ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮವು ಮಾನವಕುಲದ ಸಮಸ್ಯೆಗಳಿಗೆ ಮೂಲಕಾರಣವೊ?

ಧರ್ಮವು ಮಾನವಕುಲದ ಸಮಸ್ಯೆಗಳಿಗೆ ಮೂಲಕಾರಣವೊ?

ಧರ್ಮವು ಮಾನವಕುಲದ ಸಮಸ್ಯೆಗಳಿಗೆ ಮೂಲಕಾರಣವೊ?

“ಧರ್ಮವು ಕಲಹಗಳನ್ನು ಚಿತಾಯಿಸದಿರುವ ಸಮಯದಲ್ಲಿ ಮಾನವ ಮನಸ್ಸಾಕ್ಷಿಯನ್ನು ಮರಗಟ್ಟಿಸುವ ಮತ್ತು ಮನುಷ್ಯನ ತಲೆಯನ್ನು ವಾಸ್ತವಿಕತೆಯಿಂದ ದೂರ ಕೊಂಡೊಯ್ಯುವ ಭ್ರಾಂತಿಗಳಿಂದ ತುಂಬಿಸುವ ಮಾದಕ ಪದಾರ್ಥದಂತೆ ಕೆಲಸಮಾಡುತ್ತದೆ. . . . ಅದು ಮಾನವರನ್ನು ಸಂಕುಚಿತ ಮನಸ್ಸಿನವರು, ಮೂಢನಂಬಿಕೆಯುಳ್ಳವರು, ದ್ವೇಷ ಮತ್ತು ಆತಂಕಭರಿತರಾಗುವಂತೆ ಮಾಡುತ್ತದೆ. . . . ಈ ಆರೋಪಗಳು ಸತ್ಯವಾಗಿವೆ. ಕೆಟ್ಟ ಮತ್ತು ಒಳ್ಳೆಯ ಧರ್ಮಗಳಿವೆ” ಎಂದು ಮಾಜಿ ಮೆಥಡಿಸ್ಟ್‌ ಮಿಷನೆರಿಯೊಬ್ಬರು ಬರೆದರು​—⁠ನಿಮ್ಮ ಸ್ವಂತ ಧರ್ಮವನ್ನು ಆರಂಭಿಸಿರಿ (ಇಂಗ್ಲಿಷ್‌).

‘ಇದು ನಿಶ್ಚಯವಾಗಿಯೂ ಅನುಚಿತವಾದ ಟೀಕೆಯಾಗಿದೆ’ ಎಂದು ಕೆಲವರು ಹೇಳಬಹುದು. ಆದರೂ ಐತಿಹಾಸಿಕ ನಿಜತ್ವಗಳನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಯಾವುದನ್ನು “ದೇವರ ಅಥವಾ ಪ್ರಕೃತ್ಯತೀತ ಸಂಗತಿಯ ಸೇವೆ ಮತ್ತು ಆರಾಧನೆ” ಎಂದು ಅರ್ಥನಿರೂಪಿಸಲಾಗಿದೆಯೊ ಆ ಧರ್ಮಕ್ಕೆ ಬಹುಮಟ್ಟಿಗೆ, ಹೇವರಿಕೆ ಹುಟ್ಟಿಸುವಂಥ ಚರಿತ್ರೆಯಿದೆ. ವಾಸ್ತವದಲ್ಲಿ ಧರ್ಮವು ನಮಗೆ ಜ್ಞಾನೋದಯವನ್ನೂ ಸ್ಫೂರ್ತಿಯನ್ನೂ ನೀಡಬೇಕು. ಆದರೆ ಅದು, ಅನೇಕವೇಳೆ ಕಲಹ, ಅಸಹಿಷ್ಣುತೆ, ಮತ್ತು ದ್ವೇಷವನ್ನು ಹುಟ್ಟಿಸುತ್ತದೆ. ಅದೇಕೆ?

ತಪ್ಪುದಾರಿಗೆಳೆಯುವ “ಪ್ರಕಾಶರೂಪವುಳ್ಳ ದೇವದೂತ”

ಬೈಬಲಿಗನುಸಾರ, ಇದಕ್ಕೆ ಒಂದು ಅತಿ ಸರಳವಾದ ಉತ್ತರವಿದೆ. “ಪ್ರಕಾಶರೂಪವುಳ್ಳ ದೇವದೂತನ” ವೇಷವನ್ನು ಹಾಕಿಕೊಳ್ಳುತ್ತಾ ಪಿಶಾಚನಾದ ಸೈತಾನನು, ದೇವರ ಬೋಧನೆಗಳಿಗೆ ಬದಲಾಗಿ ತನ್ನ ಬೋಧನೆಗಳನ್ನು ಅನುಸರಿಸುವಂತೆ ಕೋಟ್ಯಂತರ ಜನರನ್ನು ತಪ್ಪುದಾರಿಗೆಳೆದಿದ್ದಾನೆ. (2 ಕೊರಿಂಥ 11:14) ಸೈತಾನನ ಪ್ರಭಾವವು ಎಷ್ಟು ವ್ಯಾಪಕವಾಗಿದೆಯೆಂದರೆ, ಅಪೊಸ್ತಲ ಯೋಹಾನನು, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (1 ಯೋಹಾನ 5:19) ಸೈತಾನನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿದ್ದನೆಂಬುದು ಯೋಹಾನನಿಗೆ ತಿಳಿದಿತ್ತು.​—⁠ಪ್ರಕಟನೆ 12:⁠9.

