ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಬಾಲ್ಯಾರಭ್ಯ ಯೆಹೋವನಿಂದ ಉಪದೇಶಿಸಲ್ಪಟ್ಟಿದ್ದೇನೆ

ನನ್ನ ಬಾಲ್ಯಾರಭ್ಯ ಯೆಹೋವನಿಂದ ಉಪದೇಶಿಸಲ್ಪಟ್ಟಿದ್ದೇನೆ

ಜೀವನ ಕಥೆ

ನನ್ನ ಬಾಲ್ಯಾರಭ್ಯ ಯೆಹೋವನಿಂದ ಉಪದೇಶಿಸಲ್ಪಟ್ಟಿದ್ದೇನೆ

ರಿಚರ್ಡ್‌ ಏಬ್ರಹಾಮ್‌ಸನ್‌ ಅವರು ಹೇಳಿದಂತೆ

“ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.” ಕೀರ್ತನೆ 71:17ರ ಈ ಮಾತುಗಳು ನನಗೆ ಏಕೆ ವಿಶೇಷಾರ್ಥವನ್ನು ಹೊಂದಿವೆ ಎಂಬುದನ್ನು ನಾನು ನಿಮಗೆ ವಿವರಿಸುತ್ತೇನೆ.

ನನ್ನ ತಾಯಿಯಾದ ಫ್ಯಾನೀ ಏಬ್ರಹಾಮ್‌ಸನ್‌, ಹಿಂದೆ ಬೈಬಲ್‌ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳಿಂದ 1924ರಲ್ಲಿ ಸಂಪರ್ಕಿಸಲ್ಪಟ್ಟಳು. ಆಗ ನಾನು ಕೇವಲ ಒಂದು ವರುಷ ಪ್ರಾಯದವನಾಗಿದ್ದೆ. ನನ್ನ ತಾಯಿಗೆ ಬೈಬಲ್‌ ಸತ್ಯಗಳು ಕಲಿಸಲ್ಪಟ್ಟಾಗ, ಅವಳು ಓಡಿ ಹೋಗಿ ತನ್ನ ನೆರೆಮನೆಯವರೊಂದಿಗೆ ತಾನು ಕಲಿತ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಳು. ಅವಳು ಅದನ್ನು ನನಗೆ ಮತ್ತು ನನ್ನ ಅಣ್ಣ ಹಾಗೂ ಅಕ್ಕನಿಗೆ ಸಹ ಕಲಿಸಿದಳು. ನಾನು ಓದಲು ಕಲಿಯುವ ಮುನ್ನವೇ, ದೇವರ ರಾಜ್ಯದ ಆಶೀರ್ವಾದಗಳ ಕುರಿತು ತಿಳಿಸುವ ಅನೇಕ ಶಾಸ್ತ್ರವಚನಗಳನ್ನು ಬಾಯಿಪಾಠಮಾಡಿಕೊಳ್ಳಲು ಅವಳು ನನಗೆ ಸಹಾಯಮಾಡಿದಳು.

ಸಾವಿರದ ಒಂಭೈನೂರ ಇಪ್ಪತ್ತುಗಳ ಅಂತ್ಯದಲ್ಲಿ, ನಾನು ಹುಟ್ಟಿಬೆಳೆದ ಊರಾದ ಅಮೆರಿಕದ ಆರೆಗನ್‌ ರಾಜ್ಯದ ಲಿ ಗ್ರಾಂಡ್‌ ಎಂಬಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳ ಗುಂಪು ಕೇವಲ ಕೆಲವೇ ಸ್ತ್ರೀಪುರುಷರನ್ನು ಹೊಂದಿತ್ತು. ನಾವು ದೂರದಲ್ಲಿ ಒಂಟಿಯಾಗಿದ್ದ ಸಾಕ್ಷಿಗಳಾಗಿದ್ದರೂ, ಹಿಂದೆ ಪಿಲ್‌ಗ್ರಿಮ್ಸ್‌ ಎಂದು ಕರೆಯಲ್ಪಡುತ್ತಿದ್ದ ಸಂಚರಣ ಶುಶ್ರೂಷಕರು ನಮ್ಮನ್ನು ವರುಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಭೇಟಿಮಾಡುತ್ತಿದ್ದರು. ಇವರು ಉತ್ತೇಜನದಾಯಕ ಭಾಷಣಗಳನ್ನು ನೀಡುತ್ತಿದ್ದರು, ಮತ್ತು ನಮ್ಮೊಂದಿಗೆ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಜೊತೆಗೂಡುತ್ತಿದ್ದರು, ಮತ್ತು ಮಕ್ಕಳಲ್ಲಿ ಪ್ರೀತಿಪರ ಆಸಕ್ತಿಯನ್ನು ಸಹ ತೋರಿಸುತ್ತಿದ್ದರು. ಇಂಥ ಪ್ರೀತಿಯ ಸಹೋದರರಲ್ಲಿ ಶೀಲ್ಡ್‌ ಟ್ಯೂಟ್‌ಜೀಯನ್‌, ಜೀನ್‌ ಒರೆಲ್‌, ಮತ್ತು ಜಾನ್‌ ಬೂತ್‌ರವರು ಇದ್ದರು.

ಇಸವಿ 1931ರಲ್ಲಿ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನಕ್ಕೆ ಅಂದರೆ ಎಲ್ಲಿ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಸ್ವೀಕರಿಸಿದರೋ ಆ ಅಧಿವೇಶನಕ್ಕೆ ನಮ್ಮ ಗುಂಪಿನಿಂದ ಯಾರೂ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಅಧಿವೇಶನವನ್ನು ಹಾಜರಾಗಸಾಧ್ಯವಾಗದ, ಹಿಂದೆ ಕಂಪೆನಿಗಳೆಂದು ಕರೆಯಲ್ಪಡುತ್ತಿದ್ದ ಸಭೆಗಳು ಮತ್ತು ಇತರ ಪ್ರತ್ಯೇಕಿತ ಗುಂಪುಗಳು ಈ ಹೊಸ ಹೆಸರನ್ನು ಸ್ವೀಕರಿಸಲು ಒಂದು ಠರಾವನ್ನು ತೆಗೆದುಕೊಳ್ಳಲು ಆಗಸ್ಟ್‌ ತಿಂಗಳಿನಲ್ಲಿ ಸ್ಥಳಿಕವಾಗಿ ಒಟ್ಟುಸೇರಿದವು. ಲಿ ಗ್ರಾಂಡ್‌ನಲ್ಲಿರುವ ನಮ್ಮ ಚಿಕ್ಕ ಗುಂಪು ಸಹ ಅಲ್ಲಿ ಹಾಜರಾಯಿತು. ನಂತರ, ಬಿಕ್ಕಟ್ಟು (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನು ವಿತರಿಸುವ 1933ರ ಕಾರ್ಯಾಚರಣೆಯಲ್ಲಿ, ನಾನು ಒಂದು ಬೈಬಲ್‌ ನಿರೂಪಣೆಯನ್ನು ಬಾಯಿಪಾಠಮಾಡಿ ಮೊದಲಬಾರಿಗೆ ಮನೆಯಿಂದ ಮನೆಗೆ ಒಬ್ಬನೇ ಹೋಗಿ ಸಾಕ್ಷಿನೀಡಿದೆ.

ಸಾವಿರದ ಒಂಭೈನೂರ ಮೂವತ್ತುಗಳಲ್ಲಿ ನಮ್ಮ ಕೆಲಸದ ಕಡೆಗಿನ ವಿರೋಧವು ಹೆಚ್ಚಾಗುತ್ತಾ ಹೋಯಿತು. ಇದನ್ನು ನಿಭಾಯಿಸಲು, ಕಂಪೆನಿಗಳನ್ನು ಶಾಖೆಗಳೆಂದು ಕರೆಯಲಾದ ಸಣ್ಣಸಣ್ಣ ಗುಂಪುಗಳಾಗಿ ವಿಭಜಿಸಲಾಯಿತು ಮತ್ತು ಪ್ರತಿಯೊಂದು ಶಾಖೆಯು ಸಣ್ಣ ಸಮ್ಮೇಳನಗಳನ್ನು ನಡಿಸುತ್ತಿತ್ತು ಹಾಗೂ ವಿಭಾಗೀಯ ಕಾರ್ಯಾಚರಣೆಗಳು ಎಂಬ ಸಾರುವ ಕಾರ್ಯಗಳಲ್ಲಿ ವರುಷಕ್ಕೆ ಒಮ್ಮೆ ಅಥವಾ ಎರಡುಬಾರಿ ಭಾಗವಹಿಸುತ್ತಿತ್ತು. ಈ ಸಮ್ಮೇಳನಗಳಲ್ಲಿ ಸಾರುವ ವಿಧಾನಗಳನ್ನು ನಮಗೆ ಬೋಧಿಸಲಾಗುತ್ತಿತ್ತು ಮತ್ತು ನಮ್ಮ ಕೆಲಸವನ್ನು ತಡೆಗಟ್ಟುವ ಪೋಲಿಸ್‌ರೊಂದಿಗೆ ಹೇಗೆ ಗೌರವದಿಂದ ವ್ಯವಹರಿಸಬೇಕೆಂಬುದನ್ನು ಸಹ ತೋರಿಸಲಾಯಿತು. ಸಾಕ್ಷಿಗಳನ್ನು ಆಗಾಗ ಪೊಲೀಸರ ಅಥವಾ ಕೋರ್ಟಿನ ಮುಂದೆ ಕರೆದುಕೊಂಡುಹೋಗಲಾಗುತ್ತಿದ್ದ ಕಾರಣ, ನಾವು ‘ವಿಚಾರಣೆಯ ಅನುಕ್ರಮ’ ಎಂಬ ಹೆಸರಿನ ಒಂದು ಸೂಚನಾ ಹಾಳೆಯಿಂದ ವಿಷಯವನ್ನು ಪೂರ್ವಾಭಿನಯಿಸುತ್ತಿದ್ದೆವು. ವಿರೋಧದೊಂದಿಗೆ ನಿಭಾಯಿಸಲು ಇದು ನಮ್ಮನ್ನು ಸಜ್ಜುಗೊಳಿಸಿತು.

