ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಎಲೀಯನ ಆತ್ಮದಲ್ಲಿ “ಎರಡು ಪಾಲನ್ನು” ಅನುಗ್ರಹಿಸುವಂತೆ ಎಲೀಷನು ಏಕೆ ಕೇಳಿಕೊಂಡನು?

ಎಲೀಯನು ಇಸ್ರಾಯೇಲಿನಲ್ಲಿ ಪ್ರವಾದಿಯೋಪಾದಿ ತನ್ನ ನೇಮಕವನ್ನು ಪೂರ್ಣಗೊಳಿಸುವುದಕ್ಕೆ ತುಸು ಮುಂಚೆ, ಅವನಿಗಿಂತ ಕಿರಿಯ ಪ್ರವಾದಿಯಾಗಿದ್ದ ಎಲೀಷನು “ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು” ಎಂದು ಅವನ ಬಳಿ ಬೇಡಿಕೊಂಡನು. (2 ಅರಸುಗಳು 2:9) ಆತ್ಮಿಕ ರೀತಿಯಲ್ಲಿ ಹೇಳುವುದಾದರೆ, ಚೊಚ್ಚಲಮಗನಿಗೆ ಹೇಗೆ ಎರಡು ಭಾಗಗಳು ಕೊಡಲ್ಪಡುತ್ತಿದ್ದವೋ ಹಾಗೆಯೇ ತನಗೂ ಕೊಡಬೇಕೆಂದು ಎಲೀಷನು ಕೇಳಿಕೊಳ್ಳುತ್ತಿದ್ದನು ಎಂಬುದು ಸುವ್ಯಕ್ತ. (ಧರ್ಮೋಪದೇಶಕಾಂಡ 21:17) ಆ ವೃತ್ತಾಂತದ ಸಂಕ್ಷಿಪ್ತ ಪರಿಗಣನೆಯು ಇದನ್ನು ಸ್ಪಷ್ಟಪಡಿಸುವುದು ಮತ್ತು ಅಲ್ಲಿ ಏನು ಸಂಭವಿಸಿತೋ ಅದರಿಂದ ಪಾಠಗಳನ್ನು ಕಲಿತುಕೊಳ್ಳುವಂತೆ ನಮಗೆ ಸಹಾಯಮಾಡುವುದು.

ಪ್ರವಾದಿಯಾದ ಎಲೀಯನು ಯೆಹೋವನ ನಿರ್ದೇಶನಕ್ಕನುಸಾರ ಎಲೀಷನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಅಭಿಷೇಕಿಸಿದ್ದನು. (1 ಅರಸುಗಳು 19:​19-21) ಎಲೀಷನು ಸುಮಾರು ಆರು ವರ್ಷಗಳ ವರೆಗೆ ಎಲೀಯನ ನಂಬಿಗಸ್ತ ಸೇವಕನಾಗಿ ಕೆಲಸಮಾಡಿದ್ದನು ಮತ್ತು ಕಡೇ ವರೆಗೂ ಹೀಗೆಯೇ ಮುಂದುವರಿಯಲು ನಿರ್ಧರಿಸಿದ್ದನು. ಇಸ್ರಾಯೇಲಿನಲ್ಲಿ ಪ್ರವಾದಿಯೋಪಾದಿ ಎಲೀಯನು ಕಳೆಯಲಿದ್ದ ಕೊನೆಯ ದಿನದಂದು ಸಹ ಎಲೀಷನು ತನ್ನ ಆಪ್ತ ಸಲಹೆಗಾರನಿಗೆ ಬಲವಾಗಿ ಅಂಟಿಕೊಂಡಿದ್ದನು. ತನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸು ಎಂದು ಎಲೀಯನು ಎಲೀಷನಿಗೆ ಎಷ್ಟೇ ಹೇಳಿದರೂ, ಈ ಕಿರಿಯ ಪ್ರವಾದಿಯು ಮೂರು ಬಾರಿ ಹೇಳಿದ್ದು: “ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ.” (2 ಅರಸುಗಳು 2:2, 4, 6; 3:11) ವಾಸ್ತವದಲ್ಲಿ, ಎಲೀಷನು ಆ ಹಿರಿಯ ಪ್ರವಾದಿಯನ್ನು ತನ್ನ ಆತ್ಮಿಕ ತಂದೆಯಾಗಿ ಪರಿಗಣಿಸುತ್ತಿದ್ದನು.​—2 ಅರಸುಗಳು 2:12.

