ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಆರೈಕೆಯನ್ನು ಅನುಭವಿಸುವುದು

ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಆರೈಕೆಯನ್ನು ಅನುಭವಿಸುವುದು

ಜೀವನ ಕಥೆ

ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಆರೈಕೆಯನ್ನು ಅನುಭವಿಸುವುದು

ಫೇ ಕಿಂಗ್‌ ಅವರು ಹೇಳಿದಂತೆ

ನನ್ನ ಹೆತ್ತವರು ದಯಾಪರರಾಗಿದ್ದರು, ಆದರೆ ಇತರ ಅನೇಕರಂತೆ ಇವರಿಗೂ ಧರ್ಮದ ವಿಷಯದಲ್ಲಿ ಯಾವುದೇ ಅಭಿರುಚಿ ಇರಲಿಲ್ಲ. ನನ್ನ ತಾಯಿಯವರು ಹೀಗೆ ಹೇಳುವುದು ವಾಡಿಕೆಯಾಗಿತ್ತು: “ದೇವರಂತೂ ಇರಲೇಬೇಕು, ಇಲ್ಲದಿದ್ದರೆ ಹೂವುಗಳನ್ನು ಮತ್ತು ಮರಗಳನ್ನು ಯಾರು ಸೃಷ್ಟಿಸುತ್ತಿದ್ದರು?” ಆದರೆ ಅವರ ಧಾರ್ಮಿಕ ಆಲೋಚನೆಯು ಇಷ್ಟಕ್ಕೇ ಸೀಮಿತವಾಗಿತ್ತು.

ಇಸವಿ 1939ರಲ್ಲಿ, ನಾನು ಹನ್ನೊಂದು ವರ್ಷದವಳಾಗಿದ್ದಾಗ ನನ್ನ ತಂದೆಯವರು ತೀರಿಹೋದರು; ಆಗ ನಾನು ನನ್ನ ತಾಯಿಯೊಂದಿಗೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ ದಕ್ಷಿಣಕ್ಕಿರುವ ಸ್ಟಾಕ್‌ಪೋರ್ಟ್‌ನಲ್ಲಿ ವಾಸಿಸುತ್ತಿದ್ದೆ. ನನಗೆ ಬೈಬಲಿನ ಕುರಿತು ಏನೂ ಗೊತ್ತಿರಲಿಲ್ಲವಾದರೂ ನಾನು ಯಾವಾಗಲೂ ನನ್ನ ಸೃಷ್ಟಿಕರ್ತನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಬಯಸುತ್ತಿದ್ದೆ ಮತ್ತು ಬೈಬಲನ್ನು ತುಂಬ ಗೌರವಿಸುತ್ತಿದ್ದೆ. ಆದುದರಿಂದ, ಚರ್ಚ್‌ ಆಫ್‌ ಇಂಗ್ಲೆಂಡ್‌ನಲ್ಲಿ ಯಾವುದಾದರೂ ಸಹಾಯವು ದೊರಕುವುದೋ ಎಂದು ನೋಡಲಿಕ್ಕಾಗಿ ನಾನು ಆ ಚರ್ಚಿಗೆ ಹೋಗಲು ನಿರ್ಧರಿಸಿದೆ.

ಚರ್ಚಿನ ಆರಾಧನಾ ಕೂಟಗಳು ನನಗೆ ಹೆಚ್ಚು ಅರ್ಥಭರಿತವಾಗಿ ಕಾಣಲಿಲ್ಲವಾದರೂ, ಸುವಾರ್ತಾ ಪುಸ್ತಕಗಳು ಓದಲ್ಪಡುತ್ತಿದ್ದಾಗ, ಬೈಬಲ್‌ ಖಂಡಿತವಾಗಿಯೂ ಸತ್ಯವಾಗಿರಲೇಬೇಕು ಎಂಬುದನ್ನು ಯೇಸುವಿನ ಮಾತುಗಳು ನನಗೆ ಮನಗಾಣಿಸಿದವು. ಈ ವಿಷಯದ ಕುರಿತು ಹಿನ್ನೋಟ ಬೀರುವಾಗ, ಸ್ವತಃ ನಾನೇ ಯಾಕೆ ಬೈಬಲನ್ನು ಓದಲಿಲ್ಲ ಎಂಬುದೇ ನನಗೆ ವಿಚಿತ್ರವಾಗಿ ತೋರುತ್ತದೆ. ಸಮಯಾನಂತರ ಸಹ, ನಮ್ಮ ಕುಟುಂಬದ ಮಿತ್ರರೊಬ್ಬರು ಆಧುನಿಕ ಭಾಷಾಂತರದ ಒಂದು “ಹೊಸ ಒಡಂಬಡಿಕೆ”ಯನ್ನು ನನಗೆ ಕೊಟ್ಟಾಗಲೂ ಅದನ್ನು ಓದಲಿಕ್ಕಾಗಿ ನಾನೆಂದೂ ಸಮಯವನ್ನು ಮಾಡಿಕೊಳ್ಳಲಿಲ್ಲ.

ಇಸವಿ 1950ರಲ್ಲಿ ಆರಂಭವಾದ ಕೊರಿಯನ್‌ ಯುದ್ಧವು, ನಿಜವಾಗಿಯೂ ಗಹನವಾಗಿ ಆಲೋಚಿಸುವಂತೆ ನನ್ನನ್ನು ಪ್ರಚೋದಿಸಿತು. ಎರಡನೆಯ ಲೋಕ ಯುದ್ಧದ ಸಮಯದಲ್ಲಾದಂತೆ ಈ ಹೋರಾಟವೂ ಎಲ್ಲಾ ಕಡೆ ಹಬ್ಬುವುದೋ? ಒಂದುವೇಳೆ ಹೀಗಾಗುವಲ್ಲಿ, ನಿಮ್ಮ ವೈರಿಗಳನ್ನು ಪ್ರೀತಿಸಿರಿ ಎಂಬ ಯೇಸುವಿನ ಆಜ್ಞೆಗೆ ನಾನು ಹೇಗೆ ವಿಧೇಯಳಾಗಸಾಧ್ಯವಿದೆ? ಇನ್ನೊಂದು ಕಡೆಯಲ್ಲಿ, ನಾನು ಸುಮ್ಮನೆ ನಿಂತುಕೊಂಡು, ಜನರು ನನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ನೋಡಿ ಅವರನ್ನು ಸದೆಬಡಿಯಲಿಕ್ಕಾಗಿ ಏನನ್ನೂ ಮಾಡದೆ ಇರಬೇಕೋ? ಒಂದುವೇಳೆ ನಾನು ಹೀಗೆ ಮಾಡುವಲ್ಲಿ, ಖಂಡಿತವಾಗಿಯೂ ಇದು ನಾನು ನನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಕ್ಕೆ ಸಮವಾಗಿದೆ. ನನ್ನ ಮನಸ್ಸು ತುಂಬ ಗೊಂದಲಕ್ಕೆ ಒಳಗಾಗಿತ್ತಾದರೂ, ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಬೈಬಲಿನಲ್ಲಿವೆ ಎಂಬುದು ನನಗೆ ಮನದಟ್ಟಾಗಿತ್ತು, ಆದರೆ ಎಲ್ಲಿ ಮತ್ತು ಹೇಗೆ ಆ ಉತ್ತರಗಳನ್ನು ಕಂಡುಕೊಳ್ಳುವುದು ಎಂಬುದು ಮಾತ್ರ ನನಗೆ ಇನ್ನೂ ಹೊಳೆದಿರಲಿಲ್ಲ.

