ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯಾರ ವಾಗ್ದಾನಗಳಲ್ಲಿ ಭರವಸೆಯಿಡಬಲ್ಲಿರಿ?

ನೀವು ಯಾರ ವಾಗ್ದಾನಗಳಲ್ಲಿ ಭರವಸೆಯಿಡಬಲ್ಲಿರಿ?

ನೀವು ಯಾರ ವಾಗ್ದಾನಗಳಲ್ಲಿ ಭರವಸೆಯಿಡಬಲ್ಲಿರಿ?

“ಅವನ ವಾಗ್ದಾನಗಳು, ಆ ಸಮಯದಲ್ಲಿ ಅವನಿದ್ದಂತೆಯೇ ಪ್ರಬಲವಾಗಿದ್ದವು; ಆದರೆ ಅವುಗಳನ್ನು ನುಡಿದವನಂತೆಯೇ ಈ ವಾಗ್ದಾನಗಳೂ ಶೂನ್ಯವಾಗಿಯೇ ಉಳಿದವು.”​—⁠ವಿಲ್ಯಮ್‌ ಶೇಕ್ಸ್‌ಪಿಯರ್‌ ಬರೆದ ಕಿಂಗ್‌ ಹೆನ್ರಿ ದಿ ಏಟ್ಥ್‌.

ಶೇಕ್ಸ್‌ಪಿಯರ್‌ ಸೂಚಿಸಿದ ಆ ಪ್ರಬಲ ವಾಗ್ದಾನಗಳು ಇಂಗ್ಲೆಂಡಿನ ಕಾರ್ಡಿನಲ್‌ ಥಾಮಸ್‌ ವೂಲ್ಸಿ ಎಂಬವನದ್ದಾಗಿದ್ದವು. ಅವನು 16ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಮಹಾ ರಾಜಕೀಯ ಅಧಿಕಾರಶಕ್ತಿಯುಳ್ಳವನಾಗಿದ್ದನು. ಆದರೆ ಮೇಲೆ ಕೊಡಲ್ಪಟ್ಟಿರುವ ಶೇಕ್ಸ್‌ಪಿಯರನ ವರ್ಣನೆಯು, ಇಂದು ಕೇಳಿಬರುವ ವಾಗ್ದಾನಗಳಲ್ಲಿ ಹೆಚ್ಚಿನವುಗಳಿಗೂ ಅನ್ವಯವಾಗುತ್ತದೆಂಬದು ಕೆಲವರ ಅಭಿಪ್ರಾಯ. ಪದೇ ಪದೇ ಜನರಿಗೆ ಬಹಳಷ್ಟು ವಾಗ್ದಾನಗಳು ಕೊಡಲ್ಪಡುತ್ತವೆಯಾದರೂ ಅವುಗಳಲ್ಲಿ ಹೆಚ್ಚಿನವುಗಳನ್ನು ಕೈಗೂಡಿಸಲಾಗುವುದಿಲ್ಲ. ಆದಕಾರಣ ಯಾವುದೇ ವಾಗ್ದಾನ ಇರಲಿ, ಅದನ್ನು ಜನರು ಏಕೆ ಶಂಕಿಸುತ್ತಾರೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೇನಲ್ಲ.

