ರಾಜ್ಯ ಸಂದೇಶವನ್ನು ಸ್ವೀಕರಿಸುವಂತೆ ಇತರರಿಗೆ ಸಹಾಯಮಾಡಿರಿ
ರಾಜ್ಯ ಸಂದೇಶವನ್ನು ಸ್ವೀಕರಿಸುವಂತೆ ಇತರರಿಗೆ ಸಹಾಯಮಾಡಿರಿ
“ಅಗ್ರಿಪ್ಪನು ಪೌಲನಿಗೆ ಹೇಳಿದ್ದು: ‘ಇನ್ನು ಸ್ವಲ್ಪ ಸಮಯದಲ್ಲಿ ನೀನು ನನ್ನನ್ನು ಕ್ರೈಸ್ತನಾಗಿ ಮತಾಂತರಗೊಳ್ಳುವಂತೆ ಒಡಂಬಡಿಸಿಬಿಡುವೆ’”—ಅ. ಕೃತ್ಯಗಳು 26:28, NW.
1, 2. ಅಪೊಸ್ತಲ ಪೌಲನು ದೇಶಾಧಿಪತಿಯಾದ ಫೆಸ್ತ ಹಾಗೂ IIನೆಯ ಹೆರೋದ ಅಗ್ರಿಪ್ಪ ರಾಜನ ಮುಂದೆ ಬಂದು ನಿಲ್ಲುವಂತಾದದ್ದು ಹೇಗೆ?
ಸಾಮಾನ್ಯ ಶಕ 58ರಲ್ಲಿ ಕೈಸರೈಯದಲ್ಲಿ, IIನೆಯ ಹೆರೋದ ಅಗ್ರಿಪ್ಪ ರಾಜನು ಮತ್ತು ಅವನ ತಂಗಿಯಾದ ಬೆರ್ನಿಕೆಯು ರೋಮನ್ ದೇಶಾಧಿಪತಿಯಾದ ಪೋರ್ಕಿಯ ಫೆಸ್ತನನ್ನು ಸಂದರ್ಶಿಸಿದರು. ಅವರು ದೇಶಾಧಿಪತಿಯಾದ ಫೆಸ್ತನ ಆಮಂತ್ರಣವನ್ನು ಸ್ವೀಕರಿಸಿ, “ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಸ್ಥಾನದೊಳಗೆ ಸೇರಿ”ದರು. ಫೆಸ್ತನ ಅಪ್ಪಣೆಯ ಮೇರೆಗೆ ಕ್ರೈಸ್ತ ಅಪೊಸ್ತಲನಾದ ಪೌಲನನ್ನು ಅವರ ಸಮ್ಮುಖಕ್ಕೆ ಕರೆತರಲಾಯಿತು. ಯೇಸು ಕ್ರಿಸ್ತನ ಈ ಅನುಯಾಯಿಯು ದೇಶಾಧಿಪತಿಯಾದ ಫೆಸ್ತನ ನ್ಯಾಯಸ್ಥಾನದ ಮುಂದೆ ಬಂದು ನಿಲ್ಲುವಂತಾದದ್ದು ಹೇಗೆ?—ಅ. ಕೃತ್ಯಗಳು 25:13-23.
2 ಫೆಸ್ತನು ತನ್ನ ಅತಿಥಿಗಳಿಗೆ ಏನನ್ನು ಹೇಳಿದನೋ ಅದು ಈ ಪ್ರಶ್ನೆಗೆ ಉತ್ತರವನ್ನು ಒದಗಿಸುತ್ತದೆ. ಅವನು ಹೇಳಿದ್ದು: “ಅಗ್ರಿಪ್ಪರಾಜನೇ, ನಮ್ಮ ಸಂಗಡ ಕೂಡಿಬಂದಿರುವ ಎಲ್ಲಾ ಜನರೇ, ಈ ಮನುಷ್ಯನನ್ನು ನೋಡುತ್ತೀರಲ್ಲಾ, ಇವನ ವಿಷಯದಲ್ಲಿ ಯೆಹೂದ್ಯರೆಲ್ಲರೂ—ಇವನು ಇನ್ನು ಮೇಲೆ ಬದುಕಬಾರದೆಂದು ಕೂಗುತ್ತಾ ಯೆರೂಸಲೇಮಿನಲ್ಲಿಯೂ ಇಲ್ಲಿಯೂ ನನ್ನನ್ನು ಬೇಡಿಕೊಂಡರು. ಇವನು ಮರಣದಂಡನೆಗೆ ಕಾರಣವಾದದ್ದೇನೂ ಮಾಡಲಿಲ್ಲವೆಂದು ನನಗೆ ಕಂಡುಬಂತು. ತಾನೇ ಚಕ್ರವರ್ತಿಗೆ ವಿಜ್ಞಾಪನೆ ಮಾಡಿಕೊಂಡದ್ದರಿಂದ ಇವನನ್ನು ಕಳುಹಿಸುವದಕ್ಕೆ ತೀಮಾರ್ನಿಸಿದೆನು. ಇವನ ವಿಷಯದಲ್ಲಿ ಮಹಾ ಸನ್ನಿಧಾನಕ್ಕೆ ಬರೆಯುವದಕ್ಕೆ ನಿಶ್ಚಯವಾದದ್ದೇನೂ ಇಲ್ಲ. ಸೆರೆಯವನ ಮೇಲೆ ಆರೋಪಿಸಿರುವ ದೋಷಗಳನ್ನು ಸೂಚಿಸದೆ ಅವನನ್ನು ಕಳುಹಿಸುವದು ಯುಕ್ತವಲ್ಲವೆಂದು ನನಗೆ ತೋರುತ್ತದೆ. ಆದದರಿಂದ ವಿಚಾರಣೆಯಾದ ಮೇಲೆ ಬರೆಯುವದಕ್ಕೆ ಏನಾದರೂ ಸಿಕ್ಕೀತೆಂದು ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ.”—ಅ. ಕೃತ್ಯಗಳು 25:24-27.
3. ಧಾರ್ಮಿಕ ಮುಖಂಡರು ಪೌಲನ ವಿರುದ್ಧ ಆರೋಪ ಹೊರಿಸಿದ್ದೇಕೆ?
3 ರಾಜದ್ರೋಹದ ಸುಳ್ಳಾರೋಪವನ್ನು ಪೌಲನ ಮೇಲೆ ಹೊರಿಸಲಾಗಿತ್ತು ಎಂಬುದನ್ನು ಫೆಸ್ತನ ಮಾತುಗಳು ಸೂಚಿಸುತ್ತವೆ. ಮತ್ತು ಅಂಥ ಅಪರಾಧಕ್ಕೆ ಮರಣ ದಂಡನೆಯು ವಿಧಿಸಲ್ಪಡುತ್ತಿತ್ತು. (ಅ. ಕೃತ್ಯಗಳು 25:11) ಆದರೂ ಪೌಲನು ನಿರ್ದೋಷಿಯಾಗಿದ್ದನು. ಅವನ ಮೇಲೆ ಹೊರಿಸಲ್ಪಟ್ಟ ಆರೋಪಗಳು, ಯೆರೂಸಲೇಮಿನಲ್ಲಿದ್ದ ಧಾರ್ಮಿಕ ಮುಖಂಡರ ಅಸೂಯೆಯಿಂದ ಹೊರಹೊಮ್ಮಿದವುಗಳಾಗಿದ್ದವು. ಒಬ್ಬ ರಾಜ್ಯ ಘೋಷಕನೋಪಾದಿ ಪೌಲನ ಕೆಲಸವನ್ನು ಅವರು ವಿರೋಧಿಸಿದರು ಮತ್ತು ಯೇಸು ಕ್ರಿಸ್ತನ ಹಿಂಬಾಲಕರಾಗಲು ಅವನು ಇತರರಿಗೆ ಸಹಾಯಮಾಡುವುದನ್ನು ನೋಡಿ ತೀವ್ರವಾಗಿ ಕೋಪಿಸಿಕೊಂಡರು. ಬಿಗಿ ಭದ್ರತೆಯ ಕೆಳಗೆ ಪೌಲನನ್ನು ಯೆರೂಸಲೇಮಿನಿಂದ ಕೈಸರೈಯದ ಬಂದರು ಪಟ್ಟಣಕ್ಕೆ ಕರೆತರಲಾಯಿತು ಮತ್ತು ಅಲ್ಲಿ ಅವನು ಚಕ್ರವರ್ತಿಯ ಬಳಿ ವಿಜ್ಞಾಪನೆಮಾಡಿಕೊಂಡನು; ಈ ಸ್ಥಳವು ರೋಮನ್ ಮಿಲಿಟರಿ ಪಡೆಗಳ ಮುಖ್ಯಕಾರ್ಯಾಲಯವಾಗಿತ್ತು. ಅಲ್ಲಿಂದ ಅವನು ರೋಮ್‌ಗೆ ಕರೆದೊಯ್ಯಲ್ಪಡಲಿಕ್ಕಿದ್ದನು.
