ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಹತ್ತು ಅಪಾರ

ಯೆಹೋವನ ಮಹತ್ತು ಅಪಾರ

ಯೆಹೋವನ ಮಹತ್ತು ಅಪಾರ

“ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ; ಆತನ ಮಹತ್ತು ಅಪಾರವಾದದ್ದು.”​—⁠ಕೀರ್ತನೆ 145:⁠3.

ಕೀರ್ತನೆ 145ರ ರಚಕನು ಇತಿಹಾಸದ ಸುಪ್ರಸಿದ್ಧ ಪುರುಷರಲ್ಲಿ ಒಬ್ಬನು. ಅವನು ಬಾಲಕನಾಗಿದ್ದಾಗ ಶಸ್ತ್ರಸಜ್ಜಿತನಾದ ದೈತ್ಯನೊಬ್ಬನನ್ನು ಎದುರಿಸಿ ಅವನನ್ನು ಕೊಂದನು. ಮತ್ತು ಈ ಕೀರ್ತನೆಗಾರನು ರಣವೀರ ರಾಜನಾಗಿ ಅನೇಕ ವೈರಿಗಳನ್ನು ಸೋಲಿಸಿದನು. ಅವನೇ ದಾವೀದನು, ಪುರಾತನ ಇಸ್ರಾಯೇಲಿನ ಎರಡನೆಯ ಅರಸನು. ದಾವೀದನ ಕೀರ್ತಿ ಅವನ ಮರಣದ ಬಳಿಕವೂ ಉಳಿದಿರುವುದರಿಂದ ಇಂದು ಸಹ ಅನೇಕರಿಗೆ ಅವನ ಕುರಿತು ಸ್ವಲ್ಪವಾದರೂ ತಿಳಿದಿದೆ.

2 ದಾವೀದನ ದೊಡ್ಡ ಸಾಧನೆಗಳ ಹೊರತಾಗಿಯೂ ಅವನು ನಮ್ರನಾಗಿದ್ದನು. ಯೆಹೋವನ ಬಗ್ಗೆ ಅವನು ಹಾಡಿದ್ದು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ​—⁠ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” (ಕೀರ್ತನೆ 8:3, 4) ತಾನೇ ಮಹಾಪುರುಷನೆಂದು ನೆನಸುವುದಕ್ಕೆ ಬದಲಾಗಿ ಎಲ್ಲ ಶತ್ರುಗಳಿಂದ ತನ್ನನ್ನು ತಪ್ಪಿಸಿದ್ದಕ್ಕಾಗಿ ದಾವೀದನು ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸಿದನು ಮತ್ತು ಆತನ ಕುರಿತು ಹೇಳಿದ್ದು: “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ; ನಿನ್ನ ಕೃಪಾಕಟಾಕ್ಷವು [“ನಮ್ರತೆಯು,” NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (2 ಸಮುವೇಲ 22:1, 2, 36) ಯೆಹೋವನು ಪಾಪಿಗಳಿಗೆ ಕರುಣೆ ತೋರಿಸುವಾಗ ನಮ್ರತೆಯನ್ನು ವ್ಯಕ್ತಪಡಿಸುತ್ತಾನೆ, ಮತ್ತು ದಾವೀದನು ದೇವರ ಆ ಅಪಾತ್ರ ದಯೆಗೆ ಕೃತಜ್ಞನಾಗಿದ್ದನು.

‘ಅರಸನನ್ನು ಘನಪಡಿಸುವೆನು’

3 ದಾವೀದನು ದೇವನೇಮಿತ ಅರಸನಾಗಿದ್ದರೂ ಅವನು ಯೆಹೋವನನ್ನೇ ಇಸ್ರಾಯೇಲಿನ ನಿಜ ಅರಸನೆಂದು ಪರಿಗಣಿಸಿದನು. ದಾವೀದನು ಹೇಳಿದ್ದು: “ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ.” (1 ಪೂರ್ವಕಾಲವೃತ್ತಾಂತ 29:11) ಮತ್ತು ದೇವರನ್ನು ದೊರೆಯೋಪಾದಿ ದಾವೀದನು ಎಷ್ಟೊಂದು ಗಣ್ಯಮಾಡಿದನು! ಅವನು ಹಾಡಿದ್ದು: “ನನ್ನ ದೇವರೇ, ಒಡೆಯನೇ, ನಿನ್ನನ್ನು ಘನಪಡಿಸುವೆನು. ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು. ದಿನಂಪ್ರತಿ [“ದಿನವಿಡೀ,” NW] ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.” (ಕೀರ್ತನೆ 145:1, 2) ದಿನವಿಡೀ ಮತ್ತು ನಿತ್ಯಕ್ಕೂ ಯೆಹೋವ ದೇವರನ್ನು ಸ್ತುತಿಸುವುದು ದಾವೀದನ ಅಭಿಲಾಷೆಯಾಗಿತ್ತು.

4 ದೇವರು ತನ್ನ ಜೀವಿಗಳಿಂದ ಸ್ವಾತಂತ್ರ್ಯವನ್ನು ತಡೆದಿಡುವ ಒಬ್ಬ ಸ್ವಾರ್ಥ ಅರಸನೆಂಬ ಸೈತಾನನ ವಾದಕ್ಕೆ 145ನೇ ಕೀರ್ತನೆಯು ಪ್ರಬಲವಾದ ಉತ್ತರವನ್ನು ಕೊಡುತ್ತದೆ. (ಆದಿಕಾಂಡ 3:​1-5) ಈ ಕೀರ್ತನೆಯು, ದೇವರಿಗೆ ವಿಧೇಯರಾಗುವವರು ತಮಗೆ ದೊರೆಯಸಾಧ್ಯವಿರುವ ಲಾಭಕ್ಕಾಗಿ ಮಾತ್ರ ವಿಧೇಯರಾಗುತ್ತಾರೆಯೇ ಹೊರತು ದೇವರನ್ನು ಪ್ರೀತಿಸುವ ಕಾರಣದಿಂದಲ್ಲ ಎಂಬ ಸೈತಾನನ ವಾದವು ಸುಳ್ಳೆಂಬುದನ್ನು ಬಯಲುಪಡಿಸುತ್ತದೆ. (ಯೋಬ 1:​9-11; 2:​4, 5) ಇಂದು, ದಾವೀದನಂತೆಯೇ ಸತ್ಯ ಕ್ರೈಸ್ತರು ಪಿಶಾಚನ ಸುಳ್ಳು ಅಪವಾದಗಳಿಗೆ ಉತ್ತರವನ್ನು ಒದಗಿಸುತ್ತಿದ್ದಾರೆ. ಅವರು ಯೆಹೋವನನ್ನು ನಿತ್ಯಕ್ಕೂ ಸ್ತುತಿಸಬಯಸುವುದರಿಂದ, ರಾಜ್ಯಾಳಿಕೆಯ ಕೆಳಗೆ ತಮಗಿರುವ ನಿತ್ಯಜೀವದ ನಿರೀಕ್ಷೆಯನ್ನು ಅವರು ಬಹುಮೂಲ್ಯವೆಂದೆಣಿಸುತ್ತಾರೆ. ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ಮೇಲೆ ನಂಬಿಕೆಯನ್ನಿಡುವುದರ ಮೂಲಕ ಮತ್ತು ಯೆಹೋವನ ಸಮರ್ಪಿತ, ಸ್ನಾತ ಆರಾಧಕರಾಗಿ ಪ್ರೀತಿಯಿಂದ ಆತನ ಸೇವೆಯನ್ನು ಮಾಡುವ ಮೂಲಕ ಈಗಾಗಲೇ ಲಕ್ಷಾಂತರ ಜನರು ಹಾಗೆ ಮಾಡತೊಡಗಿದ್ದಾರೆ.​—⁠ರೋಮಾಪುರ 5:8; 1 ಯೋಹಾನ 5:⁠3.

