ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಜಗತ್ತಿನ ನಾಭಿ”ಯಲ್ಲಿ ಸಮ್ಮೇಳನಕ್ಕಾಗಿ ಸೇರುವುದು

“ಜಗತ್ತಿನ ನಾಭಿ”ಯಲ್ಲಿ ಸಮ್ಮೇಳನಕ್ಕಾಗಿ ಸೇರುವುದು

“ಜಗತ್ತಿನ ನಾಭಿ”ಯಲ್ಲಿ ಸಮ್ಮೇಳನಕ್ಕಾಗಿ ಸೇರುವುದು

“ಟೆ ಪಿಟೋ ಓ ಟೆ ಹೆನುವ” ಎಂಬ ಮಾತುಗಳನ್ನು ನೀವೆಂದಾದರೂ ಕೇಳಿಸಿಕೊಂಡಿದ್ದೀರೊ? ಈಸ್ಟರ್‌ ಐಲೆಂಡಿನಲ್ಲಿ ಆಡಲ್ಪಡುವ ರಾಪಾ ನೂಈ ಎಂಬ ಮೂಲ ಭಾಷೆಯಲ್ಲಿ ಅದರ ಅರ್ಥ “ಜಗತ್ತಿನ ನಾಭಿ” ಎಂದಾಗಿದೆ. ಇಲ್ಲಿ ನಡೆದ ಸಮ್ಮೇಳನವು ಅಷ್ಟು ಅದ್ವಿತೀಯವಾಗಿದ್ದದ್ದೇಕೆ?

ಏಕಾಂತವಾದ, ನಿಗೂಢವಾದ, ಅಸಾಮಾನ್ಯವಾದ ಸ್ಥಳ. ಇವು, ಈಸ್ಟರ್‌ ಐಲೆಂಡ್‌, ಅಥವಾ ಅದರ ನಿವಾಸಿಗಳು ಕರೆಯುವಂತೆ ರಾಪಾ ನೂಈ ಎಂಬ ದ್ವೀಪವನ್ನು ವರ್ಣಿಸಲು ಉಪಯೋಗಿಸಲಾಗುವ ಕೆಲವು ಪದಗಳಾಗಿವೆ. ಅದು ಏಕಾಂತವಾದ ಸ್ಥಳವೆಂಬುದು ನಿಶ್ಚಯ, ಏಕೆಂದರೆ ಅದು ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿದ್ದು, ಚಿಲಿ ದೇಶದ ಸಾಂಟಿಯಾಗೊ ನಗರದಿಂದ 3,790 ಕಿಲೊಮೀಟರ್‌ ದೂರದಲ್ಲಿದೆ. ಇಸವಿ 1888, ಸೆಪ್ಟೆಂಬರ್‌ 9ರಂದು ಅದು ಚಿಲಿ ದೇಶದ ಪ್ರಾಂತ್ಯವಾಗಿ ಪರಿಣಮಿಸಿತು.

ನೂರ ಅರುವತ್ತಾರು ಚದರ ಕಿಲೊಮೀಟರ್‌ಗಳಷ್ಟು ವಿಸ್ತಾರವಾಗಿರುವ ತ್ರಿಕೋನಾಕೃತಿಯ ಈ ದ್ವೀಪವು ಮೂಲಭೂತವಾಗಿ ಮೂರು ನಂದಿಹೋದ ಜ್ವಾಲಾಮುಖಿಗಳಿಂದ ರಚಿತವಾಗಿದೆ. ವಾಸ್ತವದಲ್ಲಿ, ಪೆಸಿಫಿಕ್‌ ಸಾಗರದ ಅನೇಕ ದ್ವೀಪಗಳಂತೆ, ಈ ದ್ವೀಪವೂ ನೀರಿನಡಿಯ ಭಾರೀ ಪರ್ವತಗಳ ಶಿಖರಗಳಿಂದ ರಚಿತವಾಗಿದೆ. ಈ ಇಡೀ ದ್ವೀಪವನ್ನು ಒಂದು ನೈಸರ್ಗಿಕ ಸ್ಮಾರಕವೆಂದು ಘೋಷಿಸಲಾಗಿದೆ. ಈ ದ್ವೀಪವು ಅದರ ರಹಸ್ಯಗರ್ಭಿತವಾದ ಮೋಆಐ ಎಂದು ಕರೆಯಲ್ಪಡುವ ಶಿಲಾಪ್ರತಿಮೆಗಳಿಗೆ ಅತಿ ಪ್ರಸಿದ್ಧವಾಗಿದೆಯೆಂಬುದು ನಿಸ್ಸಂದೇಹ. *

ಈಸ್ಟರ್‌ ಐಲೆಂಡ್‌ ಕಣ್ಮನ ಸೆಳೆಯುವ ಭೂದೃಶ್ಯಗಳ ಮತ್ತು ಐತಿಹಾಸಿಕ ನಿವೇಶನಗಳ ತಾಣ ಮಾತ್ರವಲ್ಲ, ಅದು ರುಚಿಕರವಾದ ವೈವಿಧ್ಯಮಯ ಭಕ್ಷ್ಯಗಳನ್ನೂ ನಮಗೆ ನೀಡುತ್ತದೆ. ಈ ಪ್ರದೇಶವು, ಅನಾನಾಸು, ಆ್ಯವಕಾಡೊ ಹಣ್ಣು, ಪರಂಗಿಹಣ್ಣು, ಮತ್ತು ಒಂಬತ್ತು ವಿಧದ ಬಾಳೆಹಣ್ಣುಗಳಂಥ ಹಣ್ಣುಗಳನ್ನು ಫಲಿಸುತ್ತದೆ. ಮತ್ತು ಸಮುದ್ರವು ವಿವಿಧ ರೀತಿಗಳ ಮೀನು ಮತ್ತು ಇತರ ಕಡಲಾಹಾರವನ್ನು ಒದಗಿಸುತ್ತದೆ.

