ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ತನ್ನ ಮಾದರಿ ಪ್ರಾರ್ಥನೆಯಲ್ಲಿ ಯೇಸು, ಪರಲೋಕದಿಂದ ದುಷ್ಟ ದೇವದೂತರು ಭೂಮಿಗೆ ದೊಬ್ಬಲ್ಪಟ್ಟಿಲ್ಲವಾದರೂ ದೇವರ ಚಿತ್ತವು ಅಲ್ಲಿ ನೆರವೇರುತ್ತಿತ್ತು ಎಂಬುದನ್ನು ಸೂಚಿಸಿದನೋ?

ಮತ್ತಾಯ 6:10ರಲ್ಲಿ ದಾಖಲಿಸಲ್ಪಟ್ಟಿರುವಂತೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ಹೇಳಿದನು. ಅನೇಕ ಆಧುನಿಕ ಭಾಷಾಂತರಗಳಿಂದ ತೋರಿಸಲ್ಪಟ್ಟಿರುವಂತೆ, ಮೂಲ ಗ್ರಂಥಪಾಠವನ್ನು ಎರಡು ವಿಧಗಳಲ್ಲಿ ಅರ್ಥಮಾಡಿಕೊಳ್ಳಸಾಧ್ಯವಿದೆ. ಮೊದಲನೆಯದಾಗಿ, ಆಗಲೇ ದೇವರ ಚಿತ್ತವು ಪರಲೋಕದಲ್ಲಿ ಹೇಗೆ ನೆರವೇರುತ್ತಿತ್ತೋ ಹಾಗೆಯೇ ಭೂಲೋಕದಲ್ಲೂ ನೆರವೇರುವುದಕ್ಕಾಗಿರುವ ಒಂದು ವಿನಂತಿಯೋಪಾದಿ ಅದನ್ನು ಪರಿಗಣಿಸಬಹುದು. ಅಥವಾ ಎರಡನೆಯದಾಗಿ, ಅದು ಪರಲೋಕದಲ್ಲೂ ಭೂಲೋಕದಲ್ಲೂ ಪೂರ್ಣವಾಗಿ ನೆರವೇರಲಿ ಎಂಬ ಬೇಡಿಕೆಯಾಗಿಯೂ ಪರಿಗಣಿಸಬಹುದು. * ಇದಕ್ಕೆ ಮುಂಚೆ ಯೇಸು ನುಡಿದ “ನಿನ್ನ ರಾಜ್ಯವು ಬರಲಿ” ಎಂಬ ಮಾತುಗಳ ಹಿಂದಿರುವ ಅರ್ಥವು, ಎರಡನೆಯ ದೃಷ್ಟಿಕೋನವು ಶಾಸ್ತ್ರವಚನಗಳೊಂದಿಗೆ ಹೆಚ್ಚು ಹೊಂದಿಕೆಯಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಮತ್ತು ಅದು ಯೇಸು ಭೂಮಿಯಲ್ಲಿದ್ದಾಗ ಹಾಗೂ ತದನಂತರ ದೀರ್ಘ ಕಾಲಾವಧಿಯ ವರೆಗಿದ್ದ ಸನ್ನಿವೇಶವನ್ನು ಪ್ರತಿಬಿಂಬಿಸುತ್ತದೆ. ಹೇಗೆ?

ಪರಲೋಕದಲ್ಲಿ ದೇವರ ರಾಜ್ಯವು ಸ್ಥಾಪನೆಯಾದದ್ದರ ಎರಡು ವಿಶಿಷ್ಟ ಫಲಿತಾಂಶಗಳ ಕಡೆಗೆ ಪ್ರಕಟನೆ ಪುಸ್ತಕವು ಕೈತೋರಿಸುತ್ತದೆ. ಮೊದಲನೆಯ ಫಲಿತಾಂಶವು ಪರಲೋಕದ ಮೇಲೆ ಹಾಗೂ ಎರಡನೆಯದ್ದು ಭೂಲೋಕದ ಮೇಲೆ ಪರಿಣಾಮ ಬೀರುತ್ತದೆ. ಪ್ರಕಟನೆ 12:​7-9, 12 ಹೇಳುವುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ ಎಂಬದಾಗಿ ಹೇಳಿತು.”