ಇದರ ಪರಿಣಾಮಗಳೇನು? ಮೇಲ್ನೋಟಕ್ಕೆ ಪವಿತ್ರವೆಂದು ತೋರುವ ಧಾರ್ಮಿಕ ವ್ಯವಸ್ಥೆಗಳನ್ನು ಸೈತಾನನು ಪರಿಚಯಿಸಿದ್ದಾನೆ. ಅವುಗಳಿಗೆ “‘ಧರ್ಮ’ ಎಂಬ ಮುಖವಾಡ” ಇದೆ, ಆದರೆ ಅವುಗಳು ಕೊಡುವ ಕೆಟ್ಟ ಫಲವು ಅವುಗಳ ನೈಜ ಸ್ಥಿತಿಯನ್ನು ಬಯಲುಪಡಿಸುತ್ತದೆ. (2 ತಿಮೊಥೆಯ 3:​5, ಜೆ. ಬಿ. ಫಿಲಿಪ್ಸ್‌; ಮತ್ತಾಯ 7:15-20) ಧರ್ಮವು ಮಾನವಕುಲದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಬದಲಿಗೆ ಅದು ತಾನೇ ಆ ಸಮಸ್ಯೆಯ ಭಾಗವಾಗುತ್ತದೆ.

ಆ ವಿಚಾರವು ನಂಬಲಸಾಧ್ಯ ಇಲ್ಲವೆ ತರ್ಕಸಮ್ಮತವಲ್ಲವೆಂದು ನೆನಸಿ ಒಡನೆ ತಳ್ಳಿಹಾಕಬೇಡಿ. ವಂಚನೆ ಎಂಬುದರ ಸಾರವೇ ವಂಚಿಸಲ್ಪಡುವವನಿಗೆ ಅದು ತಿಳಿದುಬರದೇ ಇರುವುದಾಗಿದೆ ಎಂಬುದು ನೆನಪಿರಲಿ. ಇದರ ಕುರಿತು ಅಪೊಸ್ತಲ ಪೌಲನು ಒಂದು ಉದಾಹರಣೆಯನ್ನು ಕೊಟ್ಟನು. ಅವನು ಬರೆದುದು: “ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆ.” (1 ಕೊರಿಂಥ 10:20) ಆ ಜನರಿಗೆ ತಾವು ದೆವ್ವಗಳನ್ನು ಆರಾಧಿಸುತ್ತಿದ್ದೇವೆಂದು ತಿಳಿದುಬಂದಾಗ ಆಘಾತವಾಗಿದ್ದಿರಬಹುದು. ಏಕೆಂದರೆ, ತಾವು ಯಾವುದೊ ವಿಧದ ಒಬ್ಬ ಒಳ್ಳೆಯ ದೇವನನ್ನೊ ಅಥವಾ ದೇವರುಗಳನ್ನೊ ಆರಾಧಿಸುತ್ತಿದ್ದೇವೆಂದು ಅವರು ನೆನಸುತ್ತಿದ್ದರು. ಆದರೆ ವಾಸ್ತವದಲ್ಲಿ ಅವರು, ಮಾನವಕುಲವನ್ನು ತಪ್ಪುದಾರಿಗೆಳೆಯಲು ಸೈತಾನನು ಮಾಡುವ ಪ್ರಯತ್ನಗಳಲ್ಲಿ ಅವನಿಗೆ ಬೆಂಬಲಿಗರಾಗಿರುವ “ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆ”ಗಳಿಂದ ವಂಚಿಸಲ್ಪಟ್ಟಿದ್ದರು.​—⁠ಎಫೆಸ 6:12.

ದೃಷ್ಟಾಂತಕ್ಕಾಗಿ, ಅಪೊಸ್ತಲ ಯೋಹಾನನು ಕೊಟ್ಟ ಎಚ್ಚರಿಕೆಯನ್ನು ಅಲಕ್ಷ್ಯಮಾಡಲು ಆಯ್ಕೆಮಾಡಿದ ಅನೇಕ ನಾಮಮಾತ್ರದ ಕ್ರೈಸ್ತರನ್ನು ವಂಚಿಸಿ ತಪ್ಪುದಾರಿಗೆಳೆಯಲು ಸೈತಾನನು ಹೇಗೆ ಶಕ್ತನಾದನೆಂಬ ವಿಷಯವನ್ನು ನಾವು ಪರಿಗಣಿಸೋಣ.​—⁠1 ಕೊರಿಂಥ 10:12.