5 ಯೆಹೋವನ ಸೇವಕರೋಪಾದಿ ಆತನನ್ನು ಕೀರ್ತಿಸಿ ಸ್ತುತಿಸಲು ನಮಗಿರುವ ಅನೇಕ ಅವಕಾಶಗಳ ಕುರಿತು ಯೋಚಿಸಿರಿ. ಆತನ ವಾಕ್ಯವಾದ ಬೈಬಲಿನಲ್ಲಿ ನಾವು ಓದಿದ ಯಾವುದೊ ವಿಷಯವು ನಮ್ಮನ್ನು ಗಾಢವಾಗಿ ಪ್ರಭಾವಿಸುವಾಗ ಪ್ರಾರ್ಥನೆಯ ಮೂಲಕ ನಾವಿದನ್ನು ಮಾಡಬಲ್ಲೆವು. ದೇವರು ತನ್ನ ಜನರೊಂದಿಗೆ ವ್ಯವಹರಿಸುವ ವಿಧದಿಂದ ನಮ್ಮ ಹೃದಯವು ತುಂಬಿಬರುವಾಗ ಅಥವಾ ಆತನ ಅದ್ಭುತಕರ ಸೃಷ್ಟಿಯ ಒಂದು ನಿರ್ದಿಷ್ಟ ಅಂಶದಿಂದ ನಾವು ಪುಳಕಿತರಾಗುವಾಗ ನಾವು ಉಪಕಾರಸ್ತುತಿಯನ್ನು ಮತ್ತು ಕೃತಜ್ಞತೆಯನ್ನು ಅರ್ಪಿಸಬಲ್ಲೆವು. ಸಭಾಕೂಟಗಳಲ್ಲಿ ಅಥವಾ ಖಾಸಗಿ ಮಾತುಕತೆಗಳಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಯೆಹೋವ ದೇವರ ಉದ್ದೇಶಗಳ ಕುರಿತು ಚರ್ಚಿಸುವಾಗಲೂ ನಾವು ಆತನನ್ನು ಕೊಂಡಾಡುತ್ತೇವೆ. ವಾಸ್ತವದಲ್ಲಿ, ದೇವರ ರಾಜ್ಯದ ಹಿತಾರ್ಥವಾಗಿ ನಾವು ಮಾಡುವ ಸಕಲ “ಒಳ್ಳೇ ಕ್ರಿಯೆ”ಗಳು ಯೆಹೋವನಿಗೆ ಸ್ತುತಿಯನ್ನು ತರುತ್ತವೆ.​—⁠ಮತ್ತಾಯ 5:16.

6 ಇಂತಹ ಸತ್ರಿಯೆಗಳ ಇತ್ತೀಚಿನ ಉದಾಹರಣೆಗಳಲ್ಲಿ ಯೆಹೋವನ ಜನರು ಬಡದೇಶಗಳಲ್ಲಿ ನಿರ್ಮಿಸಿರುವ ಆರಾಧನಾ ಸ್ಥಳಗಳೂ ಸೇರಿವೆ. ಇವುಗಳಲ್ಲಿ ಹೆಚ್ಚಿನವು, ಇತರ ದೇಶಗಳ ಜೊತೆ ವಿಶ್ವಾಸಿಗಳ ಆರ್ಥಿಕ ಸಹಾಯದಿಂದ ಕಟ್ಟಲ್ಪಟ್ಟಿವೆ. ಕೆಲವು ಮಂದಿ ಕ್ರೈಸ್ತರು ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯದಲ್ಲಿ ಭಾಗವಹಿಸಲಿಕ್ಕೋಸ್ಕರ ಅಂಥ ಪ್ರದೇಶಗಳಿಗೆ ಸ್ವಇಷ್ಟದಿಂದ ಹೋಗಿ ಸಹಾಯ ನೀಡಿದ್ದಾರೆ. ಮತ್ತು ಸಕಲ ಸತ್ಕ್ರಿಯೆಗಳಲ್ಲಿ ಅತಿ ಪ್ರಾಮುಖ್ಯವಾದದ್ದು ಯೆಹೋವನ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಆತನನ್ನು ಸ್ತುತಿಸುವುದೇ ಆಗಿದೆ. (ಮತ್ತಾಯ 24:14) ಕೀರ್ತನೆ 145ರಲ್ಲಿನ ಮುಂದಿನ ವಚನಗಳು ತೋರಿಸುವಂತೆ, ದಾವೀದನು ದೇವರ ಆಳಿಕೆಯನ್ನು ಮಾನ್ಯಮಾಡಿ ಆತನ ರಾಜತ್ವವನ್ನು ಮೆಚ್ಚಿ ಕೊಂಡಾಡಿದನು. (ಕೀರ್ತನೆ 145:​11, 12) ದೇವರು ಪ್ರೀತಿಯಿಂದ ಆಳುವ ವಿಧಕ್ಕಾಗಿ ನಿಮಗೆ ತದ್ರೀತಿಯ ಗಣ್ಯತೆ ಇದೆಯೆ? ಮತ್ತು ಆತನ ರಾಜ್ಯದ ಕುರಿತಾಗಿ ನೀವು ಕ್ರಮವಾಗಿ ಇತರರೊಂದಿಗೆ ಮಾತಾಡುತ್ತೀರೊ?

ದೇವರ ಮಹತ್ತಿನ ಉದಾಹರಣೆಗಳು

7ಕೀರ್ತನೆ 145:3 ಯೆಹೋವನನ್ನು ಸ್ತುತಿಸಲಿಕ್ಕಾಗಿ ಒಂದು ಪ್ರಧಾನ ಕಾರಣವನ್ನು ಕೊಡುತ್ತದೆ. ದಾವೀದನು ಹಾಡಿದ್ದು: “ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ; ಆತನ ಮಹತ್ತು ಅಪಾರವಾದದ್ದು.” ಯೆಹೋವನ ಮಹತ್ತು ಅಮಿತ. ಅದನ್ನು ಪೂರ್ಣವಾಗಿ ಹುಡುಕಿ, ಅರಿತು, ಅಳೆಯುವುದು ಮನುಷ್ಯರಿಂದ ಆಗದ ಕೆಲಸ. ಆದರೆ, ನಾವೀಗ ಯೆಹೋವನ ಅಪಾರವಾದ ಮಹತ್ತಿನ ಉದಾಹರಣೆಗಳನ್ನು ಪರಿಗಣಿಸುವುದರಿಂದ ನಿಶ್ಚಯವಾಗಿಯೂ ಪ್ರಯೋಜನವನ್ನು ಪಡೆದುಕೊಳ್ಳುವೆವು.

