ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುದ್ಧಕ್ಕೆ ಅಂತ್ಯ

ಯುದ್ಧಕ್ಕೆ ಅಂತ್ಯ

ಯುದ್ಧಕ್ಕೆ ಅಂತ್ಯ

‘ನಾವು ಕೇವಲ 12 ವರ್ಷ ಪ್ರಾಯದವರಾಗಿದ್ದೇವೆ. ನಾವು ರಾಜಕೀಯವನ್ನು ಮತ್ತು ಯುದ್ಧವನ್ನು ಪ್ರಭಾವಿಸಲಾರೆವು, ಆದರೆ ನಾವು ಜೀವಿಸಲು ಬಯಸುತ್ತೇವೆ! ನಾವು ಶಾಂತಿಗಾಗಿ ಕಾದಿದ್ದೇವೆ. ಅದು ನಾವು ಜೀವಂತವಾಗಿರುವಾಗಲೇ ಬರುವುದೋ?’​—⁠ಐದನೆಯ ತರಗತಿಯ ಶಾಲಾಮಕ್ಕಳ ಒಂದು ಗುಂಪು.

‘ಅಪಹರಿಸಲ್ಪಡುವ ಭಯವಿಲ್ಲದೆ ಶಾಲೆಗೆ ಹೋಗಲು, ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿಮಾಡಲು ನಾವು ಬಯಸುತ್ತೇವೆ. ಸರಕಾರವು ಇದಕ್ಕೆ ಕಿವಿಗೊಡುವುದು ಎಂದು ನಂಬುತ್ತೇನೆ. ನಮಗೆ ಉತ್ತಮವಾದ ಜೀವನವು ಬೇಕಾಗಿದೆ. ನಮಗೆ ಶಾಂತಿಯು ಬೇಕಾಗಿದೆ.’​—⁠ಆಲ್‌ಹಾಜೀ, ವಯಸ್ಸು 14.

ಈ ಮನಸ್ಪರ್ಶಿಸುವ ಮಾತುಗಳು, ಆಂತರಿಕ ಕಲಹದಿಂದಾಗಿ ಹಲವಾರು ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಯುವ ಜನರ ಹೃತ್ಪೂರ್ವಕ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತವೆ. ಅವರು ಬಯಸುವುದೆಲ್ಲವೂ ಒಂದು ಸಹಜವಾದ ಜೀವನವನ್ನು ಮಾತ್ರವೇ. ಆದರೆ ನಿರೀಕ್ಷೆಗಳನ್ನು ನೈಜವಾಗಿಸುವುದು ಸುಲಭದ ಸಂಗತಿಯೇನಲ್ಲ. ನಾವು ಜೀವಂತವಾಗಿರುವಾಗಲೇ ಯುದ್ಧವಿಲ್ಲದ ಒಂದು ಲೋಕವನ್ನು ನಮ್ಮಿಂದ ನೋಡಲು ಸಾಧ್ಯವಾದೀತೆ?

ಇತ್ತೀಚಿನ ವರ್ಷಗಳಲ್ಲಿ, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರತಿಭಟನಾ ಪಕ್ಷಗಳನ್ನು ನಿರ್ಬಂಧಿಸುವ ಮೂಲಕ ಕೆಲವು ಆಂತರಿಕ ಯುದ್ಧಗಳನ್ನು ಕೊನೆಗಾಣಿಸಲು ಅಂತಾರಾಷ್ಟ್ರೀಯ ಕ್ರಮಗಳು ಕೈಕೊಳ್ಳಲ್ಪಟ್ಟಿವೆ. ಈ ರೀತಿಯ ಒಪ್ಪಂದಗಳನ್ನು ಕಾರ್ಯರೂಪಕ್ಕೆ ಹಾಕುವಂತಾಗಲು ಕೆಲವು ದೇಶಗಳು ಶಾಂತಿ ಪಡೆಗಳನ್ನು ಕಳುಹಿಸಿಕೊಟ್ಟಿವೆ. ಆದರೆ ಆಳವಾಗಿ ಬೇರೂರಿರುವ ದ್ವೇಷ ಮತ್ತು ಶಂಕೆಯ ಕಾರಣ ಹೋರಾಡುತ್ತಿರುವ ಪಕ್ಷಗಳ ಮಧ್ಯೆ ಯಾವುದೇ ಒಪ್ಪಂದವನ್ನು ತೀರ ಅಸಂಭಾವ್ಯಗೊಳಿಸುವ ದೂರ ದೇಶಗಳ ಉಸ್ತುವಾರಿ ನಡೆಸಲು ಕೇವಲ ಕೆಲವು ದೇಶಗಳಲ್ಲಿ ಮಾತ್ರ ಹಣವಾಗಲಿ ಬಯಕೆಯಾಗಲಿ ಇದೆ. ಆಗಿಂದಾಗ್ಗೆ, ಕದನ ವಿರಾಮ ಒಪ್ಪಂದವು ಮಾಡಲ್ಪಟ್ಟ ಕೆಲವು ವಾರ ಅಥವಾ ತಿಂಗಳುಗಳಲ್ಲೇ ಕದನಗಳ ಜ್ವಾಲೆಯು ಪುನಃ ಹೊತ್ತಿ ಉರಿಯಲು ಆರಂಭಿಸುತ್ತದೆ. ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಘವು ಸೂಚಿಸುವಂತೆ, “ಯೋಧರಲ್ಲಿ ಹೋರಾಡುವ ಬಯಕೆ ಮತ್ತು ಸಾಮರ್ಥ್ಯ ಇರುವಾಗ ಶಾಂತಿಯನ್ನು ಸ್ಥಾಪಿಸುವುದು ಕಷ್ಟಕರ.”

