ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಎಚ್ಚರವಾಗಿರುವುದು ಈಗ ಇನ್ನಷ್ಟು ತುರ್ತಿನದ್ದಾಗಿದೆ

ನಾವು ಎಚ್ಚರವಾಗಿರುವುದು ಈಗ ಇನ್ನಷ್ಟು ತುರ್ತಿನದ್ದಾಗಿದೆ

ನಾವು ಎಚ್ಚರವಾಗಿರುವುದು ಈಗ ಇನ್ನಷ್ಟು ತುರ್ತಿನದ್ದಾಗಿದೆ

“ನಿಮ್ಮ ಕರ್ತನು ಯಾವ ದಿನ ಬರುತ್ತಾನೆಂಬುದು ನಿಮಗೆ ಗೊತ್ತಿಲ್ಲವಾದದರಿಂದ, ಸದಾ ಎಚ್ಚರವಾಗಿರಿ.”​—ಮತ್ತಾಯ 24:42, NW.

1, 2. ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ಯಾವುದು ತೋರಿಸುತ್ತದೆ?

“ಎಲ್ಲಕ್ಕಿಂತಲೂ ಹೆಚ್ಚಾಗಿ ಇಪ್ಪತ್ತನೆಯ ಶತಮಾನವು ಯುದ್ಧದಿಂದ ಗಾಢವಾಗಿ ಪ್ರಭಾವಿಸಲ್ಪಟ್ಟಿತು” ಎಂದು ಲೇಖಕರಾದ ಬಿಲ್‌ ಇಮಟ್‌ ಹೇಳುತ್ತಾರೆ. ಮಾನವ ಇತಿಹಾಸದ ಎಲ್ಲಾ ಕಾಲಾವಧಿಗಳು ಯುದ್ಧಗಳ ಮತ್ತು ಹಿಂಸಾಚಾರದ ದುರಂತಮಯ ಘಟನೆಗಳನ್ನು ಅನುಭವಿಸಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾ ಅವರು ಮುಂದುವರಿಸಿ ಹೇಳುವುದು: “ಇಪ್ಪತ್ತನೆಯ ಶತಮಾನದ ಆಗುಹೋಗುಗಳಲ್ಲಿ ಏನೂ ಭಿನ್ನತೆ ಇರಲಿಲ್ಲವಾದರೂ, ಅವುಗಳ ತೀಕ್ಷ್ಣತೆಯ ಮಟ್ಟದಲ್ಲಿ ಭಿನ್ನತೆಯಿತ್ತು. ನಿಜವಾಗಿಯೂ ಲೋಕವ್ಯಾಪಕವಾದ ಒಂದು ಕದನವನ್ನು ಪ್ರವರ್ಧಿಸಿದಂಥ ಪ್ರಪ್ರಥಮ ಶತಮಾನವು ಇದಾಗಿತ್ತು . . . ಇದಲ್ಲದೆ, ಈ ಅಂಶಕ್ಕೆ ಇನ್ನೂ ಹೆಚ್ಚಿನ ಒತ್ತನ್ನು ನೀಡಲಿಕ್ಕೋ ಎಂಬಂತೆ, ಇಪ್ಪತ್ತನೆಯ ಶತಮಾನವು ಕೇವಲ ಒಂದು ಲೋಕ ಯುದ್ಧವನ್ನಲ್ಲ ಬದಲಾಗಿ ಎರಡು ಲೋಕ ಯುದ್ಧಗಳನ್ನು ಪ್ರವರ್ಧಿಸಿತು.”

2 ‘ಜನಕ್ಕೆ ವಿರೋಧವಾಗಿ ಜನ ಮತ್ತು ರಾಜ್ಯಕ್ಕೆ ವಿರೋಧವಾಗಿ ರಾಜ್ಯವನ್ನು’ ಒಳಗೂಡಿರುವಂಥ ಯುದ್ಧಗಳ ಕುರಿತು ಯೇಸು ಕ್ರಿಸ್ತನು ಮುಂತಿಳಿಸಿದನು. ಆದರೂ, ಅವು ‘ಕ್ರಿಸ್ತನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಅಂತ್ಯದ ಸೂಚನೆಯ’ (NW) ಕೇವಲ ಒಂದು ಅಂಶವಾಗಿವೆ. ಈ ಮಹಾನ್‌ ಪ್ರವಾದನೆಯಲ್ಲಿ ಯೇಸು ಉಪದ್ರವಗಳು ಮತ್ತು ಮಹಾಭೂಕಂಪಗಳ ಕುರಿತು ಸಹ ಪ್ರಸ್ತಾಪಿಸಿದನು. (ಮತ್ತಾಯ 24:​3, 7, 8; ಲೂಕ 21:​6, 7, 10, 11) ಅನೇಕ ವಿಧಗಳಲ್ಲಿ ಇಂಥ ವಿಪತ್ತುಗಳು ಬಹಳ ವ್ಯಾಪಕವಾಗಿ ಮತ್ತು ತುಂಬ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಮನುಷ್ಯನ ಕೆಟ್ಟತನವು ದಿನೇ ದಿನೇ ಅಧಿಕಗೊಳ್ಳುತ್ತಿದೆ; ಮತ್ತು ಇದು ದೇವರ ಕಡೆಗೆ ಹಾಗೂ ಜೊತೆ ಮಾನವನ ಕಡೆಗೆ ಅವನಿಗಿರುವ ಮನೋಭಾವದಲ್ಲಿ ಸುವ್ಯಕ್ತವಾಗಿ ಕಂಡುಬರುತ್ತಿದೆ. ನೈತಿಕ ಅವನತಿ ಮತ್ತು ದುಷ್ಕೃತ್ಯ ಹಾಗೂ ಹಿಂಸಾಚಾರದಲ್ಲಿ ಆಗುತ್ತಿರುವ ಹೆಚ್ಚಳವನ್ನಂತೂ ವರ್ಣಿಸಲು ಸಾಧ್ಯವಿಲ್ಲ. ಮನುಷ್ಯರು ಸುಖಾನುಭವದಲ್ಲಿ ಮುಳುಗಿದವರಾಗಿದ್ದು, ದೇವರನ್ನು ಪ್ರೀತಿಸುವುದಕ್ಕೆ ಬದಲಾಗಿ ಹಣವನ್ನು ಪ್ರೀತಿಸುವವರಾಗಿದ್ದಾರೆ. ಇದೆಲ್ಲವೂ, ನಾವು “ಕಷ್ಟಕರವಾದ ಸಮಯಗಳಲ್ಲಿ” (NW) ಜೀವಿಸುತ್ತಿದ್ದೇವೆ ಎಂಬುದನ್ನು ರುಜುಪಡಿಸುತ್ತದೆ.​—2 ತಿಮೊಥೆಯ 3:​1-5.

3. ‘ಈ ಕಾಲದ ಸೂಚನೆಗಳು’ ನಮ್ಮ ಮೇಲೆ ಹೇಗೆ ಪರಿಣಾಮ ಬೀರಬೇಕು?