ಆದರೆ ಕೇವಲ ಎಲೀಷನು ಮಾತ್ರ ಎಲೀಯನ ಆತ್ಮಿಕ ಪುತ್ರನಾಗಿರಲಿಲ್ಲ. “ಪ್ರವಾದಿಮಂಡಲಿಯವರು [“ಪ್ರವಾದಿಗಳ ಪುತ್ರರು,” NW]” ಎಂದು ಪ್ರಸಿದ್ಧರಾಗಿದ್ದ ಒಂದು ಗುಂಪಿನೊಂದಿಗೆ ಎಲೀಯ ಹಾಗೂ ಎಲೀಷರನ್ನು ಜೊತೆಗೂಡಿಸಲಾಗಿದೆ. (2 ಅರಸುಗಳು 2:3) ಎರಡನೆಯ ಅರಸುಗಳು ಪುಸ್ತಕದಲ್ಲಿರುವ ವೃತ್ತಾಂತವು, ಈ “ಪುತ್ರರು” ಸಹ ತಮ್ಮ ಆತ್ಮಿಕ ತಂದೆಯಾಗಿದ್ದ ಎಲೀಯನೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ. (2 ಅರಸುಗಳು 2:​3, 5, 7, 15-17) ಆದರೂ, ಎಲೀಯನ ಆತ್ಮಿಕ ಪುತ್ರರಲ್ಲಿ ಅಭಿಷಿಕ್ತ ಉತ್ತರಾಧಿಕಾರಿಯಾಗಿದ್ದ ಎಲೀಷನು ಅಗ್ರಗಣ್ಯನಾಗಿದ್ದನು ಅಂದರೆ ಅವನು ಚೊಚ್ಚಲಮಗನಂತಿದ್ದನು. ಪುರಾತನ ಇಸ್ರಾಯೇಲ್‌ನಲ್ಲಿ, ಅಕ್ಷರಾರ್ಥವಾಗಿ ಚೊಚ್ಚಲಮಗನಾಗಿದ್ದವನಿಗೆ ಅವನ ತಂದೆಯ ಆಸ್ತಿಯಲ್ಲಿ ಎರಡು ಪಾಲು ಕೊಡಲ್ಪಡುತ್ತಿತ್ತು, ಆದರೆ ಇತರ ಪುತ್ರರಿಗೆ ಒಂದೇ ಒಂದು ಪಾಲು ಸಿಗುತ್ತಿತ್ತು. ಆದುದರಿಂದ, ಎಲೀಯನ ಆತ್ಮಿಕ ಆಸ್ತಿಯ ಎರಡು ಪಾಲನ್ನು ಎಲೀಷನು ಕೇಳಿಕೊಂಡಿದ್ದನು.

ಆ ನಿರ್ದಿಷ್ಟ ಸಮಯದಲ್ಲಿ ಎಲೀಷನು ಈ ವಿನಂತಿಯನ್ನು ಏಕೆ ಮಾಡಿದನು? ಏಕೆಂದರೆ ಅವನು ಒಂದು ಜವಾಬ್ದಾರಿಯುತ ಕೆಲಸವನ್ನು ತನ್ನ ಮೇಲೆ ತೆಗೆದುಕೊಳ್ಳಲಿದ್ದನು; ಅಂದರೆ ಎಲೀಯನ ಬಳಿಕ ಇಸ್ರಾಯೇಲಿನಲ್ಲಿ ಪ್ರವಾದಿಯಾಗಿ ನೇಮಕಹೊಂದಿದ್ದನು. ತುಂಬ ಕಷ್ಟಕರವಾಗಿದ್ದ ಈ ನೇಮಕಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಪೂರೈಸಬೇಕಾದರೆ, ತನ್ನ ಸ್ವಂತ ಸಾಮರ್ಥ್ಯಗಳಿಗೆ ಮೀರಿದ ಆತ್ಮಿಕ ಬಲ ಅಂದರೆ ಯೆಹೋವನು ಮಾತ್ರವೇ ಒದಗಿಸಸಾಧ್ಯವಿರುವ ಬಲದ ಆವಶ್ಯಕತೆ ತನಗಿದೆ ಎಂಬುದನ್ನು ಎಲೀಷನು ಮನಗಂಡನು. ಅವನು ಎಲೀಯನಂತೆಯೇ ನಿರ್ಭೀತನಾಗಿರುವ ಆವಶ್ಯಕತೆಯಿತ್ತು. (2 ಅರಸುಗಳು 1:3, 4, 15, 16) ಈ ಕಾರಣಕ್ಕಾಗಿ ಅವನು ಎಲೀಯನ ಆತ್ಮದಲ್ಲಿ ಎರಡು ಪಾಲನ್ನು ಕೇಳಿಕೊಂಡನು. ಇದು ಧೈರ್ಯ ಹಾಗೂ ‘ಯೆಹೋವನಿಗಾಗಿ ಸಂಪೂರ್ಣವಾದ ಈರ್ಷ್ಯೆ’ಯುಳ್ಳ ಆತ್ಮ ಆಗಿದ್ದು, ಈ ಅಪೇಕ್ಷಿತ ಗುಣಗಳು ದೇವರಾತ್ಮದಿಂದ ಉಂಟುಮಾಡಲ್ಪಡುತ್ತವೆ. (1 ಅರಸುಗಳು 19:​10, 14, NW) ಇದಕ್ಕೆ ಎಲೀಯನು ಹೇಗೆ ಪ್ರತಿಕ್ರಿಯಿಸಿದನು?