ಆಸ್ಟ್ರೇಲಿಯದಲ್ಲಿ ಸತ್ಯದ ಅನ್ವೇಷಣೆ

ಇಸವಿ 1954ರಲ್ಲಿ ನಾನು ಮತ್ತು ನನ್ನ ತಾಯಿಯವರು ಆಸ್ಟ್ರೇಲಿಯಕ್ಕೆ ವಲಸೆಹೋಗಲು ನಿರ್ಧರಿಸಿದೆವು. ನನ್ನ ಅಕ್ಕ ಜೀನ್‌ ಅಲ್ಲಿ ವಾಸಿಸುತ್ತಿದ್ದಳು. ಕೆಲವು ವರ್ಷಗಳ ಬಳಿಕ, ನನಗೆ ಬೈಬಲಿನಲ್ಲಿ ಆಸಕ್ತಿಯಿದೆ ಮತ್ತು ನಾನು ಚರ್ಚಿಗೆ ಹೋಗುತ್ತೇನೆ ಎಂಬುದು ಜೀನ್‌ಗೆ ಗೊತ್ತಿದ್ದುದರಿಂದ, ಯೆಹೋವನ ಸಾಕ್ಷಿಗಳು ಬಂದು ನಿನ್ನನ್ನು ಭೇಟಿಯಾಗುವಂತೆ ಅವರನ್ನು ಕೇಳಿಕೊಂಡಿದ್ದೇನೆ ಎಂದು ಅವಳು ನನಗೆ ಹೇಳಿದಳು. ನನಗೆ ಯೆಹೋವನ ಸಾಕ್ಷಿಗಳ ಕುರಿತು ಯಾವ ಅಭಿಪ್ರಾಯವಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಳ ಅಪೇಕ್ಷೆಯಾಗಿತ್ತು. “ಅವರು ಕೊಡುವ ವಿವರಣೆಗಳು ಸರಿಯೊ ತಪ್ಪೊ ನನಗೆ ಗೊತ್ತಿಲ್ಲ, ಆದರೆ ಚರ್ಚುಗಳು ನೀಡುವುದಕ್ಕಿಂತಲೂ ಹೆಚ್ಚಿನ ವಿವರಣೆಗಳು ಅವರ ಬಳಿ ಇರುತ್ತವೆ” ಎಂದು ಅವಳು ನನಗೆ ಹೇಳಿದಳು.

ಬಿಲ್‌ ಮತ್ತು ಲಿಂಡ ಶ್ಲೈಡರ್‌ ಎಂಬ ದಂಪತಿಗಳು ನನ್ನನ್ನು ಭೇಟಿಯಾಗಲು ಬಂದರು; ನೋಡಿದ ಕೂಡಲೆ ಮನಸ್ಸನ್ನು ಆಕರ್ಷಿಸುವಂಥ ವ್ಯಕ್ತಿತ್ವವುಳ್ಳ ಜೋಡಿ ಅವರದಾಗಿತ್ತು. ಅವರು ತಮ್ಮ 60ಗಳ ಪ್ರಾಯದಲ್ಲಿದ್ದರು ಮತ್ತು ಅನೇಕ ವರ್ಷಗಳಿಂದ ಸಾಕ್ಷಿಗಳಾಗಿದ್ದರು. ಆ್ಯಡಲೇಡ್‌ನಲ್ಲಿ ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುತ್ತಿದ್ದ ರೇಡಿಯೋ ಸ್ಟೇಷನ್‌ನಲ್ಲಿ ಅವರು ಕೆಲಸಮಾಡುತ್ತಿದ್ದರು, ಮತ್ತು IIನೆಯ ಲೋಕ ಯುದ್ಧದ ಸಮಯದಲ್ಲಿ ಆಸ್ಟ್ರೇಲಿಯದಲ್ಲಿ ಸಾರುವ ಕೆಲಸವು ನಿಷೇಧಿಸಲ್ಪಟ್ಟಿದ್ದಾಗ ಅವರು ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಮಾಡಲಾರಂಭಿಸಿದರು. ಬಿಲ್‌ ಮತ್ತು ಲಿಂಡರು ನನಗೆ ಸಾಕಷ್ಟು ಸಹಾಯವನ್ನು ನೀಡಿದರಾದರೂ, ನಾನು ಮಾತ್ರ ಬೇರೆ ಬೇರೆ ಧರ್ಮಗಳನ್ನು ಪರೀಕ್ಷಿಸಿ ನೋಡುತ್ತಾ ಇದ್ದೆ.

ನನ್ನ ಜೊತೆ ಕೆಲಸಗಾರರೊಬ್ಬರು ನನ್ನನ್ನು ಸೌವಾರ್ತಿಕರಾದ ಬಿಲೀ ಗ್ರೇಹಮ್‌ರ ಕೂಟವೊಂದಕ್ಕೆ ಕರೆದೊಯ್ದರು. ಆ ಕೂಟದ ಬಳಿಕ ನಮ್ಮಲ್ಲಿ ಕೆಲವರು, ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದ ಪಾದ್ರಿಯೊಬ್ಬರನ್ನು ಭೇಟಿಯಾದೆವು. ಆ ಸಮಯದಲ್ಲೂ ನನ್ನಲ್ಲಿ ಆಂತರಿಕ ಕಲಹವನ್ನೆಬ್ಬಿಸಿದ್ದ ಒಂದು ಪ್ರಶ್ನೆಯನ್ನು ನಾನು ಕೇಳಿದೆ: “ಒಬ್ಬ ವ್ಯಕ್ತಿಯು ಕ್ರೈಸ್ತನಾಗಿದ್ದು, ಅದೇ ಸಮಯದಲ್ಲಿ ಅವನು ಯುದ್ಧಕ್ಕೆ ಹೋಗಿ ತನ್ನ ವೈರಿಗಳನ್ನು ಕೊಲ್ಲುವಾಗ, ಅವನು ತನ್ನ ವೈರಿಗಳನ್ನು ಹೇಗೆ ಪ್ರೀತಿಸಸಾಧ್ಯವಿದೆ?” ಅಲ್ಲಿದ್ದ ಇಡೀ ಗುಂಪು ಆ ಕೂಡಲೆ ಗದ್ದಲಭರಿತ ಧ್ವನಿಯಲ್ಲಿ ಪ್ರತಿಕ್ರಿಯಿಸಿತು​—⁠ಆ ಪ್ರಶ್ನೆಯು ಅವರೆಲ್ಲರ ಮನಸ್ಸನ್ನು ಕೊರೆಯುತ್ತಿತ್ತು ಎಂಬುದು ಸುವ್ಯಕ್ತ! ಸ್ವಲ್ಪ ಹೊತ್ತಿನ ನಂತರ ಆ ಪಾದ್ರಿಯು ಹೇಳಿದ್ದು: “ಈ ಪ್ರಶ್ನೆಗೆ ಉತ್ತರ ನನ್ನಲ್ಲಿಲ್ಲ. ಅದರ ಕುರಿತು ನಾನು ಇನ್ನೂ ಆಲೋಚಿಸುತ್ತಿದ್ದೇನೆ.”

