ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕೃತಜ್ಞತೆಯುಳ್ಳವರಾಗಿರ್ರಿ”

“ಕೃತಜ್ಞತೆಯುಳ್ಳವರಾಗಿರ್ರಿ”

“ಕೃತಜ್ಞತೆಯುಳ್ಳವರಾಗಿರ್ರಿ”

“ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ . . . ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ.”​—ಕೊಲೊಸ್ಸೆ 3:15.

1. ಕ್ರೈಸ್ತ ಸಭೆ ಮತ್ತು ಸೈತಾನನ ಹತೋಟಿಯಲ್ಲಿರುವ ಲೋಕದ ಮಧ್ಯೆ ಯಾವ ಭಿನ್ನತೆಯನ್ನು ನಾವು ಕಂಡುಕೊಳ್ಳುತ್ತೇವೆ?

ಲೋಕದ ಸುತ್ತಲೂ ಇರುವ ಯೆಹೋವನ ಸಾಕ್ಷಿಗಳ 94,600 ಸಭೆಗಳಲ್ಲಿ ನಾವು ಕೃತಜ್ಞತೆಯ ಮನೋಭಾವವನ್ನು ಕಂಡುಕೊಳ್ಳುತ್ತೇವೆ. ಪ್ರತಿಯೊಂದು ಕೂಟವು ಯೆಹೋವನಿಗೆ ಕೃತಜ್ಞತೆಯ ಅಭಿವ್ಯಕ್ತಿಗಳನ್ನು ಒಳಗೊಂಡ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಆರಾಧನೆಯಲ್ಲಿ ಹಾಗೂ ಸಂತೋಷದ ಸಾಹಚರ್ಯದಲ್ಲಿ ಒಳಗೂಡುವಾಗ ಆಬಾಲವೃದ್ಧರು, ಹೊಸಬರು ಮತ್ತು ದೀರ್ಘಕಾಲದ ಸಾಕ್ಷಿಗಳಿಂದ ಮಾಡಲ್ಪಡುವ “ಉಪಕಾರ” ಎಂಬ ಅಥವಾ ತದ್ರೀತಿಯ ಅಭಿವ್ಯಕ್ತಿಗಳನ್ನು ನಾವು ಅನೇಕಬಾರಿ ಕೇಳಿಸಿಕೊಳ್ಳಬಹುದು. (ಕೀರ್ತನೆ 133:1) ‘ದೇವರನ್ನರಿಯದ ಮತ್ತು ಸುವಾರ್ತೆಗೆ ಒಳಪಡದವರ’ ಮಧ್ಯೆ ವ್ಯಾಪಕವಾಗಿರುವ ಸ್ವಾರ್ಥಪರತೆಗೆ ಹೋಲಿಸುವಾಗ ಇದು ಎಷ್ಟು ಭಿನ್ನವಾಗಿದೆ! (2 ಥೆಸಲೊನೀಕ 1:8) ನಾವು ಕೃತಜ್ಞತಾಭಾವವಿಲ್ಲದ ಲೋಕದಲ್ಲಿ ಜೀವಿಸುತ್ತಿದ್ದೇವೆ. ಮತ್ತು ಈ ಲೋಕಕ್ಕೆ ಯಾರು ದೇವರಾಗಿದ್ದಾನೆ ಎಂಬುದನ್ನು ಪರಿಗಣಿಸುವಾಗ ಇದು ನಮ್ಮನ್ನು ಅಚ್ಚರಿಗೊಳಿಸುವುದಿಲ್ಲ. ಅವನು ಪಿಶಾಚನಾದ ಸೈತಾನನಾಗಿದ್ದು, ಸ್ವಾರ್ಥಮಗ್ನತೆಯ ಮಹಾ ಪ್ರತಿಪಾದಕನಾಗಿದ್ದಾನೆ ಮತ್ತು ಅವನ ಅಹಂಕಾರ ಮತ್ತು ದಂಗೆಕೋರ ಮನೋಭಾವವೇ ಮಾನವ ಸಮಾಜದಲ್ಲಿ ಹರಡಿಕೊಂಡಿದೆ!​—ಯೋಹಾನ 8:44; 2 ಕೊರಿಂಥ 4:4; 1 ಯೋಹಾನ 5:19.

2. ನಾವು ಯಾವ ಎಚ್ಚರಿಕೆಗೆ ಕಿವಿಗೊಡಬೇಕಾಗಿದೆ, ಮತ್ತು ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಲಿರುವೆವು?

2 ನಾವು ಸೈತಾನನ ಲೋಕದಿಂದ ಸುತ್ತುವರಿಯಲ್ಪಟ್ಟಿರುವುದರಿಂದ, ಅದರ ಮನೋಭಾವಗಳಿಂದ ಭ್ರಷ್ಟಗೊಳಿಸಲ್ಪಡುವ ವಿಷಯದಲ್ಲಿ ಎಚ್ಚರ ವಹಿಸಬೇಕು. ಪ್ರಥಮ ಶತಮಾನದಲ್ಲಿ, ಎಫೆಸದ ಕ್ರೈಸ್ತರಿಗೆ ಅಪೊಸ್ತಲ ಪೌಲನು ನೆನಪು ಹುಟ್ಟಿಸಿದ್ದು: “ನೀವು ಪೂರ್ವದಲ್ಲಿ ಅಪರಾಧಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮನಿಗೆ ಅನುಸಾರವಾಗಿ ನಡೆದುಕೊಂಡಿರಿ. ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು.” (ಎಫೆಸ 2:2, 3) ಇದು ಇಂದು ಸಹ ಅನೇಕರ ವಿಷಯದಲ್ಲಿ ಸತ್ಯವಾಗಿದೆ. ಹಾಗಾದರೆ ನಾವು ಕೃತಜ್ಞತೆಯ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ಯೆಹೋವನು ಯಾವ ಸಹಾಯವನ್ನು ಒದಗಿಸುತ್ತಾನೆ? ನಾವು ನಿಜವಾಗಿಯೂ ಕೃತಜ್ಞತೆಯುಳ್ಳವರಾಗಿದ್ದೇವೆ ಎಂಬುದನ್ನು ಯಾವ ಪ್ರಾಯೋಗಿಕ ವಿಧಗಳಲ್ಲಿ ತೋರಿಸಬಲ್ಲೆವು?

ಕೃತಜ್ಞತೆಯುಳ್ಳವರಾಗಿರಲು ಕಾರಣಗಳು

3. ನಾವು ಯಾವುದಕ್ಕಾಗಿ ಯೆಹೋವನಿಗೆ ಕೃತಜ್ಞರಾಗಿದ್ದೇವೆ?

