ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮ ಇದರ ಪ್ರಭಾವವು ಸಕಾರಾತ್ಮಕವೊ ನಕಾರಾತ್ಮಕವೊ?

ಧರ್ಮ ಇದರ ಪ್ರಭಾವವು ಸಕಾರಾತ್ಮಕವೊ ನಕಾರಾತ್ಮಕವೊ?

ಧರ್ಮ ಇದರ ಪ್ರಭಾವವು ಸಕಾರಾತ್ಮಕವೊ ನಕಾರಾತ್ಮಕವೊ?

“ನಾನು ಕ್ರೈಸ್ತಮತಕ್ಕೆ ಋಣಿಯಾಗಿದ್ದೇನೆ, ಮತ್ತು ನಾವು ಕಳೆದ 2,000 ವರುಷಗಳಲ್ಲಿ ಜೀವಿಸಿರುವ ಈ ಜಗತ್ತು ಸಹ ಅದಕ್ಕೆ ಋಣಿಯಾಗಿದೆ ಎಂಬುದು ನನ್ನ ಅಭಿಪ್ರಾಯ.”​—⁠ಮುನ್ನುಡಿ, ಎರಡು ಸಹಸ್ರ ವರುಷಗಳು​—⁠ಮೊದಲನೆಯ ಸಹಸ್ರಮಾನ: ಕ್ರೈಸ್ತಮತದ ಹುಟ್ಟಿನಿಂದ ಕ್ರೂಸೇಡ್‌ ಧಾರ್ಮಿಕ ಯುದ್ಧದ ವರೆಗೆ (ಇಂಗ್ಲಿಷ್‌).

“ಕ್ರೈಸ್ತಮತ”ದ ವಿಷಯದಲ್ಲಿ ಈ ಅನುಮೋದನೆಯು ಆಂಗ್ಲ ಲೇಖಕರೂ ಟಿವಿ ಪ್ರಸಾರಣಕಾರರೂ ಆದ ಮೆಲ್ವಿನ್‌ ಬ್ರ್ಯಾಗ್‌ ಎಂಬವರದ್ದಾಗಿದೆ. ಅವರ ಮಾತುಗಳು, ಒಂದಲ್ಲ ಒಂದು ಧರ್ಮಕ್ಕೆ ತದ್ರೀತಿಯಲ್ಲಿ ಬಹಳಷ್ಟು ಋಣಿಗಳಾಗಿರುವ ಮತ್ತು ನಿಷ್ಠರಾಗಿರುವ ಕೋಟ್ಯಂತರ ಮಂದಿ ಭೂನಿವಾಸಿಗಳ ರಸಭಾವವನ್ನು ಪ್ರತಿಬಿಂಬಿಸುತ್ತವೆ. ತಮ್ಮ ಜೀವಿತಗಳಲ್ಲಿ ಧರ್ಮವು ಬಲವಾದ ಸಕಾರಾತ್ಮಕ ಪ್ರಭಾವವನ್ನು ಬೀರಿದೆ ಎಂಬುದು ಅವರ ದೃಢನಂಬಿಕೆ. ಉದಾಹರಣೆಗೆ, ಇಸ್ಲಾಮ್‌ ಧರ್ಮವು, “ಇಡೀ ಜಗತ್ತಿಗೆ ಪ್ರಯೋಜನ ತಂದಿರುವ . . . ಒಂದು ಮಹಾ ನಾಗರಿಕತೆಗೆ ಸ್ಫೂರ್ತಿನೀಡಿದೆ” ಎಂದು ಒಬ್ಬ ಲೇಖಕನು ಹೇಳುತ್ತಾನೆ.

ಧರ್ಮದ ಪಾತ್ರ​—⁠ಸಕಾರಾತ್ಮಕವೊ ನಕಾರಾತ್ಮಕವೊ?