ಈ ಮಧ್ಯೆ ಬಿಲ್‌ ಮತ್ತು ಲಿಂಡರೊಂದಿಗಿನ ನನ್ನ ಬೈಬಲ್‌ ಅಧ್ಯಯನವು ಮುಂದುವರಿಯುತ್ತಿತ್ತು, ಮತ್ತು 1958ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ನನ್ನೊಂದಿಗೆ ಅಧ್ಯಯನ ಮಾಡಿದ ಆ ದಂಪತಿಯ ಮಾದರಿಯನ್ನು ಅನುಸರಿಸುವುದು ನನ್ನ ಹೃದಯದಾಸೆಯಾಗಿತ್ತು. ಆದುದರಿಂದ, ಮುಂದಿನ ವರ್ಷದ ಆಗಸ್ಟ್‌ ತಿಂಗಳಷ್ಟಕ್ಕೆ ನಾನು ರೆಗ್ಯುಲರ್‌ ಪಯನೀಯರಳಾಗಿ ಅಂದರೆ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಮಾಡಲಾರಂಭಿಸಿದೆ. ಎಂಟು ತಿಂಗಳುಗಳ ಬಳಿಕ, ಸ್ಪೆಷಲ್‌ ಪಯನೀಯರರ ಪಂಕ್ತಿಯನ್ನು ಸೇರುವಂತೆ ನನ್ನನ್ನು ಆಮಂತ್ರಿಸಲಾಯಿತು. ನನ್ನ ಅಕ್ಕ ಜೀನ್‌ ಸಹ ತನ್ನ ಬೈಬಲ್‌ ಅಧ್ಯಯನದಲ್ಲಿ ಪ್ರಗತಿಯನ್ನು ಮಾಡಿ ದೀಕ್ಷಾಸ್ನಾನ ಪಡೆದುಕೊಂಡಿದ್ದಳು ಎಂಬುದನ್ನು ತಿಳಿದು ನನಗೆ ಮಹದಾನಂದವಾಯಿತು!

ಕಾರ್ಯಕ್ಕೆ ಅನುಕೂಲವಾದ ಮಹಾ ದ್ವಾರವು ತೆರೆಯಲ್ಪಟ್ಟದ್ದು

ಸಿಡ್ನಿಯ ಸಭೆಗಳಲ್ಲೊಂದರಲ್ಲಿ ನಾನು ಸೇವೆಮಾಡುತ್ತಿದ್ದೆ ಮತ್ತು ಅನೇಕ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೆ. ಒಂದು ದಿನ ನಾನು ಚರ್ಚ್‌ ಆಫ್‌ ಇಂಗ್ಲೆಂಡ್‌ನ ನಿವೃತ್ತ ಪಾದ್ರಿಯೊಬ್ಬರನ್ನು ಸಂಧಿಸಿದೆ ಮತ್ತು ಲೋಕದ ಅಂತ್ಯದ ಕುರಿತು ಚರ್ಚು ಏನು ಹೇಳುತ್ತದೆ ಎಂದು ಅವರನ್ನು ಕೇಳಿದೆ. 50 ವರ್ಷಗಳ ವರೆಗೆ ತಾನು ಚರ್ಚಿನ ಸಿದ್ಧಾಂತವನ್ನು ಕಲಿಸಿದ್ದೇನೆಂದು ಅವರು ಹೇಳಿದರಾದರೂ, ಅವರು ಕೊಟ್ಟ ಉತ್ತರವು ನಾನು ಆಶ್ಚರ್ಯದಿಂದ ಮೂಕಳಾಗುವಂತೆ ಮಾಡಿತು: “ಇದರ ಕುರಿತು ಸಂಶೋಧನೆ ನಡೆಸಲು ನಾನು ಸಮಯವನ್ನು ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಬೈಬಲಿನ ಕುರಿತು ಯೆಹೋವನ ಸಾಕ್ಷಿಗಳಿಗೆ ಗೊತ್ತಿರುವಷ್ಟು ಚೆನ್ನಾಗಿ ನನಗೆ ಗೊತ್ತಿಲ್ಲ.”

ಇದಾದ ಬಳಿಕ, ಪಾಕಿಸ್ತಾನದಲ್ಲಿ ಸೇವೆಮಾಡಲಿಕ್ಕಾಗಿ ಸ್ವಯಂಸೇವಕರ ಆವಶ್ಯಕತೆಯಿದೆ ಎಂಬ ಕರೆಯು ಬಂತು. ಅವಿವಾಹಿತ ಸ್ತ್ರೀಯರನ್ನು ಕಳುಹಿಸಲಾಗುವುದಿಲ್ಲ, ಕೇವಲ ಅವಿವಾಹಿತ ಪುರುಷರನ್ನು ಅಥವಾ ವಿವಾಹಿತ ದಂಪತಿಗಳನ್ನು ಕಳುಹಿಸಲಾಗುತ್ತದೆ ಎಂಬ ಅರಿವಿಲ್ಲದೇ ನಾನು ಅರ್ಜಿಯನ್ನು ಹಾಕಿದೆ. ಆದರೆ ನನ್ನ ಅರ್ಜಿಯನ್ನು ಬ್ರೂಕ್ಲಿನ್‌ನಲ್ಲಿರುವ ಮುಖ್ಯಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು, ಏಕೆಂದರೆ ಸ್ವಲ್ಪದರಲ್ಲೇ ನನಗೆ ಒಂದು ಪತ್ರ ಬಂತು ಮತ್ತು ಭಾರತದಲ್ಲಿರುವ ಬಾಂಬೆಯಲ್ಲಿ (ಈಗ ಮುಂಬೈ ಎಂದು ಕರೆಯಲಾಗುತ್ತದೆ) ಒಂದು ಅವಕಾಶ ಇದೆ, ನನಗೆ ಇಷ್ಟವಿರುವಲ್ಲಿ ಈ ಕರೆಯನ್ನು ಸ್ವೀಕರಿಸಬಹುದು ಎಂದು ಅದರಲ್ಲಿ ತಿಳಿಸಲಾಗಿತ್ತು. ಅದು 1962ನೆಯ ಇಸವಿಯಾಗಿತ್ತು. ನಾನು ಈ ಕರೆಯನ್ನು ಸ್ವೀಕರಿಸಿದೆ ಮತ್ತು ಅಲಹಾಬಾದ್‌ಗೆ ಸ್ಥಳಾಂತರಿಸುವ ಮೊದಲು ಬಾಂಬೆಯಲ್ಲಿ 18 ತಿಂಗಳುಗಳ ವರೆಗೆ ಉಳಿದೆ.