ಬೈಬಲ್‌ ಸತ್ಯದಲ್ಲಿ ಆರಂಭದ ಬೆಳವಣಿಗೆ

ಬೈಬಲ್‌ ಸತ್ಯಗಳ ಮತ್ತು ದೇವರ ಸ್ವರ್ಗೀಯ ರಾಜ್ಯದ ಕೆಳಗೆ ಭೂಮಿಯಲ್ಲಿ ನಿತ್ಯವಾಗಿ ಬದುಕುವ ಬೈಬಲ್‌ ಆಧಾರಿತ ನಿರೀಕ್ಷೆಯ ಕಡೆಗೆ ನನ್ನ ಗಣ್ಯತೆಯು ಹೆಚ್ಚುತ್ತಾಬಂತು. ಆ ಸಮಯದಲ್ಲಿ, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯನ್ನು ಹೊಂದಿರದವರ ದೀಕ್ಷಾಸ್ನಾನಕ್ಕೆ ಹೆಚ್ಚು ಒತ್ತನ್ನು ನೀಡಲಾಗುತ್ತಿರಲಿಲ್ಲ. (ಪ್ರಕಟನೆ 5:10; 14:​1, 3) ಹಾಗಿದ್ದರೂ, ನಾನು ದೇವರ ಚಿತ್ತವನ್ನು ಮಾಡಲು ನನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡಿರುವುದಾದರೆ ದೀಕ್ಷಾಸ್ನಾನಪಡೆದುಕೊಳ್ಳುವುದು ಸೂಕ್ತವೆಂದು ನನಗೆ ಹೇಳಲಾಯಿತು. ಆದುದರಿಂದ, ನಾನು 1933ರ ಆಗಸ್ಟ್‌ ತಿಂಗಳಿನಲ್ಲಿ ದೀಕ್ಷಾಸ್ನಾನಪಡಕೊಂಡೆ.

ನಾನು 12 ವರುಷ ಪ್ರಾಯದವನಾಗಿದ್ದಾಗ ಸಾರ್ವಜನಿಕ ಭಾಷಣವನ್ನು ಉತ್ತಮವಾಗಿ ಕೊಡುತ್ತಿದ್ದೇನೆಂಬ ನನ್ನ ಶಿಕ್ಷಕಿಯ ಅಭಿಪ್ರಾಯದ ಕಾರಣ, ನನಗೆ ಈ ಕ್ಷೇತ್ರದಲ್ಲಿ ಹೆಚ್ಚಿನ ತರಬೇತಿಯನ್ನು ಒದಗಿಸಬೇಕೆಂದು ಅವರು ತಾಯಿಯನ್ನು ಒತ್ತಾಯಿಸಿದರು. ಇದು ನನಗೆ ಯೆಹೋವನನ್ನು ಹೆಚ್ಚು ಉತ್ತಮವಾಗಿ ಸೇವಿಸಲು ಸಹಾಯಮಾಡಬಹುದೆಂದು ನನ್ನ ತಾಯಿಯು ನೆನಸಿದಳು. ಆದುದರಿಂದ ಅವಳು ಇದಕ್ಕೆ ಒಪ್ಪಿಕೊಂಡು, ನನ್ನ ಈ ಶಿಕ್ಷಣಕ್ಕಾಗಿ ಆ ಶಿಕ್ಷಕಿಗೆ ಶುಲ್ಕವನ್ನು ಅವಳ ಬಟ್ಟೆಯನ್ನು ಒಗೆದುಕೊಡುವ ಮೂಲಕ ಸಲ್ಲಿಸುತ್ತಿದ್ದಳು. ಈ ತರಬೇತಿಯು ನನ್ನ ಶುಶ್ರೂಷೆಯಲ್ಲಿ ಬಹಳ ಉಪಯುಕ್ತವಾಯಿತು. ನಾನು 14 ವರುಷ ಪ್ರಾಯದವನಿದ್ದಾಗ, ಸಂಧಿವಾತ ಜ್ವರ ಹಿಡಿದವನಾಗಿ ಒಂದು ವರುಷಕ್ಕಿಂತಲೂ ಹೆಚ್ಚು ಸಮಯದವರೆಗೆ ಶಾಲೆಗೆ ಹೋಗಲು ಅಶಕ್ತನಾದೆ.

ಇಸವಿ 1939ರಲ್ಲಿ ಪೂರ್ಣ ಸಮಯದ ಶುಶ್ರೂಷಕರಾದ ವಾರೆನ್‌ ಹೆನ್ಶೆಲ್‌ರವರು ನಮ್ಮ ಸ್ಥಳಕ್ಕೆ ಭೇಟಿನೀಡಿದರು. * ಆತ್ಮಿಕವಾಗಿ ಅವರು ನನಗೆ ಅಣ್ಣನಂತಿದ್ದರು. ಅವರು ನನ್ನನ್ನು ಇಡೀ ದಿನದ ಕ್ಷೇತ್ರ ಶುಶ್ರೂಷೆಗೆ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಪೂರ್ಣ ಸಮಯದ ಶುಶ್ರೂಷೆಯ ತಾತ್ಕಾಲಿಕ ರೂಪವೆಂದು ಹೇಳಬಹುದಾದ ರಜಾದಿನದ ಪಯನೀಯರ್‌ ಸೇವೆಯನ್ನು ನಾನು ಆರಂಭಿಸುವಂತೆಯೂ ಅವರು ನನಗೆ ಸಹಾಯಮಾಡಿದರು. ಆ ಬೇಸಿಗೆಯಂದು, ನಮ್ಮ ಗುಂಪನ್ನು ಒಂದು ಕಂಪೆನಿಯಾಗಿ ಸಂಘಟಿಸಲಾಯಿತು. ವಾರೆನ್‌ರವರನ್ನು ಕಂಪೆನಿ ಸೇವಕರಾಗಿ ನೇಮಿಸಲಾಯಿತು, ಮತ್ತು ನಾನು ಕಾವಲಿನಬುರುಜು ಅಧ್ಯಯನದ ನಿರ್ವಾಹಕನಾಗಿ ನೇಮಿಸಲ್ಪಟ್ಟೆ. ನಂತರ, ನ್ಯೂಯಾರ್ಕ್‌ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಮುಖ್ಯಕಾರ್ಯಾಲಯ ಅಂದರೆ ಬೆತೆಲ್‌ನಲ್ಲಿ ಸೇವೆಸಲ್ಲಿಸಲು ವಾರೆನ್‌ರವರು ಹೋದಾಗ, ನಾನು ಕಂಪೆನಿ ಸೇವಕನಾದೆ.

ಪೂರ್ಣ ಸಮಯದ ಶುಶ್ರೂಷೆಯಲ್ಲಿನ ಆರಂಭ

ಕಂಪೆನಿ ಸೇವಕನಾಗಿ ನನಗೆ ದೊರೆತ ಹೆಚ್ಚಿನ ಜವಾಬ್ದಾರಿಯು, ಕ್ರಮದ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವ ಇಚ್ಛೆಯನ್ನು ನನ್ನಲ್ಲಿ ಇನ್ನಷ್ಟು ಬಲಪಡಿಸಿತು. ನಾನು ನನ್ನ ಪ್ರೌಢ ಶಾಲೆಯ ಮೂರನೇ ವರುಷವನ್ನು ಮುಕ್ತಾಯಗೊಳಿಸಿದಂತೆಯೇ ಅಂದರೆ ನಾನು 17 ವರುಷ ಪ್ರಾಯದವನಾಗಿದ್ದಾಗ ಕ್ರಮದ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ತಂದೆಯವರು ನಮ್ಮ ಧಾರ್ಮಿಕ ನಂಬಿಕೆಗಳನ್ನು ಸ್ವೀಕರಿಸಿರಲಿಲ್ಲ, ಆದರೆ ಅವರು ಕುಟುಂಬದ ಅಗತ್ಯತೆಗಳನ್ನೆಲ್ಲಾ ತಪ್ಪದೆ ಒದಗಿಸುತ್ತಿದ್ದರು ಮತ್ತು ಉಚ್ಚ ತತ್ತ್ವಗಳನ್ನು ಹೊಂದಿದ್ದ ಒಬ್ಬ ವ್ಯಕ್ತಿಯಾಗಿದ್ದರು. ನಾನು ಕಾಲೇಜಿಗೆ ಹೋಗಬೇಕೆಂದು ಅವರು ಬಯಸಿದ್ದರು. ಹಾಗಿದ್ದರೂ ಎಷ್ಟರ ವರೆಗೆ ನಾನು ಊಟ ಮತ್ತು ವಸತಿಗಾಗಿ ಅವರ ಮೇಲೆ ಅವಲಂಬಿಸುವುದಿಲ್ಲವೊ ಅಷ್ಟರ ವರೆಗೆ ನನಗೆ ಇಷ್ಟವಾದದ್ದನ್ನು ಮಾಡಬಹುದು ಎಂದು ಅವರು ಹೇಳಿದರು. ಆದುದರಿಂದ ನಾನು 1940ರ ಸೆಪ್ಟೆಂಬರ್‌ 1ರಂದು ಪಯನೀಯರ್‌ ಸೇವೆಯನ್ನು ಆರಂಭಿಸಿದೆ.

ನಾನು ಮನೆಯನ್ನು ಬಿಟ್ಟು ಹೋಗುವಾಗ ನನ್ನ ತಾಯಿಯು ನನಗೆ ಜ್ಞಾನೋಕ್ತಿ 3:​5, 6ನ್ನು ಓದಿಸಿದಳು. ಅದು ಓದುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ನನ್ನ ಜೀವನವನ್ನು ಯಾವಾಗಲೂ ಯೆಹೋವನ ಕೈಯಲ್ಲಿ ಸಂಪೂರ್ಣವಾಗಿ ಒಪ್ಪಿಸಿಬಿಡುವುದು ನಿಜವಾಗಿಯೂ ನನಗೆ ಒಂದು ದೊಡ್ಡ ಸಹಾಯವಾಗಿದ್ದಿದೆ.

ಬೇಗನೆ, ನಾನು ಮಧ್ಯೋತ್ತರ ವಾಷಿಂಗ್ಟನ್‌ ಸ್ಟೇಟ್‌ನಲ್ಲಿ ಜೋ ಮತ್ತು ಮಾರ್ಗರೇಟ್‌ ಹರ್ಟ್‌ರವರನ್ನು ಶುಶ್ರೂಷೆಯಲ್ಲಿ ಜೊತೆಗೂಡಿದೆ. ಅಲ್ಲಿನ ಟೆರಿಟೊರಿಯು ವೈವಿಧ್ಯಮಯವಾಗಿತ್ತು. ಅದು ಪಶುಪಾಲನ ಕ್ಷೇತ್ರಗಳು, ಕುರಿಪಾಲನ ಕ್ಷೇತ್ರಗಳು, ಮೂಲ ನಿವಾಸಿಗಳಿರುವ ಕ್ಷೇತ್ರಗಳು, ಅಷ್ಟುಮಾತ್ರವಲ್ಲದೆ ಅನೇಕ ಸಣ್ಣಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಕೂಡಿತ್ತು. 1941ರ ವಸಂತ ಋತುವಿನಲ್ಲಿ, ನಾನು ವಾಷಿಂಗ್ಟನ್‌ನ ವೆನಾಚೀಯಲ್ಲಿನ ಸಭೆಯ ಕಂಪೆನಿ ಸೇವಕನಾಗಿ ನೇಮಕಗೊಂಡೆ.

