ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನಿಶ್ಚಿತತೆಯನ್ನು ನೀವು ಯಶಸ್ವಿಕರವಾಗಿ ನಿಭಾಯಿಸಬಲ್ಲಿರಿ

ಅನಿಶ್ಚಿತತೆಯನ್ನು ನೀವು ಯಶಸ್ವಿಕರವಾಗಿ ನಿಭಾಯಿಸಬಲ್ಲಿರಿ

ಅನಿಶ್ಚಿತತೆಯನ್ನು ನೀವು ಯಶಸ್ವಿಕರವಾಗಿ ನಿಭಾಯಿಸಬಲ್ಲಿರಿ

“ನಿಶ್ಚಯ!” “ಖಂಡಿತ!” “ಗ್ಯಾರಂಟಿ!” ಇಂಥ ಅಭಿವ್ಯಕ್ತಿಗಳನ್ನು ನೀವು ಅನೇಕ ಸಲ ಕೇಳಿಸಿಕೊಂಡಿದ್ದೀರಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೂ, ನಮ್ಮ ದೈನಂದಿನ ಜೀವನದಲ್ಲಿ ನಾವು ಯಾವುದರ ಕುರಿತು ನಿಶ್ಚಿತರಾಗಿರಸಾಧ್ಯವಿದೆಯೋ ಅಂಥ ವಿಷಯಗಳು ತೀರ ವಿರಳ. ಜೀವನವು ಎಷ್ಟು ಅನಿಶ್ಚಿತವಾಗಿದೆಯೆಂದರೆ, ನಾವು ಖಂಡಿತವಾಗಿಯೂ ನಿಶ್ಚಿತರಾಗಿರಸಾಧ್ಯವಿರುವ ಯಾವ ವಿಷಯವಾದರೂ ಇದೆಯೋ ಎಂದು ನಾವು ಅನೇಕ ಸಲ ಆಲೋಚಿಸುತ್ತೇವೆ. ಸಂಶಯ ಮತ್ತು ಅನಿಶ್ಚಿತತೆಯು ಜೀವನದ ಅವಿಭಾಜ್ಯ ಅಂಗವಾಗಿರುವಂತೆ ತೋರುತ್ತದೆ.

ಅಧಿಕಾಧಿಕ ಜನರು ಸ್ವತಃ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಭದ್ರತೆ ಹಾಗೂ ಸಂತೋಷವನ್ನು ಬಯಸುವುದು ಗ್ರಾಹ್ಯ ಸಂಗತಿಯೇ. ತಮಗೆ ಸಂತೋಷ ಹಾಗೂ ಭದ್ರತೆಯನ್ನು ನೀಡುತ್ತದೆಂದು ಅವರು ನಂಬುವಂಥ ವಸ್ತುಗಳನ್ನು​—⁠ಸಾಮಾನ್ಯವಾಗಿ ಹಣ ಮತ್ತು ಭೌತಿಕ ಸಂಪತ್ತನ್ನು​—⁠ಪಡೆದುಕೊಳ್ಳಲಿಕ್ಕಾಗಿ ಅವರು ತುಂಬ ಕಷ್ಟಪಟ್ಟು ಕೆಲಸಮಾಡುತ್ತಾರೆ. ಆದರೂ, ಒಂದು ಭೂಕಂಪ, ಚಂಡಮಾರುತ, ಅಪಘಾತ, ಅಥವಾ ಹಿಂಸಾತ್ಮಕ ದುಷ್ಕೃತ್ಯವು ಒಂದೇ ಕ್ಷಣದಲ್ಲಿ ಇಂಥ ಭೌತಿಕ ಸಂಪತ್ತನ್ನು ಸರ್ವನಾಶಮಾಡಿಬಿಡಬಲ್ಲದು. ಗಂಭೀರವಾದ ಅಸ್ವಸ್ಥತೆ, ವಿವಾಹ ವಿಚ್ಛೇದ, ಅಥವಾ ನಿರುದ್ಯೋಗವು ದಿನಬೆಳಗಾಗುವುದರೊಳಗೆ ಜೀವಿತಗಳನ್ನೇ ಬದಲಾಯಿಸಬಲ್ಲದು. ಇಂಥ ವಿಷಯಗಳು ವಾಸ್ತವದಲ್ಲಿ ನಿಮಗೆ ಸಂಭವಿಸದಿರಬಹುದು ಎಂಬುದೇನೋ ನಿಜ. ಆದರೂ, ಯಾವುದೇ ಸಮಯದಲ್ಲಿ ಭೀಕರವಾದ ಒಂದು ದುರ್ಘಟನೆಯು ನಡೆಯಸಾಧ್ಯವಿದೆ ಎಂಬ ಅನಿಸಿಕೆಯೇ ಮನಸ್ಸನ್ನು ಗೊಂದಲಮಯಗೊಳಿಸುತ್ತದೆ ಮತ್ತು ಹತಾಶ ಭಾವನೆಯನ್ನುಂಟುಮಾಡುತ್ತದೆ. ಆದರೆ ಸಮಸ್ಯೆಯು ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ.

ಅನಿಶ್ಚಿತತೆ ಎಂಬ ಪದಕ್ಕೆ ಸಂಶಯ ಎಂಬುದು ಸಮನಾರ್ಥಕ ಪದವಾಗಿದೆ. ಮತ್ತು ಒಂದು ಶಬ್ದಕೋಶವು “ಸಂಶಯ” ಎಂಬ ಪದವನ್ನು, “ನಿರ್ಣಯವನ್ನು ಮಾಡುವಾಗ ಅನೇಕವೇಳೆ ಅಡ್ಡಬರುವಂಥ ಅನಿಶ್ಚಿತ ನಂಬಿಕೆ ಅಥವಾ ಅಭಿಪ್ರಾಯ” ಎಂದು ಅರ್ಥನಿರೂಪಿಸುತ್ತದೆ. ಅಷ್ಟುಮಾತ್ರವಲ್ಲ, ನಿಮ್ಮ ಮನಸ್ಸನ್ನು ನಿರ್ವಹಿಸುವುದು (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, “ಯಾವುದಾದರೊಂದು ವಿಷಯದ ಕುರಿತು ಅನಿಶ್ಚಿತ ಭಾವನೆಯಿರುವುದು, ವ್ಯಾಕುಲತೆ ಹಾಗೂ ಚಿಂತೆಗೆ ಮುಖ್ಯ ಕಾರಣವಾಗಿದೆ.” ಬಗೆಹರಿಸಲ್ಪಡದ ಸಂಶಯವು ವ್ಯಾಕುಲತೆ, ಆಶಾಭಂಗ, ಹಾಗೂ ಕೋಪಕ್ಕೆ ನಡೆಸಬಲ್ಲದು. ಹೌದು, ಏನು ಸಂಭವಿಸಬಹುದು ಅಥವಾ ಏನು ಸಂಭವಿಸದಿರಬಹುದು ಎಂಬುದರ ಕುರಿತು ಚಿಂತಿಸುತ್ತಿರುವುದು ನಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಹಾಳುಮಾಡಬಲ್ಲದು.

ಇದರಿಂದಾಗಿಯೇ ಕೆಲವರು ಇನ್ನೊಂದು ವೈಪರೀತ್ಯಕ್ಕೆ ಹೋಗುತ್ತಾರೆ. ಅವರು ಈ ಮುಂದಿನಂತೆ ಹೇಳಿದ ಬ್ರಸಿಲ್‌ನ ಯುವಕನಂತಿದ್ದಾರೆ: “ಏನು ಸಂಭವಿಸಲಿದೆ ಎಂಬುದರ ಕುರಿತು ಯಾಕೆ ಚಿಂತಿಸಬೇಕು? ಇವತ್ತಿನದ್ದು ಇವತ್ತಿಗೆ, ನಾಳಿನದ್ದು ನಾಳಿಗೆ ಸೇರಿದ್ದು.” ಇಂಥ “ತಿನ್ನೋಣ, ಕುಡಿಯೋಣ” ಎಂಬ ಅದೃಷ್ಟವಾದಿ ಮನೋಭಾವವು ನಿರಾಶೆ, ಬೇಗುದಿ, ಮತ್ತು ಅಂತಿಮವಾಗಿ ಮರಣಕ್ಕೆ ನಡೆಸಬಲ್ಲದು. (1 ಕೊರಿಂಥ 15:32) ನಾವು ಸೃಷ್ಟಿಕರ್ತನಾಗಿರುವ ಯೆಹೋವ ದೇವರ ಕಡೆಗೆ ತಿರುಗುವುದು ಒಳಿತನ್ನು ಉಂಟುಮಾಡುತ್ತದೆ. ಏಕೆಂದರೆ ಆತನಲ್ಲಿ “ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 1:17) ನಾವು ದೇವರ ವಾಕ್ಯವಾಗಿರುವ ಬೈಬಲನ್ನು ಪರಿಶೀಲಿಸುವಲ್ಲಿ, ಜೀವನದ ಅನಿಶ್ಚಿತತೆಗಳನ್ನು ಹೇಗೆ ನಿಭಾಯಿಸಸಾಧ್ಯವಿದೆ ಎಂಬ ವಿಷಯದಲ್ಲಿ ಸದೃಢವಾದ ಸಲಹೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುವೆವು. ಅದು, ಇಷ್ಟೊಂದು ಅನಿಶ್ಚಿತತೆ ಏಕಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡಬಲ್ಲದು.

ಅನಿಶ್ಚಿತತೆಗೆ ಕಾರಣ

ಶಾಸ್ತ್ರವಚನಗಳು ಜೀವನದ ಕುರಿತು ಒಂದು ವಾಸ್ತವಿಕ ನೋಟವನ್ನು ಒದಗಿಸುತ್ತವೆ ಮತ್ತು ಅನಿಶ್ಚಿತ ಸನ್ನಿವೇಶಗಳು ಹಾಗೂ ಬದಲಾವಣೆಯ ಕಡೆಗೆ ಯೋಗ್ಯವಾದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತವೆ. ಕುಟುಂಬ ಸಂಬಂಧಗಳು, ಸಾಮಾಜಿಕ ಸ್ಥಾನಮಾನ, ಬುದ್ಧಿವಂತಿಕೆ, ಒಳ್ಳೇ ಆರೋಗ್ಯ ಮುಂತಾದ ವಿಷಯಗಳು ಸ್ವಲ್ಪಮಟ್ಟಿಗಿನ ಭದ್ರತೆಯನ್ನು ಒದಗಿಸಬಹುದಾದರೂ, ಇಂಥ ವಿಷಯಗಳು ಎಂದಿಗೂ ಬದಲಾಗುವುದಿಲ್ಲ ಎಂದು ನಾವು ನೆನಸಸಾಧ್ಯವಿಲ್ಲ ಮತ್ತು “ಮಂತ್ರ ರಕ್ಷಿತ” ಜೀವನವನ್ನು ನಡೆಸಲು ನಿರೀಕ್ಷಿಸಸಾಧ್ಯವಿಲ್ಲ ಎಂದು ಬೈಬಲ್‌ ತೋರಿಸುತ್ತದೆ. ವಿವೇಕಿ ಅರಸ ಸೊಲೊಮೋನನು ಹೇಳಿದ್ದು: “ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು.” ಏಕೆ? ಏಕೆಂದರೆ “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.” ಆದುದರಿಂದಲೇ ಸೊಲೊಮೋನನು ಎಚ್ಚರಿಕೆ ನೀಡಿದ್ದು: “ಮೀನುಗಳು ಕೆಟ್ಟ ಬಲೆಗೂ ಪಕ್ಷಿಗಳು ಜಾಲಕ್ಕೂ ಸಿಕ್ಕಿಬೀಳುವ ಹಾಗೆ ನರಜನ್ಮದವರು ತಮ್ಮ ಮೇಲೆ ತಟ್ಟನೆ ಬೀಳುವ ಕೆಟ್ಟ ಕಾಲಪಾಶಕ್ಕೆ ಸಿಕ್ಕಿಕೊಳ್ಳುವರು.”​—⁠ಪ್ರಸಂಗಿ 9:11, 12.

ಜನರ ಇಡೀ ಸಂತತಿಯ ಮೇಲೆ ವಿಪರೀತ ವ್ಯಾಕುಲತೆ ಹಾಗೂ ಅನಿಶ್ಚಿತತೆಯು ಬಂದೆರಗಲಿರುವ ಕಾಲಾವಧಿಯ ಕುರಿತು ಯೇಸು ಕ್ರಿಸ್ತನು ಸಹ ಮಾತಾಡಿದನು. ಸುಸ್ಪಷ್ಟ ಮಾತುಗಳಲ್ಲಿ ಅವನಂದದ್ದು: “ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.” ಆದರೂ, ಇಂದಿನ ಪ್ರಾಮಾಣಿಕ ಹೃದಯದ ಜನರಿಗಾಗಿ ಯೇಸು ಉತ್ತೇಜನದಾಯಕವಾದ ಒಂದು ವಿಚಾರವನ್ನು ತಿಳಿಸಿದನು: “ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.” (ಲೂಕ 21:25, 26, 31) ತದ್ರೀತಿಯಲ್ಲಿ, ಅನಿಶ್ಚಿತ ಭವಿಷ್ಯತ್ತಿನ ಕುರಿತು ಭಯಭೀತರಾಗಿರುವುದಕ್ಕೆ ಬದಲಾಗಿ, ದೇವರಲ್ಲಿ ನಮಗೆ ನಂಬಿಕೆಯಿದೆ ಮತ್ತು ಇದು ಅನಿಶ್ಚಿತತೆಗಿಂತಲೂ ಆಚೆ, ಅದ್ಭುತಕರವಾದ, ಸುಭದ್ರವಾದ ಭವಿಷ್ಯತ್ತಿನ ಕಡೆಗೆ ನೋಡಲು ನಮಗೆ ಸಹಾಯಮಾಡುತ್ತದೆ.

‘ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಂಡಿರುವುದು’

ನಾವು ಕೇಳಿಸಿಕೊಳ್ಳುವ, ಓದುವ, ಅಥವಾ ನೋಡುವ ಪ್ರತಿಯೊಂದು ವಿಷಯದ ಕುರಿತು ನಾವು ನಿಶ್ಚಿತರಾಗಿರಲು ಸಾಧ್ಯವಿಲ್ಲದಿರುವುದಾದರೂ, ಸೃಷ್ಟಿಕರ್ತನಲ್ಲಿ ಭರವಸೆಯಿಡಲು ನಮಗೆ ಸಕಾರಣವಿದೆ. ಆತನು ಪರಮಾತ್ಮನಾಗಿದ್ದಾನೆ ಮಾತ್ರವಲ್ಲ, ತನ್ನ ಭೂಮಕ್ಕಳನ್ನು ಪರಾಮರಿಸುವ ಪ್ರೀತಿಯ ತಂದೆಯೂ ಆಗಿದ್ದಾನೆ. ತನ್ನ ಸ್ವಂತ ಮಾತುಗಳ ವಿಷಯದಲ್ಲಿ ದೇವರು ಹೇಳುವುದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”​—⁠ಯೆಶಾಯ 55:⁠11.

ಯೇಸು ಕ್ರಿಸ್ತನು ದೇವರಿಂದ ಬಂದ ಸತ್ಯವನ್ನೇ ಕಲಿಸಿದನು, ಮತ್ತು ಅವನಿಗೆ ಕಿವಿಗೊಟ್ಟ ಅನೇಕರು ಆ ಸತ್ಯವನ್ನು ನಿಶ್ಚಿತಾಭಿಪ್ರಾಯದಿಂದಲೂ ದೃಢನಿಶ್ಚಯತೆಯಿಂದಲೂ ಸ್ವೀಕರಿಸಿದರು. ಉದಾಹರಣೆಗೆ, ಯೇಸುವಿನ ಮಾತನ್ನು ಪ್ರಥಮವಾಗಿ ಕೇಳಿಸಿಕೊಂಡಿದ್ದ ಸ್ತ್ರೀಗೆ ಸಮಾರ್ಯದ ಪ್ರಾಮಾಣಿಕ ಹೃದಯದ ಜನರ ಒಂದು ಗುಂಪು ಹೇಳಿದ್ದು: “ನಾವು ಆತನನ್ನು ನಂಬಿರುವದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ; ನಾವು ಕಿವಿಯಾರೆ ಕೇಳಿ ಈತನು ಲೋಕರಕ್ಷಕನೇ ಹೌದೆಂದು ತಿಳುಕೊಂಡಿದ್ದೇವೆ ಎಂದು ಹೇಳಿದರು.” (ಯೋಹಾನ 4:42) ತದ್ರೀತಿಯಲ್ಲಿ, ಇಂದು ಅಭದ್ರತೆಯ ಕಾಲಾವಧಿಯಲ್ಲಿ ನಾವು ಜೀವಿಸುತ್ತಿರುವುದಾದರೂ, ಏನನ್ನು ನಂಬಬೇಕೆಂಬುದರ ಬಗ್ಗೆ ಅನಿಶ್ಚಿತರಾಗಿರಬೇಕಾಗಿಲ್ಲ.

ಧಾರ್ಮಿಕ ನಂಬಿಕೆಯ ವಿಷಯಕ್ಕೆ ಬರುವಾಗ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಕ್ಕೆ ಬದಲಾಗಿ ನಾವು ಸುಮ್ಮನೆ ಅದನ್ನು ನಂಬಿಬಿಡಬೇಕು ಎಂಬುದು ಅನೇಕರ ಅಭಿಪ್ರಾಯ. ಆದರೆ ಬೈಬಲ್‌ ಲೇಖಕನಾದ ಲೂಕನು ಈ ಅಭಿಪ್ರಾಯವನ್ನು ಅನುಮೋದಿಸಲಿಲ್ಲ. ಅವನು ಸಂಶೋಧನೆಯನ್ನು ಮಾಡಿ, ತಾನು ಬರೆದಿದ್ದ ವಿಷಯಗಳನ್ನು ಇತರರು ‘ಯಥಾರ್ಥವಾದವುಗಳೆಂದು ಗೊತ್ತುಮಾಡಿಕೊಳ್ಳುವಂತೆ’ ನಿಷ್ಕೃಷ್ಟವಾದ ಮಾಹಿತಿಯನ್ನು ಒದಗಿಸಿದನು. (ಲೂಕ 1:⁠4) ನಮ್ಮಂಥದ್ದೇ ನಂಬಿಕೆಯನ್ನು ಹೊಂದಿರದಂಥ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು, ವಿಶ್ವಾಸಿಗಳೋಪಾದಿ ನಾವು ಭ್ರಮನಿರಸನಗೊಂಡು ನಿರಾಶಾಜನಕ ಸ್ಥಿತಿಗೆ ತಲಪಬಹುದು ಎಂದು ಭಯಪಡಬಹುದು. ಆದುದರಿಂದಲೇ ನಾವು ನಮ್ಮ ನಂಬಿಕೆಯ ಪರವಾಗಿ ಮಾತಾಡಲು ಶಕ್ತರಾಗಿರುವುದು ತುಂಬ ಪ್ರಾಮುಖ್ಯವಾಗಿದೆ. (1 ಪೇತ್ರ 3:15) ನಾವು ಏನನ್ನು ನಂಬುತ್ತೇವೋ ಅದಕ್ಕಾಗಿರುವ ಕಾರಣವನ್ನು ನಿಷ್ಕೃಷ್ಟವಾಗಿ ತಿಳಿದುಕೊಳ್ಳುವುದರಿಂದ ಮಾತ್ರವೇ ನಾವು ದೇವರಲ್ಲಿ ಭರವಸೆಯಿಡುವಂತೆ ಇತರರಿಗೆ ಸಹಾಯಮಾಡಸಾಧ್ಯವಿದೆ. ಬೈಬಲು ಯೆಹೋವನನ್ನು ಈ ಮಾತುಗಳಿಂದ ವರ್ಣಿಸುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”​—⁠ಧರ್ಮೋಪದೇಶಕಾಂಡ 32:⁠4.

ಈ ಕೊನೆಯ ವಾಕ್ಯವನ್ನು ಪರಿಗಣಿಸಿರಿ: ಆತನು “ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” ಈ ವಿಷಯದಲ್ಲಿ ನಿಶ್ಚಿತರಾಗಿರಲು ನಮಗೆ ಯಾವ ಪುರಾವೆಯಿದೆ? ಆ ವಾಸ್ತವಾಂಶವನ್ನು ಅಪೊಸ್ತಲ ಪೇತ್ರನು ಸಂಪೂರ್ಣವಾಗಿ ಮನಗಂಡಿದ್ದನು. ಒಬ್ಬ ರೋಮನ್‌ ಅಧಿಕಾರಿಗೂ ಮತ್ತು ಅವನ ಮನೆವಾರ್ತೆಗೂ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಈ ಮುಂಚೆ ಅಶುದ್ಧವಾಗಿಯೂ ಅಸ್ವೀಕರಣೀಯವಾಗಿಯೂ ಪರಿಗಣಿಸಲ್ಪಟ್ಟಿದ್ದ ಅನ್ಯರ ಕುಟುಂಬವು ದೇವರಿಗೆ ಸ್ವೀಕಾರಾರ್ಹವಾಗಿ ಪರಿಣಮಿಸುವಂತೆ ಆತನ ಸ್ವಹಸ್ತವೇ ಹೇಗೆ ವಿಷಯಗಳನ್ನು ಮಾರ್ಗದರ್ಶಿಸಿತ್ತು ಎಂಬುದನ್ನು ಪೇತ್ರನು ಆಗಷ್ಟೇ ನೋಡಿದ್ದ ಕಾರಣದಿಂದಲೇ ಅವನು ಈ ಮಾತುಗಳನ್ನು ಹೇಳಿದನು. ಈಗ ಭೂಮಿಯಾದ್ಯಂತ ಇರುವ 230 ದೇಶಗಳಿಂದ ಬಂದ ಅರವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಜನರ ಒಂದು “ಮಹಾ ಸಮೂಹ”ವನ್ನು ನಮ್ಮ ಸ್ವಂತ ಕಣ್ಣುಗಳಿಂದ ನೋಡುವಾಗ, ಪೇತ್ರನಂತೆ ನಾವು ಸಹ ದೇವರ ನಿಷ್ಪಕ್ಷಪಾತ ಹಾಗೂ ನೀತಿಯ ಬಗ್ಗೆ ದೃಢನಿಶ್ಚಿತರಾಗಿರಸಾಧ್ಯವಿದೆ; ಇವರು ತಮ್ಮ ಹಿಂದಿನ ಜೀವಿತವನ್ನು ತೊರೆದು, ನೀತಿಯ ಮಾರ್ಗದಲ್ಲಿ ನಡೆಯುತ್ತಾರೆ.​—⁠ಪ್ರಕಟನೆ 7:9; ಯೆಶಾಯ 2:2-4.

ಸತ್ಯ ಕ್ರೈಸ್ತರೋಪಾದಿ ನಾವು ಮತಾಂಧರು ಅಥವಾ ಗರ್ವಿಗಳು ಅಲ್ಲ, ಬದಲಾಗಿ ದೀನರೂ ವಿವೇಚನಾಶೀಲರೂ ಆಗಿರಲು ಬಯಸುತ್ತೇವೆ. ಆದರೂ, ನಾವು ಭವಿಷ್ಯತ್ತಿನ ಕುರಿತು ಏನನ್ನು ನಂಬುತ್ತೇವೋ ಮತ್ತು ಏನನ್ನು ನಿರೀಕ್ಷಿಸುತ್ತೇವೋ ಅದರ ಬಗ್ಗೆ ಅನಿಶ್ಚಿತರಾಗಿರುವುದಿಲ್ಲ. ಪ್ರಥಮ ಶತಮಾನದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ನೀವು ಉಪಚಾರಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢ ಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ.” (ಇಬ್ರಿಯ 6:11) ತದ್ರೀತಿಯಲ್ಲಿ, ಬೈಬಲಿನ ಸುವಾರ್ತೆಯು ನಮಗೆ ‘ನಿರೀಕ್ಷೆಯ’ ಪೂರ್ಣ ಖಾತ್ರಿಯನ್ನು ನೀಡಿದೆ. ಆ ನಿರೀಕ್ಷೆಯು ದೇವರ ವಾಕ್ಯದ ಮೇಲೆ ದೃಢವಾಗಿ ಆಧಾರಿತವಾಗಿದ್ದು, ಪೌಲನು ವಿವರಿಸಿದಂತೆ “ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.”​—⁠ರೋಮಾಪುರ 5:⁠5.

ಅಷ್ಟುಮಾತ್ರವಲ್ಲ, ಬೈಬಲಿನ ಸುವಾರ್ತೆಯ ಕುರಿತು ಇತರರಿಗೆ ಕಲಿಸುವುದು ಅವರಿಗೆ ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಹಾಗೂ ಶಾರೀರಿಕವಾಗಿ ಭದ್ರತೆಯನ್ನೂ ನಿಶ್ಚಿತತೆಯನ್ನೂ ತರಬಲ್ಲದು ಎಂಬುದನ್ನು ನಾವು ಪೂರ್ಣವಾಗಿ ಮನಗಂಡಿದ್ದೇವೆ. ನಾವು ಹೀಗೆ ಹೇಳುವುದರಲ್ಲಿ ಪೌಲನೊಂದಿಗೆ ಜೊತೆಗೂಡಸಾಧ್ಯವಿದೆ: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು.”​—⁠1 ಥೆಸಲೊನೀಕ 1:⁠5.

ಆತ್ಮಿಕ ಭದ್ರತೆಯ ಫಲಿತಾಂಶವಾಗಿ ಸದ್ಯದ ಆಶೀರ್ವಾದಗಳು

ಇಂದಿನ ಜೀವನದಲ್ಲಿ ನಾವು ಸಂಪೂರ್ಣ ಭದ್ರತೆಯನ್ನು ನಿರೀಕ್ಷಿಸುವುದು ಅಸಾಧ್ಯವಾಗಿರುವುದಾದರೂ, ಬಹಳಷ್ಟು ಮಟ್ಟಿಗೆ ಸ್ಥಿರವಾದ ಹಾಗೂ ಸುಭದ್ರವಾದ ಜೀವಿತವನ್ನು ನಡೆಸಲು ನಮಗೆ ಸಹಾಯಮಾಡುವಂಥ ಕೆಲವು ವಿಷಯಗಳನ್ನು ನಾವು ಮಾಡಸಾಧ್ಯವಿದೆ. ಉದಾಹರಣೆಗೆ, ಕೂಟಗಳಲ್ಲಿ ಕ್ರೈಸ್ತ ಸಭೆಯೊಂದಿಗೆ ಕ್ರಮವಾಗಿ ಸಹವಾಸಮಾಡುವುದು ಸ್ಥಿರತೆಯನ್ನು ನೀಡುತ್ತದೆ, ಏಕೆಂದರೆ ಅಲ್ಲಿ ನಮಗೆ ಸರಿಯಾದ ಮತ್ತು ಸದೃಢವಾದ ಮೂಲತತ್ತ್ವಗಳು ಹಾಗೂ ಮೌಲ್ಯಗಳು ಕಲಿಸಲ್ಪಡುತ್ತವೆ. ಪೌಲನು ಬರೆದುದು: ‘ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯಿಡುವಂತೆ ಅವರಿಗೆ ಆಜ್ಞಾಪಿಸು.’ (1 ತಿಮೊಥೆಯ 6:​17, 18) ಕ್ಷಣಿಕವಾದ ಭೌತಿಕ ವಸ್ತುಗಳು ಅಥವಾ ಸುಖಾನುಭೋಗಗಳಲ್ಲಿ ಅಲ್ಲ, ಬದಲಾಗಿ ಯೆಹೋವನಲ್ಲಿ ತಮ್ಮ ಭರವಸೆಯನ್ನಿಡಲು ಕಲಿಯುವ ಮೂಲಕ, ಅನೇಕರು ಈ ಮುಂಚೆ ತಾವು ಅನುಭವಿಸುತ್ತಿದ್ದ ವ್ಯಾಕುಲತೆಗಳು ಹಾಗೂ ಆಶಾಭಂಗಗಳಿಂದ ತಮ್ಮನ್ನು ಬಿಡಿಸಿಕೊಳ್ಳಲು ಶಕ್ತರಾಗಿದ್ದಾರೆ.​—⁠ಮತ್ತಾಯ 6:​19-21.

ಸಭೆಯಲ್ಲಿ ನಾವು ಮನಸ್ಸಿಗೆ ಮುದನೀಡುವ ಸಹೋದರ ಬಳಗದಲ್ಲಿಯೂ ಆನಂದವನ್ನು ಪಡೆಯುತ್ತೇವೆ; ಇದು ಅನೇಕ ವಿಧಗಳಲ್ಲಿ ನಮಗೆ ಸಹಾಯ ಹಾಗೂ ಬೆಂಬಲವನ್ನು ಒದಗಿಸುತ್ತದೆ. ತನ್ನ ಶುಶ್ರೂಷೆಯ ಒಂದು ಹಂತದಲ್ಲಿ ಅಪೊಸ್ತಲ ಪೌಲನಿಗೆ ಮತ್ತು ಅವನ ಸಂಚರಣ ಸಂಗಾತಿಗಳಿಗೆ “ಅತ್ಯಧಿಕವಾದ ಒತ್ತಡದ” (NW) ಅನಿಸಿಕೆಯಾಯಿತು ಮತ್ತು ಅವರು ‘ಜೀವವುಳಿಯುವ ಮಾರ್ಗವನ್ನು ಕಾಣದವರಾಗಿದ್ದರು.’ ಹೀಗಿರುವಾಗ ಪೌಲನು ಬೆಂಬಲ ಹಾಗೂ ಪರಿಹಾರವನ್ನು ಎಲ್ಲಿ ಕಂಡುಕೊಂಡನು? ದೇವರಲ್ಲಿ ಅವನಿಗಿದ್ದ ಭರವಸೆಯು ಅಚಲವಾಗಿತ್ತು ಎಂಬುದಂತೂ ನಿಶ್ಚಯ. ಆದರೂ, ಅವನ ಸಹಾಯಕ್ಕೆ ಬಂದ ಜೊತೆ ಕ್ರೈಸ್ತರಿಂದ ಅವನು ಉತ್ತೇಜಿಸಲ್ಪಟ್ಟನು ಹಾಗೂ ಸಂತೈಸಲ್ಪಟ್ಟನು. (2 ಕೊರಿಂಥ 1:8, 9; 7:5-7) ಇಂದು ನೈಸರ್ಗಿಕ ವಿಪತ್ತುಗಳು ಅಥವಾ ಇತರ ಆಪತ್ತುಗಳು ಬಂದೆರಗುವಾಗ, ಅಗತ್ಯದಲ್ಲಿರುವ ಜೊತೆ ಕ್ರೈಸ್ತರಿಗೆ ಹಾಗೂ ಇತರರಿಗೆ ಆವಶ್ಯಕವಾಗಿರುವ ಭೌತಿಕ ಹಾಗೂ ಆಧ್ಯಾತ್ಮಿಕ ಸಹಾಯವನ್ನು ನೀಡಲಿಕ್ಕಾಗಿ ಆಗಿಂದಾಗ್ಗೆ ನಮ್ಮ ಕ್ರೈಸ್ತ ಸಹೋದರರು ಆ ಸ್ಥಳಗಳಿಗೆ ಮೊದಲು ಆಗಮಿಸುತ್ತಾರೆ.

ಜೀವನದ ಅನಿಶ್ಚಿತತೆಗಳನ್ನು ನಿಭಾಯಿಸಲಿಕ್ಕಾಗಿರುವ ಇನ್ನೊಂದು ರೀತಿಯ ಸಹಾಯವು ಪ್ರಾರ್ಥನೆಯೇ. ನಾವು ಅನಿರೀಕ್ಷಿತ ಒತ್ತಡದ ಕೆಳಗಿರುವಾಗ, ನಾವು ಯಾವಾಗಲೂ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯ ಕಡೆಗೆ ತಿರುಗಸಾಧ್ಯವಿದೆ. “ಯೆಹೋವನು, ಕುಗ್ಗಿಹೋದವರಿಗೆ ಆಶ್ರಯವೂ ಆಪತ್ಕಾಲದಲ್ಲಿ ದುರ್ಗವೂ ಆಗಿರುವನು.” (ಕೀರ್ತನೆ 9:9) ಮಾನವ ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸಲು ವಿಫಲರಾಗಬಹುದು. ದೇವರಾದರೋ ನಮ್ಮ ಭಯ ಮತ್ತು ಅನಿಶ್ಚಿತ ಅನಿಸಿಕೆಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ನಮಗೆ ಸಹಾಯಮಾಡಲು ಸಿದ್ಧಮನಸ್ಕನಾಗಿದ್ದಾನೆ. ಪ್ರಾರ್ಥನೆಯಲ್ಲಿ ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವ ಮೂಲಕ, ಆತನು “ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು” ಶಕ್ತನಾಗಿದ್ದಾನೆಂಬ ಖಾತ್ರಿಯಿಂದ ನಾವಿರಸಾಧ್ಯವಿದೆ.​—⁠ಎಫೆಸ 3:20, 21.

ನೀವು ಕ್ರಮವಾಗಿ ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುತ್ತೀರೋ? ದೇವರು ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಿದ್ದಾನೆ ಎಂಬ ಮನವರಿಕೆ ನಿಮಗಾಗುತ್ತಿದೆಯೋ? ಸಾವ್‌ ಪೌಲೂದಲ್ಲಿರುವ ಒಬ್ಬ ಹುಡುಗಿಯು ಹೇಳಿದ್ದು: “ನಾನು ದೇವರಿಗೆ ಪ್ರಾರ್ಥಿಸಬೇಕು ಎಂದು ನನ್ನ ತಾಯಿ ಹೇಳಿದರು. ಆದರೆ ‘ನನಗೆ ಪರಿಚಯವೇ ಇಲ್ಲದಿರುವಂಥ ಒಬ್ಬ ವ್ಯಕ್ತಿಯೊಂದಿಗೆ ನಾನೇಕೆ ಮಾತಾಡಬೇಕು?’ ಎಂದು ನಾನು ಸ್ವತಃ ಕೇಳಿಕೊಂಡೆ. ಆದರೂ, ನಮಗೆ ದೇವರ ಸಹಾಯದ ಅಗತ್ಯವಿದೆ ಮತ್ತು ನಾವು ಪ್ರಾರ್ಥನೆಯಲ್ಲಿ ಆತನೊಂದಿಗೆ ಮಾತಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಜ್ಞಾನೋಕ್ತಿ 18:10ನೆಯ ವಚನವು ನನಗೆ ಸಹಾಯಮಾಡಿತು.” ಆ ಶಾಸ್ತ್ರವಚನವು ಹೇಳುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ಹೀಗಿರುವಾಗ, ನಾವು ಕ್ರಮವಾಗಿ ಯೆಹೋವನೊಂದಿಗೆ ಮಾತಾಡುವುದನ್ನು ರೂಢಿಮಾಡಿಕೊಳ್ಳದಿರುವಲ್ಲಿ, ನಾವು ಹೇಗೆ ಆತನಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ಬೆಳೆಸಿಕೊಳ್ಳಸಾಧ್ಯವಿದೆ? ಆಧ್ಯಾತ್ಮಿಕ ಭದ್ರತೆಯ ಆಶೀರ್ವಾದಗಳನ್ನು ಅನುಭವಿಸಬೇಕಾದರೆ, ನಾವು ದೈನಂದಿನ ಹೃತ್ಪೂರ್ವಕ ಪ್ರಾರ್ಥನೆಯನ್ನು ಒಂದು ರೂಢಿಯಾಗಿ ಮಾಡಿಕೊಳ್ಳುವ ಅಗತ್ಯವಿದೆ. ಯೇಸು ಹೇಳಿದ್ದು: “ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”​—⁠ಲೂಕ 21:⁠36.

