಅಮೂಲ್ಯರಾಗಿದ್ದಾರೆ!​—ಜ್ಞಾನೋಕ್ತಿ 31:​28, 30.

ಪತಿಯು ಇಲ್ಲದಿರುವಂಥ ಅಮೂಲ್ಯ ಸ್ತ್ರೀಯರು

11. (ಎ) ನಂಬಿಗಸ್ತ ಸ್ತ್ರೀಯರಿಗೆ, ಅದರಲ್ಲೂ ವಿಶೇಷವಾಗಿ ವಿಧವೆಯರಿಗಾಗಿರುವ ತನ್ನ ಕಾಳಜಿಯನ್ನು ಯೆಹೋವನು ಹೇಗೆ ಪ್ರಕಟಪಡಿಸಿದ್ದಾನೆ? (ಬಿ) ಒಬ್ಬ ಪತಿಯನ್ನು ಹೊಂದಿರದಂಥ ಕ್ರೈಸ್ತ ವಿಧವೆಯರು ಮತ್ತು ಇತರ ನಂಬಿಗಸ್ತ ಸಹೋದರಿಯರು ಯಾವ ಆಶ್ವಾಸನೆಯಿಂದಿರಬಹುದು?

11 ಯೆಹೋವನು ಅನೇಕವೇಳೆ ವಿಧವೆಯರಿಗಾಗಿರುವ ತನ್ನ ಕಾಳಜಿಯನ್ನು ವ್ಯಕ್ತಪಡಿಸಿದನು. (ಧರ್ಮೋಪದೇಶಕಾಂಡ 27:19; ಕೀರ್ತನೆ 68:5; ಯೆಶಾಯ 10:1, 2) ಈಗಲೂ ಆತನು ಬದಲಾಗಿಲ್ಲ. ಆತನು ವಿಧವೆಯರಲ್ಲಿ ಮಾತ್ರವಲ್ಲ, ಒಂಟಿಯಾಗಿರುವ ತಾಯಂದಿರಲ್ಲಿ ಹಾಗೂ ಆಯ್ಕೆಯಿಂದಾಗಿಯೊ ಅಥವಾ ಒಬ್ಬ ಯೋಗ್ಯವಾದ ಕ್ರೈಸ್ತ ಪತಿಯನ್ನು ಕಂಡುಕೊಂಡಿಲ್ಲದಿರುವಂಥ ಕಾರಣದಿಂದಾಗಿಯೊ ಅವಿವಾಹಿತರಾಗಿಯೇ ಉಳಿದಿರುವ ಸ್ತ್ರೀಯರಲ್ಲಿ ಈಗಲೂ ಬಹಳವಾಗಿ ಆಸಕ್ತನಾಗಿದ್ದಾನೆ. (ಮಲಾಕಿಯ 3:6; ಯಾಕೋಬ 1:27) ಒಬ್ಬ ಕ್ರೈಸ್ತ ಸಂಗಾತಿಯ ಬೆಂಬಲವಿಲ್ಲದೆ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವವರಲ್ಲಿ ನೀವು ಒಬ್ಬರಾಗಿರುವಲ್ಲಿ, ನೀವು ದೇವರ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದೀರಿ ಎಂಬ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿದೆ.

12. (ಎ) ಕೆಲವು ಕ್ರೈಸ್ತ ಸಹೋದರಿಯರು ಯೆಹೋವನಿಗೆ ತಮ್ಮ ನಿಷ್ಠೆಯನ್ನು ಯಾವ ರೀತಿಯಲ್ಲಿ ತೋರಿಸುತ್ತಾರೆ? (ಬಿ) ನಮ್ಮ ಸಹೋದರಿಯರಲ್ಲಿ ಕೆಲವರು ಯಾವ ಭಾವನೆಗಳೊಂದಿಗೆ ಹೋರಾಡುತ್ತಿದ್ದಾರೆ?

12 ಒಂದು ಉದಾಹರಣೆಯೋಪಾದಿ, “ಕರ್ತನಲ್ಲಿ ಮಾತ್ರವೇ” ವಿವಾಹವಾಗುವಂತೆ ಯೆಹೋವನು ಕೊಟ್ಟ ಸಲಹೆಗೆ ನಿಷ್ಠೆಯಿಂದ ವಿಧೇಯರಾಗುವ ಕಾರಣ ಇಷ್ಟರ ತನಕ ವಿವಾಹವಾಗಿರದ ನಮ್ಮ ಕ್ರೈಸ್ತ ಸಹೋದರಿಯರನ್ನು ಪರಿಗಣಿಸಿರಿ. (1 ಕೊರಿಂಥ 7:​39, NW; ಜ್ಞಾನೋಕ್ತಿ 3:1) ದೇವರ ವಾಕ್ಯವು ಅವರಿಗೆ ಹೀಗೆ ಆಶ್ವಾಸನೆ ನೀಡುತ್ತದೆ: “ಯಾರು ನಿಷ್ಠಾವಂತರಾಗಿರುತ್ತಾರೋ ಅವರೊಂದಿಗೆ [ಯೆಹೋವನು] ನಿಷ್ಠೆಯಿಂದಲೇ ವರ್ತಿಸುತ್ತಾನೆ.” (2 ಸಮುವೇಲ 22:​26, NW) ಆದರೂ, ಅವರಲ್ಲಿ ಅನೇಕರಿಗೆ ಅವಿವಾಹಿತರಾಗಿ ಉಳಿಯುವುದು ಒಂದು ಪಂಥಾಹ್ವಾನವಾಗಿದೆ. ಒಬ್ಬ ಸಹೋದರಿಯು ಹೇಳುವುದು: “ನಾನು ಕರ್ತನಲ್ಲಿ ಮಾತ್ರವೇ ಮದುವೆಯಾಗಲು ದೃಢನಿರ್ಧಾರವನ್ನು ಮಾಡಿದೆ, ಆದರೆ ನನ್ನ ಗೆಳತಿಯರು ತುಂಬ ಒಳ್ಳೇ ಕ್ರೈಸ್ತ ಪುರುಷರನ್ನು ಮದುವೆಯಾಗುತ್ತಿರುವಾಗ ನಾನು ಇನ್ನೂ ಒಂಟಿಯಾಗಿಯೇ ಇರುವುದನ್ನು ನೋಡಿ ಅನೇಕ ಸಲ ತುಂಬ ಅತ್ತಿದ್ದೇನೆ.” ಇನ್ನೊಬ್ಬ ಸಹೋದರಿಯು ತಿಳಿಸುವುದು: “ನಾನು 25 ವರ್ಷಗಳಿಂದ ಯೆಹೋವನ ಸೇವೆಮಾಡುತ್ತಿದ್ದೇನೆ. ನಾನು ಆತನಿಗೆ ನಿಷ್ಠಳಾಗಿ ಉಳಿಯುವ ನಿರ್ಧಾರವನ್ನು ಮಾಡಿದ್ದೇನಾದರೂ, ಅನೇಕವೇಳೆ ಒಂಟಿತನದ ಭಾವನೆಗಳು ನನಗೆ ತುಂಬ ದುಃಖವನ್ನು ಉಂಟುಮಾಡುತ್ತವೆ.” ಅವಳು ಕೂಡಿಸಿ ಹೇಳಿದ್ದು: “ನನ್ನಂಥ ಸಹೋದರಿಯರು ಪ್ರೋತ್ಸಾಹಕ್ಕಾಗಿ ಹಂಬಲಿಸುತ್ತಾರೆ.” ಇಂಥ ನಿಷ್ಠಾವಂತರಿಗೆ ನಾವು ಹೇಗೆ ಸಹಾಯಮಾಡಬಹುದು?