ವಾಷಿಂಗ್ಟನ್‌ನ ವಲ್ಲಾ ವಲ್ಲಾದಲ್ಲಿ ನಡೆದ ಸಮ್ಮೇಳನವೊಂದರಲ್ಲಿ, ಸಭಾಂಗಣವನ್ನು ಪ್ರವೇಶಿಸುತ್ತಿದ್ದವರನ್ನು ಸ್ವಾಗತಿಸುವ ಒಬ್ಬ ಅಟೆಂಡೆಂಟ್‌ ಆಗಿ ನಾನು ಸೇವೆಸಲ್ಲಿಸಿದೆ. ಆ ಸಮ್ಮೇಳನದಲ್ಲಿ ಧ್ವನಿವರ್ಧಕಗಳನ್ನು ನೋಡಿಕೊಳ್ಳಲು ನೇಮಿಸಲ್ಪಟ್ಟ ಒಬ್ಬ ಯುವ ಸಹೋದರನು ಅದನ್ನು ನಿರ್ವಹಿಸಲು ಕಷ್ಟಪಡುವುದನ್ನು ನಾನು ಗಮನಿಸಿದೆ. ಕೂಡಲೆ ನಾನು, ನನ್ನ ನೇಮಕವನ್ನು ಅವನು ಮಾಡುವಂತೆಯೂ ಮತ್ತು ಅವನ ನೇಮಕವನ್ನು ನಾನು ಮಾಡುವುದಾಗಿಯೂ ತಿಳಿಸಿದೆ. ಪ್ರಾದೇಶಿಕ ಸೇವಕರಾದ ಆಲ್ಬರ್ಟ್‌ ಹೋಫ್‌ಮಾನ್‌ ಹಿಂದಿರುಗಿ ಬಂದಾಗ ನಾನು ನನ್ನ ನೇಮಕವನ್ನು ಬಿಟ್ಟುಹೋಗಿರುವುದನ್ನು ನೋಡಿದರು. ಅವರು ನನಗೆ, ನಿರ್ದೇಶನವು ಸಿಗುವ ವರೆಗೆ ನಮಗೆ ನೇಮಕವಾಗಿರುವ ಕೆಲಸಕ್ಕೆ ಅಂಟಿಕೊಂಡಿರುವುದರ ಮಹತ್ವವನ್ನು ಸ್ನೇಹಪರ ಮುಗುಳ್ನಗೆಯಿಂದ ತಿಳಿಸಿದರು. ಅವರ ಆ ಬುದ್ಧಿವಾದವನ್ನು ನಾನು ಈ ವರೆಗೂ ಮರೆತಿಲ್ಲ.

ಇಸವಿ 1941ರ ಆಗಸ್ಟ್‌ ತಿಂಗಳಿನಲ್ಲಿ, ಯೆಹೋವನ ಸಾಕ್ಷಿಗಳು ಮಿಸೋರಿಯ ಸೈಂಟ್‌ ಲೂಯಿಯಲ್ಲಿ ಒಂದು ದೊಡ್ಡ ಆಧಿವೇಶನವನ್ನು ಏರ್ಪಡಿಸಿದರು. ಹಾರ್ಟ್‌ರವರು ತಮ್ಮ ಪಿಕಪ್‌-ಟ್ರಕ್ಕಿನ ಹಿಂಬದಿಯನ್ನು ಹೊದಿಕೆಯಿಂದ ಮುಚ್ಚಿ, ಅದರೊಳಗೆ ಬೆಂಚುಗಳನ್ನು ಇಟ್ಟರು. ಹೀಗೆ ನಾವು ಒಂಭತ್ತು ಮಂದಿ ಪಯನೀಯರರು ಸೈಂಟ್‌ ಲೂಯಿಗೆ 2,400 ಕಿಲೋಮೀಟರ್‌ ದೂರದ ಪ್ರಯಾಣವನ್ನು ಮಾಡಿದೆವು. ಆ ಸ್ಥಳವನ್ನು ತಲಪಲು ಸುಮಾರು ಒಂದು ವಾರ ಮತ್ತು ಹಿಂದಿರುಗಿ ಬರಲು ಒಂದು ವಾರ ತಗಲಿತು. ಅಧಿವೇಶನದ ಹಾಜರಿಯ ಉಚ್ಚಾಂಕವು 1,15,000 ಆಗಿತ್ತೆಂದು ಪೊಲೀಸರು ಅಂದಾಜುಮಾಡಿದರು. ಹಾಜರಿದ್ದವರ ಸಂಖ್ಯೆಯು ಆ ಅಂದಾಜಿಗಿಂತ ಬಹುಶಃ ಕಡಿಮೆಯಿದ್ದರೂ, ಆ ಸಮಯದಲ್ಲಿ ಅಮೆರಿಕದಲ್ಲಿದ್ದ 65,000 ಸಾಕ್ಷಿಗಳ ಸಂಖ್ಯೆಗಿಂತ ಅದು ಖಂಡಿತವಾಗಿಯೂ ಹೆಚ್ಚಾಗಿತ್ತು. ನಿಶ್ಚಯವಾಗಿಯೂ ಆ ಅಧಿವೇಶನವು ಆತ್ಮಿಕವಾಗಿ ಉನ್ನತ್ತಿಗೊಳಿಸುವಂಥದ್ದಾಗಿತ್ತು.

ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ

ವೆನಾಚೀಗೆ ಹಿಂದಿರುಗಿದ ನಂತರ, ನನಗೆ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆಸಲ್ಲಿಸಲು ಆಮಂತ್ರಣ ಸಿಕ್ಕಿತು. 1941, ಅಕ್ಟೋಬರ್‌ 27ರಂದು ನಾನು ಅಲ್ಲಿಗೆ ತಲಪಿದೆ. ಒಡನೆ ನನ್ನನ್ನು, ಅಲ್ಲಿನ ಫ್ಯಾಕ್ಟರಿ ಮೇಲ್ವಿಚಾರಕರಾದ ನೇತನ್‌ ಏಚ್‌. ನಾರ್‌ರವರ ಆಫೀಸಿಗೆ ಕರೆದುಕೊಂಡು ಹೋಗಲಾಯಿತು. ಅವರು ನನಗೆ ಬೆತೆಲ್‌ ಹೇಗಿರುತ್ತದೆ ಎಂಬುದನ್ನು ದಯಾಭಾವದಿಂದ ವಿವರಿಸಿದರು ಮತ್ತು ಇಲ್ಲಿನ ಜೀವನದಲ್ಲಿ ಯಶಸ್ವಿಯನ್ನು ಕಾಣಬೇಕಾದರೆ ಯೆಹೋವನೊಂದಿಗೆ ಆಪ್ತವಾಗಿ ಅಂಟಿಕೊಂಡಿರುವುದು ಅತ್ಯಗತ್ಯವೆಂಬುದನ್ನು ಒತ್ತಿಹೇಳಿದರು. ನಂತರ ನನ್ನನ್ನು ಶಿಪ್ಪಿಂಗ್‌ ಡಿಪಾರ್ಟ್‌ಮೆಂಟ್‌ಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ನಾನು, ಇತರ ಸ್ಥಳಗಳಿಗೆ ರವಾನೆ ಮಾಡುವ ಸಾಹಿತ್ಯದ ಕಾರ್ಟನ್‌ಗಳನ್ನು ಕಟ್ಟುವ ಕೆಲಸವನ್ನು ಮಾಡಲು ನೇಮಿಸಲ್ಪಟ್ಟೆ.

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸದ ನೇತೃತ್ವವನ್ನು ವಹಿಸುತ್ತಿದ್ದ ಜೋಸೆಫ್‌ ರದರ್‌ಫರ್ಡ್‌ 1942, ಜನವರಿ 8ರಂದು ತೀರಿಕೊಂಡರು. ಐದು ದಿನಗಳ ನಂತರ ಸಂಸ್ಥೆಯ ಡೈರೆಕ್ಟರುಗಳು ಅವರ ಸ್ಥಳದಲ್ಲಿ ಸಹೋದರ ನಾರ್‌ರವರನ್ನು ನೇಮಿಸಿದರು. ಬಹಳ ಸಮಯದಿಂದ ಸೊಸೈಟಿಯ ಸೆಕ್ರಿಟರಿ-ಟ್ರೆಶರರ್‌ ಆಗಿದ್ದ ಡಬ್ಲ್ಯು. ಇ. ವಾನ್‌ ಆಂಬರ್ಗ್‌ ಇದನ್ನು ಬೆತೆಲ್‌ ಕುಟುಂಬಕ್ಕೆ ಘೋಷಿಸಿದಾಗ, ಹೀಗೆ ಹೇಳಿದರು: “ಸಿ. ಟಿ. ರಸಲ್‌ ತೀರಿಕೊಂಡು [1916ರಲ್ಲಿ], ಅವರ ಸ್ಥಳದಲ್ಲಿ ಜೆ. ಎಫ್‌. ರದರ್‌ಫರ್ಡ್‌ ನೇಮಕಗೊಂಡ ಸಮಯವನ್ನು ನಾನು ನೆನಪಿಸಿಕೊಳ್ಳಬಲ್ಲೆ. ಕರ್ತನು ತನ್ನ ಕೆಲಸವನ್ನು ಮಾರ್ಗದರ್ಶಿಸುವುದನ್ನು ಮತ್ತು ಏಳಿಗೆಗೊಳಿಸುವುದನ್ನು ಮುಂದುವರಿಸಿದನು. ಈಗ, ನೇತನ್‌ ಏಚ್‌. ನಾರ್‌ರವರ ಅಧ್ಯಕ್ಷತ್ವದ ಕೆಳಗೂ ಈ ಕೆಲಸವು ಮುಂದೆ ಸಾಗುತ್ತದೆಂಬ ಪೂರ್ಣ ನಂಬಿಕೆ ನನಗಿದೆ, ಏಕೆಂದರೆ ಇದು ಯಾವುದೇ ಮಾನವನ ಕೆಲಸವಲ್ಲ, ಕರ್ತನ ಕೆಲಸವಾಗಿದೆ.”

