‘ಯೆಹೋವನಿಗೆ ಬದಲೇನು ಮಾಡಲಿ?’
ಜೀವನ ಕಥೆ
‘ಯೆಹೋವನಿಗೆ ಬದಲೇನು ಮಾಡಲಿ?’
ಮಾರೀಯಾ ಕೆರಾಸೀನೀಸ್ ಅವರು ಹೇಳಿದಂತೆ
ನಾನು 18 ವರುಷ ಪ್ರಾಯದವಳಾಗಿದ್ದಾಗ, ನನ್ನ ಹೆತ್ತವರಿಗೆ ನಿರಾಶೆಯ ಮೂಲವಾಗಿದ್ದೆ, ಕುಟುಂಬದಲ್ಲಿ ಒಬ್ಬ ಬಹಿಷ್ಕೃತಳಂತಿದ್ದೆ, ಮತ್ತು ಊರಿನ ಜನರ ಮಧ್ಯೆ ಹಾಸ್ಯಾಸ್ಪದಳಾಗಿದ್ದೆ. ದೇವರ ಕಡೆಗೆ ನನ್ನಲ್ಲಿದ್ದ ಸಮಗ್ರತೆಯನ್ನು ಮುರಿಯಲು ಬಿನ್ನಹಗಳು, ನಿರ್ಬಂಧಗಳು ಮತ್ತು ಬೆದರಿಕೆಗಳನ್ನು ಉಪಯೋಗಿಸಲಾಯಿತು. ಆದರೆ ಯಾವುದೇ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಬೈಬಲಿನ ಸತ್ಯಕ್ಕೆ ನಿಷ್ಠೆಯಿಂದ ಅಂಟಿಕೊಳ್ಳುವುದು ಆತ್ಮಿಕ ಪ್ರಯೋಜನಗಳನ್ನು ತರುತ್ತದೆ ಎಂಬ ಭರವಸೆ ನನಗಿತ್ತು. ಈಗ 50ಕ್ಕಿಂತಲೂ ಹೆಚ್ಚಿನ ವರುಷಗಳನ್ನು ಯೆಹೋವನ ಸೇವೆಯಲ್ಲಿ ಕಳೆದಿರುವ ನಾನು ಸಹ ಕೀರ್ತನೆಗಾರನ ಈ ಮಾತುಗಳನ್ನು ಪ್ರತಿಧ್ವನಿಸಬಲ್ಲೆನು: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”—ಕೀರ್ತನೆ 116:12.
ನಾನು 1930ರಲ್ಲಿ ಆ್ಯಂಗಿಲೋಕಾಸ್‌ಟ್ರೊ ಎಂಬಲ್ಲಿ ಜನಿಸಿದೆ. ಈ ಸ್ಥಳವು, ಮೊದಲನೆಯ ಶತಮಾನದಲ್ಲಿ ಸತ್ಯ ಕ್ರೈಸ್ತರ ಸಭೆಯು ಎಲ್ಲಿ ಸ್ಥಾಪನೆಯಾಯಿತೋ ಆ ಕೊರಿಂಥದ ಭೂಸಂಧಿಯ ಪೂರ್ವಭಾಗದಲ್ಲಿರುವ ಕೆಂಕ್ರೆ ಬಂದರಿನಿಂದ ಸುಮಾರು 20 ಕಿಲೊಮೀಟರ್ ದೂರದಲ್ಲಿರುವ ಒಂದು ಹಳ್ಳಿಯಾಗಿದೆ.—ಅ. ಕೃತ್ಯಗಳು 18:18; ರೋಮಾಪುರ 16:1.
ನಮ್ಮ ಕುಟುಂಬ ಜೀವನವು ಶಾಂತಿಭರಿತವಾಗಿತ್ತು. ನನ್ನ ತಂದೆಯವರು ಸಮುದಾಯದ ಮುಖ್ಯಸ್ಥರೂ ಗೌರವಾನ್ವಿತ ವ್ಯಕ್ತಿಯೂ ಆಗಿದ್ದರು. ಐವರು ಮಕ್ಕಳಲ್ಲಿ ನಾನು ಮೂರನೆಯವಳಾಗಿದ್ದೆ. ನನ್ನ ಹೆತ್ತವರು ನಮ್ಮನ್ನು ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಧರ್ಮನಿಷ್ಠ ಸದಸ್ಯರಾಗಿ ಬೆಳೆಸಿದರು. ನಾನು ಪ್ರತಿ ಭಾನುವಾರದಂದು ಮಾಸ್‌ಗೆ ಹಾಜರಾಗುತ್ತಿದ್ದೆ. ವಿಗ್ರಹಗಳ ಮುಂದೆ ನಾನು ಪಾಪನಿವೇದನೆಯನ್ನು ಮಾಡುತ್ತಿದ್ದೆ, ನಮ್ಮ ಹಳ್ಳಿಯಲ್ಲಿದ್ದ ಪ್ರಾರ್ಥನಾ ಮಂದಿರಗಳಲ್ಲಿ ಮೇಣದ ಬತ್ತಿಯನ್ನು ಉರಿಸುತ್ತಿದ್ದೆ, ಮತ್ತು ಎಲ್ಲಾ ಉಪವಾಸಗಳನ್ನು ಆಚರಿಸುತ್ತಿದ್ದೆ. ಒಬ್ಬ ಕ್ರೈಸ್ತ ಸಂನ್ಯಾಸಿನಿಯಾಗಲು ನಾನು ಅನೇಕಬಾರಿ ಆಲೋಚಿಸಿದ್ದೆ. ಸಮಯಾನಂತರ, ನನ್ನ ಕುಟುಂಬದಲ್ಲಿ ನನ್ನ ಹೆತ್ತವರನ್ನು ನಿರಾಶೆಗೊಳಿಸಿದ ಮೊದಲ ವ್ಯಕ್ತಿ ನಾನಾಗಿದ್ದೆ.
