ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅತ್ಯಂತ ಮಹಾ ಎಂಜಿನಿಯರಿಂಗ್‌ ಕೆಲಸಗಳಲ್ಲಿ ಒಂದು”

“ಅತ್ಯಂತ ಮಹಾ ಎಂಜಿನಿಯರಿಂಗ್‌ ಕೆಲಸಗಳಲ್ಲಿ ಒಂದು”

“ಅತ್ಯಂತ ಮಹಾ ಎಂಜಿನಿಯರಿಂಗ್‌ ಕೆಲಸಗಳಲ್ಲಿ ಒಂದು”

ಸುಮಾರು 3,000 ವರುಷಗಳ ಹಿಂದೆ, ಸೊಲೊಮೋನ ರಾಜನ ಆಳಿಕೆಯಲ್ಲಿ ಯೆಹೋವನ ಆಲಯವು ಕಟ್ಟಲ್ಪಟ್ಟಾಗ, ಒಂದು ಸುಂದರವಾದ ತಾಮ್ರದ ಬೋಗುಣಿಯನ್ನು ನಿರ್ಮಿಸಿ ಆಲಯದ ಪ್ರವೇಶದ್ವಾರದ ಹೊರಗೆ ಇಡಲಾಗಿತ್ತು. ಅದರ ತೂಕ 30 ಟನ್ನುಗಳಾಗಿದ್ದು ಅದು 40,000 ಲೀಟರುಗಳಷ್ಟು ನೀರು ಹಿಡಿಯುವಷ್ಟು ದೊಡ್ಡದ್ದಾಗಿತ್ತು. ಈ ದೊಡ್ಡ ಬೋಗುಣಿಯನ್ನು, ಸಮುದ್ರವೆನಿಸಿಕೊಳ್ಳುವ ಎರಕದ ಪಾತ್ರೆ ಎಂದು ಕರೆಯಲಾಯಿತು. (1 ಅರಸುಗಳು 7:​23-26) ಕೆನಡದ ನ್ಯಾಷನಲ್‌ ರೀಸರ್ಚ್‌ ಕೌನ್ಸಿಲಿನ ಮಾಜಿ ಟೆಕ್ನಿಕಲ್‌ ಆಫೀಸರರಾದ, ಆಲ್ಬರ್ಟ್‌ ಸಾಯಿಡ್ಹೋಟ್‌ ಎಂಬವರು ಬಿಬ್ಲಿಕಲ್‌ ಆರ್ಕಿಯಾಲಜಿಸ್ಟ್‌ ಎಂಬ ಪತ್ರಿಕೆಯಲ್ಲಿ ಹೇಳಿದ್ದು: “ಇದು ಹೀಬ್ರು ಜನಾಂಗವು ಕೈಕೊಂಡ ಅತ್ಯಂತ ಮಹಾ ಎಂಜಿನಿಯರಿಂಗ್‌ ಕೆಲಸಗಳಲ್ಲಿ ಒಂದು ಎಂಬ ವಿಷಯದಲ್ಲಿ ಸಂದೇಹವೇ ಇಲ್ಲ.”