13. (ಎ) ಯೆಫ್ತಾಹನ ಮಗಳನ್ನು ಯಾರು ಭೇಟಿಯಾದರೋ ಅವರಿಂದ ಇಡಲ್ಪಟ್ಟ ಮಾದರಿಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ? (ಬಿ) ನಮ್ಮ ಸಭೆಯಲ್ಲಿರುವ ಅವಿವಾಹಿತ ಸಹೋದರಿಯರಿಗಾಗಿ ಇನ್ನೂ ಯಾವ ವಿಧಗಳಲ್ಲಿ ನಾವು ಕಾಳಜಿಯನ್ನು ತೋರಿಸಸಾಧ್ಯವಿದೆ?

13 ಒಂದು ವಿಧವನ್ನು, ಪುರಾತನ ಉದಾಹರಣೆಯೊಂದರಲ್ಲಿ ನೋಡಬಹುದು. ಯೆಫ್ತಾಹನ ಮಗಳು ಒಬ್ಬ ಗಂಡನನ್ನು ಪಡೆಯುವ ಅವಕಾಶವನ್ನು ಬಿಟ್ಟುಕೊಟ್ಟಾಗ, ಅವಳು ಒಂದು ದೊಡ್ಡ ತ್ಯಾಗವನ್ನು ಮಾಡುತ್ತಿದ್ದಾಳೆ ಎಂಬುದನ್ನು ಜನರು ಗ್ರಹಿಸಿದರು. ಅವಳನ್ನು ಉತ್ತೇಜಿಸಲಿಕ್ಕಾಗಿ ಏನು ಮಾಡಲಾಯಿತು? “ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರುಷದಲ್ಲಿಯೂ ನಾಲ್ಕು ದಿವಸ ಗಿಲ್ಯಾದ್ಯನಾದ ಯೆಫ್ತಾಹನ ಮಗಳನ್ನು ವರ್ಣಿಸುತ್ತಾರೆ [“ಪ್ರಶಂಸಿಸುತ್ತಾರೆ,” NW]. ಇದು ಅವರಲ್ಲಿ ಒಂದು ಪದ್ಧತಿ.” (ನ್ಯಾಯಸ್ಥಾಪಕರು 11:30-40) ತದ್ರೀತಿಯಲ್ಲಿ, ದೇವರ ನಿಯಮಕ್ಕೆ ನಿಷ್ಠೆಯಿಂದ ವಿಧೇಯರಾಗುವಂಥ ಅವಿವಾಹಿತ ಸಹೋದರಿಯರನ್ನು ನಾವು ಹೃತ್ಪೂರ್ವಕವಾಗಿ ಪ್ರಶಂಸಿಸಬೇಕು. * ನಾವು ನಮ್ಮ ಕಾಳಜಿಯನ್ನು ತೋರಿಸಸಾಧ್ಯವಿರುವ ಇನ್ನೊಂದು ವಿಧವು ಯಾವುದು? ನಾವು ನಮ್ಮ ಪ್ರಾರ್ಥನೆಗಳಲ್ಲಿ, ಅಂಥ ಪ್ರೀತಿಯ ನಂಬಿಗಸ್ತ ಸಹೋದರಿಯರು ತಮ್ಮ ಸೇವೆಯಲ್ಲಿ ನಿಷ್ಠೆಯಿಂದ ಮುಂದುವರಿಯಲಿಕ್ಕಾಗಿ ಅವರಿಗೆ ಬೆಂಬಲವನ್ನು ನೀಡುವಂತೆ ಯೆಹೋವನನ್ನು ಬೇಡಿಕೊಳ್ಳಬೇಕು. ಅವರನ್ನು ಯೆಹೋವನು ಮತ್ತು ಇಡೀ ಕ್ರೈಸ್ತ ಸಭೆಯು ಹೃತ್ಪೂರ್ವಕವಾಗಿ ಪ್ರೀತಿಸುತ್ತದೆ ಮತ್ತು ಬಹಳವಾಗಿ ಗಣ್ಯಮಾಡುತ್ತದೆ ಎಂಬ ಪುನರಾಶ್ವಾಸನೆಗೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ.​—ಕೀರ್ತನೆ 37:28.

ಒಂಟಿ ಹೆತ್ತವರು ಹೇಗೆ ಸಫಲರಾಗುತ್ತಾರೆ?

