ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ”

“ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ”

“ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ”

“ಸಹೋದರರೇ, ನಾನು ಹೇಳುವದೇನಂದರೆ, ಉಳಿದಿರುವ ಸಮಯವು ಕೊಂಚವೇ ಆಗಿದೆ.”​—⁠1 ಕೊರಿಂಥ 7:​29, NW.

ನಿಮ್ಮ ಜೀವಮಾನದಲ್ಲಿ, ಲೋಕದಲ್ಲಾಗುತ್ತಿರುವ ಯಾವ ಬದಲಾವಣೆಗಳನ್ನು ನೀವು ನೋಡಿದ್ದೀರಿ? ಅವುಗಳಲ್ಲಿ ಕೆಲವನ್ನು ನೀವು ವಿವರಿಸಿ ಹೇಳಬಲ್ಲಿರೋ? ಉದಾಹರಣೆಗೆ, ವೈದ್ಯಕೀಯ ವಿಜ್ಞಾನದಲ್ಲಿ ಅನೇಕ ಪ್ರಗತಿಗಳನ್ನು ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಮಾಡಲಾದ ಸಂಶೋಧನೆಯ ಕಾರಣ, 20ನೇ ಶತಮಾನದ ಆರಂಭದಲ್ಲಿ 50 ವರುಷಕ್ಕಿಂತ ಕಡಿಮೆಯಿದ್ದ ಮನುಷ್ಯನ ಸರಾಸರಿ ಆಯುಷ್ಯವು ಇಂದು 70 ವರುಷಕ್ಕಿಂತಲೂ ಹೆಚ್ಚಾಗಿದೆ. ಅಷ್ಟುಮಾತ್ರವಲ್ಲದೆ, ರೇಡಿಯೊ, ಟೆಲಿವಿಷನ್‌, ಸೆಲ್‌ ಫೋನ್‌ಗಳು, ಮತ್ತು ಫ್ಯಾಕ್ಸ್‌ ಮೆಷಿನ್‌ಗಳ ಸರಿಯಾದ ಉಪಯೋಗದಿಂದ ನಾವು ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆದಿದ್ದೇವೆಂದು ತುಸು ಯೋಚಿಸಿರಿ. ಕೋಟ್ಯಂತರ ಜನರ ಜೀವನವನ್ನು ಉತ್ತಮಗೊಳಿಸಿರುವ ಶೈಕ್ಷಣಿಕ, ಸಾರಿಗೆ ಸಂಚಾರ, ಮತ್ತು ಮಾನವಹಕ್ಕುಗಳ ವಿಷಯಗಳಲ್ಲಾದ ಪ್ರಗತಿಯೂ ಗಮನಾರ್ಹ.

2 ಆದರೆ, ಎಲ್ಲಾ ಬದಲಾವಣೆಗಳು ಪ್ರಯೋಜನಾರ್ಥವಾಗಿರುವುದಿಲ್ಲ ಎಂಬುದು ನಿಜ. ಪಾತಕದ ಹೆಚ್ಚುತ್ತಿರುವ ಪ್ರಮಾಣ, ಕುಸಿಯುತ್ತಿರುವ ನೈತಿಕ ಮೌಲ್ಯಗಳು, ಹೆಚ್ಚುತ್ತಿರುವ ಅಮಲೌಷಧದ ದುರುಪಯೋಗ, ಗಗನಕ್ಕೇರುತ್ತಿರುವ ವಿವಾಹ ವಿಚ್ಛೇದದ ಪ್ರಮಾಣಗಳು, ಹೆಚ್ಚುತ್ತಿರುವ ಹಣದುಬ್ಬರ, ಮತ್ತು ಭಯೋತ್ಪಾದನೆಯ ಹೆಚ್ಚುತ್ತಿರುವ ಅಪಾಯ ಮುಂತಾದವುಗಳಿಂದ ಉಂಟಾಗುತ್ತಿರುವ ಹಾನಿಯನ್ನು ನಮ್ಮಿಂದ ಅಲ್ಲಗಳೆಯಸಾಧ್ಯವಿಲ್ಲ. ಏನೇ ಆಗಲಿ, “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂಬುದಾಗಿ ಬಹಳ ವರುಷಗಳ ಹಿಂದೆ ಅಪೊಸ್ತಲ ಪೌಲನು ಬರೆದ ಮಾತುಗಳೊಂದಿಗೆ ನೀವು ಸಮ್ಮತಿಸುವುದು ಸಂಭವನೀಯ.​—⁠1 ಕೊರಿಂಥ 7:31.

3 ಪೌಲನು ಈ ಹೇಳಿಕೆಯನ್ನು ಮಾಡಿದಾಗ, ಅವನು ಲೋಕವನ್ನು ಒಂದು ರಂಗಮಂಟಪದ ವೇದಿಕೆಗೆ ಹೋಲಿಸುತ್ತಾನೆ. ಆ ವೇದಿಕೆಯಲ್ಲಿನ ಪಾತ್ರಧಾರಿಗಳು​—⁠ರಾಜಕೀಯ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಮೇಧಾವಿಗಳು​—⁠ವೇಶವನ್ನು ಹಾಕಿಕೊಂಡು, ತಮ್ಮ ಭಾಗಗಳನ್ನು ನಟಿಸಿ, ನಂತರ ವೇದಿಕೆಯನ್ನು ಇತರರಿಗೆ ಬಿಟ್ಟುಹೋಗುತ್ತಾರೆ. ಇದು ಶತಮಾನಗಳಿಂದ ನಡೆಯುತ್ತಾ ಇದೆ. ಹಿಂದಿನ ಕಾಲಗಳಲ್ಲಿ, ರಾಜವಂಶಸ್ಥರು ಅನೇಕ ದಶಕಗಳ ವರೆಗೆ​—⁠ಅನೇಕವೇಳೆ ಶತಮಾನಗಳ ವರೆಗೆ ಸಹ​—⁠ಆಳ್ವಿಕೆ ನಡೆಸುತ್ತಿದ್ದರು. ಬದಲಾವಣೆಗಳು ಬಹಳ ನಿಧಾನಗತಿಯಲ್ಲಿ ಸಂಭವಿಸುತ್ತಿದ್ದವು. ಆದರೆ ಇಂದು, ಕೇವಲ ಒಬ್ಬ ಕೊಲೆಗಾರನ ಗುಂಡು ಪ್ರಮುಖನೊಬ್ಬನಿಗೆ ತಗಲಿ ಕ್ಷಣಮಾತ್ರದಲ್ಲಿ ಇತಿಹಾಸದ ಪಥವನ್ನೇ ಬದಲಾಯಿಸಬಲ್ಲದು! ಹೌದು, ಈ ಅಲ್ಲೊಲಕಲ್ಲೊಲವಾದ ಸಮಯದಲ್ಲಿ ನಾಳೆ ಏನು ಸಂಭವಿಸುವುದು ಎಂದು ಯಾರೂ ಹೇಳಸಾಧ್ಯವಿಲ್ಲ.

