ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ

ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ

ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ

“ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”​—ಮತ್ತಾಯ 24:44, NW.

1. ನಾವು ಏಕೆ ಯೆಹೋವನ ಮಹಾದಿನದ ವಿಷಯದಲ್ಲಿ ಆಸಕ್ತಿಯುಳ್ಳವರಾಗಿಬೇಕು?

ಯೆಹೋವನ ಭಯಪ್ರೇರಕ ದಿನವು ಯುದ್ಧ ಹಾಗೂ ರೌದ್ರ, ಕಡುಸಂಕಟ ಮತ್ತು ಕಡುವೇದನೆ, ಅಂಧಕಾರ ಮತ್ತು ವಿನಾಶದ ದಿನವಾಗಿರುವುದು. ನೋಹನ ದಿನದ ದುಷ್ಟ ಲೋಕವನ್ನು ಜಲಪ್ರಳಯವು ಮುಳುಗಿಸಿಬಿಟ್ಟಂತೆಯೇ ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ಯೆಹೋವನ “ಭಯಂಕರವಾದ ಮಹಾದಿನವು” ಖಂಡಿತವಾಗಿಯೂ ಬಂದೇ ಬರುವುದು. ಅದು ನಿಶ್ಚಯವಾಗಿಯೂ ಬಂದೇ ತೀರುವುದು. ಆದರೂ, “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ಯೋವೇಲ 2:30-32; ಆಮೋಸ 5:18-20) ದೇವರು ತನ್ನ ವೈರಿಗಳನ್ನು ನಾಶಮಾಡುವನು ಮತ್ತು ತನ್ನ ಜನರನ್ನು ಕಾಪಾಡುವನು. ತುರ್ತುಪ್ರಜ್ಞೆಯಿಂದ ಪ್ರವಾದಿಯಾದ ಚೆಫನ್ಯನು ಪ್ರಕಟಿಸಿದ್ದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫನ್ಯ 1:14) ಹಾಗಾದರೆ, ಈ ದೈವಿಕ ನ್ಯಾಯತೀರ್ಪು ಯಾವಾಗ ವಿಧಿಸಲ್ಪಡುವುದು?

2, 3. ಯೆಹೋವನ ದಿನಕ್ಕಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ?

2 “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು” ಎಂದು ಯೇಸು ಹೇಳಿದನು. (ಮತ್ತಾಯ 24:36) ನಿರ್ದಿಷ್ಟವಾಗಿ ಯಾವ ಸಮಯದಲ್ಲಿ ಅದು ಬರುತ್ತದೆ ಎಂಬುದು ನಮಗೆ ತಿಳಿದಿಲ್ಲವಾದುದರಿಂದ, 2004ನೇ ಇಸವಿಗಾಗಿರುವ ನಮ್ಮ ವಾರ್ಷಿಕವಚನದ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳುವುದು ಅತ್ಯಾವಶ್ಯಕವಾದದ್ದಾಗಿದೆ: “ಸದಾ ಎಚ್ಚರವಾಗಿರಿ . . . ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ.”​—ಮತ್ತಾಯ 24:​42, 44, NW.

3 ಯಾರು ಸಿದ್ಧರಾಗಿರುತ್ತಾರೋ ಅವರು ರಕ್ಷಣೆಗಾಗಿ ಅನಿರೀಕ್ಷಿತವಾಗಿ ಒಟ್ಟುಗೂಡಿಸಲ್ಪಡುವಾಗ, ಇತರರಾದರೋ ಹೇಗೆ ಬಿಟ್ಟುಬಿಡಲ್ಪಡುತ್ತಾರೆ ಎಂಬುದನ್ನು ಸೂಚಿಸುತ್ತಾ ಯೇಸು ಹೇಳಿದ್ದು: “ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕೂತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಒಬ್ಬಳು ಬಿಡಲ್ಪಡುವಳು.” (ಮತ್ತಾಯ 24:40, 41) ಆ ನಿರ್ಣಾಯಕ ಹಂತದಲ್ಲಿ ನಮ್ಮ ವೈಯಕ್ತಿಕ ಸನ್ನಿವೇಶವು ಹೇಗಿರುವುದು? ನಾವು ಸಿದ್ಧರಾಗಿರುವೆವೋ, ಅಥವಾ ನಾವು ಎಚ್ಚರವಾಗಿಲ್ಲದಿರುವಂಥ ಸಮಯದಲ್ಲಿ ಆ ದಿನವು ಬಂದೆರಗುವುದೋ? ಈಗ ನಾವು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೋ ಅದರ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ಯೆಹೋವನ ದಿನಕ್ಕಾಗಿ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಬೇಕಾದರೆ, ಇಂದು ಜನಪ್ರಿಯವಾಗಿರುವಂಥ ಕೆಲವು ಮನೋಭಾವಗಳನ್ನು ತೊರೆಯುವ, ಆತ್ಮಿಕ ರೀತಿಯಲ್ಲಿ ಅವನತಿಯ ಸ್ಥಿತಿಗೆ ತಲಪುವುದರಿಂದ ನಮ್ಮನ್ನು ಕಾಪಾಡಿಕೊಳ್ಳುವ, ಮತ್ತು ನಿರ್ದಿಷ್ಟ ರೀತಿಯ ಜೀವನ ಶೈಲಿಗಳಿಂದ ಉದ್ದೇಶಪೂರ್ವಕವಾಗಿ ದೂರವಿರುವ ಅಗತ್ಯವಿದೆ.

ಸ್ವತೃಪ್ತ ಮನೋಭಾವದಿಂದ ದೂರವಿರಿ

4. ನೋಹನ ದಿನದ ಜನರಿಗೆ ಯಾವ ರೀತಿಯ ಮನೋಭಾವವಿತ್ತು?

4 ನೋಹನ ದಿನಗಳನ್ನು ಪರಿಗಣಿಸಿರಿ. “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 11:7) ಆ ನಾವೆಯು ಅಸಾಧಾರಣವಾದದ್ದಾಗಿತ್ತು ಮತ್ತು ಎಲ್ಲರ ದೃಷ್ಟಿಗೂ ಬೀಳುವಂತಿತ್ತು. ಅಷ್ಟುಮಾತ್ರವಲ್ಲ, ನೋಹನು ‘ಸುನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ನೋಹನ ನಿರ್ಮಾಣ ಯೋಜನೆಯಾಗಲಿ ಅಥವಾ ಅವನ ಸಾರುವಿಕೆಯಾಗಲಿ, ತಮ್ಮ ಮಾರ್ಗಕ್ರಮವನ್ನು ಬದಲಾಯಿಸಿಕೊಳ್ಳುವಂತೆ ಅವನ ದಿನದ ಜನರನ್ನು ಪ್ರಚೋದಿಸಲಿಲ್ಲ. ಏಕೆ? ಏಕೆಂದರೆ ಅವರು “ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ” ಇದ್ದರು. ನೋಹನು ಯಾರಿಗೆ ಸಾರಿದನೋ ಅವರು ತಮ್ಮ ವೈಯಕ್ತಿಕ ಆಗುಹೋಗುಗಳಲ್ಲಿ ಮತ್ತು ಸುಖಾನುಭೋಗಗಳಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ‘ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಅವರು ಏನೂ ತಿಳಿಯದೇ ಇದ್ದರು.’​—ಮತ್ತಾಯ 24:​38, 39.