ಈಸ್ಟರ್‌ ಐಲೆಂಡ್‌ನಲ್ಲಿ ನಿಯತಕ್ರಮದ ಮಳೆ ಮತ್ತು ಮುಗಿಲುಬಿಲ್ಲುಗಳೊಂದಿಗೆ, ಸೌಮ್ಯ ಹವಾಮಾನವಿರುವುದರಿಂದ ಸಂದರ್ಶಕರಿಗೆ ಶುದ್ಧ ಗಾಳಿ ಹಾಗೂ ವಿಹಂಗಮವಾದ ನೋಟಗಳು ದೊರೆಯುತ್ತವೆ. ಈಗ ಅಲ್ಲಿ ಸುಮಾರು 3,800 ನಿವಾಸಿಗಳಿದ್ದಾರೆ. ಇಂದಿನ ನಿವಾಸಿಗಳು, ಯೂರೋಪಿಯನ್‌, ಚಿಲಿಯನ್‌ ಮತ್ತಿತರ ಜನಾಂಗಗಳೊಂದಿಗೆ ಬೆರೆತಿರುವ ಆದಿ ನೆಲಸಿಗರ ವಂಶಸ್ಥರಾಗಿದ್ದಾರೆ. ಯೂರೋಪ್‌ ಮತ್ತು ಏಷ್ಯಾದಿಂದ ನೂರಾರು ಪ್ರವಾಸಿಗರು ಈ ದ್ವೀಪಕ್ಕೆ ಭೇಟಿ ನೀಡುತ್ತಾರೆ, ಮತ್ತು ಇದರಿಂದ ಪ್ರವಾಸೋದ್ಯಮವು ಇಲ್ಲಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ.

ಪ್ರಥಮ ರಾಜ್ಯ ಬೀಜಗಳು ಬಿತ್ತಲ್ಪಡುತ್ತವೆ

ಯೆಹೋವನ ಸಾಕ್ಷಿಗಳ ವರ್ಷಪುಸ್ತಕ 1982 (ಇಂಗ್ಲಿಷ್‌) ಹೀಗೆ ವರದಿ ಮಾಡಿತು: “ಕೆಲವು ಸಮಯದ ವರೆಗೆ ಈಸ್ಟರ್‌ ಐಲೆಂಡ್‌ನಲ್ಲಿ ಕೇವಲ ಒಬ್ಬ ಪ್ರಚಾರಕಿ ಮಾತ್ರ ಇದ್ದಳು. [ಚಿಲಿಯಲ್ಲಿದ್ದ] ಬ್ರಾಂಚ್‌ನ ಒಬ್ಬ ಮಿಷನೆರಿ ಸಹೋದರಿ ಪತ್ರದ ಮೂಲಕ ಈಕೆಗೆ ಆತ್ಮಿಕವಾಗಿ ಸಹಾಯ ನೀಡುತ್ತಿದ್ದಳು. ಆಕೆ ಈಗ ಚಿಲಿಗೆ ಹಿಂದಿರುಗಿ ಬಂದಿರುವುದಾದರೂ ಈ ದ್ವೀಪದಲ್ಲಿರುವ ಕಾವಲಿನಬುರುಜು ಚಂದಾದಾರರ ದಾಖಲೆ ನಮ್ಮಲ್ಲಿದೆ. ಆದರೆ 1980ರ ಏಪ್ರಿಲ್‌ನಲ್ಲಿ, ಆಸಕ್ತನೊಬ್ಬನು ಅಷ್ಟು ದೂರದಿಂದ ನಮಗೆ ಟೆಲಿಫೋನ್‌ ಕರೆ ಮಾಡಿದನು. ಸ್ಮಾರಕ ದಿನಾಚರಣೆಯನ್ನು ಯಾವಾಗ ಆಚರಿಸಬೇಕೆಂಬುದನ್ನು ಅವನು ತಿಳಿಯಬಯಸಿದನು. ಇದು ನಮಗೆ ತುಂಬ ಅಚ್ಚರಿಯನ್ನುಂಟುಮಾಡಿತು. ಅದೇ ವರುಷ ಸ್ವಲ್ಪ ಸಮಯಾನಂತರ ವಾಲ್ಪರೇಸೊ ನಗರದಿಂದ ಒಂದು ವಿವಾಹಿತ ದಂಪತಿಯು ಅಲ್ಲಿಗೆ ಸ್ಥಳಾಂತರಿಸಿ, ಆಸಕ್ತರೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಈ ದ್ವೀಪದಲ್ಲಿ ಏಪ್ರಿಲ್‌ 1981ರಂದು ಪ್ರಥಮ ಬಾರಿ ಜ್ಞಾಪಕ ದಿನಾಚರಣೆಯ ಕೂಟ ನಡೆಯಿತು ಮತ್ತು 13 ಮಂದಿ ಹಾಜರಿದ್ದರು. ‘ಸುವಾರ್ತೆಯು’ ಈ ಏಕಾಂತ ಪ್ರದೇಶವನ್ನು ಸಹ ತೂರಿ ಹೋಗುವುದನ್ನು ನೋಡಲು ನಾವೆಷ್ಟು ಆನಂದಿತರು!”

ಸಮಯಾನಂತರ, 1991ರ ಜನವರಿ 30ರಂದು ಬ್ರಾಂಚ್‌ ಆಫೀಸು ಸ್ಪೆಶಲ್‌ ಪಯನೀಯರರಾದ ಡಾರ್ಯೋ ಮತ್ತು ವಿನೀ ಫೆರ್ನಾಂಡಿಸ್‌ ದಂಪತಿಯನ್ನು ಇಲ್ಲಿಗೆ ಕಳುಹಿಸಿತು. ಸಹೋದರ ಫೆರ್ನಾಂಡಿಸ್‌ ಜ್ಞಾಪಿಸಿಕೊಳ್ಳುವುದು: “ಐದು ತಾಸುಗಳ ವಿಮಾನ ಪ್ರಯಾಣ ನಮ್ಮನ್ನು ಈ ಗ್ರಹದ ಅತ್ಯಂತ ಏಕಾಂತವಾದ ಸ್ಥಳಕ್ಕೆ, ನಿಗೂಢವಾದ ಸಂಸ್ಕೃತಿಯಿರುವ ಈ ಸ್ಥಳಕ್ಕೆ ತಂದು ಬಿಟ್ಟಿತು.” ಒಡನೆ ಅವರು, ಒಬ್ಬ ಸ್ಥಳಿಕ ಸಹೋದರ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಇತ್ತೀಚೆಗೆ ಬಂದಿದ್ದ ಒಬ್ಬ ಸಹೋದರಿಯ ಬೆಂಬಲದೊಂದಿಗೆ ಕೂಟಗಳನ್ನು ಮತ್ತು ಸಾರುವ ಕಾರ್ಯವನ್ನು ಏರ್ಪಡಿಸಿದರು. ಕುಟುಂಬದ ಒತ್ತಡ, ಧಾರ್ಮಿಕ ಹಠೋತ್ಸಾಹ, ಮತ್ತು ಪಾಲಿನೇಷಿಯ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿರುವ ಜೀವನ ಶೈಲಿಗಳ ಹೊರತಾಗಿಯೂ ಅವರು ತಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ಕಂಡರು. ಈಗ ಫೆರ್ನಾಂಡಿಸ್‌ ದಂಪತಿಗಳು ಸ್ಪೆಶಲ್‌ ಪಯನೀಯರರಲ್ಲದಿದ್ದರೂ ಈ ದ್ವೀಪದಲ್ಲೇ ವಾಸಿಸಿ, ಅಲ್ಲಿ ತಮಗೆ ಹುಟ್ಟಿದ ಮಗನನ್ನು ಬೆಳೆಸುತ್ತಿದ್ದಾರೆ. ಇಂದು ಅಲ್ಲಿ 32 ಮಂದಿ ಹರ್ಷಭರಿತ ರಾಜ್ಯ ಪ್ರಚಾರಕರಿದ್ದಾರೆ. ಇವರಲ್ಲಿ ರಾಪಾ ನೂಈಯ ಸ್ಥಳೀಯರೂ ಆ ದ್ವೀಪದಲ್ಲಿ ನೆಲಸಿದವರೂ ಅಥವಾ ರಾಜ್ಯ ಪ್ರಚಾರಕರ ಹೆಚ್ಚು ಆವಶ್ಯಕತೆಯಿದ್ದ ಆ ಪ್ರದೇಶದಲ್ಲಿ ಸೇವೆ ಮಾಡಲಿಕ್ಕಾಗಿ ಬಂದವರೂ ಇದ್ದಾರೆ.