ಆದರೆ ಅದೇ ಸಮಯದಲ್ಲಿ, ಲೋಕದ ಹಲವೆಡೆ ಪೀಡೆಯನ್ನುಂಟುಮಾಡುತ್ತಿರುವ ಈ ಬಗೆಹರಿಸಲಾಗದ ಕದನಗಳು ಕ್ರೈಸ್ತರಿಗೆ ಒಂದು ಬೈಬಲ್‌ ಪ್ರವಾದನೆಯನ್ನು ಜ್ಞಾಪಕಕ್ಕೆ ತರುತ್ತವೆ. ಇತಿಹಾಸದ ಒಂದು ಕಠಿನಕರ ಅವಧಿಯಲ್ಲಿ “ಭೂಮಿಯಿಂದ ಸಮಾಧಾನವನ್ನು ತೆಗೆದುಬಿಡುವ” ಒಬ್ಬ ಸಾಂಕೇತಿಕ ಕುದುರೆಸವಾರನ ಕುರಿತಾಗಿ ಪ್ರಕಟನೆ ಪುಸ್ತಕವು ತಿಳಿಸುತ್ತದೆ. (ಪ್ರಕಟನೆ 6:4) ಮುಂತಿಳಿಸಲ್ಪಟ್ಟ ಈ ರೀತಿಯ ಮುಂದುವರಿಯುವ ಯುದ್ಧ ಪ್ರಕರಣಗಳು, ಬೈಬಲ್‌ ಯಾವುದನ್ನು ‘ಕಡೇ ದಿವಸಗಳು’ ಎಂದು ವರ್ಣಿಸುತ್ತದೋ ಆ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ಸೂಚಿಸುವ ಸಂಘಟಿತ ಸೂಚನೆಯ ಭಾಗವಾಗಿವೆ. * (2 ತಿಮೊಥೆಯ 3:1) ಆದರೂ, ಶಾಂತಿಯು ಬರುವುದೆಂಬುದಕ್ಕೆ ಈ ಕಡೇ ದಿವಸಗಳು ಮುನ್ಸೂಚನೆಯಾಗಿವೆ ಎಂದು ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ.

ನಿಜ ಶಾಂತಿಯು ಸ್ಥಾಪಿಸಲ್ಪಡಬೇಕಾದರೆ, ಭೂಗೋಳದ ಒಂದು ಪ್ರದೇಶದಲ್ಲಿ ಮಾತ್ರವಲ್ಲ, ಇಡೀ ಲೋಕದಿಂದಲೇ ಯುದ್ಧವು ಕಾಣೆಯಾಗಬೇಕೆಂದು ಬೈಬಲು ಕೀರ್ತನೆ 46:9ರಲ್ಲಿ ತಿಳಿಸುತ್ತದೆ. ಮಾತ್ರವಲ್ಲದೆ, ಬೈಬಲ್‌ ಸಮಯಗಳ ಆಯುಧಗಳಾದ ಬಿಲ್ಲುಗಳು, ಭಲ್ಲೆಯಗಳು, ಮತ್ತು ರಥಗಳ ನಾಶನದ ಕುರಿತಾಗಿ ಇದೇ ಕೀರ್ತನೆಯು ನಿರ್ದಿಷ್ಟವಾಗಿ ತಿಳಿಸುತ್ತದೆ. ಆದಕಾರಣ, ಮಾನವಕುಲವು ಎಂದಾದರೂ ಶಾಂತಿಯಿಂದ ಜೀವಿಸಬೇಕಾದರೆ ಇಂದು ಅಪರಿಮಿತವಾಗಿ ಉತ್ಪಾದಿಸಲ್ಪಡುತ್ತಿರುವ ಆಯುಧಗಳನ್ನು ಸಹ ನಾಶಮಾಡಬೇಕು.

