ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಆದಿಕಾಂಡ 38:​15, 16ರಲ್ಲಿ ತಿಳಿಸಲ್ಪಟ್ಟಿರುವಂತೆ, ಯೆಹೂದನು ವೇಶ್ಯೆಯೆಂದು ತಿಳಿದ ಒಬ್ಬ ಸ್ತ್ರೀಯೊಡನೆ ಸಂಭೋಗ ಮಾಡುವಂತೆ ಯಾವ ಪರಿಸ್ಥಿತಿಗಳು ಕಾರಣವಾದವು?

ಯೆಹೂದನು ವೇಶ್ಯೆಯೆಂದು ನೆನಸಿದ ಸ್ತ್ರೀಯನ್ನು ಸಂಭೋಗಿಸಿದ್ದು ನಿಜವಾದರೂ, ವಾಸ್ತವದಲ್ಲಿ ಆಕೆ ಒಬ್ಬ ವೇಶ್ಯೆಯಾಗಿರಲಿಲ್ಲ. ಆದಿಕಾಂಡ 38ನೆಯ ಅಧ್ಯಾಯಕ್ಕನುಸಾರ ನಡೆದ ವಿಷಯ ಹೀಗಿದೆ.

ಯೆಹೂದನ ಜ್ಯೇಷ್ಠಪುತ್ರನು ತಾಮಾರಳ ಮೂಲಕ ಗಂಡುಮಕ್ಕಳನ್ನು ಪಡೆಯುವ ಮೊದಲೇ, ಅವನು “ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾದ್ದರಿಂದ” ಕೊಲ್ಲಲ್ಪಟ್ಟನು. (ಆದಿಕಾಂಡ 38:⁠7) ಆ ಸಮಯದಲ್ಲಿ ಭಾವವೈದುನ ವಿವಾಹ ಪದ್ಧತಿ ಜಾರಿಯಲ್ಲಿತ್ತು. ಇದರಲ್ಲಿ, ಒಬ್ಬ ಪುರುಷನು ವಾರಸುದಾರನಿಲ್ಲದೆ ಸಾಯುವಲ್ಲಿ ಅವನ ಸೋದರನು ಆ ವಿಧವೆಯನ್ನು ಮದುವೆಯಾಗಿ ವಾರಸುದಾರನನ್ನು ಒದಗಿಸಬೇಕಾಗಿತ್ತು. ಆದರೆ ಯೆಹೂದನ ಎರಡನೆಯ ಪುತ್ರ ಓನಾನನು ಹಾಗೆ ಮಾಡಲು ನಿರಾಕರಿಸಿದನು. ಆದಕಾರಣ ದೇವರ ತೀರ್ಪಿನಿಂದಾಗಿ ಅವನು ಸತ್ತನು. ಆಗ ಯೆಹೂದನು ತನ್ನ ಮೂರನೆಯ ಮಗನಾದ ಶೇಲಹನು ಮದುವೆಯ ಪ್ರಾಯಕ್ಕೆ ಬರುವ ತನಕ ತನ್ನ ಸೊಸೆಯಾದ ತಾಮಾರಳನ್ನು ಆಕೆಯ ತಂದೆಯ ಮನೆಗೆ ಕಳುಹಿಸಿದನು. ಆದರೆ ವರುಷಗಳು ಗತಿಸಿದರೂ ಯೆಹೂದನು ಶೇಲಹನನ್ನು ತಾಮಾರಳಿಗೆ ಮದುವೆಮಾಡಿ ಕೊಡಲಿಲ್ಲ. ಹೀಗಿರಲಾಗಿ ಯೆಹೂದನ ಹೆಂಡತಿ ಸತ್ತಾಗ ತಾಮಾರಳು ಇಸ್ರಾಯೇಲ್ಯನಾದ ತನ್ನ ಮಾವನಿಂದ ಸಂತಾನವನ್ನು ಪಡೆಯುವ ಉಪಾಯ ಹೂಡಿದಳು. ಆಕೆ ಗುಡಿವೇಶ್ಯೆಯ ವೇಷ ಧರಿಸಿ, ಯೆಹೂದನು ದಾಟಿಹೋಗುತ್ತಾನೆಂದು ಆಕೆಗೆ ತಿಳಿದಿದ್ದ ದಾರಿಯ ಬದಿಯಲ್ಲಿ ಕುಳಿತುಕೊಂಡಳು.

