ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯನನ್ನಲ್ಲ, ದೇವರನ್ನು ಘನಪಡಿಸಿರಿ

ಮನುಷ್ಯನನ್ನಲ್ಲ, ದೇವರನ್ನು ಘನಪಡಿಸಿರಿ

ಮನುಷ್ಯನನ್ನಲ್ಲ, ದೇವರನ್ನು ಘನಪಡಿಸಿರಿ

ಇತ್ತೀಚಿನ ತಿಂಗಳುಗಳಲ್ಲಿ, ಭೂಗೋಲದ ಸುತ್ತಲೂ ಇರುವ ನೀತಿಪ್ರಿಯರು ಯೆಹೋವನ ಸಾಕ್ಷಿಗಳ “ದೇವರನ್ನು ಘನಪಡಿಸಿರಿ” ಎಂಬ ಜಿಲ್ಲಾ ಅಧಿವೇಶನಗಳಲ್ಲಿ ಕೂಡಿಬಂದಾಗ, ದೇವರನ್ನು ಹೇಗೆ ಘನಪಡಿಸುವುದು ಎಂಬುದನ್ನು ಕಲಿತುಕೊಂಡರು. ಈಗ ಅಲ್ಲಿ ಪ್ರಸ್ತುತಪಡಿಸಲಾದ ಶೈಕ್ಷಣಿಕ ಕಾರ್ಯಕ್ರಮವನ್ನು ನಾವು ಪುನರ್ವಿಮರ್ಶಿಸೋಣ.

ಈ ಬೈಬಲ್‌ ಆಧಾರಿತ ಕಾರ್ಯಕ್ರಮವು ಹೆಚ್ಚಿನ ಅಧಿವೇಶನಗಳಲ್ಲಿ ಅನುಕ್ರಮವಾಗಿ ಮೂರು ದಿನಗಳ ವರೆಗೆ ಮತ್ತು ವಿಶೇಷ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಉಪಸ್ಥಿತರಿರಲು ಸಾಧ್ಯವಿದ್ದವರಿಗೆ ನಾಲ್ಕು ದಿನಗಳ ವರೆಗೆ ನಡೆಯಿತು. ಉಪಸ್ಥಿತರು ಶಾಸ್ತ್ರಾಧಾರಿತವಾದ 30ಕ್ಕಿಂತಲೂ ಹೆಚ್ಚು ನಿರೂಪಣೆಗಳನ್ನು ಕೇಳಿಸಿಕೊಂಡರು. ಇದರಲ್ಲಿ ಆಧ್ಯಾತ್ಮಿಕ ಗಣ್ಯತೆಯನ್ನು ಗಾಢವಾಗಿಸಿದ ಭಾಷಣಗಳು, ನಂಬಿಕೆವರ್ಧಕ ಅನುಭವಗಳು, ಬೈಬಲ್‌ ಮೂಲತತ್ತ್ವಗಳ ಪ್ರಾಯೋಗಿಕ ಬಳಕೆಯನ್ನು ಎತ್ತಿತೋರಿಸಿದಂಥ ಪ್ರತ್ಯಕ್ಷಾಭಿನಯಗಳು ಮತ್ತು ಒಂದನೆಯ ಶತಮಾನದ ಕ್ರೈಸ್ತರು ಎದುರಿಸಿದ ಪಂಥಾಹ್ವಾನಗಳನ್ನು ಚಿತ್ರಿಸಿದ ಪೂರ್ಣಪೋಷಾಕಿನ ನಾಟಕವು ಸೇರಿತ್ತು. ನೀವು ಈ ಅಧಿವೇಶನಗಳಲ್ಲೊಂದಕ್ಕೆ ಹಾಜರಾಗಿದ್ದಲ್ಲಿ, ಈ ಲೇಖನವನ್ನು ಓದುವಾಗ ನಿಮ್ಮ ಟಿಪ್ಪಣಿಗಳನ್ನು ಏಕೆ ಪುನರ್ವಿಮರ್ಶಿಸಬಾರದು? ಇದು ಆ ಸಮೃದ್ಧ ಆತ್ಮಿಕ ಔತಣದ ಸವಿನೆನಪುಗಳನ್ನು ಕೆದಕುವುದು ಮಾತ್ರವಲ್ಲ ಅದು ಬೋಧಪ್ರದವೂ ಆಗಿರುವುದೆಂದು ನಮಗೆ ನಿಶ್ಚಯವಿದೆ.

ಒಂದನೆಯ ದಿನದ ಮುಖ್ಯವಿಷಯ: “ಯೆಹೋವನೇ, ನೀನು . . . ಘನತೆಯನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ”

ಆರಂಭದ ಗೀತೆ ಮತ್ತು ಪ್ರಾರ್ಥನೆಯ ಬಳಿಕ, ಮೊದಲನೆಯ ಭಾಷಣಕಾರನು “ದೇವರನ್ನು ಘನಪಡಿಸಲಿಕ್ಕಾಗಿ ಕೂಡಿಬಂದಿದ್ದೇವೆ” ಎಂಬ ಭಾಷಣದೊಂದಿಗೆ ಅಧಿವೇಶನದ ಮುಖ್ಯ ಕಾರಣದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ನೆರೆದು ಬಂದಿದ್ದ ಎಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸಿದನು. ಪ್ರಕಟನೆ 4:11 (NW)ನ್ನು ಉದ್ಧರಿಸುತ್ತ, ಭಾಷಣಕಾರನು ಅಧಿವೇಶನದ ಮುಖ್ಯವಿಷಯವನ್ನು ಒತ್ತಿ ಹೇಳಿದನು. ದೇವರನ್ನು ಘನಪಡಿಸುವುದರ ಅರ್ಥವೇನೆಂಬ ವಿಷಯಕ್ಕೆ ನೇರವಾಗಿ ಬರುತ್ತ, ಕೀರ್ತನೆ ಪುಸ್ತಕವನ್ನು ಉಪಯೋಗಿಸಿ, ದೇವರನ್ನು ಘನಪಡಿಸುವುದರಲ್ಲಿ “ಆರಾಧನೆ,” “ಉಪಕಾರಸ್ಮರಣೆ” ಮತ್ತು “ಸ್ತೋತ್ರ”ವು ಒಳಗೂಡಿದೆ ಎಂಬುದನ್ನು ಒತ್ತಿಹೇಳಿದನು.​—⁠ಕೀರ್ತನೆ 95:6; 100:4, 5; 111:1, 2.