5. ಲೋಟನ ದಿನಗಳಲ್ಲಿ ಸೊದೋಮ್‌ ಊರಿನ ನಿವಾಸಿಗಳ ದೃಷ್ಟಿಕೋನವು ಏನಾಗಿತ್ತು?

5 ಲೋಟನ ದಿನಗಳಲ್ಲಿಯೂ ಸನ್ನಿವೇಶವು ಇದೇ ರೀತಿಯಲ್ಲಿತ್ತು. ಶಾಸ್ತ್ರವಚನವು ನಮಗೆ ಹೀಗೆ ಹೇಳುತ್ತದೆ: “ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮ್‌ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು.” (ಲೂಕ 17:28, 29) ಸಮೀಪಿಸುತ್ತಿದ್ದ ನಾಶನದ ಕುರಿತು ದೇವದೂತರು ಲೋಟನಿಗೆ ಎಚ್ಚರಿಕೆ ನೀಡಿದ ಬಳಿಕ, ಏನು ಸಂಭವಿಸಲಿದೆಯೋ ಅದರ ಕುರಿತು ಅವನು ತನ್ನ ಅಳಿಯಂದಿರಿಗೆ ತಿಳಿಸಿದನು. ಆದರೂ, ಅವನು ಅವರಿಗೆ “ಗೇಲಿಮಾಡುವವನಾಗಿ ಕಾಣಿಸಿದನು.”​—ಆದಿಕಾಂಡ 19:14.

6. ಯಾವ ರೀತಿಯ ಮನೋಭಾವವನ್ನು ನಾವು ತೊರೆಯಬೇಕು?

6 ನೋಹ ಮತ್ತು ಲೋಟರ ದಿನಗಳು ಹೇಗಿದ್ದವೋ ಹಾಗೆಯೇ “ಮನುಷ್ಯಕುಮಾರನ ಸಾನ್ನಿಧ್ಯವೂ” ಇರುವುದು ಎಂದು ಯೇಸು ಹೇಳಿದನು. (ಮತ್ತಾಯ 24:​39, NW; ಲೂಕ 17:30) ವಾಸ್ತವದಲ್ಲಿ, ಇಂದು ಅನೇಕರಲ್ಲಿ ಎದ್ದುಕಾಣುವ ಮನೋಭಾವವು ಸ್ವತೃಪ್ತ ಮನೋಭಾವವಾಗಿದೆ. ಇಂಥ ಒಂದು ದೃಷ್ಟಿಕೋನದಿಂದ ಪ್ರಭಾವಿಸಲ್ಪಡುವುದರ ವಿರುದ್ಧ ನಾವು ನಮ್ಮನ್ನು ಕಾಪಾಡಿಕೊಳ್ಳಬೇಕು. ಮಿತ ಪ್ರಮಾಣದ ಸ್ವಾದಿಷ್ಟಕರ ಆಹಾರ ಮತ್ತು ಮದ್ಯಪಾನವನ್ನು ಸೇವಿಸುವುದರಲ್ಲಿ ತಪ್ಪೇನೂ ಇಲ್ಲ. ಅದೇ ರೀತಿಯಲ್ಲಿ ವಿವಾಹವು ಸಹ ದೇವರಿಂದ ಮಾಡಲ್ಪಟ್ಟ ಏರ್ಪಾಡಾಗಿದೆ. ಆದರೂ, ಒಂದುವೇಳೆ ನಮ್ಮ ಜೀವನದಲ್ಲಿ ಅಂಥ ವಿಷಯಗಳೇ ಅತ್ಯಂತ ಪ್ರಾಮುಖ್ಯವಾಗಿ ಪರಿಣಮಿಸಿರುವುದಾದರೆ ಮತ್ತು ಆತ್ಮಿಕ ಅಭಿರುಚಿಗಳು ಅಲಕ್ಷಿಸಲ್ಪಟ್ಟಿರುವುದಾದರೆ, ವೈಯಕ್ತಿಕವಾಗಿ ನಾವು ಯೆಹೋವನ ಭಯಪ್ರೇರಕ ದಿನಕ್ಕೆ ಸಿದ್ಧರಾಗಿದ್ದೇವೋ?

7. ಯಾವುದೇ ಬೆನ್ನಟ್ಟುವಿಕೆಯಲ್ಲಿ ತೊಡಗುವುದಕ್ಕೆ ಮೊದಲು ಯಾವ ಅತ್ಯಾವಶ್ಯಕ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ, ಮತ್ತು ಏಕೆ?

7 ‘ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ ಇರಲಿ’ ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 7:​29-31) ನಮ್ಮ ದೇವದತ್ತ ರಾಜ್ಯ ಸಾರುವಿಕೆಯ ಕೆಲಸವನ್ನು ಮಾಡಿಮುಗಿಸಲು ನಮಗೆ ಪರಿಮಿತ ಕಾಲಾವಧಿಯು ಮಾತ್ರ ಉಳಿದಿದೆ. (ಮತ್ತಾಯ 24:14) ತಮ್ಮ ಜೀವಿತಗಳಲ್ಲಿ ರಾಜ್ಯಾಭಿರುಚಿಗಳಿಗೆ ಎರಡನೆಯ ಸ್ಥಾನವನ್ನು ಕೊಡುವಂತಾಗುವಷ್ಟರ ಮಟ್ಟಿಗೆ ವಿವಾಹಿತರು ಸಹ ತಮ್ಮ ಸಂಗಾತಿಗಳಲ್ಲಿ ತಲ್ಲೀನರಾಗಿರಬಾರದು ಎಂದು ಪೌಲನು ಬುದ್ಧಿಹೇಳುತ್ತಾನೆ. ಇಲ್ಲಿ ಪೌಲನು ಶಿಫಾರಸ್ಸು ಮಾಡುತ್ತಿದ್ದಂಥ ಮಾನಸಿಕ ಪ್ರವೃತ್ತಿಯು, ಸ್ವತೃಪ್ತಿಗೆ ತದ್ವಿರುದ್ಧವಾದ ಮನೋಭಾವವಾಗಿದೆ ಎಂಬುದಂತೂ ಸುಸ್ಪಷ್ಟ. ಯೇಸು ಹೇಳಿದ್ದು: “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ [“ಹುಡುಕುತ್ತಾ ಇರಿ,” NW].” (ಮತ್ತಾಯ 6:33) ಯಾವುದೇ ನಿರ್ಣಯವನ್ನು ಮಾಡುತ್ತಿರುವಾಗ ಅಥವಾ ಯಾವುದೇ ಬೆನ್ನಟ್ಟುವಿಕೆಯಲ್ಲಿ ತೊಡಗುವುದಕ್ಕೆ ಮೊದಲು, ನಾವು ಕೇಳಿಕೊಳ್ಳಬೇಕಾಗಿರುವ ಅತಿ ಪ್ರಾಮುಖ್ಯ ಪ್ರಶ್ನೆಯೇನೆಂದರೆ, ‘ಜೀವನದಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವುದರ ಮೇಲೆ ಇದು ಯಾವ ಪರಿಣಾಮವನ್ನು ಬೀರುವುದು?’