ಯೇಸು ಬೋಧಿಸಿದ ವಿಷಯಗಳು ದೇವರಿಂದ ಬಂದವು

“ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು,” ಎಂದು ಯೇಸು ಹೇಳಿದನು. (ಯೋಹಾನ 7:16) ಹೌದು, ಯೇಸು ಏನನ್ನು ಕಲಿಸಿದನೊ ಅದು ಸರ್ವಶಕ್ತ ದೇವರಿಂದ ಬಂದ ವಿಷಯಗಳಾಗಿದ್ದವು. ಆದಕಾರಣ, ಯೇಸುವಿನ ಬೋಧನೆಗಳು ಅವನಿಗೆ ಕಿವಿಗೊಟ್ಟವರ ಮೇಲೆ ಪ್ರಬಲವಾದ ಆತ್ಮೋನ್ನತಿಯ ಪರಿಣಾಮವನ್ನು ಬೀರಿದವು. ಆ ಬೋಧನೆಗಳು ‘ಮಾನವ ಮನಸ್ಸಾಕ್ಷಿಯನ್ನು ಮರಗಟ್ಟಿಸಲೂ ಇಲ್ಲ ಅಥವಾ ಮನುಷ್ಯನ ತಲೆಯನ್ನು ವಾಸ್ತವಿಕತೆಯಿಂದ ದೂರ ಕೊಂಡೊಯ್ಯುವ ಭ್ರಾಂತಿಗಳಿಂದ ತುಂಬಿಸಲೂ ಇಲ್ಲ.’ ಇದಕ್ಕೆ ವ್ಯತಿರಿಕ್ತವಾಗಿ, ಯೇಸುವಿನ ಬೋಧನೆಗಳು, ಪಿಶಾಚನ ವಂಚನೆಯ ಕಾರಣ “ಮನಸ್ಸು ಮೊಬ್ಬಾಗಿ” ಹೋಗಿರುವ ಲೋಕವು ಹುಟ್ಟಿಸಿದಂಥ ಧಾರ್ಮಿಕ ದೋಷ ಮತ್ತು ಮಾನವ ತತ್ತ್ವಜ್ಞಾನಗಳಿಂದ ಜನರನ್ನು ಬಿಡುಗಡೆಮಾಡಿದವು.​—⁠ಎಫೆಸ 4:18; ಮತ್ತಾಯ 15:14; ಯೋಹಾನ 8:31, 32.

ಸತ್ಯ ಕ್ರೈಸ್ತರನ್ನು, ತಾವು ಧರ್ಮಶ್ರದ್ಧೆಯವರೆಂದು ಅವರು ಸ್ವತಃ ಹೇಳಿಕೊಳ್ಳುವುದರಿಂದ ಮಾತ್ರವಲ್ಲ, ಬದಲಾಗಿ ದೇವರ ಪವಿತ್ರಾತ್ಮವು ಉತ್ಪಾದಿಸಿದ ಆಕರ್ಷಕ ಗುಣಗಳನ್ನು ಪ್ರತಿಬಿಂಬಿಸಿದಂಥ ನಂಬಿಕೆಯಿಂದಲೂ ಗುರುತಿಸಲಾಯಿತು. (ಗಲಾತ್ಯ 5:22, 23; ಯಾಕೋಬ 1:22; 2:26) ಈ ಗುಣಗಳಲ್ಲಿ ಪ್ರಮುಖವಾದದ್ದು​—⁠ಮತ್ತು ನಿಜ ಕ್ರೈಸ್ತತ್ವವನ್ನು ಗುರುತಿಸುವ ಚಿಹ್ನೆಯು​—⁠ಪ್ರೀತಿ ಎಂಬ ಉದಾತ್ತ ಗುಣವೇ ಆಗಿದೆ.​—⁠ಯೋಹಾನ 13:34, 35.

ಆದರೆ ಈ ನಿರ್ಣಾಯಕ ಅಂಶವನ್ನು ಗಮನಿಸಿರಿ: ಕ್ರೈಸ್ತ ಸಭೆಯು ಮೂಲದಲ್ಲಿ ಹೇಗೆ ಸ್ಥಾಪಿಸಲ್ಪಟ್ಟಿತ್ತೊ ಅದೇ ರೂಪದಲ್ಲಿ ಅದು ಮುಂದುವರಿಯುವುದೆಂದು ಯೇಸುವಾಗಲಿ ಅವನ ಅಪೊಸ್ತಲರಾಗಲಿ ನಿರೀಕ್ಷಿಸಲಿಲ್ಲ. ಧರ್ಮಭ್ರಷ್ಟತೆಯು ವಿಕಾಸಗೊಂಡು ಸ್ವಲ್ಪ ಸಮಯದ ವರೆಗೆ ಸತ್ಯಧರ್ಮವನ್ನು ಮರೆಮಾಡುವುದೆಂದು ಅವರಿಗೆ ತಿಳಿದಿತ್ತು.

