ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಿಷನೆರಿ ಮನೋಭಾವವನ್ನು ಕಾಪಾಡಿಕೊಂಡದ್ದಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟದ್ದು

ಮಿಷನೆರಿ ಮನೋಭಾವವನ್ನು ಕಾಪಾಡಿಕೊಂಡದ್ದಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟದ್ದು

ಜೀವನ ಕಥೆ

ಮಿಷನೆರಿ ಮನೋಭಾವವನ್ನು ಕಾಪಾಡಿಕೊಂಡದ್ದಕ್ಕಾಗಿ ಹೇರಳವಾಗಿ ಆಶೀರ್ವದಿಸಲ್ಪಟ್ಟದ್ದು

ಟಾಮ್‌ ಕುಕ್‌ ಅವರು ಹೇಳಿದಂತೆ

ಇದ್ದಕ್ಕಿದ್ದಂತೆ ಕೇಳಿಬಂದ ಸಿಡಿಗುಂಡಿನ ಶಬ್ದವು ಮಧ್ಯಾಹ್ನದ ಪ್ರಶಾಂತ ವಾತಾವರಣವನ್ನು ಭಂಗಗೊಳಿಸಿತು. ಬಂದೂಕುಗಳಿಂದ ಹೊರಟ ಗುಂಡುಗಳು ನಮ್ಮ ತೋಟದಲ್ಲಿದ್ದ ಮರಗಳನ್ನು ಸೀಳಿ ಹೊರಬಂದವು. ಇಲ್ಲಿ ಏನು ಸಂಭವಿಸುತ್ತಿತ್ತು? ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ದಿಢೀರ್‌ ಬದಲಾವಣೆಯುಂಟಾಗಿ, ಯುಗಾಂಡವು ಜನರಲ್‌ ಈಡೀ ಆಮೀನ್‌ ಎಂಬ ವ್ಯಕ್ತಿಯ ಸ್ವಾಧೀನಕ್ಕೊಳಗಾಗಿದೆ ಎಂಬುದು ಬೇಗನೆ ನಮಗೆ ಮನವರಿಕೆಯಾಯಿತು. ಈ ಘಟನೆಯು 1971ನೇ ಇಸವಿಯಲ್ಲಿ ನಡೆಯಿತು.

ನಾನು ಮತ್ತು ನನ್ನ ಪತ್ನಿಯಾದ ಆ್ಯನ್‌, ಸ್ವಲ್ಪಮಟ್ಟಿಗೆ ಶಾಂತಿಯುತವಾಗಿದ್ದ ಇಂಗ್ಲೆಂಡ್‌ ದೇಶವನ್ನು ಬಿಟ್ಟು, ಅಸ್ಥಿರವೂ ಸಾಕಷ್ಟು ಅಪಾಯಕರವೂ ಆಗಿದ್ದ ಆಫ್ರಿಕದ ಈ ಭಾಗಕ್ಕೆ ಏಕೆ ಸ್ಥಳಾಂತರಿಸಿದೆವು? ನಿಜ ಹೇಳಬೇಕೆಂದರೆ, ಸಾಹಸಕಾರ್ಯಕ್ಕೆ ಕೈಹಾಕುವುದೇ ನನ್ನ ಸ್ವಭಾವವಾಗಿದೆ; ಆದರೂ ಹುರುಪಿನ ರಾಜ್ಯ ಸೇವೆಯಲ್ಲಿ ಮೂಲತಃ ನನ್ನ ಹೆತ್ತವರಿಟ್ಟ ಮಾದರಿಯೇ ನನ್ನಲ್ಲಿ ಮಿಷನೆರಿ ಮನೋಭಾವವನ್ನು ಬಲವಾಗಿ ಉತ್ತೇಜಿಸಿತು.

ನನ್ನ ಹೆತ್ತವರು ಮೊದಲ ಬಾರಿಗೆ ಯೆಹೋವನ ಸಾಕ್ಷಿಗಳನ್ನು ಭೇಟಿಯಾದ 1946ನೇ ಇಸವಿಯ ಆಗಸ್ಟ್‌ ತಿಂಗಳಿನ ಆ ಉರಿಬಿಸಿಲಿನ ದಿನವನ್ನು ನಾನು ಈಗಲೂ ಜ್ಞಾಪಿಸಿಕೊಳ್ಳುತ್ತೇನೆ. ನನ್ನ ಹೆತ್ತವರು ಮುಂಬಾಗಿಲ ಬಳಿ ನಿಂತುಕೊಂಡು, ಇಬ್ಬರು ಸಂದರ್ಶಕರೊಂದಿಗೆ ದೀರ್ಘ ಸಮಯದ ವರೆಗೆ ಮಾತಾಡುತ್ತಾ ಇದ್ದರು. ಫ್ರೇಸರ್‌ ಬ್ರಾಡ್‌ಬೆರಿ ಮತ್ತು ಮೇಮೀ ಶ್ರೀವ್‌ ಎಂಬ ಹೆಸರಿನ ಈ ಸಂದರ್ಶಕರು ತದನಂತರವೂ ಅನೇಕ ಬಾರಿ ನಮ್ಮ ಮನೆಗೆ ಬಂದರು, ಮತ್ತು ನಂತರದ ತಿಂಗಳುಗಳಲ್ಲಿ ನಮ್ಮ ಕುಟುಂಬದ ಜೀವನಗತಿಯೇ ಸಂಪೂರ್ಣವಾಗಿ ಬದಲಾಯಿತು.

ನನ್ನ ಹೆತ್ತವರ ಧೈರ್ಯಭರಿತ ಮಾದರಿ

ನನ್ನ ಹೆತ್ತವರು ಅನೇಕ ಸಾಮುದಾಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಉದಾಹರಣೆಗೆ, ಅವರು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಸ್ವಲ್ಪ ಸಮಯಕ್ಕೆ ಮುಂಚೆ, ವಿನ್‌ಸ್ಟನ್‌ ಚರ್ಚಿಲರ ದೊಡ್ಡ ಭಾವಚಿತ್ರಗಳು ನಮ್ಮ ಮನೆಯ ಗೋಡೆಗಳನ್ನು ಅಲಂಕರಿಸಿದ್ದವು. ಯುದ್ಧಾನಂತರದ ರಾಷ್ಟ್ರೀಯ ಚುನಾವಣೆಗಳ ಸಮಯಗಳಲ್ಲಿ, ನಮ್ಮ ಮನೆಯು ಸ್ಥಳಿಕ ಕನ್ಸರ್‌ವೇಟಿವ್‌ ಪಾರ್ಟಿ ಕಮಿಟಿಯ ಕೇಂದ್ರವಾಗಿ ಉಪಯೋಗಿಸಲ್ಪಡುತ್ತಿತ್ತು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿದ್ದ ಖ್ಯಾತ ವ್ಯಕ್ತಿಗಳ ಪರಿಚಯವೂ ನಮ್ಮ ಕುಟುಂಬಕ್ಕಿತ್ತು. ಆ ಸಮಯದಲ್ಲಿ ನಾನು ಕೇವಲ ಒಂಬತ್ತು ವರ್ಷ ಪ್ರಾಯದವನಾಗಿದ್ದೆನಾದರೂ, ನಾವು ಯೆಹೋವನ ಸಾಕ್ಷಿಗಳಾಗುತ್ತಿದ್ದೇವೆ ಎಂಬುದನ್ನು ನಮ್ಮ ಸಂಬಂಧಿಕರು ಮನಗಂಡಾಗ ಅವರಿಗಾದ ಆಘಾತವನ್ನು ನಾನು ಅರ್ಥಮಾಡಿಕೊಳ್ಳಶಕ್ತನಾಗಿದ್ದೆ.

ನಾವು ಯಾರೊಂದಿಗೆ ಸಹವಾಸಮಾಡುತ್ತಿದ್ದೆವೋ ಆ ಸಾಕ್ಷಿಗಳ ಪೂರ್ಣ ಪ್ರಾಣದ ಹಾಗೂ ನಿರ್ಭೀತ ಮಾದರಿಯು, ಸಾರುವ ಕೆಲಸದಲ್ಲಿ ಕ್ರಿಯಾಶೀಲರಾಗುವಂತೆ ನನ್ನ ಹೆತ್ತವರನ್ನು ಪ್ರಚೋದಿಸಿತು. ಇದಾದ ಸ್ವಲ್ಪದರಲ್ಲೇ ನನ್ನ ತಂದೆಯವರು, ನಾವು ಎಲ್ಲಿ ವಾಸಿಸುತ್ತಿದ್ದೆವೋ ಆ ಸ್ಪ್ಯಾಂಡನ್‌ ಹಳ್ಳಿಯ ಪೇಟೆಬೀದಿಯಲ್ಲಿ ಧ್ವನಿವರ್ಧಕದ ಸಹಾಯದಿಂದ ಸಾರ್ವಜನಿಕ ಭಾಷಣಗಳನ್ನು ಕೊಡಲಾರಂಭಿಸಿದರು; ಆಗ ಚಿಕ್ಕವರಾಗಿದ್ದ ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಹಿಡಿದುಕೊಂಡು, ಜನರ ಕಣ್ಣಿಗೆ ಸುಲಭವಾಗಿ ಬೀಳುವಂಥ ಸ್ಥಳಗಳಲ್ಲಿ ನಿಂತುಕೊಳ್ಳುತ್ತಿದ್ದೆವು. ಆಗ ಯಾರೊಂದಿಗೆ ನಾನು ಶಾಲೆಗೆ ಹೋಗುತ್ತಿದ್ದೆನೋ ಆ ಮಕ್ಕಳು ನನ್ನ ಬಳಿಗೆ ಬಂದಾಗ, ಭೂಮಿಯು ಬಾಯ್ದೆರೆದು ನನ್ನನ್ನು ನುಂಗಬಾರದೋ ಎಂದು ನನ್ನ ಮನಸ್ಸು ಹಾರೈಸಿತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.