ಬೈಬಲ್ ಸತ್ಯದಿಂದ ರೋಮಾಂಚಿತಳು
ನಾನು 18 ವರುಷ ಪ್ರಾಯದವಳಾಗಿದ್ದಾಗ, ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿದ್ದ ನನ್ನ ಭಾವನ ತಂಗಿಯಾದ ಕಾಟೀನಾಳು ಯೆಹೋವನ ಸಾಕ್ಷಿಗಳ ಸಾಹಿತ್ಯಗಳನ್ನು ಓದುತ್ತಿದ್ದಾಳೆಂದೂ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ್ದಾಳೆಂದೂ ನನಗೆ ತಿಳಿದುಬಂತು. ಇದು ನನ್ನನ್ನು ಬಹಳ ದುಃಖಿತಳನ್ನಾಗಿ
ಮಾಡಿತು, ಆದುದರಿಂದ ನಾನು ಯಾವುದನ್ನು ಸರಿ ಎಂಬುದಾಗಿ ನೆನಸುತ್ತಿದ್ದೆನೋ ಆ ಮಾರ್ಗಕ್ಕೆ ಹಿಂದಿರುಗಿ ಬರಲು ಅವಳಿಗೆ ಸಹಾಯಮಾಡಬೇಕೆಂದು ನಿರ್ಣಯಿಸಿದೆ. ಹೀಗೆ, ಅವಳು ನಮ್ಮನ್ನು ಭೇಟಿಯಾಗಲು ಬಂದಾಗ, ಅವಳನ್ನು ಪಾದ್ರಿಯ ಮನೆಗೆ ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಅವಳೊಂದಿಗೆ ವಾಕಿಂಗ್‌ಗೆ ಹೋಗುವ ಏರ್ಪಾಡನ್ನು ನಾನು ಮಾಡಿದೆ. ಪಾದ್ರಿಯು ಅವಳೊಂದಿಗೆ ಮಾತನಾಡಲು ಆರಂಭಿಸಿ, ಕಾಟೀನಾಳನ್ನು ತಪ್ಪುದಾರಿಗೆಳೆದ ಯೆಹೋವನ ಸಾಕ್ಷಿಗಳನ್ನು ಪಾಷಂಡಿಗಳು ಎಂದು ಕರೆಯುತ್ತಾ ಅವರ ವಿರುದ್ಧ ಅವಹೇಳನದ ಸುರಿಮಳೆಯನ್ನೇ ಸುರಿಸಿದನು. ಒಂದರ ನಂತರ ಇನ್ನೊಂದರಂತೆ ಮೂರು ರಾತ್ರಿಗಳ ವರೆಗೆ ಈ ಚರ್ಚೆಯು ಮುಂದುವರಿಯಿತು. ಉತ್ತಮವಾಗಿ ತಯಾರಿಸಲ್ಪಟ್ಟಿರುವ ಬೈಬಲ್ ಆಧಾರಿತ ಚರ್ಚೆಗಳ ಮೂಲಕ ಎಲ್ಲಾ ಆಪಾದನೆಯನ್ನು ತಪ್ಪೆಂದು ಕಾಟೀನಾ ರುಜುಪಡಿಸಿದಳು. ಕೊನೆಯಲ್ಲಿ ಪಾದ್ರಿಯು ಅವಳಿಗೆ—ನೀನು ಬಹಳ ಸುಂದರಿ ಹಾಗೂ ಜಾಣ ಹುಡುಗಿಯಾಗಿದ್ದಿ, ಆದುದರಿಂದ ಈಗ ನಿನ್ನ ಯೌವನದಲ್ಲಿ ಆನಂದಿಸು ಮತ್ತು ಮುಂದಕ್ಕೆ ಪ್ರಾಯಸ್ಥಳಾದಾಗ ದೇವರ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊ ಎಂದು ಹೇಳಿದನು.ಈ ಚರ್ಚೆಯ ಕುರಿತು ನಾನು ನನ್ನ ಹೆತ್ತವರಿಗೆ ಏನನ್ನೂ ತಿಳಿಸಲಿಲ್ಲ, ಆದರೆ ಹಿಂಬಾಲಿಸಿ ಬಂದ ಭಾನುವಾರದಂದು ನಾನು ಚರ್ಚಿಗೆ ಹೋಗಲಿಲ್ಲ. ಮಧ್ಯಾಹ್ನ ಪಾದ್ರಿಯು ನಮ್ಮ ಅಂಗಡಿಗೆ ಬಂದನು. ನನ್ನ ತಂದೆಗೆ ಸಹಾಯಮಾಡಲು ನಾನು ಅಂಗಡಿಯಲ್ಲೇ ಉಳಿಯಬೇಕಾಯಿತು ಎಂಬುದಾಗಿ ಚರ್ಚಿಗೆ ಹೋಗದಿದ್ದದ್ದಕ್ಕೆ ಒಂದು ನೆವವನ್ನು ಹೇಳಿದೆ.
“ನಿಜವಾಗಿಯೂ ಇದೇ ಕಾರಣವಾಗಿತ್ತೋ ಅಥವಾ ಆ ಹುಡುಗಿ ನಿನ್ನನ್ನೂ ಪ್ರಭಾವಿಸಿದಳೋ?” ಎಂದು ಪಾದ್ರಿಯು ಕೇಳಿದನು.
“ನಮಗಿಂತ ಹೆಚ್ಚು ಉತ್ತಮವಾದ ನಂಬಿಕೆಗಳು ಆ ಜನರಲ್ಲಿವೆ” ಎಂದು ನಾನು ನೇರವಾಗಿ ಹೇಳಿದೆ.
ನನ್ನ ತಂದೆಯ ಕಡೆಗೆ ತಿರುಗಿ ಪಾದ್ರಿಯು ಹೇಳಿದ್ದು: “ಮಿಸ್ಟರ್ ಈಕಾನಾಮೊಸ್, ನಿಮ್ಮ ಸಂಬಂಧಿಕಳನ್ನು ನಿಮ್ಮ ಮನೆಯಿಂದ ಕೂಡಲೆ ಹೊರಗಟ್ಟಿ; ಅವಳು ನಿಮ್ಮ ಕುಟುಂಬಕ್ಕೆ ಬೆಂಕಿ ಹಚ್ಚುತ್ತಾಳೆ.”
ನನ್ನ ಕುಟುಂಬವು ನನಗೆ ವಿರುದ್ಧವಾಗಿ ನಿಲ್ಲುತ್ತದೆ
ಇದು, 1940ರ ಅಂತ್ಯಭಾಗದಲ್ಲಿ ಗ್ರೀಸ್ ಒಳಯುದ್ಧದ ಹಿಂಸಾತ್ಮಕ ಕಷ್ಟಾನುಭವಗಳನ್ನು ಎದುರಿಸುತ್ತಿದ್ದಾಗ ಸಂಭವಿಸಿತು. ಗೆರಿಲಗಳು ನನ್ನನ್ನು ಎಳೆದುಕೊಂಡುಹೋಗಬಹುದೆಂಬ ಭಯದಿಂದ ನನ್ನ ತಂದೆಯವರು ನಾನು ಹಳ್ಳಿಯನ್ನು ಬಿಟ್ಟು ಕಾಟೀನಾ ವಾಸಿಸುತ್ತಿದ್ದ ನನ್ನ ದೊಡ್ಡಕ್ಕನ ಮನೆಗೆ ಹೋಗುವುದಕ್ಕೆ ಏರ್ಪಾಡುಗಳನ್ನು ಮಾಡಿದರು. ಎರಡು ತಿಂಗಳುಗಳ ವರೆಗೆ ನಾನು ಅಲ್ಲಿ ಉಳಿದುಕೊಂಡಾಗ, ಬೈಬಲ್ ಅನೇಕ ವಿಷಯಗಳ ಕುರಿತು ಏನನ್ನುತ್ತದೆಂಬುದನ್ನು ತಿಳಿಯಲು ನನಗೆ ಸಹಾಯಮಾಡಲಾಯಿತು. ಆರ್ತೊಡಾಕ್ಸ್ ಚರ್ಚಿನ ಅನೇಕ ಸಿದ್ಧಾಂತಗಳು ಅಶಾಸ್ತ್ರೀಯವಾಗಿವೆ ಎಂಬುದನ್ನು ತಿಳಿದಾಗ ನನಗೆ ದುಃಖವಾಯಿತು. ದೇವರು ಮೂರ್ತಿಗಳ ಮೂಲಕ ಆರಾಧನೆಯನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ನಾನು ಗ್ರಹಿಸಿದೆ. ಶಿಲುಬೆಗೆ ಪೂಜ್ಯಭಾವವನ್ನು ಸಲ್ಲಿಸುವುದು ಇನ್ನು ಮುಂತಾದ ಅನೇಕ ಧಾರ್ಮಿಕ ಸಂಪ್ರದಾಯಗಳು ಕ್ರೈಸ್ತ ಮೂಲದಿಂದ ಬರಲಿಲ್ಲ ಮತ್ತು ದೇವರನ್ನು ಮೆಚ್ಚಿಸಬೇಕಾದರೆ ಒಬ್ಬನು ಆತನನ್ನು ‘ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು’ ಎಂಬುದನ್ನು ನಾನು ಗ್ರಹಿಸಿದೆ. (ಯೋಹಾನ 4:23; ವಿಮೋಚನಕಾಂಡ 20:4, 5) ಎಲ್ಲದಕ್ಕಿಂತಲೂ ಮಿಗಿಲಾಗಿ, ಭೂಮಿಯಲ್ಲಿ ನಿತ್ಯವಾಗಿ ಜೀವಿಸುವಂಥ ಉಜ್ವಲವಾದ ನಿರೀಕ್ಷೆಯನ್ನು ಬೈಬಲ್ ನೀಡುತ್ತದೆ ಎಂಬುದನ್ನು ನಾನು ಕಲಿತುಕೊಂಡೆ. ಅಂತಹ ಅಮೂಲ್ಯ ಬೈಬಲ್ ಸತ್ಯಗಳು, ಯೆಹೋವನಿಂದ ನಾನು ಪಡೆದುಕೊಂಡ ಆರಂಭದ ವೈಯಕ್ತಿಕ ಪ್ರಯೋಜನಗಳಾಗಿದ್ದವು.
