ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಒದಗಿಸುತ್ತಾನೆ

ಯೆಹೋವನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಒದಗಿಸುತ್ತಾನೆ

ಯೆಹೋವನು ನಮ್ಮ ದೈನಂದಿನ ಆವಶ್ಯಕತೆಗಳನ್ನು ಒದಗಿಸುತ್ತಾನೆ

“ತವಕಪಡಬೇಡಿರಿ, ಮತ್ತು ಅನುಮಾನ ಪಡಬೇಡಿರಿ. . . . ಇವು ನಿಮಗೆ ಅವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.”​—⁠ಲೂಕ 12:​29, 30.

ತನ್ನ ಕೊಕ್ಕಿನಿಂದ ಕೇವಲ ಕಸವೆಂದು ತೋರುತ್ತಿರುವುದನ್ನು ಕುಕ್ಕುತ್ತಿರುವ ಒಂದು ಗುಬ್ಬಿ ಅಥವಾ ಬೇರೊಂದು ಹಕ್ಕಿಯನ್ನು ನೀವು ಎಂದಾದರೂ ಗಮನಿಸಿದ್ದೀರೋ? ನೆಲವನ್ನು ಕುಕ್ಕುವ ಮೂಲಕ ಅದಕ್ಕೆ ತಿನ್ನಲು ಏನು ಸಿಗಸಾಧ್ಯವಿದೆ ಎಂದು ಒಂದುವೇಳೆ ನೀವು ಭಾವಿಸಿದ್ದಿರಬಹುದು. ಯೇಸು ತನ್ನ ಪರ್ವತ ಪ್ರಸಂಗದಲ್ಲಿ, ಹಕ್ಕಿಗಳನ್ನು ಯೆಹೋವನು ಸಾಕಿ ಸಲಹುವ ವಿಧದಿಂದ ನಾವು ಒಂದು ಪಾಠವನ್ನು ಕಲಿಯಬಲ್ಲೆವು ಎಂಬುದನ್ನು ತೋರಿಸಿಕೊಟ್ಟನು. ಅವನು ಹೇಳಿದ್ದು: “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” (ಮತ್ತಾಯ 6:26) ಅದ್ಭುತಕರವಾದ ವಿಧಗಳಲ್ಲಿ ಯೆಹೋವನು ತನ್ನ ಎಲ್ಲಾ ಸೃಷ್ಟಿಜೀವಿಗಳಿಗೆ ಆಹಾರವನ್ನು ಒದಗಿಸುತ್ತಾನೆ.​—⁠ಕೀರ್ತನೆ 104:​14, 21; 147:⁠9.

2 ಹಾಗಾದರೆ ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು” ಎಂಬ ಬಿನ್ನಹವನ್ನು ಏಕೆ ಸೇರಿಸಿದನು? (ಮತ್ತಾಯ 6:11) ಈ ಸರಳವಾದ ಬಿನ್ನಹದಿಂದ ಆಳವಾದ ಆತ್ಮಿಕ ಪಾಠಗಳನ್ನು ಕಲಿಯಸಾಧ್ಯವಿದೆ. ಮೊದಲಾಗಿ, ಯೆಹೋವನು ಮಹಾ ಒದಗಿಸುವಾತನಾಗಿದ್ದಾನೆ ಎಂಬ ವಿಷಯವನ್ನು ಇದು ನಮ್ಮ ನೆನಪಿಗೆ ತರುತ್ತದೆ. (ಕೀರ್ತನೆ 145:​15, 16) ಮಾನವರಿಂದ ಕೇವಲ ನೆಡಲು ಮತ್ತು ಪೋಷಿಸಲು ಸಾಧ್ಯವಿದೆ, ಆದರೆ ಬೆಳೆಯುವಂತೆ ಮಾಡಬಲ್ಲವನು ಕೇವಲ ದೇವರೇ ಆಗಿದ್ದಾನೆ. ಆತ್ಮಿಕವಾಗಿಯೂ ಶಾರೀರಿಕವಾಗಿಯೂ ಇದು ಸತ್ಯವಾಗಿದೆ. (1 ಕೊರಿಂಥ 3:⁠7) ನಾವು ಏನನ್ನು ಕುಡಿಯುತ್ತೇವೋ ಮತ್ತು ಏನನ್ನು ತಿನ್ನುತ್ತೇವೋ ಅದೆಲ್ಲವೂ ದೇವರ ಉಡುಗೊರೆಗಳಾಗಿವೆ. (ಅ. ಕೃತ್ಯಗಳು 14:17) ನಮ್ಮ ಅನುದಿನದ ಆಹಾರಕ್ಕಾಗಿ ಆತನಲ್ಲಿ ಕೇಳಿಕೊಳ್ಳುವುದು, ಆತನ ಒದಗಿಸುವಿಕೆಗಳನ್ನು ನಾವು ತೀರ ಹಗುರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ. ಹಾಗಿದ್ದರೂ ಅಂಥ ಬಿನ್ನಹವು, ಕೆಲಸಮಾಡುವ ನಮ್ಮ ಜವಾಬ್ದಾರಿಯಿಂದ​—⁠ನಮಗೆ ಕೆಲಸಮಾಡಸಾಧ್ಯವಿರುವಲ್ಲಿ​—⁠ನಮ್ಮನ್ನು ಬಿಡುಗಡೆಮಾಡುವುದಿಲ್ಲ.​—⁠ಎಫೆಸ 4:28; 2 ಥೆಸಲೋನಿಕ 3:10.

3 ಎರಡನೆಯದಾಗಿ, “ಅನುದಿನದ ಆಹಾರ”ಕ್ಕಾಗಿನ ನಮ್ಮ ಬಿನ್ನಹವು ಭವಿಷ್ಯತ್ತಿನ ಕುರಿತು ನಾವು ಅತಿಯಾಗಿ ಚಿಂತಿಸಬಾರದು ಎಂಬುದನ್ನು ಸೂಚಿಸುತ್ತದೆ. ಏಕೆಂದರೆ ಯೇಸು ಕೂಡಿಸಿ ಹೇಳಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. ಆದದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” (ಮತ್ತಾಯ 6:​31-34) “ಅನುದಿನದ ಆಹಾರ”ಕ್ಕಾಗಿನ ಪ್ರಾರ್ಥನೆಯು, “ಸಂತುಷ್ಟಿ ಸಹಿತವಾದ ಭಕ್ತಿ”ಯ ಸರಳ ಜೀವನವನ್ನು ನಡೆಸಲು ಒಂದು ಮಾದರಿಯನ್ನಿಡುತ್ತದೆ.​—⁠1 ತಿಮೊಥೆಯ 6:​6-8.