3 ವಿಶೇಷವಾಗಿ ಯೆಹೋವನು ನಮಗೆ ದಯಪಾಲಿಸಿರುವ ಅನೇಕಾನೇಕ ದಾನಗಳನ್ನು ಪರಿಗಣಿಸುವಾಗ, ನಮ್ಮ ಕೃತಜ್ಞತೆಯು ನಮ್ಮ ಸೃಷ್ಟಿಕರ್ತನೂ ಜೀವದಾತನೂ ಆಗಿರುವ ಯೆಹೋವ ದೇವರಿಗೇ ಸಲ್ಲಬೇಕು. (ಯಾಕೋಬ 1:17) ನಾವು ಜೀವಂತರಾಗಿರುವುದಕ್ಕಾಗಿ ನಾವು ಯೆಹೋವನಿಗೆ ಪ್ರತಿದಿನ ಕೃತಜ್ಞತೆ ಸಲ್ಲಿಸುತ್ತೇವೆ. (ಕೀರ್ತನೆ 36:9) ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು, ಹಾಗೂ ನಮ್ಮ ಸುತ್ತಲಿರುವ ಅನೇಕ ವಿಷಯಗಳಲ್ಲಿ ಯೆಹೋವನ ಕೈಕೆಲಸದ ಹೇರಳವಾದ ಸಾಕ್ಷ್ಯವನ್ನು ನಾವು ನೋಡುತ್ತೇವೆ. ನಮ್ಮ ಭೂಗ್ರಹದ ಜೀವರಕ್ಷಕ ಖನಿಜಗಳ ಭಂಡಾರ, ವಾತಾವರಣದ ಆವಶ್ಯಕ ಅನಿಲಗಳ ಸಮ್ಮಿಶ್ರಣ, ಮತ್ತು ನಿಸರ್ಗದಲ್ಲಿರುವ ಜಟಿಲವಾದ ಚಕ್ರಗಳೆಲ್ಲವೂ ನಾವು ನಮ್ಮ ಸ್ವರ್ಗೀಯ ತಂದೆಗೆ ಎಷ್ಟು ಚಿರಋಣಿಗಳಾಗಿರಬೇಕು ಎಂಬುದಕ್ಕೆ ಸಾಕ್ಷ್ಯವನ್ನು ನೀಡುತ್ತವೆ. “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ,” ಎಂದು ರಾಜ ದಾವೀದನು ಹಾಡಿದನು.​—ಕೀರ್ತನೆ 40:5.

4. ನಮ್ಮ ಸಭೆಗಳಲ್ಲಿ ನಾವು ಆನಂದಿಸುವ ಸಂತೋಷದಾಯಕ ಸಾಹಚರ್ಯಕ್ಕಾಗಿ ನಾವು ಯೆಹೋವನಿಗೆ ಏಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ?

4 ಇಂದು ಯೆಹೋವನ ಸೇವಕರು ಒಂದು ಭೌತಿಕ ಪರದೈಸಿನಲ್ಲಿ ಜೀವಿಸುತ್ತಿಲ್ಲವಾದರೂ ಆತ್ಮಿಕ ಪರದೈಸಿನ ಜೀವನದಲ್ಲಿ ಆನಂದಿಸುತ್ತಿದ್ದಾರೆ. ನಮ್ಮ ರಾಜ್ಯ ಸಭಾಗೃಹಗಳಲ್ಲಿ ಮತ್ತು ನಮ್ಮ ಅಧಿವೇಶನಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ, ನಮ್ಮ ಜೊತೆ ವಿಶ್ವಾಸಿಗಳಲ್ಲಿ ದೇವರಾತ್ಮದ ಫಲವು ಕಾರ್ಯಪ್ರವೃತ್ತವಾಗಿದೆ ಎಂಬುದನ್ನು ಕಣ್ಣಾರೆ ಕಾಣುತ್ತೇವೆ. ವಾಸ್ತವದಲ್ಲಿ ಕೆಲವು ಸಾಕ್ಷಿಗಳು, ಸ್ವಲ್ಪ ಅಥವಾ ಯಾವುದೇ ಧಾರ್ಮಿಕ ಹಿನ್ನೆಲೆಯಿಲ್ಲದಿರುವಂಥ ವ್ಯಕ್ತಿಗಳಿಗೆ ಸಾರುತ್ತಿರುವಾಗ, ಪೌಲನು ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಯಾವುದನ್ನು ವರ್ಣಿಸಿದನೋ ಅದಕ್ಕೆ ಸೂಚಿಸಿ ಮಾತನಾಡುತ್ತಾರೆ. ಅವರು ಮೊದಲು ‘ಶರೀರಭಾವದ ಕರ್ಮಗಳ’ ಕುರಿತು ತಿಳಿಸಿ, ನಂತರ ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು ಎಂದು ತಮ್ಮ ಕೇಳುಗರನ್ನು ಪ್ರಶ್ನಿಸುತ್ತಾರೆ. (ಗಲಾತ್ಯ 5:19-23) ಅದು ಇಂದಿನ ಮಾನವ ಸಮಾಜದ ಗುಣಲಕ್ಷಣವಾಗಿದೆ ಎಂದು ಅನೇಕರು ತತ್‌ಕ್ಷಣವೇ ಒಪ್ಪಿಕೊಳ್ಳುತ್ತಾರೆ. ದೇವರಾತ್ಮದ ಫಲದ ವರ್ಣನೆಯನ್ನು ತೋರಿಸಿದಾಗ ಮತ್ತು ಅದರ ಸಾಕ್ಷ್ಯವನ್ನು ತಾವಾಗಿಯೇ ನೋಡುವಂತೆ ಸ್ಥಳಿಕ ರಾಜ್ಯ ಸಭಾಗೃಹಕ್ಕೆ ಅವರು ಆಮಂತ್ರಿಸಲ್ಪಟ್ಟಾಗ, ‘ದೇವರು ನಿಜವಾಗಿಯೂ ನಿಮ್ಮಲ್ಲಿದ್ದಾನೆಂದು’ ಅನೇಕರು ಬೇಗನೆ ಅಂಗೀಕರಿಸುತ್ತಾರೆ. (1 ಕೊರಿಂಥ 14:25) ಮತ್ತು ಇದನ್ನು ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಮಾತ್ರ ಕಂಡುಕೊಳ್ಳಲಾಗುವುದಿಲ್ಲ. ನೀವು ಎಲ್ಲಿಗೆ ಪ್ರಯಾಣಿಸಿದರೂ, 60 ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳಲ್ಲಿ ಯಾರನ್ನೇ ಭೇಟಿಯಾದರೂ, ಅದೇ ಸಂತೋಷಕರ, ಆನಂದದಾಯಕ ಮನೋಭಾವವನ್ನು ಕಂಡುಕೊಳ್ಳುತ್ತೀರಿ. ನಿಜವಾಗಿಯೂ, ಆತ್ಮೋನ್ನತಿಮಾಡುವ ಈ ಸಹವಾಸವು ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಕಾರಣವಾಗಿದೆ, ಏಕೆಂದರೆ ಇದನ್ನು ಸಾಧ್ಯಗೊಳಿಸುವ ಶಕ್ತಿಯು ಆತನಿಂದಲೇ ಹೊರಡುತ್ತದೆ.​—ಚೆಫನ್ಯ 3:9; ಎಫೆಸ 3:20, 21.