ಈ ಮಧ್ಯೆ, ಊಟಕ್ಕೆ ಮುಂಚೆ ನಾನು ಶಿಲುಬೆಯ ಗುರುತನ್ನು ಮಾಡುವುದಿಲ್ಲ ಮತ್ತು ಧಾರ್ಮಿಕ ಮೂರ್ತಿಗಳ ಮುಂದೆ ಪ್ರಾರ್ಥನೆಯನ್ನು ಸಹ ಮಾಡುವುದಿಲ್ಲ ಎಂಬುದನ್ನು ನನ್ನ ಅಕ್ಕ ಮತ್ತು ಅವಳ ಗಂಡ ಗಮನಿಸಿದರು. ಒಂದು ದಿನ ರಾತ್ರಿ ಅವರಿಬ್ಬರು ನನಗೆ ತುಂಬ ಹೊಡೆದರು. ಮರುದಿನವೇ ನಾನು ಮನೆಯನ್ನು ಬಿಡಲು ನಿರ್ಧರಿಸಿ, ಅಲ್ಲಿಂದ ನನ್ನ ಚಿಕ್ಕಮ್ಮನ ಮನೆಗೆ ಹೋದೆ. ನಡೆದ ಸಂಗತಿಯನ್ನು ನನ್ನ ಅಕ್ಕನ ಗಂಡ ನನ್ನ ತಂದೆಗೆ ತಿಳಿಸಿದರು. ಸ್ವಲ್ಪ ಸಮಯದ ನಂತರ ನನ್ನ ತಂದೆಯವರು ಬಂದು ನನ್ನ ಮುಂದೆ ಕಣ್ಣೀರು ಸುರಿಸಿ, ನನ್ನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದರು. ನನ್ನ ಭಾವ ನನ್ನ ಮುಂದೆ ಮೊಣಕಾಲೂರಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡರು. ನಾನವರನ್ನು ಕ್ಷಮಿಸಿದೆ. ವಿಷಯವನ್ನು ಸಮಾಪ್ತಿಗೊಳಿಸಲು ನಾನು ಚರ್ಚಿಗೆ ಹಿಂದಿರುಗಿ ಬರುವಂತೆ ಅವರು ನನ್ನನ್ನು ಕೇಳಿಕೊಂಡರು, ಆದರೆ ನಾನು ನನ್ನ ನಿಲುವಿನಲ್ಲಿ ಅಚಲವಾಗಿದ್ದೆ.
ನಾನು ನನ್ನ ಹಳ್ಳಿಗೆ ಹಿಂದಿರುಗಿಹೋದ ಮೇಲೆ, ಒತ್ತಡವು ಮುಂದುವರಿಯಿತು. ಕಾಟೀನಾಳೊಂದಿಗೆ ಸಂವಾದಿಸಲು ಯಾವ ಸಾಧ್ಯತೆಯೂ ಇರಲಿಲ್ಲ, ಮತ್ತು ನನ್ನಲ್ಲಿ ಓದಲು ಯಾವ ಸಾಹಿತ್ಯವೂ ಇರಲಿಲ್ಲ, ಬೈಬಲ್ ಸಹ ಇರಲಿಲ್ಲ. ನನ್ನ ದೊಡ್ಡಪ್ಪನ ಮಗಳು ನನಗೆ ಸಹಾಯಮಾಡಲು ಪ್ರಯತ್ನಿಸಿದಾಗ ನಾನು ಬಹಳ ಸಂತೋಷಿತಳಾದೆ. ಅವಳು ಕೊರಿಂಥಕ್ಕೆ ಹೋದಾಗ, ಒಬ್ಬಾಕೆ ಸಾಕ್ಷಿಯನ್ನು ಭೇಟಿಯಾದಳು ಮತ್ತು ಅವಳಿಂದ “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕವನ್ನು ಹಾಗೂ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಒಂದು ಪ್ರತಿಯನ್ನು ನನಗಾಗಿ ತಂದಳು. ನಾನದನ್ನು ಗುಪ್ತವಾಗಿ ಓದುತ್ತಿದ್ದೆ.
ಜೀವನದ ಅನಿರೀಕ್ಷಿತ ತಿರುವು
ಈ ತೀಕ್ಷ್ಣ ವಿರೋಧವು ಮೂರು ವರುಷಗಳ ತನಕ ಮುಂದುವರಿಯಿತು. ಸಾಕ್ಷಿಗಳಲ್ಲಿ ಯಾರೊಂದಿಗೂ ನನಗೆ ಸಂಪರ್ಕವಿರಲಿಲ್ಲ, ಅಥವಾ ಯಾವುದೇ ಸಾಹಿತ್ಯಗಳು ನನಗೆ ಸಿಗುತ್ತಿರಲಿಲ್ಲ. ಆದರೆ ನನಗರಿವಿಲ್ಲದೆ, ನನ್ನ ಜೀವನವನ್ನು ಒಳಗೊಂಡ ಪ್ರಮುಖ ಬೆಳವಣಿಗೆಗಳು ಸಂಭವಿಸಲಿದ್ದವು.