8. ಒಂದುವೇಳೆ ದೈನಂದಿನ ಚಟುವಟಿಕೆಗಳೇ ನಮ್ಮ ಜೀವಿತದ ಮುಖ್ಯ ಚಿಂತೆಯಾಗಿ ಪರಿಣಮಿಸಿರುವಲ್ಲಿ, ನಾವೇನು ಮಾಡತಕ್ಕದ್ದು?

8 ಆತ್ಮಿಕ ಅಭಿರುಚಿಗಳನ್ನು ಎರಡನೇ ಸ್ಥಾನಕ್ಕೆ ದೂಡುವಷ್ಟರ ಮಟ್ಟಿಗೆ ನಾವು ನಮ್ಮ ಜೀವಿತದ ದೈನಂದಿನ ಚಟುವಟಿಕೆಗಳಲ್ಲಿ ಈಗಾಗಲೇ ಮುಳುಗಿಹೋಗಿದ್ದೇವೆ ಎಂಬುದು ನಮ್ಮ ಅರಿವಿಗೆ ಬರುವಲ್ಲಿ ಆಗೇನು? ನಮ್ಮ ಜೀವನ ಶೈಲಿ ಮತ್ತು ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನವಿಲ್ಲದವರೂ ರಾಜ್ಯ ಘೋಷಕರಲ್ಲದವರೂ ಆಗಿರುವ ನಮ್ಮ ನೆರೆಯವರ ಜೀವನ ಶೈಲಿಯ ನಡುವೆ ಸ್ವಲ್ಪವೂ ಭಿನ್ನತೆಯಿಲ್ಲವೋ? ಹಾಗಿರುವಲ್ಲಿ, ನಾವು ಈ ವಿಷಯದ ಕುರಿತು ಪ್ರಾರ್ಥಿಸುವ ಅಗತ್ಯವಿದೆ. ನಾವು ಸೂಕ್ತವಾದ ಮಾನಸಿಕ ಭಾವನೆಯನ್ನು ಪಡೆದುಕೊಳ್ಳುವಂತೆ ಯೆಹೋವನು ನಮಗೆ ಸಹಾಯಮಾಡಶಕ್ತನು. (ರೋಮಾಪುರ 15:5; ಫಿಲಿಪ್ಪಿ 3:15) ನಾವು ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲು, ಸರಿಯಾದದ್ದನ್ನೇ ಮಾಡಲು ಮತ್ತು ಆತನ ಕಡೆಗಿನ ನಮ್ಮ ಕರ್ತವ್ಯವನ್ನು ಪೂರೈಸಲು ಆತನೇ ನಮಗೆ ಸಹಾಯಮಾಡಬಲ್ಲನು.​—ರೋಮಾಪುರ 12:2; 2 ಕೊರಿಂಥ 13:7.

ಆತ್ಮಿಕ ತೂಕಡಿಕೆಯನ್ನು ಪ್ರತಿರೋಧಿಸಿರಿ

9. ಪ್ರಕಟನೆ 16:​14-16ಕ್ಕನುಸಾರ, ಆತ್ಮಿಕ ತೂಕಡಿಕೆಯನ್ನು ಪ್ರತಿರೋಧಿಸುವುದು ಏಕೆ ಪ್ರಾಮುಖ್ಯವಾಗಿದೆ?

9 ಅರ್ಮಗೆದೋನ್‌ನಲ್ಲಿ ಸಂಭವಿಸಲಿರುವ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ದ ಕುರಿತು ತಿಳಿಸುವಂಥ ಪ್ರವಾದನೆಯೇ, ಕೆಲವರು ಸದಾ ಎಚ್ಚರವಾಗಿಲ್ಲದೆ ಇರಬಹುದು ಎಂಬ ಎಚ್ಚರಿಕೆಯನ್ನು ನೀಡುತ್ತದೆ. ಕರ್ತನಾದ ಯೇಸು ಕ್ರಿಸ್ತನು ಹೇಳುವುದು: “ಇಗೋ, ಕಳ್ಳನು ಬರುವಂತೆ ಬರುತ್ತೇನೆ; ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ [ಹೊರ]ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು.” (ಪ್ರಕಟನೆ 16:14-16) ಇಲ್ಲಿ ತಿಳಿಸಲ್ಪಟ್ಟಿರುವ ಹೊರವಸ್ತ್ರಗಳು, ಯೆಹೋವನ ಕ್ರೈಸ್ತ ಸಾಕ್ಷಿಗಳೋಪಾದಿ ನಮ್ಮನ್ನು ಯಾವುದು ಗುರುತಿಸುತ್ತದೋ ಅದಕ್ಕೆ ಸೂಚಿತವಾಗಿವೆ. ರಾಜ್ಯ ಘೋಷಕರೋಪಾದಿ ನಾವು ಮಾಡುವ ಕೆಲಸ ಹಾಗೂ ನಮ್ಮ ಕ್ರೈಸ್ತ ನಡತೆಯು ಇದರಲ್ಲಿ ಒಳಗೂಡಿದೆ. ಒಂದುವೇಳೆ ನಾವು ನಿದ್ರಾವಸ್ಥೆಯಂಥ ನಿಷ್ಕ್ರಿಯ ಸ್ಥಿತಿಗೆ ಜಾರುವಲ್ಲಿ, ನಮ್ಮ ಕ್ರೈಸ್ತ ಗುರುತು ನಮ್ಮಿಂದ ಕಸಿದುಕೊಳ್ಳಲ್ಪಡಬಹುದು. ಇದು ತುಂಬ ಅವಮಾನಕ್ಕೆ ಗುರಿಪಡಿಸುವಂಥದ್ದಾಗಿದೆ ಮತ್ತು ಅಪಾಯಕರವೂ ಆಗಿದೆ. ಆದುದರಿಂದ ನಾವು ಆತ್ಮಿಕ ತೂಕಡಿಕೆ ಅಥವಾ ಜಡತೆಯ ಸ್ಥಿತಿಗೆ ಬೀಳುವುದರಿಂದ ನಮ್ಮನ್ನು ಕಾಪಾಡಿಕೊಳ್ಳಬೇಕು. ಇಂಥ ಪ್ರವೃತ್ತಿಯನ್ನು ನಾವು ಹೇಗೆ ಪ್ರತಿರೋಧಿಸಸಾಧ್ಯವಿದೆ?