8 ರಾತ್ರಿಯ ಸಮಯದಲ್ಲಿ ನಗರದ ಪ್ರಕಾಶಮಾನವಾದ ಬೆಳಕುಗಳಿಂದ ದೂರ ಹೋಗಿ ಮೋಡವಿಲ್ಲದ ಆಕಾಶವನ್ನು ನೀವು ನೋಡಿದ ಒಂದು ಸಂದರ್ಭವನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ. ಆಗ ಆಕಾಶದ ಆ ಕಪ್ಪು ಹಿನ್ನೆಲೆಯಲ್ಲಿ ಕಂಡುಬಂದ ಅಸಂಖ್ಯಾತ ತಾರೆಗಳನ್ನು ನೋಡಿ ನೀವು ಬೆರಗಾಗಲಿಲ್ಲವೆ? ನಿಮಗೆ ಆ ಆಕಾಶಸ್ಥ ಕಾಯಗಳನ್ನು ಸೃಷ್ಟಿಸಿದ ಯೆಹೋವನ ಮಹತ್ತಿಗಾಗಿ ಆತನನ್ನು ಸ್ತುತಿಸುವ ಮನಸ್ಸಾಯಿತಲ್ಲವೆ? ಆದರೆ ನೀವು ಆಗ ನೋಡಿದ್ದು, ಭೂಮಿಯು ಯಾವ ಗ್ಯಾಲಕ್ಸಿಯ ಭಾಗವಾಗಿದೆಯೊ ಅದರ ಒಂದು ಅತಿ ಚಿಕ್ಕ ಅಂಶವನ್ನು ಮಾತ್ರ. ಇದಲ್ಲದೆ, ಹತ್ತು ಸಾವಿರ ಕೋಟಿಗಿಂತಲೂ ಹೆಚ್ಚು ಗ್ಯಾಲಕ್ಸಿಗಳಿವೆಯೆಂದು ಅಂದಾಜು ಮಾಡಲಾಗಿದ್ದು, ಅವುಗಳಲ್ಲಿ ಮೂರನ್ನು ಮಾತ್ರ ದೂರದರ್ಶಕದ ಸಹಾಯವಿಲ್ಲದೆ ನೋಡಸಾಧ್ಯವಿದೆ. ಹೌದು, ಈ ಬೃಹತ್‌ ವಿಶ್ವದಲ್ಲಿರುವ ಅಸಂಖ್ಯಾತ ನಕ್ಷತ್ರಗಳೂ ಗ್ಯಾಲಕ್ಸಿಗಳೂ ಯೆಹೋವನ ಸೃಷ್ಟಿಕಾರಕ ಶಕ್ತಿ ಮತ್ತು ಅಗಮ್ಯವಾದ ಮಹತ್ತಿಗೆ ಸಾಕ್ಷ್ಯವಾಗಿವೆ.​—⁠ಯೆಶಾಯ 40:26.

9 ಯೆಹೋವನ ಮಹತ್ತಿನ ಸಂಬಂಧದಲ್ಲಿ ಇತರ ಅಂಶಗಳನ್ನು​—⁠ಯೇಸು ಕ್ರಿಸ್ತನನ್ನು ಒಳಗೂಡಿಸುವ ಅಂಶಗಳನ್ನು​—⁠ಪರಿಗಣಿಸಿರಿ. ದೇವರು ತನ್ನ ಪುತ್ರನನ್ನು ಸೃಷ್ಟಿಸಿ ಗಣನಾತೀತ ಕಾಲದ ವರೆಗೆ ಅವನನ್ನು “ನಿಪುಣ ಕೆಲಸಗಾರ”ನೋಪಾದಿ ಉಪಯೋಗಿಸಿದ್ದರಲ್ಲಿ ಆತನ ಮಹತ್ತು ತೋರಿಬಂತು. (ಜ್ಞಾನೋಕ್ತಿ 8:​22-31, ಪರಿಶುದ್ಧ ಬೈಬಲ್‌ *) ಯೆಹೋವನ ಪ್ರೀತಿಯ ಮಹತ್ತು, ಆತನು ತನ್ನ ಏಕಜಾತ ಪುತ್ರನನ್ನು ಮಾನವರ ಸಲುವಾಗಿ ವಿಮೋಚನಾ ಯಜ್ಞವಾಗಿ ಕೊಟ್ಟದ್ದರಲ್ಲಿ ಪ್ರಕಟಿಸಲ್ಪಟ್ಟಿತು. (ಮತ್ತಾಯ 20:28; ಯೋಹಾನ 3:16; 1 ಯೋಹಾನ 2:​1, 2) ಮತ್ತು ಯೆಹೋವನು ಯೇಸುವಿನ ಪುನರುತ್ಥಾನದ ಸಮಯದಲ್ಲಿ ಅವನಿಗಾಗಿ ರೂಪಿಸಿದ ಮಹಿಮಾಭರಿತವೂ ಅಮರವೂ ಆದ ಆತ್ಮ ದೇಹವು ಮಾನವ ಗ್ರಹಿಕೆಗೆ ನಿಲುಕದ ವಿಷಯವಾಗಿದೆ.​—⁠1 ಪೇತ್ರ 3:18.

10 ಯೇಸುವಿನ ಪುನರುತ್ಥಾನದಲ್ಲಿ ಯೆಹೋವನ ಅಪಾರ ಮಹತ್ತಿನ ಅನೇಕ ಭಾವಪ್ರೇರಕ ಅಂಶಗಳು ಸೇರಿದ್ದವು. ನಿಸ್ಸಂದೇಹವಾಗಿಯೂ ದೇವರು, ದೃಶ್ಯಾದೃಶ್ಯ ವಿಷಯಗಳ ಸೃಷ್ಟಿಯಲ್ಲಿ ಒಳಗೂಡಿದ್ದ ಕೆಲಸದ ಕುರಿತಾದ ಯೇಸುವಿನ ಸ್ಮರಣಶಕ್ತಿಯನ್ನು ಅವನಲ್ಲಿ ಪುನಸ್ಸ್ಥಾಪಿಸಿದನು. (ಕೊಲೊಸ್ಸೆ 1:​15, 16) ಆ ದೃಶ್ಯಾದೃಶ್ಯ ವಿಷಯಗಳಲ್ಲಿ ಬೇರೆ ಆತ್ಮಜೀವಿಗಳು, ವಿಶ್ವ, ಫಲೋತ್ಪಾದಕ ಭೂಮಿ, ಮತ್ತು ನಮ್ಮ ಭೂಗೋಳದಲ್ಲಿರುವ ಸಕಲ ವಿಧದ ಭೌತಿಕ ಜೀವರಾಶಿಗಳು ಕೂಡಿದ್ದವು. ತನ್ನ ಪುತ್ರನ ಮಾನವಪೂರ್ವ ಅಸ್ತಿತ್ವದಲ್ಲಿ ಅವನು ಕಣ್ಣಾರೆ ನೋಡಿದ್ದಂಥ ಸ್ವರ್ಗೀಯ ಹಾಗೂ ಭೌಮಿಕ ಜೀವರಾಶಿಗಳ ಪೂರ್ಣ ಇತಿಹಾಸದ ಜ್ಞಾನವನ್ನು ಪುನಸ್ಸ್ಥಾಪಿಸಿದ್ದಲ್ಲದೆ, ಭೂಮಿಯ ಮೇಲೆ ಒಬ್ಬ ಪರಿಪೂರ್ಣ ಮನುಷ್ಯನಾಗಿ ಯೇಸು ಪಡೆದ ಅನುಭವವನ್ನೂ ಯೆಹೋವನು ಅದಕ್ಕೆ ಕೂಡಿಸಿದನು. ಹೌದು, ಯೆಹೋವನ ಅಪಾರ ಮಹತ್ತು ಯೇಸುವಿನ ಪುನರುತ್ಥಾನದಲ್ಲಿ ತೋರಿಬಂದದ್ದು ನಿಜ. ಇದಲ್ಲದೆ, ಈ ಮಹತ್ಕಾರ್ಯವು ಇತರರ ಪುನರುತ್ಥಾನವು ಸಾಧ್ಯ ಎಂಬುದಕ್ಕೆ ಖಾತ್ರಿಯನ್ನು ಕೊಡುತ್ತದೆ. ಇದು, ದೇವರು ತನ್ನ ಪರಿಪೂರ್ಣ ಸ್ಮರಣಶಕ್ತಿಯಲ್ಲಿರುವ ಕೋಟ್ಯಂತರ ಮೃತರನ್ನು ಉಜ್ಜೀವಿಸಬಲ್ಲನೆಂಬುದರಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಬೇಕು.​—⁠ಯೋಹಾನ 5:28, 29; ಅ. ಕೃತ್ಯಗಳು 17:31.