ನನ್ನ ಹೆತ್ತವರ ಮಾದರಿಯು, ಪಯನೀಯರ್‌ ಸೇವೆಯನ್ನು ಆರಂಭಿಸುವಂತೆ ನನ್ನ ಅಕ್ಕ ಡ್ಯಾಫ್ನೀಯನ್ನು ಹುರಿದುಂಬಿಸಿತು. 1955ರಲ್ಲಿ ಅವಳು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಹಾಜರಾದಳು ಮತ್ತು ಜಪಾನ್‌ಗೆ ಮಿಷನೆರಿಯಾಗಿ ನೇಮಿಸಲ್ಪಟ್ಟಳು. * ಆದರೆ ನನ್ನ ತಂಗಿಯಾದ ಸೋಈ ಮಾತ್ರ ಯೆಹೋವನ ಸೇವೆಯನ್ನು ನಿಲ್ಲಿಸಿಬಿಟ್ಟಳು.

ಈ ಮಧ್ಯೆ ನಾನು ಸಚಿತ್ರ ವಿವರಣೆ ಮತ್ತು ಗ್ರ್ಯಾಫಿಕ್‌ ಕಲೆಗಳನ್ನು ಕಲಿಯುವ ಮೂಲಕ ನನ್ನ ವ್ಯಾಸಂಗವನ್ನು ಪೂರ್ಣಗೊಳಿಸಿದೆ. ಆ ದಿನಗಳಲ್ಲಿ ನನ್ನ ಸಹಪಾಠಿಗಳ ನಡುವೆ ಇದ್ದ ಸ್ಫೂರ್ತಿದಾಯಕ ಸಂಗತಿಯು ಕಡ್ಡಾಯವಾದ ರಾಷ್ಟ್ರೀಯ ಸೇವೆಯೇ ಆಗಿತ್ತು. ಆದರೆ ಮನಸಾಕ್ಷಿಯ ಕಾರಣದಿಂದಾಗಿ ನಾನು ಸೇನೆಗೆ ಸೇರಲಾರೆ ಎಂದು ಅವರಿಗೆ ಹೇಳಿದಾಗ, ಅವರು ಅದನ್ನು ಒಂದು ತಮಾಷೆಯ ಮಾತಾಗಿ ಪರಿಗಣಿಸಿದರು. ಈ ವಾದಾಂಶವು, ವಿದ್ಯಾರ್ಥಿಗಳಲ್ಲಿ ಕೆಲವರೊಂದಿಗೆ ಅನೇಕ ಬೈಬಲ್‌ ಚರ್ಚೆಗಳನ್ನು ನಡೆಸಲು ಅವಕಾಶಮಾಡಿಕೊಟ್ಟಿತು. ಮಿಲಿಟರಿ ಸೇವೆಯಲ್ಲಿ ಒಳಗೂಡಲು ನಿರಾಕರಿಸಿದ್ದಕ್ಕಾಗಿ ಸ್ವಲ್ಪದರಲ್ಲೇ ನನಗೆ 12 ತಿಂಗಳುಗಳ ಸೆರೆವಾಸದ ಶಿಕ್ಷೆಯು ವಿಧಿಸಲ್ಪಟ್ಟಿತು. ಬೈಬಲ್‌ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದಂಥ ಕಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಒಬ್ಬಳು ಸಮಯಾನಂತರ ನನ್ನ ಪತ್ನಿಯಾದಳು. ಆದರೆ ಆ್ಯನ್‌ ಹೇಗೆ ಸತ್ಯವನ್ನು ಕಲಿತಳು ಎಂಬುದನ್ನು ಅವಳೇ ನಿಮಗೆ ಹೇಳಲಿ.

ಆ್ಯನ್‌ಗೆ ಸತ್ಯದ ಪರಿಚಯವಾದದ್ದು

“ನನ್ನ ಕುಟುಂಬವು ಧಾರ್ಮಿಕ ಮನೋಭಾವದ್ದಾಗಿರಲಿಲ್ಲ, ಮತ್ತು ಯಾವುದೇ ಧರ್ಮದ ಭಾಗವಾಗಿ ನನಗೆ ದೀಕ್ಷಾಸ್ನಾನವೂ ಆಗಿರಲಿಲ್ಲ. ಆದರೆ ನಾನು ಧರ್ಮದ ವಿಷಯದಲ್ಲಿ ತುಂಬ ಕುತೂಹಲವುಳ್ಳವಳಾಗಿದ್ದು, ನನ್ನ ಮಿತ್ರರು ಹೋಗುವ ಚರ್ಚುಗಳಿಗೆಲ್ಲಾ ನಾನೂ ಹೋಗುತ್ತಿದ್ದೆ. ಟಾಮ್‌ ಮತ್ತು ಇನ್ನೊಬ್ಬ ಸಾಕ್ಷಿಯು ಕಾಲೇಜಿನಲ್ಲಿ ಬೇರೆ ವಿದ್ಯಾರ್ಥಿಗಳೊಂದಿಗೆ ಮಾಡುತ್ತಿದ್ದ ಲವಲವಿಕೆಯಿಂದ ಕೂಡಿರುತ್ತಿದ್ದ ಚರ್ಚೆಗಳನ್ನು ನಾನು ಕೇಳಿಸಿಕೊಂಡಾಗ, ಬೈಬಲ್‌ನ ಕುರಿತಾಗಿದ್ದ ನನ್ನ ಆಸಕ್ತಿಯು ಕೆರಳಿಸಲ್ಪಟ್ಟಿತು. ಟಾಮ್‌ ಮತ್ತು ಇನ್ನೊಬ್ಬ ಸಾಕ್ಷಿಯು ಮಿಲಿಟರಿ ಸೇವೆಯನ್ನು ನಿರಾಕರಿಸಿದ್ದಕ್ಕಾಗಿ ಅವರನ್ನು ಸೆರೆಗೆ ಕಳುಹಿಸಲಾಯಿತು, ಇದರಿಂದ ನನಗೆ ತುಂಬ ಆಘಾತವಾಯಿತು.

“ಟಾಮ್‌ ಸೆರೆಮನೆಯಲ್ಲಿದ್ದಾಗ ನಾನು ಅವರೊಂದಿಗೆ ಪತ್ರ ಸಂಪರ್ಕವನ್ನು ಮುಂದುವರಿಸಿದೆ, ಮತ್ತು ಬೈಬಲ್‌ನಲ್ಲಿ ನನಗಿದ್ದ ಆಸಕ್ತಿಯು ಇನ್ನೂ ಅಧಿಕಗೊಂಡಿತು. ನನ್ನ ಐಹಿಕ ವ್ಯಾಸಂಗವನ್ನು ಮುಂದುವರಿಸಲಿಕ್ಕಾಗಿ ನಾನು ಲಂಡನ್‌ಗೆ ಸ್ಥಳಾಂತರಿಸಿದಾಗ, ಮ್ಯೂರಿಅಲ್‌ ಆಲ್‌ಬ್ರೆಕ್ಟ್‌ರೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಲು ಒಪ್ಪಿಕೊಂಡೆ. ಮ್ಯೂರಿಅಲ್‌ ಅವರು ಎಸ್ಟೋನಿಯದಲ್ಲಿ ಒಬ್ಬ ಮಿಷನೆರಿಯಾಗಿ ಸೇವೆಮಾಡಿದ್ದರು, ಮತ್ತು ಅವರು ಹಾಗೂ ಅವರ ತಾಯಿಯವರು ನನಗೆ ಉತ್ತೇಜನದ ಮೂಲವಾಗಿದ್ದರು. ಕೆಲವೇ ವಾರಗಳಲ್ಲಿ ನಾನು ಕೂಟಗಳಿಗೆ ಹಾಜರಾಗತೊಡಗಿದೆ ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುತ್ತಾ ವಿಕ್ಟೋರಿಯ ರೈಲು ನಿಲ್ದಾಣದ ಹೊರಗೆ ನಿಲ್ಲುತ್ತಿದ್ದೆ.