4. ಅಗ್ರಿಪ್ಪ ರಾಜನು ಯಾವ ಆಶ್ಚರ್ಯಕರ ಹೇಳಿಕೆಯನ್ನು ಮಾಡಿದನು?
4 ರೋಮನ್ ಚಕ್ರಾಧಿಪತ್ಯದ ಮುಖ್ಯ ಭಾಗವೊಂದರ ರಾಜನನ್ನು ಅ. ಕೃತ್ಯಗಳು 26:1-28, NW.
ಸೇರಿಸಿ ಇನ್ನೂ ಅನೇಕರನ್ನು ಒಳಗೂಡಿರುವಂಥ ಒಂದು ಗುಂಪಿನ ಮುಂದೆ, ದೇಶಾಧಿಪತಿಯ ಅರಮನೆಯಲ್ಲಿ ಪೌಲನು ನಿಂತಿರುವುದನ್ನು ತುಸು ಕಲ್ಪಿಸಿಕೊಳ್ಳಿರಿ. ಅಗ್ರಿಪ್ಪ ರಾಜನು ಪೌಲನ ಕಡೆಗೆ ತಿರುಗಿ, ‘ನೀನು ಮಾತಾಡಬಹುದು’ ಎಂದು ಹೇಳಿದನು. ಪೌಲನ ಬಾಯಿಂದ ಮಾತುಗಳು ಸರಾಗವಾಗಿ ಹೊರಹರಿದಂತೆ, ಅಸಾಧಾರಣವಾದ ಒಂದು ಸಂಗತಿಯು ಘಟಿಸಿತು. ಪೌಲನು ಏನು ಹೇಳುತ್ತಾನೋ ಅದು ರಾಜನ ಮೇಲೆ ಪ್ರಭಾವವನ್ನು ಬೀರಲಾರಂಭಿಸುತ್ತದೆ. ಅಷ್ಟುಮಾತ್ರವಲ್ಲ, ಅಗ್ರಿಪ್ಪ ರಾಜನು ಹೇಳುವುದು: “ಇನ್ನು ಸ್ವಲ್ಪ ಸಮಯದಲ್ಲಿ ನೀನು ನನ್ನನ್ನು ಕ್ರೈಸ್ತನಾಗಿ ಮತಾಂತರಗೊಳ್ಳುವಂತೆ ಒಡಂಬಡಿಸಿಬಿಡುವೆ.”—5. ಪೌಲನು ಅಗ್ರಿಪ್ಪನಿಗೆ ನುಡಿದ ಮಾತುಗಳು ಏಕೆ ಅಷ್ಟು ಪರಿಣಾಮಕಾರಿಯಾಗಿದ್ದವು?
5 ಸ್ವಲ್ಪ ಆಲೋಚಿಸಿರಿ! ಜಾಣ್ಮೆಯಿಂದ ಕೂಡಿದ್ದ ಪೌಲನ ಪ್ರತಿವಾದದ ಫಲಿತಾಂಶವಾಗಿ, ದೇವರ ವಾಕ್ಯದ ಭೇದಿಸಿಕೊಂಡುಹೋಗುವ ಶಕ್ತಿಯಿಂದ ಒಬ್ಬ ರಾಜನು ಪ್ರಭಾವಿಸಲ್ಪಟ್ಟನು. (ಇಬ್ರಿಯ 4:12) ಪೌಲನ ಪ್ರತಿವಾದದ ವಿಷಯದಲ್ಲಿ ಯಾವುದು ಅಷ್ಟೊಂದು ಪರಿಣಾಮಕಾರಿಯಾಗಿದ್ದ ಸಂಗತಿಯಾಗಿತ್ತು? ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸದಲ್ಲಿ ನಮಗೆ ಸಹಾಯಮಾಡಸಾಧ್ಯವಿರುವ ಯಾವ ಪಾಠವನ್ನು ನಾವು ಪೌಲನಿಂದ ಕಲಿಯಬಲ್ಲೆವು? ಅವನ ಪ್ರತಿವಾದವನ್ನು ನಾವು ಪರಿಶೀಲಿಸುವಲ್ಲಿ, ಎರಡು ಪ್ರಮುಖ ಅಂಶಗಳು ಸ್ಪಷ್ಟವಾಗಿ ಕಂಡುಬರುತ್ತವೆ: (1) ತನ್ನ ನಿರೂಪಣೆಯಲ್ಲಿ ಪೌಲನು ತುಂಬ ಒಡಂಬಡಿಸುವವನಾಗಿದ್ದನು. (2) ಒಬ್ಬ ಕುಶಲಕರ್ಮಿಯು ಒಂದು ಉಪಕರಣವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಹೇಗೆ ಉಪಯೋಗಿಸುತ್ತಾನೋ ಹಾಗೆ, ದೇವರ ವಾಕ್ಯದ ಕುರಿತಾದ ತನ್ನ ಜ್ಞಾನವನ್ನು ಅವನು ಬಹಳ ಕೌಶಲದಿಂದ ಉಪಯೋಗಿಸಿದನು.
ಒಡಂಬಡಿಸುವ ಕಲೆಯನ್ನು ಉಪಯೋಗಿಸಿರಿ
6, 7. (ಎ) ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಒಡಂಬಡಿಸು” ಎಂಬ ಪದದ ಅರ್ಥವೇನು? (ಬಿ) ಒಂದು ಬೈಬಲ್ ಬೋಧನೆಯನ್ನು ಅಂಗೀಕರಿಸುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಒಡಂಬಡಿಸುವಿಕೆಯು ಯಾವ ಪಾತ್ರವನ್ನು ವಹಿಸುತ್ತದೆ?
6 ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ, ಪೌಲನ ಸಾರುವಿಕೆಯನ್ನು ವರ್ಣಿಸುವಾಗ ಒಡಂಬಡಿಸು ಎಂಬ ಶಬ್ದಕ್ಕಿರುವ ಗ್ರೀಕ್ ಪದಗಳನ್ನು ಅನೇಕಾವರ್ತಿ ಉಪಯೋಗಿಸಲಾಗಿದೆ. ಇದಕ್ಕೂ, ಶಿಷ್ಯರನ್ನಾಗಿಮಾಡುವ ನಮ್ಮ ಕೆಲಸಕ್ಕೂ ಏನು ಸಂಬಂಧವಿದೆ?