3 ಮಾನವರ ರೀತಿನೀತಿಗಳು ದಿನೇ ದಿನೇ ಹದಗೆಡುತ್ತಿರುವುದನ್ನು ನೋಡುವಾಗ ನಿಮಗೆ ಹೇಗನಿಸುತ್ತದೆ? ಸದ್ಯದ ಸಂಕಟಮಯ ಘಟನೆಗಳನ್ನು ನೋಡಿ ಅನೇಕರು ನಿರ್ದಯಿಗಳಾಗಿದ್ದಾರೆ ಮಾತ್ರವಲ್ಲ ಕಲ್ಲೆದೆಯವರಾಗಿದ್ದಾರೆ. ಈ ಲೋಕದ ಪ್ರಭಾವಶಾಲಿ ಹಾಗೂ ಬುದ್ಧಿವಂತ ಜನರು “ಈ ಕಾಲದ ಸೂಚನೆಗಳ” ಅರ್ಥವನ್ನು ವಿವೇಚಿಸಿ ತಿಳಿದುಕೊಳ್ಳಲು ಅಶಕ್ತರಾಗಿದ್ದಾರೆ; ಅಷ್ಟುಮಾತ್ರವಲ್ಲ, ಧಾರ್ಮಿಕ ಮುಖಂಡರು ಸಹ ಈ ವಿಷಯದಲ್ಲಿ ಯೋಗ್ಯವಾದ ಮಾರ್ಗದರ್ಶನವನ್ನು ಕೊಟ್ಟಿಲ್ಲ. (ಮತ್ತಾಯ 16:​1-3) ಆದರೆ ಯೇಸು ತನ್ನ ಹಿಂಬಾಲಕರಿಗೆ ಬುದ್ಧಿಹೇಳಿದ್ದು: “ನಿಮ್ಮ ಕರ್ತನು ಯಾವ ದಿನ ಬರುತ್ತಾನೆಂಬುದು ನಿಮಗೆ ಗೊತ್ತಿಲ್ಲವಾದದರಿಂದ, ಸದಾ ಎಚ್ಚರವಾಗಿರಿ.” (ಮತ್ತಾಯ 24:42, NW) ಇಲ್ಲಿ ಯೇಸು ಕೇವಲ ಎಚ್ಚರವಾಗಿರಿ ಎಂದು ಮಾತ್ರ ಹೇಳದೆ, “ಸದಾ ಎಚ್ಚರವಾಗಿರಿ” ಎಂದು ನಮ್ಮನ್ನು ಉತ್ತೇಜಿಸುತ್ತಾನೆ. ನಾವು ಸದಾ ಎಚ್ಚರವಾಗಿರಬೇಕಾದರೆ, ಜಾಗರೂಕರಾಗಿರಬೇಕು ಮತ್ತು ಹುಷಾರಾಗಿರಬೇಕು. ಇದು, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕಿಂತಲೂ ಹೆಚ್ಚನ್ನು, ಕಠಿನ ಕಾಲಗಳಾಗಿವೆ ಎಂಬುದನ್ನು ಮನಗಾಣುವುದಕ್ಕಿಂತಲೂ ಹೆಚ್ಚನ್ನು ಅಗತ್ಯಪಡಿಸುತ್ತದೆ. “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ” ಎಂಬ ಬಲವಾದ ನಿಶ್ಚಿತಾಭಿಪ್ರಾಯ ನಮಗಿರಬೇಕು. (1 ಪೇತ್ರ 4:7) ಆಗ ಮಾತ್ರ ನಾವು ತುರ್ತುಪ್ರಜ್ಞೆಯಿಂದ ಎಚ್ಚರವಾಗಿರುವೆವು. ಆದುದರಿಂದ, ನಾವು ಈ ಪ್ರಶ್ನೆಯನ್ನು ಪರಿಗಣಿಸಬೇಕಾಗಿದೆ: ‘ಅಂತ್ಯವು ಹತ್ತಿರವಾಗಿದೆ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ಬಲಗೊಳಿಸಲು ಯಾವುದು ನಮಗೆ ಸಹಾಯಮಾಡುವುದು?’

4, 5. (ಎ) ಈ ದುಷ್ಟ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ಯಾವುದು ಬಲಪಡಿಸುವುದು? (ಬಿ) ನೋಹನ ದಿನಕ್ಕೂ ಮನುಷ್ಯಕುಮಾರನ ಸಾನ್ನಿಧ್ಯಕ್ಕೂ ಇರುವ ಒಂದು ಹೋಲಿಕೆಯು ಯಾವುದಾಗಿದೆ?

4 ಮಾನವ ಇತಿಹಾಸದಲ್ಲೇ ಅಸಾಮಾನ್ಯ ಘಟನೆ ಅಂದರೆ ನೋಹನ ದಿನದ ಮಹಾ ಪ್ರಳಯವು ಸಂಭವಿಸುವ ಸ್ವಲ್ಪ ಸಮಯಾವಧಿಗೆ ಮುಂಚೆ ಇದ್ದಂಥ ಪರಿಸ್ಥಿತಿಗಳನ್ನು ಸ್ವಲ್ಪ ಪರಿಗಣಿಸಿರಿ. ಜನರು ಎಷ್ಟು ಕೆಟ್ಟವರಾಗಿದ್ದರೆಂದರೆ, ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು.” ಆತನು ಪ್ರಕಟಿಸಿದ್ದು: “ನಾನು . . . ಮನುಷ್ಯರೊಂದಿಗೆ ಸಕಲ ಮೃಗ ಕ್ರಿಮಿಪಕ್ಷಿಗಳನ್ನೂ ಅಳಿಸಿಬಿಡುವೆನು.” (ಆದಿಕಾಂಡ 6:6, 7) ಮತ್ತು ಆತನು ಹಾಗೆಯೇ ಮಾಡಿದನು. ನೋಹನ ದಿನಗಳು ಹಾಗೂ ನಮ್ಮ ದಿನಗಳ ನಡುವಣ ಸಮಾನತೆಗಳ ಕುರಿತು ತಿಳಿಸುತ್ತಾ ಯೇಸು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ [“ಸಾನ್ನಿಧ್ಯವೂ,” NW] ಇರುವದು.”​—ಮತ್ತಾಯ 24:37.

5 ಪ್ರಳಯಕ್ಕೆ ಮುಂಚಿನ ಲೋಕದ ಕುರಿತು ಯೆಹೋವನಿಗೆ ಯಾವ ಅನಿಸಿಕೆಯಿತ್ತೋ ತದ್ರೀತಿಯ ಅನಿಸಿಕೆಯು ಸದ್ಯದ ಲೋಕದ ಕುರಿತಾಗಿಯೂ ಆತನಿಗಿದೆ ಎಂದು ಭಾವಿಸುವುದು ತರ್ಕಸಮ್ಮತವಾದ ವಿಷಯವಾಗಿದೆ. ಆತನು ನೋಹನ ದಿನದ ಭಕ್ತಿಹೀನ ಲೋಕವನ್ನು ಅಂತ್ಯಗೊಳಿಸಿದಂತೆಯೇ ಇಂದಿನ ದುಷ್ಟ ಲೋಕವನ್ನು ಖಂಡಿತವಾಗಿಯೂ ನಾಶಗೊಳಿಸುವನು. ಆ ಕಾಲಕ್ಕೂ ನಮ್ಮ ದಿನಕ್ಕೂ ಯಾವ ಹೋಲಿಕೆಗಳಿವೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು, ಸದ್ಯದ ಲೋಕದ ಅಂತ್ಯವು ಸಮೀಪಿಸಿದೆ ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಹಾಗಾದರೆ, ಆ ಹೋಲಿಕೆಗಳು ಯಾವುವು? ಕಡಿಮೆಪಕ್ಷ ಐದು ಹೋಲಿಕೆಗಳಿವೆ. ಮೊದಲನೆಯ ಅಂಶವು ಯಾವುದೆಂದರೆ, ಬರಲಿರುವ ನಾಶನದ ಕುರಿತಾದ ಎಚ್ಚರಿಕೆಯು ನಿರ್ದಿಷ್ಟವಾದ ಮಾತುಗಳಲ್ಲಿ ಮುಂತಿಳಿಸಲ್ಪಡುತ್ತಿದೆ.

“ಅದುವರೆಗೆ ಕಾಣದಿದ್ದ ಸಂಗತಿಗಳ” ವಿಷಯವಾಗಿ ಎಚ್ಚರಿಕೆ ನೀಡಲ್ಪಟ್ಟದ್ದು

6. ನೋಹನ ದಿನದಲ್ಲಿ ಯೆಹೋವನು ಸುವ್ಯಕ್ತವಾಗಿಯೇ ಯಾವ ಮುನ್ನೆಚ್ಚರಿಕೆಯನ್ನು ಕೊಟ್ಟನು?