ಸತ್ಯಧರ್ಮ ಸ್ವಲ್ಪ ಸಮಯಕ್ಕೆ ಮರೆಯಾಗಿರುತ್ತದೆ

ಯೇಸುವು, ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ ಸತ್ಯಧರ್ಮವು ಸ್ವಲ್ಪ ಕಾಲಕ್ಕೆ ಕಾರ್ಯತಃ ಮರೆಮಾಡಲ್ಪಡುವುದೆಂದು ಮುಂತಿಳಿಸಿದನು. ಮತ್ತಾಯ 13:24-30, 36-43ರಲ್ಲಿರುವ ವೃತ್ತಾಂತವನ್ನು ನೀವೇ ಓದಿ ನೋಡಿರಿ. ಯೇಸು ಒಂದು ಹೊಲದಲ್ಲಿ “ಒಳ್ಳೆಯ ಬೀಜವನ್ನು,” ಅಂದರೆ ಗೋದಿಯನ್ನು ಬಿತ್ತಿದನು. ಇದು ಆದಿ ಕ್ರೈಸ್ತ ಸಭೆಯನ್ನು ರಚಿಸಿದ ತನ್ನ ನಂಬಿಗಸ್ತ ಶಿಷ್ಯರನ್ನು ಚಿತ್ರಿಸಿತು. ಆದರೆ ಪಿಶಾಚನಾದ ಸೈತಾನನೆಂಬ ವೈರಿಯು ಕಾಲಾನಂತರ ಆ ಗೋದಿಯ ಹೊಲದಲ್ಲಿ, “ಹಣಜಿ”ಯನ್ನು ಬಿತ್ತುವನೆಂದು ಯೇಸು ಎಚ್ಚರಿಸಿದನು. ಇವರು ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತೇವೆಂದು ಹೇಳಿದರೂ ವಾಸ್ತವದಲ್ಲಿ ಅವನ ಬೋಧನೆಗಳನ್ನು ತ್ಯಜಿಸಿದ ಜನರಾಗಿದ್ದರು.

ಯೇಸುವಿನ ಅಪೊಸ್ತಲರ ಮರಣಾನಂತರ ಅತಿ ಬೇಗನೆ “ಹಣಜಿ”ಗಳಾಗಿ ಪರಿಣಮಿಸಿದವರು ತೋರಿಬಂದರು. ಅವರು “ಯೆಹೋವನ ಮಾತನ್ನು” ಇಷ್ಟಪಡುವ ಬದಲಾಗಿ ಕೊಂಕಾದ ಮಾನವ ಬೋಧನೆಗಳನ್ನು ಇಷ್ಟಪಟ್ಟರು. (ಯೆರೆಮೀಯ 8:8, 9; ಅ. ಕೃತ್ಯಗಳು 20:29, 30) ಇದರ ಪರಿಣಾಮವಾಗಿ ಒಂದು ವಿಕೃತ, ನಕಲಿ ಕ್ರೈಸ್ತತ್ವವು ಲೋಕರಂಗದ ಮೇಲೆ ತೋರಿಬಂತು. ಇದರಲ್ಲಿ, ಬೈಬಲು ಯಾವುದನ್ನು “ಅಧರ್ಮಸ್ವರೂಪನು” ಎಂದು ಕರೆಯುತ್ತದೊ ಅದು ಅಂದರೆ ಯಾವುದು “ಮೋಸಗೊಳಿಸುವ ಸಕಲವಿಧವಾದ . . . ವಂಚನೆಯಿಂದ” ಪೂರ್ತಿಯಾಗಿ ತುಂಬಿರುತ್ತದೊ ಆ ಭ್ರಷ್ಟ ಪಾದ್ರಿವರ್ಗವು ಮೇಲುಗೈ ಹೊಂದಿತ್ತು. (2 ಥೆಸಲೊನೀಕ 2:​6-10) ಈ ಪರಿಸ್ಥಿತಿಯು “ಯುಗದ ಸಮಾಪ್ತಿ”ಯಲ್ಲಿ ಮಾರ್ಪಡುವುದೆಂದು ಯೇಸು ಮುಂತಿಳಿಸಿದನು. ಆಗ ಗೋದಿಸದೃಶ ಕ್ರೈಸ್ತರು ಐಕ್ಯವಾಗಿ ಒಟ್ಟುಗೂಡಿಸಲ್ಪಡುವರು ಮತ್ತು “ಹಣಜಿ”ಸದೃಶರು ಕೊನೆಗೆ ನಾಶಹೊಂದುವರು.