ಅನುದಿನದ ಆತ್ಮಿಕ ಆಹಾರ

4 ಅನುದಿನದ ಆಹಾರಕ್ಕಾಗಿನ ನಮ್ಮ ಪ್ರಾರ್ಥನೆಯು, ನಮಗೆ ಅನುದಿನದ ಆತ್ಮಿಕ ಆಹಾರದ ಅಗತ್ಯವಿದೆ ಎಂಬುದನ್ನು ಸಹ ನೆನಪಿಸಬೇಕು. ದೀರ್ಘಕಾಲದ ಉಪವಾಸದ ನಂತರ ಬಹಳ ಹಸಿದಿದ್ದರೂ, ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಲು ಸೈತಾನನು ತಂದ ಶೋಧನೆಯನ್ನು ಯೇಸು ಪ್ರತಿಭಟಿಸಿದನು. ಅವನಂದದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ಇಲ್ಲಿ ಯೇಸು, ಮೋಶೆಯು ಇಸ್ರಾಯೇಲ್ಯರಿಗೆ ಹೇಳಿದ ಈ ಮಾತುಗಳನ್ನು ಉಲ್ಲೇಖಿಸಿದನು: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆಂಬದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಹಸಿವೆಯಿಂದ ಬಳಲಿಸಿ ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು.” (ಧರ್ಮೋಪದೇಶಕಾಂಡ 8:3) ಯೆಹೋವನು ಮನ್ನವನ್ನು ಒದಗಿಸಿದ ವಿಧವು, ಇಸ್ರಾಯೇಲ್ಯರಿಗೆ ಶಾರೀರಿಕ ಆಹಾರವನ್ನು ಮಾತ್ರವಲ್ಲ ಆತ್ಮಿಕ ಪಾಠಗಳನ್ನೂ ಒದಗಿಸಿತು. ಇದರಲ್ಲಿ ಒಂದು ಆತ್ಮಿಕ ಪಾಠವೇನೆಂದರೆ, ಅವರು ‘ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕಿತ್ತು.’ ಒಂದುವೇಳೆ ಅವರು ಅದಕ್ಕಿಂತ ಹೆಚ್ಚನ್ನು ಕೂಡಿಸಿದರೆ, ಉಳಿದಿರುವುದು ಹುಳಬಿದ್ದು ನಾತಹಿಡಿದು ಕೆಟ್ಟುಹೋಗುತ್ತಿತ್ತು. (ವಿಮೋಚನಕಾಂಡ 16:​4, 20) ಆದರೆ, ಸಬ್ಬತ್‌ ದಿನದ ಅವರ ಆವಶ್ಯಕತೆಯನ್ನು ಪೂರೈಸಲು ಆರನೆಯ ದಿನದಲ್ಲಿ ಪ್ರತಿದಿನ ಕೂಡಿಸಿಕೊಂಡದ್ದಕ್ಕಿಂತ ಎರಡರಷ್ಟು ಕೂಡಿಸುತ್ತಿದ್ದರೂ ಅದು ಹುಳಬಿದ್ದು ನಾತಹಿಡಿದು ಕೆಟ್ಟುಹೋಗುತ್ತಿರಲಿಲ್ಲ. (ವಿಮೋಚನಕಾಂಡ 16:​5, 23, 24) ಆದುದರಿಂದ ಮನ್ನವು, ಅವರು ವಿಧೇಯರಾಗಿರಲೇಬೇಕೆಂಬುದನ್ನೂ ಅವರ ಜೀವನವು ಕೇವಲ ಶಾರೀರಿಕ ಆಹಾರದ ಮೇಲಲ್ಲ ಬದಲಾಗಿ ‘ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನ’ ಮೇಲೆ ಅವಲಂಬಿಸಿದೆ ಎಂಬುದನ್ನೂ ಅವರ ಮನಸ್ಸಿನಲ್ಲಿ ಅಚ್ಚೊತ್ತಿತು.

5 ತದ್ರೀತಿಯಲ್ಲಿ ನಾವು ಸಹ, ಯೆಹೋವನು ತನ್ನ ಮಗನ ಮೂಲಕ ಒದಗಿಸುವ ಆತ್ಮಿಕ ಆಹಾರವನ್ನು ಅನುದಿನವೂ ಸೇವಿಸುವ ಅಗತ್ಯವಿದೆ. ಆದುದರಿಂದಲೇ, ನಂಬಿಕೆಯುಳ್ಳ ಮನೆವಾರ್ತೆಗೆ ‘ಹೊತ್ತುಹೊತ್ತಿಗೆ ಆಹಾರವನ್ನು ಕೊಡಲಿಕ್ಕಾಗಿ’ ಯೇಸು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ನೇಮಿಸಿದ್ದಾನೆ. (ಮತ್ತಾಯ 24:45) ಆ ನಂಬಿಗಸ್ತ ಆಳು ವರ್ಗವು, ಬೈಬಲ್‌ ಅಧ್ಯಯನ ಸಹಾಯಕಗಳ ರೂಪದಲ್ಲಿ ಹೇರಳವಾದ ಆತ್ಮಿಕ ಆಹಾರವನ್ನು ಒದಗಿಸುವುದು ಮಾತ್ರವಲ್ಲದೆ, ಬೈಬಲನ್ನು ಪ್ರತಿದಿನವೂ ಓದುವಂತೆ ನಮ್ಮನ್ನು ಉತ್ತೇಜಿಸುತ್ತದೆ. (ಯೆಹೋಶುವ 1:8; ಕೀರ್ತನೆ 1:​1-3) ಯೇಸುವಿನಂತೆ, ಯೆಹೋವನ ಚಿತ್ತದ ಕುರಿತು ಕಲಿಯಲು ಮತ್ತು ಅದನ್ನು ಮಾಡಲು ಪ್ರತಿದಿನವೂ ಪ್ರಯತ್ನಿಸುವುದಾದರೆ ನಾವು ಸಹ ಆತ್ಮಿಕ ಪೋಷಣೆಯನ್ನು ಪಡೆಯಬಲ್ಲೆವು.​—⁠ಯೋಹಾನ 4:34.