10. ಪ್ರತಿದಿನ ಬೈಬಲನ್ನು ಓದುವುದು, ನಾವು ಆತ್ಮಿಕವಾಗಿ ಎಚ್ಚರವಾಗಿ ಉಳಿಯಲು ನಮಗೆ ಸಹಾಯಮಾಡುತ್ತದೆ ಏಕೆ?

10 ಸದಾ ಎಚ್ಚರವಾಗಿರುವ ಮತ್ತು ಸ್ವಸ್ಥಚಿತ್ತರಾಗಿರುವ ಅಗತ್ಯವನ್ನು ಬೈಬಲು ಪದೇ ಪದೇ ಒತ್ತಿಹೇಳುತ್ತದೆ. ಉದಾಹರಣೆಗೆ, ಸುವಾರ್ತಾ ವೃತ್ತಾಂತಗಳು ನಮಗೆ ಹೀಗೆ ಎಚ್ಚರಿಕೆ ನೀಡುತ್ತವೆ: “ಸದಾ ಎಚ್ಚರವಾಗಿರಿ” (ಮತ್ತಾಯ 24:​42, NW; 25:13; ಮಾರ್ಕ 13:​35, 37); “ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ” (ಮತ್ತಾಯ 24:​44, NW); “ಸದಾ ನೋಡುತ್ತಾ ಇರಿ, ಜಾಗರೂಕರಾಗಿರಿ” (ಮಾರ್ಕ 13:​33, NW); “ಸದಾ ಸಿದ್ಧರಾಗಿರಿ” (ಲೂಕ 12:​40, NW). ಈ ಲೋಕದ ಮೇಲೆ ಯೆಹೋವನ ದಿನವು ಅನಿರೀಕ್ಷಿತವಾಗಿ ಬರಲಿಕ್ಕಿದೆಯೆಂದು ಹೇಳಿದ ಬಳಿಕ ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಹೀಗೆ ಉತ್ತೇಜಿಸಿದನು: “ಆದಕಾರಣ ನಾವು ಇತರರಂತೆ ನಿದ್ದೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕ 5:6) ಬೈಬಲಿನ ಕೊನೇ ಪುಸ್ತಕದಲ್ಲಿ, ಮಹಿಮಾನ್ವಿತ ಕ್ರಿಸ್ತ ಯೇಸುವು ತನ್ನ ಬರೋಣದ ಅನಿರೀಕ್ಷಿತತೆಯನ್ನು ಒತ್ತಿಹೇಳುತ್ತಾ ತಿಳಿಸಿದ್ದು: ‘ನಾನು ಬೇಗನೆ ಬರುತ್ತೇನೆ.’ (ಪ್ರಕಟನೆ 3:11; 22:7, 12, 20) ಹೀಬ್ರು ಪ್ರವಾದಿಗಳಲ್ಲಿ ಅನೇಕರು ಸಹ ಯೆಹೋವನ ನ್ಯಾಯತೀರ್ಪಿನ ಮಹಾದಿನದ ಕುರಿತು ವರ್ಣಿಸಿದರು ಮತ್ತು ಎಚ್ಚರಿಕೆ ನೀಡಿದರು. (ಯೆಶಾಯ 2:12, 17; ಯೆರೆಮೀಯ 30:7; ಯೋವೇಲ 2:11; ಚೆಫನ್ಯ 3:8) ದೇವರ ವಾಕ್ಯವಾಗಿರುವ ಬೈಬಲನ್ನು ಪ್ರತಿದಿನ ಓದುವುದು ಮತ್ತು ನಾವು ಏನನ್ನು ಓದುತ್ತೇವೋ ಅದರ ಕುರಿತು ಮನನಮಾಡುವುದು, ಆತ್ಮಿಕವಾಗಿ ಎಚ್ಚರವಾಗಿ ಉಳಿಯುವುದರಲ್ಲಿ ಒಂದು ದೊಡ್ಡ ಸಹಾಯವಾಗಿದೆ.

11. ಆತ್ಮಿಕ ಎಚ್ಚರಾವಸ್ಥೆಗೆ ವೈಯಕ್ತಿಕ ಬೈಬಲ್‌ ಅಧ್ಯಯನವು ಏಕೆ ಅತ್ಯಗತ್ಯವಾಗಿದೆ?

11 ಹೌದು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸಲ್ಪಡುವ ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಸದುಪಯೋಗಿಸುತ್ತಾ ಶಾಸ್ತ್ರವಚನಗಳ ಶ್ರದ್ಧಾಪೂರ್ವಕವಾದ ವೈಯಕ್ತಿಕ ಅಧ್ಯಯನವನ್ನು ಮಾಡುವುದು ನಮ್ಮ ಆತ್ಮಿಕ ಎಚ್ಚರಾವಸ್ಥೆಗೆ ಎಂಥ ಪ್ರಚೋದಕವಾಗಿದೆ! (ಮತ್ತಾಯ 24:​45-47) ಆದರೂ, ವೈಯಕ್ತಿಕ ಅಧ್ಯಯನವು ಪ್ರಯೋಜನದಾಯಕವಾಗಿ ಇರಬೇಕಾದರೆ, ಅದು ಪ್ರಗತಿಪರವಾಗಿರಬೇಕು ಮತ್ತು ಕ್ರಮಬದ್ಧವಾಗಿರಬೇಕು. (ಇಬ್ರಿಯ 5:​14–6:3) ನಾವು ಕ್ರಮವಾಗಿ ಗಟ್ಟಿಯಾದ ಆತ್ಮಿಕ ಆಹಾರವನ್ನು ಸೇವಿಸಬೇಕು. ಈ ಕಾಲದಲ್ಲಿ ವೈಯಕ್ತಿಕ ಅಧ್ಯಯನಕ್ಕಾಗಿ ಸಮಯವನ್ನು ಕಂಡುಕೊಳ್ಳುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿರಬಹುದು. (ಎಫೆಸ 5:​15, 16) ಆದರೂ, ಅನುಕೂಲಕರವಾಗಿರಬಹುದಾದ ಸಮಯಗಳಲ್ಲಿ ಮಾತ್ರ ಬೈಬಲನ್ನು ಮತ್ತು ಶಾಸ್ತ್ರೀಯ ಪ್ರಕಾಶನಗಳನ್ನು ಓದುವುದಷ್ಟೇ ಸಾಕಾಗದು. ನಾವು ‘ಕ್ರಿಸ್ತನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರಬೇಕಾದರೆ’ ಮತ್ತು ಸದಾ ಎಚ್ಚರವಾಗಿರಬೇಕಾದರೆ, ಕ್ರಮವಾದ ವೈಯಕ್ತಿಕ ಅಧ್ಯಯನವು ಅತ್ಯಗತ್ಯವಾಗಿದೆ.​—ತೀತ 1:13.

