ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸಕಲಸತ್ಕಾರ್ಯಗಳನ್ನು ಮಾಡಲು ಸಿದ್ಧರು’

‘ಸಕಲಸತ್ಕಾರ್ಯಗಳನ್ನು ಮಾಡಲು ಸಿದ್ಧರು’

‘ಸಕಲಸತ್ಕಾರ್ಯಗಳನ್ನು ಮಾಡಲು ಸಿದ್ಧರು’

“ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ . . . ಅವರಿಗೆ ಜ್ಞಾಪಕಕೊಡು.” (ತೀತ 3:​1, 2) ಅಪೊಸ್ತಲ ಪೌಲನು ಈ ಮಾತುಗಳನ್ನು ತನ್ನ ಜೊತೆ ವಿಶ್ವಾಸಿಗಳಿಗೆ ಬರೆಯುವಾಗ, ಯಾವ ಸತ್ಕಾರ್ಯಗಳು ಅವನ ಮನಸ್ಸಿನಲ್ಲಿದ್ದವು? ಇ. ಎಫ್‌. ಸ್ಕಾಟ್‌ ಎಂಬ ಒಬ್ಬ ಬೈಬಲ್‌ ತತ್ತ್ವಜ್ಞಾನಿಯು ಒಂದು ಸತ್ಕಾರ್ಯದ ಕುರಿತು ತಿಳಿಸುತ್ತಾನೆ. ಅವನು ಹೇಳುವುದು: “ಕ್ರೈಸ್ತರು ಅಧಿಕಾರಿಗಳಿಗೆ ವಿಧೇಯರಾಗುವುದು ಮಾತ್ರವಲ್ಲದೆ, ಯಾವುದೇ ರೀತಿಯ ಸತ್ಕಾರ್ಯವನ್ನು ಮಾಡಲು ಸಹ ಅವರು ಸಿದ್ಧರಿರಬೇಕು. . . . ಅಗತ್ಯಬಂದಾಗ ಸಮಾಜಕ್ಕೆ ಒಳಿತನ್ನು ಮಾಡುವುದರಲ್ಲಿ ಕ್ರೈಸ್ತರು ಮುಂದಿರಬೇಕು. ಎಲ್ಲಾ ಸತ್ಪ್ರಜೆಗಳು ತಮ್ಮ ನೆರೆಯವರಿಗೆ ಸಹಾಯಮಾಡಬಯಸುವ ಸಂದರ್ಭಗಳು, ಅಂದರೆ ಬೆಂಕಿ, ಮಾರಕ ವ್ಯಾಧಿ, ವಿವಿಧ ರೀತಿಯ ಗಂಡಾಂತರಗಳು ಯಾವಾಗ ಬೇಕಾದರೂ ಸಂಭವಿಸಬಹುದು.”

ಎಷ್ಟರವರೆಗೆ ಸಾರ್ವಜನಿಕರ ಹಿತಾಸಕ್ತಿಯ ಕೆಲಸಗಳು ದೇವರ ನಿಯಮವನ್ನು ಉಲ್ಲಂಘಿಸುವುದಿಲ್ಲವೋ ಅಷ್ಟರವರೆಗೆ ಕ್ರೈಸ್ತರು ಅಂಥ ಕೆಲವು ಕೆಲಸಗಳಲ್ಲಿ ಭಾಗವಹಿಸುತ್ತಾರೆ. (ಅ. ಕೃತ್ಯಗಳು 5:29) ಉದಾಹರಣೆಗೆ, ಜಪಾನಿನ ಎಬೀನಾದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌, ಸ್ಥಳಿಕ ಅಗ್ನಿಶಾಮಕ ದಳದ ಮಾರ್ಗದರ್ಶನವನ್ನು ಅನುಸರಿಸಿ ವಾರ್ಷಿಕವಾಗಿ ಬೆಂಕಿಕವಾಯತನ್ನು ನಡಿಸುತ್ತದೆ. ಇಂಥ ಸಂದರ್ಭಗಳಲ್ಲಿ, ಬೆತೆಲ್‌ ಕುಟುಂಬದ ಎಲ್ಲಾ ಸದಸ್ಯರು ಸ್ಥಳಿಕ ಅಗ್ನಿಶಾಮಕ ದಳದ ಪ್ರತಿನಿಧಿಯಿಂದ ನೀಡಲ್ಪಡುವ ಸಲಹೆಗಳಿಗೆ ಕಿವಿಗೊಡುತ್ತಾರೆ.