“ನಾನು ದಕ್ಷಿಣ ಲಂಡನಿನಲ್ಲಿರುವ ಸೌತ್‌ವಾರ್ಕ್‌ ಸಭೆಗೆ ಹೋಗುತ್ತಿದ್ದೆ. ಈ ಸಭೆಯಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಅನೇಕ ಆತ್ಮಿಕ ಸಹೋದರ ಸಹೋದರಿಯರು ಇದ್ದರು ಮತ್ತು ಇವರಲ್ಲಿ ಅನೇಕರು ಭೌತಿಕವಾಗಿ ಹೆಚ್ಚು ಅನುಕೂಲಸ್ಥರಾಗಿರಲಿಲ್ಲ. ನಾನು ಅಪರಿಚಿತಳಾಗಿದ್ದೆನಾದರೂ, ಅವರು ನನ್ನನ್ನು ತಮ್ಮ ಕುಟುಂಬದ ಸದಸ್ಯಳಂತೆ ಉಪಚರಿಸುತ್ತಿದ್ದರು. ಆ ಸಭೆಯಲ್ಲಿದ್ದ ಪ್ರೀತಿಯು ನನಗೆ ಇದೇ ಸತ್ಯವೆಂಬುದನ್ನು ಮನದಟ್ಟುಮಾಡಿತು ಮತ್ತು 1960ರಲ್ಲಿ ನಾನು ದೀಕ್ಷಾಸ್ನಾನಪಡೆದುಕೊಂಡೆ.”

ಸಮಾನ ಗುರಿಗಳು​—⁠ಭಿನ್ನ ಸನ್ನಿವೇಶಗಳು

ಇಸವಿ 1960ರಲ್ಲಿ ನಾನು ಮತ್ತು ಆ್ಯನ್‌ ಮದುವೆಯಾದೆವು, ಮತ್ತು ಮಿಷನೆರಿ ಸೇವೆಯನ್ನು ಪ್ರವೇಶಿಸುವ ಗುರಿ ನಮ್ಮದಾಗಿತ್ತು. ಆದರೆ ನಮಗೆ ಒಂದು ಮಗು ಹುಟ್ಟಲಿದೆಯೆಂಬುದು ಗೊತ್ತಾದಾಗ, ನಮ್ಮ ಇಡೀ ಸನ್ನಿವೇಶವೇ ಬದಲಾಯಿತು. ನಮ್ಮ ಮಗಳಾದ ಸೇರ ಹುಟ್ಟಿದ ಬಳಿಕವೂ, ರಾಜ್ಯ ಪ್ರಚಾರಕರ ಅಗತ್ಯವು ಎಲ್ಲಿ ಹೆಚ್ಚಾಗಿತ್ತೋ ಆ ದೇಶದಲ್ಲಿ ಸೇವೆಮಾಡುವ ಬಯಕೆ ನನಗೆ ಮತ್ತು ಆ್ಯನ್‌ಳಿಗೆ ಇತ್ತು. ನಾನು ಅನೇಕ ದೇಶಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿಯನ್ನು ಹಾಕಿದೆ ಮತ್ತು ಕಾಲಕ್ರಮೇಣ 1966ರ ಮೇ ತಿಂಗಳಿನಲ್ಲಿ, ನನಗೆ ಒಂದು ಉದ್ಯೋಗವು ಸಿಕ್ಕಿದೆಯೆಂಬುದನ್ನು ದೃಢೀಕರಿಸುತ್ತಾ ಯುಗಾಂಡದ ಶಿಕ್ಷಣ ಇಲಾಖೆಯಿಂದ ಒಂದು ಪತ್ರವು ಬಂತು. ಆದರೂ, ಇಷ್ಟರಲ್ಲಾಗಲೇ ಆ್ಯನ್‌ ನಮ್ಮ ಎರಡನೆಯ ಮಗುವಿಗೆ ಗರ್ಭಧರಿಸಿದ್ದಳು. ಅಷ್ಟು ದೂರ ಸ್ಥಳಾಂತರಿಸುವುದನ್ನು ಪರಿಗಣಿಸುವುದು ವಿವೇಕಯುತ ನಿರ್ಣಯವೋ ಅಲ್ಲವೋ ಎಂದು ಕೆಲವರು ಸಂಶಯಿಸಿದರು. ನಾವು ನಮ್ಮ ವೈದ್ಯರನ್ನು ಭೇಟಿಯಾದಾಗ ಅವರು ಹೇಳಿದ್ದು: “ಒಂದುವೇಳೆ ನೀನು ಹೋಗುವುದಿದ್ದರೆ ನಿನ್ನ ಪತ್ನಿಗೆ ಏಳು ತಿಂಗಳುಗಳು ತುಂಬುವುದಕ್ಕೆ ಮುಂಚೆಯೇ ಪ್ರಯಾಣಿಸುವುದು ಒಳ್ಳೇದು.” ಆದುದರಿಂದ ತರಾತುರಿಯಿಂದ ನಾವು ಯುಗಾಂಡಕ್ಕೆ ಪ್ರಯಾಣಿಸಿದೆವು. ಇದರ ಪರಿಣಾಮವಾಗಿ, ನಮ್ಮ ಎರಡನೆಯ ಮಗಳಾದ ರೇಚಲ್‌ ಎರಡು ವರ್ಷದವಳಾಗುವ ತನಕ ನಮ್ಮ ಹೆತ್ತವರು ಅವಳನ್ನು ನೋಡಲಾಗಲಿಲ್ಲ. ಈಗ ನಮಗೇ ಮೊಮ್ಮಕ್ಕಳಿರುವುದರಿಂದ, ನಮ್ಮ ಪ್ರೀತಿಯ ಹೆತ್ತವರ ಸ್ವತ್ಯಾಗದ ಮನೋಭಾವವನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದಕ್ಕಾಗಿ ಕೃತಜ್ಞರಾಗಿದ್ದೇವೆ.

ಇಸವಿ 1966ರಲ್ಲಿ ಯುಗಾಂಡಕ್ಕೆ ಆಗಮಿಸಿದಾಗ ನಾವು ತುಂಬ ಪುಳಕಿತರಾದೆವು ಮತ್ತು ಅದೇ ಸಮಯದಲ್ಲಿ ಸ್ವಲ್ಪ ಎದೆಗುಂದಿದೆವು ಸಹ. ವಿಮಾನದಿಂದ ಕೆಳಗಿಳಿಯುತ್ತಿದ್ದಂತೆಯೇ ನಮ್ಮ ಸುತ್ತಲೂ ಇದ್ದ ವರ್ಣಗಳು ನಮ್ಮ ಕಣ್ಣುಗಳನ್ನು ರಂಜಿಸಿದವು. ಆ ಬಣ್ಣಗಳು ತುಂಬ ಗಾಢವಾಗಿದ್ದವು. ನಮ್ಮ ಮೊದಲ ಮನೆಯು, ನೈಲ್‌ ನದಿಯ ಉಗಮಸ್ಥಾನದ ಬಳಿ ನೆಲೆಸಿರುವ ಜಿಂಜ ಎಂಬ ಪಟ್ಟಣದಿಂದ 50 ಕಿಲೊಮೀಟರುಗಳಷ್ಟು ದೂರಲ್ಲಿರುವ ಈಗಾಂಗಾದ ಚಿಕ್ಕ ಪಟ್ಟಣದ ಬಳಿಯಿತ್ತು. ಜಿಂಜದಲ್ಲಿದ್ದ ಒಂದು ಪ್ರತ್ಯೇಕ ಗುಂಪಿಗೆ ಸೇರಿದ ಜನರೇ ನಮ್ಮ ಮನೆಗೆ ಅತಿ ಸಮೀಪದಲ್ಲಿ ವಾಸಿಸುತ್ತಿದ್ದ ಸಾಕ್ಷಿಗಳಾಗಿದ್ದರು. ಮಿಷನೆರಿಗಳಾದ ಗಿಲ್ಬರ್ಟ್‌ ಮತ್ತು ಜೋನ್‌ ವಾಲ್ಟರ್ಸ್‌ ಮತ್ತು ಸ್ಟೀವನ್‌ ಹಾಗೂ ಬಾರ್‌ಬ್ರ ಹಾರ್ಡಿಯವರು ಈ ಗುಂಪನ್ನು ನೋಡಿಕೊಳ್ಳುತ್ತಿದ್ದರು. ಈ ಗುಂಪಿಗೆ ಹೆಚ್ಚಿನ ರೀತಿಯಲ್ಲಿ ಸಹಾಯವನ್ನು ಮಾಡುವ ಉದ್ದೇಶದಿಂದ ನಾನು ನನ್ನ ಉದ್ಯೋಗವನ್ನು ಜಿಂಜಕ್ಕೆ ವರ್ಗಾಯಿಸಲು ಅರ್ಜಿಯನ್ನು ಹಾಕಿದೆ. ತದನಂತರ ಸ್ವಲ್ಪದರಲ್ಲೇ ರೇಚಲ್‌ ಹುಟ್ಟಿದಳು ಮತ್ತು ನಾವು ಜಿಂಜಕ್ಕೆ ಸ್ಥಳಾಂತರಿಸಿದೆವು. ಅಲ್ಲಿ ನಂಬಿಗಸ್ತ ಸಾಕ್ಷಿಗಳ ಒಂದು ಚಿಕ್ಕ ಗುಂಪಿನೊಂದಿಗೆ ಸೇವೆಮಾಡುವ ಸುಯೋಗ ನಮಗೆ ಸಿಕ್ಕಿತು ಮತ್ತು ಆ ಗುಂಪು ಬೆಳೆದು ಯುಗಾಂಡದಲ್ಲೇ ಎರಡನೆಯ ಸಭೆಯಾಗಿ ಪರಿಣಮಿಸಿತು.