6 ನೋಹನ ದಿನದಲ್ಲಿ ಯೆಹೋವನು ಹೀಗೆ ಹೇಳಿದನು: “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು ಭ್ರಷ್ಟರಾದದರಿಂದ ಮರ್ತ್ಯರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ.” (ಆದಿಕಾಂಡ 6:3) ಈ ದೈವಿಕ ಆಜ್ಞೆಯು ಸಾ.ಶ.ಪೂ. 2490ರಲ್ಲಿ ಹೊರಡಿಸಲ್ಪಟ್ಟಿತು ಮತ್ತು ಇದು ಆ ಭಕ್ತಿಹೀನ ಲೋಕಕ್ಕಾಗಿರುವ ಅಂತ್ಯದ ಆರಂಭವನ್ನು ಸೂಚಿಸಿತು. ಆಗ ಜೀವಿಸುತ್ತಿದ್ದ ಜನರಿಗೆ ಅದು ಏನನ್ನು ಅರ್ಥೈಸಿತು ಎಂಬುದನ್ನು ತುಸು ಆಲೋಚಿಸಿರಿ! ಕೇವಲ 120 ವರ್ಷಗಳು ಉಳಿದಿದ್ದವು ಮತ್ತು ಯೆಹೋವನು ಸಮಯಾನಂತರ ನೋಹನಿಗೆ ಹೇಳಿದಂತೆಯೇ ‘ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ, ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ಅಳಿಸಿಬಿಟ್ಟು, ಭೂಮಿಯಲ್ಲಿರುವ ಸಮಸ್ತವನ್ನೂ ಲಯಮಾಡಲಿದ್ದನು.’​—ಆದಿಕಾಂಡ 6:17.

7. (ಎ) ಜಲಪ್ರಳಯದ ಕುರಿತಾದ ಎಚ್ಚರಿಕೆಗೆ ನೋಹನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಈ ವ್ಯವಸ್ಥೆಯ ಅಂತ್ಯದ ಕುರಿತಾದ ಎಚ್ಚರಿಕೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

7 ಬರಲಿದ್ದ ಮಹಾ ವಿನಾಶದ ಕುರಿತು ನೋಹನಿಗೆ ದಶಕಗಳಿಗೆ ಮುಂಚೆಯೇ ಎಚ್ಚರಿಕೆಯು ಕೊಡಲ್ಪಟ್ಟಿತ್ತು ಮತ್ತು ಅವನು ಪಾರಾಗಿ ಉಳಿಯಲಿಕ್ಕಾಗಿ ಸಿದ್ಧತೆಯನ್ನು ಮಾಡಲು ಆ ಸಮಯಾವಧಿಯನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿದನು. ಅಪೊಸ್ತಲ ಪೌಲನು ಹೇಳುವುದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” (ಇಬ್ರಿಯ 11:7) ನಮ್ಮ ಕುರಿತಾಗಿ ಏನು? 1914ರಲ್ಲಿ ಈ ವಿಷಯಗಳ ವ್ಯವಸ್ಥೆಯ ಕೊನೇ ದಿನಗಳು ಆರಂಭವಾಗಿ ಸುಮಾರು 90 ವರ್ಷಗಳು ಗತಿಸಿವೆ. ಆದುದರಿಂದ, ಖಂಡಿತವಾಗಿಯೂ ನಾವು ‘ಅಂತ್ಯಕಾಲದಲ್ಲಿ’ ಜೀವಿಸುತ್ತಿದ್ದೇವೆ. (ದಾನಿಯೇಲ 12:4) ನಮಗೆ ಕೊಡಲ್ಪಟ್ಟಿರುವ ಎಚ್ಚರಿಕೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಬೈಬಲು ಹೇಳುತ್ತದೆ. (1 ಯೋಹಾನ 2:17) ಹೀಗಿರುವುದರಿಂದ, ತುರ್ತುಪ್ರಜ್ಞೆಯಿಂದ ಯೆಹೋವನ ಚಿತ್ತವನ್ನು ಮಾಡುವ ಸಮಯವು ಇದೇ ಆಗಿದೆ.

8, 9. ಆಧುನಿಕ ಸಮಯಗಳಲ್ಲಿ ಯಾವ ಎಚ್ಚರಿಕೆಗಳು ಕೊಡಲ್ಪಡುತ್ತಿವೆ, ಮತ್ತು ಇವು ಹೇಗೆ ಪ್ರಕಟಿಸಲ್ಪಡುತ್ತಿವೆ?

8 ಆಧುನಿಕ ಸಮಯಗಳಲ್ಲಿ, ಪ್ರಾಮಾಣಿಕ ಹೃದಯದ ಬೈಬಲ್‌ ವಿದ್ಯಾರ್ಥಿಗಳು ಈ ವ್ಯವಸ್ಥೆಯು ನಾಶನಕ್ಕೆ ಪಾತ್ರವಾಗಿದೆ ಎಂಬ ವಿಚಾರವನ್ನು ಪ್ರೇರಿತ ಶಾಸ್ತ್ರವಚನಗಳಿಂದ ತಿಳಿದುಕೊಂಡಿದ್ದಾರೆ. ನಾವಿದನ್ನು ನಂಬುತ್ತೇವೋ? ಯೇಸು ಕ್ರಿಸ್ತನು ಏನನ್ನು ಸ್ಪಷ್ಟವಾಗಿ ತಿಳಿಸಿದನೋ ಅದನ್ನು ಗಮನಿಸಿರಿ: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ತಾನು ದೇವರ ನೇಮಿತ ನ್ಯಾಯಾಧೀಶನಾಗಿ ಬರುವೆನು ಮತ್ತು ಒಬ್ಬ ಕುರುಬನು ಕುರಿಗಳನ್ನೂ ಆಡುಗಳನ್ನೂ ಬೇರೆಬೇರೆ ಮಾಡುವಂತೆ ತಾನು ಜನರನ್ನು ಪ್ರತ್ಯೇಕಿಸುವೆನು ಎಂದೂ ಯೇಸು ಹೇಳಿದನು. ಯಾರು ಅನರ್ಹರಾಗಿ ಕಂಡುಬರುತ್ತಾರೋ ಅವರು “ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.”​—ಮತ್ತಾಯ 25:​31-33, 46.

9 ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಒದಗಿಸಲ್ಪಡುವ ಆತ್ಮಿಕ ಆಹಾರದ ಮುಖಾಂತರ ಯೆಹೋವನು ಸಮಯೋಚಿತ ಮರುಜ್ಞಾಪನಗಳನ್ನು ನೀಡುವ ಮೂಲಕ ಈ ಎಚ್ಚರಿಕೆಗಳನ್ನು ತನ್ನ ಜನರ ಮುಂದೆ ಇಟ್ಟಿದ್ದಾನೆ. (ಮತ್ತಾಯ 24:​45-47) ಅಷ್ಟುಮಾತ್ರವಲ್ಲ, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ” ಎಂದು ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಕರೆಕೊಡಲಾಗುತ್ತಿದೆ. (ಪ್ರಕಟನೆ 14:​6, 7) ಅತಿ ಬೇಗನೆ ದೇವರ ರಾಜ್ಯವು ಮಾನವ ಆಳ್ವಿಕೆಯನ್ನು ತೆಗೆದುಹಾಕಲಿದೆ ಎಂಬ ಎಚ್ಚರಿಕೆಯು, ಯೆಹೋವನ ಸಾಕ್ಷಿಗಳಿಂದ ಭೂವ್ಯಾಪಕವಾಗಿ ಸಾರಲ್ಪಡುವ ರಾಜ್ಯ ಸಂದೇಶದ ಒಂದು ಅವಿಭಾಜ್ಯ ಅಂಗವಾಗಿದೆ. (ದಾನಿಯೇಲ 2:44) ಈ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಬಾರದಾಗಿದೆ. ಸರ್ವಶಕ್ತನಾದ ದೇವರು ಯಾವಾಗಲೂ ಕೊಟ್ಟ ಮಾತಿಗನುಸಾರ ನಡೆದುಕೊಳ್ಳುತ್ತಾನೆ. (ಯೆಶಾಯ 55:​10, 11) ನೋಹನ ದಿನದಲ್ಲಿಯೂ ಅವನು ತನ್ನ ಮಾತನ್ನು ಉಳಿಸಿಕೊಂಡನು, ಮತ್ತು ನಮ್ಮ ದಿನದಲ್ಲಿ ಅವನು ಹಾಗೆಯೇ ಮಾಡುವನು.​—2 ಪೇತ್ರ 3:​3-7.