7 ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಮೂಲ ಭಾಷೆಯಲ್ಲಿ “ಒಡಂಬಡಿಸು” ಎಂಬ ಪದದ ಅರ್ಥ “ಒಲಿಸಿಕೊ” ಅಥವಾ “ತರ್ಕ ಇಲ್ಲವೆ ನೈತಿಕ ವಿಚಾರಗಳ ಪ್ರಭಾವದಿಂದ ಮನಸ್ಸನ್ನು ಬದಲಾಯಿಸುವುದು” ಎಂದಾಗಿದೆ ಎಂದು ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುತ್ತದೆ. ಆ ಪದದ ಮೂಲಾರ್ಥವನ್ನು ಪರೀಕ್ಷಿಸುವುದು ಸಹ ಇನ್ನೂ ಹೆಚ್ಚಿನ ಜ್ಞಾನೋದಯವನ್ನು ನೀಡುತ್ತದೆ. ಇದು ಭರವಸೆಯ ಅರ್ಥವನ್ನು ಕೊಡುತ್ತದೆ. ಆದುದರಿಂದ, ಒಂದು ಬೈಬಲ್ ಬೋಧನೆಯನ್ನು ಅಂಗೀಕರಿಸುವಂತೆ ಒಬ್ಬ ವ್ಯಕ್ತಿಯನ್ನು ನೀವು ಒಡಂಬಡಿಸಿರುವಲ್ಲಿ, ಆ ಬೋಧನೆಯ ಸತ್ಯತೆಯಲ್ಲಿ ಅವನು ನಂಬಿಕೆಯನ್ನು ಇಡುವಂತೆ ನೀವು ಅವನ ಭರವಸೆಯನ್ನು ಸಂಪಾದಿಸಿರುವಿರಿ. ಬೈಬಲನ್ನು ನಂಬಲಿಕ್ಕಾಗಿ ಮತ್ತು ಅದಕ್ಕನುಸಾರ ನಡೆಯಲಿಕ್ಕಾಗಿ ಅದು ಏನು ಹೇಳುತ್ತದೆ ಎಂಬುದನ್ನು ಒಬ್ಬ ವ್ಯಕ್ತಿಗೆ ಕೇವಲ ಹೇಳುವುದಷ್ಟೇ ಸಾಕಾಗುವುದಿಲ್ಲ ಎಂಬುದಂತೂ ಸುಸ್ಪಷ್ಟ. ನೀವು ಏನು ಹೇಳುತ್ತಿದ್ದೀರೋ ಅದು ಸತ್ಯ ಎಂಬುದನ್ನು ನಿಮ್ಮ ಕೇಳುಗನು—ಅದು ಒಂದು ಮಗುವಾಗಿರಬಹುದು, ನೆರೆಯವನಾಗಿರಬಹುದು, ಸಹಕರ್ಮಿಯಾಗಿರಬಹುದು, ಸಹಪಾಠಿಯಾಗಿರಬಹುದು ಅಥವಾ ಸಂಬಂಧಿಕನಾಗಿರಬಹುದು—ಮನಗಾಣುವ ಅಗತ್ಯವಿದೆ.—2 ತಿಮೊಥೆಯ 3:14, 15.
8. ಒಂದು ಶಾಸ್ತ್ರೀಯ ಸತ್ಯವನ್ನು ಒಬ್ಬ ವ್ಯಕ್ತಿಗೆ ಮನಗಾಣಿಸುವುದರಲ್ಲಿ ಏನು ಒಳಗೂಡಿದೆ?
8 ದೇವರ ವಾಕ್ಯದಿಂದ ನೀವು ಪ್ರಕಟಪಡಿಸುವ ವಿಷಯವು ಸತ್ಯವಾಗಿದೆ ಎಂಬುದನ್ನು ನೀವು ಒಬ್ಬ ವ್ಯಕ್ತಿಗೆ ಹೇಗೆ ಮನಗಾಣಿಸಸಾಧ್ಯವಿದೆ? ನ್ಯಾಯವಾದ ತರ್ಕಬದ್ಧತೆ, ದೃಢವಾದ ವಾದಸರಣಿ ಮತ್ತು ಕಟ್ಟಕ್ಕರೆಯ ವಿನಂತಿಗಳನ್ನು ಉಪಯೋಗಿಸುತ್ತಾ ಪೌಲನು ತಾನು ಯಾರೊಂದಿಗೆ ಮಾತಾಡುತ್ತಿದ್ದನೋ ಅವರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದನು. * ಆದುದರಿಂದ, ಒಂದು ವಿಷಯವು ಸತ್ಯವಾಗಿದೆ ಎಂಬುದನ್ನು ಕೇವಲ ತಿಳಿಸುವುದಕ್ಕೆ ಬದಲಾಗಿ, ನಿಮ್ಮ ಹೇಳಿಕೆಯನ್ನು ಬೆಂಬಲಿಸಲಿಕ್ಕಾಗಿ ನೀವು ತೃಪ್ತಿಕರವಾದ ಪುರಾವೆಯನ್ನು ನೀಡುವುದು ಸಹ ಅತ್ಯಗತ್ಯವಾಗಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ? ನಿಮ್ಮ ಹೇಳಿಕೆಯು ವೈಯಕ್ತಿಕ ಅಭಿಪ್ರಾಯದ ಮೇಲಲ್ಲ, ಬದಲಾಗಿ ಸಂಪೂರ್ಣವಾಗಿ ದೇವರ ವಾಕ್ಯದ ಮೇಲೆ ಆಧಾರಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಇದಲ್ಲದೆ, ನಿಮ್ಮ ಹೃತ್ಪೂರ್ವಕ ಶಾಸ್ತ್ರೀಯ ಹೇಳಿಕೆಗಳನ್ನು ಸಮರ್ಥಿಸಲಿಕ್ಕಾಗಿ ದೃಢೀಕರಿಸುವಂಥ ಪುರಾವೆಯನ್ನು ಉಪಯೋಗಿಸಿರಿ. (ಜ್ಞಾನೋಕ್ತಿ 16:23) ಉದಾಹರಣೆಗೆ, ವಿಧೇಯ ಮಾನವಕುಲವು ಒಂದು ಪರದೈಸ ಭೂಮಿಯಲ್ಲಿ ಜೀವನವನ್ನು ಆನಂದಿಸುವುದು ಎಂದು ನೀವು ಹೇಳುವಲ್ಲಿ, ಲೂಕ 23:43 ಅಥವಾ ಯೆಶಾಯ 65:21-25 ರಂಥ ಶಾಸ್ತ್ರೀಯ ಉಲ್ಲೇಖಗಳನ್ನು ಆಧಾರವಾಗಿ ನೀಡಿರಿ. ನಿಮ್ಮ ಶಾಸ್ತ್ರೀಯ ಅಂಶವನ್ನು ನೀವು ಹೇಗೆ ದೃಢೀಕರಿಸಸಾಧ್ಯವಿದೆ? ನಿಮ್ಮ ಕೇಳುಗರ ಅನುಭವದಿಂದಲೇ ನೀವು ಉದಾಹರಣೆಗಳನ್ನು ಉಪಯೋಗಿಸಬಹುದು. ಸೂರ್ಯಾಸ್ತಮಾನದ ನಯನಮನೋಹರ ದೃಶ್ಯದಿಂದ, ಒಂದು ಹೂವಿನ ಸುಮಧುರ ಪರಿಮಳದಿಂದ, ಒಂದು ಹಣ್ಣಿನ ಸವಿಯಾದ ರುಚಿಯಿಂದ ಪಡೆದುಕೊಳ್ಳಸಾಧ್ಯವಿರುವ ಸರಳ ಹಾಗೂ ಉಚಿತ ಆಹ್ಲಾದದ ಕುರಿತು ಅಥವಾ ಒಂದು ತಾಯಿಹಕ್ಕಿಯು ತನ್ನ ಮರಿಗಳಿಗೆ ಉಣಿಸುತ್ತಿರುವುದನ್ನು ನೋಡುವುದರಿಂದ ಸಿಗುವ ಆನಂದದ ಕುರಿತು ನೀವು ಅವರಿಗೆ ನೆನಪು ಹುಟ್ಟಿಸಬಹುದು. ಅಂಥ ಸುಖಾನುಭವಗಳು, ನಾವು ಭೂಮಿಯಲ್ಲಿ ಜೀವನವನ್ನು ಆನಂದಿಸುವಂತೆ ಸೃಷ್ಟಿಕರ್ತನು ಬಯಸುತ್ತಾನೆ ಎಂಬುದರ ಪುರಾವೆಯಾಗಿವೆ ಎಂಬುದನ್ನು ಮನಗಾಣುವಂತೆ ಅವನಿಗೆ ಸಹಾಯಮಾಡಿರಿ.—ಪ್ರಸಂಗಿ 3:11, 12.