ಅದ್ಭುತ ಕೃತ್ಯಗಳು ಮತ್ತು ಮಹತ್ಕಾರ್ಯಗಳು

11 ಯೇಸುವಿನ ಪುನರುತ್ಥಾನದಂದಿನಿಂದ ಯೆಹೋವನು ಇತರ ಅನೇಕ ಮಹತ್ತರ ಮತ್ತು ಅದ್ಭುತ ಕೃತ್ಯಗಳನ್ನು ಮಾಡಿರುತ್ತಾನೆ. (ಕೀರ್ತನೆ 40:⁠5) ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೋವನು ಒಂದು ಹೊಸ ಜನಾಂಗವನ್ನು, ಪವಿತ್ರಾತ್ಮದಿಂದ ಅಭಿಷಿಕ್ತರಾದ ಕ್ರಿಸ್ತನ ಶಿಷ್ಯರನ್ನು ಒಳಗೊಂಡಿದ್ದ ‘ದೇವರ ಇಸ್ರಾಯೇಲನ್ನು’ ಅಸ್ತಿತ್ವಕ್ಕೆ ತಂದನು. (ಗಲಾತ್ಯ 6:16) ಪ್ರಬಲವಾದ ರೀತಿಯಲ್ಲಿ ಈ ಹೊಸ ಆತ್ಮಿಕ ಜನಾಂಗವು ಆಗಿನ ಜ್ಞಾತ ಜಗತ್ತಿನಲ್ಲೆಲ್ಲ ವ್ಯಾಪಿಸಿತು. ಯೇಸುವಿನ ಅಪೊಸ್ತಲರ ಮರಣಾನಂತರ ಕ್ರೈಸ್ತಪ್ರಪಂಚದ ಬೆಳವಣಿಗೆಗೆ ನಡೆಸಿದ ಧರ್ಮಭ್ರಷ್ಟತೆಯ ಹೊರತಾಗಿಯೂ, ಯೆಹೋವನು ತನ್ನ ಉದ್ದೇಶಗಳ ನೆರವೇರಿಕೆಯನ್ನು ಖಚಿತಪಡಿಸಲು ಅದ್ಭುತ ಕೃತ್ಯಗಳನ್ನು ನಡೆಸುತ್ತಾ ಹೋದನು.

12 ದೃಷ್ಟಾಂತಕ್ಕೆ, ಅಂಗೀಕೃತ ಬೈಬಲ್‌ ಗ್ರಂಥವು ಸಂರಕ್ಷಿಸಲ್ಪಟ್ಟು, ಕ್ರಮೇಣ ಇಂದು ಭೂಮಿಯಲ್ಲಿರುವ ಎಲ್ಲ ಪ್ರಮುಖ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ಅನೇಕವೇಳೆ, ಬೈಬಲ್‌ ಭಾಷಾಂತರವನ್ನು ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಮತ್ತು ಸೈತಾನನ ಪ್ರತಿನಿಧಿಗಳಿಂದ ಒಡ್ಡಲ್ಪಟ್ಟ ಮರಣದ ಬೆದರಿಕೆಯ ಕೆಳಗೂ ಮಾಡಲಾಯಿತು. ಇದು ಅಗಮ್ಯ ಮಹಾ ದೇವರಾದ ಯೆಹೋವನ ಚಿತ್ತವಾಗಿರದಿದ್ದಲ್ಲಿ, ಇಂದು ಬೈಬಲ್‌ 2,000ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲ್ಪಡಲು ಸಾಧ್ಯವಿರುತ್ತಿರಲಿಲ್ಲ ಎಂಬುದಂತೂ ಖಂಡಿತ.

13 ಯೆಹೋವನ ಮಹತ್ತು ಆತನ ರಾಜ್ಯೋದ್ದೇಶಗಳ ಸಂಬಂಧದಲ್ಲಿಯೂ ತೋರಿಸಲ್ಪಟ್ಟಿದೆ. ಉದಾಹರಣೆಗೆ, 1914ನೆಯ ವರುಷದಲ್ಲಿ, ಆತನು ತನ್ನ ಪುತ್ರನಾದ ಯೇಸು ಕ್ರಿಸ್ತನನ್ನು ಸ್ವರ್ಗದಲ್ಲಿ ರಾಜನಾಗಿ ಸ್ಥಾಪಿಸಿದನು. ಸ್ವಲ್ಪದರಲ್ಲೇ, ಯೇಸು ಸೈತಾನನ ಮತ್ತು ಅವನ ದೆವ್ವಗಳ ವಿರುದ್ಧ ಕ್ರಮ ಕೈಕೊಂಡನು. ಅವರು ಸ್ವರ್ಗದಿಂದ ಉಚ್ಛಾಟಿಸಲ್ಪಟ್ಟು, ಭೂಮಿಯ ಪರಿಸರಕ್ಕೆ ನಿರ್ಬಂಧಿಸಲ್ಪಟ್ಟರು ಮತ್ತು ಈಗ ಅಧೋಲೋಕಕ್ಕೆ ದೊಬ್ಬಲ್ಪಡಲು ಕಾಯುತ್ತಿದ್ದಾರೆ. (ಪ್ರಕಟನೆ 12:9-12; 20:1-3) ಅಂದಿನಿಂದ ಯೇಸುವಿನ ಅಭಿಷಿಕ್ತ ಹಿಂಬಾಲಕರು ಹೆಚ್ಚಿನ ಹಿಂಸೆಯನ್ನು ಅನುಭವಿಸಿದ್ದಾರೆ. ಆದರೂ, ಯೆಹೋವನು ಅವರನ್ನು ಕ್ರಿಸ್ತನ ಅದೃಶ್ಯ ಸಾನ್ನಿಧ್ಯದ ಈ ಸಮಯದಲ್ಲಿ ಪೋಷಿಸಿರುತ್ತಾನೆ.​—⁠ಮತ್ತಾಯ 24:3; ಪ್ರಕಟನೆ 12:17.