ಇಸವಿ 1942ರ ಫೆಬ್ರವರಿ ತಿಂಗಳಿನಲ್ಲಿ, “ದೇವಪ್ರಭುತ್ವಾತ್ಮಕ ಶುಶ್ರೂಷೆಯಲ್ಲಿ ಪ್ರೌಢ ಪಠ್ಯಕ್ರಮ” ಆರಂಭವಾಗಲಿದೆ ಎಂದು ಘೋಷಿಸಲಾಯಿತು. ಇದು, ಬೆತೆಲ್‌ನಲ್ಲಿರುವವರು ಬೈಬಲ್‌ ವಿಷಯಗಳ ಕುರಿತು ಸಂಶೋಧನೆ ಮಾಡುವ, ವಿಷಯವಸ್ತುವನ್ನು ಸರಿಯಾಗಿ ವ್ಯವಸ್ಥಾಪಿಸುವ, ಮತ್ತು ಅದನ್ನು ಪ್ರಭಾವಕಾರಿಯಾಗಿ ಪ್ರಸ್ತಾಪಿಸುವ ತಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಲು ಅವರನ್ನು ತರಬೇತಿಗೊಳಿಸುವ ಉದ್ದೇಶದಿಂದ ರಚಿಸಲಾಯಿತು. ಸಾರ್ವಜನಿಕ ಭಾಷಣವನ್ನು ಕೊಡುವ ವಿಷಯದಲ್ಲಿ ನನಗೆ ಚಿಕ್ಕವನಿರುವಾಗ ದೊರೆತ ತರಬೇತಿಯ ಸಹಾಯದಿಂದ, ನಾನು ಈ ಕಾರ್ಯಕ್ರಮದಲ್ಲಿ ತ್ವರಿತಗತಿಯ ಪ್ರಗತಿಯನ್ನು ಮಾಡಶಕ್ತನಾದೆ.

ಬೇಗನೆ, ಅಮೆರಿಕದಲ್ಲಿನ ಸಾಕ್ಷಿಗಳ ಶುಶ್ರೂಷೆಯನ್ನು ನೋಡಿಕೊಳ್ಳುತ್ತಿದ್ದ ಸರ್ವಿಸ್‌ ಡಿಪಾರ್ಟ್‌ಮೆಂಟ್‌ಗೆ ನಾನು ನೇಮಿಸಲ್ಪಟ್ಟೆ. ನಂತರ ಅದೇ ವರುಷದಲ್ಲಿ, ಸಾಕ್ಷಿಗಳ ಕಂಪೆನಿಗಳನ್ನು ಭೇಟಿಮಾಡಲು ಶುಶ್ರೂಷಕರನ್ನು ನೇಮಿಸುವ ಕಾರ್ಯಕ್ರಮವನ್ನು ಪುನಃಸ್ಥಾಪಿಸುವ ನಿರ್ಣಯವು ಮಾಡಲ್ಪಟ್ಟಿತು. ಸಮಯಾನಂತರ, ಸಹೋದರರ ಸೇವಕರು ಎಂದು ಕರೆಯಲ್ಪಡುತ್ತಿದ್ದ ಈ ಸಂಚರಣ ಶುಶ್ರೂಷಕರು ಸರ್ಕಿಟ್‌ ಮೇಲ್ವಿಚಾರಕರು ಎಂದು ಕರೆಯಲ್ಪಟ್ಟರು. 1942ರ ಬೇಸಿಗೆ ಕಾಲದಂದು, ಈ ರೀತಿಯ ಶುಶ್ರೂಷೆಗಾಗಿ ಸಹೋದರರನ್ನು ತರಬೇತಿಗೊಳಿಸಲು ಬೆತೆಲ್‌ನಲ್ಲಿ ಒಂದು ಕೋರ್ಸ್‌ ಅನ್ನು ಏರ್ಪಡಿಸಲಾಯಿತು, ಮತ್ತು ಈ ತರಬೇತಿಯನ್ನು ಪಡೆದುಕೊಳ್ಳುವವರಲ್ಲಿ ನಾನು ಸಹ ಒಬ್ಬನಾಗಿರುವ ಸುಯೋಗಪಡೆದೆ. ಆ ಕೋರ್ಸ್‌ನಲ್ಲಿ, ಬೋಧಕರಲ್ಲಿ ಒಬ್ಬರಾಗಿದ್ದ ಸಹೋದರ ನಾರ್‌ರವರು ನಮಗೆ ಒತ್ತಿಹೇಳಿದ ಈ ಮಾತು ಮುಖ್ಯವಾಗಿ ನನಗೆ ಇನ್ನೂ ನೆನಪಿನಲ್ಲಿದೆ. ಅವರಂದದ್ದು: “ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸಬೇಡಿರಿ. ಒಂದುವೇಳೆ ಹಾಗೆ ಮಾಡುವುದಾದರೆ, ಕೊನೆಗೆ ನೀವು ಯಾರನ್ನೂ ಮೆಚ್ಚಿಸಸಾಧ್ಯವಿಲ್ಲ. ಆದರೆ ಯೆಹೋವನನ್ನು ಮೆಚ್ಚಿಸಿರಿ, ಮತ್ತು ಹಾಗೆ ಮಾಡುವುದಾದರೆ ಆತನನ್ನು ಪ್ರೀತಿಸುವವರೆಲ್ಲರನ್ನೂ ನೀವು ಮೆಚ್ಚಿಸುವಿರಿ.”

ಇಸವಿ 1942ರ ಅಕ್ಟೋಬರ್‌ ತಿಂಗಳಿನಂದು ಸಂಚರಣ ಕೆಲಸವು ಆರಂಭಗೊಂಡಿತು. ಬೆತೆಲಿನಲ್ಲಿ ಸೇವೆಮಾಡುವ ನಮ್ಮಲ್ಲಿ ಕೆಲವರು, ಈ ಕೆಲಸದಲ್ಲಿ ಕೆಲವು ವಾರಾಂತ್ಯದಲ್ಲಿ ಭಾಗವಹಿಸಿದೆವು. ನಾವು ನ್ಯೂಯಾರ್ಕ್‌ ನಗರದಿಂದ 400 ಕಿಲೋಮೀಟರ್‌ಗಳಷ್ಟು ಅಂತರದೊಳಗಿದ್ದ ಸಭೆಗಳನ್ನು ಭೇಟಿನೀಡುತ್ತಿದ್ದೆವು. ನಾವು ಸಭೆಗಳ ಸಾರುವ ಚಟುವಟಿಕೆ ಮತ್ತು ಕೂಟಗಳ ಹಾಜರಿಗಳ ವರದಿಯನ್ನು ಪರೀಕ್ಷಿಸುತ್ತಿದ್ದೆವು, ಸಭೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುವವರೊಂದಿಗೆ ಕೂಟವನ್ನು ನಡಿಸುತ್ತಿದ್ದೆವು, ಒಂದು ಅಥವಾ ಎರಡು ಭಾಷಣಗಳನ್ನು ನೀಡುತ್ತಿದ್ದೆವು, ಮತ್ತು ಸ್ಥಳಿಕ ಸಾಕ್ಷಿಗಳೊಂದಿಗೆ ಶುಶ್ರೂಷೆಯಲ್ಲಿ ಜೊತೆಯಾಗಿ ಕೆಲಸಮಾಡುತ್ತಿದ್ದೆವು.

ಇಸವಿ 1944ರಲ್ಲಿ, ಆರು ತಿಂಗಳಿಗಾಗಿ ಸಂಚರಣ ಕೆಲಸಕ್ಕೆಂದು ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಿಂದ ಕಳುಹಿಸಲ್ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ. ಡೆಲಾವಾರಿ, ಮೆರಿಲ್ಯಾಂಡ್‌, ಪೆನ್ಸಿಲ್‌ವೇನಿಯ, ಮತ್ತು ವರ್ಜಿನಿಯ ಮುಂತಾದ ರಾಜ್ಯಗಳಲ್ಲಿ ನಾನು ಸೇವೆಸಲ್ಲಿಸಿದೆ. ನಂತರ ಕೆಲವು ತಿಂಗಳುಗಳಿಗಾಗಿ, ನಾನು ಕನೆಕ್ಟಿಕಟ್‌, ಮ್ಯಾಸಚೂಸೆಟ್ಸ್‌, ಮತ್ತು ರ್ಹೋಡ್‌ ಐಲೆಂಡ್‌ನ ಸಭೆಗಳಿಗೆ ಭೇಟಿನೀಡಿದೆ. ಈ ಕೆಲಸವನ್ನು ಮುಗಿಸಿ ಬೆತೆಲ್‌ಗೆ ಹಿಂದಿರುಗಿದಾಗ, ಸಹೋದರ ನಾರ್‌ ಮತ್ತು ಅವರ ಸೆಕ್ರಿಟರಿಯಾದ ಮಿಲ್ಟನ್‌ ಹೆನ್ಶೆಲ್‌ರೊಂದಿಗೆ ಆಫೀಸಿನಲ್ಲಿ ಪಾರ್ಟ್‌ ಟೈಮ್‌ ಕೆಲಸಮಾಡಿದೆ. ಈ ಸಮಯದಲ್ಲಿಯೇ ನನಗೆ, ನಮ್ಮ ಲೋಕವ್ಯಾಪಕ ಕೆಲಸದ ಪರಿಚಯವಾಯಿತು. ಅಷ್ಟುಮಾತ್ರವಲ್ಲದೆ, ಡಬ್ಲ್ಯು. ಇ. ವಾನ್‌ ಆಂಬರ್ಗ್‌ ಮತ್ತು ಅವರ ಸಹಾಯಕರಾದ ಗ್ರ್ಯಾನ್ಟ್‌ ಸ್ಯೂಟರ್‌ರವರ ಮೇಲ್ವಿಚಾರಣೆಯ ಕೆಳಗೆ ಟ್ರೆಶರರ್‌ ಆಫೀಸ್‌ನಲ್ಲಿಯೂ ಪಾರ್ಟ್‌ ಟೈಮ್‌ ಕೆಲಸಮಾಡಿದೆ. ನಂತರ 1946ರಲ್ಲಿ ನನ್ನನ್ನು ಬೆತೆಲ್‌ನ ಅನೇಕ ಆಫೀಸ್‌ಗಳಿಗೆ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು.

ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳು

ಇಸವಿ 1945ರಲ್ಲಿ ನಾನು ಸಭೆಗಳಿಗೆ ಸೇವೆಸಲ್ಲಿಸುತ್ತಿದ್ದಾಗ, ರ್ಹೋಡ್‌ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿ ಜೂಲ್ಯಾ ಕಾರ್ನೊಸ್ಕಸ್‌ ಎಂಬವಳ ಪರಿಚಯವಾಯಿತು. 1947ರ ಮಧ್ಯಭಾಗದಷ್ಟಕ್ಕೆ ನಾವು ವಿವಾಹವಾಗುವ ತೀರ್ಮಾನವನ್ನು ಮಾಡಿದೆವು. ನಾನು ಬೆತೆಲ್‌ ಸೇವೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದೆ, ಆದರೆ ಆ ಸಮಯದಲ್ಲಿ ವಿವಾಹವಾಗಿ ಸಂಗಾತಿಯನ್ನು ಬೆತೆಲ್‌ಗೆ ಕರೆದುತರುವ ಏರ್ಪಾಡು ಇರಲಿಲ್ಲ. ಆದುದರಿಂದ 1948ರ ಜನವರಿಯಲ್ಲಿ ನಾನು ಬೆತೆಲ್‌ ಸೇವೆಯನ್ನು ಬಿಟ್ಟು, ಜೂಲ್ಯಾ (ಜೂಲೀ) ಮತ್ತು ನಾನು ವಿವಾಹವಾದೆವು. ಪ್ರಾವಿಡೆನ್ಸ್‌ನ ಒಂದು ಸೂಪರ್‌ ಮಾರ್ಕೆಟ್‌ನಲ್ಲಿ ನನಗೆ ಒಂದು ಪಾರ್ಟ್‌ ಟೈಮ್‌ ಕೆಲಸವು ದೊರಕಿತು ಮತ್ತು ನಾವಿಬ್ಬರೂ ನಮ್ಮ ಪಯನೀಯರ್‌ ಸೇವೆಯನ್ನು ಒಟ್ಟಿಗೆ ಆರಂಭಿಸಿದೆವು.

ಇಸವಿ 1949ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ವಿಸ್ಕನ್ಸಿನ್‌ನ ವಾಯವ್ಯ ದಿಕ್ಕಿನಲ್ಲಿ ಸರ್ಕಿಟ್‌ ಕೆಲಸ ಮಾಡಲು ನನಗೆ ಆಮಂತ್ರಣ ದೊರಕಿತು. ಅನೇಕ ಡೈರಿಗಳಿರುವ, ಹೆಚ್ಚಾಗಿ ಅತಿ ಚಿಕ್ಕದಾಗಿರುವ ಪಟ್ಟಣಗಳು ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಸಾರುವುದು ನನಗೆ ಮತ್ತು ಜೂಲೀಗೆ ಒಂದು ದೊಡ್ಡ ಬದಲಾವಣೆಯಾಗಿತ್ತು. ಅಲ್ಲಿ, ಚಳಿಗಾಲವು ಬಹಳ ಉದ್ದವಾಗಿತ್ತು ಮತ್ತು ಹೆಚ್ಚಿನ ವಾರಗಳಲ್ಲಿ ತಾಪಮಾನವು -20 ಡಿಗ್ರೀಗಿಂತಲೂ ಕಡಿಮೆಯಾಗಿದ್ದು, ಎಲ್ಲೆಡೆಯೂ ಬಹಳಷ್ಟು ಹಿಮವು ಇರುತ್ತಿತ್ತು. ನಮ್ಮ ಬಳಿ ಕಾರ್‌ ಇರಲಿಲ್ಲ. ಆದರೂ, ಪ್ರತಿಬಾರಿ ನಾವು ಒಂದು ಸಭೆಯಿಂದ ಇನ್ನೊಂದಕ್ಕೆ ಹೋಗುವಾಗ ಯಾರಾದರೂ ನಮ್ಮನ್ನು ಅವರ ಕಾರ್‌ನಲ್ಲಿ ಕರೆದೊಯ್ಯುತ್ತಿದ್ದರು.

ನಾನು ಸರ್ಕಿಟ್‌ ಕೆಲಸವನ್ನು ಆರಂಭಿಸಿದ ಸ್ವಲ್ಪ ಸಮಯದ ನಂತರ ಒಂದು ಸರ್ಕಿಟ್‌ ಸಮ್ಮೇಳನವು ಏರ್ಪಡಿಸಲಾಯಿತು. ಆ ಸಮ್ಮೇಳನದಲ್ಲಿ ಎಲ್ಲಾ ಕಾರ್ಯಾಚರಣೆಯು ಸರಿಯಾಗಿ ನಿರ್ವಹಿಸಲ್ಪಡುತ್ತಿದೆಯೋ ಎಂದು ನಾನು ಅತಿಶ್ರದ್ಧೆಯಿಂದ ಪರೀಕ್ಷಿಸುತ್ತಿದ್ದದ್ದು ಮತ್ತು ಆ ಕಾರಣದಿಂದ ಕೆಲವು ಸಹೋದರರು ಸ್ವಲ್ಪ ಹೆದರಿಹೋದದ್ದು ನನಗೆ ಈಗಲೂ ನೆನಪಿದೆ. ಆದುದರಿಂದ ಜಿಲ್ಲಾ ಮೇಲ್ವಿಚಾರಕರಾದ ನಿಕೋಲಸ್‌ ಕೋವಾಲಕ್‌ರವರು, ಸ್ಥಳಿಕ ಸಹೋದರರು ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ನೋಡಿಕೊಳ್ಳುವುದಕ್ಕೆ ಒಗ್ಗಿಹೋಗಿದ್ದರು ಮತ್ತು ನಾನು ಪ್ರತಿಯೊಂದು ವಿವರದ ಬಗ್ಗೆ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ದಯಾಭಾವದಿಂದ ವಿವರಿಸಿದರು. ಆ ಬುದ್ಧಿವಾದವು, ಅಂದಿನಿಂದ ನಾನು ಅನೇಕ ನೇಮಕಗಳನ್ನು ನಿಭಾಯಿಸಲು ನನಗೆ ಸಹಾಯಮಾಡಿದೆ.

ಇಸವಿ 1950ರಲ್ಲಿ, ನ್ಯೂಯಾರ್ಕ್‌ ನಗರದ ಯಾಂಕೀ ಸ್ಟೇಡಿಯಮ್‌ನಲ್ಲಿ ನಡೆದ ನಮ್ಮ ಮೊದಲನೆಯ ಅತಿ ದೊಡ್ಡ ಅಧಿವೇಶನಕ್ಕೆ​—ನಂತರ ಅದೇ ಸ್ಥಳದಲ್ಲಿ ಅನೇಕ ದೊಡ್ಡ ಅಧಿವೇಶನಗಳು ನಡೆಸಲ್ಪಟ್ಟವು​—ಬಂದ ಪ್ರತಿನಿಧಿಗಳಿಗಾಗಿ ವಸತಿ ಸೌಕರ್ಯಗಳನ್ನು ಒದಗಿಸುವ ವಿಷಯದಲ್ಲಿ ಮೇಲ್ವಿಚಾರಣೆ ಮಾಡುವ ತಾತ್ಕಾಲಿಕ ನೇಮಕವು ನನಗೆ ಕೊಡಲ್ಪಟ್ಟಿತು. ಈ ಅಧಿವೇಶನಕ್ಕೆ 67 ದೇಶಗಳಿಂದ ಪ್ರತಿನಿಧಿಗಳು ಬಂದಿದ್ದರು ಮತ್ತು ಒಟ್ಟು 1,23,707 ಮಂದಿ ಹಾಜರಿದ್ದರು! ಆರಂಭದಿಂದ ಕೊನೆಯ ವರೆಗೂ ಅಧಿವೇಶನವು ಬಹಳ ರೋಮಾಂಚಕಾರಿಯಾಗಿತ್ತು. ಅಧಿವೇಶನವು ಮುಗಿದ ನಂತರ, ಜೂಲೀ ಮತ್ತು ನಾನು ನಮ್ಮ ಸಂಚರಣ ಕೆಲಸವನ್ನು ಮುಂದುವರಿಸಿದೆವು. ನಾವು ನಮ್ಮ ಸರ್ಕಿಟ್‌ ಕೆಲಸದಲ್ಲಿ ಬಹಳ ಸಂತೋಷದಿಂದಿದ್ದೆವು. ಹಾಗಿದ್ದರೂ, ಯಾವುದೇ ಪೂರ್ಣ ಸಮಯದ ಸೇವೆಗೆ ನಮ್ಮನ್ನು ನೀಡಿಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿ ಯಾವಾಗಲೂ ಇತ್ತು. ಆದುದರಿಂದ, ನಾವು ಪ್ರತಿ ವರುಷ ಬೆತೆಲ್‌ ಮತ್ತು ಮಿಷನೆರಿ ಸೇವೆಗಾಗಿ ಅರ್ಜಿಗಳನ್ನು ಕಳುಹಿಸುತ್ತಿದ್ದೆವು. 1952ರಲ್ಲಿ, ಮಿಷನೆರಿ ತರಬೇತಿಗಾಗಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 20ನೇ ತರಗತಿಗೆ ಆಮಂತ್ರಣವು ದೊರೆತಾಗ ನಮಗೆ ಬಹಳ ಆನಂದಿವಾಯಿತು.

ವಿದೇಶದಲ್ಲಿ ಸೇವೆಸಲ್ಲಿಸುವುದು

ಇಸವಿ 1953ರಲ್ಲಿ ನಾವು ಪದವೀಧರರಾದೊಡನೆ, ನಮ್ಮನ್ನು ಬ್ರಿಟನ್‌ ದೇಶಕ್ಕೆ ನೇಮಿಸಲಾಯಿತು. ಅಲ್ಲಿ ನಾನು ಇಂಗ್ಲೆಂಡ್‌ನ ದಕ್ಷಿಣ ಪ್ರಾಂತದಲ್ಲಿ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದೆ. ಜೂಲೀ ಮತ್ತು ನಾನು ಈ ಚಟುವಟಿಕೆಯನ್ನು ಬಹಳವಾಗಿ ಆನಂದಿಸಿದೆವು. ಆದರೆ ಒಂದು ವರುಷದೊಳಗೆ, ಡೆನ್ಮಾರ್ಕ್‌ಗೆ ಹೋಗಲು ಹೊಸ ನೇಮಕವು ದೊರೆತಾಗ ನಮಗೆ ಆಶ್ಚರ್ಯವಾಯಿತು. ಡೆನ್ಮಾರ್ಕ್‌ನ ಬ್ರಾಂಚ್‌ ಆಫೀಸಿನ ಮೇಲ್ವಿಚಾರಣೆ ಮಾಡಲು ಹೊಸ ಮೇಲ್ವಿಚಾರಕರ ಅಗತ್ಯವಿತ್ತು. ನಾನು ಆ ಸ್ಥಳಕ್ಕೆ ಹತ್ತಿರದಲ್ಲಿದ್ದ ಕಾರಣ ಮತ್ತು ಅಂಥ ಕೆಲಸಕ್ಕಾಗಿ ಈಗಾಗಲೇ ಬ್ರೂಕ್ಲಿನ್‌ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದರಿಂದ ಅಲ್ಲಿ ಸಹಾಯಮಾಡಲು ನನ್ನನ್ನು ಕಳುಹಿಸಲಾಯಿತು. ನಾವು ನೆದರ್ಲೆಂಡ್ಸ್‌ಗೆ ದೋಣಿಯ ಮೂಲಕ ಹೋಗಿ, ಅಲ್ಲಿಂದ ರೈಲಿನ ಮೂಲಕ ಡೆನ್ಮಾರ್ಕಿನ ಕೋಪನ್‌ಹೇಗನ್‌ಗೆ ಹೋದೆವು. ನಾವು ಅಲ್ಲಿಗೆ 1954, ಅಗಸ್ಟ್‌ 9ರಂದು ಬಂದು ತಲಪಿದೆವು.