9. ನಮ್ಮ ಸಾರುವ ಕೆಲಸದಲ್ಲಿ ನಾವು ತರ್ಕಬದ್ಧತೆಯನ್ನು ಹೇಗೆ ತೋರಿಸಸಾಧ್ಯವಿದೆ?
9 ಒಂದು ನಿರ್ದಿಷ್ಟ ಬೈಬಲ್ ಬೋಧನೆಯನ್ನು ಅಂಗೀಕರಿಸುವಂತೆ ಒಬ್ಬ ವ್ಯಕ್ತಿಯನ್ನು ಒಡಂಬಡಿಸಲು ಪ್ರಯತ್ನಿಸುತ್ತಿರುವಾಗ, ನಿಮ್ಮ ಅತ್ಯುತ್ಸಾಹವು ನೀವು ಉದ್ಧಟತನದಿಂದ ಅದನ್ನು ಅವರ ಮೇಲೆ ಹೇರುತ್ತಿದ್ದೀರೆಂದು ತೋರದಂತೆ ಜಾಗ್ರತೆವಹಿಸಿ. ಏಕೆಂದರೆ ಇದು ನಿಮ್ಮ ಕೇಳುಗನ ಹೃದಮನಗಳನ್ನು ಮುಚ್ಚಿಬಿಡುವುದು. ಶುಶ್ರೂಷಾ ಶಾಲೆ ಪುಸ್ತಕವು ಈ ಮುಂದಿನ ಎಚ್ಚರಿಕೆಯನ್ನು ನೀಡುತ್ತದೆ: “ಒಬ್ಬ ವ್ಯಕ್ತಿಯು ಅಮೂಲ್ಯವೆಂದೆಣಿಸುವಂಥ ಒಂದು ನಂಬಿಕೆಯನ್ನು ನಿರ್ದಾಕ್ಷಿಣ್ಯವಾಗಿ ಸುಳ್ಳೆಂದು ಬಯಲುಪಡಿಸುವ ಸತ್ಯದ ನೇರವಾದ ಹೇಳಿಕೆಯು—ಅದಕ್ಕೆ ಆಧಾರವಾಗಿ ಶಾಸ್ತ್ರವಚನಗಳ ಉದ್ದ ಪಟ್ಟಿಯೇ ಒದಗಿಸಲ್ಪಟ್ಟರೂ—ಸಾಮಾನ್ಯವಾಗಿ ಒಳ್ಳೇ ರೀತಿಯಲ್ಲಿ ಅಂಗೀಕರಿಸಲ್ಪಡುವುದಿಲ್ಲ. ಉದಾಹರಣೆಗೆ, ಜನಪ್ರಿಯವಾದ ಆಚರಣೆಗಳನ್ನು ವಿಧರ್ಮಿ ಮೂಲದವುಗಳೆಂದು ಕೇವಲ ಖಂಡಿಸುವಲ್ಲಿ, ಇದು ಬೇರೆ ಜನರಿಗೆ ಅವುಗಳ ವಿಷಯದಲ್ಲಿ ಇರುವ ಅನಿಸಿಕೆಗಳನ್ನು ಬದಲಾಯಿಸಲಿಕ್ಕಿಲ್ಲ. ತರ್ಕಸಮ್ಮತವಾದ ಮಾತಿನ ರೀತಿಯು ಸಾಮಾನ್ಯವಾಗಿ ಹೆಚ್ಚು ಯಶಸ್ವಿಕರವಾಗಿರುತ್ತದೆ.” ತರ್ಕಸಮ್ಮತವಾಗಿ ಮಾತಾಡಲು ನಾವು ತೀವ್ರ ಪ್ರಯತ್ನವನ್ನು ಮಾಡಬೇಕು ಏಕೆ? ಅದೇ ಪಠ್ಯಪುಸ್ತಕವು ಹೇಳುವುದು: “ತರ್ಕಸಮ್ಮತವಾದ ಮಾತಿನ ರೀತಿಯು ಚರ್ಚೆಯನ್ನು ಪ್ರೋತ್ಸಾಹಿಸಿ, ತರುವಾಯ ಯೋಚಿಸಿ ನೋಡುವ ಸಂದರ್ಭವನ್ನು ಜನರಿಗೆ ಕೊಟ್ಟು, ಭಾವೀ ಸಂಭಾಷಣೆಗಳಿಗೆ ದಾರಿಯನ್ನು ತೆರೆಯುತ್ತದೆ. ಅದಕ್ಕೆ ಬಲವಾಗಿ ಒಡಂಬಡಿಸುವ ಶಕ್ತಿಯೂ ಇರಬಲ್ಲದು.”—ಹೃದಯವನ್ನು ಪ್ರಚೋದಿಸುವಂಥ ಒಡಂಬಡಿಸುವಿಕೆ
10. ಯಾವ ರೀತಿಯಲ್ಲಿ ಪೌಲನು ಅಗ್ರಿಪ್ಪನ ಮುಂದೆ ತನ್ನ ಪ್ರತಿವಾದಕ್ಕೆ ಪೀಠಿಕೆ ಹಾಕಿದನು?
10 ಅಪೊಸ್ತಲರ ಕೃತ್ಯಗಳು ಪುಸ್ತಕದ 26ನೆಯ ಅಧ್ಯಾಯದಲ್ಲಿರುವ ಪೌಲನ ಪ್ರತಿವಾದದ ಮಾತುಗಳನ್ನು ನಾವೀಗ ನಿಕಟವಾಗಿ ಪರಿಶೀಲಿಸೋಣ. ಅವನು ತನ್ನ ಭಾಷಣವನ್ನು ಹೇಗೆ ಆರಂಭಿಸಿದನು ಎಂಬುದನ್ನು ಸ್ವಲ್ಪ ಗಮನಿಸಿರಿ. ತನ್ನ ವಿಷಯವಸ್ತುವನ್ನು ಪರಿಚಯಿಸಲಿಕ್ಕಾಗಿ, ಅಗ್ರಿಪ್ಪ ರಾಜನು ತನ್ನ ತಂಗಿಯಾದ ಬೆರ್ನಿಕೆಯೊಂದಿಗೆ ಕಳಂಕದಾಯಕ ಸಂಬಂಧವನ್ನು ಇಟ್ಟುಕೊಂಡಿದ್ದರೂ, ಅವನನ್ನು ಪ್ರಶಂಸಿಸಲಿಕ್ಕಾಗಿ ನ್ಯಾಯಸಮ್ಮತವಾದ ಒಂದು ಆಧಾರವನ್ನು ಪೌಲನು ಕಂಡುಕೊಂಡನು. ಪೌಲನು ಹೇಳಿದ್ದು: “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ದೋಷಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ. ಯಾಕಂದರೆ ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನದಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.”—ಅ. ಕೃತ್ಯಗಳು 26:2, 3.