ಥೆಸಲೊನೀಕದಲ್ಲಿರುವ ನನ್ನ ಮಾವನವರ ಮನೆಗೆ ನಾನು ಹೋಗಬೇಕೆಂದು ತಂದೆಯವರು ನನಗೆ ಹೇಳಿದರು. ಥೆಸಲೊನೀಕಕ್ಕೆ ಹೋಗುವ ಮುನ್ನ, ಒಂದು ಅಂಗಿಯನ್ನು ಹೊಲಿಸಿಕೊಳ್ಳಲು ಕೊರಿಂಥದಲ್ಲಿದ್ದ ದರ್ಜಿಯ ಅಂಗಡಿಗೆ ಹೋದೆ. ಕಾಟೀನಾಳು ಆ ಅಂಗಡಿಯಲ್ಲಿಯೇ ಕೆಲಸಮಾಡುತ್ತಿದ್ದಾಳೆಂದು ತಿಳಿದಾಗ ನನಗೆ ಎಂಥ ಆಶ್ಚರ್ಯವಾಯಿತು! ಬಹಳ ಸಮಯದ ನಂತರ ಪುನಃ ಒಬ್ಬರನ್ನೊಬ್ಬರು ನೋಡಲು ನಾವು ಬಹಳ ಸಂತೋಷಪಟ್ಟೆವು. ನಾವಿಬ್ಬರೂ ಅಂಗಡಿಯನ್ನು ಬಿಟ್ಟುಹೋಗುವಾಗ, ಕೆಲಸವನ್ನು ಮುಗಿಸಿ ತನ್ನ ಸೈಕಲಿನಲ್ಲಿ ಮನೆಗೆ ಹಿಂದೆರಳುತ್ತಿದ್ದ ಒಬ್ಬ ಸಭ್ಯ ಯುವಕನನ್ನು ನಾವು
ಭೇಟಿಯಾದೆವು. ಅವನ ಹೆಸರು ಕಾರಾಲಾಂಬೂಸ್. ನಾವು ಪರಸ್ಪರ ಅರಿತ ಬಳಿಕ ವಿವಾಹವಾಗಲು ನಿರ್ಣಯಿಸಿದೆವು. ಇದೇ ಸಮಯದಲ್ಲಿ ಅಂದರೆ 1952ರ ಜನವರಿ 9ರಂದು, ನಾನು ನನ್ನ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ.ಕಾರಾಲಾಂಬೂಸ್ ಇದಕ್ಕಿಂತ ಮುಂಚೆಯೇ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದರು. ಅವರು ಸಹ ತಮ್ಮ ಕುಟುಂಬದಿಂದ ವಿರೋಧವನ್ನು ಎದುರಿಸಿದ್ದರು. ಕಾರಾಲಾಂಬೂಸ್ ಬಹಳ ಹುರುಪಿನ ವ್ಯಕ್ತಿಯಾಗಿದ್ದರು. ಅವರು ಸಭೆಯ ಸಹಾಯಕ ಸೇವಕರಾಗಿ ಕೆಲಸಮಾಡುತ್ತಿದ್ದರು ಮತ್ತು ಅನೇಕ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದರು. ಬೇಗನೆ, ಅವರ ಅಣ್ಣಂದಿರೂ ಸತ್ಯವನ್ನು ಸ್ವೀಕರಿಸಿದರು ಮತ್ತು ಇಂದು ಅವರ ಅಣ್ಣಂದಿರ ಕುಟುಂಬದ ಹೆಚ್ಚಿನ ಸದಸ್ಯರು ಯೆಹೋವನಿಗೆ ಸೇವೆಸಲ್ಲಿಸುತ್ತಿದ್ದಾರೆ.
ನನ್ನ ತಂದೆಯವರು ಕಾರಾಲಾಂಬೂಸ್‌ರನ್ನು ನಿಜವಾಗಿಯೂ ಮೆಚ್ಚಿದ್ದರಿಂದ ನಮ್ಮ ವಿವಾಹಕ್ಕೆ ಸಮ್ಮತಿಸಿದರು. ಆದರೆ ತಾಯಿಯನ್ನು ಸುಲಭವಾಗಿ ಒಲಿಸಿಕೊಳ್ಳಲು ಆಗಲಿಲ್ಲ. ಈ ಎಲ್ಲಾದರ ಹೊರತಾಗಿಯೂ, ನಾನು ಮತ್ತು ಕಾರಾಲಾಂಬೂಸ್ 1952ರ ಮಾರ್ಚ್ 29ರಂದು ವಿವಾಹವಾದೆವು. ನನ್ನ ದೊಡ್ಡಣ್ಣ ಮತ್ತು ದೊಡ್ಡಪ್ಪನ ಒಬ್ಬ ಮಗನು ಮಾತ್ರ ನಮ್ಮ ವಿವಾಹಕ್ಕೆ ಹಾಜರಾದರು. ಕಾರಾಲಾಂಬೂಸ್ ಹೋಲಿಸಲಸಾಧ್ಯವಾದ ಆಶೀರ್ವಾದವಾಗಿ—ಯೆಹೋವನಿಂದ ಒದಗಿಸಲ್ಪಟ್ಟ ಒಂದು ನೈಜ ಕೊಡುಗೆಯಾಗಿ—ಪರಿಣಮಿಸಲಿದ್ದರು ಎಂಬುದು ಆ ಸಮಯದಲ್ಲಿ ನನಗೆ ತಿಳಿದಿರಲಿಲ್ಲ! ಅವರ ಸಂಗಾತಿಯೋಪಾದಿ ನಾನು ನನ್ನ ಜೀವನವನ್ನು ಯೆಹೋವನ ಸೇವೆಯ ಸುತ್ತಲೂ ಕಟ್ಟಸಾಧ್ಯವಾಯಿತು.
ನಮ್ಮ ಸಹೋದರರನ್ನು ಬಲಪಡಿಸುವುದು
ಇಸವಿ 1953ರಲ್ಲಿ, ಕಾರಾಲಾಂಬೂಸ್ ಮತ್ತು ನಾನು ಅಥೆನ್ಸ್‌ಗೆ ಸ್ಥಳಾಂತರಿಸಲು ನಿರ್ಣಯಿಸಿದೆವು. ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡಬಯಸಿದ್ದರಿಂದ ಕಾರಾಲಾಂಬೂಸ್ ತನ್ನ ಕುಟುಂಬ ವ್ಯಾಪಾರವನ್ನು ಬಿಟ್ಟುಬಿಟ್ಟು, ಒಂದು ಪಾರ್ಟ್ ಟೈಮ್ ಕೆಲಸವನ್ನು ಕಂಡುಕೊಂಡರು. ಮಧ್ಯಾಹ್ನಗಳಲ್ಲಿ ನಾವಿಬ್ಬರೂ ಜೊತೆಯಾಗಿ ಕ್ರೈಸ್ತ ಶುಶ್ರೂಷೆಯಲ್ಲಿ ಮತ್ತು ಅನೇಕ ಬೈಬಲ್ ಅಧ್ಯಯನಗಳನ್ನು ನಡೆಸುವುದರಲ್ಲಿ ಸಮಯವನ್ನು ಕಳೆದೆವು.
ನಮ್ಮ ಶುಶ್ರೂಷೆಯ ಮೇಲೆ ಅಧಿಕೃತ ನಿರ್ಬಂಧವಿದ್ದ ಕಾರಣ, ನಾವು ಜಾಣತನದಿಂದ ಸೇವೆಮಾಡಬೇಕಾಗಿತ್ತು. ಉದಾಹರಣೆಗೆ, ನನ್ನ ಗಂಡನು ಪಾರ್ಟ್ ಟೈಮ್ ಕೆಲಸಮಾಡುತ್ತಿದ್ದ ಅಥೆನ್ಸ್ ನಗರದ ಮಧ್ಯ ಭಾಗದಲ್ಲಿದ್ದ ಅಂಗಡಿಯ ಅಂದರೆ ವಾರ್ತಾಪತ್ರಿಕೆ ಮುಂತಾದವುಗಳನ್ನು ಪ್ರದರ್ಶಿಸುವ ಮತ್ತು ಮಾರಾಟಮಾಡುವ ದಾರಿಬದಿಯಲ್ಲಿರುವ ಅಂಗಡಿಯ ಗಾಜಿನ ಕಿಟಕಿಯಲ್ಲಿ ನಾವು ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ಇಟ್ಟೆವು. ಪತ್ರಿಕೆಯು ನಿಷೇಧಿಸಲ್ಪಟ್ಟಿದೆ ಎಂಬುದನ್ನು ಒಬ್ಬ ಉಚ್ಚ ಅಧಿಕಾರಿಯು ನಮಗೆ ತಿಳಿಸಿದನು. ಹಾಗಿದ್ದರೂ, ಪತ್ರಿಕೆಯ ಕುರಿತು ಭದ್ರತಾ ಆಫೀಸಿನಲ್ಲಿ ವಿಚಾರಿಸಿ ತಿಳಿದುಕೊಳ್ಳಲು ತನಗೆ ಒಂದು ಪ್ರತಿಯನ್ನು ನೀಡಸಾಧ್ಯವಿದೆಯೋ ಎಂದು ಅವನು ಕೇಳಿದನು. ಪತ್ರಿಕೆಯು ಕಾನೂನುಬದ್ಧವಾಗಿದೆ ಎಂದು ಭದ್ರತಾ ಆಫೀಸಿನ ಸಿಬ್ಬಂದಿಗಳು ಅವನಿಗೆ ತಿಳಿಸಿದಾಗ, ಅವನು ಹಿಂದಿರುಗಿ ಬಂದು ನಮಗದನ್ನು ತಿಳಿಸಿದನು. ದಾರಿಬದಿಯ ಅಂಗಡಿಗಳಿದ್ದ ಇತರ ಸಹೋದರರು ಇದನ್ನು ಕೇಳಿದೊಡನೆ, ಅವರು ಸಹ ಕಾವಲಿನಬುರುಜು ಪತ್ರಿಕೆಯ ಪ್ರತಿಗಳನ್ನು ತಮ್ಮ ಅಂಗಡಿಯ ಕಿಟಕಿಗಳಲ್ಲಿ ಪ್ರದರ್ಶಿಸಲಾರಂಭಿಸಿದರು. ನಮ್ಮ ಅಂಗಡಿಯಿಂದ ಕಾವಲಿನಬುರುಜು ಪತ್ರಿಕೆಯನ್ನು ಪಡೆದುಕೊಂಡಂಥ ಒಬ್ಬ ವ್ಯಕ್ತಿಯು ಕಾಲಕ್ರಮೇಣ ಸಾಕ್ಷಿಯಾದನು ಮತ್ತು ಈಗ ಒಬ್ಬ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ.
