ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭರವಸಾರ್ಹರು ಯಾರಾದರೂ ಇದ್ದಾರೋ?

ಭರವಸಾರ್ಹರು ಯಾರಾದರೂ ಇದ್ದಾರೋ?

ಭರವಸಾರ್ಹರು ಯಾರಾದರೂ ಇದ್ದಾರೋ?

ಇಸವಿ 1989ರಲ್ಲಿ ಸಂಭವಿಸಿದ ಬರ್ಲಿನ್‌ ಗೋಡೆಯ ಕುಸಿತವನ್ನು ಹಿಂಬಾಲಿಸಿ, ಅನೇಕ ಗುಪ್ತ ವಿಷಯಗಳು ಬೆಳಕಿಗೆ ಬಂದವು. ಉದಾಹರಣೆಗೆ ಲಿಡೀಯ * ಎಂಬವಳಿಗೆ, ಪೂರ್ವ ಜರ್ಮನಿಯ ಸಮಾಜವಾದಿ ಆಳ್ವಿಕೆಯ ಸಮಯದಲ್ಲಿ ಸ್ಟ್ಯಾಝಿ ಅಥವಾ ಸರಕಾರದ ಭದ್ರತಾ ಸೇವೆಯು ತನ್ನ ಖಾಸಗಿ ಚಟುವಟಿಕೆಗಳ ಬಗ್ಗೆ ಒಂದು ಫೈಲ್‌ ಅನ್ನು ತಯಾರಿಸಿದೆ ಎಂದು ತಿಳಿದುಬಂತು. ಈ ಫೈಲ್‌ನ ಕುರಿತು ತಿಳಿದೊಡನೆ ಲಿಡೀಯ ಆಶ್ಚರ್ಯಗೊಂಡಳು, ಆದರೆ ಅದಕ್ಕೆ ಬೇಕಾದ ಮಾಹಿತಿಯನ್ನು ಸ್ಟ್ಯಾಝಿಗೆ ಯಾರು ಒದಗಿಸಿದರೆಂಬುದನ್ನು ತಿಳಿದಾಗ ಆಕೆಯು ದಿಗ್ಭ್ರಮೆಗೊಂಡಳು. ಏಕೆಂದರೆ ಸ್ಟ್ಯಾಝಿಗೆ ಮಾಹಿತಿಯನ್ನು ಒದಗಿಸಿದ್ದು ಬೇರೆ ಯಾರೂ ಅಲ್ಲ, ಆಕೆಯ ಗಂಡನೇ ಆಗಿದ್ದನು. ಯಾರಲ್ಲಿ ಆಕೆ ಸಂಪೂರ್ಣ ಭರವಸೆಯನ್ನು ಇಡಸಾಧ್ಯವಿತ್ತೋ ಅವನೇ ಅವಳಿಗೆ ವಿಶ್ವಾಸಘಾತ ಮಾಡಿದ್ದನು.

ರಾಬರ್ಟ್‌ ಎಂಬವರು ತಮ್ಮ ಸ್ಥಳಿಕ ವೈದ್ಯರ ವಿಷಯದಲ್ಲಿ “ಅತ್ಯಂತ ಹೆಚ್ಚಿನ ಗೌರವ, ಮೆಚ್ಚುಗೆ ಮತ್ತು ಭರವಸೆಯನ್ನು” ಇಟ್ಟಿದ್ದ ಒಬ್ಬ ವಯಸ್ಸಾದ ಮಹಾಶಯರಾಗಿದ್ದರು ಎಂದು ಲಂಡನಿನ ದ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಆ ವೈದ್ಯರು “ದಯಾಪರರೂ ಸಹಾನುಭೂತಿಯುಳ್ಳವರೂ” ಆಗಿದ್ದರು ಎಂದು ಹೇಳಲಾಗಿತ್ತು. ಆದರೆ ರಾಬರ್ಟ್‌ರವರು ಅನಿರೀಕ್ಷಿತವಾಗಿ ತೀರಿಕೊಂಡರು. ಅದೊಂದು ಹೃದಯಾಘಾತ ಅಥವಾ ಲಕ್ವಹೊಡೆತವಾಗಿತ್ತೋ? ಇಲ್ಲ. ಅಧಿಕಾರಿಗಳು ತಿಳಿಸಿದ್ದೇನೆಂದರೆ, ಆ ವೈದ್ಯರು ರಾಬರ್ಟ್‌ರವರ ಮನೆಗೆ ಭೇಟಿನೀಡಿ, ರಾಬರ್ಟ್‌ ಹಾಗೂ ಅವರ ಕುಟುಂಬದವರಿಗೆ ತಿಳಿಯದಂತೆ ಅವರಿಗೆ ಒಂದು ಮಾರಕ ಚುಚ್ಚುಮದ್ದನ್ನು ನೀಡಿದ್ದರು. ರಾಬರ್ಟ್‌ರವರು ಯಾರಲ್ಲಿ ಭರವಸೆಯಿಟ್ಟಿದ್ದರೋ ಆ ವ್ಯಕ್ತಿಯಿಂದಲೇ ಕೊಲ್ಲಲ್ಪಟ್ಟರು.