14, 15. (ಎ) ಒಂಟಿ ತಾಯಂದಿರಾಗಿರುವ ಕ್ರೈಸ್ತರು ಸಹಾಯಕ್ಕಾಗಿ ಯೆಹೋವನ ಬಳಿ ಬೇಡಿಕೊಳ್ಳಬೇಕು ಏಕೆ? (ಬಿ) ಒಂಟಿ ಹೆತ್ತವರು ತಮ್ಮ ಪ್ರಾರ್ಥನೆಗಳೊಂದಿಗೆ ಹೊಂದಿಕೆಯಲ್ಲಿ ಹೇಗೆ ಕ್ರಿಯೆಗೈಯಬಹುದು?

14 ಒಂಟಿ ಹೆತ್ತವರಾಗಿರುವ ಕ್ರೈಸ್ತ ಸ್ತ್ರೀಯರು ಸಹ ಅನೇಕ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ಹಾಗಿದ್ದರೂ, ತಮ್ಮ ಮಕ್ಕಳನ್ನು ಬೈಬಲ್‌ ಮೂಲತತ್ತ್ವಗಳೊಂದಿಗೆ ಹೊಂದಿಕೆಯಲ್ಲಿ ಬೆಳೆಸುವುದರಲ್ಲಿ ಸಹಾಯಕ್ಕಾಗಿ ಅವರು ಯೆಹೋವನ ಕಡೆಗೆ ತಿರುಗಸಾಧ್ಯವಿದೆ. ನೀವು ಒಬ್ಬ ಒಂಟಿ ಹೆತ್ತವರಾಗಿರುವಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ನೀವು ಒಬ್ಬ ತಾಯಿಯ ಹಾಗೂ ತಂದೆಯ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂಬುದೇನೋ ನಿಜ. ಆದರೂ, ಒಂದುವೇಳೆ ನೀವು ನಂಬಿಕೆಯಿಂದ ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳುವಲ್ಲಿ, ನಿಮ್ಮ ಅನೇಕ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಆತನು ನಿಮಗೆ ನೆರವು ನೀಡುವನು. ದೃಷ್ಟಾಂತಕ್ಕಾಗಿ: ನಿಮ್ಮ ಕೈಯಲ್ಲಿ ದಿನಸಿ ಸಾಮಾನಿನಿಂದ ತುಂಬಿರುವ ಒಂದು ಭಾರವಾದ ಚೀಲ ಇದೆ ಮತ್ತು ನೀವದನ್ನು ಬಹುಮಹಡಿಯುಳ್ಳ ಒಂದು ಕಟ್ಟಡದಲ್ಲಿರುವ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಊಹಿಸಿಕೊಳ್ಳಿರಿ. ಸಮೀಪದಲ್ಲೇ ಲಿಫ್ಟ್‌ ಇರುವಲ್ಲಿ ನೀವು ಮೆಟ್ಟಿಲುಗಳ ಮೇಲೆ ಹತ್ತಿಹೋಗುವ ಶ್ರಮವನ್ನು ತೆಗೆದುಕೊಳ್ಳುವಿರೋ? ಖಂಡಿತವಾಗಿಯೂ ಇಲ್ಲ, ಅಲ್ಲವೆ? ತದ್ರೀತಿಯಲ್ಲಿ, ನಿಮಗೆ ಸಹಾಯಮಾಡುವಂತೆ ಯೆಹೋವನ ಬಳಿ ನೀವು ಬೇಡಿಕೊಳ್ಳಸಾಧ್ಯವಿರುವಾಗ, ಒಂಟಿಯಾಗಿಯೇ ನೀವು ಭಾರವಾದ ಭಾವನಾತ್ಮಕ ಹೊರೆಯನ್ನು ಹೊರಲು ಪ್ರಯತ್ನಿಸಬೇಡಿ. ವಾಸ್ತವದಲ್ಲಿ ತನ್ನ ಬಳಿ ಮೊರೆಯಿಡುವಂತೆ ಆತನು ನಮಗೆ ಕರೆಕೊಡುತ್ತಾನೆ. ಕೀರ್ತನೆ 68:19 ಹೇಳುವುದು: “ಅನುದಿನವೂ ನಮ್ಮ ಭಾರವನ್ನು ಹೊರುವ ಕರ್ತನಿಗೆ [“ಯೆಹೋವನಿಗೆ,” NW] ಸ್ತೋತ್ರವಾಗಲಿ.” (ಓರೆ ಅಕ್ಷರಗಳು ನಮ್ಮವು.) ತದ್ರೀತಿಯಲ್ಲಿ, 1 ಪೇತ್ರ 5:7ನೆಯ ವಚನವು, ಯೆಹೋವನು ‘ನಿಮಗೋಸ್ಕರ ಚಿಂತಿಸುತ್ತಾನಾದ್ದರಿಂದ’ ನಿಮ್ಮೆಲ್ಲಾ ಚಿಂತಾಭಾರವನ್ನು ಆತನ ಮೇಲೆ ಹಾಕುವಂತೆ ಕರೆಕೊಡುತ್ತದೆ. ಆದುದರಿಂದ, ಸಮಸ್ಯೆಗಳು ಮತ್ತು ಚಿಂತೆಗಳು ನಿಮಗೆ ಹೊರೆದಾಯಕವಾಗಿರುವಾಗ, ನಿಮ್ಮ ಸ್ವರ್ಗೀಯ ತಂದೆಯ ಮೇಲೆ ಆ ಭಾರವನ್ನು ಹೊರಿಸಿಬಿಡಿರಿ, ಮತ್ತು “ಎಡೆಬಿಡದೆ” ಹಾಗೆ ಮಾಡಿರಿ.​—1 ಥೆಸಲೊನೀಕ 5:17; ಕೀರ್ತನೆ 18:6; 55:22.