ಸರ್ಕಿಟ್‌ ಸಮ್ಮೇಳನಕ್ಕೆ ಸಿದ್ಧತೆ

ಈ ದ್ವೀಪಕ್ಕೂ ಭೂಖಂಡಕ್ಕೂ ಇರುವ ಬಹು ದೂರದ ದೃಷ್ಟಿಯಿಂದ ಈ ಸಭೆಯು ವರುಷಕ್ಕೆ ಮೂರಾವರ್ತಿ, ವಿಶೇಷ ಸಮ್ಮೇಳನ ದಿನ, ಸರ್ಕಿಟ್‌ ಸಮ್ಮೇಳನ, ಮತ್ತು ಜಿಲ್ಲಾ ಅಧಿವೇಶನಗಳ ವಿಡಿಯೊ ಟೇಪ್‌ಗಳನ್ನು ಪಡೆಯುತ್ತಿತ್ತು. ಆದರೆ ಇಸವಿ 2000ದ ಅಂತ್ಯದೊಳಗೆ, ಚಿಲಿ ದೇಶದ ಬ್ರಾಂಚ್‌ ಆಫೀಸು ಈ ದ್ವೀಪದಲ್ಲಿ ಅದರದ್ದೇ ಆದ ಪ್ರಥಮ ಸಮ್ಮೇಳನವನ್ನು ನಡೆಸುವ ವಿಚಾರದ ಕುರಿತು ಯೋಜಿಸಿತು. ಅಂತಿಮವಾಗಿ ಅದು, ಸರ್ಕಿಟ್‌ ಸಮ್ಮೇಳನವನ್ನು 2001ರ ನವೆಂಬರ್‌ ತಿಂಗಳಿನಲ್ಲಿ ನಡೆಸಲು ನಿರ್ಣಯಿಸಿತು ಮತ್ತು ಈ ವಿಶೇಷ ಸಂದರ್ಭದಲ್ಲಿ ಉಪಸ್ಥಿತರಿರಲು ಚಿಲಿಯ ವಿವಿಧ ಭಾಗಗಳಿಂದ ಸೀಮಿತ ಸಂಖ್ಯೆಯ ಸೋದರಸೋದರಿಯರನ್ನು ಆಮಂತ್ರಿಸಲಾಯಿತು. ವಿಮಾನ ಪ್ರಯಾಣದ ವೇಳಾಪಟ್ಟಿಯ ಕಾರಣ ಸಮ್ಮೇಳನವು ಭಾನುವಾರ ಮತ್ತು ಸೋಮವಾರ ನಡೆಯಲಿತ್ತು.

ಆ ಏಕಾಂತ ಪ್ರದೇಶದಲ್ಲಿ ನಡೆಯಲಿದ್ದ ಪ್ರಥಮ ಸರ್ಕಿಟ್‌ ಸಮ್ಮೇಳನಕ್ಕೆ ಹಾಜರಾಗಲು ಆ ದ್ವೀಪಕ್ಕೆ ಪ್ರಯಾಣಿಸುವ ಯೋಚನೆಯು 33 ಮಂದಿ ಆಮಂತ್ರಿತ ಪ್ರತಿನಿಧಿಗಳನ್ನು ರೋಮಾಂಚಗೊಳಿಸಿತು. ಪೆಸಿಫಿಕ್‌ ಸಾಗರದ ಮೇಲೆ ದೀರ್ಘ ಕಾಲದ ವಿಮಾನಯಾನದ ಬಳಿಕ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಕಾಯುತ್ತಿದ್ದ ಸ್ಥಳಿಕ ಸಹೋದರರನ್ನು ನೋಡುವಾಗ ಆ ಪ್ರತಿನಿಧಿಗಳಿಗೆ ತುಂಬ ಹಾಯೆನಿಸಿತು. ಪ್ರತಿನಿಧಿಗಳಿಗೆ ಲೇ ಹಾರ (ಹೂವಿನ ಎಸಳುಗಳಿಂದ ಮಾಡಿದ ಹಾರ) ಹಾಕಿ ವಂದಿಸಲಾಯಿತು. ಬಳಿಕ ಅವರನ್ನು ಅವರ ವಸತಿಗಳಿಗೆ ಕರೆದೊಯ್ಯಲಾಯಿತು, ಮತ್ತು ದ್ವೀಪದ ಅಲ್ಪಕಾಲಿಕ ದೃಶ್ಯವೀಕ್ಷಣವಾದ ನಂತರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲರು ರಾಜ್ಯ ಸಭಾಗೃಹದಲ್ಲಿ ಕೂಡಿಬಂದರು.