ವಾಸ್ತವದಲ್ಲಿಯಾದರೋ, ಯುದ್ಧಗಳ ಜ್ವಾಲೆಗಳಿಗೆ ತುಪ್ಪ ಸುರಿಯುವುದು ಗುಂಡುಗಳೋ ರೈಫಲ್ಲುಗಳೋ ಅಲ್ಲ, ಬದಲಿಗೆ ದ್ವೇಷ ಮತ್ತು ದುರಾಶೆಗಳೇ ಆಗಿವೆ. ಅತಿಯಾಸೆ ಅಥವಾ ದುರಾಶೆಯೇ ಯುದ್ಧದ ಮೂಲಕಾರಣವಾಗಿದೆ, ಮತ್ತು ದ್ವೇಷವು ಆಗಿಂದಾಗ್ಗೆ ಹಿಂಸಾಕೃತ್ಯಗಳಿಗೆ ನಡೆಸುತ್ತದೆ. ಈ ರೀತಿಯ ವಿಪತ್ಕಾರಕ ಭಾವನೆಗಳನ್ನು ಬುಡಸಮೇತ ಕಿತ್ತುಹಾಕಲು, ಜನರು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಬೇಕಾಗಿದೆ. ಶಾಂತಿಯ ಮಾರ್ಗಗಳಲ್ಲಿ ನಡೆಯುವಂತೆ ಅವರಿಗೆ ಕಲಿಸುವ ಅಗತ್ಯವಿದೆ. ಆದುದರಿಂದಲೇ, ಜನರು ‘ಯುದ್ಧಾಭ್ಯಾಸವನ್ನು’ ಹೊಂದದೇ ಇದ್ದರೆ ಮಾತ್ರ ಯುದ್ಧವು ಅಸ್ತಿತ್ವದಲ್ಲಿಲ್ಲದೆ ಹೋಗುವುದು ಎಂದು ಪ್ರಾಚೀನ ಪ್ರವಾದಿಯಾದ ಯೆಶಾಯನು ವಾಸ್ತವಿಕವಾಗಿ ತಿಳಿಸುತ್ತಾನೆ.​—⁠ಯೆಶಾಯ 2:​4.

ಆದರೂ, ಪ್ರಾಯಸ್ಥರಿಗೂ ಮಕ್ಕಳಿಗೂ ಶಾಂತಿಯ ಮೌಲ್ಯಕ್ಕೆ ಬದಲಾಗಿ ಯುದ್ಧದ ವೈಭವವನ್ನು ಕಲಿಸುವ ಒಂದು ಲೋಕದಲ್ಲಿ ನಾವೀಗ ಜೀವಿಸುತ್ತಿದ್ದೇವೆ. ದುಃಖಕರವಾಗಿ, ಕೊಲ್ಲಲಿಕ್ಕಾಗಿ ಮಕ್ಕಳನ್ನು ಸಹ ತರಬೇತಿಗೊಳಿಸಲಾಗುತ್ತದೆ.

ಅವರು ಕೊಲ್ಲಲು ಕಲಿತುಕೊಂಡರು

ಸೈನಿಕನಾಗಿದ್ದ ಆಲ್‌ಹಾಜೀ ಎಂಬವನು ತನ್ನ 14 ವರ್ಷ ಪ್ರಾಯದಲ್ಲಿ ಮಿಲಿಟರಿ ಸೇವೆಯಿಂದ ಹೊರಹಾಕಲ್ಪಟ್ಟನು. ಅವನು ಕೇವಲ ಹತ್ತು ವರ್ಷ ಪ್ರಾಯದವನಾಗಿದ್ದಾಗ ಪ್ರತಿಭಟನಾಪಕ್ಷದ ಪಡೆಗಳು ಅವನನ್ನು ಸೆರೆಹಿಡಿದು, ಎ.ಕೆ. 47 ಅಸಾಲ್ಟ್‌ ರೈಫಲ್ಲಿನೊಂದಿಗೆ ಹೋರಾಡಲು ತರಬೇತಿಯನ್ನು ಕೊಟ್ಟವು. ಒತ್ತಾಯಪೂರ್ವಕವಾಗಿ ಇವನನ್ನು ಒಬ್ಬ ಸೈನಿಕನಾಗಿ ಮಾಡಿದ ನಂತರ, ಆಲ್‌ಹಾಜೀ ಆಹಾರದ ಲೂಟಿಗಳಿಗೆ ಹೋಗಿ ಮನೆಗಳನ್ನು ಸುಟ್ಟುಹಾಕಿದನು. ಅವನು ಜನರನ್ನು ಹತಿಸಿದನು ಮತ್ತು ಊನ ಮಾಡಿದನು ಸಹ. ಇಂದು, ಯುದ್ಧವನ್ನು ಮರೆತು ಸಹಜ ಜೀವನಕ್ಕೆ ಹೊಂದಿಸಿಕೊಳ್ಳಲು ಆಲ್‌ಹಾಜೀ ಕಷ್ಟಪಡುತ್ತಿದ್ದಾನೆ. ಏಬ್ರಹಾಮ್‌ ಎಂಬ ಮತ್ತೊಬ್ಬ ಬಾಲ ಯೋಧನು ಸಹ ಕೊಲ್ಲಲು ಕಲಿತುಕೊಂಡನು ಮತ್ತು ತನ್ನ ಆಯುಧವನ್ನು ಅಧಿಕಾರಿಗಳಿಗೆ ಒಪ್ಪಿಸಲು ನಿರಾಕರಿಸಿದನು. ಅವನು ಹೇಳಿದ್ದು: “ನಾನು ನನ್ನ ಬಂದೂಕನ್ನು ಕೊಡಬೇಕೆಂದು ಅವರು ಹೇಳುವುದಾದರೆ, ನಾನೇನು ಮಾಡುವೆನೋ ನನಗೆ ಗೊತ್ತಿಲ್ಲ, ನನಗೆ ಊಟ ಸಿಕ್ಕುವದಾದರೂ ಹೇಗೆ.”