ಬಗೆಹರಿಸಬೇಕಾದ ಒಂದು ಸಮಸ್ಯೆಯು ಏನಾಗಿತ್ತೆಂದರೆ, ಅಲ್ಲಿದ್ದ ಕೆಲವು ಜವಾಬ್ದಾರಿಯುತ ಸಹೋದರರು ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಿಂದ ಬಂದ ನಿರ್ದೇಶನವನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದರು. ಅಷ್ಟುಮಾತ್ರವಲ್ಲದೆ, ನಮ್ಮ ಪ್ರಕಾಶನಗಳನ್ನು ಡೆನಿಷ್‌ ಭಾಷೆಗೆ ಭಾಷಾಂತರಿಸುತ್ತಿದ್ದ ನಾಲ್ಕು ಮಂದಿಯಲ್ಲಿ ಮೂವರು ಬೆತೆಲನ್ನು ಬಿಟ್ಟುಹೋದರು ಮತ್ತು ಕ್ರಮೇಣ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುವುದನ್ನೇ ನಿಲ್ಲಿಸಿಬಿಟ್ಟರು. ಆದರೆ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರವನ್ನು ನೀಡಿದನು. ಒಮ್ಮೆ ಪಾರ್ಟ್‌ ಟೈಮ್‌ ಭಾಷಾಂತರಕಾರರಾಗಿ ಕೆಲಸಮಾಡಿದ್ದ, ಯೋರ್ನ್‌ ಮತ್ತು ಆ್ಯನ್ನ ಲಾರ್ಸನ್‌ ಎಂಬ ಇಬ್ಬರು ಪಯನೀಯರರು ತಮ್ಮನ್ನು ಈ ಕೆಲಸಕ್ಕೆ ಪೂರ್ಣ ಸಮಯಕ್ಕಾಗಿ ನೀಡಿಕೊಂಡರು. ಹೀಗೆ, ಒಂದೂ ಸಂಚಿಕೆ ತಪ್ಪದೆ ಡೆನಿಷ್‌ ಭಾಷೆಗೆ ನಮ್ಮ ಪತ್ರಿಕೆಗಳ ಭಾಷಾಂತರವು ಮುಂದುವರಿಯಿತು. ಲಾರ್ಸನ್‌ ದಂಪತಿಯರು ಇವತ್ತಿನ ವರೆಗೂ ಡೆನ್ಮಾರ್ಕ್‌ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಮತ್ತು ಯೋರ್ನ್‌ರವರು ಬ್ರಾಂಚ್‌ ಕಮಿಟಿಯ ಕೋಆರ್ಡಿನೇಟರ್‌ ಆಗಿದ್ದಾರೆ.

ಆ ಆರಂಭದ ವರುಷಗಳಲ್ಲಿ, ಸಹೋದರ ನಾರ್‌ರವರ ಕ್ರಮದ ಭೇಟಿಗಳು ನಿಜವಾಗಿಯೂ ಉತ್ತೇಜನದ ಮೂಲವಾಗಿತ್ತು. ಅವರು ನಮ್ಮೊಂದಿಗೆ ಕುಳಿತು ಮಾತನಾಡಲು, ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಎಂಬ ವಿಷಯದಲ್ಲಿ ಬೇಕಾದ ಒಳನೋಟವನ್ನು ನೀಡುವಂಥ ಅನುಭವಗಳನ್ನು ಹೇಳಲು ಸಮಯವನ್ನು ತೆಗೆದುಕೊಳ್ಳುತ್ತಿದ್ದರು. 1955ರಲ್ಲಿನ ಅವರ ಒಂದು ಸಂದರ್ಶನದ ಸಮಯದಲ್ಲಿ, ನಾವು ಡೆನ್ಮಾರ್ಕ್‌ಗಾಗಿ ಪತ್ರಿಕೆಗಳನ್ನು ಅಲ್ಲಿಯೇ ತಯಾರಿಸಲಾಗುವಂತೆ ಮುದ್ರಣ ಸೌಕರ್ಯಗಳನ್ನು ಹೊಂದಿರುವ ಒಂದು ಹೊಸ ಬ್ರಾಂಚ್‌ ಅನ್ನು ನಿರ್ಮಿಸಬೇಕೆಂದು ನಿರ್ಣಯಿಸಲ್ಪಟ್ಟಿತು. ಕೋಪನ್‌ಹೇಗನ್‌ನ ಉತ್ತರದಿಕ್ಕಿನಲ್ಲಿರುವ ಒಂದು ಉಪನಗರದಲ್ಲಿ ಸ್ಥಳವನ್ನು ಖರೀದಿಸಲಾಯಿತು ಮತ್ತು 1957ರ ಬೇಸಿಗೆ ಕಾಲದೊಳಗೆ ಹೊಸದಾಗಿ ಕಟ್ಟಿದ ಬ್ರಾಂಚ್‌ ಕಟ್ಟಡಕ್ಕೆ ನಾವು ಸ್ಥಳಾಂತರಿಸಿದೆವು. ಹ್ಯಾರೀ ಜೋನ್‌ಸನ್‌ ಮತ್ತು ಅವರ ಪತ್ನಿಯಾದ ಕ್ಯಾರೀನ್‌, ಗಿಲ್ಯಡ್‌ನ 26ನೆಯ ತರಗತಿಯಲ್ಲಿ ಪದವಿಪಡೆದುಕೊಂಡ ಬಳಿಕ ಇತ್ತೀಚೆಗೆ ಡೆನ್ಮಾರ್ಕ್‌ಗೆ ಬಂದರು. ಅವರು ನಮ್ಮ ಮುದ್ರಣಾಲಯವನ್ನು ಸ್ಥಾಪಿಸುವುದರಲ್ಲಿ ಮತ್ತು ಅದರ ಕೆಲಸವನ್ನು ಆರಂಭಿಸುವುದರಲ್ಲಿ ಸಹಾಯನೀಡಿದರು.

ಡೆನ್ಮಾರ್ಕ್‌ನಲ್ಲಿ ದೊಡ್ಡ ಅಧಿವೇಶನಗಳನ್ನು ಸಂಘಟಿಸುವುದರಲ್ಲೂ ನಾವು ಪ್ರಗತಿಯನ್ನು ಮಾಡಿದೆವು ಮತ್ತು ನಾನು ಅಮೆರಿಕದಲ್ಲಿದ್ದಾಗ ಅಧಿವೇಶನಗಳಲ್ಲಿ ಕೆಲಸಮಾಡುವಾಗ ನನಗೆ ದೊರೆತ ಅನುಭವವು ಬಹಳ ಸಹಾಯಕಾರಿಯಾಗಿ ಪರಿಣಮಿಸಿತು. 1961ರಲ್ಲಿ ಕೋಪನ್‌ಹೇಗನ್‌ನಲ್ಲಿ ನಡೆದ ನಮ್ಮ ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನಕ್ಕೆ 30ಕ್ಕಿಂತಲೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಬಂದಿದ್ದರು. ಇದಕ್ಕೆ ಒಟ್ಟು 33,513 ಮಂದಿ ಹಾಜರಿದ್ದರು. ನಂತರ 1969ರಲ್ಲಿ ನಡೆದಂತಹ ಅಧಿವೇಶನವು, ಸ್ಕಾಂಡಿನೇವಿಯಾದಲ್ಲೇ ಅಷ್ಟರತನಕ ನಡೆದಂಥ ಅಧಿವೇಶಗನಳಲ್ಲಿ ಅತಿ ದೊಡ್ಡ ಅಧಿವೇಶನವಾಗಿ ಪರಿಣಮಿಸಿತು. ಅದಕ್ಕೆ 42,073 ಮಂದಿ ಹಾಜರಿದ್ದರು!

ಇಸವಿ 1963ರಲ್ಲಿ ನನ್ನನ್ನು ಗಿಲ್ಯಡ್‌ನ 38ನೆಯ ತರಗತಿಗೆ ಹಾಜರಾಗುವಂತೆ ಆಮಂತ್ರಿಸಲಾಯಿತು. ಇದು, ನಿರ್ದಿಷ್ಟವಾಗಿ ಬ್ರಾಂಚ್‌ ಸಿಬ್ಬಂದಿಯನ್ನು ತರಬೇತಿಗೊಳಿಸುವ ಸಲುವಾಗಿ ವಿನ್ಯಾಸಿಸಲ್ಪಟ್ಟಿದ್ದ ಹತ್ತು ತಿಂಗಳಿನ ವ್ಯವಸ್ಥಿತ ಕೋರ್ಸ್‌ ಆಗಿತ್ತು. ಬ್ರೂಕ್ಲಿನ್‌ ಬೆತೆಲ್‌ ಕುಟುಂಬದ ಸದಸ್ಯರೊಂದಿಗೆ ಪುನಃ ಸಹವಾಸಿಸುವುದು ಮತ್ತು ಅನೇಕ ವರುಷಗಳಿಂದ ಮುಖ್ಯಕಾರ್ಯಲಯದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿರುವವರ ಅನುಭವದಿಂದ ಪ್ರಯೋಜನವನ್ನು ಹೊಂದುವುದು ಒಂದು ಹರ್ಷಕರ ಸುಯೋಗವಾಗಿತ್ತು.