ಮುಂದಿನ ಭಾಷಣದ ವಿಷಯವು “ದೇವರನ್ನು ಘನಪಡಿಸುವವರು ಧನ್ಯರು” ಎಂಬ ಶೀರ್ಷಿಕೆಯುಳ್ಳದ್ದಾಗಿತ್ತು. ಭಾಷಣಕಾರನು ಒಂದು ಆಸಕ್ತಿದಾಯಕ ವಿಷಯವನ್ನು ತಿಳಿಯಪಡಿಸಿದನು: ಭೂವ್ಯಾಪಕವಾಗಿ 234 ದೇಶಗಳಲ್ಲಿ 60 ಲಕ್ಷಗಳಿಗೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು ಇರುವುದರಿಂದ ಯೆಹೋವನನ್ನು ಘನಪಡಿಸುವವರ ಮೇಲಿಂದ ಸೂರ್ಯನು ಮುಳುಗುವುದೇ ಇಲ್ಲವೆಂದು ಹೇಳಸಾಧ್ಯವಿದೆ. (ಪ್ರಕಟನೆ 7:15) ಒಂದಲ್ಲ ಒಂದು ರೀತಿಯ ವಿಶೇಷ ಪೂರ್ಣ ಸಮಯದ ಸೇವೆಯಲ್ಲಿರುವ ಕ್ರೈಸ್ತ ಸೋದರಸೋದರಿಯರೊಂದಿಗೆ ನಡೆಸಲ್ಪಟ್ಟ ಇಂಟರ್‌ವ್ಯೂ, ಈ ಭಾಷಣದಲ್ಲಿ ಸಭಿಕರ ಹೃದಯಗಳನ್ನು ಹುರಿದುಂಬಿಸಿದ, ಮೆಚ್ಚುಗೆಗೆ ಪಾತ್ರವಾದ ಒಂದು ಭಾಗವಾಗಿತ್ತು.

“ಸೃಷ್ಟಿಯು ದೇವರ ಘನವನ್ನು ಪ್ರಚುರಪಡಿಸುತ್ತದೆ” ಎಂಬುದು ಮುಂದಿನ ಭಾಷಣವಾಗಿತ್ತು. ಭೌತಿಕ ಆಕಾಶಮಂಡಲವು ಮೌನವಾಗಿದ್ದರೂ ಅದು ದೇವರ ಮಹತ್ತನ್ನು ಘನಪಡಿಸುತ್ತದೆ ಮತ್ತು ಆತನ ಪ್ರೀತಿಯ ಆರೈಕೆಗೆ ನಮಗಿರುವ ಗಣ್ಯತೆಯನ್ನು ಆಳವಾಗಿಸಲು ನಮಗೆ ಸಹಾಯಮಾಡುತ್ತದೆ. ಇದನ್ನು ಸೂಕ್ಷ್ಮವಾಗಿ ವಿವರಿಸಿ ಹೇಳಲಾಯಿತು.​—⁠ಯೆಶಾಯ 40:26.

ಹಿಂಸೆ, ವಿರೋಧ, ಲೌಕಿಕ ಪ್ರಭಾವಗಳು ಮತ್ತು ಪಾಪಪೂರ್ಣ ಪ್ರವೃತ್ತಿಗಳು ಸತ್ಯ ಕ್ರೈಸ್ತರ ಸಮಗ್ರತೆಗೆ ಪರೀಕ್ಷೆಯನ್ನು ಒಡ್ಡುತ್ತವೆ. ಆದಕಾರಣ, “ಸಮಗ್ರತೆಯ ಮಾರ್ಗದಲ್ಲಿ ನಡೆಯಿರಿ” ಎಂಬ ಭಾಷಣವು ಸಭಿಕರ ಏಕಾಗ್ರಚಿತ್ತ ಗಮನವನ್ನು ಅಗತ್ಯಪಡಿಸಿತು. ಕೀರ್ತನೆ 26ನ್ನು ವಚನ ವಚನವಾಗಿ ಚರ್ಚಿಸುವುದರೊಂದಿಗೆ, ನೈತಿಕತೆಯ ಪರವಾಗಿ ಸ್ಥಿರ ನಿಂತ ಶಾಲಾ ವಯಸ್ಸಿನ ಸಾಕ್ಷಿಯೊಂದಿಗೂ ಸಂದೇಹಾಸ್ಪದ ವಿನೋದಾವಳಿಯಲ್ಲಿ ತುಂಬ ಸಮಯ ಕಳೆಯುತ್ತಿದ್ದು ಈಗ ಆ ಸಮಸ್ಯೆಯನ್ನು ಪರಿಹರಿಸಲು ಹೆಜ್ಜೆಯಿಟ್ಟಿರುವ ಇನ್ನೊಬ್ಬ ಸಾಕ್ಷಿಯೊಂದಿಗೂ ಇಂಟರ್‌ವ್ಯೂಗಳನ್ನು ನಡೆಸಲಾಯಿತು.

ಬೆಳಗ್ಗಿನ ಕಾರ್ಯಕ್ರಮವನ್ನು “ಮಹಿಮಾಭರಿತ ಪ್ರವಾದನಾತ್ಮಕ ದರ್ಶನಗಳು ನಮ್ಮನ್ನು ಹುರಿದುಂಬಿಸುತ್ತವೆ!” ಎಂಬ ಮುಖ್ಯ ಭಾಷಣವು ಮುಕ್ತಾಯಗೊಳಿಸಿತು. ಅದರಲ್ಲಿ ಭಾಷಣಕಾರನು, ದೇವರ ಮೆಸ್ಸೀಯ ರಾಜ್ಯದ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಮಹಿಮಾಭರಿತ ಪ್ರವಾದನಾತ್ಮಕ ದರ್ಶನಗಳಿಂದ ಯಾರ ನಂಬಿಕೆಯು ಹುರಿದುಂಬಿಸಲ್ಪಟ್ಟಿತ್ತೊ ಆ ಪ್ರವಾದಿಯಾದ ದಾನಿಯೇಲ ಮತ್ತು ಅಪೊಸ್ತಲರಾದ ಯೋಹಾನ, ಪೇತ್ರರ ಮಾದರಿಗಳನ್ನು ಉದ್ಧರಿಸಿದನು. ನಾವು ಅಂತ್ಯಕಾಲದಲ್ಲಿದ್ದೇವೆಂಬ ಸ್ಪಷ್ಟವಾದ ಪುರಾವೆಯನ್ನು ಈಗ ಮರೆತುಬಿಟ್ಟಿರುವಂತೆ ತೋರುವವರಿಗೆ ಸೂಚಿಸಿ ಭಾಷಣಕಾರನು ಹೇಳಿದ್ದು: “ರಾಜ್ಯ ಮಹಿಮೆಯಲ್ಲಿ ಕ್ರಿಸ್ತನ ಸಾನ್ನಿಧ್ಯದ ನಿಜತ್ವದ ಮೇಲೆ ಪುನಃ ಮನಸ್ಸನ್ನು ಕೇಂದ್ರೀಕರಿಸಿ, ತಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವಂತೆ ಇಂಥವರಿಗೆ ಸಹಾಯವು ದೊರೆಯಲಿ ಎಂದು ನಾವು ಯಥಾರ್ಥವಾಗಿ ಆಶಿಸುತ್ತೇವೆ.”