ಬಾಲಕಬಾಲಕಿಯರನ್ನು ಒಳಗೊಂಡು 3,00,000ಕ್ಕಿಂತಲೂ ಹೆಚ್ಚು ಬಾಲ ಯೋಧರು, ನಮ್ಮ ಭೂಗ್ರಹವನ್ನು ಪೀಡಿಸುತ್ತಿರುವ ಅಂತ್ಯವಿಲ್ಲದ ಆಂತರಿಕ ಕದನಗಳಲ್ಲಿ ಹೋರಾಡುತ್ತಿದ್ದಾರೆ ಮತ್ತು ಮಡಿಯುತ್ತಿದ್ದಾರೆ. ಒಬ್ಬ ಪ್ರತಿಭಟನಾಪಕ್ಷದ ನಾಯಕನು ಹೇಳಿದ್ದು: “ಅವರು ಆಜ್ಞೆಗಳಿಗೆ ವಿಧೇಯರಾಗುತ್ತಾರೆ; ಅವರಿಗೆ ತಮ್ಮ ಹೆಂಡತಿ ಮಕ್ಕಳ ಬಳಿ ಹಿಂದಿರುಗುವ ಚಿಂತೆಯಿಲ್ಲ; ಮತ್ತು ಅವರಿಗೆ ಭಯವೆಂದರೇನೆಂಬುದೇ ಗೊತ್ತಿಲ್ಲ.” ಆದರೂ, ಈ ಮಕ್ಕಳು ಒಂದು ಉತ್ತಮ ಜೀವನಕ್ಕಾಗಿ ಬಯಸುತ್ತಾರೆ ಮತ್ತು ಅದಕ್ಕಾಗಿ ಯೋಗ್ಯರು ಸಹ.

ವಿಕಾಸಹೊಂದಿರುವ ದೇಶಗಳಲ್ಲಿ, ಒಬ್ಬ ಬಾಲ ಯೋಧನ ಘೋರ ಪರಿಸ್ಥಿತಿಯ ಕುರಿತು ಚಿತ್ರಿಸಿಕೊಳ್ಳುವುದು ಕಷ್ಟಕರವಾಗಿರಬಹುದು. ಆದರೂ, ಅನೇಕ ಪಾಶ್ಚಾತ್ಯ ಮಕ್ಕಳು ತಮ್ಮ ಸ್ವಂತ ಮನೆಗಳಲ್ಲೇ ಯುದ್ಧಾಭ್ಯಾಸ ಮಾಡುತ್ತಿದ್ದಾರೆ. ಯಾವ ರೀತಿಯಲ್ಲಿ?