ಕೊಡಲು ತನಗೆ ಹಕ್ಕಿಲ್ಲದಿರುವ ಆದರೆ ಕೇವಲ ದೇವರಿಗೆ ಹಕ್ಕಿರುವಂಥ ಒಂದು ವಿಷಯಕ್ಕಾಗಿ ಎಲೀಷನು ವಿನಂತಿಸಿಕೊಂಡಿದ್ದಾನೆ ಎಂಬುದು ಎಲೀಯನಿಗೆ ಗೊತ್ತಿತ್ತು. ಆದುದರಿಂದ ಎಲೀಯನು ವಿನಯಭಾವದಿಂದ ಉತ್ತರಿಸಿದ್ದು: “ನೀನು ದುರ್ಲಭವಾದದ್ದನ್ನು ಕೇಳಿಕೊಂಡಿ; ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವದಾದರೆ ಅದು ದೊರಕುವದು.” (2 ಅರಸುಗಳು 2:10) ಮತ್ತು ನಿಜವಾಗಿಯೂ ಎಲೀಯನು ಸುಳಿಗಾಳಿಯ ಮುಖಾಂತರ ಏರಿಹೋಗುವುದನ್ನು ಎಲೀಷನು ನೋಡುವಂತೆ ಯೆಹೋವನು ಮಾಡಿದನು. (2 ಅರಸುಗಳು 2:​11, 12) ಎಲೀಷನ ವಿನಂತಿಯು ಪೂರೈಸಲ್ಪಟ್ಟಿತು. ತನ್ನ ಹೊಸ ಕೆಲಸವನ್ನು ಆರಂಭಿಸಲು ಮತ್ತು ಬರಲಿರುವ ಪರೀಕ್ಷೆಗಳನ್ನು ಎದುರಿಸಲು ಎಲೀಷನಿಗೆ ಅಗತ್ಯವಾಗಿದ್ದ ಆತ್ಮವನ್ನು ಯೆಹೋವನು ಅವನಿಗೆ ಒದಗಿಸಿದನು.

ಇಂದು ಅಭಿಷಿಕ್ತ ಕ್ರೈಸ್ತರು (ಕೆಲವೊಮ್ಮೆ ಇವರನ್ನು ಎಲೀಷ ವರ್ಗ ಎಂದು ಕರೆಯಲಾಗಿದೆ) ಮತ್ತು ದೇವರ ಎಲ್ಲಾ ಸೇವಕರು ಈ ಬೈಬಲ್‌ ವೃತ್ತಾಂತದಿಂದ ಅತ್ಯಧಿಕ ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿದೆ. ಕೆಲವೊಮ್ಮೆ, ಒಂದು ಹೊಸ ನೇಮಕವು ನಮಗೆ ಕೊಡಲ್ಪಡುವಾಗ ನಾವು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಹುದು ಇಲ್ಲವೆ ನಾವು ಇದಕ್ಕೆ ಅರ್ಹರಲ್ಲ ಎಂದು ಭಾವಿಸಬಹುದು, ಅಥವಾ ನಮ್ಮ ಟೆರಿಟೊರಿಯಲ್ಲಿ ನಾವು ಹೆಚ್ಚಾದ ತಾತ್ಸಾರ ಮನೋಭಾವವನ್ನು ಇಲ್ಲವೆ ವಿರೋಧವನ್ನು ಎದುರಿಸುವಾಗ ನಮ್ಮ ರಾಜ್ಯ ಸಾರುವಿಕೆಯ ಕೆಲಸವನ್ನು ಮುಂದುವರಿಸಲಿಕ್ಕಾಗಿರುವ ನಮ್ಮ ಧೈರ್ಯವನ್ನು ಕಳೆದುಕೊಳ್ಳುತ್ತಿರಬಹುದು. ಆದರೂ, ನಾವು ಯೆಹೋವನ ಬೆಂಬಲಕ್ಕಾಗಿ ಬೇಡಿಕೊಳ್ಳುವಲ್ಲಿ, ಪಂಥಾಹ್ವಾನಗಳೊಂದಿಗೆ ಮತ್ತು ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ ಹೋರಾಡಲು ನಮಗೆ ಬೇಕಾಗಿರುವ ಪವಿತ್ರಾತ್ಮವನ್ನು ಆತನು ನಮಗೆ ದಯಪಾಲಿಸುವನು. (ಲೂಕ 11:13; 2 ಕೊರಿಂಥ 4:7; ಫಿಲಿಪ್ಪಿ 4:13) ಹೌದು, ಹೆಚ್ಚು ಗಂಭೀರವಾದ ಜವಾಬ್ದಾರಿಗಳನ್ನು ನಿಭಾಯಿಸಲಿಕ್ಕಾಗಿ ಯೆಹೋವನು ಎಲೀಷನನ್ನು ಬಲಪಡಿಸಿದಂತೆಯೇ, ನಮ್ಮ ಶುಶ್ರೂಷೆಯನ್ನು ಪೂರೈಸಲಿಕ್ಕಾಗಿ ಆಬಾಲವೃದ್ಧರಾದ ನಮಗೆಲ್ಲರಿಗೂ ಆತನು ಸಹಾಯಮಾಡುವನು.​—2 ತಿಮೊಥೆಯ 4:5.