ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—II

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—II

ಯೆಹೋವನ ವಾಕ್ಯವು ಸಜೀವವಾದದ್ದು

ಆದಿಕಾಂಡ ಪುಸ್ತಕದ ಮುಖ್ಯಾಂಶಗಳು​—II

ಪ್ರಥಮ ಪುರುಷನಾಗಿದ್ದ ಆದಾಮನಿಂದ ಹಿಡಿದು ಯಾಕೋಬನ ಮಗನಾದ ಯೋಸೇಫನ ಮರಣದ ವರೆಗಿನ 2,369 ವರುಷಗಳ ಮಾನವ ಇತಿಹಾಸವನ್ನು ಆದಿಕಾಂಡವು ಆವರಿಸುತ್ತದೆ. ಸೃಷ್ಟಿಯ ವೃತ್ತಾಂತದಿಂದ ಬಾಬೆಲ್‌ ಗೋಪುರದ ನಿರ್ಮಾಣದ ವರೆಗಿನ ವೃತ್ತಾಂತವು ಅಡಕವಾಗಿರುವ ಮೊದಲ 10 ಅಧ್ಯಾಯಗಳು ಮತ್ತು 11ನೆಯ ಅಧ್ಯಾಯದ 9 ವಚನಗಳನ್ನು ಈ ಪತ್ರಿಕೆಯ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಲಾಗಿತ್ತು. * ಈಗ ಈ ಲೇಖನದಲ್ಲಿ, ಅಬ್ರಹಾಮ, ಇಸಾಕ, ಯಾಕೋಬ ಮತ್ತು ಯೋಸೇಫರೊಂದಿಗೆ ದೇವರು ವ್ಯವಹರಿಸಿದ ವಿಷಯಗಳಿಗೆ ಸಂಬಂಧಪಟ್ಟ ಆದಿಕಾಂಡದ ಉಳಿದ ಭಾಗದ ಮುಖ್ಯಾಂಶಗಳನ್ನು ಪರಿಗಣಿಸಲಾಗುತ್ತದೆ.

ಅಬ್ರಹಾಮನು ದೇವರ ಸ್ನೇಹಿತನಾಗುತ್ತಾನೆ

(ಆದಿಕಾಂಡ 11:​10–23:20)

ಜಲಪ್ರಳಯದ ನಂತರ ಸುಮಾರು 350 ವರುಷಗಳ ಬಳಿಕ ದೇವರಿಗೆ ಅತಿ ವಿಶಿಷ್ಟನಾಗಿ ಪರಿಣಮಿಸಿದ ವ್ಯಕ್ತಿಯೊಬ್ಬನು ನೋಹನ ಪುತ್ರನಾಗಿದ್ದ ಶೇಮನ ವಂಶದಲ್ಲಿ ಜನಿಸಿದನು. ಅವನೇ ಅಬ್ರಾಮನು, ತರುವಾಯ ಅವನ ಹೆಸರು ಅಬ್ರಹಾಮನೆಂದು ಬದಲಾಯಿಸಲ್ಪಟ್ಟಿತು. ಅಬ್ರಹಾಮನು ದೇವರ ಆಜ್ಞೆಯ ಮೇರೆಗೆ ಊರ್‌ ಎಂಬ ಕಸ್ದೀಯ ಪಟ್ಟಣವನ್ನು ಬಿಟ್ಟು, ಯೆಹೋವನು ಅವನಿಗೂ ಅವನ ಸಂತತಿಗೂ ಕೊಡುತ್ತೇನೆಂದು ವಚನಕೊಟ್ಟ ದೇಶದಲ್ಲಿ ಡೇರೆವಾಸಿಯಾಗುತ್ತಾನೆ. ಅಬ್ರಹಾಮನ ನಂಬಿಕೆ ಮತ್ತು ವಿಧೇಯತೆಯ ಕಾರಣವಾಗಿ ಅವನು “ಯೆಹೋವನ ಸ್ನೇಹಿತ”ನೆಂದು ಕರೆಯಲ್ಪಡುತ್ತಾನೆ.​—ಯಾಕೋಬ 2:​23, NW.

ಯೆಹೋವನು ಸೊದೋಮ್‌ ಮತ್ತು ನೆರೆಹೊರೆಯ ಪಟ್ಟಣಗಳ ದುಷ್ಟ ನಿವಾಸಿಗಳ ಮೇಲೆ ಕ್ರಮ ಕೈಗೊಂಡು, ಲೋಟನನ್ನೂ ಅವನ ಪುತ್ರಿಯರನ್ನೂ ಬದುಕಿ ಉಳಿಸುತ್ತಾನೆ. ಅಬ್ರಹಾಮನ ಪುತ್ರನಾದ ಇಸಾಕನ ಜನನವಾದಾಗ ದೇವರ ವಾಗ್ದಾನವೊಂದು ನೆರವೇರುತ್ತದೆ. ವರ್ಷಗಳಾನಂತರ, ಯೆಹೋವನು ಅಬ್ರಹಾಮನಿಗೆ ಅವನು ತನ್ನ ಮಗನನ್ನು ಯಜ್ಞವಾಗಿ ಅರ್ಪಿಸಬೇಕೆಂದು ಕೇಳಿಕೊಳ್ಳುವಾಗ ಅವನ ನಂಬಿಕೆ ಪರೀಕ್ಷೆಗೊಳಗಾಗುತ್ತದೆ. ಅಬ್ರಹಾಮನು ವಿಧೇಯನಾಗಲು ಸಿದ್ಧನಾಗಿದ್ದರೂ ಒಬ್ಬ ದೇವದೂತನು ಅವನನ್ನು ತಡೆಯುತ್ತಾನೆ. ಅಬ್ರಹಾಮನು ನಂಬಿಕೆಯ ಪುರುಷನೆಂಬ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಅವನ ಸಂತಾನದ ಮೂಲಕ ಎಲ್ಲಾ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳುವವೆಂಬ ಆಶ್ವಾಸನೆ ಅವನಿಗೆ ದೊರೆಯುತ್ತದೆ. ಅಬ್ರಹಾಮನ ಪ್ರಿಯ ಪತ್ನಿ ಸಾರಳ ಮರಣವು ಅವನಿಗೆ ತೀರ ದುಃಖವನ್ನು ಉಂಟುಮಾಡುತ್ತದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