ಬಹಳಷ್ಟು ನಿರಾಶೆಗಳು

ಉದಾಹರಣೆಗೆ, 1990ಗಳಲ್ಲಿ ಬಾಲ್ಕನ್‌ ಪ್ರದೇಶದಲ್ಲಿ ನಡೆದ ಭಯಂಕರ ಹೋರಾಟದಲ್ಲಿ, ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯು ಸ್ರೀಬ್ರನೀಟ್ಸ ನಗರವನ್ನು “ಸುರಕ್ಷಿತ ಕ್ಷೇತ್ರ”ವೆಂದು ಘೋಷಿಸಿತು. ಇದು ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಕೊಟ್ಟ ಭರವಸಾರ್ಹ ಮಾತಾಗಿ ತೋರಿಬಂತು. ಸ್ರೀಬ್ರನೀಟ್ಸದಲ್ಲಿದ್ದ ಸಾವಿರಾರು ಮಂದಿ ಮುಸಲ್ಮಾನರೂ ಹಾಗೆಯೇ ಯೋಚಿಸಿದರು. ಆದರೆ ಕೊನೆಯಲ್ಲಿ, ಈ ಸುರಕ್ಷಿತ ತಾಣದ ಕುರಿತಾದ ವಾಗ್ದಾನವು ಸಂಪೂರ್ಣವಾಗಿ ವ್ಯರ್ಥವಾಗಿ ರುಜುವಾಯಿತು. (ಕೀರ್ತನೆ 146:⁠3) 1995ರ ಜುಲೈ ತಿಂಗಳಲ್ಲಿ ದಾಳಿಮಾಡಿದ ಸೈನ್ಯಗಳು ವಿಶ್ವ ಸಂಸ್ಥೆಯ ಸೈನ್ಯಗಳನ್ನು ಸುಲಭವಾಗಿ ತಳ್ಳಿಹಾಕಿ, ನಗರವನ್ನು ಸದೆಬಡಿದವು. ಮುಸಲ್ಮಾನರಲ್ಲಿ 6,000ಕ್ಕೂ ಹೆಚ್ಚಿನವರು ಕಾಣೆಯಾದರು; ಮತ್ತು ಕಡಿಮೆಪಕ್ಷ 1,200 ಮಂದಿ ಅಯೋಧ ಮುಸಲ್ಮಾನರನ್ನು ಕೊಲೆಮಾಡಲಾಯಿತು.

ಜೀವನದ ಪ್ರತಿಯೊಂದು ಭಾಗವೂ ಮುರಿದುಬಿದ್ದಿರುವ ವಾಗ್ದಾನಗಳಿಂದ ತುಂಬಿಹೋಗಿದೆ. ಇಂದು, “ತಪ್ಪಾದ ಅಥವಾ ದಾರಿತಪ್ಪಿಸುವ ಅಸಂಖ್ಯಾತ ಜಾಹೀರಾತುಗಳ” ಸುರಿಮಳೆಯಿಂದ ಜನರಿಗೆ ತಾವು ವಂಚಿಸಲ್ಪಟ್ಟಿದ್ದೇವೆಂದು ಅನಿಸುತ್ತದೆ. “ಸಾವಿರಾರು ಮಂದಿ ರಾಜಕಾರಣಿಗಳ ಭಗ್ನ ಚುನಾವಣಾ ವಾಗ್ದಾನ”ಗಳಿಂದ ಜನರು ಭ್ರಮನಿರಸನಗೊಂಡಿದ್ದಾರೆ. (ದ ನ್ಯೂ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ, ಸಂಪುಟ 15, ಪುಟ 37) ಯಾರ ಮೇಲೆ ಭರವಸೆಯಿಡಲಾಗುತ್ತದೊ ಆ ಧಾರ್ಮಿಕ ಮುಖಂಡರು ತಮ್ಮ ಹಿಂಡುಗಳನ್ನು ಪರಾಮರಿಸುವೆವೆಂದು ಮಾತುಕೊಡುವುದಾದರೂ ಅವರೇ ಆ ಹಿಂಡುಗಳನ್ನು ಅತಿ ಹೇಯವಾದ ರೀತಿಯ ದೌರ್ಜನ್ಯಕ್ಕೊಳಪಡಿಸುತ್ತಾರೆ. ಅಷ್ಟುಮಾತ್ರವಲ್ಲದೆ, ಇತರರಿಗೆ ಕನಿಕರ ಮತ್ತು ಚಿಂತೆಯನ್ನು ತೋರಿಸಬೇಕಾಗಿರುವ ಶಿಕ್ಷಣ ಮತ್ತು ವೈದ್ಯಶಾಸ್ತ್ರದಂತಹ ವೃತ್ತಿಯಲ್ಲೂ, ಕೆಲವರು ತಮ್ಮ ಮೇಲಿಡಲ್ಪಟ್ಟಿರುವ ಭರವಸೆಗೆ ದ್ರೋಹವೆಸಗಿ, ತಮ್ಮ ಆರೈಕೆಯ ಕೆಳಗಿರುವವರನ್ನು ಶೋಷಣೆಗೊಳಪಡಿಸಿದ್ದಾರೆ ಅಥವಾ ಅವರ ಹತ್ಯೆಯನ್ನೂ ಮಾಡಿದ್ದಾರೆ. ಆದುದರಿಂದಲೇ ಎಲ್ಲಾ ಮಾತುಗಳಲ್ಲಿ ಭರವಸೆಯಿಡಬಾರದೆಂದು ಬೈಬಲ್‌ ಎಚ್ಚರಿಸುವುದರಲ್ಲಿ ಆಶ್ಚರ್ಯವೇನಿಲ್ಲ!​—⁠ಜ್ಞಾನೋಕ್ತಿ 14:15.

