ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನು ನೆಟ್ಟ . . . ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ”

“ಯೆಹೋವನು ನೆಟ್ಟ . . . ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ”

ಯೆಹೋವನ ಸೃಷ್ಟಿಯ ವೈಭವ

“ಯೆಹೋವನು ನೆಟ್ಟ . . . ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ”

ನೀವೆಂದಾದರೂ ಒಂದು ಕಾಡಿನಲ್ಲಿ ಎತ್ತರವಾದ ಮರಗಳ ನಡುವೆ, ಅವುಗಳ ಮಧ್ಯದಿಂದ ಸೂರ್ಯಕಿರಣಗಳು ತೂರಿಬರುತ್ತಿರುವಾಗ ಅಲ್ಲಿ ನಿಂತದ್ದುಂಟೊ? ಮಂದ ಮಾರುತವು ಎಲೆಗಳ ಮಧ್ಯದಿಂದ ಬೀಸಿದಾಗ ಆದ ಮರ್ಮರ ಸದ್ದನ್ನು ನೀವು ಕೇಳಿಸಿಕೊಂಡಿದ್ದೀರೋ?​—⁠ಯೆಶಾಯ 7:⁠2.

ಭೂಮಿಯ ಕೆಲವು ಪ್ರದೇಶಗಳಲ್ಲಿ ವರುಷದ ಒಂದು ಋತುವಿನಲ್ಲಿ, ಅನೇಕಾನೇಕ ಮರಗಳ ಎಲೆಗಳು ಕೆಂಪು, ಕಿತ್ತಳೆ, ಹಳದಿ ಮತ್ತಿತರ ಬಣ್ಣಗಳಿಂದ ಫಳಫಳನೆ ಪ್ರಜ್ವಲಿಸುತ್ತಿರುವಂತೆ ತೋರುತ್ತವೆ. ಹೌದು, ವನಕ್ಕೆ ಬೆಂಕಿ ಹಚ್ಚಲಾಗಿದೆಯೊ ಎಂಬಂತೆ ಕಾಣಿಸುತ್ತದೆ! ಇದು ಈ ವರ್ಣನೆಯನ್ನು ಎಷ್ಟು ಚೆನ್ನಾಗಿ ಹೋಲುತ್ತದೆ: “ಪರ್ವತಗಳು ಕೃತಜ್ಞತಾಸ್ತುತಿಗಳನ್ನು ಮಾಡುತ್ತಿವೆ. ಅರಣ್ಯದಲ್ಲಿರುವ ಎಲ್ಲಾ ಮರಗಳು ಹರ್ಷಿಸುತ್ತವೆ.”​—⁠ಯೆಶಾಯ 44:​23, ಪರಿಶುದ್ಧ ಬೈಬಲ್‌. *

ಭೂಗ್ರಹದಲ್ಲಿ ಸುಮಾರು ಮೂರನೆಯ ಒಂದಂಶವು ಕಾಡುಗಳಿಂದ ಆವರಿಸಲ್ಪಟ್ಟಿದೆ. ಆ ಕಾಡು ಮತ್ತು ಅದರಲ್ಲಿರುವ ಹೇರಳವಾದ ಜೀವರಾಶಿಗಳು, ಅವುಗಳ ವಿನ್ಯಾಸಕನೂ ಸೃಷ್ಟಿಕರ್ತನೂ ಆದ ಯೆಹೋವ ದೇವರನ್ನು ಶೋಭಾಯಮಾನವಾದ ವಿಧದಲ್ಲಿ ಮಹಿಮೆಪಡಿಸುತ್ತವೆ. ಪ್ರೇರಿತ ಕೀರ್ತನೆಗಾರನು ಹಾಡಿದ್ದು: “ಹಣ್ಣಿನ ಮರಗಳೂ ಎಲ್ಲಾ ತುರಾಯಿ ಗಿಡಗಳೂ . . . ಯೆಹೋವನನ್ನು ಕೊಂಡಾಡಲಿ.”​—⁠ಕೀರ್ತನೆ 148:7-9, 13.