ಅನಿರೀಕ್ಷಿತ ಮೂಲದಿಂದ ಪ್ರಚಾರ

ಸಮ್ಮೇಳನಕ್ಕೆ ವಾಹನದಲ್ಲಿ ಹೋಗುತ್ತಿರುವಾಗ ರೇಡಿಯೋದಲ್ಲಿ ಸ್ಥಳಿಕ ಪಾದ್ರಿಯೊಬ್ಬನು, ಪ್ರತಿನಿಧಿಗಳ ಭೇಟಿಯ ಕುರಿತು ಮಾತಾಡುತ್ತಿರುವುದನ್ನು ಕೇಳಿ ಅವರಿಗೆ ಆಶ್ಚರ್ಯವಾಯಿತು. ಭೂಖಂಡದಿಂದ ಬಂದಿರುವ ಪ್ರವಾಸಿಗಳು ದ್ವೀಪನಿವಾಸಿಗಳ ಮನೆಗಳಿಗೆ ಭೇಟಿನೀಡಿ, ಬರಲಿರುವ ಲೋಕಾಂತ್ಯದ ಕುರಿತು ಮಾತಾಡುವರೆಂದು ಅವನು ಹೇಳುತ್ತಿದ್ದನು. ಚರ್ಚ್‌ ಸಭೆಯವರು ಆ ಭೇಟಿಕಾರರಿಗೆ ಕಿವಿಗೊಡಬಾರದೆಂದು ಅವನು ಪ್ರೋತ್ಸಾಹಿಸಿದರೂ, ಅವನ ಪ್ರಕಟನೆಯಿಂದಾಗಿ, ಆ ದ್ವೀಪದಲ್ಲಿ ಯೆಹೋವನ ಸಾಕ್ಷಿಗಳ ದೊಡ್ಡ ಗುಂಪೊಂದು ಇದೆಯೆಂಬ ಸುದ್ದಿಯು ಪ್ರಚಾರಗೊಂಡಿತು. ಇದು ದ್ವೀಪನಿವಾಸಿಗಳ ಕಾತುರವನ್ನು ಕೆರಳಿಸಿತು. ಮುಂದಿನ ದಿನಗಳಲ್ಲಿ, ಪ್ರತಿನಿಧಿಗಳು ಸುವಾರ್ತೆಯ ಪ್ರೋತ್ಸಾಹಕರವಾದ ಸಂದೇಶವನ್ನು ಸಮಯೋಚಿತ ನಯದಿಂದ ಜನರಿಗೆ ಹಂಚಿದರು.

ಸಮ್ಮೇಳನವು ಶುರುವಾಗುತ್ತದೆ

ಭಾನುವಾರ ಬೆಳಿಗ್ಗೆ ಸ್ಥಳಿಕ ಸಹೋದರರು ಪ್ರಥಮ ದಿನದ ಸಮ್ಮೇಳನಕ್ಕಾಗಿ ಪ್ರತಿನಿಧಿಗಳನ್ನು ಸ್ವಾಗತಿಸಲು ರಾಜ್ಯ ಸಭಾಗೃಹದ ಪ್ರವೇಶದ್ವಾರದಲ್ಲಿ ಕಾಯುತ್ತಿದ್ದರು. “ಇಓರಾನಾ ಕೋಯೆ! ಇಓರಾನಾ ಕೋಯೆ!” “ಸ್ವಾಗತ!” ಕೆಲವು ಸಹೋದರಿಯರು ಸಾಂಪ್ರದಾಯಿಕ ಉಡುಪನ್ನು ತೊಟ್ಟು, ಅಪ್ಪಟ ಪಾಲಿನೇಷಿಯನ್‌ ಶೈಲಿಯಲ್ಲಿ ತಮ್ಮ ಕೂದಲನ್ನು ಸೊಗಸಾದ ಹೂವುಗಳಿಂದ ಸಿಂಗರಿಸಿದ್ದರು.

ಪೀಠಿಕಾರೂಪದ ಸುಶ್ರಾವ್ಯ ಸಂಗೀತದ ಬಳಿಕ, “ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!” ಎಂಬ ಗೀತೆಯನ್ನು, ಒಂದು ನೂರು ಸ್ವರಗಳು ಆ ದ್ವೀಪದಲ್ಲಿ ಹಿಂದೆಂದೂ ಕೇಳಿಬಂದಿರದ ರೀತಿಯಲ್ಲಿ ಕೂಡಿ ಹಾಡಿದವು. ಅಧ್ಯಕ್ಷನು ತಮ್ಮ ನಾಡಿನ ಭಾಷೆಯಾದ ರಾಪಾ ನೂಈಯಲ್ಲಿ ಹಾರ್ದಿಕ ಸ್ವಾಗತವನ್ನು ಬಯಸಿದಾಗ ಸ್ಥಳಿಕ ಸಹೋದರರು ಆನಂದಬಾಷ್ಪವನ್ನು ಸುರಿಸಿದರು. ಮಧ್ಯಾಹ್ನದ ವಿರಾಮ ವೇಳೆಯಲ್ಲಿ ಮೂವರು ಹೊಸ ಸಾಕ್ಷಿಗಳು ನೀರಿನ ದೀಕ್ಷಾಸ್ನಾನದ ಮೂಲಕ ದೇವರಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು. ಪ್ರಥಮ ದಿನದ ಕಾರ್ಯಕ್ರಮ ಮುಕ್ತಾಯಗೊಂಡಾಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಯೆಹೋವನಿಗೆ ಮತ್ತು ಇಡೀ ಸಹೋದರ ಬಳಗಕ್ಕೆ ಇನ್ನೂ ಸಮೀಪವಾಗಿರುವ ಅನಿಸಿಕೆಯಾಯಿತು.​—⁠1 ಪೇತ್ರ 5:⁠9.

ಬೆಳಿಗ್ಗಿನ ಸಾಕ್ಷಿಸೇವೆ

ಆ ದ್ವೀಪದ ವಿಶೇಷ ಪರಿಸ್ಥಿತಿಗಳ ಕಾರಣ, ಆ ಸರ್ಕಿಟ್‌ ಸಮ್ಮೇಳನದ ಎರಡನೆಯ ದಿನದ ಕಾರ್ಯಕ್ರಮವು ಮಧ್ಯಾಹ್ನದ ಊಟದ ಬಳಿಕ ಆರಂಭಗೊಂಡಿತು. ಆ ಸನ್ನಿವೇಶವನ್ನು ಸದ್ವಿನಿಯೋಗಿಸುತ್ತಾ ಪ್ರತಿನಿಧಿಗಳು ಆ ಬೆಳಿಗ್ಗಿನ ಸಮಯವನ್ನು ಕ್ಷೇತ್ರ ಶುಶ್ರೂಷೆಯಲ್ಲಿ ಉಪಯೋಗಿಸಿದರು. ಅವರಿಗೆ ಯಾವ ಅನುಭವಗಳು ಕಾದಿದ್ದವು?