ತಪ್ಪುಗಳ ಕ್ಷಮಾಪಣೆ

6 ಮಾದರಿ ಪ್ರಾರ್ಥನೆಯಲ್ಲಿನ ಮುಂದಿನ ಬಿನ್ನಹವು: “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.” (ಮತ್ತಾಯ 6:12) ಇಲ್ಲಿ ಯೇಸು, ಪಾಪಗಳ ಕ್ಷಮಾಪಣೆಯ ಕುರಿತು ಮಾತಾಡುತ್ತಿದ್ದನು. ಮಾದರಿ ಪ್ರಾರ್ಥನೆಯ ಲೂಕನ ದಾಖಲೆಯಲ್ಲಿ ಈ ಬಿನ್ನಹವು ಹೀಗೆ ಓದಲ್ಪಡುತ್ತದೆ: “ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು.” (ಲೂಕ 11:⁠4) ನಾವೆಲ್ಲರೂ ಪಾಪಿಗಳಾಗಿದ್ದೇವೆ. ಆದರೆ ನಾವು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟು, “ಆತನ ಕಡೆಗೆ ತಿರುಗಿ,” ಕ್ರಿಸ್ತನ ವಿಮೋಚನಾ ಯಜ್ಞದಲ್ಲಿನ ನಂಬಿಕೆಯ ಆಧಾರದಲ್ಲಿ ಕ್ಷಮೆಯಾಚಿಸುವುದಾದರೆ, ನಮ್ಮ ಪ್ರೀತಿಯ ದೇವರು ಆ ಪಾಪಗಳನ್ನು ‘ಅಳಿಸಿಬಿಡಲು’ ಅಥವಾ ರದ್ದುಗೊಳಿಸಲು ಸಿದ್ಧನಿದ್ದಾನೆ.​—⁠ಅ. ಕೃತ್ಯಗಳು 3:19; 10:43; 1 ತಿಮೊಥೆಯ 2:​5, 6.

7 ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ, ಯೆಹೋವನ ನೀತಿಯ ಮಟ್ಟಗಳನ್ನು ತಲಪಲು ತಪ್ಪಿಬೀಳುವಾಗ ನಾವು ಪಾಪ ಮಾಡುತ್ತೇವೆ. ಬಾಧ್ಯತೆಯಾಗಿ ಪಡೆದಿರುವ ಪಾಪದ ಕಾರಣ ನಾವೆಲ್ಲರೂ ಮಾತಿನಲ್ಲಿ, ಕ್ರಿಯೆಯಲ್ಲಿ, ಮತ್ತು ಆಲೋಚನೆಯಲ್ಲಿ ತಪ್ಪುವುದುಂಟು ಅಥವಾ ಮಾಡಬೇಕಾಗಿರುವ ವಿಷಯವನ್ನು ಮಾಡಲು ನಾವು ತಪ್ಪಿಹೋಗುತ್ತೇವೆ. (ಪ್ರಸಂಗಿ 7:20; ರೋಮಾಪುರ 3:23; ಯಾಕೋಬ 3:2; 4:17) ಆದುದರಿಂದ, ಒಂದು ನಿರ್ದಿಷ್ಟ ದಿನದಲ್ಲಿ ನಾವು ಪಾಪಮಾಡಿದ್ದೇವೆಂಬ ಅರಿವು ನಮಗಿರಲಿ ಇಲ್ಲದಿರಲಿ, ದೈನಂದಿನ ಪ್ರಾರ್ಥನೆಗಳಲ್ಲಿ ನಮ್ಮ ಪಾಪಗಳಿಗಾಗಿ ಕ್ಷಮೆಯನ್ನು ವಿನಂತಿಸಿಕೊಳ್ಳುವುದು ಅಗತ್ಯವಾಗಿದೆ.​—⁠ಕೀರ್ತನೆ 19:12; 40:12.

8 ಪ್ರಾಮಾಣಿಕ ಸ್ವಪರೀಕ್ಷೆ, ಪಶ್ಚಾತ್ತಾಪ, ಮತ್ತು ಕ್ರಿಸ್ತನ ಸುರಿಸಲ್ಪಟ್ಟ ರಕ್ತದ ವಿಮೋಚನಾ ಶಕ್ತಿಯಲ್ಲಿನ ನಂಬಿಕೆಯ ಆಧಾರದಲ್ಲಿ ಪಾಪ ಅರಿಕೆಮಾಡುವುದು ಮುಂತಾದ ವಿಷಯಗಳು, ಕ್ಷಮಾಪಣೆಗಾಗಿ ನಾವು ಮಾಡುವ ಪ್ರಾರ್ಥನೆಯನ್ನು ಅನುಸರಿಸಿ ಮಾಡಬೇಕಾದ ವಿಷಯಗಳಾಗಿವೆ. (1 ಯೋಹಾನ 1:​7-9) ನಮ್ಮ ಪ್ರಾರ್ಥನೆಯ ಯಥಾರ್ಥತೆಯನ್ನು ರುಜುಪಡಿಸಲು, ನಮ್ಮ ಬಿನ್ನಹದೊಂದಿಗೆ “ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು” ಮಾಡಬೇಕು. (ಅ. ಕೃತ್ಯಗಳು 26:20) ಆಗ ಮಾತ್ರ ನಾವು, ಯೆಹೋವನು ಮನಃಪೂರ್ವಕವಾಗಿ ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆಂದು ಭರವಸೆಯಿಂದಿರಬಲ್ಲೆವು. (ಕೀರ್ತನೆ 86:5; 103:​8-14) ಇದರಿಂದ ದೊರಕುವ ಫಲಿತಾಂಶವು ಹೋಲಿಸಲಸಾಧ್ಯವಾದ ಮನಶ್ಶಾಂತಿಯಾಗಿದೆ, ಅಂದರೆ ಯಾವುದು “[ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯು”ವದೋ ಅಂಥ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ” ಆಗಿದೆ. (ಫಿಲಿಪ್ಪಿ 4:⁠7) ಆದರೆ ನಮ್ಮ ಪಾಪಗಳಿಗೆ ಕ್ಷಮೆಯನ್ನು ಹೊಂದಬೇಕಾದರೆ ನಾವು ಮಾಡಲೇಬೇಕಾದ ಇನ್ನೂ ಹೆಚ್ಚಿನ ವಿಷಯಗಳನ್ನು ಯೇಸುವಿನ ಮಾದರಿ ಪ್ರಾರ್ಥನೆಯು ನಮಗೆ ಕಲಿಸುತ್ತದೆ.