12. ಕ್ರೈಸ್ತ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳು, ಆತ್ಮಿಕ ತೂಕಡಿಕೆಯನ್ನು ಹೊಡೆದೋಡಿಸುವಂತೆ ನಮಗೆ ಹೇಗೆ ಸಹಾಯಮಾಡುತ್ತವೆ?

12 ಕ್ರೈಸ್ತ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳು ಸಹ ಆತ್ಮಿಕ ತೂಕಡಿಕೆಯನ್ನು ಹೊಡೆದೋಡಿಸಲು ನಮಗೆ ಸಹಾಯಮಾಡುವವು. ಹೇಗೆ? ನಾವು ಪಡೆದುಕೊಳ್ಳುವ ಉಪದೇಶದ ಮೂಲಕವೇ. ಈ ರೀತಿಯ ಒಕ್ಕೂಟಗಳಲ್ಲಿ ನಮಗೆ ಯೆಹೋವನ ದಿನದ ಸಾಮೀಪ್ಯದ ಕುರಿತು ಕ್ರಮವಾಗಿ ಮರುಜ್ಞಾಪಕವು ಕೊಡಲ್ಪಡುವುದಿಲ್ಲವೋ? ಸಾಪ್ತಾಹಿಕ ಕ್ರೈಸ್ತ ಕೂಟಗಳು ಸಹ ‘ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಲು’ ಅವಕಾಶಗಳನ್ನು ಒದಗಿಸುತ್ತವೆ. ಅಂಥ ಪ್ರೇರೇಪಿಸುವಿಕೆಯು ಆತ್ಮಿಕ ಎಚ್ಚರಾವಸ್ಥೆಗೆ ತುಂಬ ಸಹಾಯಕರವಾಗಿದೆ. ಆದುದರಿಂದಲೇ, ‘ಆ ದಿನವು ಸಮೀಪಿಸುತ್ತಾ ಬರುವುದರಿಂದ’ ನಾವು ಕ್ರಮವಾಗಿ ಕೂಡಿಬರುವಂತೆ ಆಜ್ಞಾಪಿಸಲ್ಪಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.​—ಇಬ್ರಿಯ 10:​24, 25.

13. ನಾವು ಆತ್ಮಿಕವಾಗಿ ಎಚ್ಚರವಾಗಿರಲು ಕ್ರೈಸ್ತ ಶುಶ್ರೂಷೆಯು ನಮಗೆ ಹೇಗೆ ಸಹಾಯಮಾಡುತ್ತದೆ?

13 ಕ್ರೈಸ್ತ ಶುಶ್ರೂಷೆಯಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳುವುದು ಸಹ, ನಾವು ಎಚ್ಚರವಾಗಿ ಉಳಿಯುವಂತೆ ನಮಗೆ ಸಹಾಯಮಾಡುವುದು. ಕಾಲಗಳ ಸೂಚನೆಗಳನ್ನು ಮತ್ತು ಅವುಗಳ ಅರ್ಥವನ್ನು ಮನಸ್ಸಿನಲ್ಲಿ ಹಚ್ಚಹಸುರಾಗಿ ಇಟ್ಟುಕೊಳ್ಳಲಿಕ್ಕಾಗಿ, ಅವುಗಳ ಕುರಿತು ಇತರರೊಂದಿಗೆ ಮಾತಾಡುವುದಕ್ಕಿಂತಲೂ ಹೆಚ್ಚು ಉತ್ತಮವಾದ ವಿಧವು ಇನ್ನಾವುದಿದೆ? ಮತ್ತು ನಾವು ಯಾರೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತೇವೋ ಅವರು ಪ್ರಗತಿಯನ್ನು ಮಾಡಿ, ತಾವು ಕಲಿಯುತ್ತಿರುವಂಥ ವಿಷಯಗಳಿಗನುಸಾರ ಕ್ರಿಯೆಗೈಯಲು ಆರಂಭಿಸುವುದನ್ನು ನಾವು ನೋಡುವಾಗ, ನಮ್ಮ ಸ್ವಂತ ತುರ್ತುಪ್ರಜ್ಞೆಯು ಇನ್ನೂ ಅತ್ಯಧಿಕಗೊಳ್ಳುತ್ತದೆ. ‘ನೀವು ಮನಸ್ಸಿನ ನಡುವನ್ನು ಕಟ್ಟಿಕೊಂಡು, ಸ್ವಸ್ಥಚಿತ್ತರಾಗಿರಿ’ ಎಂದು ಅಪೊಸ್ತಲ ಪೇತ್ರನು ಹೇಳಿದನು. (1 ಪೇತ್ರ 1:13) “ಕರ್ತನ ಕೆಲಸದಲ್ಲಿ ಯಾವಾಗಲೂ ಬಹಳಷ್ಟನ್ನು ಮಾಡಲಿಕ್ಕಿರುವುದೇ,” ಆತ್ಮಿಕ ಜಡತೆಗೆ ಅತ್ಯುತ್ತಮ ಪರಿಹಾರವಾಗಿದೆ.​—1 ಕೊರಿಂಥ 15:​58, NW.

ಆತ್ಮಿಕವಾಗಿ ಹಾನಿಕರವಾಗಿರುವ ಜೀವನ ಶೈಲಿಗಳನ್ನು ತೊರೆಯಿರಿ

14. ಲೂಕ 21:​34-36ರಲ್ಲಿ ವರ್ಣಿಸಲ್ಪಟ್ಟಿರುವಂತೆ, ಯಾವ ಜೀವನ ಶೈಲಿಯ ವಿರುದ್ಧ ಯೇಸು ಎಚ್ಚರಿಕೆ ನೀಡಿದನು?

14 ತನ್ನ ಸಾನ್ನಿಧ್ಯದ ಸೂಚನೆಯ ಕುರಿತಾದ ಗಮನಾರ್ಹ ಪ್ರವಾದನೆಯಲ್ಲಿ ಯೇಸು ಇನ್ನೂ ಒಂದು ಎಚ್ಚರಿಕೆಯನ್ನು ಕೊಟ್ಟನು. ಅವನು ಹೇಳಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ [“ಸದಾ,” NW] ಎಚ್ಚರವಾಗಿರ್ರಿ.” (ಲೂಕ 21:34-36) ಸರ್ವಸಾಮಾನ್ಯವಾಗಿ ಜನರು ಬೆನ್ನಟ್ಟುವಂಥ ಜೀವನ ಶೈಲಿಯನ್ನು ಯೇಸು ನಿಷ್ಕೃಷ್ಟವಾಗಿ ವರ್ಣಿಸಿದನು: ಹೊಟ್ಟೆಬಾಕತನ, ಕುಡಿಕತನ ಮತ್ತು ಚಿಂತೆಗಳನ್ನು ತರುವಂಥ ರೀತಿಯ ಒಂದು ಜೀವನಮಾರ್ಗವೇ ಅದಾಗಿತ್ತು.