“ಭೌತಿಕ ದೃಷ್ಟಿಯಿಂದಲೂ ಸೌಂದರ್ಯದ ದೃಷ್ಟಿಯಿಂದಲೂ ಮನುಷ್ಯನ ಅಸ್ತಿತ್ವಕ್ಕೆ ವೃಕ್ಷಗಳು ಅತ್ಯಾವಶ್ಯಕವಾಗಿವೆ,” ಎಂದು ನಮ್ಮ ಸುತ್ತಲಿರುವ ಮರಗಳು (ಇಂಗ್ಲಿಷ್‌) ಎಂಬ ಪುಸ್ತಕವು ತಿಳಿಸುತ್ತದೆ. ಕಾಡುಗಳು ಮನುಷ್ಯನ ಸ್ವಚ್ಛ ನೀರಿನ ಸರಬರಾಯಿಯನ್ನು ಸಂರಕ್ಷಿಸಿ, ಪೋಷಿಸಿ, ಉತ್ತಮಗೊಳಿಸುತ್ತವೆ. ಮರಗಳು ಗಾಳಿಯನ್ನೂ ನಿರ್ಮಲಗೊಳಿಸುತ್ತವೆ. ಅದ್ಭುತಕರವಾದ ದ್ಯುತಿ ಸಂಶ್ಲೇಷಣಾ ವಿಧಾನದಿಂದ ಎಲೆಯ ಕಣಗಳು ಕಾರ್ಬನ್‌ ಡೈಆಕ್ಸೈಡ್‌, ನೀರು ಮತ್ತು ಸೂರ್ಯನ ಬೆಳಕನ್ನು ಪೋಷಕಾಂಶಗಳು ಮತ್ತು ಆಮ್ಲಜನಕವಾಗಿ ಪರಿವರ್ತಿಸುತ್ತವೆ.

ಕಾಡುಗಳು ಸೌಂದರ್ಯ ಮತ್ತು ವಿನ್ಯಾಸದ ನಾಯಕಕೃತಿಗಳಾಗಿವೆ. ಸಾಮಾನ್ಯವಾಗಿ ಬೃಹದಾಕಾರದ ವೃಕ್ಷಗಳು ಕಾಡಿನಲ್ಲಿರುವ ವಸ್ತುಗಳಲ್ಲಿಯೇ ಭಾವಪರವಶಗೊಳಿಸುವಂಥವುಗಳಾಗಿವೆ. ಇವುಗಳ ನಡುವೆ ಅಸಂಖ್ಯಾತ ಜರೀಗಿಡಗಳು, ಪಾಚಿ, ಬಳ್ಳಿಗಳು, ಕುರುಚಲು ಗಿಡಗಳು ಮತ್ತು ಗಿಡಮೂಲಿಕೆಗಳು ಬೆಳೆಯುತ್ತವೆ. ಈ ರೀತಿಯ ಸಸ್ಯಗಳು ಆ ಮರಗಳು ಉಂಟುಮಾಡುವ ಪರಿಸರದ ಮೇಲೆ ಹೊಂದಿಕೊಂಡಿದ್ದು, ಅವುಗಳ ನೆರಳಿನಲ್ಲಿ ಬೆಳೆಯುತ್ತಾ ಆ ಕಾಡು ಒದಗಿಸುವ ತೇವಾಂಶವನ್ನು ಹೀರಿಕೊಳ್ಳುತ್ತವೆ.