ಲೈಂಗಿಕ ಭ್ರಷ್ಟತೆಯು ವ್ಯಾಪಕವಾಗಿ ಹಬ್ಬುವುದು

10. ನೋಹನ ದಿನದ ಲೈಂಗಿಕ ಭ್ರಷ್ಟತೆಯ ವಿಷಯದಲ್ಲಿ ಏನು ಹೇಳಸಾಧ್ಯವಿದೆ?

10 ಇನ್ನೊಂದು ವಿಷಯದಲ್ಲೂ ನಮ್ಮ ಸಮಯವು ನೋಹನ ದಿನಗಳಿಗೆ ತುಲನಾತ್ಮಕವಾಗಿದೆ. ದೇವದತ್ತ ಲೈಂಗಿಕ ಶಕ್ತಿಯನ್ನು ತಮ್ಮ ವೈವಾಹಿಕ ಏರ್ಪಾಡಿನೊಳಗೆ ಗೌರವಾರ್ಹ ರೀತಿಯಲ್ಲಿ ಉಪಯೋಗಿಸಿ, ತಮ್ಮ ಸಂತತಿಯಿಂದ ‘ಭೂಮಿಯನ್ನು ತುಂಬಿಸುವಂತೆ’ ಯೆಹೋವನು ಪ್ರಥಮ ಸ್ತ್ರೀಪುರುಷರಿಗೆ ಅಪ್ಪಣೆ ನೀಡಿದ್ದನು. (ಆದಿಕಾಂಡ 1:28) ನೋಹನ ದಿನದಲ್ಲಿ ಅವಿಧೇಯ ದೇವದೂತರು ವಿಕೃತ ಲೈಂಗಿಕತೆಯಿಂದ ಮಾನವಕುಲವನ್ನು ಮಲಿನಗೊಳಿಸಿದರು. ಅವರು ಭೂಮಿಗೆ ಬಂದು, ದೇಹಗಳನ್ನು ರೂಪಾಂತರಿಸಿಕೊಂಡು, ಸುಂದರ ಸ್ತ್ರೀಯರೊಂದಿಗೆ ಸಂಭೋಗ ನಡೆಸಿ, ಅರ್ಧ ಮಾನವ ಅರ್ಧ ದೆವ್ವಗಳ ಸ್ವರೂಪವಿದ್ದ ಮಹಾಶರೀರಿಗಳಾದ ನೆಫಿಲೀಯರ ಸಂತತಿಯನ್ನು ಉಂಟುಮಾಡಿದರು. (ಆದಿಕಾಂಡ 6:​2, 4) ಕಾಮಾಸಕ್ತರಾದ ಈ ದೇವದೂತರ ಪಾಪವನ್ನು, ಸೊದೋಮ್‌ ಮತ್ತು ಗೊಮೋರ ಪಟ್ಟಣಗಳ ವಿಕೃತ ಕಾಮಾಸಕ್ತಿಗೆ ಹೋಲಿಸಲಾಗಿದೆ. (ಯೂದ 6, 7) ಇದರ ಪರಿಣಾಮವಾಗಿ, ಆ ದಿನಗಳಲ್ಲಿ ಲೈಂಗಿಕ ಭ್ರಷ್ಟತೆಯು ವ್ಯಾಪಕವಾಗಿ ಹಬ್ಬಿತು.

11. ಯಾವ ನೈತಿಕ ಪರಿಸ್ಥಿತಿಯು ನಮ್ಮ ಕಾಲವನ್ನು ನೋಹನ ದಿನಗಳಿಗೆ ತುಲನಾತ್ಮಕವಾದದ್ದಾಗಿ ಮಾಡುತ್ತದೆ?

11 ಇಂದಿನ ನೈತಿಕ ಪರಿಸ್ಥಿತಿಯ ಕುರಿತಾಗಿ ಏನು? ಈ ಅಂತಿಮ ದಿನಗಳಲ್ಲಿ ಅನೇಕರ ಜೀವನಗಳು ಲೈಂಗಿಕತೆಯ ಮೇಲೆ ಕೇಂದ್ರೀಕರಿಸಿವೆ. ಪೌಲನು ಅಂಥ ವ್ಯಕ್ತಿಗಳನ್ನು “ಎಲ್ಲಾ ರೀತಿಯಲ್ಲೂ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿರುವವರು” (NW) ಎಂಬ ಮಾತುಗಳಿಂದ ಸುಸ್ಪಷ್ಟವಾಗಿ ವರ್ಣಿಸುತ್ತಾನೆ; ಅನೇಕರು “ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.” (ಎಫೆಸ 4:19) ಅಶ್ಲೀಲ ಸಾಹಿತ್ಯ, ವಿವಾಹಕ್ಕೆ ಮುಂಚಿನ ಲೈಂಗಿಕ ಸಂಬಂಧ, ಮಕ್ಕಳ ಲೈಂಗಿಕ ದುರಾಚಾರ ಮತ್ತು ಸಲಿಂಗೀಕಾಮದಂಥ ವಿಷಯಗಳು ಸರ್ವಸಾಮಾನ್ಯವಾಗಿವೆ. ರತಿರವಾನಿತ ರೋಗಗಳು, ಒಡೆದ ಕುಟುಂಬಗಳು ಮತ್ತು ಇನ್ನಿತರ ಸಾಮಾಜಿಕ ಸಮಸ್ಯೆಗಳ ರೂಪದಲ್ಲಿ ಈಗಾಗಲೇ ಕೆಲವರು ‘ತಕ್ಕ ಫಲವನ್ನು ಹೊಂದುತ್ತಿದ್ದಾರೆ.’​—ರೋಮಾಪುರ 1:​26, 27.

12. ನಾವು ಕೆಟ್ಟದ್ದರ ಕಡೆಗೆ ಏಕೆ ದ್ವೇಷವನ್ನು ಬೆಳೆಸಿಕೊಳ್ಳಬೇಕು?

12 ನೋಹನ ದಿನದಲ್ಲಿ ಯೆಹೋವನು ದೊಡ್ಡ ಜಲಪ್ರಳಯವನ್ನು ಬರಮಾಡಿದನು ಮತ್ತು ಲೈಂಗಿಕತೆಯ ಗೀಳು ಹಿಡಿದಿದ್ದ ಆ ಲೋಕವನ್ನು ಕೊನೆಗೊಳಿಸಿದನು. ಈ ದಿನಗಳು ಖಂಡಿತವಾಗಿಯೂ ನೋಹನ ದಿನಗಳಂತೆಯೇ ಇವೆ ಎಂಬ ವಾಸ್ತವಾಂಶವನ್ನು ನಾವೆಂದಿಗೂ ಮರೆಯಬಾರದು. ಬರಲಿರುವ ‘ಮಹಾ ಸಂಕಟವು’ ಇಡೀ ಭೂಮಿಯಲ್ಲಿರುವ ‘ಜಾರರು ವ್ಯಭಿಚಾರಿಗಳು ವಿಟರು ಮತ್ತು ಪುರುಷಗಾಮಿಗಳನ್ನು’ ಸಂಪೂರ್ಣವಾಗಿ ತೆಗೆದುಹಾಕುವುದು. (ಮತ್ತಾಯ 24:21; 1 ಕೊರಿಂಥ 6:9, 10; ಪ್ರಕಟನೆ 21:8) ನಾವು ಕೆಟ್ಟದ್ದರ ಕಡೆಗೆ ದ್ವೇಷವನ್ನು ಬೆಳೆಸಿಕೊಳ್ಳುವುದು ಮತ್ತು ಅನೈತಿಕತೆಗೆ ನಡೆಸಸಾಧ್ಯವಿರುವಂಥ ಸನ್ನಿವೇಶಗಳಿಂದ ದೂರವಿರುವುದು ಎಷ್ಟು ತುರ್ತಿನದ್ದಾಗಿದೆ!​—ಕೀರ್ತನೆ 97:10; 1 ಕೊರಿಂಥ 6:18.

