ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಪ್ರಾಮಾಣಿಕ ಮನಸ್ಸಾಕ್ಷಿ

ಒಂದು ಪ್ರಾಮಾಣಿಕ ಮನಸ್ಸಾಕ್ಷಿ

ಒಂದು ಪ್ರಾಮಾಣಿಕ ಮನಸ್ಸಾಕ್ಷಿ

ಕೆನ್ಯದ ವಿಶ್ವವಿದ್ಯಾನಿಲಯವೊಂದರಲ್ಲಿ ಕೆಲಸಮಾಡುತ್ತಿರುವ ಚಾರ್ಲ್ಸ್‌ ಒಂದು ದಿನ ಕೆಲಸದಿಂದ ಮನೆಗೆ ಪ್ರಯಾಣಿಸುತ್ತಿರುವಾಗ ತನ್ನ ಸೆಲ್ಯುಲರ್‌ ಫೋನ್‌ ಅನ್ನು ಕಳೆದುಕೊಂಡನು. ಕೆನ್ಯದಲ್ಲಿ ಸೆಲ್ಯುಲರ್‌ ಫೋನ್‌ ಈಗಲೂ ಒಂದು ದುಬಾರಿಯಾದ ಭೋಗವಸ್ತುವಾಗಿದೆ.

“ಯಾರಾದರೂ ಅದನ್ನು ಹಿಂದಿರುಗಿಸುವರೆಂದು ನಾನು ನಿರೀಕ್ಷಿಸಲೇ ಇಲ್ಲ,” ಎಂದು ಚಾರ್ಲ್ಸ್‌ ಹೇಳಿದನು. ಹಾಗಿದ್ದರೂ, ಕೆಲವು ದಿನಗಳ ನಂತರ ಕೆನ್ಯದಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಿಂದ ಅವನು ಒಂದು ಫೋನ್‌ ಕರೆಯನ್ನು ಪಡೆಕೊಂಡಾಗ ಅವನಿಗೆ ಅತ್ಯಾಶ್ಚರ್ಯವಾಯಿತು. ಅಲ್ಲಿಗೆ ಬಂದು, ಅವನ ಸೆಲ್‌ ಫೋನ್‌ ಅನ್ನು ತೆಗೆದುಕೊಂಡು ಹೋಗುವಂತೆ ಅವರು ತಿಳಿಸಿದಾಗ ಅವನಿಗೆ ತಾನು ಕೇಳಿಸಿಕೊಳ್ಳುತ್ತಿದ್ದ ಮಾತನ್ನು ನಂಬುವುದೂ ಅಸಾಧ್ಯವೆಂದೆಣಿಸಿತು! ನಡೆದ ಸಂಗತಿಯೇನೆಂದರೆ, ಚಾರ್ಲ್ಸ್‌ ಪ್ರಯಾಣಿಸುತ್ತಿದ್ದ ಅದೇ ವಾಹನದಲ್ಲಿ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನೊಬ್ಬನು ಪ್ರಯಾಣಿಸುತ್ತಿದ್ದನು ಮತ್ತು ಅವನಿಗೆ ಚಾರ್ಲ್ಸ್‌ನ ಫೋನ್‌ ಸಿಕ್ಕಿತು. ಫೋನ್‌ನ ಮಾಲೀಕನನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಆ ಶುಶ್ರೂಷಕನು ಫೋನ್‌ ಅನ್ನು ಬ್ರಾಂಚ್‌ ಆಫೀಸಿಗೆ ಕೊಂಡೊಯ್ದನು ಮತ್ತು ಅಲ್ಲಿ ಕೆಲಸಮಾಡುತ್ತಿರುವ ಸ್ವಯಂಸೇವಕರು ಫೋನಿನಲ್ಲಿ ಕಂಡುಬಂದ ನಂಬರ್‌ ಅನ್ನು ಪತ್ತೆಹಚ್ಚುವ ಮೂಲಕ ಕ್ರಮೇಣ ಚಾರ್ಲ್ಸ್‌ ಅನ್ನು ಕಂಡುಹಿಡಿದರು.

“ನನ್ನನ್ನು ಸಂಪರ್ಕಿಸಲು ಬಹಳಷ್ಟು ಕಷ್ಟಪಡಬೇಕಾದ ಹೊರತಾಗಿಯೂ ನೀವು ಮಾಡಿದ ಪ್ರಯತ್ನಗಳಿಗಾಗಿ ನಾನು ಬಹಳ ಆಭಾರಿಯಾಗಿದ್ದೇನೆ. ಸೆಲ್‌ ಫೋನ್‌ ಅನ್ನು ಕಂಡುಕೊಂಡು, ನನ್ನನ್ನು ಪತ್ತೆಹಚ್ಚಿ ಅದನ್ನು ಹಿಂದಿರುಗಿಸಿದ ನಿಮ್ಮ ಸಂಸ್ಥೆಯ ಸದಸ್ಯರಿಗೆ ನಾನು ಹೃದಯಾಳದಿಂದ ಉಪಕಾರ ಸಲ್ಲಿಸುತ್ತೇನೆ. ಇಂದಿನ ಸಮಯದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಕಂಡುಕೊಳ್ಳುವುದು ಸುಲಭವಲ್ಲ, ಆದರೆ ಈಗಲೂ ನಮ್ಮ ಮಧ್ಯೆ ಯೆಹೋವ ದೇವರ ಸತ್ಯ ಸಾಕ್ಷಿಗಳಾಗಿ ಎದ್ದುಕಾಣುವ ಕೆಲವು ಪ್ರಾಮಾಣಿಕ ವ್ಯಕ್ತಿಗಳಿದ್ದಾರೆ ಎಂಬುದು ಉತ್ತೇಜನದಾಯಕ ವಿಷಯವಾಗಿದೆ,” ಎಂಬುದಾಗಿ ಚಾರ್ಲ್ಸ್‌ ಬ್ರಾಂಚ್‌ ಆಫೀಸಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾನೆ.

ಎಲ್ಲಾ ಕಡೆಗಳಲ್ಲಿರುವ ಯೆಹೋವನ ಸಾಕ್ಷಿಗಳು ತಮ್ಮ ಪ್ರಾಮಾಣಿಕತೆಗೆ ಪ್ರಖ್ಯಾತರಾಗಿದ್ದಾರೆ. “ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಪ್ರಾಮಾಣಿಕ ಮನಸ್ಸಾಕ್ಷಿಯನ್ನು ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ” ಎಂದು ಹೇಳಿದ ಅಪೊಸ್ತಲ ಪೌಲನನ್ನು ಅವರು ಅನುಕರಿಸುತ್ತಾರೆ. (ಇಬ್ರಿಯ 13:​18, NW; 1 ಕೊರಿಂಥ 11:⁠1) “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” ಎಂದು ಯೇಸು ಹೇಳಿದಂತೆ, ಅಂಥ ನಡತೆಯು ಯೆಹೋವ ದೇವರಿಗೆ ಘನತೆಯನ್ನು ತರುತ್ತದೆ ಎಂಬುದನ್ನು ಅವರು ಗಣ್ಯಮಾಡುತ್ತಾರೆ.​—⁠ಮತ್ತಾಯ 5:16.