ವರ್ಷಕ್ಕೊಮ್ಮೆ ಎಲೆ ಉದುರುವ ಕೆಲವು ಕಾಡುಗಳಲ್ಲಿ, ಅದರ ಒಂದು ಎಕ್ರೆಯಷ್ಟು ಭೂಮಿಯ ಮೇಲೆ ವರುಷದ ಕೊನೆಯ ಅವಧಿಯಲ್ಲಿ ಸುಮಾರು ಒಂದು ಕೋಟಿಯಷ್ಟು ಎಲೆಗಳು ಬೀಳಬಹುದು. ಆ ಎಲೆಗಳು ಏನಾಗುತ್ತವೆ? ಕೀಟಗಳು, ಅಣಬೆ, ಹುಳುಗಳು ಮತ್ತು ಇತರ ಜೀವಿಗಳು ಅಂತಿಮವಾಗಿ ಈ ಎಲ್ಲ ಜೈವಿಕ ಪದಾರ್ಥಗಳನ್ನು, ಫಲವತ್ತಾದ ನೆಲದ ಒಂದು ಅತ್ಯಾವಶ್ಯಕ ಪದಾರ್ಥವಾದ ಮಣ್ಣುಗೊಬ್ಬರವಾಗಿ ಪರಿವರ್ತಿಸುತ್ತವೆ. ಹೌದು, ಈ ಮೌನ ಕೆಲಸಗಾರರು ಮಣ್ಣನ್ನು ಹೊಸ ಬೆಳವಣಿಗೆಗಾಗಿ ತಯಾರಿಸುವಾಗ ಯಾವುದನ್ನೂ ತ್ಯಾಜ್ಯ ವಸ್ತುವಾಗಿ ಬಿಟ್ಟುಬಿಡುವುದಿಲ್ಲ.

ಆ ಮೃತ ಎಲೆಗಳ ಕೆಳಗೆ ಕಾಡಿನ ಮಣ್ಣು ಜೀವರಾಶಿಯಿಂದ ತುಂಬಿರುತ್ತದೆ. ಕಾಡು ಎಂಬ (ಇಂಗ್ಲಿಷ್‌) ಪುಸ್ತಕಕ್ಕನುಸಾರ, “30 ಸೆಂಟಿಮೀಟರ್‌ ಚಚ್ಚೌಕವೂ 2.5 ಸೆಂಟಿಮೀಟರ್‌ ಆಳವೂ ಇರುವ ನೆಲದಲ್ಲಿ 1,350ರಷ್ಟು ಜೀವಿಗಳಿರಬಹುದು, ಮತ್ತು ಇದರಲ್ಲಿ ಪ್ರತಿಯೊಂದು ಹಿಡಿ ಮಣ್ಣಿನಲ್ಲಿರುವ ಕೋಟ್ಯಂತರ ಸೂಕ್ಷ್ಮಜೀವಿಗಳು ಸೇರಿಸಲ್ಪಟ್ಟಿಲ್ಲ.” ಇದಲ್ಲದೆ ಕಾಡು, ಉರಗಗಳು, ಪಕ್ಷಿಗಳು, ಕೀಟಗಳು ಮತ್ತು ಸಸ್ತನಿಗಳಿಂದ ತುಂಬಿರುತ್ತದೆ. ಈ ಸೌಂದರ್ಯಕ್ಕೂ ವೈವಿಧ್ಯಕ್ಕೂ ಸ್ತುತಿ ಯಾರಿಗೆ ಸಲ್ಲಬೇಕಾಗಿದೆ? ಯೋಗ್ಯವಾಗಿಯೇ, ಅವುಗಳ ಸೃಷ್ಟಿಕರ್ತನು ಹೇಳುವುದು: “ಕಾಡಿನಲ್ಲಿರುವ ಸರ್ವಮೃಗಗಳೂ ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ.”​—⁠ಕೀರ್ತನೆ 50:10.