ಅಪರಾಹ್ನದ ಕಾರ್ಯಕ್ರಮವು “ಯೆಹೋವನ ಘನತೆ ದೀನರಿಗೆ ಪ್ರಕಟಪಡಿಸಲ್ಪಡುತ್ತದೆ” ಎಂಬ ಭಾಷಣದಿಂದ ಆರಂಭಗೊಂಡಿತು. ಯೆಹೋವನು ವಿಶ್ವದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದರೂ ಆತನು ದೀನತೆಯಲ್ಲಿ ಹೇಗೆ ಮಾದರಿಯನ್ನಿಟ್ಟಿದ್ದಾನೆಂದು ಭಾಷಣಕಾರನು ತೋರಿಸಿದನು. (ಕೀರ್ತನೆ 18:​35, NW) ಯೆಹೋವನು ನಿಜವಾಗಿಯೂ ದೀನರಾಗಿರುವವರನ್ನು ಕಟಾಕ್ಷಿಸುತ್ತಾನೆ, ಆದರೆ ತಮ್ಮ ಸಮಾನಸ್ಥರೊಂದಿಗೆ ಅಥವಾ ತಮಗಿಂತಲೂ ಉನ್ನತ ಪದವಿಯಲ್ಲಿರುವವರೊಂದಿಗೆ ವ್ಯವಹರಿಸುವಾಗ ಮಾತ್ರ ದೀನರಾಗಿ ತೋರಿಸಿಕೊಂಡು, ತಮ್ಮ ಉಸ್ತುವಾರಿಯ ಕೆಳಗಿರುವವರೊಂದಿಗೆ ಕಠೋರವಾಗಿ ವರ್ತಿಸುವವರನ್ನು ಆತನು ವಿರೋಧಿಸುತ್ತಾನೆ.​—⁠ಕೀರ್ತನೆ 138:⁠6.

ಆ ಬಳಿಕ, “ಆಮೋಸನ ಪ್ರವಾದನೆ​—⁠ಅದರಲ್ಲಿ ನಮ್ಮ ದಿನಗಳಿಗಾಗಿರುವ ಸಂದೇಶ” ಎಂಬ ಕೇಂದ್ರ ವಿಷಯದ ವಿವಿಧ ಅಂಶಗಳನ್ನು ಎತ್ತಿತೋರಿಸಿದ ಒಂದು ಭಾಷಣಮಾಲೆಯಲ್ಲಿ ಬೈಬಲ್‌ ಪ್ರವಾದನೆಯನ್ನು ಚರ್ಚಿಸಲಾಯಿತು. ಆಮೋಸನ ಮಾದರಿಯನ್ನು ಸೂಚಿಸುತ್ತ ಪ್ರಥಮ ಭಾಷಣಕಾರನು, ಯೆಹೋವನ ಬರಲಿರುವ ತೀರ್ಪಿನ ವಿಷಯದಲ್ಲಿ ಜನರನ್ನು ಎಚ್ಚರಿಸಲು ನಮಗಿರುವ ಜವಾಬ್ದಾರಿಗೆ ಗಮನ ಸೆಳೆದನು. “ದೇವರ ವಾಕ್ಯವನ್ನು ಧೈರ್ಯದಿಂದ ನುಡಿಯಿರಿ” ಎಂಬುದು ಅವನ ಭಾಷಣದ ಮುಖ್ಯ ವಿಷಯವಾಗಿತ್ತು. ಎರಡನೆಯ ಭಾಷಣಕಾರನು, “ಯೆಹೋವನು ಭೂಮಿಯ ಮೇಲಣ ದುಷ್ಟತ್ವ ಮತ್ತು ಕಷ್ಟಾನುಭವಗಳಿಗೆ ಎಂದಾದರೂ ಅಂತ್ಯವನ್ನು ತರುವನೊ?” ಎಂಬ ಪ್ರಶ್ನೆಯನ್ನು ಕೇಳಿದನು. “ದುಷ್ಟರ ವಿರುದ್ಧ ದೈವಿಕ ತೀರ್ಪು” ಎಂಬ ಅವನ ಭಾಷಣವು, ದೈವಿಕ ತೀರ್ಪು ಯಾವಾಗಲೂ ಅರ್ಹವಾದದ್ದೂ, ತಪ್ಪಿಸಿಕೊಳ್ಳಲಾಗದಂಥದ್ದೂ, ಆಯ್ಕೆಮಾಡಿರುವಂಥದ್ದು ಆಗಿದೆಯೆಂದು ತೋರಿಸಿತು. ಭಾಷಣಮಾಲೆಯ ಕೊನೆಯ ಭಾಷಣಕಾರನು, “ಯೆಹೋವನು ಹೃದಯವನ್ನು ಪರೀಕ್ಷಿಸುತ್ತಾನೆ” ಎಂಬ ವಿಷಯಕ್ಕೆ ಗಮನಹರಿಸಿದನು. ಯೆಹೋವನನ್ನು ಮೆಚ್ಚಿಸಲು ಹಂಬಲಿಸುವವರು ಆಮೋಸ 5:15ರ ಮಾತುಗಳಿಗೆ ಕಿವಿಗೊಡುವರು: “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ.”