5, 6. ದೇವರ ಅತಿ ದೊಡ್ಡ ದಾನವಾಗಿರುವ ವಿಮೋಚನೆಗಾಗಿ ನಾವು ಹೇಗೆ ಕೃತಜ್ಞತೆಯನ್ನು ತೋರಿಸಬಲ್ಲೆವು?

5 ಯೆಹೋವನು ಕೊಟ್ಟಿರುವ ಅತಿ ದೊಡ್ಡ ದಾನ ಮತ್ತು ಯಾವ ಕುಂದೂ ಇಲ್ಲದ ವರವು ಆತನ ಮಗನಾದ ಯೇಸುವೇ. ಈತನ ಮೂಲಕವಾಗಿಯೇ ವಿಮೋಚನಾ ಯಜ್ಞವು ಕೊಡಲ್ಪಟ್ಟಿತು. “ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ,” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 4:11) ಹೌದು, ನಾವು ವಿಮೋಚನಾ ಯಜ್ಞಕ್ಕಾಗಿರುವ ಕೃತಜ್ಞತೆಯನ್ನು ಯೆಹೋವನಿಗೆ ಪ್ರೀತಿ ಮತ್ತು ಉಪಕಾರಸ್ಮರಣೆಯನ್ನು ವ್ಯಕ್ತಪಡಿಸುವುದರ ಮೂಲಕ ಮಾತ್ರವಲ್ಲದೆ ಇತರರಿಗೆ ಪ್ರೀತಿಯನ್ನು ವ್ಯಕ್ತಪಡಿಸುವಂಥ ರೀತಿಯ ಜೀವನವನ್ನು ನಡೆಸುವುದರ ಮೂಲಕವೂ ತೋರಿಸಿಕೊಡುತ್ತೇವೆ.​—ಮತ್ತಾಯ 22:37-39.

6 ಯೆಹೋವನು ಪುರಾತನ ಇಸ್ರಾಯೇಲಿನೊಂದಿಗೆ ವ್ಯವಹರಿಸಿದ ರೀತಿಯನ್ನು ಪರಿಗಣಿಸುವುದರಿಂದ ಕೃತಜ್ಞತೆಯನ್ನು ತೋರಿಸುವುದರ ಕುರಿತು ಹೆಚ್ಚನ್ನು ಕಲಿಯಬಲ್ಲೆವು. ಯೆಹೋವನು ಆ ಜನಾಂಗಕ್ಕೆ ಮೋಶೆಯ ಮೂಲಕವಾಗಿ ಕೊಟ್ಟ ಧರ್ಮಶಾಸ್ತ್ರದಿಂದ ಅನೇಕ ಪಾಠಗಳನ್ನು ಕಲಿಸಿದನು. ‘ಧರ್ಮಶಾಸ್ತ್ರದಲ್ಲಿರುವ ಜ್ಞಾನಸತ್ಯಗಳ ಸ್ವರೂಪದ’ ಮೂಲಕ, “ಕೃತಜ್ಞತೆಯುಳ್ಳವರಾಗಿರ್ರಿ” ಎಂಬ ಪೌಲನ ಬುದ್ಧಿವಾದವನ್ನು ಹಿಂಬಾಲಿಸಲು ನಮಗೆ ಸಹಾಯಮಾಡುವ ಹೆಚ್ಚಿನ ವಿಷಯಗಳನ್ನು ನಾವು ಕಲಿಯಬಲ್ಲೆವು.​—ರೋಮಾಪುರ 2:19; ಕೊಲೊಸ್ಸೆ 3:15.

ಮೋಶೆಯ ಧರ್ಮಶಾಸ್ತ್ರದಿಂದ ಮೂರು ಪಾಠಗಳು

7. ದಶಮಭಾಗದ ಏರ್ಪಾಡು, ಇಸ್ರಾಯೇಲ್ಯರು ಯೆಹೋವನಿಗೆ ತಮ್ಮ ಕೃತಜ್ಞತೆಯನ್ನು ತೋರಿಸುವ ಅವಕಾಶವನ್ನು ಹೇಗೆ ಮಾಡಿಕೊಟ್ಟಿತು?

7 ಮೋಶೆಯ ಧರ್ಮಶಾಸ್ತ್ರದಲ್ಲಿ, ಇಸ್ರಾಯೇಲ್ಯರು ಯೆಹೋವನ ಒಳ್ಳೇತನಕ್ಕಾಗಿ ತಮ್ಮ ಪ್ರಾಮಾಣಿಕ ಗಣ್ಯತೆಯನ್ನು ವ್ಯಕ್ತಪಡಿಸಸಾಧ್ಯವಿದ್ದ ಮೂರು ವಿಧಗಳ ಕುರಿತು ಆತನು ಸೂಚಿಸಿದನು. ಮೊದಲನೆಯದ್ದು, ದಶಮಭಾಗದ ಏರ್ಪಾಡಾಗಿತ್ತು. ಹೊಲದ ಉತ್ಪನ್ನದ ದಶಮಭಾಗದೊಂದಿಗೆ, ‘ದನ ಆಡುಕುರಿಗಳಲ್ಲಿ ಪ್ರತಿ ಹತ್ತನೆಯದು,’ “ಯೆಹೋವನಿಗೆ ಮೀಸ”ಲಾಗಿರಬೇಕಿತ್ತು. (ಯಾಜಕಕಾಂಡ 27:30-32) ಇಸ್ರಾಯೇಲ್ಯರು ಇದಕ್ಕೆ ವಿಧೇಯರಾದಾಗ, ಯೆಹೋವನು ಅವರನ್ನು ಸಮೃದ್ಧವಾಗಿ ಆಶೀರ್ವದಿಸಿದನು. “ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.”​—ಮಲಾಕಿಯ 3:10.