14 ಇಸವಿ 1919ರಲ್ಲಿ ಯೆಹೋವನು ತನ್ನ ಮಹತ್ತನ್ನು ತೋರ್ಪಡಿಸಿದಂಥ ಇನ್ನೊಂದು ಅದ್ಭುತಕಾರ್ಯವನ್ನು ಮಾಡಿದನು. ಆತ್ಮಿಕವಾಗಿ ನಿಷ್ಕ್ರಿಯ ಸ್ಥಿತಿಗೆ ತರಲ್ಪಟ್ಟಿದ್ದ ಯೇಸುವಿನ ಅಭಿಷಿಕ್ತ ಹಿಂಬಾಲಕರನ್ನು ಆಗ ಪುನಶ್ಚೈತನ್ಯಗೊಳಿಸಲಾಯಿತು. (ಪ್ರಕಟನೆ 11:​3-11) ತರುವಾಯದ ವರುಷಗಳಲ್ಲಿ ಈ ಅಭಿಷಿಕ್ತರು ಸ್ಥಾಪಿತ ಸ್ವರ್ಗೀಯ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರಿದ್ದಾರೆ. ಮತ್ತು ಅಂದಿನಿಂದ 1,44,000 ಮಂದಿಯ ಸಂಖ್ಯೆಯನ್ನು ಪೂರ್ಣಗೊಳಿಸಲು ಇತರ ಅಭಿಷಿಕ್ತರನ್ನು ಒಟ್ಟುಗೂಡಿಸಲಾಗಿದೆ. (ಪ್ರಕಟನೆ 14:​1-3) ಮತ್ತು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ಇನ್ನೂ ಭೂಮಿಯಲ್ಲಿರುವಾಗಲೇ ಯೆಹೋವನು ಅವರ ಮೂಲಕ ನೀತಿಯ ಮಾನವ ಸಮಾಜವಾದ “ನೂತನ ಭೂಮಂಡಲ”ಕ್ಕೆ ಅಸ್ತಿವಾರವನ್ನು ಹಾಕಿದನು. (ಪ್ರಕಟನೆ 21:⁠1) ಆದರೆ ನಂಬಿಗಸ್ತ ಅಭಿಷಿಕ್ತರೆಲ್ಲರೂ ಸ್ವರ್ಗಕ್ಕೆ ತೆರಳಿದ ನಂತರ ಈ “ನೂತನ ಭೂಮಂಡಲ”ಕ್ಕೆ ಏನಾಗುವುದು?

15 ಈ ಪತ್ರಿಕೆಯ ಇಸವಿ 1935ರ ಆಗಸ್ಟ್‌ 1 ಮತ್ತು ಆಗಸ್ಟ್‌ 15ರ ಸಂಚಿಕೆಗಳಲ್ಲಿ, ಪ್ರಕಟನೆ 7ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ‘ಮಹಾಸಮೂಹದ’ ಸಂಬಂಧದಲ್ಲಿ ಮುಖ್ಯ ಲೇಖನಗಳು ಪ್ರಕಟಿಸಲ್ಪಟ್ಟವು. ಅಭಿಷಿಕ್ತ ಕ್ರೈಸ್ತರು ಎಲ್ಲ ಜನಾಂಗ, ಕುಲ, ಪ್ರಜೆ ಮತ್ತು ಭಾಷೆಗಳಿಂದ ಈ ಜೊತೆ ಆರಾಧಕರನ್ನು ಹುರುಪಿನಿಂದ ಹುಡುಕಲು ಮತ್ತು ತಮ್ಮೊಂದಿಗೆ ಸಹವಾಸಮಾಡುವಂತೆ ಆಮಂತ್ರಿಸಲಾರಂಭಿಸಿದರು. ಈ ‘ಮಹಾಸಮೂಹ’ದವರು ಸನ್ನಿಹಿತವಾಗಿರುವ “ಮಹಾ ಸಂಕಟ”ವನ್ನು (NW) ಪಾರಾಗಿ, ‘ನೂತನ ಭೂಮಂಡಲದ’ ಕಾಯಂ ಸದಸ್ಯರಾಗಿ ಪರದೈಸಿನಲ್ಲಿ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗುವರು. (ಪ್ರಕಟನೆ 7:​9-14) ಅಭಿಷಿಕ್ತ ಕ್ರೈಸ್ತರ ಮುಂದಾಳುತ್ವದೊಂದಿಗೆ ನಡೆಯುತ್ತಿರುವ ಈ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಿಂದಾಗಿ ಈಗ 60 ಲಕ್ಷಕ್ಕೂ ಹೆಚ್ಚು ಮಂದಿ ಭೂಪರದೈಸಿನಲ್ಲಿ ಅನಂತ ಜೀವನದ ನಿರೀಕ್ಷೆಯುಳ್ಳವರಾಗಿದ್ದಾರೆ. ಸೈತಾನನಿಂದ ಮತ್ತು ಅವನ ಭ್ರಷ್ಟ ಲೋಕದಿಂದ ಬಂದಿರುವ ವಿರೋಧದ ಮಧ್ಯೆಯೂ ಮಾಡಲ್ಪಟ್ಟಿರುವ ಈ ಅಭಿವೃದ್ಧಿಗಾಗಿ ಕೀರ್ತಿಯು ಯಾರಿಗೆ ಸಲ್ಲಬೇಕು? (1 ಯೋಹಾನ 5:19) ತನ್ನ ಪವಿತ್ರಾತ್ಮವನ್ನು ಉಪಯೋಗಿಸಿ ಇವೆಲ್ಲವನ್ನೂ ಸಾಧಿಸಲು ಯೆಹೋವನೊಬ್ಬನೇ ಶಕ್ತನು.​—⁠ಯೆಶಾಯ 60:22; ಜೆಕರ್ಯ 4:⁠6.

ಯೆಹೋವನ ಮಹಾ ಪ್ರಭಾವ ಮತ್ತು ಮಹಿಮೆ

16 ಯೆಹೋವನ ‘ಅದ್ಭುತ ಕೃತ್ಯಗಳು’ ಮತ್ತು ‘ಮಹತ್ಕಾರ್ಯಗಳು’ ಯಾವ ರೀತಿಯದ್ದೇ ಆಗಿರಲಿ, ಅವನ್ನು ಮರೆತುಬಿಡುವುದು ಎಂದಿಗೂ ಅಸಾಧ್ಯ. ದಾವೀದನು ಬರೆದುದು: “ಜನರು ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು; ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು. ನಾನು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನೂ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು. ಮನುಷ್ಯರು ನಿನ್ನ ಭಯಂಕರಕೃತ್ಯಗಳಲ್ಲಿ ಕಂಡುಬಂದ ಪ್ರತಾಪವನ್ನು ಕೊಂಡಾಡುವರು. ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು.” (ಕೀರ್ತನೆ 145:4-6) ಆದರೂ, “ದೇವರು ಆತ್ಮಸ್ವರೂಪನು” ಮತ್ತು ಈ ಕಾರಣ ಆತನು ಮಾನವ ನೇತ್ರಗಳಿಗೆ ಅದೃಶ್ಯನಾಗಿರುವುದರಿಂದ, ದಾವೀದನಿಗೆ ಯೆಹೋವನ ಮಹಾ ಪ್ರಭಾವದ ಬಗ್ಗೆ ಎಷ್ಟು ತಾನೇ ತಿಳಿದೀತು?​—⁠ಯೋಹಾನ 1:18; 4:24.

17 ದಾವೀದನು ದೇವರನ್ನು ನೋಡುವುದು ಅಸಾಧ್ಯವಾಗಿದ್ದರೂ ಯೆಹೋವನ ಮಹಿಮೆಗಾಗಿ ಅವನು ಕೃತಜ್ಞತೆಯಲ್ಲಿ ಬೆಳೆಯಲು ಬೇರೆ ಮಾರ್ಗಗಳಿದ್ದವು. ದೃಷ್ಟಾಂತಕ್ಕೆ, ಭೌಗೋಳಿಕ ಜಲಪ್ರಳಯದ ಮೂಲಕ ದುಷ್ಟ ಲೋಕದ ನಾಶನದಂತಹ ದೇವರ ಮಹತ್ಕಾರ್ಯಗಳ ಸಂಬಂಧದಲ್ಲಿ ಅವನು ಶಾಸ್ತ್ರೀಯ ದಾಖಲೆಯನ್ನು ಓದಸಾಧ್ಯವಿತ್ತು. ದೇವರು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದಾಗ, ಐಗುಪ್ತದ ಸುಳ್ಳುದೇವತೆಗಳು ಹೇಗೆ ಮಣ್ಣುಮುಕ್ಕಿದವೆಂಬದನ್ನು ದಾವೀದನು ಗಮನಿಸಿದ್ದು ತೀರ ಸಂಭವನೀಯ. ಇಂತಹ ಘಟನೆಗಳು ಯೆಹೋವನ ಮಹಿಮೆ ಮತ್ತು ಮಹತ್ತಿಗೆ ಸಾಕ್ಷ್ಯವಾಗಿವೆ.

18 ಶಾಸ್ತ್ರವಚನಗಳನ್ನು ಓದುವುದು ಮಾತ್ರವಲ್ಲ ಅವುಗಳ ಬಗ್ಗೆ ಮನನ ಮಾಡುವ ಮೂಲಕವೂ ದಾವೀದನು ದೇವರ ಮಹಿಮೆಗಾಗಿರುವ ಗಣ್ಯತೆಯಲ್ಲಿ ಬೆಳೆದನೆಂಬುದು ನಿಸ್ಸಂದೇಹ. ಉದಾಹರಣೆಗೆ, ಯೆಹೋವನು ಇಸ್ರಾಯೇಲಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ ಏನು ನಡೆಯಿತೊ ಅದರ ಬಗ್ಗೆ ಅವನು ಮನನ ಮಾಡಿದ್ದಿರಬಹುದು. ಆಗ ಅಲ್ಲಿ ಗುಡುಗುಗಳು, ಮಿಂಚು ಮತ್ತು ದಟ್ಟ ಮೋಡವಿದ್ದದ್ದು ಮಾತ್ರವಲ್ಲ, ಕಹಳೆಯ ಅತಿ ದೊಡ್ಡ ಧ್ವನಿಯು ಸಹ ಕೇಳಿಸಿತು. ಸೀನಾಯಿ ಬೆಟ್ಟವು ಕಂಪಿಸಿ ಹೊಗೆಯನ್ನು ಕಾರಿತು. ಪರ್ವತದ ಬುಡದಲ್ಲಿ ಕೂಡಿಬಂದಿದ್ದ ಇಸ್ರಾಯೇಲ್ಯರು, ಯೆಹೋವನು ಬೆಂಕಿ ಮತ್ತು ಮೋಡದ ಮಧ್ಯದಿಂದ ದೇವದೂತ ಪ್ರತಿನಿಧಿಯ ಮೂಲಕ ಮಾತಾಡಿದಾಗ ‘ಹತ್ತು ಕಟ್ಟಳೆಗಳನ್ನು’ ಸಹ ಕೇಳಿಸಿಕೊಂಡರು. (ಧರ್ಮೋಪದೇಶಕಾಂಡ 4:32-36; 5:22-24; 10:4; ವಿಮೋಚನಕಾಂಡ 19:16-20; ಅ. ಕೃತ್ಯಗಳು 7:38, 53) ಯೆಹೋವನ ಮಹಾ ವೈಭವದ ಎಂತಹ ಪ್ರದರ್ಶನವಿದು! ಈ ವೃತ್ತಾಂತಗಳ ಕುರಿತು ಮನನ ಮಾಡುವ ದೇವರ ವಾಕ್ಯದ ಪ್ರೇಮಿಗಳು ‘ಯೆಹೋವನ ಪ್ರಭಾವಯುಕ್ತವಾದ ಮಹಿಮೆ’ಯಿಂದ ಖಂಡಿತವಾಗಿಯೂ ಪ್ರಚೋದಿಸಲ್ಪಡುವರು. ಇಂದು, ಯೆಹೋವನ ಮಹತ್ತಿನಿಂದ ನಮ್ಮ ಮನಸ್ಸನ್ನು ಸ್ಪರ್ಶಿಸುವಂಥ ವಿವಿಧ ಮಹಿಮಾಭರಿತ ದರ್ಶನಗಳು ಅಡಕವಾಗಿರುವ ಇಡೀ ಬೈಬಲ್‌ ನಮ್ಮ ಬಳಿ ಇದೆ.​—⁠ಯೆಹೆಜ್ಕೇಲ 1:26-28; ದಾನಿಯೇಲ 7:9, 10; ಪ್ರಕಟನೆ, ಅಧ್ಯಾಯ 4.

19 ದೇವರ ಮಹಿಮೆಯು ದಾವೀದನ ಮೇಲೆ ಗಾಢವಾದ ಪರಿಣಾಮವನ್ನು ಬೀರಿರಸಾಧ್ಯವಿದ್ದ ಇನ್ನೊಂದು ವಿಧವು, ದೇವರು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ನಿಯಮಗಳನ್ನು ಅಧ್ಯಯನ ಮಾಡುವ ಮೂಲಕವೇ. (ಧರ್ಮೋಪದೇಶಕಾಂಡ 17:18-20; ಕೀರ್ತನೆ 19:7-11) ಯೆಹೋವನ ನಿಯಮಗಳಿಗೆ ತೋರಿಸಲ್ಪಟ್ಟ ವಿಧೇಯತೆಯು ಇಸ್ರಾಯೇಲ್‌ ಜನಾಂಗವನ್ನು ಘನತೆಗೇರಿಸಿ, ಅದನ್ನು ಇತರ ಜನಾಂಗಗಳಿಂದ ಪ್ರತ್ಯೇಕವಾಗಿರಿಸಿತು. (ಧರ್ಮೋಪದೇಶಕಾಂಡ 4:​6-8) ದಾವೀದನ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಶಾಸ್ತ್ರವಚನಗಳನ್ನು ಕ್ರಮವಾಗಿ ಓದುವುದು, ಆಳವಾಗಿ ಮನನ ಮಾಡುವುದು, ಮತ್ತು ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದು, ಯೆಹೋವನ ಮಹಾ ಮಹಿಮೆಗಾಗಿರುವ ನಮ್ಮ ಗಣ್ಯತೆಯನ್ನು ವರ್ಧಿಸುವುದು.

ದೇವರ ನೈತಿಕ ಗುಣಗಳು ಎಷ್ಟು ಮಹತ್ತಾದವುಗಳು!