ಇಸವಿ 1914ರ ನಂತರ ಸೈತಾನನೂ ಅವನ ದೆವ್ವಗಳೂ ಪರಲೋಕದಿಂದ ದೊಬ್ಬಲ್ಪಟ್ಟ ಬಳಿಕ, ಆತ್ಮಜೀವಿಗಳಲ್ಲಿದ್ದ ಎಲ್ಲಾ ದಂಗೆಕೋರರು ಸಂಪೂರ್ಣವಾಗಿ ತೆಗೆದುಹಾಕಲ್ಪಟ್ಟರು; ಇದು ಯೆಹೋವನ ಆತ್ಮಜೀವಿಗಳ ಸೃಷ್ಟಿಯಲ್ಲೇ ಬಹುತೇಕ ಮಂದಿಯಿಂದ ಪ್ರತಿನಿಧಿಸಲ್ಪಟ್ಟಿದ್ದ ನಿಷ್ಠಾವಂತ ದೇವದೂತ ಪುತ್ರರಿಗೆ ಮಹದಾನಂದವನ್ನು ತಂದಿತು. (ಯೋಬ 1:6-12; 2:1-7; ಪ್ರಕಟನೆ 12:10) ಹೀಗೆ, ಪರಲೋಕದ ಸಂಬಂಧದಲ್ಲಿ ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿದ್ದ ವಿನಂತಿಯು ಪೂರೈಸಲ್ಪಟ್ಟಿತು. ಆ ಸ್ವರ್ಗೀಯ ಸಾಮ್ರಾಜ್ಯದಲ್ಲಿ ಉಳಿದವರೆಲ್ಲರೂ ಯೆಹೋವನಿಗೆ ನಿಷ್ಠರಾಗಿದ್ದರು ಮತ್ತು ಆತನ ಪರಮಾಧಿಕಾರಕ್ಕೆ ಪೂರ್ಣವಾಗಿ ಅಧೀನರಾಗಿದ್ದರು.

ಅದಕ್ಕೂ ಮುಂಚೆ ದುಷ್ಟ ದೇವದೂತರು ಪರಲೋಕದಲ್ಲಿ ಪ್ರವೇಶವನ್ನು ಪಡೆದಿದ್ದಾಗಲೂ, ಅವರು ದೇವರ ಕುಟುಂಬದಿಂದ ಬಹಿಷ್ಕರಿಸಲ್ಪಟ್ಟಿದ್ದರು ಮತ್ತು ನಿಶ್ಚಿತ ನಿರ್ಬಂಧಗಳ ಕೆಳಗೆ ಇಡಲ್ಪಟ್ಟಿದ್ದರು ಎಂಬುದನ್ನು ಒತ್ತಿಹೇಳಲೇಬೇಕು. ಉದಾಹರಣೆಗೆ, ಸಾ.ಶ. ಮೊದಲನೆಯ ಶತಮಾನದಲ್ಲಿಯೇ ‘ನಿತ್ಯವಾದ ಬೇಡಿಗಳು ಹಾಕಲ್ಪಟ್ಟು, ಮಹಾ ದಿನದಲ್ಲಿ ಆಗುವ ದಂಡನೆಯ ತೀರ್ಪಿಗಾಗಿ ಅವರನ್ನು [ಆತ್ಮಿಕ] ಕತ್ತಲೆಯೊಳಗೆ ಇಡಲಾಗಿದೆ’ ಎಂದು ಯೂದ 6ನೇ ವಚನವು ತಿಳಿಯಪಡಿಸುತ್ತದೆ. ತದ್ರೀತಿಯಲ್ಲಿ 2 ಪೇತ್ರ 2:4 ಹೇಳುವುದು: “ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ [ಸಂಪೂರ್ಣ ಹೀನಸ್ಥಿತಿಗೆ] ದೊಬ್ಬಿ ನ್ಯಾಯತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರಬೇಕೆಂದು [ಆತ್ಮಿಕ] ಕತ್ತಲೇ ಗುಂಡಿಗಳಿಗೆ ಒಪ್ಪಿಸಿದನು.” *

