ನೀವು ಭರವಸೆಯಿಡಬಲ್ಲ ವಾಗ್ದಾನಗಳು
ನೀವು ಭರವಸೆಯಿಡಬಲ್ಲ ವಾಗ್ದಾನಗಳು
ವಾಗ್ದಾನಗಳು ಅನೇಕವೇಳೆ ಭರವಸೆಯಿಡಲಾಗದಂಥವುಗಳು ಆಗಿರಬಲ್ಲವೆಂದು ದೇವರ ಪ್ರವಾದಿಯಾದ ಮೀಕನಿಗೆ ತಿಳಿದಿತ್ತು. ಅವನ ದಿನಗಳಲ್ಲಿ, ಅತ್ಯಾಪ್ತ ಒಡನಾಡಿಗಳು ಸಹ ತಮ್ಮ ವಚನವನ್ನು ಪಾಲಿಸುವರೆಂದು ಯಾವಾಗಲೂ ಭರವಸವಿಡಸಾಧ್ಯವಿರಲಿಲ್ಲ. ಆದುದರಿಂದ ಮೀಕನು ಎಚ್ಚರಿಸಿದ್ದು: “ಮಿತ್ರನನ್ನು ನಂಬಬೇಡ; ಆಪ್ತನಲ್ಲಿ ಭರವಸವಿಡದಿರು; ನಿನ್ನ ಎದೆಯ ಮೇಲೆ ಒರಗುವವಳಿಗೂ ನಿನ್ನ ಬಾಯಬಾಗಲನ್ನು ಭದ್ರವಾಗಿಟ್ಟುಕೋ.”—ಮೀಕ 7:5.
ಈ ವಿಷಾದಕರ ಸನ್ನಿವೇಶದಿಂದಾಗಿ ಮೀಕನು ಎಲ್ಲಾ ವಾಗ್ದಾನಗಳ ಬಗ್ಗೆ ಶಂಕಿಸಲಾರಂಭಿಸಿದನೊ? ಇಲ್ಲ! ತನ್ನ ದೇವರಾದ ಯೆಹೋವನು ಮಾಡಿದ ವಾಗ್ದಾನಗಳಲ್ಲಿ ಅವನು ಸಂಪೂರ್ಣ ಭರವಸೆಯನ್ನು ವ್ಯಕ್ತಪಡಿಸಿದನು. ಮೀಕನು ಬರೆದುದು: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು.”—ಮೀಕ 7:7.
ಮೀಕನಿಗೆ ಅಂತಹ ಭರವಸೆ ಏಕಿತ್ತು? ಏಕೆಂದರೆ, ಯೆಹೋವನು ತನ್ನ ವಚನವನ್ನು ಸದಾ ಪಾಲಿಸುವಾತನೆಂಬುದು ಅವನಿಗೆ ತಿಳಿದಿತ್ತು. ಮೀಕನ ಮೂಲಪಿತೃಗಳಿಗೆ ದೇವರು ಪ್ರಮಾಣಮಾಡಿದ ಎಲ್ಲಾ ವಿಷಯಗಳು ತಪ್ಪದೇ ನೆರವೇರಿದ್ದವು. (ಮೀಕ 7:20) ಹಿಂದೆ ಯೆಹೋವನು ತೋರಿಸಿದ್ದ ನಂಬಿಗಸ್ತಿಕೆಯು, ಆತನು ಭವಿಷ್ಯದಲ್ಲೂ ತನ್ನ ಮಾತುಗಳನ್ನು ನೆರವೇರಿಸುವನೆಂಬುದನ್ನು ನಂಬಲು ಮೀಕನಿಗೆ ಸಕಲ ಕಾರಣಗಳನ್ನೂ ಕೊಟ್ಟಿತು.