20 ನಾವು ಗಮನಿಸಿರುವಂತೆ, ಕೀರ್ತನೆ 145ರ ಪ್ರಥಮ ಆರು ವಚನಗಳು, ಯೆಹೋವನ ಅಗಮ್ಯ ಮಹತ್ತಿನೊಂದಿಗೆ ಕೂಡಿರುವ ವಿಷಯಗಳಿಗಾಗಿ ನಾವು ಆತನನ್ನು ಸ್ತುತಿಸಲು ಬಲವಾದ ಕಾರಣಗಳನ್ನು ಕೊಡುತ್ತವೆ. 7ರಿಂದ 9ನೆಯ ವಚನಗಳು, ದೇವರ ನೈತಿಕ ಗುಣಗಳಿಗೆ ಸೂಚಿಸುತ್ತ ಆತನ ಮಹತ್ತನ್ನು ಘನಪಡಿಸುತ್ತವೆ. ದಾವೀದನು ಹಾಡುವುದು: “ಜನರು ನಿನ್ನ ಮಹೋಪಕಾರವನ್ನು [“ಒಳ್ಳೆಯತನವನ್ನು,” NW] ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು; ನಿನ್ನ ನೀತಿಯನ್ನು ಹೊಗಳುವರು. ಯೆಹೋವನು ದಯೆಯೂ ಕನಿಕರವೂ ಉಳ್ಳವನು; ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ. ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.”

21 ಇಲ್ಲಿ ದಾವೀದನು, ಪಿಶಾಚನಾದ ಸೈತಾನನು ಯೆಹೋವನ ಯಾವ ಗುಣಗಳ ಸಂಬಂಧದಲ್ಲಿ ಸವಾಲೊಡ್ಡಿದನೋ ಆ ಗುಣಗಳಾದ ಒಳ್ಳೇತನ ಮತ್ತು ನೀತಿಯನ್ನೇ ಪ್ರಥಮವಾಗಿ ಎತ್ತಿ ತೋರಿಸುತ್ತಾನೆ. ದೇವರನ್ನು ಪ್ರೀತಿಸಿ ಆತನ ಆಳಿಕೆಗೆ ಅಧೀನರಾಗುವ ಸಕಲರ ಮೇಲೆ ಈ ಗುಣಗಳು ಯಾವ ಪ್ರಭಾವವನ್ನು ಬೀರುತ್ತವೆ? ಯೆಹೋವನ ಒಳ್ಳೇತನ ಮತ್ತು ಆತನ ನೀತಿಭರಿತ ಆಳುವ ವಿಧಾನವು ಆತನ ಆರಾಧಕರಿಗೆ ಎಷ್ಟು ಸಂತೋಷವನ್ನು ತರುತ್ತದೆಂದರೆ, ಅವರು ಆತನ ಸ್ತುತಿಯಿಂದ ತುಂಬಿತುಳುಕುತ್ತಾರೆ. ಇದಲ್ಲದೆ, ಯೆಹೋವನ ಒಳ್ಳೇತನ ‘ಸರ್ವರಿಗೆ’ ಲಭ್ಯವಿದೆ. ಇದು, ಕಾಲ ಮೀರಿ ಹೋಗುವ ಮೊದಲು ಅನೇಕರು ಪಶ್ಚಾತ್ತಾಪಪಟ್ಟು ಸತ್ಯ ದೇವರ ಆರಾಧಕರಾಗುವಂತೆ ಸಹಾಯಮಾಡುವುದು ಎಂದು ಆಶಿಸಲಾಗುತ್ತದೆ.​—⁠ಅ. ಕೃತ್ಯಗಳು 14:​15-17.

22 ದೇವರು “ಮೋಶೆಯ ಎದುರಾಗಿ ಹೋಗುತ್ತಾ . . . ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು, [“ಪ್ರೀತಿಪೂರ್ವಕ ದಯೆಯಲ್ಲಿಯೂ ಸತ್ಯದಲ್ಲಿಯೂ ಸಮೃದ್ಧನು,” NW]” ಎಂದು ಹೇಳಿದಾಗ ಸ್ವತಃ ಎತ್ತಿ ತೋರಿಸಿದ ಗುಣಗಳನ್ನು ಸಹ ದಾವೀದನು ಮಾನ್ಯಮಾಡಿದನು. (ವಿಮೋಚನಕಾಂಡ 34:6) ಈ ಕಾರಣದಿಂದ, ‘ಯೆಹೋವನು ದೀರ್ಘಶಾಂತನೂ ಪ್ರೀತಿಪೂರ್ವಕ ದಯೆಯಲ್ಲಿಯೂ ಸತ್ಯದಲ್ಲಿಯೂ ಸಮೃದ್ಧನು’ ಎಂದು ದಾವೀದನು ಘೋಷಿಸಸಾಧ್ಯವಾಯಿತು. ಯೆಹೋವನು ಅಗಮ್ಯವಾದ ರೀತಿಯಲ್ಲಿ ಮಹಾನ್‌ ಆಗಿರುವುದಾದರೂ, ಆತನು ತನ್ನ ಮಾನವ ಸೇವಕರೊಂದಿಗೆ ದಯೆಯಿಂದ ನಡೆದುಕೊಳ್ಳುವ ಮೂಲಕ ಅವರಿಗೆ ಗೌರವ ಕೊಡುತ್ತಾನೆ. ಆತನು ಕರುಣಾಪೂರ್ಣನಾಗಿದ್ದು, ಪಶ್ಚಾತ್ತಾಪಪಡುವ ಪಾಪಿಗಳಿಗೆ ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ಮುಖೇನ ಕ್ಷಮಿಸುವ ಮನಸ್ಸುಳ್ಳವನಾಗಿದ್ದಾನೆ. ಯೆಹೋವನು ಕೋಪಕ್ಕೆ ನಿಧಾನಿಯೂ ಆಗಿದ್ದಾನೆ, ಹೇಗೆಂದರೆ ತನ್ನ ಸೇವಕರನ್ನು ನೀತಿಯ ನೂತನ ಲೋಕದಿಂದ ತಡೆದುಹಿಡಿಯಬಹುದಾದ ಬಲಹೀನತೆಗಳನ್ನು ಅವರು ಜಯಿಸಲಿಕ್ಕಾಗಿ ಆತನು ಅವರಿಗೆ ಸಂದರ್ಭವನ್ನು ಕೊಡುತ್ತಾನೆ.​—⁠2 ಪೇತ್ರ 3:​9, 13, 14.

23 ದಾವೀದನು ದೇವರ ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠಾವಂತ ಪ್ರೀತಿಯನ್ನು ಹೊಗಳುತ್ತಾನೆ. ವಾಸ್ತವದಲ್ಲಿ, ಕೀರ್ತನೆ 145ರ ಮಿಕ್ಕ ಭಾಗವು, ಯೆಹೋವನು ಈ ಗುಣವನ್ನು ಹೇಗೆ ತೋರಿಸುತ್ತಾನೆ ಮತ್ತು ಆತನ ನಿಷ್ಠಾವಂತ ಸೇವಕರು ಆ ಪ್ರೀತಿಪೂರ್ವಕ ದಯೆಗೆ ಹೇಗೆ ಪ್ರತಿವರ್ತಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಈ ವಿಷಯಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿ]

^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನನ್ನು ‘ದಿನವಿಡೀ’ ಸ್ತುತಿಸಲು ಯಾವ ಅವಕಾಶಗಳಿವೆ?

• ಯೆಹೋವನ ಮಹತ್ತು ಅಗಮ್ಯವೆಂಬುದಕ್ಕೆ ಯಾವ ಉದಾಹರಣೆಗಳಿವೆ?