ಒಡನೆಯೇ ನಾನು ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಮನಸ್ಸನ್ನು ತೊಡಗಿಸಿದೆ. ಈ ಭಾರತೀಯ ಭಾಷೆಯಲ್ಲಿ ಕಾಗುಣಿತ ಮತ್ತು ಉಚ್ಚಾರಣೆಯು ಸಾಕಷ್ಟು ಸುಸಂಗತವಾಗಿದೆ, ಆದುದರಿಂದ ಇದರಲ್ಲಿ ಪಾರಂಗತರಾಗಲು ಅಷ್ಟೇನೂ ಕಷ್ಟವಿಲ್ಲ. ಆದರೂ, ಈ ಭಾಷೆಯನ್ನು ಮಾತಾಡಲು ಕಷ್ಟಪಡುವುದಕ್ಕೆ ಬದಲಾಗಿ ಇಂಗ್ಲಿಷ್‌ ಭಾಷೆಯಲ್ಲೇ ಮಾತಾಡುವಂತೆ ಮನೆಯವರು ಕೇಳಿಕೊಳ್ಳುತ್ತಿದ್ದಾಗ ನನಗೆ ತುಂಬ ಆಶಾಭಂಗವಾಗುತ್ತಿತ್ತು! ಆದರೆ ಈ ಹೊಸ ದೇಶವು ಆಸಕ್ತಿಕರವಾದ ಮತ್ತು ಭಾವೋತ್ತೇಜಕ ಪಂಥಾಹ್ವಾನಗಳನ್ನು ತಂದೊಡ್ಡಿತು, ಮತ್ತು ಆಸ್ಟ್ರೇಲಿಯದಿಂದ ಬಂದಿದ್ದ ಜೊತೆ ಸಾಕ್ಷಿಗಳ ಸಹವಾಸದಲ್ಲಿಯೂ ನಾನು ಆನಂದಿಸಿದೆ.

ನನ್ನ ಆರಂಭದ ದಿನಗಳಲ್ಲಿ ನಾನು ವಿವಾಹವಾಗುವುದರ ಕುರಿತು ಆಲೋಚಿಸುತ್ತಿದ್ದೆ, ಆದರೆ ದೀಕ್ಷಾಸ್ನಾನದ ನಂತರ ನಾನು ಯೆಹೋವನ ಸೇವೆಯಲ್ಲಿ ತುಂಬ ಕಾರ್ಯಮಗ್ನಳಾಗಿದ್ದರಿಂದ ನನಗೆ ಅದರ ಕುರಿತು ಚಿಂತಿಸಲು ಸಮಯವೇ ಸಿಗಲಿಲ್ಲ. ಆದರೆ ಈಗ ಜೀವನದಲ್ಲಿ ಒಬ್ಬ ಜೊತೆಗಾರನಿರಬೇಕು ಎಂಬ ಅನಿಸಿಕೆ ನನಗಾಗತೊಡಗಿತು. ಏನೇ ಆದರೂ ನಾನು ನನ್ನ ವಿದೇಶೀ ನೇಮಕವನ್ನು ಬಿಟ್ಟುಹೋಗಲು ಇಷ್ಟಪಡಲಿಲ್ಲ. ಆದುದರಿಂದ, ಈ ವಿಷಯದ ಕುರಿತು ಯೆಹೋವನ ಬಳಿ ಪ್ರಾರ್ಥಿಸಿದೆ ಮತ್ತು ಅದನ್ನು ನನ್ನ ಮನಸ್ಸಿನಿಂದ ಹೊರಹಾಕಿದೆ.

ಒಂದು ಅನಿರೀಕ್ಷಿತ ಆಶೀರ್ವಾದ

ಆ ಸಮಯದಲ್ಲಿ ಎಡ್ವಿನ್‌ ಸ್ಕಿನ್ನರ್‌ ಅವರು ಭಾರತದ ಬ್ರಾಂಚ್‌ನ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. ಇವರು, ಚೀನಾಕ್ಕೆ ನೇಮಕವನ್ನು ಪಡೆದಂಥ ಹ್ಯಾರಲ್ಡ್‌ ಕಿಂಗ್‌ ಮತ್ತು ಸ್ಟ್ಯಾನ್ಲೀ ಜೋನ್ಸ್‌ರನ್ನು ಒಳಗೊಂಡು ಇನ್ನೂ ಅನೇಕ ನಂಬಿಗಸ್ತ ಸಹೋದರರೊಂದಿಗೆ 1946ರಲ್ಲಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಎಂಟನೆಯ ಕ್ಲಾಸಿಗೆ ಹಾಜರಾಗಿದ್ದರು. * 1958ರಲ್ಲಿ ಹ್ಯಾರಲ್ಡ್‌ ಮತ್ತು ಸ್ಟ್ಯಾನ್ಲೀಯವರು ಶಾಂಘೈನಲ್ಲಿ ಸಾರುವ ಚಟುವಟಿಕೆಯಲ್ಲಿ ಒಳಗೂಡಿದ್ದಕ್ಕಾಗಿ ಸೆರೆಮನೆಯಲ್ಲಿನ ಏಕಾಂತವಾಸಕ್ಕೆ ಗುರಿಪಡಿಸಲ್ಪಟ್ಟರು. 1963ರಲ್ಲಿ ಹ್ಯಾರಲ್ಡರನ್ನು ಬಿಡುಗಡೆಮಾಡಿದಾಗ, ಎಡ್ವಿನ್‌ ಅವರಿಗೆ ಪತ್ರವನ್ನು ಬರೆದರು. ಹ್ಯಾರಲ್ಡರು ಯುನೈಟೆಡ್‌ ಸ್ಟೇಟ್ಸ್‌ ಮತ್ತು ಬ್ರಿಟನ್‌ಗೆ ಪ್ರಯಾಣಿಸಿ, ಅಲ್ಲಿಂದ ಹಾಂಗ್‌ ಕಾಂಗ್‌ಗೆ ಹಿಂದಿರುಗಿದ ಬಳಿಕ ಅವರ ಪತ್ರಕ್ಕೆ ಉತ್ತರಿಸಿದರು ಮತ್ತು ಅದರಲ್ಲಿ ತನಗೆ ಮದುವೆಯಾಗಬೇಕೆಂಬ ಆಸೆಯಿದೆ ಎಂದು ಬರೆದರು. ಸೆರೆಮನೆಯಲ್ಲಿದ್ದಾಗ ನಾನು ಈ ವಿಷಯದ ಕುರಿತು ಪ್ರಾರ್ಥಿಸುತ್ತಿದ್ದೆ ಎಂದು ಅವರು ಎಡ್ವಿನ್‌ರಿಗೆ ಹೇಳಿದರು ಮತ್ತು ಒಬ್ಬ ಯೋಗ್ಯ ಪತ್ನಿಯಾಗುವ ಅರ್ಹತೆಯುಳ್ಳ ಸಾಕ್ಷಿಯ ಪರಿಚಯ ನಿಮಗಿದೆಯೋ ಎಂದು ಪತ್ರದಲ್ಲಿ ಎಡ್ವಿನ್‌ರನ್ನು ಕೇಳಿದ್ದರು.