ಇದಕ್ಕೆ ಕೂಡಿಕೆಯಾಗಿ, ಬೆಂಕಿತಡೆಗಟ್ಟುವಿಕೆಯ ಜಾಗೃತಿಯನ್ನು ಮೂಡಿಸಲು ಏರ್ಪಡಿಸಲ್ಪಡುವ ಪ್ರದರ್ಶನದಲ್ಲಿ ದಶಕಗಳಿಂದ ಬ್ರಾಂಚ್‌ ಸ್ಥಳಿಕ ಅಧಿಕಾರಿಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದೆ. ಪ್ರದರ್ಶನದಲ್ಲಿ, ಪಟ್ಟಣಗಳ ವ್ಯಾಪಾರ ಸಂಸ್ಥೆಗಳು ತಮ್ಮ ಬೆಂಕಿತಡೆಗಟ್ಟುವ ಮತ್ತು ಬೆಂಕಿ ನಿಯಂತ್ರಕ ಸಿದ್ಧತೆಗಳನ್ನು ಪ್ರತ್ಯಕ್ಷಾಭಿನಯಿಸುತ್ತವೆ. ಸಿಬ್ಬಂದಿಗಳ ಕುಶಲತೆಗಾಗಿ ಮತ್ತು ಒಗ್ಗಟ್ಟಿಗಾಗಿ ನಮ್ಮ ಬ್ರಾಂಚ್‌ ಅನೇಕಬಾರಿ ಪ್ರಶಂಸಿಸಲ್ಪಟ್ಟಿದೆ. 2001ರಲ್ಲಿ ಅದು ಪ್ರದರ್ಶನದಲ್ಲಿ ಪ್ರಥಮ ಬಹುಮಾನವನ್ನು ಗಿಟ್ಟಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಾಗ ಜೀವವನ್ನು ರಕ್ಷಿಸುವ ವಿಷಯದಲ್ಲಿ ಸತ್ಕಾರ್ಯವನ್ನು ಮಾಡಲು ಬ್ರಾಂಚಿನ ಜನರು ಸಿದ್ಧರಾಗಿದ್ದಾರೆ.

ಅಮೂಲ್ಯವಾದ ಒಂದು ಸೇವೆ

ಹಾಗಿದ್ದರೂ, ಯೆಹೋವನ ಸಾಕ್ಷಿಗಳು ಅತಿ ಪ್ರಾಮುಖ್ಯವಾದ ಇನ್ನೊಂದು ಸತ್ಕಾರ್ಯದಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಇದು ಸಹ ಜೀವರಕ್ಷಕ ಕಾರ್ಯವಾಗಿದೆ. ದೇವರ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳಲು ಅವರು ಕ್ರಮವಾಗಿ ತಮ್ಮ ನೆರೆಯವರನ್ನು ಭೇಟಿಮಾಡುತ್ತಾರೆ. (ಮತ್ತಾಯ 24:14) ಬೈಬಲಿನ ಮೂಲತತ್ತ್ವಗಳನ್ನು ಕಲಿತು, ಅವುಗಳನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವಂತೆ ಸಾಕ್ಷಿಗಳು ಜನರನ್ನು ಉತ್ತೇಜಿಸುತ್ತಾರೆ. ಹೀಗೆ ಮಾಡುವ ಮೂಲಕ ಜನರು ಈಗ ತಮ್ಮ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲರು ಮತ್ತು ನಿಜ ಶಾಂತಿ ಹಾಗೂ ಭದ್ರತೆ ತುಂಬಿದ ಲೋಕದಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯಲ್ಲಿರಬಲ್ಲರು.