ಲೋಕವು ‘ಹಿಂಸಾಚಾರದಿಂದ ತುಂಬಿಹೋದದ್ದು’

13. ನೋಹನ ದಿನದಲ್ಲಿ ಭೂಮಿಯಲ್ಲಿ ಏಕೆ ‘ಹಿಂಸಾಚಾರವು ತುಂಬಿಕೊಂಡಿತ್ತು?’

13 ನೋಹನ ದಿನದ ಇನ್ನೂ ಒಂದು ವೈಶಿಷ್ಟ್ಯವನ್ನು ಸೂಚಿಸುತ್ತಾ ಬೈಬಲು ಹೇಳುವುದು: “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು [“ಹಿಂಸಾಚಾರವು,” NW] ಲೋಕವನ್ನು ತುಂಬಿಕೊಂಡಿತ್ತು.” (ಆದಿಕಾಂಡ 6:11) ಹಿಂಸಾಚಾರವು ಒಂದು ಹೊಸ ಸಂಗತಿಯೇನೂ ಆಗಿರಲಿಲ್ಲ. ಏಕೆಂದರೆ ಆದಾಮನ ಮಗನಾಗಿದ್ದ ಕಾಯಿನನು ನೀತಿವಂತನಾಗಿದ್ದ ತನ್ನ ತಮ್ಮನನ್ನು ಕೊಂದನು. (ಆದಿಕಾಂಡ 4:8) ಲೆಮೆಕನು ತನ್ನ ದಿನದ ಹಿಂಸಾತ್ಮಕ ಪ್ರವೃತ್ತಿಯ ಕುರಿತು ನೆನಪಿಸಿಕೊಳ್ಳುತ್ತಾ, ತನ್ನ ಸ್ವರಕ್ಷಣೆಗಾಗಿ ಒಬ್ಬ ಮನುಷ್ಯನನ್ನು ಹೇಗೆ ಕೊಂದೆನೆಂಬುದರ ಕುರಿತು ಜಂಬಕೊಚ್ಚಿಕೊಳ್ಳುತ್ತಾ ಒಂದು ಕವಿತೆಯನ್ನು ರಚಿಸಿದನು. (ಆದಿಕಾಂಡ 4:​23, 24) ಆದರೆ ನೋಹನ ದಿನದಲ್ಲಿ ಯಾವುದು ಹೊಸ ಸಂಗತಿಯಾಗಿತ್ತೆಂದರೆ, ಹಿಂಸಾಚಾರದ ಮಟ್ಟದಲ್ಲಿ ಇದ್ದ ಅತ್ಯಧಿಕ ಭಿನ್ನತೆಯೇ. ದೇವರ ಅವಿಧೇಯ ದೂತಪುತ್ರರು ಮನುಷ್ಯಪುತ್ರಿಯರನ್ನು ವಿವಾಹಮಾಡಿಕೊಂಡು, ನೆಫೀಲಿಯರೆಂದು ಕರೆಯಲ್ಪಡುವ ಮಹಾಶರೀರಿಗಳ ವಂಶವನ್ನು ಉಂಟುಮಾಡಿದಂತೆ, ಈ ಮುಂಚೆ ತಿಳಿದೇ ಇಲ್ಲದಿದ್ದಂಥ ಮಟ್ಟದಲ್ಲಿ ಹಿಂಸಾಚಾರವು ಅಧಿಕಗೊಂಡಿತು. ಹಿಂಸಾಚಾರಿಗಳಾದ ಈ ದೈತ್ಯರು “ಕೆಡಹುವವರು” ಅಂದರೆ “ಇತರರನ್ನು ಹೊಡೆದುರುಳಿಸುವವರು” ಆಗಿದ್ದರು. (ಆದಿಕಾಂಡ 6:​4, NWಪಾದಟಿಪ್ಪಣಿ) ಇದರ ಫಲಿತಾಂಶವಾಗಿ, ಇಡೀ ಭೂಮಿಯು “ಹಿಂಸಾಚಾರದಿಂದ ತುಂಬಿತು.” (ಆದಿಕಾಂಡ 6:​13, NW) ಅಂಥ ಒಂದು ಪರಿಸರದಲ್ಲಿ ತನ್ನ ಕುಟುಂಬವನ್ನು ಬೆಳೆಸುವಾಗ ನೋಹನು ಎದುರಿಸಿದ್ದಿರಬಹುದಾದ ಸಮಸ್ಯೆಗಳನ್ನು ಊಹಿಸಿಕೊಳ್ಳಿರಿ! ಆದರೂ ನೋಹನು ‘ಆ ಸಂತತಿಯವರಲ್ಲಿ ಯೆಹೋವನ ಮುಂದೆ ನೀತಿವಂತನಾಗಿ’ ಕಾಣಿಸಿಕೊಂಡನು.​—ಆದಿಕಾಂಡ 7:1.

14. ಇಂದು ಲೋಕವು ಹೇಗೆ ‘ಹಿಂಸಾಚಾರದಿಂದ ತುಂಬಿಹೋಗಿದೆ?’

14 ಮಾನವಕುಲದ ಇತಿಹಾಸದಾದ್ಯಂತ ಹಿಂಸಾಚಾರವು ಅಸ್ತಿತ್ವದಲ್ಲಿದೆ. ಆದರೆ ನೋಹನ ದಿನಗಳಲ್ಲಿ ನಿಜವಾಗಿದ್ದಂತೆಯೇ ನಮ್ಮ ಕಾಲದಲ್ಲೂ ಅಸಾಧಾರಣ ಪ್ರಮಾಣದಲ್ಲಿ ಜನರು ಹಿಂಸಾಚಾರವನ್ನು ಅನುಭವಿಸಿದ್ದಾರೆ. ಗೃಹ ಹಿಂಸಾಚಾರ, ಭಯೋತ್ಪಾದಕರ ದಾಳಿಗಳು, ಜನಹತ್ಯೆಯ ಕಾರ್ಯಾಚರಣೆಗಳು ಮತ್ತು ಸ್ಪಷ್ಟವಾದ ಯಾವುದೇ ಹೇತುವಿಲ್ಲದ ಬಂದೂಕುಧಾರಿಗಳಿಂದ ನಡೆಸಲ್ಪಡುವ ಸಾಮೂಹಿಕ ಹತ್ಯೆಗಳ ಕುರಿತು ನಾವು ಯಾವಾಗಲೂ ಕೇಳಿಸಿಕೊಳ್ಳುತ್ತಿರುತ್ತೇವೆ. ಇವುಗಳೆಲ್ಲದರೊಂದಿಗೆ ಯುದ್ಧಗಳಿಂದ ಉಂಟುಮಾಡಲ್ಪಡುವ ರಕ್ತಪಾತವೂ ಹೆಚ್ಚನ್ನು ಕೂಡಿಸುತ್ತದೆ. ಪುನಃ ಭೂಮಿಯು ಹಿಂಸಾಚಾರದಿಂದ ತುಂಬಿಹೋಗಿದೆ. ಏಕೆ? ಈ ಹೆಚ್ಚಳಕ್ಕೆ ಯಾವುದು ಕಾರಣವಾಗಿದೆ? ಇದಕ್ಕೆ ಉತ್ತರವು, ನೋಹನ ದಿನದೊಂದಿಗಿರುವ ಇನ್ನೊಂದು ಹೋಲಿಕೆಯನ್ನು ಬಯಲುಪಡಿಸುತ್ತದೆ.

