ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಕುಟುಂಬದಲ್ಲಿ ಯಾರೆಲ್ಲಾ ಇದ್ದರು?

ಯೇಸುವಿನ ಕುಟುಂಬದಲ್ಲಿ ಯಾರೆಲ್ಲಾ ಇದ್ದರು?

ಯೇಸುವಿನ ಕುಟುಂಬದಲ್ಲಿ ಯಾರೆಲ್ಲಾ ಇದ್ದರು?

ಲೋಕದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿನಲ್ಲಿ, ತನ್ನ ತಾಯಿಯಾದ ಮರಿಯಳು ಹಾಗೂ ಸಾಕುತಂದೆ ಯೋಸೇಫನ ಕೋಮಲ ಆರೈಕೆಯಲ್ಲಿರುವ ಶಿಶು ಯೇಸುವಿನ ದೃಶ್ಯಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಯೇಸು ಕ್ರಿಸ್ತನ ಜನನದ ಇಂಥ ದೃಶ್ಯಗಳು ಕ್ರೈಸ್ತರಲ್ಲದ ಜನರ ಮನಸ್ಸುಗಳನ್ನೂ ಆಕರ್ಷಿಸಬಹುದು. ಈ ದೃಶ್ಯಗಳಲ್ಲಿ ಯೇಸುವೇ ಕೇಂದ್ರಬಿಂದುವಾಗಿರುವುದರಿಂದ, ಯೇಸುವಿನ ಮಾನವ ಕುಟುಂಬದ ಕುರಿತು ಶಾಸ್ತ್ರವಚನಗಳು ನಮಗೆ ಏನು ಹೇಳುತ್ತವೆ?

ಯೇಸುವಿಗೆ ತುಂಬ ಆಸಕ್ತಿಕರವಾದ ಒಂದು ಕೌಟುಂಬಿಕ ಹಿನ್ನೆಲೆಯಿತ್ತು. ಅವನು ಮರಿಯಳೆಂಬ ಕನ್ಯೆಗೆ ಜನಿಸಿದವನಾಗಿದ್ದು, ಈ ಮೂಲಕ ಮಾನವ ಕುಟುಂಬದ ಒಬ್ಬ ಸದಸ್ಯನಾಗಿ ಪರಿಣಮಿಸಿದನು. ಬೈಬಲಿಗನುಸಾರ, ಪವಿತ್ರಾತ್ಮದ ಮೂಲಕ ಅವನ ಜೀವವು ಸ್ವರ್ಗದಿಂದ ಮರಿಯಳ ಗರ್ಭಕ್ಕೆ ವರ್ಗಾಯಿಸಲ್ಪಟ್ಟಿತು. (ಲೂಕ 1:​30-35) ಮರಿಯಳ ಅದ್ಭುತಕರ ಗರ್ಭಧಾರಣೆಯು ಪ್ರಕಟಿಸಲ್ಪಡುವುದಕ್ಕೆ ಮುಂಚೆಯೇ ಅವಳಿಗೆ ಯೋಸೇಫನೆಂಬ ಪುರುಷನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹೀಗೆ ಯೋಸೇಫನು ಯೇಸುವಿನ ಸಾಕುತಂದೆಯಾಗಲಿದ್ದನು.

ಯೇಸುವಿನ ಜನನದ ಬಳಿಕ, ಯೋಸೇಫನಿಗೂ ಮರಿಯಳಿಗೂ ಬೇರೆ ಮಕ್ಕಳು ಅಂದರೆ ಯೇಸುವಿನ ಮಲತಮ್ಮಂದಿರು ಹಾಗೂ ತಂಗಿಯರು ಹುಟ್ಟಿದರು. ಇದು ನಜರೇತಿನ ನಿವಾಸಿಗಳು ಸಮಯಾನಂತರ ಯೇಸುವಿನ ಕುರಿತು ನುಡಿದ ಮಾತುಗಳಿಂದ ಸುವ್ಯಕ್ತವಾಗುತ್ತದೆ: “ಇವನು ಆ ಬಡಗಿಯ ಮಗನಲ್ಲವೇ. ಇವನ ತಾಯಿ ಮರಿಯಳೆಂಬವಳಲ್ಲವೇ. ಯಾಕೋಬ ಯೋಸೇಫ ಸೀಮೋನ ಯೂದ ಇವರು ಇವನ ತಮ್ಮಂದಿರಲ್ಲವೇ. ಇವನ ತಂಗಿಯರೆಲ್ಲರು ನಮ್ಮಲ್ಲಿ ಇದ್ದಾರಲ್ಲವೇ.” (ಮತ್ತಾಯ 1:25; 13:55, 56; ಮಾರ್ಕ 6:3) ಆದುದರಿಂದ, ಯೇಸುವಿನ ಕುಟುಂಬದಲ್ಲಿ ಅವನ ಹೆತ್ತವರು, ನಾಲ್ಕು ಮಂದಿ ತಮ್ಮಂದಿರು ಮತ್ತು ಕಡಿಮೆಪಕ್ಷ ಇಬ್ಬರು ತಂಗಿಯರು ಇದ್ದರು ಎಂಬ ತೀರ್ಮಾನಕ್ಕೆ ನಾವು ಬರಸಾಧ್ಯವಿದೆ.