4 ಈ ಲೋಕವು ಒಂದು ರಂಗಮಂಟಪದ ವೇದಿಕೆಯಾಗಿದ್ದು, ಅದರ ಮುಖಂಡರು ಪಾತ್ರಧಾರಿಗಳಾಗಿರುವುದಾದರೆ, ಕ್ರೈಸ್ತರು ವೀಕ್ಷಕರಾಗಿದ್ದಾರೆ. * ಆದರೆ ಇವರು “ಲೋಕದವರಲ್ಲ”ದಿರುವ ಕಾರಣ, ನಾಟಕದ ಕುರಿತು ಅಥವಾ ಪಾತ್ರಧಾರಿಗಳು ಯಾರೆಂಬುದನ್ನು ಗುರುತಿಸುವ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿಸುವುದಿಲ್ಲ. (ಯೋಹಾನ 17:16) ಅದರ ಬದಲಾಗಿ, ನಾಟಕವು ಬೇಗನೆ ತನ್ನ ಪರಮಾವಧಿಯನ್ನು ಅಂದರೆ ವಿಪತ್ಕಾರಕ ಅಂತ್ಯವನ್ನು ತಲಪಲಿದೆ ಎಂದು ಅವರು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ, ದೀರ್ಘಕಾಲದಿಂದ ಕಾಯುತ್ತಿರುವ ನೀತಿಯ ನೂತನ ಲೋಕವನ್ನು ಯೆಹೋವನು ಸ್ಥಾಪಿಸುವ ಮುನ್ನ ಈ ವ್ಯವಸ್ಥೆಯು ಅಂತ್ಯಗೊಳ್ಳಲೇಬೇಕೆಂದು ಅವರಿಗೆ ತಿಳಿದಿದೆ. * ಆದುದರಿಂದ, ನಾವು ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆ ಮತ್ತು ನೂತನ ಲೋಕದ ಹೊಸ್ತಿಲಲ್ಲಿದ್ದೇವೆ ಎಂಬುದನ್ನು ಸೂಚಿಸುವ ಎರಡು ರೀತಿಯ ಪುರಾವೆಗಳನ್ನು ನಾವೀಗ ಪರೀಕ್ಷಿಸೋಣ. ಆ ಪುರಾವೆಗಳು: (1) ಬೈಬಲ್‌ ಕಾಲಗಣನೆ, ಮತ್ತು (2) ಅವನತಿಗೊಂಡಿರುವ ಲೋಕದ ಪರಿಸ್ಥಿತಿ.​—⁠ಮತ್ತಾಯ 24:21; 2 ಪೇತ್ರ 3:13.

ಕಟ್ಟಕಡೆಗೆ ಬಗೆಹರಿಸಲಾದ ಒಂದು ರಹಸ್ಯ!

5 ಕಾಲಗಣನೆ ಎಂಬುದು ಸಮಯ ಮತ್ತು ಘಟನೆಗಳ ಸಂಬಂಧದ ಕುರಿತಾದ ಅಧ್ಯಯನವಾಗಿದೆ. ದೇವರ ರಾಜ್ಯದ ಮಧ್ಯಪ್ರವೇಶವಿಲ್ಲದೆ, ಲೋಕದ ಮುಖಂಡರು ವೇದಿಕೆಯಲ್ಲಿನ ಮುಖ್ಯ ಪಾತ್ರಧಾರಿಗಳಾಗಿರುವ ಸಮಯದ ಕುರಿತು ಯೇಸು ಮಾತಾಡಿದನು. ಅವನು ಆ ಸಮಯಾವಧಿಯನ್ನು “ಅನ್ಯದೇಶದವರ ಸಮಯಗಳು” ಎಂದು ಕರೆದನು. (ಲೂಕ 21:24) ಆ ‘ಸಮಯಗಳ’ ಅಂತ್ಯದಲ್ಲಿ ದೇವರ ಸ್ವರ್ಗೀಯ ರಾಜ್ಯವು, ಅದರ ಹಕ್ಕುಬದ್ಧ ಅಧಿಕಾರಿಯಾದ ಯೇಸುವಿನೊಂದಿಗೆ ಅಧಿಕಾರಕ್ಕೆ ಬರುವುದು. ಮೊದಲಾಗಿ, ಯೇಸು “[ಅವನ] ವೈರಿಗಳ ಮಧ್ಯದಲ್ಲಿ” ದೊರೆತನಮಾಡುವನು. (ಕೀರ್ತನೆ 110:⁠2) ನಂತರ, ದಾನಿಯೇಲ 2:44ಕ್ಕನುಸಾರ, ಆ ರಾಜ್ಯವು ಎಲ್ಲಾ ಮಾನವ ಸರಕಾರಗಳನ್ನು “ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”

6 “ಅನ್ಯದೇಶದವರ ಸಮಯಗಳು” ಯಾವಾಗ ಅಂತ್ಯಗೊಳ್ಳುವವು ಮತ್ತು ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಗುವುದು? ಇದಕ್ಕಾಗಿರುವ ಉತ್ತರವು, ‘ಅಂತ್ಯಕಾಲದವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿರುವ’ದು ಮತ್ತು ಈ ಉತ್ತರದಲ್ಲಿ ಬೈಬಲ್‌ ಕಾಲಗಣನೆಯು ಒಳಗೊಂಡಿದೆ. (ದಾನಿಯೇಲ 12:⁠9) ಆ “ಕಾಲ”ವು ಸಮೀಪಿಸಿದಂತೆ, ನಮ್ರರಾದ ಬೈಬಲ್‌ ವಿದ್ಯಾರ್ಥಿಗಳ ಒಂದು ಗುಂಪಿಗೆ ಯೆಹೋವನು ಉತ್ತರವನ್ನು ತಿಳಿಯಪಡಿಸಲು ಕ್ರಮಗಳನ್ನು ಕೈಗೊಂಡನು. ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶನವಾದಾಗ “ಅನ್ಯದೇಶದವರ ಸಮಯಗಳು” ಆರಂಭಗೊಂಡವು ಮತ್ತು ಆ “ಸಮಯಗಳು” 2,520 ವರುಷಗಳ ಕಾಲಾವಧಿಯಾಗಿವೆ ಎಂಬುದನ್ನು ಅವರು ದೇವರ ಆತ್ಮದ ಸಹಾಯದಿಂದ ಗ್ರಹಿಸಿಕೊಂಡರು. ಇದರ ಮೂಲಕ, 1914 ‘ಅನ್ಯದೇಶದವರ ಸಮಯಗಳ’ ಅಂತ್ಯವನ್ನು ಗುರುತಿಸುತ್ತದೆ ಎಂಬುದನ್ನು ಅವರು ಲೆಕ್ಕಿಸಿದರು. ಅಷ್ಟುಮಾತ್ರವಲ್ಲದೆ, 1914ರಲ್ಲಿ ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಆರಂಭವಾಯಿತು ಎಂಬುದನ್ನೂ ಅವರು ಗ್ರಹಿಸಿದರು. ನೀವು ಒಬ್ಬ ಬೈಬಲ್‌ ವಿದ್ಯಾರ್ಥಿಯೋಪಾದಿ, ಇಸವಿ 1914 ಅನ್ನು ಹೇಗೆ ಲೆಕ್ಕಿಸುವುದು ಎಂಬುದನ್ನು ಶಾಸ್ತ್ರಾಧಾರವಾಗಿ ವಿವರಿಸಬಲ್ಲಿರೋ? *