ಭಾರತದಲ್ಲಿ ಹೆಚ್ಚಿನ ಮದುವೆಗಳು ಹೆತ್ತವರಿಂದ ಏರ್ಪಡಿಸಲ್ಪಡುತ್ತವೆ, ಮತ್ತು ಇಂಥ ಏರ್ಪಾಡುಗಳನ್ನು ಮಾಡುವಂತೆ ಎಡ್ವಿನ್‌ರನ್ನು ಯಾವಾಗಲೂ ಕೇಳಿಕೊಳ್ಳಲಾಗುತ್ತಿತ್ತಾದರೂ, ಅವರೆಂದೂ ಹಾಗೆ ಮಾಡುವ ಆಯ್ಕೆಯನ್ನು ಮಾಡಲಿಲ್ಲ. ಆದುದರಿಂದಲೇ ಅವರು ಹ್ಯಾರಲ್ಡರ ಪತ್ರವನ್ನು ರೂತ್‌ ಮಕೇ ಅವರಿಗೆ ಕಳುಹಿಸಿದರು; ಇವರ ಪತಿಯಾಗಿದ್ದ ಹೋಮರ್‌ ಅವರು ಸಂಚರಣ ಮೇಲ್ವಿಚಾರಕರಾಗಿದ್ದರು. ಕಾಲಕ್ರಮೇಣ, ಅನೇಕ ವರ್ಷಗಳಿಂದ ಸತ್ಯದಲ್ಲಿರುವಂಥ ಒಬ್ಬ ಮಿಷನೆರಿಗೆ ಒಂದು ಹುಡುಗಿ ಬೇಕಾಗಿದ್ದಾಳೆ ಎಂದು ತಿಳಿಸುತ್ತಾ ರೂತ್‌ ನನಗೆ ಪತ್ರ ಬರೆದರು, ಮತ್ತು ಅವರಿಗೆ ಪತ್ರ ಬರೆದು ಇದರ ಕುರಿತು ವಿಚಾರಿಸಲು ನನಗೆ ಇಷ್ಟವಿದೆಯೋ ಎಂದು ಕೇಳಿ ಬರೆದಿದ್ದರು. ಆ ಸಹೋದರನು ಯಾರು ಎಂಬುದನ್ನೂ ಅಥವಾ ಅವನ ಕುರಿತಾದ ಹೆಚ್ಚಿನ ಯಾವುದೇ ವಿಚಾರವನ್ನೂ ಅವರು ನನಗೆ ತಿಳಿಸಲಿಲ್ಲ.

ನಾನು ಒಬ್ಬ ಸಂಗಡಿಗನಿಗಾಗಿ ಪ್ರಾರ್ಥಿಸಿದ್ದೆ ಎಂಬ ವಿಚಾರವು ಯೆಹೋವನೊಬ್ಬನನ್ನು ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ ಎಂಬುದಂತೂ ನಿಜ, ಮತ್ತು ಈ ವಿಷಯವನ್ನೇ ಬಿಟ್ಟುಬಿಡುವುದು ಒಳ್ಳೇದು ಎಂಬುದು ನನ್ನ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೂ, ಇದರ ಕುರಿತು ನಾನು ಹೆಚ್ಚೆಚ್ಚು ಚಿಂತಿಸಿದಂತೆ, ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಈ ರೂಪದಲ್ಲಿ ಉತ್ತರಿಸುತ್ತಾನೆ ಎಂದು ನಾವು ಆಲೋಚಿಸಬಹುದಾದ ವಿಧದಲ್ಲೇ ಆತನು ಉತ್ತರಿಸುವುದು ತುಂಬ ಅಪರೂಪ ಎಂಬ ನಿರ್ಣಯಕ್ಕೆ ನಾನು ಬರುವಂತಾಯಿತು. ಆದುದರಿಂದ ನಾನು ರೂತ್‌ಗೆ ಪತ್ರ ಬರೆದು, ಒಂದುವೇಳೆ ನಾನು ಆ ಸಹೋದರನನ್ನು ಮದುವೆಯಾಗಲೇ ಬೇಕೆಂಬ ನಿರ್ಬಂಧವಿಲ್ಲದಿದ್ದರೆ, ಅವರು ನನಗೆ ಪತ್ರ ಬರೆಯುವಂತೆ ನೀವು ಸೂಚಿಸಿರಿ ಎಂದು ಹೇಳಿದೆ. ಹ್ಯಾರಲ್ಡ್‌ ಕಿಂಗ್‌ ಅವರಿಂದ ಬಂದ ಎರಡನೆಯ ಪತ್ರ ನನಗಾಗಿತ್ತು.

ಹ್ಯಾರಲ್ಡ್‌ ಅವರು ಚೀನಾದ ಸೆರೆಮನೆಯಿಂದ ಬಿಡುಗಡೆಯಾದ ಬಳಿಕ, ಅವರ ಛಾಯಾಚಿತ್ರಗಳು ಮತ್ತು ಅವರ ಜೀವನ ಕಥೆಯು ಬೇರೆ ಬೇರೆ ವಾರ್ತಾಪತ್ರಿಕೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬಂದಿತ್ತು. ಈ ಸಮಯದಷ್ಟಕ್ಕೆ ಅವರು ಜಗತ್ಪ್ರಸಿದ್ಧರಾಗಿದ್ದರಾದರೂ, ಅವರ ನಂಬಿಗಸ್ತ ದೇವಪ್ರಭುತ್ವಾತ್ಮಕ ಸೇವೆಯ ದಾಖಲೆಯೇ ನನ್ನ ಮೇಲೆ ಮಹತ್ತರವಾಗಿ ಪ್ರಭಾವ ಬೀರಿತ್ತು. ಹೀಗೆ ನಾವು ಐದು ತಿಂಗಳುಗಳ ವರೆಗೆ ಪತ್ರವ್ಯವಹಾರ ನಡೆಸಿದೆವು, ಮತ್ತು ನಂತರ ನಾನು ಹಾಂಗ್‌ ಕಾಂಗ್‌ಗೆ ಹೋದೆ. ಅಲ್ಲಿ 1965ರ ಅಕ್ಟೋಬರ್‌ 5ರಂದು ನಾವು ಮದುವೆಯಾದೆವು.