‘ಎಲ್ಲವೂ ತಪ್ಪದೆ ನೆರವೇರಿದವು’
ಉದಾಹರಣೆಗೆ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದ್ದು ಮೀಕನಿಗೆ ತಿಳಿದಿತ್ತು. (ಮೀಕ 7:15) ಆ ಬಿಡುಗಡೆಯನ್ನು ಅನುಭವಿಸಿದ್ದ ಯೆಹೋಶುವನು, ದೇವರ ಸಕಲ ವಾಗ್ದಾನಗಳಲ್ಲಿ ನಂಬಿಕೆಯಿಡುವಂತೆ ತನ್ನ ಜೊತೆ ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸಿದನು. ಯಾವ ಆಧಾರದ ಮೇರೆಗೆ? ಯೆಹೋಶುವನು ಅವರಿಗೆ ಜ್ಞಾಪಕ ಹುಟ್ಟಿಸಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
ಯೆಹೋವನು ತಮಗಾಗಿ ವಿಸ್ಮಯಕರವಾದ ಸಂಗತಿಗಳನ್ನು ಮಾಡಿದ್ದನೆಂಬುದು ಇಸ್ರಾಯೇಲ್ಯರಿಗೆ ಚೆನ್ನಾಗಿ ತಿಳಿದಿತ್ತು. ದೇವಭಯವಿದ್ದ ತಮ್ಮ ಪಿತೃವಾದ ಅಬ್ರಹಾಮನಿಗೆ, ಅವನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತವಾಗಿ ಹೆಚ್ಚಿ, ಕಾನಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ಮಾಡಿದ ವಾಗ್ದಾನವನ್ನು ಆತನು ನೆರವೇರಿಸಿದ್ದನು. ಯೆಹೋವನು ಅಬ್ರಹಾಮನಿಗೆ, ಅವನ ವಂಶಸ್ಥರು 400 ವರುಷ ಬಾಧೆಪಡುವರು, ಆದರೆ “ನಾಲ್ಕನೆಯ ತಲಾಂತರದಲ್ಲಿ” ಕಾನಾನಿಗೆ ಹಿಂದಿರುಗುವರು ಎಂದೂ ಹೇಳಿದ್ದನು. ಮತ್ತು ಈ ಎಲ್ಲಾ ವಿಷಯಗಳು ವಾಸ್ತವದಲ್ಲಿ ನೆರವೇರಿದವು.—ಆದಿಕಾಂಡ 15:5-16; ವಿಮೋಚನಕಾಂಡ 3:6-8.
ಯಾಕೋಬನ ಮಗನಾದ ಯೋಸೇಫನ ಸಮಯದಲ್ಲಿ ಇಸ್ರಾಯೇಲ್ಯರನ್ನು ಐಗುಪ್ತದಲ್ಲಿ ಒಳ್ಳೇ ರೀತಿಯಲ್ಲಿ ಸ್ವಾಗತಿಸಲಾಗಿತ್ತು. ಆದರೆ ಬಳಿಕ ಐಗುಪ್ತ್ಯರು ಇಸ್ರಾಯೇಲ್ಯರನ್ನು ಪಾಶವೀಯ ರೀತಿಯ ಗುಲಾಮಗಿರಿಗೆ ಒಳಪಡಿಸಿದರು. ಆದರೆ ದೇವರ ವಾಗ್ದಾನಕ್ಕೆ ಸರಿಯಾಗಿ, ಅಬ್ರಹಾಮನ ಈ ವಂಶಸ್ಥರು ಐಗುಪ್ತಕ್ಕೆ ಪ್ರವೇಶಿಸಿದ ಸಮಯದಂದಿನಿಂದ ಅನುಕ್ರಮವಾದ ನಾಲ್ಕು ತಲೆಮಾರುಗಳ ಅವಧಿಯೊಳಗೆ ಐಗುಪ್ತರ ಗುಲಾಮಗಿರಿಯಿಂದ ಬಿಡುಗಡೆಹೊಂದಿದರು. *
ಮುಂದಿನ 40 ವರುಷಗಳಲ್ಲಿ, ಯೆಹೋವನು ತನ್ನ ವಾಗ್ದಾನಗಳನ್ನು ಸದಾ ನೆರವೇರಿಸುತ್ತಾನೆಂಬುದಕ್ಕೆ ಇನ್ನೂ ಹೆಚ್ಚಿನ ಪುರಾವೆಯು ಇಸ್ರಾಯೇಲ್ಯರಿಗೆ ದೊರಕಿತು. ಅಮಾಲೇಕ್ಯರು ಇಸ್ರಾಯೇಲ್ಯರ ಮೇಲೆ ಕಾರಣವಿಲ್ಲದೆ ಆಕ್ರಮಣಮಾಡಿದಾಗ, ದೇವರು ತನ್ನ ಜನರ ಪರವಾಗಿ ಕಾದಾಡಿ ಅವರನ್ನು ರಕ್ಷಿಸಿದನು. ಅವರು ಅರಣ್ಯದಲ್ಲಿ 40 ವರುಷ ಪಯಣಿಸಿದಾಗ ಆತನು ಅವರ ಸಕಲ ಲೌಕಿಕ ಅಗತ್ಯಗಳನ್ನು ಪೂರೈಸಿ, ಕಟ್ಟಕಡೆಗೆ ಅವರನ್ನು ವಾಗ್ದತ್ತ ದೇಶದಲ್ಲಿ ನೆಲೆಗೊಳಿಸಿದನು. ಅಬ್ರಹಾಮನ ಈ ವಂಶಸ್ಥರೊಂದಿಗೆ ಯೆಹೋವನ ವ್ಯವಹಾರಗಳ ಚರಿತ್ರೆಯನ್ನು ಯೆಹೋಶುವನು ಪುನರ್ವಿಮರ್ಶಿಸಿದಾಗ, ಅವನು ಭರವಸೆಯಿಂದ ಹೀಗೆ ಹೇಳಸಾಧ್ಯವಿತ್ತು: “ಆತನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು.”—ಯೆಹೋಶುವ 21:45.