7 ಒಂದು ಸುಳಿವು, ದಾನಿಯೇಲ ಪುಸ್ತಕದಲ್ಲಿ ಮುಚ್ಚಿಡಲ್ಪಟ್ಟಿದೆ. ಸಾ.ಶ.ಪೂ. 607ರಲ್ಲಿ “ಅನ್ಯದೇಶದವರ ಸಮಯಗಳು” ಆರಂಭಗೊಂಡಾಗ ಯೆರೂಸಲೇಮನ್ನು ನಾಶಗೊಳಿಸಲು ಯೆಹೋವನು ಬಾಬೆಲಿನ ರಾಜ ನೆಬೂಕದ್ನೆಚ್ಚರನನ್ನು ಉಪಯೋಗಿಸಿದ ಕಾರಣ, ಯಾವುದೇ ದೈವಿಕ ಹಸ್ತಕ್ಷೇಪವಿಲ್ಲದೆ ಜನಾಂಗಗಳು ಏಳು ಸಾಂಕೇತಿಕ ಕಾಲಗಳ ವರೆಗೆ ಆಳುವುದನ್ನು ಮುಂದುವರಿಸುವುದು ಎಂಬುದಾಗಿ ಆ ರಾಜನ ಮೂಲಕ ಆತನು ತಿಳಿಯಪಡಿಸಿದನು. (ಯೆಹೆಜ್ಕೇಲ 21:​26, 27; ದಾನಿಯೇಲ 4:​16, 23-25) ಈ ಏಳು ಕಾಲಗಳು ಎಷ್ಟು ದೀರ್ಘವಾಗಿವೆ? ಪ್ರಕಟನೆ 11:​2, 3 ಮತ್ತು 12:​6, 14ಕ್ಕನುಸಾರ, ಮೂರುವರೆ ಕಾಲಗಳು 1,260 ದಿನಗಳಷ್ಟು ದೀರ್ಘವಾಗಿವೆ. ಆದುದರಿಂದ, ಏಳು ಕಾಲಗಳು ಅದಕ್ಕೆ ಇಮ್ಮಡಿಯಷ್ಟು ಅಂದರೆ 2,520 ದಿನಗಳಾಗಿರುತ್ತವೆ. ಇದರ ಅರ್ಥವು ಇಷ್ಟೇ ಆಗಿದೆಯೋ? ಇಲ್ಲ. ದಾನಿಯೇಲನ ಸಮಕಾಲೀನನಾದ ಯೆಹೆಜ್ಕೇಲನಿಗೆ ಯೆಹೋವನು ಸಂಕೇತಾರ್ಥವನ್ನು ಅರ್ಥಮಾಡಿಕೊಳ್ಳಬಲ್ಲ ನಿಯಮವನ್ನು ತೋರಿಸಿದ್ದಾನೆ: “ವರುಷ ಒಂದಕ್ಕೆ ಒಂದು ದಿನದ ಮೇರೆಗೆ . . . ನಿನಗೆ ಗೊತ್ತುಮಾಡಿದ್ದೇನೆ.” (ಯೆಹೆಜ್ಕೇಲ 4:6) ಆದುದರಿಂದ, ಏಳು ಕಾಲಗಳು ಎಂಬುದಾಗಿ ಹೇಳುವಾಗ 2,520 ವರುಷಗಳ ಉದ್ದದ ಕಾಲವನ್ನು ಸೂಚಿಸುತ್ತವೆ. ಸಾ.ಶ.ಪೂ. 607ನ್ನು ಒಂದು ಆರಂಭದ ವರುಷವಾಗಿ ಮತ್ತು 2,520 ವರುಷಗಳನ್ನು ಕಾಲದ ವ್ಯಾಪ್ತಿಯಾಗಿ ಉಪಯೋಗಿಸುವಾಗ, 1914ರಲ್ಲಿ ಅನ್ಯದೇಶದವರ ಸಮಯಗಳು ಅಂತ್ಯಗೊಂಡವು ಎಂಬುದನ್ನು ನಾವು ನಿರ್ಧರಿಸಬಲ್ಲೆವು.

“ಅಂತ್ಯಕಾಲ”ವು ದೃಢಪಡಿಸಲ್ಪಟ್ಟದ್ದು

8 ಇಸವಿ 1914ರಿಂದ ಸಂಭವಿಸುತ್ತಿರುವ ಲೋಕ ಘಟನೆಗಳು, ಬೈಬಲ್‌ ಕಾಲಗಣನೆಯ ಆಧಾರದ ಮೇಲೆ ಇಷ್ಟರ ವರೆಗೆ ನಾವು ತಿಳಿದ ವಿಷಯಗಳು ಸರಿಯಾಗಿವೆ ಎಂಬುದನ್ನು ದೃಢಪಡಿಸುತ್ತವೆ. “ಯುಗದ ಸಮಾಪ್ತಿ”ಯು, ಯುದ್ಧ, ಬರಗಾಲ, ಮತ್ತು ರೋಗಗಳಿಂದ ಗುರುತಿಸಲ್ಪಡುತ್ತದೆ ಎಂಬುದನ್ನು ಯೇಸು ಸ್ವತಃ ಹೇಳಿದ್ದಾನೆ. (ಮತ್ತಾಯ 24:​3-8; ಪ್ರಕಟನೆ 6:​2-8) 1914ರಿಂದ ಇದೇ ಸಂಗತಿಗಳು ಸಂಭವಿಸುತ್ತಾ ಬಂದಿವೆ. ಇದಕ್ಕೆ ಕೂಡಿಸುತ್ತಾ ಅಪೊಸ್ತಲ ಪೌಲನು, ಜನರು ಒಬ್ಬರ ಕಡೆಗೆ ಇನ್ನೊಬ್ಬರು ವರ್ತಿಸುವ ರೀತಿಯಲ್ಲಿ ಸಂಭವಿಸಲಿರುವ ಬದಲಾವಣೆಗಳ ಕುರಿತು ಮಾತಾಡುತ್ತಾನೆ. ಅವನು ವಿವರಿಸಿರುವ ಬದಲಾವಣೆಗಳನ್ನು ನಾವೀಗ ಕಣ್ಣಾರೆ ನೋಡುತ್ತಿದ್ದೇವೆ.​—⁠2 ತಿಮೊಥೆಯ 3:​1-5.

9 ಇಸವಿ 1914ರಿಂದ “ಈ ಪ್ರಪಂಚದ ತೋರಿಕೆಯು” ನಿಜವಾಗಿಯೂ ಬದಲಾಗಿದೆಯೋ? 1914ರ ಸಂತತಿ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಪ್ರೊಫೆಸರ್‌ ರಾಬರ್ಟ್‌ ವೋಲ್‌ ತಿಳಿಸಿದ್ದು: “ಯಾರು ಲೋಕ ಯುದ್ಧದ ಸಮಯದಲ್ಲಿ ಜೀವಿಸಿದ್ದರೋ ಅವರು, 1914ರ ಆಗಸ್ಟ್‌ ತಿಂಗಳಿನಲ್ಲಿ ಒಂದು ಲೋಕವು ಅಂತ್ಯಗೊಂಡು ಇನ್ನೊಂದು ಆರಂಭವಾಯಿತು ಎಂಬ ಅಭಿಪ್ರಾಯದಿಂದ ಹೊರಬರಲಾರರು.” ಈ ಮಾತನ್ನು ದೃಢಪಡಿಸುತ್ತಾ, ಲೋಕಾರೋಗ್ಯ ಸಂಸ್ಥೆಯ ಮಾನಸಿಕ ಆರೋಗ್ಯ ಕೇಂದ್ರದ ನಿರ್ದೇಶಕರಾದ ಡಾ. ಜಾರ್ಜ್‌ ಎ. ಕೋಸ್ಟ ಈ ಸೀಲ್ವ ಬರೆದದ್ದು: “ಅತಿ ಶೀಘ್ರ ಬದಲಾವಣೆಯ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ಮಾನವ ಇತಿಹಾಸದಲ್ಲಿಯೇ ಹಿಂದೆಂದೂ ಅನುಭವಿಸದಷ್ಟು ಅಧಿಕ ಪ್ರಮಾಣದ ಚಿಂತೆ ಮತ್ತು ಒತ್ತಡವನ್ನು ಇದು ಉಂಟುಮಾಡಿದೆ.” ಇದು ನಿಮ್ಮ ವೈಯಕ್ತಿಕ ಅನುಭವವಾಗಿದೆಯೋ?