ನಾವಿಬ್ಬರೂ ವಿವಾಹವಾದ ನಂತರವೂ ಪೂರ್ಣ ಸಮಯದ ಸೇವೆಯಲ್ಲೇ ಉಳಿಯಲು ಬಯಸಿದೆವು. ಮತ್ತು ನಮಗಿಬ್ಬರಿಗೂ ವಯಸ್ಸಾಗುತ್ತಿದ್ದರಿಂದ, ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ನಮಗೆ ಪರಸ್ಪರ ಸಾಹಚರ್ಯದ ಆವಶ್ಯಕತೆಯಿತ್ತು. ಹ್ಯಾರಲ್ಡರ ಕಡೆಗಿದ್ದ ಪ್ರೀತಿಯು ನನ್ನಲ್ಲಿ ದಿನೇ ದಿನೇ ಬೆಳೆಯುತ್ತಾ ಹೋಯಿತು, ಮತ್ತು ಜನರೊಂದಿಗೆ ಹಾಗೂ ನಮ್ಮ ಸೇವೆಯ ಸಂಬಂಧದಲ್ಲಿ ಎದ್ದ ಸಮಸ್ಯೆಗಳೊಂದಿಗೆ ಅವರು ವ್ಯವಹರಿಸುತ್ತಿದ್ದ ದಯಾಪರ ಹಾಗೂ ಪರಿಗಣನಾರ್ಹ ವಿಧವನ್ನು ಆಗಿಂದಾಗ್ಗೆ ನಾನು ಗಮನಿಸುತ್ತಾ ಹೋದಂತೆ, ಅವರು ನನ್ನ ಅಪಾರ ಗೌರವಕ್ಕೆ ಪಾತ್ರರಾದರು. 27 ವರ್ಷಗಳ ವರೆಗೆ ನಾವು ಸಂತೋಷಭರಿತ ವಿವಾಹದಲ್ಲಿ ಆನಂದಿಸಿದೆವು ಮತ್ತು ಯೆಹೋವನ ಹಸ್ತದಿಂದ ಅನೇಕ ಆಶೀರ್ವಾದಗಳನ್ನು ಪಡೆದೆವು.

ಚೀನೀಯರು ತುಂಬ ಉದ್ಯೋಗಶೀಲ ಜನರಾಗಿದ್ದಾರೆ ಮತ್ತು ನನಗೆ ಅವರನ್ನು ಕಂಡರೆ ತುಂಬ ಇಷ್ಟ. ಹಾಂಗ್‌ ಕಾಂಗ್‌ನಲ್ಲಿ ಮಾತಾಡಲ್ಪಡುತ್ತಿದ್ದ ಭಾಷೆ ಕಾಂಟೊನೀಸ್‌ ಆಗಿದ್ದು, ಇದು ಮ್ಯಾಂಡರೀನ್‌ ಭಾಷೆಗಿಂತಲೂ ಹೆಚ್ಚು ಸ್ವರಗಳು ಅಥವಾ ವಿಭಕ್ತಿ ಪ್ರತ್ಯಯಗಳನ್ನು ಒಳಗೂಡಿರುವ ಚೀನೀ ಭಾಷಾರೂಪವಾಗಿದೆ; ಆದುದರಿಂದಲೇ ಈ ಭಾಷೆಯನ್ನು ಕಲಿಯುವುದು ತುಂಬ ಕಷ್ಟ. ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲಿರುವ ಮಿಷನೆರಿ ಗೃಹದಲ್ಲಿ ನಮ್ಮ ವೈವಾಹಿಕ ಜೀವನವು ಆರಂಭಗೊಂಡಿತು. ತದನಂತರ ನಾವು ಹಾಂಗ್‌ ಕಾಂಗ್‌ನ ಬೇರೆ ಬೇರೆ ಭಾಗಗಳಲ್ಲಿನ ನೇಮಕದಲ್ಲಿ ಸೇವೆಮಾಡಿದೆವು. ಹೌದು, ನಾವು ತುಂಬ ಸಂತೋಷದಿಂದ ಇದ್ದೆವಾದರೂ, 1976ರಲ್ಲಿ ನನ್ನ ಆರೋಗ್ಯವು ಗಂಭೀರವಾದ ಸಮಸ್ಯೆಯನ್ನು ತಂದೊಡ್ಡಿತು.

ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವುದು

ನನಗೆ ಅನೇಕ ತಿಂಗಳುಗಳಿಂದ ರಕ್ತಸ್ರಾವವಾಗುತ್ತಿತ್ತು, ಮತ್ತು ನನ್ನ ರಕ್ತದ ಪ್ರಮಾಣವು ಸಂಪೂರ್ಣವಾಗಿ ಇಳಿಮುಖವಾಗಿತ್ತು. ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು, ಆದರೆ ರಕ್ತವಿಲ್ಲದೆ ಶಸ್ತ್ರಕ್ರಿಯೆಯನ್ನು ಮಾಡುವಲ್ಲಿ ನಾನು ನಿಶ್ಶಕ್ತಿಯಿಂದ ಸಾಯಬಹುದಾಗಿದ್ದ ಕಾರಣ, ಹಾಗೆ ಮಾಡುವುದಿಲ್ಲವೆಂದು ಆಸ್ಪತ್ರೆಯ ವೈದ್ಯರು ನನಗೆ ಹೇಳಿದರು. ಒಂದು ದಿನ ವೈದ್ಯರು ನನ್ನ ಅನಾರೋಗ್ಯದ ವಿಷಯದಲ್ಲಿ ಚರ್ಚಿಸುತ್ತಿದ್ದಾಗ, ಅನಗತ್ಯವಾಗಿ ನನ್ನ ಜೀವವನ್ನು ಕಳೆದುಕೊಳ್ಳಲು ನನಗೆ ಯಾವುದೇ ಹಕ್ಕಿಲ್ಲ ಎಂದು ಹೇಳುವ ಮೂಲಕ ನರ್ಸ್‌ಗಳು ನನ್ನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದರು. ಆ ದಿನಕ್ಕಾಗಿ 12 ಶಸ್ತ್ರಚಿಕಿತ್ಸೆಗಳನ್ನು ನಿಗದಿಪಡಿಸಲಾಗಿದ್ದು, ಅವುಗಳಲ್ಲಿ 10 ಶಸ್ತ್ರಚಿಕಿತ್ಸೆಗಳು ಗರ್ಭಪಾತಗಳಾಗಿದ್ದವು. ಆದರೆ ತಮ್ಮ ಶಿಶುಗಳ ಜೀವವನ್ನು ಕೊನೆಗಾಣಿಸುವ ವಿಷಯದಲ್ಲಿ ಆ ಗರ್ಭವತಿ ಸ್ತ್ರೀಯರಿಗೆ ಯಾರೊಬ್ಬರೂ ಒಂದೇ ಒಂದು ಮಾತನ್ನೂ ಆಡಲಿಲ್ಲ ಎಂಬುದು ನನ್ನ ಗಮನಕ್ಕೆ ಬಂತು.

