ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂದು ಮತ್ತು ಇಂದು ಬೈಬಲ್‌ ಮೂಲತತ್ತ್ವಗಳು ಬದಲಾವಣೆಯನ್ನು ತಂದವು

ಅಂದು ಮತ್ತು ಇಂದು ಬೈಬಲ್‌ ಮೂಲತತ್ತ್ವಗಳು ಬದಲಾವಣೆಯನ್ನು ತಂದವು

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

ಅಂದು ಮತ್ತು ಇಂದು ಬೈಬಲ್‌ ಮೂಲತತ್ತ್ವಗಳು ಬದಲಾವಣೆಯನ್ನು ತಂದವು

ಯೌವನದಲ್ಲಿ, ಏಡ್ರೀಯನ್‌ ತುಂಬ ಸಿಡುಕು ಹಾಗೂ ಕೋಪಿಷ್ಠ ಸ್ವಭಾವದವನಾಗಿದ್ದನು. ಅವನ ಮುಂಗೋಪವು, ಹಿಂಸಾತ್ಮಕ ಕೃತ್ಯಗಳಿಗೆ ನಡಿಸಿತು. ಅವನು ಕುಡಿಯುತ್ತಿದ್ದನು, ಧೂಮಪಾನಮಾಡುತ್ತಿದ್ದನು, ಮತ್ತು ಅನೈತಿಕ ಜೀವನವನ್ನು ನಡಿಸುತ್ತಿದ್ದನು. ಏಡ್ರೀಯನ್‌, ಒಬ್ಬ ‘ಪಂಕ್‌’ ಎಂದು ಹೆಸರುವಾಸಿಯಾಗಿದ್ದನು ಮತ್ತು ಅರಾಜಕತೆಯಲ್ಲಿನ ಅವನ ನಂಬಿಕೆಯನ್ನು ವ್ಯಕ್ತಪಡಿಸುತ್ತಿದ್ದ ಒಂದು ಹಚ್ಚೆಯನ್ನು ಸಹ ಹಾಕಿಸಿಕೊಂಡಿದ್ದನು. ಆ ವರುಷಗಳ ಕುರಿತು ವರ್ಣಿಸುತ್ತಾ ಅವನು ಹೇಳುವುದು: “ಸಾಮಾನ್ಯವಾಗಿದ್ದ ‘ಪಂಕ್‌’ ಸ್ಟೈಲ್‌ನಲ್ಲಿ ನನ್ನ ಕೂದಲನ್ನು ಕತ್ತರಿಸಿಕೊಂಡು, ಅದು ನೆಟ್ಟಗೆ ನಿಲ್ಲುವಂತೆ ಅದಕ್ಕೆ ಅಂಟು ಬಳಿಯುತ್ತಿದ್ದೆ, ಮತ್ತು ಕೆಲವೊಮ್ಮೆ ಅದಕ್ಕೆ ಕೆಂಪು ಅಥವಾ ಬೇರಾವುದೊ ಬಣ್ಣವನ್ನು ಹಚ್ಚುತ್ತಿದ್ದೆ.” ಏಡ್ರೀಯನ್‌ ತನ್ನ ಮೂಗನ್ನು ಸಹ ಚುಚ್ಚಿಸಿಕೊಂಡಿದ್ದನು.