12:​1-3​—ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆ ಯಾವಾಗ ಜಾರಿಗೆ ಬಂತು, ಮತ್ತು ಎಷ್ಟು ಸಮಯದ ತನಕ? ‘ಭೂಮಿಯ ಎಲ್ಲ ಜನಾಂಗಗಳು [ಅಬ್ರಾಮನ] ಮೂಲಕ ತಮ್ಮನ್ನು ಆಶೀರ್ವದಿಸಿಕೊಳ್ಳುವವು’ ಎಂದು ಹೇಳಿ ಅಬ್ರಾಮನೊಂದಿಗೆ ಯೆಹೋವನು ಮಾಡಿದ ಒಡಂಬಡಿಕೆಯು, ಅಬ್ರಾಮನು ಕಾನಾನ್‌ ದೇಶಕ್ಕೆ ಹೋಗುವ ದಾರಿಯಲ್ಲಿ ಯೂಫ್ರೇಟೀಸ್‌ ನದಿಯನ್ನು ದಾಟಿದಾಗ ಜಾರಿಗೆ ಬಂತೆಂದು ವ್ಯಕ್ತವಾಗುತ್ತದೆ. ಇದು ಸಾ.ಶ.ಪೂ. 1943ರ ನೈಸಾನ್‌ 14ರಂದು, ಅಂದರೆ ಇಸ್ರಾಯೇಲಿಗೆ ಐಗುಪ್ತದಿಂದ ಬಿಡುಗಡೆಯಾಗುವ 430 ವರುಷಗಳಿಗೆ ಮುಂಚೆ ಆಗಿದ್ದಿರಬೇಕು. (ವಿಮೋಚನಕಾಂಡ 12:2, 6, 7, 40, 41) ಅಬ್ರಹಾಮ ಸಂಬಂಧಿತ ಒಡಂಬಡಿಕೆಯು ‘ತಲಾಂತರಗಳಿಗೋಸ್ಕರವೂ ಮಾಡಿಕೊಂಡ ಒಡಂಬಡಿಕೆ’ ಆಗಿದೆ. ಅದು ಭೂಮಿಯ ಕುಟುಂಬಗಳು ಆಶೀರ್ವದಿಸಲ್ಪಡುವ ವರೆಗೆ ಮತ್ತು ದೇವರ ವೈರಿಗಳು ನಾಶಗೊಳಿಸಲ್ಪಡುವ ವರೆಗೆ ಜಾರಿಯಲ್ಲಿರುವುದು.​—ಆದಿಕಾಂಡ 17:​7; 1 ಕೊರಿಂಥ 15:​23-26.

15:​13​—ಅಬ್ರಾಮನ ಸಂತತಿಯವರಿಗೆ ಬರುವುದೆಂದು ಮುಂತಿಳಿಸಲ್ಪಟ್ಟ 400 ವರುಷಗಳ ಬಾಧೆ ಯಾವಾಗ ನೆರವೇರಿತು? ಬಾಧೆಯ ಈ ಅವಧಿಯು ಸಾ.ಶ.ಪೂ. 1913ರಲ್ಲಿ ಅಬ್ರಹಾಮನ ಮಗನಾದ ಇಸಾಕನು 5 ವರ್ಷ ಪ್ರಾಯದಲ್ಲಿ ಮೊಲೆ ಬಿಡಿಸಲ್ಪಟ್ಟಾಗ ಮತ್ತು ಅವನ ಮಲಸಹೋದರ ಇಷ್ಮಾಯೇಲನು 19ರ ಪ್ರಾಯದವನಾಗಿದ್ದು ‘ತಮಾಷೆ ಮಾಡುತ್ತಿದ್ದಾಗ’ ಆರಂಭಗೊಂಡಿತು. (ಆದಿಕಾಂಡ 21:​8-14, NW; ಗಲಾತ್ಯ 4:29) ಮತ್ತು ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ಯರಿಗೆ ಐಗುಪ್ತದಿಂದ ಬಿಡುಗಡೆಯಾದಾಗ ಅದು ಮುಕ್ತಾಯಗೊಂಡಿತು.

16:​2​—ಸಾರಯಳು ತನ್ನ ಸೇವಕಿಯನ್ನು ಅಬ್ರಾಮನಿಗೆ ಹೆಂಡತಿಯಾಗಿ ಕೊಟ್ಟದ್ದು ನ್ಯಾಯವಾಗಿತ್ತೊ? ಸಾರಳು ಮಾಡಿದಂಥ ಸಂಗತಿಯು ಆ ದಿನಗಳ ಪದ್ಧತಿಗೆ ಹೊಂದಿಕೆಯಾಗಿತ್ತು. ಆ ಪದ್ಧತಿಯೇನಾಗಿತ್ತೆಂದರೆ, ಬಂಜೆಯಾದ ಹೆಂಡತಿಯೊಬ್ಬಳು ತನ್ನ ಗಂಡನು ಒಬ್ಬ ವಾರಸುದಾರನನ್ನು ಹುಟ್ಟಿಸಲಿಕ್ಕಾಗಿ ಅವನಿಗೆ ಉಪಪತ್ನಿಯನ್ನು ಒದಗಿಸುವ ಹಂಗಿನಲ್ಲಿದ್ದಳು. ಬಹುಪತ್ನೀತ್ವವು ಪ್ರಥಮವಾಗಿ ಕಾಯಿನನ ವಂಶದಲ್ಲಿ ತೋರಿಬಂತು. ಕ್ರಮೇಣ ಇದು ಒಂದು ಪದ್ಧತಿಯಾಗಿ ಪರಿಣಮಿಸಿ, ಹಲವು ಮಂದಿ ಯೆಹೋವನ ಆರಾಧಕರಿಂದಲೂ ಅನುಸರಿಸಲ್ಪಟ್ಟಿತು. (ಆದಿಕಾಂಡ 4:17-19; 16:1-3; 29:21-28) ಆದರೂ ಯೆಹೋವನು ಏಕಪತ್ನೀತ್ವದ ಕುರಿತಾದ ತನ್ನ ಮೂಲ ಮಟ್ಟವನ್ನು ಎಂದಿಗೂ ತ್ಯಜಿಸಿರಲಿಲ್ಲ. (ಆದಿಕಾಂಡ 2:​21, 22) ಯಾರಿಗೆ “ಬಹುಸಂತಾನವುಳ್ಳವರಾಗಿ ಹೆಚ್ಚಿರಿ” ಎಂಬ ಆಜ್ಞೆಯು ಕೊಡಲ್ಪಟ್ಟಿತೊ ಆ ನೋಹ ಮತ್ತು ಅವನ ಪುತ್ರರೆಲ್ಲರೂ ಏಕಪತ್ನಿಯುಳ್ಳವರಾಗಿದ್ದರೆಂದು ವ್ಯಕ್ತವಾಗುತ್ತದೆ. (ಆದಿಕಾಂಡ 7:7; 9:1; 2 ಪೇತ್ರ 2:5) ಮತ್ತು ಏಕಪತ್ನೀತ್ವದ ಇದೇ ಮಟ್ಟವನ್ನು ಯೇಸು ಕ್ರಿಸ್ತನೂ ಪುನಃ ಪ್ರತಿಪಾದಿಸಿದನು.​—ಮತ್ತಾಯ 19:4-8; 1 ತಿಮೊಥೆಯ 3:2, 12.