ಲಿಡೀಯ ಮತ್ತು ರಾಬರ್ಟ್‌, ಇವರಿಬ್ಬರ ಭರವಸೆಯೂ ಮುರಿಯಲ್ಪಟ್ಟು, ಅವರು ಗಂಭೀರವಾದ ಪರಿಣಾಮಗಳನ್ನು ಅನುಭವಿಸಿದರು. ಇತರ ಘಟನೆಗಳಲ್ಲಿ ಪರಿಣಾಮಗಳು ಇಷ್ಟೊಂದು ಗಂಭೀರವಾಗಿರುವುದಿಲ್ಲ. ಹಾಗಿದ್ದರೂ, ನಾವು ಭರವಸೆಯಿಟ್ಟಿರುವ ವ್ಯಕ್ತಿಯೇ ವಿಶ್ವಾಸಘಾತಮಾಡುವುದು ಒಂದು ಅಪರೂಪದ ಅನುಭವವೇನಲ್ಲ. ಜರ್ಮನಿಯ ಪ್ರಸಿದ್ಧ ಮತಎಣಿಕೆ ಸಂಸ್ಥೆಯಿಂದ ಪ್ರಕಾಶಿಸಲಾದ 1998-2002 ಆ್ಯಲ್ಲೆಂಸ್‌ಬಾಕರ್‌ ಯಾರ್‌ಬುಕ್‌ ಡೀರ್‌ ಡೆಮೋಸ್‌ಕೋಪೀ ಎಂಬ ವರದಿಯು ಬಯಲುಪಡಿಸಿದ್ದೇನೆಂದರೆ, ಅದರ ಒಂದು ಸಮೀಕ್ಷೆಗೆ ಪ್ರತಿಸ್ಪಂದಿಸಿದವರಲ್ಲಿ 86 ಪ್ರತಿಶತ ಜನರು ತಾವು ಯಾರಲ್ಲಿ ಭರವಸೆಯಿಟ್ಟಿದ್ದರೋ ಆ ವ್ಯಕ್ತಿಯಿಂದಲೇ ವಿಶ್ವಾಸಘಾತಕ್ಕೊಳಗಾಗಿದ್ದರು. ಬಹುಶಃ ನಿಮಗೂ ಅಂಥ ಅನುಭವವಾಗಿರಬಹುದು. ಆದುದರಿಂದ, “ಪಾಶ್ಚಾತ್ಯ ಕೈಗಾರಿಕಾ ದೇಶಗಳಲ್ಲಿ ಪರಸ್ಪರ ಭರವಸೆಯ ಮೇಲಾಧರಿತ ಸಂಬಂಧಗಳು ದಶಕಗಳಿಂದ ಇಳಿಮುಖವಾಗುತ್ತಾ ಇವೆ” ಎಂದು ಸ್ವಿಸ್‌ನ, ನೋಯ್‌ ಜೂರ್ಕ್‌ಅರ್‌ ಸಯ್‌ಟನ್‌ ಎಂಬ ವಾರ್ತಾಪತ್ರಿಕೆಯು 2002ರಲ್ಲಿ ಮಾಡಿದ ವರದಿಯಿಂದ ನಾವು ಆಶ್ಚರ್ಯಪಡಬೇಕಾಗಿಲ್ಲ.