ಈ ತರಬೇತಿ ಕೋರ್ಸ್‌ ಮುಗಿದ ನಂತರ ಪುನಃ ನಾನು ಡೆನ್ಮಾರ್ಕ್‌ಗೆ ಹಿಂದಿರುಗಿದೆ ಮತ್ತು ಅಲ್ಲಿನ ನನ್ನ ಜವಾಬ್ದಾರಿಗಳನ್ನು ನೋಡಿಕೊಳ್ಳುವುದನ್ನು ಮುಂದುವರಿಸಿದೆ. ಇದಕ್ಕೆ ಕೂಡಿಸಿ, ಪಾಶ್ಚಿಮಾತ್ಯ ಹಾಗೂ ಉತ್ತರ ಯೂರೋಪಿನಲ್ಲಿದ್ದ ಬ್ರಾಂಚ್‌ಗಳನ್ನು ಭೇಟಿನೀಡಿ, ಅಲ್ಲಿದ್ದ ಸಿಬ್ಬಂದಿಯನ್ನು ಉತ್ತೇಜಿಸಲು ಮತ್ತು ಅವರ ಜವಾಬ್ದಾರಿಗಳನ್ನು ಅವರು ಪೂರೈಸುವಂತೆ ಬೇಕಾಗಿರುವ ಸಹಾಯವನ್ನು ನೀಡಲು, ನನಗೆ ಸೋನ್‌ ಮೇಲ್ವಿಚಾರಕರಾಗಿ ಸೇವೆಸಲ್ಲಿಸುವ ಸುಯೋಗವೂ ದೊರಕಿತು. ಇತ್ತೀಚೆಗೆ, ಪೂರ್ವ ಆಫ್ರಿಕದಲ್ಲಿ ಮತ್ತು ಕ್ಯಾರಿಬಿಯನ್‌ ಕ್ಷೇತ್ರಗಳಲ್ಲಿ ಈ ಕೆಲಸವನ್ನು ನಾನು ಮಾಡಿದೆ.

ಇಸವಿ 1970ರ ಅಂತ್ಯಭಾಗದಲ್ಲಿ ಡೆನ್ಮಾರ್ಕ್‌ನಲ್ಲಿರುವ ಸಹೋದರರು, ಹೆಚ್ಚುತ್ತಿರುವ ಭಾಷಾಂತರ ಮತ್ತು ಮುದ್ರಣ ಕಾರ್ಯಗಳಿಗಾಗಿ ಒಂದು ದೊಡ್ಡ ಸೌಕರ್ಯವನ್ನು ಕಟ್ಟಸಾಧ್ಯವಿರುವ ಸ್ಥಳಕ್ಕಾಗಿ ಹುಡುಕಲು ಆರಂಭಿಸಿದರು. ಕೋಪನ್‌ಹೇಗನ್‌ನ ಪಶ್ಚಿಮಕ್ಕೆ ಸುಮಾರು 60 ಕಿಲೋಮೀಟರ್‌ ದೂರದಲ್ಲಿ ಒಂದು ಉತ್ತಮವಾದ ಸ್ಥಳವನ್ನು ಕಂಡುಕೊಂಡರು. ಇತರರೊಂದಿಗೆ ನಾನೂ, ಹೊಸ ಸೌಕರ್ಯದ ಯೋಜನೆ ಮತ್ತು ವಿನ್ಯಾಸಮಾಡುವುದರಲ್ಲಿ ಕೆಲಸಮಾಡಿದೆ. ಜೂಲೀ ಮತ್ತು ನಾನು, ಬೆತೆಲ್‌ ಕುಟುಂಬದೊಂದಿಗೆ ಅದರ ಉತ್ತಮವಾದ ಹೊಸ ಮನೆಯಲ್ಲಿ ವಾಸಿಸಲು ಮುನ್‌ನೋಡುತ್ತಿದ್ದೆವು. ಆದರೆ, ವಿಷಯವು ನಾವು ಯೋಚಿಸಿದಂತೆ ಸಂಭವಿಸಲಿಲ್ಲ.

ಪುನಃ ಬ್ರೂಕ್ಲಿನ್‌ಗೆ

ಇಸವಿ 1980ರ ನವೆಂಬರ್‌ ತಿಂಗಳಿನಲ್ಲಿ, ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆಸಲ್ಲಿಸಲು ನನಗೆ ಮತ್ತು ಜೂಲೀಗೆ ಆಮಂತ್ರಣ ಸಿಕ್ಕಿತು. 1981ರ ಜನವರಿ ತಿಂಗಳಿನ ಆರಂಭದಲ್ಲಿ ನಾವು ಅಲ್ಲಿಗೆ ತಲಪಿದೆವು. ನಾವಾಗ ನಮ್ಮ 50ರ ಕೊನೇ ವರುಷಗಳಲ್ಲಿದ್ದೆವು. ನಮ್ಮ ಜೀವನದ ಅರ್ಧದಷ್ಟು ವರುಷಗಳನ್ನು ಡೆನ್ಮಾರ್ಕ್‌ನಲ್ಲಿರುವ ನಮ್ಮ ಪ್ರಿಯ ಸಹೋದರ ಸಹೋದರಿಯರೊಂದಿಗೆ ಸೇವೆಸಲ್ಲಿಸುತ್ತಾ ಕಳೆದು, ಈಗ ಅಮೆರಿಕಕ್ಕೆ ಬರುವುದು ನಮಗೆ ಸುಲಭದ ವಿಷಯವಾಗಿರಲಿಲ್ಲ. ಹಾಗಿದ್ದರೂ, ನಾವೆಲ್ಲಿರಲು ಇಷ್ಟಪಡುತ್ತೇವೊ ಅದಕ್ಕೆ ಹೆಚ್ಚಿನ ಗಮನವನ್ನು ಕೊಡದೆ, ನಮ್ಮ ಹೊಸ ನೇಮಕದ ಮೇಲೆ ಗಮನವನ್ನು ಕೇಂದ್ರೀಕರಿಸಲು ಮತ್ತು ಅದು ತರುವ ಯಾವುದೇ ಪಂಥಾಹ್ವಾನಗಳನ್ನು ಎದುರಿಸಲು ನಾವು ಪ್ರಯತ್ನಿಸಿದೆವು.

ನಾವು ಬ್ರೂಕ್ಲಿನ್‌ಗೆ ಬಂದು, ಅಲ್ಲಿ ವಾಸಿಸತೊಡಗಿದೆವು. ಜೂಲೀಯನ್ನು, ಡೆನ್ಮಾರ್ಕ್‌ನಲ್ಲಿ ಮಾಡುತ್ತಿದ್ದ ಅದೇ ಕೆಲಸಕ್ಕೆ, ಅಂದರೆ ಅಕೌಂಟ್ಸ್‌ ಆಫೀಸಿಗೆ ನೇಮಿಸಲಾಯಿತು. ನನ್ನನ್ನು, ನಮ್ಮ ಪ್ರಕಾಶನಗಳ ಕಾರ್ಯಗತಿಯ ಶೆಡ್ಯೂಲ್‌ ಅನ್ನು ತಯಾರಿಸುವುದರಲ್ಲಿ ಸಹಾಯಮಾಡಲು, ರೈಟಿಂಗ್‌ ಡಿಪಾರ್ಟ್‌ಮೆಂಟಿಗೆ ನೇಮಿಸಲಾಯಿತು. 1980ರ ಆರಂಭದ ವರುಷಗಳು, ಬ್ರೂಕ್ಲಿನ್‌ನ ಕಾರ್ಯಾಚರಣೆಗಳಲ್ಲಿ ಅನೇಕ ಬದಲಾವಣೆಗಳಾದ ಸಮಯವಾಗಿತ್ತು. ಏಕೆಂದರೆ ಆ ವರುಷಗಳಲ್ಲಿ ನಾವು, ಟೈಪ್‌ರೈಟರ್‌ಗಳ ಉಪಯೋಗದಿಂದ ಮತ್ತು ಬಿಸಿ ಸೀಸದಲ್ಲಿ ಟೈಪ್‌ಸೆಟ್‌ ಮಾಡುವುದರಿಂದ ಕಂಪ್ಯೂಟರ್‌ ಉಪಯೋಗ ಹಾಗೂ ಆಫ್‌ಸೆಟ್‌ ಮುದ್ರಣಕ್ಕೆ ಬದಲಾಯಿಸಿದೆವು. ನನಗೆ ಕಂಪ್ಯೂಟರ್‌ ಬಗ್ಗೆ ಏನೂ ತಿಳಿದಿರಲಿಲ್ಲ, ಆದರೆ ಸಂಘಟನಾ ಕಾರ್ಯವಿಧಾನಗಳ ಮತ್ತು ಜನರೊಂದಿಗೆ ಕೆಲಸಮಾಡುವುದರ ಬಗ್ಗೆ ಸ್ವಲ್ಪ ತಿಳಿವಳಿಕೆಯಿತ್ತು.

ಸ್ವಲ್ಪ ಸಮಯದ ನಂತರ, ಆರ್ಟ್‌ ಡಿಪಾರ್ಟ್‌ಮೆಂಟ್‌ನ ಸಂಘಟನೆಯನ್ನು ಹೆಚ್ಚು ಬಲಪಡಿಸುವ ಅಗತ್ಯ ಎದ್ದುಬಂತು, ಏಕೆಂದರೆ ನಾವೀಗ ಪೂರ್ಣ-ವರ್ಣದ ಆಫ್‌ಸೆಟ್‌ ಮುದ್ರಣವನ್ನು ಮತ್ತು ವರ್ಣಭರಿತ ಚಿತ್ರಗಳ ಹಾಗೂ ಫೋಟೋಗ್ರಾಫ್‌ಗಳ ಉಪಯೋಗವನ್ನು ಆರಂಭಿಸಿದೆವು. ನನಗೆ ಕಲಾಕಾರನೋಪಾದಿ ಅನುಭವವಿರಲಿಲ್ಲವಾದರೂ, ಸಂಘಟನೆಯಲ್ಲಿ ನಾನು ಸಹಾಯಮಾಡಶಕ್ತನಾಗಿದ್ದೆ. ಆದುದರಿಂದ, ಒಂಭತ್ತು ವರುಷಗಳ ವರೆಗೆ ಆ ಡಿಪಾರ್ಟ್‌ಮೆಂಟ್‌ ಅನ್ನು ನೋಡಿಕೊಳ್ಳುವ ಸುಯೋಗವು ನನಗೆ ದೊರಕಿತು.

ಇಸವಿ 1992ರಲ್ಲಿ ನನ್ನನ್ನು, ಆಡಳಿತ ಮಂಡಳಿಯ ಪಬ್ಲಿಷಿಂಗ್‌ ಕಮಿಟಿಯನ್ನು ಬೆಂಬಲಿಸಲು ನೇಮಿಸಿ, ಟ್ರೆಶರರ್‌ ಆಫೀಸ್‌ಗೆ ಸ್ಥಳಾಂತರಿಸಲಾಯಿತು. ಇಲ್ಲಿ ನಾನು ಈಗಲೂ ಯೆಹೋವನ ಸಾಕ್ಷಿಗಳ ಹಣಕಾಸಿನ ಚಟುವಟಿಕೆಗಳ ಸಂಬಂಧದಲ್ಲಿ ಕೆಲಸಮಾಡುತ್ತಾ ಇದ್ದೇನೆ.