19:8​—ಲೋಟನು ತನ್ನ ಪುತ್ರಿಯರನ್ನು ಸೊದೋಮ್ಯರಿಗೆ ಕೊಡುವ ನೀಡಿಕೆಯನ್ನು ಮಾಡಿದ್ದು ತಪ್ಪಲ್ಲವೆ? ಪ್ರಾಚ್ಯ ನೀತಿಪದ್ಧತಿಗನುಸಾರ, ತನ್ನ ಮನೆಗೆ ಬಂದ ಅತಿಥಿಗಳನ್ನು ರಕ್ಷಿಸುವುದು ಆತಿಥೇಯನ ಜವಾಬ್ದಾರಿಯಾಗಿತ್ತು. ಅಗತ್ಯವಿದ್ದಲ್ಲಿ ಜೀವವನ್ನು ತೆತ್ತಾದರೂ ಅವನು ಅವರನ್ನು ಕಾಪಾಡಬೇಕಿತ್ತು. ಲೋಟನು ಅದಕ್ಕೆ ಸಿದ್ಧನಾಗಿದ್ದನು. ಅವನು ಆ ಜನರ ದೊಂಬಿಯೊಂದಿಗೆ ಮಾತಾಡಲು ಧೈರ್ಯದಿಂದ ಮನೆಯ ಹೊರಗೆ ಹೋಗಿ, ಬಾಗಿಲು ಮುಚ್ಚಿ ಅವರನ್ನು ಒಂಟಿಗನಾಗಿ ಎದುರಿಸಿದನು. ಅವನು ತನ್ನ ಹೆಣ್ಣುಮಕ್ಕಳನ್ನು ಸೊದೋಮ್ಯರಿಗೆ ಕೊಡಲು ಸಿದ್ಧನಾಗುವ ಸಮಯದೊಳಗೆ, ತನ್ನ ಅತಿಥಿಗಳು ದೇವರಿಂದ ಬಂದ ದೂತರಾಗಿದ್ದರೆಂದು ಅವನಿಗೆ ತಿಳಿದುಬಂದದ್ದು ಸಂಭವನೀಯ, ಮತ್ತು ಐಗುಪ್ತದಲ್ಲಿ ತನ್ನ ಅತ್ತೆ ಸಾರಳನ್ನು ದೇವರು ಕಾಪಾಡಿದ್ದಂತೆಯೇ ತನ್ನ ಪುತ್ರಿಯರನ್ನೂ ಕಾಪಾಡಬಲ್ಲನೆಂದು ಲೋಟನು ತರ್ಕಿಸಿದ್ದಿರಬಹುದು. (ಆದಿಕಾಂಡ 12:​17-20) ಮತ್ತು ಲೋಟನೂ ಅವನ ಪುತ್ರಿಯರೂ ಕಾಪಾಡಲ್ಪಟ್ಟದ್ದು ನಿಜ.

19:​30-38​—ಲೋಟನು ಕುಡಿದು ಮತ್ತನಾಗಿ ತನ್ನ ಇಬ್ಬರು ಪುತ್ರಿಯರಿಂದ ಗಂಡುಮಕ್ಕಳನ್ನು ಪಡೆದ ಸಂಗತಿಯನ್ನು ಯೆಹೋವನು ಮನ್ನಿಸಿದನೊ? ಯೆಹೋವನು ಅಗಮ್ಯಗಮನವನ್ನಾಗಲಿ ಕುಡಿಕತನವನ್ನಾಗಲಿ ಮನ್ನಿಸುವುದಿಲ್ಲ. (ಯಾಜಕಕಾಂಡ 18:6, 7, 29; 1 ಕೊರಿಂಥ 6:9, 10) ವಾಸ್ತವದಲ್ಲಿ ಲೋಟನು ಸೊದೋಮ್‌ ಊರಿನ ನಿವಾಸಿಗಳ “ಅನ್ಯಾಯಕೃತ್ಯಗಳನ್ನು” ನೋಡಿ ವ್ಯಥೆಪಟ್ಟವನಾಗಿದ್ದನು. (2 ಪೇತ್ರ 2:​6-8) ಲೋಟನ ಪುತ್ರಿಯರು ಅವನಿಗೆ ಕುಡಿಸಿ ಮತ್ತನನ್ನಾಗಿ ಮಾಡಿದರೆಂಬ ವಾಸ್ತವಾಂಶವೇ, ಅವನು ಅಮಲಿನಲ್ಲಿ ಇರದಿದ್ದಲ್ಲಿ ಲೈಂಗಿಕ ಸಂಬಂಧಕ್ಕೆ ಎಂದಿಗೂ ಒಪ್ಪುತ್ತಿರಲಿಲ್ಲವೆಂಬುದನ್ನು ಅವರು ತಿಳಿದಿದ್ದರೆಂದು ಸೂಚಿಸುತ್ತದೆ. ಆದರೆ ಆ ದೇಶದಲ್ಲಿ ಅವರು ಪರದೇಶಿಗಳಾಗಿದ್ದುದರಿಂದ, ಲೋಟನ ಕುಟುಂಬವು ಅಳಿಯದಿರುವುದಕ್ಕೆ ಇದೊಂದೇ ಮಾರ್ಗವೆಂದು ಆ ಪುತ್ರಿಯರು ಭಾವಿಸಿದರು. ಅಬ್ರಹಾಮನ ಸಂತಾನದವರಾದ ಇಸ್ರಾಯೇಲ್ಯರಿಗೆ ಮೋವಾಬ್ಯರು (ಮೋವಾಬನಿಂದ) ಮತ್ತು ಅಮ್ಮೋನಿಯರು (ಬೆನಮ್ಮಿಯಿಂದ) ಹೇಗೆ ಸಂಬಂಧಿಗಳೆಂದು ತೋರಿಸಲಿಕ್ಕಾಗಿ ಈ ವೃತ್ತಾಂತವು ಬೈಬಲಿನಲ್ಲಿದೆ.