“ಶತಮಾನಗಳ ವರೆಗೆ ನಡೆದ ವಿಪರೀತ ಬರ್ಬರತೆ” ಮತ್ತು ಅದನ್ನನುಸರಿಸಿ ಬಂದ ಶತಮಾನಗಳಲ್ಲಿ ಕ್ರೈಸ್ತಪ್ರಪಂಚದಲ್ಲಿ ವ್ಯಾಪಿಸಿದ ಆಧ್ಯಾತ್ಮಿಕ ಅಂಧಕಾರಕ್ಕೆ ಈ ನಕಲಿ ಕ್ರೈಸ್ತಮತವೇ ಹೊಣೆಯಾಗಿದೆ. ಇದನ್ನು ಮತ್ತು ಅಂದಿನಿಂದ ಧರ್ಮದ ಹೆಸರಿನಲ್ಲಿ ನಡೆದಿರುವ ನೀಚ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಮುನ್ನೋಡುತ್ತಾ ಅಪೊಸ್ತಲ ಪೇತ್ರನು ಸೂಕ್ತವಾಗಿಯೇ ಮುಂತಿಳಿಸಿದ್ದು: “ಅವರ [ಕ್ರೈಸ್ತರೆನಿಸಿಕೊಳ್ಳುವವರ] ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವದು.”​—⁠2 ಪೇತ್ರ 2:1, 2.

“ಕೋಪೋದ್ರೇಕ ಮತ್ತು ಹಗೆಯ ದೇವತಾಶಾಸ್ತ್ರ”

ಧರ್ಮಕ್ಕೆ ಅಪಕೀರ್ತಿಯು ಕೇವಲ ಕ್ರೈಸ್ತಪ್ರಪಂಚದಿಂದ ಮಾತ್ರ ಬಂದಿಲ್ಲ. ಉದಾಹರಣೆಗೆ, “ಪ್ರತಿಯೊಂದು ದೊಡ್ಡ ಧಾರ್ಮಿಕ ಸಂಪ್ರದಾಯವು” ಹುಟ್ಟಿಸಿದೆಯೆಂದು ಮಾಜಿ ಕ್ರೈಸ್ತ ಸಂನ್ಯಾಸಿನಿ ಕ್ಯಾರನ್‌ ಆರ್ಮ್‌ಸ್ಟ್ರಾಂಗ್‌ ಹೇಳಿದ “ಆಕ್ರಮಣ ಪ್ರವೃತ್ತಿಯ ಧರ್ಮಶ್ರದ್ಧೆಯ” ಇತರ ಸಂಪ್ರದಾಯವಾದಿ ಪದ್ಧತಿಗಳ ಕುರಿತು ಯೋಚಿಸಿರಿ. ಈ ಕ್ಯಾರನ್‌ ಆರ್ಮ್‌ಸ್ಟ್ರಾಂಗ್‌ರವರಿಗನುಸಾರ, ಯಾವುದೇ ಧರ್ಮಕ್ಕಿರುವ ಒಂದು ನಿರ್ಣಾಯಕ ಪರೀಕ್ಷೆಯು ಅದು “ಪ್ರಾಯೋಗಿಕ ಕನಿಕರ”ಕ್ಕೆ ನಡೆಸುವಂತಹದ್ದಾಗಿರಬೇಕೆಂದೇ. ಆದರೆ ಈ ವಿಷಯದಲ್ಲಿ ಸಂಪ್ರದಾಯವಾದಿ ಧರ್ಮಗಳ ದಾಖಲೆ ಹೇಗಿದೆ? ಆಕೆ ಬರೆಯುವುದು: “ಅದು ಯಾವುದೇ​—⁠ಯೆಹೂದಿ, ಕ್ರೈಸ್ತ ಅಥವಾ ಮುಸ್ಲಿಮ್‌​—⁠ಸಂಪ್ರದಾಯವಾದಿ ವಿಶ್ವಾಸವೇ ಆಗಿರಲಿ, ಕೋಪೋದ್ರೇಕ ಮತ್ತು ಹಗೆಯ ದೇವತಾಶಾಸ್ತ್ರವಾಗಿ ಪರಿಣಮಿಸುವಲ್ಲಿ, ಈ ನಿರ್ಣಾಯಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ.” (ದೇವರಿಗಾಗಿ ಯುದ್ಧ​—⁠ಯೆಹೂದ್ಯ, ಕ್ರೈಸ್ತ, ಮತ್ತು ಇಸ್ಲಾಮ್‌ ಧರ್ಮದಲ್ಲಿ ಸಂಪ್ರದಾಯವಾದ) ಆದರೆ “ಸಂಪ್ರದಾಯವಾದಿ” ಎಂಬ ಪಟ್ಟವಿರುವ ಧರ್ಮಗಳು ಮಾತ್ರ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ, “ಕೋಪೋದ್ರೇಕ ಮತ್ತು ಹಗೆಯ ದೇವತಾಶಾಸ್ತ್ರ”ವಾಗಿ ರುಜುವಾಗಿವೆಯೆ? ಇತರ ಧರ್ಮಗಳೂ ಹಾಗಾಗಿವೆಯೆಂದು ಇತಿಹಾಸವು ತೋರಿಸುತ್ತದೆ.