10 ಅವನತಿಗಿಳಿಯುತ್ತಿರುವ ಲೋಕ ಪರಿಸ್ಥಿತಿಗೆ ಯಾರು ಹೊಣೆಗಾರನಾಗಿದ್ದಾನೆ? ಪ್ರಕಟನೆ 12:​7-9 ಆ ಹೊಣೆಗಾರನ ಮುಸುಕನ್ನು ಕಳಚುತ್ತದೆ: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು . . . ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು.” ಹಾಗಾದರೆ, ಪಿಶಾಚನಾದ ಸೈತಾನನು ತಾನೇ ಈ ಎಲ್ಲಾ ಸಮಸ್ಯೆಗಳಿಗೆ ಹೊಣೆಗಾರನಾಗಿದ್ದಾನೆ. 1914ರಲ್ಲಿ ಸ್ವರ್ಗದಿಂದ ಅವನ ದೊಬ್ಬುವಿಕೆಯು ಭೂಮಿಗೆ ಈ ಅರ್ಥದಲ್ಲಿದೆ; “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”​—⁠ಪ್ರಕಟನೆ 12:​10, 12.

ವೇದಿಕೆಯಲ್ಲಿ ಕೊನೆಯ ದೃಶ್ಯವು ನಟಿಸಲ್ಪಡುವ ವಿಧ

11 ತನ್ನ ನಾಶನವು ಸಮೀಪಿಸುತ್ತಿದೆ ಎಂಬುದನ್ನು ತಿಳಿದವನಾಗಿ, 1914ರಿಂದ ಸೈತಾನನು “ಭೂಲೋಕದವರನ್ನೆಲ್ಲಾ” ಮರುಳುಗೊಳಿಸುವುದರಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಮೋಸಗೊಳಿಸುವುದರಲ್ಲಿ ನಿಪುಣನಾಗಿರುವ ಸೈತಾನನು ಯಾವಾಗಲೂ ಪರದೆಯ ಹಿಂದಿನಿಂದ ಕಾರ್ಯವೆಸಗುತ್ತಾನೆ. ಆದರೆ, ಲೋಕದ ಮುಖಂಡರನ್ನು ಮತ್ತು ಧಾರ್ಮಿಕ ನಾಯಕರನ್ನು ವೇದಿಕೆಯ ಮೇಲೆ ಮೂಲ ಪಾತ್ರಧಾರಿಗಳಾಗಿ ಕಳುಹಿಸುತ್ತಾನೆ. (2 ತಿಮೊಥೆಯ 3:13; 1 ಯೋಹಾನ 5:19) ತಾನು ಆಳುವಂಥ ರೀತಿಯು ನಿಜವಾದ ಶಾಂತಿಯನ್ನು ತರಬಲ್ಲದು ಎಂದು ಯೋಚಿಸುವಂತೆ ಮಾನವಕುಲವನ್ನು ವಂಚಿಸುವುದೇ ಅವನ ಗುರಿಗಳಲ್ಲಿ ಒಂದಾಗಿದೆ. ಬಹುಮಟ್ಟಿಗೆ ಅವನ ಈ ಅಪಪ್ರಚಾರವು ಯಶಸ್ಸನ್ನು ಕಂಡುಕೊಂಡಿದೆ. ಲೋಕದ ಪರಿಸ್ಥಿತಿಗಳು ತೀರ ಹದಗೆಡುತ್ತಾ ಹೋಗುತ್ತಿರುವುದಕ್ಕೆ ಹೆಚ್ಚುತ್ತಿರುವ ರುಜುವಾತು ಇರುವುದಾದರೂ ಜನರು ಆಶಾವಾದಿಗಳಾಗಿ ಉಳಿದಿದ್ದಾರೆ. ಈ ವಿಷಯಗಳ ವ್ಯವಸ್ಥೆಯು ನಾಶವಾಗುವ ಕೊಂಚ ಮುನ್ನ ಸಂಭವಿಸಲಿರುವ ಸೈತಾನನ ಅಪಪ್ರಚಾರದ ಗಮನಾರ್ಹ ಅಭಿವ್ಯಕ್ತಿಯ ಕುರಿತು ಅಪೊಸ್ತಲ ಪೌಲನು ಮುನ್‌ತಿಳಿಸಿದ್ದಾನೆ. ಅವನು ಬರೆದದ್ದು: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು.”​—⁠1 ಥೆಸಲೊನೀಕ 5:3; ಪ್ರಕಟನೆ 16:​13.

12 ಇತ್ತೀಚಿನ ವರುಷಗಳಲ್ಲಿ, ಮಾನವರ ವಿವಿಧ ಯೋಜನೆಗಳನ್ನು ವರ್ಣಿಸಲು “ಶಾಂತಿ ಮತ್ತು ಭದ್ರತೆ” ಎಂಬ ವಾಕ್ಸರಣಿಯನ್ನು ರಾಜಕೀಯ ಮುಖಂಡರು ಅನೇಕಬಾರಿ ಉಪಯೋಗಿಸಿದ್ದಾರೆ. ಅಷ್ಟುಮಾತ್ರವಲ್ಲದೆ, ಇಸವಿ 1986ನ್ನು ಅಂತಾರಾಷ್ಟ್ರೀಯ ಶಾಂತಿ ವರುಷ ಎಂಬುದಾಗಿ ಸಹ ಅವರು ಕರೆದಿದ್ದಾರೆ. ಆದರೆ ಆ ವರುಷವು ಶಾಂತಿ ವರುಷವಾಗಿ ಪರಿಣಮಿಸಲಿಲ್ಲ. ಲೋಕದ ಮುಖಂಡರಿಂದ ಮಾಡಲ್ಪಡುವ ಇಂಥ ಪ್ರಯತ್ನಗಳು 1 ಥೆಸಲೊನೀಕ 5:3ರ ಮಾತುಗಳನ್ನು ಸಂಪೂರ್ಣವಾಗಿ ನೆರವೇರಿಸುತ್ತವೋ, ಅಥವಾ ಇಲ್ಲಿ ಪೌಲನು, ಇಡೀ ಲೋಕದ ಗಮನವನ್ನೇ ಸೆಳೆಯುವಂತ ಯಾವುದೋ ಒಂದು ವಿಶೇಷ ಘಟನೆಯನ್ನು ಸೂಚಿಸುತ್ತಿದ್ದನೋ?