ನಮಗಾಗಿರುವ ಪಾಠಗಳು:

13:​8, 9. ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದರಲ್ಲಿ ಅಬ್ರಹಾಮನು ನಮಗೆ ಎಷ್ಟು ಸುಂದರವಾದ ಆದರ್ಶವನ್ನು ಒದಗಿಸುತ್ತಾನೆ! ನಾವು ಆರ್ಥಿಕ ಲಾಭ, ಸ್ವಂತ ಇಷ್ಟಗಳು, ಅಥವಾ ಹೆಮ್ಮೆಯ ಕಾರಣಕ್ಕಾಗಿ ಎಂದಿಗೂ ಶಾಂತಿಯ ಸಂಬಂಧಗಳನ್ನು ತ್ಯಜಿಸಬಾರದು.

15:​5, 6. ಅಬ್ರಹಾಮನು ಮಗನಿಲ್ಲದೇ ವೃದ್ಧನಾಗುತ್ತಿದ್ದಾಗ, ಅವನು ದೇವರೊಡನೆ ಆ ವಿಷಯವಾಗಿ ಮಾತಾಡಿದನು. ಆಗ ಯೆಹೋವನು ಪ್ರತಿಯಾಗಿ ಅವನಿಗೆ ಆಶ್ವಾಸನೆ ನೀಡಿದನು. ಪರಿಣಾಮವೇನು? ಅಬ್ರಹಾಮನು “ಯೆಹೋವನನ್ನು ನಂಬಿದನು.” ನಾವು ಯೆಹೋವನಿಗೆ ನಮ್ಮ ಹೃದಯ ಬಿಚ್ಚಿ ಪ್ರಾರ್ಥಿಸುತ್ತಾ ಬೈಬಲಿನಲ್ಲಿ ಆತನು ಕೊಟ್ಟಿರುವ ಪುನರಾಶ್ವಾಸನೆಗಳನ್ನು ಅಂಗೀಕರಿಸಿ, ಆತನಿಗೆ ವಿಧೇಯರಾಗುವಲ್ಲಿ, ನಮ್ಮ ನಂಬಿಕೆಯು ದೃಢವಾಗುವುದು.

15:16. ಯೆಹೋವನು ಅಮೋರಿಯರ (ಅಥವಾ, ಕಾನಾನ್ಯರ) ವಿರುದ್ಧ ತೀರ್ಪನ್ನು ನಾಲ್ಕು ಸಂತತಿಗಳ ತನಕ ಜಾರಿಗೆ ತರದೆ ಇದ್ದನು. ಏಕೆ? ಏಕೆಂದರೆ ಆತನು ತಾಳ್ಮೆಯ ದೇವರು. ಅಭಿವೃದ್ಧಿಯ ನಿರೀಕ್ಷೆಯೇ ಇಲ್ಲವಾಗಿ ಹೋಗುವ ತನಕ ಆತನು ಕಾದನು. ಯೆಹೋವನಂತೆ ನಾವೂ ತಾಳ್ಮೆಯುಳ್ಳವರಾಗಿರಬೇಕು.

18:​23-33. ಯೆಹೋವನು ಜನರನ್ನು ಗೊತ್ತುಗುರಿಯಿಲ್ಲದೆ ನಾಶಮಾಡುವುದಿಲ್ಲ. ಆತನು ನೀತಿವಂತರನ್ನು ಕಾಪಾಡುತ್ತಾನೆ.

19:16. ಲೋಟನು ‘ತಡಮಾಡಲು’ ದೇವದೂತರು ಅವನನ್ನೂ ಅವನ ಕುಟುಂಬವನ್ನೂ ಎಳೆದುಕೊಂಡೊ ಎಂಬಂತೆ ಸೊದೋಮ್‌ ಊರಿನಾಚೆ ತರಬೇಕಾಯಿತು. ದುಷ್ಟ ಲೋಕದ ಅಂತ್ಯಕ್ಕಾಗಿ ನಾವು ಕಾಯುತ್ತಿರುವಾಗ ನಮ್ಮ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳದಿರುವುದು ವಿವೇಕಪ್ರದ.

19:26. ನಾವು ಲೋಕದಲ್ಲಿ ಬಿಟ್ಟುಬಂದಿರುವ ವಿಷಯಗಳಿಂದ ಅಪಕರ್ಷಿತರಾಗುವುದು ಅಥವಾ ಅವುಗಳಿಗಾಗಿ ಹಂಬಲಿಸುತ್ತ ಹಿಂದೆ ನೋಡುವುದು ಎಂತಹ ಮೂರ್ಖತನ!