ಆದರೂ, ಯೇಸುವಿನ ತಮ್ಮಂದಿರು ಮತ್ತು ತಂಗಿಯರು ಯೋಸೇಫ ಹಾಗೂ ಮರಿಯರ ಮಕ್ಕಳಾಗಿದ್ದರು ಎಂಬುದನ್ನು ಕೆಲವರು ನಂಬುವುದಿಲ್ಲ. ಏಕೆ? ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೇಳುವುದು: “ಬಹಳ ಹಿಂದಿನ ಕಾಲದಿಂದಲೂ, ಮರಿಯಳು ಸದಾ ಕನ್ಯೆಯಾಗಿದ್ದಳು ಎಂಬ ಬೋಧನೆಯನ್ನೇ ಚರ್ಚು ಕಲಿಸಿದೆ. ಇದನ್ನು ಪರಿಗಣಿಸುವಾಗ, ಮರಿಯಳಿಗೆ ಬೇರೆ ಯಾವ ಮಕ್ಕಳೂ ಇರಲಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇರಸಾಧ್ಯವಿಲ್ಲ.” ಅದೇ ಆಧಾರಗ್ರಂಥವು ತಿಳಿಸುವುದೇನೆಂದರೆ, “ಸಹೋದರ” ಮತ್ತು “ಸಹೋದರಿ” ಎಂಬ ಪದಗಳು “ಒಂದು ಧಾರ್ಮಿಕ ಅಥವಾ ಇನ್ನಿತರ ಸಾಮಾನ್ಯ ಬಂಧದಲ್ಲಿ ಐಕ್ಯಗೊಂಡಿರುವ ವ್ಯಕ್ತಿ ಅಥವಾ ವ್ಯಕ್ತಿಗಳನ್ನು” ಇಲ್ಲವೆ ಸಂಬಂಧಿಕರನ್ನು, ಪ್ರಾಯಶಃ ರಕ್ತಸಂಬಂಧಿಗಳನ್ನು ಸೂಚಿಸಬಲ್ಲದು.

ಇದು ನಿಜವಾಗಿಯೂ ಸತ್ಯವಾಗಿದೆಯೋ? ಕೆಲವು ಕ್ಯಾಥೊಲಿಕ್‌ ದೇವತಾಶಾಸ್ತ್ರಜ್ಞರು ಸಹ ಸಾಂಪ್ರದಾಯಿಕ ಸಿದ್ಧಾಂತವನ್ನು ಅಸಮ್ಮತಿಸುತ್ತಾ, ಯೇಸುವಿಗೆ ಅವನ ಸ್ವಂತ ತಮ್ಮಂದಿರು ಮತ್ತು ತಂಗಿಯರು ಇದ್ದರು ಎಂಬ ದೃಷ್ಟಿಕೋನವನ್ನು ಬೆಂಬಲಿಸುತ್ತಾರೆ. ಕ್ಯಾಥೊಲಿಕ್‌ ಬೈಬಲ್‌ ಅಸೋಸಿಯೇಷನ್‌ ಆಫ್‌ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದ ಜಾನ್‌ ಪಿ. ಮೈಅರ್‌ ಅವರು ಬರೆದುದು: “[ಹೊಸ] [ಒಡಂಬಡಿಕೆ]ಯಲ್ಲಿ [“ಸಹೋದರ” ಎಂಬುದಕ್ಕಾಗಿರುವ ಗ್ರೀಕ್‌ ಪದವು], ಕೇವಲ ಸಾಂಕೇತಿಕವಾಗಿ ಅಥವಾ ರೂಪಕಾರ್ಥದಲ್ಲಿ ಅಲ್ಲ ಬದಲಾಗಿ ಒಂದು ರೀತಿಯ ಶಾರೀರಿಕ ಅಥವಾ ಕಾನೂನುಬದ್ಧ ಸಂಬಂಧವನ್ನು ಸೂಚಿಸಲಿಕ್ಕಾಗಿ ಉಪಯೋಗಿಸಲ್ಪಡುವಾಗ, ಇದು ಸ್ವಂತ ಅಥವಾ ಮಲಸಹೋದರನನ್ನು ಅರ್ಥೈಸುತ್ತದೇ ಹೊರತು ಬೇರೆ ಯಾವುದನ್ನೂ ಅಲ್ಲ.” * ಹೌದು, ಯೇಸುವಿಗೆ ತಮ್ಮಂದಿರು ಮತ್ತು ತಂಗಿಯರು ಇದ್ದರು ಹಾಗೂ ಇವರು ಯೋಸೇಫ ಮರಿಯರಿಗೆ ಹುಟ್ಟಿದವರಾಗಿದ್ದರು ಎಂದು ಶಾಸ್ತ್ರವಚನಗಳು ಸೂಚಿಸುತ್ತವೆ.

ಸುವಾರ್ತಾ ಪುಸ್ತಕಗಳು ಯೇಸುವಿನ ಇತರ ಸಂಬಂಧಿಕರ ಕುರಿತು ತಿಳಿಸುತ್ತವಾದರೂ, ಈಗ ನಾವು ಯೇಸುವಿನ ಒಡಹುಟ್ಟಿದ ಕುಟುಂಬದ ಮೇಲೆ ಗಮನವನ್ನು ಕೇಂದ್ರೀಕರಿಸೋಣ ಮತ್ತು ಅವರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ ಎಂಬುದನ್ನು ಪರಿಗಣಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 6 “ವಿಶ್ವಕ್ರೈಸ್ತ ನೋಟದಲ್ಲಿ ಯೇಸುವಿನ ತಮ್ಮಂದಿರು ಮತ್ತು ತಂಗಿಯರು,” ಜಾನ್‌ ಪಿ. ಮೈಅರ್‌ ಅವರಿಂದ, ದ ಕ್ಯಾಥೊಲಿಕ್‌ ಬಿಬ್ಲಿಕಲ್‌ ಕ್ವಾರ್ಟರ್ಲಿ, ಜನವರಿ 1992, ಪುಟ 21.