11. ಅಗ್ರಿಪ್ಪನಿಗೆ ಪೌಲನು ನುಡಿದ ಮಾತುಗಳು ಯಾವ ರೀತಿಯಲ್ಲಿ ಗೌರವವನ್ನು ವ್ಯಕ್ತಪಡಿಸಿದವು, ಮತ್ತು ಯಾವ ಪ್ರಯೋಜನವು ಫಲಿಸಿತು?
11 ಅಗ್ರಿಪ್ಪನನ್ನು ರಾಜ ಎಂಬ ಬಿರುದನ್ನು ಉಪಯೋಗಿಸಿ ಸಂಬೋಧಿಸುವ ಮೂಲಕ ಅವನ ಅಧಿಕಾರ ಸ್ಥಾನವನ್ನು ಪೌಲನು ಅಂಗೀಕರಿಸಿದ್ದನ್ನು ನೀವು ಗಮನಿಸಿದಿರೋ? ಇದು ಗೌರವವನ್ನು ವ್ಯಕ್ತಪಡಿಸಿತು ಮತ್ತು ತನ್ನ ಶಬ್ದಗಳ ವಿವೇಕಯುತ ಆಯ್ಕೆಯ ಮೂಲಕ ಪೌಲನು 1 ಪೇತ್ರ 2:17) ಅಗ್ರಿಪ್ಪನು ತನ್ನ ಯೆಹೂದ್ಯ ಪ್ರಜೆಗಳ ಎಲ್ಲಾ ಜಟಿಲ ಆಚಾರಗಳನ್ನೂ ನಿಯಮಗಳನ್ನೂ ಚೆನ್ನಾಗಿ ಬಲ್ಲವನಾಗಿದ್ದಾನೆಂದು ಪೌಲನು ಒಪ್ಪಿಕೊಂಡನು ಮತ್ತು ಇಂಥ ಜ್ಞಾನಿ ರಾಜನ ಮುಂದೆ ಪ್ರತಿವಾದ ಮಾಡಲು ಸಾಧ್ಯವಾದುದಕ್ಕೆ ತಾನು ಧನ್ಯನಾಗಿದ್ದೇನೆ ಎಂದು ಅವನು ಹೇಳಿದನು. ಒಬ್ಬ ಕ್ರೈಸ್ತನಾಗಿದ್ದ ಪೌಲನು, ಒಬ್ಬ ಅಕ್ರೈಸ್ತನಾಗಿದ್ದ ಅಗ್ರಿಪ್ಪನಿಗಿಂತ ತಾನು ಶ್ರೇಷ್ಠನಾಗಿದ್ದೇನೆ ಎಂಬಂತೆ ವರ್ತಿಸಲಿಲ್ಲ. (ಫಿಲಿಪ್ಪಿ 2:3) ಬದಲಾಗಿ, ಸಹನೆಯಿಂದ ತನಗೆ ಕಿವಿಗೊಡುವಂತೆ ರಾಜನ ಬಳಿ ಪೌಲನು ಬೇಡಿಕೊಂಡನು. ಹೀಗೆ, ಅಗ್ರಿಪ್ಪನು ಹಾಗೂ ಇತರ ಕೇಳುಗರು ತಾನು ಸಾದರಪಡಿಸಲಿರುವ ವಿಷಯವನ್ನು ಅಂಗೀಕರಿಸಬಹುದಾದಂಥ ರೀತಿಯ ಒಂದು ಪರಿಸರವನ್ನು ಪೌಲನು ಸೃಷ್ಟಿಸಿದನು. ತನ್ನ ವಾದಗಳನ್ನು ಸರಿಯಾಗಿ ವಿಕಸಿಸಲು ಬೇಕಾಗಿದ್ದಂಥ ಒಂದು ತಳಪಾಯವನ್ನು, ಅಂದರೆ ತಾವಿಬ್ಬರೂ ಒಪ್ಪಿಕೊಳ್ಳುವಂಥ ಒಂದು ಸಾಮಾನ್ಯ ಅಂಶವನ್ನು ಅವನು ಸ್ಥಾಪಿಸುತ್ತಿದ್ದನು.
ಅಗ್ರಿಪ್ಪನಿಗೆ ಸಲ್ಲತಕ್ಕ ಮಾನವನ್ನು ಸಲ್ಲಿಸಿದನು. (12. ರಾಜ್ಯ ಸಾರುವಿಕೆಯ ಕೆಲಸದಲ್ಲಿ ನಾವು ನಮ್ಮ ಕೇಳುಗರ ಹೃದಯವನ್ನು ಪ್ರಚೋದಿಸುವಂಥ ರೀತಿಯಲ್ಲಿ ಹೇಗೆ ಮಾತಾಡಸಾಧ್ಯವಿದೆ?
12 ಅಗ್ರಿಪ್ಪನ ಮುಂದೆ ಪೌಲನು ಮಾಡಿದಂತೆ, ರಾಜ್ಯ ಸಂದೇಶದ ನಮ್ಮ ನಿರೂಪಣೆಯ ಪೀಠಿಕೆಯಿಂದ ಹಿಡಿದು ಸಮಾಪ್ತಿಯ ವರೆಗೆ ನಾವು ನಮ್ಮ ಕೇಳುಗರ ಹೃದಯವನ್ನು ಪ್ರಚೋದಿಸುವಂಥ ರೀತಿಯಲ್ಲಿ ಮಾತಾಡೋಣ. ನಾವು ಯಾರಿಗೆ ಸಾರುತ್ತಿದ್ದೇವೋ ಆ ವ್ಯಕ್ತಿಗೆ ಯಥಾರ್ಥವಾದ ಗೌರವವನ್ನು ತೋರಿಸುವ ಮೂಲಕ ಮತ್ತು ಅವನ ಅಥವಾ ಅವಳ ನಿರ್ದಿಷ್ಟ ಹಿನ್ನೆಲೆ ಹಾಗೂ ಆಲೋಚನೆಯಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುವ ಮೂಲಕ ನಾವಿದನ್ನು ಮಾಡಸಾಧ್ಯವಿದೆ.—1 ಕೊರಿಂಥ 9:20-23.
ದೇವರ ವಾಕ್ಯವನ್ನು ಕೌಶಲದಿಂದ ಉಪಯೋಗಿಸಿರಿ
13. ಪೌಲನಂತೆ ನೀವು ನಿಮ್ಮ ಕೇಳುಗರನ್ನು ಹೇಗೆ ಪ್ರಚೋದಿಸಸಾಧ್ಯವಿದೆ?
13 ಸುವಾರ್ತೆಗನುಸಾರ ಕ್ರಿಯೆಗೈಯುವಂತೆ ತನ್ನ ಕೇಳುಗರನ್ನು ಪ್ರಚೋದಿಸುವುದು ಪೌಲನ ಬಯಕೆಯಾಗಿತ್ತು. (1 ಥೆಸಲೊನೀಕ 1:5-7) ಇದನ್ನು ಸಾಧಿಸಲಿಕ್ಕಾಗಿ, ಪ್ರಚೋದನೆಯ ಪೀಠವಾಗಿದ್ದ ಅವರ ಸಾಂಕೇತಿಕ ಹೃದಯಕ್ಕೆ ಹಿಡಿಸುವಂಥ ರೀತಿಯಲ್ಲಿ ಪೌಲನು ಮಾತಾಡಿದನು. ಅಗ್ರಿಪ್ಪನ ಮುಂದೆ ಪೌಲನು ಮಾಡಿದ ಪ್ರತಿವಾದವನ್ನು ನಾವು ಇನ್ನೂ ಮುಂದಕ್ಕೆ ಪರಿಗಣಿಸುವಾಗ, ಮೋಶೆಯಿಂದ ಹಾಗೂ ಪ್ರವಾದಿಗಳಿಂದ ತಿಳಿಸಲ್ಪಟ್ಟ ವಿಷಯಗಳಿಗೆ ಸೂಚಿಸುವ ಮೂಲಕ ಹೇಗೆ ಅವನು ‘ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸಿದನು’ ಎಂಬುದನ್ನು ಗಮನಿಸಿರಿ.—2 ತಿಮೊಥೆಯ 2:15.