ಕ್ಷಮಿಸಲ್ಪಡಬೇಕಾದರೆ ನಾವು ಕ್ಷಮಿಸಲೇಬೇಕು

9 ಆಸಕ್ತಿಕರವಾದ ವಿಷಯವೇನೆಂದರೆ, ಮಾದರಿ ಪ್ರಾರ್ಥನೆಯಲ್ಲಿನ “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವಂತೆ ನಮ್ಮ ತಪ್ಪುಗಳನ್ನು ಕ್ಷಮಿಸು” ಎಂಬ ಈ ಭಾಗಕ್ಕೆ ಮಾತ್ರ ಯೇಸು ಹೆಚ್ಚಿನ ವಿವರಣೆಯನ್ನು ನೀಡಿದನು. ಪ್ರಾರ್ಥನೆಯನ್ನು ಮುಕ್ತಾಯಗೊಳಿಸಿದ ನಂತರ ಅವನು ಸೇರಿಸಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” (ಮತ್ತಾಯ 6:​14, 15) ಹಾಗಾದರೆ, ನಮಗೆ ಯೆಹೋವನಿಂದ ಕ್ಷಮೆ ದೊರಕಬೇಕಾದರೆ ನಾವು ಇತರರನ್ನು ಕ್ಷಮಿಸಲು ಮನಸ್ಸುಳ್ಳವರಾಗಿರಬೇಕು ಎಂಬ ವಿಷಯವನ್ನು ಯೇಸು ಸ್ಪಷ್ಟಪಡಿಸಿದನು.​—⁠ಮಾರ್ಕ 11:25.

10 ಇನ್ನೊಂದು ಸಂದರ್ಭದಲ್ಲಿ, ಯೆಹೋವನು ನಮ್ಮನ್ನು ಕ್ಷಮಿಸಬೇಕೆಂದು ನಾವು ಎದುರುನೋಡುವುದಾದರೆ ನಾವು ಇತರರನ್ನು ಕ್ಷಮಿಸುವವರಾಗಿರುವ ಅಗತ್ಯವಿದೆ ಎಂಬುದನ್ನು ಎತ್ತಿತೋರಿಸುತ್ತಾ ಯೇಸು ಒಂದು ದೃಷ್ಟಾಂತವನ್ನು ನೀಡಿದನು. ಉದಾರಮನಸ್ಸಿನಿಂದ ತನ್ನ ಸೇವಕನ ದೊಡ್ಡ ಮೊತ್ತದ ಸಾಲವನ್ನೆಲ್ಲಾ ಬಿಟ್ಟುಬಿಟ್ಟ ಒಬ್ಬ ಅರಸನ ಕುರಿತಾಗಿ ಅವನು ಹೇಳುತ್ತಾನೆ. ಆದರೆ ಈ ಸೇವಕನು ತನ್ನ ಜೊತೆ ಸೇವಕನ ಚಿಕ್ಕ ಮೊತ್ತದ ಸಾಲವನ್ನು ಬಿಟ್ಟುಬಿಡಲು ನಿರಾಕರಿಸಿದ ಕಾರಣ, ಅರಸನು ಸಿಟ್ಟುಕೊಂಡು ಅವನಿಗೆ ಕಠಿನವಾದ ದಂಡನೆಯನ್ನು ವಿಧಿಸುತ್ತಾನೆ. ಯೇಸು ತನ್ನ ದೃಷ್ಟಾಂತವನ್ನು ಈ ಮಾತುಗಳಿಂದ ಮುಕ್ತಾಯಗೊಳಿಸುತ್ತಾನೆ: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.” (ಮತ್ತಾಯ 18:​23-35) ಪಾಠವು ಸ್ಪಷ್ಟವಾಗಿದೆ: ನಮ್ಮ ವಿರುದ್ಧವಾಗಿ ಇತರರು ಮಾಡಿರಬಹುದಾದ ಯಾವುದೇ ತಪ್ಪಿಗೆ ಹೋಲಿಸುವಾಗ, ನಮ್ಮಲ್ಲಿ ಪ್ರತಿಯೊಬ್ಬರ ಎಷ್ಟೋ ದೊಡ್ಡ ಮೊತ್ತದ ಪಾಪದ ಸಾಲವನ್ನು ಯೆಹೋವನು ಕ್ಷಮಿಸಿದ್ದಾನೆ. ಅಷ್ಟುಮಾತ್ರವಲ್ಲದೆ, ಯೆಹೋವನು ಪ್ರತಿದಿನವೂ ನಮ್ಮನ್ನು ಕ್ಷಮಿಸುತ್ತಾನೆ. ಹೀಗಿರುವಾಗ, ಇತರರು ನಮ್ಮ ವಿರುದ್ಧವಾಗಿ ಯಾವಾಗಲಾದರೊಮ್ಮೆ ಮಾಡುವ ತಪ್ಪನ್ನು ನಾವು ಖಂಡಿತವಾಗಿಯೂ ಕ್ಷಮಿಸಬಲ್ಲೆವು.

11 ಅಪೊಸ್ತಲ ಪೌಲನು ಬರೆದದ್ದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” (ಎಫೆಸ 4:​32–5:1ಎ) ಒಬ್ಬರಿಗೊಬ್ಬರು ಕ್ಷಮಿಸುವವರಾಗಿರುವುದು ಕ್ರೈಸ್ತರ ಮಧ್ಯೆ ಶಾಂತಿಯನ್ನು ವರ್ಧಿಸುತ್ತದೆ. ಪೌಲನು ಇನ್ನೂ ಉತ್ತೇಜಿಸಿದ್ದು: “ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:​12-14) ಈ ಎಲ್ಲಾ ವಿಷಯಗಳು, “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು” ಎಂದು ಯೇಸು ಕಲಿಸಿದ ಪ್ರಾರ್ಥನೆಯಲ್ಲಿ ಒಳಗೂಡಿದೆ.