ದೇವರ ವಾಗ್ದಾನಗಳಲ್ಲಿ ಭರವಸೆಯನ್ನು ಕಟ್ಟಿರಿ
ಮೀಕ ಮತ್ತು ಯೆಹೋಶುವರಂತೆ, ಯೆಹೋವನ ವಾಗ್ದಾನಗಳಲ್ಲಿ ನೀವು ಹೇಗೆ ನಂಬಿಕೆಯನ್ನು ಕಟ್ಟಬಹುದು? ಒಳ್ಳೇದು, ನೀವು ಇತರರಲ್ಲಿ ಭರವಸೆಯನ್ನು ಹೇಗೆ ಬೆಳೆಸಿಕೊಳ್ಳುತ್ತೀರಿ? ನಿಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ಅವರ ಬಗ್ಗೆ ತಿಳಿದುಕೊಳ್ಳುತ್ತೀರಲ್ಲವೆ? ಉದಾಹರಣೆಗೆ, ಅವರು ತಾವು ಕೊಟ್ಟ ಮಾತುಗಳನ್ನೆಲ್ಲ ಪಾಲಿಸಲು ಹೇಗೆ ನಂಬಿಗಸ್ತಿಕೆಯಿಂದ ಪ್ರಯತ್ನಿಸುತ್ತಾರೆಂಬುದನ್ನು ಗಮನಿಸಿ ನೀವು ಅವರ ಭರವಸಾರ್ಹತೆಯ ಕುರಿತು ಕಲಿಯಬಹುದು. ಇಂತಹ ಜನರ ಬಗ್ಗೆ ನಿಮ್ಮ ತಿಳಿವಳಿಕೆಯು ಹೆಚ್ಚಿದಂತೆ ಅವರ ಮೇಲಿನ ನಿಮ್ಮ ಭರವಸೆಯೂ ಹಂತಹಂತವಾಗಿ ಬೆಳೆಯುತ್ತದೆ. ದೇವರ ವಾಗ್ದಾನಗಳಲ್ಲಿ ನಂಬಿಕೆಯನ್ನು ವರ್ಧಿಸುವ ವಿಷಯದಲ್ಲಿಯೂ ನೀವು ಇದನ್ನೇ ಮಾಡಸಾಧ್ಯವಿದೆ.
ನೀವು ಹೀಗೆ ಮಾಡಬಲ್ಲ ಒಂದು ವಿಧವು, ಸೃಷ್ಟಿ ಮತ್ತು ಅದನ್ನು ನಿಯಂತ್ರಿಸುವ ನಿಯಮಗಳ ಬಗ್ಗೆ ಧ್ಯಾನಿಸುವುದೇ ಆಗಿದೆ. ವಿಜ್ಞಾನಿಗಳಿಗೆ ಈ ನಿಯಮಗಳ ಮೇಲೆ ಭರವಸೆಯಿದೆ. ದೃಷ್ಟಾಂತಕ್ಕೆ, ಒಂದು ಜೀವಕೋಶವು ವಿಭಜನೆಗೊಂಡು ನಿಮ್ಮ ದೇಹದಲ್ಲಿರುವ ಶತಕೋಟಿಗಟ್ಟಲೆ ಜೀವಕೋಶಗಳನ್ನು ಉತ್ಪಾದಿಸುತ್ತಾ ವೃದ್ಧಿಯಾಗುವಂತಹ ರೀತಿಯನ್ನು ನಿಯಂತ್ರಿಸುವ ನಿಯಮದ ಮೇಲೆ ಅವರಿಗೆ ಭರವಸೆಯಿದೆ. ಕೀರ್ತನೆ 139:14-16, ಯೆಶಾಯ 40:26; ಇಬ್ರಿಯ 3:4.