8. ದಶಮಭಾಗದ ಏರ್ಪಾಡಿಗೆ ಹೋಲಿಸುವಾಗ ಸ್ವಯಂ ಪ್ರೇರಿತ ಕಾಣಿಕೆಗಳು ಹೇಗೆ ಭಿನ್ನವಾಗಿದ್ದವು?

8 ಎರಡನೆಯದಾಗಿ, ದಶಮಭಾಗದ ಏರ್ಪಾಡಿನೊಟ್ಟಿಗೆ, ಇಸ್ರಾಯೇಲ್ಯರು ಸ್ವಯಂ ಪ್ರೇರಿತ ಕಾಣಿಕೆಗಳನ್ನು ಕೊಡುವಂತೆ ಯೆಹೋವನು ಏರ್ಪಡಿಸಿದನು. ಮೋಶೆಯು ಇಸ್ರಾಯೇಲ್ಯರಿಗೆ ಹೀಗೆ ತಿಳಿಸುವಂತೆ ಆತನು ಹೇಳಿದನು: “ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದನಂತರ ನೀವು ಭೂಮಿಯಿಂದಾದ ಬೆಳೆಯನ್ನು ಅನುಭೋಗಿಸುವಾಗ ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.” ತಮ್ಮ ಎಲ್ಲಾ ಸಂತತಿಯವರು ಅವರ ‘ಕಣಕದಿಂದ ಮಾಡಿದ ರೊಟ್ಟಿಯ’ ಕೆಲವು ಪ್ರಥಮಫಲಗಳನ್ನು ‘ಯೆಹೋವನಿಗೋಸ್ಕರ ಪ್ರತ್ಯೇಕಿಸಿಟ್ಟು’ ಅರ್ಪಿಸಬೇಕಾಗಿತ್ತು. ಈ ಪ್ರಥಮಫಲಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣವು ಅಗತ್ಯಪಡಿಸಲ್ಪಡಲಿಲ್ಲ ಎಂಬುದನ್ನು ಗಮನಿಸಿರಿ. (ಅರಣ್ಯಕಾಂಡ 15:18-21) ಆದರೆ ಇಸ್ರಾಯೇಲ್ಯರು ಕೃತಜ್ಞತಾಪೂರ್ವಕವಾಗಿ ಒಂದು ಕಾಣಿಕೆಯನ್ನು ಅರ್ಪಿಸುವುದಾದರೆ, ಯೆಹೋವನಿಂದ ಆಶೀರ್ವಾದವನ್ನು ಪಡೆಯುವ ಖಾತ್ರಿಯು ಅವರಿಗಿತ್ತು. ಯೆಹೆಜ್ಕೇಲನ ದಾರ್ಶನಿಕ ದೇವಾಲಯದ ಸಂಬಂಧದಲ್ಲಿ ತದ್ರೀತಿಯ ಏರ್ಪಾಡು ಕಾಣಸಿಗುತ್ತದೆ. ನಾವು ಓದುವುದು: “ಎಲ್ಲಾ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲಾ ಪದಾರ್ಥಗಳೂ ಅವರಿಗಾಗಬೇಕು; ನಿಮ್ಮ ಮನೆಯು ಅಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.”​—ಯೆಹೆಜ್ಕೇಲ 44:30.

9. ಹಕ್ಕಲಾಯುವ ಏರ್ಪಾಡಿನ ಮೂಲಕ ಯೆಹೋವನು ಏನನ್ನು ಕಲಿಸಿದನು?

9 ಮೂರನೆಯದಾಗಿ, ಹಕ್ಕಲಾಯುವ ಏರ್ಪಾಡನ್ನು ಯೆಹೋವನು ಜಾರಿಗೆ ತಂದನು. “ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಕೊಯ್ಯಬಾರದು; ಮತ್ತು ಕೊಯ್ದಾಗ ಹಕ್ಕಲಾಯಬಾರದು. ದ್ರಾಕ್ಷೆಯ ತೋಟಗಳಲ್ಲಿಯೂ ಹಕ್ಕಲಾಯಕೂಡದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು,” ಎಂದು ದೇವರು ಉಪದೇಶಿಸಿದನು. (ಯಾಜಕಕಾಂಡ 19:9, 10) ಪುನಃ, ಯಾವುದೇ ನಿರ್ದಿಷ್ಟ ಪ್ರಮಾಣವು ಅಗತ್ಯಪಡಿಸಲ್ಪಡಲಿಲ್ಲ. ಬಡವರಿಗಾಗಿ ಎಷ್ಟನ್ನು ಬಿಡುವುದು ಎಂಬುದನ್ನು ಪ್ರತಿಯೊಬ್ಬ ಇಸ್ರಾಯೇಲ್ಯನು ವೈಯಕ್ತಿಕವಾಗಿ ನಿರ್ಣಯಿಸಬೇಕಾಗಿತ್ತು. ಜ್ಞಾನಿಯಾದ ರಾಜ ಸೊಲೊಮೋನನು ಯುಕ್ತವಾಗಿಯೇ ವಿವರಿಸಿದ್ದು: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು.” (ಜ್ಞಾನೋಕ್ತಿ 19:17) ಈ ರೀತಿಯಲ್ಲಿ ಯೆಹೋವನು ನಿರ್ಗತಿಕರಿಗಾಗಿ ಅನುಕಂಪ ಮತ್ತು ಪರಿಗಣನೆಯನ್ನು ತೋರಿಸುವಂತೆ ಕಲಿಸಿದನು.

10. ಇಸ್ರಾಯೇಲ್‌ ಜನರು ಕೃತಜ್ಞತೆಯನ್ನು ತೋರಿಸಲು ತಪ್ಪಿದಾಗ ಅದು ಯಾವ ಪರಿಣಾಮಗಳನ್ನು ತಂದೊಡ್ಡಿತು?