ಪೂರೈಸಲ್ಪಟ್ಟಿರುವ ವಾಗ್ದಾನಗಳು

ಆದರೂ, ಅನೇಕರು ಕೆಲವೊಮ್ಮೆ ಭಾರೀ ಬೆಲೆಯನ್ನು ತೆತ್ತಾದರೂ ಸರಿ, ತಾವು ಕೊಟ್ಟ ಮಾತನ್ನು ನೆರವೇರಿಸುತ್ತಾರೆ. (ಕೀರ್ತನೆ 15:⁠4) ಅವರು ಕೊಟ್ಟ ಮಾತೇ ಅವರ ಗ್ಯಾರಂಟಿಯಾಗಿದ್ದು, ಅವರದನ್ನು ಪೂರೈಸುತ್ತಾರೆ. ಇನ್ನು ಕೆಲವರು ತಾವು ಕೊಟ್ಟ ಮಾತುಗಳನ್ನು ಯಥಾರ್ಥವಾಗಿ ಮತ್ತು ಸದುದ್ದೇಶದಿಂದ ಪೂರೈಸಬೇಕೆಂದು ಬಯಸುತ್ತಾರೆ. ಅವರು ಕೊಟ್ಟ ಮಾತನ್ನು ಪೂರೈಸಲು ಸಿದ್ಧರೂ ಮನಸ್ಸುಳ್ಳವರೂ ಆಗಿರುತ್ತಾರೆ, ಆದರೆ ಅದನ್ನು ಮಾಡಲು ಅವರಿಂದ ಆಗುವುದೇ ಇಲ್ಲ. ಏಕೆಂದರೆ ತಟ್ಟನೆ ಏಳುವ ಪರಿಸ್ಥಿತಿಗಳು ಒಬ್ಬನಿಗಿರಬಹುದಾದ ಅತಿ ಉದಾತ್ತ ಯೋಜನೆಗಳನ್ನೂ ಬುಡಮೇಲುಮಾಡಬಲ್ಲವು.​—⁠ಪ್ರಸಂಗಿ 9:11.

ಕಾರಣವು ಏನೇ ಆಗಿರಲಿ, ಯಾವುದೇ ವ್ಯಕ್ತಿಯ ವಾಗ್ದಾನಗಳಲ್ಲಿ ಭರವಸೆಯಿಡುವುದನ್ನು ಅನೇಕ ಜನರು ಬಹಳ ಕಷ್ಟಕರವಾದುದ್ದಾಗಿ ಕಂಡುಕೊಳ್ಳುತ್ತಾರೆಂಬುದು ನೈಜಸ್ಥಿತಿಯಾಗಿದೆ. ಆದಕಾರಣ ಏಳುವ ಪ್ರಶ್ನೆಯೇನೆಂದರೆ, ನಾವು ಭರವಸವಿಡಬಲ್ಲ ಯಾವ ವಾಗ್ದಾನಗಳಾದರೂ ಇವೆಯೋ? ಹೌದು ಇವೆ. ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ವಾಗ್ದಾನಗಳಲ್ಲಿ ನಾವು ಭರವಸವಿಡಬಲ್ಲೆವು. ಮುಂದಿನ ಲೇಖನವು ಈ ವಿಷಯದಲ್ಲಿ ಏನು ಹೇಳುತ್ತದೆಂಬುದನ್ನು ಏಕೆ ಪರೀಕ್ಷಿಸಿ ನೋಡಬಾರದು? ಆಗ, ಇತರ ಲಕ್ಷಾಂತರ ಮಂದಿಯು ಕಂಡುಕೊಂಡಿರುವಂತೆ ನೀವು ಸಹ, ದೇವರ ವಾಗ್ದಾನಗಳಲ್ಲಿ ನಾವು ನಿಜವಾಗಿಯೂ ಭರವಸವಿಡಬಲ್ಲೆವೆಂಬ ತೀರ್ಮಾನಕ್ಕೆ ಬರುವಿರಿ.

[ಪುಟ 3ರಲ್ಲಿರುವ ಚಿತ್ರ ಕೃಪೆ]

AP Photo/Amel Emric