ನೈರುತ್ಯ ಸ್ಪೆಯಿನ್‌ನ ಹೋಸೇ ಅನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ಅವನು 16 ವರ್ಷ ಪ್ರಾಯದವನಾಗಿದ್ದಾಗ ಜೂಡೊ ಮತ್ತು ಕರಾಟೆಯಂತಹ ಕದನಕಲೆಗಳನ್ನು ಅಭ್ಯಾಸಿಸುವುದರಲ್ಲಿ ಆನಂದಿಸುತ್ತಿದ್ದನು. ಅವನ ಬಳಿಯಿದ್ದ ಅಮೂಲ್ಯ ಸ್ವತ್ತು, ಕ್ರಿಸ್ಮಸ್‌ ಉಡುಗೊರೆಯಾಗಿ ತನ್ನ ತಂದೆಯಿಂದ ಪಡೆದುಕೊಂಡಿದ್ದ ಸ್ಯಾಮುರೈ ಖಡ್ಗವಾಗಿತ್ತು. ಇವನಿಗೆ ವಿಡಿಯೋ ಆಟಗಳೆಂದರೆ ಪ್ರಾಣ, ವಿಶೇಷವಾಗಿ ಹಿಂಸಾತ್ಮಕವಾದವುಗಳು. ಇಸವಿ 2000ದ ಏಪ್ರಿಲ್‌ 1ರಂದು, ಇವನು ತನ್ನ ವಿಡಿಯೋ ಆಟಗಳ ನಾಯಕನ ಆಕ್ರಮಣಕಾರಿ ಪ್ರವೃತ್ತಿಯನ್ನು ಕಾರ್ಯರೂಪಕ್ಕೆ ತಂದನು. ಹಿಂಸಾತ್ಮಕ ಕಿಡಿ ಹತ್ತಿದವನಾಗಿ, ತನ್ನ ತಂದೆಯು ತನಗೆ ಉಡುಗೊರೆಯಾಗಿ ಕೊಟ್ಟಿದ್ದ ಅದೇ ಖಡ್ಗವನ್ನುಪಯೋಗಿಸಿ ತನ್ನ ತಂದೆ, ತಾಯಿ, ಮತ್ತು ತಂಗಿಯನ್ನು ಕೊಂದುಹಾಕಿದನು. “ನಾನು ಲೋಕದಲ್ಲಿ ಒಬ್ಬಂಟಿಗನಾಗಿರಲು ಬಯಸಿದೆ, ನನ್ನ ಹೆತ್ತವರು ನನ್ನ ಮೇಲೆ ನಿಗಾ ಇಡುವುದು ನನಗೆ ಇಷ್ಟವಿರಲಿಲ್ಲ,” ಎಂದು ಅವನು ಪೊಲೀಸರಿಗೆ ವಿವರಿಸಿದನು.

ಹಿಂಸಾತ್ಮಕ ಮನೋರಂಜನೆಯ ಪ್ರಭಾವಗಳ ಕುರಿತು ಹೇಳಿಕೆ ನೀಡುತ್ತಿರುವಾಗ, ಗ್ರಂಥಕರ್ತ ಮತ್ತು ಮಿಲಿಟರಿ ಅಧಿಕಾರಿ ಡೇವ್‌ ಗ್ರೋಸ್‌ಮನ್‌ ಹೇಳಿದ್ದು: “ನೋವನ್ನುಂಟುಮಾಡುವುದೂ ಹಿಂಸಿಸುವುದೂ ಮನೋರಂಜನೆಯಾಗಿ ಪರಿಣಮಿಸುತ್ತಿರುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಕಾಠಿಣ್ಯಗೊಳ್ಳುವ ಸ್ಥಿತಿಗೆ ನಾವು ಮುಟ್ಟುತ್ತಿದ್ದೇವೆ. ಇದನ್ನು ಹೇವರಿಸುವ ಬದಲು ಮನೋರಂಜನೆಯ ಒಂದು ಭಾಗವಾಗಿ ಆನಂದಿಸುತ್ತಿದ್ದೇವೆ. ನಾವು ಕೊಲ್ಲುವುದನ್ನು ಕಲಿಯುತ್ತಿದ್ದೇವೆ, ಮತ್ತು ಕೊಲ್ಲಲಿಕ್ಕಾಗಿ ಬಯಕೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ.”

ಆಲ್‌ಹಾಜೀ ಮತ್ತು ಹೋಸೇ ಕೊಲ್ಲಲು ಕಲಿತುಕೊಂಡರು. ಇಬ್ಬರೂ ಕೊಲೆಪಾತಕರಾಗಲು ಬಯಸಲಿಲ್ಲ, ಆದರೆ ಒಂದಲ್ಲ ಒಂದು ರೀತಿಯ ತರಬೇತಿಯು ಅವರ ಆಲೋಚನೆಯನ್ನು ವಕ್ರಗೊಳಿಸಿತು. ಈ ರೀತಿಯ ತರಬೇತಿಯು​—⁠ಮಕ್ಕಳಿಗಾಗಿರಲಿ ಪ್ರಾಯಸ್ಥರಿಗಾಗಿರಲಿ​—⁠ಹಿಂಸೆ ಮತ್ತು ಯುದ್ಧದ ಬೀಜಗಳನ್ನು ಬಿತ್ತುತ್ತದೆ.