10 ಇಸ್ರಾಯೇಲ್ಯರು ವಿಧೇಯತೆಯಿಂದ ದಶಮಭಾಗವನ್ನೂ ಸ್ವಯಂ ಪ್ರೇರಿತ ಕಾಣಿಕೆಯನ್ನೂ ಕೊಟ್ಟಾಗ, ಮತ್ತು ಬಡವರ ಆರೈಕೆಮಾಡಿದಾಗ ಯೆಹೋವನು ಅವರನ್ನು ಆಶೀರ್ವದಿಸಿದನು. ಆದರೆ ಇಸ್ರಾಯೇಲ್ಯರು ಕೃತಜ್ಞತೆಯಿಲ್ಲದವರಾಗಿ ನಡೆದುಕೊಂಡಾಗ ಯೆಹೋವನ ಅನುಗ್ರಹವನ್ನು ಕಳೆದುಕೊಂಡರು. ಇದು ವಿನಾಶಕ್ಕೂ ನಂತರ ಧರ್ಮಭ್ರಷ್ಟತೆಗೂ ನಡಿಸಿತು. (2 ಪೂರ್ವಕಾಲವೃತ್ತಾಂತ 36:17-21) ಹಾಗಾದರೆ, ನಮಗಾಗಿರುವ ಪಾಠಗಳಾವುವು?

ನಮ್ಮ ಕೃತಜ್ಞತಾಭರಿತ ಅಭಿವ್ಯಕ್ತಿಗಳು

11. ಯೆಹೋವನಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಬಲ್ಲ ಪ್ರಧಾನ ವಿಧವು ಯಾವುದು?

11 ತದ್ರೀತಿಯಲ್ಲಿ ನಾವು ಯೆಹೋವನಿಗೆ ಸ್ತುತಿಯನ್ನು ಸಲ್ಲಿಸಬಲ್ಲ ಮತ್ತು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಬಲ್ಲ ಪ್ರಧಾನ ವಿಧದಲ್ಲಿಯೂ ಒಂದು “ಕಾಣಿಕೆಯು” ಒಳಗೂಡಿದೆ. ಕ್ರೈಸ್ತರೋಪಾದಿ ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ, ಮತ್ತು ಪ್ರಾಣಿಗಳ ಅಥವಾ ಬೆಳೆಯ ಯಜ್ಞಗಳನ್ನು ಅರ್ಪಿಸಬೇಕಾಗಿಲ್ಲ ಎಂಬುದು ನಿಜ. (ಕೊಲೊಸ್ಸೆ 2:14) ಆದರೂ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರನ್ನು ಉತ್ತೇಜಿಸಿದ್ದು: “ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15) ಸಾರ್ವಜನಿಕ ಶುಶ್ರೂಷೆಯಲ್ಲಿಯಾಗಲಿ ಜೊತೆ ಕ್ರೈಸ್ತರ “ಕೂಡಿದ ಸಭೆಗಳಲ್ಲಿ”ಯಾಗಲಿ ಯೆಹೋವನಿಗೆ ಒಂದು ಸ್ತೋತ್ರಯಜ್ಞವನ್ನು ಅರ್ಪಿಸಲಿಕ್ಕಾಗಿ ನಮ್ಮ ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಉಪಯೋಗಿಸುವ ಮೂಲಕ, ನಾವು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾಗಿರುವ ಯೆಹೋವ ದೇವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಬಲ್ಲೆವು. (ಕೀರ್ತನೆ 26:12) ಹೀಗೆ ಮಾಡುವುದರಲ್ಲಿ, ಇಸ್ರಾಯೇಲ್ಯರು ಯೆಹೋವನಿಗಾಗಿರುವ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾಧ್ಯವಿದ್ದ ವಿಧಗಳಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

12. ನಮ್ಮ ಕ್ರೈಸ್ತ ಜವಾಬ್ದಾರಿಯ ಸಂಬಂಧದಲ್ಲಿ, ದಶಮಭಾಗದ ಏರ್ಪಾಡಿನಿಂದ ನಾವೇನನ್ನು ಕಲಿಯುತ್ತೇವೆ?

12 ಮೊತ್ತಮೊದಲಾಗಿ, ನಾವು ಈಗಾಗಲೇ ನೋಡಿರುವಂತೆ ದಶಮಭಾಗದ ಏರ್ಪಾಡಿನಲ್ಲಿ ಯಾವುದೇ ವಿನಾಯಿತಿಯಿರಲಿಲ್ಲ; ಈ ವಿಷಯದಲ್ಲಿ ಪ್ರತಿಯೊಬ್ಬ ಇಸ್ರಾಯೇಲ್ಯನಿಗೆ ಒಂದು ಹೊಣೆಗಾರಿಕೆಯಿತ್ತು. ಕ್ರೈಸ್ತರೋಪಾದಿ ಶುಶ್ರೂಷೆಯಲ್ಲಿ ಭಾಗವಹಿಸುವ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವ ಜವಾಬ್ದಾರಿ ನಮ್ಮ ಮೇಲೆ ಇದೆ. ಈ ಚಟುವಟಿಕೆಗಳಿಗೆ ಯಾವುದೇ ವಿನಾಯಿತಿಯಿಲ್ಲ. ಅಂತ್ಯಕಾಲದ ಕುರಿತಾದ ತನ್ನ ಮಹಾ ಪ್ರವಾದನೆಯಲ್ಲಿ ಯೇಸು ನಿರ್ದಿಷ್ಟವಾಗಿ ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14; 28:19, 20) ಕ್ರೈಸ್ತ ಕೂಟಗಳ ಕುರಿತಾಗಿ ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಸಾರುವುದು ಮತ್ತು ಕಲಿಸುವುದು ಮಾತ್ರವಲ್ಲದೆ ನಮ್ಮ ಸಹೋದರರೊಂದಿಗೆ ಸಹವಾಸಿಸುವ ಜವಾಬ್ದಾರಿಯನ್ನು ಒಂದು ಸುಯೋಗವಾಗಿ ಮತ್ತು ಗೌರವವಾಗಿ ವೀಕ್ಷಿಸುತ್ತಾ ಸಂತೋಷದಿಂದ ಸ್ವೀಕರಿಸುವಾಗ, ಯೆಹೋವನಿಗೆ ನಾವು ಕೃತಜ್ಞತೆಯನ್ನು ತೋರಿಸುತ್ತೇವೆ.

13. ಸ್ವಯಂ ಪ್ರೇರಿತ ಕಾಣಿಕೆಗಳು ಮತ್ತು ಹಕ್ಕಲಾಯುವ ಏರ್ಪಾಡುಗಳಿಂದ ಯಾವ ಪಾಠಗಳನ್ನು ಕಲಿಯಬಹುದು?