15. (ಎ) ಕಡೇ ದಿವಸಗಳಲ್ಲಿ ಹಿಂಸಾಚಾರವು ಅತ್ಯಧಿಕವಾಗಲು ಯಾವುದು ಕಾರಣವಾಗಿದೆ? (ಬಿ) ನಾವು ಯಾವ ಪರಿಣಾಮದ ವಿಷಯದಲ್ಲಿ ಖಾತ್ರಿಯಿಂದ ಇರಸಾಧ್ಯವಿದೆ?

15 ದೇವರ ಮೆಸ್ಸೀಯ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಾಗ, ಸಿಂಹಾಸನಾರೂಢನಾದ ಯೇಸು ಕ್ರಿಸ್ತನು ಐತಿಹಾಸಿಕವಾಗಿ ಸ್ಮರಣಾರ್ಹವಾಗಿದ್ದಂಥ ಕ್ರಿಯೆಯನ್ನು ಕೈಗೊಂಡನು. ಅದೇನೆಂದರೆ, ಪಿಶಾಚನಾದ ಸೈತಾನನೂ ಅವನ ದೆವ್ವಗಳೂ ಸ್ವರ್ಗದಿಂದ ಭೂಮಿಗೆ ದೊಬ್ಬಲ್ಪಟ್ಟರು. (ಪ್ರಕಟನೆ 12:​9-12) ಜಲಪ್ರಳಯಕ್ಕೆ ಮುಂಚೆ, ಅವಿಧೇಯ ದೇವದೂತರು ಸ್ವಇಷ್ಟದಿಂದ ಸ್ವರ್ಗೀಯ ಸ್ಥಾನವನ್ನು ತೊರೆದು ಬಂದಿದ್ದರು; ಆದರೆ ಆಧುನಿಕ ಸಮಯಗಳಲ್ಲಿ, ಅವರು ಬಲವಂತವಾಗಿ ಅಲ್ಲಿಂದ ಹೊರಡಿಸಲ್ಪಟ್ಟರು. ಅಷ್ಟುಮಾತ್ರವಲ್ಲ, ಅಕ್ರಮವಾದ ಶಾರೀರಿಕ ಸುಖಭೋಗಗಳಲ್ಲಿ ಆನಂದಿಸಲಿಕ್ಕಾಗಿ ಭೂಮಿಯ ಮೇಲೆ ಮಾನವ ದೇಹಧಾರಣೆಮಾಡುವ ಸಾಮರ್ಥ್ಯವು ಸಹ ಈಗ ಅವರಿಂದ ಕಸಿದುಕೊಳ್ಳಲ್ಪಟ್ಟಿದೆ. ಆದುದರಿಂದ, ಆಶಾಭಂಗ, ಕೋಪ ಮತ್ತು ಸಮೀಪಿಸುತ್ತಿರುವ ನ್ಯಾಯತೀರ್ಪಿನ ಭಯದಿಂದ ಅವರು, ನೋಹನ ದಿನಗಳಿಗಿಂತಲೂ ಅಧಿಕ ಮಟ್ಟದ ದುಷ್ಕೃತ್ಯ ಹಾಗೂ ಹಿಂಸಾಚಾರವನ್ನು ಗೈಯುವ ಮೂಲಕ ಅಮಾನುಷ ಕೃತ್ಯಗಳನ್ನು ನಡೆಸುವಂತೆ ಜನರನ್ನೂ ಸಂಸ್ಥೆಗಳನ್ನೂ ಪ್ರಭಾವಿಸುತ್ತಿದ್ದಾರೆ. ಅವಿಧೇಯ ದೇವದೂತರು ಮತ್ತು ಅವರ ಸಂತತಿಯವರು ಜಲಪ್ರಳಯಕ್ಕೆ ಮುಂಚಿನ ಲೋಕವನ್ನು ಕೆಟ್ಟತನದಿಂದ ತುಂಬಿಸಿದ್ದಾಗ, ಯೆಹೋವನು ಆ ಲೋಕವನ್ನು ನಿರ್ನಾಮಮಾಡಿದನು. ನಮ್ಮ ದಿನದಲ್ಲೂ ಆತನು ಖಂಡಿತವಾಗಿಯೂ ಹಾಗೆಯೇ ಮಾಡುವನು ಎಂಬ ವಿಷಯದಲ್ಲಿ ಖಾತ್ರಿಯಿಂದಿರಿ! (ಕೀರ್ತನೆ 37:10) ಆದರೂ, ಇಂದು ಸದಾ ಎಚ್ಚರವಾಗಿರುವವರಿಗೆ ತಮ್ಮ ಬಿಡುಗಡೆಯು ಸಮೀಪಿಸಿದೆ ಎಂಬುದು ಚೆನ್ನಾಗಿ ಗೊತ್ತಿದೆ.

ಸಂದೇಶವು ಸಾರಲ್ಪಡುತ್ತಿದೆ

16, 17. ನೋಹನ ದಿನಗಳು ಮತ್ತು ನಮ್ಮ ದಿನದ ನಡುವೆ ಇರುವ ನಾಲ್ಕನೆಯ ಹೋಲಿಕೆ ಯಾವುದು?

16 ಸದ್ಯದ ದಿನಗಳು ಮತ್ತು ಜಲಪ್ರಳಯಕ್ಕೆ ಮುಂಚಿನ ಲೋಕದ ನಡುವೆಯಿರುವ ಹೋಲಿಕೆಯ ನಾಲ್ಕನೆಯ ಅಂಶವು, ನೋಹನಿಗೆ ಯಾವ ಕೆಲಸವನ್ನು ಮಾಡುವಂತೆ ಆಜ್ಞೆ ನೀಡಲಾಗಿತ್ತೋ ಆ ಕೆಲಸದಲ್ಲಿ ವ್ಯಕ್ತವಾಗುತ್ತದೆ. ನೋಹನು ಒಂದು ದೊಡ್ಡ ನಾವೆಯನ್ನು ಕಟ್ಟಿದನು. ಅವನು ‘ಸಾರುವವನೂ’ ಆಗಿದ್ದನು. (2 ಪೇತ್ರ 2:5) ಅವನು ಯಾವ ಸಂದೇಶವನ್ನು ಸಾರಿದನು? ನೋಹನ ಸಾರುವಿಕೆಯಲ್ಲಿ, ಪಶ್ಚಾತ್ತಾಪಪಡಿರಿ ಎಂಬ ಕರೆ ಮತ್ತು ಬರಲಿರುವ ನಾಶನದ ಕುರಿತಾದ ಎಚ್ಚರಿಕೆಯು ಒಳಗೂಡಿತ್ತೆಂಬುದು ಸುಸ್ಪಷ್ಟ. ನೋಹನ ದಿನದ ಜನರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ” ಇದ್ದರು ಎಂದು ಯೇಸು ಹೇಳಿದನು.​—ಮತ್ತಾಯ 24:​38, 39.