ಎಂಟು ಮಂದಿ ಮಕ್ಕಳಿದ್ದ ವೃದ್ಧೆಯೊಬ್ಬಳು, ತಾನು ಕ್ಯಾಥೋಲಿಕಳಾಗಿದ್ದುದರಿಂದ ಸಾಕ್ಷಿಗಳೊಂದಿಗೆ ಮಾತಾಡುವುದಿಲ್ಲವೆಂದು ಹೇಳಿದಳು. ಆದರೆ ಸಾಕ್ಷಿಗಳು, ಪ್ರತಿಯೊಬ್ಬನೂ ಎದುರಿಸುವ ಸಮಸ್ಯೆಗಳ ಬಗ್ಗೆ ಅಂದರೆ ಮಾದಕ ಪದಾರ್ಥದ ದುರುಪಯೋಗ, ಮತ್ತು ಕುಟುಂಬ ಸಮಸ್ಯೆಗಳಂಥ ವಿಷಯಗಳ ಬಗ್ಗೆ ತಾವು ಮಾತಾಡುತ್ತೇವೆಂದು ತಿಳಿಸಿದಾಗ ಆಕೆ ಕಿವಿಗೊಡಲು ಒಪ್ಪಿಕೊಂಡಳು.

ಮತ್ತೊಬ್ಬ ಸ್ಥಳಿಕ ವೃದ್ಧೆಯು ಸಾಕ್ಷಿ ದಂಪತಿಗಳನ್ನು ಆದರದಿಂದ ಬರಮಾಡಲಿಲ್ಲ. ಇತರರಿಗೆ ಕ್ರೌರ್ಯವನ್ನು ತೋರಿಸುವ ದಕ್ಷಿಣ ಅಮೆರಿಕ ಭೂಖಂಡದ ಜನರಿಗೆ ಹೋಗಿ ಸಾರಿರಿ ಎಂದು ಹೇಳಿದಳು. ಆಗ ದಂಪತಿಗಳು ಅವಳಿಗೆ, “ರಾಜ್ಯದ ಸುವಾರ್ತೆ”ಯ ಸಂದೇಶವು ಎಲ್ಲರಿಗೂ ನೀಡಲ್ಪಡುತ್ತದೆಂದು ತಿಳಿಸಿದರು ಮತ್ತು ದೇವರ ಕಡೆಗಿರುವ ಪ್ರೀತಿಯಲ್ಲಿ ಎಲ್ಲರೂ ಬೆಳೆಯುವಂತೆ ಸಹಾಯಮಾಡುವ ಸಮ್ಮೇಳನವೊಂದಕ್ಕೆ ಹಾಜರಾಗಲಿಕ್ಕಾಗಿಯೇ ತಾವು ಈ ದ್ವೀಪಕ್ಕೆ ಬಂದಿದ್ದೇವೆಂದು ತಿಳಿಸಿದರು. (ಮತ್ತಾಯ 24:14) ದ್ವೀಪದಲ್ಲಿರುವ ಪರಿಸ್ಥಿತಿಗಳಿಗೆ ತದ್ರೂಪವಾದ ಆದರೆ ರೋಗ, ಮರಣಗಳಿಲ್ಲದ ಪರದೈಸಿಕ ಪರಿಸ್ಥಿತಿಗಳಲ್ಲಿ ದೀರ್ಘಾಯುಷ್ಯದಲ್ಲಿ ಆನಂದಿಸಲು ಮನಸ್ಸಿದೆಯೆ ಎಂದು ಅವರು ಆಕೆಗೆ ಕೇಳಿದರು. ದ್ವೀಪದ ಜ್ವಾಲಾಮುಖಿಯ ಕುಳಿಗಳು ಎಷ್ಟು ಕಾಲದಿಂದ ಅಸ್ತಿತ್ವದಲ್ಲಿವೆ ಎಂಬ ವಿಷಯದ ಕುರಿತು ತರ್ಕಿಸಿದ ನಂತರ, ಆಕೆ ಮಾನವ ಜೀವಿತದ ಅಲ್ಪಾವಧಿಯ ಕುರಿತು ಧ್ಯಾನಿಸಿ, “ನಾವೇಕೆ ಕೇವಲ ಸ್ವಲ್ಪ ಸಮಯದ ವರೆಗೆ ಮಾತ್ರ ಜೀವಿಸುತ್ತೇವೆ?” ಎಂದು ಕೇಳಿದಳು. ಕೀರ್ತನೆ 90:10ನ್ನು ಓದಿದಾಗ ಆಕೆ ಅಚ್ಚರಿಗೊಂಡಳು.

ಆ ಕ್ಷಣದಲ್ಲಿ, ಸಾಕ್ಷಿಗಳಿಗೆ ಪಕ್ಕದ ಮನೆಯಿಂದ ಅಬ್ಬರ ಕೇಳಿಬಂತು. ಅವರಿಗೆ ಆ ಬೊಬ್ಬೆ ಅರ್ಥವಾಗದಿದ್ದರೂ, ನೆರೆಯವರು ಅವರನ್ನು ಹೀನೈಸುತ್ತಿದ್ದಾರೆಂದೂ ಸಾಕ್ಷಿಗಳು ಅವರ ಮನೆಗೆ ಭೇಟಿ ನೀಡಬಾರದೆಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆಂದೂ ಆ ಸ್ತ್ರೀ ಹೇಳಿದಳು. ಆದರೆ ಈ ಸ್ತ್ರೀ ಆ ಕುಟುಂಬದ ಜ್ಯೇಷ್ಠ ಪುತ್ರಿ, “ನೂಅ” ಆಗಿದ್ದಳು. ಆಕೆಯ ತಂದೆ ಸತ್ತಿದ್ದುದರಿಂದ ಕುಟುಂಬದ ಒಳಿತಿಗಾಗಿ ನಿರ್ಣಯ ಮಾಡುವುದು ಆಕೆಯ ಕರ್ತವ್ಯವಾಗಿತ್ತು. ಆಕೆ ತನ್ನ ಸಂಬಂಧಿಗಳ ಮುಂದೆ, ತನ್ನ ಮಾತೃಭಾಷೆಯಲ್ಲಿ ಸಾಕ್ಷಿಗಳನ್ನು ಸಮರ್ಥಿಸಿ, ನೀಡಲ್ಪಟ್ಟ ಸಾಹಿತ್ಯಗಳನ್ನು ದಯೆಯಿಂದ ಸ್ವೀಕರಿಸಿದಳು. ಅದೇ ವಾರ, ಸಾಕ್ಷಿಗಳನ್ನು ಕಾರಿನಲ್ಲಿ ದಾಟಿ ಹೋಗುತ್ತಿದ್ದಾಗ, ತನ್ನ ತಮ್ಮನು ಕಾರನ್ನು ನಿಲ್ಲಿಸುವಂತೆ ಆಕೆ ಹೇಳಿದಳು. ಅವನು ತೀರ ಅಸಮಾಧಾನವನ್ನು ತೋರಿಸಿದರೂ, ಆಕೆ ಸಹೋದರರನ್ನು ಬೀಳ್ಕೊಟ್ಟು, ಅವರ ಸೇವೆಯಲ್ಲಿ ಅವರಿಗೆ ಯಶಸ್ಸನ್ನು ಹಾರೈಸಿದಳು.