ಸೈತಾನನು ವಾಸ್ತವದಲ್ಲಿ ಕೋಪೋದ್ರೇಕ, ಹಗೆ ಮತ್ತು ಹೆಚ್ಚುಕಡಿಮೆ ಕೊನೆಯೇ ಇಲ್ಲದಂಥ ರಕ್ತಪಾತದಿಂದ ಗುರುತಿಸಲ್ಪಡುವ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವೊಂದನ್ನು ಕಟ್ಟಿರುತ್ತಾನೆ. ಇದನ್ನು ಬೈಬಲು, ‘ಬಾಬೆಲೆಂಬ ಮಹಾ ನಗರಿ, ಭೂಮಿಯಲ್ಲಿರುವ ಅಸಹ್ಯವಾದ ಕಾರ್ಯಗಳಿಗೆ ತಾಯಿ’ ಎಂದು ಕರೆಯುತ್ತದೆ. ಮತ್ತು ಅದನ್ನು ಮೃಗಸದೃಶವಾದ ರಾಜಕೀಯ ವ್ಯವಸ್ಥೆಯ ಬೆನ್ನ ಮೇಲೆ ಸವಾರಿಮಾಡುವ ವೇಶ್ಯಸ್ತ್ರೀಯಾಗಿ ಚಿತ್ರಿಸಲಾಗಿದೆ. ಆಕೆಯು “ಭೂಮಿಯ ಮೇಲೆ ಕೊಲ್ಲಲ್ಪಟ್ಟವರ ರಕ್ತ”ಕ್ಕಾಗಿ ಲೆಕ್ಕವನ್ನು ಒಪ್ಪಿಸಬೇಕಾಗಿರುವುದು ಗಮನಾರ್ಹವಾಗಿದೆ.​—⁠ಪ್ರಕಟನೆ 17:4-6; 18:24.

ಪ್ರತಿಯೊಬ್ಬರೂ ವಂಚಿಸಲ್ಪಟ್ಟಿಲ್ಲ

ಆದರೆ, ಪ್ರತಿಯೊಬ್ಬರೂ ವಂಚಿಸಲ್ಪಟ್ಟಿರುವುದಿಲ್ಲ ಎಂಬುದನ್ನು ಇತಿಹಾಸವು ರುಜುಪಡಿದೆ. ಮೆಲ್ವಿನ್‌ ಬ್ರ್ಯಾಗ್‌ ಹೇಳುವಂತೆ, ಮಾನವ ಇತಿಹಾಸದ ಗಾಢಾಂಧಕಾರದ ಸಮಯಗಳಲ್ಲೂ “ಅನೇಕ ಪ್ರಶಂಸಾರ್ಹ ಜನರು, ತಮ್ಮ ಸುತ್ತಲು ಇದ್ದ ಜನರಲ್ಲಿ ಹೆಚ್ಚಿನವರು ಕೆಟ್ಟವರಾಗಿದ್ದಾಗಲೂ ಒಳ್ಳೆಯದನ್ನೇ ಮಾಡಿದರು.” ಸತ್ಯ ಕ್ರೈಸ್ತರು ದೇವರನ್ನು “ಆತ್ಮ ಮತ್ತು ಸತ್ಯದಿಂದ” (NW) ಆರಾಧಿಸುತ್ತಾ ಹೋದರು. (ಯೋಹಾನ 4:​21-24) ಇವರು, ಯಾವುದು “ಮಿಲಿಟರಿ ಶಕ್ತಿಯ ಬೆಂಬಲವಾಗಿದ್ದು” ವೇಶ್ಯಾವೃತ್ತಿಯನ್ನು ನಡೆಸುತ್ತಿತ್ತೊ ಆ ಲೋಕವ್ಯಾಪಕವಾದ ಧಾರ್ಮಿಕ ವ್ಯವಸ್ಥೆಯಿಂದ ತಮ್ಮನ್ನೇ ಬೇರ್ಪಡಿಸಿಕೊಂಡರು. ಯಾವುದನ್ನು ಇತಿಹಾಸವು, “ನಜರೇತಿನ ಯೇಸುವಿನ ಬದಲಿಗೆ ಸೈತಾನನಿಂದಲೇ ಮಾಡಲ್ಪಟ್ಟ ಒಪ್ಪಂದ”ವೆಂದು ತೋರಿಸುತ್ತದೊ ಆ ಚರ್ಚು ಮತ್ತು ಸರಕಾರದ ಮಧ್ಯೆ ಇದ್ದ ಕ್ರಿಯಾ ಸಂಬಂಧದೊಳಕ್ಕೆ ಬರಲು ಅವರು ನಿರಾಕರಿಸಿದರು.​—⁠ಎರಡು ಸಹಸ್ರ ವರುಷಗಳು​—⁠ಎರಡನೆಯ ಸಹಸ್ರಮಾನ: ಮಧ್ಯಯುಗಗಳ ಕ್ರೈಸ್ತಪ್ರಪಂಚದಿಂದ ಭೌಗೋಳಿಕ ಕ್ರೈಸ್ತಮತಕ್ಕೆ (ಇಂಗ್ಲಿಷ್‌).