ಕೊನೆಗೆ, ಒಂದುವೇಳೆ ನಾನು ಸಾಯುವಲ್ಲಿ ಆಸ್ಪತ್ರೆಯು ಅದಕ್ಕೆ ಹೊಣೆಯಾಗುವುದಿಲ್ಲ ಎಂಬುದನ್ನು ದೃಢಪೃಡಿಸುವಂಥ ಒಂದು ಪತ್ರವನ್ನು ಹ್ಯಾರಲ್ಡ್‌ ಬರೆದರು, ಮತ್ತು ನಂತರ ವೈದ್ಯರು ಅಗತ್ಯವಿರುವ ಶಸ್ತ್ರಚಿಕಿತ್ಸೆಯನ್ನು ಮಾಡಲು ಒಪ್ಪಿದರು. ನನ್ನನ್ನು ಶಸ್ತ್ರಚಿಕಿತ್ಸೆಯ ಕೋಣೆಗೆ ಕರೆದೊಯ್ಯಲಾಯಿತು ಮತ್ತು ಅರಿವಳಿಕೆ ನೀಡಲು ಸಿದ್ಧತೆಗಳನ್ನು ಮಾಡುವಂತೆ ತಿಳಿಸಲಾಯಿತು. ಆದರೂ, ಕೊನೇ ಕ್ಷಣದಲ್ಲಿ ಅರಿವಳಿಕೆ ತಜ್ಞನು ತನ್ನ ಕೆಲಸವನ್ನು ಮುಂದುವರಿಸಲು ನಿರಾಕರಿಸಿದನು ಮತ್ತು ಆಸ್ಪತ್ರೆಯವರು ನನ್ನನ್ನು ಡಿಸ್‌ಚಾರ್ಜ್‌ ಮಾಡಬೇಕಾಯಿತು.

ತದನಂತರ ನಾವು ಒಬ್ಬ ಖಾಸಗಿ ಸ್ತ್ರೀರೋಗ ತಜ್ಞನನ್ನು ಸಂಪರ್ಕಿಸಿದೆವು. ನನ್ನ ಸನ್ನಿವೇಶದ ಗಂಭೀರತೆಯನ್ನು ಮನಗಂಡ ಅವನು ಕಡಿಮೆ ಹಣದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಲು​—⁠ಆದರೆ ಆ ದರವನ್ನು ಯಾರಿಗೂ ತಿಳಿಸಬಾರದೆಂಬ ಷರತ್ತಿನ ಮೇಲೆ​—⁠ಒಪ್ಪಿಕೊಂಡನು. ಅವನು ಸ್ವಲ್ಪವೂ ರಕ್ತವನ್ನು ಉಪಯೋಗಿಸದೆ ಯಶಸ್ವಿಕರವಾಗಿ ಶಸ್ತ್ರಕ್ರಿಯೆಯನ್ನು ನಡೆಸಿದನು. ಈ ನಿರ್ದಿಷ್ಟ ಸಮಯದಲ್ಲಿ ಯೆಹೋವನ ಪ್ರೀತಿಪೂರ್ವಕ ದಯೆ ಹಾಗೂ ಆರೈಕೆಯು ಹ್ಯಾರಲ್ಡರ ಮೇಲೆ ಮತ್ತು ನನ್ನ ಮೇಲೆ ಸುವ್ಯಕ್ತವಾಗಿ ಕಂಡುಬಂದಿತ್ತು.

ಇಸವಿ 1992ರಲ್ಲಿ ಹ್ಯಾರಲ್ಡ್‌ ಗುಣಪಡಿಸಲಾರದಷ್ಟು ಮಟ್ಟಿಗೆ ಅಸ್ವಸ್ಥರಾದರು. ನಾವು ಬ್ರಾಂಚ್‌ ಆಫೀಸಿಗೆ ಸ್ಥಳಾಂತರಿಸಿದೆವು ಮತ್ತು ಅಲ್ಲಿ ನಮ್ಮಿಬ್ಬರಿಗೂ ಪ್ರೀತಿಭರಿತ ಆರೈಕೆ ಸಿಕ್ಕಿತು. ಆದರೆ 1993ರಲ್ಲಿ, ತಮ್ಮ 81ರ ಪ್ರಾಯದಲ್ಲಿ ನನ್ನ ಪ್ರೀತಿಯ ಗಂಡನವರು ತಮ್ಮ ಭೂಜೀವಿತವನ್ನು ಪೂರ್ಣಗೊಳಿಸಿದರು.

ಇಂಗ್ಲೆಂಡ್‌ಗೆ ಹಿಂದಿರುಗಿದ್ದು

ಹಾಂಗ್‌ ಕಾಂಗ್‌ ಬೆತೆಲ್‌ ಕುಟುಂಬದ ಸದಸ್ಯಳಾಗಿರುವುದು ನನಗೆ ಸಂತೋಷ ನೀಡಿತ್ತಾದರೂ, ಅಲ್ಲಿನ ಉಷ್ಣತೆ ಹಾಗೂ ಆರ್ದ್ರತೆಯನ್ನು ಸಹಿಸಿಕೊಳ್ಳುವುದು ನನಗೆ ದಿನೇ ದಿನೇ ತುಂಬ ಕಷ್ಟವಾಗತೊಡಗಿತು. ಆಗ ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಿಂದ ಅನಿರೀಕ್ಷಿತವಾದ ಒಂದು ಪತ್ರವು ಬಂತು. ನನ್ನ ಆರೋಗ್ಯದ ಕಾರಣದಿಂದ, ಹೆಚ್ಚಿನ ಆರೋಗ್ಯಾರೈಕೆ ಸೌಕರ್ಯಗಳಿರುವ ಒಂದು ಬ್ರಾಂಚ್‌ಗೆ ಸ್ಥಳಾಂತರಿಸಲು ನಾನು ಇಷ್ಟಪಡುತ್ತೇನೋ ಎಂದು ಅದರಲ್ಲಿ ಕೇಳಲಾಗಿತ್ತು. ಆದುದರಿಂದ, ಇಸವಿ 2000ದಲ್ಲಿ ನಾನು ಇಂಗ್ಲೆಂಡ್‌ಗೆ ಹಿಂದಿರುಗಿದೆ ಮತ್ತು ಲಂಡನಿನಲ್ಲಿರುವ ಬೆತೆಲ್‌ ಕುಟುಂಬದೊಂದಿಗೆ ಜೊತೆಗೂಡಿದೆ. ಇದೆಷ್ಟು ಪ್ರೀತಿಪೂರ್ಣ ಒದಗಿಸುವಿಕೆಯಾಗಿ ಪರಿಣಮಿಸಿದೆ! ನನ್ನನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು ಮತ್ತು ಬೆತೆಲ್‌ ಕುಟುಂಬದ ಲೈಬ್ರರಿಯನ್ನು ಹಾಗೂ ಅದರ 2,000 ಪುಸ್ತಕಗಳನ್ನು ನೋಡಿಕೊಳ್ಳುವುದರಲ್ಲಿ ಸಹಾಯಮಾಡುವುದರೊಂದಿಗೆ ಬೇರೆ ಬೇರೆ ಕೆಲಸದ ನೇಮಕಗಳಲ್ಲಿ ನಾನು ಬಹಳವಾಗಿ ಆನಂದಿಸುತ್ತೇನೆ.