13 ಇದರೊಟ್ಟಿಗೆ, ಇಸ್ರಾಯೇಲ್ಯರು ಗಣ್ಯತೆಯನ್ನು ವ್ಯಕ್ತಪಡಿಸಸಾಧ್ಯವಿದ್ದ ಇತರ ಎರಡು ಏರ್ಪಾಡುಗಳನ್ನು ಪರಿಗಣಿಸುವುದರಿಂದಲೂ ನಾವು ಪ್ರಯೋಜನವನ್ನು ಪಡೆಯಬಲ್ಲೆವು. ಅವು ಸ್ವಯಂ ಪ್ರೇರಿತ ಕಾಣಿಕೆಗಳು ಮತ್ತು ಹಕ್ಕಲಾಯುವ ಏರ್ಪಾಡುಗಳಾಗಿವೆ. ನಿರ್ದಿಷ್ಟವಾಗಿ ಇಷ್ಟೇ ಕೊಡಬೇಕೆಂದು ವರ್ಣಿಸಲ್ಪಟ್ಟಿದ್ದ ದಶಮಭಾಗದ ಏರ್ಪಾಡಿಗೆ ವ್ಯತಿರಿಕ್ತವಾಗಿ, ಸ್ವಯಂ ಪ್ರೇರಿತ ಕಾಣಿಕೆಗಳಲ್ಲಿ ಮತ್ತು ಹಕ್ಕಲಾಯುವ ಏರ್ಪಾಡುಗಳಲ್ಲಿ ಯಾವುದೇ ನಿರ್ದಿಷ್ಟ ಪ್ರಮಾಣವು ಅಗತ್ಯಪಡಿಸಲ್ಪಡಲಿಲ್ಲ. ಬದಲಿಗೆ, ಅವು ಯೆಹೋವನ ಸೇವಕನೊಬ್ಬನ ಹೃದಯದಾಳದ ಗಾಢವಾದ ಗಣ್ಯತೆಯು ಅವನನ್ನು ಕ್ರಿಯೆಗೈಯಲು ಪ್ರೇರಿಸುವಂತೆ ಅನುಮತಿಸಿದವು. ತುಲನಾತ್ಮಕ ರೀತಿಯಲ್ಲಿ, ಶುಶ್ರೂಷೆಯಲ್ಲಿ ಭಾಗವಹಿಸುವುದು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಯೆಹೋವನ ಸೇವಕನೊಬ್ಬನ ಮೂಲಭೂತ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ಗ್ರಹಿಸುವುದಾದರೂ, ನಾವು ಅವುಗಳಲ್ಲಿ ಪೂರ್ಣ ಮನಸ್ಸಿನಿಂದ ಮತ್ತು ಇಷ್ಟಪೂರ್ವಕವಾಗಿ ಭಾಗಿಗಳಾಗುತ್ತೇವೋ? ನಾವು ಅವುಗಳನ್ನು, ಯೆಹೋವನು ನಮಗಾಗಿ ಮಾಡಿರುವ ಎಲ್ಲದಕ್ಕಾಗಿ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸಬಲ್ಲ ಅವಕಾಶಗಳಾಗಿ ವೀಕ್ಷಿಸುತ್ತೇವೋ? ನಮ್ಮ ವೈಯಕ್ತಿಕ ಪರಿಸ್ಥಿತಿಗಳು ಅನುಮತಿಸುವಷ್ಟರ ಮಟ್ಟಿಗೆ ನಾವು ಆ ಚಟುವಟಿಕೆಗಳಲ್ಲಿ ಧಾರಾಳವಾಗಿ ಪಾಲ್ಗೊಳ್ಳುತ್ತೇವೋ? ಅಥವಾ ಇವೆಲ್ಲವೂ ನಮ್ಮ ಕರ್ತವ್ಯವೆಂದು ಮಾತ್ರ ನಾವು ವೀಕ್ಷಿಸುತ್ತೇವೋ? ವಾಸ್ತವದಲ್ಲಿ, ಈ ಎಲ್ಲಾ ಪ್ರಶ್ನೆಗಳಿಗೆ ನಾವು ವೈಯಕ್ತಿಕವಾಗಿ ಉತ್ತರವನ್ನು ನೀಡಬೇಕಾಗಿದೆ. ಅಪೊಸ್ತಲ ಪೌಲನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”​—ಗಲಾತ್ಯ 6:4.

14. ನಾವು ಅರ್ಪಿಸುವ ಸೇವೆಯಲ್ಲಿ ಯೆಹೋವನು ಯಾವುದನ್ನು ಅಪೇಕ್ಷಿಸುತ್ತಾನೆ?

14 ಯೆಹೋವ ದೇವರು ನಮ್ಮ ಪರಿಸ್ಥಿತಿಗಳನ್ನು ಪೂರ್ಣವಾಗಿ ಬಲ್ಲವನಾಗಿದ್ದಾನೆ. ನಮ್ಮ ಇತಿಮಿತಿಗಳು ಸಹ ಆತನಿಗೆ ತಿಳಿದಿವೆ. ತನ್ನ ಸೇವಕರು ಕೊಡುವ ಕಾಣಿಕೆಯು ದೊಡ್ಡದಾದರೂ ಚಿಕ್ಕದಾದರೂ ಅದನ್ನು ಅಮೂಲ್ಯವೆಂದೆಣಿಸುತ್ತಾನೆ. ನಾವೆಲ್ಲರೂ ಒಂದೇ ಪ್ರಮಾಣದಲ್ಲಿ ಕೊಡುವಂತೆ ಆತನು ಅಪೇಕ್ಷಿಸುವುದಿಲ್ಲ, ಮತ್ತು ಅದು ಸಾಧ್ಯವೂ ಇಲ್ಲ. ಐಹಿಕ ಕೊಡುವಿಕೆಯ ಕುರಿತು ಚರ್ಚಿಸುತ್ತಿದ್ದಾಗ ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗೆ ಹೇಳಿದ್ದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.” (2 ಕೊರಿಂಥ 8:12) ಈ ಮೂಲತತ್ತ್ವವು ನಮ್ಮ ದೇವರಿಗೆ ಅರ್ಪಿಸುವ ಸೇವೆಗೂ ಸಮಪ್ರಮಾಣದಲ್ಲಿ ಅನ್ವಯಿಸುತ್ತದೆ. ನಮ್ಮ ಸೇವೆಯು ಯೆಹೋವನಿಗೆ ಮೆಚ್ಚಿಗೆಯಾಗಿದೆಯೋ ಎಂಬುದು ಅದರ ಪ್ರಮಾಣದ ಮೇಲಲ್ಲ, ಬದಲಿಗೆ ಅದನ್ನು ಸಂತೋಷದಿಂದಲೂ ಪೂರ್ಣ ಮನಸ್ಸಿನಿಂದಲೂ ಮಾಡುವ ರೀತಿಯ ಮೇಲೆ ನಿರ್ಧರಿಸಲ್ಪಡುತ್ತದೆ.​—ಕೀರ್ತನೆ 100:1-5; ಕೊಲೊಸ್ಸೆ 3:23.