15. ಆಹಾರ ಮತ್ತು ಕುಡಿತಗಳಲ್ಲಿ ಅತಿಯಾಗಿ ಒಳಗೂಡುವುದರಿಂದ ನಾವು ಏಕೆ ದೂರವಿರಬೇಕು?

15 ಅತಿಭೋಜನ ಹಾಗೂ ಮಿತಿಮೀರಿ ಕುಡಿಯುವುದು ಬೈಬಲ್‌ ಮೂಲತತ್ತ್ವಗಳೊಂದಿಗೆ ಹೊಂದಿಕೆಯಲ್ಲಿರದ ಕಾರಣ ಅವುಗಳಿಂದ ದೂರವಿರಬೇಕು. “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 23:20) ಆದರೂ, ಒಬ್ಬನು ತನ್ನ ಆತ್ಮಿಕತೆಯನ್ನು ಅಪಾಯಕ್ಕೊಳಪಡಿಸಲಿಕ್ಕಾಗಿ ಅತಿಭೋಜನ ಹಾಗೂ ಅತಿಯಾದ ಕುಡಿತದ ಮಟ್ಟವನ್ನು ತಲಪಬೇಕೆಂದಿಲ್ಲ. ಹೀಗೆ ಮಾಡುವುದಕ್ಕಿಂತಲೂ ಮುಂಚೆಯೇ ಊಟ ಮತ್ತು ಕುಡಿತಗಳು ಒಬ್ಬನನ್ನು ತೂಕಡಿಸುವವನನ್ನಾಗಿಯೂ ಸೋಮಾರಿಯನ್ನಾಗಿಯೂ ಮಾಡಬಲ್ಲವು. ಆದುದರಿಂದಲೇ ಒಂದು ಬೈಬಲ್‌ ಜ್ಞಾನೋಕ್ತಿಯು ಹೀಗೆ ಹೇಳುತ್ತದೆ: “ಸೋಮಾರಿಯ ಆಶೆಯು ವ್ಯರ್ಥ. ಅವನೆಂದಿಗೂ ಅವುಗಳನ್ನು ಪಡೆಯಲಾರ.” (ಜ್ಞಾನೋಕ್ತಿ 13:​4, ಪರಿಶುದ್ಧ ಬೈಬಲ್‌ *) ಅಂಥ ಒಬ್ಬ ವ್ಯಕ್ತಿಯು ದೇವರ ಚಿತ್ತವನ್ನು ಮಾಡಲು ಬಯಸಬಹುದಾದರೂ, ಅವನ ಅಲಕ್ಷ್ಯ ಮನೋಭಾವದಿಂದ ಅವನ ಆಶೆಯು ಎಂದಿಗೂ ಪೂರೈಸಲ್ಪಡದೇ ಉಳಿಯುವುದು.

16. ನಮ್ಮ ಕುಟುಂಬದ ಕುರಿತಾದ ಚಿಂತೆಗಳಿಂದ ಕುಗ್ಗಿಹೋಗುವುದರಿಂದ ನಾವು ಹೇಗೆ ದೂರವಿರಸಾಧ್ಯವಿದೆ?

16 ಯೇಸು ಯಾವುದರ ಕುರಿತು ಎಚ್ಚರಿಕೆ ನೀಡಿದನೋ ಆ ಪ್ರಪಂಚದ ಚಿಂತೆಗಳು ಯಾವುವು? ಇವುಗಳಲ್ಲಿ ವೈಯಕ್ತಿಕ ವ್ಯಾಕುಲತೆಗಳು, ಕುಟುಂಬದ ಪೋಷಣೆಗಾಗಿ ಒದಗಿಸುವುದು, ಇನ್ನು ಮುಂತಾದವುಗಳು ಸೇರಿವೆ. ಇವು ನಮ್ಮನ್ನು ಕುಗ್ಗಿಸಿಬಿಡುವಂತೆ ಅನುಮತಿಸುವುದು ಎಷ್ಟು ಅವಿವೇಕಯುತವಾಗಿರುವುದು! “ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು?” ಎಂದು ಯೇಸು ಕೇಳಿದನು. ಅವನು ತನ್ನ ಕೇಳುಗರಿಗೆ ಬುದ್ಧಿಹೇಳಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.” ನಮ್ಮ ಜೀವಿತಗಳಲ್ಲಿ ರಾಜ್ಯಾಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುವುದು ಮತ್ತು ಯೆಹೋವನು ನಮ್ಮ ಆವಶ್ಯಕತೆಗಳನ್ನು ಪೂರೈಸುವನು ಎಂಬ ಭರವಸೆಯನ್ನು ಇಟ್ಟುಕೊಂಡಿರುವುದು, ಚಿಂತೆಗಳನ್ನು ದೂರವಿರಿಸಿ ಸದಾ ಎಚ್ಚರವಾಗಿರಲು ನಮಗೆ ಸಹಾಯಮಾಡುವುದು.​—ಮತ್ತಾಯ 6:​25-34.

17. ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಹೇಗೆ ಚಿಂತೆಯನ್ನು ಉಂಟುಮಾಡಬಲ್ಲವು?

17 ಪ್ರಾಪಂಚಿಕ ಬೆನ್ನಟ್ಟುವಿಕೆಗಳು ಸಹ ಚಿಂತೆಯನ್ನು ಉಂಟುಮಾಡಬಹುದು. ಉದಾಹರಣೆಗೆ, ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚಿನ ಸುಖಭೋಗದಲ್ಲಿ ಜೀವಿಸುವ ಮೂಲಕ ಕೆಲವರು ತಮ್ಮ ಜೀವಿತಗಳನ್ನು ಜಟಿಲಗೊಳಿಸಿಕೊಳ್ಳುತ್ತಾರೆ. ಇತರರು, ಸ್ವಲ್ಪ ಕಾಲಾವಧಿಯಲ್ಲೇ ಹಣಗಳಿಸುವ ಸ್ಕೀಮ್‌ಗಳು ಮತ್ತು ಹಣಕಾಸಿನ ಅಪಾಯಕರ ಬಂಡವಾಳ ಹೂಡುವಿಕೆಗಳ ಉರ್ಲಿಗೆ ಸಿಕ್ಕಿಬೀಳುತ್ತಾರೆ. ಇನ್ನಿತರರಿಗಾದರೋ, ಹಣಕಾಸಿನ ಯಶಸ್ಸನ್ನು ಪಡೆಯುವ ಒಂದು ಮಾಧ್ಯಮದೋಪಾದಿ ಐಹಿಕ ಶಿಕ್ಷಣವು ಒಂದು ಪಾಶವಾಗಿ ಪರಿಣಮಿಸುತ್ತದೆ. ಒಂದು ಉದ್ಯೋಗವನ್ನು ಪಡೆದುಕೊಳ್ಳಲು ನಿರ್ದಿಷ್ಟ ಮಟ್ಟದ ಶಿಕ್ಷಣವು ಪ್ರಯೋಜನಕರವಾಗಿರಬಹುದು ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿಯೇ. ಆದರೆ ವಾಸ್ತವದಲ್ಲಿ, ಉನ್ನತ ವ್ಯಾಸಂಗದಂಥ ಸಮಯವನ್ನು ಕಬಳಿಸುವ ಬೆನ್ನಟ್ಟುವಿಕೆಯಲ್ಲಿ ತೊಡಗಿ ಕೆಲವರು ಸ್ವತಃ ತಮಗೆ ಆತ್ಮಿಕವಾಗಿ ಹಾನಿಯನ್ನು ತಂದುಕೊಂಡಿದ್ದಾರೆ. ಯೆಹೋವನ ದಿನವು ಸಮೀಪಿಸುತ್ತಿರುವಾಗ, ಈ ರೀತಿಯ ಸನ್ನಿವೇಶದಲ್ಲಿರುವುದು ಎಷ್ಟು ಅಪಾಯಕರವಾದದ್ದಾಗಿದೆ! ಬೈಬಲ್‌ ಎಚ್ಚರಿಸುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.”​—1 ತಿಮೊಥೆಯ 6:9.