ಈ ಸಮುದ್ರ ಪಾತ್ರೆಯನ್ನು ಹೇಗೆ ರಚಿಸಲಾಯಿತು? ಬೈಬಲ್‌ ಹೇಳುವುದು: “ಅರಸನು ಯೊರ್ದನಿನ ತಗ್ಗಿನಲ್ಲಿ . . . [ತಾಮ್ರದ ಪಾತ್ರೆಗಳನ್ನು] ಮಣ್ಣುನೆಲದಲ್ಲಿ ಎರಕಹೊಯ್ಸಿದನು.” (1 ಅರಸುಗಳು 7:45, 46) “ಈ ಎರಕಹೊಯ್ಯುವ ಕಾರ್ಯಗತಿಯು ಭಾರೀ ಗಾತ್ರದ ಕಂಚಿನ ಗಂಟೆಗಳನ್ನು ಎರಕ ಹೊಯ್ಯಲು ಈಗಲೂ ಉಪಯೋಗಿಸಲ್ಪಡುವ ‘ಮೇಣ ನಷ್ಟ’ ವಿಧಾನದಲ್ಲಿ ನಡೆಸಲ್ಪಟ್ಟಿರಬೇಕು” ಎಂದು ಸಾಯಿಡ್ಹೋಟ್‌ ತಿಳಿಸುತ್ತಾರೆ. ಅವರು ವಿವರಿಸುವುದು: “ಇದಕ್ಕೆ ಮೂಲತಃ ಬೇಕಾಗಿದದ್ದು ಆ ಬೋಗುಣಿಯ ಮೇಣದಾಕೃತಿಯೇ. ಇದನ್ನು ತಲೆಕೆಳಗಾಗಿರಿಸಲ್ಪಟ್ಟಿರುವ ಎರಕ ಹೊಯ್ಯುವ ಅಚ್ಚಿನ ಸಂಪೂರ್ಣವಾಗಿ ಒಣಗಿರುವ ತಿರುಳಿನ ಮೇಲೆ ರೂಪಿಸಬೇಕಾಗಿತ್ತು. . . . ಇದನ್ನು ಮಾಡಿ ಮುಗಿಸಿದ ನಂತರ ಎರಕ ಹೊಯ್ಯುವವರು ಆ ಮೇಣದಾಕೃತಿಯ ಹೊರಮೈಯ ಮೇಲೆ ಹೊರಅಚ್ಚನ್ನು ರಚಿಸಿ ಅದು ಒಣಗುವಂತೆ ಬಿಡಬೇಕಾಗಿತ್ತು. ಕೊನೆಯ ಹಂತದಲ್ಲಿ ಆ ಮೇಣವನ್ನು ಕರಗಿಸಿ, ಅಲ್ಲಿ ಉಂಟಾಗುವ ಪೊಳ್ಳುಭಾಗದೊಳಕ್ಕೆ ಕಂಚಿನ ದ್ರವವನ್ನು ಹೊಯ್ಯಲಾಗುತ್ತಿತ್ತು.”

ಈ ಸಮುದ್ರವೆನಿಸಿಕೊಳ್ಳುವ ಎರಕದ ಪಾತ್ರೆಯ ಭಾರೀ ಗಾತ್ರ ಮತ್ತು ತೂಕದ ಕಾರಣ ಅದರ ರಚನೆಗೆ ಬಹಳಷ್ಟು ಕೌಶಲದ ಅಗತ್ಯವಿತ್ತು. ಒಳಗಣ ತೆರಪಚ್ಚು ಮತ್ತು ಹೊರಗಣ ಅಚ್ಚು 30 ಟನ್ನುಗಳಷ್ಟು ತಾಮ್ರದ ಎರಕದ್ರವದ ಒತ್ತಡವನ್ನು ತಾಳಿಕೊಳ್ಳಬೇಕಾಗಿತ್ತು. ಮತ್ತು ಈ ಎರಕದ ಕೆಲಸವನ್ನು ಬಿರುಕುಗಳು ಮತ್ತು ದೋಷಗಳು ಉಂಟಾಗದಂತೆ ನಿರಂತರವಾದ ಒಂದೇ ಕಾರ್ಯಗತಿಯಲ್ಲಿ ಮಾಡಬೇಕಾಗಿತ್ತು. ಕರಗಿಸಿದ ಲೋಹವನ್ನು ಅಚ್ಚಿನೊಳಗೆ ಹೊಯ್ಯುವ ಸಲುವಾಗಿ, ಒಂದಕ್ಕೊಂಡು ಜೋಡಿಸಲ್ಪಟ್ಟಿರುವ ಊದುಕುಲುಮೆಗಳ ಒಂದು ಸರಮಾಲೆಯೇ ಬೇಕಾಗಿದ್ದಿರಬಹುದು. ಎಂತಹ ಭಾರೀ ಕೆಲಸ ಇದಾಗಿತ್ತು!

ದೇವಾಲಯದ ಪ್ರತಿಷ್ಠಾಪನೆಯ ಕುರಿತಾದ ತನ್ನ ಪ್ರಾರ್ಥನೆಯಲ್ಲಿ ರಾಜ ಸೊಲೊಮೋನನು ಆಲಯದ ಸಕಲ ಕೆಲಸಕ್ಕೆ ಕೀರ್ತಿಯನ್ನು ಯೆಹೋವ ದೇವರಿಗೆ ಸಲ್ಲಿಸುತ್ತಾ ಹೀಗಂದನು: “ನಿನ್ನ ಬಾಯಿ ನುಡಿದದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿತು.”​—⁠1 ಅರಸುಗಳು 8:24.