ಯುದ್ಧಕ್ಕೆ ಬದಲಾಗಿ ಶಾಂತಿಯನ್ನು ಕಲಿಯುವುದು

ಜನರು ಕೊಲ್ಲಲಿಕ್ಕಾಗಿ ತರಬೇತಿಯನ್ನು ಪಡೆದುಕೊಳ್ಳುತ್ತಿರುವಾಗ ಬಾಳುವ ಶಾಂತಿಯನ್ನು ಸ್ಥಾಪಿಸುವುದು ಸಾಧ್ಯವೇ ಇಲ್ಲ. ಹಲವಾರು ಶತಮಾನಗಳಿಗೆ ಮುಂಚೆ, ಪ್ರವಾದಿಯಾದ ಯೆಶಾಯನು ಬರೆದದ್ದು: “ನೀನು [ದೇವರ] ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು [“ಶಾಂತಿಯು,” NW] ದೊಡ್ಡ ನದಿಯಂತೆ” ಇರುತ್ತಿತ್ತು. (ಯೆಶಾಯ 48:17, 18) ಜನರು ದೇವರ ವಾಕ್ಯದ ಕುರಿತ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಾಗ ಮತ್ತು ದೇವರ ಧರ್ಮಶಾಸ್ತ್ರವನ್ನು ಪ್ರೀತಿಸಲು ಕಲಿಯುವಾಗ, ಹಿಂಸೆ ಮತ್ತು ಯುದ್ಧವು ಅವರು ಹೇವರಿಸುವ ವಿಷಯಗಳಾಗಿ ಪರಿಣಮಿಸುತ್ತವೆ. ಈಗಲೂ ಸಹ, ತಮ್ಮ ಮಕ್ಕಳು ಆಡುವ ಆಟಗಳು ಹಿಂಸೆಯನ್ನು ಪ್ರೋತ್ಸಾಹಿಸುತ್ತಿಲ್ಲ ಎಂಬುದನ್ನು ಹೆತ್ತವರು ಖಚಿತಪಡಿಸಿಕೊಳ್ಳಬಲ್ಲರು. ಪ್ರಾಯಸ್ಥರು ಸಹ ದ್ವೇಷ ಮತ್ತು ದುರಾಶೆಯನ್ನು ಜಯಿಸಲು ಕಲಿಯಬಹುದು. ವ್ಯಕ್ತಿತ್ವಗಳನ್ನು ಬದಲಾಯಿಸಬಲ್ಲ ಶಕ್ತಿಯು ದೇವರ ವಾಕ್ಯಕ್ಕಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಅನೇಕ ಉದಾಹರಣೆಗಳಿಂದ ಕಂಡುಕೊಂಡಿದ್ದಾರೆ.​—⁠ಇಬ್ರಿಯ 4:12.

ಓರ್ಟೆನ್‌ಸ್ಯೋವಿನ ಉದಾಹರಣೆಯನ್ನು ಪರಿಗಣಿಸಿರಿ. ಅವನು 23 ವರ್ಷ ಪ್ರಾಯದವನಾಗಿದ್ದಾಗ ತನ್ನ ಇಷ್ಟಕ್ಕೆ ವಿರೋಧವಾಗಿ ಒಬ್ಬ ಸೈನಿಕನಾಗುವಂತೆ ಒತ್ತಾಯಿಸಲ್ಪಟ್ಟನು. ಮಿಲಿಟರಿ ತರಬೇತಿಯು, “ಬೇರೆ ಜನರನ್ನು ಕೊಲ್ಲುವ ಬಯಕೆಯನ್ನು ನಮ್ಮಲ್ಲಿ ಬೇರೂರಿಸುವಂಥ ರೀತಿಯಲ್ಲಿ ಮತ್ತು ಕೊಲ್ಲುವುದರ ಬಗ್ಗೆ ಯಾವುದೇ ಹೆದರಿಕೆಯನ್ನು ಹೋಗಲಾಡಿಸುವ ರೀತಿಯಲ್ಲಿ” ವಿನ್ಯಾಸಿಸಲ್ಪಟ್ಟಿತ್ತು ಎಂದು ಅವನು ವಿವರಿಸುತ್ತಾನೆ. ಆಫ್ರಿಕದಲ್ಲಿ ಒಂದು ದೀರ್ಘಕಾಲದ ಆಂತರಿಕ ಯುದ್ಧದಲ್ಲಿ ಅವನು ಹೋರಾಡಿದ್ದನು. ಅವನು ವಿವರಿಸುವುದು: “ಯುದ್ಧವು ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿತು. ನಾನು ಮಾಡಿದ ಎಲ್ಲ ಸಂಗತಿಗಳು ನನಗೆ ಈಗಲೂ ನೆನಪಿದೆ. ಯಾವುದನ್ನು ಮಾಡುವಂತೆ ಒತ್ತಾಯಿಸಲ್ಪಟ್ಟೆನೋ ಅದಕ್ಕಾಗಿ ನಾನು ತುಂಬ ವಿಷಾದಿಸುತ್ತೇನೆ.”