18. ಪ್ರಾಪಂಚಿಕ ರೀತಿಯ ಜೀವನ ಶೈಲಿಯ ಕಡೆಗೆ ಸೆಳೆಯಲ್ಪಡದಿರಲಿಕ್ಕಾಗಿ ನಾವು ಯಾವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು?

18 ಪ್ರಾಪಂಚಿಕ ರೀತಿಯ ಜೀವನ ಶೈಲಿಯ ಕಡೆಗೆ ಸೆಳೆಯಲ್ಪಡದಿರಲಿಕ್ಕಾಗಿ ಅತ್ಯಗತ್ಯವಾಗಿರುವ ಒಂದು ಅಂಶವೇನೆಂದರೆ, ನಿರ್ಣಯಗಳನ್ನು ಮಾಡುವಾಗ ಒಳ್ಳೇದು ಮತ್ತು ಕೆಟ್ಟದ್ದರ ನಡುವಣ ಭೇದವನ್ನು ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದೇ ಆಗಿದೆ. ಈ ಸಾಮರ್ಥ್ಯವು, ‘ಪ್ರಾಯಸ್ಥರಿಗೋಸ್ಕರವಾಗಿರುವ ಗಟ್ಟಿಯಾದ ಆತ್ಮಿಕ ಆಹಾರದಲ್ಲಿ’ ಕ್ರಮವಾಗಿ ಪಾಲ್ಗೊಳ್ಳುವ ಮೂಲಕ ಮತ್ತು ‘ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಳ್ಳುವ’ ಮೂಲಕ ಬೆಳೆಸಿಕೊಳ್ಳಲ್ಪಡುತ್ತದೆ. (ಇಬ್ರಿಯ 5:​13, 14) ಯಾವುದಕ್ಕೆ ಆದ್ಯತೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸುತ್ತಿರುವಾಗ, ‘ಉತ್ತಮ ಕಾರ್ಯಗಳು ಯಾವುವು ಎಂಬುದನ್ನು’ ಖಚಿತಪಡಿಸಿಕೊಳ್ಳುವುದು ಸಹ ತಪ್ಪು ಆಯ್ಕೆಗಳನ್ನು ಮಾಡುವುದರಿಂದ ನಮ್ಮನ್ನು ಸಂರಕ್ಷಿಸುವುದು.​—ಫಿಲಿಪ್ಪಿ 1:10.

19. ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ನಮ್ಮ ಬಳಿ ಹೆಚ್ಚು ಸಮಯವಿಲ್ಲ ಎಂಬುದು ನಮ್ಮ ಅರಿವಿಗೆ ಬರುವುದಾದರೆ ನಾವೇನು ಮಾಡಬೇಕು?

19 ಪ್ರಾಪಂಚಿಕ ರೀತಿಯ ಜೀವನ ಶೈಲಿಯು ನಮ್ಮನ್ನು ಕುರುಡುಗೊಳಿಸಬಲ್ಲದು ಮತ್ತು ಆತ್ಮಿಕ ಬೆನ್ನಟ್ಟುವಿಕೆಗಾಗಿ ಸ್ವಲ್ಪವೇ ಸಮಯವನ್ನು ಕೊಡುವಂತೆ ಅಥವಾ ಸಮಯವನ್ನೇ ಕೊಡದಿರುವಂತೆ ಮಾಡಬಹುದು. ಈ ವಿಷಯದಲ್ಲಿ ನಾವು ನಮ್ಮನ್ನು ಹೇಗೆ ಪರೀಕ್ಷಿಸಿಕೊಳ್ಳಸಾಧ್ಯವಿದೆ ಮತ್ತು ಅಂಥ ಒಂದು ಜೀವನ ಶೈಲಿಯ ಪಾಶಕ್ಕೆ ಸಿಕ್ಕಿಕೊಳ್ಳುವುದರಿಂದ ಹೇಗೆ ದೂರವಿರಸಾಧ್ಯವಿದೆ? ಹೇಗೆ ಮತ್ತು ಎಷ್ಟರ ಮಟ್ಟಿಗೆ ನಾವು ನಮ್ಮ ಜೀವನವನ್ನು ಸರಳೀಕರಿಸಿಕೊಳ್ಳಸಾಧ್ಯವಿದೆ ಎಂಬುದನ್ನು ನಾವು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವ ಅಗತ್ಯವಿದೆ. ಪುರಾತನ ಇಸ್ರಾಯೇಲ್‌ನ ಅರಸನಾಗಿದ್ದ ಸೊಲೊಮೋನನು ಹೇಳಿದ್ದು: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ಅನಗತ್ಯವಾದ ಭೌತಿಕ ಸೊತ್ತುಗಳನ್ನು ನೋಡಿಕೊಳ್ಳುವುದು ನಮ್ಮ ಅಧಿಕಾಂಶ ಸಮಯ ಮತ್ತು ಶಕ್ತಿಯನ್ನು ಪೂರ್ಣವಾಗಿ ಕಬಳಿಸಿಬಿಡುತ್ತದೋ? ನಮ್ಮ ಬಳಿ ಸೊತ್ತುಗಳು ಹೆಚ್ಚಿದಂತೆ, ಅವುಗಳನ್ನು ನೋಡಿಕೊಳ್ಳುವ, ವಿಮೆಮಾಡಿಸುವ, ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯೂ ಹೆಚ್ಚುತ್ತದೆ. ನಮ್ಮ ಬಳಿಯಿರುವ ಕೆಲವೊಂದು ಸೊತ್ತುಗಳನ್ನು ಇಲ್ಲವಾಗಿಸುವ ಮೂಲಕ ನಮ್ಮ ಜೀವನವನ್ನು ಸರಳೀಕರಿಸುವುದು ನಮಗೆ ಪ್ರಯೋಜನದಾಯಕವಾಗಿ ಇರಸಾಧ್ಯವೋ?