14. ಅಗ್ರಿಪ್ಪನ ಮುಂದೆ ಪೌಲನು ಹೇಗೆ ಒಡಂಬಡಿಸುವಿಕೆಯನ್ನು ಉಪಯೋಗಿಸಿದನು ಎಂಬುದನ್ನು ವಿವರಿಸಿರಿ.
14 ಅಗ್ರಿಪ್ಪನು ಹೆಸರಿಗೆ ಮಾತ್ರ ಯೆಹೂದ್ಯನಾಗಿದ್ದನು ಎಂಬುದು ಪೌಲನಿಗೆ ತಿಳಿದಿತ್ತು. ಅಗ್ರಿಪ್ಪನಿಗೆ ಯೆಹೂದಿ ಮತದ ಕುರಿತು ಇದ್ದ ಜ್ಞಾನದತ್ತ ಗಮನಸೆಳೆದು, ತನ್ನ ಸಾರುವಿಕೆಯು ನಿಜವಾಗಿಯೂ ಮೆಸ್ಸೀಯನ ಮರಣ ಹಾಗೂ ಪುನರುತ್ಥಾನದ ವಿಷಯದಲ್ಲಿ “ಪ್ರವಾದಿಗಳೂ ಮೋಶೆಯೂ ಮುಂದೆ ಆಗುವವೆಂದು ತಿಳಿಸಿದ ಸಂಗತಿಗಳನ್ನೇ ಹೊರತು” ಇನ್ನೇನನ್ನೂ ಒಳಗೂಡಿಲ್ಲ ಎಂದು ಪೌಲನು ತರ್ಕಿಸಿದನು. ಅ. ಕೃತ್ಯಗಳು 26:22, 23) ನೇರವಾಗಿ ಅಗ್ರಿಪ್ಪನಿಗೇ ಸಂಬೋಧಿಸುತ್ತಾ ಪೌಲನು ಕೇಳಿದ್ದು: “ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಅಗ್ರಿಪ್ಪನು ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡನು. ತಾನು ಪ್ರವಾದಿಗಳಲ್ಲಿ ನಂಬಿಕೆಯಿಡುವುದಿಲ್ಲ ಎಂದು ಅವನು ಹೇಳುತ್ತಿದ್ದಲ್ಲಿ, ಒಬ್ಬ ಯೆಹೂದಿ ವಿಶ್ವಾಸಿಯೆಂಬ ಅವನ ಸತ್ಕೀರ್ತಿಯು ಹಾಳಾಗಿಹೋಗುತ್ತದೆ. ಒಂದುವೇಳೆ ಅವನು ಪೌಲನ ತರ್ಕವನ್ನು ಸಮ್ಮತಿಸುವಲ್ಲಿ, ಅವನು ಸಾರ್ವಜನಿಕರ ಮುಂದೆ ಈ ಅಪೊಸ್ತಲನೊಂದಿಗೆ ಒಪ್ಪಿಕೊಂಡಂತಾಗುವುದು ಮತ್ತು ತಾನೊಬ್ಬ ಕ್ರೈಸ್ತನೆಂದು ಕರೆಯಲ್ಪಡುವ ಸಾಧ್ಯತೆಯಿತ್ತು. ‘ಉಂಟೆಂದು ಬಲ್ಲೆನು’ ಎಂದು ಹೇಳುವ ಮೂಲಕ ಪೌಲನು ತನ್ನ ಪ್ರಶ್ನೆಗೆ ತಾನೇ ವಿವೇಕಯುತವಾಗಿ ಉತ್ತರಿಸಿದನು. ಆಗ ಅಗ್ರಿಪ್ಪನ ಹೃದಯವು ಹೇಗೆ ಉತ್ತರಿಸುವಂತೆ ಅವನನ್ನು ಪ್ರಚೋದಿಸಿತು? ಅವನು ಉತ್ತರಿಸಿದ್ದು: “ಇನ್ನು ಸ್ವಲ್ಪ ಸಮಯದಲ್ಲಿ ನೀನು ನನ್ನನ್ನು ಕ್ರೈಸ್ತನಾಗಿ ಮತಾಂತರಗೊಳ್ಳುವಂತೆ ಒಡಂಬಡಿಸಿಬಿಡುವೆ.” (ಅ. ಕೃತ್ಯಗಳು 26:27, 28, NW) ಇದರಿಂದಾಗಿ ಅಗ್ರಿಪ್ಪನು ಒಬ್ಬ ಕ್ರೈಸ್ತನಾಗಿ ಪರಿಣಮಿಸದಿದ್ದರೂ, ತನ್ನ ಸಂದೇಶದ ಮೂಲಕ ಪೌಲನು ಅವನ ಹೃದಯದ ಮೇಲೆ ಸ್ವಲ್ಪಮಟ್ಟಿಗಾದರೂ ಪ್ರಭಾವ ಬೀರಿದನು ಎಂಬುದಂತೂ ಸುವ್ಯಕ್ತ.—ಇಬ್ರಿಯ 4:12.
(15. ಪೌಲನು ಥೆಸಲೊನೀಕದಲ್ಲಿ ಒಂದು ಸಭೆಯನ್ನು ಆರಂಭಿಸಲು ಹೇಗೆ ಶಕ್ತನಾದನು?
15 ಸುವಾರ್ತೆಯ ಕುರಿತಾದ ಪೌಲನ ನಿರೂಪಣೆಯಲ್ಲಿ ಸಾರುವಿಕೆ ಮತ್ತು ಒಡಂಬಡಿಸುವಿಕೆಯು ಒಳಗೂಡಿತ್ತು ಎಂಬುದನ್ನು ನೀವು ಗಮನಿಸಿದ್ದೀರೋ? ಪೌಲನು ‘ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವಾಗ’ ಅವನು ಒಡಂಬಡಿಸುವ ಕಲೆಯನ್ನು ಉಪಯೋಗಿಸಿದ್ದರಿಂದ, ಯಾರು ಅವನಿಗೆ ಕಿವಿಗೊಟ್ಟರೋ ಅವರು ಕೇವಲ ಅವನ ಕೇಳುಗರಾಗಿ ಉಳಿಯಲಿಲ್ಲ, ಬದಲಾಗಿ ವಿಶ್ವಾಸಿಗಳಾಗಿ ಪರಿಣಮಿಸಿದರು. ಥೆಸಲೊನೀಕದಲ್ಲಿ ಪೌಲನು ಸಭಾಮಂದಿರದಲ್ಲಿ ಯೆಹೂದ್ಯರನ್ನೂ ದೇವಭಯವುಳ್ಳ ಅನ್ಯರನ್ನೂ ಹುಡುಕಿಕೊಂಡು ಹೋದಾಗ, ಅಲ್ಲಿ ಇದೇ ರೀತಿ ಸಂಭವಿಸಿತು. ಅಪೊಸ್ತಲರ ಕೃತ್ಯಗಳು 17:2-4 ರಲ್ಲಿರುವ ವೃತ್ತಾಂತವು ಹೇಳುವುದು: ‘ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳಲ್ಲಿ ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ ಆಯಾ ವಚನಗಳ ಅರ್ಥವನ್ನು ಬಿಚ್ಚಿ—ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು ಎದ್ದುಬರುವದು ಅಗತ್ಯವೆಂತಲೂ ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನೆಂತಲೂ ಸ್ಥಾಪಿಸಿದನು [“ತರ್ಕಿಸಿದನು,” NW]. ಇದರಿಂದಾಗಿ ಅವರಲ್ಲಿ ಕೆಲವರು [“ವಿಶ್ವಾಸಿಗಳಾದರು,” NW].’ ಪೌಲನು ಒಡಂಬಡಿಸುವವನಾಗಿದ್ದನು. ಯೇಸುವೇ ವಾಗ್ದತ್ತ ಮೆಸ್ಸೀಯನಾಗಿದ್ದನು ಎಂಬುದನ್ನು ಅವನು ತರ್ಕಸಮ್ಮತವಾಗಿ ತಿಳಿಸಿದನು, ವಿವರಿಸಿದನು ಮತ್ತು ಶಾಸ್ತ್ರವಚನಗಳ ಸಹಾಯದಿಂದ ರುಜುಪಡಿಸಿದನು. ಫಲಿತಾಂಶವೇನು? ನಂಬುವವರಾಗಿದ್ದ ಜನರಿಂದ ಕೂಡಿದ ಒಂದು ಸಭೆಯು ಸ್ಥಾಪಿತವಾಯಿತು.