ಶೋಧನೆಯ ಕೆಳಗಿರುವಾಗ ಸಂರಕ್ಷಣೆ

12 ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿನ ಕೊನೆಯ ಭಿನ್ನಹಕ್ಕಿಂತ ಮುಂಚಿನದ್ದು ಹೀಗಿದೆ: ‘ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ.’ (ಮತ್ತಾಯ 6:13) ನಮ್ಮನ್ನು ಶೋಧನೆಗೆ ಒಳಪಡಿಸಬಾರದೆಂದು ನಾವು ಯೆಹೋವನಿಗೆ ಬೇಡಬೇಕೆಂದು ಯೇಸು ಅರ್ಥೈಸಿದನೋ? ಇಲ್ಲ, ಏಕೆಂದರೆ ಶಿಷ್ಯನಾದ ಯಾಕೋಬನು ಹೀಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟನು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ [“ಶೋಧಿಸಲ್ಪಡುವಾಗ,” NW]​—⁠ಈ ಪ್ರೇರಣೆಯು [“ಶೋಧನೆಯು,” NW] ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ [“ಶೋಧಿಸುವುದಿಲ್ಲ,” NW].” (ಯಾಕೋಬ 1:13) ಅಷ್ಟುಮಾತ್ರವಲ್ಲದೆ ಕೀರ್ತನೆಗಾರನು ಬರೆದದ್ದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ [“ಎದುರುನೋಡುವುದಾರೆ,” NW] ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:⁠3) ಯೆಹೋವನು ನಮ್ಮ ಪ್ರತಿಯೊಂದು ಪಾಪಗಳಿಗಾಗಿ ಎದುರುನೋಡುತ್ತಾ ಇರುವುದಿಲ್ಲ, ಮತ್ತು ಖಂಡಿತವಾಗಿಯೂ ನಾವು ಪಾಪಮಾಡುವಂತೆ ಆತನು ನಮ್ಮನ್ನು ಶೋಧನೆಗೆ ಒಳಪಡಿಸುವುದೂ ಇಲ್ಲ. ಆದುದರಿಂದ, ಮಾದರಿ ಪ್ರಾರ್ಥನೆಯ ಈ ಭಾಗವು ಏನನ್ನು ಅರ್ಥೈಸುತ್ತದೆ?

13 ನಾವು ಎಡವುವಂತೆ ಮಾಡಲು, ತಂತ್ರೋಪಾಯಗಳನ್ನು ಉಪಯೋಗಿಸುತ್ತಾ ನಮ್ಮನ್ನು ಬೀಳಿಸಲು, ಮತ್ತು ನಮ್ಮನ್ನು ನುಂಗಿಬಿಡಲು ಸಹ ಪ್ರಯತ್ನಿಸುವವನು ಪಿಶಾಚನಾದ ಸೈತಾನನೇ ಆಗಿದ್ದಾನೆ. (ಎಫೆಸ 6:11) ಅವನು ಮಹಾ ಶೋಧಕನಾಗಿದ್ದಾನೆ. (1 ಥೆಸಲೊನೀಕ 3:5) ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ ಎಂದು ಪ್ರಾರ್ಥಿಸುವಾಗ, ನಾವು ಶೋಧನೆಯಲ್ಲಿರುವಾಗ ಬಿದ್ದುಹೋಗುವಂತೆ ಬಿಡಬೇಡ ಎಂಬುದಾಗಿ ನಾವು ಯೆಹೋವನಲ್ಲಿ ಕೇಳಿಕೊಳ್ಳುತ್ತೇವೆ. ಶೋಧನೆಗಳಿಗೆ ನಾವು ಬಲಿಬಿದ್ದು, “ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸ”ದಂತೆ ನಮಗೆ ಸಹಾಯಮಾಡಲು ನಾವು ದೇವರಲ್ಲಿ ಕೇಳಿಕೊಳ್ಳುತ್ತೇವೆ. (2 ಕೊರಿಂಥ 2:11) ತಾವು ಮಾಡುವ ಎಲ್ಲಾ ವಿಷಯಗಳಲ್ಲಿ ಯೆಹೋವನ ಪರಮಾಧಿಕಾರವನ್ನು ಗಣ್ಯಮಾಡುವವರಿಗೆ ವಾಗ್ದಾನಿಸಲಾಗಿರುವ ಆತ್ಮಿಕ ರಕ್ಷಣೆಯನ್ನು ಪಡೆದುಕೊಳ್ಳುತ್ತಾ “ಸರ್ವಶಕ್ತನ ಆಶ್ರಯದಲ್ಲಿ” ನಾವು ಉಳಿಯಬೇಕೆಂಬುದೇ ನಮ್ಮ ಪ್ರಾರ್ಥನೆಯಾಗಿದೆ.​—⁠ಕೀರ್ತನೆ 91:​1-3.

14 ನಮ್ಮ ಪ್ರಾರ್ಥನೆಗಳಲ್ಲಿ ಮತ್ತು ನಮ್ಮ ಕೃತ್ಯಗಳಲ್ಲಿ ವ್ಯಕ್ತಪಡಿಸುವ ಯಥಾರ್ಥವಾದ ಇಚ್ಛೆಯು ಇದೇ ಆಗಿರುವಲ್ಲಿ, ಖಂಡಿತವಾಗಿಯೂ ಯೆಹೋವನು ನಮ್ಮನ್ನು ಎಂದಿಗೂ ತೊರೆಯುವುದಿಲ್ಲ ಎಂಬ ಖಾತ್ರಿ ನಮಗಿರಸಾಧ್ಯವಿದೆ. ಅಪೊಸ್ತಲ ಪೌಲನು ನಮಗೆ ಆಶ್ವಾಸನೆ ನೀಡುವುದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”​—⁠1 ಕೊರಿಂಥ 10:13.

“ಕೆಡುಕನಿಂದ ನಮ್ಮನ್ನು ತಪ್ಪಿಸು”