ತಾಮಾರಳ ಗುರುತು ಹಿಡಿಯದ ಯೆಹೂದನು ಆಕೆಯೊಂದಿಗೆ ಸಂಭೋಗ ಮಾಡಿದನು. ಇದಕ್ಕೆ ಪ್ರತಿಯಾಗಿ ಆಕೆ ಜಾಣತನದಿಂದ ಅವನಿಂದ ಗುರುತಿನ ವಸ್ತುಗಳನ್ನು ಪಡೆದುಕೊಂಡು, ಬಳಿಕ ತಾನು ಗರ್ಭಿಣಿಯಾದದ್ದು ಅವನಿಂದಲೇ ಎಂದು ರುಜುಪಡಿಸಿದಳು. ಸತ್ಯವು ಬಯಲಾದಾಗ, ಯೆಹೂದನು ಆಕೆಯ ಮೇಲೆ ದೂರು ಹೊರಿಸದೆ ದೈನ್ಯಭಾವದಿಂದ ಹೇಳಿದ್ದು: “ನಾನು ನನ್ನ ಮಗನಾದ ಶೇಲಹನನ್ನು ಆಕೆಗೆ ಮದುವೆಮಾಡಿಸಲಿಲ್ಲವಾದ್ದರಿಂದ ಆಕೆ ನನಗಿಂತಲೂ ನ್ಯಾಯವಾಗಿ ನಡೆದಳು.” ಮತ್ತು ತಕ್ಕದ್ದಾಗಿಯೇ, “ಅವನು ತಿರಿಗಿ ಆಕೆಯ ಸಹವಾಸ ಮಾಡಲಿಲ್ಲ.”​—⁠ಆದಿಕಾಂಡ 38:26.

ತಾಮಾರಳನ್ನು ತನ್ನ ಮಗ ಶೇಲಹನಿಗೆ ಒಪ್ಪಿಸದಿರುವ ಮೂಲಕ ಯೆಹೂದನು ತಪ್ಪಾಗಿ ವರ್ತಿಸಿದನು. ಗುಡಿವೇಶ್ಯೆಯೆಂದು ತಾನು ನೆನಸಿದ ಸ್ತ್ರೀಯೊಂದಿಗೆ ಯೆಹೂದನು ಸಂಭೋಗವನ್ನೂ ಮಾಡಿದನು. ವಿವಾಹದ ಏರ್ಪಾಡಿನೊಳಗೆ ಮಾತ್ರ ಮನುಷ್ಯನು ಸಂಭೋಗಿಸಬೇಕೆಂಬ ದೇವರ ಉದ್ದೇಶಕ್ಕೆ ಇದು ವ್ಯತಿರಿಕ್ತವಾಗಿತ್ತು. (ಆದಿಕಾಂಡ 2:24) ಆದರೆ ವಾಸ್ತವದಲ್ಲಿ, ಯೆಹೂದನು ವೇಶ್ಯೆಯೊಂದಿಗೆ ಸಂಭೋಗ ಮಾಡಲಿಲ್ಲ. ಬದಲಿಗೆ, ಅವನು ಅರಿವಿಲ್ಲದೆ ತನ್ನ ಮಗ ಶೇಲಹನ ಸ್ಥಾನವನ್ನು ತೆಗೆದುಕೊಂಡು ಹೀಗೆ ಭಾವಮೈದುನ ವಿವಾಹದಲ್ಲಿ ಒಳಗೊಂಡು ಶಾಸನಬದ್ಧ ಸಂತಾನದ ತಂದೆಯಾದನು.

ತಾಮಾರಳ ವಿಷಯದಲ್ಲಿಯಾದರೊ, ಆಕೆಯ ನಡತೆ ಅನೈತಿಕವಾಗಿರಲಿಲ್ಲ. ಆಕೆಗೆ ಹುಟ್ಟಿದ ಅವಳಿ ಪುತ್ರರು ಹಾದರಕ್ಕೆ ಹುಟ್ಟಿದವರೆಂದು ಎಣಿಸಲ್ಪಡಲಿಲ್ಲ. ಬೆತ್ಲೆಹೇಮಿನ ಬೋವಜನು ಮೋಬಾಬ್ಯಳಾಗಿದ್ದ ರೂತಳನ್ನು ಭಾವಮೈದುನ ವಿವಾಹದಲ್ಲಿ ಹೆಂಡತಿಯಾಗಿ ಸ್ವೀಕರಿಸಿದಾಗ, ಬೆತ್ಲೆಹೇಮಿನ ಹಿರಿಯರು ತಾಮಾರಳ ಪುತ್ರ ಪೆರೆಚನ ಕುರಿತು ಪ್ರಸನ್ನಕರವಾಗಿ ಮಾತನಾಡುತ್ತಾ ಬೋವಜನಿಗೆ ಹೀಗೆ ಹೇಳಿದರು: “ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆಗೆ ಸಮಾನವಾಗಲಿ.” (ರೂತಳು 4:12) ಪೆರೆಚನನ್ನು ಯೇಸು ಕ್ರಿಸ್ತನ ಪೂರ್ವಜರಲ್ಲಿ ಒಬ್ಬನಾಗಿಯೂ ಹೆಸರಿಸಲಾಗಿದೆ.​—⁠ಮತ್ತಾಯ 1:​1-3; ಲೂಕ 3:​23-33.