ಪಯನೀಯರ್‌ ಆತ್ಮವನ್ನು ಬೆಳೆಸಿಕೊಳ್ಳಿರಿ ಮತ್ತು ಕಾಪಾಡಿಕೊಳ್ಳಿರಿ

15, 16. (ಎ) ಪಯನೀಯರ್‌ ಶುಶ್ರೂಷೆ ಮತ್ತು ಕೃತಜ್ಞತೆಯ ಮಧ್ಯೆ ಯಾವ ಸಂಬಂಧವಿದೆ? (ಬಿ) ಪಯನೀಯರ್‌ ಸೇವೆಮಾಡಲು ಸಾಧ್ಯವಿಲ್ಲದಿರುವವರು ಹೇಗೆ ಪಯನೀಯರ್‌ ಆತ್ಮವನ್ನು ಪ್ರದರ್ಶಿಸಬಹುದು?

15 ಯೆಹೋವನಿಗಾಗಿರುವ ನಮ್ಮ ಕೃತಜ್ಞತೆಯನ್ನು ತೋರಿಸಬಲ್ಲ ಒಂದು ಸಂತೃಪ್ತಿದಾಯಕ ವಿಧವು, ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸುವುದೇ ಆಗಿದೆ. ಯೆಹೋವನ ಮೇಲಿರುವ ಪ್ರೀತಿ ಮತ್ತು ಆತನ ಅಪಾತ್ರ ದಯೆಯ ಉಪಕಾರ ಸ್ಮರಣೆಯಿಂದ ಪ್ರೇರಿಸಲ್ಪಟ್ಟವರಾಗಿ, ಯೆಹೋವನ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲಿಕ್ಕಾಗಿ ಅನೇಕ ಸಮರ್ಪಿತ ಸೇವಕರು ತಮ್ಮ ಜೀವನಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ಕೆಲವರು, ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಜನರಿಗೆ ಸತ್ಯವನ್ನು ಬೋಧಿಸುವುದರಲ್ಲಿ ತಿಂಗಳಿಗೆ ಸರಾಸರಿ 70 ತಾಸುಗಳನ್ನು ಕಳೆಯುವ ಮೂಲಕ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೆ. ಇತರರು, ಪ್ರಾಯಶಃ ವಿವಿಧ ಕಾರಣಗಳಿಂದ ಸೀಮಿತ ಸಂದರ್ಭಗಳಿರುವವರು, ಆಗಿಂದಾಗ್ಗೆ ತಿಂಗಳಿಗೆ 50 ತಾಸುಗಳನ್ನು ವ್ಯಯಿಸುತ್ತಾ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಪ್ರಯತ್ನಿಸುತ್ತಾರೆ.

16 ಆದರೆ ರೆಗ್ಯುಲರ್‌ ಪಯನೀಯರರಾಗಿಯೋ ಅಥವಾ ಆಕ್ಸಿಲಿಯರಿ ಪಯನೀಯರರಾಗಿಯೋ ಸೇವೆ ಸಲ್ಲಿಸಲು ಸಾಧ್ಯವಿಲ್ಲದಿರುವ ಇತರ ಅನೇಕ ಯೆಹೋವನ ಸೇವಕರ ಕುರಿತಾಗಿ ಏನು? ಅವರು ಪಯನೀಯರ್‌ ಆತ್ಮವನ್ನು ಬೆಳೆಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ಮೂಲಕ ತಮ್ಮ ಕೃತಜ್ಞತೆಯನ್ನು ತೋರಿಸಬಲ್ಲರು. ಹೇಗೆ? ಪಯನೀಯರ್‌ ಸೇವೆಮಾಡಲು ಸಾಧ್ಯವಿರುವವರನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಪೂರ್ಣ ಸಮಯದ ಸೇವೆಯನ್ನು ಜೀವನವೃತ್ತಿಯನ್ನಾಗಿ ಮಾಡಿಕೊಳ್ಳುವ ಬಯಕೆಯನ್ನು ತಮ್ಮ ಮಕ್ಕಳಲ್ಲಿ ತುಂಬಿಸುವ ಮೂಲಕ, ಹಾಗೂ ತಮ್ಮ ಪರಿಸ್ಥಿತಿಗಳಿಗನುಸಾರ ಸಾರುವಿಕೆಯಲ್ಲಿ ಶ್ರದ್ಧೆಯಿಂದ ಭಾಗವಹಿಸುವ ಮೂಲಕವೇ. ನಾವು ಶುಶ್ರೂಷೆಯಲ್ಲಿ ಎಷ್ಟನ್ನು ಕೊಡುತ್ತೇವೋ ಅದು, ಹೆಚ್ಚಿನಾಂಶ ಯೆಹೋವನು ನಮಗಾಗಿ ಮಾಡಿರುವ, ಮಾಡುತ್ತಿರುವ, ಮತ್ತು ಇನ್ನೂ ಮಾಡಲಿರುವ ವಿಷಯಗಳಿಗಾಗಿರುವ ಆಳವಾದ ಗಣ್ಯತೆಯ ಮೇಲೆ ಆತುಕೊಂಡಿದೆ.

ನಮ್ಮ “ಆದಾಯದಿಂದ” ಕೃತಜ್ಞತೆಯನ್ನು ತೋರಿಸುವುದು

17, 18. (ಎ) ನಾವು ನಮ್ಮ “ಆದಾಯದಿಂದ” ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬಲ್ಲೆವು? (ಬಿ) ವಿಧವೆಯ ಕಾಣಿಕೆಯನ್ನು ಯೇಸು ಹೇಗೆ ಮೌಲ್ಯಮಾಡಿದನು, ಮತ್ತು ಏಕೆ?