13 ಅನೇಕವೇಳೆ ಬೈಬಲ್‌ ಪ್ರವಾದನೆಗಳನ್ನು, ಅವು ನೆರವೇರಿದ ನಂತರ ಅಥವಾ ನೆರವೇರುತ್ತಿರುವಾಗ ಮಾತ್ರ ಪೂರ್ಣವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ಕಾರಣ ನಾವು ಕಾಯಬೇಕಾದ ಅಗತ್ಯವಿದೆ. ಆದರೆ ಆಸಕ್ತಿಕರವಾದ ವಿಷಯವೇನೆಂದರೆ, “ಸಮಾಧಾನವಾಗಿಯೂ ನಿರ್ಭಯವಾಗಿಯೂ” ಇದ್ದೇವೆಂಬ ಜನರ ಘೋಷಣೆಯನ್ನು ಹಿಂಬಾಲಿಸಿ ತಕ್ಷಣವೇ ಸಂಭವಿಸುವ ನಾಶನವನ್ನು ಪೌಲನು ಗರ್ಭಿಣಿಯ ಪ್ರಸವವೇದನೆಗೆ ಹೋಲಿಸಿದ್ದಾನೆ. ಸುಮಾರು ಒಂಬತ್ತು ತಿಂಗಳುಗಳ ಸಮಯಾವಧಿಯಲ್ಲಿ ತಾಯಿಯಾಗಲಿರುವವಳು ತನ್ನ ಬೆಳೆಯುತ್ತಿರುವ ಮಗುವಿನ ಬಗ್ಗೆ ಹೆಚ್ಚನ್ನು ತಿಳಿಯುತ್ತಾಳೆ. ತನ್ನ ಗರ್ಭದಲ್ಲಿರುವ ಮಗುವಿನ ಹೃದಯಬಡಿತವನ್ನು ಅವಳು ಆಲಿಸಬಲ್ಲಳು ಅಥವಾ ಅದರ ಚಲನೆಯನ್ನು ಅವಳು ಗ್ರಹಿಸಬಲ್ಲಳು. ಅದು ಒಂದುವೇಳೆ ಅವಳನ್ನು ಒದೆಯಬಹುದು. ಈ ರೀತಿಯ ಸೂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ, ಒಂದು ದಿನ ಅವಳಿಗೆ ಪ್ರಸವವೇದನೆಯಾಗುತ್ತದೆ ಮತ್ತು ನಿರೀಕ್ಷೆಯಿಂದ ಕಾಯುತ್ತಿದ್ದ ಆ ದಿನವು ಅಂದರೆ ಮಗುವಿನ ಜನನ ದಿನವು ಆಗಮಿಸುತ್ತದೆ. ಅಂತೆಯೇ, “ಸಮಾಧಾನವಾಗಿಯೂ ನಿರ್ಭಯವಾಗಿಯೂ” ಇದ್ದೇವೆ ಎಂಬ ಪ್ರವಾದಿಸಲ್ಪಟ್ಟ ಘೋಷಣೆಯು ಯಾವ ರೀತಿಯಲ್ಲಿ ನೆರವೇರಿದರೂ ಅದು ಕೂಡಲೆ ನೋವಿಗೆ ಕಾರಣವಾಗಿರುವುದಾದರು ಅಂತಿಮವಾಗಿ ಸಂತೋಷಕರ ಘಟನೆಗೆ ಅಂದರೆ ದುಷ್ಟತನದ ನಾಶನಕ್ಕೆ ಮತ್ತು ನೂತನ ಲೋಕ ವ್ಯವಸ್ಥೆಯ ಆರಂಭಕ್ಕೆ ದಾರಿಮಾಡಿಕೊಡುವುದು.

14 ಬರಲಿರುವ ನಾಶನವು, ವೀಕ್ಷಕರಾಗಿರುವ ನಂಬಿಗಸ್ತ ಕ್ರೈಸ್ತರಿಗೆ ಭಯಪ್ರೇರಕ ದಿನವಾಗಿರುತ್ತದೆ. ಮೊದಲಾಗಿ, ಭೂರಾಜರು (ಸೈತಾನನ ಸಂಸ್ಥೆಯ ರಾಜಕೀಯ ಭಾಗ) ಮಹಾ ಬಾಬೆಲಿನ (ಧಾರ್ಮಿಕ ಭಾಗ) ಬೆಂಬಲಿಗರನ್ನು ಆಕ್ರಮಿಸುವರು ಮತ್ತು ಅವರನ್ನು ನಾಶಮಾಡುವರು. (ಪ್ರಕಟನೆ 17:​1, 15-18) ಹೀಗೆ ಒಂದು ಆಶ್ಚರ್ಯಕರವಾದ ತಿರುವು ಸಂಭವಿಸಿ ಸೈತಾನನ ರಾಜ್ಯವು ತನ್ನಲ್ಲಿಯೇ ವಿಭಾಗವಾಗಿ, ಒಂದು ಭಾಗವು ಇನ್ನೊಂದನ್ನು ಆಕ್ರಮಿಸುವುದು ಮತ್ತು ಅದು ಸಂಭವಿಸುವಾಗ ಅದನ್ನು ತಡೆಯಲು ಸೈತಾನನು ನಿಶ್ಶಕ್ತನಾಗಿರುವನು. (ಮತ್ತಾಯ 12:​25, 26) ಯೆಹೋವನು ಭೂರಾಜರ ಹೃದಯದಲ್ಲಿ ‘ತನ್ನ ಅಭಿಪ್ರಾಯವನ್ನು ನೆರವೇರಿಸುವಂತೆ’ ಅಂದರೆ ತನ್ನ ಧಾರ್ಮಿಕ ವಿರೋಧಿಗಳನ್ನು ನಾಶಮಾಡುವಂತೆ ಆಲೋಚನೆಯನ್ನು ಹಾಕುವನು. ಸುಳ್ಳುಧರ್ಮವು ನಾಶವಾದ ಬಳಿಕ, ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ಸೇನೆಗಳೊಂದಿಗೆ ಬಂದು ಸೈತಾನನ ಸಂಸ್ಥೆಯಲ್ಲಿ ಉಳಿದಿರುವ ವಾಣಿಜ್ಯ ಮತ್ತು ರಾಜಕೀಯ ಭಾಗಗಳನ್ನು ನಾಶಮಾಡುವನು. ಅಂತಿಮವಾಗಿ, ಸೈತಾನನನ್ನು ನಿಷ್ಕ್ರಿಯ ಸ್ಥಿತಿಯಲ್ಲಿ ಬಂಧಿಸಲಾಗುವುದು. ಇದು ಸಂಭವಿಸುವಾಗ, ರಂಗಸ್ಥಳದ ಪರದೆಯು ಮುಚ್ಚಲ್ಪಡುವುದು, ಮತ್ತು ಬಹಳ ಕಾಲದಿಂದ ನಡೆಯುತ್ತಿದ್ದ ನಾಟಕವು ಅಂತ್ಯಗೊಳ್ಳುವುದು.​—⁠ಪ್ರಕಟನೆ 16:​14-16; 19:​11-21; 20:​1-3.