ಆರಂಭದಲ್ಲಿ, ದ್ವೀಪನಿವಾಸಿಗಳಲ್ಲಿ ಕೆಲವರು ದಕ್ಷಿಣ ಅಮೆರಿಕದ ಭೂಖಂಡದ ಸಾಕ್ಷಿಗಳು ಸಾರುತ್ತಿದ್ದ ಸಂದೇಶವನ್ನು ತಿರಸ್ಕರಿಸುತ್ತಿರುವಂತೆ ತೋರಿದರೂ, ರಾಪಾ ನೂಈ ಜನರು ಸ್ವಾಭಾವಿಕವಾಗಿ ದಯಾಪರರೂ ಸ್ನೇಹಭಾವದವರೂ ಎಂಬುದು ಸಂದರ್ಶಕರಿಗೆ ವ್ಯಕ್ತವಾಯಿತು. ಅವರಲ್ಲಿ ಹೆಚ್ಚಿನವರು ಸುವಾರ್ತೆಗೆ ಸಂತೋಷದಿಂದ ಕಿವಿಗೊಟ್ಟರು. ವಾಸ್ತವದಲ್ಲಿ, ಆ ದ್ವೀಪದಲ್ಲಿ ದೀಕ್ಷಾಸ್ನಾನ ಹೊಂದಿದ್ದ 20 ಮಂದಿ ಸಾಕ್ಷಿಗಳಲ್ಲಿ ಆರು ಮಂದಿ ಸ್ಥಳಿಕ ನಿವಾಸಿಗಳಾಗಿದ್ದಾರೆ. ಇವರಲ್ಲಿ ಒಬ್ಬನು, ಬೈಬಲ್‌ ಸತ್ಯವನ್ನು ಮೊದಲಾಗಿ ಕಲಿತದ್ದು, ತನ್ನ ಹೆಂಡತಿಯೊಂದಿಗೆ ಮಾಡಲ್ಪಡುತ್ತಿದ್ದ ಅಧ್ಯಯನಕ್ಕೆ ಬೇರೊಂದು ಕೋಣೆಯಿಂದ ಕಿವಿಗೊಡುವ ಮೂಲಕವೇ. ಈಗ ಅವನು ಮತ್ತು ಅವನ ಹೆಂಡತಿ ಸ್ನಾತ ಸಾಕ್ಷಿಗಳಾಗಿದ್ದಾರೆ ಮತ್ತು ಸಭೆಯಲ್ಲಿ ಅವನೊಬ್ಬ ಶುಶ್ರೂಷಾ ಸೇವಕನಾಗಿದ್ದಾನೆ.

ಆಧ್ಯಾತ್ಮಿಕ ಕಾರ್ಯಕ್ರಮವು ಮುಂದುವರಿಯುತ್ತದೆ

ಮಧ್ಯಾಹ್ನದ ಊಟದ ಬಳಿಕ, ಎರಡನೆಯ ದಿನದ ಕಾರ್ಯಕ್ರಮ ಆರಂಭಗೊಂಡಿತು. ಪುನಃ ಆ 32 ಮಂದಿ ಸ್ಥಳಿಕ ಸೋದರಸೋದರಿಯರು ಮತ್ತು 33 ಮಂದಿ ಪ್ರತಿನಿಧಿಗಳೊಂದಿಗೆ ಅನೇಕ ಆಸಕ್ತರು ಜೊತೆಗೂಡಿದರು. “ಪ್ರೀತಿ ಮತ್ತು ನಂಬಿಕೆ ಲೋಕವನ್ನು ಹೇಗೆ ಜಯಿಸುತ್ತದೆ?” ಎಂಬ ಸಾರ್ವಜನಿಕ ಭಾಷಣವನ್ನು ಸೇರಿಸಿ ಆ ಕಾರ್ಯಕ್ರಮಕ್ಕೆ ಸುಮಾರು ನೂರು ಮಂದಿ ಕಿವಿಗೊಟ್ಟರು. ವಾಸ್ತವದಲ್ಲಿ, ಅಲ್ಲಿ ಉಪಸ್ಥಿತರಾಗಿದ್ದವರು ಯೆಹೋವನ ಜನರ ಮಧ್ಯೆ, ವಿವಿಧ ಸಂಸ್ಕೃತಿಯವರ ಮಧ್ಯೆಯೂ ಇರುವ ಪ್ರೀತಿಯ ಸಜೀವ ಪ್ರದರ್ಶನವನ್ನು ನೋಡಿದರು.​—⁠ಯೋಹಾನ 13:35.

ಆ ಸರ್ಕಿಟ್‌ ಸಮ್ಮೇಳನದ ಸಮಯದಲ್ಲಿ, ಸರ್ಕಿಟ್‌ ಮತ್ತು ಜಿಲ್ಲಾ ಮೇಲ್ವಿಚಾರಕರು ಪಯನೀಯರ್‌ ಶುಶ್ರೂಷಕರೊಂದಿಗೆ ಒಂದು ವಿಶೇಷ ಕೂಟವನ್ನು ನಡೆಸಿದರು. ಆ ದ್ವೀಪದ ಮೂವರು ರೆಗ್ಯುಲರ್‌ ಪಯನೀಯರರೊಂದಿಗೆ ಪ್ರತಿನಿಧಿಗಳಾಗಿ ಬಂದಿದ್ದ ರೆಗ್ಯುಲರ್‌ ಮತ್ತು ಸ್ಪೆಶಲ್‌ ಪಯನೀಯರರು ಜೊತೆಗೂಡಿದರು. ಹೀಗೆ ಎಲ್ಲರೂ ಬಹಳಷ್ಟು ಪ್ರೋತ್ಸಾಹಿಸಲ್ಪಟ್ಟರು.