ನಿಧಾನವಾಗಿ ಬೆಳೆಯುತ್ತದೆ, ಕ್ಷಣಮಾತ್ರದಲ್ಲಿ ಧ್ವಂಸವಾಗುತ್ತದೆ

ಭರವಸೆ ಎಂದರೇನು? ಒಂದು ನಿಘಂಟಿಗನುಸಾರ, ಇತರರ ಮೇಲೆ ಭರವಸೆ ಇಡುವುದು ಎಂದರೆ ಅವರು ಪ್ರಾಮಾಣಿಕರೂ ಯಥಾರ್ಥವಂತರೂ ಮತ್ತು ನಮಗೆ ನೋಯಿಸುವಂಥ ಯಾವುದೇ ಕೃತ್ಯವನ್ನು ಬೇಕುಬೇಕೆಂದೇ ಮಾಡಲಾರು ಎಂದು ನಂಬುವುದೇ ಆಗಿದೆ. ಭರವಸೆಯು ನಿಧಾನವಾಗಿ ಬೆಳೆಯುತ್ತದೆ, ಆದರೆ ಅದನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಸಾಧ್ಯವಿದೆ. ತಾವಿಟ್ಟಿರುವ ಭರವಸೆಯನ್ನು ದುರುಪಯೋಗಿಸಲಾಗುತ್ತಿದೆ ಎಂದು ಬಹಳಷ್ಟು ಮಂದಿ ಗ್ರಹಿಸಿರುವ ಈ ಸಮಯದಲ್ಲಿ ಜನರು ಇತರರ ಮೇಲೆ ಭರವಸೆಯನ್ನಿಡಲು ಹಿಂಜರಿಯುವುದಾದರೆ ಅದರಲ್ಲಿ ಆಶ್ಚರ್ಯಪಡುವಂಥದ್ದೇನಿದೆ? 2002ರಲ್ಲಿ ಜರ್ಮನಿಯಲ್ಲಿ ಪ್ರಕಾಶಿಸಲಾದ ಒಂದು ಸಮೀಕ್ಷೆಗನುಸಾರ, “ಮೂರು ಮಂದಿ ಯುವ ಜನರಲ್ಲಿ ಒಬ್ಬರಿಗಿಂತಲೂ ಕಡಿಮೆ ಮಂದಿಗೆ ಇತರರಲ್ಲಿ ದೃಢ ಭರವಸೆಯಿದೆ.”

ನಾವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ನಾವು ಯಾರಲ್ಲಿಯಾದರೂ ನಿಜವಾಗಿಯೂ ಭರವಸೆ ಇಡಸಾಧ್ಯವಿದೆಯೋ? ಕೈಬಿಡಲ್ಪಡುವ ಅಪಾಯವಿದ್ದರೂ ಒಬ್ಬರ ಮೇಲೆ ಭರವಸೆಯಿಡುವುದು ಸಾರ್ಥಕವೊ?’

[ಪಾದಟಿಪ್ಪಣಿ]

^ ಪ್ಯಾರ. 2 ಹೆಸರುಗಳು ಬದಲಾಯಿಸಲ್ಪಟ್ಟಿವೆ.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಂದು ವರದಿಯು ಬಯಲುಪಡಿಸಿದ್ದೇನೆಂದರೆ, ಅದರ ಒಂದು ಸಮೀಕ್ಷೆಗೆ ಪ್ರತಿಸ್ಪಂದಿಸಿದವರಲ್ಲಿ 86 ಪ್ರತಿಶತ ಜನರು ತಾವು ಯಾರಲ್ಲಿ ಭರವಸೆಯಿಟ್ಟಿದ್ದರೋ ಆ ವ್ಯಕ್ತಿಯಿಂದಲೇ ವಿಶ್ವಾಸಘಾತಕ್ಕೊಳಗಾಗಿದ್ದರು