ಯಾಕೋಬನಿಗೆ 12 ಮಂದಿ ಪುತ್ರರು

(ಆದಿಕಾಂಡ 24:1​—36:43)

ಅಬ್ರಹಾಮನು ಇಸಾಕನ ಮದುವೆಯನ್ನು, ಯೆಹೋವನಲ್ಲಿ ನಂಬಿಕೆಯಿರುವ ಒಬ್ಬ ಸ್ತ್ರೀ ಅಂದರೆ ರೆಬೆಕ್ಕಳ ಸಂಗಡ ಏರ್ಪಡಿಸುತ್ತಾನೆ. ಆಕೆ ಏಸಾವ, ಯಾಕೋಬರೆಂಬ ಅವಳಿ ಮಕ್ಕಳನ್ನು ಹೆರುತ್ತಾಳೆ. ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರಮಾಡಿ ಯಾಕೋಬನಿಗೆ ಅದನ್ನು ಮಾರುತ್ತಾನೆ. ತರುವಾಯ ತಂದೆಯ ಆಶೀರ್ವಾದ ಯಾಕೋಬನಿಗೆ ದೊರೆಯುತ್ತದೆ. ಯಾಕೋಬನು ಪದ್ದನ್‌ಆರಾಮಿಗೆ ಓಡಿಹೋಗುತ್ತಾನೆ. ಅಲ್ಲಿ ಲೇಯ ಮತ್ತು ರಾಹೇಲರನ್ನು ಮದುವೆಯಾಗಿ ಅವರ ತಂದೆಯ ಹಿಂಡನ್ನು ಸುಮಾರು 20 ವರ್ಷಕಾಲ ಕಾಯುತ್ತಾನೆ. ಬಳಿಕ ತನ್ನ ಕುಟುಂಬದೊಂದಿಗೆ ಅಲ್ಲಿಂದ ಹೊರಡುತ್ತಾನೆ. ಲೇಯ, ರಾಹೇಲ ಮತ್ತು ಅವರ ಇಬ್ಬರು ದಾಸಿಯರಿಂದ ಯಾಕೋಬನಿಗೆ 12 ಮಂದಿ ಗಂಡುಮಕ್ಕಳು ಮಾತ್ರವಲ್ಲದೆ ಹೆಣ್ಣುಮಕ್ಕಳೂ ಹುಟ್ಟುತ್ತಾರೆ. ಯಾಕೋಬನು ದೇವದೂತನೊಂದಿಗೆ ಹೋರಾಡಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ ಮತ್ತು ಅವನ ಹೆಸರು ಇಸ್ರಾಯೇಲ್‌ ಎಂದು ಬದಲಾಯಿಸಲ್ಪಡುತ್ತದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

28:​12, 13​—ಒಂದು ‘ನಿಚ್ಚಣಿಗೆ’ಯನ್ನೊಳಗೊಂಡ ಯಾಕೋಬನ ಕನಸಿನ ಮಹತ್ವವೇನು? ಕಲ್ಲಿನ ಮೆಟ್ಟಿಲುಸಾಲಿನಂತೆ ಕಂಡಿರಬಹುದಾದ ಈ “ನಿಚ್ಚಣಿಗೆ”ಯು ಭೂಲೋಕ ಮತ್ತು ಪರಲೋಕದ ಮಧ್ಯೆ ಮಾತುಸಂಪರ್ಕವಿದೆಯೆಂಬದನ್ನು ಸೂಚಿಸಿತು. ಅದರಲ್ಲಿ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದದ್ದು, ಯೆಹೋವನ ಮತ್ತು ಆತನ ಒಪ್ಪಿಗೆಯಿರುವ ಜನರ ಮಧ್ಯೆ ದೇವದೂತರು ಪ್ರಮುಖವಾದ ಯಾವುದೊ ವಿಧದಲ್ಲಿ ಸೇವೆಮಾಡುತ್ತಾರೆಂಬದನ್ನು ತೋರಿಸಿತು.​—ಯೋಹಾನ 1:51.

30:​14, 15​—ರಾಹೇಲಳು ಕಾಮಜನಕ ಫಲಗಳಿಗಾಗಿ ಗರ್ಭಿಣಿಯಾಗುವ ಅವಕಾಶವನ್ನು ತೊರೆದದ್ದೇಕೆ? ಪುರಾತನ ಕಾಲದಲ್ಲಿ ಕಾಮಜನಕ ಗಿಡದ ಹಣ್ಣುಗಳನ್ನು ಔಷಧದಲ್ಲಿ ನಿದ್ರಾಜನಕವಾಗಿಯೂ ಸೆಡೆತವನ್ನು ತಡೆಯಲು ಅಥವಾ ಅದಕ್ಕೆ ಉಪಶಮನವನ್ನು ಕೊಡಲಿಕ್ಕಾಗಿಯೂ ಉಪಯೋಗಿಸಲಾಗುತ್ತಿತ್ತು. ಕಾಮಬಯಕೆಯನ್ನು ಉದ್ರೇಕಿಸಲು ಮತ್ತು ಗರ್ಭಮೂಡಿಸುವ ಶಕ್ತಿಯನ್ನು ಹೆಚ್ಚಿಸಲು ಅಥವಾ ಗರ್ಭಧಾರಣೆಯ ಸಹಾಯಕ್ಕಾಗಿಯೂ ಆ ಹಣ್ಣು ಉಪಯುಕ್ತವೆಂದು ನಂಬಲಾಗುತ್ತಿತ್ತು. (ಪರಮಗೀತ 7:13) ರಾಹೇಲಳ ಈ ವಿನಿಮಯದ ಹಿಂದೆ ಅವಳ ಉದ್ದೇಶವೇನಾಗಿತ್ತೆಂದು ಬೈಬಲ್‌ ತಿಳಿಸುವುದಿಲ್ಲವಾದರೂ, ಆ ಫಲಗಳು ತಾನು ಗರ್ಭಧರಿಸುವಂತೆ ಮಾಡಬಹುದೆಂದೂ ಮತ್ತು ಹೀಗೆ ಬಂಜೆಯಾಗಿರುವ ತನ್ನ ಅವಮಾನವನ್ನು ನೀಗಿಸಬಹುದೆಂದೂ ಆಕೆ ಭಾವಿಸಿರಬಹುದು. ಆದರೂ, ಯೆಹೋವನು ಆಕೆಗೆ “ಮಕ್ಕಳಾಗುವಂತೆ” ಮಾಡುವ ಮೊದಲು ಕೆಲವು ವರ್ಷಗಳು ದಾಟಿದ್ದವು.​—ಆದಿಕಾಂಡ 30:​22-24.