ನನ್ನ ಚಿಕ್ಕ ತಮ್ಮನು ಸತ್ಯವನ್ನು ಕಲಿಯುವುದನ್ನು ನೋಡುವ ಆನಂದವೂ ನಮಗೆ ದೊರಕಿತು. ಅವನು ವಾಣಿಜ್ಯ ನೌಕಾಪಡೆಯ ಕಾಲೇಜಿನಲ್ಲಿ ಅಧ್ಯಯನಮಾಡಲು ಅಥೆನ್ಸ್‌ಗೆ ಬಂದನು. ಆಗ ನಾವು ಅವನನ್ನು ನಮ್ಮೊಂದಿಗೆ ಅಧಿವೇಶನಕ್ಕೆ ಕರೆದೊಯ್ದೆವು. ನಮ್ಮ ಅಧಿವೇಶನಗಳು ಗುಪ್ತವಾಗಿ ಕಾಡುಗಳ ಮಧ್ಯೆ ನಡೆಸಲ್ಪಡುತ್ತಿದ್ದವು. ಅಧಿವೇಶನದಲ್ಲಿ ಅವನೇನನ್ನು ಆಲಿಸಿದನೋ ಅದು ಅವನಿಗೆ ಇಷ್ಟವಾಯಿತು, ಆದರೆ ಅದರ ನಂತರ ಸ್ವಲ್ಪ ಸಮಯದಲ್ಲಿಯೇ ಅವನು ಒಬ್ಬ ವಾಣಿಜ್ಯ ನೌಕಾ ಚಾಲಕನಾಗಿ ಸಂಚರಿಸಬೇಕಾಯಿತು. ಇಂಥ ಸಂಚಾರವೊಂದರಲ್ಲಿ ಅವನು ಅರ್ಜೆಂಟೀನದ ಬಂದರಿಗೆ ಬಂದು ತಲಪಿದನು. ಅಲ್ಲಿ, ಒಬ್ಬ ಮಿಷನೆರಿಯು ಹಡಗನ್ನು ಹತ್ತಿ ಸಾರಲಾರಂಭಿಸಿದಾಗ ಅವನಿಂದ ನಮ್ಮ ಪತ್ರಿಕೆಗಳನ್ನು ಪಡೆದುಕೊಂಡನು. ಮುಂದಕ್ಕೆ ಅವನ ಪತ್ರವನ್ನು ನಾವು ಪಡೆದುಕೊಂಡಾಗ ಸಂತೋಷದಿಂದ ತುಂಬಿತುಳುಕಿದೆವು, ಏಕೆಂದರೆ ಅದರಲ್ಲಿ ಹೀಗೆ ಬರೆಯಲಾಗಿತ್ತು: “ನಾನು ಸತ್ಯವನ್ನು ಕಂಡುಕೊಂಡೆ. ನನ್ನನ್ನು ಪತ್ರಿಕೆಗಳಿಗೆ ಚಂದಾದಾರನನ್ನಾಗಿ ಮಾಡಿರಿ.” ಇಂದು, ಅವನು ಮತ್ತು ಅವನ ಕುಟುಂಬವು ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಿದೆ.
ಇಸವಿ 1958ರಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕರಾಗಿ ಸೇವೆಸಲ್ಲಿಸುವಂತೆ ನನ್ನ ಗಂಡನನ್ನು ಆಮಂತ್ರಿಸಲಾಯಿತು. ನಮ್ಮ ಕೆಲಸವು ನಿಷೇಧಿಸಲ್ಪಟ್ಟಿದ್ದರಿಂದ ಮತ್ತು ಪರಿಸ್ಥಿತಿಯು ಬಹಳ ಕಷ್ಟಕರವಾಗಿದ್ದರಿಂದ ಸಂಚರಣ ಮೇಲ್ವಿಚಾರಕರು ತಮ್ಮ ಹೆಂಡತಿಯರನ್ನು ಜೊತೆಯಲ್ಲಿ ಕರೆದುಕೊಂಡುಹೋಗುತ್ತಿರಲಿಲ್ಲ. 1959ರ ಅಕ್ಟೋಬರ್ ತಿಂಗಳಿನಲ್ಲಿ, ನಾನು ಸಹ ಪತಿಯ ಜೊತೆಯಲ್ಲಿ ಹೋಗಬಹುದೋ ಎಂದು ಬ್ರಾಂಚ್ ಆಫೀಸಿನಲ್ಲಿರುವ ಜವಾಬ್ದಾರಿಯುತ ಸಹೋದರರನ್ನು ನಾವು ಕೇಳಿದೆವು. ಅವರು ಒಪ್ಪಿದರು. ನಾವು ಮಧ್ಯ ಮತ್ತು ಉತ್ತರ ಗ್ರೀಸ್‌ನಲ್ಲಿರುವ ಸಭೆಗಳನ್ನು ಸಂದರ್ಶಿಸಿ, ಅವನ್ನು ಬಲಪಡಿಸಬೇಕಿತ್ತು.
ಆ ಸಂಚಾರಗಳು ಸುಲಭವಾಗಿರಲಿಲ್ಲ. ಸುಗಮವಾದ ದಾರಿಗಳು ಕೇವಲ ಅಲ್ಲಲ್ಲಿ ಕೊಂಚವೇ ಇದ್ದವು. ನಮ್ಮ ಬಳಿ ಕಾರು ಇಲ್ಲದ್ದರಿಂದ, ನಾವು ಸಾಮಾನ್ಯವಾಗಿ ಸಾರ್ವಜನಿಕ ವಾಹನದಲ್ಲಿ ಅಥವಾ ಕೋಳಿ ಹಾಗೂ ಇತರ ಸಾಮಗ್ರಿಗಳೊಂದಿಗೆ ಪಿಕ್‌ಅಪ್ ಟ್ರಕ್‌ಗಳಲ್ಲಿ ಸಂಚರಿಸುತ್ತಿದ್ದೆವು. ಮಣ್ಣಿನ ರಸ್ತೆಗಳಲ್ಲಿ ನಡಿಯಲಾಗುವಂತೆ ನಾವು ರಬ್ಬರ್ ಬೂಟುಗಳನ್ನು ಧರಿಸುತ್ತಿದ್ದೆವು. ಪ್ರತಿಯೊಂದು ಹಳ್ಳಿಯಲ್ಲಿಯೂ ಪ್ರಜಾ ಸೈನ್ಯವಿದ್ದ ಕಾರಣ, ವಿಚಾರಣೆಯನ್ನು ತಪ್ಪಿಸಲು ನಾವು ಕತ್ತಲೆಯ ಸಮಯದಲ್ಲಿ ಹಳ್ಳಿಯನ್ನು ಪ್ರವೇಶಿಸಬೇಕಿತ್ತು.