15 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಅತಿ ಹೆಚ್ಚು ಭರವಸಾರ್ಹವಾದ ಹಸ್ತಪ್ರತಿಗಳಿಗನುಸಾರ ಯೇಸುವಿನ ಮಾದರಿ ಪ್ರಾರ್ಥನೆಯು ಈ ಮಾತುಗಳಿಂದ ಕೊನೆಗೊಳ್ಳುತ್ತದೆ: “ಕೇಡಿನಿಂದ [“ಕೆಡುಕನಿಂದ,” NW] ನಮ್ಮನ್ನು ತಪ್ಪಿಸು.” * (ಮತ್ತಾಯ 6:13) ಈ ಅಂತ್ಯಕಾಲದಲ್ಲಿ ಪಿಶಾಚನಿಂದ ಸಂರಕ್ಷಣೆಯು ಇನ್ನಷ್ಟು ಹೆಚ್ಚು ಅಗತ್ಯವಾಗಿದೆ. ಸೈತಾನನೂ ಅವನ ದೆವ್ವಗಳೂ “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವ” ಅಭಿಷಿಕ್ತ ಉಳಿಕೆಯವರೊಂದಿಗೆ ಹಾಗೂ ಅವರ ಸಂಗಾತಿಗಳಾದ “ಮಹಾ ಸಮೂಹ”ದವರೊಂದಿಗೆ ಯುದ್ಧಮಾಡುತ್ತಿವೆ. (ಪ್ರಕಟನೆ 7:​9; 12:​9, 17) ಅಪೊಸ್ತಲ ಪೇತ್ರನು ಕ್ರೈಸ್ತರನ್ನು ಎಚ್ಚರಿಸುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ.” (1 ಪೇತ್ರ 5:​8, 9) ನಮ್ಮ ಸಾಕ್ಷಿಕಾರ್ಯವನ್ನು ನಿಲ್ಲಿಸಿಬಿಡಲು ಸೈತಾನನು ಬಯಸುತ್ತಾನೆ, ಮತ್ತು ಭೂಮಿಯಲ್ಲಿರುವ ಅವನ ಧಾರ್ಮಿಕ, ವಾಣಿಜ್ಯ, ಅಥವಾ ರಾಜಕೀಯ ಕಾರ್ಯಭಾರಿಗಳ ಮೂಲಕ ನಮಗೆ ಬೆದರಿಕೆಯನ್ನೊಡ್ಡಲು ಅವನು ಪ್ರಯತ್ನಿಸುತ್ತಾನೆ. ಆದರೆ ನಾವು ಸ್ಥಿರವಾಗಿ ನಿಲ್ಲುವುದಾದರೆ, ಯೆಹೋವನು ನಮ್ಮನ್ನು ರಕ್ಷಿಸುವನು. ಶಿಷ್ಯನಾದ ಯಾಕೋಬನು ಬರೆದದ್ದು: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.”​—⁠ಯಾಕೋಬ 4:⁠7.

16 ತನ್ನ ಮಗನು ಶೋಧಿಸಲ್ಪಡುವಂತೆ ಯೆಹೋವನು ಅನುಮತಿಸಿದನು. ಆದರೆ, ದೇವರ ವಾಕ್ಯವನ್ನು ಬೆಂಬಲವಾಗಿ ಉಪಯೋಗಿಸುತ್ತಾ ಯೇಸು ಪಿಶಾಚನನ್ನು ಎದುರಿಸಿದಾಗ, ಅವನನ್ನು ಬಲಪಡಿಸಲು ಯೆಹೋವನು ತನ್ನ ದೂತರನ್ನು ಕಳುಹಿಸಿಕೊಟ್ಟನು. (ಮತ್ತಾಯ 4:​1-11) ತದ್ರೀತಿಯಲ್ಲಿ, ನಾವು ಯೆಹೋವನಿಗೆ ಪ್ರಾರ್ಥಿಸುವುದಾದರೆ ಮತ್ತು ಆತನನ್ನು ನಮ್ಮ ಕೋಟೆಯನ್ನಾಗಿ ಮಾಡುವುದಾದರೆ, ಆತನು ನಮಗೆ ಸಹಾಯಮಾಡಲು ತನ್ನ ದೂತರನ್ನು ಉಪಯೋಗಿಸುವನು. (ಕೀರ್ತನೆ 34:7; 91:​9-11) ಅಪೊಸ್ತಲ ಪೇತ್ರನು ಬರೆದದ್ದು: “ಕರ್ತನು [“ಯೆಹೋವನು,” NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.”​—⁠2 ಪೇತ್ರ 2:⁠9.

ಸಂಪೂರ್ಣವಾದ ಬಿಡುಗಡೆಯು ಸಮೀಪವಾಗಿದೆ

17 ಮಾದರಿ ಪ್ರಾರ್ಥನೆಯಲ್ಲಿ, ವಿಷಯಗಳನ್ನು ಯೇಸು ಸರಿಯಾದ ಸ್ಥಾನದಲ್ಲಿಟ್ಟನು. ನಮ್ಮ ಪ್ರಾಮುಖ್ಯ ಚಿಂತನೆಯು, ಯೆಹೋವನ ಮಹಾನ್‌ ಹಾಗೂ ಪರಿಶುದ್ಧ ನಾಮದ ಪವಿತ್ರೀಕರಣವೇ ಆಗಿದೆ. ಅದನ್ನು ನೆರವೇರಿಸುವ ಸಾಧನವು ಮೆಸ್ಸೀಯ ರಾಜ್ಯವಾಗಿರುವುದರಿಂದ, ಆ ರಾಜ್ಯವು ಬಂದು ಎಲ್ಲಾ ಅಪರಿಪೂರ್ಣ ಮಾನವ ರಾಜ್ಯಗಳನ್ನು ಅಥವಾ ಸರಕಾರಗಳನ್ನು ನಾಶಮಾಡಿ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ ಮಾಡಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಪರದೈಸ್‌ ಭೂಮಿಯಲ್ಲಿನ ನಿತ್ಯಜೀವದ ನಮ್ಮ ನಿರೀಕ್ಷೆಯು, ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ನೀತಿಯ ಪರಮಾಧಿಕಾರದ ವಿಶ್ವವ್ಯಾಪಕ ಅಂಗೀಕಾರದ ಮೇಲೆ ಆತುಕೊಂಡಿದೆ. ಈ ಪ್ರಾಮುಖ್ಯ ವಿಷಯಗಳಿಗೆ ಪ್ರಾರ್ಥಿಸಿದ ನಂತರ, ನಾವು ನಮ್ಮ ದೈನಂದಿನ ಅಗತ್ಯಗಳಿಗೆ, ನಮ್ಮ ಪಾಪಗಳ ಕ್ಷಮಾಪಣೆಗೆ, ಮತ್ತು ಕೆಡುಕನಾದ ಪಿಶಾಚನಾದ ಸೈತಾನನ ಶೋಧನೆಗಳು ಹಾಗೂ ಕುತಂತ್ರಗಳಿಂದ ತಪ್ಪಿಸಿ ಕಾಪಾಡುವಂತೆ ಪ್ರಾರ್ಥಿಸಸಾಧ್ಯವಿದೆ.