15 ಉದಾಹರಣೆಗೆ, ನೀವು ಒಬ್ಬ ತಾಯಿಯಾಗಿರುವಲ್ಲಿ, ಶಾಲೆಯಲ್ಲಿ ನಿಮ್ಮ ಮಕ್ಕಳ ಮೇಲೆ ಸಮಾನಸ್ಥರು ಹಾಕಬಹುದಾದ ಒತ್ತಡದ ಕುರಿತು ಅಥವಾ ಅವರು ಎದುರಿಸಬಹುದಾದ ಸಮಗ್ರತೆಯ ಪರೀಕ್ಷೆಗಳ ಕುರಿತು ನೀವು ಚಿಂತಿತರಾಗಿದ್ದೀರಿ ಎಂಬುದರಲ್ಲಿ ಸಂಶಯವೇ ಇಲ್ಲ. (1 ಕೊರಿಂಥ 15:33) ಇವು ಸಮಂಜಸವಾದ ಚಿಂತೆಗಳಾಗಿವೆ. ಆದರೆ ಇವು ಪ್ರಾರ್ಥನೆಗೆ ಅರ್ಹವಾಗಿರುವ ಸಂಗತಿಗಳೂ ಆಗಿವೆ. ವಾಸ್ತವದಲ್ಲಿ, ನಿಮ್ಮ ಮಕ್ಕಳು ಶಾಲೆಗೆ ಹೊರಡುವುದಕ್ಕೆ ಮೊದಲು, ಬಹುಶಃ ಒಟ್ಟಿಗೆ ದೈನಂದಿನ ವಚನವನ್ನು ಪರಿಗಣಿಸಿದ ಬಳಿಕ ಅವರೊಂದಿಗೆ ಅಂಥ ವಿಷಯಗಳ ಕುರಿತು ನೀವು ಪ್ರಾರ್ಥಿಸಬಾರದೇಕೆ? ಹೃದಯದಾಳದಿಂದ ಮಾಡಿದ ನಿರ್ದಿಷ್ಟ ಪ್ರಾರ್ಥನೆಗಳು ಚಿಕ್ಕ ಮಕ್ಕಳ ಮನಸ್ಸುಗಳನ್ನು ಬಲವಾಗಿ ಪ್ರಭಾವಿಸಬಲ್ಲವು. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಮಕ್ಕಳ ಹೃದಯದೊಳಕ್ಕೆ ಯೆಹೋವನ ವಾಕ್ಯವನ್ನು ತುಂಬಿಸಲು ನೀವು ತಾಳ್ಮೆಯಿಂದ ಶ್ರಮಿಸುವಾಗ, ನೀವು ಆತನ ಆಶೀರ್ವಾದವನ್ನು ಪಡೆದುಕೊಳ್ಳುವ ಸ್ಥಾನದಲ್ಲಿರುವಿರಿ. (ಧರ್ಮೋಪದೇಶಕಾಂಡ 6:6, 7; ಜ್ಞಾನೋಕ್ತಿ 22:6) “ಕರ್ತನು [“ಯೆಹೋವನು,” NW] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ” ಎಂಬುದನ್ನು ಮರೆಯದಿರಿ.​—1 ಪೇತ್ರ 3:12; ಫಿಲಿಪ್ಪಿ 4:6, 7.

16, 17. (ಎ) ತನ್ನ ತಾಯಿಯು ತೋರಿಸಿದ ಪ್ರೀತಿಯ ಕುರಿತು ಒಬ್ಬ ಮಗನು ಏನು ಹೇಳಿದನು? (ಬಿ) ಆ ತಾಯಿಯ ಆತ್ಮಿಕ ಹೊರನೋಟವು ಅವಳ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರಿತು?

16 ಆರು ಮಕ್ಕಳ ತಾಯಿಯಾಗಿರುವ ಓಲಿವೀಯಳ ಉದಾಹರಣೆಯನ್ನು ಪರಿಗಣಿಸಿರಿ. ಕೊನೆಯ ಮಗುವು ಹುಟ್ಟಿದ ಸ್ವಲ್ಪ ಸಮಯದ ನಂತರವೇ ಅವಳ ಅವಿಶ್ವಾಸಿ ಗಂಡನು ಕುಟುಂಬವನ್ನು ಬಿಟ್ಟು ಹೊರಟುಹೋದನು. ಆದರೆ ತನ್ನ ಮಕ್ಕಳನ್ನು ದೇವರ ಮಾರ್ಗಗಳಲ್ಲಿ ತರಬೇತುಗೊಳಿಸುವ ಜವಾಬ್ದಾರಿಯನ್ನು ಅವಳು ಮನಃಪೂರ್ವಕವಾಗಿ ಸ್ವೀಕರಿಸಿದಳು. ಈಗ 31ರ ಪ್ರಾಯದವನಾಗಿದ್ದು ಒಬ್ಬ ಕ್ರೈಸ್ತ ಹಿರಿಯನೋಪಾದಿ ಮತ್ತು ಪಯನೀಯರನೋಪಾದಿ ಸೇವೆಸಲ್ಲಿಸುತ್ತಿರುವ ಓಲಿವೀಯಳ ಮಗನಾದ ಡರನ್‌, ಆ ಸಮಯದಲ್ಲಿ ಸುಮಾರು 5 ವರ್ಷದವನಾಗಿದ್ದನಷ್ಟೆ. ಓಲಿವೀಯಳ ಚಿಂತೆಗಳನ್ನು ಇನ್ನಷ್ಟು ಹೆಚ್ಚಿಸಲೋ ಎಂಬಂತೆ ಡರನ್‌ಗೆ ಗುರುತರವಾದ ಅಸ್ವಸ್ಥತೆಯು ಉಂಟಾಯಿತು ಮತ್ತು ಇದು ಈಗಲೂ ಅವನನ್ನು ಬಾಧಿಸುತ್ತಿದೆ. ತನ್ನ ಬಾಲ್ಯದ ಕುರಿತು ಜ್ಞಾಪಿಸಿಕೊಳ್ಳುತ್ತಾ ಡರನ್‌ ಬರೆಯುವುದು: “ನಾನು ಅಮ್ಮನ ಬರುವಿಕೆಗಾಗಿ ಅತ್ಯಂತ ಕಾತುರನಾಗಿ ಕಾಯುತ್ತಾ ಆಸ್ಪತ್ರೆಯ ಬೆಡ್‌ನಲ್ಲಿ ಕುಳಿತುಕೊಂಡಿರುತ್ತಿದ್ದದ್ದು ನನಗೆ ಈಗಲೂ ನೆನಪಿಗೆ ಬರುತ್ತದೆ. ಅವರು ಬಂದು ನನ್ನ ಪಕ್ಕ ಕುಳಿತು, ಪ್ರತಿ ದಿನ ನನಗೋಸ್ಕರ ಬೈಬಲನ್ನು ಓದುತ್ತಿದ್ದರು. ತದನಂತರ ಅವರು ‘ಯೆಹೋವನೇ, ನಿನಗೆ ಕೃತಜ್ಞರು’ ಎಂಬ ರಾಜ್ಯ ಗೀತೆಯನ್ನು ಹಾಡುತ್ತಿದ್ದರು. * ಇವತ್ತು ಸಹ ಇದು ನನ್ನ ಅಚ್ಚುಮೆಚ್ಚಿನ ರಾಜ್ಯ ಗೀತೆಯಾಗಿದೆ.”