15 ಇವೆಲ್ಲವೂ ಯಾವಾಗ ಸಂಭವಿಸಲಿವೆ? ನಮಗೆ ಆ ದಿನವಾಗಲಿ ಗಳಿಗೆಯಾಗಲಿ ತಿಳಿದಿಲ್ಲ. (ಮತ್ತಾಯ 24:36) ಆದರೆ “ಉಳಿದಿರುವ ಸಮಯವು ಕೊಂಚವೇ ಆಗಿದೆ” ಎಂಬುದು ನಮಗೆ ತಿಳಿದಿದೆ. (1 ಕೊರಿಂಥ 7:​29, NW) ಆದುದರಿಂದ ಉಳಿದಿರುವ ಈ ಕೊಂಚ ಸಮಯವನ್ನು ವಿವೇಕಪ್ರದವಾಗಿ ಉಪಯೋಗಿಸುವುದು ಪ್ರಾಮುಖ್ಯವಾಗಿದೆ. ಹೇಗೆ? ಅಪೊಸ್ತಲ ಪೌಲನು ವಿವರಿಸಿದಂತೆ, ಅಪ್ರಾಮುಖ್ಯವಾದ ವಿಷಯಗಳಿಂದ ಸಮಯವನ್ನು ಖರೀದಿಸಿಕೊಂಡು ಪ್ರಾಮುಖ್ಯವಾದ ವಿಷಯಗಳಿಗಾಗಿ ‘ಕಾಲವನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಬೇಕು’ ಮತ್ತು ಪ್ರತಿದಿನವನ್ನು ಅಮೂಲ್ಯವಾದದ್ದಾಗಿ ಮಾಡಬೇಕು. ಇದಕ್ಕೆ ಕಾರಣ? “ಈ ದಿನಗಳು ಕೆಟ್ಟವುಗಳಾಗಿವೆ.” ಅಷ್ಟುಮಾತ್ರವಲ್ಲದೆ, ನಮಗಾಗಿ ‘ಯೆಹೋವನ ಚಿತ್ತವೇನೆಂಬುದನ್ನು ವಿಚಾರಿಸಿ ತಿಳಿಯುವ’ ಮೂಲಕ, ನಾವು ಉಳಿದಿರುವ ಅತ್ಯಮೂಲ್ಯವಾದ ಕೊಂಚ ಸಮಯವನ್ನು ಹಾಳುಮಾಡುವುದಿಲ್ಲ.​—⁠ಎಫೆಸ 5:​15-17; 1 ಪೇತ್ರ 4:​1-4.

16 ಇಡೀ ಲೋಕದ ವಿಷಯಗಳ ವ್ಯವಸ್ಥೆಗೆ ಅಂತ್ಯವು ಬರಲಿದೆ ಎಂಬುದನ್ನು ತಿಳಿದವರಾಗಿರುವುದು, ನಮ್ಮನ್ನು ವೈಯಕ್ತಿಕವಾಗಿ ಹೇಗೆ ಪ್ರಭಾವಿಸಬೇಕು? ಅಪೊಸ್ತಲ ಪೇತ್ರನು ನಮ್ಮ ಪ್ರಯೋಜನಾರ್ಥವಾಗಿ ಬರೆದದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11) ನಿಶ್ಚಯವಾಗಿಯೂ ನಾವೂ ಈ ರೀತಿಯ ವ್ಯಕ್ತಿಗಳಾಗಿರಬೇಕು! ಪೇತ್ರನ ವಿವೇಕಯುತ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ, ನಾವು (1) ನಮ್ಮ ನಡತೆಯು ಪರಿಶುದ್ಧವಾಗಿದೆಯೋ ಎಂದು ಯಾವಾಗಲೂ ಪರೀಕ್ಷಿಸುತ್ತಿರಬೇಕು, ಮತ್ತು (2) ಯೆಹೋವನ ಸೇವೆಯಲ್ಲಿನ ನಮ್ಮ ಹುರುಪಿನ ಕಾರ್ಯಗಳು ಆತನೆಡೆಗಿರುವ ನಮ್ಮ ಆಳವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

17 ದೇವರಿಗಾಗಿ ನಮಗಿರುವ ಪ್ರೀತಿಯು ಲೋಕದ ಆಕರ್ಷಣೆಗಳ ಕಾರಣ ಅದಕ್ಕೆ ಅಂಟಿಕೊಳ್ಳುವುದರಿಂದ ನಮ್ಮನ್ನು ತಡೆಯುವುದು. ಸದ್ಯದ ವಿಷಯಗಳ ವ್ಯವಸ್ಥೆಗೆ ಏನು ಕಾದಿದೆ ಎಂಬುದನ್ನು ನೋಡುವಾಗ, ಲೋಕದ ಭೋಗಾಸಕ್ತಿಯ ಜೀವನ ಮಾರ್ಗದ ಹೊಳಪು ಮತ್ತು ಬೆಡಗಿನಿಂದ ನಾವು ಮೋಹಿತರಾಗುವುದು ನಮಗೆ ಅಪಾಯಕಾರಿಯಾಗಿದೆ. ಈ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ ಮತ್ತು ಕೆಲಸಮಾಡುತ್ತಿದ್ದೇವಾದರೂ, ಅದನ್ನು ಪರಿಪೂರ್ಣವಾಗಿ ಅನುಭೋಗಿಸಬಾರದೆಂಬ ವಿವೇಕಯುತ ಬುದ್ಧಿವಾದಕ್ಕೆ ನಾವು ಕಿವಿಗೊಡಬೇಕು. (1 ಕೊರಿಂಥ 7:31) ವಾಸ್ತವದಲ್ಲಿ, ಲೋಕದ ಅಪಪ್ರಚಾರಗಳಿಂದ ನಾವು ಮೋಸಹೋಗದಂತೆ ನೋಡಿಕೊಳ್ಳಲು ನಮ್ಮಿಂದಾದುದ್ದೆಲ್ಲವನ್ನೂ ನಾವು ಮಾಡಬೇಕು. ಈ ಲೋಕವು, ಅದರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದರಲ್ಲಿ ಯಶಸ್ಸನ್ನು ಕಾಣುವುದಿಲ್ಲ. ಅದು ತನ್ನನ್ನು ಸದಾ ಕಾಪಾಡಿಕೊಳ್ಳಲು ಶಕ್ತವಾಗಿರುವುದಿಲ್ಲ. ನಾವೇಕೆ ಅಷ್ಟು ಖಾತ್ರಿಯಿಂದ ಇದನ್ನು ಹೇಳಬಲ್ಲೆವು? ಏಕೆಂದರೆ ದೇವರ ಪ್ರೇರಿತ ವಾಕ್ಯವು ಹೇಳುವುದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”​—⁠1 ಯೋಹಾನ 2:17.