ಆದರೆ, ಬ್ರ್ಯಾಗ್‌ ಅವರ ಮುಂದಿನ ಮಾತುಗಳು, ಸಾಮಾನ್ಯವಾಗಿ ಧರ್ಮವು ನಿಜವಾಗಿಯೂ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರಿದೆಯೊ ಎಂಬ ವಿಷಯದಲ್ಲಿ ಗಂಭೀರವಾದ ಶಂಕೆಯನ್ನು ಹುಟ್ಟಿಸುತ್ತದೆ. ಅವರು ಕೂಡಿಸಿದ್ದು: “ಕ್ರೈಸ್ತಮತವು ಸಹ ನನಗೆ ವಿವರಣೆಯನ್ನು ಕೊಡಲು ಋಣಿಯಾಗಿದೆ.” ಅವರಿಗೆ ಯಾವುದಕ್ಕಾಗಿ ವಿವರಣೆ ಬೇಕಂತೆ? ಅವರು ಹೇಳುವುದು: “ಅದರ ‘ಚರಿತ್ರೆ’ಯ ಹೆಚ್ಚಿನದ್ದರಲ್ಲಿ ಎದ್ದುಕಾಣುವಂತಿದ್ದ ಮತಾಂಧತೆ, ದುಷ್ಟತನ, ಅಮಾನವೀಯತೆ, ಮತ್ತು ಉದ್ದೇಶಪೂರ್ವಕವಾದ ಮೌಢ್ಯಕ್ಕಾಗಿ.”

ಹೌದು, ಇತಿಹಾಸದಾದ್ಯಂತ ಲೋಕದ ಹೆಚ್ಚಿನ ಧರ್ಮಗಳು ಮತಾಂಧತೆ, ದುಷ್ಟತನ, ಅಮಾನವೀಯತೆ, ಮತ್ತು ಉದ್ದೇಶಪೂರ್ವಕವಾದ ಮೌಢ್ಯದಿಂದ ಕಳಂಕಿತವಾಗಿವೆಯೆಂದು ಅನೇಕರು ಹೇಳುತ್ತಾರೆ. ಧರ್ಮವು ತನ್ನನ್ನು ಮಾನವಕುಲದ ಆಶ್ರಯದಾತನಂತೆ ತೋರ್ಪಡಿಸಿಕೊಂಡರೂ ಸದ್ಗುಣ ಮತ್ತು ಪವಿತ್ರತೆಯ ಮುಖವಾಡದ ಹಿಂದೆ ಅದು ವಾಸ್ತವಿಕವಾಗಿ ಕಪಟ ಮತ್ತು ಸುಳ್ಳುಗಳಿಂದ ತುಂಬಿದೆಯೆಂಬುದು ಅವರ ಅಭಿಪ್ರಾಯ. (ಮತ್ತಾಯ 23:​27, 28) ಅ ರ್ಯಾಷನಲಿಸ್ಟ್‌ ಎನ್‌ಸೈಕ್ಲಪೀಡೀಯ ಹೇಳುವುದು: “ನಾಗರಿಕತೆಯ ಸಂಬಂಧದಲ್ಲಿ ಧರ್ಮವು ವಿಶೇಷ ಮೌಲ್ಯವುಳ್ಳದ್ದಾಗಿದೆ ಎಂಬ ಹೇಳಿಕೆಗಿಂತ ಹೆಚ್ಚು ಸಾಮಾನ್ಯವಾದ ಯಾವುದೇ ಹೇಳಿಕೆ ನಮ್ಮ ಸಾಹಿತ್ಯಗಳಲ್ಲಿಲ್ಲ. ಮತ್ತು ಇತಿಹಾಸದ ನಿಜತ್ವಗಳಿಂದ ಇಷ್ಟೊಂದು ಪ್ರಬಲವಾಗಿ ತಪ್ಪೆಂದು ರುಜುಪಡಿಸಲ್ಪಟ್ಟಿರುವ ಹೇಳಿಕೆಯೂ ಬೇರೊಂದಿಲ್ಲ.”

ಇಂದು ನೀವು ಯಾವುದೇ ವಾರ್ತಾಪತ್ರಿಕೆಯನ್ನು ಓದಿದರೂ, ಪ್ರೀತಿ, ಶಾಂತಿ, ಮತ್ತು ಕನಿಕರವನ್ನು ಬೋಧಿಸುವ ಆದರೆ ಅದೇ ಸಮಯದಲ್ಲಿ ದ್ವೇಷದ ಜ್ವಾಲೆಗೆ ಎಣ್ಣೆಸುರಿಸುತ್ತಾ ದೇವರ ಹೆಸರಿನಲ್ಲಿ ತಮ್ಮ ಪಾಶವೀಯ ಹೋರಾಟಗಳನ್ನು ನ್ಯಾಯವೆಂದು ಹೇಳುವ ಧಾರ್ಮಿಕ ಮುಖಂಡರ ಅನೇಕಾನೇಕ ಉದಾಹರಣೆಗಳನ್ನು ನೋಡುವಿರಿ. ಆದುದರಿಂದ, ಧರ್ಮವು ಜೀವನದಲ್ಲಿ ಹೆಚ್ಚಾಗಿ ನಾಶಕಾರಕ ಪ್ರಭಾವವನ್ನೇ ಬೀರಿದೆಯೆಂದು ಅನೇಕ ಜನರು ಭಾವಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!