17 ಓಲಿವೀಯಳು ಯೆಹೋವನಲ್ಲಿಟ್ಟ ಭರವಸೆ ಹಾಗೂ ಆತನಿಗಾಗಿ ತೋರಿಸಿದ ಪ್ರೀತಿಯು, ಒಂಟಿ ಹೆತ್ತವಳೋಪಾದಿ ಯಶಸ್ಸನ್ನು ಪಡೆಯುವಂತೆ ಅವಳಿಗೆ ಸಹಾಯಮಾಡಿತು. (ಜ್ಞಾನೋಕ್ತಿ 3:​5, 6) ತನ್ನ ಮಕ್ಕಳ ಮುಂದೆ ಅವಳು ಇಟ್ಟ ಗುರಿಗಳಲ್ಲಿ ಅವಳ ಅತ್ಯುತ್ತಮ ಮನೋಭಾವವು ಪ್ರತಿಬಿಂಬಿಸಲ್ಪಟ್ಟಿತು. ಡರನ್‌ ಹೇಳುವುದು: “ನಾವು ಪೂರ್ಣ ಸಮಯದ ಸೇವೆಯ ಗುರಿಯನ್ನು ಬೆನ್ನಟ್ಟುವಂತೆ ಅಮ್ಮ ಯಾವಾಗಲೂ ನಮ್ಮನ್ನು ಉತ್ತೇಜಿಸಿದರು. ಇದರ ಫಲಿತಾಂಶವಾಗಿ, ನನ್ನ ಐದು ಮಂದಿ ಅಕ್ಕತಂಗಿಯರಲ್ಲಿ ನಾಲ್ವರು ಹಾಗೂ ನಾನು ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸಿದೆವು. ಆದರೂ, ಈ ವಿಷಯಗಳ ಕುರಿತು ನನ್ನ ಅಮ್ಮ ಎಂದೂ ಯಾರ ಮುಂದೆಯೂ ಜಂಬಕೊಚ್ಚಿಕೊಳ್ಳಲಿಲ್ಲ. ಅವರ ಅತ್ಯುತ್ತಮ ಗುಣಗಳನ್ನು ಅನುಕರಿಸಲು ನಾನು ಬಹಳಷ್ಟು ಪ್ರಯತ್ನಪಡುತ್ತೇನೆ.” ಎಲ್ಲಾ ಮಕ್ಕಳು ಓಲಿವೀಯಳ ಮಕ್ಕಳಂತೆ ದೇವರನ್ನು ಸೇವಿಸುವವರಾಗಿ ಬೆಳೆಯುವುದಿಲ್ಲ ಎಂಬುದಂತೂ ನಿಜ. ಆದರೆ ಬೈಬಲ್‌ ಮೂಲತತ್ತ್ವಗಳಿಗೆ ಅನುಸಾರವಾಗಿ ಜೀವಿಸಲಿಕ್ಕಾಗಿ ಒಬ್ಬ ತಾಯಿಯು ತನ್ನಿಂದಾದುದೆಲ್ಲವನ್ನೂ ಮಾಡುವಾಗ, ಅವಳು ಯೆಹೋವನ ಮಾರ್ಗದರ್ಶನ ಹಾಗೂ ಆತನ ಪ್ರೀತಿಯ ಬೆಂಬಲದ ವಿಷಯದಲ್ಲಿ ಸಂಪೂರ್ಣವಾಗಿ ಖಾತ್ರಿಯಿಂದಿರಬಹುದು.​—ಕೀರ್ತನೆ 32:8.

18. ಕ್ರೈಸ್ತ ಸಭೆಯ ಯೆಹೋವನ ಒದಗಿಸುವಿಕೆಯನ್ನು ನಾವು ಗಣ್ಯಮಾಡುತ್ತೇವೆ ಎಂಬುದನ್ನು ನಾವು ಹೇಗೆ ತೋರಿಸಸಾಧ್ಯವಿದೆ?