ಅತ್ಯುತ್ತಮವಾದವುಗಳು ಮುಂದಕ್ಕೆ ಬರಲಿವೆ

18 ಸೈತಾನನಿಗೂ ಅವನ ಬೆಂಬಲಿಗರಿಗೂ ಯೆಹೋವನು ಬೇಗನೆ ಅಂತ್ಯವನ್ನು ತರಲಿದ್ದಾನೆ. ನಂತರ, ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಿ ಉಳಿದ ನಂಬಿಗಸ್ತರು ದೇವರ ಆಶೀರ್ವಾದದೊಂದಿಗೆ ನಿತ್ಯ ನಿರಂತರವೂ ಇರುವ ಲೋಕದ ಬದಲಾದ “ದೃಶ್ಯ”ದಲ್ಲಿ ಕೆಲಸಮಾಡಲಾರಂಭಿಸುವರು. ಮುಂದೆಂದೂ ಯುದ್ಧವು ಈ ಲೋಕವನ್ನು ಹಾಳುಗೆಡವುದಿಲ್ಲ; ದೇವರು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ”ಬಿಡುವನು. (ಕೀರ್ತನೆ 46:⁠9) ಕ್ಷಾಮದ ಬದಲಾಗಿ, ‘ದೇಶದಲ್ಲಿ ಬೆಳೆಯು ಸಮೃದ್ಧಿಯಾಗುವುದು; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರುವುದು’ (ಕೀರ್ತನೆ 72:16) ಸೆರೆಮನೆಗಳು, ಪೊಲೀಸ್‌ ಠಾಣೆಗಳು, ಲೈಂಗಿಕವಾಗಿ ಹರಡುವ ರೋಗಗಳು, ಅಮಲೌಷಧ ವ್ಯಾಪಾರಿಗಳು, ವಿವಾಹವಿಚ್ಛೇದ ಕೋರ್ಟ್‌ಗಳು, ದಿವಾಳಿತನದ ಪದ್ಧತಿಗಳು, ಮತ್ತು ಭಯೋತ್ಪಾದನೆ ಈ ಮುಂತಾದ ವಿಷಯಗಳು ಇಲ್ಲದೆ ಹೋಗಲಿವೆ.​—⁠ಕೀರ್ತನೆ 37:29; ಯೆಶಾಯ 33:24; ಪ್ರಕಟನೆ 21:​3-5.

19 ಜ್ಞಾಪಕದ ಸಮಾಧಿಗಳು ಬರಿದಾಗುವವು, ಮತ್ತು ಕೋಟ್ಯಂತರ ಜನರು ಪುನರುತ್ಥಾನಗೊಳ್ಳುವರು. ಇದರ ಅರ್ಥ, ಹೆಚ್ಚಿನ ಪಾತ್ರಧಾರಿಗಳು ಕಂಡುಬರುವರು. ಒಂದು ಸಂತತಿಯು ಇನ್ನೊಂದು ಸಂತತಿಯೊಂದಿಗೆ ಒಟ್ಟುಸೇರುವಾಗ ಮತ್ತು ದೀರ್ಘಕಾಲದಿಂದ ಅಗಲಿರುವ ಪ್ರಿಯ ಜನರು ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳುವಾಗ ಎಂಥ ಆನಂದದ ಸಮಯ ಅದಾಗಿರುವುದು! ಕ್ರಮೇಣ, ಜೀವಿಸುವವರೆಲ್ಲರೂ ಯೆಹೋವನನ್ನು ಆರಾಧಿಸುವರು. (ಪ್ರಕಟನೆ 5:13) ಬದಲಾವಣೆಗಳು ಸಂಪೂರ್ಣಗೊಂಡಾಗ ಪುನಃ ವೇದಿಕೆಯ ಪರದೆಯು ಮೇಲೆತ್ತಲ್ಪಟ್ಟು ಭೂವ್ಯಾಪಕವಾದ ಪರದೈಸನ್ನು ತೋರಿಸುವುದು. ಈ ಎಲ್ಲಾ ವಿಷಯವನ್ನು ನೀವು ವೀಕ್ಷಿಸುವಾಗ ನಿಮಗೆ ಹೇಗನಿಸಬಹುದು? ಖಂಡಿತವಾಗಿಯೂ ನೀವು ಹೀಗೆ ಹೇಳುವಿರಿ: ‘ದೀರ್ಘಕಾಲದಿಂದ ನಾನು ಈ ಸಮಯಕ್ಕಾಗಿ ಕಾಯುತ್ತಿದ್ದೆ, ನಾನು ಕಾದದ್ದು ಸಾರ್ಥಕ!’

[ಪಾದಟಿಪ್ಪಣಿಗಳು]

^ ಪ್ಯಾರ. 6 ವಿಭಿನ್ನ ಸನ್ನಿವೇಶದಲ್ಲಿ, ಪೌಲನು ಅಭಿಷಿಕ್ತ ಕ್ರೈಸ್ತರನ್ನು “ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟ”ವಾಗಿರುವವರು ಎಂದು ತಿಳಿಸಿದ್ದಾನೆ.​—⁠1 ಕೊರಿಂಥ 4:⁠9.

^ ಪ್ಯಾರ. 6 ಉದಾಹರಣೆಗೆ, ದಾನಿಯೇಲ 11:​40, 44, 45ರಲ್ಲಿ ತಿಳಿಸಲಾಗಿರುವ “ಉತ್ತರರಾಜನ” ಗುರುತನ್ನು ತಿಳಿದುಕೊಳ್ಳಲು, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಪುಟ 280-1ನ್ನು ನೋಡಿರಿ.

^ ಪ್ಯಾರ. 9 ದೇಶಭ್ರಷ್ಟರಾಗಿ ಒಯ್ಯಲ್ಪಟ್ಟ ಯೆಹೂದ್ಯರು ಸಾ.ಶ.ಪೂ. 537ರಲ್ಲಿ ಯೆರೂಸಲೇಮಿಗೆ ಪುನಃ ಹಿಂದಿರುಗುವುದಕ್ಕೆ ಮುಂಚೆ ಯೆರೂಸಲೇಮ್‌ 70 ವರುಷಗಳ ವರೆಗೆ ಹಾಳುಬಿದ್ದಿತ್ತೆಂದು ಬೈಬಲ್‌ ತಾನೇ ಸೂಚಿಸುತ್ತದೆ. (ಯೆರೆಮೀಯ 25:​11, 12; ದಾನಿಯೇಲ 9:​1-3) ‘ಅನ್ಯದೇಶದವರ ಸಮಯಗಳ’ ಕುರಿತಾದ ಹೆಚ್ಚಿನ ಸವಿಸ್ತಾರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಶಾಸ್ತ್ರಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದ ಪುಟ 95-7ನ್ನು ನೋಡಿ.

ನೀವು ಹೇಗೆ ಉತ್ತರಿಸುವಿರಿ?

• “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂಬ ಅಪೊಸ್ತಲ ಪೌಲನ ಮಾತುಗಳು ನಮ್ಮ ದಿನಗಳಲ್ಲಿ ನಿಜವೆಂದು ಹೇಗೆ ರುಜುವಾಗುತ್ತಿವೆ?

• ಬೈಬಲ್‌ ಕಾಲಗಣನೆಯು, ‘ಅನ್ಯದೇಶದವರ ಸಮಯಗಳ’ ಅಂತ್ಯವನ್ನು ಹೇಗೆ ಗುರುತಿಸುತ್ತದೆ?

• ಇಸವಿ 1914 “ಅಂತ್ಯಕಾಲಗಳ” ಆರಂಭ ಎಂಬುದನ್ನು ಬದಲಾಗುತ್ತಿರುವ ಲೋಕ ಪರಿಸ್ಥಿತಿಗಳು ಹೇಗೆ ರುಜುಪಡಿಸುತ್ತವೆ?