ಸಹೋದರರು ಈ ಭೇಟಿಯನ್ನು ಬಹಳವಾಗಿ ಗಣ್ಯಮಾಡಿದರು. ಹೆಚ್ಚಿನವರಿಗೆ ತಮ್ಮ ಗದ್ದೆಗಳಲ್ಲಿ ಕಠಿನವಾಗಿ ದುಡಿಯಬೇಕಾಗಿದ್ದರೂ, ಬೇರೆ ಬೇರೆ ಮನೆಗಳಲ್ಲಿ ರಾತ್ರಿಯಲ್ಲಿ ತಡವಾಗಿ ನಡೆಸಲಾಗುತ್ತಿದ್ದ ಕೂಟಗಳಿಗೆ ಹಾಜರಾಗಲು ಪ್ರತಿಯೊಂದು ಪ್ರಯತ್ನವನ್ನೂ ಅವರು ಮಾಡುತ್ತಿದ್ದರು. ಅಷ್ಟುಮಾತ್ರವಲ್ಲದೆ, ಸಹೋದರರು ಬಹಳ ಅತಿಥಿಸತ್ಕಾರ ಮನೋಭಾವವುಳ್ಳವರಾಗಿದ್ದರು. ಅವರಲ್ಲಿ ಬಹಳ ಕಡಿಮೆ ಸೌಲತ್ತುಗಳಿದ್ದರೂ, ಇರುವುದರಲ್ಲೇ ಅತ್ಯುತ್ತಮವಾದುದನ್ನು ನಮಗೆ ಒದಗಿಸುತ್ತಿದ್ದರು. ಕೆಲವೊಮ್ಮೆ ನಾವು ಇಡೀ ಕುಟುಂಬದೊಂದಿಗೆ ಒಂದೇ ಕೋಣೆಯಲ್ಲಿ ಮಲಗಿದೆವು. ಸಹೋದರರ ನಂಬಿಕೆ, ತಾಳ್ಮೆ, ಮತ್ತು ಹುರುಪು ನಮಗೆ ಇನ್ನೊಂದು ಅಮೂಲ್ಯವಾದ ಪ್ರಯೋಜನವಾಗಿ ಪರಿಣಮಿಸಿತು.
ನಮ್ಮ ಸೇವೆಯನ್ನು ವಿಸ್ತರಿಸುವುದು
ಇಸವಿ 1961ರ ಫೆಬ್ರವರಿ ತಿಂಗಳಿನಲ್ಲಿ, ಅಥೆನ್ಸ್‌ನ ಬ್ರಾಂಚ್ ಆಫೀಸಿಗೆ ಭೇಟಿ ನೀಡಿದಾಗ, ಬೆತೆಲಿನಲ್ಲಿ ಸೇವೆಸಲ್ಲಿಸಲು ನಾವು ಇಚ್ಛಿಸುತ್ತೇವೋ ಎಂಬುದಾಗಿ ನಮ್ಮನ್ನು ಕೇಳಲಾಯಿತು. “ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಯೆಶಾಯನ ಮಾತುಗಳನ್ನೇ ನಾವು ಉತ್ತರವಾಗಿ ಉಪಯೋಗಿಸಿದೆವು. (ಯೆಶಾಯ 6:8) ಎರಡು ತಿಂಗಳುಗಳ ನಂತರ, ಬೆತೆಲಿಗೆ ಆದಷ್ಟು ಬೇಗನೆ ಬರುವಂತೆ ನಾವು ಪತ್ರವನ್ನು ಪಡೆದೆವು. ಹೀಗೆ, 1961ರ ಮೇ 27ರಂದು ನಾವು ನಮ್ಮ ಬೆತೆಲ್ ಸೇವೆಯನ್ನು ಆರಂಭಿಸಿದೆವು.
ನಾವು ನಮ್ಮ ಹೊಸ ನೇಮಕವನ್ನು ಇಷ್ಟಪಟ್ಟೆವು ಮತ್ತು ಕೂಡಲೆ ಬೆತೆಲ್ ನಮ್ಮ ಮನೆಯಾಯಿತು. ನನ್ನ ಗಂಡ ಸರ್ವಿಸ್ ಡಿಪಾರ್ಟ್‌ಮೆಂಟ್ ಮತ್ತು ಚಂದಾ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದರು ಮತ್ತು ನಂತರ ಸ್ವಲ್ಪ ಸಮಯದ ವರೆಗೆ ಅವರು ಬ್ರಾಂಚ್ ಕಮಿಟಿಯ ಸದಸ್ಯರಾಗಿ ಸೇವೆಸಲ್ಲಿಸಿದರು. ನನಗೆ ಬೆತೆಲ್ ಮನೆಯಲ್ಲಿ ವಿವಿಧ ನೇಮಕಗಳಿದ್ದವು. ಆಗ ಬೆತೆಲ್ ಕುಟುಂಬದಲ್ಲಿ 18 ಸದಸ್ಯರಿದ್ದರು, ಆದರೆ ಹೆಚ್ಚುಕಡಿಮೆ ಐದು ವರುಷಗಳ ವರೆಗೆ ಬೆತೆಲ್‌ನಲ್ಲಿ ಹಿರಿಯರಿಗೆ ಶಾಲೆಯು ನಡೆಸಲ್ಪಡುತ್ತಿದ್ದ ಕಾರಣ ಸುಮಾರು 40 ಮಂದಿ ಇರುತ್ತಿದ್ದರು. ಬೆಳಗ್ಗೆ ಪಾತ್ರೆಗಳನ್ನು ತೊಳೆಯುವುದು, ಅಡಿಗೆ ಮಾಡುವುದರಲ್ಲಿ ಸಹಾಯಮಾಡುವುದು, 12 ಹಾಸಿಗೆಗಳನ್ನು ಸಿದ್ಧಮಾಡುವುದು, ಮತ್ತು ಮಧ್ಯಾಹ್ನದ ಊಟಕ್ಕಾಗಿ ಮೇಜುಗಳನ್ನು ಸಿದ್ಧಗೊಳಿಸುವುದು ಮುಂತಾದ ಕೆಲಸವನ್ನು ನಾನು ಮಾಡುತ್ತಿದ್ದೆ. ಮಧ್ಯಾಹ್ನ ಬಟ್ಟೆಗಳನ್ನು ಇಸ್ತ್ರಿಮಾಡುತ್ತಿದ್ದೆ ಮತ್ತು ಶೌಚಾಲಯಗಳನ್ನು ಹಾಗೂ ಕೋಣೆಗಳನ್ನು ಶುಚಿಗೊಳಿಸುತ್ತಿದ್ದೆ. ವಾರದಲ್ಲಿ ಒಮ್ಮೆ ನಾನು ಲಾಂಡ್ರಿಯಲ್ಲೂ ಕೆಲಸ ಮಾಡುತ್ತಿದ್ದೆ. ಬಹಳ ಕೆಲಸವಿತ್ತಾದರೂ ನಾನು ಸಹಾಯಮಾಡಲು ತುಂಬ ಸಂತೋಷಿಸುತ್ತಿದ್ದೆ.