ನಮಗಾಗಿರುವ ಪಾಠಗಳು:

25:23. ಅಜಾತ ಶಿಶುವಿನ ಆನುವಂಶೀಯ ಪ್ರವೃತ್ತಿಯನ್ನು ಪತ್ತೆಹಚ್ಚುವ ಮತ್ತು ಆತನು ತನ್ನ ಉದ್ದೇಶಗಳಿಗಾಗಿ ಯಾರನ್ನು ಆರಿಸಿಕೊಳ್ಳುತ್ತಾನೊ ಅವರ ಬಗ್ಗೆ ತನ್ನ ಮುನ್ನರಿವನ್ನು ಬಳಸಿ ಮುಂಚಿತವಾಗಿಯೇ ಅವರನ್ನು ಆಯ್ಕೆಮಾಡುವ ಸಾಮರ್ಥ್ಯ ಯೆಹೋವನಿಗಿದೆ. ಆದರೂ ಆತನು ಒಬ್ಬೊಬ್ಬ ವ್ಯಕ್ತಿಯ ಅಂತ್ಯ ವಿಧಿಯನ್ನು ಮೊದಲೇ ನಿಷ್ಕರ್ಷಿಸುವುದಿಲ್ಲ.​—ಹೋಶೇಯ 12:3; ರೋಮಾಪುರ 9:​10-12.

25:​32, 33; 32:​24-29. ಚೊಚ್ಚಲುತನದ ಹಕ್ಕನ್ನು ಪಡೆಯುವ ವಿಷಯದಲ್ಲಿ ಯಾಕೋಬನಿಗಿದ್ದ ಚಿಂತೆ ಮತ್ತು ಆಶೀರ್ವಾದ ಪಡೆಯಲಿಕ್ಕಾಗಿ ಅವನು ದೂತನೊಂದಿಗೆ ಮಾಡಿದ ಹೋರಾಟವು, ಅವನು ನಿಜವಾಗಿಯೂ ಪವಿತ್ರ ವಿಷಯಗಳನ್ನು ಅಮೂಲ್ಯವಾಗಿ ಪರಿಗಣಿಸಿದನೆಂದು ತೋರಿಸುತ್ತದೆ. ಯೆಹೋವನು ನಮಗೆ, ಆತನೊಂದಿಗೆ ಮತ್ತು ಆತನ ಸಂಸ್ಥೆಯೊಂದಿಗಿನ ಸಂಬಂಧ, ವಿಮೋಚನಾ ಯಜ್ಞ, ಬೈಬಲು ಮತ್ತು ನಮ್ಮ ರಾಜ್ಯ ನಿರೀಕ್ಷೆಯಂತಹ ಅನೇಕ ಪವಿತ್ರ ಸಂಗತಿಗಳನ್ನು ಒಪ್ಪಿಸಿಕೊಟ್ಟಿದ್ದಾನೆ. ಅವುಗಳಿಗಾಗಿ ಕೃತಜ್ಞತೆಯನ್ನು ತೋರಿಸುವುದರಲ್ಲಿ ನಾವು ಯಾಕೋಬನಂತಿದ್ದೇವೆಂದು ತೋರಿಸಿಕೊಡೋಣ.

34:1, 30. ಯಾಕೋಬನಿಗೆ “ಅಪಾಯ” ತಂದೊಡ್ಡಿದ ಸಂಗತಿಯು ದೀನಳು ಯೆಹೋವನನ್ನು ಪ್ರೀತಿಸದ ಜನರೊಂದಿಗೆ ಮಿತ್ರತ್ವವನ್ನು ಬೆಳೆಸಿದಾಗ ಆರಂಭವಾಯಿತು. ನಾವು ನಮ್ಮ ಸಂಗಾತಿಗಳನ್ನು ವಿವೇಕದಿಂದ ಆರಿಸಿಕೊಳ್ಳಬೇಕು.

ಐಗುಪ್ತದಲ್ಲಿ ಯೆಹೋವನು ಯೋಸೇಫನನ್ನು ಆಶೀರ್ವದಿಸುತ್ತಾನೆ

(ಆದಿಕಾಂಡ 37:​1–50:26)

ಯಾಕೋಬನ ಪುತ್ರರು ಅವರ ತಮ್ಮನಾದ ಯೋಸೇಫನನ್ನು ದಾಸನಾಗಿ ಮಾರುವಂತೆ ಮಾಡಿದ್ದು ಅವರ ಮತ್ಸರ ಭಾವವೇ. ಐಗುಪ್ತದಲ್ಲಿ ಯೋಸೇಫನು ನಂಬಿಗಸ್ತಿಕೆಯಿಂದಲೂ ಧೈರ್ಯದಿಂದಲೂ ದೇವರ ನೈತಿಕ ಮಟ್ಟಗಳಿಗೆ ಅಂಟಿಕೊಂಡ ಕಾರಣ ಸೆರೆವಾಸಿಯಾಗುತ್ತಾನೆ. ಸಮಯಾನಂತರ, ಏಳು ವರುಷಗಳ ಸಮೃದ್ಧಿಯನ್ನು ಹಿಂಬಾಲಿಸಿ ಬರಲಿದ್ದ ಏಳು ವರುಷಗಳ ಬರವನ್ನು ಮುಂತಿಳಿಸಿದ ಫರೋಹನ ಕನಸುಗಳ ಅರ್ಥವನ್ನು ವಿವರಿಸಲು ಅವನನ್ನು ಸೆರೆಯಿಂದ ಬಿಡಿಸಿ ಹೊರತರಲಾಗುತ್ತದೆ. ನಂತರ ಯೋಸೇಫನನ್ನು ಆಹಾರ ಮಂತ್ರಿಯಾಗಿ ನೇಮಿಸಲಾಗುತ್ತದೆ. ಬರಗಾಲದ ದೆಸೆಯಿಂದ ಅವನ ಸಹೋದರರು ಆಹಾರವನ್ನು ಹುಡುಕುತ್ತಾ ಐಗುಪ್ತಕ್ಕೆ ಬರುತ್ತಾರೆ. ಕುಟುಂಬವು ಪುನಃ ಒಟ್ಟಾಗಿ ಫಲವತ್ತಾದ ಗೋಷೆನ್‌ ಸೀಮೆಯಲ್ಲಿ ನೆಲೆಸುತ್ತದೆ. ಯಾಕೋಬನು ತನ್ನ ಮರಣಶಯ್ಯೆಯಲ್ಲಿ, ತನ್ನ ಪುತ್ರರನ್ನು ಆಶೀರ್ವದಿಸಿ, ದೂರದ ಭವಿಷ್ಯತ್ತಿನಲ್ಲಿ ಬರಲಿರುವ ಮಹಾ ಆಶೀರ್ವಾದಗಳ ನಿಶ್ಚಿತ ನಿರೀಕ್ಷೆಯನ್ನು ಕೊಡುವ ಪ್ರವಾದನೆಯೊಂದನ್ನು ನುಡಿಯುತ್ತಾನೆ. ಯಾಕೋಬನ ಮೃತಶರೀರವನ್ನು ಹೂಣಿಡಲಿಕ್ಕಾಗಿ ಅದನ್ನು ಕಾನಾನಿಗೆ ಒಯ್ಯಲಾಗುತ್ತದೆ. ಯೋಸೇಫನು 110ನೆಯ ವಯಸ್ಸಿನಲ್ಲಿ ಮೃತನಾದಾಗ ಅವನ ಶವಸಂರಕ್ಷಣೆ ಮಾಡಿ, ಕಟ್ಟಕಡೆಗೆ ವಾಗ್ದತ್ತ ದೇಶಕ್ಕೆ ರವಾನಿಸಲಾಗುತ್ತದೆ.​—ವಿಮೋಚನಕಾಂಡ 13:19.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