18 ಕೆಡುಕನಿಂದ ಮತ್ತು ಅವನ ಭ್ರಷ್ಟ ವಿಷಯಗಳ ವ್ಯವಸ್ಥೆಯಿಂದ ನಮ್ಮ ಸಂಪೂರ್ಣವಾದ ಬಿಡುಗಡೆಯು ಬಹಳ ಸಮೀಪದಲ್ಲಿದೆ. ಭೂಮಿಯ ಮೇಲೆ, ಅದರಲ್ಲಿಯೂ ಪ್ರಾಮುಖ್ಯವಾಗಿ ಯೆಹೋವನ ನಂಬಿಗಸ್ತ ಸೇವಕರ ಮೇಲೆ “ಮಹಾ ರೌದ್ರ”ವನ್ನು ತೋರಿಸಲು “ತನಗಿರುವ ಕಾಲವು ಸ್ವಲ್ಪವೆಂದು” ಸೈತಾನನಿಗೆ ತಿಳಿದಿದೆ. (ಪ್ರಕಟನೆ 12:​12, 17) “ಯುಗದ ಸಮಾಪ್ತಿ”ಯ ಕುರಿತಾದ ಸಂಘಟಿತ ಸೂಚನೆಯಲ್ಲಿ ಆಸಕ್ತಿಕರ ಘಟನೆಗಳನ್ನು ಯೇಸು ಮುನ್‌ತಿಳಿಸಿದ್ದನು ಮತ್ತು ಅವುಗಳಲ್ಲಿ ಕೆಲವು ಇನ್ನೂ ಭವಿಷ್ಯತ್ತಿನಲ್ಲಿ ನೆರವೇರಲಿವೆ. (ಮತ್ತಾಯ 24:​3, 29-31) ಮುಂದಕ್ಕೆ ಈ ಎಲ್ಲಾ ಘಟನೆಗಳು ಸಂಭವಿಸುವುದನ್ನು ನಾವು ನೋಡುವಾಗ, ಬಿಡುಗಡೆಯ ನಮ್ಮ ನಿರೀಕ್ಷೆಯು ಇನ್ನೂ ಬಲಗೊಳ್ಳುತ್ತದೆ. ಯೇಸು ಹೇಳಿದ್ದು: “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”​—⁠ಲೂಕ 21:​25-28.

19 ಯೇಸು ತನ್ನ ಶಿಷ್ಯರಿಗೆ ನೀಡಿದ ಸಂಕ್ಷೇಪವಾದ ಮಾದರಿ ಪ್ರಾರ್ಥನೆಯು, ಅಂತ್ಯ ಸಮೀಪಿಸುತ್ತಿರುವಂತೆ ನಮ್ಮ ಪ್ರಾರ್ಥನೆಗಳಲ್ಲಿ ನಾವು ಯಾವ ವಿಷಯಗಳನ್ನು ಒಳಗೂಡಿಸಬಹುದು ಎಂಬ ಸ್ಪಷ್ಟವಾದ ಮಾರ್ಗದರ್ಶನವನ್ನು ನಮಗೆ ನೀಡುತ್ತದೆ. ಅಂತ್ಯದ ವರೆಗೂ ಯೆಹೋವನು ನಮ್ಮ ಎಲ್ಲಾ ಆತ್ಮಿಕ ಮತ್ತು ಭೌತಿಕ ಆವಶ್ಯಕತೆಗಳನ್ನು ಒದಗಿಸುತ್ತಾ ಮುಂದುವರಿಯುವನೆಂಬ ಭರವಸೆಯಿಂದಿರೋಣ. ನಾವು ಪ್ರಾರ್ಥನಾಪೂರ್ವಕವಾಗಿ ಎಚ್ಚರವಾಗಿರುವುದು, ‘ಮೊದಲಿಂದಿರುವ ಭರವಸವನ್ನು ಅಂತ್ಯದ ವರೆಗೂ ದೃಢವಾಗಿ ಹಿಡುಕೊಳ್ಳಲು’ ನಮನ್ನು ಶಕ್ತರನ್ನಾಗಿ ಮಾಡುತ್ತದೆ.​—⁠ಇಬ್ರಿಯ 3:14; 1 ಪೇತ್ರ 4:⁠7.

[ಪಾದಟಿಪ್ಪಣಿ]

^ ಪ್ಯಾರ. 22 ಕಿಂಗ್‌ ಜೇಮ್ಸ್‌ ವರ್ಷನ್‌ ಮುಂತಾದ ಕೆಲವು ಹಳೆಯ ಬೈಬಲ್‌ಗಳು ಕರ್ತನ ಪ್ರಾರ್ಥನೆಯನ್ನು ದೇವರ ಸ್ತುತಿವಾಕ್ಯದೊಂದಿಗೆ ಮುಕ್ತಾಯಗೊಳಿಸುತ್ತವೆ: “ರಾಜ್ಯವೂ ಶಕ್ತಿಯೂ ಮಹಿಮೆಯೂ ಸದಾಕಾಲಕ್ಕೂ ನಿನ್ನವೇ. ಆಮೆನ್‌.” ಜೆರೋಮ್‌ ಬಿಬ್ಲಿಕಲ್‌ ಕಾಮೆಂಟರಿ ತಿಳಿಸುವುದು: “ಈ ಸ್ತುತಿಪದಗಳು . . . ಅತಿ ಹೆಚ್ಚು ಭರವಸಾರ್ಹವಾದ [ಹಸ್ತಪ್ರತಿಗಳಲ್ಲಿ] ಕಂಡುಬರುವುದಿಲ್ಲ.”

ಪುನರ್ವಿಮರ್ಶೆ

• “ಅನುದಿನದ ಆಹಾರ”ಕ್ಕಾಗಿನ ನಮ್ಮ ಬಿನ್ನಹವು ಯಾವೆಲ್ಲಾ ವಿಷಯಗಳನ್ನು ಸೂಚಿಸುತ್ತದೆ?

• “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು” ಎಂಬ ಬಿನ್ನಹವನ್ನು ವಿವರಿಸಿರಿ.

• ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ ಎಂದು ಯೆಹೋವನಲ್ಲಿ ನಾವು ಕೇಳಿಕೊಳ್ಳುವಾಗ, ಅದು ಏನನ್ನು ಅರ್ಥೈಸುತ್ತದೆ?

• “ಕೆಡುಕನಿಂದ ನಮ್ಮನ್ನು ತಪ್ಪಿಸು” ಎಂದು ನಾವೇಕೆ ಪ್ರಾರ್ಥಿಸಬೇಕು?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನು ಪ್ರಾಣಿಜೀವಿಗಳಿಗೆ ಆಹಾರವನ್ನು ಹೇಗೆ ಒದಗಿಸುತ್ತಾನೆ?