17 ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ಸಾರುವ ನೇಮಕವನ್ನು ಶ್ರದ್ಧೆಯಿಂದ ಪೂರೈಸುತ್ತಿರುವಾಗ, ದೇವರ ರಾಜ್ಯದ ಸಂದೇಶವು ವ್ಯಾಪಕವಾಗಿ ಪ್ರಕಟಿಸಲ್ಪಡುತ್ತಿದೆ. ಭೂಗೋಳದ ಬಹುಮಟ್ಟಿಗೆ ಪ್ರತಿಯೊಂದು ಭಾಗದಲ್ಲಿ, ಜನರು ತಮ್ಮ ಸ್ವಂತ ಭಾಷೆಯಲ್ಲಿ ರಾಜ್ಯದ ಸಂದೇಶವನ್ನು ಕೇಳಿಸಿಕೊಳ್ಳಬಲ್ಲರು ಮತ್ತು ಓದಬಲ್ಲರು. ಯೆಹೋವನ ರಾಜ್ಯವನ್ನು ಪ್ರಕಟಿಸುವಂಥ ಕಾವಲಿನಬುರುಜು ಪತ್ರಿಕೆಯ 2,50,00,000ಕ್ಕಿಂತಲೂ ಹೆಚ್ಚು ಪ್ರತಿಗಳು ವಿತರಿಸಲ್ಪಡುತ್ತಿವೆ ಮತ್ತು ಇದು 140ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲ್ಪಡುತ್ತಿದೆ. ದೇವರ ರಾಜ್ಯದ ಸುವಾರ್ತೆಯು “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರಲ್ಪಡುತ್ತಿದೆ ಎಂಬುದಂತೂ ಸತ್ಯ. ದೇವರಿಗೆ ಸಂತೃಪ್ತಿಯಾಗುವಷ್ಟರ ಮಟ್ಟಿಗೆ ಈ ಕೆಲಸವು ಪೂರ್ಣಗೊಳಿಸಲ್ಪಡುವಾಗ, ಖಂಡಿತವಾಗಿಯೂ ಅಂತ್ಯವು ಬಂದೇ ಬರುವುದು.​—ಮತ್ತಾಯ 24:14.

18. ನೋಹನ ದಿನಗಳಲ್ಲಿದ್ದ ಅಧಿಕಾಂಶ ಜನರಿಗೆ ಹೋಲಿಸುವಾಗ, ನಮ್ಮ ಸಾರುವ ಚಟುವಟಿಕೆಗೆ ಅನೇಕರು ಹೇಗೆ ಪ್ರತಿಕ್ರಿಯಿಸುತ್ತಾರೆ?

18 ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿದ್ದ ಆತ್ಮಿಕ ಮತ್ತು ನೈತಿಕ ಅವನತಿಯನ್ನು ಪರಿಗಣಿಸುವಾಗ, ನೋಹನ ಕುಟುಂಬವು ಸಂದೇಹಪ್ರವೃತ್ತಿಯಿದ್ದ ನೆರೆಯವರ ಕುಚೋದ್ಯಕ್ಕೆ ಏಕೆ ಒಳಗಾಯಿತು ಮತ್ತು ಮಾತಿನ ದಾಳಿಗೆ ಹಾಗೂ ಅಪಹಾಸ್ಯಕ್ಕೆ ಏಕೆ ತುತ್ತಾಯಿತು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಕರವೇನೂ ಅಲ್ಲ. ಆದರೂ ಅಂತ್ಯವು ಬಂದೇ ತೀರಿತು. ಅದೇ ರೀತಿಯಲ್ಲಿ, ಈ ಕಡೇ ದಿವಸಗಳಲ್ಲೂ ‘ಕುಚೋದ್ಯಗಾರರು ಮತ್ತು ಕುಚೋದ್ಯವು’ ದಿನೇ ದಿನೇ ಅಧಿಕೊಳ್ಳುತ್ತದೆ. “ಆದರೂ ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ” ಎಂದು ಬೈಬಲ್‌ ಹೇಳುತ್ತದೆ. (2 ಪೇತ್ರ 3:3, 4, 10) ನೇಮಿತ ಸಮಯದಲ್ಲಿ ಅದು ಬಂದೇ ಬರುವುದು. ಖಂಡಿತವಾಗಿಯೂ ತಾಮಸವಾಗದು. (ಹಬಕ್ಕೂಕ 2:3) ನಾವು ಸದಾ ಎಚ್ಚರವಾಗಿರುವುದು ಎಷ್ಟು ವಿವೇಕಯುತವಾದದ್ದಾಗಿದೆ!

ಕೆಲವರು ಮಾತ್ರ ಪಾರಾದರು

19, 20. ಜಲಪ್ರಳಯ ಮತ್ತು ಸದ್ಯದ ವಿಷಯಗಳ ವ್ಯವಸ್ಥೆಯ ನಡುವೆ ಯಾವ ಹೋಲಿಕೆಯನ್ನು ನಾವು ಕಂಡುಕೊಳ್ಳಸಾಧ್ಯವಿದೆ?

19 ನೋಹನ ದಿನ ಹಾಗೂ ನಮ್ಮ ದಿನದ ನಡುವಣ ಹೋಲಿಕೆಗಳು, ಜನರ ಕೆಟ್ಟತನ ಹಾಗೂ ಅವರ ನಾಶನದ ವಿವರಣೆಯಲ್ಲಷ್ಟೇ ಕೊನೆಗೊಳ್ಳುವುದಿಲ್ಲ. ಆಗಿನ ಜಲಪ್ರಳಯದಿಂದ ಕೆಲವರು ಪಾರಾಗಿ ಉಳಿದಂತೆಯೇ, ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯದಿಂದ ಕೆಲವರು ಪಾರಾಗಿ ಉಳಿಯುವರು. ಜಲಪ್ರಳಯದಿಂದ ಪಾರಾಗಿ ಉಳಿದವರು ದೀನಭಾವದ ಜನರಾಗಿದ್ದರು ಮತ್ತು ಆ ಕಾಲದಲ್ಲಿ ಜನಸಾಮಾನ್ಯರು ಹೇಗೆ ಜೀವಿಸುತ್ತಿದ್ದರೋ ಹಾಗೆ ಜೀವಿಸದೆ ಅವರಿಗಿಂತ ಭಿನ್ನರಾಗಿದ್ದರು. ಅವರು ದೈವಿಕ ಎಚ್ಚರಿಕೆಗೆ ಲಕ್ಷ್ಯಗೊಟ್ಟು, ಆ ಕಾಲದ ದುಷ್ಟ ಲೋಕದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡರು. “ನೋಹನಿಗೆ ಯೆಹೋವನ ದಯವು ದೊರಕಿತು” ಎಂದು ಬೈಬಲ್‌ ಹೇಳುತ್ತದೆ. “ನೋಹನು . . . ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು.” (ಆದಿಕಾಂಡ 6:​8, 9) ಇಡೀ ಮಾನವಕುಲದಿಂದ ಒಂದೇ ಕುಟುಂಬವು, “ಕೆಲವರು ಅಂದರೆ ಎಂಟೇ ಜನರು ಸೇರಿ ನೀರಿನ ಮೂಲಕ ರಕ್ಷಣೆಹೊಂದಿದರು.” (1 ಪೇತ್ರ 3:20) ಮತ್ತು ಅವರಿಗೆ ಯೆಹೋವನು ಒಂದು ಆಜ್ಞೆಯನ್ನು ಕೊಟ್ಟನು: “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.”​—ಆದಿಕಾಂಡ 9:1.