ಕೆಲವು ಪ್ರಾಣಿಗಳನ್ನು ಶಿಶಿರಸುಪ್ತಿಯಲ್ಲಿದ್ದು ಚಳಿಗಾಲದ ಕೊರೆಯುವ ಚಳಿಯನ್ನೂ ಆಹಾರದ ಕೊರತೆಯ ದೀರ್ಘ ಅವಧಿಗಳನ್ನೂ ಪಾರಾಗಿ ಉಳಿಯುವ ಗಮನಾರ್ಹವಾದ ಸಾಮರ್ಥ್ಯದೊಂದಿಗೆ ಸೃಷ್ಟಿಸಲಾಗಿದೆ. ಆದರೂ, ಎಲ್ಲ ಪ್ರಾಣಿಗಳು ಈ ಚಳಿನಿದ್ದೆಯನ್ನು ಮಾಡುವುದಿಲ್ಲ. ಚಳಿಗಾಲದ ಮಧ್ಯದಲ್ಲಿಯೂ ಜಿಗಿಯುತ್ತ ಹೊಲವನ್ನು ದಾಟಿಹೋಗುವ ಜಿಂಕೆಯ ಹಿಂಡೊಂದನ್ನು ನೀವು ನೋಡಬಹುದು. ಈ ಜಿಂಕೆಗಳಿಗೆ ಶಿಶಿರಸುಪ್ತಿಯೂ ಇಲ್ಲ, ಅವು ಆಹಾರವನ್ನು ಶೇಖರಿಸಿಡುವುದೂ ಇಲ್ಲ. ಬದಲಿಗೆ, ನೀವು ಇಲ್ಲಿ ಕೊಡಲ್ಪಟ್ಟಿರುವ ಜರ್ಮನಿಯ ಚಿತ್ರದಲ್ಲಿ ನೋಡುವಂತೆ, ಅವು ಮೇವನ್ನು ಹುಡುಕುತ್ತ ಎಳೆಯ ರೆಂಬೆಗಳನ್ನು ಮತ್ತು ಮೊಗ್ಗುಗಳನ್ನು ತಿನ್ನುತ್ತ ಹೋಗುತ್ತವೆ.

ಸಸ್ಯಜೀವನದ ಬಗ್ಗೆ ಶಾಸ್ತ್ರವಚನಗಳಲ್ಲಿ ಎದ್ದುಕಾಣುವಂಥ ರೀತಿಯಲ್ಲಿ ತಿಳಿಸಲಾಗಿದೆ. ಒಂದು ಗಣತಿಗನುಸಾರ, ಬೈಬಲು ಸುಮಾರು 30 ವಿಧದ ಮರಗಳೊಂದಿಗೆ ಸುಮಾರು 130 ಪ್ರತ್ಯೇಕ ಸಸಿಗಳನ್ನು ಹೆಸರಿಸುತ್ತದೆ. ಇಂತಹ ಉಲ್ಲೇಖಗಳ ಕುರಿತು ಸಸ್ಯಶಾಸ್ತ್ರಜ್ಞರಾದ ಮೈಕಲ್‌ ಸೋಹಾರೀ ಹೇಳುವುದು: “ಜೀವನದ ವಿವಿಧ ಭಾಗಗಳೊಂದಿಗೆ ಸಂಬಂಧಿಸಿರುವ ಸಸ್ಯಗಳ ಕುರಿತಾಗಿ ಬೈಬಲಿನಲ್ಲಿ ಮಾಡಲ್ಪಟ್ಟಿರುವಷ್ಟು ಹೆಚ್ಚಿನ ಉಲ್ಲೇಖಗಳು ಸಾಮಾನ್ಯವಾದ ಬೈಬಲೇತರ ಐಹಿಕ ಸಾಹಿತ್ಯಗಳಲ್ಲೂ ಇಲ್ಲ.”