ಹೃದಕ್ಕಾನಂದ ತರುವ ದ್ರಾಕ್ಷಾಮದ್ಯದಂಥ ಮದ್ಯ ಪಾನೀಯಗಳನ್ನು ದುರುಪಯೋಗಿಸುವ ಸಾಧ್ಯತೆಯಿದೆ. “ಮದ್ಯದ ದುರುಪಯೋಗವೆಂಬ ಪಾಶದಿಂದ ತಪ್ಪಿಸಿಕೊಳ್ಳಿರಿ” ಎಂಬ ಭಾಷಣದಲ್ಲಿ, ಒಬ್ಬನು ಕುಡಿದು ಮತ್ತನಾಗದಿದ್ದರೂ ಮದ್ಯದ ಮಿತಿಮೀರಿದ ಸೇವನೆಯಲ್ಲಿ ಇರುವ ಶಾರೀರಿಕ ಮತ್ತು ಆತ್ಮಿಕ ಅಪಾಯಗಳನ್ನು ಭಾಷಣಕಾರನು ಪಟ್ಟಿಮಾಡಿದನು. ಅವನು ಮಾರ್ಗದರ್ಶಕ ಮೂಲಸೂತ್ರವೊಂದನ್ನು ಕೊಟ್ಟನು: ಮದ್ಯವನ್ನು ಸಹಿಸುವ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರಿಂದ, ನಿಮ್ಮ “ಸುಜ್ಞಾನವನ್ನೂ ಬುದ್ಧಿಯನ್ನೂ” ಕುಗ್ಗಿಸುವ ಯಾವುದೇ ಪ್ರಮಾಣದ ಮದ್ಯವು ನಿಮ್ಮ ಮಟ್ಟಿಗೆ ತೀರ ಹೆಚ್ಚಾಗಿರುತ್ತದೆ.​—⁠ಜ್ಞಾನೋಕ್ತಿ 3:​21, 22.

ನಾವು ಕಠಿನ ಕಾಲಗಳಲ್ಲಿ ಜೀವಿಸುತ್ತಿರುವುದರಿಂದ, “‘ಇಕ್ಕಟ್ಟಿನಲ್ಲಿ ನಮ್ಮ ದುರ್ಗಸ್ಥಾನ’ ಆಗಿರುವ ಯೆಹೋವನು” ಎಂಬ ಮುಂದಿನ ಭಾಷಣವು ಸಾಂತ್ವನವನ್ನು ಒದಗಿಸಿತು. ಪ್ರಾರ್ಥನೆ, ಪವಿತ್ರಾತ್ಮ ಮತ್ತು ಜೊತೆ ಕ್ರೈಸ್ತರು ನಾವು ಸಹಿಸಿಕೊಳ್ಳುವಂತೆ ಸಹಾಯಮಾಡಬಲ್ಲರು.

“ಒಳ್ಳೆಯ ದೇಶ​—⁠ಪರದೈಸಿನ ಮುನ್ನೋಟ” ಎಂಬ ಆ ದಿನದ ಕೊನೆಯ ಭಾಷಣವು ಎಲ್ಲರಿಗೂ ಅತ್ಯಾನಂದಕರ ಅಚ್ಚರಿಯನ್ನು, ಅಂದರೆ ಅನೇಕ ಬೈಬಲ್‌ ಭೂಪಟಗಳಿರುವ ಒಂದು ಹೊಸ ಪ್ರಕಾಶನವನ್ನು ಒದಗಿಸುತ್ತಾ ಅಂತ್ಯಗೊಂಡಿತು. ಅದರ ಶೀರ್ಷಿಕೆಯು ಒಳ್ಳೆಯ ದೇಶವನ್ನು ನೋಡಿ ಎಂಬುದಾಗಿತ್ತು.

ಎರಡನೆಯ ದಿನದ ಮುಖ್ಯವಿಷಯ: ‘ಜನಾಂಗಗಳಲ್ಲಿ ಆತನ ಘನತೆಯನ್ನು ಪ್ರಸಿದ್ಧಪಡಿಸಿರಿ’

ದಿನದ ವಚನದ ಚರ್ಚೆಯ ಬಳಿಕ, ‘ಯೆಹೋವನ ಘನತೆಯನ್ನು ದರ್ಪಣಗಳಂತೆ ಪ್ರತಿಬಿಂಬಿಸಿರಿ’ ಎಂಬ ವಿಷಯದ ಮೇಲೆ ಎರಡನೆಯ ಭಾಷಣಮಾಲೆಯನ್ನು ನೀಡಲಾಯಿತು. ಪ್ರಥಮ ಭಾಗವು “ಸುವಾರ್ತೆಯನ್ನು ಎಲ್ಲೆಡೆಯೂ ಪ್ರಸರಿಸುವ ಮೂಲಕ” ಎಂಬ ವಿಷಯವನ್ನು ವಿವರಿಸಿತು ಮತ್ತು ಅದರಲ್ಲಿ ಕ್ಷೇತ್ರ ಸೇವೆಯ ನೈಜ ಅನುಭವಗಳ ಪುನರಭಿನಯಗಳಿದ್ದವು. ಎರಡನೆಯ ಭಾಷಣದಲ್ಲಿ, “ಕುರುಡುಗೊಳಿಸಲ್ಪಟ್ಟವರ ಮುಸುಕನ್ನು ತೆಗೆದುಹಾಕುವುದರ ಮೂಲಕ” ಎಂಬ ವಿಷಯವನ್ನು ಭಾಷಣಕರ್ತನು ಪ್ರಸ್ತುತಪಡಿಸುವಾಗ ಪುನರ್ಭೇಟಿಯ ಪ್ರತ್ಯಕ್ಷಾಭಿನಯವೊಂದನ್ನು ಸೇರಿಸಿದನು. “ನಮ್ಮ ಶುಶ್ರೂಷೆಯಲ್ಲಿ ಅದನ್ನು ಇನ್ನೂ ಹೆಚ್ಚಾಗಿ ಮಾಡುವ ಮೂಲಕ” ಎಂಬ ಶೀರ್ಷಿಕೆಯುಳ್ಳ ಕೊನೆಯ ಭಾಗವು, ಕ್ಷೇತ್ರಾನುಭವಗಳ ಕುರಿತಾದ ಸ್ವಾರಸ್ಯಕರ ಇಂಟರ್‌ವ್ಯೂಗಳಿಂದಾಗಿ ಹೆಚ್ಚು ಆಸಕ್ತಿದಾಯಕವಾಯಿತು.

“ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು” ಎಂಬುದು ಕಾರ್ಯಕ್ರಮದ ಮುಂದಿನ ಭಾಗವಾಗಿತ್ತು. ಇದರಲ್ಲಿ, ದೇವರ ಬಲದಿಂದ ವಿರೋಧದ ಎದುರಿನಲ್ಲೂ ಸಮಗ್ರತೆಯನ್ನು ಕಾಪಾಡಿಕೊಂಡವರೊಂದಿಗೆ ನಡೆಸಲ್ಪಟ್ಟ ಹುರಿದುಂಬಿಸುವ ಇಂಟರ್‌ವ್ಯೂಗಳಿದ್ದವು.