ಓರ್ಟೆನ್‌ಸ್ಯೋವಿನೊಂದಿಗೆ ಬೈಬಲಿನ ಕುರಿತು ಒಬ್ಬ ಜೊತೆ ಯೋಧನು ಮಾತನಾಡಿದಾಗ ಅದು ಅವನ ಹೃದಯವನ್ನು ಸ್ಪರ್ಶಿಸಿತು. ಎಲ್ಲಾ ರೀತಿಯ ಯುದ್ಧವನ್ನು ಕೊನೆಗಾಣಿಸುವ ಕೀರ್ತನೆ 46:9ರಲ್ಲಿ ಕಂಡುಬರುವ ದೇವರ ವಾಗ್ದಾನವು ಅವನನ್ನು ಪ್ರಭಾವಿಸಿತು. ಅವನು ಬೈಬಲಿನ ಕುರಿತು ಕಲಿಯುತ್ತಾ ಹೋದಂತೆ, ಹೋರಾಡಬೇಕೆಂಬ ಬಯಕೆಯು ಅವನಲ್ಲಿ ಕ್ಷೀಣಿಸುತ್ತಾ ಹೋಯಿತು. ಸ್ವಲ್ಪ ಕಾಲದಲ್ಲೇ, ಅವನನ್ನು ಮತ್ತು ಅವನ ಇಬ್ಬರು ಒಡನಾಡಿಗಳನ್ನು ಸೇನೆಯಿಂದ ಹೊರಹಾಕಲಾಯಿತು, ಮತ್ತು ಅವರು ಯೆಹೋವ ದೇವರಿಗೆ ತಮ್ಮ ಜೀವನಗಳನ್ನು ಸಮರ್ಪಿಸಿದರು. “ನನ್ನ ವೈರಿಯನ್ನು ಪ್ರೀತಿಸುವಂತೆ ಬೈಬಲು ನನಗೆ ಸಹಾಯಮಾಡಿತು. ಯುದ್ಧದಲ್ಲಿ ಹೋರಾಡುವ ಮೂಲಕ ನಾನು ಯೆಹೋವನ ವಿರುದ್ಧವಾಗಿ ಪಾಪಮಾಡುತ್ತಿದ್ದೆ ಎಂಬುದು ನನಗೆ ಮನವರಿಕೆಯಾಯಿತು, ಏಕೆಂದರೆ ನಾವು ನಮ್ಮ ನೆರೆಯವನನ್ನು ಕೊಲ್ಲಬಾರದೆಂದು ದೇವರು ಹೇಳುತ್ತಾನೆ. ಈ ಪ್ರೀತಿಯನ್ನು ತೋರಿಸಲು, ನಾನು ನನ್ನ ಯೋಚನಾಧಾಟಿಯನ್ನು ಬದಲಾಯಿಸಿಕೊಂಡು ಜನರನ್ನು ನನ್ನ ವೈರಿಗಳಾಗಿ ವೀಕ್ಷಿಸಬಾರದಾಗಿತ್ತು,” ಎಂದು ಓರ್ಟೆನ್‌ಸ್ಯೋ ವಿವರಿಸುತ್ತಾನೆ.

ಬೈಬಲ್‌ ಶಿಕ್ಷಣವು ವಾಸ್ತವದಲ್ಲಿ ಶಾಂತಿಯನ್ನು ಪ್ರವರ್ಧಿಸುತ್ತದೆ ಎಂಬುದನ್ನು ಈ ರೀತಿಯ ನಿಜ ಜೀವನ ಅನುಭವಗಳು ತೋರಿಸುತ್ತವೆ. ಇದು ಆಶ್ಚರ್ಯಕರವೇನಲ್ಲ. ದೈವಿಕ ಶಿಕ್ಷಣ ಮತ್ತು ಶಾಂತಿಯ ಮಧ್ಯೆ ನೇರವಾದ ಸಂಬಂಧವಿದೆ ಎಂದು ಪ್ರವಾದಿಯಾದ ಯೆಶಾಯನು ತಿಳಿಸಿದನು. ಅವನು ಮುಂತಿಳಿಸಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಬೋಧಿಸಲ್ಪಟ್ಟವರಾಗಿರುವರು, ಮತ್ತು ನಿನ್ನ ಮಕ್ಕಳ ಶಾಂತಿಯು ಸಮೃದ್ಧವಾಗಿರುವುದು.” (ಯೆಶಾಯ 54:​13, NW) ಯೆಹೋವ ದೇವರ ಮಾರ್ಗಗಳ ಕುರಿತು ಕಲಿಯಲಿಕ್ಕಾಗಿ ಎಲ್ಲಾ ಜನಾಂಗಗಳ ಜನರು ಆತನ ಪರಿಶುದ್ಧ ಆರಾಧನೆಯ ಕಡೆಗೆ ಪ್ರವಹಿಸುವ ಸಮಯವನ್ನು ಸಹ ಇದೇ ಪ್ರವಾದಿಯು ಮುನ್ನೋಡಿದನು. ಯಾವ ಫಲಿತಾಂಶದೊಂದಿಗೆ? “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಓರೆ ಅಕ್ಷರಗಳು ನಮ್ಮವು.)​—⁠ಯೆಶಾಯ 2:2-4.