ಒಂದು ವಿದೇಶೀ ಕ್ಷೇತ್ರದಲ್ಲಿ ಕುಟುಂಬವಾಗಿ ಸೇವೆಮಾಡುವುದು

ನಮ್ಮ ಕುಟುಂಬವನ್ನು ಬೆಳೆಸಲಿಕ್ಕಾಗಿ ನಾವು ಅತ್ಯುತ್ತಮವಾದ ಪರಿಸರವನ್ನೇ ಆಯ್ಕೆಮಾಡಿದ್ದೇವೆ ಎಂಬ ಅನಿಸಿಕೆ ನನಗೆ ಮತ್ತು ಆ್ಯನ್‌ಳಿಗೆ ಆಯಿತು. ಬೇರೆ ಬೇರೆ ದೇಶಗಳಿಂದ ಬಂದ ಮಿಷನೆರಿಗಳ ಜೊತೆಗೆ ಕೆಲಸಮಾಡುವ ಮತ್ತು ಹೊಸದಾಗಿ ರಚಿತವಾಗಿದ್ದ ಸಭೆಗೆ ನೆರವು ನೀಡುವ ಸುಯೋಗ ನಮಗಿತ್ತು. ಅನೇಕವೇಳೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದ ಯುಗಾಂಡದ ನಮ್ಮ ಸಹೋದರ ಸಹೋದರಿಯರ ಸಾಹಚರ್ಯವನ್ನು ನಾವು ತುಂಬ ಇಷ್ಟಪಟ್ಟೆವು. ಸ್ಟ್ಯಾನ್ಲೀ ಮತ್ತು ಅಸೀನಾಲಾ ಮಾಕೂಂಬಾರವರು ನಮಗೆ ವಿಶೇಷ ರೀತಿಯಲ್ಲಿ ಉತ್ತೇಜನದಾಯಕವಾಗಿದ್ದರು.

ಆದರೆ ಕೇವಲ ಸಹೋದರರು ಮಾತ್ರ ನಮ್ಮನ್ನು ಸಂದರ್ಶಿಸುತ್ತಿರಲಿಲ್ಲ; ನಮ್ಮ ಸುತ್ತಲೂ ಬೇರೆ ಬೇರೆ ರೀತಿಯ ವನ್ಯಜೀವಿಗಳು ಜೀವಿಸುತ್ತಿದ್ದುದರಿಂದ, ಅವುಗಳು ಕೂಡ ನಮ್ಮನ್ನು ಸಂದರ್ಶಿಸುತ್ತಿದ್ದವು. ರಾತ್ರಿ ಸಮಯದಲ್ಲಿ ನೀರ್ಗುದುರೆಯು ನೈಲ್‌ ನದಿಯಿಂದ ಹೊರಬಂದು, ನಮ್ಮ ಮನೆಯ ಹತ್ತಿರಕ್ಕೂ ಬರುತ್ತಿತ್ತು. ನಮ್ಮ ತೋಟದಲ್ಲಿ 18 ಅಡಿಗಳಷ್ಟು ಉದ್ದದ ಹೆಬ್ಬಾವನ್ನು ನೋಡಿದ್ದರ ನೆನಪುಗಳು ನನಗೆ ಈಗಲೂ ಅಚ್ಚಳಿಯದೆ ಉಳಿದಿವೆ. ಕೆಲವೊಮ್ಮೆ, ಎಲ್ಲಿ ಸಿಂಹಗಳು ಮತ್ತು ಕಾಡುಪ್ರಾಣಿಗಳು ಯಾವುದೇ ಭಯವಿಲ್ಲದೆ ಸ್ವಚ್ಛಂದವಾಗಿ ಓಡಾಡುತ್ತಿದ್ದವೋ ಅಂಥ ವನ್ಯಜೀವಿ ಉದ್ಯಾನವನಗಳನ್ನು ನೋಡಲಿಕ್ಕಾಗಿ ಪ್ರವಾಸಗಳನ್ನೂ ಏರ್ಪಡಿಸುತ್ತಿದ್ದೆವು.

ಕ್ಷೇತ್ರ ಸೇವೆಗೆ ಹೋದಾಗ ಸ್ಥಳಿಕ ಜನರಿಗೆ ನಾವು ಅಸಾಧಾರಣ ನೋಟವಾಗಿದ್ದೆವು, ಏಕೆಂದರೆ ಈ ಮುಂಚೆ ಅವರೆಂದೂ ಮಕ್ಕಳ ತಳ್ಳುಬಂಡಿ (ಪ್ರ್ಯಾಮ್‌)ಯೊಂದನ್ನು ನೋಡಿರಲೇ ಇಲ್ಲ. ನಾವು ಮನೆಯಿಂದ ಮನೆಗೆ ಹೋಗುತ್ತಿದ್ದಾಗ ಸಾಮಾನ್ಯವಾಗಿ ಚಿಕ್ಕ ಚಿಕ್ಕ ಮಕ್ಕಳು ನಮ್ಮ ಹಿಂದೆ ಸಾಲುಗಟ್ಟಿ ಬರುತ್ತಿದ್ದರು. ಜನರು ಗೌರವಭಾವದಿಂದ ನಮ್ಮ ಕಡೆಗೆ ದೃಷ್ಟಿಹರಿಸಿ, ನಂತರ ಬಿಳಿಯ ಮಗುವನ್ನು ಮುಟ್ಟುತ್ತಿದ್ದರು. ಅಲ್ಲಿ ಸಾಕ್ಷಿನೀಡುವುದು ಹರ್ಷದಾಯಕ ವಿಚಾರವಾಗಿತ್ತು, ಏಕೆಂದರೆ ಜನರು ತುಂಬ ವಿನಯಶೀಲರಾಗಿದ್ದರು. ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದು ತುಂಬ ಸುಲಭವಾಗಿತ್ತಾದ್ದರಿಂದ, ಪ್ರತಿಯೊಬ್ಬರೂ ಸತ್ಯಕ್ಕೆ ಬರುತ್ತಾರೆಂದು ನಾವು ನೆನಸಿದ್ದೆವು. ಆದರೆ, ಅಶಾಸ್ತ್ರೀಯ ಸಂಪ್ರದಾಯಗಳನ್ನು ನಿಲ್ಲಿಸಿಬಿಡುವುದು ಅನೇಕರಿಗೆ ತುಂಬ ಕಷ್ಟಕರವಾದ ಸಂಗತಿಯಾಗಿತ್ತು. ಆದರೂ, ಅನೇಕರು ಬೈಬಲಿನ ಉಚ್ಚ ನೈತಿಕ ಮಟ್ಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಮತ್ತು ಸಭೆಯಲ್ಲಿನ ಸದಸ್ಯರ ಸಂಖ್ಯೆಯೂ ಹೆಚ್ಚತೊಡಗಿತು. 1968ರಲ್ಲಿ ಜಿಂಜದಲ್ಲಿ ನಡೆದ ನಮ್ಮ ಮೊದಲ ಸರ್ಕಿಟ್‌ ಸಮ್ಮೇಳನವು ಈ ಸಭೆಯ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗಿತ್ತು. ನಾವು ಯಾರೊಂದಿಗೆ ಬೈಬಲ್‌ ಅಧ್ಯಯನಮಾಡಿದ್ದೆವೋ ಅವರಲ್ಲಿ ಕೆಲವರು ನೈಲ್‌ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡದ್ದು ನಮಗೆ ಒಂದು ಅವಿಸ್ಮರಣೀಯ ಘಟನೆಯಾಗಿದೆ. ಆದರೂ ಅತಿ ಬೇಗನೆ ನಮ್ಮ ಶಾಂತಿಯು ನುಚ್ಚುನೂರಾಗಲಿತ್ತು.