ವಾಸ್ತವವೇನಂದರೆ, ಇಡೀ ವಿಶ್ವದಲ್ಲಿರುವ ಭೌತದ್ರವ್ಯ ಮತ್ತು ಶಕ್ತಿಯ ಕಾರ್ಯರೀತಿಯನ್ನು ನಿಯಂತ್ರಿಸುವ ನಿಯಮಗಳು, ಪೂರ್ಣ ರೀತಿಯಲ್ಲಿ ಭರವಸಾರ್ಹನಾದ ಒಬ್ಬ ನಿಯಮ ಶಾಸಕನಿಂದ ಸ್ಥಾಪಿಸಲ್ಪಟ್ಟಿರಬೇಕು. ಆದಕಾರಣ ಆತನ ಸೃಷ್ಟಿಯನ್ನು ನಿಯಂತ್ರಿಸುವ ನಿಯಮಗಳಲ್ಲಿ ನಿಮಗೆ ಭರವಸೆಯಿರುವಂತೆಯೇ, ಆತನ ವಾಗ್ದಾನಗಳಲ್ಲಿಯೂ ನೀವು ನಿಶ್ಚಯವಾಗಿ ಭರವಸೆಯಿಡಸಾಧ್ಯವಿದೆ.—ಮೀಕನ ಸಮಕಾಲೀನ ಪ್ರವಾದಿಯಾಗಿದ್ದ ಯೆಶಾಯನ ಮೂಲಕ ಯೆಹೋವನು ತನ್ನ ವಾಕ್ಯದ ಭರವಸಾರ್ಹತೆಯನ್ನು ದೃಷ್ಟಾಂತಿಸಲು ಋತುಗಳ ಕ್ರಮಬದ್ಧತೆಯನ್ನೂ ಅಚ್ಚರಿ ಮೂಡಿಸುವ ಜಲ ಚಕ್ರವನ್ನೂ ಉಪಯೋಗಿಸಿದನು. ಮಳೆ ಪ್ರತಿ ವರುಷ ಸುರಿಯುತ್ತದೆ. ಅದು ಭೂಮಿಯನ್ನು ಪೂರ್ತಿ ತೋಯಿಸಿ, ಜನರು ಬೀಜ ಬಿತ್ತುವಂತೆಯೂ ಬೆಳೆಯನ್ನು ಕೊಯ್ಯುವಂತೆಯೂ ಸಾಧ್ಯ ಮಾಡುತ್ತದೆ. ಈ ಸಂಬಂಧದಲ್ಲಿ ಯೆಹೋವನು ಹೇಳಿದ್ದು: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸಿರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:10, 11.
ಪರದೈಸಿನ ಕುರಿತಾದ ಖಚಿತ ವಾಗ್ದಾನಗಳು
ಸೃಷ್ಟಿಯನ್ನು ಪರಿಶೀಲಿಸುವುದು ಸೃಷ್ಟಿಕರ್ತನಲ್ಲಿ ಭರವಸೆಯನ್ನು ಕಟ್ಟಬಹುದಾದರೂ ‘ಆತನ ಬಾಯಿಂದ ಹೊರಡುವ ಮಾತಿನ’ ಭಾಗವಾಗಿರುವ ವಾಗ್ದಾನಗಳ ಕುರಿತು ನೀವು ಕಲಿಯಲು ಬಯಸಬೇಕಾದರೆ ಇನ್ನೂ ಹೆಚ್ಚಿನದ್ದರ ಆವಶ್ಯಕತೆಯಿದೆ. ಈ ವಾಗ್ದಾನಗಳಲ್ಲಿ ಭರವಸೆಯಿಡಲಾಗುವಂತೆ ಅವುಗಳ ಕುರಿತು ನೀವು ಕಲಿಯಬೇಕಾದರೆ, ಭೂಮಿಗಾಗಿರುವ ದೇವರ ಉದ್ದೇಶ ಮತ್ತು ಮಾನವಕುಲದೊಂದಿಗಿನ ಆತನ ವ್ಯವಹಾರಗಳ ಕುರಿತಾದ ದೇವಪ್ರೇರಿತ ಶಾಸ್ತ್ರೀಯ ದಾಖಲೆಯನ್ನೂ ನೀವು ಪರೀಕ್ಷಿಸುವುದು ಅಗತ್ಯ.—2 ತಿಮೊಥೆಯ 3:14-17.