ಮರಗಳೂ ಕಾಡುಗಳೂ ಒಬ್ಬ ಪ್ರೀತಿಪರ ಸೃಷ್ಟಿಕರ್ತನ ಅತಿ ಸೊಗಸಾದ ವರದಾನಗಳಾಗಿವೆ. ನಾವು ವನಗಳಲ್ಲಿ ಸಮಯವನ್ನು ಕಳೆದಿರುವುದಾದರೆ ನಿಶ್ಚಯವಾಗಿಯೂ ಕೀರ್ತನೆಗಾರನ ಈ ಮಾತುಗಳನ್ನು ಅನುಮೋದಿಸುವೆವು: “ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರುವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ. ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ.”​—⁠ಕೀರ್ತನೆ 104:16, 17.

[ಪಾದಟಿಪ್ಪಣಿಗಳು]

^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Translation Center, Inc. and used by permission.

ಇಸವಿ 2004ರ ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್‌ನ (ಇಂಗ್ಲಿಷ್‌) ಜನವರಿ/ಫೆಬ್ರವರಿ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ಮಧ್ಯಪೂರ್ವ ದೇಶಗಳ ಮನಮೋಹಕ ಫಲವೃಕ್ಷಗಳಲ್ಲಿ ಬಾದಾಮಿ ಮರವು ಒಂದಾಗಿದೆ. ವರುಷದ ಆದಿ ಭಾಗದಲ್ಲಿ, ಹೆಚ್ಚಿನ ಇತರ ಮರಗಳಿಗಿಂತಲೂ ಮುಂಚೆಯೇ ಅದು ತನ್ನ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತದೆ. ಪುರಾತನ ಕಾಲದ ಹೀಬ್ರು ಜನರು ಈ ಬಾದಾಮಿ ಮರವನ್ನು, ಅದು ಬೇಗನೆ ಹೂವು ಬಿಡುವ ಕಾರಣ ಚಚ್ಚರ ಮರವೆಂದು ಹೆಸರಿಟ್ಟರು. ಆ ಮರವು ಅದರ ಕೋಮಲವಾದ ಕಡುಗೆಂಪು ಅಥವಾ ಬಿಳಿಯ ಹೂಗಳ ಹೊದಿಕೆಯೊಂದಿಗೆ ಎದ್ದು ಬಂದಿದೆಯೊ ಎಂಬಂತೆ ತೋರುತ್ತದೆ.​—⁠ಪ್ರಸಂಗಿ 12:⁠5.

ಸುಮಾರು 9,000 ಜ್ಞಾತ ಪಕ್ಷಿಜಾತಿಗಳಲ್ಲಿ ಸುಮಾರು 5,000 ಜಾತಿಗಳನ್ನು ಹಾಡುಹಕ್ಕಿಗಳೆಂದು ವರ್ಗೀಕರಿಸಲಾಗಿದೆ. ಅವುಗಳ ಹಾಡುಗಳು ವಿಶಾಲ ಕಾಡಿನ ಮೌನವನ್ನು ಮುರಿಯುತ್ತವೆ. (ಕೀರ್ತನೆ 104:12) ಉದಾಹರಣೆಗೆ, ಹಾಡುಗುಬ್ಬಿಯ ಸ್ವರ ಉತ್ತೇಜನೀಯ. ಇಲ್ಲಿ ಚಿತ್ರದಲ್ಲಿರುವ ಮೋರ್ನಿಂಗ್‌ ವಾರ್‌ಬ್ಲರ್‌ ಪಕ್ಷಿಗಳು ಬೂದು, ಹಳದಿ ಮತ್ತು ನಸು ಬೂದು ಹಸುರು ಬಣ್ಣಗಳಿಂದ ಅಲಂಕೃತವಾದ ಪುಟ್ಟ ಹಾಡುಹಕ್ಕಿಗಳು.​—⁠ಕೀರ್ತನೆ 148:​1, 10.

[ಪುಟ 9ರಲ್ಲಿರುವ ಚಿತ್ರ]

ಫ್ರಾನ್ಸ್‌ ದೇಶದ ನಾರ್ಮಂಡಿಯಲ್ಲಿನ ಕಾಡು