ನಿಷೇಧ​—⁠ನಂಬಿಕೆ ಮತ್ತು ನಿಷ್ಕಪಟತೆಯ ಒಂದು ಪರೀಕ್ಷೆ

ಇಸವಿ 1971ರಲ್ಲಿ ಜನರಲ್‌ ಈಡೀ ಆಮೀನ್‌ ಎಂಬಾತನು ಅಧಿಕಾರಕ್ಕೆ ಬಂದನು. ಆಗ ಜಿಂಜದಲ್ಲಿ ಸಂಪೂರ್ಣ ಗಲಿಬಿಲಿಯ ವಾತಾವರಣವಿತ್ತು, ಮತ್ತು ನಮ್ಮ ತೋಟದಲ್ಲಿ ಕುಳಿತುಕೊಂಡು ನಾವು ಚಹಾ ಕುಡಿಯುತ್ತಿದ್ದಾಗಲೇ ಆರಂಭದಲ್ಲಿ ತಿಳಿಸಲ್ಪಟ್ಟಂಥ ಘಟನೆಯು ಸಂಭವಿಸಿತು. ಮುಂದಿನ ಎರಡು ವರ್ಷಗಳಲ್ಲಿ, ಏಷ್ಯದ ಜನರ ದೊಡ್ಡ ಸಮುದಾಯವನ್ನು ದೇಶದಿಂದ ಹೊರಗಟ್ಟಲಾಯಿತು. ಬಹುತೇಕ ವಿದೇಶೀಯರು ಅಲ್ಲಿಂದ ಹೊರಟುಹೋಗಲು ನಿರ್ಧರಿಸಿದರು, ಮತ್ತು ಶಾಲೆಗಳು ಮತ್ತು ಚಿಕಿತ್ಸಾಲಯಗಳು ಗುರುತರವಾಗಿ ಸಂಕಷ್ಟಕ್ಕೆ ಒಳಗಾದವು. ಆ ಬಳಿಕವೇ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧವನ್ನು ಒಡ್ಡಲಾಗಿದೆ ಎಂಬ ಸ್ಪಷ್ಟವಾದ ಪ್ರಕಟನೆಯು ಹೊರಡಿಸಲ್ಪಟ್ಟಿತು. ನಮ್ಮ ಸುರಕ್ಷೆಯ ಚಿಂತೆಯಿಂದ ಶಿಕ್ಷಣ ಇಲಾಖೆಯು ನಮ್ಮನ್ನು ರಾಜಧಾನಿಯಾದ ಕಂಪಾಲಕ್ಕೆ ಸ್ಥಳಾಂತರಿಸಿತು. ಈ ಸ್ಥಳಾಂತರವು ಎರಡು ರೀತಿಯಲ್ಲಿ ಪ್ರಯೋಜನದಾಯಕವಾಗಿತ್ತು. ನಾವು ಕಂಪಾಲದಲ್ಲಿ ಅಷ್ಟೇನೂ ಹೆಸರುವಾಸಿಯಾಗಿರಲಿಲ್ಲವಾದ್ದರಿಂದ, ನಮಗೆ ಇಲ್ಲಿ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸಭೆಯಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಸಹ ಇನ್ನೂ ಹೆಚ್ಚಿನ ಕೆಲಸವನ್ನು ಮಾಡಲಿಕ್ಕಿತ್ತು.

ಬ್ರಾಯನ್‌ ಮತ್ತು ಮರೀಅನ್‌ ವಾಲೆಸ್‌ ಮತ್ತು ಅವರ ಇಬ್ಬರು ಮಕ್ಕಳು ಸಹ ನಮ್ಮಂತಹದ್ದೇ ಸನ್ನಿವೇಶದಲ್ಲಿದ್ದರು, ಮತ್ತು ಅವರು ಸಹ ಯುಗಾಂಡದಲ್ಲೇ ಉಳಿಯಲು ನಿರ್ಧರಿಸಿದ್ದರು. ಈ ಕಷ್ಟಕರ ಸಮಯದಲ್ಲಿ ಕಂಪಾಲ ಸಭೆಯಲ್ಲಿ ಒಟ್ಟಿಗೆ ಸೇವೆಮಾಡುವಾಗ ಅವರ ಸಹವಾಸವನ್ನು ನಾವು ತುಂಬ ಗಣ್ಯಮಾಡಿದೆವು. ಬೇರೆ ದೇಶಗಳಲ್ಲಿ ನಿಷೇಧದ ಕೆಳಗೆ ಸೇವೆಮಾಡುತ್ತಿರುವ ನಮ್ಮ ಸಹೋದರರ ಕುರಿತು ನಾವು ಓದಿದ್ದ ವೃತ್ತಾಂತಗಳು ಈ ಸಮಯದಲ್ಲಿ ನಮಗೆ ವಿಶೇಷ ಪ್ರೋತ್ಸಾಹದ ಮೂಲವಾಗಿ ಪರಿಣಮಿಸಿದವು. ನಾವು ಚಿಕ್ಕ ಗುಂಪುಗಳಾಗಿ ಕೂಡಿಬರುತ್ತಿದ್ದೆವು, ಮತ್ತು ತಿಂಗಳಿಗೊಮ್ಮೆ ಎಂಟೆಬಿ ಸಸ್ಯೋದ್ಯಾನದಲ್ಲಿ ದೊಡ್ಡ ಕೂಟಗಳನ್ನು ನಡಿಸುತ್ತಿದ್ದೆವು; ಇತರರ ಕೈಗೆ ಸಿಕ್ಕಿಬೀಳದಿರಲಿಕ್ಕಾಗಿ ಈ ಸಂದರ್ಭಗಳಿಗೆ ಸುಮ್ಮನೆ ಪಾರ್ಟಿ ಎಂಬ ಹೆಸರು ಕೊಡಲ್ಪಡುತ್ತಿತ್ತು. ಇದು ಸೂಪರ್‌ ಐಡಿಯ ಎಂಬುದು ನಮ್ಮ ಹುಡುಗಿಯರ ಅಭಿಪ್ರಾಯವಾಗಿತ್ತು.

ಸಾರುವ ಕೆಲಸದಲ್ಲಿ ನಾವು ಒಳಗೂಡುವ ವಿಧದ ಬಗ್ಗೆ ನಾವು ತುಂಬ ಜಾಗರೂಕರಾಗಿರಬೇಕಾಗಿತ್ತು. ಬಿಳಿಯ ಜನರು ಯುಗಾಂಡದ ಮನೆಗಳಿಗೆ ಭೇಟಿ ನೀಡುವುದು ಸುಲಭವಾಗಿಯೇ ಇತರರ ಗಮನವನ್ನು ಆಕರ್ಷಿಸಸಾಧ್ಯವಿತ್ತು. ಆದುದರಿಂದ, ಅಂಗಡಿಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ವಿದ್ಯಾಸಂಸ್ಥೆಯ ಕ್ಷೇತ್ರಗಳು ನಮ್ಮ ಟೆರಿಟೊರಿಯಾಗಿದ್ದವು. ಅಂಗಡಿಗಳಲ್ಲಿ ನಾನು ಉಪಯೋಗಿಸುತ್ತಿದ್ದ ಒಂದು ವಿಧಾನವು, ಸದ್ಯಕ್ಕೆ ಲಭ್ಯವಿಲ್ಲದಿದ್ದಂಥ ಒಂದು ದಿನಸಿಯು​—⁠ಸಕ್ಕರೆ ಅಥವಾ ಅಕ್ಕಿ​—⁠ಇದೆಯೋ ಎಂದು ಕೇಳುವುದು. ಒಂದುವೇಳೆ ಅಂಗಡಿಯವನು ದೇಶದಲ್ಲಿ ಏನು ನಡೆಯುತ್ತಿದೆಯೋ ಆ ವಿಷಯದಲ್ಲಿ ವಿಷಾದವನ್ನು ವ್ಯಕ್ತಪಡಿಸುವುದಾದರೆ, ನಾನು ಅವನಿಗೆ ರಾಜ್ಯ ಸಂದೇಶವನ್ನು ತಿಳಿಸುತ್ತಿದ್ದೆ. ಈ ವಿಧಾನವು ತುಂಬ ಪರಿಣಾಮಕಾರಿಯಾಗಿತ್ತು. ಕೆಲವೊಮ್ಮೆ ನಾನು ಆ ಅಂಗಡಿಯನ್ನು ಬಿಟ್ಟುಹೋಗುವಾಗ ಒಂದು ಪುನರ್ಭೇಟಿಯನ್ನು ಮಾಡುವ ಏರ್ಪಾಡನ್ನು ಮಾಡಿರುತ್ತಿದ್ದೆ ಮಾತ್ರವಲ್ಲ, ಸ್ವಲ್ಪ ಪ್ರಮಾಣದಲ್ಲಿ ಅಪರೂಪದ ದಿನಸಿಯನ್ನೂ ನನ್ನೊಂದಿಗೆ ತೆಗೆದುಕೊಂಡುಹೋಗುತ್ತಿದ್ದೆ.

ಈಮಧ್ಯೆ ನಾಲ್ಕೂ ಕಡೆಗಳಲ್ಲಿ ಹಿಂಸಾಚಾರವು ಆರಂಭವಾಗಿತ್ತು. ಯುಗಾಂಡ ಮತ್ತು ಬ್ರಿಟನ್‌ನ ನಡುವಣ ಸಂಬಂಧವು ಇನ್ನಷ್ಟು ಹದಗೆಟ್ಟದ್ದರ ಕಾರಣ ಸ್ಥಳಿಕ ಅಧಿಕಾರಿಗಳು ನನ್ನ ಕೆಲಸದ ಕಾಂಟ್ರ್ಯಾಕ್ಟನ್ನು ನವೀಕರಿಸಲಿಲ್ಲ. ಆದುದರಿಂದ, ಯುಗಾಂಡದಲ್ಲಿ ಎಂಟು ವರ್ಷಗಳನ್ನು ಕಳೆದ ಬಳಿಕ ಅಂದರೆ 1974ರಲ್ಲಿ ಅಲ್ಲಿನ ನಮ್ಮ ಸಹೋದರರಿಗೆ ವಿದಾಯ ಹೇಳುವ ಸರದಿಯು ನಮ್ಮದಾಗಿತ್ತು. ಆದರೂ, ನಮ್ಮ ಮಿಷನೆರಿ ಮನೋಭಾವವು ಸ್ವಲ್ಪವೂ ಕಡಿಮೆಯಾಗಲಿಲ್ಲ.