18 ಕ್ರೈಸ್ತ ಸಭೆಯ ಮೂಲಕ, ಅದರ ಕ್ರಮವಾದ ಆತ್ಮಿಕ ಉಣಿಸುವಿಕೆಯ ಕಾರ್ಯಕ್ರಮದ ಮೂಲಕ, ಅದರ ಕ್ರೈಸ್ತ ಸಹೋದರತ್ವದ ಮೂಲಕ ಮತ್ತು ಅದರ ಆತ್ಮಿಕವಾಗಿ ಪ್ರೌಢರಾಗಿರುವ ‘ಮನುಷ್ಯರಲ್ಲಿ ದಾನಗಳ’ ಮೂಲಕ ದೇವರ ಹೆಚ್ಚಿನ ಬೆಂಬಲವು ಒದಗಿಸಲ್ಪಡುತ್ತದೆ. (ಎಫೆಸ 4:8) ನಂಬಿಗಸ್ತ ಹಿರಿಯರು ‘ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರ ಹಾಗೂ ವಿಧವೆಯರ’ ಆವಶ್ಯಕತೆಗಳಿಗೆ ವಿಶೇಷ ಗಮನವನ್ನು ಕೊಟ್ಟು, ಸಭೆಯಲ್ಲಿರುವ ಎಲ್ಲರ ಭಕ್ತಿವೃದ್ಧಿಮಾಡಲು ಶ್ರಮಿಸುತ್ತಾರೆ. (ಯಾಕೋಬ 1:27) ಆದುದರಿಂದ ನೀವು ದೇವಜನರಿಗೆ ನಿಕಟವಾಗಿ ಉಳಿಯಿರಿ, ಎಂದಿಗೂ ನಿಮ್ಮನ್ನು ಅವರಿಂದ ಪ್ರತ್ಯೇಕಿಸಿಕೊಳ್ಳದಿರಿ.​—ಜ್ಞಾನೋಕ್ತಿ 18:1; ರೋಮಾಪುರ 14:7.

ಅಧೀನತೆ ಎಂಬ ಅಪೂರ್ವ ಗುಣ

19. ಪತ್ನಿಯ ಅಧೀನತೆಯು ಕೀಳುತನವನ್ನು ಅರ್ಥೈಸುವುದಿಲ್ಲವೇಕೆ, ಮತ್ತು ಯಾವ ಬೈಬಲ್‌ ಉದಾಹರಣೆಯು ಇದನ್ನು ರುಜುಪಡಿಸುತ್ತದೆ?

19 ಯೆಹೋವನು ಸ್ತ್ರೀಯನ್ನು ಪುರುಷನಿಗೆ ಸಹಕಾರಿಯನ್ನಾಗಿ ಸೃಷ್ಟಿಸಿದನು. (ಆದಿಕಾಂಡ 2:18) ಆದುದರಿಂದ, ತನ್ನ ಗಂಡನಿಗೆ ಒಬ್ಬ ಹೆಂಡತಿಯು ತೋರಿಸುವ ಅಧೀನತೆಯು, ಯಾವುದೇ ರೀತಿಯಲ್ಲೂ ಕೀಳುತನವನ್ನು ಅರ್ಥೈಸುವುದಿಲ್ಲ. ಅದಕ್ಕೆ ಬದಲಾಗಿ, ಅದು ಒಬ್ಬ ಸ್ತ್ರೀಗೆ ಶೋಭೆ ನೀಡುತ್ತದೆ ಮತ್ತು ಅವಳು ತನ್ನ ಅನೇಕ ವರದಾನಗಳನ್ನು ಹಾಗೂ ಕೌಶಲಗಳನ್ನು ದೇವರ ಚಿತ್ತದೊಂದಿಗೆ ಹೊಂದಿಕೆಯಲ್ಲಿ ಉಪಯೋಗಿಸುವಂತೆ ಅವಕಾಶ ನೀಡುತ್ತದೆ. ಜ್ಞಾನೋಕ್ತಿ 31ನೆಯ ಅಧ್ಯಾಯವು, ಪುರಾತನ ಇಸ್ರಾಯೇಲ್‌ನಲ್ಲಿ ಗುಣವತಿಯಾದ ಪತ್ನಿಯೊಬ್ಬಳ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ವರ್ಣಿಸುತ್ತದೆ. ಅವಳು ಅಗತ್ಯದಲ್ಲಿರುವವರಿಗೆ ಸಹಾಯಮಾಡುತ್ತಿದ್ದಳು, ದ್ರಾಕ್ಷೆತೋಟದಲ್ಲಿ ಗಿಡಗಳನ್ನು ನೆಟ್ಟಿದ್ದಳು ಮತ್ತು ಹೊಲವನ್ನು ಕೊಂಡುಕೊಂಡಿದ್ದಳು. ಹೌದು, “ಪತಿಹೃದಯವು ಆಕೆಯಲ್ಲಿ ಭರವಸಪಡುವದು; ಅವನು ಕೊಳ್ಳೆಕೊಳ್ಳೆಯಾಗಿ ಸಂಪಾದಿಸುವನು.”​—11, 16, 20ನೆಯ ವಚನಗಳು.

20. (ಎ) ಒಬ್ಬ ಕ್ರೈಸ್ತ ಸ್ತ್ರೀಯು ತನ್ನ ದೇವದತ್ತ ಸಾಮರ್ಥ್ಯಗಳನ್ನು ಅಥವಾ ವರದಾನಗಳನ್ನು ಹೇಗೆ ಪರಿಗಣಿಸಬೇಕು? (ಬಿ) ಯಾವ ಅತ್ಯುತ್ತಮ ಗುಣಗಳನ್ನು ಎಸ್ತೇರಳು ತೋರಿಸಿದಳು, ಮತ್ತು ಇದರ ಫಲಿತಾಂಶವಾಗಿ ಯೆಹೋವನು ಅವಳನ್ನು ಹೇಗೆ ಉಪಯೋಗಿಸಲು ಶಕ್ತನಾದನು?

