ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆರೂಸಲೇಮಿನ ಮುತ್ತಿಗೆ ಮತ್ತು ನಾಶನದ ಸಮಯದಲ್ಲಿ ಯೆಹೆಜ್ಕೇಲನು ‘ಮೂಕನಾದದ್ದು’ ಯಾವ ಅರ್ಥದಲ್ಲಿ?

ಇದು ಮೂಲತಃ ಯೆಹೆಜ್ಕೇಲನು ಈಗಾಗಲೇ ಪ್ರಕಟಪಡಿಸಿದ್ದ ಯೆಹೋವನ ಪ್ರವಾದನಾತ್ಮಕ ಸಂದೇಶಕ್ಕೆ ಹೆಚ್ಚನ್ನು ಕೂಡಿಸಲು ಅವನಲ್ಲಿ ಇನ್ನು ಯಾವುದೇ ವಿಷಯವಿರಲಿಲ್ಲ ಎಂಬುದನ್ನು ಅರ್ಥೈಸಿತು.

ಸಾ.ಶ.ಪೂ. 613ರಲ್ಲಿ ಅಂದರೆ “ಯೆಹೋಯಾಖೀನನು ಸೆರೆಯಾದ ಐದನೆಯ ವರುಷದ”ಲ್ಲಿ, ಪ್ರವಾದಿಯಾದ ಯೆಹೆಜ್ಕೇಲನು ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದ ಇಸ್ರಾಯೇಲ್ಯರಿಗೆ ಒಬ್ಬ ನಂಬಿಗಸ್ತ ಕಾವಲುಗಾರನೋಪಾದಿ ತನ್ನ ಸೇವೆಯನ್ನು ಆರಂಭಿಸಿದನು. (ಯೆಹೆಜ್ಕೇಲ 1:2, 3) ಸಾ.ಶ.ಪೂ. 609ರ ಚಂದ್ರಮಾಸದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಬಾಬೆಲಿನವರಿಂದ ಯೆರೂಸಲೇಮಿನ ಮುತ್ತಿಗೆಯು ಆರಂಭವಾಗುವುದು ಎಂದು ಅವನಿಗೆ ದೈವಪ್ರೇರಣೆಯಿಂದ ತಿಳಿಸಲ್ಪಟ್ಟಿತು. (ಯೆಹೆಜ್ಕೇಲ 24:1, 2) ಮುತ್ತಿಗೆಯ ಫಲಿತಾಂಶವು ಏನಾಗಿರುವುದು? ಯೆರೂಸಲೇಮ್‌ ಮತ್ತು ಅದರ ಅಪನಂಬಿಗಸ್ತ ನಿವಾಸಿಗಳು ತಪ್ಪಿಸಿಕೊಳ್ಳುವರೋ? ಕಾವಲುಗಾರನೋಪಾದಿ ಯೆಹೆಜ್ಕೇಲನು ಈಗಾಗಲೇ ಯೆಹೋವನ ನಿಷ್ಫಲವಾಗದ ತೀರ್ಪಿನ ಸಂದೇಶವನ್ನು ಪ್ರಕಟಪಡಿಸಿದ್ದನು, ಮತ್ತು ಆ ಸಂದೇಶವನ್ನು ಇನ್ನೂ ದೃಢಪಡಿಸಬೇಕೋ ಎಂಬಂತೆ ಯೆಹೆಜ್ಕೇಲನು ಅದಕ್ಕೆ ಇನ್ನೇನನ್ನೂ ಕೂಡಿಸುವ ಅಗತ್ಯವಿರಲಿಲ್ಲ. ಯೆರೂಸಲೇಮಿನ ಮುತ್ತಿಗೆಯ ವಿಷಯದಲ್ಲಿ ಇನ್ನೇನನ್ನೂ ಹೇಳಲಿಕ್ಕಿರಲಿಲ್ಲ ಎಂಬರ್ಥದಲ್ಲಿ ಯೆಹೆಜ್ಕೇಲನು ಮೂಕನಾದನು.​—ಯೆಹೆಜ್ಕೇಲ 24:25-27.

ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶವಾಗಿ ಸುಮಾರು ಆರು ತಿಂಗಳುಗಳು ಕಳೆದ ನಂತರ, ಅಲ್ಲಿಂದ ಪಲಾಯನಗೈದಿದ್ದ ಒಬ್ಬ ವ್ಯಕ್ತಿಯು ಯೆಹೆಜ್ಕೇಲನಿಗೆ ಬಾಬೆಲಿನಲ್ಲಿ ಆ ಪವಿತ್ರ ಪಟ್ಟಣದ ನಾಶನದ ಸುದ್ದಿಯನ್ನು ತಂದು ಮುಟ್ಟಿಸುತ್ತಾನೆ. ಪಲಾಯನಮಾಡಿದ್ದ ಆ ವ್ಯಕ್ತಿಯು ಬಂದು ತಲಪುವ ಹಿಂದಿನ ಸಾಯಂಕಾಲ, ಯೆಹೋವನು “[ಯೆಹೆಜ್ಕೇಲನ] ಬಾಯನ್ನು ಬಿಚ್ಚಿದ್ದನು; . . . [ಅವನ] ಮೂಕತನವು ಹೋಯಿತು.” (ಯೆಹೆಜ್ಕೇಲ 33:22) ಅದು ಯೆಹೆಜ್ಕೇಲನ ಮೂಕತನವನ್ನು ಕೊನೆಗೊಳಿಸಿತು.

ಆ ಸಮಯದಲ್ಲಿ ಯೆಹೆಜ್ಕೇಲನು ಅಕ್ಷರಾರ್ಥವಾಗಿ ಮೂಕನಾಗಿದ್ದನೋ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಅವನು ‘ಮೂಕನಾದ’ ಬಳಿಕವೂ ಯೆರೂಸಲೇಮಿನ ಪತನವನ್ನು ಕಂಡು ಸಂತೋಷಪಟ್ಟ ಸುತ್ತಲಿನ ದೇಶಗಳಿಗೆ ಮುಖ್ಯವಾಗಿ ನಿರ್ದೇಶಿಸಲ್ಪಟ್ಟ ಪ್ರವಾದನೆಗಳನ್ನು ಅವನು ತಿಳಿಯಪಡಿಸಿದನು. (ಯೆಹೆಜ್ಕೇಲ, ಅಧ್ಯಾಯಗಳು 25-32) ಈ ಮುಂಚೆ, ಪ್ರವಾದಿಯಾಗಿಯೂ ಕಾವಲುಗಾರನಾಗಿಯೂ ಯೆಹೆಜ್ಕೇಲನು ಸೇವೆ ಸಲ್ಲಿಸುತ್ತಿದ್ದಾಗ, ಯೆಹೋವನು ಅವನಿಗೆ ಹೀಗೆ ಹೇಳಿದ್ದನು: “ನಿನ್ನ ನಾಲಿಗೆಯು ಸೇದಿಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ನೀನು ಅವರನ್ನು ಖಂಡಿಸದಿರುವಿ; ಅವರು ದ್ರೋಹಿವಂಶದವರು. ನಾನು ನಿನ್ನೊಡನೆ ಮತ್ತೆ ಮಾತಾಡುವ ಕಾಲದಲ್ಲಿ ನಿನ್ನ ಬಾಯನ್ನು ಬಿಚ್ಚುವೆನು.” (ಯೆಹೆಜ್ಕೇಲ 3:​26, 27) ಯೆಹೋವನಲ್ಲಿ ಇಸ್ರಾಯೇಲಿಗಾಗಿ ಯಾವುದೇ ಸಂದೇಶವಿಲ್ಲದಿದ್ದಾಗ ಆ ದೇಶದ ಸಂಬಂಧದಲ್ಲಿ ಯೆಹೆಜ್ಕೇಲನು ಮೂಕನಾಗಿರಬೇಕಿತ್ತು. ಯೆಹೋವನು ಯಾವುದನ್ನು ಮಾತನಾಡಬೇಕೆಂದು ಬಯಸಿದನೋ ಮತ್ತು ಯಾವಾಗ ಮಾತನಾಡಬೇಕೆಂದು ಬಯಸಿದನೋ ಆ ಸಮಯದಲ್ಲಿ ಯೆಹೆಜ್ಕೇಲನು ಮಾತನಾಡಬೇಕಿತ್ತು. ಯೆಹೆಜ್ಕೇಲನ ಮೂಕತನವು, ಇಸ್ರಾಯೇಲ್ಯರಿಗೆ ಸಂಬಂಧಪಟ್ಟ ಪ್ರವಾದನಾತ್ಮಕ ವೈಶಿಷ್ಟ್ಯವಿದ್ದ ಮಾತುಗಳನ್ನು ಆಡುವುದಕ್ಕೆ ಮಾತ್ರ ಅನ್ವಯವಾಗಿತ್ತು.