ಮರುದಿನ, ಗೈಡ್‌ಗಳಾಗಿ ಕೆಲಸ ಮಾಡುವ ಕೆಲವು ಸ್ಥಳಿಕ ಸಹೋದರರು, ಪ್ರತಿನಿಧಿಗಳನ್ನು ಆ ದ್ವೀಪದ ಪ್ರವಾಸಕ್ಕೆ ಕೊಂಡೊಯ್ದರು. ಅವರು ಮೋಆಐಗಳು ಕೆತ್ತಲ್ಪಟ್ಟಿದ್ದ ಕಲ್ಲುಗಣಿಗಳನ್ನು, ಹಾಗೂ ಎಲ್ಲಿ ಪುರಾತನ ಸ್ಪರ್ಧೆಗಳು ನಡೆಯುತ್ತಿದ್ದವೊ ಆ ಜ್ವಾಲಾಮುಖಿಗಳನ್ನು ಮತ್ತು ಆ ದ್ವೀಪದ ಮೊದಲ ನೆಲಸಿಗರು ಎಲ್ಲಿ ಬಂದಿಳಿದಿದ್ದರೊ ಆ ಸುಂದರವಾದ ಸ್ವರ್ಣಮರಳಿನ ಆನಾಕೇನಾ ಸಮುದ್ರತೀರವನ್ನು ಸಂದರ್ಶಿಸಿದರು. *

ಸ್ಥಳಿಕ ಸಹೋದರರೊಂದಿಗೆ ಕೂಡಿ ಬರಲು ಇದ್ದ ಕೊನೆಯ ಸಂದರ್ಭವು ಸಭಾ ಪುಸ್ತಕ ಅಧ್ಯಯನವಾಗಿತ್ತು. ಆ ಕೂಟ ಮುಗಿದಾಗ, ಸ್ಥಳಿಕ ಸಾಕ್ಷಿಗಳು ತಮ್ಮ ಅತಿಥಿಗಳಿಗೆ ಅಲ್ಲಿನ ಒಂದು ಮಾದರಿ ಊಟವನ್ನು ಬಡಿಸಿ, ಅನಿರೀಕ್ಷಿತವಾದ ಅಚ್ಚರಿಯನ್ನು ಕೊಟ್ಟರು. ನಂತರ ಅವರ ನಾಡಿನ ವೇಶಭೂಷಣಗಳೊಂದಿಗೆ ಅವರು ಒಂದು ಉತ್ತಮವಾದ ಜಾನಪದ ನೃತ್ಯವನ್ನು ಕುಣಿಸಿ ತೋರಿಸಿದರು. ಸಮ್ಮೇಳನಕ್ಕಾಗಿ ಮಾಡಲ್ಪಟ್ಟಿದ್ದ ಪ್ರಯತ್ನ ಮತ್ತು ಸಿದ್ಧತೆಗಳು ಸಾರ್ಥಕವಾಗಿದ್ದವೆಂದು ಪ್ರತಿನಿಧಿಗಳಿಗೂ ರಾಪಾ ನೂಈ ಸೋದರಸೋದರಿಯರಿಗೂ ಖಚಿತವಾಯಿತು.

ಪ್ರತಿನಿಧಿಗಳಾಗಿ ಬಂದಿದ್ದ ಎಲ್ಲರಿಗೂ, ತಾವು ಯಾರೊಂದಿಗೆ ಒಂದು ರೋಮಾಂಚಕ ವಾರವನ್ನು ಕಳೆದಿದ್ದರೊ ಆ ದೂರದ ಸೋದರಸೋದರಿಯೊಂದಿಗೆ ಆಪ್ತತೆಯ ಭಾವನೆಯನ್ನು ಬೆಳೆಸಿಕೊಂಡರು. ಆದುದರಿಂದ ಆ ದ್ವೀಪವನ್ನು ಬಿಟ್ಟು ಹೋಗುವುದು ಕಷ್ಟಕರವಾಗಿತ್ತು. ಅವರು ಪಡೆದಂಥ ಹೊಸ ಸ್ನೇಹಿತರನ್ನೂ, ಆತ್ಮಿಕ ಪ್ರೋತ್ಸಾಹವನ್ನೂ ಅವರು ಸದಾ ನೆನಪಿಸಿಕೊಳ್ಳಲಿದ್ದರು. ವಿಮಾನ ನಿಲ್ದಾಣದಲ್ಲಿ, ಸ್ಥಳಿಕ ಸಹೋದರರು ತಾವೇ ತಯಾರಿಸಿದ್ದ ಕಡಲಚಿಪ್ಪಿನ ಕಂಠಹಾರಗಳನ್ನು ಪ್ರತಿನಿಧಿಗಳಿಗೆ ಹಾಕಿ ಅಲಂಕರಿಸಿದರು.

ಪ್ರತಿನಿಧಿಗಳು ಬೀಳ್ಕೊಡುವಾಗ, “ಗುಡ್‌ಬೈ! ರಾಪಾ ನೂಈ, ನಾನು ಹಿಂದಿರುಗಿ ಬರುವೆ” ಎಂಬ ಅರ್ಥದ, “ಇಓರಾನಾ! ಲಾವ್‌ ಹೆ ಹೋಕಿ ಮಾಯಿ ಎ ರಾಪಾ ನೂಈ ಈ” ಎಂದು ವಚನಕೊಟ್ಟರು. ಹೌದು, ಈ ಅಸಾಮಾನ್ಯ, ಏಕಾಂತ, ನಿಗೂಢ ಸ್ಥಳವನ್ನೂ ಮತ್ತು ಸ್ನೇಹಪರರಾದ ಈಸ್ಟರ್‌ ಐಲೆಂಡ್‌ನಲ್ಲಿರುವ ಹೊಸ ಸ್ನೇಹಿತರು ಹಾಗೂ ಆಧ್ಯಾತ್ಮಿಕ ಕುಟುಂಬದ ಸದಸ್ಯರನ್ನೂ ಇನ್ನೊಮ್ಮೆ ಭೇಟಿನೀಡಲು ಅವರು ತುಂಬ ಎದುರುನೋಡುತ್ತಾರೆ!

[ಪಾದಟಿಪ್ಪಣಿಗಳು]

^ ಪ್ಯಾರ. 4 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ, 2000, ಜುಲೈ 8ರ ಎಚ್ಚರ! ಪತ್ರಿಕೆಯನ್ನು ನೋಡಿ.