ಇತ್ತೀಚಿನ ಸಮಯಗಳಲ್ಲಿ, ಸಕಾರಾತ್ಮಕ ಪ್ರಭಾವವನ್ನು ಬೀರುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಪ್ರಸಿದ್ಧರಾಗಿದ್ದಾರೆ. ಸುಳ್ಳುಧರ್ಮದ ಯಾವುದೇ ಕಲೆಯಿಂದ ಕಲುಷಿತಗೊಳ್ಳದಿರಲು, ಅವರು ತಮ್ಮ ನಂಬಿಕೆಗಳನ್ನೂ ಕ್ರಿಯೆಗಳನ್ನೂ ಕೇವಲ ದೇವರ ಪ್ರೇರಿತ ವಾಕ್ಯವಾದ ಬೈಬಲಿನ ಮೇಲೆ ಆಧರಿಸಿದ್ದಾರೆ. (2 ತಿಮೊಥೆಯ 3:​16, 17) ಮತ್ತು ಒಂದನೆಯ ಶತಮಾನದ ಕ್ರೈಸ್ತರಂತೆಯೇ ಅವರು ‘ಲೋಕದವರಾಗಿರಬಾರದು’ ಎಂಬ ಯೇಸುವಿನ ಆಜ್ಞೆಯನ್ನು ಅನುಸರಿಸಿರುತ್ತಾರೆ. (ಯೋಹಾನ 15:17-19; 17:14-16) ಉದಾಹರಣೆಗೆ, ನಾಸಿ ಜರ್ಮನಿಯಲ್ಲಿ ಅವರು ಕ್ರೈಸ್ತ ಮೂಲತತ್ತ್ವಗಳ ವಿಷಯದಲ್ಲಿ ರಾಜಿಮಾಡಿಕೊಳ್ಳಲು ನಿರಾಕರಿಸಿದ್ದರಿಂದ, ಅವರು ನಾಸಿ ವಿಚಾರತತ್ತ್ವಕ್ಕನುಸಾರ ಅಂಗೀಕೃತರಾಗಿರಲಿಲ್ಲ. ಆ ಕಾರಣದಿಂದ ಹಿಟ್ಲರನು ಅವರನ್ನು ಹಗೆಮಾಡಿದನು. ಒಂದು ಶಾಲಾ ಪಠ್ಯಪುಸ್ತಕ ಹೇಳುವುದು: “ಯಾವುದೇ ಕಾರಣಕ್ಕಾಗಿಯೂ ಆಯುಧಧಾರಿಗಳಾಗಬಾರದು ಎಂಬ ಬೈಬಲ್‌ ಬೋಧನೆಯನ್ನು ಯೆಹೋವನ ಸಾಕ್ಷಿಗಳು ಅನುಸರಿಸಿದರು. ಆದಕಾರಣ ಅವರು ಸೈನ್ಯಕ್ಕೆ ಸೇರಲು ಅಥವಾ ನಾಸಿಗಳೊಂದಿಗೆ ಯಾವುದೇ ಸಂಬಂಧವನ್ನಿಟ್ಟುಕೊಳ್ಳಲು ನಿರಾಕರಿಸಿದರು. ಇದಕ್ಕೆ ಪ್ರತೀಕಾರವಾಗಿ, ಎಸ್‌.ಎಸ್‌. ಸೈನಿಕರು ಯೆಹೋವನ ಸಾಕ್ಷಿಗಳಾಗಿದ್ದವರ ಇಡೀ ಕುಟುಂಬಗಳನ್ನೇ ಸೆರೆಮನೆಗಳಿಗೆ ದೊಬ್ಬಿದರು.” (ಜರ್ಮನಿ​—⁠1918-45) ಹೌದು, ಜರ್ಮನಿಯಲ್ಲಿದ್ದ ನೂರಾರು ಮಂದಿ ಯೆಹೋವನ ಸಾಕ್ಷಿಗಳು ನಾಸಿ ಹಿಂಸೆಯಿಂದಾಗಿ ಮಡಿದರು.

ಹೌದು, ವಿವಿಧ ಧರ್ಮಗಳ ಇತರ ಧೀರ ವ್ಯಕ್ತಿಗಳೂ ಅವರ ನಂಬಿಕೆಗಳ ಕಾರಣ ಕಷ್ಟಾನುಭವಿಸಿದರು ನಿಜ. ಆದರೆ ಯೆಹೋವನ ಸಾಕ್ಷಿಗಳು ಒಂದು ಐಕ್ಯ ಧಾರ್ಮಿಕ ಸಮುದಾಯವಾಗಿ ಹಾಗೆ ಕಷ್ಟಾನುಭವಿಸಿದರು. ಅವರಲ್ಲಿ ಅಧಿಕಾಂಶ ಮಂದಿ “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂಬ ಮೂಲಭೂತ ಶಾಸ್ತ್ರೀಯ ಸೂತ್ರಕ್ಕೆ ದೃಢವಾಗಿ ಅಂಟಿಕೊಂಡರು.​—⁠ಅ. ಕೃತ್ಯಗಳು 5:29; ಮಾರ್ಕ 12:17.