2, 3. ನಮ್ಮ ಅನುದಿನದ ಆಹಾರಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕಲಿಸಿಕೊಟ್ಟದ್ದರಲ್ಲಿ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ?

4. ಯೇಸುವಿನ ಮತ್ತು ಇಸ್ರಾಯೇಲ್ಯರ ಜೀವನದಲ್ಲಿ ನಡೆದ ಯಾವ ಘಟನೆಗಳು ಆತ್ಮಿಕ ಆಹಾರವನ್ನು ಸೇವಿಸುವ ಪ್ರಮುಖತೆಯನ್ನು ಒತ್ತಿಹೇಳುತ್ತವೆ?

5. ಯೆಹೋವನು ನಮಗೆ ಅನುದಿನದ ಆತ್ಮಿಕ ಆಹಾರವನ್ನು ಹೇಗೆ ಒದಗಿಸುತ್ತಾನೆ?

6. ಯಾವುದಕ್ಕಾಗಿ ನಾವು ಕ್ಷಮೆಯಾಚಿಸಬೇಕು, ಮತ್ತು ಯಾವ ಷರತ್ತುಗಳ ಮೇಲೆ ಯೆಹೋವನು ಅವುಗಳನ್ನು ರದ್ದುಗೊಳಿಸಲು ಸಿದ್ಧನಿದ್ದಾನೆ?

7. ಪ್ರತಿದಿನವೂ ಕ್ಷಮೆಗಾಗಿ ನಾವು ಪ್ರಾರ್ಥಿಸಬೇಕಾಗಿದೆ ಏಕೆ?

8. ಕ್ಷಮಾಣೆಗಾಗಿನ ಪ್ರಾರ್ಥನೆಯು ನಾವು ಏನನ್ನು ಮಾಡುವಂತೆ ಪ್ರೇರೇಪಿಸಬೇಕು, ಮತ್ತು ಯಾವ ಪ್ರಯೋಜನದಾಯಕ ಫಲಿತಾಂಶದೊಂದಿಗೆ?

9, 10. (ಎ) ಮಾದರಿ ಪ್ರಾರ್ಥನೆಗೆ ಯಾವ ವಿವರಣೆಯನ್ನು ಯೇಸು ಕೂಡಿಸಿದನು, ಮತ್ತು ಇದು ಯಾವುದನ್ನು ಒತ್ತಿಹೇಳುತ್ತದೆ? (ಬಿ) ನಾವು ಇತರರನ್ನು ಕ್ಷಮಿಸುವವರಾಗಿರುವ ಅಗತ್ಯವನ್ನು ಯೇಸು ಹೇಗೆ ದೃಷ್ಟಾಂತಿಸಿದನು?

11. ಯೆಹೋವನು ನಮ್ಮನ್ನು ಕ್ಷಮಿಸಬೇಕೆಂದು ನಾವು ಎದುರುನೋಡುವುದಾದರೆ, ಅಪೊಸ್ತಲ ಪೌಲನ ಯಾವ ಸಲಹೆಯನ್ನು ನಾವು ಅನುಸರಿಸುವೆವು, ಮತ್ತು ಯಾವ ಉತ್ತಮ ಫಲಿತಾಂಶಗಳೊಂದಿಗೆ?

12, 13. (ಎ) ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿನ ಕೊನೆಯ ಬಿನ್ನಹಕ್ಕಿಂತ ಮುಂಚಿನದ್ದು ಯಾವುದನ್ನು ಅರ್ಥೈಸಸಾಧ್ಯವಿಲ್ಲ? (ಬಿ) ಮಹಾ ಶೋಧಕನು ಯಾರು, ಮತ್ತು ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ ಎಂಬ ನಮ್ಮ ಪ್ರಾರ್ಥನೆಯ ಅರ್ಥವೇನು?

14. ನಾವು ಶೋಧನೆಯ ಕೆಳಗಿರುವಾಗ ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುವುದಾದರೆ ಆತನು ನಮ್ಮನ್ನು ತೊರೆಯುವುದಿಲ್ಲ ಎಂಬುದರ ಕುರಿತು ಅಪೊಸ್ತಲ ಪೌಲನು ನಮಗೆ ಹೇಗೆ ಆಶ್ವಾಸನೆ ನೀಡುತ್ತಾನೆ?

15. ಕೆಡುಕನಿಂದ ಬಿಡುಗಡೆಗಾಗಿ ಪ್ರಾರ್ಥಿಸುವುದು ಹಿಂದೆಂದಿಗಿಂತಲೂ ಈಗ ಅತಿ ಹೆಚ್ಚು ಪ್ರಾಮುಖ್ಯವಾಗಿದೆ ಏಕೆ?

16. ಶೋಧನೆಯ ಕೆಳಗಿರುವ ತನ್ನ ಸೇವಕರಿಗೆ ಸಹಾಯಮಾಡಲು ಯೆಹೋವನು ಯಾರನ್ನು ಉಪಯೋಗಿಸುತ್ತಾನೆ?

17. ನಮಗೆ ಮಾದರಿ ಪ್ರಾರ್ಥನೆಯನ್ನು ನೀಡುವ ಮೂಲಕ, ವಿಷಯಗಳನ್ನು ಯೇಸು ಹೇಗೆ ಸರಿಯಾದ ಸ್ಥಾನದಲ್ಲಿಟ್ಟನು?

18, 19. ನಾವು ಎಚ್ಚರವಾಗಿ ಉಳಿಯುವಂತೆ ಮತ್ತು ನಮ್ಮ ನಿರೀಕ್ಷೆಯನ್ನು “ಅಂತ್ಯದ ವರೆಗೂ ದೃಢವಾಗಿ” ಹಿಡುಕೊಳ್ಳುವಂತೆ ಯೇಸುವಿನ ಮಾದರಿ ಪ್ರಾರ್ಥನೆಯು ನಮಗೆ ಹೇಗೆ ಸಹಾಯಮಾಡುತ್ತದೆ?

[ಪುಟ 15ರಲ್ಲಿರುವ ಚಿತ್ರಗಳು]

ನಮಗೆ ಕ್ಷಮೆ ದೊರಕಬೇಕಾದರೆ ನಾವು ಇತರರನ್ನು ಕ್ಷಮಿಸಲೇಬೇಕು

[ಪುಟ 13ರಲ್ಲಿರುವ ಚಿತ್ರ ಕೃಪೆ]

Lydekker