43:32​—ಇಬ್ರಿಯರೊಂದಿಗೆ ಮಾಡುವ ಊಟ ಐಗುಪ್ತ್ಯರಿಗೆ ಏಕೆ ಅಸಹ್ಯವಾಗಿತ್ತು? ಇದು ಬಹುಮಟ್ಟಿಗೆ ಧಾರ್ಮಿಕ ಪೂರ್ವಾಗ್ರಹ ಅಥವಾ ಕುಲಾಭಿಮಾನದ ಕಾರಣದಿಂದಿರಬಹುದು. ಐಗುಪ್ತರು ಕುರುಬರನ್ನು ಸಹ ಅಸಹ್ಯರೆಂದೆಣಿಸುತ್ತಿದ್ದರು. (ಆದಿಕಾಂಡ 46:34) ಏಕೆ? ಕುರುಬರು ಐಗುಪ್ತ ಜಾತಿಪದ್ಧತಿಯಲ್ಲಿ ಕೆಳಮಟ್ಟದವರಾಗಿದ್ದಿರಬಹುದು. ಇಲ್ಲವೆ, ಕೃಷಿ ಪ್ರದೇಶವು ಸಾಕಷ್ಟು ಇಲ್ಲದಿದ್ದುದರಿಂದ ಐಗುಪ್ತ್ಯರು ಹುಲ್ಲುಗಾವಲನ್ನು ಹುಡುಕಿಕೊಂಡು ಬರುತ್ತಿದ್ದವರನ್ನು ಹೇಯವಾಗಿ ಕಂಡಿರಬಹುದು.

44:5​—ಯೋಸೇಫನು ಶಕುನಹೇಳಲು ನಿಜವಾಗಿಯೂ ಒಂದು ಪಾತ್ರೆಯನ್ನು ಉಪಯೋಗಿಸಿದನೊ? ಆ ಬೆಳ್ಳಿಯ ಪಾತ್ರೆ ಮತ್ತು ಅದರ ಸಾಮರ್ಥ್ಯದ ಕುರಿತು ಹೇಳಲಾದ ವಿಷಯವು ಕೇವಲ ಆ ಉಪಾಯ ಅಥವಾ ಯುಕ್ತಿಯ ಭಾಗವಾಗಿತ್ತೆಂದು ವ್ಯಕ್ತವಾಗುತ್ತದೆ. ಯೋಸೇಫನು ಯೆಹೋವನ ನಂಬಿಗಸ್ತ ಆರಾಧಕನಾಗಿದ್ದನು. ಬೆನ್ಯಾಮೀನನು ಪಾತ್ರೆಯನ್ನು ಹೇಗೆ ಕದಿಯಲಿಲ್ಲವೊ ಹಾಗೆಯೇ ಯೋಸೇಫನು ಸಹ ಶಕುನಹೇಳಲು ಆ ಪಾತ್ರೆಯನ್ನು ನಿಜವಾಗಿಯೂ ಉಪಯೋಗಿಸುತ್ತಿರಲಿಲ್ಲ.

49:10​—“ರಾಜದಂಡ” ಮತ್ತು “ಮುದ್ರೆಕೋಲು” ಎಂಬವುಗಳ ಅರ್ಥವೇನು? ರಾಜದಂಡವು ರಾಜ್ಯಾಧಿಕಾರದ ಸಂಕೇತವಾಗಿ ರಾಜನು ಹಿಡಿಯುವ ಒಂದು ದಂಡವಾಗಿದೆ. ಮುದ್ರೆಕೋಲು ಅಪ್ಪಣೆಕೊಡಲು ಅವನಿಗಿರುವ ಶಕ್ತಿಯನ್ನು ತೋರಿಸುವ ಉದ್ದವಾದ ಒಂದು ಕೋಲಾಗಿದೆ. ಯಾಕೋಬನು ಇವುಗಳನ್ನು ಸೂಚಿಸಿ ಹೇಳಿದ ಮಾತುಗಳು ಶಿಲೋವನು ಬರುವ ತನಕ ಅಧಿಕಾರವೂ ಶಕ್ತಿಯೂ ಯೆಹೂದ ಕುಲದಲ್ಲಿರುವುದು ಎಂಬುದನ್ನು ತೋರಿಸಿದವು. ಯೆಹೂದದ ಈ ವಂಶಸ್ಥನು, ಯಾರಿಗೆ ಯೆಹೋವನು ಸ್ವರ್ಗೀಯ ಆಳಿಕೆಯನ್ನು ಒಪ್ಪಿಸಿದ್ದಾನೊ ಆ ಯೇಸು ಕ್ರಿಸ್ತನೇ. ಕ್ರಿಸ್ತನಿಗೆ ರಾಜಾಧಿಕಾರವೂ ಆಜ್ಞೆಕೊಡುವ ಶಕ್ತಿಯೂ ಇದೆ.​—ಕೀರ್ತನೆ 2:8, 9; ಯೆಶಾಯ 55:4; ದಾನಿಯೇಲ 7:13, 14.