ಅಧಿವೇಶನಗಳಲ್ಲಿ ಬಹಳವಾಗಿ ಮುನ್ನೋಡಲ್ಪಡುವ ಒಂದು ವೈಶಿಷ್ಟ್ಯವು, ದೀಕ್ಷಾಸ್ನಾನದ ಭಾಷಣ ಮತ್ತು ಅದನ್ನನುಸರಿಸಿ ನಡೆಯುವ ಎಲ್ಲ ಅರ್ಹ ಅಭ್ಯರ್ಥಿಗಳ ಪೂರ್ಣ ಜಲ ನಿಮಜ್ಜನವೇ. ನೀರಿನ ದೀಕ್ಷಾಸ್ನಾನವು ಒಬ್ಬ ವ್ಯಕ್ತಿಯು ಯೆಹೋವನಿಗೆ ಮಾಡಿರುವ ಪೂರ್ಣ ಸಮರ್ಪಣೆಯ ಸಂಕೇತವಾಗಿದೆ. ಆದಕಾರಣ, “ನಮ್ಮ ಸಮರ್ಪಣೆಗನುಸಾರ ಜೀವಿಸುವುದು ದೇವರನ್ನು ಘನಪಡಿಸುತ್ತದೆ” ಎಂಬ ಶೀರ್ಷಿಕೆಯು ಅತಿ ಯೋಗ್ಯವಾದುದಾಗಿತ್ತು.

ಅಪರಾಹ್ನದ ಕಾರ್ಯಕ್ರಮವು ಸ್ವಪರೀಕ್ಷೆಯನ್ನು ಪ್ರೋತ್ಸಾಹಿಸಿದ “ಹಿರಿಮೆಯ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು” ಎಂಬ ಭಾಷಣದೊಂದಿಗೆ ಆರಂಭಗೊಂಡಿತು. ಭಾಷಣಕಾರನು ಈ ಆಸಕ್ತಿಕರ ಸಂಗತಿಯನ್ನು ತಿಳಿಯಪಡಿಸಿದನು: ಕ್ರಿಸ್ತನ ದೈನ್ಯಭಾವವನ್ನು ಅನುಕರಿಸುವುದರಿಂದಲೇ ಹಿರಿಮೆ ಒದಗಿ ಬರುತ್ತದೆ. ಆದಕಾರಣ ಕ್ರೈಸ್ತನೊಬ್ಬನು ತನ್ನ ಸ್ವಂತ ಹೆಬ್ಬಯಕೆಯನ್ನು ತೃಪ್ತಿಪಡಿಸಲಿಕ್ಕೋಸ್ಕರ ಜವಾಬ್ದಾರಿಯುತ ಸ್ಥಾನಕ್ಕಾಗಿ ಪ್ರಯತ್ನಿಸಬಾರದು. ಅವನು ತನ್ನನ್ನೇ ಹೀಗೆ ಕೇಳಿಕೊಳ್ಳಬೇಕು, ‘ಕೂಡಲೇ ಯಾರ ಗಮನಕ್ಕೂ ಬಾರದಂಥ ಸಹಾಯಕರವಾದ ಕೆಲಸಗಳನ್ನು ಮಾಡಲು ನಾನು ಇಷ್ಟಪಡುತ್ತೇನೊ?’

ನಿಮಗೆ ಆಯಾಸದ ಅನುಭವವಾಗುತ್ತಿದೆಯೆ? ಉತ್ತರ ಸುವ್ಯಕ್ತವಾಗಿದೆ. “ಶಾರೀರಿಕವಾಗಿ ದಣಿದಿದ್ದರೂ ಆತ್ಮಿಕವಾಗಿ ಸೋತುಹೋಗದಿರುವುದು” ಎಂಬ ಭಾಷಣದಲ್ಲಿ ಎಲ್ಲರೂ ಆನಂದಿಸಿದರು. ದೀರ್ಘಕಾಲದಿಂದ ಸೇವೆಮಾಡುತ್ತಿರುವ ಸಾಕ್ಷಿಗಳೊಂದಿಗೆ ನಡೆಸಲ್ಪಟ್ಟ ಇಂಟರ್‌ವ್ಯೂಗಳು, ಯೆಹೋವನು ತನ್ನ ‘ಆತ್ಮದ ಮೂಲಕ ವಿಶೇಷಬಲ’ವನ್ನು ಕೊಡಬಲ್ಲನೆಂಬುದನ್ನು ತೋರಿಸಿದವು.​—⁠ಎಫೆಸ 3:16.

ಉದಾರಶೀಲತೆಯು ನಮಗೆ ಹುಟ್ಟಿನಿಂದಲೇ ಬರುವುದಿಲ್ಲ. ಅದನ್ನು ಕಲಿಯಬೇಕಾಗುತ್ತದೆ. ಈ ಮುಖ್ಯ ವಿಷಯವನ್ನು “ನಾವು ‘ಉದಾರಶೀಲರೂ ಹಂಚಿಕೊಳ್ಳಲು ಸಿದ್ಧರೂ’ ಆಗಿರೋಣ” ಎಂಬ ಭಾಗದಲ್ಲಿ ಹೊರತರಲಾಯಿತು. ಮತ್ತು ಈ ವಿಚಾರಪ್ರೇರಕ ಪ್ರಶ್ನೆಯನ್ನು ಕೇಳಲಾಯಿತು: “ನಮ್ಮ ದಿನದ ಕೆಲವು ನಿಮಿಷಗಳನ್ನು ನಾವು ವೃದ್ಧರಾದ, ಅಸ್ವಸ್ಥರಾದ, ಖಿನ್ನರಾದ ಅಥವಾ ಒಂಟಿಭಾವವಿರುವ ಸಹೋದರಸಹೋದರಿಯರೊಂದಿಗೆ ಕಳೆಯಲು ಸಿದ್ಧರಾಗಿದ್ದೇವೊ?”

“‘ಅನ್ಯರ ಸ್ವರದ’ ವಿಷಯದಲ್ಲಿ ಎಚ್ಚರಿಕೆಯಿಂದಿರಿ” ಎಂಬ ವಿಷಯ ಸಭಿಕರ ಗಮನವನ್ನು ಸೆರೆಹಿಡಿಯಿತು. ಈ ಭಾಷಣದಲ್ಲಿ ಯೇಸುವಿನ ಶಿಷ್ಯರನ್ನು, “ಒಳ್ಳೇ ಕುರುಬ”ನೋಪಾದಿ ಕೇವಲ ಯೇಸುವಿನ ಸ್ವರಕ್ಕೆ ಕಿವಿಗೊಡುವ ಮತ್ತು ಪಿಶಾಚನಿಂದ ಪ್ರಭಾವಿಸಲ್ಪಟ್ಟಿರುವ ಮಾನವ ಮೂಲಗಳಾದ ‘ಅನ್ಯರ ಸ್ವರಕ್ಕೆ’ ಕಿವಿಗೊಡದಿರುವ ಕುರಿಗಳಿಗೆ ಹೋಲಿಸಲಾಯಿತು.​—⁠ಯೋಹಾನ 10:​5, 14, 27.