ನ್ಯೂ ಗಿನೀಗೆ ಸ್ಥಳಾಂತರಿಸಿದ್ದು

ಇಸವಿ 1975ರ ಜನವರಿ ತಿಂಗಳಿನಲ್ಲಿ, ಪ್ಯಾಪುವ ನ್ಯೂ ಗಿನೀಯಲ್ಲಿ ಕೆಲಸಮಾಡುವ ಸದವಕಾಶವನ್ನು ನಾವು ಉಪಯೋಗಿಸಿಕೊಂಡೆವು. ಈ ರೀತಿಯಲ್ಲಿ ಪೆಸಿಫಿಕ್‌ನ ಈ ಭಾಗದಲ್ಲಿ ಸಂತೋಷಭರಿತ ಸೇವೆಯ ಎಂಟು ವರ್ಷಗಳು ಆರಂಭವಾದವು. ಸಹೋದರರೊಂದಿಗಿನ ಮತ್ತು ಕ್ಷೇತ್ರ ಸೇವೆಯಲ್ಲಿನ ನಮ್ಮ ಜೀವನವು ತುಂಬ ಅರ್ಥಭರಿತವಾಗಿತ್ತು ಹಾಗೂ ಪ್ರತಿಫಲದಾಯಕವಾಗಿತ್ತು.

ಪ್ಯಾಪುವ ನ್ಯೂ ಗಿನೀಯಲ್ಲಿ ನಾವು ಉಳಿದುಕೊಂಡಿದ್ದ ಸಮಯವನ್ನು ನಮ್ಮ ಕುಟುಂಬವು ಡ್ರಾಮಾಗಳ ಕಾಲಾವಧಿಯಾಗಿ ಜ್ಞಾಪಿಸಿಕೊಳ್ಳುತ್ತದೆ. ಏಕೆಂದರೆ ಅಲ್ಲಿದ್ದಾಗ ನಾವು ಬೈಬಲ್‌ ಡ್ರಾಮಾಗಳಲ್ಲಿ ಒಳಗೂಡಿದ್ದೆವು. ಪ್ರತಿ ವರ್ಷ ಜಿಲ್ಲಾ ಅಧಿವೇಶನಕ್ಕಾಗಿರುವ ಡ್ರಾಮಾಗಳನ್ನು ಸಿದ್ಧಪಡಿಸುವುದರಲ್ಲಿ ನಾವು ಒಳಗೂಡಿರುತ್ತಿದ್ದೆವು ಮತ್ತು ಆಗೆಲ್ಲಾ ಎಷ್ಟು ಆನಂದಿಸುತ್ತಿದ್ದೆವು! ಆತ್ಮಿಕ ಮನೋಭಾವವುಳ್ಳ ಅನೇಕ ಕುಟುಂಬಗಳೊಂದಿಗಿನ ಸಹವಾಸದಲ್ಲಿ ನಾವು ಆನಂದಿಸಿದೆವು ಮತ್ತು ಇವು ನಮ್ಮ ಹುಡುಗಿಯರ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿದವು. ನಮ್ಮ ಹಿರಿಯ ಮಗಳಾದ ಸೇರಳು ಒಬ್ಬ ವಿಶೇಷ ಪಯನೀಯರನಾಗಿದ್ದ ರೇ ಸ್ಮಿತ್‌ನನ್ನು ಮದುವೆಯಾದಳು ಮತ್ತು ಇರೀಯಾನ್‌ ಜಾಯ (ಈಗ ಪ್ಯಾಪುವ, ಇಂಡೋನೇಷಿಯದ ಒಂದು ಪ್ರಾಂತ)ದ ಗಡಿಯ ಬಳಿ ಇವರಿಬ್ಬರೂ ಒಟ್ಟಿಗೆ ವಿಶೇಷ ಪಯನೀಯರರಾಗಿ ಸೇವೆಮಾಡಿದರು. ಸ್ಥಳಿಕ ಹಳ್ಳಿಯಲ್ಲಿದ್ದ ಹುಲ್ಲಿನ ಗುಡಿಸಿಲೇ ಅವರ ಮನೆಯಾಗಿತ್ತು, ಮತ್ತು ಈ ನೇಮಕದಲ್ಲಿ ತಾನು ಕಳೆದ ಸಮಯವು ತನಗೆ ಅತ್ಯುತ್ತಮ ತರಬೇತಿಯನ್ನು ನೀಡಿದೆ ಎಂದು ಸೇರ ಹೇಳುತ್ತಾಳೆ.

ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು

ಈ ಸಮಯದಷ್ಟಕ್ಕೆ ನನ್ನ ಹೆತ್ತವರಿಗೆ ಹೆಚ್ಚಿನ ಆರೈಕೆಯ ಅಗತ್ಯವಿತ್ತು. ನಮ್ಮನ್ನು ಇಂಗ್ಲೆಂಡ್‌ಗೆ ಹಿಂದಿರುಗಿ ಬರುವಂತೆ ಕೇಳಿಕೊಳ್ಳುವುದಕ್ಕೆ ಬದಲಾಗಿ ಅವರೇ ನಮ್ಮೊಂದಿಗೆ ಇರಲು ಒಪ್ಪಿಕೊಂಡರು ಮತ್ತು 1983ರಲ್ಲಿ ನಾವೆಲ್ಲರೂ ಆಸ್ಟ್ರೇಲಿಯಕ್ಕೆ ಸ್ಥಳಾಂತರಿಸಿದೆವು. ಆ ಸಮಯದಲ್ಲಿ ಜಪಾನಿನಲ್ಲೇ ಇದ್ದ ನನ್ನ ಅಕ್ಕ ಡ್ಯಾಫ್ನೀಯೊಂದಿಗೂ ಅವರು ಸ್ವಲ್ಪ ಸಮಯ ಉಳಿದಿದ್ದರು. ನನ್ನ ಹೆತ್ತವರ ಮರಣಾನಂತರ, ನಾನು ಮತ್ತು ಆ್ಯನ್‌ ಇಬ್ಬರೂ ರೆಗ್ಯುಲರ್‌ ಪಯನೀಯರ್‌ ಸೇವೆಯನ್ನು ಪ್ರವೇಶಿಸಲು ನಿರ್ಧರಿಸಿದೆವು. ಮತ್ತು ಇದು ನನಗೆ ತುಂಬ ಪಂಥಾಹ್ವಾನದಾಯಕವಾಗಿ ಕಂಡುಬಂದಂಥ ಒಂದು ವಿಶೇಷ ಸೇವಾ ಸುಯೋಗಕ್ಕೆ ನಡಿಸಿತು.

ಆಗಷ್ಟೇ ನಾವು ಪಯನೀಯರ್‌ ಸೇವೆಯನ್ನು ಆರಂಭಿಸಿದ್ದೆವು, ಇಷ್ಟರಲ್ಲೇ ನಮಗೆ ಸರ್ಕಿಟ್‌ ಕೆಲಸದಲ್ಲಿ ಸೇವೆಮಾಡುವ ಆಮಂತ್ರಣ ಸಿಕ್ಕಿತು. ಬಾಲ್ಯದಿಂದಲೂ ನಾನು ಸರ್ಕಿಟ್‌ ಮೇಲ್ವಿಚಾರಕರ ಭೇಟಿಯನ್ನು ಒಂದು ವಿಶೇಷ ಘಟನೆಯಾಗಿ ಪರಿಗಣಿಸುತ್ತಿದ್ದೆ. ಆದರೆ ಈಗ ಈ ಜವಾಬ್ದಾರಿಯು ನನಗೆ ವಹಿಸಿಕೊಡಲ್ಪಟ್ಟಿತ್ತು. ನಮ್ಮ ಜೀವಿತದಲ್ಲಿ ಇಷ್ಟರ ತನಕ ನಾವು ಆನಂದಿಸಿದ್ದ ನೇಮಕಗಳಲ್ಲಿ ಈ ಸರ್ಕಿಟ್‌ ಕೆಲಸವೇ ಅತ್ಯಂತ ಕಷ್ಟಕರ ನೇಮಕವಾಗಿತ್ತಾದರೂ, ಈ ಮುಂಚೆ ನಾವೆಂದೂ ಅನುಭವಿಸಿರದಿದ್ದಂಥ ವಿಧಗಳಲ್ಲಿ ಯೆಹೋವನು ಅನೇಕಬಾರಿ ನಮಗೆ ಸಹಾಯಮಾಡಿದನು.

ಇಸವಿ 1990ರಲ್ಲಿ ಸಹೋದರ ಥಿಯೊಡರ್‌ ಜಾರಸ್‌ ಅವರು ಆಸ್ಟ್ರೇಲಿಯಕ್ಕೆ ಭೇಟಿ ನೀಡಿದಾಗ, ವಿದೇಶದಲ್ಲಿ ಪೂರ್ಣ ಸಮಯದ ಸೇವೆಯನ್ನು ಮಾಡಲು ಸಾಧ್ಯವಿಲ್ಲದಿರುವಷ್ಟರ ಮಟ್ಟಿಗೆ ನಾವು ವೃದ್ಧರಾಗಿದ್ದೇವೆ ಎಂದು ನಿಮಗನಿಸುತ್ತದೋ ಎಂದು ನಾವು ಅವರನ್ನು ಕೇಳಿದೆವು. ಅವರು ಹೇಳಿದ್ದು: “ಸಾಲೊಮನ್‌ ಐಲೆಂಡ್ಸ್‌ಗೆ ಹೋಗಬಲ್ಲಿರೋ?” ಹೀಗೆ, ನಾನು ಮತ್ತು ಆ್ಯನ್‌ ನಮ್ಮ 50ಗಳ ಪ್ರಾಯದಲ್ಲಿದ್ದಾಗ, ಯಾವುದು ನಮ್ಮ ಪ್ರಥಮ ಅಧಿಕೃತ ಮಿಷನೆರಿ ನೇಮಕವಾಗಿ ಪರಿಣಮಿಸಲಿತ್ತೋ ಆ ಸ್ಥಳಕ್ಕೆ ಪ್ರಯಾಣಿಸಿದೆವು.