ಏಡ್ರೀಯನ್‌ ಇತರ ಕೆಲವು ದಂಗೆಕೋರ ಯುವಕರೊಂದಿಗೆ ಒಂದು ಹಾಳುಬಿದ್ದ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲಿ ಅವರು ಅಮಲೌಷಧ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುತ್ತಿದ್ದರು. “ನಾನು ಸ್ಪೀಡ್‌ ಎಂಬಂಥ ಮಾದಕ ಪದಾರ್ಥವನ್ನು ಸೇವಿಸಿದೆ ಮತ್ತು ಅದೇ ಸಮಯದಲ್ಲಿ ವ್ಯಾಲ್ಯಂ ಹಾಗೂ ಕೈಗೆ ಸಿಗುತ್ತಿದ್ದ ಇನ್ನಿತರ ಯಾವುದೇ ಮಾದಕ ಪದಾರ್ಥವನ್ನು ನನ್ನ ದೇಹಕ್ಕೆ ಚುಚ್ಚಿಕೊಳ್ಳುತ್ತಿದ್ದೆ” ಎಂಬುದಾಗಿ ಏಡ್ರೀಯನ್‌ ನೆನಪಿಸಿಕೊಳ್ಳುತ್ತಾನೆ. “ಮಾದಕ ಪದಾರ್ಥಗಳು ಅಥವಾ ಅಂಟು ದೊರಕದಿದ್ದಾಗ, ನಾನು ಜನರ ಕಾರುಗಳಿಂದ ಗ್ಯಾಸಲೀನ್‌ ಅನ್ನು ತೆಗೆದು, ಅದನ್ನು ಸೇವಿಸಿ ಮತ್ತೇರಿದವನಾಗುತ್ತಿದ್ದೆ.” ಬೀದಿ ಪಾತಕದ ಜೀವನವನ್ನು ನಡಿಸಿ, ಏಡ್ರೀಯನ್‌ ಭಯಂಕರ ಹಾಗೂ ಅತಿ ಹಿಂಸಾತ್ಮಕ ಸ್ವಭಾವದವನಾದ. ಸಾಮಾನ್ಯ ಜನರು ಅವನೊಂದಿಗೆ ಯಾವುದೇ ಸಂಬಂಧವನ್ನಿಡಲು ಬಯಸುತ್ತಿರಲಿಲ್ಲ. ಅದೇ ಸಮಯದಲ್ಲಿ, ಅವನ ಕುಖ್ಯಾತಿಯಿಂದಾಗಿ ಕೆಟ್ಟ ಸಂಗಾತಿಗಳು ಅವನ ಕಡೆಗೆ ಸೆಳೆಯಲ್ಪಟ್ಟರು.

ಕ್ರಮೇಣ, ತನ್ನ “ಸ್ನೇಹಿತರು” ಸ್ವಾರ್ಥ ಪ್ರಯೋಜನಕ್ಕಾಗಿ ಮಾತ್ರ ತನ್ನೊಂದಿಗೆ ಸಹವಾಸಿಸುತ್ತಾರೆಂದು ಏಡ್ರೀಯನ್‌ಗೆ ತಿಳಿದುಬಂತು. ಅಷ್ಟುಮಾತ್ರವಲ್ಲದೆ, “ಎಲ್ಲಾ ಕೋಪ ಮತ್ತು ಹಿಂಸಾಚಾರದಿಂದಾಗಿ ತಾನು ಏನೂ ಸಾಧಿಸಲಿಲ್ಲ” ಎಂಬುದನ್ನು ಸಹ ಅವನು ತಿಳಿದುಕೊಂಡನು. ಶೂನ್ಯಭಾವ ಮತ್ತು ಆಶಾಭಂಗದ ಅನಿಸಿಕೆಯಿಂದಾಗಿ ಅವನು ತನ್ನ ಸಹವಾಸಿಗಳನ್ನು ಬಿಟ್ಟುಬಿಟ್ಟನು. ಒಂದು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅವನಿಗೆ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯು ದೊರಕಿತು. ಅವನು ಅದರಲ್ಲಿದ್ದ ಬೈಬಲ್‌ ಆಧಾರಿತ ಸಂದೇಶದಿಂದ ಆಕರ್ಷಿತನಾದನು ಮತ್ತು ಇದು ಯೆಹೋವನ ಸಾಕ್ಷಿಗಳೊಂದಿಗೆ ಒಂದು ಬೈಬಲ್‌ ಅಧ್ಯಯನಕ್ಕೆ ನಡೆಸಿತು. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ ಆಮಂತ್ರಣಕ್ಕೆ ಏಡ್ರೀಯನ್‌ ಉತ್ಸುಕತೆಯಿಂದ ಪ್ರತಿಕ್ರಿಯಿಸಿದನು. (ಯಾಕೋಬ 4:8) ಇದರ ಪರಿಣಾಮವಾಗಿ, ಪವಿತ್ರ ಶಾಸ್ತ್ರಗಳಲ್ಲಿ ಕಂಡುಬರುವ ಮೂಲತತ್ತ್ವಗಳನ್ನು ತನ್ನ ಜೀವನದಲ್ಲಿ ಅನ್ವಯಿಸುವ ಅಗತ್ಯವನ್ನು ಏಡ್ರೀಯನ್‌ ಬೇಗನೆ ಗ್ರಹಿಸಿದನು.