ಆ ಪ್ರವಾದನೆಗನುಸಾರವಾಗಿ, ಮನುಷ್ಯರ ಯುದ್ಧಗಳಿಗೆ ಮೂಲಕಾರಣವಾಗಿರುವ ದ್ವೇಷವನ್ನು ಜಯಿಸುವಂತೆ ಈಗಾಗಲೇ ಲಕ್ಷಾಂತರ ಮಂದಿಗೆ ಸಹಾಯಮಾಡಿರುವ ಲೋಕವ್ಯಾಪಕ ಶೈಕ್ಷಣಿಕ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ಒಳಗೂಡಿದ್ದಾರೆ.

ಲೋಕ ಶಾಂತಿಗಿರುವ ಖಾತರಿ

ಶಿಕ್ಷಣವನ್ನು ಒದಗಿಸುವುದು ಮಾತ್ರವಲ್ಲದೆ, ಲೋಕವ್ಯಾಪಕ ಶಾಂತಿಯ ಖಾತ್ರಿಯನ್ನು ಕೊಡಸಾಧ್ಯವಿರುವ ಒಂದು ಸರಕಾರವನ್ನು, ಅಥವಾ “ರಾಜ್ಯವನ್ನು” ದೇವರು ಸ್ಥಾಪಿಸಿದ್ದಾನೆ. ಗಮನಾರ್ಹವಾಗಿ, ದೇವರ ನೇಮಿತ ನಾಯಕನಾದ ಯೇಸು ಕ್ರಿಸ್ತನನ್ನು ಬೈಬಲು “ಸಮಾಧಾನದ ಪ್ರಭು” ಎಂದು ವರ್ಣಿಸುತ್ತದೆ. ಮತ್ತು ಅಲ್ಲಿನ “ಆಡಳಿತವು ಅಭಿವೃದ್ಧಿಯಾಗುವದು . . . ನಿತ್ಯ ಸಮಾಧಾನವಿರುವದು” ಎಂದೂ ಅದು ಪುನರಾಶ್ವಾಸನೆ ನೀಡುತ್ತದೆ.​—⁠ಯೆಶಾಯ 9:6, 7.

ಕ್ರಿಸ್ತನ ಆಡಳಿತವು ಎಲ್ಲಾ ರೀತಿಯ ಯುದ್ಧವನ್ನು ನಿರ್ಮೂಲ ಮಾಡುವುದರಲ್ಲಿ ಯಶಸ್ಸು ಗಳಿಸುವುದು ಎಂಬುದಕ್ಕೆ ಯಾವ ಖಾತ್ರಿ ಇದೆ? ಯೆಶಾಯ ಪ್ರವಾದಿಯು ಕೂಡಿಸಿ ಹೇಳುವುದು: “ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.” (ಯೆಶಾಯ 9:7) ನಿತ್ಯಕಾಲ ಶಾಂತಿಯನ್ನು ಕಾಪಾಡುವ ಬಯಕೆ ಮತ್ತು ಸಾಮರ್ಥ್ಯ ದೇವರಲ್ಲಿದೆ. ಯೇಸುವಿಗೆ ಈ ವಾಗ್ದಾನದಲ್ಲಿ ಸಂಪೂರ್ಣ ಭರವಸೆಯಿದೆ. ಆದುದರಿಂದಲೇ, ದೇವರ ರಾಜ್ಯವು ಬರುವಂತೆ ಮತ್ತು ಭೂಮಿಯ ಮೇಲೆ ದೇವರ ಚಿತ್ತವು ನೆರವೇರುವಂತೆ ಪ್ರಾರ್ಥಿಸಬೇಕೆಂದು ತನ್ನ ಹಿಂಬಾಲಕರಿಗೆ ಬೋಧಿಸಿದನು. (ಮತ್ತಾಯ 6:9, 10) ಆ ಹೃತ್ಪೂರ್ವಕ ಬೇಡಿಕೆಯು ಕೊನೆಗೆ ಉತ್ತರಿಸಲ್ಪಡುವಾಗ, ಯುದ್ಧವು ಇನ್ನೆಂದಿಗೂ ಲೋಕವನ್ನು ಪೀಡಿಸದು.

[ಪಾದಟಿಪ್ಪಣಿ]

^ ಪ್ಯಾರ. 6 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದರ ಪುರಾವೆಯನ್ನು ಪರಿಶೀಲಿಸಲಿಕ್ಕಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿರಿ.

[ಪುಟ 7ರಲ್ಲಿರುವ ಚಿತ್ರ]

ಬೈಬಲ್‌ ಶಿಕ್ಷಣವು ನಿಜ ಶಾಂತಿಯನ್ನು ಪ್ರವರ್ಧಿಸುತ್ತದೆ