“ಹ್ಯಾಪಿ ಐಲ್ಸ್‌”ನಲ್ಲಿ ಸೇವೆಮಾಡುವುದು

ಸಾಲೊಮನ್‌ ಐಲೆಂಡ್ಸ್‌ ಸ್ಥಳವು ಹ್ಯಾಪಿ ಐಲ್ಸ್‌ ಎಂದೂ ಪ್ರಖ್ಯಾತವಾಗಿದೆ, ಮತ್ತು ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ನಾವು ಇಲ್ಲಿ ಮಾಡಿರುವ ಸೇವೆಯು ನಿಜವಾಗಿಯೂ ಒಂದು ಸಂತೋಷಭರಿತ ಸಮಯವಾಗಿದೆ. ನಾನು ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಮಾಡುತ್ತಿರುವಾಗ, ನನಗೂ ಆ್ಯನ್‌ಳಿಗೂ ಸಾಲೊಮನ್‌ ಐಲೆಂಡ್ಸ್‌ನಲ್ಲಿರುವ ಸಹೋದರ ಸಹೋದರಿಯರ ಕೋಮಲವಾದ ದಯಾಪರ ಮನೋಭಾವದ ಪರಿಚಯವಾಯಿತು. ನಮಗೆ ತೋರಿಸಲ್ಪಟ್ಟ ಅತಿಥಿ ಸತ್ಕಾರವು ನಮ್ಮ ಹೃದಯಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಮತ್ತು ಯಾವುದು ಸ್ವೀಕಾರಾರ್ಹವಾದ ನ್ಯೂ ಗಿನಿ ಪಿಜಿನ್‌ ಎಂದು ನಾನು ಭಾವಿಸಿದ್ದೆನೋ ಆ ಭಾಷೆಯಲ್ಲಿ ವಿಷಯಗಳನ್ನು ವಿವರಿಸಲು ನಾನು ಮಾಡಿದ ಪ್ರಯತ್ನಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡರು. ಏಕೆಂದರೆ ಜಗತ್ತಿನಲ್ಲೇ ಇರುವ ಎಲ್ಲಾ ಭಾಷೆಗಳಲ್ಲಿ ಅತಿ ಕಡಿಮೆ ಶಬ್ದಭಂಡಾರವಿರುವುದು ಈ ಭಾಷೆಯಲ್ಲಿಯೇ.

ನಾವು ಸಾಲೊಮನ್‌ ಐಲೆಂಡ್ಸ್‌ಗೆ ಆಗಮಿಸಿದ ಕೂಡಲೆ, ವಿರೋಧಿಗಳು ನಮ್ಮ ಅಸೆಂಬ್ಲಿ ಹಾಲ್‌ನ ಉಪಯೋಗದ ವಿಷಯದಲ್ಲಿ ತಲೆಹಾಕಲು ಪ್ರಯತ್ನಿಸಿದರು. ಹೋನೀಯಾರದಲ್ಲಿರುವ ನಮ್ಮ ಹೊಸ ಅಸೆಂಬ್ಲಿ ಹಾಲ್‌ ಅನ್ನು ಸ್ವಲ್ಪಮಟ್ಟಿಗೆ ತಮ್ಮ ಜಮೀನಿನಲ್ಲಿ ಕಟ್ಟಲಾಗಿದೆ ಎಂದು ಪ್ರತಿಪಾದಿಸುತ್ತಾ, ಆ್ಯಂಗ್ಲಿಕನ್‌ ಚರ್ಚು ಯೆಹೋವನ ಸಾಕ್ಷಿಗಳ ವಿರುದ್ಧ ದಾವೆಹೂಡಿತು. ಅಲ್ಲಿನ ಸರಕಾರವು ಅವರ ವಾದವನ್ನು ಅನುಮೋದಿಸಿತು, ಆದುದರಿಂದ ನಾವು ಆ ನಿರ್ಣಯವನ್ನು ಉಚ್ಚ ನ್ಯಾಯಾಲಯಕ್ಕೆ ಅಪೀಲುಮಾಡಿದೆವು. ಈ ಅಪೀಲಿನ ಪರಿಣಾಮವು, 1,200 ಮಂದಿ ಕುಳಿತುಕೊಳ್ಳುವ ಸೌಲಭ್ಯವಿರುವ ನಮ್ಮ ಹೊಸ ಅಸೆಂಬ್ಲಿ ಹಾಲ್‌ ಅನ್ನು ಕೆಡವಿಹಾಕಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸಲಿತ್ತು.

ನ್ಯಾಯಾಲಯವು ಇಡೀ ವಾರ ಈ ಮೊಕದ್ದಮೆಯನ್ನೇ ಪರಿಗಣಿಸಿತು. ನಮ್ಮ ವಿರುದ್ಧ ಮೊಕದ್ದಮೆಯು ಪ್ರಸ್ತುತಪಡಿಸಲ್ಪಡುತ್ತಿರುವಾಗ ವಿರುದ್ಧ ಪಕ್ಷದ ವಕೀಲನೊಬ್ಬನು ಅಹಂಕಾರದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದನು. ತದನಂತರ, ನ್ಯೂ ಸೀಲೆಂಡ್‌ನಿಂದ ಬಂದಿದ್ದ ಸಹೋದರ ವಾರನ್‌ ಕಾಥ್‌ಕರ್ಟ್‌ ಎಂಬ ನಮ್ಮ ವಕೀಲರು ಒಂದಾದ ಬಳಿಕ ಇನ್ನೊಂದರಂತೆ ವಾಗ್ವಾದಗಳನ್ನು ಉಪಯೋಗಿಸುತ್ತಾ, ವಿರೋಧಿಗಳ ಮೊಕದ್ದಮೆಯ ಪ್ರತಿಯೊಂದು ಭಾಗವನ್ನು ಬಯಲುಪಡಿಸಿ, ಎಲ್ಲ ಆಕ್ಷೇಪಗಳನ್ನು ನಿರರ್ಥಕಗೊಳಿಸಿದರು. ಶುಕ್ರವಾರದಷ್ಟಕ್ಕೆ, ನ್ಯಾಯಾಲಯದ ವಿಚಾರಣೆಯ ಕುರಿತಾದ ಸುದ್ದಿಯು ಎಲ್ಲಾ ಕಡೆಗಳಲ್ಲಿ ಹಬ್ಬಿತ್ತು, ಮತ್ತು ನ್ಯಾಯಾಲಯವು ಚರ್ಚ್‌ ವೈದಿಕರಿಂದ, ಸರಕಾರಿ ಅಧಿಕಾರಿಗಳಿಂದ ಮತ್ತು ನಮ್ಮ ಕ್ರೈಸ್ತ ಸಹೋದರರಿಂದ ತುಂಬಿಹೋಗಿತ್ತು. ಅಧಿಕೃತ ಕೋರ್ಟ್‌ ಕಾರ್ಯತಖ್ತೆಯ ನೋಟೀಸಿನ ಮೇಲಿದ್ದ ತಪ್ಪು ನನಗೆ ಈಗಲೂ ನೆನಪಿದೆ. ಅದರಲ್ಲಿ ಹೀಗೆ ನಮೂದಿಸಲಾಗಿತ್ತು: “ಯೆಹೋವನಿಗೆ ವಿರುದ್ಧವಾಗಿ ಸಾಲೊಮನ್‌ ಐಲೆಂಡ್ಸ್‌ ಸರಕಾರ ಮತ್ತು ಮೆಲನೇಷ್ಯದ ಚರ್ಚ್‌.” ಈ ಕೇಸ್‌ನಲ್ಲಿ ನಾವೇ ವಿಜೇತರಾದೆವು.