ನಮಗಾಗಿರುವ ಪಾಠಗಳು:

38:26. ಯೆಹೂದನು ವಿಧವೆಯಾಗಿದ್ದ ತನ್ನ ಸೊಸೆ ತಾಮಾರಳೊಂದಿಗೆ ನಡೆಸಿದಂಥ ಕೆಲಸವು ತಪ್ಪಾಗಿತ್ತು. ಆದರೂ ಆಕೆಯ ಗರ್ಭಧಾರಣೆಗೆ ಅವನೇ ಕಾರಣನೆಂದು ತೋರಿಸಲ್ಪಟ್ಟಾಗ, ಯೆಹೂದನು ದೈನ್ಯದಿಂದ ತನ್ನ ತಪ್ಪನ್ನು ಒಪ್ಪಿಕೊಂಡನು. ನಮ್ಮ ತಪ್ಪುಗಳನ್ನು ಒಡನೆ ಒಪ್ಪಿಕೊಳ್ಳಲು ನಾವು ಸಹ ಸಿದ್ಧರಾಗಿರಬೇಕು.

39:9. ಪೋಟೀಫರನ ಹೆಂಡತಿಗೆ ಯೋಸೇಫನು ತೋರಿಸಿದ ಪ್ರತಿವರ್ತನೆಯು, ನೈತಿಕತೆಯ ವಿಷಯದಲ್ಲಿ ಅವನ ಯೋಚನೆಗಳು ದೇವರ ಯೋಚನೆಗಳಿಗೆ ಹೊಂದಿಕೆಯಲ್ಲಿದ್ದವೆಂದೂ ಅವನ ಮನಸ್ಸಾಕ್ಷಿ ದೈವಿಕ ಮೂಲಸೂತ್ರಗಳಿಂದ ನಡೆಸಲ್ಪಡುತ್ತಿತ್ತೆಂದೂ ತೋರಿಸುತ್ತದೆ. ಸತ್ಯದ ನಿಷ್ಕೃಷ್ಟ ಜ್ಞಾನದಲ್ಲಿ ಬೆಳೆಯುವಾಗ ನಾವು ಸಹ ಹಾಗೆ ಮಾಡಲು ಪ್ರಯತ್ನಿಸಬೇಕಲ್ಲವೊ?

41:​14-16, 39, 40. ಯೆಹೋವನು ತನಗೆ ಭಯಪಡುವವರಿಗೋಸ್ಕರ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ತರಬಲ್ಲನು. ವಿಪತ್ತು ಬಂದೆರಗುವಾಗ, ನಾವು ಯೆಹೋವನಲ್ಲಿ ಭರವಸೆಯಿಟ್ಟು ಆತನಿಗೆ ನಂಬಿಗಸ್ತರಾಗಿರುವುದು ವಿವೇಕಪ್ರದ.

ಅವರಲ್ಲಿ ಸ್ಥಿರವಾದ ನಂಬಿಕೆಯಿತ್ತು

ಅಬ್ರಹಾಮ, ಇಸಾಕ, ಯಾಕೋಬ ಮತ್ತು ಯೋಸೇಫರು ದೇವಭಯವಿದ್ದ ನಂಬಿಕೆಯ ಪುರುಷರಾಗಿದ್ದರು. ಆದಿಕಾಂಡ ಪುಸ್ತಕದಲ್ಲಿರುವ ಅವರ ಜೀವನ ವೃತ್ತಾಂತಗಳು ನಿಜವಾಗಿಯೂ ನಂಬಿಕೆವರ್ಧಕವಾಗಿದ್ದು ಅನೇಕ ಬೆಲೆಬಾಳುವ ಪಾಠಗಳನ್ನು ನಮಗೆ ಕಲಿಸುತ್ತವೆ.

ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಸಾಪ್ತಾಹಿಕ ಬೈಬಲ್‌ ವಾಚನ ಭಾಗಗಳನ್ನು ಓದುವಾಗ ಈ ವೃತ್ತಾಂತದಿಂದ ಪ್ರಯೋಜನಪಡೆಯಬಲ್ಲಿರಿ. ಇಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳ ಪರಿಗಣನೆಯು ಆ ವೃತ್ತಾಂತದಲ್ಲಿ ಜೀವತುಂಬುವಂತೆ ಸಹಾಯಮಾಡುವುದು.

[ಪಾದಟಿಪ್ಪಣಿ]

^ ಪ್ಯಾರ. 3 ಕಾವಲಿನಬುರುಜು ಪತ್ರಿಕೆಯ ಜನವರಿ 1, 2004ರ ಸಂಚಿಕೆಯಲ್ಲಿ “ಆದಿಕಾಂಡ ಪುಸ್ತಕದ ಮುಖ್ಯಾಂಶಗಳು​—I” ಎಂಬ ಲೇಖನವನ್ನು ನೋಡಿ.

[ಪುಟ 26ರಲ್ಲಿರುವ ಚಿತ್ರ]

ಯೆಹೋವನು ಯೋಸೇಫನನ್ನು ಆಶೀರ್ವದಿಸುತ್ತಾನೆ

[ಪುಟ 26ರಲ್ಲಿರುವ ಚಿತ್ರ]

ಅಬ್ರಹಾಮನು ನಂಬಿಕೆಯ ಪುರುಷನಾಗಿದ್ದನು

[ಪುಟ 26ರಲ್ಲಿರುವ ಚಿತ್ರ]

ನೀತಿವಂತನಾದ ಲೋಟನು ಮತ್ತು ಅವನ ಪುತ್ರಿಯರು ಸಂರಕ್ಷಿಸಲ್ಪಟ್ಟರು

[ಪುಟ 29ರಲ್ಲಿರುವ ಚಿತ್ರ]

ಯಾಕೋಬನು ಪವಿತ್ರ ವಿಷಯಗಳನ್ನು ಗಣ್ಯಮಾಡಿದನು. ನೀವೂ ಹಾಗೆ ಮಾಡುತ್ತೀರೊ?