16. ರಾಜ್ಯದ ಕುರಿತು ಪ್ರಕಟಿಸುವುದರಲ್ಲಿ ನೀವು ಹೇಗೆ ಹೆಚ್ಚಿನ ಆನಂದವನ್ನು ಪಡೆದುಕೊಳ್ಳಸಾಧ್ಯವಿದೆ?
16 ದೇವರ ವಾಕ್ಯವನ್ನು ವಿವರಿಸುವಾಗ, ಒಡಂಬಡಿಸುವಂಥ ಕಲೆಯಲ್ಲಿ ನೀವು ಹೆಚ್ಚು ನಿಪುಣರಾಗಲು ಸಾಧ್ಯವಿದೆಯೋ? ಹಾಗಿರುವಲ್ಲಿ, ಜನರಿಗೆ ದೇವರ ರಾಜ್ಯದ ಕುರಿತು ಸಾರುವ ಮತ್ತು ಕಲಿಸುವ ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ವೈಯಕ್ತಿಕ ಸಂತೃಪ್ತಿಯನ್ನೂ ಆನಂದವನ್ನೂ ಪಡೆದುಕೊಳ್ಳುವಿರಿ. ಸಾರುವ ಕೆಲಸದಲ್ಲಿ ಬೈಬಲನ್ನು ಹೆಚ್ಚೆಚ್ಚು ಉಪಯೋಗಿಸುವಂತೆ ಕೊಡಲ್ಪಟ್ಟ ಸಲಹೆಗಳನ್ನು ಅನ್ವಯಿಸಿರುವ ಸುವಾರ್ತಾ ಪ್ರಚಾರಕರ ಅನುಭವವು ಇದೇ ಆಗಿದೆ.
17. ನಮ್ಮ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸುವುದು ಹೇಗೆ ಪ್ರಯೋಜನದಾಯಕವಾಗಿದೆ ಎಂಬುದನ್ನು ತೋರಿಸಲಿಕ್ಕಾಗಿ ಒಂದು ವೈಯಕ್ತಿಕ ಅನುಭವವನ್ನು ತಿಳಿಸಿರಿ, ಅಥವಾ ಈ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಅನುಭವದ ಸಾರಾಂಶವನ್ನು ತಿಳಿಸಿ.
17 ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರೊಬ್ಬರು ಬರೆದುದು: “ಮನೆಯಿಂದ ಮನೆಗೆ ಸಾಕ್ಷಿ ನೀಡುತ್ತಿರುವಾಗ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಸಹೋದರ ಸಹೋದರಿಯರು ತಮ್ಮ ಕೈಗಳಲ್ಲಿ ಬೈಬಲನ್ನು ತೆಗೆದುಕೊಂಡುಹೋಗುತ್ತಿದ್ದಾರೆ. ಇದು ಪ್ರಚಾರಕರು ಯಾರನ್ನು ಭೇಟಿಯಾಗುತ್ತಾರೋ ಆ ಜನರಲ್ಲಿ ಹೆಚ್ಚಿನವರಿಗೆ ಒಂದು ಶಾಸ್ತ್ರವಚನವನ್ನು ಓದಿಹೇಳುವಂತೆ ಅವರಿಗೆ ಸಹಾಯಮಾಡಿದೆ. ನಮ್ಮ ಶುಶ್ರೂಷೆಯ ಬಗ್ಗೆ ನೆನಸುವಾಗ, ಕೇವಲ ಪತ್ರಿಕೆಗಳು ಮತ್ತು ಪುಸ್ತಕಗಳ ಕುರಿತಾಗಿ ಅಲ್ಲ ಬದಲಾಗಿ ಬೈಬಲ್ ಬಗ್ಗೆ ಯೋಚಿಸುವಂತೆ ಇದು ಮನೆಯವರಿಗೆ ಹಾಗೂ ಪ್ರಚಾರಕನಿಗೆ ನೆರವು ನೀಡಿದೆ.” ಸಾರುವ ಚಟುವಟಿಕೆಯಲ್ಲಿ ಒಳಗೂಡಿರುವಾಗ ನಾವು ಬೈಬಲನ್ನು ಎಲ್ಲರಿಗೆ ಕಾಣುವಂತೆ ಕೊಂಡೊಯ್ಯಬೇಕೋ ಇಲ್ಲವೋ ಎಂಬುದು, ಸ್ಥಳಿಕ ಪದ್ಧತಿಗಳನ್ನು ಒಳಗೊಂಡು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂಬುದಂತೂ ನಿಜ. ಆದರೂ, ರಾಜ್ಯ ಸಂದೇಶವನ್ನು ಅಂಗೀಕರಿಸುವಂತೆ ಇತರರನ್ನು ಒಡಂಬಡಿಸಲಿಕ್ಕಾಗಿ, ನಾವು ದೇವರ ವಾಕ್ಯವನ್ನು ಕೌಶಲದಿಂದ ಉಪಯೋಗಿಸುವವರಾಗಲು ಬಯಸಬೇಕು.
ಶುಶ್ರೂಷೆಯ ವಿಷಯದಲ್ಲಿ ದೇವರ ದೃಷ್ಟಿಕೋನವುಳ್ಳವರಾಗಿರಿ
18, 19. (ಎ) ದೇವರು ನಮ್ಮ ಶುಶ್ರೂಷೆಯನ್ನು ಹೇಗೆ ಪರಿಗಣಿಸುತ್ತಾನೆ, ಮತ್ತು ನಾವು ಆತನ ದೃಷ್ಟಿಕೋನವನ್ನೇ ಏಕೆ ಬೆಳೆಸಿಕೊಳ್ಳಬೇಕು? (ಬಿ) ಸಫಲವಾದ ರೀತಿಯಲ್ಲಿ ಪುನರ್ಭೇಟಿಗಳನ್ನು ಮಾಡಲು ಯಾವುದು ನಮಗೆ ಸಹಾಯಮಾಡುವುದು? (16ನೆಯ ಪುಟದಲ್ಲಿರುವ “ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ” ಎಂಬ ಮೇಲ್ಬರಹವಿರುವ ಚೌಕವನ್ನು ನೋಡಿ.)