ಆದರೂ, ಹ್ಯಾಪಿ ಐಲ್ಸ್‌ನ ತುಲನಾತ್ಮಕ ಶಾಂತಿಯು ಹೆಚ್ಚು ಕಾಲ ಉಳಿಯಲಿಕ್ಕಿರಲಿಲ್ಲ. ಇದ್ದಕ್ಕಿದ್ದಂತೆ ಮಿಲಿಟರಿ ವ್ಯವಸ್ಥೆಯಲ್ಲಿ ಉಂಟಾದ ದಿಢೀರ್‌ ಬದಲಾವಣೆಯಿಂದಾಗಿ ಪುನಃ ಒಮ್ಮೆ ನಾನು ಮತ್ತು ಆ್ಯನ್‌ ಇಬ್ಬರೂ ಕ್ಷೋಭೆ ಮತ್ತು ಹಿಂಸಾಚಾರದ ನಡುವೆ ಸಿಕ್ಕಿಬಿದ್ದೆವು. ಕುಲಸಂಬಂಧಿತ ವೈರತ್ವವು ಆಂತರಿಕ ಯುದ್ಧಕ್ಕೆ ಕಾರಣವಾಯಿತು. 2000ದ ಜೂನ್‌ 5ರಂದು, ಸರಕಾರವು ಉರುಳಿಸಲ್ಪಟ್ಟಿತು ಮತ್ತು ಅದರ ರಾಜಧಾನಿಯು ಶಸ್ತ್ರಸಜ್ಜಿತ ಉಗ್ರಗಾಮಿಗಳ ನಿಯಂತ್ರಣದ ಕೆಳಗೆ ಬಂತು. ಕೆಲವು ವಾರಗಳ ವರೆಗೆ ನಮ್ಮ ಅಸೆಂಬ್ಲಿ ಹಾಲ್‌ ಮನೆಮಠವಿಲ್ಲದ ವ್ಯಕ್ತಿಗಳಿಗಾಗಿರುವ ಒಂದು ಕೇಂದ್ರವಾಗಿ ಪರಿಣಮಿಸಿತು. ವಿರೋಧ ಪಕ್ಷದ ಕುಲಸಂಬಂಧಿತ ಗುಂಪುಗಳಿಂದ ಬಂದ ನಮ್ಮ ಕ್ರೈಸ್ತ ಸಹೋದರರು, ಅಸೆಂಬ್ಲಿ ಹಾಲ್‌ನಲ್ಲಿ ಒಂದು ಐಕ್ಯ ಶಾಂತಿಭರಿತ ಕುಟುಂಬವಾಗಿ ಒಟ್ಟಿಗೆ ವಾಸಿಸುತ್ತಿರುವುದನ್ನು ನೋಡಿ ಅಧಿಕಾರಿಗಳು ಅತ್ಯಾಶ್ಚರ್ಯಪಟ್ಟರು. ಇದು ಎಷ್ಟು ಅತ್ಯುತ್ತಮ ಸಾಕ್ಷ್ಯವಾಗಿ ಪರಿಣಮಿಸಿತು!

ಉಗ್ರಗಾಮಿಗಳು ಸಹ ಯೆಹೋವನ ಸಾಕ್ಷಿಗಳ ತಾಟಸ್ಥ್ಯವನ್ನು ಗೌರವಿಸಿದರು. ಇದರಿಂದಾಗಿ, ವಿರೋಧಿ ಸೇನೆಗಳಿಂದ ನಿಯಂತ್ರಿಸಲ್ಪಟ್ಟಿದ್ದ ಕ್ಷೇತ್ರದಲ್ಲಿ ಸಿಕ್ಕಿಕೊಂಡಿದ್ದ ಸಹೋದರರ ಒಂದು ಚಿಕ್ಕ ಗುಂಪಿಗೆ ಸಾಹಿತ್ಯ ಹಾಗೂ ಇತರ ಸರಬರಾಯಿಗಳಿದ್ದ ಒಂದು ಟ್ರಕ್ಕನ್ನು ಕಳುಹಿಸಲು ಅನುಮತಿ ನೀಡುವಂತೆ ಕಮ್ಯಾಂಡರ್‌ಗಳಲ್ಲಿ ಒಬ್ಬರನ್ನು ಒಡಂಬಡಿಸಲು ಸಾಧ್ಯವಾಯಿತು. ಕೆಲವು ತಿಂಗಳುಗಳ ವರೆಗೆ ನಮ್ಮಿಂದ ಪ್ರತ್ಯೇಕಿಸಲ್ಪಟ್ಟಿದ್ದ ಕುಟುಂಬಗಳನ್ನು ನಾವು ಪುನಃ ಕಂಡುಕೊಂಡಾಗ, ನಮ್ಮ ಕಣ್ಣುಗಳು ಆನಂದಬಾಷ್ಪವನ್ನು ಸುರಿಸಿದವು.

ಎಲ್ಲದಕ್ಕಾಗಿ ಕೃತಜ್ಞರು

ಯೆಹೋವನ ಸೇವೆಯಲ್ಲಿ ನಾವು ಕಳೆದಿರುವ ಜೀವನದ ಕುರಿತು ಮನನಮಾಡುವಾಗ, ಅನೇಕ ವಿಷಯಗಳಿಗಾಗಿ ನಾವು ಕೃತಜ್ಞತೆಯನ್ನು ಸಲ್ಲಿಸಬೇಕಾಗಿದೆ. ಹೆತ್ತವರೋಪಾದಿ ನಾವು, ನಮ್ಮ ಮಕ್ಕಳು ಮತ್ತು ಅವರ ಗಂಡಂದಿರಾದ ರೇ ಹಾಗೂ ಜಾನ್‌ರು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಾ ಮುಂದುವರಿಯುತ್ತಿರುವುದನ್ನು ನೋಡುವ ಆಶೀರ್ವಾದ ಲಭಿಸಿದೆ. ನಮ್ಮ ಮಿಷನೆರಿ ನೇಮಕದಲ್ಲಿ ಅವರು ನಿಜ ಬೆಂಬಲವಾಗಿ ಪರಿಣಮಿಸಿದ್ದಾರೆ.

ಕಳೆದ 12 ವರ್ಷಗಳಿಂದ ನನಗೆ ಮತ್ತು ಆ್ಯನ್‌ಳಿಗೆ ಸಾಲೊಮನ್‌ ಐಲೆಂಡ್ಸ್‌ ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡುವ ಸುಯೋಗ ದೊರಕಿದೆ. ಮತ್ತು ಈ ಸಮಯಾವಧಿಯಲ್ಲಿ ಸಾಲೊಮನ್‌ ಐಲೆಂಡ್ಸ್‌ನಲ್ಲಿರುವ ರಾಜ್ಯ ಘೋಷಕರ ಸಂಖ್ಯೆಯು ದ್ವಿಗುಣಗೊಂಡು, 1,800ಕ್ಕಿಂತಲೂ ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ. ಇತ್ತೀಚೆಗೆ, ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿ ಬ್ರಾಂಚ್‌ ಕಮಿಟಿ ಸದಸ್ಯರಿಗಾಗಿ ಏರ್ಪಡಿಸಲ್ಪಟ್ಟಿದ್ದ ಸ್ಕೂಲ್‌ಗೆ ಹಾಜರಾಗುವ ಹೆಚ್ಚಿನ ಸುಯೋಗವನ್ನೂ ನಾನು ಪಡೆದುಕೊಂಡೆ. ನಾವು ಮಿಷನೆರಿ ಮನೋಭಾವವನ್ನು ಕಾಪಾಡಿಕೊಂಡದ್ದಕ್ಕಾಗಿ ಅನೇಕ ಆಶೀರ್ವಾದಗಳಿಂದ ಕೂಡಿರುವ ಸಮೃದ್ಧ ಜೀವನವನ್ನು ಇಷ್ಟರ ತನಕ ಆನಂದಿಸಿದ್ದೇವೆ ಎಂಬುದಂತೂ ಸತ್ಯ.

[ಪಾದಟಿಪ್ಪಣಿ]

^ ಪ್ಯಾರ. 10 ಜನವರಿ 15, 1977ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿರುವ “ನಾವು ಕಾಲಹರಣಮಾಡಲಿಲ್ಲ” ಎಂಬ ಲೇಖನವನ್ನು ನೋಡಿ.

[ಪುಟ 23ರಲ್ಲಿರುವ ಚಿತ್ರ]

1960ರಲ್ಲಿ ನಮ್ಮ ಮದುವೆಯ ದಿನದಂದು

[ಪುಟ 24ರಲ್ಲಿರುವ ಚಿತ್ರ]

ಯುಗಾಂಡದಲ್ಲಿ, ಸ್ಟ್ಯಾನ್ಲೀ ಮತ್ತು ಅಸೀನಾಲಾ ಮಾಕೂಂಬಾರವರು ನಮ್ಮ ಕುಟುಂಬಕ್ಕೆ ಉತ್ತೇಜನದ ಮೂಲವಾಗಿದ್ದರು

[ಪುಟ 24ರಲ್ಲಿರುವ ಚಿತ್ರ]

ನೆರೆಯವರ ಗುಡಿಸಿಲನ್ನು ಪ್ರವೇಶಿಸುತ್ತಿರುವ ಸೇರ

[ಪುಟ 25ರಲ್ಲಿರುವ ಚಿತ್ರ]

ಸಾಲೊಮನ್‌ ಐಲೆಂಡ್ಸ್‌ನ ನಿವಾಸಿಗಳಿಗೆ ಸತ್ಯವನ್ನು ಕಲಿಸಲು ಚಿತ್ರಗಳನ್ನು ಬಿಡಿಸುವುದು ನನಗೆ ಸಹಾಯಮಾಡಿತು

[ಪುಟ 25ರಲ್ಲಿರುವ ಚಿತ್ರ]

ಸಾಲೊಮನ್‌ ಐಲೆಂಡ್ಸ್‌ನಲ್ಲಿರುವ ಒಂದು ಪ್ರತ್ಯೇಕ ಸಭೆಯೊಂದಿಗಿನ ಭೇಟಿ

[ಪುಟ 26ರಲ್ಲಿರುವ ಚಿತ್ರ]

ಇಂದು ನಮ್ಮ ಕುಟುಂಬ