ಆಧುನಿಕ ದಿನದ ಕಾವಲುಗಾರ ವರ್ಗವಾದ ಅಭಿಷಿಕ್ತ ಕ್ರೈಸ್ತರು, ಸೂಚಕರೂಪದ ಯೆರೂಸಲೇಮ್‌ ಆಗಿರುವ ಕ್ರೈಸ್ತಪ್ರಪಂಚದ ನಾಶನದ ಕುರಿತು ಎಚ್ಚರಿಸುತ್ತಾ ಬಂದಿದ್ದಾರೆ. “ಮಹಾ ಸಂಕಟ”ವು ಬಡಿದು ಸುಳ್ಳು ಧರ್ಮದ ಲೋಕಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲನ್ನು’ ನಾಶಮಾಡುವಾಗ, ಆ ಸಾಮ್ರಾಜ್ಯದ ಮುಖ್ಯ ಭಾಗವಾಗಿರುವ ಕ್ರೈಸ್ತಪ್ರಪಂಚದ ಅಂತ್ಯದ ಕುರಿತು ಅಭಿಷಿಕ್ತ ಯೆಹೆಜ್ಕೇಲ ವರ್ಗದವರಿಗೆ ಇನ್ನೇನನ್ನೂ ಹೇಳುವ ಅವಶ್ಯವಿರದು.​—ಮತ್ತಾಯ 24:20, 21; ಪ್ರಕಟನೆ 17:​1, 2, 5.

ಹೌದು, ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳು, ಕ್ರೈಸ್ತಪ್ರಪಂಚಕ್ಕೆ ತಿಳಿಸಲಿಕ್ಕಾಗಿ ಇನ್ನು ಯಾವುದೇ ವಿಷಯವು ಇಲ್ಲದೆ ಮೂಕರಾಗುವ ದಿನವು ಬಂದೇ ಬರುವುದು. ಅದು, ‘ಹತ್ತು ಕೊಂಬುಗಳು’ ಮತ್ತು ‘ಮೃಗವು’ ಮಹಾ ಬಾಬೆಲನ್ನು ಧ್ವಂಸಮಾಡಿ ಬಟ್ಟೆಯಿಲ್ಲದವಳನ್ನಾಗಿ ಮಾಡುವ ಸಮಯದಲ್ಲಿ ಸಂಭವಿಸುವುದು. (ಪ್ರಕಟನೆ 17:16) ವಾಸ್ತವದಲ್ಲಿ ಇದು, ಕ್ರೈಸ್ತರು ಅಕ್ಷರಾರ್ಥದಲ್ಲಿ ಮೂಕರಾಗಿರುವರು ಎಂಬುದನ್ನು ಅರ್ಥೈಸುವುದಿಲ್ಲ. ಅವರು ಈಗ ಮಾಡುತ್ತಿರುವಂತೆಯೇ, ಯೆಹೋವನನ್ನು ಸ್ತುತಿಸುವರು ಮತ್ತು ದಿನಂಪ್ರತಿ ಹಾಗೂ “ಯುಗ ಯುಗಾಂತರಗಳಲ್ಲಿಯೂ” ಆತನ ಹೆಸರನ್ನು ಜ್ಞಾಪಿಸಿಕೊಳ್ಳುವರು.​—ಕೀರ್ತನೆ 45:17; 145:2.