ಧರ್ಮವೇ ಇಲ್ಲದಿದ್ದರೆ ಉತ್ತಮವೊ?

ಕೆಲವರು, ಇಂಗ್ಲೆಂಡಿನ ತತ್ತ್ವಜ್ಞಾನಿ ಬರ್ಟ್‌ರೆಂಡ್‌ ರಸಲ್‌ರಂತೆ, ಕ್ರಮೇಣ “ಪ್ರತಿಯೊಂದು ವಿಧದ ಧಾರ್ಮಿಕ ವಿಶ್ವಾಸವು ಅಳಿದು ಹೋಗುವಲ್ಲಿ” ಒಳ್ಳೇದಿರುತ್ತಿತ್ತೆಂದು ಸಹ ತೀರ್ಮಾನಿಸಿದ್ದಾರೆ. ಅವರ ದೃಷ್ಟಿಯಲ್ಲಿ, ಮಾನವಕುಲದ ಸಕಲ ಸಮಸ್ಯೆಗಳಿಗೆ ಧರ್ಮದ ತೊಲಗಿಸುವಿಕೆಯೇ ಏಕೈಕ ಬಾಳುವ ಪರಿಹಾರವಾಗಿದೆ. ಆದರೆ ಅವರು ಒಂದು ವಿಷಯವನ್ನು ಮರೆಯುತ್ತಿರಬಹುದು, ಅದೇನಂದರೆ, ಧರ್ಮವನ್ನು ತ್ಯಜಿಸುವವರು ಸಹ ಧರ್ಮವನ್ನು ಶ್ರದ್ಧಾಭಕ್ತಿಯಿಂದ ಬೆಂಬಲಿಸುವವರಷ್ಟೇ ಹೆಚ್ಚಾಗಿ ಹಗೆತನ ಮತ್ತು ಅಸಹಿಷ್ಣುತೆಯನ್ನು ಕೆರಳಿಸಬಲ್ಲರು. ಧರ್ಮದ ವಿಷಯದಲ್ಲಿ ಲೇಖಕಿಯಾಗಿರುವ ಕ್ಯಾರನ್‌ ಆರ್ಮ್‌ಸ್ಟ್ರಾಂಗ್‌ ನಮಗೆ ನೆನಪುಹುಟ್ಟಿಸುವುದು: “ಹಾಲಕಾಸ್ಟ್‌ ಹತ್ಯಾಕಾಂಡವು ಕಡಿಮೆಪಕ್ಷ, ಐಹಿಕವಾದಿ ಸಿದ್ಧಾಂತವೂ ಧಾರ್ಮಿಕ ಕ್ರುಸೇಡ್‌ನಷ್ಟೇ ಮಾರಕವಾಗಿರಬಲ್ಲದು ಎಂಬದನ್ನಾದರೂ ತೋರಿಸಿತು.”​—⁠ದೇವರಿಗಾಗಿ ಯುದ್ಧ​—⁠ಯೆಹೂದ್ಯ, ಕ್ರೈಸ್ತ, ಮತ್ತು ಇಸ್ಲಾಮ್‌ ಧರ್ಮಗಳಲ್ಲಿ ಸಂಪ್ರದಾಯವಾದ (ಇಂಗ್ಲಿಷ್‌).

ಹಾಗಾದರೆ ಧರ್ಮವು ನಿಜವಾಗಿಯೂ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೊ, ಇಲ್ಲವೆ ವಾಸ್ತವದಲ್ಲಿ ಮಾನವಕುಲದ ಸಮಸ್ಯೆಗಳಿಗೆ ಮೂಲಕಾರಣವಾಗಿದೆಯೊ? ಆ ಸಮಸ್ಯೆಗಳ ಪರಿಹಾರವು, ಸಕಲ ಧರ್ಮಗಳನ್ನು ತೆಗೆದುಹಾಕುವುದರಲ್ಲಿದೆಯೊ? ಇದರ ಬಗ್ಗೆ ಬೈಬಲಿಗೆ ಏನು ಹೇಳಲಿಕ್ಕಿದೆಯೆಂಬುದನ್ನು ಮುಂದಿನ ಲೇಖನದಲ್ಲಿ ಪರಿಗಣಿಸಿರಿ. ಉತ್ತರವು ನಿಮ್ಮನ್ನು ಅಚ್ಚರಿಗೊಳಿಸೀತು.