ಪರಲೋಕದಲ್ಲಿದ್ದಾಗಲೇ ಬಹಿಷ್ಕೃತ ಸ್ಥಿತಿಯಲ್ಲಿದ್ದು ಗಮನಾರ್ಹ ರೀತಿಯಲ್ಲಿ ಭಿನ್ನರಾಗಿದ್ದ ಈ ದುಷ್ಟ ದೇವದೂತರು ಭೂಮಿಯ ಮೇಲೆ ಅತ್ಯಧಿಕ ಮಟ್ಟದಲ್ಲಿ ಅಧಿಕಾರವನ್ನು ಚಲಾಯಿಸಿದ್ದಾರೆ. ವಾಸ್ತವದಲ್ಲಿ, ದೇವರ ವಾಕ್ಯವು ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆಯುತ್ತದೆ ಮತ್ತು ದೆವ್ವಗಳನ್ನು ‘ಅಂಧಕಾರದ ಲೋಕಾಧಿಪತಿಗಳು’ ಎಂದೂ ಕರೆಯುತ್ತದೆ. (ಯೋಹಾನ 12:31; ಎಫೆಸ 6:11, 12; 1 ಯೋಹಾನ 5:19) ತನ್ನ ಅಧಿಕಾರದ ಕಾರಣದಿಂದಲೇ ಪಿಶಾಚನು, ಒಂದು ಸಾಷ್ಟಾಂಗ ನಮಸ್ಕಾರ ಮಾಡುವುದಾದರೆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ನಿನಗೆ ಕೊಡುವೆನೆಂದು ಯೇಸುವಿಗೆ ಹೇಳಸಾಧ್ಯವಿತ್ತು. (ಮತ್ತಾಯ 4:​8, 9) ಆದುದರಿಂದ, ಭೂಲೋಕದ ಸಂಬಂಧದಲ್ಲಿ ದೇವರ ರಾಜ್ಯವು ‘ಬರುವಾಗ,’ ಇದು ಖಂಡಿತವಾಗಿಯೂ ಮಹತ್ತರವಾದ ಬದಲಾವಣೆಗಳನ್ನು ತರುವುದು ಎಂಬುದು ಸುಸ್ಪಷ್ಟ.

ಭೂಮಿಯ ಮೇಲೆ ದೇವರ ರಾಜ್ಯದ ‘ಬರೋಣವು’ ಸಂಪೂರ್ಣವಾಗಿ ನೂತನ ವಿಷಯಗಳ ವ್ಯವಸ್ಥೆಯನ್ನು ಉಂಟುಮಾಡುವುದು. ಆ ರಾಜ್ಯವು ಎಲ್ಲಾ ಮಾನವನಿರ್ಮಿತ ಆಳ್ವಿಕೆಗಳನ್ನು ನಿರ್ನಾಮಮಾಡಿ, ಭೂಮಿಯ ಏಕಮಾತ್ರ ಸರಕಾರವಾಗಿ ಪರಿಣಮಿಸುವುದು. ಅದೇ ಸಮಯದಲ್ಲಿ, ದೇವಭಯವುಳ್ಳ ಅದರ ಮಾನವ ಪ್ರಜೆಗಳು “ನೂತನಭೂಮಂಡಲ”ವಾಗುವರು. (2 ಪೇತ್ರ 3:13; ದಾನಿಯೇಲ 2:44) ಆ ರಾಜ್ಯವು ವಿಧೇಯ ಮಾನವಕುಲದಿಂದ ಪಾಪವನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಮತ್ತು ಕಾಲಕ್ರಮೇಣ ಈ ಭೂಮಿಯನ್ನು ಒಂದು ಭೌಗೋಲಿಕ ಪರದೈಸಾಗಿ ಮಾಡುವುದು; ಹೀಗೆ ಸೈತಾನನ ಆಳ್ವಿಕೆಯ ಪ್ರತಿಯೊಂದು ಜಾಡನ್ನೂ ಅದು ಪೂರ್ಣವಾಗಿ ನಿರ್ಮೂಲನಗೊಳಿಸುವುದು.​—ರೋಮಾಪುರ 8:​20, 21; ಪ್ರಕಟನೆ 19:​17-21.

ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ, ಮೆಸ್ಸೀಯ ರಾಜ್ಯವು ದೇವರ ಚಿತ್ತವನ್ನು ಪೂರೈಸುವಾಗ, “ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.” (1 ಕೊರಿಂಥ 15:28) ಆಗ ಒಂದು ಅಂತಿಮ ಪರೀಕ್ಷೆಯು ನಡೆಸಲ್ಪಡುವುದು, ತದನಂತರ ಸೈತಾನನು, ಅವನ ದೆವ್ವಗಳು ಮತ್ತು ತಪ್ಪುಮಾರ್ಗವನ್ನು ಬೆನ್ನಟ್ಟುವ ಯಾವುದೇ ಮಾನವ ದಂಗೆಕೋರರು “ಎರಡನೆಯ ಮರಣ”ದಲ್ಲಿ ಶಾಶ್ವತವಾಗಿ ನಿರ್ಮೂಲವಾಗುವರು. (ಪ್ರಕಟನೆ 20:​7-15) ತದನಂತರ, ಪರಲೋಕದಲ್ಲಿರುವ ಮತ್ತು ಭೂಮಿಯ ಮೇಲಿರುವ ಎಲ್ಲಾ ಬುದ್ಧಿವಂತ ಸೃಷ್ಟಿಜೀವಿಗಳೂ ನಿತ್ಯಕ್ಕೂ ಯೆಹೋವನ ಪ್ರೀತಿಯ ಪರಮಾಧಿಕಾರಕ್ಕೆ ಹರ್ಷಾನಂದದಿಂದ ಅಧೀನವಾಗುವವು. ಇದು ಪ್ರತಿಯೊಂದು ರೀತಿಯಲ್ಲೂ ಯೇಸುವಿನ ಮಾದರಿ ಪ್ರಾರ್ಥನೆಯ ಮಾತುಗಳ ಪೂರ್ಣ ನೆರವೇರಿಕೆಯಾಗಿರುವುದು.​—1 ಯೋಹಾನ 4:8.

[ಪಾದಟಿಪ್ಪಣಿಗಳು]

^ ಪ್ಯಾರ. 3 ದ ಬೈಬಲ್‌​—ಆ್ಯನ್‌ ಅಮೆರಿಕನ್‌ ಟ್ರಾನ್ಸ್‌ಲೇಶನ್‌ ಯೇಸುವಿನ ಮಾದರಿ ಪ್ರಾರ್ಥನೆಯ ಈ ಭಾಗವನ್ನು “ನಿನ್ನ ರಾಜ್ಯವು ಬರಲಿ! ಭೂಲೋಕದಲ್ಲಿಯೂ ಪರಲೋಕದಲ್ಲಿಯೂ ನಿನ್ನ ಚಿತ್ತವು ನೆರವೇರಲಿ!” ಎಂದು ತರ್ಜುಮೆಮಾಡುತ್ತದೆ.​—ಮತ್ತಾಯ 6:10.

^ ಪ್ಯಾರ. 6 ಆತ್ಮಿಕವಾಗಿ ಬಹಿಷ್ಕೃತವಾದ ಈ ಸ್ಥಿತಿಯನ್ನು ಅಪೊಸ್ತಲ ಪೇತ್ರನು “ಸೆರೆ”ಯಲ್ಲಿರುವ ಸ್ಥಿತಿಗೆ ಹೋಲಿಸಿದನು. ಒಂದು ಸಾವಿರ ವರ್ಷಗಳ ವರೆಗೆ ದೆವ್ವಗಳು ಎಲ್ಲಿಗೆ ದೊಬ್ಬಲ್ಪಡಲಿದ್ದರೋ ಆ ಭಾವೀ ‘ಅಧೋಲೋಕವನ್ನು’ ಅವನು ಅರ್ಥೈಸಲಿಲ್ಲ.​—1 ಪೇತ್ರ 3:19, 20; ಲೂಕ 8:30, 31; ಪ್ರಕಟನೆ 20:1-3.