ಒಂದು ಗಾಯಕವೃಂದವು ಏನನ್ನು ಹಾಡುತ್ತಿದೆಯೊ ಅದು ಅರ್ಥವಾಗಬೇಕಾದರೆ, ಅದು ಐಕಮತದಿಂದ ಹಾಡಬೇಕಾಗುತ್ತದೆ. ದೇವರನ್ನು ಘನಪಡಿಸಬೇಕಾದರೆ, ಸತ್ಯಾರಾಧಕರು ಭೂವ್ಯಾಪಕವಾಗಿ ಒಂದಾಗಿರಬೇಕು. ಆದಕಾರಣ, “ದೇವರನ್ನು ‘ಒಮ್ಮುಖವಾಗಿ’ ಘನಪಡಿಸಿರಿ” ಎಂಬ ಭಾಗವು ನಾವೆಲ್ಲರೂ ಹೇಗೆ “ಶುದ್ಧ ಭಾಷೆ”ಯನ್ನು ಮಾತಾಡಬಲ್ಲೆವು ಮತ್ತು ಹೇಗೆ “ಹೆಗಲಿಗೆ ಹೆಗಲು ಕೊಟ್ಟು” ಯೆಹೋವನನ್ನು ಸೇವಿಸಬಲ್ಲೆವು ಎಂಬುದರ ಬಗ್ಗೆ ಪ್ರಯೋಜನದಾಯಕವಾದ ಸಲಹೆಯನ್ನು ಕೊಟ್ಟಿತು.​—⁠ಚೆಫನ್ಯ 3:​9, NW.

ಮುಖ್ಯವಾಗಿ, ಚಿಕ್ಕ ಮಕ್ಕಳಿರುವ ಹೆತ್ತವರು ದಿನದ ಕೊನೆಯ ಭಾಷಣವಾದ, “ನಮ್ಮ ಮಕ್ಕಳು​—⁠ಅಮೂಲ್ಯವಾದ ಸ್ವಾಸ್ಥ್ಯ” ಎಂಬ ಭಾಷಣದಲ್ಲಿ ತುಂಬ ಆನಂದಿಸಿದರು. 256 ಪುಟಗಳ ಒಂದು ಹೊಸ ಪ್ರಕಾಶನವು ಬಿಡುಗಡೆಯಾದಾಗ ಅದು ಸಭಿಕರನ್ನು ಹಿತಕರವಾಗಿ ಅಚ್ಚರಿಗೊಳಿಸಿತು. ಮಹಾ ಬೋಧಕನಿಂದ ಕಲಿತುಕೊಳ್ಳಿರಿ (ಇಂಗ್ಲಿಷ್‌) ಎಂಬ ಈ ಪುಸ್ತಕವು, ದೇವರ ವರದಾನವಾಗಿರುವ ತಮ್ಮ ಮಕ್ಕಳೊಂದಿಗೆ ಹೆತ್ತವರು ಆಧ್ಯಾತ್ಮಿಕವಾಗಿ ಪ್ರತಿಫಲದಾಯಕವಾದ ಸಮಯವನ್ನು ಕಳೆಯಲು ಸಹಾಯಮಾಡುವುದು.

ಮೂರನೆಯ ದಿನದ ಮುಖ್ಯ ವಿಷಯ: “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ”

ದಿನದ ವಚನದ ಮರುಜ್ಞಾಪನವು, ಅಧಿವೇಶನದ ಕೊನೆಯ ದಿವಸವನ್ನು ಆತ್ಮಿಕ ವಿಚಾರಗಳೊಂದಿಗೆ ಆರಂಭಗೊಳಿಸಿತು. ಈ ದಿನದ ಕಾರ್ಯಕ್ರಮದ ಮೊದಲನೆಯ ಭಾಗವು ಕುಟುಂಬದ ಏರ್ಪಾಡಿಗೆ ಹೆಚ್ಚು ಗಮನವನ್ನು ಕೊಟ್ಟಿತು. “ಹೆತ್ತವರೇ, ನಿಮ್ಮ ಕುಟುಂಬವನ್ನು ಬಲಗೊಳಿಸಿರಿ” ಎಂಬ ಭಾಷಣ, ಸಭಿಕರ ಮನಸ್ಸನ್ನು ಸಿದ್ಧಗೊಳಿಸಿತು. ತಮ್ಮ ಕುಟುಂಬಗಳಿಗೆ ಬೇಕಾಗುವ ಶಾರೀರಿಕ ಅಗತ್ಯಗಳನ್ನು ಒದಗಿಸಲು ಹೆತ್ತವರಿಗಿರುವ ಜವಾಬ್ದಾರಿಯನ್ನು ಪುನರ್ವಿಮರ್ಶಿಸಿದ ಬಳಿಕ, ಅವರಿಗಿರುವ ಪ್ರಮುಖ ಜವಾಬ್ದಾರಿಯು ಅವರ ಮಕ್ಕಳ ಆತ್ಮಿಕ ಅಗತ್ಯಗಳ ಕುರಿತು ಕಾಳಜಿವಹಿಸುವುದಾಗಿದೆ ಎಂಬುದನ್ನು ಭಾಷಣಕಾರನು ರುಜುಪಡಿಸಿದನು.

ಮುಂದಿನ ಭಾಷಣಕಾರನು ಮಕ್ಕಳನ್ನು ಸಂಬೋಧಿಸುತ್ತ, “ಯುವ ಜನರು ಯೆಹೋವನನ್ನು ಸ್ತುತಿಸುತ್ತಿರುವ ವಿಧ” ಎಂಬ ವಿಷಯವನ್ನು ಚರ್ಚಿಸಿದನು. ಯುವ ಜನರು ದೊಡ್ಡ ಸಂಖ್ಯೆಯಲ್ಲಿರುವುದರಿಂದಲೂ ಅವರ ಯೌವನದ ಹುರುಪು ಚೈತನ್ಯದಾಯಕವಾಗಿರುವುದರಿಂದಲೂ ಅವರು “ಇಬ್ಬನಿ”ಗಳಂತಿದ್ದಾರೆ ಎಂದು ಭಾಷಣಕಾರನು ತಿಳಿಸಿದನು. ಅವರೊಂದಿಗೆ ಯೆಹೋವನ ಸೇವೆಮಾಡಲು ವಯಸ್ಕರು ಸಂತೋಷಿಸುತ್ತಾರೆ. (ಕೀರ್ತನೆ 110:⁠3) ಈ ಭಾಗದಲ್ಲಿ ಆದರ್ಶಪ್ರಾಯ ಯುವ ಜನರೊಂದಿಗೆ ಹರ್ಷಕರವಾದ ಇಂಟರ್‌ವ್ಯೂಗಳು ಸೇರಿದ್ದವು.