ನನ್ನ ಬಾಲ್ಯಾರಭ್ಯ ಸೇವೆಸಲ್ಲಿಸುವುದು

ನನ್ನ ಬಾಲ್ಯಾರಭ್ಯದ ಆರಂಭದಿಂದ ಮತ್ತು 70 ವರುಷಗಳ ಸಮರ್ಪಿತ ಸೇವೆಯ ಸಮಯದಲ್ಲಿ, ಯೆಹೋವನು ನನಗೆ ತನ್ನ ವಾಕ್ಯವಾದ ಬೈಬಲಿನ ಮತ್ತು ತನ್ನ ಅದ್ಭುತಕರವಾದ ಸಂಸ್ಥೆಯಲ್ಲಿರುವ ಸಹಾಯಕಾರಿ ಸಹೋದರರ ಮೂಲಕ ತಾಳ್ಮೆಯಿಂದ ಉಪದೇಶಿಸುತ್ತಾ ಬಂದಿದ್ದಾನೆ. ನಾನು 63ಕ್ಕಿಂತಲೂ ಹೆಚ್ಚು ವರುಷಗಳ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆನಂದಿಸಿದ್ದೇನೆ. ಇದರಲ್ಲಿ, 55 ವರುಷಗಳಿಗಿಂತ ಹೆಚ್ಚನ್ನು ನನ್ನ ನಿಷ್ಠ ಪತ್ನಿಯಾದ ಜೂಲೀಯೊಂದಿಗೆ ಕಳೆದಿದ್ದೇನೆ. ನಿಜವಾಗಿಯೂ, ಯೆಹೋವನಿಂದ ಹೇರಳವಾದ ಆಶೀರ್ವಾದಗಳನ್ನು ಅನುಭವಿಸಿದ್ದೇನೆ.

ಹಿಂದೆ 1940ರಲ್ಲಿ ನಾನು ನನ್ನ ಮನೆಯನ್ನು ಬಿಟ್ಟು ಪಯನೀಯರ್‌ ಸೇವೆಯನ್ನು ಆರಂಭಿಸಿದ ಸಮಯದಲ್ಲಿ, ನನ್ನ ಈ ನಿರ್ಣಯದ ಕುರಿತು ನನ್ನ ತಂದೆಯು ಅಪಹಾಸ್ಯಮಾಡುತ್ತಾ ಅಂದದ್ದು: “ಮಗನೇ, ಈ ಕೆಲಸಕ್ಕಾಗಿ ನೀನು ಈಗ ಮನೆಬಿಟ್ಟು ಹೋಗುತ್ತಿರುವಾಗ, ಕಷ್ಟಬಂದರೆ ಸಹಾಯಕ್ಕಾಗಿ ನನ್ನ ಬಳಿಗೆ ಓಡಿಬರಬಹುದೆಂದು ಮಾತ್ರ ನೆನಸಬೇಡ.” ಈ ಎಲ್ಲಾ ವರುಷಗಳಾದ್ಯಂತ ಹಾಗೆ ಮಾಡುವ ಅಗತ್ಯವೇ ನನಗೆ ಬರಲಿಲ್ಲ. ಯೆಹೋವನು ನನ್ನ ಅಗತ್ಯಗಳನ್ನು ಉದಾರವಾಗಿ ಒದಗಿಸಿದ್ದಾನೆ. ಅನೇಕವೇಳೆ ಸಹಾಯಕಾರಿಯಾದ ಜೊತೆ ಕ್ರೈಸ್ತರ ಮೂಲಕ ಆತನು ಇದನ್ನು ಮಾಡಿದ್ದಾನೆ. ಕಾಲಾನಂತರ, ನಮ್ಮ ಕೆಲಸವನ್ನು ನನ್ನ ತಂದೆಯವರು ಸಹ ಗೌರವಿಸಲು ಆರಂಭಿಸಿದರು. 1972ರಲ್ಲಿ ಅವರು ಮರಣಹೊಂದುವ ಮುಂಚೆ, ಬೈಬಲಿನ ಸತ್ಯಗಳ ಕುರಿತು ಕಲಿಯುವುದರಲ್ಲಿ ಅವರು ಸ್ವಲ್ಪಮಟ್ಟಿಗೆ ಪ್ರಗತಿಯನ್ನು ಸಹ ಮಾಡಿದ್ದರು. ಸ್ವರ್ಗೀಯ ಜೀವಿತದ ನಿರೀಕ್ಷೆಯನ್ನು ಹೊಂದಿದ್ದ ನನ್ನ ತಾಯಿಯು, 1985ರಲ್ಲಿ ತನ್ನ 102ನೇ ವರುಷ ಪ್ರಾಯದಲ್ಲಿ ಮರಣಹೊಂದುವ ತನಕ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿದಳು.

ಪೂರ್ಣ ಸಮಯ ಶುಶ್ರೂಷೆಯಲ್ಲಿ ಸಮಸ್ಯೆಗಳು ಬರುವುದಾದರೂ, ಜೂಲೀ ಮತ್ತು ನಾನು ಒಮ್ಮೆಯೂ ಆ ನೇಮಕವನ್ನು ಬಿಟ್ಟುಬಿಡುವ ಆಲೋಚನೆಯನ್ನು ಸಹ ಮಾಡಲಿಲ್ಲ. ಈ ನಮ್ಮ ನಿರ್ಣಯದಲ್ಲಿ ಯೆಹೋವನು ಯಾವಾಗಲೂ ನಮ್ಮನ್ನು ಪರಾಮರಿಸಿದ್ದಾನೆ. ನನ್ನ ಹೆತ್ತವರು ವೃದ್ಧರಾಗಿ, ಸಹಾಯದ ಅಗತ್ಯವಿದ್ದಾಗಲೂ ನನ್ನ ಅಕ್ಕ ವಿಕ್ಟೋರಿಯ ಮರ್‌ಲಿನ್‌ ಮುಂದೆ ಬಂದಳು ಮತ್ತು ಅವರನ್ನು ದಯೆಯಿಂದ ಆರೈಕೆಮಾಡಿದಳು. ಅವಳ ಪ್ರೀತಿಪರ ಸಹಾಯಕ್ಕಾಗಿ ನಾವವಳಿಗೆ ತುಂಬಾ ಅಭಾರಿಗಳಾಗಿದ್ದೇವೆ, ಏಕೆಂದರೆ ನಾವು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯುವಂತೆ ಇದು ಸಾಧ್ಯಗೊಳಿಸಿತು.

ನಮ್ಮ ಎಲ್ಲಾ ನೇಮಕಗಳಲ್ಲಿ, ಜೂಲೀ ನನ್ನನ್ನು ನಿಷ್ಠೆಯಿಂದ ಬೆಂಬಲಿಸಿದ್ದಾಳೆ. ಈ ಎಲ್ಲಾ ನೇಮಕಗಳನ್ನು ಅವಳು ಯೆಹೋವನಿಗೆ ಮಾಡಿರುವ ತನ್ನ ಸ್ವಂತ ಸಮರ್ಪಣೆಯ ಭಾಗವಾಗಿ ವೀಕ್ಷಿಸಿದ್ದಾಳೆ. ಈಗ ನಾನು 80 ವರುಷ ಪ್ರಾಯದವನಾಗಿ, ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ, ಯೆಹೋವನಿಂದ ನಾವು ಹೇರಳವಾಗಿ ಆಶೀರ್ವದಿಸಲ್ಪಟ್ಟಿದ್ದೇವೆಂಬ ಅನಿಸಿಕೆ ನಮ್ಮಲ್ಲಿದೆ. ನನ್ನ ಬಾಲ್ಯಾರಭ್ಯ ಯೆಹೋವನಿಂದ ಉಪದೇಶಿಸಲ್ಪಟ್ಟಿದ್ದೇನೆ ಎಂಬುದಾಗಿ ಹೇಳಿದ ನಂತರ, ‘ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೂ ಸಾರಿಹೇಳುವೆನು’ ಎಂದು ಬಿನ್ನಹಿಸಿದ ಕೀರ್ತನೆಗಾರನಿಂದ ನಾನು ಬಹಳ ಉತ್ತೇಜನವನ್ನು ಕಂಡುಕೊಳ್ಳುತ್ತೇನೆ.​—ಕೀರ್ತನೆ 71:​17, 18.

[ಪಾದಟಿಪ್ಪಣಿ]

^ ಪ್ಯಾರ. 12 ವಾರೆನ್‌ರವರು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿ ಅನೇಕ ವರುಷಗಳ ವರೆಗೆ ಸೇವೆಸಲ್ಲಿಸಿದ ಸಹೋದರ ಮಿಲ್ಟನ್‌ ಹೆನ್ಶೆಲ್‌ರವರ ಅಣ್ಣ.

[ಪುಟ 20ರಲ್ಲಿರುವ ಚಿತ್ರ]

1940ರಲ್ಲಿ ನಾನು ಪಯನೀಯರ್‌ ಸೇವೆಯನ್ನು ಆರಂಭಿಸಿದಾಗ, ನನ್ನ ತಾಯಿಯೊಂದಿಗೆ

[ಪುಟ 21ರಲ್ಲಿರುವ ಚಿತ್ರ]

ಜೊತೆ ಪಯನೀಯರರಾದ ಜೋ ಮತ್ತು ಮಾರ್ಗರೇಟ್‌ ಹರ್ಟ್‌ರೊಂದಿಗೆ

[ಪುಟ 23ರಲ್ಲಿರುವ ಚಿತ್ರ]

1948ರ ಜನವರಿ ತಿಂಗಳಿನಲ್ಲಿ ನಮ್ಮ ವಿವಾಹದ ದಿನದಂದು

[ಪುಟ 23ರಲ್ಲಿರುವ ಚಿತ್ರ]

1953ರಲ್ಲಿ ಗಿಲ್ಯಡ್‌ ಸಹಪಾಠಿಗಳೊಂದಿಗೆ. ಎಡದಿಂದ ಬಲಕ್ಕೆ: ಡೋನ್‌ ಮತ್ತು ವರ್ಜಿನಿಯ ವರ್ಡ್‌, ಹೇರ್ಟ್ಯೂಡೆ ಸ್ಟೇಹೆನ್‌ಗ, ಜೂಲೀ ಮತ್ತು ನಾನು

[ಪುಟ 23ರಲ್ಲಿರುವ ಚಿತ್ರ]

1961ರಲ್ಲಿ, ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಫ್ರೆಡ್‌ರಿಕ್‌ ಡಬ್ಲ್ಯೂ. ಫ್ರಾನ್ಸ್‌ ಮತ್ತು ನೇತನ್‌ ಏಚ್‌. ನಾರ್‌ರೊಂದಿಗೆ

[ಪುಟ 25ರಲ್ಲಿರುವ ಚಿತ್ರ]

ಇಂದು ಜೂಲೀಯೊಂದಿಗೆ