18 ನಮ್ಮ ಕೇಳುಗರ ಹೃದಯವನ್ನು ತಲಪುವ ಇನ್ನೊಂದು ವಿಧವು, ಶುಶ್ರೂಷೆಯನ್ನು ದೇವರ ದೃಷ್ಟಿಕೋನದಿಂದ ನೋಡುವುದು 1 ತಿಮೊಥೆಯ 2:3, 4) ಅದು ನಮ್ಮ ಬಯಕೆಯೂ ಆಗಿದೆಯಲ್ಲವೋ? ಯೆಹೋವನು ತಾಳ್ಮೆಯುಳ್ಳವನೂ ಆಗಿದ್ದಾನೆ ಮತ್ತು ಅವನ ತಾಳ್ಮೆಯು ಅನೇಕರು ಪಶ್ಚಾತ್ತಾಪಪಡುವಂತೆ ಅವಕಾಶಗಳನ್ನು ನೀಡುತ್ತದೆ. (2 ಪೇತ್ರ 3:9) ಹೀಗೆ, ರಾಜ್ಯ ಸಂದೇಶಕ್ಕೆ ಕಿವಿಗೊಡಲು ಸಿದ್ಧರಾಗಿರುವಂಥ ಯಾರನ್ನಾದರೂ ನಾವು ಕಂಡುಕೊಳ್ಳುವಾಗ, ಆ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಅವರನ್ನು ಪುನಃ ಪುನಃ ಭೇಟಿಮಾಡುವುದು ಅತ್ಯಗತ್ಯವಾಗಿರಬಹುದು. ಸತ್ಯದ ಬೀಜಗಳು ಬೆಳೆಯುವುದನ್ನು ನೋಡಲು ಸಮಯ ಹಾಗೂ ತಾಳ್ಮೆಯ ಅಗತ್ಯವಿದೆ. (1 ಕೊರಿಂಥ 3:6) ಈ ಲೇಖನದಲ್ಲಿರುವ “ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ” ಎಂಬ ಮೇಲ್ಬರಹವಿರುವ ಚೌಕವು, ಅಂಥ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಸಲಹೆಗಳನ್ನು ಕೊಡುತ್ತದೆ. ಜನರ ಜೀವನಗಳು, ಅವರ ಸಮಸ್ಯೆಗಳು ಹಾಗೂ ಸನ್ನಿವೇಶಗಳು ದಿನೇ ದಿನೇ ಬದಲಾಗುತ್ತಿರುತ್ತವೆ ಎಂಬುದನ್ನು ಮರೆಯದಿರಿ. ಅವರನ್ನು ಮನೆಯಲ್ಲಿ ಕಂಡುಕೊಳ್ಳಲು ಅನೇಕ ಬಾರಿ ಪ್ರಯತ್ನಿಸಬೇಕಾಗಬಹುದು, ಆದರೆ ಆ ಪ್ರಯತ್ನವು ಸಾರ್ಥಕವಾಗುತ್ತದೆ. ರಕ್ಷಣೆಯ ಕುರಿತಾದ ದೇವರ ಸಂದೇಶವನ್ನು ಕೇಳಿಸಿಕೊಳ್ಳಲು ನಾವು ಅವರಿಗೆ ಅವಕಾಶವನ್ನು ಕೊಡಲು ಬಯಸುತ್ತೇವೆ. ಆದುದರಿಂದ, ರಾಜ್ಯ ಸಂದೇಶವನ್ನು ಅಂಗೀಕರಿಸುವಂತೆ ಇತರರಿಗೆ ಸಹಾಯಮಾಡುವ ನಿಮ್ಮ ಕೆಲಸದಲ್ಲಿ ನಿಮ್ಮ ಒಡಂಬಡಿಸುವ ಕೌಶಲಗಳನ್ನು ಇನ್ನಷ್ಟು ಬೆಳೆಸಿಕೊಳ್ಳಲಿಕ್ಕಾಗಿ ವಿವೇಕವನ್ನು ದಯಪಾಲಿಸುವಂತೆ ಯೆಹೋವ ದೇವರಿಗೆ ಪ್ರಾರ್ಥಿಸಿರಿ.
ಮತ್ತು ತಾಳ್ಮೆಯುಳ್ಳವರಾಗಿರುವುದೇ ಆಗಿದೆ. ಎಲ್ಲಾ ಮನುಷ್ಯರು “ಸತ್ಯದ [ನಿಷ್ಕೃಷ್ಟ] ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ. (19 ರಾಜ್ಯ ಸಂದೇಶದ ಕುರಿತು ಇನ್ನೂ ಹೆಚ್ಚನ್ನು ಕೇಳಿಸಿಕೊಳ್ಳಲು ಬಯಸುವಂಥ ಒಬ್ಬ ವ್ಯಕ್ತಿಯನ್ನು ಕಂಡುಕೊಂಡಾಗ, ಕ್ರೈಸ್ತ ಕೆಲಸಗಾರರಾದ ನಾವು ಇನ್ನೇನು ಮಾಡಸಾಧ್ಯವಿದೆ? ಈ ವಿಷಯದಲ್ಲಿ ನಮ್ಮ ಮುಂದಿನ ಲೇಖನವು ಸಹಾಯಮಾಡುತ್ತದೆ.
[ಪಾದಟಿಪ್ಪಣಿ]
^ ಪ್ಯಾರ. 8 ಒಡಂಬಡಿಸುವುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪುಸ್ತಕದ 48 ಮತ್ತು 49ನೆಯ ಅಧ್ಯಯನಗಳನ್ನು ನೋಡಿರಿ.
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ಅಗ್ರಿಪ್ಪ ರಾಜನ ಮುಂದೆ ಪೌಲನ ಪ್ರತಿವಾದವನ್ನು ಯಾವುದು ಪರಿಣಾಮಕಾರಿಯಾಗಿ ಮಾಡಿತು?
• ನಮ್ಮ ಸಂದೇಶವು ಹೃದಯವನ್ನು ಹೇಗೆ ಪ್ರಚೋದಿಸಬಲ್ಲದು?
• ಹೃದಯವನ್ನು ತಲಪುವುದರಲ್ಲಿ ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನಮಗೆ ಯಾವುದು ಸಹಾಯಮಾಡುವುದು?
• ನಾವು ಶುಶ್ರೂಷೆಯನ್ನು ದೇವರ ದೃಷ್ಟಿಕೋನದಿಂದ ಹೇಗೆ ಪರಿಗಣಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
[ಪುಟ 16ರಲ್ಲಿರುವ ಚೌಕ/ಚಿತ್ರಗಳು]
ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ
• ಜನರಲ್ಲಿ ಯಥಾರ್ಥವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ.
• ಚರ್ಚಿಸಲಿಕ್ಕಾಗಿ ಹೃದಯವನ್ನು ಪ್ರಚೋದಿಸುವಂಥ ಒಂದು ಬೈಬಲ್ ವಿಷಯವನ್ನು ಆಯ್ಕೆಮಾಡಿಕೊಳ್ಳಿ.
• ಒಂದರ ನಂತರ ಇನ್ನೊಂದು ಭೇಟಿಗಾಗಿ ತಳಪಾಯವನ್ನು ಹಾಕಿರಿ.
• ನೀವು ಅಲ್ಲಿಂದ ಹೋದ ಬಳಿಕವೂ ಆ ವ್ಯಕ್ತಿಯ ಕುರಿತು ಆಲೋಚಿಸುತ್ತಾ ಇರಿ.
• ತೋರಿಸಲ್ಪಟ್ಟ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಒಂದೆರಡು ದಿನಗಳಲ್ಲೇ ಹಿಂದಿರುಗಿರಿ.
• ಒಂದು ಮನೆ ಬೈಬಲ್ ಅಧ್ಯಯನವನ್ನು ಆರಂಭಿಸುವುದೇ ನಿಮ್ಮ ಗುರಿಯಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.
• ಯೆಹೋವನು ಆಸಕ್ತಿಯನ್ನು ಬೆಳೆಸುವಂತೆ ಆತನಿಗೆ ಪ್ರಾರ್ಥಿಸಿರಿ
[ಪುಟ 15ರಲ್ಲಿರುವ ಚಿತ್ರ]
ದೇಶಾಧಿಪತಿಯಾದ ಫೆಸ್ತ ಹಾಗೂ ಅಗ್ರಿಪ್ಪ ರಾಜನ ಮುಂದೆ ನಿಂತಿದ್ದಾಗ ಪೌಲನು ಒಡಂಬಡಿಸುವಿಕೆಯನ್ನು ಉಪಯೋಗಿಸಿದನು