ಕೆಲವರು, ಯೆಹೋವನ ಸಾಕ್ಷಿಗಳನ್ನು ತಲೆಹರಟೆಗಳು ಎಂದು ಪರಿಗಣಿಸುತ್ತಾ ಅವರಿಂದ ಒದಗಿಸಲ್ಪಡುವ ಸೇವೆಯನ್ನು ಗಣ್ಯಮಾಡಲಿಕ್ಕಿಲ್ಲ. ಹಾಗಿದ್ದರೂ, ಕೆನಡದಲ್ಲಿನ ಕ್ವಿಬೆಕ್‌ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಜಾನ್‌ ಕ್ರೇಪೋರವರಿಗೆ ಈ ವಿಷಯದಲ್ಲಿ ಭಿನ್ನವಾದ ಅಭಿಪ್ರಾಯವಿತ್ತು. ಮನೆಯಿಂದ ಮನೆಗೆ ಭೇಟಿ ನೀಡಲು ಪರವಾನಗಿಯ ಅಗತ್ಯವಿದೆ ಎಂಬ ನಿಯಮವನ್ನು ಕ್ವಿಬೆಕ್‌ನ ಬ್ಲೇನ್‌ವಿಲ್‌ ಪಟ್ಟಣವು ಹೊರಡಿಸಿದಾಗ, ಅಲ್ಲಿರುವ ಯೆಹೋವನ ಸಾಕ್ಷಿಗಳು ಅದಕ್ಕೆ ಆಕ್ಷೇಪವೆತ್ತಿದರು. ಕೋರ್ಟ್‌ ನಿರ್ಣಯದಲ್ಲಿ, ನ್ಯಾಯಾಧೀಶರಾದ ಕ್ರೇಪೋರವರು ತಿಳಿಸಿದ್ದು: “ಯೆಹೋವನ ಸಾಕ್ಷಿಗಳಿಂದ ಮಾಡಲಾಗುವ ಭೇಟಿಯು ಕ್ರೈಸ್ತರ ಒಂದು ಸಮಾಜ ಸೇವೆಯಾಗಿದೆ ಮತ್ತು . . . ಸಾಕ್ಷಿಗಳಿಂದ ಆಸಕ್ತ ಪ್ರಜೆಗಳಿಗೆ ನೀಡಲಾಗುವ ಸಾಹಿತ್ಯಗಳು ಗಂಭೀರವಾದ ವಿಷಯಗಳನ್ನು ಹೊಂದಿದ್ದ ಸಾಹಿತ್ಯಗಳಾಗಿದ್ದು, ಧರ್ಮ, ಬೈಬಲ್‌, ಮಾದಕ ಪದಾರ್ಥದ ಉಪಯೋಗ, ಕುಡಿತದ ಚಟ, ಯುವ ಜನರ ಶಿಕ್ಷಣ, ವೈವಾಹಿಕ ಸಮಸ್ಯೆಗಳು ಮತ್ತು ವಿವಾಹವಿಚ್ಛೇದ ಮುಂತಾದ ವಿಷಯಗಳನ್ನು ಚರ್ಚಿಸುತ್ತವೆ.”

ತಮ್ಮ ದಿನನಿತ್ಯದ ಸಮಸ್ಯೆಗಳನ್ನು ನಿಭಾಯಿಸಲು ಜನರಿಗೆ ಸಹಾಯಮಾಡುವ ಮತ್ತು ಭವಿಷ್ಯತ್ತಿಗಾಗಿ ಅವರಿಗೆ ನಿರೀಕ್ಷೆಯನ್ನು ನೀಡುವ ಮೂಲಕ ಯೆಹೋವನ ಸಾಕ್ಷಿಗಳು ತಾವು ಜೀವಿಸುವ ಸಮುದಾಯದ ಏಳಿಗೆಗೆ ನೆರವಾಗುತ್ತಾರೆ. ಈ ಕೆಲಸವನ್ನು ಮಾಡುವಂತೆ ಬೈಬಲ್‌ ಅವರನ್ನು ಸನ್ನದ್ಧರನ್ನಾಗಿ ಮಾಡುತ್ತದೆ. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”​—2 ತಿಮೊಥೆಯ 3:16, 17.

ಯೆಹೋವನ ಸಾಕ್ಷಿಗಳು ಹೇಗೆ ‘ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗುತ್ತಾರೆ’ ಎಂಬುದನ್ನು ನೀವು ತಿಳಿಯಬಯಸುತ್ತೀರೋ? ಬೈಬಲಿನ ಕುರಿತು ಹೆಚ್ಚನ್ನು ಕಲಿಯಲು ಅವರು ನೀಡುವ ಸಹಾಯವನ್ನು ಸ್ವೀಕರಿಸುವಂತೆ ಮತ್ತು ಅವರು ನಿಮ್ಮ ಸ್ಥಳದಲ್ಲಿ ಹಾಗೂ ಲೋಕವ್ಯಾಪಕವಾಗಿ ಮಾಡುತ್ತಿರುವ ಅತಿ ಪ್ರಾಮುಖ್ಯವಾದ ಸಮಾಜ ಸೇವೆಯಲ್ಲಿ ನಿಮ್ಮನ್ನು ಲಭ್ಯಗೊಳಿಸಿಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

[ಪುಟ 30, 31ರಲ್ಲಿರುವ ಚಿತ್ರಗಳು]

ಯೆಹೋವನ ಸಾಕ್ಷಿಗಳು ಲೌಕಿಕ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯತ್ನಿಸುತ್ತಾರೆ

[ಪುಟ 31ರಲ್ಲಿರುವ ಚಿತ್ರ]

ಸಾಕ್ಷಿಗಳು ತಮ್ಮ ನೆರೆಯವರಿಗೆ ಸಹಾಯ ನೀಡುವುದರಲ್ಲಿ ಗಮನಾರ್ಹರಾಗಿದ್ದಾರೆ