20 “ಮಹಾ ಸಮೂಹವು” ‘ಮಹಾಸಂಕಟವನ್ನು ಅನುಭವಿಸಿ ಹೊರಬರುವುದು’ ಎಂದು ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ. (ಪ್ರಕಟನೆ 7:​9, 14) ಆ ಮಹಾ ಸಮೂಹದಲ್ಲಿ ಎಷ್ಟು ಜನರು ಒಳಗೂಡಿರುವರು? ಯೇಸು ತಾನೇ ಹೇಳಿದ್ದು: “ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಇಂದು ಈ ಭೂಮಿಯಲ್ಲಿ ಜೀವಿಸುತ್ತಿರುವ ನೂರಾರು ಕೋಟಿಗಳಷ್ಟು ಜನರಿಗೆ ಹೋಲಿಸುವಾಗ, ಬರಲಿರುವ ಮಹಾಸಂಕಟದಿಂದ ಪಾರಾಗಿ ಉಳಿಯುವವರು ಕೆಲವರೇ ಆಗಿರುವರು. ಆದರೆ ಜಲಪ್ರಳಯದಿಂದ ಪಾರಾಗಿ ಉಳಿದವರಿಗೆ ಕೊಡಲ್ಪಟ್ಟಂಥ ಸುಯೋಗವೇ ಇವರಿಗೂ ಕೊಡಲ್ಪಡಬಹುದು. ಅಂದರೆ, ಮಹಾಸಂಕಟದಿಂದ ಪಾರಾಗಿ ಉಳಿಯುವವರು, ಹೊಸ ಭೂಸಮಾಜದ ಒಂದು ಭಾಗದೋಪಾದಿ ಸ್ವಲ್ಪ ಕಾಲಾವಧಿಯ ವರೆಗೆ ಸಂತತಿಯನ್ನು ಉಂಟುಮಾಡಲು ಶಕ್ತರಾಗಬಹುದು.​—ಯೆಶಾಯ 65:23.

“ಸದಾ ಎಚ್ಚರವಾಗಿರಿ”

21, 22. (ಎ) ಜಲಪ್ರಳಯದ ವೃತ್ತಾಂತದ ಕುರಿತಾದ ಈ ಪರಿಗಣನೆಯು ನಿಮಗೆ ಹೇಗೆ ಪ್ರಯೋಜನ ನೀಡಿದೆ? (ಬಿ) ಇಸವಿ 2004ರ ವಾರ್ಷಿಕವಚನವು ಯಾವುದಾಗಿದೆ, ಮತ್ತು ಅದು ನೀಡುವಂಥ ಬುದ್ಧಿವಾದಕ್ಕೆ ನಾವು ಏಕೆ ಲಕ್ಷ್ಯಕೊಡಬೇಕಾಗಿದೆ?

21 ಆ ಜಲಪ್ರಳಯವು ದೀರ್ಘ ಕಾಲಾವಧಿಗೆ ಮುಂಚೆ ಸಂಭವಿಸಿರುವುದರಿಂದ, ನಮ್ಮ ದಿನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲದಿರುವಂತೆ ತೋರುವುದಾದರೂ, ನಾವು ಎಂದಿಗೂ ಅಲಕ್ಷ್ಯ ಮನೋಭಾವವನ್ನು ತೋರಿಸಬಾರದು ಎಂಬ ಎಚ್ಚರಿಕೆಯನ್ನು ಅದು ನೀಡುತ್ತದೆ ಎಂಬುದಂತೂ ಸುಸ್ಪಷ್ಟ. (ರೋಮಾಪುರ 15:4) ನೋಹನ ದಿನ ಹಾಗೂ ನಮ್ಮ ದಿನದ ನಡುವಣ ಹೋಲಿಕೆಗಳು, ಏನು ಸಂಭವಿಸುತ್ತಿದೆಯೋ ಅದರ ಮಹತ್ವಾರ್ಥದ ಕುರಿತು ನಾವು ಹೆಚ್ಚೆಚ್ಚು ಅರಿವುಳ್ಳವರಾಗುವಂತೆ ಮಾಡಬೇಕು ಮತ್ತು ದುಷ್ಟರ ಮೇಲೆ ನ್ಯಾಯತೀರ್ಪನ್ನು ವಿಧಿಸಲು ಯೇಸು ಅನಿರೀಕ್ಷಿತವಾಗಿ ಬರುವಾಗ ನಮ್ಮನ್ನು ಸದಾ ಜಾಗರೂಕರನ್ನಾಗಿ ಇರಿಸಬೇಕು.

22 ಇಂದು ಯೇಸು ಕ್ರಿಸ್ತನು ಬೃಹತ್‌ ಪ್ರಮಾಣದ ಆತ್ಮಿಕ ನಿರ್ಮಾಣಕಾರ್ಯವನ್ನು ನಿರ್ದೇಶಿಸುತ್ತಿದ್ದಾನೆ. ಸತ್ಯಾರಾಧಕರ ಭದ್ರತೆ ಮತ್ತು ಪಾರಾಗಿ ಉಳಿಯುವಿಕೆಗಾಗಿ ನಾವೆಯಂಥ ಒಂದು ಆತ್ಮಿಕ ಪರದೈಸವು ಅಸ್ತಿತ್ವದಲ್ಲಿದೆ. (2 ಕೊರಿಂಥ 12:3) ಮಹಾಸಂಕಟದಿಂದ ಸಂರಕ್ಷಿಸಲ್ಪಡಬೇಕಾದರೆ, ನಾವು ಆ ಪರದೈಸಿನಲ್ಲೇ ಉಳಿಯಬೇಕು. ಆತ್ಮಿಕ ಪರದೈಸಿನ ಗಡಿಯ ಸುತ್ತಲೂ ಸೈತಾನನ ಲೋಕವು ಆವರಿಸಿದೆ ಮತ್ತು ಇದು ಆತ್ಮಿಕವಾಗಿ ತೂಕಡಿಸುತ್ತಿರುವ ಯಾರನ್ನೇ ಆಗಲಿ ಕಬಳಿಸಿಬಿಡಲು ಸದಾ ಸಿದ್ಧವಾಗಿದೆ. ಆದುದರಿಂದ, ನಾವು ‘ಸದಾ ಎಚ್ಚರವಾಗಿರುವುದು’ ಮತ್ತು ಯೆಹೋವನ ದಿನಕ್ಕಾಗಿ ನಮ್ಮನ್ನು ಸಿದ್ಧರನ್ನಾಗಿ ತೋರಿಸಿಕೊಳ್ಳುವುದು ಖಂಡಿತವಾಗಿಯೂ ಮಾಡಿಯೇ ತೀರಬೇಕಾದ ಸಂಗತಿಯಾಗಿದೆ.​—ಮತ್ತಾಯ 24:​42, 44.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ತನ್ನ ಬರೋಣದ ವಿಷಯದಲ್ಲಿ ಯೇಸು ಯಾವ ಬುದ್ಧಿವಾದವನ್ನು ಕೊಟ್ಟನು?

• ತನ್ನ ಸಾನ್ನಿಧ್ಯದ ಸಮಯವನ್ನು ಯೇಸು ಯಾವುದರೊಂದಿಗೆ ಹೋಲಿಸಿದನು?

• ಯಾವ ವಿಧಗಳಲ್ಲಿ ನಮ್ಮ ಕಾಲವು ನೋಹನ ದಿನಗಳಿಗೆ ತುಲನಾತ್ಮಕವಾಗಿದೆ?

• ನೋಹನ ದಿನ ಹಾಗೂ ನಮ್ಮ ದಿನದ ನಡುವಣ ಹೋಲಿಕೆಗಳ ಕುರಿತು ಮನನಮಾಡುವುದು, ನಮ್ಮ ತುರ್ತುಪ್ರಜ್ಞೆಯನ್ನು ಹೇಗೆ ಪ್ರಭಾವಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

2004ನೆಯ ಇಸವಿಗಾಗಿರುವ ವಾರ್ಷಿಕವಚನ: “ಸದಾ ಎಚ್ಚರವಾಗಿರಿ . . . ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ.”​—ಮತ್ತಾಯ 24:​42, 44, NW.

[ಪುಟ 15ರಲ್ಲಿರುವ ಚಿತ್ರ]

ನೋಹನು ದೈವಿಕ ಎಚ್ಚರಿಕೆಗೆ ಕಿವಿಗೊಟ್ಟನು. ನಾವು ಸಹ ತದ್ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೋ?

[ಪುಟ 16, 17ರಲ್ಲಿರುವ ಚಿತ್ರಗಳು]

“ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವದು”