ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕತೆ ಮತ್ತು ನಿಮ್ಮ ಸುಕ್ಷೇಮ

ಆಧ್ಯಾತ್ಮಿಕತೆ ಮತ್ತು ನಿಮ್ಮ ಸುಕ್ಷೇಮ

ಆಧ್ಯಾತ್ಮಿಕತೆ ಮತ್ತು ನಿಮ್ಮ ಸುಕ್ಷೇಮ

ನಿಮ್ಮ ಆರೋಗ್ಯವನ್ನು ಪರಾಮರಿಸುವುದರಲ್ಲಿ ನೀವು ಬಹಳಷ್ಟು ಸಮಯವನ್ನು ಕಳೆಯುತ್ತಿರಬಹುದು. ಪ್ರತಿ ದಿನ ನೀವು ನಿದ್ರೆಮಾಡಲಿಕ್ಕಾಗಿ ಎಂಟು ತಾಸುಗಳನ್ನು, ಅಡಿಗೆ ಮತ್ತು ಊಟಕ್ಕಾಗಿ ಕೆಲವು ತಾಸುಗಳನ್ನು, ಹಾಗೂ ಆಹಾರ ಮತ್ತು ವಸತಿಗಾಗಿರುವ ಖರ್ಚನ್ನು ನಿಭಾಯಿಸಲಿಕ್ಕಾಗಿ ಕೆಲಸಮಾಡುವುದರಲ್ಲಿ ಎಂಟು ಅಥವಾ ಹೆಚ್ಚು ತಾಸುಗಳನ್ನು ವ್ಯಯಿಸುತ್ತಿರಬಹುದು. ಒಂದುವೇಳೆ ನೀವು ಅಸ್ವಸ್ಥರಾಗುವಲ್ಲಿ, ವೈದ್ಯರ ಬಳಿ ಹೋಗಲಿಕ್ಕಾಗಿ ಅಥವಾ ಸಾಂಪ್ರದಾಯಿಕ ಔಷಧೋಪಚಾರವನ್ನು ಪಡೆಯಲಿಕ್ಕಾಗಿ ಸಾಕಷ್ಟು ಸಮಯ ಮತ್ತು ಹಣವನ್ನು ವ್ಯಯಿಸಬಹುದು. ಒಳ್ಳೇ ಆರೋಗ್ಯವಿರಬೇಕು ಎಂಬ ಉದ್ದೇಶದಿಂದಲೇ ನೀವು ನಿಮ್ಮ ಮನೆಯನ್ನು ಸ್ವಚ್ಛವಾಗಿಡುತ್ತೀರಿ, ಸ್ನಾನಮಾಡುತ್ತೀರಿ ಮತ್ತು ಬಹುಶಃ ಕ್ರಮವಾಗಿ ವ್ಯಾಯಾಮವನ್ನೂ ಮಾಡುತ್ತೀರಿ.

ಆದರೂ, ಒಳ್ಳೇ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ, ಕೇವಲ ನಿಮ್ಮ ಶಾರೀರಿಕ ಆವಶ್ಯಕತೆಗಳನ್ನು ಪೂರೈಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ನಿಮ್ಮ ಸುಕ್ಷೇಮದಲ್ಲಿ ಇನ್ನಷ್ಟು ಮಹತ್ವದ ಪಾತ್ರವನ್ನು ವಹಿಸುವ ಇನ್ನೊಂದು ವಿಚಾರವೂ ಇದೆ. ನಿಮ್ಮ ಶಾರೀರಿಕ ಆರೋಗ್ಯಕ್ಕೂ ನಿಮ್ಮ ಆಧ್ಯಾತ್ಮಿಕ ಆರೋಗ್ಯಕ್ಕೂ ಬಲವಾದ ನಂಟು ಇದೆ, ಮತ್ತು ನಿಮ್ಮ ಆಧ್ಯಾತ್ಮಿಕತೆಯು ನಿಮ್ಮ ಶಾರೀರಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವೈದ್ಯಕೀಯ ಸಂಶೋಧನೆಯು ರುಜುಪಡಿಸಿದೆ.

ನೇರವಾದ ಸಂಬಂಧ

“ಈ ವಿಷಯಕ್ಕೆ ಸಂಬಂಧಿಸಿದ ಮೂಲ ಸಂಶೋಧನಾ ಲೇಖನಗಳು, ಹೆಚ್ಚಿನ ಆಧ್ಯಾತ್ಮಿಕತೆ ಹಾಗೂ ಉತ್ತಮ ಆರೋಗ್ಯದ ನಡುವೆ ನೇರವಾದ ಸಂಬಂಧವಿದೆ ಎಂಬುದನ್ನು ಕಂಡುಕೊಂಡಿವೆ” ಎಂದು, ಆಸ್ಟ್ರೇಲಿಯದ ಮೆಲ್ಬರ್ನ್‌ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಹೆಡ್ಲೀ ಜಿ. ಪೀಚ್‌ ಹೇಳುತ್ತಾರೆ. ಈ ಪರಿಶೋಧನೆಗಳ ಕುರಿತು ಹೇಳಿಕೆ ನೀಡುತ್ತಾ, ಆಸ್ಟ್ರೇಲಿಯದ ವೈದ್ಯಕೀಯ ಪತ್ರಿಕೆಯು (ಇಂಗ್ಲಿಷ್‌) ಹೀಗೆ ತಿಳಿಸುತ್ತದೆ: “ಧಾರ್ಮಿಕ ಮನೋಭಾವವು . . . ಕಡಿಮೆ ರಕ್ತದೊತ್ತಡ, ಕಡಿಮೆ ಕೊಲೆಸ್ಟರಾಲ್‌ . . . ಮತ್ತು ದೊಡ್ಡಕರುಳಿನ ಕ್ಯಾನ್ಸರ್‌ನ ಕಡಿಮೆ ಅಪಾಯಕ್ಕೂ ನಿಕಟವಾಗಿ ಸಂಬಂಧಿಸಿದೆ.”

ತದ್ರೀತಿಯಲ್ಲಿ, 2002ನೆಯ ಇಸವಿಯಲ್ಲಿ ಯುನೈಟೆಡ್‌ ಸ್ಟೇಟ್ಸ್‌ನ ಬರ್‌ಕ್ಲೀ ನಗರದ ಕ್ಯಾಲಿಫಾರ್ನಿಯ ವಿಶ್ವವಿದ್ಯಾನಿಲಯದಿಂದ ನಡೆಸಲ್ಪಟ್ಟ 6,545 ಮಂದಿಯ ಒಂದು ಅಧ್ಯಯನದಲ್ಲಿ, “ಅಪರೂಪವಾಗಿ ಧಾರ್ಮಿಕ ಆರಾಧನಾ ಕೂಟಗಳಿಗೆ ಹೋಗುತ್ತಿದ್ದ ಅಥವಾ ಎಂದೂ ಅಂಥ ಕೂಟಗಳಿಗೇ ಹೋಗದಿದ್ದಂಥ ಜನರಿಗೆ ಹೋಲಿಸುವಾಗ, ವಾರಕ್ಕೊಮ್ಮೆ ಆ ಕೂಟಗಳಿಗೆ ಹೋಗುತ್ತಿದ್ದ ಜನರಲ್ಲಿ ಮರಣದ ಅಪಾಯವು ಗಮನಾರ್ಹವಾದ ರೀತಿಯಲ್ಲಿ ಕಡಿಮೆಯಾಗಿತ್ತು” ಎಂಬುದನ್ನು ಕಂಡುಕೊಳ್ಳಲಾಯಿತು. ಯೂನಿವರ್ಸಿಟಿ ಆಫ್‌ ಕ್ಯಾಲಿಫಾರ್ನಿಯ ಬರ್‌ಕ್ಲೀಸ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನಲ್ಲಿ ಈ ಅಧ್ಯಯನದ ಮುಖ್ಯ ಲೇಖಕರೂ ಮತ್ತು ಉಪನ್ಯಾಸಕರೂ ಆಗಿರುವ ಡಗ್‌ ಓಮನ್‌ ಹೇಳಿದ್ದು: “ಸಾಮಾಜಿಕ ಸಂಬಂಧಗಳು ಮತ್ತು ಧೂಮಪಾನ ಹಾಗೂ ವ್ಯಾಯಾಮವನ್ನು ಒಳಗೂಡಿರುವ ಆರೋಗ್ಯ ವರ್ತನೆಗಳಂಥ ವಾಸ್ತವಾಂಶಗಳಿಗೆ ಪರಿಗಣನೆ ನೀಡಿದ ಬಳಿಕವೂ ಈ ವ್ಯತ್ಯಾಸವನ್ನು ನಾವು ಕಂಡುಕೊಂಡೆವು.”

ಜೀವನದಲ್ಲಿ ಆಧ್ಯಾತ್ಮಿಕ ಹೊರನೋಟವುಳ್ಳ ವ್ಯಕ್ತಿಗಳು ಪಡೆದುಕೊಳ್ಳುವ ಇತರ ಪ್ರಯೋಜನಗಳನ್ನು ಗುರುತಿಸುತ್ತಾ, ಆಸ್ಟ್ರೇಲಿಯದ ವೈದ್ಯಕೀಯ ಪತ್ರಿಕೆಯು (ಇಂಗ್ಲಿಷ್‌) ಹೇಳುವುದು: “ಧಾರ್ಮಿಕ ಮನೋಭಾವವಿರುವ ಜನರಲ್ಲಿ ವೈವಾಹಿಕ ಸ್ಥಿರತೆ ಅಧಿಕವಾಗಿರುತ್ತದೆ, ಮದ್ಯಪಾನ ಹಾಗೂ ನಿಷಿದ್ಧ ಅಮಲೌಷಧದ ಉಪಯೋಗವು ಕಡಿಮೆಯಾಗಿರುತ್ತದೆ, ಆತ್ಮಹತ್ಯೆಯ ಕುರಿತು ಆಲೋಚಿಸುವುದು ತೀರ ಕಡಿಮೆಯಾಗಿರುತ್ತದೆ, ಚಿಂತೆ ಹಾಗೂ ಖಿನ್ನತೆಯ ಪ್ರಮಾಣವೂ ಮಿತವಾಗಿರುತ್ತದೆ, ಮತ್ತು ಹೆಚ್ಚು ನಿಸ್ವಾರ್ಥಭಾವವಿರುತ್ತದೆ.” ಇದಕ್ಕೆ ಕೂಡಿಸಿ, ಬಿಎಮ್‌ಜೆ (ಈ ಮುಂಚೆ ಇದು ದ ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ಎಂದು ಪ್ರಸಿದ್ಧವಾಗಿತ್ತು) ಪತ್ರಿಕೆಯು ವರದಿಸುವುದು: “ಆಧ್ಯಾತ್ಮಿಕ ನಂಬಿಕೆಗಳೇ ಇಲ್ಲದಿರುವಂಥ ಜನರಿಗಿಂತಲೂ, ಬಲವಾದ ಆಧ್ಯಾತ್ಮಿಕ ನಂಬಿಕೆಗಳಿವೆ ಎಂದು ಹೇಳಿಕೊಳ್ಳುವಂಥ ಜನರು ಒಬ್ಬ ಆಪ್ತ ವ್ಯಕ್ತಿಯ ಮರಣಾನಂತರದ ದುಃಖವನ್ನು ಹೆಚ್ಚು ಬೇಗನೆ ಮತ್ತು ಪೂರ್ಣವಾಗಿ ಮರೆಯುವಂತೆ ತೋರುತ್ತದೆ.”

ನಿಜವಾದ ಆಧ್ಯಾತ್ಮಿಕತೆಯಲ್ಲಿ ಏನು ಒಳಗೂಡಿದೆ ಎಂಬ ವಿಷಯದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಅದೇನೇ ಇರಲಿ, ಒಂದು ವಿಷಯವಂತೂ ಸತ್ಯ, ಅದೇನೆಂದರೆ ನಿಮ್ಮ ಆಧ್ಯಾತ್ಮಿಕ ಸ್ಥಿತಿಯು ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಖಂಡಿತವಾಗಿಯೂ ಪ್ರಭಾವವನ್ನು ಬೀರುತ್ತದೆ. ಈ ಪುರಾವೆಯು ಸುಮಾರು 2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನಿಂದ ನುಡಿಯಲ್ಪಟ್ಟ ಒಂದು ಹೇಳಿಕೆಗೆ ಹೊಂದಿಕೆಯಲ್ಲಿದೆ. ಅವನು ಹೇಳಿದ್ದು: “ಆಧ್ಯಾತ್ಮಿಕ ಅಗತ್ಯದ ಪರಿಜ್ಞಾನವುಳ್ಳವರು ಸಂತೋಷಿತರು.” (ಮತ್ತಾಯ 5:​3, NW) ನಿಮ್ಮ ಆಧ್ಯಾತ್ಮಿಕ ಸ್ಥಿತಿಗತಿಯು ನಿಮ್ಮ ಆರೋಗ್ಯ ಮತ್ತು ಸಂತೋಷದ ಮೇಲೆ ಪ್ರಭಾವ ಬೀರುವುದರಿಂದ, ಹೀಗೆ ಪ್ರಶ್ನಿಸಿಕೊಳ್ಳುವುದು ಅರ್ಥಭರಿತವಾದದ್ದಾಗಿದೆ: ‘ಭರವಸಾರ್ಹವಾದ ಆಧ್ಯಾತ್ಮಿಕ ಮಾರ್ಗದರ್ಶನವನ್ನು ನಾನೆಲ್ಲಿ ಕಂಡುಕೊಳ್ಳಸಾಧ್ಯವಿದೆ? ಮತ್ತು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿರುವುದರಲ್ಲಿ ಏನೆಲ್ಲಾ ಒಳಗೂಡಿದೆ?’