ಪೂರ್ಣಪೋಷಾಕಿನ ಬೈಬಲ್‌ ಡ್ರಾಮಗಳು ಯಾವಾಗಲೂ ಜಿಲ್ಲಾ ಅಧಿವೇಶನಗಳ ಸಂಭ್ರಮದಾಯಕ ಭಾಗವಾಗಿವೆ. ಮತ್ತು ಈ ಅಧಿವೇಶನದಲ್ಲೂ ಅಂತಹ ಡ್ರಾಮವೊಂದಿತ್ತು. “ವಿರೋಧದ ಮಧ್ಯೆಯೂ ಧೈರ್ಯದಿಂದ ಸಾರುವುದು” ಎಂಬ ಡ್ರಾಮ ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರನ್ನು ಚಿತ್ರಿಸಿತು. ಅದು ಮನರಂಜಕವಾಗಿತ್ತು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ ಬೋಧಪ್ರದವೂ ಆಗಿತ್ತು. ಡ್ರಾಮದ ಬಳಿಕ ಕೊಡಲಾದ “ಸುವಾರ್ತೆಯನ್ನು ‘ಎಡೆಬಿಡದೆ’ ಸಾರುವುದು” ಎಂಬ ಭಾಷಣವು ಆ ಡ್ರಾಮದ ಪ್ರಧಾನ ವಿಚಾರಗಳನ್ನು ಒತ್ತಿಹೇಳಿತು.

ಉಪಸ್ಥಿತರೆಲ್ಲರೂ ಭಾನುವಾರದ ಕಾರ್ಯಕ್ರಮದ ಪ್ರಧಾನ ಭಾಗವಾದ, “ಇಂದು ಯಾರು ದೇವರನ್ನು ಘನಪಡಿಸುತ್ತಿದ್ದಾರೆ?” ಎಂಬ ಸಾರ್ವಜನಿಕ ಭಾಷಣವನ್ನು ಎದುರುನೋಡುತ್ತಿದ್ದರು. ವೈಜ್ಞಾನಿಕ ಮತ್ತು ಧಾರ್ಮಿಕ ಸಮುದಾಯಗಳು ಹೇಗೆ ಸಾಮಾನ್ಯವಾಗಿ ದೇವರನ್ನು ಘನಪಡಿಸಿರುವುದಿಲ್ಲವೆಂಬುದಕ್ಕೆ ಭಾಷಣಕಾರನು ರುಜುವಾತು ಕೊಟ್ಟನು. ಯೆಹೋವನ ಹೆಸರಿಗಾಗಿರುವ ಜನರು, ಆತನ ಕುರಿತು ಸತ್ಯವನ್ನು ಸಾರಿ ಕಲಿಸುವವರು ಮಾತ್ರವೇ ಇಂದು ಆತನ ನಾಮವನ್ನು ನಿಜವಾಗಿಯೂ ಘನಪಡಿಸುತ್ತಿದ್ದಾರೆ.

ಸಾರ್ವಜನಿಕ ಭಾಷಣವನ್ನು ಅನುಸರಿಸಿ ಆ ವಾರದ ಕಾವಲಿನಬುರುಜು ಪತ್ರಿಕೆಯ ಸಾರಾಂಶವನ್ನು ಕೊಡಲಾಯಿತು. ಬಳಿಕ, “ಯೆಹೋವನ ಘನತೆಗಾಗಿ ‘ಬಹಳ ಫಲ ಕೊಡುತ್ತ ಇರಿ’” ಎಂಬ ಕೊನೆಯ ಭಾಷಣವನ್ನು ಕೊಡಲಾಯಿತು. ಇದರಲ್ಲಿ ಭಾಷಣಕಾರನು, ಉಪಸ್ಥಿತರೆಲ್ಲರೂ ಅಂಗೀಕರಿಸಲಿಕ್ಕಾಗಿ ಹತ್ತು ವಿಷಯಗಳಿದ್ದ ಒಂದು ಠರಾವನ್ನು ಮಂಡಿಸಿದನು. ಇದರಲ್ಲಿ ಸೃಷ್ಟಿಕರ್ತನಾದ ಯೆಹೋವನಿಗೆ ಘನತೆಯನ್ನು ಸಲ್ಲಿಸುವ ವಿವಿಧ ವಿಧಗಳು ಸೇರಿದ್ದವು. ಭೂಮಿಯ ಕಟ್ಟಕಡೆಯ ವರೆಗೆ ಸರ್ವಾನುಮತದ “ಹೌದು” ಎಂಬ ಹೇಳಿಕೆಯು ಎಲ್ಲ ಅಧಿವೇಶನಗಳಲ್ಲಿ ಕೇಳಿಬಂತು.

“ದೇವರನ್ನು ಘನಪಡಿಸಿರಿ” ಎಂಬ ಮುಖ್ಯ ವಿಷಯವು ಉಪಸ್ಥಿತರಿದ್ದ ಪ್ರತಿಯೊಬ್ಬರ ಕಿವಿಯಲ್ಲಿ ಘಣಘಣಿಸುವುದರೊಂದಿಗೆ ಈ ಅಧಿವೇಶನವು ಮುಕ್ತಾಯಗೊಂಡಿತು. ಮತ್ತು ನಾವು ಯೆಹೋವನ ಆತ್ಮದ ಸಹಾಯದಿಂದ ಹಾಗೂ ಆತನ ದೃಶ್ಯ ಸಂಸ್ಥೆಯ ಸಹಾಯದಿಂದ, ಮನುಷ್ಯನನ್ನಲ್ಲ ದೇವರನ್ನು ಘನಪಡಿಸಲು ಸದಾ ಪ್ರಯತ್ನಿಸೋಣ.