ನಾವು ನಮ್ಮ ಬೆತೆಲ್ ಕೆಲಸದಲ್ಲಿ ಮಾತ್ರವಲ್ಲದೆ ಕ್ಷೇತ್ರ ಸೇವೆಯಲ್ಲೂ ಕಾರ್ಯಮಗ್ನರಾಗಿದ್ದೆವು. ಅನೇಕವೇಳೆ ಏಳು ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದೆವು. ವಾರಾಂತ್ಯಗಳಲ್ಲಿ, ಕಾರಾಲಾಂಬೂಸ್ ಬೇರೆ ಬೇರೆ ಸಭೆಗಳಲ್ಲಿ ಭಾಷಣಗಳನ್ನು ಕೊಡುತ್ತಿದ್ದದರಿಂದ ನಾನು ಅವರೊಂದಿಗೆ ಹೋಗುತ್ತಿದ್ದೆ. ನಾವು ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು.
ಗ್ರೀಕ್ ಆರ್ತೊಡಾಕ್ಸ್ ಚರ್ಚಿನೊಂದಿಗೆ ಅತಿ ನಿಕಟ ಸಂಬಂಧದಲ್ಲಿದ್ದ ಮತ್ತು ಚರ್ಚಿನ ಪಾಷಂಡಮತ ವಿರೋಧಿಗಳ ತಂಡದ ಮುಖ್ಯಸ್ಥರಾದ ಪಾದ್ರಿಗಳ ವೈಯಕ್ತಿಕ ಸ್ನೇಹಿತರಾಗಿದ್ದ ಒಂದು ವಿವಾಹಿತ ದಂಪತಿಯೊಂದಿಗೆ ನಾವು ಬೈಬಲ್ ಅಧ್ಯಯನವನ್ನು ನಡಿಸಿದೆವು. ಅವರ ಮನೆಯಲ್ಲಿ, ವಿಗ್ರಹಗಳಿಂದ ತುಂಬಿದ್ದ ಒಂದು ಕೋಣೆಯಿತ್ತು. ಅಲ್ಲಿ ಯಾವಾಗಲೂ ಧೂಪಗಳು ಸುಡಲ್ಪಡುತ್ತಿದ್ದವು ಮತ್ತು ಬೈಸೆಂಟೈನ್ ಸ್ತೋತ್ರಗೀತೆಗಳು ಇಡೀ ದಿನ ನುಡಿಸಲ್ಪಡುತ್ತಿದ್ದವು. ಕೆಲವು ಸಮಯದ ವರೆಗೆ ನಾವು ಬೈಬಲನ್ನು ಅಧ್ಯಯನಮಾಡಲು ಗುರುವಾರದಂದು ಅವರ ಮನೆಗೆ ಹೋಗುತ್ತಿದ್ದೆವು, ಮತ್ತು ಅವರ ಪಾದ್ರಿ ಸ್ನೇಹಿತನು ಅವರನ್ನು ಶುಕ್ರವಾರದಂದು ಭೇಟಿಮಾಡುತ್ತಿದ್ದನು. ಒಂದು ದಿನ ಅವರು ನಮಗೆ, ನೀವು ತಪ್ಪದೆ ನಮ್ಮ ಮನೆಗೆ ಬರಬೇಕು ಏಕೆಂದರೆ ನಿಮಗೊಂದು ಆಶ್ಚರ್ಯ ಕಾದಿದೆ ಎಂದು ಹೇಳಿದರು. ನಾವು ಅವರ ಮನೆಗೆ ಹೋದೊಡನೆ ಮೊದಲು ಅವರು ನಮಗೆ ತೋರಿಸಿದ್ದು ಆ ಕೋಣೆಯನ್ನೇ. ಅವರು ಆ ಕೋಣೆಯಿಂದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿ, ಆ ಕೋಣೆಯನ್ನು ರಿಪೇರಿ ಮಾಡಿದ್ದರು. ಈ ದಂಪತಿಗಳು ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡಿ, ಮುಂದಕ್ಕೆ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಒಟ್ಟಿಗೆ, ನಾವು ಬೈಬಲ್ ಅಧ್ಯಯನಮಾಡಿದವರಲ್ಲಿ ಸುಮಾರು 50 ಮಂದಿ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿ, ದೀಕ್ಷಾಸ್ನಾನ ಪಡೆದುಕೊಂಡದ್ದನ್ನು ನೋಡುವ ಆನಂದ ನಮಗೆ ದೊರಕಿದೆ.
ಅಭಿಷಿಕ್ತ ಸಹೋದರರೊಂದಿಗೆ ಸಹವಾಸಿಸುವ ವಿಶೇಷ ಸುಯೋಗದಲ್ಲಿ ನಾನು ಆನಂದಿಸಿದ್ದೇನೆ. ಸಹೋದರ ನಾರ್, ಫ್ರಾನ್ಸ್, ಮತ್ತು ಹೆನ್ಶೆಲ್ ಮುಂತಾದ ಆಡಳಿತ ಮಂಡಲಿಯ ಸದಸ್ಯರ ಭೇಟಿಗಳು ಅಪಾರವಾದ ಉತ್ತೇಜನವನ್ನು ನೀಡಿದವು. 40 ವರುಷಗಳಿಗಿಂತಲೂ ಹೆಚ್ಚು
ಸಮಯದ ವರೆಗೆ ಬೆತೆಲಿನಲ್ಲಿ ಸೇವೆಸಲ್ಲಿಸಿದ ನಂತರ, ಈಗಲೂ ಬೆತೆಲ್‌ನಲ್ಲಿ ಸೇವೆಮಾಡುವುದು ನಿಜವಾಗಿಯೂ ಅತ್ಯಂತ ಗೌರವಭರಿತ ಕೆಲಸವಾಗಿದೆ ಮತ್ತು ಒಂದು ಸುಯೋಗವಾಗಿದೆ ಎಂದು ನಾನು ಭಾವಿಸುತ್ತೇನೆ.ಅಸ್ವಸ್ಥತೆ ಮತ್ತು ನಷ್ಟವನ್ನು ನಿಭಾಯಿಸುವುದು
ಇಸವಿ 1982ರಲ್ಲಿ ನನ್ನ ಗಂಡನಲ್ಲಿ ಆಲ್‌ಸೈಮರ್ಸ್ ರೋಗದ ಲಕ್ಷಣಗಳು ಕಾಣತೊಡಗಿದವು. 1990ರೊಳಗಾಗಿ ಅವರ ಆರೋಗ್ಯವು ತೀರಾ ಹದಗೆಡುತ್ತಾ ಬಂತು ಮತ್ತು ಕ್ರಮೇಣ ಅವರಿಗೆ ನಿರಂತರ ಕಾಳಜಿಯ ಅಗತ್ಯವುಂಟಾಯಿತು. ಅವರ ಜೀವನದ ಕೊನೆಯ ಎಂಟು ವರುಷಗಳಲ್ಲಿ, ನಮಗೆ ಬೆತೆಲನ್ನು ಬಿಟ್ಟು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಬೆತೆಲ್ ಕುಟುಂಬದ ಅನೇಕ ಪ್ರಿಯ ಸಹೋದರರು ಮತ್ತು ಜವಾಬ್ದಾರಿಯುತ ಮೇಲ್ವಿಚಾರಕರು ನಮಗೆ ಸಹಾಯಮಾಡಲು ಬೇಕಾದ ಏರ್ಪಾಡುಗಳನ್ನು ಮಾಡಿದರು. ಅವರ ದಯಾಪರ ಸಹಾಯದ ಹೊರತಾಗಿಯೂ, ನಾನು ಹಗಲೂರಾತ್ರಿ ಅನೇಕ ತಾಸುಗಳ ವರೆಗೆ ನನ್ನ ಗಂಡನ ಆರೈಕೆಯನ್ನು ಮಾಡಬೇಕಾಗಿತ್ತು. ಕೆಲವೊಮ್ಮೆ ಪರಿಸ್ಥಿತಿಯು ತೀರಾ ಕಷ್ಟಕರವಾಗಿತ್ತು, ಮತ್ತು ನಾನು ಅನೇಕ ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆಯಬೇಕಾಯಿತು.
ಇಸವಿ 1988ರ ಜುಲೈ ತಿಂಗಳಿನಲ್ಲಿ ನನ್ನ ಪ್ರೀತಿಯ ಗಂಡ ತೀರಿಕೊಂಡರು. ಅವರ ಅನುಪಸ್ಥಿತಿಯು ನನಗೆ ತುಂಬ ದುಃಖವನ್ನು ಉಂಟುಮಾಡುತ್ತದೆಯಾದರೂ, ಅವರು ಈಗ ಪ್ರೀತಿಸ್ವರೂಪನ ಕೈಗಳಲ್ಲಿದ್ದಾರೆ ಎಂಬುದನ್ನು ನೆನಸುವಾಗ ನನಗೆ ಸಾಂತ್ವನವಾಗುತ್ತದೆ ಮತ್ತು ಕೋಟ್ಯಂತರ ಜನರನ್ನು ಯೆಹೋವನು ಪುನರುತ್ಥಾನಗೊಳಿಸುವಾಗ ಅವರನ್ನು ಸಹ ಜ್ಞಾಪಿಸಿಕೊಳ್ಳುತ್ತಾನೆಂಬುದು ನನಗೆ ತಿಳಿದಿದೆ.—ಯೋಹಾನ 5:28, 29.
ಯೆಹೋವನಿಂದ ದೊರೆತ ಪ್ರಯೋಜನಗಳಿಗಾಗಿ ಆಭಾರಿ
ನಾನು ನನ್ನ ಗಂಡನನ್ನು ಕಳೆದುಕೊಂಡಿರುವುದಾದರೂ, ನಾನು ಒಂಟಿಗಳಲ್ಲ. ನನಗೆ ಈಗಲೂ ಬೆತೆಲಿನಲ್ಲಿ ಸೇವೆಮಾಡುವ ಸುಯೋಗವಿದೆ, ಮತ್ತು ಇಡೀ ಬೆತೆಲ್ ಕುಟುಂಬದ ಪ್ರೀತಿ ಹಾಗೂ ಕಾಳಜಿಯನ್ನು ನಾನು ಅನುಭವಿಸುತ್ತಿದ್ದೇನೆ. ನನ್ನ ವಿಸ್ತೃತ ಕುಟುಂಬದಲ್ಲಿ, ಗ್ರೀಸ್‌ನಾದ್ಯಂತದಿಂದ ಬಂದಿರುವ ಆತ್ಮಿಕ ಸಹೋದರ ಸಹೋದರಿಯರು ಸಹ ಇದ್ದಾರೆ. ನಾನು ಈಗ 70 ಕ್ಕಿಂತಲೂ ಹೆಚ್ಚು ಪ್ರಾಯದವಳಾಗಿದ್ದರೂ, ಈಗಲೂ ನಾನು ಅಡುಗೆಮನೆಯಲ್ಲಿ ಮತ್ತು ಡೈನಿಂಗ್ ರೂಮ್‌ನಲ್ಲಿ ಇಡೀ ದಿವಸದ ಕೆಲಸವನ್ನು ಮಾಡಶಕ್ತಳಾಗಿದ್ದೇನೆ.
ಇಸವಿ 1999ರಲ್ಲಿ ನಾನು ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಭೇಟಿ ನೀಡಿದಾಗ, ನನ್ನ ಜೀವನದ ಕನಸು ನನಸಾಯಿತು. ನನಗಾದ ಅನಿಸಿಕೆಯನ್ನು ಮಾತುಗಳಿಂದ ವರ್ಣಿಸಲು ಅಸಾಧ್ಯ. ಅದೊಂದು ಪ್ರೋತ್ಸಾಹಭರಿತ ಮತ್ತು ಚಿರಸ್ಮರಣೀಯ ಅನುಭವವಾಗಿತ್ತು.
ನಾನೀಗ ನನ್ನ ಜೀವನದ ಮೇಲೆ ಹಿನ್ನೋಟ ಬೀರುವಾಗ, ಇದಕ್ಕಿಂತಲೂ ಉತ್ತಮ ರೀತಿಯಲ್ಲಿ ನಾನು ನನ್ನ ಜೀವನವನ್ನು ಉಪಯೋಗಿಸಿರಸಾಧ್ಯವಿರಲಿಲ್ಲ ಎಂಬುದನ್ನು ವಿಶ್ವಾಸದಿಂದ ಹೇಳಬಲ್ಲೆ. ಯೆಹೋವನನ್ನು ಪೂರ್ಣ ಸಮಯ ಸೇವಿಸುವುದಕ್ಕಿಂತ ಉತ್ತಮವಾದ ಜೀವನವನ್ನು ಯಾರೊಬ್ಬನೂ ನಡಿಸಸಾಧ್ಯವಿಲ್ಲ. ನಾನು ಕೊರತೆಯಲ್ಲಿರುವಂತೆ ಯೆಹೋವನು ನನ್ನನ್ನು ಎಂದಿಗೂ ಬಿಟ್ಟುಬಿಡಲಿಲ್ಲ ಎಂಬುದನ್ನು ನಾನು ಪೂರ್ಣಭರವಸೆಯಿಂದ ಹೇಳಬಲ್ಲೆ. ಆತ್ಮಿಕವಾಗಿಯೂ ಶಾರೀರಿಕವಾಗಿಯೂ ಯೆಹೋವನು ನನ್ನನ್ನು ಮತ್ತು ನನ್ನ ಗಂಡನನ್ನು ಅತ್ಯುತ್ತಮವಾಗಿ ಪರಾಮರಿಸಿದನು. “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂಬುದಾಗಿ ಕೀರ್ತನೆಗಾರನು ಏಕೆ ಕೇಳಿದನು ಎಂಬುದನ್ನು ವೈಯಕ್ತಿಕ ಅನುಭವದಿಂದ ನಾನು ಅರ್ಥಮಾಡಿಕೊಳ್ಳಬಲ್ಲೆ.—ಕೀರ್ತನೆ 116:12.
[ಪುಟ 26ರಲ್ಲಿರುವ ಚಿತ್ರ]
ಕಾರಾಲಾಂಬೂಸ್ ಮತ್ತು ನಾನು ಯಾವಾಗಲೂ ಒಟ್ಟಿಗೆ ಇರುತ್ತಿದ್ದೆವು
[ಪುಟ 27ರಲ್ಲಿರುವ ಚಿತ್ರ]
ನನ್ನ ಗಂಡ, ಬ್ರಾಂಚ್‌ನಲ್ಲಿರುವ ಅವರ ಆಫೀಸಿನಲ್ಲಿ
[ಪುಟ 28ರಲ್ಲಿರುವ ಚಿತ್ರ]
ಬೆತೆಲ್ ಸೇವೆಯು ಒಂದು ಅತ್ಯಂತ ಗೌರವಭರಿತ ಸೇವೆಯೆಂದು ನಾನು ಭಾವಿಸುತ್ತೇನೆ