ಪ್ರವಾದಿ ಮೀಕನಿಗೆ ಯೆಹೋವನ ವಾಗ್ದಾನಗಳಲ್ಲಿ ಭರವಸೆಯಿತ್ತು. ಆದರೆ ಮೀಕನಿಗೆ ದೊರೆತದ್ದಕ್ಕಿಂತ ಹೆಚ್ಚು ದೇವಪ್ರೇರಿತ ದಾಖಲೆಗಳು ನಿಮಗೀಗ ಲಭ್ಯವಿವೆ. ನೀವು ಬೈಬಲನ್ನು ಓದಿ ಅದರ ಕುರಿತು ಮನನ ಮಾಡುವಾಗ, ದೇವರ ವಾಗ್ದಾನಗಳ ನೆರವೇರಿಕೆಯಲ್ಲಿ ನೀವು ಸಹ ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲಿರಿ. ಈ ವಾಗ್ದಾನಗಳಲ್ಲಿ ಅಬ್ರಹಾಮನ ಪ್ರಾಕೃತಿಕ ವಂಶಸ್ಥರು ಮಾತ್ರವಲ್ಲ, ಇಡೀ ಮಾನವಕುಲವು ಒಳಗೊಂಡಿದೆ. ಯೆಹೋವನು ಈ ದೇವಭಯವಿದ್ದ ಮೂಲಪಿತನಿಗೆ ವಚನಕೊಟ್ಟದ್ದು: “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:18) ಅಬ್ರಹಾಮನ ಆ “ಸಂತತಿ” ಅಥವಾ ಸಂತಾನದ ಪ್ರಧಾನ ಭಾಗವು ಮೆಸ್ಸೀಯನಾದ ಯೇಸು ಕ್ರಿಸ್ತನಾಗಿದ್ದಾನೆ.—ಗಲಾತ್ಯ 3:16.
ಆ ಆಶೀರ್ವಾದಗಳು ಯೇಸು ಕ್ರಿಸ್ತನ ಮೂಲಕ ವಿಧೇಯ ಮಾನವರಿಗೆ ಹರಿಯುವುದನ್ನು ಯೆಹೋವನು ಖಚಿತಪಡಿಸಿಕೊಳ್ಳುವನು. ಮತ್ತು ದೇವರು ನಮ್ಮ ಕಾಲದಲ್ಲಿ ಏನು ಮಾಡುವೆನೆಂದು ವಾಗ್ದಾನಿಸಿದ್ದಾನೆ? ಮೀಕ 4:1, 2 ಈ ಪ್ರವಾದನಾತ್ಮಕ ಮಾತುಗಳಲ್ಲಿ ಉತ್ತರ ಕೊಡುತ್ತದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. ಹೊರಟುಬಂದ ಬಹು ದೇಶಗಳವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”
ಯೆಹೋವನ ಮಾರ್ಗಗಳ ಕುರಿತು ಕಲಿಯುವವರು “ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.” ಆಗ ಯುದ್ಧಸದೃಶ ಪ್ರವೃತ್ತಿಗಳೆಲ್ಲವೂ ಇಲ್ಲದೆ ಹೋಗುವುವು. ಬೇಗನೆ ಭೂಮಿಯು ಯಥಾರ್ಥವಂತರಿಂದ ತುಂಬಿರುವುದು ಮತ್ತು ಅವರನ್ನು ಯಾರೂ ಹೆದರಿಸರು. (ಮೀಕ 4:3, 4) ಹೌದು, ಯೇಸು ಕ್ರಿಸ್ತನ ಹಸ್ತಗಳಲ್ಲಿರುವ ಆ ರಾಜ್ಯದಡಿಯಲ್ಲಿ ಯೆಹೋವನು ಭೂಮಿಯಿಂದ ಶೋಷಣೆಮಾಡುವವರೆಲ್ಲರನ್ನು ತೆಗೆದುಬಿಡುವನೆಂದು ದೇವರ ವಾಕ್ಯ ವಾಗ್ದಾನಿಸುತ್ತದೆ.—ಯೆಶಾಯ 11:6-9; ದಾನಿಯೇಲ 2:44; ಪ್ರಕಟನೆ 11:18.