• “ಉಳಿದಿರುವ ಸಮಯವು ಕೊಂಚವೇ ಆಗಿದೆ” ಎಂಬ ವಾಸ್ತವಾಂಶವು ನಮ್ಮನ್ನು ಹೇಗೆ ಪ್ರಭಾವಿಸಬೇಕು?

[ಅಧ್ಯಯನ ಪ್ರಶ್ನೆಗಳು]

1, 2. ನಿಮ್ಮ ಜೀವಮಾನದಲ್ಲಿ ನೀವು ಯಾವ ಬದಲಾವಣೆಗಳನ್ನು ನೋಡಿದ್ದೀರಿ?

3. “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂದು ಪೌಲನು ಬರೆದಾಗ ಅವನು ಏನನ್ನು ಅರ್ಥೈಸಿದನು?

4. (ಎ) ಲೋಕ ಘಟನೆಗಳ ಕುರಿತು ಯಾವ ಸಮತೋಲನದ ದೃಷ್ಟಿಕೋನವನ್ನು ಕ್ರೈಸ್ತರು ಹೊಂದಿರುವ ಅಗತ್ಯವಿದೆ? (ಬಿ) ಮನಗಾಣಿಸುವ ಯಾವ ಎರಡು ರೀತಿಯ ಪುರಾವೆಗಳನ್ನು ನಾವೀಗ ಪರೀಕ್ಷಿಸಲಿದ್ದೇವೆ?

5. “ಅನ್ಯದೇಶದವರ ಸಮಯಗಳು” ಯಾವವು, ಮತ್ತು ಅವು ನಮಗೆ ಏಕೆ ಆಸಕ್ತಿಯ ವಿಷಯವಾಗಿವೆ?

6. “ಅನ್ಯದೇಶದವರ ಸಮಯಗಳು” ಯಾವಾಗ ಆರಂಭಗೊಂಡವು, ಅವು ಎಷ್ಟು ಕಾಲಾವಧಿಯ ವರೆಗೆ ಉಳಿದವು, ಮತ್ತು ಅವು ಯಾವಾಗ ಅಂತ್ಯಗೊಂಡವು?

7. ದಾನಿಯೇಲ ಪುಸ್ತಕದಲ್ಲಿ ಸೂಚಿಸಲಾದ ಏಳು ಕಾಲಗಳ ಆರಂಭ, ಸಮಯಾವಧಿ, ಮತ್ತು ಅಂತ್ಯವನ್ನು ಗುರುತಿಸಲು ನಮಗೆ ಯಾವ ಶಾಸ್ತ್ರವಚನಗಳು ಸಹಾಯಮಾಡುತ್ತವೆ?

8. ಇಸವಿ 1914ರಿಂದ ಲೋಕದ ಪರಿಸ್ಥಿತಿಯು ತೀರ ಅವನತಿಗೊಂಡಿದೆ ಎಂಬುದಕ್ಕೆ ಯಾವ ಪುರಾವೆಯನ್ನು ನೀವು ನೀಡಬಲ್ಲಿರಿ?

9. ಇಸವಿ 1914ರಿಂದ ಸಂಭವಿಸುತ್ತಿರುವ ಲೋಕ ಪರಿಸ್ಥಿತಿಗಳ ಕುರಿತು ಪ್ರೇಕ್ಷಕರು ಏನನ್ನುತ್ತಾರೆ?

10. ಇಸವಿ 1914ರಿಂದ ಅವನತಿಗಿಳಿಯುತ್ತಿರುವ ಲೋಕ ಪರಿಸ್ಥಿತಿಗಳಿಗೆ ಯಾರು ಹೊಣೆಗಾರನಾಗಿದ್ದಾನೆ ಎಂಬುದರ ಕುರಿತು ಬೈಬಲ್‌ ನಮಗೆ ಹೇಗೆ ತಿಳಿವಳಿಕೆಯನ್ನು ಮೂಡಿಸುತ್ತದೆ?

11. (ಎ) “ಭೂಲೋಕದವರನ್ನೆಲ್ಲಾ” ಮರುಳುಗೊಳಿಸಲು ಸೈತಾನನು ಯಾವ ವಿಧಾನಗಳನ್ನು ಉಪಯೋಗಿಸುತ್ತಾನೆ? (ಬಿ) ಸೈತಾನನ ಯಾವ ವಿಶೇಷ ಪ್ರಯತ್ನದ ಕಡೆಗೆ ಅಪೊಸ್ತಲ ಪೌಲನು ನಮ್ಮ ಗಮನವನ್ನು ಸೆಳೆಯುತ್ತಾನೆ?

12. ನಮ್ಮ ಸಮಯದಲ್ಲಿ ಶಾಂತಿಯನ್ನು ಸ್ಥಾಪಿಸಲು ಯಾವ ಪ್ರಯತ್ನಗಳು ಮಾಡಲ್ಪಡುತ್ತಿವೆ?

13. “ಸಮಾಧಾನವಾಗಿಯೂ ನಿರ್ಭಯವಾಗಿಯೂ” ಇದ್ದೇವೆ ಎಂಬ ಘೋಷಣೆಯನ್ನು ಪೌಲನು ಮುನ್‌ತಿಳಿಸಿದಾಗ, ಹಿಂಬಾಲಿಸಿ ಬರುವ ನಾಶನವನ್ನು ಅವನು ಯಾವುದಕ್ಕೆ ಹೋಲಿಸಿದನು, ಮತ್ತು ಇದರಿಂದ ನಾವೇನನ್ನು ಕಲಿಯಬಲ್ಲೆವು?

14. ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ಘಟನೆಗಳು ಯಾವ ಅನುಕ್ರಮದಲ್ಲಿ ಸಂಭವಿಸಲಿವೆ, ಮತ್ತು ಯಾವ ಫಲಿತಾಂಶದೊಂದಿಗೆ?

15, 16. “ಉಳಿದಿರುವ ಸಮಯವು ಕೊಂಚವೇ ಆಗಿದೆ” ಎಂಬ ಜ್ಞಾಪನವು ನಮ್ಮ ಜೀವನದ ಮೇಲೆ ಯಾವ ಪ್ರಭಾವವನ್ನು ಬೀರಬೇಕು?

17. ಸೈತಾನನ ಯಾವ ತಂತ್ರೋಪಾಯಗಳ ವಿರುದ್ಧ ನಂಬಿಗಸ್ತ ಕ್ರೈಸ್ತರು ಎಚ್ಚರಿಕೆಯಿಂದಿರಬೇಕು?

18, 19. ನೂತನ ಲೋಕದಲ್ಲಿ ನೀವು ಯಾವ ಬದಲಾವಣೆಗಳಿಗಾಗಿ ಎದುರುನೋಡುತ್ತಿದ್ದೀರಿ, ಮತ್ತು ಆ ಕಾಯುವಿಕೆಯು ಸಾರ್ಥಕವಾದದ್ದಾಗಿದೆ ಏಕೆ?

[ಪುಟ 20ರಲ್ಲಿರುವ ಚಿತ್ರ]

ಕಟ್ಟಕಡೆಗೆ​—⁠ರಹಸ್ಯವು ಬಗೆಹರಿಸಲ್ಪಡುತ್ತದೆ!