ಲಂಡನಿನಲ್ಲಿ ಕೂಡಿಬರುವ ಚೀನೀ ಸಭೆಯೊಂದಿಗೂ ನಾನು ಸಹವಾಸಮಾಡುತ್ತೇನೆ, ಆದರೂ ಇಲ್ಲಿ ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಾಂಗ್‌ ಕಾಂಗ್‌ನಿಂದ ಜನರು ಇಲ್ಲಿಗೆ ಬರುವುದು ತೀರ ಕಡಿಮೆ, ಆದರೆ ಚೀನಾದ ಪ್ರಧಾನ ಭೂಭಾಗದಿಂದ ಅನೇಕರು ಬರುತ್ತಾರೆ. ಇವರು ಮ್ಯಾಂಡರೀನ್‌ ಭಾಷೆಯನ್ನು ಮಾತಾಡುತ್ತಾರೆ, ಮತ್ತು ಸಾರುವ ಕೆಲಸದಲ್ಲಿ ಇದು ಒಂದು ಹೊಸ ಪಂಥಾಹ್ವಾನವನ್ನು ತಂದೊಡ್ಡುತ್ತದೆ. ಈ ದೇಶದಾದ್ಯಂತ, ಚೀನಾದಿಂದ ಬಂದಿರುವ ಪದವೀಧರರೊಂದಿಗೆ ಅನೇಕ ಆಸಕ್ತಿಕರ ಬೈಬಲ್‌ ಅಧ್ಯಯನಗಳು ನಡೆಸಲ್ಪಡುತ್ತಿರುವ ವರದಿಗಳಿವೆ. ಇವರು ಕಷ್ಟಪಟ್ಟು ದುಡಿಯುವ ಜನರಾಗಿದ್ದಾರೆ ಮತ್ತು ತಾವು ಕಲಿಯುತ್ತಿರುವ ಬೈಬಲ್‌ ಸತ್ಯವನ್ನು ಗಣ್ಯಮಾಡುತ್ತಾರೆ. ಇವರಿಗೆ ಸಹಾಯಮಾಡುವುದು ಬಹಳ ಆನಂದದಾಯಕ ಸಂಗತಿಯಾಗಿದೆ.

ನನ್ನ ಮನೆಯ ಪ್ರಶಾಂತತೆಯಲ್ಲಿ ನಾನು ಅನೇಕವೇಳೆ ನನ್ನ ಸಂತೋಷಭರಿತ ಜೀವನದ ಕುರಿತು ಮೆಲುಕುಹಾಕುತ್ತೇನೆ ಮತ್ತು ಯೆಹೋವನ ಪ್ರೀತಿಪೂರ್ವಕ ದಯೆಯನ್ನು ನೋಡಿ ಆಶ್ಚರ್ಯಪಡುತ್ತಾ ಇರುತ್ತೇನೆ. ಆತನ ಉದ್ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಇದು ವ್ಯಾಪಿಸಿದೆ, ಮತ್ತು ಆತನ ಸೇವಕರಲ್ಲಿ ಪ್ರತಿಯೊಬ್ಬರಿಗೂ ಆತನು ವ್ಯಕ್ತಿಗತವಾಗಿ ತೋರಿಸುವ ಆರೈಕೆಯು ಎಲ್ಲಾ ರೀತಿಯಲ್ಲಿಯೂ ಸುವ್ಯಕ್ತವಾಗಿದೆ. ನನ್ನ ಕಡೆಗಿನ ಆತನ ಎಲ್ಲಾ ಪ್ರೀತಿಯ ಆರೈಕೆಗಾಗಿ ಆಭಾರಿಯಾಗಿರಲು ನನಗೆ ಸಕಲ ಕಾರಣವೂ ಇದೆ.​—⁠1 ಪೇತ್ರ 5:​6, 7.

[ಪಾದಟಿಪ್ಪಣಿ]

^ ಪ್ಯಾರ. 19 ಈ ಇಬ್ಬರು ಮಿಷನೆರಿಗಳ ಜೀವನ ಕಥೆಗಳು, ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ 1963, ಜುಲೈ 15ರ 437-42ನೆಯ ಪುಟಗಳಲ್ಲಿ, ಮತ್ತು 1965, ಡಿಸೆಂಬರ್‌ 15ರ 756-67ನೆಯ ಪುಟಗಳಲ್ಲಿ ಪ್ರಕಟವಾಗಿವೆ.

[ಪುಟ 24ರಲ್ಲಿರುವ ಚಿತ್ರ]

ಭಾರತದಲ್ಲಿ ಸೇವೆಮಾಡುತ್ತಿರುವುದು

[ಪುಟ 25ರಲ್ಲಿರುವ ಚಿತ್ರಗಳು]

1963ರಲ್ಲಿ ಹ್ಯಾರಲ್ಡ್‌ ಕಿಂಗ್‌ ಮತ್ತು 1950ಗಳಲ್ಲಿ ಚೀನಾದಲ್ಲಿ ಸೇವೆಮಾಡುತ್ತಿರುವುದು

[ಪುಟ 26ರಲ್ಲಿರುವ ಚಿತ್ರಗಳು]

1965ರ ಅಕ್ಟೋಬರ್‌ 5ರಂದು ಹಾಂಗ್‌ ಕಾಂಗ್‌ನಲ್ಲಿ ನಮ್ಮ ಮದುವೆಯ ದಿನ

[ಪುಟ 26ರಲ್ಲಿರುವ ಚಿತ್ರ]

ಹಾಂಗ್‌ ಕಾಂಗ್‌ ಬೆತೆಲ್‌ನ ಸದಸ್ಯರೊಂದಿಗೆ, ಮಧ್ಯದಲ್ಲಿ ಲೀಯಾಂಗ್ಸ್‌ ದಂಪತಿಗಳು, ಮತ್ತು ಬಲಬದಿಯಲ್ಲಿ ಗಾನಾವೇಸ್‌ ದಂಪತಿಗಳಿದ್ದಾರೆ