ಸಮಸ್ಯೆಯ ಮೂಲ

ಹೀಗೆ, ಧರ್ಮವು ಮಾನವಕುಲದ ಎಲ್ಲಾ ಸಮಸ್ಯೆಗಳಿಗೆ ಮೂಲಕಾರಣ ಎಂಬುದು ಕೇವಲ ಆಂಶಿಕವಾಗಿ ಸತ್ಯ. ಸುಳ್ಳು ಧರ್ಮವೇ ಕಾರಣ. ಆದುದರಿಂದ ದೇವರು ಸುಳ್ಳು ಧರ್ಮವನ್ನೆಲ್ಲ ಅತಿ ಬೇಗನೆ ತೊಲಗಿಸಲಿಕ್ಕಿದ್ದಾನೆ. (ಪ್ರಕಟನೆ 17:16, 17; 18:21) ಆದಕಾರಣ, ನ್ಯಾಯ, ನೀತಿಯನ್ನು ಪ್ರೀತಿಸುವ ಯಾವನಿಗೂ ಆತನ ಆಜ್ಞೆಯು ಹೀಗಿದೆ: “ನನ್ನ ಪ್ರಜೆಗಳೇ, ಅವಳನ್ನು [ಅಂದರೆ, ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲನ್ನು] ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು.” (ಪ್ರಕಟನೆ 18:4, 5) ಹೌದು, ‘ಕಲಹವನ್ನು ಪ್ರೋತ್ಸಾಹಿಸಿ, ಮಾನವ ಮನಸ್ಸಾಕ್ಷಿಯನ್ನು ಮರಗಟ್ಟಿಸಿ, ವಾಸ್ತವಿಕತೆಯಿಂದ ದೂರ ಕೊಂಡೊಯ್ಯುವ ಭ್ರಾಂತಿಗಳನ್ನು ತಲೆಯಲ್ಲಿ ತುಂಬಿಸಿ, ಜನರನ್ನು ಸಂಕುಚಿತ ಮನಸ್ಸಿನವರೂ, ಮೂಢನಂಬಿಕೆಯುಳ್ಳವರೂ, ದ್ವೇಷ ಮತ್ತು ಆತಂಕಭರಿತರೂ ಆಗಿ ಮಾಡುವ’ ಧರ್ಮದಿಂದ ಸ್ವತಃ ದೇವರೇ ತುಂಬ ಕೋಪಗೊಂಡಿದ್ದಾನೆ!

ಈ ಮಧ್ಯೆ, ದೇವರು ಸತ್ಯಪ್ರಿಯರನ್ನು ಶುದ್ಧ ಧರ್ಮದೊಳಕ್ಕೆ ಒಟ್ಟುಗೂಡಿಸುತ್ತಿದ್ದಾನೆ. ಆ ಧರ್ಮವು ಪ್ರೀತಿಸುವವನೂ, ನ್ಯಾಯಶೀಲನೂ, ಕನಿಕರವುಳ್ಳವನೂ ಆಗಿರುವ ಸೃಷ್ಟಿಕರ್ತನ ಮೂಲತತ್ತ್ವಗಳಿಗೂ ಬೋಧನೆಗಳಿಗೂ ಅಂಟಿಕೊಳ್ಳುವಂಥದ್ದಾಗಿದೆ. (ಮೀಕ 4:1, 2; ಚೆಫನ್ಯ 3:8, 9; ಮತ್ತಾಯ 13:30) ನೀವು ಅದರ ಭಾಗವಾಗಿರಬಲ್ಲಿರಿ. ಆ ಶುದ್ಧ ಧರ್ಮವನ್ನು ಹೇಗೆ ಗುರುತಿಸುವುದೆಂಬ ವಿಷಯದಲ್ಲಿ ನಿಮಗೆ ಹೆಚ್ಚಿನ ಮಾಹಿತಿಯು ಬೇಕಾಗಿರುವಲ್ಲಿ, ಸಹಾಯಕ್ಕಾಗಿ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಲು ಇಲ್ಲವೆ ಯೆಹೋವನ ಸಾಕ್ಷಿಗಳಲ್ಲಿ ಯಾರಿಗಾಗಲಿ ಕೇಳಲು ಹಿಂಜರಿಯಬೇಡಿರಿ.

[ಪುಟ 7ರಲ್ಲಿರುವ ಚಿತ್ರ]

ಸಕಲ ಹಿನ್ನೆಲೆಗಳ ಜನರು ಶುದ್ಧ ಧರ್ಮದಲ್ಲಿ ಆನಂದವನ್ನು ಕಂಡುಕೊಂಡಿದ್ದಾರೆ