20 ವಿನಯಶೀಲಳಾದ, ದೇವಭಯವಿರುವ ಸ್ತ್ರೀಯೊಬ್ಬಳು ಅತ್ಯಾಶೆಯಿಂದ ತನ್ನನ್ನು ಮೇಲೇರಿಸಿಕೊಳ್ಳುವುದಿಲ್ಲ ಅಥವಾ ತನ್ನ ಗಂಡನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ. (ಜ್ಞಾನೋಕ್ತಿ 16:18) ಮುಖ್ಯವಾಗಿ ಐಹಿಕ ಬೆನ್ನಟ್ಟುವಿಕೆಗಳ ಮೂಲಕ ಸ್ವಸಾಧನೆಯನ್ನು ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ, ಬದಲಾಗಿ ತನ್ನ ದೇವದತ್ತ ವರದಾನಗಳನ್ನು ಇತರರಿಗೊಸ್ಕರ ಅಂದರೆ ತನ್ನ ಕುಟುಂಬ, ಜೊತೆ ಕ್ರೈಸ್ತರು, ನೆರೆಯವರ ಪ್ರಯೋಜನಕ್ಕಾಗಿ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಯೆಹೋವನ ಸೇವೆಗೋಸ್ಕರ ಉಪಯೋಗಿಸುತ್ತಾಳೆ. (ಗಲಾತ್ಯ 6:10; ತೀತ 2:3-5) ರಾಣಿಯಾದ ಎಸ್ತೇರಳ ಉದಾಹರಣೆಯನ್ನು ಪರಿಗಣಿಸಿರಿ. ಅವಳು ತುಂಬ ಸೌಂದರ್ಯವತಿಯಾಗಿದ್ದಳು, ಅದೇ ಸಮಯದಲ್ಲಿ ವಿನಯಶೀಲಳೂ ಅಧೀನತೆ ತೋರಿಸುವವಳೂ ಆಗಿದ್ದಳು. (ಎಸ್ತೇರಳು 2:​13, 15) ಅವಳು ವಿವಾಹ ಮಾಡಿಕೊಂಡಾಗ ತನ್ನ ಪತಿಯಾದ ಅರಸ ಅಹಷ್ವೇರೋಷನಿಗೆ ಆಳವಾದ ಗೌರವವನ್ನು ತೋರಿಸಿದಳು; ಅರಸನ ಹಿಂದಿನ ಪತ್ನಿಯಾಗಿದ್ದ ವಷ್ಟಿರಾಣಿಯಂತಿರಲಿಲ್ಲ. (ಎಸ್ತೇರಳು 1:10-12; 2:16, 17) ಎಸ್ತೇರಳು ರಾಣಿಯಾದ ನಂತರವೂ, ಸೂಕ್ತವಾದ ವಿಚಾರಗಳಲ್ಲಿ ಅವಳು ತನ್ನ ಸಂಬಂಧಿಕನಾಗಿದ್ದ ಮೊರ್ದೆಕೈಯ ಅಭಿಪ್ರಾಯಕ್ಕೆ ಗೌರವಾನ್ವಿತ ರೀತಿಯಲ್ಲಿ ಸಮ್ಮತಿಸಿದಳು. ಆದರೆ ಅವಳು ಒಬ್ಬ ಪುಕ್ಕಲು ವ್ಯಕ್ತಿಯಾಗಿರಲಿಲ್ಲ! ಯೆಹೂದ್ಯರನ್ನು ಸಂಪೂರ್ಣವಾಗಿ ಸಂಹರಿಸಲು ಒಳಸಂಚು ಮಾಡಿದಂಥ ಒಬ್ಬ ಪ್ರಬಲ ಹಾಗೂ ನಿಷ್ಕರುಣಿ ವ್ಯಕ್ತಿಯಾಗಿದ್ದ ಹಾಮಾನನನ್ನು ಅವಳು ಧೈರ್ಯವಾಗಿ ಬಯಲುಪಡಿಸಿದಳು. ತನ್ನ ಜನರ ಸಂರಕ್ಷಣೆಗಾಗಿ ಯೆಹೋವನು ಎಸ್ತೇರಳನ್ನು ಮಹತ್ತರವಾದ ರೀತಿಯಲ್ಲಿ ಉಪಯೋಗಿಸಿದನು.​—ಎಸ್ತೇರಳು 3:8-4:17; 7:1-10; 9:13.

21. ಒಬ್ಬ ಕ್ರೈಸ್ತ ಸ್ತ್ರೀಯು ಯೆಹೋವನಿಗೆ ಇನ್ನಷ್ಟು ಅಮೂಲ್ಯಳಾಗಸಾಧ್ಯವಿದೆ ಹೇಗೆ?

21 ಗತಕಾಲದಲ್ಲಿ ಮತ್ತು ಇಂದು, ದೇವಭಕ್ತಿಯುಳ್ಳ ಸ್ತ್ರೀಯರು ಯೆಹೋವನಿಗೆ ಮತ್ತು ಆತನ ಆರಾಧನೆಗೆ ತಮ್ಮ ಅನನ್ಯ ಭಕ್ತಿಯನ್ನು ತೋರಿಸಿದ್ದಾರೆ ಎಂಬುದಂತೂ ಸುಸ್ಪಷ್ಟ. ಆದುದರಿಂದಲೇ, ದೇವರಿಗೆ ಭಯಪಡುವ ಸ್ತ್ರೀಯರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದಾರೆ. ಕ್ರೈಸ್ತ ಸಹೋದರಿಯರೇ, ಯೆಹೋವನು ತನ್ನ ಆತ್ಮದ ಮೂಲಕ ಪ್ರಗತಿಪರವಾಗಿ ನಿಮ್ಮನ್ನು ಇನ್ನಷ್ಟು ಅಪೇಕ್ಷಣೀಯವಾದ “ಪಾತ್ರೆ”ಯಾಗಿ, “ಸಕಲಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧ”ರಾಗಿ ರೂಪಿಸುವಂತೆ ಬಿಟ್ಟುಕೊಡಿರಿ. (2 ತಿಮೊಥೆಯ 2:​21, NW; ರೋಮಾಪುರ 12:2) ಅಂಥ ಅಮೂಲ್ಯ ಆರಾಧಕರ ಕುರಿತು ದೇವರ ವಾಕ್ಯವು ಹೇಳುವುದು: “ಆಕೆಯ ಕೈಗೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ; ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.” (ಜ್ಞಾನೋಕ್ತಿ 31:31) ನಿಮ್ಮಲ್ಲಿ ಪ್ರತಿಯೊಬ್ಬರ ವಿಷಯದಲ್ಲಿ ಇದು ಸತ್ಯವಾಗಿರಲಿ.