ಬೈಬಲಿನ ಬಗ್ಗೆ ಹೆಚ್ಚುತ್ತಾ ಹೋದ ಜ್ಞಾನವು, ಏಡ್ರೀಯನ್‌ನ ಮನಸ್ಸಾಕ್ಷಿಯ ಮೇಲೆ ಉತ್ತಮ ಪರಿಣಾಮವನ್ನು ಬೀರಿ, ಅವನ ಜೀವನರೀತಿಯನ್ನು ಬದಲಾಯಿಸಿತು. ಅವನು ತನ್ನ ಮುಂಗೋಪವನ್ನು ತಡೆಹಿಡಿಯುವಂತೆ ಮತ್ತು ಆತ್ಮನಿಯಂತ್ರಣವನ್ನು ಬೆಳೆಸಿಕೊಳ್ಳುವಂತೆ ಅವನಿಗೆ ಸಹಾಯವು ನೀಡಲ್ಪಟ್ಟಿತು. ದೇವರ ವಾಕ್ಯದ ಶಕ್ತಿಯ ಕಾರಣ ಏಡ್ರೀಯನ್‌ನ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಯೇ ಆಯಿತು.​—ಇಬ್ರಿಯ 4:12.

ಆದರೆ, ಬೈಬಲ್‌ ಅಷ್ಟು ಶಕ್ತಿಶಾಲಿ ಪ್ರಭಾವವನ್ನು ಬೀರಶಕ್ತವಾದದ್ದಾದರೂ ಹೇಗೆ? ಶಾಸ್ತ್ರವಚನಗಳ ಜ್ಞಾನವು ‘ನೂತನಸ್ವಭಾವವನ್ನು ಧರಿಸಿಕೊಳ್ಳಲು’ ನಮಗೆ ಸಹಾಯಮಾಡುತ್ತದೆ. (ಎಫೆಸ 4:23) ಹೌದು, ಬೈಬಲಿನಲ್ಲಿ ಕಂಡುಬರುವ ನಿಷ್ಕೃಷ್ಟವಾದ ಜ್ಞಾನವನ್ನು ಅನ್ವಯಿಸಿಕೊಳ್ಳುವ ಮೂಲಕವೇ ನಮ್ಮ ವ್ಯಕ್ತಿತ್ವವು ಬದಲಾಗುತ್ತದೆ. ಆದರೆ ಅಂಥ ಜ್ಞಾನವು ಜನರನ್ನು ಬದಲಾಯಿಸುವುದಾದರೂ ಹೇಗೆ?

ಮೊದಲನೆಯದಾಗಿ, ತೆಗೆದುಹಾಕಬೇಕಾದ ಅನಪೇಕ್ಷಣೀಯ ಗುಣಗಳನ್ನು ಬೈಬಲ್‌ ತೋರಿಸಿಕೊಡುತ್ತದೆ. (ಜ್ಞಾನೋಕ್ತಿ 6:16-19) ಎರಡನೆಯದಾಗಿ, ದೇವರ ಪವಿತ್ರಾತ್ಮವು ಉತ್ಪಾದಿಸುವಂಥ ಅಪೇಕ್ಷಣೀಯ ಗುಣಗಳನ್ನು ಪ್ರದರ್ಶಿಸುವಂತೆ ಶಾಸ್ತ್ರವಚನಗಳು ನಮ್ಮನ್ನು ಉತ್ತೇಜಿಸುತ್ತವೆ. ಇವುಗಳಲ್ಲಿ, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಮುಂತಾದವುಗಳು ಸೇರಿವೆ.​—ಗಲಾತ್ಯ 5:​22, 23.

ದೇವರ ಆವಶ್ಯಕತೆಗಳ ಕುರಿತಾದ ಆಳವಾದ ತಿಳಿವಳಿಕೆಯು, ತಾನು ಬೆಳೆಸಿಕೊಳ್ಳಬೇಕಾದ ಗುಣಗಳನ್ನು ಮತ್ತು ತನ್ನಿಂದ ತೆಗೆದುಹಾಕಬೇಕಾದ ಗುಣಗಳನ್ನು ಸ್ವತಃ ಪರೀಕ್ಷಿಸಿ ನೋಡುವಂತೆ ಏಡ್ರೀಯನ್‌ಗೆ ಸಹಾಯಮಾಡಿತು. (ಯಾಕೋಬ 1:​22-25) ಆದರೆ ಅದು ಕೇವಲ ಆರಂಭವಾಗಿತ್ತು. ಜ್ಞಾನಕ್ಕೆ ಕೂಡಿಸಿ, ಪ್ರೇರೇಪಣೆಯೂ ಅಂದರೆ, ಏಡ್ರೀಯನ್‌ ಬದಲಾವಣೆಯನ್ನು ಮಾಡಲು ಬಯಸುವಂತೆ ಅವನನ್ನು ಪ್ರಚೋದಿಸುವಂಥ ವಿಷಯವೂ ಅಗತ್ಯವಾಗಿತ್ತು.