ಎಲ್ಲಾ ರೀತಿಯಲ್ಲೂ ನೀವು ಸಿದ್ಧರಾಗಿದ್ದೀರೆಂಬುದನ್ನು ತೋರಿಸಿಕೊಡಿರಿ

20, 21. (ಎ) ಯೆಹೋವನ ದಿನದ ವಿಷಯದಲ್ಲಿ ಅಪೊಸ್ತಲ ಪೇತ್ರನು ಯಾವ ಆಶ್ವಾಸನೆಯನ್ನು ಕೊಡುತ್ತಾನೆ? (ಬಿ) ಯೆಹೋವನ ದಿನಕ್ಕಾಗಿ ನಾವು ಸಿದ್ಧರಾಗಿದ್ದೇವೆಂಬುದನ್ನು ತೋರಿಸಿಕೊಡುತ್ತಿರುವಾಗ, ನಾವು ಯಾವ ಕ್ರಿಯೆಗಳು ಮತ್ತು ಕಾರ್ಯಗಳನ್ನು ಮಾಡುತ್ತಾ ಮುಂದುವರಿಯಬೇಕು?

20 ನೋಹನ ದಿನದ ಲೋಕಕ್ಕೆ ಕೊಡಲ್ಪಟ್ಟಿದ್ದ ಕಾಲಾವಧಿಯು ಮುಗಿದುಹೋಯಿತು, ಮತ್ತು ಸದ್ಯದ ವಿಷಯಗಳ ವ್ಯವಸ್ಥೆಗಾಗಿರುವ ಕಾಲಾವಧಿಯೂ ಮುಗಿದುಹೋಗಲಿದೆ. ಅಪೊಸ್ತಲ ಪೇತ್ರನು ನಮಗೆ ಹೀಗೆ ಆಶ್ವಾಸನೆ ನೀಡುತ್ತಾನೆ: “ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಲಯವಾಗಿ ಹೋಗುವವು, ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು.” ಸಾಂಕೇತಿಕ ಆಕಾಶಮಂಡಲದಂತಿರುವ ದುಷ್ಟ ಸರಕಾರಗಳಾಗಲಿ ಅಥವಾ ಸಾಂಕೇತಿಕ ಭೂಮಿಯಂತಿರುವ ದೇವರಿಂದ ವಿಮುಖಗೊಂಡಿರುವ ಮಾನವಕುಲವಾಗಲಿ ದೇವರ ಕೋಪಾಗ್ನಿಯ ಜ್ವಾಲೆಯಿಂದ ಖಂಡಿತವಾಗಿಯೂ ಪಾರಾಗಿ ಉಳಿಯುವುದಿಲ್ಲ. ಆ ದಿನಕ್ಕಾಗಿ ನಾವು ಸಿದ್ಧರಾಗಿದ್ದೇವೆಂಬುದನ್ನು ಹೇಗೆ ತೋರಿಸಿಕೊಡಸಾಧ್ಯವಿದೆ ಎಂಬುದನ್ನು ಸೂಚಿಸುತ್ತಾ ಪೇತ್ರನು ಉದ್ಗರಿಸಿದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ [“ನಡವಳಿಕೆಯ ಪವಿತ್ರ ಕ್ರಿಯೆಗಳೂ ಮತ್ತು ದೈವಿಕ ಭಕ್ತಿಯ ಕಾರ್ಯಗಳೂ,” NW] ಉಳ್ಳವರಾಗಿರಬೇಕಲ್ಲಾ.”​—2 ಪೇತ್ರ 3:10-12.

21 ದೈವಿಕ ಭಕ್ತಿಯ ಕ್ರಿಯೆಗಳು ಮತ್ತು ಕಾರ್ಯಗಳಲ್ಲಿ, ನಾವು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ಪಾಲ್ಗೊಳ್ಳುವುದು ಸಹ ಒಳಗೂಡಿದೆ. ಯೆಹೋವನ ಮಹಾದಿನಕ್ಕಾಗಿ ನಾವು ತಾಳ್ಮೆಯಿಂದ ಕಾಯುತ್ತಿರುವಾಗ, ದೇವರಿಗೆ ಹೃತ್ಪೂರ್ವಕವಾದ ಭಕ್ತಿಯನ್ನು ಸಲ್ಲಿಸಲಿಕ್ಕಾಗಿ ನಾವು ಇವುಗಳನ್ನು ಮಾಡೋಣ. ಆದಕಾರಣ ‘[ದೇವರ] ಎದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ನಮ್ಮಿಂದಾದಷ್ಟು ಮಟ್ಟಿಗೆ ಪ್ರಯಾಸಪಡೋಣ.’​—2 ಪೇತ್ರ 3:14.

[ಪಾದಟಿಪ್ಪಣಿ]

^ ಪ್ಯಾರ. 15 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಯೆಹೋವನ ದಿನಕ್ಕಾಗಿ ಸಿದ್ಧರಾಗಿದ್ದೇವೆಂಬುದನ್ನು ನಾವು ಏಕೆ ತೋರಿಸಿಕೊಡಬೇಕಾಗಿದೆ?

• ಜೀವಿತದ ಸಾಮಾನ್ಯ ಬೆನ್ನಟ್ಟುವಿಕೆಗಳೇ ನಮ್ಮ ಮುಖ್ಯ ಚಿಂತೆಯಾಗಿ ಪರಿಣಮಿಸಿರುವಲ್ಲಿ ನಾವೇನು ಮಾಡಬೇಕಾಗಿದೆ?

• ಆತ್ಮಿಕ ತೂಕಡಿಕೆಯನ್ನು ಪ್ರತಿರೋಧಿಸಲು ನಮಗೆ ಯಾವುದು ಸಹಾಯಮಾಡುವುದು?

• ಯಾವ ರೀತಿಯ ಹಾನಿಕರವಾದ ಜೀವನ ಶೈಲಿಯಿಂದ ನಾವು ದೂರವಿರಬೇಕು, ಮತ್ತು ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 20, 21ರಲ್ಲಿರುವ ಚಿತ್ರಗಳು]

ನೋಹನ ದಿನದಲ್ಲಿದ್ದ ಜನರು ಹತ್ತಿರವಾಗುತ್ತಿದ್ದ ನ್ಯಾಯತೀರ್ಪಿನ ಕುರಿತು ಏನೂ ತಿಳಿಯದೇ ಇದ್ದರು​—ನಿಮಗೆ ತಿಳಿದಿದೆಯೋ?

[ಪುಟ 23ರಲ್ಲಿರುವ ಚಿತ್ರ]

ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಹೆಚ್ಚು ಸಮಯವನ್ನು ಮಾಡಿಕೊಳ್ಳಲಿಕ್ಕಾಗಿ ನೀವು ನಿಮ್ಮ ಜೀವನವನ್ನು ಸರಳೀಕರಿಸಬಲ್ಲಿರೋ?