• ಯೆಹೋವನ ವೈಭವಭರಿತ ಮಹಿಮೆಗಾಗಿರುವ ಗಣ್ಯತೆಯಲ್ಲಿ ನಾವು ಹೇಗೆ ಬೆಳೆಯಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ದಾವೀದನು ಯಾವ ರೀತಿಯ ವ್ಯಕ್ತಿಯಾಗಿದ್ದನು, ಮತ್ತು ದೇವರಿಗೆ ಹೋಲಿಕೆಯಲ್ಲಿ ಅವನು ತನ್ನನ್ನು ಹೇಗೆ ಪರಿಗಣಿಸಿಕೊಂಡನು?

3. (ಎ) ಇಸ್ರಾಯೇಲಿನ ರಾಜತ್ವದ ಬಗ್ಗೆ ದಾವೀದನಿಗೆ ಯಾವ ದೃಷ್ಟಿಕೋನವಿತ್ತು? (ಬಿ) ಯೆಹೋವನನ್ನು ಎಷ್ಟರ ಮಟ್ಟಿಗೆ ಸ್ತುತಿಸುವುದು ದಾವೀದನ ಅಭಿಲಾಷೆಯಾಗಿತ್ತು?

4. ಕೀರ್ತನೆ 145 ಯಾವ ಸುಳ್ಳು ವಾದಗಳನ್ನು ಬಯಲುಪಡಿಸುತ್ತದೆ?

5, 6. ಯೆಹೋವನನ್ನು ಕೊಂಡಾಡಲು ಮತ್ತು ಸ್ತುತಿಸಲು ಯಾವ ಸದವಕಾಶಗಳಿವೆ?

7. ಯೆಹೋವನನ್ನು ಸ್ತುತಿಸಲಿಕ್ಕಾಗಿರುವ ಒಂದು ಪ್ರಧಾನ ಕಾರಣವನ್ನು ಕೊಡಿರಿ.

8. ಯೆಹೋವನ ಮಹತ್ತು ಮತ್ತು ಶಕ್ತಿಯ ವಿಷಯದಲ್ಲಿ ವಿಶ್ವವು ಏನನ್ನು ತಿಳಿಯಪಡಿಸುತ್ತದೆ?

9, 10. (ಎ) ಯೇಸು ಕ್ರಿಸ್ತನ ಸಂಬಂಧದಲ್ಲಿ ಯೆಹೋವನ ಮಹತ್ತಿನ ಯಾವ ಅಂಶಗಳು ತೋರಿಸಲ್ಪಟ್ಟಿವೆ? (ಬಿ) ಯೇಸುವಿನ ಪುನರುತ್ಥಾನವು ನಮ್ಮ ನಂಬಿಕೆಯನ್ನು ಹೇಗೆ ಪ್ರಭಾವಿಸಬೇಕು?

11. ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೋವನ ಯಾವ ಮಹತ್ಕಾರ್ಯವು ಆರಂಭಗೊಂಡಿತು?

12. ಭೂಮಿಯ ಎಲ್ಲ ಪ್ರಮುಖ ಭಾಷೆಗಳಲ್ಲಿ ಬೈಬಲು ಲಭ್ಯವಿದೆಯೆಂಬ ನಿಜತ್ವವು ಯಾವುದಕ್ಕೆ ಸಾಕ್ಷ್ಯವಾಗಿದೆ?

13. ರಾಜ್ಯೋದ್ದೇಶಗಳ ಸಂಬಂಧದಲ್ಲಿ, 1914ರಿಂದ ಹಿಡಿದು ಯೆಹೋವನ ಮಹತ್ತು ಹೇಗೆ ತೋರಿಸಲ್ಪಟ್ಟಿದೆ?

14. ಯೆಹೋವನು 1919ರಲ್ಲಿ ಯಾವ ಅದ್ಭುತಕಾರ್ಯವನ್ನು ನಡೆಸಿದನು, ಮತ್ತು ಅದು ಏನನ್ನು ಸಾಧಿಸಿತು?

15. ಅಭಿಷಿಕ್ತ ಕ್ರೈಸ್ತರು ಯಾವ ಕೆಲಸದಲ್ಲಿ ಮುಂದಾಳತ್ವ ವಹಿಸಿರುತ್ತಾರೆ, ಮತ್ತು ಫಲಿತಾಂಶಗಳೇನು?

16. ‘ಯೆಹೋವನ ಮಹಾ ಪ್ರಭಾವಯುಕ್ತವಾದ ಮಹಿಮೆ’ಯನ್ನು ಜನರು ಏಕೆ ಅಕ್ಷರಾರ್ಥವಾಗಿ ನೋಡಲಾರರು?

17, 18. ‘ಯೆಹೋವನ ಪ್ರಭಾವಯುಕ್ತವಾದ ಮಹಿಮೆ’ಗಾಗಿರುವ ಗಣ್ಯತೆಯಲ್ಲಿ ದಾವೀದನು ಹೇಗೆ ಬೆಳೆಯಸಾಧ್ಯವಿತ್ತು?

19. ಯೆಹೋವನ ಮಹಿಮೆಗಾಗಿರುವ ನಮ್ಮ ಗಣ್ಯತೆಯನ್ನು ಯಾವುದು ವರ್ಧಿಸುವುದು?

20, 21. (ಎ) ಕೀರ್ತನೆ 145:​7-9 ಯಾವ ಗುಣಗಳ ಸಂಬಂಧದಲ್ಲಿ ಯೆಹೋವನ ಮಹತ್ತನ್ನು ಕೀರ್ತಿಸುತ್ತದೆ? (ಬಿ) ಇಲ್ಲಿ ತಿಳಿಸಲ್ಪಟ್ಟಿರುವ ದೇವರ ಗುಣಗಳು ಆತನನ್ನು ಪ್ರೀತಿಸುವವರೆಲ್ಲರ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುತ್ತವೆ?

22. ಯೆಹೋವನು ತನ್ನ ಸೇವಕರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ?

23. ಮುಂದಿನ ಲೇಖನದಲ್ಲಿ ಯಾವ ಅಮೂಲ್ಯ ಗುಣವನ್ನು ಚರ್ಚಿಸಲಾಗುವುದು?

[ಪುಟ 10ರಲ್ಲಿರುವ ಚಿತ್ರ]

ವಿಶ್ವದ ಗ್ಯಾಲಕ್ಸಿಗಳು ಯೆಹೋವನ ಮಹತ್ತಿಗೆ ಸಾಕ್ಷ್ಯವಾಗಿವೆ

[ಕೃಪೆ]

Courtesy of Anglo-Australian Observatory, photograph by David Malin

[ಪುಟ 12ರಲ್ಲಿರುವ ಚಿತ್ರ]

ಯೆಹೋವನ ಮಹತ್ತು ಯೇಸು ಕ್ರಿಸ್ತನ ಸಂಬಂಧದಲ್ಲಿ ಹೇಗೆ ತೋರಿಸಲ್ಪಟ್ಟಿರುತ್ತದೆ?

[ಪುಟ 13ರಲ್ಲಿರುವ ಚಿತ್ರ]

ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರಿಗೆ ನಿಯಮಶಾಸ್ತ್ರವು ದೊರೆತಾಗ ಯೆಹೋವನ ವೈಭವಭರಿತ ಮಹಿಮೆಯ ಪುರಾವೆ ಅವರಿಗಿತ್ತು