ಅಪೇಕ್ಷಣೀಯವಾದ ಆ ಹೊಸ ವ್ಯಕ್ತಿತ್ವವು “ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ” ರಚಿಸಲ್ಪಟ್ಟಿದೆ ಎಂಬುದನ್ನು ಏಡ್ರೀಯನ್‌ ಕಲಿತುಕೊಂಡನು. (ಕೊಲೊಸ್ಸೆ 3:10) ಕ್ರೈಸ್ತನೊಬ್ಬನ ವ್ಯಕ್ತಿತ್ವವು ದೇವರ ವ್ಯಕ್ತಿತ್ವದೊಂದಿಗೆ ಸರಿಹೋಲಬೇಕೆಂದು ಅವನು ಗ್ರಹಿಸಿಕೊಂಡನು. (ಎಫೆಸ 5:1) ಬೈಬಲಿನ ಅಧ್ಯಯನದ ಮೂಲಕ, ಯೆಹೋವನು ಮಾನವಕುಲದೊಂದಿಗೆ ವ್ಯವಹರಿಸುವ ರೀತಿಯ ಕುರಿತು ಕಲಿತುಕೊಂಡನು ಮತ್ತು ಅವುಗಳಲ್ಲಿ ದೇವರ ಉತ್ತಮ ಗುಣಗಳಾದ ಪ್ರೀತಿ, ದಯೆ, ಒಳ್ಳೇತನ, ಕರುಣೆ, ಮತ್ತು ನೀತಿ ಮುಂತಾದವುಗಳನ್ನು ಗಮನಿಸಿದನು. ಅಂಥ ಜ್ಞಾನವು, ದೇವರನ್ನು ಪ್ರೀತಿಸುವಂತೆ ಮತ್ತು ಯೆಹೋವನು ಮೆಚ್ಚುವಂಥ ರೀತಿಯ ವ್ಯಕ್ತಿಯಾಗಿ ಜೀವಿಸುವಂತೆ ಏಡ್ರೀಯನ್‌ನನ್ನು ಪ್ರೇರೇಪಿಸಿತು.​—ಮತ್ತಾಯ 22:37.

ಕ್ರಮೇಣ ಮತ್ತು ದೇವರ ಪವಿತ್ರಾತ್ಮದ ಸಹಾಯದಿಂದ ಏಡ್ರೀಯನ್‌ ತನ್ನ ಹಿಂಸಾತ್ಮಕ ಕ್ರೋಧವನ್ನು ಹತೋಟಿಯಲ್ಲಿಡಲು ಶಕ್ತನಾದನು. ಈಗ ಅವನು ಮತ್ತು ಅವನ ಪತ್ನಿ, ಇತರರು ತಮ್ಮ ಜೀವಿತವನ್ನು ಬೈಬಲಿನ ಜ್ಞಾನದ ಸಹಾಯದಿಂದ ಶುದ್ಧಮಾಡಿಕೊಳ್ಳುವಂತೆ ಸಹಾಯಮಾಡುತ್ತಿದ್ದಾರೆ. “ನನ್ನ ಅನೇಕ ಮಾಜಿ ಸ್ನೇಹಿತರು ತೀರಿಹೋಗಿರುವುದಾದರೂ, ನಾನು ಜೀವದಿಂದಿದ್ದೇನೆ ಮತ್ತು ಒಂದು ಸಂತೋಷಕರವಾದ ಕುಟುಂಬ ಜೀವನವನ್ನು ಆನಂದಿಸುತ್ತಿದ್ದೇನೆ,” ಎಂದು ಏಡ್ರೀಯನ್‌ ಹೇಳುತ್ತಾನೆ. ಜೀವನವನ್ನು ಉತ್ತಮಗೊಳಿಸಲು ಬೈಬಲಿಗಿರುವ ಶಕ್ತಿಗೆ ಇವನು ಒಂದು ಜೀವಂತ ಪುರಾವೆಯಾಗಿದ್ದಾನೆ.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಎಲ್ಲಾ ಕೋಪ ಮತ್ತು ಹಿಂಸಾಚಾರದಿಂದಾಗಿ ತಾನು ಏನೂ ಸಾಧಿಸಲಿಲ್ಲ”