17 “ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು,” ಎಂದು ಜ್ಞಾನೋಕ್ತಿ 3:9 ಹೇಳುತ್ತದೆ. ಯೆಹೋವನ ಸೇವಕರು ಈಗ ದಶಮಭಾಗವನ್ನು ಕೊಡಬೇಕಾಗಿರುವುದಿಲ್ಲ. ಬದಲಿಗೆ, ಪೌಲನು ಕೊರಿಂಥದ ಕ್ರೈಸ್ತರಿಗೆ ಬರೆದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಲೋಕವ್ಯಾಪಕ ರಾಜ್ಯ ಸಾರುವ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಸ್ವಯಂ ಪ್ರೇರಿತ ಕಾಣಿಕೆಗಳನ್ನು ಕೊಡುವುದು ಸಹ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಹೃತ್ಪೂರ್ವಕ ಗಣ್ಯತೆಯು ಇದನ್ನು ಕ್ರಮವಾಗಿ, ಪ್ರಾಯಶಃ ಆದಿ ಕ್ರೈಸ್ತರು ಮಾಡಿದಂತೆ ಪ್ರತಿ ವಾರಕ್ಕೆಂದು ಸ್ವಲ್ಪವನ್ನು ಬದಿಗಿರಿಸುವಂತೆ ನಮ್ಮನ್ನು ಪ್ರೇರಿಸುವುದು.​—1 ಕೊರಿಂಥ 16:1, 2.

18 ನಾವು ಯೆಹೋವನಿಗೆ ಎಷ್ಟು ಪ್ರಮಾಣದಲ್ಲಿ ಕೊಡುತ್ತೇವೆ ಎಂಬುದು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವುದಿಲ್ಲ. ಬದಲಿಗೆ, ನಾವು ಯಾವ ಮನೋಭಾವದಿಂದ ಕೊಡುತ್ತೇವೆ ಎಂಬುದು ಅದನ್ನು ವ್ಯಕ್ತಪಡಿಸುತ್ತದೆ. ಜನರು ಆಲಯದ ಬೊಕ್ಕಸದಲ್ಲಿ ತಮ್ಮ ಕಾಣಿಕೆಗಳನ್ನು ಹಾಕುತ್ತಿರುವುದನ್ನು ನೋಡುತ್ತಿದ್ದಾಗ ಯೇಸು ಇದನ್ನು ಗಮನಿಸಿದನು. ಒಬ್ಬ ಬಡ ವಿಧವೆಯು ತುಂಬ ಕಡಿಮೆ ಮೌಲ್ಯದ “ಎರಡು ಕಾಸುಗಳನ್ನು” ಹಾಕುವುದನ್ನು ನೋಡಿದಾಗ, ಅವನು ಹೇಳಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು.”​—ಲೂಕ 21:1-4.

19. ನಾವು ನಮ್ಮ ಕೃತಜ್ಞತೆಯನ್ನು ತೋರಿಸುವ ವಿಧಗಳನ್ನು ಮರುಪರಿಶೀಲಿಸುವುದು ಏಕೆ ಉತ್ತಮವಾಗಿರುವುದು?

19 ನಾವು ನಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಸಾಧ್ಯವಿದೆ ಎಂಬ ವಿಷಯದ ಕುರಿತಾದ ಈ ಪುನರ್ವಿಮರ್ಶೆಯು, ನಾವು ಉಪಕಾರವನ್ನು ತೋರಿಸುವ ವಿಧಗಳನ್ನು ಮರುಪರಿಶೀಲಿಸುವಂತೆ ನಮ್ಮನ್ನು ಪ್ರೋತ್ಸಾಹಿಸಲಿ. ಪ್ರಾಯಶಃ ಯೆಹೋವನಿಗೆ ನಾವರ್ಪಿಸುವ ಸ್ತೋತ್ರಯಜ್ಞವನ್ನು ಮಾತ್ರವಲ್ಲದೆ ಲೋಕವ್ಯಾಪಕ ಕೆಲಸಕ್ಕೆ ನಾವು ನೀಡುವ ಭೌತಿಕ ಬೆಂಬಲವನ್ನು ಹೆಚ್ಚಿಸಬಲ್ಲೆವೋ? ನಾವಿದನ್ನು ಎಷ್ಟರ ಮಟ್ಟಿಗೆ ಮಾಡುತ್ತೇವೋ ಅಷ್ಟರ ಮಟ್ಟಿಗೆ ನಮ್ಮ ಉದಾರ ಪ್ರೀತಿಯ ತಂದೆಯಾಗಿರುವ ಯೆಹೋವನಿಗೆ ನಾವು ನಮ್ಮನ್ನು ಕೃತಜ್ಞತೆಯುಳ್ಳವರಾಗಿ ತೋರಿಸಿಕೊಳ್ಳುತ್ತೇವೆ ಎಂಬ ವಿಷಯದಲ್ಲಿ ಆತನು ಸಂತೋಷಿಸುತ್ತಾನೆ ಎಂದು ನಿಶ್ಚಯದಿಂದಿರಬಲ್ಲೆವು.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ನಾವು ಯಾವ ಕಾರಣಗಳಿಗಾಗಿ ಯೆಹೋವನಿಗೆ ಕೃತಜ್ಞರಾಗಿರಬೇಕು?

• ದಶಮಭಾಗ ಕೊಡುವಿಕೆ, ಸ್ವಯಂ ಪ್ರೇರಿತ ಕಾಣಿಕೆಗಳು, ಮತ್ತು ಹಕ್ಕಲಾಯುವ ಏರ್ಪಾಡಿನಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳುತ್ತೇವೆ?

• ಪಯನೀಯರ್‌ ಆತ್ಮವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

• ಯೆಹೋವನಿಗೆ ಕೃತಜ್ಞತೆ ಸಲ್ಲಿಸಲಿಕ್ಕಾಗಿ ನಾವು ನಮ್ಮ ‘ಆದಾಯವನ್ನು’ ಹೇಗೆ ಉಪಯೋಗಿಸಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

“ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ . . . ಇಳಿದುಬರುತ್ತವೆ”

[ಪುಟ 16ರಲ್ಲಿರುವ ಚಿತ್ರಗಳು]

ಧರ್ಮಶಾಸ್ತ್ರದಿಂದ ಯಾವ ಮೂರು ಪಾಠಗಳನ್ನು ಇಲ್ಲಿ ತೋರಿಸಲಾಗಿದೆ?

[ಪುಟ 18ರಲ್ಲಿರುವ ಚಿತ್ರಗಳು]

ಯಾವ ಯಜ್ಞಗಳನ್ನು ನಾವು ಅರ್ಪಿಸಬಲ್ಲೆವು?