ದೇವರ ವಿರುದ್ಧ ಮಾನವ ದಂಗೆಯ ಪರಿಣಾಮವಾಗಿ ನರಳಿ ಸತ್ತವರನ್ನು ಸಹ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ಪುನಃ ಎಬ್ಬಿಸಲಾಗುವುದು. (ಯೋಹಾನ 5:28, 29) ದುಷ್ಟತನದ ಚಿತಾವಣೆಗಾರರಾದ ಸೈತಾನನು ಮತ್ತು ಅವನ ದೆವ್ವಗಳೂ ಆಗ ಇಲ್ಲದೆ ಹೋಗುವವು, ಮತ್ತು ಆದಾಮನ ಪಾಪದ ಪರಿಣಾಮಗಳನ್ನು ಯೇಸುವಿನ ವಿಮೋಚನಾ ಯಜ್ಞದ ಮುಖೇನ ತೆಗೆದು ಹಾಕಲಾಗುವುದು. (ಮತ್ತಾಯ 20:28; ರೋಮಾಪುರ 3:23, 24; 5:12; 6:23; ಪ್ರಕಟನೆ 20:1-3) ಹಾಗಾದರೆ ವಿಧೇಯ ಮಾನವರ ಪರಿಸ್ಥಿತಿ ಆಗ ಹೇಗಿರುವುದು? ಭೂಪರದೈಸಿನಲ್ಲಿ ಪರಿಪೂರ್ಣ ಆರೋಗ್ಯದೊಂದಿಗೆ ನಿತ್ಯಜೀವದ ಆಶೀರ್ವಾದವನ್ನು ಅವರು ಪಡೆಯುವರು!—ಕೀರ್ತನೆ 37:10, 11; ಲೂಕ 23:43; ಪ್ರಕಟನೆ 21:3-5.
ಎಷ್ಟು ಅದ್ಭುತಕರ ವಾಗ್ದಾನಗಳಿವು! ಆದರೆ ನೀವು ಅವುಗಳನ್ನು ನಂಬಬಲ್ಲಿರೊ? ನಿಶ್ಚಯವಾಗಿಯೂ ನಂಬಸಾಧ್ಯವಿದೆ. ಇವು, ಸದುದ್ದೇಶವಿದ್ದರೂ ನೆರವೇರಿಸುವ ಶಕ್ತಿ ಇಲ್ಲದಿರುವಂತಹ ಮಾನವರ ವಾಗ್ದಾನಗಳಲ್ಲ. ಬದಲಾಗಿ ಸುಳ್ಳಾಡದ ಮತ್ತು ‘ತಡಮಾಡದ’ವನಾಗಿರುವ ಸರ್ವಶಕ್ತನಾದ ದೇವರ ವಾಗ್ದಾನಗಳಾಗಿವೆ. (2 ಪೇತ್ರ 3:9; ಇಬ್ರಿಯ 6:13-18) ಬೈಬಲಿನಲ್ಲಿ ಅಡಕವಾಗಿರುವ ಸಕಲ ವಾಗ್ದಾನಗಳಲ್ಲಿ ನೀವು ಪೂರ್ಣ ಭರವಸೆಯಿಡಸಾಧ್ಯವಿದೆ, ಏಕೆಂದರೆ ಅವುಗಳ ಮೂಲನು “ಸತ್ಯದ ದೇವರಾದ ಯೆಹೋವನು” ಆಗಿದ್ದಾನೆ.—ಕೀರ್ತನೆ 31:5, NW.
[ಪಾದಟಿಪ್ಪಣಿ]
^ ಪ್ಯಾರ. 8 ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಶಾಸ್ತ್ರಗಳ ಕುರಿತಾದ ಒಳನೋಟ (ಕನ್ನಡದಲ್ಲಿ ಲಭ್ಯವಿಲ್ಲ) ಸಂಪುಟ 1ರ 911-912ನೆಯ ಪುಟಗಳನ್ನು ನೋಡಿ.
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ.”—ಯೆಹೋಶುವ 23:14
[ಪುಟ 4, 5ರಲ್ಲಿರುವ ಚಿತ್ರಗಳು]
ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ವಾಗ್ದಾನಗಳನ್ನು ಕೆಂಪು ಸಮುದ್ರದಲ್ಲಿಯೂ ಅರಣ್ಯದಲ್ಲಿಯೂ ಪೂರೈಸಿದನು
[ಪುಟ 7ರಲ್ಲಿರುವ ಚಿತ್ರಗಳು]
ಯೆಹೋವನು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದನು. ಅವನ ಸಂತಾನವಾದ ಯೇಸು ಕ್ರಿಸ್ತನು ಮಾನವಕುಲಕ್ಕೆ ಆಶೀರ್ವಾದಗಳನ್ನು ತರುವನು