^ ಪ್ಯಾರ. 27 ರಾನೋ ರಾರಾಕು ಜ್ವಾಲಾಮುಖಿಯ ಕುಳಿಗಳಲ್ಲಿ ಅನೇಕ ಕಲ್ಲುಕೆತ್ತನೆಗಳಿವೆ. ದ್ವೀಪವನ್ನು ಆಳಬಯಸಿದವರ ನಡುವೆ ನಡೆಯುತ್ತಿದ್ದ ಸ್ಪರ್ಧೆಯ ಆರಂಭಸ್ಥಾನವು ರಾನೋ ಕೌನಲ್ಲಿತ್ತು. ಈ ಸ್ಪರ್ಧೆಯಲ್ಲಿ ಒಬ್ಬನು ಕಡಿದಾದ ಬಂಡೆಯನ್ನು ಇಳಿದು, ಅಲ್ಲಿಂದ ಈಜುತ್ತಾ ಸಣ್ಣ ದ್ವೀಪಗಳಲ್ಲೊಂದಕ್ಕೆ ಹೋಗಿ, ಒಂದು ಸ್ಥಳಿಕ ಪಕ್ಷಿಯ ಮೊಟ್ಟೆಯನ್ನು ಪಡೆದುಕೊಂಡು, ಮುಖ್ಯ ದ್ವೀಪಕ್ಕೆ ಈಜುತ್ತಾ ಬಂದು, ಆ ಮೊಟ್ಟೆಗೆ ಯಾವ ಹಾನಿಯೂ ಆಗದೆ ಕಡಿದಾದ ಬಂಡೆಯನ್ನು ಹತ್ತಿ ಬರುವುದು ಸೇರಿತ್ತು.

[ಪುಟ 24ರಲ್ಲಿರುವ ಚೌಕ]

ಈಸ್ಟರ್‌ ಐಲೆಂಡ್‌ನಲ್ಲಿ ಸಾಕ್ಷಿ ನೀಡುವುದು

ಈ ಸ್ಮರಣಾರ್ಹ ಸಮ್ಮೇಳನಕ್ಕೆ ಎರಡು ವರುಷಗಳಿಗೆ ಮುಂಚೆ, ಒಬ್ಬ ಸರ್ಕಿಟ್‌ ಮೇಲ್ವಿಚಾರಕನೂ ಅವನ ಪತ್ನಿಯೂ ಈ ದ್ವೀಪಕ್ಕೆ ಭೇಟಿಕೊಟ್ಟು ಅನೇಕ ಹಿತಕರವಾದ ಅನುಭವಗಳನ್ನು ಪಡೆದರು. ದೃಷ್ಟಾಂತಕ್ಕೆ, ಅವರನ್ನು ತಮ್ಮ ವಸತಿಸೌಕರ್ಯಕ್ಕೆ ಕರೆದುಕೊಂಡು ಹೋದ ಸಹೋದರಿಯು, ಸುಮಾರು ಹದಿನಾರು ವರುಷಗಳ ಹಿಂದೆ ಅವಳು ದಕ್ಷಿಣ ಚಿಲಿಯಲ್ಲಿದ್ದು, ಹದಿಪ್ರಾಯದವಳಾಗಿದ್ದಾಗ ಅವರು ಅವಳೊಡನೆ ಬೈಬಲ್‌ ಅಧ್ಯಯನ ನಡೆಸಿದ್ದರೆಂದು ಹೇಳಿದಾಗ ಅವರಿಗಾದ ಆಶ್ಚರ್ಯವನ್ನು ಭಾವಿಸಿರಿ. ಕೊನೆಗೆ ಆ ಬೀಜವು ರಾಪಾ ನೂಈಯಲ್ಲಿ ಫಲಬಿಟ್ಟಿತು.

ಅವರಿಗೆ ಈ ನಗೆ ಬರಿಸುವ ಅನುಭವವೂ ಆಯಿತು: ಒಂದು ಸ್ಮಾರಕ ವಸ್ತುಭಂಡಾರದ ಧಣಿಯು ಅವರಿಂದ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲನ್ನೂ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಬೈಬಲ್‌ ಅಧ್ಯಯನ ಪುಸ್ತಕವನ್ನೂ ಪಡೆದುಕೊಂಡನು. ಅವರು ಅವನನ್ನು ಪುನರ್‌ಭೇಟಿ ಮಾಡಿದಾಗ, ತನಗೆ ಬೈಬಲನ್ನು ಓದಲು ಸಾಧ್ಯವಾಗಲಿಲ್ಲ ಎಂದು ಅವನು ಹೇಳಿದನು. ಅವರು ಸ್ಪ್ಯಾನಿಷ್‌ ಬೈಬಲನ್ನು ಬಿಟ್ಟು ಹೋಗುವ ಬದಲಿಗೆ ಫ್ರೆಂಚ್‌ ಬೈಬಲನ್ನು ಬಿಟ್ಟುಹೋಗಿದ್ದರು! ಈ ಸಮಸ್ಯೆಯು ಬೇಗನೆ ಬಗೆಹರಿಸಲ್ಪಟ್ಟಿತು ಮತ್ತು ಸ್ಥಳಿಕ ಸಾಕ್ಷಿಗಳ ಸಹಾಯದಿಂದ ಹಾಗೂ ತನ್ನ ಸ್ವಂತ ಭಾಷೆಯ ಬೈಬಲಿನ ಸಹಾಯದಿಂದ ಬೈಬಲನ್ನು ಅರ್ಥಮಾಡಿಕೊಳ್ಳುವುದು ಅಷ್ಟೊಂದು ಕಷ್ಟಕರವಲ್ಲವೆಂಬುದನ್ನು ಅವನು ಮನಗಂಡನು.

[ಪುಟ 22ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಈಸ್ಟರ್‌ ಐಲೆಂಡ್‌

ಚಿಲಿ

[ಪುಟ 23ರಲ್ಲಿರುವ ಚಿತ್ರಗಳು]

ಸರ್ಕಿಟ್‌ ಸಮ್ಮೇಳನದಲ್ಲಿ ದೀಕ್ಷಾಸ್ನಾನಪಡೆದವರಲ್ಲಿ ಇಬ್ಬರು

[ಪುಟ 25ರಲ್ಲಿರುವ ಚಿತ್ರಗಳು]

ರಾನೊ ರಾರಾಕು ಜ್ವಾಲಾಮುಖಿಯ ಇಳುಕಲು; ಒಳಚಿತ್ರ: ಗ್ವಾಯಾಬಾ ಎಂಬ ಹೆಸರಿನ ಹಣ್ಣು ಈ ದ್ವೀಪದಲ್ಲಿ ಬೆಳೆಯುತ್ತದೆ