ನಾವು ಖಂಡಿತವಾಗಿಯೂ ನಿಶ್ಚಿತರಾಗಿರಸಾಧ್ಯವಿರುವ ಇನ್ನೊಂದು ವಿಚಾರವು, ದೇವರ ರಾಜ್ಯದಲ್ಲಿನ ನಮ್ಮ ನಿರೀಕ್ಷೆಯೇ. ದಾನಿಯೇಲ 2:44ರ ಮಾತುಗಳನ್ನು ಗಮನಿಸಿರಿ: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಈ ನಿರೀಕ್ಷೆಯು ಸದೃಢವಾದದ್ದಾಗಿದೆ ಮತ್ತು ಇದರ ವಿಷಯದಲ್ಲಿ ನಾವು ನಿಶ್ಚಿತರಾಗಿರಸಾಧ್ಯವಿದೆ. ಮಾನವ ವಾಗ್ದಾನಗಳು ಅನೇಕವೇಳೆ ವಿಫಲವಾಗುತ್ತವೆ, ಆದರೆ ಯೆಹೋವನ ಮಾತುಗಳಲ್ಲಿ ನಾವು ಯಾವಾಗಲೂ ಭರವಸೆಯಿಡಸಾಧ್ಯವಿದೆ. ದೇವರು ಅವಿಶ್ವಾಸಾರ್ಹನಾಗಿರುವುದಕ್ಕೆ ಬದಲಾಗಿ, ಆತನು ನಾವು ಸಂಪೂರ್ಣವಾಗಿ ಆತುಕೊಳ್ಳಸಾಧ್ಯವಿರುವ ಒಂದು ಆಶ್ರಯಗಿರಿಯಾಗಿದ್ದಾನೆ. ನಮಗೂ ದಾವೀದನಂತೆ ಅನಿಸಸಾಧ್ಯವಿದೆ; ಅವನು ಹೇಳಿದ್ದು: “ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ನನ್ನ ಶರಣನೂ ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ.”​—⁠2 ಸಮುವೇಲ 22:⁠3.

ಈ ಮುಂಚೆ ತಿಳಿಸಲ್ಪಟ್ಟಿರುವ ನಿಮ್ಮ ಮನಸ್ಸನ್ನು ನಿರ್ವಹಿಸುವುದು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಒಬ್ಬನು ಸಂಭವಿಸಬಹುದಾದ ಅಹಿತಕರ ಘಟನೆಗಳ ಕುರಿತು ಹೆಚ್ಚೆಚ್ಚು ಆಲೋಚಿಸುತ್ತಾ ಹೋದಂತೆ, ಅವು ಹೆಚ್ಚೆಚ್ಚು ಸಂಭವನೀಯವಾಗಿ ಕಾಣುತ್ತವೆ ಮತ್ತು ಅವುಗಳನ್ನು ಹೇಗೆ ನಿಭಾಯಿಸುವುದು ಎಂಬ ಸಮಸ್ಯೆಯು ಹೆಚ್ಚು ಜಟಿಲವಾಗುತ್ತಾ ಹೋಗುತ್ತದೆ.” ಆದುದರಿಂದ, ಈ ಲೋಕದ ಚಿಂತೆಗಳು ಮತ್ತು ಸಂಶಯಗಳ ಹೊರೆಯಿಂದ ನಾವು ಕುಗ್ಗಿಹೋಗುವಂತೆ ನಮ್ಮನ್ನು ಏಕೆ ಬಿಟ್ಟುಕೊಡಬೇಕು? ಅದಕ್ಕೆ ಬದಲಾಗಿ, ಈ ಲೋಕದ ಅನಿಶ್ಚಿತತೆಗಳನ್ನು ತೆಗೆದುಹಾಕಿ, ಅವುಗಳ ಸ್ಥಾನದಲ್ಲಿ ದೇವರು ಒದಗಿಸುವಂಥ ನಿಶ್ಚಿತ ಸಂಗತಿಗಳನ್ನು ಭರ್ತಿಮಾಡಿರಿ. ಯೆಹೋವನ ವಿಫಲಗೊಳ್ಳದ ವಾಗ್ದಾನಗಳಲ್ಲಿನ ನಮ್ಮ ನಂಬಿಕೆಗೆ ದೃಢವಾಗಿ ಅಂಟಿಕೊಳ್ಳುವಲ್ಲಿ, ನಮಗೆ ಈ ಆಶ್ವಾಸನೆಯಿದೆ: “ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲ.”​—⁠ರೋಮಾಪುರ 10:⁠11.

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರ ವಾಕ್ಯವು ಮಾನವಕುಲಕ್ಕಾಗಿ ಭಾವೀ ಆಶೀರ್ವಾದಗಳ ಗ್ಯಾರಂಟಿಯನ್ನು ನೀಡುತ್ತದೆ

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲ”

[ಪುಟ 31ರಲ್ಲಿರುವ ಚಿತ್ರ]

ರಾಜ್ಯದ ಸುವಾರ್ತೆಯು ಜನರಿಗೆ ಭದ್ರತೆಯನ್ನು ನೀಡುತ್ತದೆ