[ಪುಟ 23ರಲ್ಲಿರುವ ಚೌಕ/ಚಿತ್ರಗಳು]

ಅಂತಾರಾಷ್ಟ್ರೀಯ ಅಧಿವೇಶನಗಳು

ನಾಲ್ಕು ದಿನಗಳುದ್ದದ್ದ ಅಂತಾರಾಷ್ಟ್ರೀಯ ಅಧಿವೇಶನಗಳು, ಆಫ್ರಿಕ, ಆಸ್ಟ್ರೇಲಿಯ, ಉತ್ತರ ಹಾಗೂ ದಕ್ಷಿಣ ಅಮೆರಿಕ, ಏಷ್ಯಾ, ಮತ್ತು ಯೂರೋಪ್‌ನಲ್ಲಿ ನಡೆಸಲ್ಪಟ್ಟವು. ಲೋಕದಾದ್ಯಂತ ನೇಮಿತ ಸಾಕ್ಷಿಗಳನ್ನು ಈ ಅಧಿವೇಶನಗಳಲ್ಲಿ ಪ್ರತಿನಿಧಿಗಳಾಗಿರುವಂತೆ ಆಮಂತ್ರಿಸಲಾಯಿತು. ಈ ರೀತಿಯಲ್ಲಿ ಸಂದರ್ಶಕರು ಹಾಗೂ ಆತಿಥೇಯರ ನಡುವೆ ‘ಪ್ರೋತ್ಸಾಹದ ವಿನಿಮಯವು’ ನಡೆಯಿತು. (ರೋಮಾಪುರ 1:​12, NW) ಹಳೆಯ ಪರಿಚಯಸ್ಥರ ಮರುಭೇಟಿಯಾಯಿತು, ಮತ್ತು ಹೊಸ ಪರಿಚಯಗಳನ್ನು ಮಾಡಿಕೊಳ್ಳಲಾಯಿತು. ಅಂತಾರಾಷ್ಟ್ರೀಯ ಅಧಿವೇಶನಗಳ ಒಂದು ವಿಶೇಷ ವೈಶಿಷ್ಟ್ಯವು, “ಇತರ ದೇಶಗಳಿಂದ ಬಂದಿರುವ ವರದಿಗಳು” ಎಂಬ ಶೀರ್ಷಿಕೆಯುಳ್ಳ ಕಾರ್ಯಕ್ರಮ ಭಾಗವಾಗಿತ್ತು.

[ಪುಟ 25ರಲ್ಲಿರುವ ಚೌಕ/ಚಿತ್ರಗಳು]

ದೇವರಿಗೆ ಘನತೆಯನ್ನು ಸಲ್ಲಿಸುವ ಹೊಸ ಪ್ರಕಾಶನಗಳು

“ದೇವರನ್ನು ಘನಪಡಿಸಿರಿ” ಎಂಬ ಜಿಲ್ಲಾ ಅಧಿವೇಶನಗಳಲ್ಲಿ ಎರಡು ಹೊಸ ಪ್ರಕಾಶನಗಳನ್ನು ಬಿಡುಗಡೆಮಾಡಲಾಯಿತು. ಒಳ್ಳೆಯ ದೇಶವನ್ನು ನೋಡಿ ಎಂಬ ಬೈಬಲ್‌ ಅಟ್ಲಾಸ್‌ಗೆ ಬಾಳಿಕೆಬರುವಂಥ ಆವರಣಪುಟಗಳಿವೆ, ಮತ್ತು ಇದರಲ್ಲಿ ಬೈಬಲ್‌ ನಿವೇಶನಗಳ ಭೂಪಟಗಳೂ ಫೋಟೊಗ್ರಾಫ್‌ಗಳೂ ಇರುವ 36 ಪುಟಗಳಿವೆ. ಪ್ರತಿಯೊಂದು ಪುಟವೂ ಪೂರ್ಣ ವರ್ಣದ್ದಾಗಿದೆ ಮತ್ತು ಅದರಲ್ಲಿ ಅಶ್ಶೂರ್ಯ, ಬ್ಯಾಬಿಲೋನ್‌, ಮೇದ್ಯ ಪಾರಸಿಯ, ಗ್ರೀಸ್‌ ಹಾಗೂ ರೋಮ್‌ ಸಾಮ್ರಾಜ್ಯಗಳ ಭೂಪಟಗಳಿವೆ. ಯೇಸುವಿನ ಶುಶ್ರೂಷೆ ಹಾಗೂ ಕ್ರೈಸ್ತತ್ವದ ವಿಸ್ತರಣೆಯ ಕುರಿತಾದ ಪ್ರತ್ಯೇಕವಾದ ಭೂಪಟಗಳಿವೆ.

ಮಹಾ ಬೋಧಕನಿಂದ ಕಲಿತುಕೊಳ್ಳಿರಿ (ಇಂಗ್ಲಿಷ್‌) ಎಂಬ ಪುಸ್ತಕವು 256 ಪುಟಗಳೂ ಮತ್ತು 230 ಚಿತ್ರಗಳೂ ಇರುವಂಥ ಪುಸ್ತಕವಾಗಿದೆ. ಬರೀ ಚಿತ್ರಗಳನ್ನು ನೋಡುವುದರಿಂದ ಮತ್ತು ಪುಸ್ತಕದಲ್ಲಿರುವ ವಿಚಾರಪ್ರೇರಕ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವುದರಿಂದಲೇ ಮಕ್ಕಳೊಂದಿಗೆ ಆನಂದದಾಯಕವಾದ ಸಮಯಾವಧಿಗಳನ್ನು ಕಳೆಯಸಾಧ್ಯವಿದೆ. ಈ ಹೊಸ ಪ್ರಕಾಶನವು, ನಮ್ಮ ಎಳೆಯರ ನೈತಿಕತೆಯನ್ನು ಭ್ರಷ್ಟಗೊಳಿಸುವ ಉದ್ದೇಶವುಳ್ಳ ಸೈತಾನನ ದಾಳಿಯನ್ನು ಪ್ರತಿರೋಧಿಸಲು ವಿನ್ಯಾಸಿಸಲ್ಪಟ್ಟಿದೆ.

[ಪುಟ 23ರಲ್ಲಿರುವ ಚಿತ್ರ]

ಮಿಷನೆರಿಗಳು ನಂಬಿಕೆಯನ್ನು ಬಲಪಡಿಸಿದಂಥ ಅನುಭವಗಳನ್ನು ತಿಳಿಸಿದರು

[ಪುಟ 24ರಲ್ಲಿರುವ ಚಿತ್ರಗಳು]

“ದೇವರನ್ನು ಘನಪಡಿಸಿರಿ” ಎಂಬ ಅಧಿವೇಶನಗಳಲ್ಲಿ ದೀಕ್ಷಾಸ್ನಾನವು ಒಂದು ಪ್ರಾಮುಖ್ಯ ವೈಶಿಷ್ಟ್ಯವಾಗಿತ್ತು

[ಪುಟ 24ರಲ್ಲಿರುವ ಚಿತ್ರಗಳು]

ಆಬಾಲವೃದ್ಧರೆಲ್ಲರೂ ಬೈಬಲ್‌ ಡ್ರಾಮಗಳಲ್ಲಿ ಆನಂದಿಸುತ್ತಾರೆ