[ಪುಟ 25ರಲ್ಲಿರುವ ಚೌಕ]

ಕಾರ್ಯರೂಪದಲ್ಲಿರುವ ಬೈಬಲ್‌ ಮೂಲತತ್ತ್ವಗಳು

ಕ್ರೋಧಿತ ಮತ್ತು ಹಿಂಸಾತ್ಮಕರಾಗಿದ್ದ ಅನೇಕ ಜನರು ಸಮಾಧಾನಪ್ರಿಯರಾಗಿ ಬದಲಾಗುವಂತೆ ಸಹಾಯನೀಡಿರುವ ಬೈಬಲ್‌ ಮೂಲತತ್ತ್ವಗಳಲ್ಲಿ ಇವು ಕೆಲವು:

“ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ.” (ರೋಮಾಪುರ 12:​18, 19) ಯಾರ ಮೇಲೆ ಮತ್ತು ಯಾವಾಗ ಮುಯ್ಯಿ ತೀರಿಸಬೇಕೆಂಬದನ್ನು ದೇವರೇ ನಿರ್ಣಯಿಸಲಿ. ಆತನದನ್ನು ವಾಸ್ತವಾಂಶಗಳ ಪೂರ್ಣ ತಿಳಿವಳಿಕೆಯೊಂದಿಗೆ ಮಾಡಬಲ್ಲನು ಮತ್ತು ಆತನಿಂದ ಬರುವ ಯಾವುದೇ ಪ್ರತೀಕಾರವು ಆತನ ಪರಿಪೂರ್ಣ ನ್ಯಾಯವನ್ನು ಪ್ರತಿಬಿಂಬಿಸುವುದು.

“ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.” (ಎಫೆಸ 4:​26, 27) ಒಬ್ಬ ವ್ಯಕ್ತಿಯು ಕೆಲವೊಂದು ಸಂದರ್ಭದಲ್ಲಿ ನ್ಯಾಯವಾಗಿಯೇ ಕೋಪಗೊಳ್ಳುವ ಸಂಭವವಿದೆ. ಇದು ಸಂಭವಿಸಿದಾಗ, ಅವನು ಕೋಪದ ಸ್ಥಿತಿಯಲ್ಲಿಯೇ ಉಳಿಯಬಾರದು. ಏಕೆ? ಏಕೆಂದರೆ, ಮುಂದಕ್ಕೆ ಏನಾದರೂ ಕೆಟ್ಟದ್ದನ್ನು ಮಾಡುವಂತೆ ಅದು ಅವನನ್ನು ಪ್ರೇರೇಪಿಸಸಾಧ್ಯವಿದೆ, ಮತ್ತು ಹೀಗೆ ಮಾಡುವುದು “ಸೈತಾನನಿಗೆ ಅವಕಾಶ”ಕೊಟ್ಟಂತೆ ಇರುತ್ತದೆ ಹಾಗೂ ಯೆಹೋವ ದೇವರ ಅಸಮ್ಮತಿಯನ್ನು ಉಂಟುಮಾಡುತ್ತದೆ.

“ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) ನಿಗ್ರಹಿಸಲ್ಪಡದ ಭಾವನೆಗಳು ಹತೋಟಿಯಲ್ಲಿರದ ಕೃತ್ಯಗಳಿಗೆ ನಡೆಸುತ್ತವೆ. ಒಬ್ಬ ವ್ಯಕ್ತಿಯು ಕೋಪಕ್ಕೆ ಎಡೆಗೊಡುವುದಾದರೆ, ಅವನು ಅಥವಾ ಅವಳು ಒಳಗೊಂಡಿರುವ ಎಲ್ಲರನ್ನೂ ನೋಯಿಸುವಂಥ ವಿಷಯಗಳನ್ನು ಹೇಳಬಹುದು ಅಥವಾ ಮಾಡಬಹುದು.