[ಪಾದಟಿಪ್ಪಣಿ]

^ ಪ್ಯಾರ. 13 ಹೇಗೆ ಪ್ರಶಂಸೆಯನ್ನು ನೀಡಬೇಕು ಎಂಬ ವಿಷಯದಲ್ಲಿ ಮಾರ್ಚ್‌ 15, 2002ರ ಕಾವಲಿನಬುರುಜು ಪತ್ರಿಕೆಯ 26-8ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 16 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ ಎಂಬ ಪುಸ್ತಕದಲ್ಲಿ 212ನೆಯ ಗೀತೆ.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಪ್ರಥಮ ಶತಮಾನದ ಕ್ರೈಸ್ತ ಸ್ತ್ರೀಯರಲ್ಲಿ ಕೆಲವರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರೆಂಬುದನ್ನು ಹೇಗೆ ರುಜುಪಡಿಸಿದರು?

• ನಮ್ಮ ಕಾಲದ ಅನೇಕ ಸಹೋದರಿಯರು ತಮ್ಮನ್ನು ಹೇಗೆ ದೇವರಿಗೆ ಅಮೂಲ್ಯರನ್ನಾಗಿ ಮಾಡಿಕೊಂಡಿದ್ದಾರೆ?

• ಒಂಟಿ ತಾಯಂದಿರನ್ನು ಹಾಗೂ ಒಬ್ಬ ಗಂಡನನ್ನು ಹೊಂದಿಲ್ಲದಿರುವಂಥ ಇತರ ಸಹೋದರಿಯರನ್ನು ಯೆಹೋವನು ಯಾವ ವಿಧಗಳಲ್ಲಿ ಬೆಂಬಲಿಸುತ್ತಾನೆ?

• ತಲೆತನದ ಏರ್ಪಾಡಿಗಾಗಿ ಒಬ್ಬ ಸ್ತ್ರೀಯು ಹೇಗೆ ಹೃತ್ಪೂರ್ವಕ ಗೌರವವನ್ನು ತೋರಿಸಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚೌಕ]

ಪರ್ಯಾಲೋಚನೆಗಾಗಿ ಉದಾಹರಣೆಗಳು

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ನಂಬಿಗಸ್ತ ಸ್ತ್ರೀಯರ ಇನ್ನೂ ಕೆಲವು ಉದಾಹರಣೆಗಳನ್ನು ನೀವು ಪರಿಗಣಿಸಲು ಬಯಸುತ್ತೀರೋ? ಹಾಗಿರುವಲ್ಲಿ, ಕೆಳಗೆ ಕೊಟ್ಟಿರುವ ವಚನಗಳನ್ನು ದಯವಿಟ್ಟು ಓದಿರಿ. ಪಟ್ಟಿಮಾಡಲ್ಪಟ್ಟಿರುವ ಬೇರೆ ಬೇರೆ ವ್ಯಕ್ತಿಗಳ ಕುರಿತು ನೀವು ಮನನ ಮಾಡುವಾಗ, ನಿಮ್ಮ ಜೀವನದಲ್ಲಿ ಹೆಚ್ಚಿನ ಮಟ್ಟಿಗೆ ನೀವು ಅನ್ವಯಿಸಿಕೊಳ್ಳಲು ಶಕ್ತರಾಗಿರುವಂಥ ಮೂಲತತ್ತ್ವಗಳ ಕುರಿತು ವಿವೇಚಿಸಲು ಪ್ರಯತ್ನಿಸಿರಿ.​—ರೋಮಾಪುರ 15:4.

ಸಾರಳು: ಆದಿಕಾಂಡ 12:​1, 5; 13:18; 21:​9-12; 1 ಪೇತ್ರ 3:​5, 6.

ಉದಾರಿಗಳಾದ ಇಸ್ರಾಯೇಲ್ಯ ಸ್ತ್ರೀಯರು: ವಿಮೋಚನಕಾಂಡ 35:5, 22, 25, 26; 36:3-7; ಲೂಕ 21:1-4.

ದೆಬೋರ: ನ್ಯಾಯಸ್ಥಾಪಕರು 4:​1–5:31.

ರೂತಳು: 1:4, 5, 16, 17; 2:2, 3, 11-13; 4:15.

ಶೂನೇಮಿನ ಸ್ತ್ರೀ: 2 ಅರಸುಗಳು 4:​8-37.

ಫಿನೀಷಿಯದ ಸ್ತ್ರೀ: ಮತ್ತಾಯ 15:​22-28.

ಮಾರ್ಥ ಮತ್ತು ಮರಿಯ: ಮಾರ್ಕ 14:3-9; ಲೂಕ 10:38-42; ಯೋಹಾನ 11:17-29; 12:1-8.

ತಬಿಥಾ: ಅ. ಕೃತ್ಯಗಳು 9:​36-41.

ಫಿಲಿಪ್ಪನ ನಾಲ್ಕು ಮಂದಿ ಹೆಣ್ಣುಮಕ್ಕಳು: ಅ. ಕೃತ್ಯಗಳು 21:9.

ಪೊಯಿಬೆ: ರೋಮಾಪುರ 16:​1, 2.

[ಪುಟ 15ರಲ್ಲಿರುವ ಚಿತ್ರ]

ದೇವರ ನಿಯಮಕ್ಕೆ ನಿಷ್ಠೆಯಿಂದ ವಿಧೇಯರಾಗುವಂಥ ಅವಿವಾಹಿತ ಸಹೋದರಿಯರನ್ನು ನೀವು ಪ್ರಶಂಸಿಸುತ್ತೀರೋ?

[ಪುಟ 16ರಲ್ಲಿರುವ ಚಿತ್ರ]

ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಮೊದಲು ಪ್ರಾರ್ಥನೆಯಲ್ಲಿ ಯಾವ ನಿರ್ದಿಷ್ಟ ವಿನಂತಿಗಳನ್ನು ಮಾಡಿಕೊಳ್ಳಸಾಧ್ಯವಿದೆ?